ಮಣ್ಣಿನಉಷ್ಣತೆಯಿಂದಆಗುವಪರಿಣಾಮಗಳು

ಮಣ್ಣಿನ ಉಷ್ಣತೆಯಲ್ಲಾದ ಬದಲಾವಣೆಗಳಿಂದ ಮಣ್ಣಿನ ಗುಣಧರ್ಮಗಳಲ್ಲಿ ಆಗುವ ಕೆಳಗಿನ ಪರಿಣಾಮಗಳ ಬಗ್ಗೆ ಈಗಾಗಲೇ ಸೂಚಿಸಲಾಗಿದೆ:

  • ಉಷ್ಣತೆಯು ಅಧಿಕಗೊಂಡಂತೆ ಮಣ್ಣಿನ ನಿರ್ಮಾಣ ಕ್ರಿಯೆಯು ತೀವ್ರಗೊಳ್ಳುತ್ತದೆ.
  • ಆದ್ರೃತೆ ಮತ್ತು ಉಷ್ಣತಾಮಾನವು ಅಧಿಕವಿರುವ ಪ್ರದೇಶದ ಮಣ್ಣಿನಲ್ಲಿ ಸಾವಯವ ಪದಾರ್ಥವು ಅಧಿಕ ಪ್ರಮಾಣದಲ್ಲಿರುತ್ತದೆ.
  • ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಜಲಯುತ ಅಕ್ಸೈಡ್ ಗಳು ಆರ್ದ್ರತೆ ಮತ್ತು ಉಷ್ಣತೆಯು ಹೆಚ್ಚಾಗಿರುವ ಪ್ರದೇಶದ ಮಣ್ಣಿನಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬರುತ್ತವೆ.
  • ಇವುಗಳಲ್ಲದೇ ಮಣ್ಣಿನ ಉಷ್ಣತಾಮಾನದಿಂದಾಗುವ ಕೆಳಗಿನ ಪರಿಣಾಮಗಳೂ ಬಹು ಮಹತ್ವದ್ದಾಗಿವೆ.

i) ಸೂಕ್ಷ್ಮ ಜೀವಿಗಳ ಚಟುವಟಿಕೆಗಳು : ಮಣ್ಣಿನ ಉಷ್ಣತೆಯು ೦ ಡಿಗ್ರಿ ಸೆಲ್ಸಿಯಸ್ ಇದ್ದಾಗ ಸೂಕ್ಷ್ಮ ಜೀವಿಗಳು ಯಾವುದೇ ಚಟುವಟಿಕೆಯನ್ನು ನಡೆಸಲಾಗದೇ ಸ್ತಬ್ಧವಾಗಿರುತ್ತವೆ. ಉಷ್ಣತಾಮಾನವು ಏರುತ್ತಿದ್ದಂತೆಯೇ ಅವು ಕಾರ್ಯ ಪ್ರವೃತ್ತವಾಗುತ್ತವೆಯಾದರೂ ೧೦ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನದವರೆಗೂ ಸೂಕ್ಷ್ಮ ಜೀವಿಗಳ ಚಟುವಟಿಕೆಯು ಅತಿ ನಿಧಾನ ವಾಗಿರುತ್ತದೆನ್ನಬಹುದು. ಅತ್ಯುನ್ನತ ಚಟುವಟಿಕೆಗೆ ಬೇಕಾಗುವ ಉಷ್ಣತಾಮಾನವು ವಿಭಿನ್ನ ಬಗೆಯ ಸೂಕ್ಷ್ಮ ಜೀವಿಗಳಿಗೆ ಬೇರೆ ಬೇರೆ ಇದೆಯಾದರೂ ಉಷ್ಣತಾಮಾನವು ೩೦ ಡಿಗ್ರಿಸೆಲ್ಸಿಯಸ್ ಇದ್ದಾಗ ಹಲವು ಬಗೆಯ ಸೂಕ್ಷ್ಮ ಜೀವಿಗಳಿಗೆ ಅನುಕೂಲಕರ ಎಂದು ಹೇಳಬಹುದು.

ii) ಸಸ್ಯಗಳ ಬೆಳವಣಿಗೆ : ಸಸ್ಯಕ್ಕೆ ಹಿತಕರವಾದ ಉಷ್ಣತಾಮಾನವು ಸಸ್ಯದ ಪ್ರಕಾರ ಮತ್ತು ಅದರ ಬೆಳವಣಿಗೆಯ ಹಂತಗಳನ್ನು ಅವಲಂಬಿಸಿರುತ್ತದೆ. ಈ ಸಂದರ್ಭದಲ್ಲಿ ಕೆಳಗಿನ ಉದಾಹರಣೆಗಳನ್ನು ಗಮನಿಸಬಹುದು.

  • ಬೀಜಗಳು ಮೊಳಕೆಯೊಡೆಯಲು, ಮೇಲ್ಮಣ್ಣಿನಲ್ಲಿ ಸುಮಾರು ೫ ಸೆಂ.ಮೀ. ಆಳದವರೆಗೆ ಅನುಕೂಲಕರವಾದ ಉಷ್ಣತಾಮಾನ ಇರಬೇಕಾಗುತ್ತದೆ. ಉದಾಹರಣೆಗೆ :

ಬೆಳೆಗಳು

ಹಿತಕರ ಉಷ್ಣತಾಮಾನ (ಡಿಗ್ರಿ ಸೆಲ್ಸಿಯಸ್)

ಓಟ್ಸ ಮತ್ತು ಕುದುರೆ ಮೆಂತೆ

೧೦

ಮುಸುಕಿನ ಜೋಳ

೧೫

ಹತ್ತಿ

೨೦

  • ಸಸ್ಯದ ಬೇರುಗಳು ಚೆನ್ನಾಗಿ ಬೆಳೆಯಬೇಕಾದರೆ ಮಣ್ಣಿನಲ್ಲಿ ಹಿತಕರವಾದ ಉಷ್ಣತಾಮಾನವು ಇರಬೇಕು. ಬೇರಿನ ಒಟ್ಟಾರೆ ಬೆಳವಣಿಗೆಯನ್ನಲ್ಲದೆ, ಅದು ಬೆಳೆಯುವ ರೀತಿಯ ಮೇಲೂ ಉಷ್ಣತಾಮಾನವು ಪರಿಣಾಮವನ್ನುಂಟು ಮಾಡುತ್ತದೆ. ಉದಾಹರಣೆಗೆ, ಮೇಲಿನ ೩೦ ಸೆಂ.ಮೀ. ಆಳದವರೆಗಿನ ಮಣ್ಣಿನ ಉಷ್ಣತಾಮಾನವು ೩೨ ಡಿಗ್ರಿ ಸೆಲ್ಸಿಯಸ್ ನ ಸನಿಹದಲ್ಲಿದ್ದರೆ ಮುಸುಕಿನ ಜೋಳದ ಬೇರುಗಳು ಆಳವಾಗಿ ಬೆಳೆಯುತ್ತವೆ. ಉಷ್ಣತಾಮಾನವು ಇದಕ್ಕಿಂತ ಕಡಮೆ ಇದ್ದರೆ, ಆಳಕ್ಕೆ ಹೋಗುವ ಬದಲು, ಅಡ್ಡ ದಿಕ್ಕಿನಲ್ಲಿ ಪಸರಿಸುತ್ತವೆ. ಅದರಂತೆಯೇ ಬತ್ತದ ಬೇರಿನ ಸರಿಯಾದ ಬೆಳವಣಿಗೆಗೆ ಮಣ್ಣಿನ ಉಷ್ಣತಾಮಾನವು ೨೦ ರಿಂದ ೨೨ ಡಿಗ್ರಿ ಸೆಲ್ಸಿಯಸ್ ಇದ್ದರೆ ಉತ್ತಮವೆಂದು ಕಂಡುಬಂದಿದೆ.

ಮಣ್ಣಿನಉಷ್ಣತಾಮಾನದನಿರ್ವಹಣೆ

ಬೇಸಾಯದ ಕೆಲವು ಕ್ರಮಗಳಿಂದ ಮಣ್ಣಿನ ಉಷ್ಣತಾಮಾನವನ್ನು ಗಣನೀಯವಾಗಿ ನಿಯಂತ್ರಿಸಬಹುದು. ಕೆಳಗಿನ ಉದಾಹರಣೆಗಳನ್ನು ಗಮನಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ.

i) ಮಣ್ಣಿನ ಆಚ್ಛಾದನೆ : ಈಗಾಗಲೇ ಹೇಳಿದಂತೆ ಮಣ್ಣಿನ ಮೇಲ್ಬಾಗದಲ್ಲಿ ಸಾವಯವ ಪದಾರ್ಥಗಳನ್ನು ಪಸರಿಸಿದರೆ, ಈ ಆಚ್ಚಾಧನೆಯಿಂದ ಕಡುಬೇಸಿಗೆಯಲ್ಲಿ ಮಣ್ಣಿನ ಉಷ್ಣತಾಮಾನವು ತೆರೆದಿಟ್ಟ ಮಣ್ಣಿನ ಉಷ್ಣತಾಮಾನಕ್ಕಿಂತ ಕಡಮೆಯೂ ಚಳಿಗಾಲದಲ್ಲಿ ಹೆಚ್ಚಾಗಿಯೂ ಇರುತ್ತದೆ. ಅದರಂತೆಯೇ, ಪಾರದರ್ಶಕವಾಗಿರುವ ಪಾಲಿಥೀನ ಹಾಳೆಗಳನ್ನು ಮಣ್ಣಿನ ಮೇಲ್ಬಾಗದಲ್ಲಿ ಮುಚ್ಚಿಟ್ಟರೆ ಮಣ್ಣಿನ ಉಷ್ಣತಾಮಾನವು ೫೦ ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಸ್ವಲ್ಪ ಅಧಿಕ ಮಟ್ಟವನ್ನು ತಲುಪುತ್ತದೆ ಎಂದು ಈ ಮೊದಲೇ ಹೇಳಿದೆ.

ii) ಹೆಚ್ಚಾದ ನೀರನ್ನು ಬಸಿದು ತೆಗೆಯುವುದು :ಮಣ್ಣಿನ ಜಲಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚು ನೀರಿದ್ದರೆ, ಮಣ್ಣಿನ ಉಷ್ಣತಾಮಾನವು ಏರಲು ಹೆಚ್ಚು ಸಮಯ ಮತ್ತು ಅಧಿಕ ಶಕ್ತಿ ಬೇಕಾಗುತ್ತದೆ. ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಿ ಹೆಚ್ಚಾದ ನೀರನ್ನು ಬಸಿದು ಹೊರತೆಗೆದರೆ ಮಣ್ಣಿನ ಉಷ್ಣತಾಮಾನವು ತುಲನಾತ್ಮಕವಾಗಿ ಬೇಗನೇ ಏರುತ್ತದೆ.

ಮಣ್ಣಿನಬಣ್ಣ

ಯಾವುದೇ ಮಣ್ಣನ್ನು ನೋಡಿದೊಡನೆ ಮೊದಲು ಗೋಚರಿಸುವುದು ಅದರ ಬಣ್ಣ, ಕಪ್ಪು, ಕೆಂಪು, ಹಳದಿ, ಬೂದಿ ಮತ್ತು ಇತರೆ ಕೆಲವು ಬಣ್ಣದ ಮಣ್ಣುಗಳು ಭೂಭಾಗದ ಮೇಲೆ ಕಂಡುಬರುತ್ತವೆ. ಮಣ್ಣು ನಿರ್ಮಾಣಗೊಂಡ ಮೂಲದ್ರವ್ಯದಲ್ಲಿರುವ ಖನಿಜಗಳು, ಸಾವಯವ ಪದಾರ್ಥಗಳ ಪ್ರಮಾಣ, ಹವಾಮಾನ ಇತ್ಯಾದಿಗಳು ಮಣ್ಣಿನ ಬಣ್ಣದಲ್ಲಿ ಪ್ರತಿ ಬಿಂಬಿಸಿರುತ್ತವೆ.

ಕಬ್ಬಿಣದ ಸಂಯುಕ್ತಗಳು ಮತ್ತು ಹ್ಯೂಮಸ್ ಇವೆರಡು ದ್ರವ್ಯಗಳೂ, ಮಣ್ಣಿನಲ್ಲಿಯ ಬಣ್ಣಕ್ಕೆ ಕಾರಣ ಎಂದು ಹೇಳಬಹುದು. ಹ್ಯೂಮಸ್ಸಿನ ಸೂಕ್ಷ್ಮ ಕಣಗಳು, ಮಣ್ಣಿನ ಕಣಗಳನ್ನು ಪೂರ್ತಿಯಾಗಿ ಅಂಟಿಕೊಳ್ಳುವುದರಿಂದ ಮಣ್ಣು ಕಪ್ಪು ಬಣ್ಣವನ್ನು ಪಡೆಯುತ್ತದೆ. ಅದರಂತೆಯೇ, ಕಬ್ಬಿಣದ ಸಂಯುಕ್ತಗ ವಸ್ತುಗಳೂ ಮಣ್ಣಿನ ಕಣಗಳನ್ನು ಸಂಪೂರ್ಣವಾಗಿ ಇಲ್ಲವೆ ಭಾಗಶಃ ಆವರಿಸುತ್ತವೆ. ಇದಲ್ಲದೇ, ಮಣ್ಣಿನಲ್ಲಿಯೇ ಇರುವ ಕೆಲವು ಖನಿಜಗಳೊಳಗೆ ಇದ್ದ ಕಬ್ಬಿಣವು ಖನಿಜಗಳು ಸವಕಳಿಗೊಂಡೊಡನೆ ಹೊರಬರುತ್ತದೆ. ಹೊರಬಂದ ಈ ಕಬ್ಬಿಣವು ಕೆಂಪು ಬರ್ಣಣದ ಫೆರಿಕ್ ಆಕ್ಸೈಡ್, ಹಳೆ ಬಣ್ಣದ ಜಲಯುತ ಕಬ್ಬಿಣದ ಆಕ್ಸೈಡ್ (ಲಿಮೋನೈಟ್) ಅಥವಾ ಸೀಸದ ಬಣ್ಣದ ಫೆರಸ್ ಆಕ್ಸೈಡ್ ರೂಪದಲ್ಲಿರಬಹುದು.

ಮಣ್ಣಿನ ವಿವಿಧ ವಲಯಗಳಲ್ಲಿ ಆಮ್ಲಜನಕದ ಪೂರೈಕೆಯು ಸಮಾಧಾನಕರವಾಗಿ ಆಗುತ್ತದೆಯೇ ಎಂಬುವುದನ್ನು ಮಣ್ಣಿನ ಬಣ್ಣದ ಬದಲಾವಣೆಯಿಂದ ತಿಳಿದುಕೊಳ್ಳಬಹುದು. ಹವೆಯು ಮಣ್ಣಿನೊಳಗೆ ಸರಿಯಾಗಿ ಚಲಿಸುತ್ತಿದ್ದರೆ ಕಬ್ಬಿಣವು ಫೆರಿಕ್ ರೂಪದಲ್ಲಿರುವುದರಿಂದ ಮಣ್ಣು ಕಾಂತಿಯುತವಾಗಿರುತ್ತದೆ. ಅಮ್ಲಜನಕದ ಕೊರತೆಯಾಯಿತೆಂದರೆ ಕಬ್ಬಿಣವು ಫೆರಸ್ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಆಗ ಮಣ್ಣು ನಿಸ್ತೇಜವಾಗಿ ಕಂಡುಬರುತ್ತದೆ. ಆದ್ದರಿಂದ, ಮಣ್ಣಿನ ಬಣ್ಣದ ಮೇಲಿಂದ ಮಣ್ಣಿನೊಳಗೆ ನೀರು ಸರಿಯಾಗಿ ಬಸಿದುಹೋಗುತ್ತದೆಯೇ ಅಥವಾ ಏನಾದರೂ ಅಡಚಣೆಯುಂಟಾಗುತ್ತದೆಯೇ ಎಂಬುವುದನ್ನು ತಿಳಿಯಬಹುದು.

ಮಣ್ಣಿನಲ್ಲಿ ಪ್ರತಿ ವರ್ಷ ಕೆಲ ಸಮಯದವರೆಗೆ ನೀರು ನಿಂತು, ಉಳಿದ ಸಮಯದಲ್ಲಿ ನೀರು ಬಸಿದುಹೋಗಿರುವುದನ್ನು ಸಹ ಮಣ್ಣಿನ ಬಣ್ಣದಿಂದ ಗುರುತಿಸಬಹುದು. ಮಣ್ಣಿನಲ್ಲಿ ನೀರು ತುಂಬಿದಾಗ ಆಮ್ಲಜಕದ ಕೊರತೆಯಿಂದಾಗಿ ಮಣ್ಣಿನಲ್ಲಿರುವ ಕಬ್ಬಿಣವು ಫೆರಸ್ ರೂಪಕ್ಕೆ ಪರಿವರ್ತನೆ ಹೊಂದುತತದೆ. ಫೆರಸ್ ಸಂಯುಕ್ತಗಳು ನೀರಿನಲ್ಲಿ ಕರಗುವುದರಿಂದ ನೀರಿನೊಡನೆ ಚಲಿಸಿ ಕೆಳಗಿನ ಸ್ತರದೆಡೆಗೆ ಸಾಗುತ್ತದೆ. ಕಣಗಳ ರಂದ್ರದೊಳಗಿನಿಂದ ನೀರು ಕೆಳಗೆ ಸರಿದೊಡನೆ, ಆ ರಂಧ್ರಗಳನ್ನು ತುಂಬಲು ಹವೆಯು ಒಳ ನುಗ್ಗತ್ತದೆ. ಆಮ್ಲಜನಕದ ಸಂಪರ್ಕವೇರ್ಪಟ್ಟೊಡನೆ ಫೆರಸ್ ರೂಪದ ಕಬ್ಬಿಣವು ಫೆರಿಕ್ ರೂಪಕ್ಕೆ ಬದಲಾಗಿ ಕೆಂಪು ಬಣ್ಣವನ್ನು ತಳೆಯುತ್ತದೆ. ಈ ಕ್ರಿಯೆಯು ನಡೆಯಿತೆಂದರೆ ಸೀಸದ ಬಣ್ಣದ ಮೇಲೆ (ಫೆರಸ್ ಕಬ್ಬಿಣದ ಮೇಲೆ) ಕೆಂಪು ಚುಕ್ಕೆಗಳು (ಫೆರಿಕ್ ಕಬ್ಬಿಣದ ಚುಕ್ಕೆಗಳು) ಮೂಡಿ ಬರುತ್ತವೆ. ಇದಕ್ಕೆ ಮಿಶ್ರ ಬಣ್ಣ ಎನ್ನುತ್ತಾರೆ. ಮ್ಯಾಂಗನೀಸ್ ಧಾತುವಿನ ಮ್ಯಾಂಗನೀಸ್ ಮತ್ತು ಮ್ಯಾಂಗನೀಕ್ ಬದಲಾವಣೆಗಳಿಂದಲೂ ಕೆಲವು ಮಣ್ಣುಗಳಲ್ಲಿ ನೇರಳೇ ಬಣ್ಣದ ಸಣ್ಣ ಗಂಟುಗಳು ಕಂಡುಬರುತ್ತವೆ.

ಮಣ್ಣಿನಲ್ಲಿಗಟ್ಟಿಪದರುಗಳು (ಸ್ತರಗಳು)

ಕೆಲವು ಮಣ್ಣುಗಳ ತಳ ಭಾಗದಲ್ಲಿ ಹಲವಾರು ಕಾರಣಗಳಿಂದಾಗಿ ಗಟ್ಟಿಯಾದ ಪದರುಗಳು ನಿರ್ಮಾಣಗೊಳ್ಳಬಹುದು. ಸಸ್ಯದ ಬೇರುಗಳ ಬೆಳವಣಿಗೆಗೆ, ನೀರು ಮತ್ತು ಹವೆಯ ಚಲನೆಗೆ ಈ ಪದರುಗಳು ಅಡಚಣೆಯುಂಟು ಮಾಡಬಹುದು. ಇಂತಹ ಪದರುಗಳ ನಿರ್ಮಾಣವೇ ಆಗದಂತೆ ಎಚ್ಚರವನ್ನು ವಹಿಸುವುದು ಉತ್ತಮ ಮಾರ್ಗವೆನ್ನಬಹುದು. ಆದರೆ, ಇವು ನಿರ್ಮಾಣಗೊಂಡವೆಂದರೆ ಈ ಪದರುಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಗಟ್ಟಿ (ಕಠಿಣ) ಪದರುಗಳು ಮಣ್ಣು ನಿರ್ಮಾಣವಾಗುತ್ತಿರುವಾಗಲೇ ರೂಪುಗೊಳ್ಳಬಹುದು. ಇಲ್ಲವೇ ಬೇಸಾಯ ಕಾರ್ಯಗಳ ಪರಿಣಾಮದಿಂದ ಕಾಣಿಸಿಕೊಳ್ಳಬಹುದು. ಗಟ್ಟಿ ಪದರುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಅವುಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿದೆ.

ಗಾರೆಯಂತಹವ್ತುಗಳಿಂದನಿರ್ಮಾಣಗೊಂಡಪದರುಗಳು

i) ಕಬ್ಬಿಣದ ಸಂಯುಕ್ತದಿಂದ : ಉಷ್ಣಕಟಿಬಂಧದ ಪ್ರದೇಶಗಳಲ್ಲಿ ಕಂಡುಬರುವ ಆಕ್ಸೀಸೋಲ್ ಗಣಕ್ಕೆ ಸೇರಿದ ಮಣ್ಣಿನಲ್ಲಿ ಈ ಬಗೆಯ ಪದರನ್ನು ಕಾಣಬಹುದು. ಮಣ್ಣಿನಲ್ಲಿರುವ ನೀರಿನ ಪಾತಳಿಯು ಕೆಳಗೆ ಇಳಿಯುತ್ತಾ ಹೋದಂತೆ ಈ ರೀತಿಯ ಗಟ್ಟಿ ಪದರು ನಿರ್ಮಾಣವಾಗುತ್ತದೆ. ಈ ಪದರು ಹಸಿಯಿರುವಾಗ ಮೃದುವಾಗಿರುವುದರಿಂದ ನೀರು ಬಸಿದುಹೋಗಬಲ್ಲದು. ಸಸ್ಯದ ಬೇರುಗಳು ಸಹ ಈ ಪದರಿನೊಳಗಿಂದ ಬೆಳೆದು ಕೆಳಗೆ ಹೋಗಬಲ್ಲವು. ಆದರೆ, ಒಮ್ಮೆ ಸ್ತರವು ಒಣಗಿತೆಂದರೆ ನೀರು, ಹವೆ ಮತ್ತು ಬೇರುಗಳ ಚಲನೆಗೆ ಅಡ್ಡಿಯುಂಟಾಗುತ್ತದೆ.

ii) ಕಬ್ಬಿಣದ ಸಂಯುಕ್ತಗಳಿಂದ + ಸಾವಯವ ಪದಾರ್ಥದಿಂದ : ಸ್ಪೋಡೋಸೊಲ್ ಗಣದ ಮಣ್ಣಿನಲ್ಲಿ ಕಬ್ಬಿಣದ ಸಂಯುಕ್ತಗಳ ಮತ್ತು ಸಾವಯವ ಪದಾರ್ಥಗಳ ಸಂಯೋಜಿತ ಕ್ರಿಯೆಯಿಂದ ಈ ಸ್ತರವು ನಿರ್ಮಾಣಗೊಳ್ಳುತ್ತದೆ. ಈ ಸ್ತರಕ್ಕೆ ಓರ್ಟ ಸ್ಟೀನ್‌ಎಂಬ ಹೆರಿದೆ. ಕಬ್ಬಿಣದ ಸಂಯುಕ್ತಗಳ ಮೇಲಿರುವ ಋಣ ಚಾರ್ಜ್‌ಗಳು ಮಣ್ಣನ್ನು ಗಾರೆಯಂತೆ ಬಂಧಿಸುತ್ತವೆ.

iii) ಕಬ್ಬಿಣದ ಸಂಯುಕ್ತಗಳು ಮತ್ತು ಸಿಲಿಕಾಗಳು ಸಂಯುಕ್ತವಾಗಿ ಅಥವಾ ಪ್ರತ್ಯೇಕವಾಗಿ : ಹಲವಾರು ಪ್ರದೇಶಗಳ ಮಣ್ಣುಗಳಲ್ಲಿ ಈ ರೀತಿಯ ಸ್ತರಗಳು ಕಂಡುಬರುತ್ತವೆ. ಕಬ್ಬಿಣದ ಸಂಯುಕ್ತಗಳು ಮತ್ತು ಸಿಲಿಕಾಗಳು ಪ್ರತ್ಯೇಕವಾಗಿ ಇಲ್ಲವೆ ಜೊತೆಗೂಡಿ ಮಣ್ಣನ್ನು ಕಠಿಣ ಸ್ತರವಾಗುವಂತೆ ಮಾಡುತ್ತವೆ. ಆಮ್ಲ – ಕ್ಷಾರವಿರದ ಅಥವಾ ಸ್ವಲ್ಪ ಮಟ್ಟಿಗೆ ಆಮ್ಲವಿರುವ ಎರೆಯು ಸಂಗ್ರಹವಾಗಿರುವ ವಲಯದ ಕೆಳಭಾಗದಲ್ಲಿ ಈ ಬಗೆಯ ಸ್ತರವು ಕಂಡುಬರುತ್ತದೆ. ನೀರಿನ ಸಂಚಲನೆಗೆ ಮತ್ತು ಬೇರುಗಳ ಬೆಳವಣಿಗೆಗೆ ಈ ಗಟ್ಟಿಪದರು ಅಡ್ಡಿಯುಂಟು ಮಾಡುವುದರಿಂದ ಇಂತಹ ಪದರುಗಳನ್ನು ನಿವಾರಿಸುವುದು ಅತ್ಯವಶ್ಯಕ.

iv) ಸಿಲಿಕಾ ಮತ್ತು ಸುಣ್ಣದಿಂದ : ಮಣ್ಣಿನಲ್ಲಿರುವ ವಿವಿಧ ಸಂಯುಕ್ತಗಳನ್ನು ಕರಗಿಸಿ ಭೂಮಿಯಾಳಕ್ಕೆ ಒಯ್ಯಲು ಅವಶ್ಯವಿರುವಷ್ಟು ವಾರ್ಷಿಕ ಮಳೆಯಾಗದ ಶುಷ್ಕ ಪ್ರದೇಶದಲ್ಲಿ ಸುಣ್ಣವು ಮಣ್ಣಿನ ಕೆಳಪದರದಲ್ಲಿ ಸಂಗ್ರಹವಾಗುತ್ತದೆ. ಸುಣ್ಣವು ಮೃದುವಾದ ಪುಡಿಯ ರೂಪದಲ್ಲಿರಬಹುದು. ಇಲ್ಲವೇ ಸಣ್ಣ ಸಣ್ಣ ಗಂಟುಗಳಂತೆ ಸಂಗ್ರಹವಾಗಿರಬಹುದು. ಆದರೆ ಭೂಮಿಯಲ್ಲಿಯ ನೀರಿನ ಪಾತಳಿಯು ಮೇಲ್ಮಟ್ಟದಲ್ಲಿದ್ದಾಗ ಸುಣ್ಣವು ಪದರಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಕೆಲವು ಸಮಯದ ನಂತರ ನೀರಿನ ಪಾತಳಿಯು ಕೆಳಗಿಳಿದರೂ ಸುಣ್ಣದ ಪದರು ಹಾಗೆಯೇ ಉಳಿದುಕೊಂಡಿರುತ್ತದೆ. ಕೆಲವೆಡೆ ಇಂತಹ ಪದರುಗಳು ನೀರಿನ ಚಲನೆಯನ್ನು ತಡೆಯುತ್ತಿಲ್ಲವಾದರೂ ಇನ್ನು ಕೆಲವು ಸ್ಥಳಗಳಲ್ಲಿ ಈ ಪದರುಗಳು ನೀರಿನ ಚಲನೆಗೆ ಅಡ್ಡಿಯುಂಟು ಮಾಡುತ್ತದೆಯಲ್ಲದೆ, ಬೇರುಗಳ ಬೆಳವಣಿಗೆಗೂ ಆಸ್ಪದಕೊಡುವುದಿಲ್ಲ. ಸುಣ್ಣದಿಂದ ನಿರ್ಮಾಣಗೊಂಡ ಈ ಪದರಿಗೆ ‘ಕೆಲಿಚೆ’ ಎಂದು ಕರೆಯುವರು.

ಗಾರೆಯಂತಹವಸ್ತುಗಳಸಹಾಯವಿಲ್ಲದೆನಿರ್ಮಾಣಗೊಂಡಪದರುಗಳು

i) ಎರೆ ಪದರುಗಳು :ಎರೆಯ ಪ್ರಮಾಣವು ಅತ್ಯಧಿಕವಾಗಿರುವ, ಮೇಲ್ಬಾಗದಲ್ಲಿರುವ ಸ್ವರದಿಂದ ಎದ್ದು ಕಾಣುವಷ್ಟು ಭಿನ್ನವಿರುವ ಮತ್ತು ಅತಿ ಸಾಂಧ್ರವಾದ ಗಟ್ಟಿ ಪದರಿಗೆ ಎರೆಯ ಪದರು ಎನ್ನುತ್ತಾರೆ. ಇಂತಹ ಪದರಿರುವ ಮಣ್ಣಿನಲ್ಲ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪೋಷಕಗಳ ಕೊರತೆಯಿರುತ್ತದೆ. ಇಂತಹ ಪದರಿನಲ್ಲಿ ಸಾಮಾನ್ಯವಾಗಿ ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಗಳ ಪ್ರಮಾಣವು ಅತಿ ಕಡಮೆ ಇರುವುದು ಕಂಡುಬಂದಿದೆ. ಈ ಪದರನ್ನು ಛಿದ್ರಗೊಳಿಸಿದರೂ ಕೆಲವು ಸಮಯದ ನಂತರ ಇದು ಪುನಃ ನಿರ್ಮಾಣಗೊಳ್ಳುತ್ತದೆ.

ii) ಫ್ರಾಜಿ ಪದರು : ಅತಿ ಕಡಮೆ ಇಳಿಜಾರಿರುವ ಅಥವಾ ಸಮತಟ್ಟಾದ ಭೂಮಿಯಲ್ಲಿ ಇರುವ ಮಣ್ಣಿನಲ್ಲಿ ಫ್ರಾಜಿ ಪದರನ್ನು ಕಾಣಬಹುದು. ರೇವೆ ಅಥವಾ ಮರಳು ಇಲ್ಲವೇ ಇವೆರಡೂ ಇರುವ ಈ ಪದರು ಬಹುಸಾಂದ್ರವಾಗಿರುತ್ತದೆ. ಆದ್ದರಿಂದ ಹವೆಯ ಚಲನೆಗೆ ಮತ್ತು ಸಸ್ಯದ ಬೇರುಗಳ ಬೆಳವಣಿಗೆಗೆ ಫ್ರಾಜಿ ಪದರು ಅಡಚಣೆಯುಂಟು ಮಾಡುತ್ತದೆ. ಈ ಪದರು ಒಣಗಿದಾಗ ಗಾರೆಯ ನಿರ್ಮಾಣಗೊಂಡ ಗಟ್ಟಿ ಪದರಿನಂತೆ ಬಿರುಸಾಗಿರುತ್ತದೆ. ಆದರೆ ಹಸಿಯಾದೊಡನೆ ಇದರ ಗುಣಧರ್ಮಗಳೇ ಭಿನ್ನವಾಗುತ್ತವೆ.

ಮಣ್ಣಿನಭೌತಿಕಗುಣಧರ್ಮಗಳನಿರ್ವಹಣೆಯಲ್ಲಿಕೃಷಿಉಪಕರಣಗಳಪಾತ್ರ

ಅನಾದಿಕಾಲದಿಂದಲೂ ಕೃಷಿಯಲ್ಲಿ ಉಪಕರಣಗಳ ಬಳಕೆಯು ಇದೆಯೆಂದರೆ ತಪ್ಪಾಗಲಾರದು. ಈ ಉಪಕರಣಗಳ ಆಕಾರ ಮತ್ತು ಪ್ರಕಾರಗಳಲ್ಲಿ ಮಹತ್ವರವಾದ ಬದಲಾವಣೆಗಳಾಗುತ್ತ ಬಂದಿವೆ ಎಂಬುವುದರಲ್ಲಿ ಸಂದೇಹವಿಲ್ಲ. ಕೃಷಿ ಉಪಕರಣಗಳನ್ನು ಬಳಸುವ ಉದ್ದೇಶಗಳು, ಅವುಗಳ ಉಪಯೋಗದಿಂದ ಮಣ್ಣಿನ ಮೇಲೆ ಆಗುವ ಪರಿಣಾಮಗಳು, ಮಣ್ಣಿನ ಭೌತಿಕ ಗುಣಧರ್ಮಗಳ ನಿರ್ವಹಣೆಯಲ್ಲಿ ಕೃಷಿ ಉಪಕರಣಗಳ ಪಾತ್ರ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ಸಂಗತಿಗಳು ಕೆಳಗಿನಂತಿವೆ.

ಕೃಷಿ ಉಪಕರಣಗಳನ್ನು ಬಳಸುವ ಉದ್ದೇಶ : ಬೀಜ ಬಿತ್ತಲು ಇಲ್ಲವೇ ಸಸಿ ನೆಡಲು ಮತ್ತು ಬೆಳೆಯ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಅವಶ್ಯವರುವ ಭೌತಿಕ ಗುಣಧರ್ಮಗಳನ್ನು ಮಣ್ಣು ಪಡೆಯುವಂತೆ ಮಾಡುವುದೇ ಕೃಷಿ ಉಪಕರಣಗಳ ಬಳಕೆಯ ಹಿಂದಿರುವ ಮೂಲ ಉದ್ದೇಶ. ಮಣ್ಣಿನ ಕಣಗಳ ಉತ್ತಮ ಹಾಗೂ ಸ್ಥಿರವಾದ ರಚನೆ, ಮಣ್ಣಿನ ಗಾತ್ರದ ಸಾಂದ್ರತೆ, ನೀರು ಮಣ್ಣಿನಲ್ಲಿ ಪ್ರವೇಶಿಸುವ ವೇಗ, ಮಣ್ಣಿನಲ್ಲಿರುವ ನೀರಿನ ಪ್ರಮಾಣ, ಹವೆಯ ಚಲನೆ ಇತ್ಯಾದಿ ಹಲವು ಭೌತಿಕ ಗುಣಧರ್ಮಗಳನ್ನು ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ. ಕೃಷಿ ಉಪಕರಣಗಳ ಸಹಾಯದಿಂದ ಪರಿವರ್ತನೆ ಗೊಂಡ ಭೌತಿಕ ಗುಣಧರ್ಮಗಳು ಚಿರಸ್ಥಾಯಿಯಲ್ಲ. ಅವು ಬದಲಾಗುತ್ತಲೇ ಇರುತ್ತವೆ ಎಂಬುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು.

ಕೃಷಿ ಉಪಕರಣಗಳನ್ನು ಬಳಸುವುದರ ಪ್ರಮುಖ ಉದ್ದೇಶಗಳು :

i) ಭೂ ಪ್ರದೇಶದಲ್ಲಿರುವ ಕಳೆಗಳನ್ನು ನಿಯಂತ್ರಿಸುವುದು.

ii) ಬೀಜ ಬಿತ್ತಲು ಅಥವಾ ಸಸಿ ನೆಡಲು ಭೂಮಿಯನ್ನು ಸಿದ್ಧಪಡಿಸುವುದು.

iii) ಬೆಳೆಯು ಸರಿಯಾಗಿ ಬೆಳೆಯಲು ಅನುಕೂಲವಾಗುವಂತೆ ಮಣ್ಣನ್ನು ಸುಸ್ಥಿತಿಯಲ್ಲಿ ಇಡುವುದು.

iv) ಮಣ್ಣಿನ ಮೇಲ್ಬಾಗದಲ್ಲಿರುವ ಸಾವಯವ ಪದಾರ್ಥಗಳು ಮಣ್ಣಿನೊಳಗೆ ಸೇರಿಕೊಳ್ಳುವಂತೆ ಮಾಡುವುದು.

ಮಣ್ಣಿನ ಅಪೇಕ್ಷಿತ ಭೌತಿಕ ಗುಣಧರ್ಮಗಳು: ಬೀಜ ಬಿತ್ತಲು ಅಥವಾ ಸಸಿ ನೆಡಲು ಮತ್ತು ಸಸ್ಯಗಳು ಉತ್ತಮವಾಗಿ ಬೆಳೆಯಲು ಮಣ್ಣಿನ ಭೌತಿಕ ಗುಣಧರ್ಮಗಳು ಉತ್ತಮವಾಗಿರಬೇಕು. ಇದಕ್ಕಾಗಿ ಈ ಮುಂದಿನ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

i) ಮಳೆಯಿಂದ ಅಥವಾ ನೀರಾವರಿಯಿಂದ ಪೂರೈಕೆಯಾದ ನೀರು ಸಮನಾದ ವೇಗದಿಂದ ಮಣ್ಣನ್ನು ಪ್ರವೇಶಿಸಬೇಕು ಮತ್ತು ಬೆಳೆಗೆ ಪ್ರಯೋಜನವಾಗಬಲ್ಲ ರೀತಿಯಲ್ಲಿ ಮಣ್ಣಿನಲ್ಲಿ ಸಂಗ್ರಹವಾಗಬೇಕು. ಇದು ಸಾಧ್ಯವಾಗಬೇಕಾದರೆ, ಮಣ್ಣಿನ ಮೇಲ್ಬಾಗವು ಗಟ್ಟಿಯಾಗಿರಬಾರದು, ನೀರು ಹರಿದು ಹೋಗಿ ಭೂ ಸವಕಳಿಯನ್ನುಂಟು ಮಾಡುವಂತಿರಬಾರದು ಮತ್ತು ಮಣ್ಣಿನಡಿಯಲ್ಲಿ ಗಟ್ಟಿಪದರುಗಳು ಇರಬಾರದು.

ii) ಮಣ್ಣಿನೊಳಗೆ ಹವೆಯು ನಿರಾತಂಕವಾಗಿ ಚಲಿಸುವಂತಿರಬೇಕು. ಮಣ್ಣಿನಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ದೊಡ್ಡ ಮತ್ತು ಮಧ್ಯಮ ಆಕಾರದ ರಂದ್ರಗಳಿರಬೇಕು.

iii) ಸಸ್ಯದ ಬೇರುಗಳ ಬೆಳವಣಿಗೆಗೆ ಯಾವುದೇ ರೀತಿಯ ಅಡ್ಡಿಯುಂಟಾಗಬಾರದು. ಮಣ್ಣಿನ ಕಣಗಳ ರಚನೆಯು ಉತ್ತಮ ಮತ್ತು ಸ್ಥಿರವಾಗಿದ್ದರೆ ಇದು ಸಾಧ್ಯವಾಗುತ್ತದೆ. ಅಲ್ಲದೇ, ಮೇಲೆ ಹೇಳಿದಂತೆ, ಮಣ್ಣಿನಲ್ಲಿ ಯಾವುದೇ ಬಗೆಯ ಕಠಿಣ (ಗಟ್ಟಿ) ಪದರುಗಳು ಇರಬಾರದು.

iv) ಭೂ ಸವಕಳಿಯನ್ನು ಸಮರ್ಥವಾಗಿ ತಡೆಯುವ ಸಾಮರ್ಥ್ಯ ವು ಮಣ್ಣಿಗಿರಬೇಕು. ಉತ್ತಮ ಮತ್ತು ಸ್ಥಿರವಾದ ರಚನೆಯು ಮಣ್ಣಿನ ಕಣಗಳಲ್ಲಿದ್ದರೆ, ಮಳೆ ನೀರಿನ ಹೊಡೆತದಿಂದ ಕಣಗಳು ಸ್ಥಳಾಂತರಗೊಂಡು ನೀರಿನೊಡನೆ ಹರಿದುಹೋಗುವ ಸಾಧ್ಯತೆಯು ಕಡಮೆಯಾಗುತ್ತದೆ.

v) ಸಾವಯವ ಪದಾರ್ಥಗಳು ಮಣ್ಣಿನ ಒಂದೇ ವಲಯದಲ್ಲಿ ಸಂಗ್ರಹವಾಗುವ ಬದಲು ಮಣ್ಣಿನ ಎಲ್ಲೆಡೆ ಸರಿಯಾಗಿ ಮಿಶ್ರವಾಗುವಂತಿರಬೇಕು. ಇದರಿಂದ ಸಾವಯವ ಪದಾರ್ಥವು ಸರಿಯಾಗಿ ಕುಳಿತು, ಮಣ್ಣಿನ ರಚನೆಯು ಉತ್ತಮಗೊಳ್ಳಲು ಸಾಧ್ಯವಾಗುತ್ತದೆ.

ಸಾಂಪ್ರದಾಯಿಕ ಕೃಷಿ ಉಪಕರಣಗಳು :ಮಣ್ಣಿನ ಭೌತಿಕ ಗುಣಧರ್ಮಗಳ ಮೇಲೆ ಪರಿಣಾಮವನ್ನುಂಟು ಮಾಡುವ ಕೃಷಿ ಉಪಕರಣಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಅವುಗಳ ವಿವರಗಳು ಕೆಳಗಿನಂತಿವೆ.

. ಬೀಜ ಬಿತ್ತುವ ಅಥವಾ ಸಸಿ ನೆಡುವ ಪೂರ್ವದಲ್ಲಿ ಬಳಸುವ ಉಪಕರಣಗಳು : ನೇಗಿಲು (ರೆಂಟೆ), ಕುಂಟೆ, ಸಾಲು – ಬೋದು ತಯಾರಿಸುವ ನೇಗಿಲು, ಕೊರಡು ಇತ್ಯಾದಿ ಉಪಕರಣಗಳನ್ನು ಬಿತ್ತನೆಗೆ ಮೊದಲೇ ಭೂಮಿಯನ್ನು ಸಿದ್ಧಪಡಿಸಲು ಬಳಲಾಗುತ್ತದೆ. ಕೆಲವು ಪ್ರಮುಖ ಉಪಕರಣಗಳ ಕಾರ್ಯ ವಿಧಾನಗಳ ವಿವರಗಳು ಕೆಳಗಿನಂತಿವೆ:

i) ನೇಗಿಲು : ನೇಗಿಲು ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಕೃಷಿ ಉಪಕರಣವೆನ್ನಬಹುದು. ಭಾರತದಲ್ಲಿ ಕಟ್ಟಿಗೆಯಿಂದ ತಯಾರಿಸಿದ ನೇಗಿಲೇ ರೂಢಿಯಲ್ಲಿತ್ತು. ಆದರೆ ಎತ್ತುಗಳಿಂದ ಎಳೆಯುವಂತಹ ಮತ್ತು ಯಂತ್ರ ಚಾಲಿತ, ಕಬ್ಬಿಣದಿಂದ ನಿರ್ಮಿಸಿದ ರೆಕ್ಕೆಯ ನೇಗಿಲುಗಳು ಕಳೆದ ಹಲವು ದಶಕಗಳಿಂದಲೂ ರೈತರಲ್ಲಿ ಬಳಕೆಯಲ್ಲಿವೆ. ಹೀಗಿದ್ದರೂ ಈ ದೇಶದ ಕೃಷಿಕರು ಮರದ ನೇಗಿಲನ್ನು ಪೂರ್ತಿಯಾಗಿ ಕೈ ಬಿಟ್ಟಿಲ್ಲ.

ಮರದ ನೇಗಿಲು ಭೂಮಿಯನ್ನು ಅಗೆದು, ಮಣ್ಣನ್ನು ಪುಡಿ ಮಾಡಿ, ನೇಗಿಲಿನ ಎರಡೂ ಪಾರ್ಶ್ವಕ್ಕೆ ಸ್ವಲ್ಪದೂರದವರೆಗೆ ಸರಿಸುತ್ತದೆ. ಆದರೆ ಎರಡು ನೇಗಿಲು ಸಾಲುಗಳ ಮಧ್ಯದಲ್ಲಿ ‘^’ ಆಕಾರದ ಭೂಮಿಯು ಉಳುಮೆಯಾಗದೆ ಹಾಗೆಯೇ ಉಳಿದುಕೊಳ್ಳುತ್ತದೆ. ಆದ್ದರಿಂದ ನೇಗಿಲನ್ನು ಎರಡು – ಮೂರು ಬಾರಿ ಉಪಯೋಗಿಸಿ ಬಹುತೇಕ ಎಲ್ಲ ಪ್ರದೇಶವೂ ಉಳುಮೆಯಾಗುವಂತೆ ಮಾಡಬೇಕಾಗುತ್ತದೆ.

ಕಬ್ಬಿಣದ ರೆಕ್ಕೆ ನೇಗಿಲನ್ನು ಬಳಸಿದಾಗ ಮೂರು ಮುಖ್ಯ ಕ್ರಿಯೆಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತವೆ. ನೇಗಿಲಿಗೆ ಚೂಪಾದ ಕುಳವು ಭೂಮಿಯನ್ನು ಪ್ರವೇಶಿಸಿ ನೆಲದ ಸಣ್ಣ ತುಂಡನ್ನೇ ಕತ್ತರಿಸಿ ಮೇಲೆತ್ತುತ್ತದೆ. ಈ ತುಂಡು ನೇಗಿಲಿಗೆ ರೆಕ್ಕೆ ಗುಂಟ ಮೇಲೆ ಸಾಗುತ್ತದೆ. ಆಗ ಮಣ್ಣಿನ ಈ ತುಣುಕು ಒಡೆದು ತಲೆಕೆಳಗಾಗಿ ಭೂಮಿಯ ಮೇಲೆ ಬೀಳುತ್ತದೆ. ಈ ಕ್ರಿಯೆಗಳಿಂದ ಮೇಲ್ಬಾಗದ ಮಣ್ಣು ಕೆಳಗೂ ಕೆಳಭಾಗದ ಮಣ್ಣು ಮೇಲ್ಬಾಗಕ್ಕೂ ಬರುವುದಲ್ಲದೇ ಮಣ್ಣುಪುಡಿಯಾಗುತ್ತದೆ. ಅಲ್ಲದೇ, ಮಣ್ಣಿನ ಮೇಲ್ಬಾಗದಲ್ಲಿದ್ದ ಸಾವಯವ ಪದಾರ್ಥಗಳು ಕೆಳಸ್ಥರವನ್ನು ತಲುಪುತ್ತವೆ.

ಮೇಲೆ ಸೂಚಿಸಿದಂತೆ ರೆಕ್ಕೆಯ ನೇಗಿಲಿಗೆ ಬದಲು ಡಿಸ್ಕ್ ನೇಗಿಲುಗಳನ್ನು ಬಳಸಬಹುದು. ಡಿಸ್ಕ್ಗಳು ಚೂಪಾಗಿರುವುದರಿಂದ ಮಣ್ಣನ್ನು ತೆಳುವಾದ ಹೋಳುಗಳನ್ನಾಗಿ ಕತ್ತರಿಸುತ್ತವೆ. ಈ ರೀತಿ ಹೋಳಾದ ಮಣ್ಣು ಡಿಸ್ಕನೊಡನೆ ಮೇಲೇರಿ ಬಂದು ತಿರುವು ಮುರುವಾಗಿ ಭೂಮಿಯ ಮೇಲೆ ಬೀಳುತ್ತದೆ.

ii) ಕುಂಟೆಗಳು : ಎತ್ತು ಇಲ್ಲವೇ ಯಂತ್ರಗಳಿಂದ ಎಳೆಯುವ ಕುಂಟೆಗಳನ್ನು ಉಳುಮೆಯ ನಂತರ ಬಳಸುವುದು ಸಾಮಾನ್ಯ. ಕುಳವಿರುವ ಕುಂಟೆ, ಚಕ್ರಗಳ ಕುಂಟೆ, ಕೊಕ್ಕೆಯಂತಹ ಹಲ್ಲುಗಳಿರುವ ಕುಂಟೆ ಇತ್ಯಾದಿಗಳು, ಕುಂಟೆಯ ಕೆಲವು ಮಾದರಿಗಳು, ಈ ಉಪಕರಣಗಳು ಮಣ್ಣನ್ನು ಪುಡಿಮಾಡುವ, ಭೂಮಿಯನ್ನು ಸ್ವಲ್ಪ ಮಟ್ಟಿಗೆ ಸಮಪಾತಳಿಯನ್ನಾಗಿ ಮಾಡುವ ಮತ್ತು ಮಣ್ಣಿನ ಮೇಲ್ಬಾಗದಲ್ಲಿರುವ ಕಸಕಡ್ಡಿಗಳನ್ನು ಸಂಗ್ರಹಿಸಿ ಅಲ್ಲಲ್ಲಿ ಸಣ್ಣ ರಾಶಿಯನ್ನು ಮಾಡುವ ಕಾರ್ಯಗಳನ್ನೆಸಗುತ್ತವೆ. ಡಿಸ್ಕ್ ಕುಂಟೆಯು ನೆಲವನ್ನು ಉಳುಮೆ ಮಾಡಿ ಕೊಚ್ಚಿ (ಕತ್ತರಿಸಿ) , ಮಣ್ಣಿನ ಹೆಂಟೆಗಳನ್ನು ಒಡೆಯುತ್ತವೆ. ಮಣ್ಣಿನ ಮೇಲ್ಬಾಗದಲ್ಲಿ ಹರಡಿದ ಗೊಬ್ಬರವನ್ನು ಕುಂಟೆಗಳು ಕೆಲವು ಮಟ್ಟಿಗೆ ಮಿಶ್ರ ಮಾಡುತ್ತವೆ.

iii) ಸಾಲುಬೋದುಗಳನ್ನು ನಿರ್ಮಿಸಲು ನೇಗಿಲು : ಕಬ್ಬು, ಬಟಾಟೆ ಇತ್ಯಾದಿ ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಸಾಲು – ಬೋದುಗಳನ್ನಾಗಿ ಮಾಡಬೇಕಾಗುತ್ತದೆ. ಈ ಕಾರ್ಯವನ್ನು ಆಳುಗಳಿಂದ ಮಾಡಿಸುವ ಬದಲು, ಇದಕ್ಕಾಗಿಯೇ ನಿರ್ಮಿಸಿದ ನೇಗಿಲನ್ನು ಬಳಸಬಹುದು. ಭೂಮಿಯನ್ನು ಉಳುಮೆ ಮಾಡಿ, ಕುಂಟೆಯನ್ನು ಉಪಯೋಗಿಸಿದ ನಂತರ ಈ ಉಪಕರಣವನ್ನು ಬಳಸಬೇಕಾಗುತ್ತದೆ. ಈ ಉಪಕರಣದ ಕುಳುವು ಮಣ್ಣನ್ನು ಪ್ರವೇಶಿಸಿ, ಮುಂದೆ ಸಾಗಿದಂತೆ, ಪುಡಿಯಾಗಿರುವ ಮಣ್ಣು ನೇಗಿಲಿನ ಎರಡೂ ರೆಕ್ಕೆಗಳ ಮೇಲೇರಿ ಎರಡು ಪಕ್ಕಗಳಲ್ಲಿ ಬೀಳುತ್ತದೆ. ಹೀಗಾಗಿ ಕಾಲುವೆ ಮತ್ತು ಬೋದುಗಳು ಸಿದ್ಧಗೊಳ್ಳುತ್ತವೆ.

ನೇಗಿಲಿಗೆ ರೆಕ್ಕೆಗಳನ್ನು ಅವಶ್ಯಕತೆಗೆ ತಕ್ಕಂತೆ ಹತ್ತಿರ ತಂದು ಇಲ್ಲವೇ ದೂರ ಸರಿಸಿ ಎರಡು ಸಾಲುಗಳ ಅಂತರವನ್ನು ಹೆಚ್ಚು ಇಲ್ಲವೇ ಕಡಿಮೆ ಮಾಡಿಕೊಳ್ಳುವ ವ್ಯವಸ್ಥೆಯು ಈ ಉಪಕರಣದಲ್ಲಿದೆ.

. ಅಂತರ ಬೇಸಾಯದ ಉಪಕರಣಗಳು : ಬೀಜ, ಮೊಳೆತು, ಸಸಿಗಳು ಬೇರುಗಳನ್ನು ಹೊಂದಿ ಸ್ವತಂತ್ರವಾದ ಮೇಲೆ ಅವುಗಳ ಬೆಳವಣಿಗೆಗೆ ಅವಶ್ಯವಿರುವ ಪರಿಸರವನ್ನು ನಿರ್ಮಿಸಬೇಕಾಗುತ್ತದೆ. ಕಳೆಗಳು ಬೆಳೆದು ಬಂದು ಸ್ಪರ್ಧಿಸದಂತೆ, ಮಣ್ಣು ಗಟ್ಟಿಯಾಗದಂತೆ ಅಥವಾ ಹೆಪ್ಪುಗಟ್ಟದಂತೆ ನೋಡಿಕೊಂಡರೆ ಮಣ್ಣಿನಲ್ಲಿ ಹೆಚ್ಚು ನೀರು ಪ್ರವೇಶಿಸಲು ಸಾಧ್ಯವಾಗಿ, ಹವೆಯು ನಿರಾತಂಕವಾಗಿ ಮಣ್ಣಿನೊಳಗೆ ಚಲಿಸುವಂತಾಗಿ ಸಸ್ಯಗಳು ಸದೃಢವಾಗಿ ಬೆಳೆಯಲು ಆಸ್ಪದವುಂಟಾಗುತ್ತದೆಯಲ್ಲದೇ, ಬೆಳವಣಿಗೆಯು ವಿವಿಧ ಅವಶ್ಯಕತೆಗಳಿಗಾಗಿ ಕಳೆಗಳೊಡನೆ ಸ್ಪರ್ಧಿಸುವ ಪ್ರಸಂಗವೂ ಬರುವುದಿಲ್ಲ.

ಮೇಲಿನ ಉದ್ದೇಶಗಳನ್ನು ಸಾಧಿಸಲು ಹಲವು ಬಗೆಯ ಮಧ್ಯಂತರ ಬೇಸಾಯ ಉಪಕರಣಗಳು ಅಭಿವೃದ್ಧಿಗೊಂಡಿವೆ. ಪೂರ್ತಿ ಕುಳ ಮತ್ತು ಸೀಳು ಕುಳವಿರುವ ಎಡೆಕುಂಟೆಗಳು, ಡುಮಗುಂಟೆ, ವಿವಿಧ ಆಕಾರದ ಹಲ್ಲುಗಳಿರುವ ಎಡೆಕುಂಟೆಗಳು, ಜಪಾನ್‌ ಮಾದರಿಯ ಕೈಗುಂಟೆಗಳು ಮಧ್ಯಂತರ ಬೇಸಾಯಕ್ಕೆ ಬಳಸುವ ಸಾಧನಗಳ ಉದಾಹರಣೆಗಳು :

ಸಾಂಪ್ರದಾಯಿಕಕೃಷಿಉಪಕರಣಗಳಿಂದಮಣ್ಣಿನಭೌತಿಕಗುಣಧರ್ಮಗಳಮೇಲೆಆಗುವಪರಿಣಾಮಗಳು

. ತಾತ್ಕಾಲಿಕ ಪರಿಣಾಮಗಳು :

v) ಭೂಮಿಯನ್ನು ನೇಗಿಲಿನಿಂದ ಉಳುವುದರಿಂದ ಇತರ ಕೃಷಿ ಉಪಕರಣಗಳನ್ನು ಬಳಸುವುದರಿಂದ ಮಣ್ಣು ಸಡಿಲಗೊಳ್ಳುತ್ತದೆ ಮತ್ತು ರಂಧ್ರಗಳ ಸಂಖ್ಯೆಯು ಹೆಚ್ಚಾಗುತ್ತದೆ.

ii) ಕಳೆಗಳು ನಾಶವಾಗುತ್ತವೆ.

iii) ಮಣ್ಣಿನ ಮೇಲ್ಬಾಗದಲ್ಲಿರುವ ಸಾವಯವ ಪದಾರ್ಥಗಳು ಮಣ್ಣಿನೊಳಗೆ ಸೇರಿಕೊಂಡು ಮೇಲ್ಬಾಗವು ಸ್ವಚ್ಛವಾಗಿ ಕಾಣುತ್ತದೆ.

iv) ಬೀಜ ಬಿತ್ತಲು ಮತ್ತು ಸಸಿ ನೆಡಲು ಅನುಕೂಲಕರವಾದ ಭೂಮಿಯು ಸಿದ್ಧವಾಗುತ್ತದೆ.

 

. ದೀರ್ಘಕಾಲೀನ ಪರಿಣಾಮಗಳು :

i) ಸಾವಯವ ಪದಾರ್ಥವು ಬೇಗನೇ ಕಳಿಯಲು ಬೇಕಾಗುವ ವಾತಾವರಣವು ನಿರ್ಮಾಣಗೊಳ್ಳುವುದರಿಂದ ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವು ಕಡಿಮೆಯಾಗುತ್ತಾ ಸಾಗುತ್ತದೆ. ಇದರಿಂದ ಮಣ್ಣಿನ ಕಣಗಳ ರಚನೆಯ ಮೇಲೆ ದುಷ್ಪರಿಣಾಮವುಂಟಾಗಬಹುದು.

ii) ಭೂಮಿಯ ಮೇಲೆ ಕೃಷಿ ಉಪಕರಣಗಳನ್ನು ಹೆಚಚು ಸಾರೆ ಉಪಯೋಗಿಸಿದರೆ, ಮಣ್ಣಿನ ರಚನೆಯು ನಷ್ಟವಾಗಬಹುದು. ಅಲ್ಲದೇ, ಭಾರವಾದ ಟ್ರಾಕ್ಟರ್ ಮತ್ತು ಅವುಗಳಿಗೆ ಜೋಡಿಸಿದ ಉಪಕರಣಗಳ ಭಾರದಿಂದ ಮಣ್ಣಿನ ಸಾಂಧ್ರತೆಯು ಅಧಿಕಗೊಂಡು ಹವೆಯು ಚಲನೆಗೆ ಮತ್ತು ಸಸ್ಯ ಬೇರುಗಳ ಬೆಳವಣಿಗೆಗೆ ಅಡಚಣೆಯುಂಟಾಗಬಹುದು.

iii) ಮಣ್ಣಿನ ಮೇಲ್ಬಾಗದಲ್ಲಿರುವ ಸಾವಯವ ಪದಾರ್ಥಗಳು ಸಾಂಪ್ರದಾಯಿಕ ಉಪಕರಣಗಳ ಬಳಕೆಯಿಂದ ಮಣ್ಣಿನೊಡನೆ ಸೇರಿಕೊಳ್ಳುವುದರಿಂದ ಮಣ್ಣಿನ ಮೇಲ್ಬಾಗದಲ್ಲಿ ಯಾವುದೇ ರೀತಿಯ ಅಚ್ಛಾದನೆಯು ಉಳಿಯುವುದಿಲ್ಲ. ಆ ಸಮಯದಲ್ಲಿ ಮಳೆಯು ಬಂದರೆ ಮಣ್ಣು ಕೊಚ್ಚಿಕೊಂಡು ಹೋಗುವ ಸಂಭವವಿರುತ್ತದೆ.

ಕನಿಷ್ಠಸಾಗುವಳಿಪದ್ಧತಿ

ಇಲ್ಲಿಯವರೆಗೆ ವಿವರಿಸಿದಂತೆ ಬೇಸಾಯದ ಹಲವು ಉಪಕರಣಗಳನ್ನು ಮೇಲಿಂದ ಮೇಲೆ ಉಪಯೋಗಿಸುವುದರಿಂದ ಮಣ್ಣಿನ ಕಣಗಳ ರಚನೆಯ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಇದಲ್ಲದೇ ಭೂಮಿಯ ಮೇಲ್ಬಾಗದಲ್ಲಿರುವ ಸಾವಯವ ವಸ್ತುಗಳು ಈ ಬೇಸಾಯ ಕ್ರಮದಿಂದ ಮಣ್ಣಿನೊಳಗೆ ಸೇರಿ, ಮೇಲ್ಮಣ್ಣಿಗೆ ಮಳೆ ಹನಿಗಳಿಂದ ರಕ್ಷಣೆಯು ಇಲ್ಲದಂತಾಗುತ್ತದೆ. ಹೀಗಾಗಿ ಈ ಪದ್ಧತಿಯು ಮಣ್ಣಿನ ಸವಕಳಿಗೆ ಆಸ್ಪದವನ್ನೀಯುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಕಳೆದ ಕೆಲವು ದಶಕಗಳಿಂದೀಚೆಗೆ ಹಲವು ಹೊಸ ತಂತ್ರಗಳು ಹೊರ ಬಂದಿವೆ. ತಂತ್ರಜ್ಞಾನದ ಈ ಅವಿಷ್ಕಾರಕ್ಕೆ (ಸಂಶೋಧನೆಗೆ) ಕೆಳಗಿನ ಸಂಗತಿಗಳು ಕಾರಣವಾಗಿವೆ ಎನ್ನಬಹುದು:

i) ಕೃಷಿ ಉಪಕರಣಗಳ ಬಳಕೆಯು ರೂಢಿಯಲ್ಲಿ ಬರಲು ಕಳೆಗಳ ನಿಯಂತ್ರಣವು ಒಂದು ಪ್ರಮುಖ ಕಾರಣವಾಗಿತೆನ್ನಬಹುದು. ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಕಳೆನಾಶಕಗಳು ಸಿಗುವುದರಿಂದ, ಕೃಷಿ ಉಪಕರಣಗಳ ಬಳಕೆಯು ಅಷ್ಟರಮಟ್ಟಿಗೆ ಅನವಶ್ಯಕವಾದಂತಾಯಿತು.

ii) ಆಗಿದ್ದಾಂಗೆ ಡೀಸೇಲ್ ಬೆಲೆಯು ದುಬಾರಿಯಾಗುವುದರಿಂದ ಯಂತ್ರಚಾಲಿತ, ಕೃಷಿ ಉಪಕರಣಗಳನ್ನು ಬಳಸುವ ರೈತರು ಈ ಉಪಕರಣಗಳ ಬಳಕೆಯಲ್ಲಿ ಮಿತವ್ಯಯವನ್ನು ತರುವ ಬಗ್ಗೆ ಯೋಚಿಸುವಂತಾಯಿತು.

iii) ಕೃಷಿ ಉಪಕರಣಗಳ ಮಿತಿ ಮೀರಿದ ಅಥವಾ ಅಸಮಂಜಸ ಬಳಕೆಯಿಂದ, ಬಹು ದೊಡ್ಡ ಪ್ರಮಾಣದಲ್ಲಿ ಮೇಲ್ಮಣ್ಣು ಕೊಚ್ಚಿ ಹೋಗಿ, ಕೆರೆ, ಹೊಳೆ ಮ ತ್ತು ಇತರೆ ಜಲಮೂಲಗಳಲ್ಲಿ ಹೂಳು ತುಂಬಿ ಆಗುತ್ತಿರುವ ಅಪಾರ ಹಾನಿಯ ಬಗ್ಗೆ ಇತ್ತೀಚೆಗೆ ಉಂಟಾಗುತ್ತಿರುವ ಜಾಗೃತಿಯಿಂದ ಈ ಸಮಸ್ಯೆಯ ಪರಿಹಾರದ ಬಗ್ಗೆ ಯೋಚಿಸುವಂತಾಯಿತು.

ಮೇಲಿನ ಕಾರಣಗಳಿಂದಾಗಿ ಕೃಷಿ ಉಪಕರಣಗಳ ಉಪಯೋಗವನ್ನು ಕೈಬಿಡುವ ಅಥವಾ ಅತಿ ಕಡಮೆ ಪ್ರಮಾಣದಲ್ಲಿ ಉಪಯೋಗಿಸುವತ್ತ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಈ ಪದ್ಧತಿಯ ಪ್ರಮುಖ ಅಂಶಗಳು ಕೆಳಗಿನಂತಿವೆ.

ಹಿಂದಿನ ಬೆಳೆಯ ತ್ಯಾಜ್ಯವೆನಿಸಿದ ಸಾವಯವ ವಸ್ತುಗಳು ಮಣ್ಣಿನ ಮೇಲ್ಬಾಗದಲ್ಲಿರುವಾಗಲೇ ಬೀಜ ಬಿತ್ತುವ ಸಾಲಿನಲ್ಲಿ ಮಾತ್ರ ವಿಶಿಷ್ಟ ಕೃಷಿ ಉಪಕರಣಗಳ ಸಹಾಯದಿಂದ ಮಣ್ಣನ್ನು ಸಡಿಲಗೊಳಿಸಿ ಬೀಜಗಳನ್ನು ಬಿತ್ತಲಾಗುತ್ತದೆ. ಉಳಿದ ಪ್ರದೇಶದಲ್ಲಿರುವ ಸಾವಯವ ಪದಾರ್ಥವನ್ನು ಮಣ್ಣಿನ ಮೇಲ್ಭಾಗದಲ್ಲಿ ಹಾಗೆಯೇ ಇರಿಸಲಾಗುತ್ತದೆ. ಆ ಭಾಗದ ಮಣ್ಣನ್ನು ಸಡಿಲಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದಿಲ್ಲ.

ಮೇಲೆ ಸೂಚಿಸಿದಂತೆ, ಬಿತ್ತುವ ಸಾಲಿನಲ್ಲಿರುವ ಭೂಮಿಯನ್ನು ಸಡಿಗೊಳಿಸುವ ಮತ್ತು ಬಿತ್ತುವ ಕಾರ್ಯಗಳೆರಡನ್ನೂ ಒಂದಾದ ಮೇಲೊಂದರಂತೆ ಮಾಡಬಲ್ಲ ಯಂತ್ರೋಪಕರಣಗಳ ಸಂಶೋಧನೆಗಳೂ ನಡೆದಿವೆ. ಇದರಿಂದ, ಉಪಕರಣವನ್ನು ಎಳೆಯುವ ಟ್ರಾಕ್ಟರ್ ಎರಡು ಬಾರಿ ಓಡಾಡುವ ಬದಲು ಒಂದು ಓಡಾಟದಲ್ಲಿಯೇ ಕೆಲಸವನ್ನು ಮುಗಿಸಬಹುದಾಗಿದೆ.

ಭಾರತದಲ್ಲಿ ಬೆಳೆಯನ್ನು ಕಾಂಡ ಸಹಿತವಾಗಿ ಕೊಯ್ದು, ಭೂಪ್ರದೇಶದಿಂದ ಹೊರಗೆ ಸಾಗಿಸುವ ಮತ್ತು ಕಾಂಶವನ್ನು ಪಶುಗಳ ಆಹಾರವಾಗಿ ಉಪಯೋಗಿಸುವ ಪದ್ಧತಿಯು ವ್ಯಾಪಕವಾಗಿ ಕಂಡುಬರುತ್ತಿರುವುದರಿಂದ ಮೇಲಿನ ಪದ್ಧತಿಯನ್ನು ಯಥಾವತ್ತಾಗಿ ಅಳವಡಿಸಲು ಸಾಧ್ಯವಾಗದಿರಬಹುದು. ಆದಾಗ್ಯೂ ಕೆಳಗೆ ಕಾಣಿಸಿದ ಸಂಗತಿಗಳನ್ನು ನೆನಪಿನಲ್ಲಿಡುವುದು ಪ್ರಯೋಜನಕಾರಿಯಾಗಿರುತ್ತದೆ:

  • ಪರಿಸ್ಥಿತಿಗೆ ಅನುಗುಣವಾಗಿ, ಕೃಷಿ ಉಪಕರಣಗಳನ್ನು ಅವಶ್ಯವಿರುವಷ್ಟು ಪ್ರಮಾಣದಲ್ಲಿ ಬಳಸಬೇಕು.
  • ಲಭ್ಯವಿರುವ ಎಲ್ಲಾ ಸಾವಯವ ಪದಾರ್ಥಗಳನ್ನು ಮಣ್ಣಿನ ಮೇಲ್ಬಾಗದಲ್ಲಿ ಹೊದಿಸಿ, ಮಣ್ಣು ಕೊಚ್ಚಿಹ ಹೋಗದಂತೆ ನೋಡಿಕೊಳ್ಳಬೇಕು.

ಕನಿಷ್ಠಸಾಗುವಳಿಪದ್ಧತಿಯಅನುಕೂಲತೆಹಾಗೂಅನಾನುಕೂಲತೆಗಳು

. ಅನುಕೂಲತೆಗಳು :

i) ಮಣ್ಣಿನ ಮೇಲ್ಬಾಗದಲ್ಲಿ ಸಾವಯವ ಪದಾರ್ಥದ ಆಚ್ಛಾದನೆ ಇರುವುದರಿಂದ ಮಳೆಯ ನೀರು ಅಧಿಕ ಪ್ರಮಾಣದಲ್ಲಿ ಮಣ್ಣನ್ನು ಪ್ರವೇಶಿಸುತ್ತದೆ. ಅಲ್ಲದೇ, ನೀರು ಆವಿಯ ರೂಪದಲ್ಲಿ ನಷ್ಟವಾಗುವ ಪ್ರಮಾಣವು ಕಡಮೆಯಾಗುತ್ತದೆ. ಹೀಗಾಗಿ ಅತಿ ಕಡಮೆ ಸಾಗುವಳಿ ಪದ್ಧತಿಯನ್ನು ಅನುಸರಿಸಿದ್ದಲ್ಲಿ ಮೇಲ್ಮಣ್ಣು ಹೆಚ್ಚು ಆರ್ಧ್ರವಾಗಿರುತ್ತದೆ.

ii) ಹಲವು ವರ್ಷಗಳವರೆಗೆ ಈ ಪದ್ಧತಿಯನ್ನು ಅನುಸರಿಸಿದ ಭೂ ಪ್ರದೇಶದ ಮೇಲ್ಮಣ್ಣಿನಲ್ಲಿ ಹ್ಯೂಮಸ್ ನ ಪ್ರಮಾಣವು ಅಧಿಕಗೊಳ್ಳುತ್ತದೆಯಲ್ಲದೆ ಮಣ್ಣಿನ ಕಣಗಳ ಸ್ಥಿರವಾದ ರಚನೆಯು ನಿರ್ಮಾಣಗೊಂಡಿರುತ್ತದೆ. ಮಣ್ಣಿನ ಮೇಲಿನ ಸ್ತರವು ಹೆಪ್ಪುಗಟ್ಟುವುದೂ ಇಲ್ಲ.

iii) ಮಣ್ಣಿನಲ್ಲಿ ಸಾವಯವ ವಸ್ತುಗಳ ಪ್ರಮಾಣವು ಹೆಚ್ಚುವುದರಿಂದ ಹಲವು ಪ್ರಯೋಜನಕಾರಿ ಸೂಕ್ಷ್ಮ ಜೀವಿಗಳ ಮತ್ತು ಎರೆ ಹುಳುಗಳ ಸಂಖ್ಯೆಯು ಅಧಿಕಗೊಂಡು ಅವುಗಳಿಂದ ಸಿಗುವ ಎಲ್ಲ ಪ್ರಯೋಜನಗಳೂ ದೊರೆಯುತ್ತವೆ.

. ಅನಾನುಕೂಲತೆಗಳು :

i) ಮಣ್ಣಿನಲ್ಲಿ ನೀರಿನ ಪ್ರಮಾಣವು ಅಧಿಕಗೊಳ್ಳುವುದರಿಂದ ಹವೆಯ ಪ್ರಮಾಣವು ಕಡಮೆಯಾಗಉವ ಸಂಭವವಿದೆ. ಆದ್ದರಿಂದ, ಮಣ್ಣಿನೊಳಗಿನ ಸಣ್ಣ ಪುಟ್ಟ ಸ್ಥಳಗಳಲ್ಲಿ ಆಮ್ಲಜನಕದ ಕೊರತೆಯುಂಟಾಗಿ, ಅಲ್ಲಿರುವ ಸೂಕ್ಷ್ಮ ಜೀವಿಗಳ ಚಟುವಟಿಕೆಯು ಸ್ಥಗಿತ ಗೊಳ್ಳಬಹುದು. ಆದರೆ, ಮೇಲಿನ ಕೆಲವು ಸೆಂ.ಮೀ. ಆಳದಲ್ಲಿ ಸಾಕಷ್ಟು ಸಾವಯವ ಪದಾರ್ಥಗಳಿರುವುದರಿಂದಲೂ ಮತ್ತು ಮೇಲ್ಬಾಗದಲ್ಲಿ ತುಲನಾತ್ಮಕವಾಗಿ ಅಧಿಕ ಆಮ್ಲಜನಕ ಲಭ್ಯವಿರುವುದರಿಂದಲೂ ಈ ಭಾಗದಲ್ಲಿ ಸೂಕ್ಷ್ಮ ಜೀವಿಗಳು ತಮ್ಮ ಚಟುವಟಿಕೆಗಳನ್ನು ನಡೆಸಲು ಆಸ್ಪದವಿದೆ.

ii) ನೀರಿನ ಪ್ರಮಾಣವು ಅಧಿಕವಾಗಿರುವುದರಿಂದ, ಮಣ್ಣಿನ ಉಷ್ಣತೆಯು ಕಡಿಮೆಯಾಗುತ್ತದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಅದರಲ್ಲಿಯೂ ಶೀತ ವಲಯಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಅನಾನೂಕೂಲವಾಗಿ, ಇಳುವರಿಯು ಮೇಲೆ ದುಷ್ಪರಿಣಾಮವುಂಟಾಗಬಹುದು.

iii) ಸಾವಯವ ಪದಾರ್ಥವು ದೊಡ್ಡ ಪ್ರಮಾಣದಲ್ಲಿ ದೊರೆಯುವುದರಿಂದ, ಸೂಕ್ಷ್ಮ ಜೀವಿಗಳು ಬೃಹತ್ ಸಂಖ್ಯೆಯಲ್ಲಿ ಬೆಳೆದು ತಮ್ಮ ಚಟುವಟಿಕೆಗಳನ್ನು ಆರಂಭಿಸುತ್ತವೆ. ಅವುಗಳ ಅಭಿವೃದ್ಧಿಗೆ ಸಾಕಾಗುವಷ್ಟು ಪೋಷಕಗಳು ಸಾವಯವ ಪದಾರ್ಥದಿಂದ ದೊರೆಯದೇ ಇದ್ದರೆ, ಸೂಕ್ಷ್ಮ ಜೀವಿಗಳು ತಮಗೆ ಕಡಮೆ ಬೀಳುವ ಪೋಷಕಗಳನ್ನು ಅದರಲ್ಲಿಯೂ ಸಾರಜನಕವನ್ನು ಮಣ್ಣಿನಿಂದ ಪಡೆದುಕೊಳ್ಳುತ್ತವೆ. ಹೀಗಾಗಿ ಬೆಳೆಗಳಿಗೆ ಸಾರಜನಕದ ಕೊರತೆಯಾಗಬಹುದು.

ಸಾರಜನಕದ ಕೊರತೆಯು ತಾತ್ಪೂರ್ತಿಕ. ಇಂತಹ ಪರಿಸ್ಥಿತಿಯು ಉದ್ಭವಿಸಿದಾಗ ಸಾರಜನಕವನ್ನು ಒದಗಿಸುವ ಗೊಬ್ಬರವನ್ನು ಹೊರಗಿನಿಂದ ಪೂರೈಸಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು.

iv) ಸಾವಯವ ಪದಾರ್ಥ ಕಳಿಯುವಾಗ ಕೆಲವು ಆಮ್ಲಗಳು ನಿರ್ಮಾಣವಾಗುತ್ತವೆ. ಈ ಆಮ್ಲಗಳಿಂದ ಮಣ್ಣಿನ ಆಮ್ಲ – ಕ್ಷಾರ ನಿರ್ದೇಶಕವು ಕಡಮೆಯಾಗುತ್ತದೆ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಈ ಕ್ರಿಯೆಯಿಂದ ಮಣ್ಣಿನ ಆಮ್ಲತೆಯು ಅಧಿಕವಾಗಬಹುದು.

ಮಣ್ಣಿನ ಆಮ್ಲತೆಯನ್ನು ನಿವಾರಿಸಲು ಮಣ್ಣಿಗೆ ಸೂಕ್ತ ಪ್ರಮಾಣದಲ್ಲಿ ಸುಣ್ಣವನ್ನು ಸೇರಿಸಿ ಸಮಸ್ಯೆಯನ್ನು ನಿವಾರಿಸಬಹುದು.

ಮಣ್ಣಿನ ಮೇಲೆ ಸಾವಯವ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಮುಚ್ಚಿದಾಗ ಮಾತ್ರ ಮೇಲೆ ಹೇಳಿದ ದುಷ್ಪರಿಣಾಮಗಳು ಎದ್ದು ಕಾಣವುವು. ಅದರಂತೆಯೇ ಶುಷ್ಕ ಪ್ರದೇಶಕ್ಕಿಂತ ಆರ್ದ್ರ ಪ್ರದೇಶದಲ್ಲಿ ಈ ಪರಿಣಾಮಗಳು ಸ್ಪಷ್ಟವಾಗಿ ಎದ್ದು ಕಾಣುತ್ತವೆ.