ವಿವಿಧ ಬಗೆಯ ಮಣ್ಣುಗಳಲ್ಲಿ ರಚನೆಯ ನಿರ್ವಹಣೆ : ಮೇಲೆ ಹೇಳಿದ ಮಾರ್ಗದರ್ಶಿ ಸೂಚನೆಗಳನ್ನು ಆಧಾರವಾಗಿಟ್ಟುಕೊಂಡು ಪರಿಸ್ಥಿತಿಗನುಗುಣವಾಗಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು, ಮಣ್ಣಿನ ಕಣಗಳ ರಚನೆಯನ್ನು ನಿರ್ವಹಿಸಬೇಕು. ಕೆಳಗೆ ಕೊಟ್ಟಿರುವ ಕೆಲವು ಸಲಹೆಗಳು ಉಪಯುಕ್ತವಾಗಿರುತ್ತವೆ.

i) ಮರಳುಭೂಮಿ : ಜಲಧಾರಣಾ ಸಾಮರ್ಥ್ಯವು ಕಡಮೆ, ಸಾಕಷ್ಟು ಆಮ್ಲಜಕ ಸಿಗುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಸಾವಯವ ವಸ್ತುಗಳು ಕಳಿಯುವಂತೆ ಮಾಡುತ್ತವೆ. ಹೀಗಾಗಿ ಮರಳು ಮಣ್ಣಿನಲ್ಲಿ ಸಾವಯವ ವಸ್ತುಗಳು ಕಳಿಯುವಂತೆ ಮಾಡುತ್ತವೆ. ಹೀಗಾಗಿ ಮರಳು ಮಣ್ಣಿನಲ್ಲಿ ಸಾವಯವ ಪದಾರ್ಥದ ಪ್ರಮಾಣವು ಕಡಮೆ. ಇಂತಹ ಮಣ್ಣಿಗೆ ಸಾಧ್ಯವಾದಷ್ಟು ಸಾವಯವ ಗೊಬ್ಬರವನ್ನು ಪೂರೈಸುತ್ತಿದ್ದರೆ ರಚನೆಯು ಉತ್ತಮಗೊಳ್ಳುತ್ತದೆ ಮತ್ತು ಉತ್ಪಾದಕತೆಯು ಹೆಚ್ಚುತ್ತದೆ.

ii) ಎರೆ ಮಣ್ಣು : ಜಲಧಾರಣಾ ಸಾಮರ್ಥ್ಯವು ಅಧಿಕವಾಗಿದ್ದರೂ ಮಣ್ಣಿನಲ್ಲಿ ಹವೆಯು ಸರಿಯಾಗಿ ಚಲಿಸುವುದಿಲ್ಲ. ಈ ಮೊದಲೇ ಸೂಚಿಸಿದಂತೆ ಮಣ್ಣಿನಲ್ಲಿ ನೀರಿನ ಪ್ರಮಾಣವು ಅಧಿಕವಿದ್ದಾಗ, ಇಲ್ಲವೇ ಮಣ್ಣು ಪೂರ್ತಿಯಾಗಿ ಒಣಗಿದಾಗ ಬೇಸಾಯದ ಉಪಕರಣಗಳನ್ನು ಬಳಸಿದರೆ ಕಣಗಳ ರಚನೆಯ ಮೇಲೆ ದುಷ್ಪರಿಣಾಮಗಳುಂಟಾಗುತ್ತದೆ. ಆದ್ದರಿಂದ ಮಣ್ಣಿನಲ್ಲಿರುವ ಆರ್ದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸಮಯದಲ್ಲಿ ಬೇಸಾಯದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.

ಸಾವಯವ ವಸ್ತುಗಳನ್ನು ಎರೆ ಮಣ್ಣಿಗೆ ಪೂರೈಸಿದರೆ, ಮಣ್ಣಿನ ರಚನೆಯು ಉತ್ತಮಗೊಳ್ಳುತ್ತದೆಂಬುವುದನ್ನು ನೆನಪಿನಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಬೇಕು. ಅದರಂತೆಯೇ ಸಾಧ್ಯವಾದಲ್ಲೆಲ್ಲ, ಭೂಮಿಯು ಸೂಕ್ತ ಬೆಳೆಯಿಂದ ಇಲ್ಲವೇ ಸಾವಯವ ವಸ್ತುಗಳಿಂದ ಅಚ್ಛಾದಿತವಾಗಿರುವಂತೆ ನೋಡಿಕೊಂಡರೆ ಕಣಗಳ ರಚನೆಯು ಸುರಕ್ಷಿತವಾಗಿರುತ್ತದೆ. ಹೆಚ್ಚಾದ ನೀರು ಮಣ್ಣಿನಿಂದ ಹೊರ ಹೋಗುವಂತೆ ನೋಡಿಕೊಂಡರೆ, ರಚನೆಯು ದುರ್ಬಲವಾಗುವುದನ್ನು ತಪ್ಪಿಸಬಹುದು.

iii) ಬತ್ತದ ಭೂಮಿ : ಬತ್ತದ ಗದ್ದೆಯಲ್ಲಿ, ಸದಾ ನೀರು ನಿಂತಿರಬೇಕಾಗುತ್ತದೆ. ಹೀಗೆ ಮಾಡುವ ಸಲುವಾಗಿ ಗದ್ದೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರುವಾಗಲೇ ನೆಲವನ್ನು ಉಳುಮೆ ಮಡಿ ಮತ್ತು ಪಡ್ಲರ‍ ನಂತಹ ಉಪಕರಣಗಳನ್ನು ಬಳಸಿ, ಮಣ್ಣು ಕೆಸರಾಗುವಂತೆ ಮಾಡಲಾಗುತ್ತದೆ. ಇದರಿಂದ ಮಣ್ಣಿನ ಕಣಗಳ ರಚನೆಯು ನಷ್ಟವಾಗಿ ನೀರು ಕೆಳಗೆ ಬಸಿದುಹೋಗದಂತಾಗಿ ಗದ್ದೆಯಲ್ಲಿ ನೀರು ನಿಲ್ಲುವಂತಾಗುತ್ತದೆ.

ಬತ್ತದ ಬೆಳೆಯ ಅವಶ್ಯಕತೆಯನ್ನು ಪೂರೈಸಲೆಂದೇ ಮಣ್ಣಿನ ಕಣಗಳ ರಚನೆಯನ್ನು ಉದ್ದೇಶಪೂರ್ವಕವಾಗಿಯೇ ನಷ್ಟಗೊಳಿಸಲಾಗುತದೆಯೆಂಬುವುದನ್ನು ಇಲ್ಲಿ ಗಮನಿಸಬೇಕು. ಆದರೆ ಬತ್ತದ ಬೆಳೆಯ ನಂತರ ಬೇರೆ ಬೆಳೆಗಳನ್ನು ಬೆಳೆದು ಬೇಕಾದಲ್ಲಿ, ಮಣ್ಣಿನ ಆರ್ದ್ರತೆಯು ಸೂಕ್ತ ಪ್ರಮಾಣದಲ್ಲಿದ್ದಾಗ, ಬೇಸಾಯದ ಕಾರ್ಯಗಳನ್ನು ಕೈಗೊಂಡು, ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿ, ಕಣಗಳ ರಚನೆಯು ಪುನಃ ನಿರ್ಮಾಣಗೊಳ್ಳುವಂತೆ ಮಾಡಿದರೆ ಮಾತ್ರ ಇತರೆ ಬೆಳೆಗಳಿಂದ ಉತ್ತಮ ಉಳುವರಿಯನ್ನು ಪಡೆಯಲು ಸಾಧ್ಯವಾಧೀತು.

ಮಣ್ಣಿನಸಚ್ಛಿದ್ರತೆ

ಮಣ್ಣಿನಲ್ಲಿರುವ ರಂಧ್ರಗಳ ಬಗ್ಗೆ ಕೆಲವು ವಿಷಯಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ:

i) ಮಣ್ಣಿನಲ್ಲಿ ಘನ ವಸ್ತುಗಳಲ್ಲದೇ ಹಲವು ರಂಧ್ರಗಳಿರುತ್ತವೆ. ಇವು ನೀರು ಮತ್ತು ಹವೆಯ ಸ್ಥಾನಗಳು.

ii) ಉತ್ತಮವಾದ ಮಣ್ಣಿನಲ್ಲಿ ಅದರ ಒಟ್ಟು ಗಾತ್ರದ ಸುಮಾರು ಅರ್ಧದಷ್ಟು ಸ್ಥಳದಲ್ಲಿ ರಂಧ್ರಗಳಿರುತ್ತವೆ.

iii) ರಂಧ್ರಗಳನ್ನು ದೊಡ್ಡ, ಮಧ್ಯಮ ಮತ್ತು ಸೂಕ್ಷ್ಮ ರಂಧ್ರಗಳೆಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ, ದೊಡ್ಡ ರಂಧ್ರಗಳಲ್ಲಿ ಗಾಳಿಯು ತುಂಬಿಕೊಂಡಿದ್ದರೆ, ಮಧ್ಯಮ ಗಾತ್ರದ ರಂಧ್ರಗಳನ್ನು ನೀರು ಮತ್ತು ಗಾಳಿ ಇವೆರಡೂ ಹಂಚಿಕೆಗೊಂಡಿರುತ್ತವೆ. ಸೂಕ್ಷ್ಮ ರಂಧ್ರಗಳಲ್ಲಿ ನೀರು ಆಶ್ರಯವನ್ನು ಪಡೆಯುತ್ತದೆ.

iv) ಮರಳು ಮಣ್ಣಿನಲ್ಲಿ, ದೊಡ್ಡ ರಂಧ್ರಗಳೇ ಅಧಿಕ ಸಂಖ್ಯೆಯಲ್ಲಿ ಇರುತ್ತವೆ. ಹೀಗಾಗಿ ಇಂತಹ ಮಣ್ಣಿನಲ್ಲಿ ಹವೆಯು ನಿರಂತರವಾಗಿ ಚಲಿಸುತ್ತದೆ. ಆದರೆ ಮಣ್ಣಿನ ಜಲಧಾರಣಾ ಸಾಮರ್ಥ್ಯವು ಕಡಮೆ.

v) ಎರೆ ಮಣ್ಣಿನಲ್ಲಿ ಸೂಕ್ಷ್ಮ ರಂಧ್ರಗಳದ್ದೇ ಪ್ರಾಬಲ್ಯ. ಈ ಮಣ್ಣುಗಳು ಜಲಧಾರಣಾ ಸಾಮರ್ಥ್ಯವು ಅಧಿಕವಾಗಿರುತ್ತದೆಯಾದರೂ ಮಣ್ಣಿನಲ್ಲಿ ಹವೆಯು ಸರಿಯಾಗಿ ಚಲಿಸದೇ ಸಸ್ಯ ಬೇರುಗಳಿಗೆ ಮತ್ತು ಸೂಕ್ಷ್ಮ ಜೀವಿಗಳಿಗೆ, ಆಮ್ಲಜನಕದ ಕೊರತೆಯಾಗುವ ಸಂಭವವಿರುತ್ತದೆ. ಮಣ್ಣಿನಲ್ಲಿರುವ ರಂಧ್ರಗಳಿಗೆ ಸಂಬಂಧಿಸಿದ ಇನ್ನೂ ಕೆಲವು ಸಂಗತಿಗಳು ಕೆಳಗಿನಂತಿವೆ.

ರಂಧ್ರಗಳಮಾಪನ

ಈ ಕೆಳಗೆ ತಿಳಿಸಿರುವಂತೆ ಎರಡು ಬಗೆಯ ಅಳತೆಗಳನ್ನು ಮಾಡಲಾಗುತ್ತದೆ:

. ಹವೆಯು ಚಲಿಸುವ ರಂಧ್ರಗಳ ಪ್ರಮಾಣ : ಸೂಕ್ಷ್ಮ ರಂಧ್ರಗಳಿಂದ ಸುತ್ತವರಿದು, ಇತರೆ ದೊಡ್ಡ ರಂಧ್ರಗಳೊಂದಿಗೆ ಸಂಪರ್ಕವನ್ನು ಹೊಂದಲಾಗದ ಕೆಲವು ದೊಡ್ಡ ರಂಧ್ರಗಳಲ್ಲಿ ಹವೆಯು ಚಲಿಸಲಾರದು. ಈ ರಂಧ್ರಗಳನ್ನು ಬಿಟ್ಟರೆ, ಉಳಿದ ಎಲ್ಲ ದೊಡ್ಡ ರಂಧ್ರಗಳಲ್ಲಿ ಮತ್ತು ಕೆಲವು ಮಧ್ಯಮಾಕಾರದಲ್ಲಿ ರಂಧ್ರಗಳಲ್ಲಿ ಹವೆಯು ಚಲಿಸುತ್ತದೆ. ಮಣ್ಣಿನಲ್ಲಿ ಹವೆಯು ಚಲಿಸಬಲ್ಲ ರಂಧ್ರದ ಪ್ರಮಾಣವೆಷ್ಟಿದೆ ಎಂಬುವುದನ್ನು ತಿಳಿಯುವುದರಿಂದ ಮಣ್ಣಿನ ನಿರ್ವಹಣೆಯಲ್ಲಿ ಇದರ ಪ್ರಯೋಜನವನ್ನು ಮಾಡಿಕೊಳ್ಳಬಹುದು. ಮೇಲೆ ಸೂಚಿಸಿದ ರಂಧ್ರದಪ್ರಮಾಣವನ್ನು ಕಂಡುಕೊಳ್ಳಲು ಈ ಮುಂದೆ ತಿಳಿಸಿದ ವಿಧಾನವನ್ನು ಅನುಸರಿಸಬಹುದು; ಧಾತುವಿನಿಂದ ಮಾಡಿದ ವಿಶಿಷ್ಟ ರೀತಿಯ ಪಾತ್ರೆಯಲ್ಲಿ, ನಿರ್ಧಿಷ್ಟ ಪ್ರಮಾಣದ ಮಣ್ಣನ್ನು ತುಂಬಬೇಕು. ಎಲ್ಲ ರಂಧ್ರಗಳೂ ನೀರಿನಿಂದ ಪೂರ್ತಿಯಾಗಿ ತುಂಬುವಷ್ಟೇ ನೀರನ್ನು ಹೀರಿಕೊಂಡ ಮಣ್ಣಿನ ಮೇಲೆ ಬೀಳುವಂತ ಮಾಡಿ ಹೊರ ಬರುವ ನೀರನ್ನು ಸಂಗ್ರಹಿಸಿ ಅಳೆಯಬೇಕು. ಈ ನೀರು ಪ್ರತಿನಿಧಿಸುವಷ್ಟು ಪ್ರದೇಶದಲ್ಲಿ, ಹವೆಯು ಚಲಿಸುವ ರಂಧ್ರಗಳಿವೆ ಎಂದು ತಿಳಿಯಬಹುದು.

ಮೇಲೆ ವರ್ಣಿಸಿದ ವಿಧಾನದಲ್ಲಿ ಕೆಲವು ನ್ಯೂನತೆಗಳಿವೆ. ನೀರನ್ನು ಹೀರಿಕೊಂಡ ಮಣ್ಣಿನ ಮೇಲೆ ಹೇರುವ ಒತ್ತಡವು ಎಷ್ಟಿರಬೇಕೆಂಬುವುದರ ಬಗ್ಗೆ ಒಂದು ನಿಶ್ಚಿತ ಆಧಾರವಿಲ್ಲ. ಅಲ್ಲದೇ, ಇತರೆ ದೊಡ್ಡ ರಂಧ್ರಗಳೊಂದಿಗೆ ಸಂಪರ್ಕವನ್ನು ಹೊಂದದೇ ಇರುವ ಕೆಲವು ದೊಡ್ಡ ರಂಧ್ರಗಳಲ್ಲಿ ಇದ್ದ ನೀರೂ ಈ ಪದ್ಧತಿಯಿಂದ ಹೊರ ಬರುತ್ತದೆ. ಹೀಗಾಗುವುದರಿಂದ, ಹವೆಯು ಚಲಿಸುವ ರಂಧ್ರದ ಅಳತೆಯು ವಾಸ್ತವಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದ ಅಂದಾಜನ್ನು ಮಾಡಿದಂತಾಗುತ್ತದೆ. ಈ ನ್ಯೂನತೆಗಳಿದ್ದರೂ, ಲಭ್ಯವಿರುವ ಪದ್ಧತಿಗಳಲ್ಲಿ ಇದೇ ಉತ್ತಮವೆನ್ನಬಹುದು.

) ಒಟ್ಟು ರಂಧ್ರಗಳ ಪ್ರಮಾಣ : ಮಣ್ಣಿನ ಒಟ್ಟು ರಂಧ್ರಗಳ ಪ್ರಮಾಣವನ್ನು ತಿಳಿಯಬೇಕಾದರೆ ಮಣ್ಣಿನ ಕಣಗಳ ಸಾಂಧ್ರತೆ ಮತ್ತು ಮಣ್ಣಿನ ಗಾತ್ರದ ಸಾಂಧ್ರತೆಗಳನ್ನು ಕಂಡುಹಿಡಿಯಬೇಕು.

i) ಮಣ್ಣಿನ ಕಣಗಳ ಸಾಂದ್ರತೆ : ಒಂದು ನಿರ್ಧಿಷ್ಟ ಗಾತ್ರದ (ಉದಾಹರಣೆಗೆ ಒಂದು ಘನ ಸೆಂ.ಮೀ) ಮಣ್ಣಿನಲ್ಲಿ ಇರುವ ಕಣಗಳ ತೂಕಕ್ಕೆ (ಉದಾಹರಣೆಗೆ ಗ್ರಾಂಗಳಲ್ಲಿ) ಕಣಗಳ ಸಾಂದ್ರತೆ ಎನ್ನುತ್ತಾರೆ. ಇದರಲ್ಲಿ ಕೇವಲ ಮಣ್ಣಿನ ಕಣಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಣಗಳ ಮಧ್ಯದಲ್ಲಿರುವ ರಂಧ್ರಗಳ ಗಾತ್ರವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಕಣಗಳ ಸಾಂಧ್ರತೆಯನ್ನು ಕಂಡುಹಿಡಿಯಲು ‘ಪಿಕ್ನೋಮೀಟರ್’ ಎಂಬ ಗಾಜಿನ ಸೀಸೆಯನ್ನು ಬಳಸಬೇಕು. ಮೊದಲು ಆ ಸೀಸೆಗೆ ಪೂರ್ತಿಯಾಗಿ ನೀರು ತುಂಬಿ ತೂಕ ಮಾಡಬೇಕು. ಅನಂತರ ನಿರ್ಧಿಷ್ಟ ತೂಕದ ಮಣ್ಣನ್ನು ಸೀಸೆಯಲ್ಲಿ ಹಾಕಿ ಉಳಿದ ಸ್ಥಳವನ್ನು ನೀರಿನಿಂದ ತುಂಬಿ ತೂಕ ಮಾಡಬೇಕು. ಈ ರೀತಿಯಿಂದ ದೊರೆಯುವ ವಿವರಗಳಿಂದ, ಕಣಗಳ ಸಾಂದ್ರತೆಯನ್ನು ಕೆಳಗಿನಂತೆ ಕಂಡುಹಿಡಿಯಬೇಕು:

ಕಣಗಳ ಸಾಂಧ್ರತೆ (ಪ್ರತಿ ಘನ = ಸೆಂ.ಮೀ. ಗೆ ಗ್ರಾಂಗಳಲ್ಲಿ)

ಒಣ ಮಣ್ಣಿನ ತೂಕ (ಗ್ರಾಂಗಳಲ್ಲಿ)

ಸೀಸೆಯಿಂದ ಹೊರ ಚೆಲ್ಲಿದ ನೀರಿನ ಘನ ಮಾನ (ಘನ ಸೆಂ.ಮೀ.ಗಳಲ್ಲಿ)

ಸೂಚನೆ : ಒಂದು ಗ್ರಾಂ ನೀರು = ಒಂದು ಘನ ಸೆಂ.ಮೀ. ನೀರು.

ಸಾಮಾನ್ಯವಾಗಿ ಕಂಡುಬರುವ, ಖನಿಜದ ಪ್ರಾಬಲ್ಯವಿರುವ ಮಣ್ಣಿನ ಕಣಗಳ ಸಾಂದ್ರತೆಯು, ಪ್ರತಿ ಸೆಂ.ಮೀ.ಗೆ ೨ ರಿಂದ ೨.೭ ಗ್ರಾಂ ನಷ್ಟಿರುತ್ತದೆ. ಮಣ್ಣಿನಲ್ಲಿರುವ ಬೆಣಚು, ಫೆಲ್ಸ ಫಾರ್, ಸಿಲಿಕೇಟ್, ಮುಂತಾದ ಖನಿಜಗಳಿಂದ ನಿರ್ಮಾಣಗೊಂಡ ಕಣಗಳ ಸಾಂದ್ರತೆಯು ಈ ಮಿತಿಯಲ್ಲಿಯೇ ಇರುವುದರಿಂದ , ಇಂತಹ ಕಣಗಳಿಂದ ನಿರ್ಮಾಣಗೊಂಡ ಮಣ್ಣಿನ ಕಣಗಳ ಸಾಂದ್ರತೆಯೂ ಇದೇ ಮಿತಿಯಲ್ಲಿರುತ್ತದೆ. ಮಣ್ಣಿನ ಕಣಗಳ ಸಾಂಧ್ರತೆಯನ್ನು ೨.೬ ಮತ್ತು ೨.೭ ಇವುಗಳ ಸರಾಸರಿ ಅಂಕಿಯಾದ ೨.೬೫ ಎಂದು ಪರಿಗಣಿಸುವುದು ವಾಡಿಕೆ.

ii) ಮಣ್ಣಿನ ಗಾತ್ರದ ಸಾಂಧ್ರತೆ (ಬಲ್ಕ್ ಡೆನ್ಸಿಟಿ) : ಮಣ್ಣಿನ ನಿರ್ಧಿಷ್ಟ ಗಾತ್ರದ (ಸಾಮಾನ್ಯವಾಗಿ ೧ ಘನ ಸೆಂ.ಮೀ. ) ಒಣ ಮಣ್ಣಿನ ತೂಕಕ್ಕೆ (ಸಾಮಾನ್ಯವಾಗಿ ಗ್ರಾಂಗಳಲ್ಲಿ) ಮಣ್ಣಿನ ಗಾತ್ರ ಸಾಂಧ್ರತೆ ಎಂದು ಹೆಸರು. ಇದರಲ್ಲಿ ಮಣ್ಣಿನ ಕಣಗಳಿರುವ ಗಾತ್ರದ ಜೊತೆಗೆ, ಅವುಗಳ ಮಧ್ಯದಲ್ಲಿರುವ ರಂಧ್ರಗಳ ಗಾತ್ರವು ಸೇರಿರುತ್ತದೆ. ಆದ್ದರಿಂದಲೇ, ಮಣ್ಣಿನ ಗಾತ್ರದ ಸಾಂಧ್ರತೆ, ಕಣಗಳ ಗಾತ್ರಕ್ಕಿಂತ ಕಡಮೆ. ಯಾವ ಸಂದರ್ಭದಲ್ಲಿಯೂ ಇದು ಕಣಗಳ ಸಾಂಧ್ರತೆಯನ್ನು ಮೀರಲಾರದು. ಗಾತ್ರ ಸಾಂಧ್ರತೆಯನ್ನು ಕೆಳಗಿನ ಸೂತ್ರದಿಂದ ಕಂಡುಕೊಳ್ಳಬಹುದು.

ಮಣ್ಣಿನ ಗಾತ್ರ ಸಾಂಧ್ರತೆ (ಪ್ರತಿ= ಘನ ಸೆಂ.ಮೀ.ಗೆ ಗ್ರಾಂಗಳು)

ಒಣ ಮಣ್ಣಿನ ತೂಕ (ಗ್ರಾಂಗಳಲ್ಲಿ)

ರಂಧ್ರಗಳ ಗಾತ್ರವೂ ಸೇರಿದಂತೆ ಮಣ್ಣಿನ ಗಾತ್ರ (ಘನ ಸೆಂ.ಮೀ.ಗಳಲ್ಲಿ)ಮಣ್ಣಿನ ಗಾತ್ರದ ಸಾಂದ್ರತೆಯ ಬಗ್ಗೆ ಕೆಳಗಿನ ಸಂಗತಿಗಳನ್ನು ತಿಳಿದಿರಬೇಕು.

i) ಮರಳು ಮಣ್ಣಿನಲ್ಲಿರುವ ಒಟ್ಟು ರಂಧ್ರಗಳ ಪ್ರಮಾಣವು ಕಡಮೆ. ಇಂತಹ ಮಣ್ಣಿನ ಗಾತ್ರದ ಸಾಂದ್ರತೆಯು, ಪ್ರತಿ ಘನ ಸೆಂ.ಮೀ. ೧.೨ ರಿಂದ ೧.೬ ಗ್ರಾಂ ಗಳಷ್ಟಿರುತ್ತದೆ.

ii) ಜೇಡಿ ಮಣ್ಣಿನಲ್ಲಿರುವ ಒಟ್ಟು ರಂಧ್ರಗಳ ಪ್ರಮಾಣವು ಅಧಿಕ. ಆದ್ದರಿಂದ ಇಂಥ ಮಣ್ಣಿನ ಗಾತ್ರದ ಸಾಂಧ್ರತೆಯು ಪ್ರತಿ ಘನ ಸೆಂ.ಮೀ.ಗೆ ೧ ರಿಂದ ೧.೩ ಗ್ರಾಂ ಇರುವುದು ಸಾಮಾನ್ಯ.

iii) ಯಾವುದೇ ಕಾರಣದಿಂದ ಮಣ್ಣು ಗಟ್ಟಿಯಾದರೆ ಗಾತ್ರದ ಸಾಂದ್ರತೆಯು ಅಧಿಕಗೊಳ್ಳುತ್ತದೆ.

iv) ಮಣ್ಣಿನಲ್ಲಿರುವ ಸಾವಯವ ಪದಾರ್ಥವು ನಷ್ಟಗೊಂಡರೆ,ಮಣ್ಣಿನ ಗಾತ್ರದ ಸಾಂದ್ರತೆಯು ಹೆಚ್ಚಾಗುತ್ತದೆ.

ಕೆಳಗೆ ತಿಳಿಯಪಡಿಸಿರುವ ಪದಾರ್ಥವು ಸಹಾಯದಿಂದ, ಮಣ್ಣಿನಲ್ಲಿರುವ ಒಟ್ಟು ರಂಧ್ರ ಪ್ರದೇಶದ ಶೇಕಡಾ ಪ್ರಮಾಣವನ್ನು ಕಂಡು ಹಿಡಿಯಬಹುಯದು.

ಸೂಚನೆ : ಗಾತ್ರದ ಸಾಂದ್ರತೆ ಮತ್ತು ಕಣಗಳ ಸಾಂಧ್ರತೆ ಇವು. ಪ್ರತಿ ಘನ ಸೆಂ.ಮೀ.ಗೆ ಗ್ರಾಂಗಳಲ್ಲಿವೆ.

ಉದಾಹರಣೆಗೆ : ಒಂದು ಮಣ್ಣಿನ ಗಾತ್ರದ ಸಾಂದ್ರತೆಯು ಪ್ರತಿ ಘನ ಸೆಂ.ಮೀ.ಗೆ ೧.೩ ಗ್ರಾಂ ಮತ್ತು ಅದರ ಕಣಗಳ ಸಾಂಧ್ರತೆಯು ಪ್ರತಿ ಘನ ಸೆಂ.ಮೀ.ಗೆ ೨.೬೫ ಗ್ರಾಂ ಇದ್ದರೆ, ಆ ಮಣ್ಣಿನಲ್ಲಿರುವ ಒಟ್ಟು ರಂಧ್ರ ಪ್ರದೇಶವನ್ನು (ಶೇಕಡಾವಾರು ) ಕೆಳಗಿನಂತೆ ಕಂಡುಹಿಡಿಯಬಹುದು.

ಶೇಕಡಾವಾರು ಮಣ್ಣಿನಲ್ಲಿರುವ ಒಟ್ಟು ರಂಧ್ರ ಪ್ರದೇಶ = {೧-೧.೩/೨.೬೫} x ೧೦೦ = ೫೦.೯

ವಿವಿಧವರ್ಗಗಳಮಣ್ಣಿನಲ್ಲಿರುವರಂಧ್ರಪ್ರದೇಶ

ವಿವಿಧ ವರ್ಗಗಳ ಮಣ್ಣುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗಾತ್ರದ ಸಾಂಧ್ರತೆ ಮತ್ತು ಒಟ್ಟು ರಂಧ್ರ ಪ್ರದೇಶಗಳ ವಿವರವನ್ನು ಕೋಷ್ಟಕ ೧೪ರಲ್ಲಿ ಕೊಡಲಾಗಿದೆ.

ಕೋಷ್ಟಕ ೧೪ : ಮಣ್ಣಿನ ವಿವಿಧ ವರ್ಗಗಳ ಗಾತ್ರ ಸಾಂಧ್ರತೆ ಮತ್ತು ಒಟ್ಟು ರಂದ್ರ ಪ್ರದೇಶ

ಅ. ಸಂ.

ಮಣ್ಣಿನ ವಿವಿಧ ಪ್ರಕಾರಗಳು

ಗಾತ್ರದ ಸಾಂದ್ರತೆ ಪ್ರತಿ ಘನ ಸೆಂಮೀ.ಗೆ ಗ್ರಾಂಗಳಲ್ಲಿ

ಶೇಕಡಾವಾರು ರಂದ್ರದ ಒಟ್ಟು ಪ್ರದೇಶ

೧. ಮರಳು

೧.೬

೪೦

೨. ಮರಳುಗೋಡು

೧.೫

೪೩

೩. ಗೋಡು

೧.೪

೪೭

೪. ರೇವೆ ಗೋಡು

೧.೩

೫೧

೫. ಎರೆ ಗೋಡು

೧.೨

೫೫

೬. ಎರೆ

೧.೧

೫೮

ಸೂಚನೆ : ಕಣಗಳ ಸಾಂಧ್ರತೆಯನ್ನು ೨.೬೫ (ಪ್ರತಿ ಘನ ಸೆಂ.ಮೀ.ಗೆ ಗ್ರಾಂ. ಗಳಲ್ಲಿ) ಎಂದು ಪರಿಗಣಿಸಿ ಶೇಕಡಾವಾರು ರಂಧ್ರದ ಒಟ್ಟು ಪ್ರದೇಶದ ಲೆಕ್ಕ ಮಾಡಿದೆ.

ಕೋಷ್ಟಕ ೧೪ ರಿಂದ ಕೆಳಗಿನ ಸಂಗತಿಗಳು ಸ್ಪಷ್ಟವಾಗುತ್ತವೆ :

  • ಮಣ್ಣಿನಲ್ಲಿರುವ ಕಣಗಳು ಸಣ್ಣವಾಗುತ್ತ ಹೋದಂತೆ, ಗಾತ್ರದ ಸಾಂಧ್ರತೆಯು ಕಡಮೆಯಾಗುತ್ತಾ ಸಾಗುತ್ತದೆ. ಮರಳು ಮಣ್ಣಿನಲ್ಲಿ ಗಾತ್ರದ ಸಾಂಧ್ರತೆಯು ೧.೬ ಇದ್ದರೆ ಎರೆ ಮಣ್ಣಿನಲ್ಲಿ ಅದು ೧.೧ ರಷ್ಟಿದೆ.
  • ಗಾತ್ರದ ಸಾಂದ್ರತೆಯು ಕಡಮೆಯಾದಂತೆ ಶೇಕಡಾವಾರು ರಂಧ್ರದ ಪ್ರದೇಶವು ಅಧಿಕಗೊಳ್ಳುತ್ತದೆ. ಕೋಷ್ಟಕ ೧೪ರಲ್ಲಿ ತೋರಿಸಿದಂತೆ ಮರಳಿನಲ್ಲಿ ರಂಧ್ರಪ್ರದೇಶವು ಶೇಕಡಾ ೪೦ ರಷ್ಟಿದೆ. ಆದರೆ ಎರೆ ಮಣ್ಣಿನಲ್ಲಿ ಅದು ಶೇಕಡಾ ೫೮ ರಷ್ಟಿದೆ.

ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. ಉರುಟು ಕಣಗಳಿರುವ ಮಣ್ಣಿನಲ್ಲಿ ಜಿನುಗು ಕಣಗಳಿರುವ ಮಣ್ಣಿಗಿಂತ ಒಟ್ಟು ರಂಧ್ರ ಪ್ರದೇಶವು ಕಡಮೆ ಇದ್ದರೂ ದೊಡ್ಡ ರಂಧ್ರಗಳ ಪ್ರಮಾಣವು ಅಧಿಕವಾಗಿರುತ್ತದೆ. ಆದ್ದರಿಂದ ಮರಳು ಮಣ್ಣಿನಲ್ಲಿ ಹವೆ ಮತ್ತು ನೀರು ಇವು ನಿರಾತಂಕವಾಗಿ ಚಲಿಸುತ್ತಿರುತ್ತವೆ.

ಗಾತ್ರದಸಾಂದ್ರತೆಯಿಂದಭೂಕ್ಷೇತ್ರದಮಣ್ಣಿನತೂಕದಲೆಕ್ಕ

ಮಣ್ಣಿನ ನಿರ್ಧಿಷ್ಟ ಗಾತ್ರದ ತೂಕವನ್ನು, ಗಾತ್ರದ ಸಾಂಧ್ರತೆಯ ಸಹಾಯದಿಂದ ಅಂದಾಜು ಮಾಡಬಹುದು. ಒಂದು ಹೆಕ್ಟೇರು ಭೂ ಪ್ರದೇಶದ ಮೇಲ್ಮಣ್ಣಿನ (೧೬.ಸೆಂ.ಮೀ. ಆಳ) ಗಾತ್ರದ ಸಾಂಧದ್ರತೆಯು ಪ್ರತಿ ಘನ ಸೆಂ.ಮೀ.ಗೆ ೧.೩ ಗ್ರಾಂ ಇದ್ದರೆ, ಮೇಲ್ಮಣ್ಣಿನ ಒಟ್ಟು ತೂಕವನ್ನು ಕೆಳಗಿನಂತೆ ಅಂದಾಜು ಮಾಡಬಹುದು:

ಒಂದು ಘನ ಸೆಂ.ಮೀ. ನ ತೂಕವು ೧.೩ ಗ್ರಾಂ ಇದೆ (ಕೊಟ್ಟಿದೆ)

ಇದನ್ನು ಪರಿವರ್ತಿಸಿ ಘ.ಮೀ. ಮತ್ತು ಕಿಲೋ ಗ್ರಾಂಗಳಲ್ಲಿ ವ್ಯಕ್ತಪಡಿಸಿದರೆ – ೧ 

ಸಾಮಾನ್ಯವಾಗಿ ಒಂದು ಹೆಕ್ಟೇರ ಮೇಲ್ಮಣ್ಣಿನ ತೂಕವನ್ನು ೨ ದಶಲಕ್ಷ ಕಿ.ಗ್ರಾಂ ಎಂದು ಪರಿಗಣಿಸಲಾಗುತ್ತದೆ.

ಮಣ್ಣಿನಲ್ಲಿರುವ ಪೋಷಕಗಳ ಪ್ರಮಾಣವನ್ನು ಒಂದು ಲಕ್ಷ ಭಾಗ ಮಣ್ಣಿನಲ್ಲಿ ಇಂತಿಷ್ಟು ಭಾಗ ಪೋಷಕವಿದೆ (PPM) ಎಂದು ಹೇಳುವ ರೂಢಿಯಿದೆ. ಇದನ್ನು ಪ್ರತಿ ಹೆಕ್ಟರಿಗೆ ಇಂತಿಷ್ಟು ಕಿ.ಗ್ರಾಂ ಪೋಷಕವಿದೆ ಎಂದು ವ್ಯಕ್ತಪಡಿಸುವುದು ಅತಿ ಸುಲಭ. ಉದಾಹರಣೆಗೆ, ರಂಜಕದ ಪ್ರಮಾಣವು ಮಣ್ಣಿನಲ್ಲಿ ೧೦ ಪಿ.ಪಿ.ಎಂ. (ಅಂದರೆ ಪ್ರತಿ ೧೦ ಲಕ್ಷ ಭಾಗ ಮಣ್ಣಿನಲ್ಲಿ ೧೦ ಭಾಗ ರಂಜಕವಿದೆ ಎಂದು ಅರ್ಥ) ಇದೆ ಅಂದರೆ, ಒಂದು ಹೆಕ್ಟೇರ್ ಮೇಲ್ಮಣ್ಣಿನಲ್ಲಿ (ಅಂದರೆ ೨೦ ಲಕ್ಷ ಕಿ.ಗ್ರಾಂ ಮಣ್ಣಿನಲ್ಲಿ) 10×2=20 ಕಿ.ಗ್ರಾಂ ರಂಜಕವಿದೆ ಎಂದಂತಾಯಿತು.

ಆರ್ದ್ರತೆಗನುಗುಣವಾಗಿಕಣಗಳನ್ನುವಿಭಿನ್ನಆಕಾರವನ್ನಾಗಿಸುವಮಣ್ಣಿನಸಾಮರ್ಥ್ಯ

ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣಕ್ಕನುಗುಣವಾಗಿ, ಮಣ್ಣಿನ ಮೇಲೆ ಬೀಳುವ ಒತ್ತಡದ ಪರಿಣಾಮಗಳು ವಿಭಿನ್ನವಾಗಿರುತ್ತವೆ. ಈ ಗುಣಧರ್ಮವನ್ನು ಮಣ್ಣು ಪೂರ್ತಿಯಾಗಿ ಒಣಗಿದಾಗ, ಮಣ್ಣಿನಲ್ಲಿ ಸೂಕ್ತ ಪ್ರಮಾಣದ ಅರ್ದ್ರತೆ ಇದ್ದಾಗ ಮತ್ತು ಮಣ್ಣು ಅತಿ ಹಸಿ ಇರುವಾಗ ವರ್ಣಿಸುವ ಪದ್ಧತಿಯು ರೂಢಿಯಲ್ಲಿದೆ. ಈ ರೀತಿಯ ವರ್ಣನೆಗೆ ಬಳಸುವ ಪದಗಳು ಗುಣಾತ್ಮಕವಾಗಿವೆ.

ಮಣ್ಣನ್ನುವರ್ಣಿಸಲುಬಳಸುವಪದಗಳು

ಮಣ್ಣಿನಲ್ಲಿ ವಿವಿಧ ಪ್ರಮಾಣದ ಆರ್ದ್ರತೆ ಇರುವಾಗ ವರ್ಣಿಸಲು ಬಳಸುವ ಪದಗಳು ಕೆಳಗಿನಂತಿವೆ.

ಅ.ಸಂ.

ಮಣ್ಣಿನ ಆರ್ದ್ರತೆ

ರೂಢಿಯಲ್ಲಿರುವ ಪದಗಳು

೧. ಮಣ್ಣು ಪೂರ್ತಿ ಒಣಗಿದಾಗ ಸಡಿಲ, ಮೃದು, ಅತಿ ಕಡಮೆ ಬಿರುಸು ಅತಿ ಬಿರುಸು, ಅತ್ಯಧಿಕ ಬಿರುಸು
೨. ಮಣ್ಣಿನಲ್ಲಿ ಸೂಕ್ತ ಪ್ರಮಾಣದಲ್ಲಿ ಅರ್ಧ್ರತೆ ಇದ್ದಾಗ ಸಡಿಲ, ಸುಲಭವಾಗಿ ಪುಡಿಯಾಗುವ , ಅತಿ ದೃಢ ಅತ್ಯಧಿಕ ದೃಢ.
೩. ಮಣ್ಣು ಅತಿ ಹಸಿ ಇದ್ದಾಗ
ಅ. ಅಂಟಿಕೊಳ್ಳುವ ಗುಣ ಅಂಟದಿರುವ, ಸ್ವಲ್ಪ ಅಂಟುವ ಮತ್ತು ಅತಿಯಾಗಿ ಅಂಟುವ,
ಆ. ಮುದ್ದೆಯಾಗುವ ಗುಣ ಮುದ್ದೆಯಾಗದ ಸ್ವಲ್ಪ ಮುದ್ದೆಯಾಗುವ ಮುದ್ದೆಯಾಗುವ, ಮತ್ತು ಅತ್ಯಧಿಕ ಮುದ್ದೆಯಾಗುವ

 ಮಣ್ಣಿನಸ್ವಭಾವಗಳುವ್ಯಕ್ತವಾಗುವಸಂದರ್ಭಗಳಕೆಲವುಉದಾಹರಣೆಗಳು

 

ವಿಭಿನ್ನ ಪ್ರಮಾಣದಲ್ಲಿ ಆರ್ದ್ರತೆ ಇರುವಾಗ ಒತ್ತಡದಿಂದ ಮಣ್ಣಿನಲ್ಲಾಗುವ ಬದಲಾವಣೆಗಳ ಕೆಲವು ಉದಾಹರಣೆಗಳು ಕೆಳಗಿನಂತಿವೆ.

i) ಮಣ್ಣು ಒಣಗಿದಾಗ : ಮರಳು ಮಣ್ಣು ಒಣಗಿದಾಗ ಸಡಿಲವಾಗಿರುತ್ತದೆ. ಮಣ್ಣಿನಲ್ಲಿ ಎರೆ ಕಣಗಳು, ಅಧಿಕಗೊಂಡಂತೆ ಮಣ್ಣು ಬಿರುಸಾಗುತ್ತದೆ. ಎರೆಯಿರುವ ಮಣ್ಣು ಪೂರ್ಣ ಒಣಗಿದಾಗ, ಬೇಸಾಯದ ಉಪಕರಣಗಳನ್ನು ಉಪಯೋಗಿಸಿದರೆ ಬಿರುಸಾದ ಹೆಂಟೆಗಳು ಮೇಲೇಳುತ್ತವೆ. ಇವುಗಳನ್ನು ಒಡೆದು ಪುಡಿ ಮಾಡುವುದು ಕಷ್ಟ. ಇಂಥ ಮಣ್ಣುಗಳಲ್ಲಿ ಸಾಕಷ್ಟ ಪ್ರಮಾಣದಲ್ಲಿ ಸಾವಯವ ಪದಾರ್ಥವಿದ್ದರೆ ಮಣ್ಣು ಅಷ್ಟು ಬಿರುಸಾಗುವುದಿಲ್ಲ.

ii) ಸೂಕ್ತ ಪ್ರಮಾಣದಲ್ಲಿ ಆರ್ದ್ರತೆಯಿರುವಾಗ : ಸೂಕ್ತ ಪ್ರಮಾಣದಲ್ಲಿ ಆರ್ಧ್ರತೆ ಇರುವ ಮಣ್ಣನ್ನು ಕೈಯಲ್ಲಿ ತೆಗೆದುಕೊಂಡು ಒತ್ತಿದ್ದರೆ ಉಂಡೆಯಂತಾಗುತ್ತದೆ. ಈ ಉಂಡೆಯನ್ನು ನಿಧಾನವಾಗಿ ಒತ್ತಿದರೆ ಮಣ್ಣಿನ ಕಣಗಳು ಸಣ್ಣ ಸಣ್ಣ ಗುಂಪುಗಳಾಗಿ ಉದುರುತ್ತವೆ. ಚದುರಿದ ಈ ಗುಂಪುಗಳನ್ನು, ಒಂದೆಡೆ ತಂದು ಒತ್ತಿದರೆ, ಪುನಃ ಅವು ಸೇರುತ್ತವೆ. ಗೋಡು ಮಣ್ಣಿನಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ. ಮರಳು ಮಣ್ಣಿನಲ್ಲಿ ಅಷ್ಟಾಗಿ ಗೋಚರಿಸುವುದಿಲ್ಲ. ಸಾವಯವ ಪದಾರ್ಥವು ಕಡಮೆ ಇರುವ ಎರೆ ಮಣ್ಣನ್ನು ಈ ರೀತಿ ಒತ್ತಿದರೆ ಮಣ್ಣು ಗಟ್ಟಿಯಾಗುತ್ತದೆ. ಕಣಗಳ ಗುಂಪನ್ನು ಬೇರ್ಪಡಿಸಲು ಹೆಚ್ಚು ಒತ್ತಡವನ್ನು ಬಳಸಬೇಕಾಗುತ್ತದೆ.

iii) ಮಣ್ಣು ಅತಿ ಹಸಿ ಇದ್ದಾಗ : ಮಣ್ಣಿನಲ್ಲಿರುವ ಎಲ್ಲ ರಂಧ್ರಗಳು ನೀರಿನಿಂದ ತುಂಬಿರುವಾಗ, ಮಣ್ಣಿನ ಅಂಟುವ ಮತ್ತು ಮುದ್ದೆಯಾಗುವ ಗುಣಗಳು ವಿಭಿನ್ನ ಪ್ರಮಾಣದಲ್ಲಿ ವ್ಯಕ್ತವಾಗುತ್ತವೆ. ಮರಳು ಮಣ್ಣನ್ನು ಮುಟ್ಟಿದರೆ ಅದು ಕೈಗೆ ಅಂಟಿಕೊಳ್ಳುವುದಿಲ್ಲ. ಆದರೆ ಎರೆಯ ಪ್ರಮಾಣವು ಅಧಿಕಗೊಂಡಂತೆ, ಮಣ್ಣು ಕೈಗಳಿಗೆ, ಬೇಸಾಯದ ಉಪಕರಣಗಳಿಗೆ, ಮಾನವನ ಮತ್ತು ಜಾನುವಾರುಗಳ ಕಾಲುಗಳಿಗೆ ಹೆಚ್ಚು ಹೆಚ್ಚಾಗಿ ಅಂಟಿಕೊಳ್ಳುತ್ತದೆ.

ಒತ್ತಡಕ್ಕೊಳಗಾದ ಮರಳು ಮಣ್ಣು ಮುದ್ದೆಯಾಗುವುದಿಲ್ಲ. ಆದರೆ, ಎರೆ ಕಣಗಳು ಅಧಿಕಗೊಂಡವೆಂದರೆ, ಒತ್ತಡಕ್ಕೆ ಸಿಕ್ಕಿ ಮಣ್ಣು ಮುದ್ದೆಯಾಗುತ್ತದೆ. ಕೆಲವು ಮಣ್ಣುಗಳು ಒತ್ತಡದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಮುದ್ದೆಯಾಗುತ್ತವೆ. ಮಳೆ ನಿಂತ ನಂತರವೂ ಹಲವು ದಿನಗಳವರೆಗೆ ಇಂತಹ ಮಣ್ಣುಗಳಲ್ಲಿ ಯಾವುದೇ ಬೇಸಾಯ ಕಾರ್ಯವನ್ನು ಕೈಗೊಳ್ಳಲಾಗುವುದಿಲ್ಲ.

ಮಣ್ಣಿನಉಷ್ಣತಾಮಾನ

ಮಣ್ಣಿನಲ್ಲಿ ನಡೆಯುವ ಹಲವು ಕ್ರಿಯೆಗಳ ಮೇಲೆ ಮತ್ತು ಮಣ್ಣಿನಲ್ಲಿ ಬೆಳೆಯುವ ಸಸ್ಯಗಳ ಬೆಳವಣಿಗೆಯ ಮೇಲೆ, ಉಷ್ಣತೆಯು ಗಣನೀಯ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಆದ್ದರಿಂದ ಮಣ್ಣಿನ ಈ ಗುಣಧರ್ಮದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಬೇಕಾದುದು ಅವಶ್ಯಕ. ಮಣ್ಣಿನ ಉಷ್ಣತೆಯು ಬಗ್ಗೆ ಪ್ರಮುಖ ಸಂಗತಿಗಳು ಕೆಳಗಿನಂತಿವೆ :

ಮಣ್ಣಿನಉಷ್ಣತಾಮಾನದಮೂಲ

ಮಣ್ಣಿನ ಉಷ್ಣತಾಮಾನಕ್ಕೆ, ಸೂರ್ಯ ರಶ್ಮಿಗಳೇ ಪ್ರಧಾನ ಮೂಲವೆನ್ನಬಹುದು. ಆದರೆ, ಈ ರಶ್ಮಿಗಳಿಂದ ಬರುವ ಸಂಪೂರ್ಣ ಶಕ್ತಿಯು ಮಣ್ಣನ್ನು ಮುಟ್ಟುವುದಿಲ್ಲ. ಮೋಡಗಳು ಮತ್ತು ಗಾಳಿಯಲ್ಲಿ ತೇಲುತ್ತಿರುವ ಧೂಳಿನ ಕಣಗಳು ಸೂರ್ಯನ ಕಿರಣಗಳನ್ನು ಛೇದಿಸಿ ಸ್ವಲ್ಪ ಭಾಗವನ್ನು ಹಿಡಿದಿಟ್ಟುಕೊಂಡು ಮತ್ತು ಸ್ವಲ್ಪ ಭಾಗವನ್ನು ಸುತ್ತಲಿನ ಪ್ರದೇಶದಲ್ಲಿ ಚದುರಿಸಿ ಇನ್ನೂ ಸ್ವಲ್ಪ ಭಾಗವನ್ನು ಪ್ರತಿಫಲಿಸುತ್ತವೆ. ಹೀಗಾಗಿ, ಒಟ್ಟು ಸೌರಶಕ್ತಿಯ ಸುಮಾರು ಅರ್ಧದಷ್ಟು ಮಾತ್ರ ಭೂಮಿಯನ್ನು ತಲುಪುತ್ತದೆನ್ನಬಹುದು.

ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಭೂಮಿಯನ್ನು ತಲುಪಿದ ಎಲ್ಲ ಸೌರ ಶಕ್ತಿಯು ಮಣ್ಣಿನ ಉಷ್ಣತಾಮಾನವನ್ನು, ಬದಲಿಸುವಲ್ಲಿ ಬಳಕೆಯಾಗುವುದಿಲ್ಲ , ಸೌರಶಕ್ತಿಯು ಬಹುಪಾಲು ಮಣ್ಣಿನಲ್ಲಿರುವ ನೀರನ್ನು ಆವಿಯ ರೂಪಕ್ಕೆ ಪರಿವರ್ತನೆ ಗೊಳಿಸಲು ಮತ್ತು ಸಸ್ಯದ ಎಲೆ ಮತ್ತು ಕಾಂಡಗಳ ಮೂಲಕ ಭಾಸಷ್ಟದ ರೂಪದಲ್ಲಿ ನೀರು ಹೊರ ಬರಲು ವ್ಯಯವಾಗುತ್ತದೆ. ಹೀಗಾಗಿ ಶೇಕಡಾ ಸುಮಾರು ೧೦ರಷ್ಟು ಮಾತ್ರ, ಮಣ್ಣಿನ ಉಷ್ಣತಾಮಾನವನ್ನು ಹೆಚ್ಚಿಸಲು ಉಪಯೋಗವಾಗುತ್ತದೆ. ಆದಾಗ್ಯೂ ಇಷ್ಟು ಕಡಮೆ ಶಕ್ತಿಯಿಂದ ಆಗುವ ಪರಿಣಾಮವು ಬಹು ಮಹತ್ವವಾದುದೆಂಬುವುದನ್ನು ನೆನಪಿಡಬೇಕು.

ಮಣ್ಣಿನಉಷ್ಣತೆಯನ್ನುಹೆಚ್ಚಿಸುವಕಾರ್ಯದಮೇಲೆಪ್ರಭಾವಬೀರುವಸಂಗತಿಗಳು

ಮಣ್ಣಿನ ಉಷ್ಣತಾಮಾನವನ್ನು ಬದಲಿಸುವಲ್ಲಿ ಹಲವು ಸಂಗತಿಗಳು ಪ್ರಭಾವವನ್ನು ಬೀರುತ್ತವೆ. ಪ್ರಮುಖವಾದವುಗಳೆಂದರೆ:

i) ಸೂರ್ಯನ ಕಿರಣಗಳು ಭೂಮಿಯನ್ನು ಮುಟ್ಟುವ ಕೋನ : ಕಿರಣಗಳು ಭೂಮಿಯನ್ನು ಲಂಭವಾಗಿ ಸ್ಪರ್ಶಿಸಿದ ಪ್ರದೇಶಕ್ಕೆ ಅಧಿಕ ಉಷ್ಣತೆಯು ದೊರೆಯುತ್ತದೆ. ಆದ್ದರಿಂದಲೇ ಉಷ್ಣ ಕಟಿ ಬಂಧದಲ್ಲಿ ಮತ್ತು ಸೂರ್ಯನಿಗೆ ಎದುರಾಗಿರುವ ಇಳಿಜಾರು ಪ್ರದೇಶಗಳಲ್ಲಿ ಮಣ್ಣು ಹೆಚ್ಚು ಬಿಸಿಯಾಗುತ್ತದೆ.

ii) ಮಣ್ಣಿನ ಬಣ್ಣ : ಮಣ್ಣಿನ ಬಣ್ಣವು ದಟ್ಟವಾಗಿದ್ದರೆ, ಆ ಮಣ್ಣು ಅಧಿಕ ಉಷ್ಣತೆಯನ್ನು ಹೀರಿಕೊಳ್ಳುವುದರಿಂದ ಕಪ್ಪು ಬಣ್ಣದ ಮಣ್ಣು ಹೆಚ್ಚು ಬಿಸಿಯಾಗುತ್ತದೆ. ಆದರೆ, ವಾಸ್ತವವಾಗಿ ಕಪ್ಪು ಮಣ್ಣಿನಲ್ಲಿ ಸಾವಯವ ಪದಾರ್ಥವು ಅಧಿಕ ಪ್ರಮಾಣದಲ್ಲಿರುತ್ತದಲ್ಲದೇ ಅಂತಹ ಮಣ್ಣಿನ ಜಲಧಾರಣಾ ಸಾಮರ್ಥ್ಯವು ಅಧಿಕ. ಹೀಗಾಗಿ ತೇವಾಂಶವುಳ್ಳ ಕಪ್ಪು ಮಣ್ಣು ಬೇಗನೇ ಬಿಸಿಯಾಗುವುದಿಲ್ಲ.

iii) ನೀರಿನ ಪ್ರಮಾಣ : ನೀರಿನಿಂದ ಆರ್ದ್ರಗೊಂಡ ಮಣ್ಣು ಒಣ ಮಣ್ಣಿಗಿಂತ ತಂಪಾಗಿರುತ್ತದೆ. ಭೂಮಿಯನ್ನು ತಲುಪಿದ ಸೌರ ಶಕ್ತಿಯು, ಮಣ್ಣಿನಲ್ಲಿರುವ ನೀರನ್ನು ಆವಿಯಾಗಿ ಪರಿವರ್ತಿಸುವಲ್ಲಿ ವ್ಯಯವಾಗುತ್ತದೆ. ನೀರು ಆವಿಯಾಗುವ ಮಣ್ಣಿನ ಉಷ್ಣತೆಯು ಸಹಜವಾಗಿಯೇ ಕಡಮೆಯಾಗುತ್ತದೆ.

ಇನ್ನೊಂದು ಸಂಗತಿಯನ್ನು ಇಲ್ಲಿ ಗಮಿಸಬೇಕು. ನೀರಿನ ವಿಶಿಷ್ಟ ಉಷ್ಣತೆಯು ಉಳಿದ ವಸ್ತುಗಳಿಗಿಂತ ಅಧಿಕವಾಗಿದೆಯಾದ್ದರಿಂದ, ಆರ್ದ್ರ ಮಣ್ಣಿನ ಉಷ್ಣತಾಮಾನವನ್ನು ಹೆಚ್ಚಿಸಲು ಅಧಿಕ ಶಕ್ತಿಯು ಬೇಕಾಗುತ್ತದೆ. ಆದರೆ ಒಮ್ಮೆ ಮಣ್ಣಿನ ಉಷ್ಣತಾಮಾನವು ಅಧಿಕಗೊಂಡಿತೆಂದರೆ ಮಣ್ಣಿನ ಮೇಲ್ಬಾಗದಿಂದ ಮತ್ತು ಸಸ್ಯದ ಎಲೆ ಕಾಂಡಗಳ ಮೂಲಕ ನೀರು ತೀವ್ರಗತಿಯಿಂದ ಆವಿಯಾಗಿ ಮಣ್ಣು ಬಹು ಬೇಗನೇ ಒಣಗುತ್ತದೆ.

iv) ಮಣ್ಣಿನ ಮೇಲ್ಬಾಗದಲ್ಲಿರುವ ಆಚ್ಛಾದನೆ : ಬೆಳೆಯುತ್ತಿರುವ ಸಸ್ಯಗಳು, ಸಾವಯವ ಪದಾರ್ಥಗಳು ಅಥವಾ ಇತರೆ ಅಚ್ಛಾದನೆಗಳು ಸೂರ್ಯನ ಕಿರಣಗಳನ್ನು ತಡೆದು, ತಳದಲ್ಲಿರುವ ಮಣ್ಣು ಬಿಸಿಯಾಗದಂತೆ ಮಾಡುತ್ತವೆ. ಅದರಂತೆಯೇ , ರಾತ್ರಿ ಸಮಯದಲ್ಲಿ ಮಣ್ಣಿನಿಂದ ಉಷ್ಣತೆಯು ಹೊರಹೋಗಿ ಮಣ್ಣು ತಂಪಾಗದಂತೆಯೂ ನೋಡಿಕೊಳ್ಳುತ್ತದೆ. ಪಾರದರ್ಶಕವಾಗಿರುವ ಪಾಲಿಥೀನ್‌ ಹಾಳೆಯಿಂದ ಭೂಮಿಯ ಮೇಲ್ಬಾಗವನ್ನು ಮುಚ್ಚಿದರೆ, ಮಣ್ಣಿನ ಮೇಲ್ಬಾಗದ ಉಷ್ಣತಾಮಾನವು ೫೦ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಸ್ವಲ್ಪ ಅಧಿಕ ಮಟ್ಟವನ್ನು ಮುಟ್ಟಬಹುದು. ಕೆಲವು ಬಗೆಯ ರೋಗಾಣುಗಳನ್ನು ನಿಷ್ಕ್ರಿಯೆಗೊಳಿಸಲು ಈ ಪರಿಣಾಮದ ಪ್ರಯೋಜನವನ್ನು ಮಾಡಿಕೊಳ್ಳಬಹುದು.

v. ಉಷ್ಣತಾಮಾನವನ್ನು ಅಳೆಯುವ ಆಳ ಮತ್ತು ಸಮಯ : ಮೇಲ್ಬಾಗದಲ್ಲಿರುವ ಮಣ್ಣು, ತನ್ನ ತಳದಲ್ಲಿರುವ ಸ್ತರದ ಮಣ್ಣಿಗೆ ಒಂದು ಬಗೆಯ ಸಂರಕ್ಷಣೆಯನ್ನು ನೀಡುತ್ತದೆ. ಉಷ್ಣತೆಯು ಮಣ್ಣಿನ ಆಳಕ್ಕೆ ತೀವ್ರಗತಿಯಿಂದ ಚಲಿಸುವುದಿಲ್ಲ. ಹೀಗಾಗಿ ಮೇಲಿನ ಮಣ್ಣಿಗಿಂತ ತಳದಲ್ಲಿರು ಮಣ್ಣು ಕಡಮೆ ಉಷ್ಣತೆಯನ್ನು ಹೊಂದಿರುತ್ತದೆ. ಅದರಂತೆಯೇ ದಿನದ ಯಾವ ಸಮಯದಲ್ಲಿ ಅಥವಾ ವರ್ಷದ ಯಾವ ಹಂಗಾಮಿನಲ್ಲಿ ಮಣ್ಣಿನ ಉಷ್ಣತಾಮಾನವನ್ನು ಆಳೆಯಲಾಗುತ್ತದೆಯೆಂಬುವುದರ ಮೇಲೆ ಅದರ ಉಷ್ಣತಾಮಾನದ ಮಟ್ಟವು ಅವಲಂಬಿಸಿರುತ್ತದೆ.