ಮಣ್ಣಿನಸಮೀಕ್ಷೆ

ಯಾವುದೇ ಪ್ರದೇಶದಲ್ಲಿಯ ಮಣ್ಣುಗಳನ್ನು ಕ್ರಮಬದ್ಧವಾಗಿ ಪರೀಕ್ಷಿಸಿ, ವಿವರವಾಗಿ ವರ್ಣಿಸಿ, ನಿಯಮಗಳಿಗನುಸಾರವಾಗಿ ವರ್ಗೀಕರಿಸಿ, ಆ ಕ್ಷೇತ್ರದಲ್ಲಿರುವ ಮಣ್ಣುಗಳ ನಕ್ಷೆಯನ್ನು ಸಿದ್ಧಪಡಿಸುವ ಕಾರ್ಯವೇ ಮಣ್ಣಿನ ಸಮೀಕ್ಷೆ.

ಇದರಲ್ಲಿ ಎರಡು ಪ್ರಕಾರಗಳಿವೆ ;

. ಸಂಕ್ಷೀಪ್ತ ಸಮೀಕ್ಷೆ : ಈ ಪದ್ಧತಿಯಲ್ಲಿ ಸಂಬಂಧಿಸಿದ ಕ್ಷೇತ್ರದಲ್ಲಿಯ ಮಣ್ಣಿನ ಶ್ರೇಣಿಗಳು ಮತ್ತು ಪ್ರಕಾರಗಳ ಬಗ್ಗೆ ವಿವರಗಳಿರುವುದಿಲ್ಲ. ಬದಲಿಗೆ ಸಾಮ್ಯತೆಗಳಿರುವ ಮಣ್ಣುಗಳನ್ನು ತೋರಿಸುವ ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ.

. ವಿವರವಾದ ಸಮೀಕ್ಷೆ : ಈ ಪದ್ಧತಿಯಲ್ಲಿ ಆರಿಸಿಕೊಂಡ ಕ್ಷೇತ್ರದ ಸವಿಸ್ತಾರವಾದ ಅಧ್ಯಯನವನ್ನು ಕೈಗೊಂಡು ಅದರಲ್ಲಿ ಅಡಕವಾಗಿರುವ ಎಲ್ಲ ಶ್ರೇಣಿಗಳನ್ನು ಮತ್ತು ಅವುಗಳಲ್ಲಿರುವ ಎಲ್ಲ ಪ್ರಕಾರಗಳನ್ನು ಗುರುತಿಸಿ ಅವುಗಳ ಸವಿಸ್ತಾರವಾದ ವಿವರಗಳನ್ನು ಸಂಗ್ರಹಿಸಿ ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ.

ಸಮೀಕ್ಷೆಯ ವಿವರಗಳು : ಸಮೀಕ್ಷೆಯನ್ನು ಮಾಡಬೇಕೆಂದಿರುವ ಪ್ರದೇಶದ ಮೂಲ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ಸಂಬಂಧಿಸಿದ ಕ್ಷೇತ್ರವನ್ನು ಅದರೊಳಗೆ ಗುರುತಿಸಬೇಕು. ಆಕಾಶದಲ್ಲಿಂದ ಕ್ಯಾಮರಾದ ಮೂಲಕ ತೆಗೆದುಕೊಂಡ ನಕ್ಷೆಗಳು ಇತ್ತೀಚೆಗೆ ಬಳಕೆಯಲ್ಲಿವೆ. ಮಣ್ಣಿನ ಸಮೀಕ್ಷೆಯನ್ನು ಮಾಡುವಾಗ ಸಂಗ್ರಹಿಸಬೇಕಾದ ಪ್ರಮುಖ ವಿವರಗಳು ಕೆಳಗಿನಂತಿವೆ :

 • ಸ್ಥಳದ ಗುರುತು : ಊರಿನ ಹೆಸರು, ಸರ್ವೆ ನಂಬರುಗಳು ಇತ್ಯಾದಿ.
 • ಭೂ ರಚನೆಯ ವಿವರಗಳು : ಭೂಮಿಯ ಸಾಮಾನ್ಯ ವರ್ಣನೆ, ಶೇಕಡಾ ಇಳಿಜಾರು, ಅದರ ಅಂದಾಜು ಉದ್ದ, ಇಳಿಜಾರಿನ ಸ್ವರೂಪ (ಒಂದೇ ದಿಕ್ಕಿನಲ್ಲಿ ಇಳಿಜಾರಾಗಿದೆಯೇ ಅಥವಾ ಅನಿರ್ಧಿಷ್ಟ ರೀತಿಯ ಇಳಿಜಾರು (ಇತ್ಯಾದಿ) ನೀರು ಸುಲಭವಾಗಿ ಬಸಿದುಹೋಗುತ್ತದೆಯೇ ಮುಂತಾದ ವಿವರಗಳು.
 • ಮಣ್ಣಿನ ಮೂಲದ್ರವ್ಯ: ಮಣ್ಣು ನಿರ್ಮಾಣಗೊಂಡ ಮೂಲದ್ರವ್ಯದ ವಿವರ.
 • ಮಣ್ಣಿನ ಪಾರ್ಶ್ವ ದೃಶ್ಯದ ವರ್ಣನೆ : ಮಣ್ಣಿನ ವಿವಿಧ ವಲಯಗಳನ್ನು ಗುರುತಿಸಿ, ಆ ವಲಯಗಳಿಗೆ ಅನುಗುಣವಾದ ಅಕ್ಷರ ಸಂಜ್ಞೆಗಳನ್ನು (A. B. C ಇತ್ಯಾದಿ) ಕೊಡಬೇಕು. ಒಂದೊಮ್ಮೆ ಅಕ್ಷರ ಸಂಜ್ಞೆಯನ್ನು ಕೊಡಲು ಸಾಧ್ಯವಾಗದಿದ್ದರೆ, ವಲಯಗಳನ್ನು ೧, ೨, ೩,… ಇತ್ಯಾದಿಗಳಿಂದ ಗುರುತಿಸಬೇಕು.
  ಪ್ರತಿಯೊಂದು ವಲಯದ ಬಗ್ಗೆ ಮುಂದಿನ ವಿವರಗಳನ್ನು ಸಂಗ್ರಹಿಸಬೇಕು :

  • ಬಣ್ಣ ಮತ್ತು ಮಣ್ಣಿನ ಆರ್ದ್ರತೆ, ಬಣ್ಣವನ್ನು ಮೆನ್ಸೆಲ್ ಪದ್ದತಿಯಿಂದ ವರ್ಣಿಸಬೇಕು.
  • ಕಣಗಳ ಗಾತ್ರದ ಆಧಾರದ ಮೇಲೆ ಮಣ್ಣಿನ ವರ್ಗೀಕರಣ (ಮಣ್ಣಿನ ವರ್ಗವನ್ನು ಕಂಡುಕೊಳ್ಳುವ ವಿಧಾನವನ್ನು ಅರಿಯಲು ೫ನೆಯ ಅಧ್ಯಾಯವನ್ನು ನೋಡಿ)
  • ಮಣ್ಣಿನ ಕಣಗಳ ರಚನೆಯನ್ನು ಗುರುತಿಸಬೇಕು.
  • ಜಲಮಿಶ್ರಿತ ಹರಿತ್ ಪೀತಾಮ್ಲದ ಕೆಲವು ಹನಿಗಳನ್ನು ಮಣ್ಣಿನ ಮೇಲೆ ಹಾಕಿ ನೊರೆ(ಬುರುಗು) ಬರುತ್ತದೆಯೇ ಎಂದು ನೋಡಬೇಕು.
  • ಕಪ್ಪು ಬಣ್ಣದ ಬಿರುಸಾದ ಹಳಕುಗಳು, ಬಿಳಿ ಬಣ್ಣದ ಕ್ಯಾಲ್ಸಿಯಂ ಕಾರ್ಬೊನೇಟ್ ಗಂಟುಗಳು ಅಥವಾ ಜಿಪ್ಸಂ ಹರಳುಗಳು ಕಂಡುಬಂದರೆ ಅವುಗಳನ್ನು ಬರೆದುಕೊಳ್ಳಬೇಕು.
  • ಸಾವಯವ ಪದಾರ್ಥ, ಸಸ್ಯಗಳ ಬೇರುಗಳು ಇತ್ಯಾದಿಗಳು ಕಂಡುಬಂದರೆ ಅವುಗಳ ಟಿಪ್ಪಣಿಯನ್ನು ಮಾಡಿಕೊಳ್ಳಬೇಕು.
  • ಕಲ್ಲುಗಳು : ಕಲ್ಲುಗಳಿದ್ದರೆ ಅವುಗಳ ಆಕಾರ, ಸಂಖ್ಯೆ ಮತ್ತು ಇತರೆ ಅವಶ್ಯಕ ವಿವರಗಳನ್ನು ಟಿಪ್ಪಣಿ ಮಾಡಬೇಕು.
  • ಮಣ್ಣಿನ ಸವಕಳಿ : ಮಣ್ಣು ಕೊಚ್ಚಿಕೊಂಡು ಹೋಗಿದೆಯೇ, ಕೊರಕಲುಗಳು ಕಂಡುಬರುತ್ತಿವೆಯೇ, ಕೊರಕಲುಗಳಿದ್ದರೆ ಅವು ಆಕಾರದಲ್ಲಿ ಸಣ್ಣವೇ ಅಥವಾ ದೊಡ್ಡವೇ ಇತ್ಯಾದಿ ವಿವರಗಳನ್ನು ಬರೆದುಕೊಳ್ಳಬೇಕು.
  • ನೈಸರ್ಗಿಕ ಸಸ್ಯಗಳು : ನೈಸರ್ಗಿಕ ಸಸ್ಯಗಳಿರುವಲ್ಲಿ ಅವುಗಳ ಬಗ್ಗೆ ವಿವರಗಳನ್ನು ಕೊಡಬೇಕು. ಸಸ್ಯಗಳ ಪ್ರಮುಖ ಪ್ರಕಾರಗಳನ್ನೂ ಅವು ಅಲ್ಲಿ ಬಹುಕಾಲದಿಂದ ಇವೆಯೇ ಅಥವಾ ಯಾವುದೇ ಕಾರಣದಿಂದ ನಾಶಹೊಂದಿ ಪುನಃ ಬೆಳೆಯಲು ಪ್ರಾರಂಭಗೊಂಡಿವೆಯೇ ಇತ್ಯಾದಿ ವಿವರಗಳನ್ನು ಕೊಡಬೇಕು.
  • ಭೂಮಿಯ ಬಳಕೆ : ಈಗ ಬೆಳೆಯಲಾಗುತ್ತಿರುವ ಬೆಳೆಗಳು ಮತ್ತು ಅನುಸರಿಸಲಾಗುತ್ತಿರುವ ಬೇಸಾಯ ಪದ್ಧತಿಗಳನ್ನು ಬರೆದುಕೊಳ್ಳಬೇಕು. ಬೆಳೆಯ ನಿರ್ವಹಣೆಯ ಮಟ್ಟ ಮತ್ತು ಪಡೆಯುತ್ತಿರುವ ಇಳುವರಿಗಳ ಬಗ್ಗೆ ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳುವುದು ಉತ್ತಮ.

ಮೇಲೆ ಸೂಚಿಸಿದ ವಿವರಗಳನ್ನು ಸಂಗ್ರಹಿಸುವುದಲ್ಲದೇ ಮಣ್ಣಿನ ನಮೂನೆಗಳನ್ನು ತೆಗೆದುಕೊಂಡು ಪ್ರಯೋಗಾಲಯಕ್ಕೆ ಒಯ್ದು, ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳನ್ನು ಕಂಡು ಹಿಡಿಯಲಾಗುತ್ತದೆ. ಇವೆಲ್ಲ ಮಾಹಿತಿಗಳ ಮೇಲಿಂದ ನಕಾಶೆಯಲ್ಲಿ ಮಣ್ಣಿನ ವಿವಿಧ ಶ್ರೇಣಿಗಳನ್ನು ಮತ್ತು ಪ್ರಕಾರಗಳನ್ನು ಪ್ರತ್ಯೇಕಿಸಿ ತೋರಿಸುವ ರೇಖೆಗಳನ್ನು ಎಳೆಯಲಾಗುತ್ತದೆ. ಶ್ರೇಣಿಗಳನ್ನು ಮತ್ತು ಪ್ರಕಾರಗಳನ್ನು ಸಾಂಕೇತಿಕ ಅಕ್ಷರಗಳ ಮೂಲಕ ನಕಾಶೆಯಲ್ಲಿ ತೋರಿಸುವ ಪದ್ಧತಿಯು ರೂಢಿಯಲ್ಲಿದೆ.

ಕೊನೆಯದಾಗಿ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗುತ್ತದೆ. ಇಂತಹ ವರದಿಯಲ್ಲಿ ರೈತನಿಗೆ ಮತ್ತು ಇತರರಿಗೆ ಉಪಯುಕ್ತವೆನಿಸುವ ಹಲವು ವಿವರಗಳಿರುತ್ತವೆ ಎಂಬುವುದು ಗಮನಾರ್ಹ.

ಮಣ್ಣಿನಸಮೀಕ್ಷೆಯಪ್ರಯೋಜನಗಳು

ಮಣ್ಣು ರಾಷ್ಟ್ರದ, ರಾಜ್ಯದ ಜಿಲ್ಲೆಯ ಅಥವಾ ವ್ಯಕ್ತಿಯ ಅಮೂಲ್ಯ ಸಂಪತ್ತು. ಮಣ್ಣಿನ ಸಮೀಕ್ಷೆಯಿಂದ ಇದರ ಗುಣಧರ್ಮಗಳು ಭೂರಚನೆ, ಸವಕಳಿಯ ಸಾಧ್ಯತೆ, ನೀರನ್ನು ಬಸಿಯಗೊಡುವ ಸಾಮರ್ಥ್ಯ, ಸ್ವಾಭಾವಿಕವಾದ ಫಲವತ್ತತೆ, ವಿವಿಧ ಬೆಳೆಗಳಿಗೆ ಆಶ್ರಯವನ್ನೀಯುವ ಸಾಮರ್ಥ್ಯ, ಮಣ್ಣಿನ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಪದ್ಧತಿ ಮತ್ತು ವಹಿಸಬೇಕಾದ ಎಚ್ಚರಿಕೆ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಮಾಹಿತಿಯು ದೊರೆಯುತ್ತದೆ. ಈ ವಿವರಗಳಿಂದ ಹಲವು ಪ್ರಮುಖ ಪ್ರಯೋಜನಗಳಿವೆ.

 • ಭೂಮಿ ಮತ್ತು ಮಣ್ಣುಗಳ ನಿರ್ವಹಣೆಗೆ ಸರಿಯಾದ ಯೋಜನೆಯನ್ನು ಸಿದ್ಧಪಡಿಸಬಹುದು. ಅಲ್ಲದೇ, ನಿಯೋಜಿತ ನಿರ್ವಹಣೆಯ ಮಟ್ಟದ ಮೇಲಿಂದ ನಿರೀಕ್ಷಿತ ಉತ್ಪಾದನೆಯನ್ನು ಲೆಕ್ಕ ಮಾಡಬಹುದು.
 • ಸರಕಾರಗಳಿಗೆ, ವಿಶ್ವವಿದ್ಯಾಲಯಗಳಿಗೆ ಮತ್ತು ಇತರೆ ಸಂಸ್ಥೆಗಳಿಗೆ, ಮಣ್ಣಿನ ಬಗ್ಗೆ ನಂಬಲರ್ಹವಾದ ವಿವರಗಳು ದೊರೆಯುತ್ತವೆಯಾದ್ದರಿಂದ ಮಣ್ಣಿನ ಸದುಪಯೋಗವಾಗುವಂತೆ ಯೋಜನೆಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ.
 • ಭೂಮಿಯ ಉತ್ಪಾದಕತೆಯ ಅಂದಾಜನ್ನು ಹೆಚ್ಚು ನಿಖರವಾಗಿ ಮಾಡಲು ಸಾಧ್ಯವಾಗುವುದರಿಂದ ಭೂ ಮಾಲೀಕನಿಗೆ ಕೊಡಬಹುದಾದ ಸಾಲದ ಮೊತ್ತವನ್ನು ನಿರ್ಧರಿಸಲು ಸಹಾಯವಾಗುತ್ತದೆ.
 • ಭೂಮಿಯನ್ನು ಕೊಳ್ಳುವಾಗ ಅಥವಾ ಮಾರುವಾಗ ಸೂಕ್ತ ಬೆಲೆಯನ್ನು ಗೊತ್ತುಪಡಿಸಲು ಅನುಕೂಲವಾಗುತ್ತದೆ.
 • ರಸ್ತೆಗಳ ರಚನೆ, ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾರ್ಯಗಳಿಗೆ ಸರಿಯಾದ ಸ್ಥಳವನ್ನು ಆರಿಸಲು ಎಂಜಿನಿಯರ್ ಗಳಿಗೆ ನೆರವು ದೊರೆಯುತ್ತದೆ.

ವಿವರಣಾತ್ಮಕವರ್ಗೀಕರಣ (Interpretative classification) :

ಈ ಅಧ್ಯಯದಲ್ಲಿ ವಿವರಿಸಿದ ಮಣ್ಣಿನ ವರ್ಗೀಕರಣವನ್ನು ಭೂಮಿ ಮತ್ತು ಮಣ್ಣಿನ ಗುಣಧರ್ಮಗಳನ್ನು ಅರಿತುಕೊಳ್ಳುವ ದೃಷ್ಟಿಯಿಂದ ಮಾಡಲಾಗಿದೆಯಾದರೂ ಈ ಅಧ್ಯಯನದಿಂದ ದೊರೆತ ವಿವರಗಳನ್ನು ಬಳಸಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಮಣ್ಣನ್ನು ಹಲವು ರೀತಿಯಿಂದ ಪುನಃ ವರ್ಗೀಕರಿಸಿ ಇದರ ಪ್ರಯೋಜನವನ್ನು ಪಡೆಯಬಹುದು. ಈ ರೀತಿಯ ವರ್ಗೀಕರಣ ಮತ್ತು ಅದರಿಂದ ಪಡೆಯಬಹುದಾದ ಪ್ರಯೋಜನಗಳಲ್ಲಿ ಪ್ರಮುಖವಾದವು ಈ ಕೆಳಗಿನಂತಿವೆ:

) ಭೂ ಬಳಕೆಯ ಸಾಮರ್ಥ್ಯದ ಮೇಲಿಂದ ವರ್ಗೀಕರಣ :
ಭೂ ಬಳಕೆಯ ಸಾಮರ್ಥ್ಯದ ಮೇಲಿಂದ ಮಾಡಿದ ವರ್ಗೀಕರಣವು ಬಹು ಪ್ರಯೋಜನಕಾರಿ ಎನ್ನಬಹುದು. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸಲು ಇರುವ ಇತಿಮಿತಿಗಳನ್ನು ಆಧಾರವಾಗಿಟ್ಟುಕೊಂಡು ಈ ವರ್ಗೀಕರಣವನ್ನು ಕೈಗೊಳ್ಳಲಾಗಿದೆ. ಈ ಪದ್ಧತಿಯ ಪ್ರಕಾರ ಭೂಮಿಯನ್ನು ೮ ವರ್ಗಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮೊದಲಿನ ೩ ವರ್ಗಗಳಿಗೆ ಸೇರಿದ ಭೂಮಿಯ ಬೇಸಾಯಕ್ಕೆ ಸೂಕ್ತವಾಗಿದ್ದು, ನಾಲ್ಕನೆಯ ವರ್ಗಕ್ಕೆ ಸೇರಿದ ಭೂಮಿಯನ್ನು ಬೇಸಾಯಕ್ಕೆ ಕ್ವಚಿತ್ತಾಗಿ ಉಪಯೋಗಿಸಬಹುದಾಗಿದೆ. ಉಳಿದ ೪ ವರ್ಗಗಳಿಗೆ ಸೇರಿದ ಭೂಮಿಯನ್ನು ಬೇಸಾಯಕ್ಕೆ ಸೂಕ್ತವೆಂದು ಪರಿಗಣಿಸಲಾಗಿಲ್ಲ. ಪ್ರತಿ ವರ್ಗಕ್ಕೆ ಸೇರಿದ ಭೂಮಿಯ ವರ್ಣನೆಯು ಕೆಳಗಿನಂತಿದೆ:

ಭೂ ವರ್ಗ : ಈ ವರ್ಗದ ಭೂಮಿಯ ಪ್ರದೇಶದಲ್ಲಿ, ಯಾವುದೇ ಬೆಳೆಯನ್ನು ನಿರ್ಬಂಧಗಳಿಲ್ಲದೆ ಬೆಳೆಯಬಹುದು. ಭೂಮಿಯು ಸಮತಟ್ಟಾಗಿದ್ದು ಮಣ್ಣು ಆಳವಾಗಿರುತ್ತದೆ. ಹೆಚ್ಚಾದ ನೀರು ಸ್ವಾಭಾವಿಕವಾಗಿಯೇ ಕೆಳಗೆ ಬಸಿದುಹೋಗುತ್ತದೆ. ನೈಸರ್ಗಿಕವಾಗಿ ಈ ಮಣ್ಣು ಫಲವತ್ತಾಗಿದ್ದು ಬೆಳೆಯಿಂದ ಉತ್ತಮ ಇಳುವರಿಯು ದೊರೆಯುತ್ತದೆ. ಹೆಚ್ಚು ಶ್ರಮವಹಿಸಿದರೆ ಅಧಿಕ ಇಳುವರಿ ಪಡೆಯಬಹುದು.

ಭೂ ವರ್ಗ : ಈ ವರ್ಗದ ಭೂಮಿಯ ಮಣ್ಣಿನಲ್ಲಿ ಬೇಸಾಯವನ್ನು ಕೈಗೊಳ್ಳಲು ಕೆಲವು ನಿರ್ಬಂಧಗಳಿವೆ. ಹೀಗಾಗಿ ವರ್ಗ ಒಂದರಲ್ಲಿಯ ಮಣ್ಣಿನಲ್ಲಿಯಂತೆ ಎಲ್ಲ ಬೆಳೆಗಳನ್ನು, ನಿರಾತಂಕವಾಗಿ ಇಲ್ಲಿ ಬೆಳೆಯುವಂತಿಲ್ಲ. ಒಂದೊಮ್ಮೆ ಬೆಳೆಯಲೇ ಬೇಕೆಂದರೆ ಅವಶ್ಯವಿರುವ ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಸ್ವಲ್ಪ ಮಟ್ಟಿನ ಇಳುಕಲು, ಮಣ್ಣು ಕೊಚ್ಚಿಹೋಗುವ ಸಾಧ್ಯತೆ, ಮಧ್ಯಮ ಸ್ಥಿರತೆಯ ಕಣಗಳ ರಚನೆ, ಕಡಮೆ, ಆಳದ ಮಣ್ಣು, ಅಲ್ಲಲ್ಲಿ ಲವಣದ ಅಲ್ಪಸಂಗ್ರಹ, ಹೆಚ್ಚಾದ ನೀರು ಬಸಿದುಹೋಗುವಲ್ಲಿ ಕೆಲವು ಮಟ್ಟಿನ ಅಡಚಣೆ ಇತ್ಯಾದಿಗಳು ವರ್ಗ ೨ರಲ್ಲಿರುವುದಕ್ಕಿಂತ ಅಧಿಕ ಇಳಿಜಾರು, ಮಣ್ಣುಕೊಚ್ಚಿಕೊಂಡು ಹೋಗುವ ಹೆಚ್ಚಿನ ಸಾಧ್ಯತೆ, ಹೆಚ್ಚಾದ ನೀರು ಸುಲಭವಾಗಿ ಕೆಳಗೆ ಬಸಿದುಹೋಗಲು ಇರುವ ಅಡಚಣೆ, ಕಡಮೆ ಆಳದ ಮಣ್ಣು, ಮಧ್ಯಮ ಪ್ರಮಾಣದಲ್ಲಿ ಲವಣಗಳ ಸಂಗ್ರಹಣೆ, ಕಡಮೆ ಜಲಧಾರಣಾ ಸಾಮರ್ಥ್ಯ ಇತ್ಯಾದಿಗಳೂ ಈ ವರ್ಗದ ಭೂಮಿಯ ಮಣ್ಣಿನ ಗುಣಧರ್ಮಗಳೂ. ಮಣ್ಣಿನ ಫಲವತ್ತತೆಯು ಕಡಮೆಯಿರುತ್ತದೆ.

ಭೂ ವರ್ಗ ೨ರಲ್ಲಿ ಹೇಳಿದ ಮಣ್ಣು ಸಂರಕ್ಷಣೆಯ ಎಲ್ಲ ಕ್ರಮಗಳನ್ನು ಆದ್ಯತೆಯ ಮೇರೆಗೆ ಅನುಸರಿಸಬೇಕಲ್ಲದೆ ಬೆಳೆಗಳ ಆಯ್ಕೆಯಲ್ಲಿಯೂ ಹೆಚ್ಚು ಜಾಗರೂಕರಾಗಿರಬೇಕು. ಇದಲ್ಲದೇ ಹೆಚ್ಚಾದ ನೀರು ಬಸಿದುಹೋಗಲು ಅವಶ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.

ಭೂವರ್ಗ : ನಾಲ್ಕನೆಯ ವರ್ಗದ ಭೂಮಿಯ ಸಾಗುವಳಿಯಲ್ಲಿ ತೀವ್ರತರ ನಿರ್ಬಂಧಗಳಿರುತ್ತವೆ. ವಾರ್ಷಿಕ ಬೆಳೆಗಳನ್ನು ಕ್ವಚಿತ್ತಾಗಿ ಬೆಳೆಯುವುದು ಉತ್ತಮ. ಆದರೆ ಭೂಮಿಯನ್ನು ಹುಲ್ಲುಗಾವಲಿಗೆ ಉಪಯೋಗಿಸಬಹುದು. ತೀವ್ರವಾದ ಇಳಿಜಾರು ಇರುವುದರಿಂದ ಭೂಸವಕಳಿಯು ಅತ್ಯಧಿಕ. ಭೂಮಿಯ ಆಳ ಮತ್ತು ಮಣ್ಣಿನ ಜಲಧಾರಣಾ ಸಾಮರ್ಥ್ಯಗಳೂ ಕಡಮೆಯಿರುತ್ತವೆ. ಹೆಚ್ಚಾದ ನೀರು ಸುಲಭವಾಗಿ ಬಸದಿಹೋಗುವುದಿಲ್ಲ. ಲವಣಗಳ ಸಂಗ್ರಹವು ಅಧಿಕ. ಮಣ್ಣಿನ ಸಂರಕ್ಷಣೆಯ ಕ್ರಮಗಳನ್ನು ಚಾಚುತಪ್ಪದೇ ಅನುಸರಿಸಬೇಕು.

ಭೂವರ್ಗ ರಿಂದ : ಈ ವರ್ಗಗಳಿಗೆ ಸೇರಿದ ಭೂಮಿಯು ಬೇಸಾಯಕ್ಕೆ ಅನುಪಯುಕ್ತ. ಇಲ್ಲಿ ನಿರ್ಬಂಧಗಳು ಅತ್ಯಧಿಕ. ಉಳುಮೆ ಮಾಡದೆ ಬೆಳೆಸುವ ಹುಲ್ಲುಗಾವಲಿಗೆ, ಅರಣ್ಯವನ್ನು ಬೆಳೆಸಲು ಕಾಡು, ಪ್ರಾಣಿಗಳ ವಾಸಕ್ಕೆ ಮನೋರಂಜನೆಯ ಸ್ಥಳಗಳನ್ನು ನಿರ್ಮಿಸಲು ಈ ವರ್ಗಗಳ ಭೂಮಿಗಳನ್ನು ಉಪಯೋಗಿಸಬಹುದು.

. ನೀರಾವರಿಗಾಗಿ ಮಣ್ಣಿ ವರ್ಗೀಕರಣ :
ಮಣ್ಣು, ನೀರಾವರಿಯ ಬೇಸಾಯಕ್ಕಾಗಿ ಎಷ್ಟರ ಮಟ್ಟಿಗೆ ಸೂಕ್ತವಾಗಿದೆ ಎಂಬುವುದನ್ನು ತೋರಿಸುವ ವರ್ಗೀಕರಣವನ್ನು ಮೂಲ ವರ್ಗೀಕರಣದಿಂದ ದೊರೆತ ವಿವರಗಳಿಂದ ಮಾಡಬಹುದು. ಈ ರೀತಿ ವರ್ಗೀಕರಿಸುವಾಗ ಮುಂದಿನ ಸಂಗತಿಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ :

 • ಸ್ಥಳ ವರ್ಣನೆ
 • ಮಣ್ಣಿನ ಆಳ
 • ಜಲಪಾತಳಿಯ ಆಳ
 • ಕಣಗಳ ಗಾತ್ರದ ಮೇಲಿಂದ ಮಾಡಿದ ವರ್ಗ
 • ಮಣ್ಣಿನ ಸಂಗ್ರಹವಾದ ಲವಣಗಳ ಪ್ರಮಾಣ

ಭೂ ವರ್ಗ :   ಸಮಪಾತಳಿಯ ಭೂಮಿ, ಮಧ್ಯಮ ಕಪ್ಪು ಬಣ್ಣದ ಗೋಡು ಮಣ್ಣು, ಮಣ್ಣಿನ ಆಳ ಸುಮಾರು ಮೂರು ಆಡಿ, ನೀರು ಸುಲಭವಾಗಿ ಬಸಿದುಹೋಗಲು ಅನುವು ಮಾಡಿಕೊಡಬಲ್ಲ ಕೆಳಸ್ತರ.

ಇಂತಹ ಮಣ್ಣು ನಿರಂತರ ನೀರಾವರಿಗೆ ಯೋಗ್ಯ.

ಭೂ ವರ್ಗ :    ಮರಳಿನ ಪ್ರಾಬಲ್ಯ ಮತ್ತು ರೇವೆಯಿರುವ ಮಣ್ಣು. ವರ್ಷದ ಒಂದು ಹಂಗಾಮಿನಲ್ಲಿ ನೀರಾವರಿಗೆ ಉಪಯೋಗಿಸಲು ಸೂಕ್ತ.

ಭೂ ವರ್ಗ :     ಆಳವಾದ ಕಪ್ಪು ಮಣ್ಣು – ಎರಡು ಮೂರು ವರ್ಷಗಳಿಗೊಮ್ಮೆ ನೀರಾವರಿ ಬೇಸಾಯಕ್ಕೆ ಉಪಯೋಗಿಸಲು ಸೂಕ್ತ. ಪ್ರತಿ ವರ್ಷ ಸಂರಕ್ಷಣಾ ನೀರಾವರಿಗೆ ಬಳಸಬಹುದು.

ಭೂ ವರ್ಗ :   ಸ್ವಲ್ಪ ಮಟ್ಟಗೆ ಲವಣಗಳು ಸಂ‌ಗ್ರಹಗೊಂಡ ಮಣ್ಣು. ಸಂರಕ್ಷಣಾ ನೀರಾವರಿಗೆ ಬಳಸಬಹುದು.

ಭೂ ವರ್ಗ :   ತಗ್ಗು ಪ್ರದೇಶದಲ್ಲಿರುವ ಜಲಪಾತಳಿಯ ಮೇಲಿನಿಂದ ಅತಿ ಸನಿಹದಲ್ಲಿರುವ ಅಧಿಕ ಪ್ರಮಾಣದಲ್ಲಿ ಲವಣಗಳು ಸಂಗ್ರಹಗೊಂಡ ಮಣ್ಣು, ಮಣ್ಣು ಸುಧಾರಕಗಳನ್ನು ಮಣ್ಣಿಗೆ ಸೇರಿಸಿ ಬಸಿಗಾಲುವೆಗಳನ್ನು ನಿರ್ಮಿಸಿ ನೀರು ಬಸಿದುಹೋಗುವ ವ್ಯವಸ್ಥೆಯನ್ನು ಮಾಡಿದರೆ ಭೂಮಿಯನ್ನು ನೀರಾವರಿ ಬೇಸಾಯಕ್ಕೆ ಉಪಯೋಗಿಸಬಹುದು.

. ಭೂಸಂರಕ್ಷಣೆಯ ಅವಶ್ಯಕತೆಗನುಗುಣವಾಗಿ ವರ್ಗೀಕರಣ

ಭೂಮಿಯ ಬಳಕೆ ಮತ್ತು ಅದಕ್ಕಾಗಿ ಕೈಗೊಳ್ಳಬೇಕಾದ ಭೂಸಂರಕ್ಷಣಾ ಕ್ರಮಗಳಿಂದ ಭೂಮಿಯನ್ನು ವರ್ಗೀಕರಿಸಬಹುದು. ವರ್ಗೀಕರಣವನ್ನು ಮಾಡುವಾಗ ಮುಂದಿನ ಸಂಗತಿಗಳನ್ನು ಪರಿಗಣಿಸಬೇಕು. ಭೂಮಿಯ ಇಳಿಜಾರು, ಕಣಗಳ ಗಾತ್ರದ ಮೇಲಿಂದ ಮಾಡಿದ ಮಣ್ಣಿನ ವರ್ಗೀಕರಣ, ಕಣಗಳ ರಚನೆ, ಮಣ್ಣಿನಲ್ಲಿ ಜಲಪ್ರವೇಶದ ವೇಗ, ಮಳೆಯ ತೀಕ್ಷ್ಣತೆ ಮತ್ತು ಬೆಳೆಯಬೇಕೆಂದಿರುವ ಸಸ್ಯದ ಪ್ರಕಾರ, ಈ ವಿವರಗಳು ಕೋಷ್ಟಕ ೬ರಲ್ಲಿವೆ.

ಕೋಷ್ಟಕ : ಭೂ ಸಂರಕ್ಷಣೆಯ ದೃಷ್ಟಿಯಿಂದ ಭೂಮಿಯ ವರ್ಗೀಕರಣ

ವರ್ಗ

ಇಳಿಜಾರು ಶೇ.

ಕೈಗೊಳ್ಳಬೇಕಾದ ಭೂ ಸಂರಕ್ಷಣಾ ಕ್ರಮಗಳು

೦ – ೧ ಯಾವುದೇ ಭೂಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳದೇ ಬೆಳೆಗಳನ್ನು ಬೆಳೆಯಬಹುದು.
೨. ೧ – ೨ ಸಾಮಾನ್ಯವಾದ ಭೂ ಸಂರಕ್ಷಣಾ ಕ್ರಮಗಳು ಮತ್ತು ಬೇಸಾಯ ಪದ್ಧತಿಗಳನ್ನು ಅನುಸರಿಸಿದರೆ ಭೂಮಿಯು ಸಾಗುವಳಿಗೆ ಸೂಕ್ತ.
೩. ೨ – ೮ ಭೂಮಿಯಲ್ಲಿ ಬದುಗಳ ನಿರ್ಮಾಣ, ಹುಲ್ಲಿನ ಮೆಟ್ಟಿಲುಗಳ ತಯಾರಿಕೆ ಇತ್ಯಾದಿ ಭೂ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಬೆಳೆಗಳನ್ನು ಬೆಳೆಯಬಹುದು.
೪. ೮ – ೧೫ ವಿಶಿಷ್ಟ ರೀತಿಯಲ್ಲಿ ಭೂ ಸಂರಕ್ಷಣೆಯ ಕ್ರಮಗಳನ್ನು ಅನುಸರಿಸಿದರೆ, ಭೂಮಿಯು ಹುಲ್ಲುಗಾವಲಿಗೆ ಸರಿ ಎನಿಸುತ್ತದೆ. ಭೂಮಿಯನ್ನು ಮೆಟ್ಟಲುಗಳಂತೆ ವಿರಚಿಸಿ ಕೊಂಡರೆ ಇಂತಹ ಭೂಮಿಯಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದು.
೫. ೧೫ಕ್ಕಿಂತ ಅಧಿಕ ಭೂಮಿಯು ಕಾಡು ಬೆಳೆಸಲು ಸೂಕ್ತ.