ಮಣ್ಣಿನಲ್ಲಿ ನಿರವಯವ ಮತ್ತು ಸಾವಯವ ವಸ್ತುಗಳು ಇರುವುದನ್ನು ಸುಲಭವಾಗಿ ತಿಳಿಯಬಹುದು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾತ್ರ ಮಣ್ಣು ಸಚ್ಛಿದ್ರವಾಗಿದೆಯೆಂಬುದು ಗೊತ್ತಾಗುತ್ತದೆ. ವಿವಿಧ ಆಕಾರದ ಈ ರಂಧ್ರಗಳಲ್ಲಿ ನೀರು ಮತ್ತು ಹವೆ ತುಂಬಿಕೊಂಡಿರುತ್ತದೆ. ಆದ್ದರಿಂದ ನಿರವಯವ ವಸ್ತುಗಳು, ಸಾವಯವ ಪದಾರ್ಥಗಳು, ನೀರು ಮತ್ತು ಹವೆ ಇವು ನಾಲ್ಕು ಮಣ್ಣಿನ ಘಟಕಗಳೆನ್ನಬಹುದು.

ಮಣ್ಣಿನ ಸುಮಾರು ಅರ್ಧದಷ್ಟು ಭಾಗವನ್ನು ನಿರವಯವ ಮತ್ತು ಸಾವಯವ ವಸ್ತುಗಳು ಆವರಿಸಿದ್ದು, ಉಳಿದರ್ಧ ಭಾಗದಲ್ಲಿ ರಂಧ್ರಗಳಿರುತ್ತವೆ. ಅರ್ಧದಷ್ಟು ರಂಧ್ರಗಳಲ್ಲಿ ನೀರು ಮತ್ತು ಉಳಿದರ್ಧ ರಂಧ್ರಗಳಲ್ಲಿ ಹವೆ ಇದ್ದರೆ ಸಸ್ಯಗಳ ಬೆಳವಣಿಗೆಗೆ ಅನುಕೂಲವೆಂದು ಹೇಳಬಹುದು. ಈ ಸ್ಥಿತಿಯನ್ನು ಚಿತ್ರ ೨ರಲ್ಲಿ ಕಾಣಬಹುದು.

ಚಿತ್ರ೨ : ಮಣ್ಣಿನ ಪ್ರಮುಖ ಘಟಕಗಳು ಮತ್ತು ಅವುಗಳ ಅಂದಾಜು ಪ್ರಮಾಣ

ಈ ಸಂದರ್ಭದಲ್ಲಿ ಕೆಳಗಿನ ಸಂಗತಿಗಳನ್ನು ಗಮನಿಸಬೇಕು:

  • ಚಿತ್ರದಲ್ಲಿ ತೋರಿಸಿರುವಂತೆ ಮಣ್ಣಿನ ಘಟಕಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಅವೆಲ್ಲ ಒಂದಕ್ಕೊಂದು ಸಮ್ಮಿಶ್ರವಾಗಿರುತ್ತವೆ.
  • ಹವೆ ಮತ್ತು ನೀರಿನ ಪ್ರಮಾಣವು ಸದಾ ಬದಲಾಗುತ್ತಿರುತ್ತದೆ. ಮಳೆ ಬಂದಿತೆಂದರೆ ಅಥವಾ ಮಣ್ಣಿಗೆ ನೀರನ್ನು ಪೂರೈಸಿದರೆ, ಮಣ್ಣಿನ ಬಹುತೇಕ ಎಲ್ಲ ರಂಧ್ರಗಳಲ್ಲಿ ನೀರೇ ತುಂಬಿಕೊಂಡಿರುತ್ತದೆ. ಮಣ್ಣು ಒಣಗುತ್ತಾ ಸಾಗಿದಂತೆ ಒಣಗಿದ ಮಣ್ಣಿನಲ್ಲಿಯ ರಂಧ್ರಗಳನ್ನೆಲ್ಲ ಕೇವಲ ಹಬೆಯು ಆವರಿಸಿರುತ್ತದೆ.

ಮಣ್ಣಿನ ನಿರವಯವ ಮತ್ತು ಸಾವಯವ ಪದಾರ್ಥಗಳು ಹಾಗೂ ಮಣ್ಣಿನಲ್ಲಿಯ ಹವೆ ಇವುಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳನ್ನು ಈ ಅಧ್ಯಾಯದಲ್ಲಿ ವಿವರಿಸಿದೆ.

ನಿರವಯವವಸ್ತುಗಳು

ಮಣ್ಣಿನಲ್ಲಿ ಪ್ರಮುಖವಾಗಿ ಮೂರು ಬಗೆಯ ನಿರವಯವ ವಸ್ತುಗಳಿವೆ :

  • ಶಿಲೆಗಳಲ್ಲಿದ್ದ ಅಥವಾ ಸ್ವತಂತ್ರವಾಗಿದ್ದ ಖನಿಜಗಳು – ಮೂಲ ರೂಪದಲ್ಲಿ ಇಲ್ಲವೇ ಸ್ವಲ್ಪ ಮಟ್ಟಿಗೆ ಬದಲಾದ ರೂಪದಲ್ಲಿ ಇರುವ ನಿರವಯವ ವಸ್ತುಗಳು.
  • ಹೊಸದಾಗಿ ರೂಪುಗೊಂಡ ಅಲ್ಯೂಮಿಯಂ ಸಿಲಿಕೇಟ್ ಖನಿಜಗಳು.
  • ಕಬ್ಬಿಣ ಮತ್ತು ಅಲ್ಯೂಮಿನಿಯಂ ಧಾತುಗಳ ಆಕ್ಸೈಡ್ ಗಳು.

ಇವುಗಳಲ್ಲಿ ನವನಿರ್ಮಿತ ಅಲ್ಯೂಮಿನಿಯಂ ಸಿಲಿಕೇಟ್ ಖನಿಜಗಳೂ ಬಹುಶಃ ಎಲ್ಲ ಬಗೆಯ ಮಣ್ಣುಗಳಲ್ಲಿ ಕಂಡುಬರುತ್ತಿವೆಯಾದ್ದರಿಂದ ಅವುಗಳ ವಿವರಗಳನ್ನು ಮೊದಲು ಚರ್ಚಿಸಿ, ಅನಂತರ ಉಳಿದೆರಡು ಗುಂಪಿನ ನಿರವಯವ ವಸ್ತುಗಳ: ವಿವರಗಳನ್ನು ಕೊಟ್ಟಿದೆ.

ಹೊಸದಾಗಿ ರೂಪುಗೊಂಡ ಅಲ್ಯೂಮಿಯಂ ಸಿಲಿಕೇಟ್ ಖನಿಜಗಳು :ಭೂಮಿಯ ಹೊರ ಆವರಣದಲ್ಲಿ ಇರುವ ಒಟ್ಟು ಆಣುಗಳಲ್ಲಿ, ಸಂಖ್ಯೆಯ ದೃಷ್ಟಿಯಿಂದ ಕೆಳಗೆ ತೋರಿಸಿದ ೯ ಮೂಲ ಧಾತುಗಳೇ ಅಧಿಕ ಪ್ರಮಾಣದಲ್ಲಿವೆ. ಇತರೆ ಧಾತುಗಳ ಸಂಖ್ಯೆಯು ಅತಿ ಕಡಿಮೆ. ಈ ೯ ಧಾತುಗಳಿಗೆ ಸಂಬಂಧಿಸಿದ ಕೆಲವು ವಿವರಗಳು ಕೋಷ್ಟಕ ೭ರಲ್ಲಿವೆ.

ಕೋಷ್ಟಕ : ಭೂಮಿಯ ಹೊರ ಆವರಣದಲ್ಲಿರುವ ಮೂಲ ಧಾತುಗಳ ವಿವರ


ಸಂ
ಮೂಲಧಾತುವಿನ ಹೆಸರು ರಾಸಾಯನಿಕ ಸಂಕೇತಾಕ್ಷರ ಶೇಕಡಾವಾರು ಒಟ್ಟು ಅಣುಗಳ ಮತ್ತು ಅಯಾನ್‌ಗಳ ಸಂಖ್ಯೆ ಅಯಾನ್‌ನ ತ್ರಿಜ್ಯ (A0) ಅಯಾನ್‌ಗಳ ಸಂಕೇತ
ಆಮ್ಲಜನಕ

O

೬೦

೧.೪೦

O-2

ಸಿಲಿಕಾನ್‌

Si

೩೦

೦.೪೨

Si+4

ಅಲ್ಯೂಮಿನಿಯಂ

Al

೦.೫೧

Al+3

ಜಲಜನಕ

H

H+

ಸೋಡಿಯಂ

Na

೦.೯೭

Na+

ಕ್ಯಾಲ್ಸಿಯಂ

Ca

೦.೯೯

Ca+2

ಕಬ್ಬಿಣ

Fe

೦.೭೪

Fe2ಅಥವಾ Fe+3

ಮೆಗ್ನೀಸಿಯಂ

Mg

೦.೬೬

Mg+2

ಪೊಟ್ಯಾಸಿಯಂ

K

೧.೩೩

K+

ಧಾತುವಿನ ಅಣುವಿನಿಂದ ಒಂದು ಅಥವಾ ಒಂದಕ್ಕಿಂತ ಹೆಚ್ಚು ಎಲೆಕ್ಟ್ರಾನ ಅಂದರೆ ಋಣ ಚಾರ್ಜ್‌ ಸಿಡಿದುಹೋದರೆ ಆ ಧಾತುವಿನ ಧನ ಅಯಾನ್‌ ನಿರ್ಮಾಣವಾಗುತ್ತದೆ. ಉದಾಹರಣೆಗೆ, ಪೋಟಾಸಿಯಂ ಧಾತುವಿನ ಒಂದು ಅಣುವಿನಿಂದ ಒಂದು ಎಲೆಕ್ಟ್ರಾನ್‌ಹೊರಬಿದ್ದರೆ ಅದರೊಡನೆ ಸಂಪರ್ಕವನ್ನು ಹೊಂದಿದ್ದ ಒಂದು ಧನ ಚಾರ್ಜ್‌ ಏಕಾಂಗಿಯಾಗುತ್ತದೆ. ಹೀಗಾಯಿತೆಂದರೆ, ಪೋಟ್ಯಾಸಿಯಂ ಅಣುವಿನಿಂದ ಪೋಟ್ಯಾಸಿಯಂ ಅಯಾನ್‌ ನಿರ್ಮಾಣಗೊಂಡಂತಾಯಿತು. ಈಗ ಪೋಟ್ಯಾಸಿಯಂ ಅಣುವಿನಲ್ಲಿ ಒಂದು ಧನ ಚಾರ್ಜ್‌ ಉಪಯೋಗವಾಗದೆ ಉಳಿದಿರುವುದನ್ನು ಸೂಚಿಸಲು ಧಾತುವಿನ ಸಂಕೇತಾಕ್ಷರದ ಮುಂದೆ + ಚಿಹ್ನೆಯನ್ನು ಬರೆಯಲಾಗುತ್ತದೆ. ಉದಾಹರಣೆಗೆ –

ಪೋಟ್ಯಾಸಿಯಂ ಅಣು : K ಪೋಟ್ಯಾಸಿಯಂ. ಉದಾಹರಣೆ : K+

ಈ ಬದಲಾವಣೆಯಾದೊಡನೆ ಪೋಟ್ಯಾಸಿಯಂ ಅಯಾನ್‌ನಲ್ಲಿರುವ ಧನ ಚಾರ್ಜ್‌ ತನ್ನ ಪ್ರಭಾವದಿಂದ ತನ್ನಲ್ಲಿರುವ ಇತರೆ ಎಲೆಕ್ಟ್ರಾನ್‌ಗಳನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತದೆ. ಹೀಗಾಗಿ ಅಣುವಿಗಿಂತ ಧನ ಅಯಾನ್, ಗಾತ್ರದಲ್ಲಿ ಸಣ್ಣದಾಗಿರುತ್ತದೆ. ಇದರಂತೆಯೇ ಕ್ಯಾಲ್ಸಿಯಂ ಅಣುವಿನಿಂದ ಎರಡು ಎಲೆಕ್ಟ್ರಾನ್‌ಗಳು, ಅಲ್ಯೂಮಿಯಂನಿಂದ ಮೂರು ಮತ್ತು ಸಿಲಿಕಾನ್‌ ಅಣುವಿನಿಂದ ನಾಲ್ಕು ಎಲೆಕ್ಟ್ರಾನ್‌ಗಳು ಹೊರ ಬೀಳುವುದರಿಂದ ಅನುಕ್ರಮವಾಗಿ ಕ್ಯಾಲ್ಸಿಯಂ, ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ಅಯಾನ್‌ಗಳು ನಿರ್ಮಾಣಗೊಳ್ಳುತ್ತವೆ. ಈ ಅಯಾನ್‌ಗಳು ಸಂಬಂಧಿಸಿದ ಅಣುಗಳಿಗಿಂತ ಗಾತ್ರದಲ್ಲಿ ಸಣ್ಣವು.

ಋಣ ಅಯಾನ್‌ನಿರ್ಮಾಣವಾಗುವಾಗ ಮೇಲಿನದರ ವಿರುದ್ಧ ಕ್ರಿಯೆಯು ನಡೆಯುತ್ತದೆ. ಉದಾಹರಣೆಗೆ, ಆಮ್ಲಜನಕ ಅಣುವಿಗೆ ಎರಡು ಎಲೆಕ್ಟ್ರಾನ್‌ಗಳು ಬಂದು ಸೇರಿದಾಗ ಆಮ್ಲಜನಕ ಆಯಾನ್‌ ನಿರ್ಮಾಣವಾಗುತ್ತದೆ. ಇಲ್ಲಿ ಎರಡು ಋಣ ಚಾರ್ಜ್‌ (ಎಲೆಕ್ಟ್ರಾನ್)ಗಳು ಬಂದು ಸೇರುವುದರಿಂದ ಆಮ್ಲಜನಕ ಅಣುವಿನಲ್ಲಿ ಧನ ಚಾರ್ಜ್‌ಗಿಂತ ಎರಡು ಋಣ ಚಾರ್ಜ್‌ಗಳು ಅಧಿಕವಾಗಿದ್ದಂತಾಯಿತು. ಆದ್ದರಿಂದ –

ಆಮ್ಲಜನಕ ಅಣು : O ಆಮ್ಲಜನಕ ಆಯಾನ್: O ಅಥವಾ O-2.

ಅಣುವಿಗೆ ಹೆಚ್ಚಿನ ಎಲೆಕ್ಟ್ರಾನ್‌ಗಳು ಬಂದು ಸೇರಿದ್ದರಿಂದ ಆಮ್ಲಜನಕ ಆಯಾನ್‌ ಅದರ ಅಣುವಿಗಿಂತ ಗಾತ್ರದಲ್ಲಿ ದೊಡ್ಡದ್ದು. ಮೇಲಿನ ವಿವರಣೆಗಳಿಂದ ಮತ್ತು ಇತರೆ ಮೂಲಗಳಿಂದ ದೊರೆತ ಮಾಹಿತಿಗಳಿಂದ ಮುಂದಿನ ಸಂಗತಿಗಳನ್ನು ತಿಳಿಯಬಹುದು.

  • ಆಮ್ಲಜನಕದಿಂದ ಋಣ ಆಯಾನ್‌ಗಳು ನಿರ್ಮಾಣಗೊಳ್ಳುತ್ತವೆ. ಉಳಿದ ೩ ಧಾತುಗಳಿಂದ ಧನ ಅಯಾನ್‌ಗಳು ಸಿದ್ಧವಾಗುತ್ತವೆ.
  • ಮೇಲೆ ಹೇಳಿದ ೯ ಮೂಲ ಧಾತುಗಳಲ್ಲಿ, ಆಮ್ಲಜನಕವೇ ಅಣುವಿನ ಸಂಖ್ಯೆಯ ದೃಷ್ಟಿಯಿಂದ ಮೊದಲ ಸ್ಥಾನದಲ್ಲಿದೆ.
  • ಆಮ್ಲಜನಕ ಆಯಾನ್, ಉಳಿದೆಲ್ಲ ಮೂಲಧಾತುಗಳ ಅಯಾನ್‌ಗಳಿಗಿಂತ ಗಾತ್ರದಲ್ಲಿ ದೊಡ್ಡದು. ಹೀಗಾಗಿ ಪ್ರಥ್ವಿಯ ಹೊರ ಕವಚದಲ್ಲಿರುವ ಶೇ.೯೦ ರಷ್ಟು ಗಾತ್ರವನ್ನು ಆಮ್ಲಜನಕವೇ ಆವರಿಸಿರುತ್ತದೆ. ಆದ್ದರಿಂದಲೇ ಆಮ್ಲಜನಕದ ಚೌಕಟ್ಟಿನಲ್ಲಿ ಆಶ್ರಯಪಡೆದ ಧನ ಅಯಾನ್‌ಗಳಿಂದ ನಿರ್ಮಾಣಗೊಂಡ ಖನಿಜಗಳೇ ಮಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿವೆ. ಆಮ್ಲಜನಕದ ಚೌಕಟ್ಟಿನಲ್ಲಿ ಸಿಲಿಕಾನ್‌ ಹೊಂದಿಕೊಂಡು ನಿಮಾಣಗೊಂಡ ಖನಿಜಗಳಿಗೆ ಸಿಲಿಕೇಟ್ ಎಂದೂ ಅಲ್ಯೂಮಿಯಂ ಮತ್ತು ಸಿಲಿಕೇಟ ಇದ್ದ ಖನಿಜಗಳಿಗೆ ಅಲ್ಯೂಮಿನೋ ಸಿಲಿಕೇಟ್ ಎಂದು ಹೆಸರು.

ಸಿಲಿಕೇಟ್ ಖನಿಜಗಳ ರಚನಾಂಗಗಳು : ಎರಡು ಬಗೆಯ ರಚನಾಂಗಗಳಿಂದ ಮಣ್ಣಿನಲ್ಲಿರುವ ಸಿಲಿಕೇಟ್ ಖನಿಜಗಳು ನಿರ್ಮಾಣಗೊಳ್ಳುತ್ತವೆ:

ಚತುರ್ಮುಖಿ ರಚನಾಂಗ : ಚತುರ್ಮುಖಿಯು ಮೂರು ಪರಿಮಾಣಗಳುಳ್ಳ (ಉದ್ದ x ಅಗಲ x ದಪ್ಪ) ತ್ರಿಕೋನಾಕಾರದ ನಾಲ್ಕು ಮುಖಗಳುಳ್ಳ ಒಂದು ಆಕೃತಿ. ಮೂರು ಗೋಲಿಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದನ್ನು ಇಟ್ಟು ಮೇಲ್ಬಾಗದಲ್ಲಿ ಮೂರು ಗೋಲಿಗಳ ಮಧ್ಯದಲ್ಲಿ ನಾಲ್ಕನೆಯ ಗೋಲಿಯೊಂದನ್ನು ಇಟ್ಟರೆ ಚತುರ್ಮುಖಿ ರಚನೆಯ ಆಕೃತಿಯು ಸಿದ್ಧವಾಗುತ್ತದೆ.

ಚಿತ್ರ ೩ : ಚತುರ್ಮುಖಿ ಮತ್ತು ಅಷ್ಟಮುಖಿ ರಚನಾಂಗಗಳು

ಈ ನಾಲ್ಕು ಗೋಲಿಗಳು (ನಾಲ್ಕು ಆಮ್ಲಜನಕ ಅಯಾನ್‌ಗಳು) ಒಂದೆಡೆ ಸೇರುವ ಸ್ಥಳದಲ್ಲಿ ಸಣ್ಣ ಖಾಲಿ ಜಾಗವು (ರಂಧ್ರವು) ಉಳಿದುಕೊಂಡಿರುತ್ತದೆ. ಈ ರಂಧ್ರಕ್ಕೆ ಸೇರಿ ಹೊಂದುವ ಒಂದು ಧನ ಅಯಾನ್‌ ಒಳಗೆ ಸೇರಿಕೊಳ್ಳಲು ಆಸ್ಪದವಿದೆ. ಈ ಮೊದಲೇ ಹೇಳಿದ ಧನ ಅಯಾನ್‌ಗಳಲ್ಲಿ ಅತಿ ಸಣ್ಣ ಆಕಾರವನ್ನುಹೊಂದಿರುವ ಸಿಲಿಕಾನ್‌(0.42A) ಮಾತ್ರ ರಂಧ್ರದಲ್ಲಿ ಸೇರಿಕೊಂಡು ಅಲ್ಲಿ ಇರಬಲ್ಲದು. ಈ ರೀತಿ ಸೇರಿಕೊಂಡ ಸಿಲಿಕಾನ್‌ಅಯಾನ್, ತನ್ನ ಸುತ್ತಲಿರುವ ೪ ಆಮ್ಲಜನಕ ಅಯಾನ್‌ಗಳೊಡನೆ ಸಂಪರ್ಕ ಹೊಂದಿರುವುದರಿಂದ ಸಿಲಿಕಾನ್‌ನ ಸಂಪರ್ಕ ಸಂಖ್ಯೆಯು (Co – ordination number) ೪ ಎಂದು ಪರಿಗಣಿಸಲಾಗಿದೆ.

ಅಷ್ಟಮುಖಿ ರಚನಾಂಗ : ಅಷ್ಟಮುಖಿ ರಚನೆಯು ಮೇಲಿನದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಮುಂದಿನ ವಿವರಣೆಯಿಂದ ಈ ಆಕೃತಿಯ ಕಲ್ಪನೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ನಾಲ್ಕು ಗೋಲಿಗಳನ್ನು ಒಂದಕ್ಕೊಂದು ತಾಗುವಂತೆ ಚೌಕೋನಾಕಾರದಲ್ಲಿ ಇಡಬೇಕು. ಇಲ್ಲಿ ಪ್ರತಿ ಗೋಲಿಯು ತನ್ನ ಪಕ್ಕದಲ್ಲಿರುವ ಇನ್ನೆರಡು ಗೋಲಿಗಳನ್ನು ಸ್ಪರ್ಶಿಸುತ್ತವೆ. ನಾಲ್ಕು ಗೋಲಿಗಳು ಸಂಬಂಧಿಸಿದ ಸ್ಥಳದಲ್ಲಿ ಸ್ವಲ್ಪ ಸ್ಥಳಾವಕಾಶವು ಉಳಿದಿರುತ್ತದೆ. ಈ ಸ್ಥಳದ ಮೇಲ್ಬಾಗದಲ್ಲಿ ಒಂದು ಮತ್ತು ಕೆಳಭಾಗದಲ್ಲಿ ಇನ್ನೊಂದು ಹೀಗೆ ಎರಡು ಗೋಲಿಗಳನ್ನು ಇಟ್ಟರೆ ಆಗುವ ಆಕೃತಿಯು ಅಷ್ಟಮುಖಿ ರಚನೆಯಾಗುತ್ತದೆ. ಈ ಆಕೃತಿಗೆ ೮ ಮುಖಗಳು ಮತ್ತು ೬ ಶಿಖರಗಳು (Apex) ಇರುತ್ತವೆ. ಇಲ್ಲಿ ಹೇಳಿದ ಗೋಲಿಗಳ ಬದಲು ಆಮ್ಲಜನಕ ಅಯಾನ್‌ಗಳನ್ನು ಕಲ್ಪಿಸಿಕೊಳ್ಳಬೇಕು.

ಆಮ್ಲಜನಕದ ಆರು ಅಯಾನ್‌ಗಳು ಸಂದಿಸುವಲ್ಲಿ ಇರುವ ಬರಿದಾದ ಸ್ಥಳವು ಚತುರ್ಮುಖಿ ರಚನಾಂಗಗಳಲ್ಲಿ ಇರುವ ಸ್ಥಳಕ್ಕಿಂತ ವಿಶಾಲವಾಗಿರುವುದರಿಂದ ಸಿಲಿಕಾನ್‌ ಅಯಾನ್‌ಗಳಿಗೆ ಈ ಸ್ಥಳವು ದೊಡ್ಡದಾಗುತ್ತದೆ. ಆದರೆ, ಅಲ್ಯೂಮಿನಿಯಂ ಅಯಾನ್‌ಗಳಿಗೆ ಈ ಸ್ಥಳವು ಸರಿಹೊಂದುತ್ತದೆ. ಆದ್ದರಿಂದ ಅಷ್ಟಮುಖಿ ರಚನೆಯಲ್ಲಿ ಅಲ್ಯೂಮಿಯಂ ಅಯಾನ್‌ಗಳು ಸೇರಿಕೊಂಡಿರುತ್ತವೆ. ಅಲ್ಯೂಮಿನಿಯಂ ಅಯಾನ್‌ಗಳ ಬದಲು ಮೆಗ್ನಿಷಿಯಂ ಇಲ್ಲವೇ ಕಬ್ಬಿಣದ ಅಯಾನ್‌ಗಳು ಅಷ್ಟಮುಖಿಯಲ್ಲಿ ಸೇರಿಕೊಳ್ಳಲೂಬಹುದು. ಈ ಸ್ಥಳದಲ್ಲಿರುವ ಅಯಾನ್‌ಗಳು ತಮ್ಮ ಸುತ್ತಲಿರುವ ೬ ಅಮ್ಲಜನಕ ಅಯಾನ್‌ಗಳೊಡನೆ ಸಂಪರ್ಕವನ್ನು ಹೊಂದಿರುವುದರಿಂದ ಈ ಧನ ಅಯಾನ್‌ಗಳ ಸಂಪರ್ಕ ಸಂಖ್ಯೆಯು ೬ ಎಂದು ಪರಿಗಣಿಸಲಾಗುತ್ತದೆ.

ಪದರು ಸಿಲಿಕೇಟ್‌ಗಳು : ಮೇಲೆ ವಿವರಿಸಿದ ಚತುರ್ಮುಖಿಗಳ (ಅದರಂತೆಯೇ ಅಷ್ಟಮುಖಿಗಳ) ಅಂಗ ರಚನೆಗಳು ಒಂದಕ್ಕೊಂದು ವಿವಿಧ ಭಂಗಿಗಳಲ್ಲಿ ಅಂಟಿಕೊಂಡು ಹಲವು ಬಗೆಯ ರಚನೆಗಳಾಗುತ್ತವೆ. ಇವುಗಳಲ್ಲಿ ಪದರು ಸಿಲಿಕೇಟುಗಳ ನಿರ್ಮಾಣಕ್ಕೆ ಕಾರಣೀಭೂತವಾದ ಹಾಳೆಯಾಕಾರದ ರಚನೆಗಳಿಗೆ ಹೆಚ್ಚು ಮಹತ್ವ ಬಂದಿದೆ. ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಇವುಗಳ ದೃಷ್ಟಿಯಿಂದ ಮಹತ್ವವನ್ನು ಹೊಂದಿರುವ ಪದರು ಸಿಲಿಕೇಟುಗಳ ಬಗ್ಗೆ ಕೆಲವು ವಿವರಗಳು ಚಿತ್ರ ೪ರಲ್ಲಿನಂತಿವೆ.

ಚಿತ್ರ ೪ : ಚತುರ್ಮುಖಿ ಮತ್ತು ಅಷ್ಟಮುಖಿ ರಚನಾಂಗಗಳ ಹಾಳೆಗಳಿಂದ ನಿರ್ಮಿತ ಸಿಲಿಕೇಟ್ ಖನಿಜದ ಸ್ಪಟಿಕ (೨:೧) ಪ್ರಮಾಣ)

 ಚತುರ್ಮುಖಿ (ಮತ್ತು ಅಷ್ಟಮುಖಿ) ರಚನೆಗಳು ಒಂದಕ್ಕೊಂದು ಅಂಟಿಕೊಂಡು ಕಾಗದದ ಹಾಳೆಯ ಆಕಾರದ ರಚನೆಗಳು (ಪತ್ರಗಳು) ನಿರ್ಮಾಣಗೊಳ್ಳುತ್ತವೆ. ಪ್ರತಿ ಹಾಳೆಯು ಮೂರು ಇಲ್ಲವೇ ನಾಲ್ಕ ಆಮ್ಲಜನಕಗಳ ಅಯಾನ್‌ಗಳಷ್ಟು ದಪ್ಪವಾಗಿರುವುದು ಸಾಮಾನ್ಯ. ಪ್ರತಿ ಹಾಳೆಯ ನಿರ್ಮಾಣದಲ್ಲಿ ಚತುರ್ಮುಖಿ ಇಲ್ಲವೇ ಅಷ್ಟಮುಖಿಗಳು ಅಪಾರ ಸಂಖ್ಯೆಯಲ್ಲಿ ಸೇರಿರುತ್ತವೆ.

ಮೇಲೆ ಹೇಳಿದ ಚತುರ್ಮುಖಿ ಮತ್ತು ಅಷ್ಟಮುಖಿ ಹಾಳೆಗಳು ವಿವಿಧ ಪ್ರಮಾಣದಲ್ಲಿ ಸಂಯೋಜನೆಗೊಂಡವೆಂದರೆ ವಿಭಿನ್ನ ಗುಣಧರ್ಮಗಳ ಅಲ್ಯೂಮಿನೋ ಸಿಲಿಕೇಟ್ ಖನಿಜಗಳು ನಿರ್ಮಾಣಗೊಳ್ಳುತ್ತವೆ. ಮಣ್ಣಿನ ಉತ್ಪಾದಕತೆಯ ಮೇಲೆ ಪ್ರಭಾವವನ್ನು ಬೀರುವ ಕೆಲವು ಅಲ್ಯೂಮಿನೋ ಸಿಲಿಕೇಟ್ ಖನಿಜಗಳ ವಿವರಗಳು ಕೆಳಗಿನಂತಿವೆ;

: ಸಮ ಪ್ರಮಾಣದ ಸಿಲಿಕೇಟ್ ಖನಿಜಗಳು : ಕೆಓಲಿನೈಟ್, ಹ್ಯಾಲ್ಲೋಯೀಸೈಟ್, ಆನಾಕ್ಸೈಟ್, ನ್ಯಾಕ್ಸೈಟ್, ಡಿಕೈಟ್, ಇತ್ಯಾದಿ ಸಿಲಿಕೇಟ್ ಖನಿಜಗಳು ೧:೧ ಖನಿಜದ ಗುಂಪಿಗೆ ಸೇರಿವೆ. ಇವುಗಳಲ್ಲಿ ಕೆಓಲಿನೈಟ್ ಖನಿಜವು ಮಣ್ಣಿನ ನಿರ್ವಹಣೆಯ ದೃಷ್ಟಿಯಿಂದ ಹೆಚ್ಚು ಮಹತ್ವವನ್ನು ಪಡೆದಿವೆ.

ಕೆಓಲಿನೈಟ್

[A14 Si4 O10 (OH)8] ಕೆ ಓಲಿನೈಟ್ ಮತ್ತು ಈ ಗುಂಪಿಗೆ ಸೇರಿದ ಇತರೆ ಖನಿಜಗಳಲ್ಲಿ ಒಂದು ಸಿಲಿಕಾ ಹಾಳೆಯೊಡನೆ (ಚತುರ್ಮುಖಿ ಪತ್ರದೊಡನೆ) ಒಂದು ಅಲ್ಯೂಮಿನಾ ಹಾಳೆಯು (ಅಷ್ಟಮುಖಿ ಹಾಳೆಯು) ಸಂಯೋಜನೆಗೊಂಡು ಖನಿಜದ ಒಂದು ಪದರು ನಿರ್ಮಾಣಗೊಳ್ಳುವುದರಿಂದ ಈ ಖನಿಜಗಳಿಗೆ ೧:೧ ಪ್ರಮಾಣದ ಸಿಲಿಕೇಟ್ ಖನಿಜಗಳೆಂದು ಹೆಸರು ಬಂದಿದೆ. ಹಾಳೆಯೊಳಗಿರುವ ಸಿಲಿಕಾನ್‌ ಮತ್ತು ಅಲ್ಯೂಮಿನಿಯಂ ಅಣುಗಳೊಡನೆ ಆಮ್ಲಜನಕ ಅಣು ಸಂಪರ್ಕವನ್ನು ಹೊಂದಿ ಸಿಲಿಕಾ ಮತ್ತು ಅಲ್ಯೂಮಿನಾ ಹಾಳೆಗಳನ್ನು ಬಂಧಿಸಿಡುತ್ತದೆ. ಖನಿಜದ ಪದರುಗಳನ್ನು ಆಮ್ಲಜನಕ ಹೈಡ್ರಾಕ್ಸಿಲ್ ಬಂಧವು ಅತಿ ಬಿಗಿಯಾಗಿ ಬಂಧಿಸುವುದರಿಂದ ಪದರುಗಳು ಸರಿದಾಡುವುದಿಲ್ಲ.

ಗುಣಧರ್ಮಗಳು :

(i)                    ಪದರುಗಳು ಬಿಗಿಯಾಗಿ ಬಂಧಿತವಾಗಿರುವುದರಿಂದ, ಅವುಗಳ ಮಧ್ಯದಲ್ಲಿ ನೀರಿನ ಕಣಗಳಾಗಲೀ, ಧನ ಅಯಾನ್‌ಗಳಾಗಲೀ, ಸೇರಲಾರವು. ಈ ಖನಿಜಗಳು ನೀರನ್ನು ಹೀರಿಕೊಂಡು ಉಬ್ಬುವುದಿಲ್ಲ. ಮತ್ತು ಒಣಗಿದಾಗ ಕುಗ್ಗುವುದಿಲ್ಲ.

(ii)                  ಕೆಓಲಿನೈಟ್ ಖನಿಜದ ಕಣಗಳೂ “ಷಟ್ಕೋನಾಕಾರದಲ್ಲಿರುವ ಸ್ಪಟಿಕ” ಎಂದು ಎಲೆಕ್ಟ್ರಾನ್‌ ಸೂಕ್ಷ್ಮದರ್ಶಕದಿಂದ ಗೊತ್ತಾಗಿದೆ.

(iii)                ಖನಿಜದ ಕಣಗಳು ಗಾತ್ರದಲ್ಲಿ ದೊಡ್ಡ ಎರೆ ಕಣದಷ್ಟಿರುತ್ತವೆ (೦.೧ ರಿಂದ ೫ ಮಿಲಿ ಮೈಕ್ರಾನ್‌ವ್ಯಾಸ್) . ಆದರೆ ಬಹಳಷ್ಟು ಕಣಗಳ ವ್ಯಾಸವು ೦.೨ – ೨ ಮಿಲಿ ಮೈಕ್ರಾನ್‌ನಷ್ಟಿದೆ.

(iv)                ಎರಡು ಪದರುಗಳ ಮಧ್ಯದ ಅಂತರವು 7.2 A (ಆಂಗ್‌ಸ್ಟ್ರಮ್) ಇದೆಯೆಂದು ಗೊತ್ತಾಗಿದೆ.

(v)                  ಕಣಗಳು ಅರ್ದ್ರಗೊಂಡಾಗ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.

(vi)                ಪದರಿನ ಎರಡು ಹಾಳೆಗಳಲ್ಲಿರುವ ಧನ ಮತ್ತು ಋಣ ಚಾರ್ಜ್‌ಗಳು ಸಂಖ್ಯೆಯಲ್ಲಿ ಸಮವಾಗಿವೆ.ಹೀಗಾಗಿ ಒಂಟಿಯಾದ ಧನ ಇಲ್ಲವೇ ಋಣ ಚಾರ್ಜ್‌ಗಳು ಈ ಖನಿಜದ ಮೇಲೆ ಇರುವುದಿಲ್ಲ.ಆದರೆ ಹಾಳೆಗಳ ಅಂಚಿನಲ್ಲಿ ಕೆಲವು ಋಣ ಚಾರ್ಜ್‌ಗಳು ಒಂಟಿಯಾಗಿರುತ್ತವೆಯಾದ್ದರಿಂದ ಕೆಓಲಿನೈಟ್ ಖನಿಜವು ಕೆಲವು ಧನ ಅಯಾನ್‌ಗಳನ್ನು ಆಕರ್ಷಿಸುತ್ತದೆ. ಧನ ಅಯಾನ್‌ಖನಿಜಗಳಿಗೆ ಹೋಲಿಸಿದಾಗ ಈ ಸಾಮರ್ಥ್ಯವು ಅತಿ ಕಡಮೆ ಎನ್ನಬಹುದು.

(vii)        ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ನಿರ್ಮಾಣಗೊಂಡ ಮಣ್ಣಿನಲ್ಲಿ ಕೆಓಲಿನೈಟ್ ಖನಿಜವು ಹೇರಳವಾಗಿರುವುದರಿಂದ ಇಲ್ಲಿಯ ಮಣ್ಣಿನ ಮೇಲೆ ಈ ಖನಿಜದ ಪ್ರಭಾವವು ಎದ್ದು ಕಾಣುತ್ತದೆ. ಈ ಮಣ್ಣುಗಳು ಹುಸಿಯಾದಾಗ ಉಬ್ಬುವುದಿಲ್ಲ. ಬೆಸಾಯ ಉಪಕರಣಗೋಳಿಗಾಗಲೀ, ಅದರಲ್ಲಿ ಕೆಲಸವನ್ನು ಮಾಡುವ ಜನ ಇಲ್ಲವೇ ಪ್ರಾಣಿಗಳಿಗಾಗಲೀ ಅಂಟಿಕೊಳ್ಳುವುದಿಲ್ಲ. ಮಣ್ಣು ಒಣಗಿದಾಗ ಬಿರುಕುಗಳು ಕಾಣಿಸಿಕೊಳ್ಳುವುದಿಲ್ಲ. ಮಣ್ಣಿನ ಜಲಧಾರಣಾ ಸಾಮರ್ಥ್ಯವು ಕಡಮೆ, ಧನ ಅಯಾನ್‌ಗಳನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಕೆಳಮಟ್ಟದಲ್ಲಿದೆ. ಆದ್ದರಿಂದ ಈ ಮಣ್ಣಿನ ಫಲವತ್ತತೆಯು ಕಡಮೆ.

: ಪ್ರಮಾಣದಲ್ಲಿ ಸಿಲಿಕೇಟ್ ಖನಿಜಗಳು : ಎರಡು ಸಿಲಿಕಾ ಹಾಳೆಗಳ (ಚತುರ್ಮುಖಿ) ಮಧ್ಯದಲ್ಲಿ ಒಂದು ಅಲ್ಯೂಮಿನಾ ಹಾಳೆಯು (ಅಷ್ಟಮುಖಿ) ಸೇರಿಕೊಂಡು . ಒಂದು ಒಂದು ಪದರು ನಿರ್ಮಾಣಗೊಂಡಿರುತ್ತದೆ. ಈ ಹಾಳೆಗಳು ಆಮ್ಲಜನಕದ ಅಣುವಿನಿಂದ ಬಿಗಿಯಾಗಿ ಬಂಧಿತವಾಗಿರುತ್ತದೆ. ಪ್ರತಿ ಪದರಿನಲ್ಲಿ ಎರಡು ಸಿಲಿಕಾ ಹಾಳೆ ಮತ್ತು ಒಂದು ಅಲ್ಯೂಮಿನಾ ಹಾಳೆ ಇರುವುದರಿಂದ ಇಂತಹ ಪದರುಗಳಿಂದ ನಿರ್ಮಾಣಗೊಂಡ ಸಿಲಿಕೇಟ್ ಖನಿಜಗಳಿಗೆ ೨:೧ ಪ್ರಮಾಣದಲ್ಲಿ ಖನಿಜಗಳೆಂದು ಹೆಸರಿಸಲಾಗಿದೆ.

ಮೇಲೆ ಹೇಳಿದ ೨:೧ ಪ್ರಮಾಣದಲ್ಲಿ ಖನಿಜಗಳಲ್ಲಿರುವ ಪದರುಗಳನ್ನು ಆಮ್ಲಜನಕ ಅಣುಗಳು ಸಡಿಲವಾಗಿ ಹಿಡಿದುಕೊಂಡಿರುತ್ತವೆ. ಆದ್ದರಿಂದಲೇ ನೀರಿನಕಣಗಳು ಪದರುಗಳ ಮಧ್ಯದಲ್ಲಿ ಸುಲಭವಾಗಿ ಸೇರಿಕೊಂಡು ಪದರುಗಳು ದೂರ ಸರಿಯುವಂತೆ ಮಾಡುತ್ತವೆಯಲ್ಲದೇ ಈ ಗುಂಪಿನ ಖನಿಜಗಳು ಸುಲಭವಾಗಿ ತುಂಡುಗಳಾಗುವುದರಿಂದ ಪ್ರತಿ ಕಣವೂ ಆಕಾರದಲ್ಲಿ ಕೆಓಲಿನೈಟ್ ಖನಿಜಹದ ಕಣಗಳಿಗಿಂತ ಬಹಳ ಸಣ್ಣದಾಗಿರುತ್ತದೆ.

ಮೊಂಟ್‌ಮೋರಿಲ್ಲೋನೈಟ್, ವರ್ಮಿಕ್ಯುಲೈಟ್ ಮತ್ತು ಇಲ್ಲೈಟ್ ಇವು ೨:೧ ಪ್ರಮಾಣದ ಸಿಲಿಕೇಟ್ ಖನಿಜಗಳಲ್ಲಿ ಮುಖ್ಯವಾದವೆನ್ನಬಹುದು. ಮೊಂಟ್‌ಮೋರಿಲ್ಲೋನೈಟ ಇದು ಸ್ಮೆಕ್ಟೈಟ್ ಎಂಬ ಗುಂಪಿಗೆ ಸೇರಿದ ಪ್ರಮುಖ ಖನಿಜ. ಈ ಖನಿಜವಲ್ಲದೇ ಬೀಡೆಲೈಟ್, ನಾಂಟ್ರೋನೈಟ್ ಮತ್ತು ಸ್ಯಾಪೋನೈಟ್ ಎಂಬ ಖನಿಜಗಳು ಸಹ ಈ ಗುಂಪಿಗೆ ಸೇರಿವೆ. ಮೋಂಟ್‌ಮೊರಿಲ್ಲೋನೈಟ್, ವರ್ಮಿಕ್ಯುಲೇಟ್ ಮತ್ತು ಇಲ್ಲೈಟ್ ಖನಿಜಗಳು ಮತ್ತು ಅವುಗಳ ಪ್ರಾಬಲ್ಯವಿರುವ ಮಣ್ಣಿನ ಗುಣಧರ್ಮಗಳು ಈ ಕೆಳಗಿನಂತಿವೆ.

. ಮೋಂಟ್‌ಮೊರಿಲ್ಲೋನೈಟ್

(i) ಈಗಾಗಲೇ ತಿಳಿಯಪಡಿಸಿದಂತಹ ಖನಿಜದ ಪದರುಗಳನ್ನು ಜೋಡಿಸಿದ ಆಮ್ಲಜನಕ ಬಂಧವು ಅತಿದುರ್ಬಲವಾಗಿರುವುದರಿಂದ ನೀರಿನ ಕಣಗಳೂ, ಪದರುಗಳ ಮಧ್ಯದಲ್ಲಿ ಅನಿರ್ಬಂಧವಾಗಿ ಪ್ರವೇಶಿಸಿ ಹೊರಗೆ ಬರಬಲ್ಲವು. ನೀರಿನ ಕಣಗಳು ಒಳ ಸೇರಿದಾಗ ಪದರುಗಳು ದೂರ ಸರಿದು ಕಣಗಳು ಉಬ್ಬುತ್ತವೆ. ನೀರು ಹೊರ ಬಂದುಕಣಗಳು ಒಣಗಿದವೆಂದರೆ ಪದರುಗಳು ಹತ್ತಿರ ಬರುತ್ತವೆ.

(ii) ಮೇಲೆ ಹೇಳಿದ ಕುಗ್ಗುವಿಕೆ ಮತ್ತು ಹಿಗ್ಗುವಿಕೆ ಸದಾ ಸಾಗುತ್ತದೆಯಾದ್ದರಿಂದ ಎರಡು ಪದರುಗಳ ಮಧ್ಯದ ಅಂತರವು ಕಣಗಳು ಒಣಗಿದಾಗ 9.6 A0 ಇದ್ದರೆ, ಕಣಗಳು ಹಸಿಯಾದಾಗ ಈ ಅಂತರವು 21.4 A0 ಅಥವಾ ಅದಕ್ಕಿಂತ ಸ್ವಲ್ಪ ಅಧಿಕವಾಗುತ್ತದೆಯೆಂದು ಕಂಡುಬಂದಿದೆ.

(iii) ಕಣದ ಗಾತ್ರವು ಕೆಓಲಿನೈಟ್ ಖನಿಜದ ಕಣಕ್ಕಿಂತ ಅತಿ ಕಡಮೆ. ಪ್ರತಿ ಕಣದ ವ್ಯಸವು ೦.೦೧ – ೧ ಮಿಲಿಮೈಕ್ರಾನ್‌ನಷ್ಟಿದೆ.

(iv) ಪ್ರಸರಣ ಹೊಂದುವ ಸ್ವಭಾವ ಮತ್ತು ಅತಿ ಸೂಕ್ಷ್ಮ ಕಾರಗಳಿಂದಾಗಿ, ಹೊರ ಮೈ ಮತ್ತು ಒಳಮೈಗಳ ಕ್ಷೇತ್ರವು ಬಹು ವಿಶಾಲವಾಗಿರುತ್ತದೆ (ಇವೆರಡಲ್ಲಿ ಒಳಮೈ ಕ್ಷೇತ್ರವೇ ಅಧಿಕವಾಗಿದೆ). ಉದಾಹರಣೆಗೆ, ಒಂದು ಗ್ರಾಂ ತೂಕದ ಮೋಂಟ್‌ಮೋರಿಲ್ಲೋನೈಟ್ ಖನಿಜದ ಒಟ್ಟು ಕ್ಷೇತ್ರವು ೭೦೦ ರಿಂದ ೮೦೦ ಚ.ಮೀ. ಇದ್ದರೆ ಅಷ್ಟೇ ತೂಕದ (ಒಂದು ಗ್ರಾಂ ತೂಕದ ) ಕೆಓಲಿನೈಟ್ ಖನಿಜದ ಒಟ್ಟು ಕ್ಷೇತ್ರವು ಕೇವಲ ೫ ರಿಂದ ೨೦ ಚ.ಮೀ. ಮಾತ್ರವಿರುತ್ತದೆ.

(v) ಸಮಾನ ಆಕಾರದ ಧನ ಅಯಾನ್‌ಗಳು ಹಾಳೆಗಳ ರಚನೆಯಲ್ಲಿರುವ ಧನಯಾನ್‌ನೊಡನೆ ಸ್ಥಾನಪಲ್ಲಟ ಮಾಡಿಕೊಳ್ಳುವ ಕ್ರಿಯೆಯು ಈ ಖನಿಜಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಉದಾಹರಣೆಗೆ, ಚತುಮುರ್ಖಿ ರಚನೆಯಲ್ಲಿರುವ ನಾಲ್ಕು ಧನ ಚಾರ್ಜ್‌ಗಳ ಸಿಲಿಕಾನ್‌ ಅಯಾನನ್ನು ಮೂರು ಧನ ಚಾರ್ಜ್‌ಗಳಿರುವ ಅಲ್ಯೂಮಿನಿಯಂ ಅಯಾನ್‌ ಹೊರ ಹಾಕಿ ತಾನು ಆ ಸ್ಥಳವನ್ನು ಆಕ್ರಮಿಸುತ್ತದೆ. ಹೀಗಾಗಿ ಪ್ರತಿ ಅಲ್ಯೂಮಿನಿಯಂ ಅಯಾನ್‌ನ ಪ್ರವೇಶದಿಂದ ಒಂದು ಋಣ ಚಾರ್ಜ್ ಒಂಟಿಯಾಗುತ್ತದೆ.

(vi) ಅಷ್ಟಮುಖಿ ರಚನೆಗಳಲ್ಲಿ ಮೇಲೆ ವರ್ಣಿಸಿದ ಸ್ಥಾನ ಪಲ್ಲಟ ಕ್ರಿಯೆಯು ಅಧಿಕ ಸಂಖ್ಯೆಯಲ್ಲಿ ನಡೆಯುವುದರಿಂದ ಈ ಕಾರ್ಯದಿಂದ ಒಂಟಿಯಾಗುವ ಋಣ ಚಾರ್ಜ್‌ಗಳ ಸಂಖ್ಯೆಯು ಅಧಿಕವಾಗಿರುತ್ತದೆ. ಅಷ್ಟಮುಖಿಯಲ್ಲಿ ಸಾಮಾನ್ಯವಾಗಿ ಇರುವ ಅಲ್ಯೂಮಿನಿಯಂನ ಸ್ಥಾನವನ್ನು, ಮೆಗ್ನೀಸಿಯಂ ಆಕ್ರಮಿಸುತ್ತದೆ. ಇದರಿಂದ, ಒಂದು ಋಣ ಚಾರ್ಜ್‌ ಒಂಟಿಯಾಗುತ್ತದೆ.

(vii) ಮೇಲೆ ಸೂಚಿಸಿದ ಎರಡೂ ಬಗೆಯ ಖನಿಜವು ಋಣ ಚಾರ್ಜ್‌ಗಳನ್ನು ಹೊಂದುವಂತಾಗುತ್ತದೆ. ಈ ಋಣ ಚಾರ್ಜ್‌ಗಳು ಕ್ಯಾಲ್ಸಿಯಂ, ಮೆಗ್ನಿಷಿಯಂ, ಪೋಟ್ಯಾಷಿಯಂ ಮುಂತಾದ ಧನ ಅಯಾನ್‌ಗಳನ್ನು ಆಕರ್ಷಿಸಿ ಖನಿಜದ ಮೇಲೆ ಹಿಡಿದಿಟ್ಟುಕೊಂಡಿರುತ್ತವೆ. ಸಸ್ಯಗಳಿಗೆ ಪೋಷಕಗಳನ್ನು ಪೂರೈಸುವ ದೃಷ್ಟಿಯಿಂದ ಇದೊಂದು ಬಹು ಮಹತ್ವದ ಸಂಗತಿಯೆನ್ನಬಹುದು.

(viii) ಮೊಂಟ್‌ಮೊರಿಲ್ಲೋನೈಟ್ ಕಣಗಳು ನೀರಿನ ಸಾನ್ನಿಧ್ಯದಲ್ಲಿ ಜಿಗುಟಾಗಿದ್ದು ಕಣಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಒಣಗಿದವೆಂದರೆ ಕಣಗಳು ಒರಟಾಗುತ್ತವೆ ಹಾಗೂ ಬೇರ್ಪಡುತ್ತವೆ.

(ix) ಕಡಮೆ ಮಳೆ ಬೀಳುವ ಪ್ರದೇಶದ ಮಣ್ಣಿನಲ್ಲಿ ಮೊಂಟ್‌ಮೊರಿಲ್ಲೋನೈಟ್ ಖನಿಜವು ಕಂಡುಬರುತ್ತದೆ. ಈ ಖನಿಜದ ಪ್ರಾಬಲ್ಯವಿರುವ ಮಣ್ಣಿಗೆ ನೀರು ದೊರೆತರೆ ಉಬ್ಬುತ್ತದೆ. ಇಂತಹ ಮಣ್ಣು ಅತಿ ಹಸಿ ಇರುವಾಗ ಅದರಲ್ಲಿ ಕೆಲಸ ಮಾಡುವ ಜನರ ಮತ್ತು ಪ್ರಾಣಿಗಳ ಕಾಲುಗಳಿಗೆ ಹಾಗೂ ಉಪಕರಣಗಳಿಗೆ ಅಂಟಿಕೊಳ್ಳುತ್ತವೆ. ಮಣ್ಣು ಒಣಗಿತೆಂದರೆ ಭೂಮಿಯಲ್ಲಿ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಉಳುಮೆ ಮಾಡಿದರೆ ದೊಡ್ಡ ಮತ್ತು ಬಿರುಸಾದ ಹೆಂಟೆಗಳು ಎದ್ದು ಬರುತ್ತವೆ. ಆದ್ದರಿಂದ ಇಂತಹ ಮಣ್ಣಿನಲ್ಲಿ ಬೇಸಾಯ ಕಾರ್ಯಗಳನ್ನು ಮಾಡುವ ಸಮಯವನ್ನು ಬಹು ಜಾಣ್ಮೆಯಿಂದ ಹೊಂದಾಣಿಕೆ ಮಾಡಿಕೊಳ್ಳಬೇಕು.

(x) ಈ ಖನಿಜವು ಸಸ್ಯಗಳಿಗೆ ಅವಶ್ಯವಿರುವ ಹಲವು ಪೋಷಕಾಂಶಗಳನ್ನು ತನ್ನ ಕಣಗಳ ಮೇಲೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಈ ಖನಿಜದ ಪ್ರಾಬಲ್ಯವಿರುವ ಮಣ್ಣು ಹೆಚ್ಚು ಫಲವತ್ತಾಗಿರುತ್ತದೆ.

.ವರ್ಮಿಕ್ಯುಲೈಟ್ :

ವರ್ಮಿಕ್ಯೂಲೈಟ್ ಖನಿಜದ ಕೆಲವು ವೈಶಿಷ್ಟ್ಯಗಳು ಕೆಳಗಿನಂತಿವೆ:

೧. ವರ್ಮಿಕ್ಯೂಲೈಟ್ ಖನಿಜವು ಸಹ ೨:೧ ಪ್ರಮಾಣದ ಖನಿಜಗಳ ಗುಂಪಿಗೆ ಸೇರಿದೆ. ಆದ್ದರಿಂದ ಎರಡು ಚತುರ್ಮುಖಿಗಳ ರಚನೆಗಳ ಮಧ್ಯದಲ್ಲಿ ಒಂದು ಅಷ್ಟಮುಖಿ ರಚನೆ ಸೇರಿಕೊಂಡಿರುತ್ತದೆ. ಆದರೆ ಎರಡು ಪದರುಗಳು ತುಲನಾತ್ಮಕವಾಗಿ ಹೆಚ್ಚು ಬಿಗಿಯಾಗಿ ಬಂಧಿತವಾಗಿರುವುದರಿಂದ ಮೊಂಟ್‌ಮೋರಿಲ್ಲೋನೈಟ್‌ನ ಪದರುಗಳಂತೆ ಸುಲಭವಾಗಿ ಚಲಿಸುವುದಿಲ್ಲ. ಹೀಗಾಗಿ ಮೊಂಟ್‌ಮೊರಿಲ್ಲೋನೈಟ್‌ನಷ್ಟು ಅಕುಂಚನ – ಪ್ರಸರಣಗೊಳ್ಳುವುದಿಲ್ಲ. ಆದಾಗ್ಯೂ ಕೆಓಲಿನೈಟ್ ಖನಿಜಕ್ಕಿಂತ ಅಧಿಕ ಪ್ರಮಾಣದಲ್ಲಿ ಹಿಗ್ಗುತ್ತದೆ. ಮತ್ತು ಕುಗ್ಗುತ್ತದೆ.

೨. ವರ್ಮಿಕ್ಯೂಲೈಟ್ ಖನಿಜದ ಅಷ್ಟಮುಖಿ ರಚನಾಂಗದಲ್ಲಿ ಅಲ್ಯೂಮಿನಿಯಂನ ಅಯಾನುಗಳಿರುವುದೇ ಸಾಮಾನ್ಯ. ಆದರೆ ಇದರ ಬದಲು ಮೆಗ್ನೀಷಿಯಂ ಅಯಾನುಗಳ ಪ್ರಾಬಲ್ಯವಿರುವ ವರ್ಮಿಕ್ಯೂಲೈಟ್ ಖನಿಜಗಳಿರುವುದು ಅಸಹವೇಜನಲ್ಲ.

೩. ಚತುರ್ಮುಖಿ ರಚನೆಗಳಲ್ಲಿ ಮಾತ್ರ ಸಿಲಿಕಾನ್‌ ಅಯಾನುಗಳನ್ನು ಹೊರ ಹಾಕಿ ಅಲ್ಯೂಮಿನಿಯಂ ಅಯಾನುಗಳು ಸ್ಥಾನಪಲ್ಲಟವಾಗಿರುವುದನ್ನು ಎಲ್ಲೆಡೆ ಕಾಣಬಹುದು. ಹೀಗಾಗಿ ಖನಿಜದಲ್ಲಿ ಒಂಟಿ ಋಣ ಚಾರ್ಜ್‌ಗಳು ಅಧಿಕ ಸಂಖ್ಯೆಯಲ್ಲಿರುತ್ತವೆ.

೪. ಧನ ಅಯಾನುಗಳ ವಿನಿಮಯ ಸಾಮರ್ಥ್ಯವು ಮೊಂಟ್‌ಮೊರಿಲ್ಲೋನೈಟ್ ಖನಿಜಗಳಿಗಿಂತ ಅಧಿಕವಾಗಿರುತ್ತದೆ.

೫. ವರ್ಮಿಕ್ಯುಲೈಟ್ ಕಣಗಳು ಮೊಂಟ್‌ಮೊರಿಲ್ಲೋನೈಟ್ ಕಣಗಳಿಗಿಂತ ಆಕಾರದಲ್ಲಿ ದೊಡ್ಡವು. ಆದರೆ ಕೆಓಲಿನೈಟ್ ಕಣಗಳಿಗಿಂತ ಚಿಕ್ಕವು. ಕೆಓಲಿನೈಟ್ ಮತ್ತು ಮೊಂಟ್‌ಮೊರಿಲ್ಲೋನೈಟ್ ಖನಿಜಗಳಿಗಿಂತ ವರ್ಮಿಕ್ಯೂಲೈಟ್ ಖನಿಜಗಳು ವಾಸ್ತವದಲ್ಲಿ ಅತಿ ವಿರಳ. ಹೊಸದಾಗಿ ಖನಿಜಗಳು ರಚನೆಯಾಗುವ ಸಮಯದಲ್ಲಿ ಮೆಗ್ನೀಸಿಯಂ ದೊಡ್ಡ ಪ್ರಮಾಣದಲ್ಲಿದ್ದಾಗ ವರ್ಮಿಕ್ಯುಲೈಟ್ ಖನಿಜವು ನಿರ್ಮಾಣವಾಗುತ್ತದೆ.

. ಇಲ್ಲೈಟ್:

ಇಲ್ಲೈಟ್ ಸಹ ೨:೧ ಪ್ರಕಾರದ ಖನಿಜಗಳ ಗುಂಪಿಗೆ ಸೇರಿವೆ. ಈ ಖನಿಜದ ಪ್ರಮುಖ ಗುಣಧರ್ಮಗಳು ಕೆಳಗಿನಂತಿವೆ:

೧. ಇಲ್ಲೈಟ್ ಖನಿಜವು, ಮಸ್ಕೋವೈಟ್ ಎಂಬ ಮೂಲ ಖನಿಜದ ಪರಿವರ್ತಿತ ರೂಪವೆನ್ನಬಹುದು. ಆದರೆ ಮೂಲ ಖನಿಜಕ್ಕಿಂತ ಇದು ಆಕಾರದಲ್ಲಿ ಚಿಕ್ಕದಾಗಿರುತ್ತದೆ.

೨. ಇಲ್ಲೈಟ್ ಖನಿಜದ ಚತುರ್ಮುಖಿ ರಚನೆಗಳಲ್ಲಿ ಸುಮಾರು ಕಾಲುಭಾಗದಷ್ಟಿರಲಿ, ಸಿಲಿಕಾನ್‌ ಅಯಾನುಗಳು ಸ್ಥಾನಪಲ್ಲಟಗೊಂಡು ಅಲ್ಲಿ ಅಲ್ಯೂಮಿಯಂ ಅಯಾನುಗಳು ಬಂದು ಸೇರುತ್ತವೆ. ಹೀಗಾಗಿ ಒಂಟಿ ಋಣ ಚಾರ್ಜ್‌ಗಳ ಸಂಖ್ಯೆಯು ಅಧಿಕವಾಗಿರುತ್ತದೆ.

೩. ಎರಡು ಪದರಗುಳ ಮಧ್ಯದಲ್ಲಿ ಪೋಟ್ಯಾಸಿಯಂ ಅಯಾನುಗಳು ಭದ್ರವಾಗಿ ಕುಳಿತಿರುವುದರಿಂದ ಪದರುಗಳ ಅನಿರ್ಬಂಧ ಚಲನೆಗೆ ಆತಂಕವುಂಟಾಗುತ್ತದೆ. ಆದ್ದರಿಂದ ಇಲ್ಲೈಟ್ ಖನಿಜದಲ್ಲಿ ಪದರುಗಳ ಅಕುಂಚನ – ಪ್ರಸರಣ ಕ್ರಿಯೆಗಳು ಅತಿ ಕಡಮೆ.

೪. ಪದರುಗಳ ಮಧ್ಯದಲ್ಲಿ ಪೋಟ್ಯಾಸಿಯಂ ಅಯಾನ್‌ಗಳು ಭದ್ರವಾಗಿ ನೆಲೆಸಿರುವುದರಿಂದ, ಈ ಪೋಷಕವು ಸಸ್ಯಗಳಿಗೆ ಸುಲಭವಾಗಿ ದೊರೆಯುವುದಿಲ್ಲ. ಇಲ್ಲೈಟ್ ಖನಿಜವು ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಂದ ಸವಕಳಿಯನ್ನು ಹೊಂದಿದಾಗ ಮಾತ್ರ ಪೋಟ್ಯಾಸಿಯಂ ಬಿಡುಗಡೆಗೊಂಡು ಸಸ್ಯಗಳಿಗೆ ಸಿಗುವಂತಾಗುತ್ತದೆ.

: : ಪ್ರಮಾಣದಸಿಲಿಕೇಟ್ಖನಿಜಗಳು :

ಕ್ಲೋರೈಟ್ ಎಂಬ ಖನಿಜವು ೨ : ೧ : ೧ ಪ್ರಕಾರದ ಖನಿಜದ ಪ್ರತಿನಿಧಿ ಎನ್ನಬಹುದು. ಇದನ್ನು ಅಲ್ಪ ಪ್ರಮಾಣದಲ್ಲಿ ಅಲ್ಯೂಮಿನಿಯಂ ಇರುವ ಕಬ್ಬಿಣ ಮತ್ತು ಮೆಗ್ನೀಷಿಯಂ ಸಿಲಿಕೆಟ್ ಎನ್ನಬಹುದು. ಈ ಖನಿಜದ ಗುಣಧರ್ಮಗಳು ಕೆಳಗಿನಂತಿವೆ.

೧. ವರ್ಮಿಕ್ಯಲೈಟ್ ಅಥವಾ ಇನ್ನಿತರ ೨:೧ ಪ್ರಮಾಣದ ಸಿಲಿಕೇಟ್ ಖನಿಜಗಳಲ್ಲಿರುವಂತೆ ೨ ಚತುರ್ಮುಖಿ ಹಾಳೆಗಳ ಮಧ್ಯದಲ್ಲಿ ಒಂದು ಅಷ್ಟಮುಖಿ ಹಾಳೆಯಿರುತ್ತದೆ. ಈ ಅಷ್ಟಮುಖಿ ಹಾಳೆಯಲ್ಲಿ ಇರುವ ರಚನೆಗಳಲ್ಲಿ ಅಲ್ಯೂಮಿಯಂ ಅಯಾನುಗಳು ಬದಲು ಮೆಗ್ನೀಸಿಯಂ ಅಯಾನುಗಳ ಪ್ರಾಬಲ್ಯವಿರುತ್ತದೆ. ಈ ಹಾಳೆಯ ನಂತರ ಮೆಗ್ನೀಸಿಯಂ ಪ್ರಾಬಲ್ಯವಿರುವ ಇನ್ನೊಂದು ಅಷ್ಟಮುಖಿ ಹಾಳೆ ಸೇರಿ ಕ್ಲೋರೈಟ್‌ನ ಒಂದು ಪದರು ನಿರ್ಮಾಣವಾಗುತ್ತದೆ.

೨. ಮೇಲಿನ ವಿವರಣೆಗಳಿಂದ ಕ್ಲೋರೈಟ್ ಖನಿಜದ ಪ್ರತಿ ಪದರಿನಲ್ಲಿ ಎರಡು ಚತುರ್ಮುಖಿ ಹಾಳೆಗಳು ಮತ್ತು ಮೆಗ್ನೀಸಿಯಂ ಪ್ರಾಬಲ್ಯವಿರುವ ಎರಡು ಅಷ್ಟಮುಖಿ ಹಾಳೆಗಳು ಇದ್ದಂತಾಯಿತು.ಆದ್ದರಿಂದ ಕ್ಲೋರೈಟ್ ಖನಿಜವನ್ನು ೨ : ೧ : ೧ ಅಥವಾ ೨ : ೨ ಪ್ರಮಾಣದ ಸಿಲಿಕೆಟ್ ಖನಿಜವೆಂದು ಕರೆಯುತ್ತಾರೆ.

೩) ಕ್ಲೋರೈಟ್ ಖನಿಜದ ಮೇಲೆ ಒಂಟಿಯಾಗಿರುವ ಋಣ ಚಾರ್ಜ್‌ಗಳ ಸಂಖ್ಯೆಯು ಮೋಂಟ್‌ ಮೊರಿಲ್ಲೋನೈಟ್ ಅಥವಾ ವರ್ಮಿಕ್ಯಲೈಟ್ ಖನಿಜಗಳಿಗಿಂತ ಕಡಮೆ.

೪) ಕ್ಲೋರೈಟ್ ಪದರುಗಳ ಮಧ್ಯದಲ್ಲಿ ನೀರು ಸೇರಲು ಆಸ್ಪದವಿಲ್ಲ. ಪದರುಗಳು ಪ್ರಸರಣ ಹೊಂದುವುದಿಲ್ಲ.

ಸಿಲಿಕೇಟ್ ಖನಿಜಗಳ ಪ್ರಮುಖ ಗುಣಧರ್ಮಗಳನ್ನು ಕೋಷ್ಟಕ ೮ ರಲ್ಲಿ ಕೊಡಲಾಗಿದೆ.

ಕೋಷ್ಟಕ : ಸಿಲಿಕೆಟ್ ಖನಿಜಗಳ ಪ್ರಮುಖ ಗುಣಧರ್ಮಗಳು

ಅ. ಸಂ.

ಗುಣಧರ್ಮಗಳು

ಕೆಓಲಿನೈಟ್

ಮೊಂಟ್ ಮೊರಿಲ್ಲೋನೈಟ್

ವರ್ಮಿಕ್ಯುಲೈಟ್

ಇಲ್ಲೈಟ್

ಕ್ಲೋರಟ್

ಪದರುಗಳ ಪ್ರಮಾಣ

೧:೧

೨:೧

೨:೧

೨:೧

೨:೧:೧ (೨:೨)

ಗಾತ್ರ ೦.೫-೫.೦ ೦.೦೧-೧.೦ ೦.೧-೫.೦ ೦.೨-೨.೦ ೦.೧-೨.೦
(ಮಿಲಿಮೈಕ್ರಾನ್) ಆಕಾರ ಷಟ್ಕೋನದ ಸ್ಫಟಿಕಗಳು ತೆಳುವಾದ ಹಳಕುಗಳು ತೆಳುವಾದ ಫಲಕ (ತಬಲ) ತೆಳುವಾದ ಫಲಕ ವಿಬಿನ್ನ ಆಕಾರಗಳು
ಹೊರಮೈ ಕ್ಷೇತ್ರ ಚ.ಮೀ. ಪ್ರತಿ ಗ್ರಾಂ ಖನಜದಲ್ಲಿ ೧೦-೩೦ ೭೦-೧೨೦ ೫೦-೧೦೦ ೭೦-೧೦೦ ೭೦-೧೦೦
ಆಂತರಿಕ ಕ್ಷೇತ್ರ ಚ.ಮೀ. ಪ್ರತಿ ಗ್ರಾಂ ಖನಿಜದಲ್ಲಿ ೫೫೦-೬೫೦ ೫೦೦-೬೦೦
ಎರಡು ಪದರುಗಳು ಮಧ್ಯದ ಅಂತರ          
೧) nm (=10-9 ಮೀ.) ೦.೭ ೧.೦-೨.೦ ೧.೦-೧.೫ ೧.೦ ೧.೪
೨) A0 ೭.೨ ೯.೬-೨೧.೪ ೧೪-೧೫ ೧೦.೦ ೧೪.೩
ಒಂಟಿಯಾದ ಚಾರ್ಜ್ ಪ್ರತಿ ಕಿ.ಗ್ರಾಂ.ಗೆ cmol (೦.೦೧ ಮೋಲ್) ೨-೫ ೮೦-೧೨೦ ೧೦೦-೧೮೦ ೧೫-೪೦ ೧೫-೪೦
ಎರಡು ಪದರುಗಳ ಮಧ್ಯದ ಬಂಧ ಜಲಜನಕ ಆಮ್ಲಜನಕ ಮತ್ತು ವಿನಿಮಯ ಧನ ಅಯಾನುಗಳು ಮೆಗ್ನೀಸಿಯಂ ಅಯಾನುಗಳು ಪೊಟ್ಯಾಸಿಯಂ ಅಯಾನುಗಳು ಮೆಗ್ನೀಸಿಯಂ ಮತ್ತು ಅಲ್ಯೂಮಿಯಂ ಅಯಾನುಗಳು
ಪದರುಗಳ ಪ್ರಸರಣ / ಹಿಗ್ಗುವ ಸಾಮರ್ಥ್ಯ ಹಿಗ್ಗುವುದಿಲ್ಲ ಹಿಗ್ಗುತ್ತವೆ ಕೆಲಮಟ್ಟಿಗೆ ಹಿಗ್ಗುತ್ತದೆ ಹಿಗ್ಗುವುದಿಲ್ಲ ಕೆಲಮಟ್ಟಿಗೆ ಹಿಗ್ಗುತ್ತವೆ

ಸಿಲಿಕೇಟ್ ಖನಿಜಗಳು ನಿರ್ಮಾಣಗೊಳ್ಳುವ ರೀತಿ :ಹಲವು ಬಗೆಯ ಮೂಲ ಖನಿಜಗಳು ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳ ಪ್ರಭಾವಕ್ಕೆ ಸಿಕ್ಕಿ, ಸಿಲಿಕೇಟ್ ಖನಿಜಗಳು ನಿರ್ಮಾಣಗೊಳ್ಳುತ್ತವೆ. ಸಾಮಾನ್ಯವಾಗಿ ಅವು ಎರಡು ರೀತಿಯಲ್ಲಿ ನಿರ್ಮಾಣಗೊಳ್ಳುತ್ತವೆ ಎನ್ನಬಹುದು.

(i) ಅಲ್ಪ ಬದಲಾವಣೆಯಿಂದ : ಮೂಲ ಖನಿಜದಲ್ಲಿ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳು ಸ್ವಲ್ಪ ಮಟ್ಟಿಗೆ ನಡೆದು ಹೊಸ ಸಿಲಿಕೇಟ್ ಖನಿಜಗಳು ಹೊರಬರುತ್ತವೆ. ಮಸ್ಕೋವೈಟ್ ಎಂಬ ಮೂಲ ಖನಿಜವು ಅಲ್ಪ ಬದಲಾವಣೆಗೆ ಹೊಂದಿ ಜಿನುಗು ಕಣದ ಮೈಕಾ (ಇಲ್ಲೈಟ್) ನಿರ್ಮಾಣಗೊಳ್ಳುತ್ತಿರುವುದು ಇದಕ್ಕೊಂದು ಉತ್ತಮ ಉದಾಹರಣೆ ಎನ್ನಬಹುದು.

(ii) ಹೊಸದಾಗಿ ಸ್ಫಟಿಕ ರೂಪವನ್ನು ಪಡೆದು : ಈ ವಿಧಾನದಲ್ಲಿ ಮೂಲ ಖನಿಜವು ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಂದ ಛಿದ್ರಗೊಂಡು, ಹಲವು ರೀತಿಯ ಪರಿವರ್ತನೆಗಳ ನಂತರ ಹೊಸ ಖನಿಜವು ನಿರ್ಮಾಣಗೊಳ್ಳುತ್ತದೆ. ಉದಾಹರಣೆಗೆ, ಮೂಲ ಖನಿಜದಿಂದ ಹೊರಬಂದ ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ ದ್ರಾವಣದಿಂದ ೧ : ೧ರ ಸಿಲಿಕೇಟ್ ಖನಿಜವಾದ ಕೆಓಲಿನೈಟ್ ನಿರ್ಮಾಣಗೊಳ್ಳುತ್ತದೆ (ಇದಕ್ಕೆ ಸಂಬಂಧಿಸಿದ ಕೆಲವು ವಿವರಗಳು ಅಧ್ಯಾಯ ೨ರಲ್ಲಿವೆ)