ಇಂಗಾಲ : ಸಾರಜನಕದ ಅನುಪಾತ (C.N. Ratio) : ಮಣ್ಣಿನಲ್ಲಿರುವ ಸಾವಯವ ಪದಾರ್ಥಕ್ಕೂ ಮಣ್ಣಿನ ಇಂಗಾಲ: ಸಾರಜನಕ ಅನುಪಾತಕ್ಕೂ ಅನ್ಯೋನ್ಯ ಸಂಬಂಧವಿದೆ. ಸಾವಯವ ಪದಾರ್ಥದ ಬಹು ಭಾಗವು ಇಂಗಾಲವೇ ಆಗಿರುವುದರಿಂದ ಮತ್ತು ಇಂಗಾಲವು ಸಾವಯವ ಪದಾರ್ಥದಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿರುವುದರಿಂದ ಮಣ್ಣಿನ ಇಂಗಾಲ, ಸಾರಜನಕದ ಅನುಪಾತವು ನಿರ್ದಿಷ್ಟವಾಗಿರುತ್ತೆನ್ನಬಹುದು. ಸಸ್ಯಗಳಿಗೆ ದೊರೆಯುವ ಸಾರಜನಕದ ಪ್ರಮಾಣವನ್ನು ನಿಯಂತ್ರಿಸುವಲ್ಲಿ, ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವನ್ನು ಹಿಡಿತದಲ್ಲಿಡುವಲ್ಲಿ ಮತ್ತು ಕಳಿಯುವ ಕ್ರಿಯೆಯ ವೇಗವನ್ನು ನಿರ್ಧರಿಸುವಲ್ಲಿ ಇಂಗಾಲ: ಸಾರಜನಕ ಅನುಪಾತವು ಬಹು ಮಹತ್ತರ ಪಾತ್ರವನ್ನು ವಹಿಸುತ್ತದೆ.

ಮಣ್ಣಿನ ಇಂಗಾಲ : ಸಾರಜನಕದ ಅನುಪಾತ : ಹವಾಮಾನವು ಬದಲಾದಂತೆ ಮಣ್ಣಿನ ಇಂಗಾಲ ಸಾರಜನಕದ ಅನುಪಾತವು ಸ್ವಲ್ಪ ಭಿನ್ನವಾಗಿರುತ್ತದೆಯಾದರೂ, ಒಂದೇ ಹವಾಮಾನದಲ್ಲಿರುವ ಮತ್ತು ಒಂದೇ ರೀತಿಯಿಂದ ನಿರ್ವಹಿಸಿದ ಮಣ್ಣುಗಳ ಇಂಗಾಲ, ಸಾರಜನಕ ಅನುಪಾತದಲ್ಲಿ ವಿಶೇಷ ಅಂತರವಿರುವುದಿಲ್ಲ. ಈ ಅನುಪಾತವು ೧೦:೧ ರಿಂದ ೧೨:೧ರೊಳಗೆ ಇರುತ್ತದೆ. ಇಂಗಾಲ: ಸಾರಜನಕದ ಅನುಪಾತವು ಇಷ್ಟು ನಿರ್ದಿಷ್ಟವಾಗಿರುವ ಕಾರಣವನ್ನು ಕೆಳಗಿನ ವಿವರಣೆಯಿಂದ ತಿಳಿದುಕೊಳ್ಳಬಹುದು.

ಮಣ್ಣಿಗೆ ಪೂರೈಕೆಯಾದ ವಿವಿಧ ಸಾವಯವ ಪದಾರ್ಥಗಳ ಇಂಗಾಲ : ಸಾರಜನಕದ ಅನುಪಾತಗಳು ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ಬೇಳೆಕಾಳು ವರ್ಗಕ್ಕೆ ಸೇರಿದ ಹೆಸರು, ಉದ್ದು, ಸೆಣಬು, ಗ್ಲೀಸರೀಡಿಯಾ ಮುಂತಾದ ಸಸ್ಯಗಳಲ್ಲಿ ಇಂಗಾಲ, ಸಾರಜನಕದ ಅನುಪಾತವು ೨೦:೧ ರಿಂದ ೩೦:೧ರಷ್ಟಿದ್ದರೆ ಕಬ್ಬಿಣದ ರವಧಿ ಧ್ಯಾನದ ಬೆಳೆಗಳ ಒಣಹುಲ್ಲು(ದಂಟು)ಗಳಲ್ಲಿ ಈ ಅನುಪಾತವು ೬೦:೧ ರಿಂದ ೮೦:೧ ಅಥವಾ ಇನ್ನೂ ಹೆಚ್ಚಾಗಿರುತ್ತದೆ. ಮರದ ಹೊಟ್ಟಿನಂತಹ ವಸ್ತುಗಳಲ್ಲಿ ಅನುಪಾತವು ೪೦೦:೧ ರ ಸನಿಹದಲ್ಲಿರುತ್ತದೆ.

ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ದೇಹದಲ್ಲಿ ಇಂಗಾಲ : ಸಾರಜನಕದ ಅನುಪಾತವು ಕಡಮೆಯಿರುತ್ತದೆಯಲ್ಲದೇ ಹೆಚ್ಚು ಸ್ಥಿರವಾಗಿಯೂ ಇರುತ್ತದೆ. ಬ್ಯಾಕ್ಟೀರಿಯಾ ದೇಹದಲ್ಲಿ ಈ ಪ್ರಮಾಣವು ೫:೧ ರಷ್ಟು, ಆಕ್ಟಿನೋಮೈಸಿಟೀಸ್‌ಗಳಲ್ಲಿ ೬:೧ರಷ್ಟು ಮತ್ತು ಶಿಲೀಂದ್ರಗಳ ದೇಹದಲ್ಲಿ ೧೦:೧ ರಷ್ಟಿದೆ. ಮಣ್ಣಿನಲ್ಲಿರುವ ಎಲ್ಲ ಸೂಕ್ಷ್ಮ ಜೀವಿಗಳ ದೇಹದಲ್ಲಿ ಇರುವ ಇಂಗಾಲ್: ಸಾರಜನಕದ ಸರಾಸರಿ ಅನುಪಾತವು ೮:೧ ರಷ್ಟಾಗುತ್ತದೆ.

ಈಗಾಗಲೇ ವಿವರಿಸಿದಂತೆ, ಸಾವಯವ ವಸ್ತುಗಳನ್ನು ಹೊಸದಾಗಿ ಮಣ್ಣಿಗೆ ಸೇರಿಸಿದೊಡನೆ ಶಕ್ತಿಯನ್ನೊದಗಿಸುವ ಇಂಗಾಲಯುಕ್ತ ವಸ್ತುಗಳು ಬಹುದೊಡ್ಡ ಪ್ರಮಾಣದಲ್ಲಿ ದೊರೆತು ಮಣ್ಣಿನಲ್ಲಿರುವಸೂಕ್ಷ್ಮ ಜೀವಿಗಳ ಸಂಖ್ಯೆಯು ಭರದಿಂದ ಏರುತ್ತದೆ. ಇವುಗಳ ಚಟುವಟಿಕೆಯಿಂದ ಇಂಗಾಲವು ಇಂಗಾಲದ ಡೈ ಆಕ್ಸೈಡನ ರೂಪದಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಇದರಿಂದಾಗಿ, ಸಾವಯವ ಪದಾರ್ಥಗಳಲ್ಲಿಯ ಇಂಗಾಲದ ಪ್ರಮಾಣವು ಕಡಮೆಯಾಗುತ್ತಾ ಸಾಗುತ್ತದೆ. ಕೆಲವು ಸಮಯದ ನಂತರ ಸಾವಯವ ಪದಾರ್ಥದಲ್ಲಿರುವ ಸಾರಜನಕವು ನಿಧಾನವಾಗಿ ವಿಮೋಚನೆಗೊಳ್ಳುತ್ತದೆ. ಈ ಪೋಷಕಾಂಶವನ್ನು ಸಸ್ಯಗಳು ಹೀರಿಕೊಳ್ಳಬಹುದು. ಇಲ್ಲವೇ ಇದು ನೀರಿನಲ್ಲಿ ಕರಗಿ ಭೂಮಿಯಾಳಕ್ಕೆ ಬಸಿದುಹೋಗಬಹುದು.

ಮೇಲೆ ಹೇಳಿದಂತೆ ಇಂಗಾಲ ಮತ್ತು ಸಾರಜನಕ ಇವೆರಡೂ ಸಾವಯವ ಪದಾರ್ಥಗಳಿಂದ ವಿಮೋಚನೆಗೊಳ್ಳುತ್ತಾ ಸಾಗಿ ಸಾವಯವ ಪದಾರ್ಥವು ಕಳಿತು ಒಂದು ಸ್ಥಿತಿಯನ್ನು ತಲುಪುತ್ತದೆ. ಆಗ ಅದರಲ್ಲಿರುವ ಇಂಗಾಲ: ಸಾರಜನಕದ ಅನುಪಾತವು ೧೨ : ೧ ರಿಂದ ೧೦:೧ ರಷ್ಟಿರುತ್ತದೆ. ಇಷ್ಟಾದ ನಂತರ ಕಳಿತ ಈ ಸಾವಯವ ಪದಾರ್ಥದಿಂದ ಶೇಕಡಾ ಎಷ್ಟು ಇಂಗಾಲವು ಬಿಡುಗಡೆಯನ್ನು ಹೊಂದುತ್ತದೆಯೋ ಅಷ್ಟೇ ಸಾರಜನಕವೂ ವಿಮೋಚನೆಗೊಳ್ಳುತ್ತದೆ. ಹೀಗಾಗಿ ಸಾವಯವ ವಸ್ತುವಿನಲ್ಲಿದ್ದ ಇಂಗಾಲ: ಸಾರಜನಕ ಸರಾಸರಿ ಅನುಪಾತವು ೧೨ : ೧ ರಿಂದ ೧೦: ೧ ರಷ್ಟಾಗುತ್ತದೆಯೆಂಬುವುದನ್ನು ಇಲ್ಲಿ ಗಮನಿಸಬೇಕು.

ಇಂಗಾಲ : ಸಾರಜನಕದ ಅನುಪಾತ (ಪ್ರಮಾಣ) ಮಹತ್ವ : ಸಾವಯವ ಪದಾರ್ಥದ ಇಂಗಾಲ: ಸಾರಜನಕದ ಅನುಪಾತದ ಬಗ್ಗೆ ಇಲ್ಲಿಯವರೆಗಿನ ವಿವರಣೆಯಿಂದ ಮಣ್ಣಿನ ಸಮರ್ಪಕ ನಿರ್ವಹಣೆಗೆ ಪ್ರಯೋಜನವಾಗಬಲ್ಲ ಹಲವು ಸಂಗತಿಗಳು ಹೊರಬರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ.:

i) ಸಸ್ಯಗಳಿಗೆ ಸಾರಜನಕದ ಕೊರತೆ : ಮಣ್ಣಿಗೆ ಹೊಸದಾಗಿ ಸಾವಯವ ಪದಾರ್ಥವನ್ನು ಸೇರಿದೊಡನೆ, ಸೂಕ್ಷ್ಮ ಜೀವಿಗಳ ಸಂಖ್ಯೆಯು ಒಮ್ಮೆಲೆ ವೃದ್ಧಿಗೊಳ್ಳುತ್ತದೆಂಬುವುದು ತಿಳಿದ ವಿಷಯವೇ. ಈ ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಇತರೆ ಪೋಷಕಗಳಲ್ಲದೇ ಸಾರಜನಕವೂ ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಮಣ್ಣಿಗೆ ಸೇರಿಸಿದ ಸಾವಯವ ಪದಾರ್ಥದಲ್ಲಿ ಸಾರಜನಕವು ಸಾಕಷ್ಟು ಪ್ರಮಾಣದಲ್ಲಿ ಇರದಿದ್ದರೆ ಕೊರತೆಯಾದ ಸಾರಜನಕವನ್ನು ಸೂಕ್ಷ್ಮ ಜೀವಿಗಳು ಮಣ್ಣಿನಿಂದ ಪಡೆಯುತ್ತವೆ. ಇದರಿಂದಾಗಿ ಸೂಕ್ಷ್ಮ ಜೀವಿಗಳ ಮತ್ತು ಮೇಲ್ವರ್ಗದ ಸಸ್ಯಗಳ ಮಧ್ಯೆ ಸಾರಜನಕದ ಸಲುವಾಗಿ ಸ್ಪರ್ಧೆಯೇರ್ಪಟ್ಟು, ಆ ಸ್ಪರ್ಧೆಯಲ್ಲಿ ಬೃಹತ್‌ ಸಂಖ್ಯೆಯಲ್ಲಿರುವ ಸೂಕ್ಷ್ಮ ಜೀವಿಗಳದೇ ಮೇಲುಗೈಯಾಗುತ್ತದೆ. ಹೀಗಾಗಿ ಸಾರಜನಕದ ಕೊರತೆಯಿಂದ ಸಸ್ಯಗಳಬೆಳವಣಿಗೆಯು ಕುಂಠಿತಗೊಂಡು ಬೆಳೆಯ ಇಳುವರಿಯು ಕಡಿಮೆಯಾಗುತ್ತದೆ.

ಮೇಲೆ ಸೂಚಿಸಿದ ಸಾರಜನಕದ ಕೊರತೆಯು ತಾತ್ಪೂರ್ತಿಕವಾದುದು. ಸಾವಯವ ಪದಾರ್ಥವು ಕಳೆಯುತ್ತ ಸಾಗಿದಂತೆ, ಇಂಗಾಲದ ಪ್ರಮಾಣವು ಕಡಮೆಯಾಗಿ ಸೂಕ್ಷ್ಮ ಜೀವಿಗಳ ಸಂಖ್ಯೆಯು ಕಡಮೆಯಾಗುತ್ತದೆ. ಇದರಿಂದ ಸಾರಜನಕದ ಬಗ್ಗೆ ಇರುವ ಸ್ಪರ್ಧೆಯು ಕಡಮೆಯಾಗುತ್ತದೆಯಲ್ಲದೇ ಸಾವಯವ ಪದಾರ್ಥದಿಂದ ಸಾರಜನಕವು ವಿಮೋಚನೆಗೊಳ್ಳುತ್ತದೆ. ಇದರಿಂದಾಗಿ ಬೆಳೆಯ ಸಸ್ಯಗಳು ಎದುರಿಸುತ್ತಿರುವ ಸಾರಜನಕದ ಕೊರತೆಯಿಲ್ಲದಂತಾಗುತ್ತದೆ. ಸಾರಜನಕದ ಈ ತಾತ್ಪೂರ್ತಿಕ ಕೊರತೆಯ ಅವಧಿಯು ಪ್ರಮುಖವಾಗಿ ಮಣ್ಣಿಗೆ ಸೇರಿಸಿದ ಸಾವಯವ ಪದಾರ್ಥದಲ್ಲಿರುವ ಇಂಗಾಲ : ಸಾರಜನಕದ ಅನುಪಾತವನ್ನು ಅವಲಂಬಿಸಿರುತ್ತದೆ. ಇದು ಅಧಿಕವಾಗಿದ್ದರೆ ಸಾರಜನಕದ ಕೊರತೆಯು ಹೆಚ್ಚು ದಿನಗಳವರೆಗೆ ಕಂಡುಬರುತ್ತದೆ. ಕಡಿಮೆಯಿದ್ದರೆ ಸಾರಜನಕದ ಕೊರತೆಯು ಅಲ್ಪಾವಧಿಯವರೆಗೆ ಮಾತ್ರ ಇರುತ್ತದೆ.

ಇಂಗಾಲ : ಸಾರಜನಕದ ಅನುಪಾತವು ಹೆಚ್ಚಾಗಿದ್ದಾಗಲೂ ಸಸ್ಯಗಳಿಗೆ ಸಾರಜನಕದ ಕೊರತೆಯಾಗದಂತೆ ಮಾಡಲು ಸಾಧ್ಯವಿದೆ. ಇದಕ್ಕಾಗಿ ಸಾರಜನಕವನ್ನು ಹೊರಗಿನಿಂದ ಸಾವಯವ ಪದಾರ್ಥಕ್ಕೆ (ಮಣ್ಣಿಗೆ) ಪೂರೈಸಬೇಕು. ಸಾವಯವ ಪದಾರ್ಥದಲ್ಲಿ ಇರುವ ಇಂಗಾಲ : ಸಾರಜನಕದ ಅನುಪಾತವನ್ನು ಪರಿಗಣಿಸಿ, ಆ ಪ್ರಮಾವನ್ನು ಯಾವ ಮಟ್ಟಕ್ಕೆ ಬದಲಿಸಬೇಕೆಂಬುವುದನ್ನು ಗಣನೆಗೆ ತೆಗೆದುಕೊಂಡು, ಹೊರಗಿನಿಂದ ಪೂರೈಸಬೇಕಾದ ಸಾರಜನಕದ ಪ್ರಮಾಣವನ್ನು ನಿರ್ಧರಿಸಬೇಕು. ಉದಾಹರಣೆಗೆ, ಇಂಗಾಲ; ಸಾರಜನಕದ ಅನುಪಾತವು ೬೦ : ೧ ರಿಂದ ೮೦ : ೧ರ ಸಮೀಪದಲ್ಲಿದ್ದ ತೃಣಧಾನ್ಯದ ಹುಲ್ಲಿನಂತಹ ಸಾವಯವ ಪದಾರ್ಥವಾದರೆ ಪ್ರತಿ ಟನ್ನಿಗೆ ೬ ರಿಂದ ೮ ಕಿ.ಗ್ರಾಂ. ಸಾರಜನಕವನ್ನೂ ಒದಗಿಸುವ ರಾಸಾಯನಿಕ ಗೊಬ್ಬರವನ್ನು ಪೂರೈಸಿದರೆ ಬೆಳೆಗೆ ಸಾರಜನಕದ ಕೊರತೆಯಾಗುವುದಿಲ್ಲವೆಂದು ಕಂಡುಬಂದಿದೆ.

ii) ಸಾವಯವ ಪದಾರ್ಥಗಳಿಂದ ಸಾರಜನಕದ ಬಿಡುಗಡೆ : ಸಾವಯವ ಪದಾರ್ಥಗಳು ಕಳಿತು ಅವುಗಳಿಂದ ಸಾರಜನಕವು ವಿಮೋಚನೆಗೊಳ್ಳಲು ಬೇಕಾಗುವ ಅವಧಿಗೂ ಆ ಸಾವಯವ ಪದಾರ್ಥದ ಇಂಗಾಲ : ಸಾರಜನಕದ ಅನುಪಾತಕ್ಕೂ ನಿಕಟವಾದ ಸಂಬಂಧವಿದೆ. ಅನುಪಾತವು ಅಧಿಕವಾಗಿದ್ದರೆ (ಉದಾಹರಣೆಗೆ : ಅನುಪಾತವು ೮೦:೧ ಇದ್ದರೆ) ಮೇಲೆ ವಿವರಿಸಿದಂತೆ ಸೂಕ್ಷ್ಮ ಜೀವಿಗಳಿಗೆ ಬೇಕಾಗುವಷ್ಟು ಸಾರಜನಕವೇ ಸಾವಯವ ಪದಾರ್ಥದಲ್ಲಿ ಇಲ್ಲದಿರುವುದರಿಂದ ಸಾವಯವ ಪದಾರ್ಥದಲ್ಲಿರುವ ಸಾರಜನಕವು ವಿಮೋಚನೆಗೊಳ್ಳುವುದಿಲ್ಲ. ಆದರೆ ಈ ಅನುಪಾತವು ಕಡಿಮೆಯಾಗಿದ್ದರೆ (ಉದಾಹರಣೆಗೆ ಪ್ರಮಾಣವು ೩೦: ೧ ೪ರಿಂದ ೪೦:೧ ಸನಿಹದಲ್ಲಿದ್ದರೆ) ಮಣ್ಣಿನಲ್ಲಿರುವ ಸಾರಜನಕವು ಕಡಮೆಯಾಗದೇ ಸಾವಯವ ಪದಾರ್ಥದಲ್ಲಿರುವ ಸಾರಜನಕವು ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದ ಹೊರಬರುತ್ತದೆ. ಆದ್ದರಿಂದಲೇ ಇಂಗಾಲ : ಸಾರಜನಕದ ಅನುಪಾತವು ಕಡಿಮೆಯಿರುವ ಬೇಳೆಕಾಳುಗಳು ವರ್ಗಕ್ಕೆ ಸೇರಿದ ಸಸ್ಯಗಳು ಹಸುರು ಗೊಬ್ಬರವೆಂದು ಬಳಸಲು ಸೂಕ್ತವೆನಿಸಿವೆ.

iii) ಮಣ್ಣಿನಲ್ಲಿ ಸಾವಯವ ಪದಾರ್ಥವನ್ನು (ಹ್ಯೂಮಸ್ಸನ್ನು) ಕಾಯ್ದುಕೊಳ್ಳುವ ಸಾಧ್ಯತೆ : ಮಣ್ಣಿನ ಇಂಗಾಲ: ಸಾರಜನಕದ ಅನುಪಾತವು ಒಂದೇ ಮಟ್ಟದಲ್ಲಿರುತ್ತದೆಯೆಂದು ಈ ಮೊದಲೇ ಹೇಳಿದೆ. ಮಣ್ಣಿನಲ್ಲಿರುವ ಸಾವಯವ ರೂಪದಲ್ಲಿರುವ ಸಾರಜನಕ ಮತ್ತು ಇಂಗಾಲಗಳು ಪ್ರಮಣದಲ್ಲಿ ಒಂದನ್ನೊಂದು ಅವಲಂಬಿಸಿವೆ. ಅಲ್ಲದೇ, ಮಣ್ಣಿನಲ್ಲಿರುವ ಹ್ಯೂಮಸ್ ಪ್ರಮಾಣವು ಅದರಲ್ಲಿರುವ ಇಂಗಾಲದ ಸುಮಾರು ೧.೭ ಪಟ್ಟು ಇರುತ್ತದೆ. ಆದ್ದರಿಂದ ಮಣ್ಣಿನಲ್ಲಿರುವ ಹ್ಯೂಮಸ್ ಪ್ರಮಾಣವನ್ನು ಅಧಿಕಗೊಳಿಸಬೇಕಾದರೆ, ಅದರಲ್ಲಿರುವ ಇಂಗಾಲವನ್ನು ಹೆಚ್ಚಿಸಬೇಕಾಗುತ್ತದೆ ಮತ್ತು ಇಂಗಾಲದ ಪ್ರಮಾಣವು ಹೆಚ್ಚಬೇಕಾದರೆ ಹ್ಯೂಮಸ್ಸಿನಲ್ಲಿರುವ ಸಾರಜನಕದ ಪ್ರಮಾಣವನ್ನುಹೆಚ್ಚಿಸಬೇಕು ಎಂದಂತಾಯಿತು. ಆದ್ದರಿಂದ ಮಣ್ಣಿಗೆ ಸೇರಿಸಿದ ಸಾವಯವ ವಸ್ತುಗಳಲ್ಲಿ ಸಾರಜನಕವು ಸೂಕ್ತ ಪ್ರಮಾಣದಲ್ಲಿದ್ದರೆ, ಅಥವಾ ಅವಶ್ಯವಿರುವಷ್ಟು ಸಾರಜನಕವನ್ನು ಹೊರಗಿನಿಂದ ಪೂರೈಸಿದರೆ, ಕಳಿಯುವ ಕ್ರಿಯೆಯು ಭರದಿಂದ ಸಾಗಿ ಸಾಕಷ್ಟು ಪ್ರಮಾಣದಲ್ಲಿ ಹ್ಯೂಮಸ್ ಸಂಗ್ರಹವಾಗುತ್ತದೆ.

ಮಣ್ಣಿಗೆ ಸೇರಿಸಿದ ಸಾವಯವ ವಸ್ತುಗಳಲ್ಲಿ ಸಾಕಷ್ಟ ಸಾರಜನಕವಿಲ್ಲದಿದ್ದರೆ ಅಂದರೆ ಇಂಗಾಲ: ಸಾರಜನಕದ ಅನುಪಾತವು ಅಧಿಕವಾಗಿದ್ದರೆ ಹೊರಗಿನಿಂದ ಪೂರೈಸಬೇಕಾದ ಸಾರಜನಕದ ಪ್ರಮಾಣವನ್ನು ಲೆಕ್ಕ ಮಾಡುವ ವಿಧಾನವನ್ನೂ ಕೆಳಗಿನ ಉದಾಹರಣೆಯಿಂದ ತಿಳಿಯಬಹುದು.

ಉದಾಹರಣೆಗ : ಶೇಕಡಾ ೪೦ ರಷ್ಟು ಇಂಗಾಲ ಮತ್ತು ಶೇಕಡಾ ೦.೫ ರಷ್ಟು ಸಾರಜನಕ ಇರುವ (ಇಂಗಾಲ: ಸಾರಜನಕದ ಪ್ರಮಾಣವು ೮೦:೧) ಒಂದು ಟನ್ನು (೧೦೦೦ ಕಿ.ಗ್ರಾಂ) ಸಾವಯವ ಪದಾರ್ಥವನ್ನು ಮಣ್ಣಿಗೆ ಸೇರಿಸಲಾಗಿದೆ. ಅದರಲ್ಲಿ ಶೇಕಡಾ ೬೫ ರಷ್ಟು ಕಳಿತಿದೆ. ಉಳಿದಿರುವ ಶೇಕಡಾ ೩೫ರಷ್ಟು ಸಾವಯವ ಪದಾರ್ಥವನ್ನು ಮಣ್ಣಿನಲ್ಲಿ ಉಳಿಸಿಕೊಳ್ಳಬೇಕಾದರೆ ಹೊರಗಿನಿಂದ ಪೂರೈಸಬೇಕಾದ ಸಾರಜನಕದ ಪ್ರಮಾಣವೆಷ್ಟು?

ಒಂದು ಟನ್‌ ಸಾವಯವ ಪದಾರ್ಥದಲ್ಲಿ –

೧೦೦೦x೪೦/೧೦೦ ಅಂದರೆ – ೪೦೦ ಕಿ.ಗ್ರಾಂ. ಇಂಗಾಲವಿದೆ ಮತ್ತು

೧೦೦೦x೦.೫/೧೦೦ ಅಂದರೆ – ೫ ಕಿ.ಗ್ರಾಂ. ಸಾರಜನಕವಿದೆ.

ಒಂದು ಟನ್‌ ಸಾವಯವ ಪದಾರ್ಥದಲ್ಲಿ ಶೇಕಡಾ ೬೫ರಷ್ಟು ಕಳಿತು ಉಳಿದಿರುವ ಸಾವಯವ ಪದಾರ್ಥದ ಪ್ರಮಾಣವು –

೧೦೦ – x(100 – 65)/೧೦೦ ಅಂದರೆ ೩೫೦ ಕಿ.ಗ್ರಾಂ.

ಈ ೩೫೦ ಕಿ.ಗ್ರಾಂ. ಸಾವಯವ ಪದಾರ್ಥದಲ್ಲಿ,

೪೦x೩೫೦/೧೦೦ ಅಂದರೆ ೧೪೦ ಕಿ.ಗ್ರಾಂ. ಇಂಗಾಲವು ಉಳಿದಿರುತ್ತದೆ.

ನಿರ್ಮಾಣಗೊಳ್ಳುವ ಹ್ಯೂಮಸ್ಸಿನಲ್ಲಿ ಇಂಗಾಲ : ಸಾರಜನಕದ ಪ್ರಮಾಣವು ೧೦:೧ ಇರಬೇಕೆಂದು ಪರಿಗಣಿಸಿದರೆ, ೧೪೦ ಕಿ.ಗ್ರಾಂ. ಇಂಗಾಲಕ್ಕೆ –

೧೪೦x೧/೧೦೦ ಅಂದರೆ ೧೪ ಕಿ.ಗ್ರಾಂ ಸಾರಜನಕವಿರಬೇಕು.

ಆದರೆ ಮಣ್ಣಿಗೆ ಸೇರಿಸಿದ ಸಾವಯವ ಪದಾರ್ಥದಲ್ಲಿ ೫ ಕಿ.ಗ್ರಾಂ ಸಾರಜನಕವಿದೆ. ಆದ್ದರಿಂದ, ೧೪ ಕಿ.ಗ್ರಾಂ. (ಅವಶ್ಯವಿರುವ ಸಾರಜನಕದ ಪ್ರಮಾಣ) – ೫ ಕಿ.ಗ್ರಾಂ (ಒಂದು ಟನ್‌ ಸಾವಯವ ಪದಾರ್ಥದಲ್ಲಿ ಇದ್ದ ಸಾರಜನಕ )= ಕಿ.ಗ್ರಾಂ. ಸಾರಜನಕವು ಕಡಮೆ ಬೀಳುತ್ತದೆ.

ಆದ್ದರಿಂದ ೯ ಕಿ.ಗ್ರಾಂ ಸಾರಜನಕವನ್ನು ಹೊರಗಿನಿಂದ ಪೂರೈಸಿದರೆ, ೧೪೦ ಕಿ.ಗ್ರಾಂ. ಇಂಗಾಲವಿರುವ ಸಾವಯವ ವಸ್ತುವನ್ನು (ಹ್ಯೂಮಸ್ಸನ್ನು) ಮಣ್ಣಿನಲ್ಲಿ ಉಳಿಸಿಕೊಳ್ಳಬಹುದು.

ಇಂಗಾಲಸಾರಜನಕಹ್ಯೂಮಸ್ ಇವುಗಳ ಪರಸ್ಪರ ಸಂಬಂಧ : ಮಣ್ಣಿನಲ್ಲಿರುವ ಕಳಿತ ಸಾವಯವ ಪದಾರ್ಥದಲ್ಲಿ (ಹ್ಯೂಮಸ್ಸಿನಲ್ಲಿ) ಶೇ.೫೨ ರಿಂದ ೫೮ ರಷ್ಟು ಇಂಗಾಲವಿದೆ. ಆದ್ದರಿಂದ, ಮಣ್ಣಿನಲ್ಲಿ ಇರುವ ಸಾವಯವ ಇಂಗಾಲವನ್ನು ಪ್ರಯೋಗಾಲಯದಲ್ಲಿ ಕಂಡುಕೊಂಡರೆ ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಅಂದಾಜನ್ನು ಮಾಡಬಹುದು. ಉದಾಹರಣೆಗೆ – ಸಾವಯವ ಪದಾರ್ಥದಲ್ಲಿ ಶೆ.೫೮ ಇಂಗಾಲವಿದೆ ಎಂದು ಪರಿಗಣಿಸಿದರೆ ಸಾವಯವ ಪದಾರ್ಥದ ಪ್ರಮಾಣವನ್ನು ಮುಂದೆ ತೋರಿಸಿದಂತೆ ಕಂಡು ಹಿಡಿಯಬಹುದು.

ಸಾವಯವ ಪದಾರ್ಥ = ಇಂಗಾಲ x ೧.೭೨೮
ಶೇಕಡಾ          ಶೇಕಡಾ

(೧೦೦/೫೮–>೧.೭೨೪)

ಈ ಗುಣಕವೇ ಸಾಮಾನ್ಯವಾಗಿ ರೂಢಿಯಲ್ಲಿದೆ.

ಸಾವಯವ ಪದಾರ್ಥದಲ್ಲಿ ಇಂಗಾಲದ ಪ್ರಮಾಣವು ಶೇ. ೫೨ ಎಂದು ಪರಿಗಣಿಸಿದರೆ ಗುಣಕವು ೧೦೦/೫೨ ಅಂದರೆ ೧.೯೨೩ ಆಗುತ್ತದೆ. ಮಣ್ಣಿನಲ್ಲಿಯ ಸಾರಜನಕದ ಪ್ರಮಾಣದ ಮೇಲಿಂದಲೂ ಸಾವಯವ ಪದಾರ್ಥದ ಪ್ರಮಾಣವನ್ನು ಅಂದಾಜು ಮಾಡಬಹುದು. ಸಾವಯವ ಪದಾರ್ಥದ ಇಂಗಾಲ ಸಾರಜನಕದ ಪ್ರಮಾಣವು ೧೦:೧ ಇದೆ ಎಂದು ಪರಿಗಣಿಸಿದರೆ ಮಣ್ಣಿನ ಸಾರಜನಕದ ಪ್ರಮಾಣದ ಮೇಲಿನಿಂದ ಸಾವಯವ ಪದಾರ್ಥದ ಪ್ರಮಾಣವನ್ನು ಕೆಳಗಿನಂತೆ ಅಂದಾಜು ಮಾಡಬಹುದು.

ಮಣ್ಣಿನಲ್ಲಿರುವ ಸಾವಯವ ಪದಾರ್ಥ (ಶೇಕಡಾ) = ಶೇಕಡಾ ಸಾರಜನಕ x ೧೦ x ೧.೭೨೪ = ಶೇಕಡಾ ಸಾರಜನಕ x ೧೭.೨೪

ಇದರ ಬದಲು ಇಂಗಾಲ : ಸಾರಜನಕ ಪ್ರಮಾಣವು ೧೨:೧ ಎಂದು ಪರಿಗಣಿಸಿದರೆ:

ಮಣ್ಣಿನಲ್ಲಿರುವ ಸಾಯವ ಪದಾರ್ಥ (ಶೇಕಡಾ) = ಶೇಕಡಾ ಸಾರಜನಕ ೧೨   ೧.೭೨೪=ಶೇಕಡಾ ಸಾರಜನಕ ೨೦.೭

ಮಣ್ಣಿನಲ್ಲಿರುವ ಶೇಕಡಾ ಸಾರಜನಕವನ್ನು ೨೦ರಿಂದ ಗುಣಿಸಿ ಸಾವಯವ ಪದಾರ್ಥದ ಪ್ರಮಾಣವನ್ನು ಅಂದಾಜು ಮಾಡುವ ಪದ್ಧತಿಯು ರೂಢಿಯಲ್ಲಿದೆ.

ಮಣ್ಣಿನಲ್ಲಿರುವ ಸಾವಯವ ಪದಾರ್ಥ (ಸಾರಜನಕದ) ಮೇಲೆ ಪರಿಣಾಮವನ್ನು ಬೀರುವ ಸಂಗತಿಗಳು: ಕೆಳಗಿನ ಸಂಗತಿಗಳು ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಹಾಗೂ ಸಾರಜನಿಕದ ಪ್ರಮಾಣಗಳನ್ನು ನಿರ್ಧರಿಸುತ್ತವೆ:

. ಹವಾಮಾನ : ಹವಾಮಾನದ ಘಟಕಗಳಲ್ಲಿ ಉಷ್ಣತಾಮಾನ ಮತ್ತು ಮಳೆ ಇವು ಮಣ್ಣಿನ ಸಾವಯವ ಪದಾರ್ಥದ ಮೇಲೆ ಗಣನೀಯವಾದ ಪರಿಣಾಮವನ್ನು ಬೀರುತ್ತವೆ. ಈ ಪರಿಣಾಮವು ಎರಡು ಬಗೆಯವಾಗಿವೆ ಎನ್ನಬಹುದು.

i) ಯಾವ ಪ್ರಕಾರದ ಸಸ್ಯಗಳು ಬೆಳೆದು ಬರುತ್ತವೆ ಮತ್ತು ಸಸ್ಯಗಳ ಎಷ್ಟು ಭಾಗವು ಮಣ್ಣಿಗೆ ಬಂದು ಸೇರಿಕೊಳ್ಳುತ್ತದೆ ಎಂಬುವುದು ಒಂದು ಬಗೆಯ ಪರಿಣಾಮ.

ii) ಮಣ್ಣಿಗೆ ಬಂದು ಸೇರಿದ ಸಾವಯವ ಪದಾರ್ಥವು ಎಷ್ಟು ವೇಗದಿಂದ ಕಳಿಯುತ್ತದೆ ಮತ್ತು ಮಣ್ಣಿನಲ್ಲಿ ಉಳಿಯುವ ಸಾವಯವ ಪದಾರ್ಥವೆಷ್ಟು ಎಂಬುವುದು ಇನ್ನೊಂದು ಬಗೆಯ ಪರಿಣಾಮ.

ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಸ್ಯಗಳು ಹುಲುಸಾಗಿ ಬೆಳೆದು ಬರುತ್ತವೆಯಲ್ಲದೇ ಮಣ್ಣನ್ನು ಬಂದು ಸೇರಿಕೊಳ್ಳುವ ಸಾವಯವ ಪದಾರ್ಥದ ಪ್ರಮಾಣವು ಅಧಿಕವಾಗಿರುತ್ತದೆ. ಅದರಂತೆಯೇ ಉಷ್ಣತಾಮಾನವು ಹೆಚ್ಚಿದಂತೆ ಕಳಿಯುವ ಕ್ರಿಯೆಯು ತೀವ್ರಗೊಂಡು ಮಣ್ಣಿನಲ್ಲಿ ಸಂಗ್ರಹವಾಗುವ ಸಾವಯವ ಪದಾರ್ಥದ ಪ್ರಮಾಣವು ಕಡಮೆಯಾಗುತ್ತಾ ಸಾಗುತ್ತದೆ.

. ಮಣ್ಣಿನ ಗುಣಧರ್ಮಗಳು :ಮಣ್ಣಿನ ಗುಣಧರ್ಮಗಳು, ಸಂಗ್ರಹವಾಗುವ ಸಾವಯವ ಪದಾರ್ಥದ ಪ್ರಮಣವು ಅಧಿಕವಾಗಿರುತ್ತದೆ. ಅದರಂತೆಯೇ ಉಷ್ಣತಾಮಾನವು ಹೆಚ್ಚಿದಂತೆ ಕಳಿಯುವ ಕ್ರಿಯೆಯು ತೀವ್ರಗೊಂಡು ಮಣ್ಣಿನಲ್ಲಿ ಸಂಗ್ರಹವಾಗುವ ಸಾವಯವ ಪದಾರ್ಥದ ಪ್ರಮಾಣವು ಕಡಮೆಯಾಗುತ್ತಾ ಸಾಗುತ್ತದೆ.

. ಮಣ್ಣಿನ ಗುಣಧರ್ಮಗಳು : ಮಣ್ಣಿನ ಗುಣಧರ್ಮಗಳು ಸಂಗ್ರಹವಾಗುವ ಸಾವಯವ ಪದಾರ್ಥದ ಪ್ರಮಾಣದ ಮೇಲೆ ಗಣನೀಯವಾದ ಪರಿಣಾಮವನ್ನು ಬೀರುತ್ತವೆ. ಕೆಳಗಿನ ಸಂಗತಿಗಳನ್ನು ಗಮನಿಸಿದಾಗ ಈ ಮಾತು ಸ್ಪಷ್ಟವಾಗುತ್ತದೆ.

i) ಮರಳಿನ ಪ್ರಾಬಲ್ಯವಿರುವ ಮಣ್ಣಿನ ಜಲಧಾರಣಾ ಸಾಮರ್ಥ್ಯ ಕಡಮೆ. ಆದ್ದರಿಂದ ಇಂತಹ ಮಣ್ಣಿನಲ್ಲಿ ಸಸ್ಯಗಳ ಬೆಳವಣಿಗೆ ಮತ್ತು ಸಸ್ಯಗಳಿಂದ ಮಣ್ಣಿಗೆ ಬಂದು ಸೇರುವ ಸಾವಯವ ಪದಾರ್ಥ ಇವೆರಡೂ ಕಡಮೆಯೇ. ಇದಲ್ಲದೇ ಹವೆಯು ನಿರಾತಂಕವಾಗಿ ಮಣ್ಣಿನಲ್ಲಿ ಚಲಿಸುತದೆಯಾದ್ದರಿಂದ ಬಂದು ಸೇರಿದ ಸಾವಯವ ಪದಾರ್ಥವೂ ತೀವ್ರಗತಿಯಿಂದ ಕಳಿಯುತ್ತದೆ. ಆದ್ದರಿಂದ ಮರಳು ಮಣ್ಣಿನಲ್ಲಿ ಸಾವಯವ ಪದಾರ್ಥಗಳು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವುದಿಲ್ಲ.

ii) ಎರೆಯ ಪ್ರಾಬಲ್ಯವಿರುವ ಮಣ್ಣಿನ ಜಲಧಾರಣಾ ಸಾಮರ್ಥ್ಯವು ಅಧಿಕ. ಇಂತಹ ಮಣ್ಣಿನಲ್ಲಿ ಸಸ್ಯಗಳು ಹುಲುಸಾಗಿ ಬೆಳೆದು ಬರುತ್ತವೆಯಲ್ಲದೆ, ಸಾವಯವ ಪದಾರ್ಥವು ದೊಡ್ಡ ಪ್ರಮಾಣದಲ್ಲಿ ಮಣ್ಣಿಗೆ ಸೇರುತ್ತದೆ. ಎರೆ ಮಣ್ಣಿನಲ್ಲಿ ಸಾವಯವ ಪದಾರ್ಥಗಳೂ ನಿಧಾನವಾಗಿ ಕಳಿಯುತ್ತವೆ. ಅಲ್ಲದೇ, ಎರೆ ಕಣಗಳು ಹ್ಯೂಮಸ್ಸಿನೊಡನೆ ಸಂಯೋಜನೆಗೊಂಡು ಕಳಿಯುವ ಕ್ರಿಯೆಗೆ ಪ್ರತಿರೋಧವನ್ನೊಡುತ್ತವೆ. ಇವೆಲ್ಲ ಕಾರಣಗಳಿಂದ ಎರೆ ಮಣ್ಣಿನಲ್ಲಿ ಸಾವಯವ ಪದಾರ್ಥವು ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಳ್ಳುತ್ತದೆ.

iii) ಹೆಚ್ಚಾದ ನೀರು ಸರಿಯಾಗಿ ಬಸಿದುಹೋಗುವ ಮಣ್ಣಿನಲ್ಲಿ ಹವೆಯು ನಿರಾತಂಕವಾಗಿ ಚಲಿಸಲಾರದು. ಆದ್ದರಿಂದ ಕಳಿಯುವ ಕ್ರಿಯೆಯು ನಿಧಾನಗೊಂಡು ಸಾವಯವ ಪದಾರ್ಥಗಳುಮಣ್ಣಿನಲ್ಲಿ ಸಂಗ್ರಹಗೊಳ್ಳುತ್ತವೆ. ನೀರು ಸರಾಗವಾಗಿ ಬಸಿದು ಹೋಗುವ ವ್ಯವಸ್ಥೆ ಮಾಡಿದ ನಂತರ ಕಳಿಯುವ ಕ್ರಿಯೆಯು ತೀವ್ರಗೊಂಡು ಮಣ್ಣಿನಲ್ಲಿ ಸಂಗ್ರಹಗೊಂಡು ಸಾವಯವ ಪದಾರ್ಥವು ಕಡಮೆಯಾಗುತ್ತದೆ.

. ಭೂಮಿಯ ರಚನೆ : ಮಣ್ಣಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಅಲ್ಲಿ ಬೆಳೆಯುವ ಸಸ್ಯಗಳೂ, ಮಣ್ಣಿನೊಡನೆ ಚಲಿಸುವ ಹವೆ ಇತ್ಯಾದಿಗಳ ಮೂಲಕ ಮಣ್ಣಿನಲ್ಲಾಗುವ ಸಾವಯವ ಪದಾರ್ಥಗಳ ಸಂಗ್ರಹದ ಮೇಲೆ ಭೂಮಿಯ ರಚನೆಯು ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ : ಇಳುಕಲಿನ ಮೇಲ್ಬಾಗದಲ್ಲಿರುವ ಮಣ್ಣಿನ ಆಳವು ಕಡಿಮೆ. ಮಣ್ಣಿನ ಕಣಗಳು ಉರುಟಾಗಿರುತ್ತವೆಯಾದ್ದರಿಂದ ಜಲಧಾರಣಾ ಸಾಮರ್ಥ್ಯವು ಕಡಮೆ. ಅಲ್ಲಿ ಬೆಳೆಯುವ ಸಸ್ಯಗಳು ವಿರಳ. ಹೀಗಾಗಿ ಮಣ್ಣಿಗೆ ಬಂದು ಸೇರುವ ಸಾವಯವ ಪದಾರ್ಥಗಳೂ ಕಡಮೆಯೇ. ಅಲ್ಲದೇ, ಮಣ್ಣಿನೊಳಗೆ ಹವೆಯು ನಿರಾತಂಕವಾಗಿ ಚಲಿಸುವುದರಿಂದ ಸಾವಯವ ವಸ್ತುಗಳು ಬೇಗನೇ ಕಳಿತು, ಮಣ್ಣಿನಲ್ಲಿ ಸಂಗ್ರಹವಾಗುವ ಸಾವಯವ ಪದಾರ್ಥದ ಪ್ರಮಾಣವು ಕೆಳಮಟ್ಟದಲ್ಲಿರುತ್ತದೆ.

ಇಳಿಜಾರಿನ ಕೆಳಭಾಗದಲ್ಲಿರುವ ಮಣ್ಣು ಆಳವಾಗಿರುತ್ತದೆ. ಅದರಲ್ಲಿ ಜಿನುಗು ಕಣಗಳ ಪ್ರಭಾವವಿದ್ದು, ಜಲಧಾರಣಾ ಸಾಮರ್ಥ್ಯವು ಅಧಿಕವಾಗಿರುತ್ತದೆ. ಈ ಮಣ್ಣಿನಲ್ಲಿ ಸಸ್ಯಗಳು ವಿಫುಲವಾಗಿ ಬೆಳೆದು, ಸಾವಯವ ಪದಾರ್ಥವು ಅಧಿಕ ಪ್ರಮಾಣದಲ್ಲಿ ಮಣ್ಣಿಗೆ ಬಂದು ಸೇರುತ್ತದೆ. ಸಾವಯವ ಪದಾರ್ಥಗಳು ನಿಧಾನವಾಗಿ ಕಳಿಯುತ್ತವೆಯಲ್ಲದೇ, ಎರೆ ಕಣಗಳೊಡನೆ ಸಂಯೋಜನೆಗೊಂಡು ಸುರಕ್ಷಿತವಾಗಿರುತ್ತವೆ. ಹೀಗಾಗಿ ಈ ಮಣ್ಣಿನಲ್ಲಿ ಹೆಚ್ಚು ಸಾವಯವ ಪದಾರ್ಥಗಳು ಸಂಗ್ರಹಗೊಳ್ಳುತ್ತವೆ.

.  ಬೇಸಾಯ ಪದ್ಧತಿಗಳು : ಸೂಕ್ತ ಅಂತರ ಬೆಳೆಗಳನ್ನು ಬೆಳೆದು, ಸರಿಯಾಗಿ ಬೆಳೆ ಪರಿವರ್ತನೆಯನ್ನು ಅನುಸರಿಸಿ, ನಿರ್ಧಿಷ್ಟಪಡಿಸಿದ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳು ಮತ್ತು ಸಸ್ಯ ಪೋಷಕಗಳನ್ನು (ಅದರಲ್ಲಿಯೂ ಸಾರಜನಕವನ್ನು) ಪೂರೈಸಿ, ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡರೆ, ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಸಂಗ್ರಹಗೊಳ್ಳುತ್ತವೆ. ಅದರಂತೆಯೇ, ಅವಶ್ಯವಿರುವ ಬೇಸಾಯದ ಉಪಕರಣಗಳನ್ನು ಬಳಸುವುದರಿಂದ ಮಣ್ಣಿನ ಸಾವಯವ ಪದಾರ್ಥದ ನಷ್ಟವನ್ನು ಕಡಮೆಮಾಡಬಹುದು.

ಮಣ್ಣಿನಲ್ಲಿರುವಸಾವಯವಪದಾರ್ಥದಸಂರಕ್ಷಣೆಮತ್ತುವೃದ್ಧಿ

ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಸಂರಕ್ಷಣೆ ಮತ್ತು ವೃದ್ಧಿಯ ಮಾರ್ಗಗಳನ್ನು ತಿಳಿಯುವ ಮೊದಲು ಕೆಳಗಿನ ಸಂಗತಿಗಳನ್ನು ಅನುಲಕ್ಷಿಸಬೇಕು:

i) ಹೊಸದಾಗಿ ಸಾಗುವಳಿ ಮಾಡುವ ಭೂಮಿಯಲ್ಲಿ ಬೇಸಾಯವನ್ನು ಮುಂದುವರೆಸಿದಂತೆ ಮಣ್ಣಿನಲ್ಲಿದ್ದ ಸಾವಯವ ಪದಾರ್ಥದ ಪ್ರಮಾಣವು ಕಡಮೆಯಾಗತೊಡಗುತ್ತದೆ.

ii) ಆರಂಭದಲ್ಲಿದ್ದ ಅಥವಾ ಅದಕ್ಕೂಮೇಲಿನ ಮಟ್ಟದಲ್ಲಿ ಸಾವಯವ ಪದಾರ್ಥವನ್ನು ಕಾಯ್ದುಕೊಳ್ಳುವ ಕಾರ್ಯವು ಅಸಾಧ್ಯ ಮತ್ತು ಹೆಚ್ಚು ಖರ್ಚಿನ ಕ್ರಮವಾದೀತು.

iii) ಉತ್ತಮ ಬೆಳೆಯನ್ನು ಪಡೆಯಲು ಅವಶ್ಯವಿರುವಷ್ಟು ಸಾವಯವ ಪದಾರ್ಥವು ಮಣ್ಣಿನಲ್ಲಿರುವಂತೆ ಕ್ರಮಗಳನ್ನು ಕೈಗೊಳ್ಳುವುದು ಜಾಣತನದ ನಿರ್ಣಯವೆನಿಸಿತು. ಸಂಬಂಧಿಸಿದ ಹವಾಮಾನ ಮತ್ತು ಮಣ್ಣಿನಗುಣಧರ್ಮ ಇವುಗಳನ್ನು ಪರಿಗಣಿಸಿ ಮಣ್ಣಿನಲ್ಲಿರಬೇಕಾದ ಸಾವಯವ ಪದಾರ್ಥದ ಪ್ರಮಾಣವನ್ನು ನಿರ್ಧರಿಸಬೇಕು.

iv) ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವು ಅತಿಕಡಿಮೆಯಾಗದಂತೆ ಎಚ್ಚರವಹಿಸಬೇಕು. ಒಮ್ಮೆ ಈ ಪರಿಸ್ಥಿತಿಯು ಉದ್ಭವವಾದರೆ ಮಣ್ಣನ್ನು ಉತ್ತಮ ಸ್ಥಿತಿಗೆ ಏರಿಸುವ ಕಾರ್ಯವು ಅತಿ ನಿಧಾನ ಮತ್ತು ಬಹು ಖರ್ಚಿನ ಕೆಲಸವಾಗುತ್ತದೆ. ಮಣ್ಣಿನಲ್ಲಿಯ ಸಾವಯವ ಪದಾರ್ಥದ ರಕ್ಷಣೆ ಮತ್ತು ವೃದ್ಧಿಗಾಗಿ ಕೆಳಕಾಣಿಸಿದ ಸೂಚನೆಗಳು ಪ್ರಯೋಜನಕಾರಿಯಾಗಿರುತ್ತವೆ.

. ಬೆಳೆಗಳ ತ್ಯಾಜ್ಯ ವಸ್ತುಗಳ ಮರುಬಳಕೆ : ಮನುಷ್ಯನಿಗೆ ಮತ್ತು ಅವನು ಸಾಕುವ ಜಾನುವಾರುಗಳ ಉಪಯೋಗಕ್ಕೆ ಬೇಕಾದ ಭಾಗವನ್ನು ಬಿಟ್ಟು,ಬೆಳೆಯ ಕೊಳೆ, ರವದಿ, ಸೋಗೆ ಮುಂತಾದ ತ್ಯಾಜ್ಯ ವಸ್ತುಗಳನ್ನು ಮಣ್ಣಿಗೆ ಸೇರಿಸಬೇಕು. ಈ ಸಾವಯವ ವಸ್ತುಗಳ ಮರುಬಳಕೆಯಿಂದ ಮಣ್ಣಿನ ಸಾವಯವ ಪದಾರ್ಥದ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

. ಮಧ್ಯಂತರ ಬೆಳೆ ಮತ್ತು ಬೆಳೆ ಪರಿವರ್ತನೆ : ಇಂಗಾಲ ಮತ್ತು ಸಾರಜನಕ ಇವೆರಡೂ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿಗೆ ಸೇರುವಂತಹ ಮಧ್ಯಂತರ ಬೆಳೆ ಪದ್ಧತಿ ಮತ್ತು ಬೆಳೆ ಪರಿವರ್ತನೆಯನ್ನು ಅನುಸರಿಸಬೇಕು. ತೃಣಧಾನ್ಯ ಬೆಳೆಗಳಾದ ಜೋಳ ಮತ್ತು ಮುಸುಕಿನ ಜೋಳ – ಅಧಿಕ ಅಂತರದ ಸಾಲುಗಳಲ್ಲಿ ಬೆಳೆಸುವ ಹತ್ತಿ ಮತ್ತು ತಂಬಾಕು ಇತ್ಯಾದಿ ಬೆಳೆಗಳಲ್ಲಿ ಮೇಲಿಂದ ಮೇಲೆ ಮಧ್ಯಂತರ ಬೇಸಾಯವನ್ನು ಮಾಡಬೇಕಾಗುತ್ತದೆ. ಇವು ಮಣ್ಣಿನಲ್ಲಿರುವ ಸಾವಯವ ಪರ್ದಾವನ್ನು ಕುಗ್ಗಿಸುವ ಬೆಳೆಗಳೆನ್ನಬಹುದು. ಪ್ರತಿ ವರ್ಷ ಇಂತಹ ಬೆಳೆಗಳನ್ನೇ ಬೆಳೆಯುತ್ತಿದ್ದರೆ ಮಣ್ಣಿನಲ್ಲಿಯ ಸಾವಯವ ಪದಾರ್ಥವನ್ನು ಅಧಿಕಗೊಳಿಸಲಾಗಲೀ ಇದ್ದ ಹ್ಯೂಮಸ್ಸನ್ನು ರಕ್ಷಿಸಲಾಗಲೀ ಸಾಧ್ಯವಾಗುವುದಿಲ್ಲ.

ಮೇಲೆ ಹೇಳಿದ ಬೆಳೆಗಳ ಬದಲು ಬೇಳೆಕಾಳು ವರ್ಗಕ್ಕೆ ಸೇರಿದ ತೊಗರಿ, ಹೆಸರು, ಅಲಸಂದೆ, ಸೋಯ ಅವರೆ, ಕುದುರೆ ಮೆಂತೆ ಇತ್ಯಾದಿ ಬೆಳೆಗಳನ್ನು ಮಧ್ಯಂತರ ಇಲ್ಲವೇ ಪರಿವರ್ತನಾ ಬೆಳೆಗಳಾಗಿ ಅಳವಡಿಸಿಕೊಂಡರೆ, ಮಣ್ಣಿನಲ್ಲಿಯ ಸಾವಯವ ಪದಾರ್ಥವು ತುಲನಾತ್ಮಕವಾಗಿ ಮೇಲ್ಮಟ್ಟದಲ್ಲಿರುತ್ತದೆ.

ಹುಲ್ಲು ಮತ್ತು ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳ ಮಿಶ್ರಣ, ಅಧಿಕ ಪ್ರಮಾಣದಲ್ಲಿ ಸಾವಯವ ಪದಾರ್ಥಗಳನ್ನು ಮಣ್ಣಿಗೆ ತಿರುಗಿ ಕೊಡಬಲ್ಲ ಮತ್ತು ಕಡಮೆ ಅಂತರದಲ್ಲಿ ಸಾಲುಗಳಿರುವ ಬೆಳೆಗಳು ಇತ್ಯಾದಿಗಳನ್ನು ಬೆಳೆ ಯೋಜನೆಯಲ್ಲಿ ಅಳವಡಿಸಿಕೊಂಡರೆ, ಮಣ್ಣಿನಸಾವಯವ ಪದಾರ್ಥದ ಪ್ರಮಾಣವನ್ನು ಉನ್ನತ ಮಟ್ಟದಲ್ಲಿ ಇಡಲು ಸಾಧ್ಯವಾದೀತು.

. ಮಣ್ಣಿಗೆ ಸಾವಯವ ಪದಾರ್ಥಗಳ ಪೂರೈಕೆ : ಸಗಣಿ ಗೊಬ್ಬರ, ಕಾಂಪೋಸ್ಟ್, ಹಸುರು ಗೊಬ್ಬರ, ಕುರಿ ಗೊಬ್ಬರ (ಕುರಿಗಳನ್ನು ಭೂಕ್ಷೇತ್ರದಲ್ಲಿ ನಿಲ್ಲಿಸುವುದು – penning sheep) ಇತ್ಯಾದಿ ಸ್ಥೂಲಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಸಾವಯವ ಪದಾರ್ಥವು ಅಧಿಕಗೊಳ್ಳುತ್ತದಲ್ಲದೇ ಇಂತಹ ಗೊಬ್ಬರಗಳ ಬಳಕೆಯಿಂದ ಉತ್ತಮವಾಗಿ ಬೆಳೆದು ಬರುವ ಬೆಳೆಗಳಿಂದ ಮಣ್ಣಿಗೆ ಹೆಚ್ಚು ಸಾವಯವ ಪದಾರ್ಥವು ಬೇರು, ಕೊಳೆ, ರವದಿ ಇತ್ಯಾದಿ ರೂಪಗಳಲ್ಲಿ ಬಂದು ಸೇರುತ್ತದೆ.

. ರಾಸಾಯನಿಕ ಗೊಬ್ಬರಗಳ ಪೂರೈಕೆ : ಸ್ಥೂಲ ಗೊಬ್ಬರಗಳಲ್ಲದೇ ಸಾರಜನಕ, ರಂಜಕ, ಪೋಟ್ಯಾಸಿಯಂ, ಸತು ಮುಂತಾಧ ಪೋಷಕಗಳನ್ನು ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು ಬೆಳೆಗೆ ಒದಗಿಸಿದರೆ, ಅದರಂತೆ ಭೂಮಿಗೆ ಸುಣ್ಣವನ್ನು ಸೇರಿಸಿ ಮಣ್ಣಿನ ರಸ ಸಾರ(pH)ವನ್ನು ಸರಿಯಾದ ಮಟ್ಟಕ್ಕೆ ಏರಿಸಿದರೆ, ಬೆಳೆಗಳು ಹುಲುಸಾಗಿ ಬೆಳೆದು ಮಣ್ಣಿಗೆ ಅಧಿಕ ಸಾವಯವ ವಸ್ತುಗಳನ್ನು ಸೇರಿಸುತ್ತವೆ.

ಭಾರತದವಿವಿಧಪ್ರದೇಶಗಳಮಣ್ಣಿನಲ್ಲಿರುವಸಾವಯವಪದಾರ್ಥದಪ್ರಮಾಣ

ಭಾರತದ ವಿವಿಧ ಪ್ರದೇಶಗಳಲ್ಲಿರುವ ಮಣ್ಣಿನ ಸಾವಯವ ಪದಾರ್ಥದ ಪ್ರಮಾಣವು ಕಡಮೆ. ದೇಶದ ಹಲವು ಭೂ ಪ್ರದೇಶಗಳಿಂದ ಸಂಗ್ರಹಿಸಿದ ಮಣ್ಣುಗಳ ಸಾವಯವ ಪದಾರ್ಥದ ವಿವರಗಳನ್ನು ಕೋಷ್ಟಕ – ೯ರಲ್ಲಿ ಮತ್ತು ಭಾರತದ ಕೆಲವು ಗುಂಪಿನ ಮಣ್ಣುಗಳಲ್ಲಿ ಕಂಡುಬರುವ ಸಾವಯವ ಪದಾರ್ಥದ ವಿವರಗಳನ್ನು ಕೋಷ್ಟಕ ೧೦ರಲ್ಲಿ ಕೊಡಲಾಗಿದೆ.

ಈ ಎರಡು ಕೋಷ್ಟಕಗಳನ್ನು (೯, ೧೦) ಪರಿಶೀಲಿಸಿದಾಗ, ಭಾರತದ ಮಣ್ಣುಗಳಲ್ಲಿ ಸಾವಯವ ಪದಾರ್ಥಗಳ ಪ್ರಮಾಣವು ಕಡಮೆ ಇರುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಕೆಳಗಿನ ಸಂಗತಿಗಳು ಪ್ರಮುಖ ಕಾರಣವಾಗಿರುತ್ತವೆ :

ಕೋಷ್ಟಕ : ಭಾರತದ ವಿವಿಧ ಪ್ರದೇಶಗಳಮಣ್ಣಿನಲ್ಲಿರುವ ಸಾವಯವ ಇಂಗಾಲ, ಸಾರಜನಕ, ಇಂಗಾಲ: ಸಾರಜನಕದ ಅನುಪಾತ

ಅ. ಸಂ

ಪ್ರದೇಶದ ಹೆಸರು

ಸರಾಸರಿ ಉಷ್ಣತಾ ಮಾನ ಡಿಗ್ರಿ ಸೆಲ್ಸಿಯಸ್

ಸರಾಸರಿ ವಾರ್ಷಿಕ ಮಳೆ ಸೆಂ.ಮೀ.

ರಸ ಸಾರ (pH)

ಸಾವಯವ ಇಂಗಾಲ ಶೇಕಡಾ

ಸಾರಜನಕ ಶೇಕಡಾ

ಇಂಗಾಲ: ಸಾರಜನಕದ ಅನುಪಾತ

ಬೆಂಗಳೂರು ೨೩.೩ ೭೯ ೫.೨ ೦.೮೫ ೦.೦೭೭ ೧೧.೦
ಮೈಸೂರು ೨೩.೩ ೭೯ ೬.೨ ೦.೫೫ ೦.೦೪೬ ೧೨.೦
ಹೊಸಕೋಟೆ ೨೩.೩ ೭೧ ೫.೭ ೧.೬೭ ೦.೧೩೪ ೧೨.೫
ದೇವನಹಳ್ಳಿ ೨೩.೩ ೭೧ ೬.೮ ೧.೧೯ ೦.೧೦೨ ೧೧.೭
ನಂಜನಗೂಡು ೨೫.೫ ೭೧ ೬.೩ ೦.೫೩ ೦.೦೫೫ ೦೯.೬
ಗುಂಡ್ಲುಪೇಟೆ ೨೪.೪ ೬೬ ೬.೭ ೧.೮೩ ೦.೧೫೩ ೧೨.೦
ಬಂಡೀಪುರ ೨೨.೮ ೮೬ ೫.೭ ೨.೨೧ ೦.೧೬೯ ೧೩.೧
ಫ್ರೇಝರ್‌ಪೇಟೆ (ಕೊಡಗು) ೨೩.೯ ೧೧೨ ೬.೧ ೧.೪೨ ೦.೧೦೯ ೧೩.೦
ಮಡಿಕೇರಿ ೧೭.೭ ೩೬೧ ೫.೫ ೨.೩೮ ೦.೧೭೩೩ ೧೩.೮
೧೦ ಚಟ್ಟಳ್ಳಿ ೨೩.೩ ೧೭೩ ೬.೨ ೨.೮೬ ೦.೨೨೪ ೧೨.೮
೧೧ ಮಂಗಳೂರು ೨೭.೨ ೪೦೬ ೫.೨ ೧.೩ ೦.೦೯೯ ೧೩.೧
೧೨ ಕಾರ್ಕಳ ೨೭.೨ ೫೨೩ ೫.೩ ೩.೧೧ ೦.೨೦೭ ೧೫.೦
೧೩ ಆಗುಂಬೆ ೨೩.೯ ೯೧೭ ೫.೭ ೩.೪೭ ೦.೨೮೬ ೧೨.೦
೧೪ ಬೆಳಗಾವಿ ೨೩.೩ ೧೩೦ ೫.೯ ೧.೮೦ ೦.೧೨೧ ೧೪.೯
೧೫ ಬಳ್ಳಾರಿ ೨೭.೮ ೫೧ ೭.೪ ೦.೫೪ ೦.೦೫೫ ೦೯.೮
೧೬ ನವದೆಹಲಿ ೨೫.೦ ೬೬ ೬.೭ ೦.೭೧ ೦.೦೭೭ ೦೯.೨
೧೭ ಡೆಹರಾಡೂನ್ ೨೨.೨ ೨೧೬ ೫.೯ ೧.೪೯ ೦.೧೦೯ ೧೩.೭
೧೮ ಮಸ್ಸೂರಿ ೧೪.೪ ೨೨೧ ೭.೩ ೪.೦೮ ೦.೨೨೮ ೧೭.೯
೧೯ ರೂರ್ಕಿ ೨೩.೩ ೧೨೨ ೬.೪ ೦.೨೫ ೦.೦೨೩ ೧೦.೯
೨೦ ಕರ್ನಾಲ್ ೨೪.೪ ೬೯ ೬.೮ ೦.೭೪ ೦.೦೬೫ ೧೧.೪
೨೧ ಜಯಪುರ ೨೫.೫ ೬೧ ೭.೦ ೦.೮೧ ೦.೦೮೪ ೯.೬
೨೨ ತ್ರಿವೇಂದ್ರಂ ೨೭.೨ ೨೭೪ ೫.೬ ೦.೧೬ ೦.೦೧೫ ೧೦.೭
೨೩ ಕನ್ಯಾಕುಮಾರಿ ೨೭.೨ ೬.೮ ೦.೧೭ ೦.೦೧೩ ೧೩.೧
೨೪ ಮಧುರೆ ೨೮.೯ ೮೬ ೭.೩ ೦.೩೮ ೦.೦೨೪ ೧೫.೮
೨೫ ತಂಜಾವೂರು ೨೮.೯ ೧೦೭ ೫.೭ ೦.೩೮ ೦.೦೩೫ ೧೦.೯
೨೬ ಮುಂಬಯಿ ೨೬.೭ ೧೮೦ ೫.೯ ೧.೫೧ ೦.೧೨೮ ೧೧.೮
೨೭ ಡಾರ್ಜಲಿಂಗ್ ೧೨.೨ ೩೧೮ ೩.೯ ೮.೦೩ ೦.೫೧೮ ೧೫.೫
೨೮ ಗೌಹಾತಿ ೨೪.೫ ೧೬೩ ೪.೯ ೧.೨೮ ೦.೧೨೪ ೧೦.೩
೨೯ ಚೆರ್ರಾಪುಂಜಿ ೧೭.೨ ೧೦೮೦ ೪.೩ ೨.೯೪ ೦.೨೧೨ ೧೩.೯
೩೦ ಅಲಿಗಢ್ ೨೫.೦ ೭೯ ೭.೫ ೦.೩೩ ೦.೦೩೧ ೧೦.೭
೩೧ ಸಿಮ್ಲಾ ೧೩.೩ ೧೫೫ ೬.೪ ೩.೨೦ ೦.೨೩೭ ೧೩.೫
೩೨ ನಾಗಪುರ ೨೭.೨ ೧೨೪ ೮.೧ ೦.೭೭ ೦.೦೬೮ ೧೧.೩