ಕೋಷ್ಟಕ ೧೦: ಭಾರತದ ವಿವಿಧ ಪ್ರಕಾರಗಳ ಮಣ್ಣುಗಳಲ್ಲಿಯ ಸಾವಯವ ಇಂಗಾಲ, ಒಟ್ಟು ಸಾರಜನಕ ಮತ್ತು ಇಂಗಾಲ: ಸಾರಜನಕ ಅನುಪಾತದ ವಿವರಗಳು

ಅ. ಸಂ.

ಮಣ್ಣಿನ ಪ್ರಕಾರ

ರಸಸಾರ (pH)

ಶೇಕಡಾ ಸಾವಯವ ಇಂಗಾಲ

ಶೇಕಡಾ ಒಟ್ಟು ಸಾರಜನಕ

ಇಂಗಲ ಸಾರ ಜನಕ

ಹರಿಜಿದ ಕಪ್ಪು ಎರೆ ಮಣ್ಣು ೮.೨ ೦.೪೪೩ ೦.೦೫೬ ೭.೯
ಕೋಟಿಗಿರದ ಕಪ್ಪು ಎರೆ ಮನ್ಣು ೭.೮ ೦.೨೫೨ ೦.೦೨೭ ೯.೩
ನಾಭಾದ ರೇವೆ ಮಣ್ಣು ೭.೮ ೦.೫೧೩ ೦.೦೪೫ ೧೧.೨
ಕರ್ನಾಲದ ರೇವೆ ಮಣ್ಣು ೭.೨ ೦.೬೫೩ ೦.೦೮೩ ೭.೯
ಪೂಸಾದ ಕ್ಯಾಲ್ಸಿಯಂ ಇರುವ ರೇವೆ ಮಣ್ಣು ೮.೧ ೦.೪೪೯ ೦.೦೩೮ ೧೧.೮
ಕೊಯಮತ್ತೂರಿನ ಕೆಂಪು ಮಣ್ಣು ೫.೪ ೧.೧೬೦ ೦.೧೨೦ ೯.೭
ಉತ್ತರ ಪ್ರದೇಶದ ತರಾಯಿ ಕ್ಷೇತ್ರದ ಸಾವಯವ ಪದಾರ್ಥದ ಬಾಹುಲ್ಯವಿರು ಹೊಸ ಮಣ್ಣು ೭.೪ ೧.೫೭೦ ೦.೦೯೩ ೧೬.೯

i) ಭಾರತವು ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿರುವುದು.

ii) ಹಲವು ಶತಮಾನಗಳಿಂದ ಈ ಮಣ್ಣಿನಲ್ಲಿ ಬೇಸಾಯವನ್ನು ಮಾಡುತ್ತಾ ಬಂದಿರುವುದು.

iii) ಸಸ್ಯಜನ್ಯ ಮತ್ತು ಪ್ರಾಣಿಜನ್ಯ ವಸ್ತುಗಳನ್ನು ಪೂರ್ತಿಯಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳದಿರುವುದು.

iv) ಹಸುರು ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿಪೂರೈಸದಿರುವುದು.

v) ಸಾರಜನಕ ಮತ್ತು ಇತರೆ ಪೋಷಕಗಳನ್ನು ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು ನಿಯಮಿತವಾಗಿ ಮಣ್ಣಿಗೆ ಒದಗಿಸದಿರುವುದು.

ಭಾರತದ ಮಣ್ಣುಗಳ ಸಾವಯವ ಪದಾರ್ಥವನ್ನು ಅಧಿಕಗೊಳಿಸುವ ಸಾಧ್ಯತೆಗಳು : ಈ ಮೊದಲೇ ಸೂಚಿಸಿದಂತೆ ಬೇಸಾಯವನ್ನು ಭೂ ಪ್ರದೇಶದಲ್ಲಿ ಮೊಟ್ಟ ಮೊದಲು ಆರಂಭಿಸಿದಾಗ, ಮಣ್ಣಿನಲ್ಲಿದ್ದ ಸಾವಯವ ಪದಾರ್ಥದ ಪ್ರಮಾಣವನ್ನೇ ಕಾಯ್ದುಕೊಳ್ಳುವುದು ಬಹುತೇಕ ಸಂದರ್ಭಗಳಲ್ಲಿ ಅಸಾಧ್ಯವೆನ್ನಬಹುದು. ಸಾವಯವ ಪದಾರ್ಥವು ಮೂಲ ಪ್ರಮಾಣದಲ್ಲಿಯೇ ಉಳಿದುಕೊಳ್ಳುವಂತೆ ಪ್ರಯತ್ನಿಸುವುದು ಅನವಶ್ಯ. ಇಂತಹ ಪ್ರಯತ್ನವು ವ್ಯರ್ಥ ಖರ್ಚಿಗೆ ದಾರಿಯೆನ್ನಬಹುದು. ಆದಾಗ್ಯೂ ಸಾವಯವ ಪದಾರ್ಥವು ತೀರ ಕೆಳಮಟ್ಟವನ್ನು ಮುಟ್ಟಲು ಬಿಡುವುದೂ ಉತ್ಪಾದಕತೆಯ ದೃಷ್ಟಿಯಿಂದ ಅಪಾಯಕಾರಿ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು.

ಮಣ್ಣಿನಲ್ಲಿ ಸಾವಯವ ಪದಾರ್ಥವು ಎಷ್ಟಿರಬೇಕೆಂಬುವುದನ್ನು ಎಲ್ಲೆಡೆಗೆ ಅನ್ವಯವಾಗುವಂತೆ ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸಂಬಂಧಿಸಿದ ಪ್ರದೇಶದಲ್ಲಿರುವ ಹವಾಮಾನ, ಮಣ್ಣಿನ ಗುಣಧರ್ಮಗಳು ಇತ್ಯಾದಿಗಳನ್ನು ಪರಿಗಣಿಸಿ ಮಣ್ಣಿನಲ್ಲಿರಬೇಕಾದ ಸಾವಯವ ಪದಾರ್ಥದ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಸಾವಯವ ಪದಾರ್ಥವನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳಲು ಪ್ರಯೋಜನಕಾರಿಯಾಗಬಲ್ಲ ಕೆಲವು ಕ್ರಮಗಳು ಕೆಳಗಿನಂತಿವೆ :

i) ವಿವಿಧ ಪ್ರಕಾರದ ಮಣ್ಣುಗಳು ಮತ್ತು ಆ ಪ್ರದೇಶದ ಹವಾಮಾನ ಹಾಗೂ ಇತರೆ ವಿಷಯಗಳ ಸಮೀಕ್ಷೆಯನ್ನು ಮಾಡಿ ಬೇರೆ ಬೇರೆ ಪ್ರದೇಶಗಳಿಗೆ ಸೂಕ್ತವೆನಿಸುವ ಬೇಸಾಯ ಪದ್ಧತಿಗಳನ್ನು ಸರಕಾರವು ಸೂಚಿಸಬೇಕು.

ii) ಸಸ್ಯ ಮತ್ತು ಪ್ರಾಣಿಗಳಿಂದ ದೊರೆತ, ಇತರೆ ಲಾಭದಾಯಕ ಕೆಲಸಗಳಿಗೆ ಬಾರದ ಸಾವಯವ ವಸ್ತುಗಳನ್ನು ಸಂಗ್ರಹಿಸಿ ಉತ್ತಮ ಗುಣಮಟ್ಟದ ಗೊಬ್ಬರವನ್ನು ಸಿದ್ಧಪಡಿಸಿ ಭೂಮಿಗೆ ಸೇರಿಸಬೇಕು.

iii) ರವದಿ (ಸೋಗೆ), ಸಸ್ಯಗಳ ಇತರೆ ಭಾಗಗಳು, ಸಗಣಿ ಇತ್ಯಾದಿ ಸಾವಯವ ವಸ್ತುಗಳನ್ನು ಸುಡದೇ ಗೊಬ್ಬರವಾಗಿ ತಯಾರಿಸಿ ಭೂಮಿಗೆ ಪೂರೈಸಬೇಕು.

iv) ಬೇಳೆ ಕಾಳು ವರ್ಗಕ್ಕೆ ಸೇರಿದ ಬೆಳೆಗಳಿಗೆ, ಬೆಳೆ ಯೋಜನೆಯಲ್ಲಿ ಸೂಕ್ತ ಸ್ಥಾನವು ದೊರೆಯುವಂತೆ ಮಾಡಬೇಕು.

v) ಭೂ ಸವಕಳಿಯನ್ನು ತಡೆಗಟ್ಟಿ, ಮೇಲ್ಮಣ್ಣಿನಲ್ಲಿರುವ ಸಾವಯವ ಪದಾರ್ಥವು ನಷ್ಟವಾಗದಂತೆ ನೋಡಿಕೊಳ್ಳಬೇಕು.

vi) ಬೆಳಗಳೊಡನೆ ಅವುಗಳಿಗೆ ಪೂರಕವಾದ ದನಕರುಗಳು, ಕುರಿ ಮುಂತಾದವುಗಳನ್ನೊಳಗೊಂಡ ಮಿಶ್ರ ಬೆಸಾಯ ಪದ್ಧತಿಯನ್ನು ಅನುಸರಿಸಬೇಕು.

vii) ಸಾವಯವ ಪದಾರ್ಥಗಳು ಮಣ್ಣಿನಲ್ಲಿ ಸರಿಯಾಗಿ ಸೇರಿಕೊಳ್ಳುವಂತೆ ಮಾಡಬೇಕು. ಹಾಗೂ ಅವು ಸರಿಯಾಗಿ ಕಳಿಯಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಬೇಕು.

viii) ಬೇಸಾಯದ ಉಪಕರಣಗಳನ್ನು ಅವಶ್ಯವಿರುವಷ್ಟೇ ಸಾರೆ ಉಪಯೋಗಿಸಬೇಕು.

ix) ಶುಷ್ಕ ಪ್ರದೇಶದಲ್ಲಿ ಸಾಧ್ಯವಿರುವಲ್ಲಿ ನೀರಾವರಿಯ ವ್ಯವಸ್ಥೆಯನ್ನು ಮಾಡಬೇಕು.

x) ಸೂಕ್ತವಾದ ಬೆಳೆ ಪರಿವರ್ತನೆಯನ್ನು ಅನುಸರಿಸಬೇಕು.

xi) ಎಲ್ಲ ಪೋಷಕಗಳು ಸರಿಯಾಗಿ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅವಶ್ಯಕ ಇರುವಲ್ಲಿ, ಸುಣ್ಣವನ್ನು ಭೂಮಿಗೆ ಸೇರಿಸಿ ಆಮ್ಲ – ಕ್ಷಾರ ನಿರ್ದೆಶಕವು (pH) ಬೆಳೆಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು.

ಮಣ್ಣಿನಲ್ಲಿರುವಹವೆ

ಮಣ್ಣಿನ ಒಟ್ಟು ಗಾತ್ರದ ಸುಮಾರು ಅರ್ಧದಷ್ಟಿರುವ ರಂಧ್ರಗಳ ಒಂದು ಭಾಗವನ್ನು ಆವರಿಸಿರುವ ಹವೆಯು, ಮಣ್ಣಿನ ನಾಲ್ಕು ಘಟಕಗಳಲ್ಲಿ ಒಂದು ಎಂಬ ಸಂಗತಿಯನ್ನು ಈ ಅಧ್ಯಾಯದಲ್ಲಿ ಆರಂಭದಲ್ಲಿಯೇ ಹೇಳಿದೆ. ಈ ಹವೆಯು ಸಸ್ಯಗಳ ಬೆಳವಣಿಗೆಯ ಮೇಲೆ ಗಣನೀಯವಾದ ಪರಿಣಾಮವನ್ನುಂಟು ಮಾಡುತ್ತದೆಯಾದ್ದರಿಂದ, ಮಣ್ಣಿನಲ್ಲಿರುವ ಹವೆಯ ಬಗ್ಗೆ ಹೆಚ್ಚಿನ ಪರಿಜ್ಞಾನವು ಇರಬೇಕಾದದ್ದು ಅವಶ್ಯ ಮತ್ತು ಪ್ರಯೋಜನಕಾರಿ ಎನ್ನಬಹುದು. ಮಣ್ಣಿನಲ್ಲಿರುವ ಹವೆಯ ಬಗ್ಗೆ ಪ್ರಮುಖ ವಿವರಗಳು ಕೆಳಗಿನಂತಿವೆ:

ಮಣ್ಣಿನಲ್ಲಿಯ ಹವೆಯ ಸ್ಥಾನ : ಈ ಅಧ್ಯಾಯದ ಆರಂಭದಲ್ಲಿಯೇ ಹೇಳಿದಂತೆ ಮಣ್ಣಿಗೆ ಸಾಕಷ್ಟು ನೀರಿನ ಪೂರೈಕೆಯಾಯಿತೆಂದರೆ ಎಲ್ಲ ರಂಧ್ರಗಳಲ್ಲಿ ನೀರೇ ತುಂಬಿಕೊಳ್ಳುತ್ತದೆ. ನೀರಿನ ಪ್ರಮಾಣವು ಕಡಮೆಯಾಗುತ್ತಾ ಹೋದಂತೆ ತೆರವಾದ ರಂಧ್ರಗಳನ್ನು ಹವೆಯು ಆವರಿಸತೊಡಗುತ್ತದೆ. ವಿವರಣೆಯ ಅನುಕೂಲತೆಗಾಗಿ, ಮಣ್ಣಿನಲ್ಲಿರುವ ರಂಧ್ರಗಳನ್ನು, ಅವುಗಳ ಗಾತ್ರದ ಮೇಲಿಂದ ಸೂಕ್ಷ್ಮ (ಸಣ್ಣ). ಮಧ್ಯಮ ಮತ್ತು ದೊಡ್ಡ ರಂಧ್ರಗಳೆಂದು ವರ್ಗೀಕರಿಸಬಹುದು. ಸಾಮಾನ್ಯವಾಗಿ ಹೇಳುವುದಾದರೆ, ದೊಡ್ಡ ರಂಧ್ರಗಳಲ್ಲಿ ಹೆಚ್ಚಾಗಿ ಹವೆಯೇ ತುಂಬಿಕೊಂಡಿರುತ್ತದೆ. ಮಣ್ಣು ಹಸಿಯಾಗಿರುವಾಗ ಸೂಕ್ಷ್ಮ ರಂಧ್ರಗಳನ್ನು ನೀರೇ ಆವರಿಸಿರುತ್ತದೆ. ಮಧ್ಯಮ ಆಕಾರದ ರಂಧ್ರಗಳ ಸ್ಥಾನವನ್ನು ನೀರು ಮತ್ತು ಹವೆ ಇವೆರಡೂ ತಮ್ಮ ತಮ್ಮಲ್ಲಿ ಹಂಚಿಕೊಂಡಿರುತ್ತದೆ. ಇವೆರಡು ಘಟಕಗಳಲ್ಲಿ ಪ್ರತಿಯೊಂದರ ಪ್ರಮಾಣವು ಎಷ್ಟಿರುತ್ತದೆ ಎಂಬುವುದು ಹಲವು ಸಂಗತಿಗಳ ಮೇಲೆ ಅವಲಂಬಿಸಿರುತ್ತದೆ.

ಮಣ್ಣಿನಲ್ಲಿರುವ ಹವೆಯ ಪ್ರಮಾಣದ ಮೇಲೆ ಪ್ರಭಾವ ಬೀರುವ ಸಂಗತಿಗಳು : ಈ ಕೆಳಗೆ ತಿಳಸಿದ ಸಂಗತಿಗಳು ಮಣ್ಣಿನಲ್ಲಿರುವ ಹವೆಯ ಪ್ರಮಾಣದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ;

ಕಣಗಳ ಗಾತ್ರ : ದೊಡ್ಡ ಆಕಾರದ ಕಣಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಮರಳು ಮಣ್ಣಿನಲ್ಲಿ, ಒಟ್ಟು ರಂಧ್ರದ ಪ್ರಮಾಣವು ಎರೆ ಮಣ್ಣಿನಲ್ಲಿರುವುದಕ್ಕಿಂತ ಕಡಮೆ ಇದ್ದರೂ ದೊಡ್ಡ ರಂಧ್ರಗಳ ಪ್ರಮಾಣವು ಅಧಿಕ.ಆದ್ದರಿಂದ ಇಂತಹ ಮಣ್ಣುಗಳಲ್ಲಿ ಅಧಿಕ ಪ್ರಮಾಣದ ರಂಧ್ರಗಳನ್ನುಹವೆಯೇ ಆವರಿಸಿರುತ್ತದೆ. ತದ್ವಿರುದ್ಧವಾಗಿ ಎರೆ ಕಣಗಳ ಪ್ರಾಬಲ್ಯವಿರುವ ಮಣ್ಣಗಳಲ್ಲಿ ರಂಧ್ರದ ಒಟ್ಟು ಗಾತ್ರವು ಅಧಿಕವಿದ್ದರೂ ಸೂಕ್ಷ್ಮ ರಂಧ್ರಗಳದ್ದೇ ಪ್ರಾಬಲ್ಯವಿರುತ್ತದೆಯಾದ್ದರಿಂದ ಹವೆಯ ಪ್ರವೇಶಕ್ಕೆ ದೊರೆಯುವ ಸ್ಥಳಾವಕಾಶವು ಕಡಮೆ.

ಕಣಗಳ ರಚನೆ : ಸಣ್ಣ ಕಾಳಿನಾಕಾರದ ಮತ್ತು ಸೂಕ್ಷ್ಮ ಕಾಳಿನಾಕಾರದ ಸಚ್ಛಿದ್ರ ರಚನೆಗಳಲ್ಲಿ ಹವೆಗೆ ಸುಲಭವಾಗಿ ಪ್ರವೇಶವು ದೊರೆಯುತ್ತದೆ. ಆದ್ದರಿಂದ ಇಂತಹ ಮಣ್ಣುಗಳಲ್ಲಿ ಹವೆಯ ಪ್ರಮಾಣವು ಅಧಿಕವಾಗಿರುತ್ತದೆ.

ಮಣ್ಣಿನ ಸಾಂದ್ರತೆ : ಬೇಸಾಯಕ್ಕೆಂದು ಬಳಸುವ ಎತ್ತುಗಳ ತುಳಿತದಿಂದ, ಪವರ ಟಿಲ್ಲರ ಹಾಗೂ ಟ್ರಾಕ್ಟರುಗಳ ಓಡಾಟದಿಂದ ಮತ್ತು ಇನ್ನಿತರೆ ಕಾರಣಗಳಿಂದ ಮಣ್ಣು ಸಾಂದ್ರಗೊಳ್ಳುತ್ತದೆ. ಹೀಗಾಗುವುದರಿಂದ, ರಂದ್ರಗಳ ಒಟ್ಟು ಗಾತ್ರ ಮತ್ತು ದೊಡ್ಡ ರಂಧ್ರಗಳ ಸಂಖ್ಯೆ ಇವೆರಡೂ ಕಡಿಮೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮಣ್ಣಿನಲ್ಲಿರುವ ಹವೆಯ ಪ್ರಮಾಣವು ಕಡಿಮೆಯಾಗುತ್ತದೆ.

ಪ್ರತಿ ಬೆಳೆಗೂ ನಿರ್ಧಿಷ್ಟ ಪ್ರಮಾಣದ ಹವೆಯು ಮಣ್ಣಿನಲ್ಲಿದ್ದರೆ ಅವುಗಳ ಬೆಳವಣಿಗೆಯು ಉತ್ತಮಗೊಂಡು ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಪ್ರತಿ ಬೆಳೆಗೆ ಅಪೇಕ್ಷಣೀಯವಾದ ಹವೆಯ ಪ್ರಮಾಣವೆಷ್ಟು ಎಂಬುವುದರ ಬಗ್ಗೆ ಖಚಿತವಾದ ವಿವರಗಳು ದೊರೆಯುತ್ತಿಲ್ಲ. ಆದಾಗ್ಯೂ ಕೆಲವು ಬೆಳೆಗಳ ಬಗ್ಗೆ ಇರುವ ವಿವರಗಳು ಬಹು ಮಹತ್ವದ್ದಾಗಿವೆ ಎನ್ನಬಹುದು. ಉದಾಹರಣೆಗೆ, ಬೀಟು ಗೆಡ್ಡೆಗಳ (ಬೀಟರೂಟ್) ಉತ್ತಮ ಬೆಳವಣಿಗೆಯಾಗಬೇಕಾದರೆ ಮಣ್ಣಿನಲ್ಲಿ ಶೇಕಡಾ ೧೫ – ೨೦ ರಷ್ಟಾದರೂ ಹವೆಯಿರಬೇಕಾಗುತ್ತದೆ. ಆದ್ದರಿಂದಲೇ ಸರಿಯಾಗಿ ಹವೆಯಾಡದ ಎರೆ ಮಣ್ಣಿನಲ್ಲಿ ಈ ಬೆಳೆಯು ಇಳುವರಿಯು ಕಡಮೆ ಮತ್ತು ಗೆಡ್ಡೆಗಳ ಆಕಾರವೂ ವಿಕೃತವಾಗುವ ಸಂಭವ ಹೆಚ್ಚು.

ಸರಿಯಾಗಿ ಹವೆಯಾಡದ ಜಿಗುಟು ಎರೆಮಣ್ಣಿಗೆ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಪದಾರ್ಥವನ್ನು ಪೂರೈಸುವುದರಿಂದ ಮಣ್ಣಿನ ಕಣಗಳ ರಚನೆಯು ಉತ್ತಮಗೊಂಡು ಹವೆಯ ಚಲನೆಗೆ ಆಸ್ಪದವುಂಟಾಗುತ್ತದೆ.

ಮಣ್ಣಿನಲ್ಲಿರುವ ಹವೆಯ ವೈಶಿಷ್ಟ್ಯಗಳು : ವಾತಾವರಣದಲ್ಲಿರುವ ಹವೆಯು, ಪ್ರಮುಖವಾಗಿ ಸಾರಜನಕ (ಶೇ.೭೮) ಆಮ್ಲಜನಕ (ಸೇ.೨೧) ಮತ್ತು ಇಂಗಾಲದ ಡೈ ಆಕ್ಸೈಡ್‌ಗಳ (ಶೇ.೦.೩೫) ಮಿಶ್ರಣವಾಗಿರುತ್ತದೆ. ಮಣ್ಣಿನಲ್ಲಿರುವುದೂ ಮೇಲಿನ ವಾತಾವರಣದಿಂದ ಒಳ ಸೇರಿದ ಹವೆಯೇ.ಆದ್ದರಿಂದ,ಮಣ್ಣಿನಲ್ಲಿರುವ ಹವೆಯೂ ಸಾರಜನಕ ವಯು, ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್‌ಗಳ ಮಿಶ್ರಣವೇಆಗಿದೆ. ಆದರೆ, ಈ ವಾಯುಗಳ ಪ್ರಮಾಣದಲ್ಲಿ ಅಂತರವಿದೆ ಎಂಬುವುದನ್ನು ಗಮನಿಸಬೇಕು ಈ ಬಗ್ಗೆ ಕೆಳಗಿನ ಸಂಗತಿಗಳು ಮಹತ್ವಪೂರ್ಣವಾಗಿವೆ:

i) ಮಣ್ಣಿನಲ್ಲಿರುವ ಹವೆಯಲ್ಲಿ, ಸಾರಜನಕ ವಾಯುವಿನ ಪ್ರಮಾಣವು ಮೇಲಿನ ವಾತಾವರಣದಲ್ಲಿದ್ದಷ್ಟೇ ಇದೆಯಾದರೂ ಆಮ್ಲಜನಕದ ಪ್ರಮಾಣವು ಕಡಮೆಯಾಗಿ ಇಂಗಾಲದ ಡೈಆಕ್ಸೈಡ್ ಪ್ರಮಾಣವು ಅಧಿಕಗೊಂಡಿರುತ್ತದೆ.

ii) ಸಾಕಷ್ಟು ಸಂಖ್ಯೆಯಲ್ಲಿ ದೊಡ್ಡ ರಂಧ್ರಗಳಿರುವ ಮತ್ತು ಮಣ್ಣಿನ ಕಣಗಳ ರಚನೆಯು ಉತ್ತಮವಾಗಿರುವ ಮೇಲ್ಮಣ್ಣಿನ ಹವೆಯಲ್ಲಿ ಆಮ್ಲಜನಕದ ಪ್ರಮಾಣವು ಶೇಕಡಾ ೨೦ರ ಸನಿಹದಲ್ಲಿರುತ್ತದೆಯಾದರೆ, ಭೂಮಿಯ ಕೆಳಭಾಗಕ್ಕೆ ಹೋದಂತೆಲ್ಲಾ ಆಮ್ಲಜನಕವು ಕಡಮೆಯಾಗುತ್ತದೆ.

iii) ನೀರು ಸರಿಯಾಗಿ ಬಸಿದುಹೋಗದ ಮಣ್ಣಿನಲ್ಲಿ, ಅದರಲ್ಲಿಯೂ ದೊಡ್ಡ ರಂಧ್ರಗಳ ಸಂಖ್ಯೆಯು ಕಡಿಮೆಯಿರುವ ಮಣ್ಣಿನ ಕೆಳವಲಯಗಳಲ್ಲಿ ಆಮ್ಲಜನಕವು ಅತಿ ಕಡಮೆ ಪ್ರಮಾಣದಲ್ಲಿರುತ್ತದೆ.

iv) ಸಸ್ಯದ ಬೇರುಗಳು ಮತ್ತು ಮಣ್ಣಿನಲ್ಲಿರುವ ಆಪಾರ ಸೂಕ್ಷ್ಮ ಜೀವಿಗಳು ಹಾಗೂ ಇರೆ ಪ್ರಾಣಿಗಳು ಮಣ್ಣಿನ ಹವೆಯಲ್ಲಿರುವ ಆಮ್ಲಜನಕವನ್ನುತಮ್ಮ ಉಸಿರಾಟಕ್ಕೆ ಉಪಯೋಗಿಸಿಕೊಂಡು ಇಂಗಾಲದ ಡೈಆಕ್ಸೈಡ್‌ನ್ನು ಹೊರ ಬಿಡುತ್ತವೆ. ಹೀಗಾಗಿ ಮಣ್ಣಿನ ಹವೆಯಲ್ಲಿಯರುವ ಆಮ್ಲಜನಕದ ಪ್ರಮಾಣವು ಕಡಮೆಯಾಗುತ್ತಾ ಸಾಗಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣವು ಅಧಿಕಗೊಳ್ಳುತ್ತದೆ.

v) ಮಣ್ಣಿನ ಹವೆಯಲ್ಲಿರುವ ಶೇಕಡಾ ೦.೦೩೫ ಇಂಗಾಲದ ಡೈಆಕ್ಸೈಡ್ ಶೇಕಡಾ ೦.೩೫ ಕ್ಕೆ ಏರಿದಾಗ ಅಂಕಿಯ ದೃಷ್ಟಿಯಿಂದ ಅಷ್ಟೇನೂ ಹೆಚ್ಚಾದಂತ ಕಾಣದಿದ್ದರೂ ತುಲನಾತ್ಮಕವಾಗಿ ವಿಚಾರ ಮಾಡಿದಾಗ ಮಣ್ಣಿನ ಹವೆಯ ಇಂಗಾಲದ ಡೈಆಕ್ಸೈಡ್‌ಗಿಂತ ಹತ್ತು ಪಟ್ಟು ಅಧಿಕಗೊಂಡಂತಾಯಿತು ಎಂಬುವುದನ್ನು ಗಮನಿಸಬೇಕು.

ವಾತಾವರಣ ಮತ್ತು ಮಣ್ಣಿನಲ್ಲಿ ಇರುವ ವಾಯುಗಳ ವಿನಿಮಯ : ಮೇಲೆ ಸೂಚಿಸಿದಂತೆ, ಮಣ್ಣಿನಲ್ಲಿರುವ ಅಮ್ಲಜನಕವು ಜೀವಿಗಳ ಉಸಿರಾಟದಿಂದ ಕಡಮೆಯಾಗುತ್ತಾ ಹೋಗಿ ಪೂರ್ತಿಯಾಗಿ ವ್ಯಯವಾಯಿತೆಂದರೆ ಸಾರಜನಕ ವಾಯು ಮತ್ತು ಮಣ್ಣಿನಲ್ಲಿ ವಾಸಿಸುವ ಜೀವಿಗಳ ಚಟುವಟಿಕೆಗಳು ಸ್ಥಗಿತಗೊಳ್ಳಬೇಕಾಗುತ್ತದೆ. ಆದರೆ ಸುದೈವದಿಂದ ವಾತಾವರಣದಲ್ಲಿರುವ ಆಮ್ಲಜನಕವು ಮಣ್ಣಿನೊಳಗೆ ಸೇರಿಕೊಳ್ಳುವ ಮತ್ತು ಮಣ್ಣಿನಲ್ಲಿ ಸಂಗ್ರಹಗೊಂಡ ಇಂಗಾಲದ ಡೈಆಕ್ಸೈಡ್ ಮಣ್ಣಿನಿಂದ ಹೊರ ಬರುವ ಕಾರ್ಯವು ನಿರತಂತರವಾಗಿ ನಡೆಯುವುದರಿಂದ ಮೇಲೆ ಸೂಚಿಸಿದ ಗಂಭೀರ ಪರಿಸ್ಥಿತಿಯು ಎದುರಾಗುವುದಿಲ್ಲ.

ಮಣ್ಣಿನಲ್ಲಿರುವ ಹವೆ ಮತ್ತು ಮಣ್ಣಿನ ಮೇಲ್ಬಾಗದಲ್ಲಿರುವ ವಾಯು ಮಂಡಲದ ಹವೆ ಇವುಗಳಲ್ಲಿರುವ ಆಮ್ಲಜನಕ ಹಾಗೂ ಇಂಗಾಲದ ಡೈ ಆಕ್ಸೈಡ್‌ಗಳ ವಿನಿಮಯ ಕಾರ್ಯದ ಮೇಲೆ ಪರಿಣಾಮವನ್ನು ಬೀರುವ ಹಲವು ಸಂಗತಿಗಳಲ್ಲಿ ಮುಖ್ಯವಾದವುಗಳು ಕೆಳಗಿನಂತಿವೆ:

) ಹವೆಯ ಒತ್ತಡದಲ್ಲಿರುವ ಅಂತರ : ಮಣ್ಣಿನಲ್ಲಿರುವ ಹವೆ ಮತ್ತು ವಾಯು ಮಂಡಲದ ಹವೆ ಇವುಗಳ ಒತ್ತಡದಲ್ಲಿ ಅಂತರವುಂಟಾದರೆ ಗಾಳಿಯು ಅಧಿಕ ಒತ್ತಡವಿರುವ ಪ್ರದೇಶದ ಕಡಮೆ ಒತ್ತಡವಿರುವಲ್ಲಿ ಚಲಿಸುತ್ತದೆ. ಈ ಕೆಳಗೆ ಕಾಣಿಸಿದ ಕಾರಣಗಳಿಂದ ಗಾಳಿಯ ಒತ್ತಡಗಳಲ್ಲಿ ಅಂತರವುಂಟಾಗಬಹುದು.

i) ಉಷ್ಣತೆ : ವಿನಿಮಯ ಕ್ರಿಯೆಯಲ್ಲಿ ಉಷ್ಣತಾಮಾನವು ಎರಡು ರೀತಿಗಳಿಂದ ಪರಿಣಾಮವನ್ನು ಬೀರಬಹುದು. ಮಣ್ಣಿನ ವಿವಿಧ ವಲಯಗಳ ಉಷ್ಣತಾಮಾನದಲ್ಲಿ ಅಂತರವುಂಟಾದರೆ, ಅಧಿಕ ಉಷ್ಣತಾಮಾನವಿರುವ ಪ್ರದೇಶದಲ್ಲಿರುವ ಹವೆಯು ಪ್ರಸರಣಗೊಂಡು ಮೇಲಿನ ದಿಕ್ಕಿನಲ್ಲಿ ಚಲಿಸುತ್ತದೆ. ಆ ಗಾಳಿಯು ವಾತಾವರಣಕ್ಕೆ ಬಂದು ಸೇರಬಹುದು. ಎರಡನೆಯದಾಗಿ ವಾತಾವರಣದ ಮತ್ತು ಮಣ್ಣಿನ ಉಷ್ಣತಾಮಾನದಲ್ಲಿ ಅಂತರವುಂಟಾದಾಗಲೂ ಹೆಚ್ಚು ಉಷ್ಣತಾಮಾನವಿರುವಲ್ಲಿಂದ ಕಡಮೆ ಉಷ್ಣತಾಮಾನವಿರುವಲ್ಲಿಗೆ ಹವೆಯು ಚಲಿಸುತ್ತದೆ.

ii) ಹವೆಯ ಒತ್ತಡ : ವಾತಾವರಣದಲ್ಲಿ ಹವೆಯ ಒತ್ತಡವು ಯಾವುದೇ ಕಾರಣದಿಂದ ಅಧಿಕಗೊಂಡಿತೆಂದರೆ ಮಣ್ಣಿನಲ್ಲಿರುವ ಹವೆಯು ಕುಗ್ಗಿ ಇದರಿಂದ ತೆರವಾದ ಈ ಸ್ಥಳವನ್ನು ವಾತಾವರಣದಲ್ಲಿರುವ ಹವೆಯು ಕುಗ್ಗಿ ಇದರಿಂದ ತೆರವಾದ ಈ ಸ್ಥಳವನ್ನು ವಾತಾವರಣದಲ್ಲಿಯ ಹವೆಯು ಕೂಡಲೇ ಆವರಿಸುತ್ತದೆ. ವಾತಾವರಣದಲ್ಲಿರುವ ಹವೆಯು ಒತ್ತಡವು ಕಡಮೆಯಾಯಿತೆಂದರೆ ಮಣ್ಣಿನಲ್ಲಿರುವ ಹವೆಯು ಹೊರ ಬಂದು ವಾತಾವರಣವನ್ನು ಸೇರುತ್ತದೆ.

iii) ಗಾಳಿಯ ವೇಗ : ವೇಗದಿಂದ ಬೀಸುವ ಗಾಳಿಯು ವಾತಾವರಣದಲ್ಲಿ ಮತ್ತು ಮಣ್ಣಿನಲ್ಲಿರುವ ಹವೆಯು ವಿನಿಮಯಕ್ಕೆ ಕೆಲವು ಮಟ್ಟಿಗೆ ಸಹಾಯಕವಾಗಬಹುದೆಂದು ಭಾವಿಸಲಾಗಿದೆ.

ಮೇಲೆ ಹೇಳಿದ ಮೂರು ಸಂಗತಿಗಳಿಂದ ಹವೆಯ ವಿನಿಮಯವು ನಡೆಯುತ್ತದೆಯಾದರೂ ವಿನಿಮಯವಾಗುವ ಹವೆಯ ಪ್ರಮಾಣವು ಅತಿ ಕಡಿಮೆಯೆನ್ನಬಹುದು.

iv) ಮಳೆ ಮತ್ತು ನೀರಾವರಿ : ಮಳೆಯ ನೀರು ಅಥವಾ ನೀರಾವರಿಯ ಜಲವು ಭೂಮಿಯನ್ನು ಪ್ರವೇಶಿಸಿತೆಂದರೆ ಮಣ್ಣಿನ ಎಲ್ಲ ರಂಧ್ರಗಳನ್ನು ತುಂಬಿಕೊಳ್ಳುತ್ತದೆ. ಆಗ ರಂಧ್ರಗಳಲ್ಲಿದ್ದ ಎಲ್ಲ ಹವೆಯು ಹೊರಬರಲೇಬೇಕಾಗುತ್ತದೆ. ದೊಡ್ಡ ರಂಧ್ರಗಳಲ್ಲಿರುವ ನೀರು ಬಸಿದು ಕೆಳಗೆ ಚಲಿಸಿತೆಂದರೆ, ವಾತಾವರಣದ ಹವೆಯ ಮಣ್ಣನ್ನು ಪ್ರವೇಶಿಸುತ್ತದೆ.

ನೀರಾವರಿಯ ಅಥವಾ ಮಳೆಯ ನೀರು ಒಮ್ಮೆಲೆ ಮಣ್ಣನ್ನು ಪ್ರವೇಶಿಸಿತೆಂದರೆ, ಮಣ್ಣಿನಲ್ಲಿ ಸಿಕ್ಕಿಬಿದ್ದ ಸ್ವಲ್ಪ ಪ್ರಮಾಣದ ಹವೆಯು ಹೊರಗೆ ಬರಲಾಗದೆ ಅಲ್ಲಿಯೇ ಉಳಿದುಕೊಂಡಿರುತ್ತದೆಯೆಂಬುವುದನ್ನು ಗಮನಿಸಬೇಕು. ಅಲ್ಲದೇ, ಮಳೆಗಾಲದಲ್ಲಿ ಇಲ್ಲವೇ ನೀರಾವರಿಯ ಅನುಕೂಲತೆಯಿದ್ದಲ್ಲಿ ಮಾತ್ರ ಮೇಲೆ ಹೇಳಿದ ಹವೆಯ ವಿನಿಮಯವು ಸಾಧ್ಯವಾಗುತ್ತದೆಯೆಂಬುವುದನ್ನು ನೆನಪಿಡಬೇಕು.

. ಹವೆಯಲ್ಲಿರುವ ಅನಿಲ (ವಾಯು)ಗಳ ಒತ್ತಡ : ಒಂದು ವಾಯುವಿನ ಪ್ರಮಾಣವು ಒಂದು ಪ್ರದೇಶದಲ್ಲಿ ಅಧಿಕಗೊಂಡಿತೆಂದರೆ ಆ ವಾಯುವಿನಿಂದ ಉಂಟಾಗುವ ಭಾಗಶಃ ಒತ್ತಡವೂ ಅಧಿಕಗೊಳ್ಳುತ್ತದೆ. ಆಗ ಅಧಿಕ ಒತ್ತಡದ ಪ್ರದೇಶದಿಂದ ಅದೇ ವಾಯುವಿನ ಕಡಮೆ ಒತ್ತಡವಿರುವ ಪ್ರದೇಶಕ್ಕೆ ಆ ವಾಯುವು ಚಲಿಸುತ್ತದೆ. ಈ ತತ್ವವನ್ನಾಧರಿಸಿ ವಾತಾವರಣದ ಹವೆಯಲ್ಲಿ ಇರುವ ವಾಯುಗಳು ಮತ್ತು ಮಣ್ಣಿನ ಹವೆಯಲ್ಲಿರುವ ವಾಯುಗಳು ವಿನಿಮಯಗೊಳ್ಳುತ್ತವೆ.

ಸಸ್ಯದ ಬೇರುಗಳು ಮತ್ತು ಅಸಂಖ್ಯಾತ ಜೀವಿಗಳು ಮಣ್ಣಿನ ಹವೆಯಲ್ಲಿರುವ ಆಮ್ಲಜಕವನ್ನು ನಿರಂತರವಾಗಿ ಬಳಸಿಕೊಳ್ಳುತ್ತವೆಯಾದ್ದರಿಂದ, ಈ ವಾಯುವಿನ ಪ್ರಮಾಣವು (ಮತ್ತು ಭಾಗಶಃ ಒತ್ತಡ) ವಾಯುಮಂಡಲದೊಳಗಿರುವ ಹವೆಯೊಳಗಿನ ಆಮ್ಲಜನಕದ ಪ್ರಮಾಣ(ಒತ್ತಡ)ಕ್ಕಿಂತ ಕಡಮೆಯಾಗುತ್ತದೆ. ಈ ವಾಯು ಆಮ್ಲಜನಕದ ಹೆಚ್ಚು ಒತ್ತಡವಿರುವ ವಾಯುಮಂಡಲದ ಹವೆಯಿಂದ ಆಮ್ಲಜನಕದ ಕಡಮೆ ಒತ್ತಡವಿರುವ ಮಣ್ಣಿನತ್ತ ಸಾಗಿ ಒಳಗೆ ಪ್ರವೇಶಿಸುತ್ತದೆ.

ಇದೇ ಪ್ರಕಾರ ಮಣ್ಣಿನಲ್ಲಿ ಸಂಗ್ರಹಗೊಂಡ ಇಂಗಾಲದ ಡೈ ಆಕ್ಸೈಡ್ ಒತ್ತಡವು ವಾತಾವರಣದಲ್ಲಿರುವ ಹವೆಯ ಇಂಗಾಲದ ಡೈ ಆಕ್ಸೈಡ್ ನ ಭಾಗಶಃ ಒತ್ತಡಕ್ಕಿಂತ ಅಧಿಕವಾಗಿರುತ್ತದೆಯಾದ್ದರಿಂದ ಈ ವಾಯು ಮಣ್ಣಿನೊಳಗಿಂದ ಹೊರ ಬಿದ್ದು ವಾಯುಮಂಡಲವನ್ನು ಸೇರುತ್ತದೆ.

ಮೇಲೆ ವಿವರಿಸಿದ ವಿನಿಮಯವು ನಡೆಯಲು ಹವೆಯ ಸಮಗ್ರಹ ಒತ್ತಡಗಳಲ್ಲಿ ಅಂತರವಿರಬೇಕಾದ ಕಾರಣವಿಲ್ಲವೆಂಬುವುದನ್ನು ಗಮನಿಸಬೇಕು. ಮಣ್ಣಿನಲ್ಲಿರುವ ಮತ್ತು ವಾಯು ಮಂಡಲದಲ್ಲಿರುವ ಹವೆಯ ಒತ್ತಡಗಳು ಒಂದೇ ಇದ್ದಾಗಲೂ ಸಂಭಂಧಿಸಿದ ವಾಯುವಿನ (ಇಲ್ಲಿ ಆಮ್ಲಜನಕದ ಅಥವಾ ಇಂಗಾಲದ ಡೈ ಆಕ್ಸೈಡ್) ಭಾಗಶಃ ಒತ್ತಡದಲ್ಲಿ ಅಂತರವಾದೊಡನೆ ಸಂಬಂಧಿಸಿದ ವಾಯುವಿನಲ್ಲಿ ಚಲನೆಯು ಆರಂಭವಾಗುತ್ತದೆ.

ಆಮ್ಲಜನಕದಿಂದಮಣ್ಣಿನಲ್ಲಿನಡೆಯುವಕ್ರಿಯೆಗಳು

. ಜೈವಿಕ ಕ್ರಿಯೆಗಳು : ಮಣ್ಣಿನ ಹವೆಯೊಳಗಿರುವ ಆಮ್ಲಜನಕದ ಪ್ರಮಾಣಕ್ಕೂ ಮಣ್ಣಿನಲ್ಲಿರುವ ಸಾವಯವ ವಸ್ತುಗಳು ಕಳಿಯುವ ವೇಗಕ್ಕೂ ನಿಕಟ ಸಂಬಂಧವಿದೆ. ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆಯಾದರೆ ಸೂಕ್ಷ್ಮ ಜೀವಿಗಳ ಕ್ರಿಯೆಯು ತೀವ್ರಗೊಂಡು ಸಾವಯವ ವಸ್ತುಗಳು ಅತಿ ವೇಗದಿಂದ ಕಳಿಯುತ್ತವೆ. ಆದ್ದರಿಂದಲೇ ಸರಿಯಾಗಿ ಹವೆಯಾಡದೇ ಇರುವ ಮಣ್ಣಿನಲ್ಲಿ ಸಾವಯವ ಪದಾರ್ಥಗಳ ಸಂಗ್ರಹವು ಅಧಿಕವಾಗಿರುತ್ತದೆ.

ಆಮ್ಲಜನಕದ ಪೂರೈಕೆಗೂ ಸಾವಯವ ವಸ್ತುಗಳು ಕಳಿಯುವ ವಿಧಾನಕ್ಕೂ ಹತ್ತಿರದ ಸಂಬಂಧವಿದೆ ಎಂಬುವುದನ್ನು ಗಮನಿಸಬೇಕು. ಮುಂದಿನ ಉದಾಹರಣೆಗಳಿಂದ ಈ ಮಾತು ಸ್ಪಷ್ಟವಾಗುತ್ತದೆ.

i) ಸಾಕಷ್ಟು ಆಮ್ಲಜನಕವು ಇದ್ದಾಗ
                         ಆಮ್ಲಜನಕದ ಅವಶ್ಯಕತೆ
ಸಕ್ಕರೆ + ಆಮ್ಲಜನಕ  ——————-> ಇಂಗಾಲದ ಡೈ ಆಕ್ಸೈಡ್ + ನೀರು
ಇರುವ ಸೂಕ್ಷ್ಮ ಜೀವಿಗಳು

ii) ವಾಯು ರೂಪದ ಆಮ್ಲಜನಕವಿಲ್ಲದಿದ್ದಾಗ
ಆಮ್ಲಜನಕ ರಹಿತ ಪರಿಸ್ಥಿತಿಯಲ್ಲಿ ಕಾರ್ಯ
ಸಕ್ಕರೆ  ——————————–> ಇಂಗಾಲದ ಡೈ ಆಕ್ಸೈಡ್ + ಮಿಥೇನ್
ವಾಯುವನ್ನು ನಿರ್ವಹಿಸಬಲ್ಲ ಸೂಕ್ಷ್ಮ ಜೀವಿಗಳು

iii) ಆಮ್ಲಜನಕದ ಕೊರತೆ ತೀವ್ರವಾಗಿರುವಲ್ಲಿ :
ಸಕ್ಕರೆ —->  ಸಸ್ಯಗಳಿಗೆ ಅಪಾಯಕಾರಿಯಾದ ಸಾವಯವ ಆಮ್ಲಗಳು, ಇಥೀಲೀನ್‌ ಮುಂತಾದವು ಹೊರಬರುತ್ತವೆ.

ರಾಸಾಯನಿಕ ಕ್ರಿಯೆಗಳು : ಆಮ್ಲಜನಕದ ಪೂರೈಕೆಯು ಸರಿಯಾಗಿದ್ದಾಗ ಕೆಲವು ಮೂಲ ಧಾತುಗಳ ಅಯಾನ್‌ಗಳು ಒಂದು ರೂಪದಲ್ಲಿದ್ದರೆ ಆಮ್ಲಜನಕದ ಕೊರತೆಯಿರುವಲ್ಲಿ ಆ ಧಾತುಗಳ ಅಯಾನ್‌ಗಳು ಬೇರೆ ರೂಪದಲ್ಲಿರುತ್ತವೆ. ಪ್ರಮುಖ ಮೂಲಧಾತುಗಳಲ್ಲಿ ಕಂಡುಬರುವ ಬದಲಾವಣೆಗಳ ವಿವರಗಳನ್ನು ಕೋಷ್ಟಕ ೧೧ರಲ್ಲಿ ತಿಳಿಸಲಾಗಿದೆ.

ಕೋಷ್ಟಕ ೧೧ : ಆಮ್ಲಜನಕದ ಪೂರೈಕೆಯು ಸಾಕಷ್ಟು ಇರುವಾಗ ಮತ್ತು ಕೊರತೆಯಿರುವಾಗ ಕೆಲವು ಮೂಲಧಾತುಗಳಲ್ಲಾಗುವ ಬದಲಾವಣೆಗಳು.

ಅ. ಸಂ

ಮೂಲ ಧಾತುವಿನ ಹೆಸರು

ಆಮ್ಲಜನವು ಸಾಕಷ್ಟು ಪ್ರಮಾಣದಲ್ಲಿರುವಾಗ ಅಯಾನ್‌ಗಳ ರೂಪ

ಆಮ್ಲಜನಕದ ಕೊರತೆಯಿರುವಗ ಅಯಾನ್‌ಗಳ ರೂಪ

ಸಾರಜನಕ ನೈಟ್ರೇಟ್ (NO3) ಸಾರಜನಕ ವಾಯು (N2); ಅಮೋನಿಯಂ (NH4+)
ಗಂಧಕ ಸಲ್ಫೇಟ್ (SO-24) ಹೈಡ್ರೋಜನ್ ಸಲ್ಫೈಯ್ಡ್ (H2S)
ಸಲ್ಫೈಯ್ಡ್ (SO-23)
ಕಬ್ಬಿಣ ಫಿರಿಕ್ ಕಬ್ಬಿಣ (Fe+3) ಫೆರಸ್ ಕಬ್ಬಿಣ (Fe+2)
ಮ್ಯಾಂಗನೀಸ್ ಮ್ಯಾಂಗನಿಕ್ (MN+4) ಮ್ಯಾಂಗನಸ್ (Mn+2)
ಇಂಗಾಲ ಇಂಗಾಲದ ಡೈ ಆಕ್ಸೈಡ್ (CO2) ಮಿಥೇನ್ (CH4)

ಸೂಚನೆ :

i) ಆಮ್ಲಜನಕವಿರುವಾಗ ನಿರ್ಮಾಣಗೊಂಡ ನೈಟ್ರೇಟ್ ಮತ್ತು ಸಲ್ಫೇಟ್ ಅಯಾನ್‌ಗಳನ್ನು ಸಸ್ಯಗಳು ಸುಲಭವಾಗಿ ಹೀರಿಕೊಳ್ಳುತ್ತವೆ. ಆದರೆ ಫೆರಿಕ್ ಮತ್ತು ಮ್ಯಾಂಗನೀಸ್ ರೂಪದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್‌ಗಳು ಸಸ್ಯಗಳಿಗೆ ದೊರೆಯಲಾರವು.

ii) ಫೆರಸ್ ಮತ್ತು ಮ್ಯಾಂಗನೀಸ್ ಅಯಾನ್‌ಗಳು ನೀರಿನಲ್ಲಿ ಕರಗುವುದರಿಂದ ಸಸ್ಯಗಳಿಗೆ ಸುಲಭವಾಗಿ ದೊರೆಯುತ್ತವೆ. ಆದರೆ ಇವು ಮಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿದ್ದರೆ ಸಸ್ಯಗಳೀಗೆ ವಿಷಕಾರಿಯಾಗುತ್ತವೆ.

. ಭೌತಿಕ ಕ್ರಿಯೆಗಳು :ಆಮ್ಲಜನಕದ ಪೂರೈಕೆಯುಸಾಕಷ್ಟಿರುವಾಗ ಕಬ್ಬಿಣವು ಫೆರಿಕ್ ರೂಪದಲ್ಲಿಯೂ ಮ್ಯಾಂಗನೀಸ್ ಮ್ಯಾಂಗನಿಕ್ ರೂಪದಲ್ಲಿಯೂ ಇರುತ್ತದೆಯೆಂದು ಮೇಲೆ ಹೇಳಿದೆ. ಇವು ಮಣ್ಣಿಗೆ ಕೆಂಪು ಇಲ್ಲವೇ ಕೆಂಪು ಮಿಶ್ರೀತ ಕಂದು ಬಣ್ಣವನ್ನು ತರುತ್ತವಲ್ಲದೇ ಮಣ್ಣಿಗೆ ಒಂದು ರೀತಿಯ ಹೊಳಪನ್ನು ಕೊಡುತ್ತವೆ. ಆಮ್ಲಜನಕದ ಕೊರತೆಯಿದ್ದಾಗ, ಈ ಮೂಲಧಾತುಗಳು ಫೆರಸ್ ಮತ್ತು ಮ್ಯಾಂಗನೀಸ್ ರೂಪದಲ್ಲಿರುವುದರಿಂದ ಮಣ್ಣಿಗೆ ಸೀಸದ ಬಣ್ಣ ಇಲ್ಲವೇ ನೇರಳೆ ಬಣ್ಣವು ಬಂದಿರುತ್ತದೆ. ಕೆಲವೊಮ್ಮೆ ಮಣ್ಣಿನಲ್ಲಿ ಹಳದಿ ಮತ್ತು ಕೆಂಪು ಬಣ್ಣದ ರೇಖೆಗಳು ಕಂಡುಬರುತ್ತವೆ. ಈ ಬಗೆಯ ಮಿಶ್ರ ಬಣ್ಣವಿದ್ದರೆ ವರ್ಷದ ಕೆಲವು ಸಮಯದಲ್ಲಿ ನೀರು ಮಣ್ಣಿನಿಂದ ಸರಿಯಾಗಿ ಬಸಿದುಹೋಗುವುದಿಲ್ಲವೆಂಬುವುದರ ಸಂಕೇತವೆಂದು ತಿಳಿಯಬೇಕು.

ಮಣ್ಣಿನ ಹವೆಯಲ್ಲಿರುವ ವಾಯುಗಳ ಪ್ರಮಾಣಗಳಿಂದ ಸಸ್ಯದ ಬೆಳವಣಿಗೆಯ ಮೇಲಾಗುವ ಪರಿಣಾಮಗಳು: ಮಣ್ಣಿನಲ್ಲಿರುವ ಹವೆಯಲ್ಲಿ ಆಮ್ಲಜನಕದ ಪ್ರಮಾಣವು ಕಡಮೆಯಾದರೆ ಸಸ್ಯದ ಬೆಳವಣಿಗೆಯ ಮೇಲೆ ಕೆಳಗಿನಂತೆ ದುಷ್ಪರಿಣಾಮಗಳುಂಟಾಗುತ್ತವೆ :

i) ಸಸ್ಯದ ಬೇರುಗಳ ಬೆಳವಣಿಗೆಯ ಮೇಲೆ : ಆಮ್ಲಜನಕದ ಪೂರೈಕೆಯು ಸಾಕಷ್ಟು ಪ್ರಮಾಣದಲ್ಲಿ ಆಗದಿದ್ದರೆ ಸಸ್ಯದ ಬೇರುಗಳ ಬೆಳವಣಿಗೆಯು ಕುಗ್ಗುವುದರಿಂದ ಸಸ್ಯದ ಬೆಳವಣಿಗೆಯು ಕುಂಠಿತವಾಗುತ್ತದೆ. ಅವಶ್ಯವಿರುವ ಆಮ್ಲಜನಕದ ಪ್ರಮಾಣವು ಎಲ್ಲ ಬೆಳೆಗಳಿಗೂ ಒಂದೇ ಸಮನಾಗಿರುವುದಿಲ್ಲ. ಕೆಲವು ಬಗೆಯ ಸಸ್ಯಗಳು (ಉದಾಹರಣೆಗೆ ಹಲವು ಹುಲ್ಲುಗಳು ಮತ್ತು ಮೇವಿನ ಬೆಳೆಗಳು) ಆಮ್ಲಜನಕದ ಪೂರೈಕೆಯು ಕಡಮೆ ಪ್ರಮಾಣದಲ್ಲಿದ್ದಾಗಲೂ ಉತ್ತಮವಾಗಿ ಬೆಳೆಯಬಲ್ಲವು. ಆದರೆ ಬಟಾಣಿ, ಸಕ್ಕರೆ ಬೀಟು ಇತ್ಯಾದಿ ಬೆಳೆಗಳಿಗೆ ಆಮ್ಲಜನಕವು ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಸಾಮಾನ್ಯವಾಗಿ ಮಣ್ಣಿನಲ್ಲಿಯ ಹವೆಯಲ್ಲಿ ಆಮ್ಲಜನಕದ ಪ್ರಮಾಣವು ಶೇಕಡಾ ೧೨ ರಿಂದ ೧೫ಕ್ಕಿಂತ ಕಡಮೆಯಾಗದಿದ್ದರೆ ಬಹಳಷ್ಟು ಬೆಳೆಗಳಿಗೆ ಆಪಾಯವಿಲ್ಲವೆನ್ನಬಹುದು.

ii)  ನೀರು ಮತ್ತು ಪೋಷಕಗಳ ಪೂರೈಕೆಯ ಮೇಲೆ : ಸಸ್ಯದ ಬೇರುಗಳು ಮಣ್ಣಿನಿಂದ ನೀರು ಮತ್ತು ಅದರ ಮೂಲಕ ಪೋಷಕಗಳನ್ನು ಹೀರಿಕೊಳ್ಳಬೇಕಾದರೆ ಬೇರುಗಳಿಗೆ ಶಕ್ತಿಯ ಅವಶ್ಯಕತೆಯಿದೆ. ಉಸಿರಾಟದಿಂದ ಶಕ್ತಿಯು ದೊರೆಯುತ್ತದೆ ಮತ್ತು ಈ ಕ್ರಿಯೆಗೆ ಆಮ್ಲಜನಕ ಬೇಕೇಬೇಕು. ಆದ್ದರಿಂದ ಮಣ್ಣಿನಲ್ಲಿ ನೀರು ಮತ್ತು ಪೋಷಕಗಳು ಧಾರಾಳವಾಗಿದ್ದರೂ ಆಮ್ಲಜನಕದ ಕೊರತೆಯಿದ್ದರೆ ಸಸ್ಯಗಳು ಪೋಷಕಗಳ ಕೊರತೆಯನ್ನು ಅನುಭವಿಸಬೇಕಾಗುತ್ತದೆ.

iii) ವಿಷಕಾರಿ ದ್ರವ್ಯಗಳ ನಿರ್ಮಾಣ : ಕೋಷ್ಟಕ ೧೧ರಲ್ಲಿ ತಿಳಿಸಿದಂತೆ, ಆಮ್ಲಜನಕದ ಕೊರತೆಯಿರುವಲ್ಲಿ ಹೈಡ್ರೋಜನ್‌ ಸಲ್ಫೈಡ್ ಮತ್ತು ಮಿಥೇನ್‌ನಂತಹ ವಿಷಕಾರಿ ದ್ರವ್ಯಗಳು ನಿರ್ಮಾಣಗೊಂಡು ಸಸ್ಯಗಳಿಗೆ ಅಪಾಯವನ್ನುಂಟು ಮಾಡುತ್ತವೆ. ಇದಲ್ಲದೇ, ಈ ಹಿಂದೆ ವಿವರಿಸಿದಂತೆ, ಪೋಷಕಗಳಾದ ಕಬ್ಬಿಣ ಮತ್ತು ಮ್ಯಾಂಗನೀಸ್, ಅಮ್ಲಜನಕದ ಕೊರತೆಯಾದಾಗ ಅನುಕ್ರಮವಾಗಿ ಫೆರಸ್ ಮತ್ತು ಮ್ಯಾಂಗನೀಸ್ ರೂಪಗಳನ್ನು ತಾಳಿ ಸಸ್ಯಗಳಿಗೆ ಸುಲಭವಾಗಿ ದೊರೆಯುವಂತಾಗುತ್ತವೆಯಾದರೂ ಇವುಗಳ ಪ್ರಮಾಣವು ಒಂದು ಮಿತಿಯನ್ನು ಮೀರಿತೆಂದರೆ ಇವು ಸಸ್ಯಗಳಿಗೆ ವಿಷಕಾರಿಯಾಗಿ ಪರಿಣಮಿಸಬಹುದು.

ಮಣ್ಣಿನಲ್ಲಿ ಆಮ್ಲಜನಕದ ಕೊರತೆಯಾಗದಂತೆ ಮಣ್ಣಿನ ನಿರ್ವಹಣೆ : ಸಸ್ಯಗಳಿಗೆ ಆಮ್ಲಜನಕದ ಕೊರತೆಯಾಗದಂತೆ ಮಣ್ಣನ್ನು ನಿರ್ವಹಿಸಿದರೆ, ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಮುಂದೆ ತಿಳಿಸಿದ ಬೇಸಾಯ ಕ್ರಮಗಳು ಪ್ರಯೋಜನಕಾರಿಯಾಗಿರುತ್ತವೆ.

i) ಮಣ್ಣಿನಲ್ಲಿ ಹೆಚ್ಚಾಗಿರುವ ನೀರು ಬಸಿದುಹೋಗುವಂತೆ ವ್ಯವಸ್ಥೆ ಮಾಡಿದರೆ ಆಮ್ಲಜನಕವು ಮಣ್ಣನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ii) ಉತ್ತಮ ಮತ್ತು ಸ್ಥರವಾಗಿರುವ ಕಣಗಳ ರಚನೆಯು ಮಣ್ಣಿನಲ್ಲಿ ನಿರ್ಮಾಣವಾಗುವಂತೆ ಮಾಡಿದರೆ ಮಣ್ಣಿನಲ್ಲಿ ಹೆಚ್ಚು ನೀರು ಸಂಗ್ರಹವಾಗದೇ ಬಸಿದು ಕೆಳಗೆ ಹೋಗುತ್ತದೆ. ಸಗಣಿ ಗೊಬ್ಬರ, ಕಾಂಪೋಸ್ಟ್, ಹಸುರು ಗೊಬ್ಬರ ಮುಂತಾದ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಕಣಗಳ ರಚನೆಯು ಉತ್ತಮಗೊಳ್ಳುತ್ತದೆ.

iii) ಸಾಮಾನ್ಯವಾಗಿ ಅತ್ಯವಶ್ಯಕವಿರುವಷ್ಟೇ ಪ್ರಮಾಣದಲ್ಲಿ ಬೇಸಾಯದ ಉಪಕರಣಗಳನ್ನು ಬಳಸುವುದರಿಂದ ಕಣಗಳ ರಚನೆಯು ನಷ್ಟವಾಗದಂತೆ ಮಾಡಬಹುದು. ಆದರೆ ಎರೆ ಮಣ್ಣಿನಲ್ಲಿ ಹೆಚ್ಚು ಸಾರೆ ಅಂತರ್ಬೇಸಾಯ ಮಾಡಿದರೆ ಅನುಕೂಲವೆಂದು ಕಂಡುಬಂದಿದೆ. ಎರೆ ಮಣ್ಣಿನಲ್ಲಿ ಕಂಡುಬರುವ ಬಿರುಕುಗಳನ್ನು ಮುಚ್ಚಿ, ಒಳಗಿನ ಅರ್ದ್ರತೆಯು ಹೊರ ಹೋಗದಂತೆ ಮಾಡಲು ಈ ಬೇಸಾಯ ಕ್ರಮದಿಂದ ಸಾಧ್ಯವಾಗುತ್ತದೆ.

iv) ಆಮ್ಲಜನಕದ ಪೂರೈಕೆಯು ಕಡಮೆಯಿದ್ದರೆ ಸರಿಯಾಗಿ ಬೆಳೆಯಬಲ್ಲ ಬೆಳೆಗಳನ್ನು ಸಾಧ್ಯವಿದ್ದಲೆಲ್ಲ ಬೆಳೆ ಯೋಜನೆಯಲ್ಲಿ ಸೇರಿಸಬೇಕು.

* * *