ಮಣ್ಣಿನಲ್ಲಿರುವ ವಿವಿಧ ಗಾತ್ರದ ಕಣಗಳ ಪ್ರಮಾಣವನ್ನು ಕಂಡು ಹಿಡಿಯುವ ವಿಧಾನ : ನಿರ್ಧಿಷ್ಟ ಪದ್ಧತಿಯಿಂದ ಮಣ್ಣಿನಲ್ಲಿರುವ ಮರಳು, ರೇವೆ ಮತ್ತು ಎರೆ ಇವುಗಳ ಶೇಕಡಾ ಪ್ರಮಾಣಗಳನ್ನು ಪ್ರಯೋಗಾಲಯದಲ್ಲಿ ಕಂಡುಹಿಡಿಯಬಹುದು. ಸಾಮಾನ್ಯವಾಗಿ ಮೂರು ಪದ್ಧತಿಗಳು ಲಭ್ಯವಿವೆ:

i) ಚುಂಚು (ಕೊಕ್ಕು) ಪಾತ್ರೆಯ ಪದ್ಧತಿ.

ii) ಬಾಯೋಕಾಸ್ ವಿಶಿಷ್ಟ ಗುರುತ್ವ ಮಾಪಕ ಪದ್ಧತಿ

iii) ಅಂತಾರಾಷ್ಟ್ರೀಯ ಪಿಪೆಟ್ ಪದ್ಧತಿ

ಇವುಗಳಲ್ಲಿ ಅಂತರರಾಷ್ಟ್ರೀಯ ಪಿಪೇಟ್ ಪದ್ಧತಿಯೇ ಹೆಚ್ಚು ನಿಖರವಾದ ಪರಿಣಾಮವನ್ನು ಕೊಡುತ್ತದೆಯೆಂದು ಹೇಳಲಾಗುತ್ತದೆ. ಈ ಪದ್ಧತಿಯ ಪ್ರಮುಖ ಹಂತಗಳು ಕೆಳಗಿನಂತಿವೆ.

i) ನಿರ್ಧಿಷ್ಟ ಪ್ರಮಾಣದ (ಸಾಮಾನ್ಯವಾಗಿ ೧೦ ಗ್ರಾಂ) ಮಣ್ಣನ್ನು ಗಾಜಿನ ಪಾತ್ರೆಯಲ್ಲಿ ತೆಗೆದುಕೊಂಡು ಸ್ವಲ್ಪ ನೀರನ್ನು ಹಾಕಿ, ಮಣ್ಣಿನಲ್ಲಿರುವ ಸಾವಯವ ಪದಾರ್ಥವನ್ನು ಹೈಡ್ರೋಜನ ಪರ್ ಆಕ್ಸೈಡ್‌ನಿಂದ ಮತ್ತು ಕ್ಯಾಲ್ಸಿಯಂ ಹಾಗೂ ಇತರೆ ಕಾರ್ಬೊನೇಟ್ ಗಳನ್ನು ಹರಿತ್ ಪೀತಾಮ್ಲದ (HCl) ಸಹಾಯದಿಂದ ನಾಶಪಡಿಸಬೇಕು.

ii) ಸೋಡಿಯಂ ಪಾಲಿಫಾಸ್ಫೇಟ್ ಇಲ್ಲವೇ ಸೋಡಿಯಂ ಹೈಡ್ರಾಕ್ಸೈಡ್ ಇವುಗಳಲ್ಲಿ ಒಂದನ್ನು ಮೇಲಿನ ಮಣ್ಣಿಗೆ ಸೇರಿಸಿ, ಯಂತ್ರದ ಸಹಾಯದಿಂದ ಸರಿಯಾಗಿ ಮಿಶ್ರ ಮಾಡುವುದರಿಂದ ಮಣ್ಣಿನ ಪ್ರತಿ ಕಣವೂ ಪ್ರತ್ಯೇಕಗೊಳ್ಳುತ್ತದೆ.

iii) ಮಣ್ಣಿನಲ್ಲಿರುವ ಮರಳನ್ನು ಜರಡಿಯ ಸಹಾಯದಿಂದ ಪ್ರತ್ಯೇಕಿಸಿ, ಒಣಗಿಸಿ ತೂಕ ಮಾಡಬೇಕು.

iv) ಜರಡಿಯ ಕೆಳಗೆ ಇಳಿದು ಬಂದ ಮಿಶ್ರಣದಿಂದ ಸ್ಟೋಕ್ಸ್ ನಿಯಮದ ಆಧಾರದ ಮೇಲೆ ಸೂಕ್ತ ಸಮಯಕ್ಕೆ ಪೀಪೆಟನ ಸಹಾಯದಿಂದ ನಮೂನೆಗಳನ್ನು ತೆಗೆದುಕೊಂಡು ರೇವೆ ಮತ್ತು ಎರೆ ಇವುಗಳ ಪ್ರಮಾಣವನ್ನು ನಿರ್ಧರಿಸಬೇಕು.

ಮೇಲಿನ ಪದ್ಧತಿಯನ್ನು ಕುರಿತು ಹೆಚ್ಚಿನ ವಿವರಗಳನ್ನು ಈ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳಿಂದ ಪಡೆಯಬಹುದು.

ಸ್ಪರ್ಶಪದ್ಧತಿಯಿಂದಮಣ್ಣಿನವರ್ಗವನ್ನುತಿಳಿದುಕೊಳ್ಳುವವಿಧಾನಗಳು :

ಮೇಲೆ ತಿಳಿಸಿದ ವಿಧಾನದಿಂದ ಮಣ್ಣಿನಲ್ಲಿರುವ ಮರಳು, ರೇವೆ ಮತ್ತು ಎರೆ ಇವುಗಳ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಿ ಪುಟ ೯೬ ಮತ್ತು ೯೭ರಲ್ಲಿ ವಿವರಿಸಿದಂತೆ, ಮಣ್ಣಿನ ವರ್ಗೀಕರಣವನ್ನು ಮಾಡುವ ವಿಧಾನವು ಹೆಚ್ಚು ನಿಖರವಾಗಿರುತ್ತದೆ. ಆದರೆ, ಈ ಪದ್ಧತಿಗೆ ಪ್ರಯೋಗಾಲಯ ಮತ್ತು ವಿಶಿಷ್ಟ ರೀತಿಯ ಸಲಕರಣೆಗಳು ಬೇಕು. ಅಲ್ಲದೇ , ಪ್ರತಿ ಮಣ್ಣಿನ ವರ್ಗೀಕರಣಕ್ಕೆ ಅಧಿಕ ಸಮಯವೂ ಬೇಕಾಗುತ್ತದೆ.

ಮಣ್ಣಿನ ಸಮೀಕ್ಷೆಯನ್ನು ಮಾಡುವಾಗ ಸ್ವಲ್ಪ ಅವಧಿಯಲ್ಲಿಯೇ ಹಲವು ಪ್ರಕಾರಗಳ ಮಣ್ಣುಗಳನ್ನು ವೀಕ್ಷಿಸಿ, ಅವು ಯಾವ ವರ್ಗಕ್ಕೆ ಸೇರಿವೆ ಎಂಬುವುದನ್ನು ತಿಳೀಯಬೇಕಾಗುತ್ತದೆ.

ಇಂತಹ ಸಂದರ್ಭಕ್ಕೆ ಅನುಕೂಲಕರಾದ ಪದ್ಧತಿಯೊಂದು ಬೇಕು. ಸ್ಪರ್ಶ ಪದ್ಧತಿಯು ಈ ಕೊರತೆಯನ್ನು ಬಹುಮಟ್ಟಿಗೆ ನೀಗಿಸುತ್ತದೆನ್ನಬಹುದು. ಮೇಲೆ ಹೇಳಿದ ವಿಧಾನದಿಂದ ಕಡಮೆ ಅನುಭವವಿರುವ ವ್ಯಕ್ತಿಯೂ ಮಣ್ಣಿನಲ್ಲಿರುವ ಮರಳು, ರೇವೆ ಮತ್ತು ಜೇಡಿಗಳ ಶೇಕಡಾ ಪ್ರಮಾಣವನ್ನು ಕಂಡುಹಿಡಿದು, ಆಕೃತಿಯ ಸಹಾಯದಿಂದ ಮಣ್ಣಿನ ವರ್ಗವನ್ನು ನಿಖರವಾಗಿ ನಿರ್ಧರಿಸಬಹುದು. ಆದರೆ ಸ್ಪರ್ಶ ಪದ್ಧತಿಯಿಂದ ಮಣ್ಣಿನ ವರ್ಗವನ್ನು ಕಂಡುಹಿಡಿಯಲು ಸತತ ಪ್ರಯತ್ನ ಮತ್ತು ಅನುಭವವಿರಬೇಕು.

ಸ್ಪರ್ಶ ಪದ್ಧತಿಯ ವಿವರಗಳು ಕೆಳಗಿನಂತಿವೆ.

 • ಸ್ವಲ್ಪ ಮಣ್ಣಿಗೆ ಅದು ಒದ್ದೆಯಾಗುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು.
 • ಈ ಮಣ್ಣನ್ನು ಹೆಬ್ಬೆರಳು ಮತ್ತು ತೋರು ಬೆರಳು (ತರ್ಜನಿ) ಇವುಗಳ ಮಧ್ಯದಲ್ಲಿ ತೆಗೆದುಕೊಂಡು ನಿಧಾನವಾಗಿ ಉಜ್ಜಬೇಕು. ಹೀಗೆ ಮಾಡುವ ಸಲುವಾಗಿ ಹೆಬ್ಬೆರಳನ್ನು ಸ್ಥಿರವಾಗಿಟ್ಟುಕೊಂಡು, ತೊರು ಬೆರಳಿನಿಂದ ಮಣ್ಣನ್ನು ಗಟ್ಟಿಯಾಗಿ ಉಜ್ಜುತ್ತ ತೋರು ಬೆರಳನ್ನು ಕೆಳದಿಕ್ಕಿಗೆ ಸರಿಸುತ್ತ ಸಾಗಬೇಕು.
 • ಮೇಲಿನಂತೆ ಮಣ್ಣನ್ನು ಉಜ್ಜಿದಾಗ, ಮಣ್ಣು ಲಾಡಿಯಂತೆ ಪರಿವರ್ತನೆಗೊಂಡರೆ ಆ ಮಣ್ಣಿನಲ್ಲಿ ಎರೆ ಕಣಗಳ ಪ್ರಾಬಲ್ಯವಿದೆಯೆಂದು ತಿಳಿಯಬೇಕು. ಲಾಡಿಯು ನಯವಾಗಿದ್ದು, ಉದ್ದವಾಗಿದ್ದಷ್ಟೂ ಎರೆ ಕಣಗಳ ಪ್ರಮಾಣವು ಅಧಿಕವಾಗಿದೆ ಎಂದು ತಿಳಿಯಬೇಕು.
 • ಮಣ್ಣಿನಲ್ಲಿ ಮರಳಿನ ಅಥವಾ ರೇವೆಯ ಪ್ರಾಬಲ್ಯವಿದೆಯೇ ಎಂಬುವುದನ್ನು ತಿಳಿಯಬೇಕಾದರೆ ಪರೀಕ್ಷೆಯನ್ನು ಮಾಡಬೇಕೆಂದಿರುವ ಮಣ್ಣಿನ ನಮೂನೆಗೆ ಎರೆ ಕಣಗಳನ್ನು ಪರೀಕ್ಷಿಸುವಾಗ ಉಪಯೋಗಿಸಿದ್ದಕ್ಕಿಂತ ಅಧಿಕ ನೀರನ್ನು ಬೆರೆಸಿಕೊಂಡು ಮೇಲೆ ಹೇಳಿದಂತೆ ಬೆರಳುಗಳ ಮಧ್ಯೆ ಉಜ್ಜಬೇಕು. ಮರಳಿನ ಪ್ರಾಬಲ್ಯವಿದ್ದರೆ, ಬೆರಳುಗಳಿಗೆ ಉರುಟು ಕಣಗಳ ಸ್ಪರ್ಶವಾಗುತ್ತದೆ. ರೇವೆಯ ಪ್ರಾಬಲ್ಯವಿದ್ದರೆ ಜಿನುಗು ಹಿಟ್ಟನ್ನು ಅಥವಾ ಟಾಕ್ ಪುಡಿಯನ್ನು ಮುಟ್ಟಿದ ಅನುಭವವಾಗುತ್ತದೆ. ಕೋಷ್ಟಕ ೧೩ರಲ್ಲಿ ಕೊಟ್ಟ ವಿವರಗಳ ಸಹಾಯವನ್ನು ಪಡೆದು ಸ್ಪರ್ಶ ಪದ್ಧತಿಯಿಂದ ಮಣ್ಣನ್ನು ವರ್ಗೀಕರಿಸಬಹುದು.

ಮಣ್ಣಿನಲ್ಲಿರುವವಿವಿಧಗಾತ್ರದಕಣಗಳಪ್ರಮಾಣಮತ್ತುಮಣ್ಣಿನನಿರ್ವಹಣೆ :

ಮಣ್ಣಿನಲ್ಲಿರುವ ಮರಳು, ರೇವೆ ಮತ್ತು ಎರೆ ಕಣಗಳ ಗುಣಧರ್ಮಗಳು ಅವುಗಳಿರುವ ಮಣ್ಣಿನ ಗುಣಧರ್ಮಗಳ ಮೇಲೆ ಬೀರುವ ಪರಿಣಾಮಗಳೂ ಇವುಗಳ ಕೆಲವು ವಿವರಗಳು ‘ಮಣ್ಣಿನ ಕಣಗಳ ಮತ್ತು ನಿರ್ಧಿಷ್ಟ ವರ್ಗದ ಕಣಗಳ ಪ್ರಾಬಲ್ಯವಿರುವ ಮಣ್ಣಿನ ಗುಣಧರ್ಮಗಳು’ – ಕುರಿತಾದ ವಿವರಣೆಯಲ್ಲಿದೆ. ಇಂತಹ ಮಾಹಿತಿಯಿಂದ ಮಣ್ಣಿನ ನಿರ್ವಹಣೆಯಲ್ಲಿ ಮಾಡಿಕೊಳ್ಳಬಹುದಾದ ಕೆಲವು ಬದಲಾವಣೆಗಳ ಬಗ್ಗೆ ಮುಂದೆ ವಿವರಿಸಲಾಗಿದೆ.

ಕೋಷ್ಟಕ ೧೩ : ಸ್ಪರ್ಶ ಪದ್ಧತಿಯಿಂದ ಮಣ್ಣನ್ನು ವರ್ಗೀಕರಿಸಲು ಉಪಯುಕ್ತವಾದ ವಿವರಗಳು

ಅ.
ಸ.

ವಿವರಗಳು

ಮಣ್ಣಿನ ವರ್ಗಗಳು

ಮರಳು

ಮರಳು ಗೋಡು

ಗೋಡು

ರೇವೆ ಗೋಡು

ಎರೆ ಗೋಡು

ಎರೆ

ಪ್ರತ್ಯೇಕ ಕಣಗಳು ಬರಿಗಣ್ಣಿಗೆ ಕಾಣುತ್ತವೆಯೇ? ಕಾಣುತ್ತವೆ ಬಹುತೇಕ ಕಣಗಳು ಕಾಣಿಸುತ್ತವೆ. ಕೆಲವು ಕಣಗಳು ಕಾಣಿಸುತ್ತವೆ. ಕೆಲವು ಕಣಗಳು ಕ್ವಚಿತ್ತಾಗಿ ಕಾಣಿಸುತ್ತವೆ ಕಾಣಿಸುವುದಿಲ್ಲ ಕಾಣಿಸುವುದಿಲ್ಲ
ಒಣಗಿದ ಹೆಂಟೆಗಳ ಸ್ಥಿರತೆ ಹೆಂಟೆಗಳೇ ಇರುವುದಿಲ್ಲ ಹೆಂಟೆಗಳೇ ಇರುವುದಿಲ್ಲ ಸುಲಭವಾಗಿ ಒಡೆಯಬಲ್ಲವು ಮಃದ್ಯಮ ಒತ್ತಡ ಇದ್ದರೆ ಒಡೆಯುತ್ತವೆ ಗಟ್ಟಿಯಾಗಿದ್ದು ಒಡೆಯುವುದಿಲ್ಲ ಅತಿ ಗಟ್ಟಿಯಾಗಿದ್ದು ಒಡೆಯುವುದಿಲ್ಲ
ಮಣ್ಣು ಹಸಿ ಇದ್ದಾಗ ಹೆಂಟೆಗಳ ಸ್ಥಿರತೆ ಅಸ್ಥಿರ ಸ್ವಲ್ಪ ಮಟ್ಟಿಗೆ ಸ್ಥಿರ ಮಧ್ಯಮ ಸ್ಥಿರ ಸಾಕಷ್ಟು ಸ್ಥಿರ ಅತಿ ಸ್ಥಿರ ಅತಿ ಸ್ಥಿರ
ಹಸಿ ಮಣ್ಣನ್ನು ಹೆಬ್ಬೆರಳು ಮತ್ತು ತೋರು ಬೆರಳುಗಳ ಮಧ್ಯೆ ಉಜ್ಜಿದಾಗ ಲಾಡಿಯು ನಿರ್ಮಾಣಗೊ ಳ್ಳುವದಿಲ್ಲ ಉರಟು ಕಣಗಳು ಬೆಲಳಿಗೆ ತಗಲುತ್ತವೆ ಲಾಡಿಯು ನಿರ್ಮಾಣಗೊ ಳ್ಳುವದಿಲ್ಲ ಉರಟು ಕಣಗಳು ಬೆಲಳಿಗೆ ತಗಲುತ್ತವೆ ಲಾಡಿಯು ನಿರ್ಮಾಣಗೊಳ್ಳುವದಿಲ್ಲ ಲಾಡಿಯು ನಿರ್ಮಾಣಗೊಳ್ಳುತ್ತದೆ. ಆದರೆ ಅದು ಅಷ್ಟು ನುಣುಪಾಗಿರುವುದಿಲ್ಲ. ಸಣ್ಣ ಸಣ್ಣ ತುಂಡುಗಳಾಗುತ್ತದೆ ತೆಳುವಾದ ಲಾಡಿಯು ನಿರ್ಮಾಣಗೊಳ್ಳುತ್ತದೆ ಆದರೆ ತುಂಡುಗಳಾಗುತ್ತದೆ ಉದ್ದವಾದ, ನುಣುಪಾದ ಲಾಡಿಯು ನಿರ್ಮಾಣಗೊಳ್ಳುತ್ತದೆ, ತುಂಡಾಗುವುದಿಲ್ಲ

ಮರಳಿನ ಪ್ರಾಬಲ್ಯವಿರುವ ಮಣ್ಣು :ಮರಳಿನ ಪ್ರಾಬಲ್ಯವಿರುವ ಮಣ್ಣಿನ ಜಲಧಾರಣಾ ಸಾಮರ್ಥ್ಯವು ಕಡಮೆ. ನೀರು ಮಣ್ಣಿನೊಳಗಿಂದ ಸುಲಭವಾಗಿ ಬಸಿದುಹೋಗಿ, ತನ್ನೊಡನೆ ಪೋಷಕಗಳನ್ನೂ ಭೂಮಿಯಾಳಕ್ಕೆ ಕೊಂಡೊಯ್ಯುತ್ತದೆ. ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಕಡಮೆ. ಹವೆಯು ನಿರಾತಂಕವಾಗಿ ಚಲಿಸುವುದರಿಂದ ಇರುವ ಸವಯವ ಪದಾರ್ಥಗಳೂ ಬೇಗನೇ ಕಳಿಯುತ್ತವೆ. ಮರಳು ಮಣ್ಣಿನ ಕಣಗಳ ಸುತ್ತ ಋಣ ಚಾರ್ಜ್‌ಗಳು ಕಡಮೆಯಿರುವುದರಿಂದ ಪೋಷಕಗಳನ್ನು ಅಧಿಕ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳಲಾರವು. ಆದ್ದರಿಂದ, ಮಣ್ಣಿನ ಫಲವತ್ತತೆ ಕಡಮೆ. ಮಣ್ಣಿನಲ್ಲಿ ಜಿಗುಟುತನವೂ ಇರುವುದಿಲ್ಲ.

ಮೇಲಿನ ಗುಣಧರ್ಮಗಳ ಮೇಲಿಂದ ಇಂತಹ ಮಣ್ಣಿನ ನಿರ್ವಹಣೆಯನ್ನು ಮಾಡುವಾಘ ಕೆಳಗಿನ ಸಂಗತಿಗಳನ್ನು ಲಕ್ಷಿಸಬೇಕು.

i) ನೀರು ಮತ್ತು ಪೋಷಕಗಳನ್ನು ಮೇಲಿಂದ ಮೇಲೆ ಉಪಯೋಗಿಸಬೇಕು. ಆದರೆ, ಪ್ರತಿ ಬಾರಿಯೂ ಕಡಮೆ ಪ್ರಮಾಣದಲ್ಲಿ ಕೊಡುವುದು ಉತ್ತಮ. ಇದರಿಂದ ನೀರು ಹಾಗೂ ಪೋಷಕಗಳ ನಷ್ಟವನ್ನು ಕಡಮೆ ಮಾಡಬಹುದು. ಹೀಗೆ ಮಾಡುವುದರಿಂದ ಬೇಸಾಯಹದ ಖರ್ಚು ಕೆಲವು ಮಟ್ಟಿಗೆ ಅಧಿಕಗೊಳ್ಳುತ್ತದೆಯೆಂಬುವುದು ಈ ಪದ್ಧತಿಯ ಒಂದು ಅವಗುಣ.

ii) ಸಾವಯವ ಗೊಬ್ಬರಗಳನ್ನು ಸಾಧ್ಯವಾದಷ್ಟು ದೊಡ್ಡ ಪ್ರಮಾಣದಲ್ಲಿ ಮಣ್ಣಿಗೆ ಪೂರೈಸಬೇಕು. ಇದರಿಂದ, ಮಣ್ಣಿನ ಜಲಧಾರಣಾ ಶಕ್ತಿ ಮತ್ತು ಫಲವತ್ತತೆಗಳನ್ನು ಕೆಲವು ಮಟ್ಟಿಗೆ ಹೆಚ್ಚಿಸಬಹುದು.

iii) ಮಳೆಯು ನಿಂತ ಅಥವಾ ನೀರಾವರಿಯನ್ನು ನಿಲ್ಲಿಸಿದ ನಂತರ ಕೆಲವು ಸಮಯದಲ್ಲಿಯೇ ಭೂಮಿಯಲ್ಲಿ ನಡೆದಾಡಬಹುದು. ಅದರೆ, ಕೆಲವೇ ದಿನಗಳಲ್ಲಿ ಮಣ್ಣು ಒಣಗಿ ಹೋಗುತ್ತದೆ. ಆದ್ದರಿಂದ ನೀರಿನ ಪೂರೈಕೆಯಾದ ನಂತರ ಬಹಳ ಸಮಯದವರೆಗೆ ಕಾಯದ ಬೇಸಾಯ ಕಾರ್ಯಗಳನ್ನು ಮಾಡಿ ಮುಗಿಸಬೇಕು.

ಎರೆ ಕಣಗಳ ಪ್ರಾಬಲ್ಯವಿರುವ ಮಣ್ಣು : ಎರೆ ಕಣಗಳ ಪ್ರಾಬಲ್ಯವಿರುವ ಮಣ್ಣುಗಳ ಜಲಧಾರಣಾ ಸಾಮರ್ಥ್ಯವು ಅಧಿಕ. ಅಲ್ಲದೇ ಮಣ್ಣು ಸಹ ಹೆಚ್ಚು ಫಲವತ್ತಾಗಿರುತ್ತದೆ. ನೀರು ಬಸಿದು ಭೂಮಿಯಾಳಕ್ಕೆ ಹೋಗುವುದಿಲ್ಲವಾದ್ದರಿಂದ ನೀರು ಮತ್ತು ಪೋಷಕಗಳು ನಷ್ಟವಾಗುವುದಿಲ್ಲ. ಆದರೆ, ಹವೆಯು ಮಣ್ಣಿನೊಳಗೆ ಅಷ್ಟು ಸರಾಗವಾಗಿ ಚಲಿಸುವುದಿಲ್ಲ. ಸಾವಯವ ಪದಾರ್ಥದ ಪ್ರಮಾಣವು ಮರಳು ಮಣ್ಣಿನಲ್ಲಿರುವುದಕ್ಕಿಂತ ಅಧಿಕ. ಮಣ್ಣು ಅತಿ ಜಿಗುಟು, ಈ ಬಗೆಯ ಮಣ್ಣನ್ನು ನಿರ್ವಹಿಸುವಾಗ ಕೆಳಗಿನ ಸಂಗತಿಗಳನ್ನು ಗಮನಿಸಬೇಕು.

i) ಮಣ್ಣಿಗೆ ಸಾಧ್ಯವಾದಷ್ಟು ಅಧಿಕ ಪ್ರಮಾಣದಲ್ಲಿ ಸಾವಯವ ಪದಾರ್ಥಗಳನ್ನು ಪೂರೈಸಬೇಕು. ಇದರಿಂದ, ಮಣ್ಣಿನ ಕಣಗಳ ರಚನೆಯು ಉತ್ತಮಗೊಳ್ಳುತ್ತದೆ. ಅಲ್ಲದೇ ಸ್ಥಿರವಾದ ರಚನೆಗಳು ನಿರ್ಮಾಣಗೊಳ್ಳುತ್ತದೆ. ಪರಿಣಾಮವಾಗಿ, ಹವೆಯು ಮಣ್ಣಿನಲ್ಲಿ ನಿರಾತಂಕವಾಗಿ ಚಲಿಸಲು ಸಾಧ್ಯವಾಗಿ, ಸಸ್ಯಗಳ ಬೇರುಗಳಿಗೆ ಮತ್ತು ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮ ಜೀವಿಗಳಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕವು ದೊರೆಯುವಂತಾಗುತ್ತದೆ.

ii) ನೀರಾವರಿ ಬೇಸಾಯವನ್ನೂ ಮಾಡುವುದಾದರೆ, ಮರಳು ಮಣ್ಣಿನಂತೆ ಮೇಲಿಂದ ಮೇಲೆ ನೀರನ್ನು ಪೂರೈಸುವ ಕಾರಣವಿಲ್ಲ.

iii) ಪೋಷಕಗಳು ಬಸಿದುಹೋಗುವ ಭಯವಿಲ್ಲದಿರುವುದರಿಂದ ಅವುಗಳನ್ನು ಅದರಲ್ಲಿಯೂ ಸಾರಜನಕವನ್ನು ಕಡಮೆ ಕಂತುಗಳಲ್ಲಿ ಪೂರೈಸಬಹುದು.

iv) ಮಳೆ ಬಂದ ಅಥವಾ ನೀರನ್ನು ಪೂರೈಸಿದ ಕೆಲವು ದಿನಗಳವರೆಗೆ ಭೂಕ್ಷೇತ್ರವನ್ನು ಪ್ರವೇಶಿಸಲು ಅಥವಾ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಮಣ್ಣು ಪೂರ್ತಿಯಾಗಿ ಒಣಗಿದ ಮೇಲೆ ಉಳುಮೆಯನ್ನು ಮಾಡಿದರೆ ಬಿರುಸಾದ ಹೆಂಟೆಗಳು ಏಳುತ್ತವೆ. ಆದ್ದರಿಂದ, ಮಣ್ಣಿನಲ್ಲಿ ಆರ್ದ್ರತೆಯು ಸೂಕ್ತ ಪ್ರಮಾಣದಲ್ಲಿದ್ದಾಗ ಬೇಸಾಯ ಕಾರ್ಯಗಳನ್ನು ಮಾಡಬೇಕು. ಮರಳು ಭೂಮಿಗೆ ಹೋಲಿಸಿದರೆ, ಎರೆ ಭೂಮಿಯಲ್ಲಿ ಬೇಸಾಯದ ಕಾರ್ಯಗಳಿಗೆ ಹೆಚ್ಚು ಅವಧಿಯು ದೊರೆಯುತ್ತದೆ.

ರೇವೆಯ ಪ್ರಾಬಲ್ಯವಿರುವ ಮಣ್ಣು : ರೇವೆಯ ಪ್ರಾಬಲ್ಯಿರುವ ಮಣ್ಣು ಸಾಂಧ್ರಗೊಳ್ಳುವ (ಬಿಗಿಯಾದ ಅಥವಾ ಗಟ್ಟಿಯಾಗುವ) ಸಾಧ್ಯತೆಯಿದೆಯಲ್ಲವೇ, ಮಣ್ಣಿನ ಮೇಲ್ಬಾಗವು ಹೆಪ್ಪುಗಟ್ಟುತ್ತದೆ. ಆದ್ದರಿಂದ ಇಂತಹ ಮಣ್ಣುಗಳಿಗೆ ಸಾವಯವ ಗೊಬ್ಬರಗಳನ್ನು ಸೇರಿಸುವುದು ಪ್ರಯೋಜನಕಾರಿ. ಮರಳನ್ನು ಬೆರೆಸುವುದರಿಂದಲೂ ಈ ಬಗೆಯ ಮಣ್ಣು ಉತ್ತಮಗೊಳ್ಳಬಹುದು.

ಗೋಡು ಮಣ್ಣು : ಗೋಡು ಮಣ್ಣಿನಲ್ಲಿ ಮರಳು, ರೇವೆ ಮತ್ತು ಎರೆ ಕಣಗಳ ಗುಣಧರ್ಮಗಳು ಸಮ ಪ್ರಮಾಣದಲ್ಲಿ ಸಮ್ಮಿಶ್ರವಾಗಿರುವುದರಿಂದ ಇಂತಹ ಮಣ್ಣುಗಳ ನಿರ್ವಹಣೆಯು ಸುಲಭ. ಜಲಧಾರಣಾ ಸಾಮರ್ಥ್ಯ, ಫಲವತ್ತತೆ, ಹವೆಯ ಚಲನೆ ಇತ್ಯಾದಿಗಳ ದೃಷ್ಟಿಯಿಂದಲೂ ಗೋಡು ಮಣ್ಣು ಉತ್ತಮವೆನ್ನಬಹುದು. ಈ ಮಣ್ಣಿನಲ್ಲಿ ಎರೆಡ ಕಣಗಳ ಪ್ರಮಾಣವು ಸುಮಾರು ಶೇಕಡಾ ೭ ರಿಂದ ೨೭ ಇರುತ್ತದೆ. ಆದರೆ, ಮರಳು ಮತ್ತು ರೇವೆಗಳ ಪ್ರಮಾಣಗಳು ಸಮಸಮವಾಗಿರುತ್ತವೆ. ಸಾಕಷ್ಟು ಸಾವಯವ ಪದಾರ್ಥವಿರುವ ಗೋಡು ಮಣ್ಣು ಹಲವು ಬೆಳೆಗಳಿಗೆ ಯೋಗ್ಯವಾಗಿದೆ.

ವಿವಿಧ ಗಾತ್ರದ ಕಣಗಳ ಪ್ರಮಾಣದಲ್ಲಿ ಬದಲಾವಣೆ: ಮಣ್ಣಿನಲ್ಲಿರು ಕಣಗಳ ಗಾತ್ರವು ಸುಲಭವಾಗಿ ಬದಲಾವಣೆ ಹೊಂದುವುದಿಲ್ಲ. ಗಾತ್ರದಲ್ಲಿ ಅತಿ ಕಡಮೆ ಬದಲಾವಣೆಯಾಗುವುದಕ್ಕೂ ನೂರಾರು ವರ್ಷಗಳ ಕಾಲ ಬೇಕಾಗುತ್ತದೆ. ಕೃಷಿ ಕಾರ್ಯಗಳಿಂದಲೂ ಕಣಗಳ ಗಾತ್ರವು ಬದಲಾಗುವುದಿಲ್ಲ.

ಕೆಲವು ವಿಶಿಷ್ಟ ಸಂದರ್ಭಗಳಲ್ಲಿ, ಬೇರೆ ಗಾತ್ರದ ಕಣಗಳಿರುವ ಮಣ್ಣನ್ನು ಹೊರಗಿನಿಂದ ತಂದು ಸ್ಥಾನಿಕ ಮಣ್ಣಿನೊಡನೆ ಮಿಶ್ರಮಾಡಿದರೆ ಮಾತ್ರ ಕಣಗಳ ಗಾತ್ರದಲ್ಲಿ ಕೆಲವು ಮಟ್ಟಿನ ಬದಲಾವಣೆಗಳನ್ನು ತರಲು ಸಾಧ್ಯ. ಉದಾಹರಣೆಗೆ, ಅತಿ ಜಿಗುಟು ಜೇಡಿ ಮಣ್ಣಿಗೆ ಹೊರಗಿನಿಂದ ಮರಳು ಮಣ್ಣನ್ನು ತಂದು ಮಿಶ್ರಮಾಡುವುದರಿಂದ, ಅತಿ ಸವಕಳಿಯನ್ನು ಹೊಂದಿದ ಮಣ್ಣನ್ನು ತಂದು ಮಿಶ್ರಮಾಡುವುದರಿಂದ, ಅತಿ ಸವಕಳಿಯನ್ನು ಹೊಂದಿದ ಮಣ್ಣಿಗೆ ಹೊರಗಿನಿಂದ ಉತ್ತಮ ಮಣ್ಣನ್ನು ತಂದು ಹಾಕುವುದರಿಂದ, ಸ್ಥಾನಿಕ ಮಣ್ಣಿನಲ್ಲಿರುವ ಕಣಗಳ ಗಾತ್ರದ ಪ್ರಮಾಣದಲ್ಲಿ ಬದಲಾವಣೆಯನ್ನು ತರಲು ಸಾಧ್ಯ. ಆದರೆ, ಇದು ಶ್ರಮದ ಮತ್ತು ಖರ್ಚಿನ ಕಾರ್ಯವಾಗಿರುವುದರಿಂದ, ಇದನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ವಿಶಾಲವಾದ ಕ್ಷೇತ್ರದಲ್ಲಿ ಅಳವಡಿಸುವುದು ಸಾಧ್ಯವಾಗದ ಮಾತು.

ಮಣ್ಣಿನಕಣಗಳರಚನೆ:

ಮಣ್ಣಿನಲ್ಲಿರುವ ಕಣಗಳು ವಿಶಿಷ್ಟ ವಿನ್ಯಾಸದಲ್ಲಿ ಒಂದಕ್ಕೊಂದು ಅಂಟಿಕೊಂಡಿರುವ ರೀತಿಗೆ ಕಣಗಳ ರಚನೆ ಎಂದು ಹೆಸರು. ರಚನೆಗಳ ನಿರ್ಮಾಣದಲ್ಲಿ ಕಣಗಳು ಪ್ರತ್ಯೇಕವಾಗಿ ಭಾಗವಹಿಸಬಹುದು ಇಲ್ಲವೇ ಸಂಯುಕ್ತ ಕಣಗಳ ಭಾಗಿಯಾಗಬಹುದು.

ಮಣ್ಣಿನ ಗುಣಧರ್ಮಗಳನ್ನು ನಿರ್ಧರಿಸುವಲ್ಲಿ ಕಣಗಳ ರಚನೆಯೂ ಬಹು ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಣಗಳ ಗಾತ್ರದ ಆಧಾರದ ಮೇಲೆ ಒಂದೇ ವರ್ಗಕ್ಕೆ ಸೇರಿದ ಎರಡು ಮಣ್ಣುಗಳ ರಚನೆಯು ವಿಭಿನ್ನವಾಗಿದ್ದರೆ ಅವೆರಡು ಮಣ್ಣುಗಳಲ್ಲಿ ಬೆಳೆಯುವ ಸಸ್ಯಗಳ ಬೆಳವಣಿಗೆಯಲ್ಲಿ ಬೃಹತ್ ಅಂತರವು ಕಂಡುಬರುತ್ತದೆ. ಮಣ್ಣಿನ ಕಣಗಳ ರಚನೆಯನ್ನು ಅಪೇಕ್ಷಿತ ಮಟ್ಟವನ್ನು ಇಡಬೇಕಾದರೆ ಮಣ್ಣಿನ ಈ ಗುಣಧರ್ಮದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದಿರಬೇಕು. ರಚನೆಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಕೆಳಗಿನಂತಿವೆ:

ಕಣಗಳ ರಚನೆಯ ಪ್ರಕಾರಗಳು :  ಮಣ್ಣಿನ ಕಣಗಳ ಆಕಾರದ ಮೇಲಿಂದ ಈ ಕೆಳಕಾಣಿಸಿದ ಪ್ರಕಾರಗಳನ್ನು ಗುರುತಿಸಲಾಗಿದೆ.

. ರಚನೆ ರಹಿತ : ಹೆಸರೇ ಸೂಚಿಸುವಂತೆ ಈ ಬಗೆಯ ರಚನೆಯಲ್ಲಿ ಒಂದು ನಿರ್ಧಿಷ್ಟವಾದ ವಿನ್ಯಾಸವಿರುವುದಿಲ್ಲ. ಇದರಲ್ಲಿ ಎರಡು ಉಪ – ಗುಂಪುಗಳಿವೆ.

i) ಏಕ ಕಣ ರಚನೆ : ಇಲ್ಲಿ ಕಣಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ. ಪ್ರತಿ ಕಣವೂ ಸ್ವತಂತ್ರವಾಗಿಯೇ ಕಾರ್ಯವನ್ನು ನಿರ್ವಹಿಸುತ್ತದೆ. ಮರಳಿನದೇ ಪ್ರಾಬಲ್ಯವಿರುವ ಮಣ್ಣಿನಲ್ಲಿ ಈ ಪ್ರಕಾರದ ರಚನೆಯನ್ನು ಕಾಣಬಹುದು.

ii) ಮುದ್ದೆ : ಮಣ್ಣಿನ ಕಣಗಳೆಲ್ಲ ಒಂದಕ್ಕೊಂದು ಬಿಗಿಯಾಗಿ ಅಂಟಿಕೊಂಡು, ಒಂದು ಮುದ್ದೆಯಂತಾಗಿರುತ್ತವೆ. ಇಲ್ಲಿ ಯಾವುದೇ ನಿರ್ಧಿಷ್ಟ ರಚನೆಯು ಕಂಡುಬರುವುದಿಲ್ಲ. ಮಣ್ಣು ನಿರ್ಮಾಣಗೊಳ್ಳುವ ಮೂಲದ್ರವ್ಯದಲ್ಲಿ ಎರೆ ಕಣಗಳ ಬಾಹುಲ್ಯವಿದ್ದಲ್ಲಿ, ಈ ರೀತಿಯ ರಚನೆಯುಂಟಾಗುತ್ತದೆ.

. ರಚನೆಯುತ : ಇಲ್ಲಿ ನಾಲ್ಕು ಗುಂಪುಗಳನ್ನು ಗುರುತಿಸಲಾಗಿದೆ. ಪ್ರತಿ ಗುಂಪಿನಲ್ಲಿಯೂ ಎರಡೆರಡು ಉಪ ಗುಂಪುಗಳಿವೆ.

i) ಗೋಲಾಕಾರದ ರಚನೆ :ಗೋಲಾಕಾರದವಾಗಿರುವ ಈ ರಚನೆಯ ಗಾತ್ರವು ೧.೨೫ ಸೆಂ.ಮೀ.ಗಿಂತ ಕಡಮೆಯಾಗಿರುತ್ತದೆ. ರಚನೆಗಳ ಮಧ್ಯದಲ್ಲಿ ಸ್ಥಳಾವಕಾಶವಿರುವುದರಿಂದ, ನೀರು ಮತ್ತು ಹವೆಯ ಚಲನವಲನಕ್ಕೆ ಅಡ್ಡಿಯುಂಟಾಗುವುದಿಲ್ಲ. ಅಲ್ಲದೇ, ಸಸ್ಯಗಳ ಬೇರುಗಳೂ ನಿರಾತಂಕವಾಗಿ ಬೆಳೆಯಬಲ್ಲವು. ಈ ಪ್ರಕಾರದ ರಚನೆಯುಳ್ಳ ಸಾಕಷ್ಟು ಸಾವಯವ ಪದಾರ್ಥವಿರುವ ಮೇಲ್ಮಣ್ಣಿನಲ್ಲಿ ಕಂಡುಬರುತ್ತದೆ. ಈ ಗುಂಪಿನ ರಚನೆಯಲ್ಲಿ ಎರಡು ಉಪ ಗುಂಪುಗಳಿವೆ.

 • ಕಾಳಿನಾಕಾರದ ರಚನೆ
 • ಕಾಳಿನಾಕಾರದ ಸಚ್ಛಿದ್ರ ರಚನೆ: ಈ ಉಪ ಗುಂಪಿನಲ್ಲಿ ಸೂಕ್ಷ್ಮ ರಂಧ್ರಗಳು ಮೇಲಿನ ಉಪ ಗುಂಪಿನಲ್ಲಿ ಇರುವುದಕ್ಕಿಂತ ಅಧಿಕವಾಗಿರುತ್ತವೆ.

ii) ಷಡ್ಭುಜ ಘನಾಕಾರ ರಚನೆ : ಆರು ಸಮಭುಜಗಳಿರುವ ಈ ಘನ ಆಕಾರದ ರಚನೆಯು ಗಾತ್ರದಲ್ಲಿ ೧೦ ಸೆಂ.ಮೀ. ನಷ್ಟಿರಬಹುದು. ಇವುಗಳನ್ನು ಗುರುತಿಸುವುದು, ಸುಲಭ. ಈ ರಚನೆಗಳು ಒಂದಕ್ಕೊಂದು ಭದ್ರವಾಗಿ ಅಂಟಿಕೊಂಡಿರುವುದರಿಂದ, ಎರಡು ರಚನೆಗಳ ಮಧ್ಯೆ ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಹೀಗಾಗಿ, ಇಂತಹ ರಚನೆಗಳಿರುವ ಮಣ್ಣಿನಲ್ಲಿ, ನೀರು ಮತ್ತು ಹವೆಯು ಸರಿಯಾಗಿ ಚಲಿಸಲಾಗದೆ ಸಸ್ಯಗಳ ಉತ್ತಮ ಬೆಳವಣಿಗೆಗೆ ಅಡಚಣೆಯಾಗುತ್ತದೆ.

ಈ ರಚನೆಯಲ್ಲಿ ಎರಡು ಉಪ ಗುಂಪುಗಳಿವೆ :

 • ಸುಸ್ಪಷ್ಟ ಮೂಲೆಗಳಿರುವ ರಚನೆ : ಮೂಲೆಗಳು ಹರಿತವಾಗಿದ್ದು, ಸ್ಪಷ್ಟವಾಗಿ ಗೋಚರಿಸುತ್ತವೆ. ಇವು ಮಣ್ಣಿನ B ವಲಯದಲ್ಲಿ ಕಂಡುಬರುತ್ತವೆ.
 • ಅಸ್ಪಷ್ಟ ಮೂಲೆಗಳಿರುವ ರಚನೆ :ಮೂಲೆಗಳು ನುಣುಪಾಗಿರುತ್ತವೆ. ಹೀಗಾಗಿ, ಅವು ಅಷ್ಟು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಈ ರಚನೆಗಳು A ಮತ್ತು B ವಲಯಗಳೆರಡಲ್ಲಿಯೂ ಕಂಡುಬರುತ್ತವೆ.

iii) ಲೋಲಕ ಆಕಾರದ ರಚನೆ : ದಪ್ಪಕ್ಕಿಂತ ಎತ್ತರವೇ ಅಧಿಕವಾಗಿರುವುದು ಈ ರಚನೆಯ ವೈಶಿಷ್ಟ್ಯ. ಶುಷ್ಕ ಪ್ರದೇಶದ, ಸೋಡಿಯಂ ಪ್ರಾಬಲ್ಯವಿರುವ ಮಣ್ಣಿನ B ವಲಯದಲ್ಲಿ ಈ ರಚನೆಯು ಸಾಮಾನ್ಯವಾಗಿ ಕಂಡುಬರುತ್ತದೆ. A ವಲಯದಲ್ಲಿ ಈ ರಚನೆಯು ಕಾಣಿಸಿಕೊಳ್ಳುವುದು ಅಪರೂಪ. ಈಬಗೆಯ ರಚನೆಯಲ್ಲಿ ಎರಡು ಉಪ ಗುಂಪುಗಳಿವೆ.

 • ಲೋಲಕ ಆಕಾರದ ರಚನೆ: ರಚನೆಯ ತಲೆಯ ಭಾಗವು ಸಪಾಟಾಗಿರುತ್ತದೆ.
 • ಸ್ತಂಭಾಕಾರದ ರಚನೆ : ರಚನೆಯ ಮೇಲ್ಬಾಗದ ಸೂಕ್ಷ್ಮ ಕಣಗಳು ಕೆಳ ಭಾಗದ ದಿಕ್ಕಿನಲ್ಲಿ ಚಲಿಸಿರುವುದರಿಂದ ತಲೆಯ ಭಾಗವು ಗೋಲಾಕಾರವನ್ನು ಹೊಂದಿರುತ್ತದೆ.

iv) ತಗಡಿನ (ತಟ್ಟೆಯ) ಆಕಾರದ ರಚನೆ : ಈ ಪ್ರಕಾರದ ರಚನೆಯು ಲಂಭ ದಿಕ್ಕಿಗಿಂತ ಅಡ್ಡ ದಿಕ್ಕಿನಲ್ಲಿಯೇ ಅಧಿಕವಾಗಿ ಬೆಳೆದಿರುತ್ತದೆ. ಎಲ್ಲಾ ಪ್ರಕಾರದ ರಚನೆಗಳೂ ಮಣ್ಣಿನ ನಿರ್ಮಾಣದ ಸಮಯದಲ್ಲಿ ಅಭಿವೃದ್ಧಿಗೊಳ್ಳುತ್ತವೆಯಾದರೂ ಈ ಗುಂಪಿನ ರಚನೆಯು ಮಣ್ಣಿನ ಮೂಲದ್ರವ್ಯದಿಂದ ಹೆಚ್ಚು ಪ್ರಭಾವಿತವಾಗಿದೆ ಎನ್ನಬಹುದು. ಈ ಪ್ರಕಾರದ ರಚನೆಯಲ್ಲಿ ಎರಡು ಉಪ ಗುಂಪುಗಳಿವೆ.

 • ತಗಡಿನ ಆಕಾರದ ರಚನೆ : ಈ ಗುಂಪಿನ ರಚನೆಯು ಕೆಳಗೆ ಹೇಳಿದ ಪ್ರಕಾರದ ರಚನೆಗಿಂತ ತುಲನಾತ್ಮಕವಾಗಿ ದಪ್ಪವಾಗಿರುತ್ತದೆ.
 • ಪತ್ರಾ (ಹಾಳೆ)ಕಾರದ ರಚನೆ: ಈ ರಚನೆಯು ಸಸ್ಯದ ಎಲೆಗಿಂತ ತೆಳುವಾಗಿರುತ್ತದೆ. ಸಾಮಾನ್ಯವಾಗಿ ಮೈಕಾ, ಬಯೋಟೈಟ್ ಗಳಂತಹ ಖನಿಜಗಳಿರುವ ಮಣ್ಣಿನಲ್ಲಿ ಈ ಉಪ – ಗುಂಪಿನ ರಚನೆಯನ್ನು ಕಾಣಬಹುದು.

ಚಿತ್ರ ೭ : ಮಣ್ಣಿನ ಕಣಗಳ ವಿಭಿನ್ನ ರೀತಿಯ ರಚನೆಗಳು

. ನಷ್ಟಗೊಂಡ ರಚನೆ: ಅತಿ ಹಸಿಯಾಗಿರುವ ಮಣ್ಣನ್ನು, ಅದರಲ್ಲಿಯೂ ಎರೆ ಪ್ರಮಾಣವು ಅಧಿಕವಿರುವ ಮಣ್ಣನ್ನು ತುಳಿದರೆ ಅಥವಾ ನೇಗಿಲು ಇಲ್ಲವೇ ಬೇಸಾಯದ ಇತರೆ ಉಪಕರಣಗಳನ್ನು ಬಳಸಿದರೆ, ಮಣ್ಣಿನ ರಚನೆಯು ನಾಶವಾಗಿ, ಮಣ್ಣು ರಾಡಿಯಂತಾಗುತ್ತದೆ. ಮಧ್ಯಮ ಮತ್ತು ದೊಡ್ಡ ಆಕಾರದ ರಂಧ್ರಗಳು ಇಲ್ಲದಂತಾಗುತ್ತವೆ. ಕೆಸರು ಪದ್ಧತಿಯಿಂದ ಬೆಳೆಯುವ ಬತ್ತದ ಬೆಳೆಗೆ ಈ ಪ್ರಕಾರದ ರಚನೆಯು ಅತ್ಯಾವಶ್ಯಕ. ಆದರೆ, ರಚನೆಯು ನಷ್ಟಗೊಂಡ ಈ ಸ್ಥಿತಿಯು ಇತರೆ ಬೆಳವಣಿಗೆಗಳಿಗೆ ಅಪೇಕ್ಷಣೀಯ ಎನ್ನಬಹುದು.

ಕಣಗಳ ರಚನೆಯ ನಿರ್ಮಾಣ : ಮಣ್ಣಿನ ನಿರ್ಮಾಣಕ್ಕೆ ಕಾರಣವಾದ ಮೂಲದ್ರವ್ಯಗಳು ಸಾಮಾನ್ಯವಾಗಿ ಯಾವುದೇ ರಚನೆಯನ್ನು ಹೊಂದಿರುವುದಿಲ್ಲ. ಮಣ್ಣು ನಿರ್ಮಾಣ ಗೊಳ್ಳುತ್ತಾ ಸಾಗಿದಂತೆ ಕಣಗಳ ರಚನೆಯಗಳೂ ನಿರ್ಮಾಣಗೊಳ್ಳುತ್ತವೆ. ಈ ಸಂದರ್ಭದಲ್ಲಿ ಕೆಳಗಿನ ಸಂಗತಿಗಳನ್ನು ಗಮನಿಸಬಹುದು.

i) ರಚನೆಯಲ್ಲಿ ಭಾಗವಹಿಸುವ ಕಣಗಳು : ಮರಳು ಮತ್ತು ರೇವೆಯ ಕಣಗಳು ರಚನೆಯ ನಿರ್ಮಾಣದಲ್ಲಿ ಸ್ವತಂತ್ರವಾಗಿ ಭಾಗವಹಿಸಲಾರವು. ಆದರೆ ಎರೆ ಕಣ ಮತ್ತು ಸಾವಯವ ಪದಾರ್ಥದ ಕಣಗಳೊಂದಿಗೆ ಸಂಬಂಧವನ್ನು ಹೊಂದಿದಾಗ ಮಾತ್ರ ರಚನೆಯ ಉತ್ಪತ್ತಿಯಲ್ಲಿ ಇವು ಪಾಲುಗೊಳ್ಳುತ್ತವೆ. ಆದ್ದರಿಂದ ಸೂಕ್ಷ್ಮವಾಗಿರುವ ಎರೆ ಕಣಗಳು ಹಾಗೂ ಸಾವಯವ ಕಣಗಳು ಮಾತ್ರ ರಚನೆಯ ನಿರ್ಮಾಣದಲ್ಲಿ ಪ್ರಮುಖವಾಗಿವೆ.

ii) ಗುಂಪುಗಳಾಗುವ ಕ್ರಿಯೆ : ರಚನೆಯು ನಿರ್ಮಾಣವಾಗಬೇಕಾದರೆ, ಸಂಬಂಧಿಸಿದ ಕಣಗಳು ಒಂದೆಡೆ ಸೇರಬೇಕು. ಮಣ್ಣಿನ ಒಂದಡೆ ಸೇರಲು ಕೆಳಗೆ ತಿಳಿಸಿದ ಕ್ರಿಯೆಗಳಿಂದ ಸಹಾಯವು ದೊರೆಯುತ್ತದೆ.

 • ಮಣ್ಣು ಹಸಿಯಾಗುವ ಮತ್ತು ಒಣಗುವ, ಬಿಸಿಯಾಗುವ ಮತ್ತು ತಣ್ಣಗಾಗುವ, ಮಣ್ಣಿನಲ್ಲಿರುವ ನೀರು ಹೆಪ್ಪುಗಟ್ಟುವ ಮತ್ತು ಕರಗುವ ಕ್ರಿಯೆಗಳಿಂದ ಮಣ್ಣು ಕುಗ್ಗುವುದು. ಮತ್ತು ಹಿಗ್ಗುವುದು. ಈ ಕ್ರಿಯೆಗಳು ನಿರಂತರವಾಗಿ ನಡೆದವೆಂದರೆ ಕಣಗಳು ಮೊದಲಿನ ಸ್ಥಳದಿಂದ ಸಡಿಲಗೊಂಡು ಒಂದೆಡೆ ಬಂದು ಸೇರಲು ಪ್ರಚೋದನೆಯು ದೊರೆಯುತ್ತದೆ.
 • ಇದೇ ಸಮಯದಲ್ಲಿ, ಸಸ್ಯಗಳು ಜಿನುಗು ಬೇರುಗಳು ಬೆಳೆಯುತ್ತಾ ಮಣ್ಣಿನಲ್ಲಿ ಮುಂದೆ ಸಾಗಿದಾಗ, ಅವುಗಳ ಒತ್ತಡಕ್ಕೆ ಸಿಕ್ಕಿದ ಕಣಗಳು ಸರಿಯತೊಡಗುತ್ತವೆ. ಈ ಬೇರುಗಳು ಸತ್ತು ಅಲ್ಲಿಯೇ ಕಳಿತವೆಂದರೆ ಅವು ಇದ್ದಲ್ಲಿ ಸಣ್ಣ ರಂಧ್ರಗಳು ಉಳಿದುಕೊಳ್ಳುತ್ತವೆ.
 • ಮಣ್ಣಿನಲ್ಲಿ ವಾಸಿಸುವ ಎರೆ ಹುಳು ಮತ್ತು ಇತರೆ ಪ್ರಾಣಿಗಳ ಚಟುವಟಿಕೆಗಳಿಂದಲೂ ಕಣಗಳೂ ಸ್ವಸ್ಥಳದಿಂದ ಸರಿಯುವಂತಾಗಿ ಅವು ಒಂದೆಡೆ ಬರಲು ಸಾಧ್ಯವಗುತ್ತದೆ.

ಕಣಗಳ ರಚನೆಯು ಸ್ಥಿರಗೊಳ್ಳುವ ಕ್ರಿಯೆ : ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳು ಗುಂಪುಗೂಡಿದವೆಂದರೆ ಕಣಗಳ ರಚನೆಯಲ್ಲಿ ಮೊದಲನೆಯ ಹಂತವು ಮುಗಿದಂತಾಯಿತು. ಒಂದೆಡೆ ಬಂದ ಈ ಕಣಗಳು ಸ್ಥಿರಗೊಂಡರೆ ಮಾತ್ರ ಪ್ರಯೋಜನಕಾರಿಯಾದ ರಚನೆಗಳು ನಿರ್ಮಾಣಗೊಂಡಂತೆ. ಮುಂದೆ ಇವರಿಸಿದ ಕಾರ್ಯಗಳಿಂದ ಸ್ಥಿರವಾದ ರಚನೆಯು ಸಾಧ್ಯವಾಗುತ್ತದೆ.

i) ರಾಸಾಯನಿಕ ಬಂಧ :ಸಿಲಿಕೇಟ್ ಖನಿಜಗಳ ಸುತ್ತ ಋಣ ಚಾರ್ಜ್‌ಗಳು ಇರುತ್ತವೆಯೆಂದೂ ಈ ಋಣ ಚಾರ್ಜ್‌ಗಳು ಧನ ಅಯಾನ್‌ಗಳನ್ನು ತಮ್ಮ ಕಡೆಗೆ ಸಂಬಂಧಿಸಿದಂತೆ, ಮೂರು ರೀತಿಯಿಂದ ಸಿಲಿಕೇಟ್ ಕಣಗಳು ಒಂದಕ್ಕೊಂದು ಅಂಟಿಕೊಳ್ಳಲು ಸಾಧ್ಯವಿದೆ.

 • ಧನ ಅಯಾನಗಳ ಬಂಧದಿಂದ : ಪ್ರತಿ ಕ್ಯಾಲ್ಸಿಯಂ ಅಯಾನ್‌ಗೆ ಎರಡು ಧನ ಚಾರ್ಜ್‌ಗಳಿವೆ. ಆದ್ದರಿಂದ, ಒಂದು ಕ್ಯಾಲ್ಸಿಯಂ ಅಯಾನ್, ಸಿಲಿಕೇಟ್, ಖನಿಜದ ಮೇಲಿರುವ ಎರಡು ಋಣ ಅಯಾನ್‌ಗಳಿಗೆ ಅಂಟಿಕೊಳ್ಳಬಹುದು. ಈ ಕ್ರಿಯೆಯು ನಡೆದಾಗ ಕೆಲವು ಕ್ಯಾಲ್ಸಿಯಂ ಅಯಾನ್‌ಗಳ ಒಂದು ಧನ ಚಾರ್ಜ್‌, ಒಂದು ಸಿಲಿಕೆಟ ಕಣದೊಳಗಿನ ಋಣ ಚಾರ್ಜ್‌ಗೆ ಮತ್ತು ಇನ್ನೊಂದು ಧನ ಚಾರ್ಜ್‌ ಎರಡನೆಯ ಸಿಲಿಕೇಟ್ ಕಣದ ಋಣ ಚಾರ್ಜ್‌ಗೆ ಆಕರ್ಷಿತವಾಯಿತೆಂದರೆ, ಎರಡು ಸಿಲಿಕೇಟ್ ಕಣಗಳನ್ನು ಬಂಧಿಸಿದಂತಾಗುತ್ತದೆ. ಈ ಕ್ರಿಯೆಯಲ್ಲಿ, ಹಲವು ಕ್ಯಾಲ್ಸಿಯಂ ಅಯಾನ್‌ಗಳು ಭಾಗವಹಿಸಿದಾಗ, ಹಲವು ಸಿಲಿಕೇಟ್ ಕಣಗಳು ಒಂದಕ್ಕೊಂದು ಅಂಟಿಕೊಂಡಂತಾಯಿತು.
 • ಸಿಲಿಕೇಟ್ ಖನಿಜದ ಅಂಚಿನಲ್ಲಿರುವ ಚಾರ್ಜ್‌ಗಳ ಬಂಧದಿಂದ : ಸಿಲಿಕೇಟ್ ಖನಿಜಗಳ ಅಂಚಿನಲ್ಲಿ, ಋಣ ಚಾರ್ಜ್‌ಗಳಲ್ಲದೇ, ಕೆಲವು ಧನ ಚಾರ್ಜ್‌ಗಳೂ ಇರುತ್ತವೆ. ಒಂದು ಸಿಲಿಕೇಟ್ ಖನಿಜದ ಅಂಚಿನಲ್ಲಿರುವ ಋಣ ಚಾರ್ಜ್‌, ಇನ್ನೊಂದು ಸಿಲಿಕೇಟ್ ಖನಿಜದ ಅಂಚಿನಲ್ಲಿರುವ ಚಾರ್ಜ್‌ನ್ನು ಆಕರ್ಷಿಸಿದಾಗ, ಎರಡೂ ಕಣಗಳು ಪರಸ್ಪರ ಅಂಟಿಕೊಳ್ಳುತ್ತವೆ. ಹಲವು ಕಣಗಳಲ್ಲಿ ಈ ರೀತಿಯ ಬಂಧನವು ಏರ್ಪಡಬಹುದು.
 • ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಜಲಯುತ ಆಕ್ಸೈಡ್‌ಗಳಿಂದ ಬಂಧನ : ಉಷ್ಣ ಕಟಿ ಬಂಧಗಳ ಮಣ್ಣಿನಲ್ಲಿ ಸಿಲಿಕೇಟ್ ಖನಿಜಗಳ ಸಂಗಡ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಜಲಯುತ ಆಕ್ಸೈಡ್ ಸೂಕ್ಷ್ಮ ಕಣಗಳಿರುತ್ತವೆಯೆಂದು ಹಿಂದಿನ ಅಧ್ಯಾಯದಲ್ಲಿ ಹೇಳಲಾಗಿದೆ. ಈ ಕಣಗಳ ಮೇಲೆ, ಧನ ಚಾರ್ಜ್‌ಗಳಿರುತ್ತವೆ. ಹೀಗಾಗಿ ಈ ಆಕ್ಸೈಡ್ ಗಳು, ಋಣ ಚಾರ್ಜ್‌ಗಳಿರುವ ಸಿಲಿಕೇಟ್ ಖನಿಜದ ಸೂಕ್ಷ್ಮ ಕಣಗಳನ್ನು ಬಂಧಿಸುತ್ತವೆ.

ii) ಸಾವಯವ ವಸ್ತುಗಳಿಂದ ಬಂಧ : ಒಂದಕ್ಕಿಂತ ಅಧಿಕ ರೀತಿಗಳಿಂದ, ಸಾವಯವ ವಸ್ತುಗಳ ಮೂಲಕ ಎರೆ ಕಣಗಳಲ್ಲಿ ಬಂಧನವುಂಟಾಗಬಹುದು. ಪ್ರಮುಖವಾದವುಗಳು ಈ ಕೆಳಗಿನಂತಿವೆ.

 • ಸಾವಯವ ಕಣಗಳ ಮೇಲಿರುವ ಧನ ಚಾರ್ಜ್‌ಗಳೂ, ಸಿಲಿಕೇಟ್ ಖನಿಜಗಳ ಮೇಲಿರುವ ಋಣ ಚಾರ್ಜ್‌ಗೂ ಸಂಬಂಧವೇರ್ಪಟ್ಟು ಕಣಗಳು ಒಂದನ್ನೊಂದು ಅಂಟಿಕೊಳ್ಳುತ್ತವೆ.
 • ರಾಸಾಯನಿಕ ಬಂಧವನ್ನು ವಿವರಿಸುವಾಗ ಸೂಚಿಸಿದಂತೆ, ಧನ ಅಯಾನ್‌ನ ಒಂದು ಚಾರ್ಜ್‌ ಸಾವಯವ ಕಣದ ಋಣ ಚಾರ್ಜ್‌ನೊಡನೆ ಮತ್ತು ಇನ್ನೊಂದು ಧನ ಚಾರ್ಜ್‌ ಸಿಲಿಕೇಟ್ ಕಣದ ಋಣ ಚಾರ್ಜ್‌ನೊಡನೆ ಸಂಬಂಧವನ್ನು ಹೊಂದಿ ರಚನೆಯ ನಿರ್ಮಾಣದಲ್ಲಿ ಭಾಗವಹಿಸುವ ಕಣಗಳನ್ನು ಬಂಧಿಸುತ್ತವೆ.
 • ಶಿಲೀಂದ್ರ ಮತ್ತು ಆಕ್ಟಿನೋಮೈಸಿಟೀಸ್ – ಈ ಸೂಕ್ಷ್ಮ ಜೀವಿಗಳ ತಂತುಗಳು ವೃದ್ಧಿಗೊಂಡು ಸಿಲಿಕೇಟ್ ಕಣಗಳನ್ನು ಆವರಿಸಿ ಅವುಗಳನ್ನು ಪರಸ್ಪರ ಜೋಡಿಸುತ್ತವೆ.
 • ಸಸ್ಯಗಳ ಬೇರುಗಳಿಂದ, ಬ್ಯಾಕ್ಟೀರಿಯಾಗಳಿಂದ ಮತ್ತು ಇತರೆ ಸೂಕ್ಷ್ಮ ಜೀವಿಗಳಿಂದ ಒಸರುವ ಜಿಗುಟು ದ್ರವಗಳು, ಮಣ್ಣಿನ ಕಣಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡುತ್ತವೆ.

ಕಣಗಳ ರಚನೆಯು ಹಾಳಾಗುವುದರ ಕಾರಣಗಳು : ಮಣ್ಣಿನಲ್ಲಿರುವ ಕಣಗಳ ರಚನೆಯು ಹಲವು ಕಾರಣಗಳಿಂದ ದುರ್ಬಲಗೊಳ್ಳಬಹುದು. ಇದಕ್ಕೆ ಪ್ರಮುಖ ಕಾರಣಗಳು ಕೆಳಗಿನಂತಿವೆ.

i) ಯಾವುದೇ ಬೆಳೆಯಾಗಲಿ ಅಥವಾ ಅಚ್ಛಾದನೆಯಾಗಲೀ ಇಲ್ಲದ ಮಣ್ಣಿನ ಮೇಲೆ ಮಳೆಯ ಹನಿಗಳ ನೇರ ಹೊಡೆತವು ಬೀಳುವುದರಿಂದ ರಚನೆಯು ದುರ್ಬಲಗೊಳ್ಳುತ್ತದೆ.

ii) ಬೇಸಾಯದ ಉಪಕರಣಗಳು ಮತ್ತು ಅವುಗಳನ್ನು ಎಳೆಯುವ ಟ್ರ್ಯಾಕ್ಟರ್ ಇಲ್ಲವೇ ಪವರ ಟಿಲ್ಲರಗಳ ಭಾರದಿಂದ ಮಣ್ಣು ಸಾಂದ್ರಗೊಂಡು ಕಣಗಳ ರಚನೆಯು ನಷ್ಟವಾಗುತ್ತದೆ.

iii) ಮಣ್ಣು ಅತಿ ಹಸಿಯಿರುವಾಗ ಇಲ್ಲವೇ ಪೂರ್ತಿ ಒಣಗಿದಾಗ ಭೂಮಿಯನ್ನು ಉಳುಮೆ (ಅಗೆದರೆ) ಮಾಡಿದರೆ, ಕಣಗಳ ರಚನೆಯು ದುರ್ಬಲಗೊಳ್ಳುತ್ತದೆ.

iv) ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವು ಕಡಮೆಯಾದರೆ ಕಣಗಳ ರಚನೆಯು ಅಸ್ಥಿರಗೊಳ್ಳುವುದು.

v) ಮಣ್ಣಿನಲ್ಲಿ ಸೋಡಿಯಂನ ಪ್ರಮಾಣವು ಅಧಿಕಗೊಂಡರೆ, ಕಣಗಳು ಒಂದರಿಂದ ಇನ್ನೊಂದು ದೂರ ಸರಿದು ರಚನೆಯು ನಷ್ಟವಾಗುತ್ತದೆ.

vi) ಹಲವು ದಶಕಗಳ ಹಿಂದೆ ಬಳಕೆಯಲ್ಲಿದ್ದ ಸೋಡಿಯಂ ನೈಟ್ರೇಟ್ ನಂತಹ ರಾಸಾಯನಿಕ ಗೊಬ್ಬರಗಳನ್ನು, ದೊಡ್ಡ ಪ್ರಮಾಣದಲ್ಲಿ ಮಣ್ಣಿಗೆ ಪೂರೈಸಿದಾಗ, ಅದರಲ್ಲಿರುವ ಸೋಡಿಯಂನ ಪ್ರಭಾವದಿಂದ ಕಣಗಳ ರಚನೆಯ ಮೇಲೆ ದುಷ್ಪರಿಣಾಮವಾಗುತ್ತಿತ್ತು. ಅದರಂತಯೇ ಈಗ ಅಷ್ಟಾಗಿ ಪ್ರಚಲಿತವಿಲ್ಲದ ಅಮೋನಿಯಂ ಸಲ್ಫೇಟ್ ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದಾಗಲೂ ಕಣಗಳ ರಚನೆಯ ಮೇಲೆ ದುಷ್ಪರಿಣಾಮವುಂಟಾಗುತ್ತಿತ್ತು.

vii) ಮಣ್ಣಿನಲ್ಲಿರುವ ಹೆಚ್ಚಾದ ನೀರನ್ನು ಬಸಿದು ತೆಗೆಯದಿದ್ದರೆ ಕಣಗಳ ರಚನೆಯು ನಷ್ಟವಾಗುವುದು.

ಮಣ್ಣಿನಲ್ಲಿರುವ ಕಣಗಳ ರಚನೆಯು ಉತ್ತಮವಾಗಿರಲು ಅನುಸರಿಸಬೇಕಾದ ಬೇಸಾಯಕ್ರಮಗಳು : ಮಣ್ಣಿನಲ್ಲಿ ಉತ್ತಮ ರಚನೆಯು ನಿರ್ಮಾಣಗೊಂಡು ಅವು ದುರ್ಬಲಗೊಳ್ಳದೆ ಸುಸ್ಥಿತಿಯಲ್ಲಿರುವಂತೆ ಮಾಡಲು ಕೈಗೊಳ್ಳಬೇಕಾದ ಹಲವು ಮುಖ್ಯವಾದ ಕ್ರಮಗಳು ಕೆಳಗಿನಂತಿವೆ.

i) ಸಮಯೋಚಿತ ಬೇಸಾಯ ಕ್ರಮಗಳು : ಮಣ್ಣಿನಲ್ಲಿ ಆರ್ದ್ರತೆಯು, ಸೂಕ್ತ ಪ್ರಮಾಣದಲ್ಲಿದ್ದಾಗಲೇ ಬೇಸಾಯದ ವಿವಿಧ ಕಾರ್ಯಗಳನ್ನು ಕೈಗೊಳ್ಳಬೇಕು. ಅಧಿಕ ಆರ್ದ್ರತೆಯಿರುವ ಮಣ್ಣಿನಲ್ಲಿ ಅದರಲ್ಲಿಯೂ ಎರೆ ಕಣಗಳ ಪ್ರಾಬಲ್ಯವಿರುವಲ್ಲಿ ಬೇಸಾಯದ ಉಪಕರಣಗಳನ್ನು ಬಳಸಿದರೆ ಕಣಗಳ ರಚನೆಯು ನಷ್ಟವಾಗುತ್ತದೆ. ಅದರಂತೆಯೇ ಮಣ್ಣು ಪೂರ್ತಿ ಒಣಗಿರುವಾಗ ಉಳುಮೆ ಮಾಡಿದರೆ ದೊಡ್ಡ ದೊಡ್ಡ ಹೆಂಟೆಗಳು ಮೆಲೇಳಬಹುದು.

ಟ್ರಾಕ್ಟರ್, ಪವರ ಟಿಲ್ಲರ್ ಅಥವಾ ಇತರೆ ಭಾರವಾದ ಯಂತ್ರಗಳನ್ನು ಬಳಸಿದರೆ ಅವುಗಳ ಭಾರದಿಂದ ಮಣ್ಣು ಸಾಂದ್ರಗೊಂಡು ರಚನೆಯು ನಷ್ಟಗೊಳ್ಳುವುದು.ಅನುಕೂಲತೆಯಿಂಬ ಕಾರಣದಿಂದ ಬೇಸಾಯದ ಉಪಕರಣಗಳನ್ನು ಅವಶ್ಯಕತೆಗಿಂತ ಹೆಚ್ಚು ಬಾರಿ ಬಳಸಬಾರದು.

ii) ಬೆಳೆಗಳ ಪರಿವರ್ತನೆ : ಸಾಲುಗಳ ಮಧ್ಯದಲ್ಲಿರುವ ಅಂತರವು ಅಧಿಕವಾಗಿರುವ ಬೆಳೆಗಳನ್ನೇ ಒಂದು ಭೂಮಿಯಲ್ಲಿ ನಿರಂತರವಾಗಿ ಬೆಳೆದು ಮೇಲಿಂದ ಮೇಲೆ ಮಧ್ಯಂತರ ಬೇಸಾಯವನ್ನು ಮಾಡುವುದರಿಂದ, ಮಣ್ಣಿನ ರಚನೆಯ ಮೇಲೆ ದುಷ್ಪರಿಣಾಮಗಳುಂಟಾಗುತ್ತವೆ. ಇದಲ್ಲದೇ ಹೆಚ್ಚು ಅಂತರದ ಬೆಳೆಗಳಲ್ಲಿ, ಮಳೆ ಹನಿಗಳ ಹೊಡೆತದಿಂದ ಮಣ್ಣಿನರ ಚನೆಯ ಮೇಲೆ ಆಗುವ ದುಷ್ಪರಿಣಾಮವೂ ಗಣನೀಯವಾಗಿರುತ್ತದೆ. ಆದ್ದರಿಂದ ಇಂತಹ ಬೆಳೆಗಳನ್ನು ಕಡಮೆ ಅಂತರದ ಸಾಲುಗಳಲ್ಲಿ ಬೆಳೆಯುವ, ತಂತು ಬೇರುಗಳಿರುವ ಮತ್ತು ಭೂಮಿಯನ್ನು ಬೇಗನೇ ಆವರಿಸುವ ಬೆಳೆಗಳೊಡನೆ ಪರಿವರ್ತನೆಯನ್ನು ಮಾಡಬೇಕು, ಇಲ್ಲವೇ ಅಧಿಕ ಅಂತರವಿರುವ ಸಾಲುಗಳ ಮಧ್ಯದಲ್ಲಿ ಸೂಕ್ತವಾದ ಮಿಶ್ರ ಬೆಳೆಗಳನ್ನು ಬೆಳೆಯಬೇಕು.

iii) ಸಾವಯವ ವಸ್ತುಗಳ ಪೂರೈಕೆ : ಸಗಣಿ ಗೊಬ್ಬರ, ಕಾಂಪೋಸ್ಟ್, ಹಸುರೆಲೆ ಗೊಬ್ಬರ ಇಲ್ಲವೇ ಇತರೆ ಸಾವಯವ ಪದಾರ್ಥಗಳನ್ನು ಭೂಮಿಗೆ ಪೂರೈಸಿ ಮಿಶ್ರ ಮಾಡಬೇಕು. ಇದರಿಂದ, ಮಣ್ಣಿನಲ್ಲಿ ನೀರು ಮತ್ತು ಹವೆ ನಿರಂತರವಾಗಿ ಚಲಿಸಬಲ್ಲವು. ಇದಲ್ಲದೇ, ಸಾವಯವ ಪದಾರ್ಥಗಳು ಮಣ್ಣಿನಲ್ಲಿ ಕಳಿಯುವಾಗ ನಿರ್ಮಾಣಗೊಂಡ ಕೆಲವು ಸಾವಯವ ವಸ್ತುಗಳು ಕಣಗಳನ್ನು ಭದ್ರವಾಗಿ ಬಂಧಿಸಿ, ರಚನೆಯ ಸ್ಥಿರತೆಯನ್ನು ಉತ್ತಮಗೊಳಿಸುತ್ತವೆ.

iv) ಭೂ/ಮಣ್ಣು ಆಚ್ಛಾದನೆ: ಮಣ್ಣಿನ ಮೇಲ್ಬಾಗವನ್ನು ಮುಚ್ಚುವ ರೂಢಿಯು ಉತ್ತಮವಾದುದೆನ್ನಬಹುದು. ಇದಕ್ಕಾಗಿ ಬೆಳೆಗಳ ಕೊಳೆಗಳು, ಬೇಡವಾದ ಹುಲ್ಲು, ಉಪಯೋಗಕ್ಕೆ ಬಾರದ ಇತರೆ ಸಾವಯವ ಪದಾರ್ಥಗಳನ್ನು ಮಣ್ಣಿನ ಮೇಲೆ ಹಾಸುವುದರಿಂದ ಮಳೆಯ ಹನಿಗಳ ಹೊಡೆತದಿಂದ ಮಣ್ಣನ್ನು ಸಂರಕ್ಷಿಸಬಹುದು. ಇಂತಹ ಅಚ್ಛಾದನೆಯು ಹರಿಯುವ ನೀರನ್ನು ತಡೆದು, ಅದರ ವೇಗವನ್ನು ತಗ್ಗಿಸಿ ಭೂ ಸವಕಳಿಯನ್ನು ಕಡಮೆಮಾಡಬಹುದು.

v) ಹೆಚ್ಚಾದ ನೀರಿನ ನಿವಾರಣೆ : ಮಣ್ಣಿನ ಜಲಧಾರಣಾ ಸಾಮರ್ಥ್ಯವನ್ನು ಮೀರಿ, ಮಣ್ಣಿನಲ್ಲಿರುವ ಹೆಚ್ಚಾದ ನೀರನ್ನು ಭೂಮಿಯಲ್ಲಿಯೇ ಇರಗೊಟ್ಟರೆ, ಮಣ್ಣಿನ ರಚನೆಯು ನಷ್ಟವಾಗುತ್ತದೆ. ಆದ್ದರಿಂದ ಸೂಕ್ತ ವಿಧಾನವನ್ನು ಅನುಸರಿಸಿ, ಈ ನೀರನ್ನು ಭೂಮಿಯಿಂದ ಹೊರ ಹಾಕಬೇಕು. ಬಸಿದು ಹೊರ ಬಂದ ನೀರಿನ ಗುಣಮಟ್ಟವು ಉತ್ತಮವಾಗಿದ್ದರೆ ಅದನ್ನು ಬೇರೆಡೆ ನೀರಾವರಿಗೆಂದು ಬಳಸಬಹುದು.

vi) ಮಣ್ಣಿನ ರಚನೆಯನ್ನು ಸ್ಥಿರಗೊಳಿಸುವ ವಸ್ತುಗಳ ಉಪಯೋಗಗಳು : ಮಾನವ ನಿರ್ಮಿತ ಕ್ರೀಲಿಯಂ ಎಂಬ ವಸ್ತುವು ೧೯೫೨ರಲ್ಲಿ ಹೊರ ಬಂದಿತು. ಅದರ ನಂತರ ಇನ್ನೂ ಕೆಲವು ವಸ್ತುಗಳು ನಿರ್ಮಾಣಗೊಂಡವು. ಇವು ಪಾಲಿಮೋರೈಜ್ಡ್ ಸಾವಯವ ಪದಾರ್ಥಗಳು. ಈ ವಸ್ತುಗಳ ಪ್ರತಿ ಕಣದ ಸುತ್ತ ಋಣ ಚಾರ್ಜ್‌ ಇರುತ್ತದೆಯಾದ್ದರಿಂದ, ನೈಸರ್ಗಿಕ ಸಾವಯವ ಪದಾರ್ಥಗಳಂತೆಯೇ , ಇವು ಮಣ್ಣಿನ ರಚನೆಯನ್ನು ಸ್ಥಿರಗೊಳಿಸಬಲ್ಲವು. ಈ ವಸ್ತುಗಳು , ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದ ಕಳಿಯುವುದಿಲ್ಲವಾದ್ದರಿಂದ , ಒಮ್ಮೆ ಮಣ್ಣಿಗೆ ಪೂರೈಸಿದರೆ, ಹಲವಾರು ವರ್ಷಗಳವರೆಗೆ ಮಣ್ಣಿನಲ್ಲಿ ಇದ್ದು ಕಾರ್ಯನಿರತವಾಗಿರುತ್ತದೆ. ಆದರೆ, ಇವುಗಳ ಬೆಲೆಯು ದುಬಾರಿಯಾಗಿದ್ದರಿಂದ ಇವು ಬಳಕೆಗೆ ಬರಲಿಲ್ಲ.