ಸಿಲಿಕೆಟ್ ಖನಿಜಗಳ ನಿರ್ಮಾಣದಲ್ಲಿ ಸವಕಳಿಯ ಪರಿಣಾಮಗಳು : ಮೂಲ ಖನಿಜದಿಂದ ಸಿಲಿಕೇಟ್ ಖನಿಜ, ಅದರಂತೆ ಒಂದು ಬಗೆಯ ಸಿಲಿಕೇಟ್ ಖನಿಜದಿಂದ ಇನ್ನೊಂದು ಬಗೆಯ ಸಿಲಿಕೇಟ್ ಖನಿಜ ನಿರ್ಮಾಣಗೊಳ್ಳುವ ವಿಧಾನವು ಸವಕಳಿಯ ತೀವ್ರತೆಯನ್ನು ಅವಲಂಬಿಸಿದೆ. ಕೆಳಗೆ ಕೊಟ್ಟಿರುವ ಕೆಲವು ಉದಾಹರಣೆಗಳಿಂದ ಈ ಹೇಳಿಕೆಯ ಅರ್ಥವು ಸ್ಪಷ್ಟವಾಗುತ್ತದೆ.

೧. ಪೋಟ್ಯಾಸಿಯಂ ದೊಡ್ಡ ಪ್ರಮಾಣದಲ್ಲಿರುವ ಮಸ್ಕೋವೈಟ್‌ನಂತಹ ಮೂಲ ಖನಿಜಗಳು ಸವಕಳಿಗೊಂಡು ಅವುಗಳಿಂದ ಪೋಟ್ಯಾಸಿಯಂ ಹೊರಬಿದ್ದಾಗ ಅಥವಾ ಮೊಂಟ್‌ಮೊರಿಲ್ಲೋನೈಟ್ ಖನಿಜಕ್ಕೆ ಪೋಟ್ಯಾಸಿಯಂ ಸೇರಿದಾಗ ಇಲ್ಲೈಟ್ ಖನಿಜವು ನಿರ್ಮಾಣವಾಗುತ್ತದೆ.

೨. ಮೂಲ ಕ್ಲೋರೈಟ್ ಖನಿಜವು ಸವಕಳಿಗೊಂಡು ಅದರಿಂದ ಪೋಟ್ಯಾಸಿಯಂ ಹೊರಬಿದ್ದಾಗ ಕ್ಲೋರೈಟ್ ಖನಿಜವು ಉದ್ಭವಿಸುತ್ತದೆ.

೩. ಕೆಲವ ಮೂಲ ಖನಿಜಗಳು ಸವಕಳಿಗೊಂಡು ಅವುಗಳಿಂದ ಮೆಗ್ನೀಸಿಯಂ ಹೊರಬಿದ್ದಾಗ ಇಲ್ಲವೇ ಕ್ಲೋರೈಟ್ ಖನಿಜದಿಂದ ಮೆಗ್ನೀಸಿಯಂ ದೂರವಾದಾಗ ಇಲ್ಲವೇ ಇಲ್ಲೈಟ್ ಖನಿಜದಿಂದ ಪೋಟ್ಯಾಸಿಯಂ ಹೊರಬಿದ್ದಾಗ ವರ್ಮಿಕ್ಯೂಲೈಟ್ ಖನಿಜವು ದೊರೆಯುತ್ತದೆ.

೪. ಶಿಲೆ ಮತ್ತು ಖನಿಜಗಳ ಸವಕಳಿಯ ಸಂದರ್ಭದಲ್ಲಿ, ಮೆಗ್ನಿಸಿಯಂ ದೊಡ್ಡ ಪ್ರಮಾಣದಲ್ಲಿದ್ದಾಗ ಅಥವಾ ಇಲ್ಲೈಟ್ ಖನಿಜದೊಳಗಿನ ಪೋಟ್ಯಾಸಿಯಂ ಪ್ರಮಾಣವು ಕಡಿಮೆಯಾಗಿದ್ದರೆ, ಇಲ್ಲವೇ ವರ್ಮಿಕ್ಯೂಲೈಟ್ ಅಥವಾ ಕ್ಲೋರೈಟ್ ಖನಿಜದೊಳಗಿರುವ ಮೆಗ್ನೀಸಿಯಂ ಪ್ರಮಾಣವು ಕಡಮೆಯಾದರೆ ಮೊಂಟ್‌ಮೊರಿಲ್ಲೋ ನೈಟ್ ಖನಿಜವು ರೂಪುಗೊಳ್ಳುತ್ತದೆ. ಈ ಖನಿಜವು ರೂಪುಗೊಳ್ಳುವಾಗ ಪ್ರತ್ಯಾಮ್ಲಗಳು ಬಸಿದುಹೋಗುವ ಪ್ರಮಾಣ ಕಡಮೆ.

೫. ಉಷ್ಣ ವಲಯದಲ್ಲಿ ಮಳೆಯ ರಭಸಕ್ಕೆ ಮೂಲ ಖನಿಜಗಳು ತೀವ್ರವಾಗಿ ಸವೆದು ಪ್ರತ್ಯಾಮ್ಲಗಳು ದೊಡ್ಡ ಪ್ರಮಾಣದಲ್ಲಿ ಬಸಿದುಹೋದರೆ ಕೆಓಲಿನೈಟ್ ಖನಿಜವು ರೂಪುಗೊಳ್ಳುತ್ತದೆ.

೬. ಮೇಲೆ (೫) ರಲ್ಲಿ ಹೇಳಿದ ಕ್ರಿಯೆಯು ಇನ್ನೂ ತೀವ್ರಗೊಂಡಾಗ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಜಲಯುತ ಆಕ್ಸೈಡ್‌ಗಳು ರೂಪುಗೊಳ್ಳುತ್ತವೆ.

ಶಿಲೆಗಳಲ್ಲಿದ್ದ ಅಥವಾ ಸ್ವತಂತ್ರವಾಗಿದ್ದ ಖನಿಜಗಳು : ಸಿಲಿಕೇಟ್ ವರ್ಗಕ್ಕೆ ಸೇರದ ಕೆಲವು ಖನಿಜಗಳು ಮಣ್ಣಿನಲ್ಲಿವೆ. ಮಣ್ಣಿನ ಗುಣಧರ್ಮಗಳು ಮತ್ತು ಅವುಗಳ ಮೂಲಕ ಸಸ್ಯಗಳ ಬೆಳವಣಿಗೆಯ ದೃಷ್ಟಯಿಂದ ಅವು ಮಹತ್ವದ ನಿರವಯವ ವಸ್ತುಗಳೆನಿಸಿವೆ. ಅವುಗಳಲ್ಲಿ ಕೆಲವು ಶಿಲೆಗಳಲ್ಲಿರಬಹುದು ಅಥವಾ ಸ್ವತಂತ್ರವಾಗಿರಬಹುದು. ಅದರಂತೆಯೇ ಕೆಲವು ತಮ್ಮ ಮೂಲ ರೂಪದಲ್ಲಿರಬಹುದು ಇಲ್ಲವೇ ಕೆಲವು ಮಟ್ಟಿಗೆ ಬದಲಾವಣೆಯನ್ನೂ ಹೊಂದಿರಬಹುದು. ಇಂತಹ ಖನಿಜದ ಬಗ್ಗೆ ಕೆಲವು ವಿವರಣೆಗಳು ಕೆಳಗಿನಂತಿವೆ:

(i) ಕ್ಯಾಲ್ಸೈಟ್ : ಕ್ಯಾಲ್ಸೈಟ್ ಅಥವಾ ಕ್ಯಾಲ್ಸಿಯಂ ಕಾರ್ಬೋನೇಟ್ ಖನಿಜವು ಮಣ್ಣಿನ ಮೂಲ ದ್ರವ್ಯದಲ್ಲಿರಬಹುದು ಇಲ್ಲವೇ ಹೊಸದಾಗಿ ರೂಪುಗೊಂಡಿರಬಹುದು. ಆಮ್ಲಜನಕದ ಮೂರು ಅಯಾನ್‌ಗಳು ತ್ರಿಕೋನಾಕಾರದಲ್ಲಿ ಒಂದುಗೂಡಿ ಮಧ್ಯದಲ್ಲಿ ಉಂಟಾಗುವ ಬರಿದಾದ ಸ್ಥಳದಲ್ಲಿ ಕಾರ್ಬನ ಆಯಾನ್‌ ಸೇರಿಕೊಂಡು ಕಾರ್ಬೊನೇಟ್ (CO3) ನಿರ್ಮಾಣಗೊಳ್ಳುತ್ತದೆ. ಕ್ಯಾಲ್ಸಿಯಂ ಆಯಾನ್‌ ಮತ್ತು ಕಾರ್ಬೊನೇಟ್ ಅಯಾನ್‌ಗಳು ಸಮ ಸಂಖ್ಯೆಯಲ್ಲಿ ಸಂಯೋಜನೆಗೊಂಡು ಕ್ಯಾಲ್ಸಿಯಂ ಕಾರ್ಬೊನೇಟ್ ಅಂದರೆ ಕ್ಯಾಲ್ಸೈಟ್ ನಿರ್ಮಾಣಗೊಳ್ಳುತ್ತದೆ.

ಕೆಲವೊಂದು ಕಾರ್ಬೋನೇಟ್ ಅಂದರೆ ಕ್ಯಾಲ್ಸೈಟ್ ಖನಿಜವು ಮಣ್ಣಿನ ಕಣಗಳನ್ನು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಿದಾಗ, ಮಣ್ಣಿನ ಗಟ್ಟಿಯಾದ ವಲಯವು ನಿರ್ಮಾಣವಾಗುತ್ತದೆ.

(ii) ಹೆಮಟೈಟ್ : ಹೆಮಟೈಟ್ ಕಬ್ಬಿಣದ ಆಕ್ಸೈಡ್‌ನ ಫೆರಿಕ್ ರೂಪ. ಬಹು ದಟ್ಟವಾಗಿ ಸೇರಿಕೊಂಡ ಆಮ್ಲಜನಕದ ಮಧ್ಯದಲ್ಲಿ ಫೆರಿಕ್ ಅಯಾನ್‌ ನೆಲಸಿರುತ್ತದೆ. ಈ ಖನಿಜದಿಂದ ನಿರ್ಮಾಣವಾದ ಮಣ್ಣಿಗೆ ಕೆಂಪು ಬಣ್ಣವಿರುತ್ತದೆ.

ಕಬ್ಬಿಣ ಮತ್ತು ಅಲ್ಯೂಮಿನಿಂ ಹೈಡ್ರಸ್ ಆಕ್ಸೈಡ್ ಗಳು :

ಕಬ್ಬಿಣ ಮತ್ತು ಅಲ್ಯೂಮಿಯಂಗಳ ಜಲಯುತ ಆಕ್ಸೈಡ್ ಗಳ ಬಗ್ಗೆ ಕೆಳಗಿನ ವಿವರಣೆಗಳು ಪ್ರಯೋಜನಕಾರಿಯಾಗಿವೆ.

೧. ಮೇಲಿನ ಗುಂಪಿಗೆ ಸೇರಿದ ಖನಿಜಗಳಲ್ಲಿ ಗಿಬ್ಲೈಟ್ (Al2O3.3H2O) ಮತ್ತು ಗೋಯೆಥೈಟ್ (Fe2O3.H2O) ಇವು ಪ್ರಮುಖವಾಗಿವೆ. ಅನುಕೂಲತೆಗಾಗಿ ಇವುಗಳನ್ನು ಅಲ್ಯೂಮಿಯಂ ಆಕ್ಸೈಡ್ ಮತ್ತು ಕಬ್ಬಿಣದ ಆಕ್ಸೈಡ್ ಎಂದು ಕರೆಯುವುದು ವಾಡಿಕೆ.

೨. ಅಧಿಕ ಮಳೆ ಬೀಳುವ ಪ್ರದೇಶದ ಸವಕಳಿಗೊಂಡ ಮಣ್ಣಿನಲ್ಲಿ ಈ ಖನಿಜಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಸಿಲಿಕೇಟ್ ಖನಿಜಗಳ ಬಗ್ಗೆ ತಿಳಿದಿರುವಷ್ಟು ವಿವರಗಳು ಈ ಖನಿಜಗಳ ಬಗ್ಗೆ ತಿಳಿದಿಲ್ಲ. ಕೆಲವು ಖನಿಜಗಳು ಸ್ಫಟಿಕ ರೂಪದಲ್ಲಿದ್ದರೆ ಇನ್ನೂ ಕೆಲವು ನಿರ್ಧಿಷ್ಟವಾದ ಸ್ಫಟಿಕ ರೂಪವನ್ನು ಹೊಂದಿರುವುದಿಲ್ಲ.

೩. ಹಸಿಯಿದ್ದಾಗಲೂ ಈ ಖನಿಜಗಳ ಕಣಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಆದ್ದರಿಂದ, ಈ ಖನಿಜಗಳ ಪ್ರಾಬಲ್ಯವಿರುವ ಮಣ್ಣಿನಲ್ಲಿ ಮಳೆ ನಿಂತ ಸ್ವಲ್ಪ ಸಮಯದ ನಂತರ ಬೇಸಾಯ ಕಾರ್ಯಗಳನ್ನು ಕೈಗೊಳ್ಳಬಹುದು.

೪. ಮಣ್ಣಿನ ರಸಸಾರವು (pH) ೭ಕ್ಕಿಂತ ಅಧಿಕವಿದ್ದಾಗ, ಈ ಖನಿಜ ಕಣಗಳ ಸುತ್ತ ಒಂಟಿಯಾದ ಕೆಲವು ಋಣ ಚಾರ್ಜ್‌ಗಳು ಕಾಣಿಸಿಕೊಳ್ಳುತ್ತವೆ. ಇವು ತಮ್ಮೆಡೆ ಧನ ಅಯಾನ್‌ಗಳನ್ನು ಆಕರ್ಷಿಸುತ್ತವೆ.

೫. ಆದರೆ, ಮಣ್ಣು ಆಮ್ಲಯುತವಿದ್ದಾಗ ಈ ಕಣಗಳ ಮೇಲೆ ಋಣ ಜಾರ್ಜಗಳ ಬದಲು ಧನಚಾರ್ಜ್‌ಗಳು ಕಾಣಿಸಿಕೊಳ್ಳುತ್ತವೆ. ಆಗ ಈ ಕಣಗಳು ಋಣ ಅಯಾನ್‌ಗಳನ್ನು ಆಕರ್ಷಿಸುತ್ತವೆ. ಇದು ಮಣ್ಣಿನ ನಿರ್ವಣೆಯ ದೃಷ್ಟಿಯಿಂದ ಬಹು ಮಹತ್ವವುಳ್ಳದಾಗಿದೆ. ಉದಾಹರಣೆಗೆ, ರಂಜಕವನ್ನೊದಗಿಸುವ ರಾಸಾಯನಿಕ ಗೊಬ್ಬರವನ್ನು ಆಮ್ಲ ಮಣ್ಣಿಗೆ ಪೂರೈಸಿದರೆ ಅದರಲ್ಲಿರುವ ಫ್ಲಾಸ್ಪೇಟ್ ಋಣ ಅಯಾನ್‌ ಆಗಿರುವುದರಿಂದ ಅದನ್ನು ಮಣ್ಣಿನ ಕಣಗಳ ಮೇಲಿರುವ ಧನ ಅಯಾನ್‌ಗಳು ತಮ್ಮೆಡೆ ಆಕರ್ಷಿಸಿ, ಬಿಗಿಯಾಗಿ ಹಿಡಿದುಕೊಳ್ಳುತ್ತವೆ. ಹೀಗಾಗಿ ಮಣ್ಣುಗಳಿಗೆ ಸರಿಯಾದ ಪ್ರಮಾಣದಲ್ಲಿ ಸುಣ್ಣವನ್ನು ಸೇರಿಸಿ ರಸಸಾರವು (pH) ೭ರ ಸನಿಹಕ್ಕೆ ಬರುವಂತೆ ಮಾಡಿ ರಂಜಕವನ್ನು ಪೂರೈಸುವುದು ಸರಿಯಾದ ಮಾರ್ಗವಾಗಿದೆ.

ಮಣ್ಣಿನಲ್ಲಿರುವಸಾವಯವವಸ್ತುಗಳು :

ಸಾವಯವ ವಸ್ತುಗಳ ವೈವಿಧ್ಯತೆ : ಮಣ್ಣಿನಲ್ಲಿರುವ ಸಾವಯವ ವಸ್ತುವು ಏಕರೂಪವಾಗಿರುವುದಿಲ್ಲ, ಅದರಲ್ಲಿ ಪ್ರಮುಖವಾಗಿ ಈ ಕೆಳಗಿನ ಘಟಕಗಳಿವೆ:

i) ಸ್ವಲ್ಪವೂ ಕಳಿಯದ, ಹೊಸದಾಗಿ ಮಣ್ಣಿಗೆ ಸೇರಿದ ಸಸ್ಯಗಳು ಅಥವಾ ಅವುಗಳ ಭಾಗಗಳು.

ii) ತಮ್ಮ ಜೀವನ ಚಕ್ರವನ್ನು ಪೂರ್ತಿಗೊಳಿಸಿ ಸತ್ತ ಕೀಟ. ಎರೆ ಹುಳು ಮತ್ತು ಇತರ ಪ್ರಾಣಿಗಳ ದೇಹಗಳು.

iii) ಮೃತಪಟ್ಟ ಸೂಕ್ಷ್ಮ ಜೀವಿಗಳು.

iv) ಭಾಗಶಃ ಕಳಿತ ಸಸ್ಯ ಮತ್ತು ಪ್ರಾಣಿಗಳು.

v) ಮೂಲವನ್ನು ಗುರುತಿಸಲಾಗದಷ್ಟು ಕಳಿತ ಸಾವಯವ ಪದಾರ್ಥಗಳು (ಇದಕ್ಕೆ ಹ್ಯೂಮಸ್ ಎಂದು ಕರೆಯಲಾಗುತ್ತದೆ).

ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳ ಪ್ರಮಾಣ : ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವು ಆ ಮಣ್ಣಿನ ಪ್ರಕಾರ, ಪ್ರದೇಶದ ಹವಾಮಾನ, ಮಣ್ಣನ್ನು ಬಳಸುವ ರೀತಿ ಮತ್ತು ಇತರೆ ಅಂಶಗಳನ್ನು ಅಲವಂಬಿಸಿರುತ್ತದೆ. ಮಣ್ಣಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾವಯವ ಪದಾರ್ಥದ ಪ್ರಮಾಣವನ್ನು ಕೆಳಗೆ ಕೊಡಲಾಗಿದೆ.

ವಿವಿಧ ಪರಿಸ್ಥಿತಿಗಳಲ್ಲಿ ಕಂಡುಬರುವ ಮಣ್ಣಿನ ಸಾವಯವ ಪದಾರ್ಥದ ಪ್ರಮಾಣ

ಅ.ಸಂ.

ಸಂದರ್ಭ

ಶೇಕಡಾವಾರು ಸಾವಯವ ಪದಾರ್ಥದ ಸರಾಸರಿ ಪ್ರಮಾಣ

೧. ಬೇಸಾಯಕ್ಕೊಳಗಾದ ಮಣ್ಣು ೨ ರಿಂದ ೫
೨. ಹುಲ್ಲುಗಾವಲು ಪ್ರದೇಶದ ಮಣ್ಣು ೫ ರಿಂದ ೧೨
೩. ಅರಣ್ಯ ಪ್ರದೇಶದ ಮಣ್ಣು ೧೨ಕ್ಕಿಂತ ಅಧಿಕ

ಸಾವಯವ ಪದಾರ್ಥದ ಮೂಲ: ಹಲವಾರು ಮೂಲಗಳಿಂದ ಸಾವಯವ ಪದಾರ್ಥವು ಮಣ್ಣಿಗೆ ಸೇರಿ ಅಲ್ಲಿ ಸಂಗ್ರಹವಾಗುತ್ತದೆ. ಪ್ರಮುಖ ಮೂಲಗಳು ಕೆಳಗಿನಂತಿವೆ.

i) ಪ್ರಕೃತಿಯಲ್ಲಿ ಸಸ್ಯಗಳೇ ಸಾವಯವ ಪದಾರ್ಥದ ಪ್ರಾಥಮಿಕ ಮೂಲವೆನ್ನಬಹುದು.

 • ಸಣ್ಣ, ದೊಡ್ಡ ಸಸ್ಯಗಳು ಎಲೆಗಳು, ಶಾಖೆ – ಉಪಶಾಖೆಗಳು, ಹೂವು ಹಣ್ಣುಗಳು, ಭೂಮಿಯ ಮೇಲೆ ಉದುರಿ ಬಿದ್ದು, ಸೂಕ್ಷ್ಮ ಜೀವಿಗಳ ಪ್ರಭಾವದಿಂದ ಕಳಿತು, ಮಣ್ಣಿನ ಸಾವಯವ ಪದಾರ್ಥದ ಒಂದು ಭಾಗವಾಗುತ್ತದೆ.
 • ಮಣ್ಣಿನೊಳಗಿರುವ ಬೇರುಗಳು ಹಳೆಯದಾಗಿ ಸತ್ತು ಮತ್ತು ಇಡೀ ಸಸ್ಯವೇ ಸತ್ತು ಮಣ್ಣಿನಲ್ಲಿಯೇ ಕೊಳೆಯುತ್ತವೆ.

ii) ಸೂಕ್ಷ್ಮ ಜೀವಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮುಗಿಸಿ ಮೃತಪಟ್ಟನಂತರ ಅವುಗಳ ದೇಹಗಳು ಸಾವಯವ ಪದಾರ್ಥದೊಡನೆ ಸೇರಿಕೊಳ್ಳುತ್ತವೆ.

iii) ಮಣ್ಣಿನಲ್ಲಿ ವಾಸಿಸುವ ಹಲವು ಬಗೆಯ ಪ್ರಾಣಿಗಳ ಮಲ ಮತ್ತು ಪ್ರಾಣಿಗಳು ಮೃತಪಟ್ಟ ಮೇಲೆ ಅವುಗಳ ದೇಹ ಇತ್ಯಾದಿಗಳು ಮಣ್ಣಿನ ಸಾವಯವ ಪದಾರ್ಥದಲ್ಲಿ ಲೀನಗೊಳ್ಳುತ್ತದೆ.

iv) ಭೂಮಿಯಲ್ಲಿ ಈ ಕೆಳಗೆ ತಿಳಿಸಿರುವ ವಿಧಾನಗಳಿಂದ ಸಾವಯವ ಪದಾರ್ಥವು ಮಣ್ಣಿನಲ್ಲಿ ಸಂಗ್ರಹವಾಗುತ್ತದೆ.

 • ಬೇಸಾಯಕ್ಕೆಂದು ಬಳಸುವ ಬೆಳೆಯ ಉದುರಿದ ಎಲೆ ಮತ್ತು ಟೊಂಗೆಗಳು.
 • ಬೆಳೆಯನ್ನು ಕತ್ತರಿಸಿದ ನಂತರ ಉಳಿದಿರುವ ಕಾಂಡ ಭಾಗ ಮತ್ತು ಬೇರುಗಳು. ಮಣ್ಣಿಗೆ ಪೂರೈಸಿದ ಸಗಣಿ ಗೊಬ್ಬರ, ಕಾಂಪೋಸ್ಟ್ , ಹಸುರು ಗೊಬ್ಬರ ಇತ್ಯಾದಿಗಳು.

ಸಸ್ಯಗಳಲ್ಲಿರುವ ಪ್ರಮುಖ ಸಾವಯವ ಸಂಯುಕ್ತಗಳು :ಸಸ್ಯಗಳ ಪ್ರಕಾರ, ಅವುಗಳ ವಯಸ್ಸು ಮತ್ತು ಇತರೆ ಹಲವು ಅಂಶಗಳಿಗನುಗುಣವಾಗಿ ಅವುಗಳಲ್ಲಿರುವ ಸಂಯುಕ್ತ ವಸ್ತುಗಳು ಮತ್ತು ಅವುಗಳ ಪ್ರಮಾಣಗಳು ವ್ಯತ್ಯಾಸವಾಗುತ್ತವೆ. ಸಾಮಾನ್ಯವಾಗಿ ಸಾವಯವ ಸಂಯುಕ್ತಗಳ ಬಗ್ಗೆ ಕಂಡುಬರುವ ಪ್ರಮುಖ ವಿವರಗಳು ಕೆಳಗಿನಂತಿವೆ:

i) ಪಿಷ್ಟ ಪದಾರ್ಥಗಳು : ಇವು ಇಂಗಾಲ, ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆಯಿಂದ ನಿರ್ಮಾಣಗೊಂಡ ಸಾವಯವ ರಾಸಾಯನಿಕ ವಸ್ತುಗಳು : ಇವುಗಳಲ್ಲಿ ಈ ಕೆಳ ಕಾಣಿಸಿರುವ ರಾಸಾಯನಿಕಗಳು ಪ್ರಮುಖವಾಗಿರುತ್ತವೆ.

 • ಶರ್ಕರಗಳು : ಏಕ ಶರ್ಕರ, ದ್ವಿಶರ್ಕರ, ತ್ರಿಶರ್ಕರ ಮುಂತಾದ ಶರ್ಕರಗಳು ಈ ಗುಂಪಿನಲ್ಲಿ ಸೇರಿವೆ. ಇವು ನೀರಿನಲ್ಲಿ ಕರಗುತ್ತವೆ.
 • ಪಿಷ್ಟಗಳು : ಪಿಷ್ಟಗಳು ನೀರಿನಲ್ಲಿ ಕರಗುವುದಿಲ್ಲ. ಇವು ಹೆಚ್ಚಾಗಿ ಬೀಜ ಮತ್ತು ಗಡ್ಡೆಗಳಲ್ಲಿ ಸಂಗ್ರಹವಾಗಿರುತ್ತವೆ.
 • ಹೆಮಿಸೆಲ್ಯೂಲೋಸ್ : ಅವರೆ, ಬಟಾಣೆ, ಇತರೆ ತರಕಾರಿ ಸಸ್ಯಗಳು ಎಳೆಯವಾಗಿರುವ ಭಾಗಗಳಲ್ಲಿ ಈ ವಸ್ತು ಸಾಮಾನ್ಯವಾಗಿ ಕಂಡುಬರುತ್ತದೆ.
 • ಸೆಲ್ಯೂಲೋಸ್ : ಸಸ್ಯದ ಜೀವಕೋಶಗಳು ಸುತ್ತಲೂ, ಸೆಲ್ಯೂಲೋಸ್ ಕಂಡು ಬರುತ್ತದೆ.
 • ಅಂಟು : ಕೆಲವು ಸಸ್ಯಗಳ ರಸದಲ್ಲಿ ಅಂಟು ಅಧಿಕ ಪ್ರಮಾಣದಲ್ಲಿರುತ್ತದೆ.
 • ಪೆಕ್ಟಿನ್‌ : ಪಿಷ್ಟದೊಡನೆ ಕ್ಯಾಲ್ಸಿಯಂ ಅಥವಾ ಮೆಗ್ನೀಸಿಯಂ ಲವಣಗಳು ಸಂಯೋಜನೆಗೊಂಡು ಪೆಕ್ಟಿನ್‌ ಉತ್ಪತ್ತಿಯಾಗಿರುತ್ತದೆ. ಈ ವಸ್ತುವು ಲಿಂಬೆ, ಕಿತ್ತಳೆ ಮುಂತಾದ ಹಣ್ಣುಗಳು ಸಿಪ್ಪೆಯಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ.

ii) ಲಿಗ್ನಿನ್‌ : ಗಿಡಮರಗಳು ಬೆಳೆದು ಗಟ್ಟಿಯಾಗಿರುವ (ಬಿರುಸಾಗಿರುವ) ಭಾಗಗಳಲ್ಲಿ ಲಿಗ್ನಿನ್‌ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನೀರಿನಲ್ಲಿಗುವುದಿಲ್ಲ ಮತ್ತು ಸುಲಭವಾಗಿ ಕಳಿಯುವುದಿಲ್ಲ.

iii) ಎಣ್ಣೆ ಮತ್ತು ಕೊಬ್ಬುಗಳು : ಎಣ್ಣೆ ಮತ್ತು ಕೊಬ್ಬು ನೀರಿನಲ್ಲಿ ಕರಗುವುದಿಲ್ಲ. ಇವು ಪಿಷ್ಟ ಪದಾರ್ಥಗಳಿಗಿಂತ ನಿಧಾನವಾಗಿ ಕಳಿಯುತ್ತವೆಯಾದರೂ ಲಿಗ್ನೀನ ಗಿಂತ ಬೇಗನೇ ಕಳಿಯುತ್ತವೆ. ಸಸ್ಯದ ಕೆಲವು ಅಂಗಗಳಲ್ಲಿ ಎಣ್ಣೆ ಮತ್ತು ಕೊಬ್ಬು ಹೆಚ್ಚಾಗಿ ಸಂಗ್ರಹಗೊಂಡಿರುತ್ತವೆ.

iv) ಸಸಾರಜಕ ಪದಾರ್ಥಗಳು : ಸಸಾರಜನಕ ಪದಾರ್ಥಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲ ಜನಕಗಳಲ್ಲದೇ ಸಸ್ಯಗಳಿಗೆ ಅವಶ್ಯವೆನಿಸುವ ಸಾರಜನಕವೂ ದೊಡ್ಡ ಪ್ರಮಾಣದಲ್ಲಿರುತ್ತದೆ. ಅಲ್ಲದೇ ಇತರೆ ಅವಶ್ಯ ಪೋಷಕಾಂಶಗಳಾದ ಗಂಧಕ, ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮೊದಲಾದ ಹಲವು ಮೂಲಧಾತುಗಳ ಸಂಯುಕ್ತಗಳು ಇರುತ್ತವೆ. ಸುಲಭವಾಗಿ ಕಳಿಯುವ ಮತ್ತು ನಿಧಾನವಾಗಿ ಕಳಿಯುವ ಎರಡು ಬಗೆಯ ಸಸಾರಜನಕಗಳು ಈ ಗುಂಪಿನ ವಸ್ತುಗಳಲ್ಲಿ ಸೇರಿಕೊಂಡಿವೆ.

ಸಾವಯವ ಪದಾರ್ಥಗಳು ಕಳಿಯುವ ಕ್ರಿಯೆ : ಸಾವಯವ ಪದಾರ್ಥಗಳು ಕಳಿಯುವ ಕ್ರಿಯೆಯು ಒಂದು ರೀತಿಯ ಉತ್ಕಷ್ಣ, ಕ್ರಿಯೆಯೆನ್ನಬಹುದು. ಇಲ್ಲಿ ಸಾವಯವ ಪದಾರ್ಥಗಳಲ್ಲಿರುವ ಇಂಗಾಲ ಮತ್ತು ಜಲಜನಕಗಳ ಉತ್ಕರ್ಷಣೆಯೇ ಪ್ರಮುಖವಾದ ಅಂಶವೆನ್ನಬಹುದು. ಈ ಕ್ರಿಯೆಯನ್ನು ಸಂಕ್ಷಿಪ್ರತವಾಗಿ ಕೆಳಗಿನಂತೆ ತೋರಿಸಬಹುದು.

ಸಾವಯವ ಪದಾರ್ಥಗಳಲ್ಲಿರುವ ಇಂಗಾಲ ಮತ್ತು ಜಲಜನಕ + ಆಮ್ಲಜನಕ ಇಂಗಾಲದ ಡೈಆಕ್ಸೈಡ್ + ನೀರು +ಶಕ್ತಿ (ಉಷ್ಣತೆಯ ರೂಪದಲ್ಲಿ)

ಸಸಾರಜನಕವುಳ್ಳ ಪದಾರ್ಥಗಳು ಕಳಿತಾಗ ಮೇಲಿನ ಕ್ರಿಯೆಯಲ್ಲದೇ ಅಮೋನಿಯಂ ಸಲ್ಫೇಟ್, ಫಾಸ್ಫೇಟ್ ಮುಂತಾದವುಗಳು ಸಹ ವಿಮೋಚನೆಗೊಳ್ಳುತ್ತವೆ.

ಮಣ್ಣಿಗೆ ಸೇರಿಸಿದ ಸಾವಯವ ಪದಾರ್ಥಗಳು ಕಳಿಯುವಾಗಿನ ವಿವಿಧ ಹಂತಗಳನ್ನು ಕೆಳಗಿನ ವಿವರಣೆಯಿಂದ ತಿಳಿಯಬಹುದು.

 • ಹೊಸದಾಗಿ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೊದಲು, ಮಣ್ಣಿನಲ್ಲಿ ಅತಿ ನಿಧಾನವಾಗಿ ಕಳಿಯುತ್ತಿರುವ ಸಾವಯವ ಪದಾರ್ಥವಲ್ಲದೇ, ವಿವಿಧ ಬಗೆಯ ಬ್ಯಾಕ್ಟೀರಿಯಾ, ಶೀಲೀಂಧ್ರಗಳು ಮತ್ತು ಆಕ್ಟಿನೋಮೈಸಿಟೀಸ್ ಸೂಕ್ಷ್ಮಜೀವಿಗಳು ಇರುತ್ತವೆ. ಕಡಮೆ ಸಂಖ್ಯೆಯಲ್ಲಿರುವ ಇವುಗಳ ಕಾರ್ಯವು ಮಂದಗತಿಯಿಂದ ಸಾಗಿರುತ್ತದೆ.
 • ಸುಲಭವಾಗಿ ಕಳಿಯಬಲ್ಲ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸಿದೊಡನೆಯೇ ಶಕ್ತಿಯನ್ನು ಒದಗಿಸಬಲ್ಲ ವಸ್ತುಗಳು ಬೃಹತ್ ಪ್ರಮಾಣದಲ್ಲಿ ದೊರೆತ ಪರಿಣಾಮವಾಗಿ ಮೇಲೆ ಹೇಳಿದ ಮೂರು ಬಗೆಯ ಸೂಕ್ಷ್ಮ ಜೀವಿಗಳು ಅಪಾರ ಸಂಖ್ಯೆಯಲ್ಲಿ ವೃದ್ಧಿಯಾಗಿ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸುತ್ತವೆ.
 • ಇಂಗಾಲದ ಡೈ ಆಕ್ಸೈಡ್ ಮತ್ತು ನೀರು ಬಹುದೊಡ್ಡ ಪ್ರಮಾಣದಲ್ಲಿ ಹೊರ ಬರುತ್ತವೆಯಲ್ಲದೆ ಶಕ್ತಿಯು ಉಷ್ಣತೆಯ ರೂಪದಲ್ಲಿ ಹೊರ ಹೊರಹೊಮ್ಮುತ್ತದೆ.
 • ಕೆಲ ದಿನಗಳ ನಂತರ ಸುಲಭವಾಗಿ ಕಳಿಯಬಲ್ಲ ಶರ್ಕರ, ಪಿಷ್ಟ, ಸಸಾರಜನಕ ಇತ್ಯಾದಿ ವಸ್ತುಗಳ ಪ್ರಮಾಣವು ಕಡಮೆಯಾಯಿತೆಂದರೆ ಈ ಸೂಕ್ಷ್ಮ ಜೀವಿಗಳು ಸಾಯಲಾರಂಭಿಸುತ್ತವೆ. ಈ ಮೃತ ದೇಹಗಳು ಜೀವಂತವಿರುವ ಸೂಕ್ಷ್ಮ ಜೀವಿಗಳ ಚಟುವಟಿಕೆಗಳಿಂದ ಕಳಿಯತೊಡಗುತ್ತವೆ.
 • ದಿನಗಳು ಕಳೆದಂತೆ, ಸುಲಭವಾಗಿ ಕಳಿಯುವ ಸಾವಯವ ಪದಾರ್ಥಗಳು ಇಲ್ಲದಂತಾಗುತ್ತವೆ. ಸೂಕ್ಷ್ಮ ಜೀವಿಗಳ ಸಂಖ್ಯೆಯು ಕಡಮೆಯಾಗುತ್ತಾ, ಪ್ರಾರಂಭದಲ್ಲಿದ್ದ ಸಂಖ್ಯೆಯ ಸನಿಹಕ್ಕೆ ಬಂದು ನಿಲ್ಲುತ್ತದೆ.
 • ಈ ಸಮಯದಲ್ಲಿ ಸಾವಯವ ಪದಾರ್ಥದಿಂದ ನೈಟ್ರೇಟ್, ಸಲ್ಫೇಟ್, ಫಾಸ್ಪೇಟ್, ಕ್ಯಾಲ್ಸಿಯಂ, ಮೆಗ್ನೀಷಿಯಂ ಮುಂತಾದ ಸರಳ ವಸ್ತುಗಳು ವಿಮೋಚನೆಗೊಳ್ಳುತ್ತವೆ.
 • ಸೂಕ್ಷ್ಮ ಜೀವಿಗಳ ಚಟುವಟಿಕೆಯು ಕಡಮೆಯಾಗಿ ಮೊದಲಿನ ಸ್ಥಿತಿಯನ್ನು ತಲುಪಿದಾಗ ಸುಲಭವಾಗಿ ಕಳಿಯುವ ಕಂದು ಮಿಶ್ರಿತ ಕಪ್ಪುಬಣ್ಣದ ಸಾವಯವ ಪದಾರ್ಥವು (ಹ್ಯೂಮಸ್) ಉಳಿದಿರುತ್ತದೆ.
 • ಪ್ರಾರಂಭದಲ್ಲಿ ಮಣ್ಣಿನಲ್ಲಿದ್ದ ಹ್ಯೂಮಸ್ಸಿಗೆ ಹೊಸದಾಗಿ ನಿರ್ಮಾಣಗೊಂಡ ಹ್ಯೂಮಸ್ ಸೇರಿಕೊಂಡು ಈ ವಸ್ತುವಿನ ಪ್ರಮಾಣವು ಕೆಲವು ಮಟ್ಟಿಗೆ ಅಧಿಕಗೊಳ್ಳುತ್ತದೆ ಎಂಬ ಸಂಗತಿಯು ಗಮನಾರ್ಹ.

ಮೇಲಿನ ವಿವರಣೆಗಳಿಂದ ಕೆಲವು ಪ್ರಮುಖ ವಿಷಯಗಳನ್ನು ಸೂಚ್ಯವಾಗಿ ಹೇಳಿದಂತಾಯಿತು. ಉದಾಹರಣೆಗೆ, ಸಾವಯವ ಪದಾರ್ಥಗಳು ಕಳಿಯುವುದರಿಂದ –

i) ದೊಡ್ಡ ಪ್ರಮಾಣದಲ್ಲಿ ಶಕ್ತಿಯು ಉಷ್ಣತೆಯ ರೂಪದಲ್ಲಿ ಹೊರಬರುತ್ತದೆ.

ii) ಸಾವಯವ ಪದಾರ್ಥಗಳಲ್ಲಿ ಕ್ಲಿಷ್ಟರೂಪದಲ್ಲಿದ್ದ ಹಲವು ದ್ರವ್ಯಗಳು ಸರಳ ರೂಪಕ್ಕೆ ಪರಿವರ್ತನೆ ಹೊಂದಿ ಹೊರಬರುತ್ತವೆ. ಇಂಗಾಲದ ಡೈ ಆಕ್ಸೈಡ್, ಮತ್ತು ನೀರುಗಳಿಲ್ಲದೇ, ಸಸ್ಯದ ಪೋಷಕಾಂಶಗಳಾದ ಅಮೋನಿಯಂ ನೈಟ್ರೇಟ್, ಸಲ್ಫೇಟ್, ಫಾಸ್ಪೇಟ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೋಟ್ಯಾಸಿಯಂ ಹಾಗೂ ಇತರೆ ಅಯಾನ್‌ಗಳು ಹೊರಬರುತ್ತವೆ.

 • ಸುಲಭವಾಗಿ ಕಳಿಯದ ಹ್ಯೂಮಸ್ ಎಂಬ ದ್ರವ್ಯವು ನಿರ್ಮಾಣಗೊಳ್ಳುತ್ತದೆ. (ಈ ವಸ್ತುವು ಮಣ್ಣಿನ ಗುಣಧರ್ಮಗಳ ಮೇಲೆ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ).

ಸಾವಯವವಸ್ತುಗಳುಕಳಿಯುವವೇಗ

ಸಸ್ಯಗಳಲ್ಲಿರುವ ಸಾಯವ ವಸ್ತುಗಳು ಒಂದೇ ವೇಗದಲ್ಲಿ ಕಳಿಯುವುದಿಲ್ಲ. ಕೆಲವು ವಸ್ತುಗಳು ಸುಲಭ ಹಾಗೂ ಬಹುಬೇಗನೇ ಮತ್ತು ಇನ್ನು ಕೆಲವು ವಸ್ತುಗಳು ಬಹು ನಿಧಾನವಾಗಿ ಕಳಿಯುತ್ತವೆ. ವಿವಿಧ ಸಾವಯವ ಘಟಕಗಳನ್ನು ಅವುಗಳ ಕಳಿಯುವ ವೇಗದಲ್ಲಿ ಜೋಡಿಸಿದರೆ ಕೆಳಗೆ ತೋರಿಸಿದ ಕ್ರಮದಲ್ಲಿರುತ್ತವೆ.

ಶರ್ಕರ > ಪಿಷ್ಟ > ಹೆಮಿಸೆಲ್ಯೂಲೋಸ್ > ಸೆಲ್ಯೂಲೋಸ್ > ಸರಳ ಬಗೆಯ ಸಸಾರಜನಕಗಳು > ಕ್ಲಿಷ್ಟ ಸಸಾರಜನಕಗಳು > ಕ್ಲಿಷ್ಟ ಸಸಾರಜನಕಗಳು > ಕೊಬ್ಬು, ಎಣ್ಣೆ ಮೇಣ ಇತ್ಯಾದಿ > ಲಿಗ್ನಿನ್.

ಶರ್ಕರ, ಪಿಷ್ಟ ಇವು ಬೇಗನೇ ಕಳಿಯುತ್ತವೆಯಾದರೆ, ಲಿಗ್ನೀನ್‌ನ ಕಳಿಯುವ ಕ್ರಿಯೆಯು ಅತಿ ಮಂದಗತಿಯಿಂದ ಸಾಗುತ್ತದೆ.

ಹ್ಯೂಮಸ್

ಮಣ್ಣಿನಲ್ಲಿರುವ ಹ್ಯೂಮಸ್ ಹಲವು ಬಗೆಯ ಸೂಕ್ಷ್ಮ ಜೀವಿಗಳು ಚಟುವಟಿಕೆಗಳಿಂದ ವಿಶ್ಲೇಷಣೆ ಹಾಗೂ ಸಂಯೋಜನೆಗೊಂಡ ಅತಿಕ್ಲಿಷ್ಟ ಹಾಗೂ ಸಂಕೀರ್ಣವಾಗಿರುವ, ಸುಲಭವಾಗಿ ಕಳಿಯದ, ಕಂದು ಇಲ್ಲವೇ ದಟ್ಟ ಕಂದು ಬಣ್ಣದ, ಅಸ್ಫಟಿಕ ರಚನೆ, ಅನಿರ್ಧಿಷ್ಟ ಆಕಾರ ಮತ್ತು ಸೂಕ್ಷ್ಮ ಕಣಳಿಂದ ಕೂಡಿದ ಸಾವಯವ ಪದಾರ್ಥಗಳ ಮಿಶ್ರಣವೆನ್ನಬಹುದು. ಹ್ಯೂಮಸ್ಸಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಮಣ್ಣಿನ ಮೇಲೆ ಮತ್ತು ಆ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳ ಮೇಲೆ ಬಹು ಮಹತ್ವದ ಪರಿಣಾಮವನ್ನುಂಟು ಮಾಡುತ್ತವೆ. ಹ್ಯೂಮಸ್ಸಿನ ಬಗ್ಗೆ ಕೆಲವು ಪ್ರಯೋಜನಕಾರಿ ವಿವರಗಳು ಕೆಳಗಿನಂತಿವೆ.

ಹ್ಯೂಮಸ್ಸಿನ ನಿರ್ಮಾಣ ಮತ್ತು ಅದರ ಘಟಕಗಳು : ಹ್ಯೂಮಸ್ ಸಂಕೀರ್ಣವಸ್ತುಗಳಿಂದ ಕೂಡಿದ ಒಂದು ಬಹುಕ್ಲಿಷ್ಟ ಪದಾರ್ಥ. ಆದ್ದರಿಂದ ಅದರ ಬಗ್ಗೆ ಅತಿ ನಿಖರವಾಗಿ ಹೇಳುವುದು ಕಷ್ಟವಾದರೂ ಗೊತ್ತಿರುವ ಕೆಳಗಿನ ವಿವರಗಳು ಪ್ರಯೋಜನಕಾರಿ ಎನಿಸುತ್ತವೆ:

ವಿಶ್ಲೇಷಣೆ ಮತ್ತು ಸಂಯೋಜನೆ ಎಂಬ ಎರಡೂ ಕ್ರಿಯೆಗಳಿಂದ ಹ್ಯೂಮಸ್ ನಿರ್ಮಾಣಗೊಳ್ಳುತ್ತದೆ ಎಂದು ಸಾಮಾನ್ಯವಾಗಿ ಹೇಳಬಹುದು.

ಈಗಾಗಲೇ ತಿಳಿಸಿರುವಂತೆ ಸುಲಭವಾಗಿ ಕಳಿಯುವ ವಸ್ತುಗಳು ವಿಶ್ಲೇಷಣೆಗೊಂಡು ಹಲವು ಸರಳ ವಸ್ತುಗಳು ಹೊರಬರುತ್ತವೆ. ಕಳಿಯುವ ಕ್ರಿಯೆಯನ್ನು ಪ್ರತಿರೋಧಿಸುವ ಲಿಗ್ನೀನ್‌ನಂತಹ ಘಟಕಗಳೂ ಭಾಗಶಃ ವಿಶ್ಲೇಷಣೆಗೊಂಡು ಅದರ ಮೂಲ ರಚನೆಯಲ್ಲಿಯೂ ಹಲವು ಬದಲಾವಣೆಗಳು ಆಗುತ್ತವೆಯೆಂಬುವುದನ್ನು ಗಮನಿಸಬಹುದು.

ವಿಶ್ಲೇಷಣೆಯು ನಡೆಯುತ್ತಿದ್ದಂತೆಯೇ ಸಂಯೋಜನೆಯ ಕ್ರಿಯೆಯು ನಡೆದಿರುತ್ತದೆ. ಫಿನಾಲ್ ಮತ್ತು ಕ್ವಿನಾಲ್‌ಗಳಂತಹ ಹೊಸ ರಾಸಾಯನಿಕಗಳು ಸಂಯೋಜನೆಗೊಳ್ಳುತ್ತವೆ. ಇವು ಒಂದಕ್ಕೊಂದು ಜೊತೆಗೂಡಿ ಪಾಲಿಫಿನಾಲ್ ಮತ್ತು ಪಾಲಿಕ್ವಿನಾಲ್‌ಗಳಂತಹ ಭಾರವಾದ ಸಂಯುಕ್ತಗಳು ನಿರ್ಮಾಣಗೊಳ್ಳುತ್ತವೆ. ಇವು ಸಸಾರಜನಕವುಳ್ಳ ಸಂಯುಕ್ತಗಳೊಡನೆ ಸೇರಿಕೊಂಡು ಕಳಿಯುವ ಕ್ರಿಯೆಯನ್ನು ವಿರೋಧಿಸುವ ಸಾಮರ್ಥ್ಯವುಳ್ಳ ಹ್ಯೂಮಸ್ಸಿನ ಬಹು ಮುಖ್ಯ ಅಂಗವೆನಿಸುತ್ತವೆ.

ಹ್ಯೂಮಸ್ಸಿನಲ್ಲಿ ಎರಡು ಗುಂಪುಗಳಿಗೆ ಸೇರಿದ ಸಂಯುಕ್ತಗಳಿವೆಯೆಂದು ಅಧ್ಯಯನದಿಂದ ತಿಳಿದುಬಂದಿದೆ.

. ಹ್ಯೂಮಿಕ್ ಗುಂಪು : ಹ್ಯೂಮಸ್ಸಿನ ಸಂಯುಕ್ತಗಳು ಶೇಕಡಾ ೬೦ರಿಂದ ೮೦ ರಷ್ಟು ಹ್ಯೂಮಿಕ್ ಗುಂಪಿಗೆ ಸೇರಿವೆ. ಮೇಲೆ ಸೂಚಿಸಿದ ಪಾಲಿಫಿನಾಲ್ ಮತ್ತು ಪಾಲಿಕ್ವಿನಾಲ್‌ಗಳಂತಹ ಸಂಯುಕ್ತಗಳೇ ಈ ಗುಂಪಿನಲ್ಲಿ ಪ್ರಮುಖವೆನಿಸಿವೆ. ಹ್ಯೂಮಿಕ್ ಗುಂಪಿಗೆ ನಿರ್ಧಿಷ್ಟವಾದ ಭೌತಿಕ ಗುಣಗಳಾಗಲೀ ರಾಸಾಯನಿಕ ರಚನೆಗಳಾಗಲೀ ಇಲ್ಲ ಹಾಗೂ ಕಣಗಳಿಗೆ ನಿರ್ಧಿಷ್ಟ ಆಕಾರವೂ ಇಲ್ಲ. ದಟ್ಟ ಕಂದು ಬಣ್ಣದ ಈ ಕಣಗಳು ಭಾರವಾಗಿರುತ್ತವೆ.

ಈ ಗುಂಪಿನಲ್ಲಿರುವ ವಸ್ತುಗಳನ್ನು ಕೆಳಗಿನಂತೆ ವಿಂಗಡಿಸಬಹುದು.

i) ಫಲ್ವಿಕ್ ಆಮ್ಲ : ತುಲನಾತ್ಮಕವಾಗಿ ಕಣಗಳ ತೂಕವು ಕಡಮೆ. ಬಣ್ಣವೂ ಅಷ್ಟು ದಟ್ಟವಾಗಿರುವುದಿಲ್ಲ.ಆಮ್ಲ ದ್ರಾವಣದಲ್ಲಿ, ಅದರಂತೆಯೇ ಕ್ಷಾರದ ದ್ರಾವಣದಲ್ಲಿ ಇದು ಸುಲಭವಾಗಿ ಕರಗುತ್ತದೆ. ಸೂಕ್ಷ್ಮ ಜೀವಿಗಳು ಫಲ್ವಿಕ್ ಆಮ್ಲವನ್ನು ಕಳಿಯುವಂತೆ ಮಾಡಬಲ್ಲವಾದರೂ ಕಳಿಯುವ ಕ್ರಿಯೆಯನ್ನು ಪೂತಿಗೊಳಿಸಲು ಹಲವು ವರ್ಷಗಳು ಬೇಕು.

ii) ಹ್ಯೂಮಿಕ್ ಆಮ್ಲ : ಫಲ್ವಿಕ್ ಆಮ್ಲಕ್ಕಿಂತ ಹ್ಯೂಮಿಕ್ ಆಮ್ಲದ ಕಣಗಳು ಅಧಿಕ ಭಾರವಾಗಿರುತ್ತವೆ. ಬಣ್ಣವೂ ಹೆಚ್ಚು ದಟ್ಟವಾಗಿರುತ್ತದೆ. ನಿರವಯವ ಆಮ್ಲದಲ್ಲಿ ಹ್ಯೂಮಿಕ್ ಆಮ್ಲವು ಕರಗುತ್ತದೆಯಾರೂ ಕ್ಷಾರಗಳ ದ್ರಾವಣದಲ್ಲಿ ಕರಗುವುದಿಲ್ಲ. ಕಳಿಯುವ ಕ್ರಿಯೆಯು ಕ್ರಿಯೆಗೆ ಸಾಕಷ್ಟು ವಿರೋಧವನ್ನು ಒಡ್ಡುತ್ತವೆಯಾದ್ದರಿಂದ ಪೂರ್ತಿಯಾಗಿ ಕಳಿಯಲು ನೂರಾರು ವರ್ಷಗಳೇ ಬೇಕಾಗುತ್ತವೆ.

iii) ಹ್ಯೂಮಿನ್‌ : ಹ್ಯೂಮಿನ್‌ ಕಣಗಳ ಭಾರವು ಅತ್ಯಧಿಕ. ಇದು ಬಹು ದಟ್ಟವಾದ ಬಣ್ಣವನ್ನು ಹೊಂದಿದೆ. ಅಮ್ಲ ಇಲ್ಲವೇ ಕ್ಷಾರಗಳ ದ್ರಾವಣದಲ್ಲಿ ಕರಗುವುದಿಲ್ಲ. ಕಳಿಯುವ ಕ್ರಿಯೆಯು ಇದರಲ್ಲಿ ಮೇಲಿನವೆರಡಕ್ಕಿಂತ ಬಹು ನಿಧಾನವಾಗಿ ಸಾಗುತ್ತದೆ.

. ಹ್ಯೂಮಿಕ್ ಅಲ್ಲದ ಗುಂಪು : ಹ್ಯೂಮಸ್ಸಿನ ಸಂಯುಕ್ತಗಳು ಶೇಕಡಾ ೨೦ ರಿಂದ ೩೦ರಷ್ಟು ಗುಂಪಿಗೆ ಸೇರಿವೆ. ಇದರಲ್ಲಿರುವ ಸಂಯುಕ್ತಗಳಿಗೆ ನಿರ್ಧಿಷ್ಟವಾದ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳಿವೆ.

ಶರ್ಕರಗಳ ರಚನೆಯನ್ನು ಹೋಲುವ ಪಾಲೀ ಸ್ಯಾಕ್ಕರೈಡ್ ಗಳು ಈ ಗುಂಪಿಗೆ ಸೇರಿವೆ. ಇವು ಮಣ್ಣಿನ ಕಣಗಳ ರಚನೆಯನ್ನು ಸ್ಥಿರಗೊಳಿಸುವಲ್ಲಿ, ಮಹತ್ವದ ಪಾತ್ರವನ್ನು ವಹಿಸುತ್ತವೆ. ಇವುಗಳಲ್ಲಿ ಕೆಳಗಿನವು ಸೇರಿವೆ.

i) ಮಣ್ಣಿಗೆ ಸೇರಿಸಿದ ಸಾವಯವ ವಸ್ತುಗಳಲ್ಲಿ ಮೂಲತಃ ಇಲ್ಲದ, ಆದರೆ ಸೂಕ್ಷ್ಮಜೀವಿಗಳಿಂದ ಸಂಯೋಜನೆಯಾಗಿ ಆ ಜೀವಿಗಳ ಭಾಗವೆನಿಸುವ ಪಾಲಿಯುರೆನಾಯ್ಡ್‌ಗಳು.

ii) ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿರುವ ಸಾವಯವ ಆಮ್ಲಗಳು ಮತ್ತು ಸಸಾರಜನಕವನ್ನು ಹೋಲುವ ಕೆಲವು ವಸ್ತುಗಳು.

ಹ್ಯೂಮಸ್ಸಿನ ಗುಣಧರ್ಮಗಳು : ಹ್ಯೂಮಸ್ ಅತಿ ಸೂಕ್ಷ್ಮ ಕಣಗಳ ರೂಪದಲ್ಲಿದೆಯೆಂದು ಈಗಾಗಲೇ ತಿಳಿಸಲಾಗಿದೆ. ಅತಿ ಸೂಕ್ಷ್ಮ ಕಣಗಳಿಗೆ (ಕಲಿಲಗಳು) ಇರುವ ಎಲ್ಲ ಗುಣಗಳೂ ಹ್ಯೂಮಸ್ಸಿಗೆ ಇವೆಯಲ್ಲದೇ ಕೆಲವು ವಿಶಿಷ್ಟ ಗುಣಗಳೂ ಇರುತ್ತವೆ. ಇದರ ಪ್ರಮುಖ ಗುಣಧರ್ಮಗಳು ಮುಂದಿನಂತಿವೆ :

i) ಹ್ಯೂಮಸ್ಸಿನ ಬಣ್ಣವು ತಿಳಿಕಂದು ಬಣ್ಣದಿಂದ ಕಡುಕಂದು ಬಣ್ಣವಿರುತ್ತವೆ. ಈ ಗುಣದಲ್ಲಿ ಹ್ಯೂಮಸ್ ಇತರೆ ನಿರವಯವ ಸೂಕ್ಷ್ಮ ಕಣಗಳಿಂದ ಭಿನ್ನವಾಗಿದೆ.

ii) ಹ್ಯೂಮಸ್ಸಿನಲ್ಲಿ ಪಾಲಿಫಿನಾಲ್ ಗಳೂ, ಪಾಲಿಕ್ವಿನಾಲ್‌ಗಳು, ಪಾಲಿಯುರೆನಾಯ್ಡ್‌ಗಳು ಮತ್ತು ಪಾಲಿಸ್ಯಾಕ್ಕರೈಡ್‌ಗಳು ಇರುತ್ತವೆ. ಈ ಸಂಯುಕ್ತಗಳು ಇಂಗಾಲ, ಜಲಜನಕ ಮತ್ತು ಆಮ್ಲಜನಕಗಳಿಂದ ರಚಿತವಾಗಿವೆ.

iii) ಕಣಗಳು ಅತಿಸೂಕ್ಷ್ಮವಾಗಿರುವುದರಿಂದ ಪ್ರತಿ ಕಣದಲ್ಲಿ ಹೊರಮೈ ಕ್ಷೇತ್ರವು ಅತ್ಯಧಿಕವಾಗಿರುತ್ತದೆ. ಇದು ಅಲ್ಯೂಮಿನೋ ಸಿಲಿಕೇಟ್ ಖನಿಜದ ಸೂಕ್ಷ್ಮ ಕಣದ ಹೊರಮೈ ಕ್ಷೇತ್ರಕ್ಕಿಂತಲೂ ಹಲವು ಪಟ್ಟು ಅಧಿಕ.

iv) ಹ್ಯೂಮಸ್ ಕಣಗಳ ಜಲಧಾರಣಾ ಸಾಮರ್ಥ್ಯವು ಅಧಿಕ. ಗಾತ್ರದ ಆಧಾರದ ಮೇಲೆ ಅಲ್ಯೂಮಿನೋ ಸಿಲಿಕೇಟ್ ಖನಿಜಗಳ ಜಲಧಾರಣಾ ಸಾಮರ್ಥ್ಯಕ್ಕಿಂತ ಹ್ಯೂಮಸ್ ಕಣಗಳ ಸಾಮರ್ಥ್ಯವು ೪ರಿಂದ ೫ ಪಟ್ಟು ಅಧಿಕವಾಗಿದೆ.

v) ಹ್ಯೂಮಸ್ಸಿಗೆ ಮಣ್ಣಿನಕಣಗಳ ರಚನೆಯನ್ನು ಸ್ಥಿರಗೊಳಿಸುವ ಸಾಮರ್ಥ್ಯವಿದೆ.

vi) ಪ್ರತಿ ಕಣದ ಸುತ್ತ ಹಲವು ಋಣ ಚಾರ್ಜ್‌ಗಳಿರುತ್ತವೆ. ಈ ಕಣಗಳಲ್ಲಿರುವ ಹೈಡ್ರಾಕ್ಸಿಲ್, ಕಾರ್ಬಾಕ್ಸಿಲಿಕ್ ಮತ್ತು ಫಿನೋಲಿಕ್ ಗುಂಪುಗಳೇ ಈ ಋಣ ಚಾರ್ಜ್‌ಗಳ ಮೂಲಗಳು. ರಸಸಾರವು (pH) ಅಧಿಕಗೊಂಡಂತೆ ಋಣ ಜಾರ್ಜಗಳ ಸಂಖ್ಯೆಯೂ ಅಧಿಕವಾಗುತ್ತದೆ.

vii) ಧನ ಅಯಾನ್‌ ವಿನಿಮಯ ಸಾಮರ್ಥ್ಯವು ಪ್ರತಿ ೧೦೦ ಗ್ರಾಮ್ ಹ್ಯೂಮಸ್ಸಿಗೆ ೧೫೦ ರಿಂದ ೩೦೦ ಮಿ.ಗ್ರಾಂ ಇಕ್ವಿವಲೆಂಟನಷ್ಟಿದೆ. ಎಂದರೆ, ಸಿಲಿಕೇಟ್ ಖನಿಜಗಳಿಗಿಂತ ಈ ಸಾಮರ್ಥ್ಯವು ಹಲವು ಪಟ್ಟು ಅಧಿಕವಾದಂತಾಯಿತು.

ಹ್ಯೂಮಸ್ಸಿನ ಮಹತ್ವ :ಎಲ್ಲೆಡೆ ಕಂಡು ಬರುವ ಖನಿಜ ಪ್ರಧಾನವಾದ ಮಣ್ಣಿನಲ್ಲಿ ಸಾವಯವ ಪದಾರ್ಥವು ಶೇಕಡಾ ೨ ರಿಂದ ೫ ರಷ್ಟಿರುತ್ತದೆಯೆಂದು ಈ ಅಧ್ಯಾಯದ ಆರಂಭದಲ್ಲಿಯೇ ತಿಳಿಸಲಾಗಿದೆ. ಇಷ್ಟು ಅಲ್ಪ ಪ್ರಮಾಣದಲ್ಲಿದ್ದರೂ ಅದು ಮಣ್ಣಿನ ಮೇಲೆ ಮ್ತತ್ತು ಅದರ ಮೂಲಕ ಸಸ್ಯಗಳ ಬೆಳವಣಿಗೆಯ ಮೇಲೆ ತನ್ನ ಗಾತ್ರಕ್ಕೆ ಮೀರಿ ಪ್ರಭಾವವನ್ನು ಬೀರುತ್ತದೆಯೆಂಬುವುದು ಬಹು ಮಹತ್ವದ ಸಂಗತಿಯಾಗಿರುತ್ತದೆ. ಕೆಳಗಿನ ವಿವರಗಳಿಂದ ಹ್ಯೂಮಸ್ಸಿನ ಪ್ರಯೋಜನಗಳನ್ನು ತಿಳಿಯಬಹುದು.

i) ಹ್ಯೂಮಸ್ಸಿಗೆ ಅಧಿಕ ಜಲಧಾರಣಾ ಸಾಮರ್ಥ್ಯವಿರುವುದರಿಂದ ಮರಳುಮಣ್ಣಿನ ಜಲಧಾರಣಾ ಸಾಮರ್ಥ್ಯವನ್ನು ಹೆಚ್ಚಿಸಿ ಅಧಿಕ ನೀರು ಮಣ್ಣಿನಲ್ಲಿ ಸಂಗ್ರಹವಾಗಲು ಸಹಾಯಕವಾಗುತ್ತದೆ.

ii) ಮಣ್ಣಿನ ಕಣಗಳ ರಚನೆಯೂ ನಿರ್ಮಾಣಗೊಳ್ಳುವಾಗ, ಹ್ಯೂಮಸ್ ಸಹಾಯಕವಾಗುತ್ತದೆಯಲ್ಲದೇ ಕಣಗಳ ರಚನೆ ಮೇಲೆ ಸ್ಥಿರವಾಗುವಂತೆಯೂ ನೋಡಿಕೊಳ್ಳುತ್ತದೆ.

iii) ಮರಳುಮಣ್ಣಿನಲ್ಲಿ ನೀರು ಬಸಿದುಹೋಗಿ ನಷ್ಟವಾಗುವುದನ್ನು ಸ್ವಲ್ಪಮಟ್ಟಿಗೆ ತಡೆಯುತ್ತದೆಯಲ್ಲದೇ ಅತಿಜಿಗುಟು ಮಣ್ಣಿನಲ್ಲಿ ನೀರುಸರಿಯಾಗಿ ಬಸಿದುಹೋಗುವಂತೆ ಮಾಡುತ್ತದ.

iv) ಧನ ಅಯಾನ್‌ಗಳ ವಿನಿಮಯ ಸಾಮರ್ಥ್ಯವು ಅಧಿಕವಾಗಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಧನ ಅಯಾನ್‌ಗಳನ್ನು ಹಿಡಿದಿಟ್ಟುಕೊಂಡು ಸಸ್ಯಗಳಿಗೆ ದೊರೆಯುವಂತೆ ಮಾಡುತ್ತದೆಯಲ್ಲದೇ ದನ ಅಯಾನ್‌ಗಳು ಬಸಿದುಹೋಗಿ ನಷ್ಟವಾಗುವುದನ್ನು ತಪ್ಪಿಸುತ್ತದೆ.

v) ಸಸ್ಯಗಳಿಗೆ ಅವಶ್ಯವಿರುವ ಪೋಷಕಾಂಶಗಳ ಮೂಲವಾಗಿದೆ.

vi) ಮಣ್ಣಿನಲ್ಲಿರುವ ಹಲವು ಬಗೆಯ ಜೀವಿಗಳಿಗೆ ಆಹಾರವನ್ನು ಒದಗಿಸುತ್ತದೆ.

ಸಸಾರಜನಕದ ಸಂರಕ್ಷಣೆ : ಸಾವಯವ ಪದಾರ್ಥಗಳಲ್ಲಿರುವ ಸಸಾರಜನಕ ಮತ್ತು ಸಾರಜನಕವಿರುವ ಸಂಯುಕ್ತಗಳೇ ಮಣ್ಣಿನಲ್ಲಿರುವ ಸಾರಜನಕ ಮೂಲಗಳು. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಸಾವಯವ ಪದಾರ್ಥದೊಳಗಿನ ಸಂಯುಕ್ತಗಳಿಂದ ಸಾರಜನಕವನ್ನು ಅಮೋನಿಯಾ ಮತ್ತು ನೈಟ್ರೇಟ್ ರೂಪಕ್ಕೆ ಪರಿವರ್ತಿಸಿ ಈ ಪೋಷಕಾಂಶವು ಸಸ್ಯಗಳಿಗೆ ದೊರೆಯುವಂತೆ ಮಾಡುತ್ತವೆ. ಈ ಕಾರ್ಯವು ಅಪೇಕ್ಷಣೀಯ.

ಮೇಲೆ ತಿಳಿಸಿದ ಕಾರ್ಯವು ಒಂದೊಮ್ಮೆ ಭರದಿಂದ ಸಾಗಲು ಸಾಧ್ಯವಾಗಿದ್ದರೆ, ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಎಲ್ಲಾ ಸಾರಜನಕವು ಕ್ಷಪ್ರದಲ್ಲಿಯೇ ಪರಿವರ್ತನೆಯನ್ನು ಹೊಂದಿ ನೈಟ್ರೇಟ್ ರೂಪವನ್ನು ತಳೆಯುತ್ತಿತ್ತು. ನೈಟ್ರೇಟಿನ ಕೆಲ ಭಾಗವನ್ನು ಸಸ್ಯಗಳು ಹೀರಿಕೊಂಡರೂ ಉಳಿದ ಭಾಗವು ನೀರಿನೊಡನೆ ಬಸಿದುಹೋಗಿ ಬೆಳೆಗಳಿಗೆ ಸಿಗದಂತಾಗುತ್ತಿತ್ತು. ಹೀಗಾಗಿ ಅಲ್ಪ ಅವಧಿಯಲ್ಲಿಯೇ ಮಣ್ಣಿನ ಸಾರಜನಕದ ಮೂಲವಾದ ಸಾವಯವ ಪದಾರ್ಥವು ಇಲ್ಲದಂತಾಗುತ್ತಿತ್ತು. ಆದರೆ ವಸ್ತು ಸ್ಥಿತಿಯು ಹಾಗಿಲ್ಲ. ಕೆಳಗಿನ ವಿಧಾನಗಳಿಂದ ಸಾವಯವ ರೂಪದ ಸಾರಜನಕವು ಮಣ್ಣಿನಲ್ಲಿ ಹೆಚ್ಚು ಅವಧಿಯವರೆಗೆ ಸುರಕ್ಷಿತವಾಗಿ ಉಳಿದುಕೊಳ್ಳುತ್ತದೆ :

i) ಸಸಾರಜನಕಗಳು ಮತ್ತು ಸಾರಜನಕವಿರುವ ಇತರೆ ಸಂಯುಕ್ತಗಳೂ ಹ್ಯೂಮಿಕ್ ಗುಂಪಿನಲ್ಲಿ ಮತ್ತು ಹ್ಯೂಮಿಕ್ ಅಲ್ಲದ ಗುಂಪಿನಲ್ಲಿರುವ ಹಲವು ಸಾವಯವ ಪದಾರ್ಥಗಳೊಡನೆ ಪ್ರತಿಕ್ರಿಯೆಗೊಂಡು ಕಳಿಯುವ ಕ್ರಿಯೆಯನ್ನು ವಿರೋಧಿಸಬಲ್ಲ ವಸ್ತುಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೀಗಾಗಿ ಸಾವಯವ ಪದಾರ್ಥಗಳಲ್ಲಿರುವ ಸಸಾರಜನಕ ಮತ್ತು ಸಾರಜನಕವಿರುವ ಇತರೆ ವಸ್ತುಗಳು ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದಾಗುವ ಬದಲಾವಣೆಯಿಂದ ಹೆಚ್ಚು ಅವಧಿಯವರೆಗೆ ಸುರಕ್ಷಿತವಾಗಿ ಉಳಿದುಕೊಳ್ಳುತ್ತವೆ.

ii) ಇನ್ನೊಂದು ವಿಧಾನದಿಂದಲೂ ಸಾವಯವ ಪದಾರ್ಥದಲ್ಲಿರುವ ಸಾರಜನಕವು ಸೂಕ್ಷ್ಮ ಜೀವಿಗಳಿಂದ ಹೆಚ್ಚು ಕಾಲದವರೆಗೆ ಸುರಕ್ಷಿತವಾಗಿ ಉಳಿಯಬಲ್ಲದು. ಮಣ್ಣಿನಲ್ಲಿರುವ ಅಲ್ಯೂಮಿನೋ ಸಿಲಿಕೇಟ್ ಖನಿಜಗಳೂ ಮತ್ತು ಇತರೆ ಕೆಲವು ನಿರವಯವ ಸಂಯುಕ್ತಗಳು ಹಾಗೂ ಹ್ಯೂಮಸ್ ನೊಡನೆ ಪ್ರತಿಕ್ರಿಯೆಗೊಂಡು ನಿರ್ಮಾಣಗೊಂಡ ಕ್ಲಿಷ್ಟ ವಸ್ತುಗಳು ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ಹೆಚ್ಚು ಸಮಯದವರೆಗೆ ಸುರಕ್ಷಿತವಾಗಿ ಇರಬಲ್ಲವು.

ಹ್ಯೂಮಸ್ಸಿನ ಸ್ಥಿರತೆ : ಹ್ಯೂಮಸ್ ಬಗ್ಗೆ ತಿಳಿದುಕೊಂಡ ಇಲ್ಲಿಯವರೆಗಿನ ವಿವರಣೆಗಳಿಂದ ಈ ಸಾವಯವ ಪದಾರ್ಥದ ಸ್ಥಿರತೆ ಕುರಿತು ಕೆಳಗಿನ ವಿಷಯಗಳನ್ನು ಹೇಳಬಹುದು.

i) ಹ್ಯೂಮಸ್ ಇತರೆ ಸಾವಯವ ಪದಾರ್ಥಗಳಿಗಿಂತ ಮಣ್ಣಿನಲ್ಲಿ ಹೆಚ್ಚು ಸ್ಥಿರವಾಗಿ ಉಳಿಯಬಲ್ಲದು. ಸೂಕ್ಷ್ಮ ಜೀವಿಗಳ ಚಟುವಟಿಕೆಗಳಿಗೆ ಇದು ಸುಲಭವಾಗಿ ತುತ್ತಾಗುವುದಿಲ್ಲ.

ii) ಹ್ಯೂಮಸ್ಸಿನ ನಿರ್ಮಾಣ ಮತ್ತು ಅದರ ಘಟಕಗಳನ್ನು ಕುರಿತು ಹೇಳಿದಂತೆ ಹ್ಯೂಮಸ್ಸಿನ ಒಂದು ಭಾಗವಾದ ಫಲ್ವಿಕ್ ಆಮ್ಲವನ್ನು ಸೂಕ್ಷ್ಮ ಜೀವಿಗಳು ನಿಧಾನವಾಗಿ ಕಳಿಯುವಂತೆ ಮಾಡುತ್ತವೆ. ಇದರಿಂದ ಪ್ರತಿ ವರ್ಷ ಹ್ಯೂಮಸ್ಸಿನ ಸ್ವಲ್ಪಭಾಗವು ಕ್ಷೀಣಿಸುತ್ತಾ ಹೋಗುತ್ತದೆ.

iii)  ಪ್ರತಿ ವರ್ಷ ನೈಸರ್ಗಿಕವಾಗಿ ಪೂರೈಕೆಯಾದ ಅಥವಾ ಮಾನವನು ಪೂರೈಸಿದ ಸಾವಯವ ಪದಾರ್ಥದಿಂದ ನಿರ್ಮಾಣಗೊಂಡ ಹ್ಯೂಮಸ್, ಮಣ್ಣಿನಲ್ಲಿ ಮೊದಲಿದ್ದ ಹ್ಯೂಮಸ್ಸಿಗೆ ಹೊಸದಾಗಿ ಸೇರ್ಪಡೆಯಾಗುತ್ತದೆ. ಆದ್ದರಿಂದಲೇ ಹ್ಯೂಮಸ್ ಮಣ್ಣಿನಿಂದ ಪೂರ್ತಿಯಾಗಿ ನಶಿಸಿಹೋಗುವುದಿಲ್ಲ.

iv) ಹ್ಯೂಮಸ್ಸಿನಲ್ಲಿರುವ ಕೆಲವು ವಸ್ತುಗಳು ಸೂಕ್ಷ್ಮ ಜೀವಿಗಳ ಕ್ರಿಯೆಗೆ ತೀವ್ರ ಪ್ರತಿರೋದವನ್ನು ಒಡ್ಡುತ್ತವೆ. ಆದ್ದರಿಂದ ಅಂತಹ ವಸ್ತುಗಳು ಮಣ್ಣಿನಲ್ಲಿ ಬಹು ಸಮಯದವರೆಗೆ ಸ್ಥಿರವಾಗಿ ಉಳಿದಿರುತ್ತವೆ. ಈಗಿರುವ ಹ್ಯೂಮಸ್ಸಿನಲ್ಲಿ ನೂರಾರು ವರ್ಷಗಳ ಹಿಂದಿದ್ದ ಹ್ಯೂಮಸ್ಸಿನ ಅವಶೇಷವಿರುವುದನ್ನು ಅಧ್ಯಯನಗಳಿಂದ ಕಂಡುಹಿಡಿಯಲಾಗಿದೆ.