ಕಣ್ಣಿಗೆ ಗೋಚರಿಸುವ ಮತ್ತು ಸ್ಪರ್ಶದಿಂದ ತಿಳಿಯಲು ಸಾಧ್ಯವಿರುವ ಗುಣಧರ್ಮಗಳಿಗೆ ಮಣ್ಣಿನ ಭೌತಿಕ ಗುಣಧರ್ಮಗಳೆನ್ನುತ್ತಾರೆ. ಮಣ್ಣಿನ ಆಳ, ಕಣಗಳ ಗಾತ್ರ, ಕಣಗಳ ರಚನೆಯ, ಸಚ್ಛಿದ್ರತೆ ಮತ್ತು ಆದ್ರತೆಗನುಗುಣವಾಗಿ ಕಣಗಳನ್ನು ವಿಭಿನ್ನ ಆಕಾರಗಳನ್ನಾಗಿಸುವ ಮಣ್ಣಿನ ಸಾಮರ್ಥ್ಯ ಇವುಗಳನ್ನು ಮಣ್ಣಿನ ಪ್ರಮುಖ ಭೌತಿಕ ಗುಣಧರ್ಮಗಳೆಂದು ಪರಿಗಣಿಸಲಾಗಿದೆ. ಈ ಗುಣಧರ್ಮಗಳನ್ನು ಸಸ್ಯಗಳ ಬೆಳವಣಿಗೆಯ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪರಿಣಾಮವನ್ನು ಬೀರುತ್ತವೆಯಾದ್ದರಿಂದ ಇವುಗಳ ಬಗ್ಗೆ ವಿವರಗಳನ್ನು ತಿಳಿಯುವುದರಿಂದ ಮಣ್ಣಿನ ನಿರ್ವಹಣೆಗೆ ಸಹಾಯವು ದೊರೆಯುತ್ತದೆ. ಈ ಐದು ಗುಣಧರ್ಮಗಳಲ್ಲದೆ ಮಣ್ಣಿನ ಬಣ್ಣ ಮತ್ತು ಮಣ್ಣಿನ ಉಷ್ಣತಾಮಾನ ಇವುಗಳ ಬಗ್ಗೆಯೂ ತಿಳಿದಿರುವುದು ಪ್ರಯೋಜನಕಾರಿ.

ಮಣ್ಣಿನಆಳ

ಮಣ್ಣನ್ನು ಗುಣಾತ್ಮಕ ಶಬ್ದಗಳಲ್ಲಿ ಕಡಮೆ, ಮಧ್ಯಮ ಮತ್ತು ಅಧಿಕ ಆಳವಿರುವ ಮಣ್ಣು ಎಂದು ವರ್ಣಿಸಬಹುದು. ಇದಲ್ಲದೇ, ಈ ಮೂರು ವರ್ಗಗಳಿಗೆ ಅತಿ ಕಡಮೆ ಮತ್ತು ಅತ್ಯಧಿಕ ಆಳದ ಮಣ್ಣು ಎಂಬ ಇನ್ನೆರಡು ವರ್ಗಗಳನ್ನು ಸೇರಿಸುವ ರೂಢಿಯೂ ಇದೆ. ಸಾಕಷ್ಟು ಆಳವಿರುವ ಮಣ್ಣಿನಲ್ಲಿ ಆರ್ದ್ರತೆ ಮತ್ತು ಪೋಷಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಸಂಗ್ರಹಿಸಲು ಆಸ್ಪದವಿರುತ್ತದೆ. ಆದ್ದರಿಂದ ಇಂತಹ ಮಣ್ಣುಗಳು ಸಸ್ಯದ ಬೆಳವಣಿಗೆಗೆ ಉತ್ತಮ ಪರಿಸರವನ್ನು ನಿರ್ಮಿಸುತ್ತದೆಯಲ್ಲದೇ ಯಾವುದೇ ಕಾರಣದಿಂದ ನೀರಿನ ಮತ್ತು ಪೋಷಕಗಳ ಪೂರೈಕೆಯಲ್ಲಿ ಕೆಲಮಟ್ಟಿಗೆ ವ್ಯತ್ಯಯವುಂಟಾದರೂ ಆಳವಾದ ಮಣ್ಣಿನಲ್ಲಿ ಬೆಳೆದಿರುವ ಬೆಳೆಯು ಹೆಚ್ಚು ಹಾನಿಗೀಡಾಗುವುದಿಲ್ಲ. ಆದರೆ ಕಡಮೆ ಆಳದ ಮಣ್ಣಿನಲ್ಲಿ ಈ ಅನುಕೂಲತೆಗಳೂ ಇರುವುದಿಲ್ಲ. ಆದ್ದರಿಂದ ಕಡಮೆ ಆಳದ ಮಣ್ಣಿಗಿಂತ ಆಳವಾದ ಮಣ್ಣಿನಲ್ಲಿ ಸಾಮಾನ್ಯವಾಗಿ ಅಧಿಕ ಇಳುವರಿಯು ದೊರೆಯುತ್ತದೆ.

ಮಣ್ಣಿನಕಣಗಳಗಾತ್ರ

ಹಲವು ಬಗೆಯ ಮಣ್ಣುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಅವುಗಳಲ್ಲಿ ಕಲ್ಲಿನ ಚೂರುಗಳು (ತುಣುಕುಗಳು ) ಮತ್ತು ಸಣ್ಣ ಪುಟ್ಟ ಹರಳುಗಳಿಂದ ಪ್ರಾರಂಭವಾಗಿ ಬರಿಗಣ್ಣಿಗೆ ಕಾಣದಷ್ಟು ನಿರವಯವ ಕಣಗಳು ಇವೆಯೆಂಬುವುದು ಗೊತ್ತಾಗುತ್ತದೆ.

ಆದರೆ ಯಾವ ಗಾತ್ರದ ಕಣಗಳು ಮಣ್ಣಿನ ಗುಣಧರ್ಮಗಳ ಮೇಲೆ ಮತ್ತು ಆ ಮೂಲಕ ಸಸ್ಯಗಳ ಬೆಳವಣಿಗೆಯ ಮೇಲೆ ಗಣನೀಯ ಪರಿಣಾಮಗಳನ್ನು ಉಂಟು ಮಾಡುತ್ತವೆಯೋ ಅವುಗಳನ್ನು ಮಾತ್ರ ಮಣ್ಣಿನ ಭಾಗವೆಂದು ಪರಿಗಣಿಸುವ ವಿಧಾನವು ಸಮಂಜಸವಾಗಿರುತ್ತದೆ. ಆ ದೃಷ್ಟಿಯಿಂದ ೨ ಮಿ.ಮೀ. ಅಥವಾ ಅದಕ್ಕಿಂತ ಕಡಮೆ ವ್ಯಾಸವುಳ್ಳ ನಿರಯವ ಕಣಗಳನ್ನು ಮಾತ್ರ ಮಣ್ಣು ಎಂದು ಪರಿಗಣಿಸಲಾಗುತ್ತದೆ.

ಮಣ್ಣಿನ ಕಣಗಳ ವರ್ಗೀಕರಣ: ಮಣ್ಣಿನ ಕಣಗಳನ್ನು ಅವುಗಳ ಗಾತ್ರದ ಮೇರೆಗೆ ಮರಳು, ರೇವೆ ಮತ್ತು ಎರೆ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ,. ಮರಳಿನ ವರ್ಗದಲ್ಲಿ ಕೆಲವು ಉಪ ವರ್ಗಗಳನ್ನು ಮಾಡಲಾಗಿದೆ. ಅಂತರರಾಷ್ಟ್ರೀಯ ಪದ್ಧತಿ ಮತ್ತು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಪದ್ಧತಿ ಎಂಬ ಎರಡು ಬಗೆಯ ವರ್ಗೀಕರಣ ಪದ್ಧತಿಗಳು ರೂಢಿಯಲ್ಲಿವೆ. ಇವೆರಡು ಪದ್ಧತಿಗಳ ಮೂಲತತ್ವಗಳು ಒಂದೇ ಬಗೆಯವಾಗಿಯವೆಯಾದರೂ ಇವೆರಡರಲ್ಲಿ ಕೆಲವು ಮಟ್ಟಿನ ಭಿನ್ನತೆಯೂ ಇವೆ. ಈ ಪದ್ಧತಿಗಳ ವಿವರಗಳು ಕೆಳಗಿನಂತಿವೆ.

ಅ ಸಂ

ಅಂತರರಾಷ್ಟ್ರೀಯ ಪದ್ಧತಿ

ಅಮೆರಿಕೆಯ ಸಂಯುಕ್ತ ಸಂಸ್ಥಾನಗಳ ಪದ್ಧತಿ

ವರ್ಗದ ಹೆಸರು

ಕಣಗಳ ವ್ಯಾಸ (ಮಿ.ಮೀ)

ವರ್ಗದ ಹೆಸರು

ಕಣಗಳ ವ್ಯಾಸ (ಮಿ.ಮೀ)

ಮರಳು
i. ಉರುಡು ಮರಳು
ii. ಜಿನುಗು ಮರಳು
೨-೦.೨
೦.೨-೦.೦೨
ಮರಳು
i. ಅತಿ ಉರುಟು ಮರಳು
ii. ಉರುಟು ಮರಳು
iii.ಮಧ್ಯಮಾಕಾರದ ಮರಳು
iv.ಜಿನುಗು ಮರಳು
v.ಅತಿ ಜಿನುಗು ಮರಳು
೨.೦೦-೧.೦೦
೧.೦೦-೦.೫೦

೦.೫೦-೦.೨೫
೦.೨೫-೦.೧೦
೦.೧೦-೦.೦೫

ರೇವೆ ೦.೦೨-೦.೦೦೨ ರೇವೆ ೦.೦೫-೦.೦೦೨
ಎರೆ ೦.೦೦೨ಕ್ಕಿಂತ ಕಡಮೆ ಎರೆ ೦.೦೦೨ಕ್ಕಿಂತ ಕಡಮೆ

 

ಮಣ್ಣಿನ ಕಣಗಳ ಪ್ರಾಬಲ್ಯವಿರುವ ಮಣ್ಣಿನ ಗುಣಧರ್ಮಗಳು: ಮೇಲೆ ಹೇಳಿದ ಮರಳು, ರೇವೆ ಮತ್ತು ಎರೆ ಕಣಗಳ ಪ್ರಾಬಲ್ಯವಿರುವ ಮಣ್ಣುಗಳ ಗುಣಧರ್ಮಗಳು ಕೆಳಗಿನಂತಿವೆ.

ಮರಳು (ವ್ಯಾಸರಿಂದ.೦೨ಮಿ.ಮೀ)
ಉರುಟು ಮರಳು : ಉರುಟು ಮರಳಿನ ಸರಾಸರಿ ವ್ಯಾಸವು ೨.೦ ರಿಂದ ೦.೦೨ ಮಿ.ಮೀ. ಈ ಕಣಗಳನ್ನು ಪ್ರತ್ಯೇಕಿಸಿ ಬರಿಗಣ್ಣಿನಿಂದ ನೋಡಬಹುದು. ಒಂದು ಗ್ರಾಂನಲ್ಲಿರುವ ಮರಳಿನ ಸಂಖ್ಯೆಯು ಸುಮಾರು ೫.೨ x ೧೦೨ ಎಂದು ಅಂದಾಜು ಮಾಡಲಾಗಿದೆ. ಮರಳಿನಲ್ಲಿ, ಬೆಣಚಿನ ಚೂರುಗಳೇ ಪ್ರಮುಖವಾಗಿರುತ್ತದೆಯಾದರೂ ಇತರೆ ಖನಿಜಗಳ ತುಣುಕುಗಳೂ ಸ್ವಲ್ಪ ಪ್ರಮಾಣದಲ್ಲಿ ಇರುತ್ತವೆ.

ಜಿನುಗು ಮರಳು: ಜಿನುಗು ಮರಳಿನ (೦.೨ರಿಂದ ೦.೦ ಮೀ.ಮೀ. ವ್ಯಾಸ) ಪ್ರತ್ಯೇಕ ಕಣಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಾಗದು. ಪ್ರತಿ ಕಣದ ಹೊರಮೈ ಕ್ಷೇತ್ರವು ಉರುಟು ಮರಳಿನ ಹೊರ ಮೈ ಕ್ಷೇತ್ರದ ೧೦ ಪಟ್ಟಿರುತ್ತದೆ. ಪ್ರತಿ ಗ್ರಾಂ ಜಿನುಗು ಮರಳಿನಲ್ಲಿ ೫ x ೧೦ ೫ ಮರಳು ಕಣಗಳಿವೆ ಎಂದು ಅಂದಾಜು ಮಾಡಲಾಗಿದೆ. ಇಲ್ಲಿ ಬೆಣಚಿನ ಚೂರುಗಳು ಮತ್ತು ಫೆರೋ ಮೆಗ್ನೀಸಿಯಂ ಖನಿಜದ ತುಣುಕುಗಳದ್ದೆ ಪ್ರಾಬಲ್ಯವೆನ್ನಬಹುದು. ಫೆಲ್‌ಸ್ಟಾರ್ ಖನಿಜಗಳ ತುಣುಕುಗಳೂ ಸ್ವಲ್ಪ ಸಂಖ್ಯೆಯಲ್ಲಿರುತ್ತವೆ.

ಮರಳಿನ ಕಣಗಳು ಗೋಲಾಕಾರದವಾಗಿರಬಹುದು. ಇಲ್ಲವೇ ಆಕಾರ ರಹಿತವಾಗಿಯೂ ಇರಬಹುದು. ಇವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಹಸಿ ಇದ್ದಾಗಲೂ ಇತರೆ ವಸ್ತುಗಳಿಗೆ ಅಂಟಿಕೊಳ್ಳುವುದಿಲ್ಲ. ಎರೆ ಕಣಗಳೊಡನೆ ತುಲನೆ ಮಾಡಿದಾಗ ಮರಳು ಕಣಗಳ ಹೊರ ಮೈ ಕ್ಷೇತ್ರವು ಅತಿ ಕಡಮೆ. ಹೀಗಾಗಿ ಜಲಧಾರಣಾ ಸಾಮರ್ಥ್ಯವು ಕಡಮೆ. ಕಣಗಳ ಸುತ್ತ ಋಣ ಚಾರ್ಜ್‌ಗಳಿರುವುದಿಲ್ಲವಾದ್ದರಿಂದ ಧನ ಅಯಾನ್‌ಗಳನ್ನು ಆಕರ್ಷಿಸುವ ಸಾಮರ್ಥ್ಯವಿರುವುದಿಲ್ಲ.

ಮರಳಿನಪ್ರಾಬಲ್ಯವಿರುವಮಣ್ಣಿನಗುಣಧರ್ಮಗಳುಕೆಳಗಿನಂತಿವೆ :

i) ಮರಳಿನ ಕಣಗಳ ಹೊರಮೈ ಕ್ಷೇತ್ರವು ಕಡಮೆ ಇರುವುದರಿಂದ ಹೆಚ್ಚು ನೀರನ್ನು ತಮ್ಮ ಮೈ ಸುತ್ತ ಹಿಡಿದುಕೊಳ್ಳಲಾರವು. ಆದ್ದರಿಂದ ಮರಳು ಮಣ್ಣಿನ ಜಲಧಾರಣಾ ಶಕ್ತಿಯು ಕಡಮೆ. ಮೇಲಿಂದ ಮೇಲೆ ಮಳೆಯು ಬರದಿದ್ದರೆ ಅಥವಾ ಆಗಾಗ ನೀರನ್ನು ಪೂರೈಸದಿದ್ದರೆ ಬೆಳೆಯು ಒಣಗಬಹುದು.

ii) ಮಣ್ಣಿನ ಕಣಗಳು ಪರಸ್ಪರವಾಗಿ ಇಲ್ಲವೇ ಇತರೆ ವಸ್ತುಗಳಿಗೆ ಅಂಟಿಕೊಳ್ಳುವುದಿಲ್ಲ. ಆದ್ದರಿಂದ ಮಳೆಯು ನಿಂತ ಸ್ವಲ್ಪ ಸಮಯದಲ್ಲಿಯೇ ಮಣ್ಣಿನ ಮೇಲೆ ಓಡಾಡಬಹುದು ಮತ್ತು ಬೇಸಾಯದ ಉಪಕರಣಗಳನ್ನೂ ಉಪಯೋಗಿಸಬಹುದು. ಇಲ್ಲಿ ಮಳೆಯು ನಿಂತ ಕೆಲವೇ ದಿನಗಳಲ್ಲಿ ಮಣ್ಣು ಒಣಗಿ ಬೆಸಾಯದ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲವೆಂಬುವುದನ್ನೂ ನೆನಪಿಡಬೇಕು.

iii) ಕಣಗಳ ಮಧ್ಯದಲ್ಲಿ ದೊಡ್ಡ ರಂಧ್ರಗಳೇ ಅಧಿಕ ಸಂಖ್ಯೆಯಲ್ಲಿರುತ್ತವೆಯಾದ್ದರಿಂದ, ಮಣ್ಣಿನೊಳಗೆ ಹವೆಯು ಸುಲಭವಾಗಿ ಚಲಿಸಬಲ್ಲದು. ಹೀಗಾಗಿ, ಬೆಳೆಗಳ ಬೇರುಗಳಿಗೆ ಮತ್ತು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಅಮ್ಲಜಕದ ಕೊರತೆಯಾಗುವುದಿಲ್ಲ. ಆದರೆ, ಇದರಿಂದ ಸೂಕ್ಷ್ಮ ಜೀವಿಗಳು ತಮ್ಮ ಚಟುವಟಿಕೆಯನ್ನು ತೀವ್ರಗತಿಯಿಂದ ನಡೆಸಿ ಸಾವಯವ ಪದಾರ್ಥವನ್ನು ವೇಗದಿಂದ ಕಳೆಯುವಂತೆ ಮಾಡುತ್ತವೆ. ಇದಲ್ಲದೇ, ಮಣ್ಣು ಬೇಗನೇ ಒಣಗುತ್ತದೆ.

iv) ಕಣಗಳ ಸುತ್ತ ಋಣ ಚಾರ್ಜ್‌ ಇರುವುದಿಲ್ಲವಾದ್ದರಿಂದ ಪೋಷಕಗಳ ಧನ ಅಯಾನ್‌ಗಳನ್ನು ಹಿಡಿದಿಟ್ಟುಕೊಳ್ಳಲಾರವು. ಹೀಗಾಗಿ, ಮಣ್ಣಿನ ಮೂಲಭೂತ ಫಲವತ್ತತೆಯು ಕಡಮೆಯಿರುತ್ತದೆ.

ರೇವೆ (.೦೨.೦೦೨ ಮಿ.ಮೀ. ವ್ಯಾಸ) : ರೇವೆಯ ಕಣಗಳನ್ನು ಬರಿಗಣ್ಣಿನಿಂದ ಪ್ರತ್ಯೇಕವಾಗಿ ನೋಡಲಾಗದು. ಆದರೆ, ಸೂಕ್ಷ್ಮ ದರ್ಶಕದ ಸಹಾಯದಿಂದ ರೇವೆಯ ಬಿಡಿ ಕಣವನ್ನು ನೋಡಬಹುದು. ಪ್ರತಿ ಗ್ರಾಂ ರೇವೆಯಲ್ಲಿ ಸುಮಾರು ೫.೪ x ೧೦ ೮ ಕಣಗಳಿರುತ್ತವೆ. ನಿರ್ಧಿಷ್ಟ ಆಕಾರವಿಲ್ಲದ ಈ ಕಣಗಳು ಕ್ವಚಿತ್ತಾಗಿ ಚಪ್ಪಟೆಯಾಗಿ ಮತ್ತು ನುಣುಪಾಗಿರುತ್ತವೆ.

ಆಕಾರ ಮತ್ತು ಗುಣಧರ್ಮಗಳಲ್ಲಿ ರೇವೆಯು, ಮರಳು ಮತ್ತು ಎರೆ ಕಣಗಳ ಮಧ್ಯದ ಸ್ಥಾನದಲ್ಲಿರುತ್ತದೆ ಮತ್ತು ಇದನ್ನು ಬೆಣಚಿನ ಪ್ರಾಬಲ್ಯವಿರುವ ಅತಿ ಸೂಕ್ಷ್ಮ ಮರಳೆಂದೇ ಹೇಳಬಹುದು. ಆದರೆ, ಈ ಕಣಗಳ ಸುತ್ತ ಅಲ್ಪಪ್ರಮಾಣದಲ್ಲಿ ಎರೆಯು ಅಂಟಿಕೊಂಡಿರುವುದರಿಂದ ಎರೆಯ ಗುಣಧರ್ಮಗಳನ್ನು ಸ್ವಲ್ಪ ಮಟ್ಟಿಗೆ ವ್ಯಕ್ತಪಡಿಸುತ್ತದೆ.

ರೇವೆಯ ಪ್ರಾಬಲ್ಯವಿರುವ ಮಣ್ಣು, ಮರಳು ಮಣ್ಣಿಗಿಂತ ಅಧಿಕ ನೀರನ್ನು ಮತ್ತು ಪೋಷಕಗಳನ್ನು ಹಿಡಿದಿಟ್ಟುಕೊಳ್ಳಬಲ್ಲದು. ಆದರೆ, ಈ ಸಾಮರ್ಥ್ಯವು ಎರೆಮಣ್ಣಿಗಿಂತ ಅತಿ ಕಡಮೆ ಎನ್ನಬೇಕು. ರೇವೆಯ ಅಧಿಕವಿರುವ ಮಣ್ಣು ಸಾಂದ್ರಗೊಳ್ಳುತ್ತದೆಯಲ್ಲದೆ ಮಣ್ಣಿನ ಮೇಲ್ಭಾಗದಲ್ಲಿ ಹೆಪ್ಪುಗಟ್ಟುತ್ತದೆ. ಹೀಗಾಗಿ, ಮಣ್ಣಿನೊಳಗೆ, ಸರಿಯಾಗಿ ಹವೆಯಾಡುವುದಿಲ್ಲ.

ಎರೆ (ವ್ಯಾಸವು .೦೦೨ ಮಿ.ಮೀ. ಗಿಂತ ಕಡಮೆ) : ಎರೆಯ ಪ್ರತ್ಯೇಕ ಕಣಗಳನ್ನು, ಅತಿ ಶಕ್ತಿಶಾಲಿಯಾದ ಸೂಕ್ಷ್ಮ ದರ್ಶಕದ ಸಹಾಯದಿಂದಲೂ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಎಲೆಕ್ಟ್ರಾನ್‌ ಸೂಕ್ಷ್ಮದರ್ಶಕದ ಸಹಾಯದಿಂದ ಎರೆ ಕಣಗಳನ್ನು ಚಿತ್ರಿಸಬಹುದು. ಪ್ರತಿ ಗ್ರಾಂ ಎರೆಯಲ್ಲಿ ಸುಮಾರು ೭.೨ x ೧೦೧೧ ಕಣಗಳಿವೆಯೆಂದು ಅಂದಾಜು ಮಾಡಲಾಗಿದೆ. ಎರೆಕಣದ ಹೊರಮೈ ಸರಾಸರಿ ಕ್ಷೇತ್ರವು ಮರಳು ಮತ್ತು ಹೊರಮೈ ಕ್ಷೇತ್ರಕ್ಕಿಂತ ಬಹುಪಾಲು ಅಧಿಕವಾಗಿರುತ್ತದೆ ಎಂಬುದು ಗಮನಾರ್ಹ. ಉದಾಹರಣೆಗೆ, ಒಂದು ಗ್ರಾಂ ಅತಿ ಜಿನುಗು ಮರಳಿನ ಕಣಗಳ ಹೊರಮೈ ಕ್ಷೇತ್ರವು ೦.೧ ಚ.ಮೀ. ಮತ್ತು ಅಷ್ಟೇ ತೂಕದ ಅತಿ ಸೂಕ್ಷ್ಮ ಜೇಡಿ ಕಣಗಳ ಒಟ್ಟು ಕ್ಷೇತ್ರವು ೧೦೦೦ ಚ.ಮೀ. ನಷ್ಟಿರುತ್ತದೆ. ಅತ್ಯಧಿಕವಾಗಿರುವ ಈ ಹೊರಮೈ ಕ್ಷೇತ್ರವು ಎರೆಯ ಮತ್ತು ಎರೆ ಪ್ರಾಬಲ್ಯವಿರುವ ಮಣ್ಣಿನ ಗುಣಧರ್ಮಗಳ ಮೇಲೆ ತೀವ್ರತರ ಪರಿಣಾಮವನ್ನು ಬೀರುತ್ತದೆ.

ಎರೆ ಕಣಗಳಲ್ಲಿ ಸಿಲಿಕೇಟ್ ಖನಿಜಗಳದ್ದೇ ಪ್ರಾಬಲ್ಯವಿರುತ್ತದೆ. ಎರೆ ಕಣಗಳ ಆಕಾರದಲ್ಲಿ ಬಹಳಷ್ಟು ವಿಭಿನ್ನತೆಯಿದೆ. ಉದಾಹರಣೆಗೆ : ಕೆಲವು ಕಣಗಳು ತೆಳುವಾದ ಫಲಕಗಳಂತಿರಬಹುದು. ಕೆಲವು ಷಟ್ಕೋಣಾಕಾರವಿರಬಹುದು ಮತ್ತು ಇನ್ನು ಕೆಲವು ಗೋಲಾಕಾರವಿರಬಹುದು. ಕೆಲವು ಎರೆ ಕಣಗಳು ಇವುಗಳಿಂದ ಭಿನ್ನ ಆಕಾರವನ್ನು ತಳೆದಿರಲೂಬಹುದು.

ಎರೆ ಕಣಗಳು ಹಸಿಯಾದಾಗ ಜಿಗುಟುತನವನ್ನು ಹೊಂದುತ್ತವೆಯಲ್ಲದೇ, ಒತ್ತಡದಿಂದ ವಿವಿಧ ಆಕಾರಗಳಿಗೆ ಅವನ್ನು ಬದಲಿಸಬಹುದು. ಎರೆಯ ಪ್ರಾಬಲ್ಯವಿರುವ ಮಣ್ಣಿನ ಗುಣಧರ್ಮಗಳು ಈ ಮುಂದಿನಂತಿವೆ :

i) ಎರೆ ಕಣಗಳ ಹೊರಮೈ ಕ್ಷೇತ್ರವು ಅತ್ಯಧಿಕವಾಗಿರುವುದರಿಂದ ಕಣಗಳಿಗೆ ಹೆಚ್ಚು ನೀರು ಅಂಟಿಕೊಳ್ಳುತ್ತದೆ. ಆದ್ದರಿಂದ ಜೇಡಿ ಮಣ್ಣಿನ ಜಲಧಾರಣಾ ಸಾಮರ್ಥ್ಯವು ಅತ್ಯಧಿಕ

ii) ಎರೆ ಮಣ್ಣಿನಲ್ಲಿ ರಂಧ್ರಗಳ ಒಟ್ಟು ಪ್ರಮಾಣವು ಮಣ್ಣಿನಲ್ಲಿರುವುದಕ್ಕಿಂತ ಅಧಿಕವಾಗಿದ್ದರೂ ದೊಡ್ಡ ರಂಧ್ರಗಳ ಪ್ರಮಾಣವು ಕಡಮೆ. ಆದ್ದರಿಂದ ಎರೆ ಮಣ್ಣಿನಲ್ಲಿ ನೀರು ಸುಲಭವಾಗಿ ಬಸಿದು ಹೋಗುವುದಿಲ್ಲ. ಮತ್ತು ಹವೆಯು ಸರಾಗವಾಗಿ ಚಲಿಸುವುದಿಲ್ಲ. ಆದ್ದರಿಂದ ಸಸ್ಯದ ಬೇರುಗಳಿಗೆ ಮತ್ತು ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮ ಜೀವಿಗಳಿಗೆ ಆಮ್ಲಜಕದ ಕೊರತೆಯಾಗುವ ಸಂಭವವಿದೆ. ಸಾವಯವ ವಸ್ತುಗಳನ್ನು ಮಣ್ಣಿಗೆ ಪೂರೈಸುವುದರಿಂದ ಈ ತೊಂದರೆಗಳನ್ನು ಕೆಲವು ಮಟ್ಟಿಗೆ ಕಡಮೆ ಮಾಡಬಹುದು.

iii)  ಎರೆ ಮಣ್ಣು ಒದ್ದೆಯಾಯಿತೆಂದರೆ ಜಿಗುಟಾಗುತ್ತದೆ. ಆಗ ಮಣ್ಣು ಮನುಷ್ಯ ಮತ್ತು ಜಾನುವಾರುಗಳ ಕಾಲುಗಳಿಗೆ ಬೇಸಾಯದ ಉಪಕರಣಗಳಿಗೆ ಮತ್ತು ವಾಹನಗಳ ಚಕ್ರಗಳಿಗೆ ಅಂಟಿಕೊಳ್ಳುತ್ತದೆ. ಹೀಗಾಗಿ ಮಳೆಯು ನಿಂತ ನಂತರ ಅಥವಾ ನೀರನ್ನು ಪೂರೈಸಿದ ನಂತರ ಹಲವು ದಿನಗಳವರೆಗೆ ಭೂಮಿಯಲ್ಲಿ ಪ್ರವೇಶಿಸಲು ಮತ್ತು ಬೇಸಾಯ ಕಾರ್ಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಮಣ್ಣು ಒಣಗಿತೆಂದರೆ ಬಿರುಸಾಗುತ್ತದೆ. ಆ ಸಮಯದಲ್ಲಿ ಉಳುಮೆಯನ್ನು ಮಾಡಿದರೆ, ಬಿರುಸಾದ ದೊಡ್ಡ ದೊಡ್ಡ ಹೆಂಟೆಗಳೇಳುತ್ತವೆ. ಆದ್ದರಿಂದ, ಮಣ್ಣು ಅತಿ ಹಸಿಯಿಲ್ಲದಿರುವಾಗ ಮತ್ತು ಪೂರ್ಣ ಒಣಗುವುದರೊಳಗೆ ಬೇಸಾಯದ ಕಾರ್ಯಗಳನ್ನು ಮಾಡಿ ಮುಗಿಸಬೇಕಾಗುತ್ತದೆ.

iv) ಎರೆ ಕಣಗಳ ಹೊರ ಮತ್ತು ಒಳಮೈಗಳ ಮೇಲೆ ಋಣ ಚಾರ್ಜ್‌ಗಳಿರುವುದರಿಂದ, ಹಲವು ಪೋಷಕಗಳ ಧನ ಅಯಾನ್‌ಗಳಲ್ಲಿ ಅವು ಆಕರ್ಷಿಸುತ್ತವೆ. ಆದ್ದರಿಂದ ಎರೆ ಮಣ್ಣು ಮೂಲತಃ ಫಲವತ್ತಾಗಿರುತ್ತದೆ.

v) ಕೆಲವು ಮಾದರಿಯ ಎರೆಗಳಿರುವ ಮಣ್ಣಿನ ಕಣಗಳು ಹಸಿಯಾದೊಡನೆ ಹಿಗ್ಗುತ್ತವೆ. ಮತ್ತು ಒಣಗಿದೊಡನೆ ಕುಗ್ಗುತ್ತವೆ. ಹೀಗಾಗಿ ಮಣ್ಣು ಒಣಗತೊಡಗಿತೆಂದರೆ, ಅದರಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಈ ಬಿರುಕುಗಳ ಮುಖಾಂತರ ಮಣ್ಣಿನಲ್ಲಿರುವ ಆರ್ದ್ರತೆಯು ಆವಿಯ ರೂಪದಲ್ಲಿ ಹೊರ ಬಿದ್ದು, ನಷ್ಟವಾಗದಂತೆ ಮಾಡಲು ಮೇಲಿಂದ ಮೇಲೆ ಕುಂಟೆ ಅಥವಾ ಎಡೆ ಕುಂಟೆಗಳನ್ನು ಬಳಸಬೇಕಾಗುತ್ತದೆ.

ಮಣ್ಣಿನಲ್ಲಿರುವ ಕಣಗಳ ಗಾತ್ರದ ಮೇಲಿಂದ ಮಣ್ಣಿನ ವರ್ಗೀಕರಣ : ಮಣ್ಣಿನಲ್ಲಿರುವ ಮರಳು, ರೇವೆ ಮತ್ತು ಎರೆ ಇವುಗಳ ಪ್ರಮಾಣದ ಆಧಾರದ ಮೇಲಿಂದ, ಮಣ್ಣುಗಳನ್ನು ವರ್ಗೀಕರಿಸಿ ಈ ವರ್ಗಗಳಿಗೆ ನಿರ್ಧಿಷ್ಟ ಹೆಸರುಗಳನ್ನು ಕೊಡಲಾಗಿದೆ. ಈ ಹೆಸರುಗಳ ಮೇಲಿಂದ ಮಣ್ಣಿನಲ್ಲಿರುವ ಮರಳು, ರೇವೆಮತ್ತು ಎರೆ ಕಣಗಳ ಪ್ರಮಾಣವನ್ನು ಅಂದಾಜು ಮಾಡಲು ಮತ್ತು ಮಣ್ಣಿನ ಹಲವು ಗುಣಧರ್ಮಗಳನ್ನು ತಿಳಿಯಲು ಬಹುಮಟ್ಟಿಗೆ ಅನುಕೂಲವಾಗುತ್ತದೆ.

ಕಣಗಳ ಗಾತ್ರದ ಮೇಲಿಂದ ಮಾಡಿದ ವರ್ಗೀಕರಣದಲ್ಲಿ ಗೋಡು ಎಂಬ ಪದವನ್ನು ಬಳಸಲಾಗಿದೆ. ಮರಳು, ರೇವೆ ಮತ್ತು ಎರೆ ಯಾವ ಪ್ರಮಾಣಗಳಲ್ಲಿ ಮಣ್ಣಿನಲ್ಲಿದ್ದರೆ ಈ ಮೂರು ಗುಂಪಿನ ಕಣಗಳ ಗುಣಧರ್ಮಗಳು ಮಣ್ಣಿನಲ್ಲಿ ಸಮನಾಗಿರುತ್ತದೋ, ಆ ಮಣ್ಣಿಗೆ ಗೋಡು ಎಂಬ ಹೆಸರನ್ನು ಇಡಲಾಗಿದೆ. ಗೋಡು ಮಣ್ಣಿನಲ್ಲಿ ಮರಳು, ರೇವೆ ಮತ್ತು ಎರೆ ಕಣಗಳು ಸಮ ಪ್ರಮಾಣದಲ್ಲಿ ಅಂದರೆ, ಶೇಕಡಾ ೩೩.೩ ರಷ್ಟು ಇರುತ್ತವೆ ಎಂದು ಇದರ ಅರ್ಥವಲ್ಲ. ಈ ಮೂರು ಗುಂಪಿನ ಕಣಗಳ ಗುಣಧರ್ಮಗಳು, ಸಮ ಪ್ರಮಾಣದಲ್ಲಿ ಇರಬೇಕೆಂಬುವುದೇ ಇದರ ಉದ್ದೇಶ. ಗೋಡು ಮಣ್ಣಿನಲ್ಲಿ ಮರಳು ಮತ್ತು ರೇವೆಗಳಿಗಿಂತ ಎರೆಯ ಪ್ರಮಾಣವು ಕಡಮೆಯಿರುತ್ತದೆ ಎಂಬುವುದನ್ನು ಇಲ್ಲಿ ಗಮನಿಸಬಹುದು.

ಕೋಷ್ಟಕ : ೧೨ : ಕಣಗಳ ಗಾತ್ರದ ಮೇಲೆ ಮಣ್ಣಿನ ವರ್ಗೀಕರಣ

ಅ.ಸಂ. ವರ್ಗಗಳ ಹೆಸರು
ಉರುಟು ಕಣಗಳ ಮಣ್ಣುಗಳು
೧. ಮರಳು
೨. ಗೋಡು ಮರಳು
ಮಧ್ಯಮ ಉರುಟ ಕಣಗಳ ಮಣ್ಣು
೩. ಮರಳು ಗೋಡು
ಮಧ್ಯಮ ಗಾತ್ರದ ಕಣಗಳ ಮಣ್ಣು
೪. ಗೋಡು
೫. ರೇವೆ ಗೋಡು
೬. ರೇವೆ
ಮಧ್ಯಮ ಜಿನುಗು ಕಣಗಳ ಮಣ್ಣು
೭. ಮರಳುಯುತ ಎರೆ ಗೋಡು
೮. ರೇವೆಯುತ ಎರೆ ಗೋಡು
೯. ಎರೆ ಗೋಡು
ಜಿನುಗು ಕಣಗಳ ಮಣ್ಣು
೧೦. ಮರಳು ಎರೆ
೧೧. ರೇವೆ ಎರೆ
೧೨. ಎರೆ

ಮಣ್ಣಿನಲ್ಲಿರುವ ಮರಳು, ರೇವೆ ಮತ್ತು ಎರೆಯ ಶೇಕಡಾವಾರು ಪ್ರಮಾಣವನ್ನು ಕಂಡುಹಿಡಿದರೆ ಆ ಮಣ್ಣು ಯಾವ ವರ್ಗಕ್ಕೆ ಸೇರುತ್ತದೆಯೆಂಬುವುದನ್ನು ತಿಳಿಯಬಹುದು. ಕೆಳಗೆ ಕೋಷ್ಟಕ ೧೨ರಲ್ಲಿ ಮಣ್ಣಿನ ಒಟ್ಟು ೧೨ ವರ್ಗಗಳನ್ನು ಗುರುತಿಸಲಾಗಿದೆ.

ಮಣ್ಣಿನ ವರ್ಗವನ್ನು ತಿಳಿಯುವ ವಿಧಾನ : ಸಂಬಂಧಿಸಿದ ಮಣ್ಣನ್ನು ವಿಶ್ಲೇಷಿಸಿ, ಅದರಲ್ಲಿರುವ ಶೇಕಡಾ ಮರಳು, ರೇವೆ ಮತ್ತು ಎರೆ ಇವುಗಳನ್ನು ಕಂಡುಹಿಡಿಯಬೇಕು. ಮಣ್ಣಿನ ವರ್ಗವನ್ನು ಚಿತ್ರ ೫ ಮತ್ತು ೬ರ ಸಹಾಯದಿಂದ ತಿಳಿದುಕೊಳ್ಳಬಹುದು.

ಚಿತ್ರ ೫:. ಅಂತಾರಾಷ್ಟ್ರೀಯ ಪದ್ಧತಿ

ಚಿತ್ರ ೬ : ಮಣ್ಣಿನ ಕಣಗಳ ಗಾತ್ರ ಮತ್ತು ಪ್ರಮಾಣದ ಮೇಲಿಂದ ಮಣ್ಣಿನ ವರ್ಗೀಕರಣವನ್ನು ಮಾಡಲು ಬಳಸುವ ತ್ರೀಕೋನ (ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಪದ್ಧತಿ)

ಮಣ್ಣಿನ ಕಣಗಳ ವರ್ಗೀಕರಣದಲ್ಲಿ ವಿವರಿಸಿದಂತೆ, ಮಣ್ಣಿನ ಕಣಗಳನ್ನು ಎರಡು ಪದ್ಧತಿಗಳಿಂದ ವರ್ಗೀಕರಿಸಲಾಗುತ್ತದೆ. ಅಂತಾರಾಷ್ಟ್ರೀಯ ಪದ್ಧತಿಯನ್ನು ಅನುಸರಿಸಿ ಕಣಗಳನ್ನು ವರ್ಗೀಕರಿಸಿದರೆ ಚಿತ್ರ ೫ನ್ನು ಉಪಯೋಗಿಸಬೇಕು. ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಪದ್ಧತಿಯಿಂದ ವರ್ಗೀಕರಿಸಿದರೆ ಚಿತ್ರ ೬ನ್ನು ಬಳಸಬೇಕು.

ಈ ಚಿತ್ರಗಳನ್ನು ಉಪಯೋಗಿಸುವ ವಿಧಾನವನ್ನು ಕೆಳಗಿನ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು. ಅಂತಾರಾಷ್ಟ್ರೀಯ ಪದ್ಧತಿಯನ್ನು ಅನುಸರಿಸಿ ಕಣಗಳನ್ನು ವರ್ಗಿಕರಿಸಿದಾಗ ಒಂದು ಮಣ್ಣಿನಲ್ಲಿ ಶೇಕಡಾ ೬೦ ಮರಳೂ, ಶೇಕಡಾ ೨೨ ರೇವೆ ಮತ್ತು ಶೇಕಡಾ ೧೮ ಎರೆ ಇರುವುದಾಗಿ ಕಂಡುಬಂದಿತು. ಆ ಮಣ್ಣಿ ವರ್ಗಿಕರಣವನ್ನು ಮುಂದಿನಂತೆ ಗೊತ್ತುಪಡಿಸಬೇಕು.

  • ಮರಳಿನ ಭುಜದಲ್ಲಿಯ ೬೦ರ ಅಂಕಿಯಿಂದ ‘ರೇವೆಯ’ ಭುಜಕ್ಕೆ ಸಮಾನಾಂತರವಾಗಿ ಸಾಗಬೇಕು.
  • ‘ರೇವೆಯ’ ಭುಜದಲ್ಲಿಯ ೨೨ರ ಅಂಕಿಯಿಂದ ‘ಎರೆಯ’ ಭುಜಕ್ಕೆ ಸಮಾನಾಂತರವಾಗಿ ಮುಂದುವರೆಯಬೇಕು.
  • ‘ಎರೆ’ ಭುಜದಲ್ಲಿರುವ ೧೮ರ ಅಂಕಿಯಿಂದ ಮರಳಿನ ಭುಜಕ್ಕೆ ಸಮಾನಾಂತರವಾಗಿ ಸಾಗಿದಾಗ ಈ ಮೂರು ರೇಖೆಗಳು ‘ಗೋಡು’ ಎಂಬಲ್ಲಿ ಒಂದನ್ನೊಂದು ಸಂಧಿಸುತ್ತವೆ.

ಆದ್ದರಿಂದ ಈ ಮಣ್ಣು ‘ಗೋಡು’ ವರ್ಗಕ್ಕೆ ಸೇರಿದೆ ಎಂದಂತಾಯಿತು.

ಮೇಲಿನ ವಿಧಾನಕ್ಕಿಂತ ಸುಲಭವಾದ ರೀತಿಯಿಂದ ಈ ಆಕೃತಿಯನ್ನು ಬಳಸಿ ಇದೇ ಉತ್ತರವನ್ನು ಪಡೆಯಬಹುದು. ಈ ವಿಧಾನದ ವಿವರಗಳು ಕೆಳಗಿನಂತಿವೆ.

  • ಮೊದಲು ‘ಎರೆ’ ಭುಜದಲ್ಲಿಯ ೧೮ ಅಂಕಿಯಿಂದ ಅರಂಭಿಸಿ ‘ಮರಳಿನ’ ಭುಜಕ್ಕೆ ಸಮಾನಾಂತರವಾಗಿ ಸಾಗಬೇಕು.
  • ಅನಂತರ, ‘ಮರಳಿನ’ ಭುಜದಲ್ಲಿಯ ೬೦ರ ಅಂಕಿಯಿಂದ ‘ರೇವೆಯ’ ಭುಜಕ್ಕೆ ಸಮಾನಾಂತರವಾಗಿ ಮುನ್ನಡೆಯಬೇಕು. ಈ ಎರಡೂ ರೇಖೆಗಳು ಗೋಡು ಎಂಬಲ್ಲಿ ಸಂಧಿಸುತ್ತವೆ.

ಆದ್ದರಿಂದ, ಈ ಮಣ್ಣಿನ ವರ್ಗವು ‘ಗೋಡು’ ಎಂದಂತಾಯಿತು.

ಮರಳಿನ ಬದಲು ರೇವೆಯ ೨೨ರ ಅಂಕಿಯನ್ನು ಬಳಸಿಯೂ ಇದೇ ಉತ್ತರವನ್ನು ಪಡೆಯಲು ಸಾಧ್ಯ.

ಮೇಲೆ ವಿವರಿಸಿದ ಎರಡು ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಕೆಳಗಿನ ಉದಾಹರಣೆಗೆ ಅನ್ವಯಿಸಿ ಮಣ್ಣಿನ ವರ್ಗವನ್ನು ಕಂಡುಹಿಡಿದರೆ –

ಒಂದು ಮಣ್ಣಿನಲ್ಲಿ ಶೇಕಡಾ ೨೫ ರಷ್ಟು ಮರಳು, ೪೫ರಷ್ಟು ರೇವೆ ಮತ್ತು ೩೦ ರಷ್ಟು ಎರೆ ಇದ್ದರೆ ಈ ಮಣ್ಣು ರೇವೆಯುತ ಎರೆ ಗೋಡು ವರ್ಗಕ್ಕೆ ಸೇರಿದೆ ಎಂದು ಗೊತ್ತಾಗುತ್ತದೆ.

ಅಮೇರಿಕೆಯ ಸಂಯುಕ್ತ ಸಂಸ್ಥಾನ ಪದ್ಧತಿಯನ್ನನುಸರಿಸಿ ವರ್ಗೀಕರಿಸಿದ ಕಣಗಳ ಶೇಕಡಾವಾರು ಪ್ರಮಾಣದ ಮೇರೆಗೆ ಮಣ್ಣು ಯಾವ ಗುಂಪಿಗೆ ಸೇರಿದೆ ಎಂಬುವುದನ್ನು, ಮೇಲೆ ವಿವರಿಸಿದ ಎರಡು ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ತಿಳಿಯಬಹುದು. ಆದರೆ, ಇದಕ್ಕಾಗಿ ಚಿತ್ರ ೬ರಲ್ಲಿಯ ತ್ರೀಕೋನವನ್ನು ಉಪಯೋಗಿಸಬೇಕು. ಇದರ ಪ್ರಕಾರ ಶೇಕಡಾ ೭೦ ರಷ್ಟು ಮರಳು, ೨೦ ರಷ್ಟು ರೇವೆ ಮತ್ತು ಶೇಕಡಾ ೧೦ ರಷ್ಟ ಎರೆ ಇರುವ ಮಣ್ಣು, ‘ಮರಳುಗೋಡು’ ವರ್ಗಕ್ಕೆ ಸೇರುತ್ತದೆ.

ಕೆಲವು ಸಂದರ್ಭಗಳಲ್ಲಿ ಮಣ್ಣಿನ ವರ್ಗವನ್ನು ತೋರಿಸುವ ರೇಖೆಗಳು, ಆಕೃತಿಯಲ್ಲಿರುವ ಮಣ್ಣಿನ ಎರಡು ಗುಂಪುಗಳನ್ನು ಬೇರ್ಪಡಿಸುವ ರೇಖೆಯ ಮೇಲೆಯೇ ಸಂಧಿಸುತ್ತವೆ. ಆಗ ಮಣ್ಣಿನ ವರ್ಗವನ್ನು ನಿರ್ಧರಿಸುವ ಕಾರ್ಯವು ಸಂದಿಗ್ಧತೆಗೆ ಎಡೆ ಮಾಡಿಕೊಡುತ್ತದೆ. ಉದಾಹರಣೆಗೆ, ಶೇಕಡಾ ೩೦ ರಷ್ಟು ಮರಳು ೩೦ ರಷ್ಟು ರೇವೆ ಮತ್ತು ಶೇಕಡಾ ೪೦ ರಷ್ಟು ಎರೆ ಇರುವ ಮಣ್ಣಿಗೆ ಸಂಬಂಧಿಸಿದಂತೆ, ಮೂರು ರೇಖೆಗಳು ಎರೆ ಗೋಡು ಮತ್ತು ಎರೆ ಈ ಗುಂಪುಗಳನ್ನು ಬೇರ್ಪಡಿಸುವ ರೇಖೆಯ ಮೇಲೆಯೇ ಸಂಧಿಸುತ್ತವೆ. ಇಂತಹ ಪ್ರಸಂಗದಲ್ಲಿ, ಸಂಬಂಧಿಸಿದ ಎರಡು ವರ್ಗಗಳಲ್ಲಿ, ಯಾವ ವರ್ಗವು ಅನುಕ್ರಮದಲ್ಲಿ ಮುಂದೆ ಇದೆಯೋ ಅದರ ಹೆಸರನ್ನೇ ಆ ಮಣ್ಣಿಗೆ ಕೊಡಬೇಕೆಂಬ ನಿಯಮವನ್ನು ಪಾಲಿಸಲಾಗುತ್ತದೆ. ಇದರ ಪ್ರಕಾರ ಈ ಉದಾಹರಣೆಯಲ್ಲಿ, ಮಣ್ಣನ್ನು ಎರೆ ಗೋಡು ವರ್ಗಕ್ಕೆ ಸೇರಿಸದೇ ಎರೆ ವರ್ಗಕ್ಕೆ ಸೇರಿಸಬೇಕು,.