. ಸಸಿ ಮಡಿ :

 • ಒಂದು ಹೆಕ್ಟೇರು ಪ್ರದೇಶಕ್ಕೆ ಬೇಕಾಗುವಷ್ಟು ಅಝೊಲ್ಲ ಜೈವಿಕ ಗೊಬ್ಬರ ತಯಾರಿಸಲು ೪೦೦ ಚ.ಮೀ. ಕ್ಷೇತ್ರದ ಸಸಿ ಮಡಿಯು ಬೇಕಾಗುತ್ತದೆ.
 • ಸಸಿ ಮಡಿಗೆಂದು ಆರಿಸಿಕೊಂಡ ಭೂಮಿಯನ್ನು ಉಳುಮೆ ಮಾಡಿ, ಸರಿಯಾಗಿ ಹದಗೊಳಿಸಿ, ಸುತ್ತಲು ಬದುಗಳನ್ನು ನಿರ್ಮಿಸಬೇಕು. ಮಡಿಯಲ್ಲಿ ೫ ರಿಂದ ೭ ಸೆಂ.ಮೀ.ನಷ್ಟು ನೀರನ್ನು ನಿಲ್ಲಿಸಬೇಕು.
 • ಪ್ರತಿ ಮಡಿಗೆ ೨.೫ ಕಿ.ಗ್ರಾಂ. ಸೂಪರ ಫಾಸ್ಪೇಟ್, ೨.೫ ಕಿ.ಗ್ರಾಂ. ಬೂದಿ ಮತ್ತು ೨೦೦ ಗ್ರಾಂ ಫ್ಯುರಾಡಾನ್‌ಹರಳುಗಳನ್ನು ಪೂರೈಸಬೇಕು.
 • ಸೂಪರ ಫಾಸ್ಪೆಟ್ ಬದಲು ೨೦೦ರಿಂದ ೩೦೦ ಕಿ.ಗ್ರಾಂ. ಹಸಿ ಸಗಣಿಯನ್ನು ನೀರಿನಲ್ಲಿ ಕದಡಿ ಪೂರೈಸಬಹುದು.
 • ಸೂಪರ ಫಾಸ್ಫೇಟ್‌ನಲ್ಲಿ ಅರ್ಧದಷ್ಟು ಮತ್ತು ಹಸಿ ಸಗಣಿಯನ್ನು ಅರ್ಧದಷ್ಟು ಇವುಗಳನ್ನು ಪೂರೈಸಿದರೂ ಅಝೊಲ್ಲದ ಬೆಳವಣಿಗೆಯು ಉತ್ತಮಗೊಳ್ಳುತ್ತದೆ.
 • ಪ್ರತಿ ಮಡಿಗೆ ಸುಮಾರು ೫೦ ಕಿ.ಗ್ರಾಂ ಅಝೊಲ್ಲವನ್ನು ನಿಂತಿರುವ ನೀರಿನ ಮೇಲೆ ಹರಡಬೇಕು. ಎರಡು ವಾರಗಳಲ್ಲಿ ಅಝೊಲ್ಲ ಒಂದು ಹೆಕ್ಟೇರು ಕ್ಷೇತ್ರಕ್ಕೆ ಪೂರೈಸಲು ಸಾಕಾಗುತ್ತದೆ.

. ಬತ್ತದ ಗದ್ದೆಯಲ್ಲಿ ಅಝೊಲ್ಲವನ್ನು ಬೆಳೆಸುವ ವಿಧಾನ : ಅಝೊಲ್ಲವನ್ನು ಎರಡು ವಿಧಾನಗಳಿಂದ ಬತ್ತದ ಗದ್ದೆಯಲ್ಲಿ ಬೆಳೆಸಬಹುದು.

i) ಬತ್ತದ ಸಸಿಗಳನ್ನು ನಾಟಿ ಮಾಡುವುದಕ್ಕಿಂತ ಮೊದಲು ಬೆಳೆಸುವ ಕ್ರಮ :

 • ಬತ್ತದ ಸಸಿಗಳನ್ನು ನಾಡಿ ಮಾಡುವ ಸುಮಾರು ಮೂರು ವಾರಗಳ ಮೊದಲು ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಬೇಕು.
 • ಪ್ರತಿ ಹೆಕ್ಟೇರಿಗೆ ೬೫ ರಿಂದ ೭೫ ಕಿ.ಗ್ರಾಂ. ಸೂಪರ ಫಾಸ್ಪೇಟ್, ೫೦ ಕಿ.ಗ್ರಾಂ. ಬೂದಿ, ೧೦ ಕಿ.ಗ್ರಾಂ. ಪೋಟ್ಯಾಷಿಯಂ ಸಲ್ಫೇಟ್, ೨೫೦ ಗ್ರಾಂ ಸೋಡಿಯಂ ಮಾಲಿಬ್ಡೆಟ್ ಮತ್ತು ೨.೫ ಕಿ.ಗ್ರಾಂ. ಪ್ಯುರಡಾನ್‌ ಹರಳುಗಳನ್ನು ಹಾಕಬೇಕು.
 • ಸೂಪರ್ ಫಾಸ್ಪೇಟ್ ಬದಲು ೫ ರಿಂದ ೭ ಸೆಂ.ಮೀ. ನಷ್ಟು ಆಳವಾದ ನೀರನ್ನು ನಿರಂತರವಾಗಿ ನಿಲ್ಲಿಸಿರಬೇಕು.
 • ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೭ ಕ್ಕಿಂತ ಕಡಮೆಯಿದ್ದರೆ ಸುಮಾರು ೫೦೦ ಕಿ.ಗ್ರಾಂ. ನಷ್ಟು ಅಝೊಲ್ಲವನ್ನು ನೀರಿನ ಮೇಲೆ ಹರಡಬೇಕು. ರಸಸಾರ (pH)ವು ೭ ಕ್ಕಿಂತ ಅಧಿಕವಿದ್ದಾಗ, ಸುಮಾರು ಒಂದು ಟನ್ನಿನಷ್ಟು ಅಝೊಲ್ಲ ಬೇಕಾಗುತ್ತದೆ.
 • ಎರಡು – ಮೂರು ವಾರಗಳಲ್ಲಿ ೧೦ ರಿಂದ ೧೨ ಟನ್ನಿನಷ್ಟು ಅಝೊಲ್ಲ ದೊರೆಯುತ್ತದೆ. ಗದ್ದೆಯೊಳಗಿನ ನೀರನ್ನು ಬಸಿದು ತೆಗೆದು, ಅಝೊಲ್ಲವನ್ನು ಮಣ್ಣಿನಲ್ಲಿ ಸೂಕ್ತ ಉಪಕರಣದ ಸಹಾಯದಿಂದ ಸೇರಿಸಬೇಕು. ಒಂದು ವಾರದ ನಂತರ ಬತ್ತವನ್ನು ನಾಟಿ ಮಾಡಬಹುದು.
 • ಮಣ್ಣಿನಲ್ಲಿ ಪೂರ್ತಿಯಾಗಿ ಸೇರಿಕೊಳ್ಳದೇ ಉಳಿದಿರುವ ಅಝೊಲ್ಲ, ಮುಂದಿನ ೧೦ – ೧೨ ದಿನಗಳಲ್ಲಿ ಅಭಿವೃದ್ಧಿ ಹೊಂದಿ ಸುಮಾರು ೫ ಟನ್ನಿನಷ್ಟು ಅಝೊಲ್ಲವನ್ನು ಮಣ್ಣಿನಲ್ಲಿ ಸೂಕ್ತ ಉಪಕರಣದ ಸಹಾಯದಿಂದ ಸೇರಿಸಬೇಕು. ಒಂದು ವಾರದ ನಂತರ ಬತ್ತವನ್ನು ನಾಟಿ ಮಾಡಬಹುದು.
 • ಮೇಲೆ ವಿವರಿಸಿದಂತೆ ಎರಡು ಬಾರಿ ಅಝೊಲ್ಲವನ್ನು ಮಣ್ಣಿಗೆ ಸೇರಿಸಿದಾಗ ಪ್ರತಿ ಹೆಕ್ಟೇರಿಗೆ ೪೦ ರಿಂದ ೪೫ ಕಿ.ಗ್ರಾಂ. ಸಾರಜನಕವನ್ನು ಗದ್ದೆಗೆ ಪೂರೈಸಿದಂತಾಗುತ್ತದೆ.

ii) ಬತ್ತದ ಬೆಳೆಯೊಡನೆ ಬೆಳೆಸುವ ಕ್ರಮಗಳು :

 • ಬತ್ತದ ಸಸಿಗಳನ್ನು ನಾಟಿ ಮಾಡಿದ ಒಂದು ವಾರದ ನಂತರ ಹೆಕ್ಟೇರಿಗೆ ಸುಮಾರು ೫೦೦ ಕಿ.ಗ್ರಾಂ.ನಷ್ಟು ಅಝೊಲ್ಲವನ್ನು, ಗದ್ದೆಯಲ್ಲಿ ಎಲ್ಲೆಡೆ ಹಂಚಿ ಹೋಗುವಂತೆ ಪಸರಿಸಬೇಕು.
 • ಬತ್ತದ ಬೆಳೆಗೆ ಪೂರೈಸಬೇಕೆಂದಿರುವ ಅರ್ಧದಷ್ಟು ರಂಜಕವನ್ನು ನಾಟಿಯ ಸಮಯಕ್ಕೆ ಮತ್ತು ಉಳಿದ ಅರ್ಧದಷ್ಟು ರಂಜಕವನ್ನು ಸೂಪರ ಫಾಸ್ಪೆಟ್ ರೂಪದಲ್ಲಿ ಅಝೊಲ್ಲವನ್ನು ಗದ್ದೆಯಲ್ಲಿ ಪಸರಿಸುವಾಗ ಪೂರೈಸಬೇಕು. ಈ ಸಮಯದಲ್ಲಿಯೇ ಫ್ಯುರಡಾನ್‌ಹರಳುಗಳನ್ನೂ (೨.೫ ಕಿ.ಗ್ರಾಂ) ಒದಗಿಸಬೇಕು.
 • ಒಂದು ವಾರದ ನಂತರ ಹೆಕ್ಟೇರಿಗೆ ೨೫ ಕಿ.ಗ್ರಾಂ. ಸೂಪರ ಫಾಸ್ಪೆಟ್‌ನ್ನು ಮೇಲು ಗೊಬ್ಬರವಾಗಿ ಪೂರೈಸಿದರೆ ಅಝೊಲ್ಲದ ಬೆಳವಣಿಗೆಯು ಬಹು ವೇಗದಿಂದ ಸಾಗುತ್ತದೆ.
 • ಎರಡು – ಮೂರು ವಾರಗಳ ನಂತರ ನೀರನ್ನು ಬಸಿದು ತೆಗೆದು ಅಝೊಲ್ಲವನ್ನು ಮಣ್ಣಿನಲ್ಲಿ ಸೇರಿಸಬೇಕು.

. ಅಝೊಲ್ಲವನ್ನು ಮುಂದಿನ ಹಂಗಾಮಗಳಿಗೆ ಕಾಯ್ದಿಟ್ಟುಕೊಳ್ಳುವ ವಿಧಾನಗಳು:

ಬತ್ತದ ಬೇಸಾಯಗಾರರು ಅಝೊಲ್ಲವನ್ನು ಪ್ರತಿ ವರ್ಷಕ್ಕೆ ಕೃಷಿ ವಿಶ್ವವಿದ್ಯಾನಿಲಯ ಇಲ್ಲವೇ ಇಲಾಖೆಯಿಂದ ಕೊಳ್ಳುವ ಬದಲು, ತಾವೇ ಅದನ್ನು ಕಾಯ್ದಿಟ್ಟುಕೊಂಡು ಬಳಸಬಹುದು. ಈ ಕಾರ್ಯಕ್ಕಾಗಿ ಕೆಳಗೆ ವಿವರಿಸಿದ ವಿಧಾನಗಳನ್ನು ಅನುಸರಿಸಬೇಕು.

 • ಎರಡು ಮೀಟರ ಉದ್ದ, ಒಂದು ಮೀಟರು ಅಗಲ ಮತ್ತು ಕಾಲು ಮೀಟರ್ ಆಳದ ಸಿಮೆಂಟಿನಿಂದ ಮಾಡಿದ ತೊಟ್ಟಿಯಲ್ಲಿ ಬತ್ತದ ಗದ್ದೆಯಿಂದ ತಂದ ಮಣ್ಣನ್ನು ೫ ರಿಂದ ೧೦ ಸೆಂ.ಮೀ. ದಪ್ಪ ತುಂಬಬೇಕು.
 • ಮಣ್ಣಿಗೆ ೫ ರಿಂದ ೧೦ ಗ್ರಾಂ ಸೂಪರ ಫಾಸ್ಫೇಟ್ ಮತ್ತು ೧೦ ಗ್ರಾಂ ಫ್ಯುರಡಾನ್‌ ಹರಳುಗಳನ್ನು ಸೇರಿಸಿ, ೫ ಸೆಂ.ಮೀ. ಆಳದವರೆಗೆ ಪಸರಿಸಬೇಕು.
 • ಸುಮಾರು ೧೦ – ೧೨ ದಿನಗಳಲ್ಲಿ ಅಝೊಲ್ಲ ಅಭಿವೃದ್ಧಿ ಹೊಂದಿ ೨ ರಿಂದ ೨.೫ ಕಿ.ಗ್ರಾಂ. ನಷ್ಟಾಗುತ್ತದೆ.
 • ಈ ಬೆಳವಣಿಗೆಯೊಳಗಿನ ಅರ್ಧದಿಂದ ಒಂದು ಕಿ.ಗ್ರಾಂ. ಅಝೊಲ್ಲವನ್ನು ತೊಟ್ಟಿಯಲ್ಲಿಯೇ ಬಿಟ್ಟು ಉಳಿದ ಹಸುರು ಪದಾರ್ಥವನ್ನು ಹೊರತೆಗೆಯಬೇಕು. ಇದನ್ನು ಗೊಬ್ಬರ ಗುಂಡಿಗೆ ಸೇರಿಸಬಹುದು.
 • ಬತ್ತದ ಹಂಗಾಮು ಬರುವವರೆಗೆ ಮೇಲೆ ವಿವರಿಸಿದ ರೀತಿಯಿಂದ ಅಝೊಲ್ಲವನ್ನು ಕಾಯ್ದಿರಿಸಿಕೊಳ್ಳಬಹುದು.
 • ಮೇಲೆ ಹೇಳಿದಂತೆ ಮೂರು ಅಥವಾ ನಾಲ್ಕು ಸಲ ಅಝೊಲ್ಲವನ್ನು ತೊಟ್ಟಿಯಿಂದ ಹೊರತೆಗೆದ ನಂತರ ೧೦ ಗ್ರಾಂ ಸೂಪರ ಫಾಸ್ಫೇಟ್ ಮತ್ತು ೧೦ ಗ್ರಾಂ ಪೋರೇಟ್ ಹರಳುಗಳನ್ನು ಹಾಕಿದರೆ ಅಝೊಲ್ಲ ಶೀಘ್ರ ಗತಿಯಿಂದ ಬೆಳೆಯುತ್ತದೆ.
 • ತೊಟ್ಟಿಯಲ್ಲಿಯ ಮಣ್ಣನ್ನು ವರ್ಷಕ್ಕೊಮ್ಮೆ ಬದಲಿಸಬೇಕು.
 • ಸಿಮೆಂಟ್ ತೊಟ್ಟಿಯ ಬದಲು ದೊಡ್ಡ ಮಡಕೆ ಇಲ್ಲವೇ ಫ್ಲಾಸ್ಟಿಕ್ ಟಬ್ ಬಳಸಬಹುದು.

. ಸಸಿ ಮಡಿಯಲ್ಲಿ ಅಥವಾ ತೊಟ್ಟಿಯಲ್ಲಿ ಅಝೊಲ್ಲವನ್ನು ಬೆಳೆಸುವಾಗ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳು:

 • ಮಡಿಯಲ್ಲಿ ಅಥವಾ ತೊಟ್ಟಿಯಲ್ಲಿ ಕನಿಷ್ಠ ೫ ಸೆಂ.ಮೀ. ಆಳದವರೆಗೆ ನೀರು ಸದಾ ನಿಂತಿರಬೇಕು.
 • ಸೂಕ್ತ ಪ್ರಮಾಣದಲ್ಲಿ ರಂಜಕದ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಹಸಿ ಸಗಣಿ ಮತ್ತು ಸೂಪರ ಫಾಸ್ಪೇಟ್ ಮಿಶ್ರಣವು ಹೆಚ್ಚು ಪರಿಣಾಮಕಾರಿ ಎನ್ನಬಹುದು.
 • ಬೇಸಿಗೆಯ ಸಮಯದಲ್ಲಿ ಹಸಿರು ಪಾಚಿಯು ತೀವ್ರ ಗತಿಯಿಂದ ಬೆಳೆದು ಅಝೊಲ್ಲದ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತದೆ. ಈ ಪಾಚಿಯನ್ನು ಕೈಯಿಂದ ಇಲ್ಲವೇ ಸಣ್ಣ ಕೋಲಿನ ಸಹಾಯದಿಂದ ೨ – ೩ ದಿನಗಳಿಗೊಮ್ಮೆ ತೆಗೆದೊಗೆಯಬೇಕು. ಇದರ ಬದಲು ೨೦೦ ರಿಂದ ೫೦೦ ಮೀ. ಗ್ರಾಂ. ಮೈಲು ತುತ್ತವನ್ನು ಉದುರಿಸಿದರೆ ಪಾಚಿಯನ್ನು ನಿಯಂತ್ರಣದಲ್ಲಿಡಬಹುದು.
 • ತೊಟ್ಟಿಯಲ್ಲಿ ಬಸವನ ಹುಳುಗಳು ಕಂಡುಬಂದಲ್ಲಿ ಅವುಗಳನ್ನು ಕೈಯಿಂದ ಆರಿಸಿ ತೆಗೆದು ನಾಶಪಡಿಸಬೇಕು. ಪ್ಯುರಡಾನ್‌ಹರಳುಗಳನ್ನು ಬಳಸಿಯೂ ಇವುಗಳನ್ನು ನಿಯಂತ್ರಿಸಬಹುದು.
 • ತೊಟ್ಟಿಯಲ್ಲಿರುವ ನೀರಿನ ಹೊಂದಾಣೀಕೆಯನ್ನು ಮಾಡಿ ಅಝೊಲ್ಲದ ಬೇರುಗಳು ಮಣ್ಣಿಗೆ ತಾಗುವಂತೆ ಮಾಡಬೇಕು. ಇದರಿಂದ ಅದುಮಣ್ಣಿನಲ್ಲಿರುವ ಪೋಷಕಗಳನ್ನು ಹೀರಿಕೊಳ್ಳಲು ಸಾಧ್ಯವಾಗಿ ಬೆಳೆವಣಿಗೆಯು ಉತ್ತಮಗೊಳ್ಳುತ್ತದೆ.
 • ಅಝೊಲ್ಲವನ್ನು ಬಹಳ ದಿನಗಳವರೆಗೆ ಬೆಳೆಯಲು ಬಿಟ್ಟರೆ ಅದು ಹಲವು ಪದರುಗಳಲ್ಲಿ ಬೆಳೆಯುತ್ತದೆ. ಆಗ ಕೆಳಗಿನ ಪದರು ಕೊಳೆಯಲು ಪ್ರಾರಂಭವಾಗಿ ಕೀಟದ ಬಾಧೆಯು ಅಧಿಕಗೊಳ್ಳಬಹುದು. ಆದ್ದರಿಂದ ೨ – ೩ ವಾರಗಳಿಗೆ ಒಮ್ಮೆ ತೊಟ್ಟಿಯಲ್ಲಿ ಬೆಳೆದ, ಅಝೊಲ್ಲದ ಮೂರರಲ್ಲಿ ಒಂದು ಭಾಗವನ್ನು ಕಾಂಪೋಸ್ಟ್ ಮಾಡಬೇಕು.

. ಅಝೊಲ್ಲದಿಂದ ಆಗುವ ಪ್ರಯೋಜನಗಳು :

 •  ಈಗಾಗಲೇ ಹೇಳಿದಂತೆ ಅಝೊಲ್ಲವನ್ನು ಬೆಳೆಸುವುದರಿಂದ ಪ್ರತಿ ಹೆಕ್ಟೇರಿಗೆ ೪೦ ರಿಂದ ೪೫ ಕಿ.ಗ್ರಾಂ. ಸಾರಜನಕವನ್ನು ಅತಿ ಕಡಮೆ ಖರ್ಚಿನಲ್ಲಿ ಒದಗಿಸಿದಂತಾಗುತ್ತದೆ. ಇದರಿಂದ ಭೂಮಿಯ ಫಲವತ್ತೆಯ ಉತ್ತಮಗೊಳ್ಳುತ್ತದೆಯಲ್ಲದೇ ಬತ್ತಕ್ಕೆ ಪೂರೈಸಬೇಕೆಂದಿರುವ ಸಾರಜನಕದಲ್ಲಿ ಶೇಕಡಾ ಸುಮಾರು ೨೫ ರಷ್ಟನ್ನು ಕಡಮೆ ಮಾಡಲು ಸಾಧ್ಯವಾಗುತ್ತದೆ.
 • ಪ್ರತಿ ಹೆಕ್ಟೇರಿಗೆ ೧೦ ರಿಂದ ೧೨ ಟನ್ನುಗಳಷ್ಟು ಸುಲಭವಾಗಿ ಕಳಿಯಬಲ್ಲ ಸಾವಯವ ಪದಾರ್ಥವನ್ನು ಮಣ್ಣಿಗೆ ಒದಗಿಸಿದಂತಾಗುತ್ತದೆ.
 • ಬತ್ತದೊಡನೆ ೨ – ೩ ವಾರಗಳವರೆಗೆ ಅಝೊಲ್ಲವನ್ನು ಸಹ ಬೆಳೆಯಾಗಿ ಬೆಳೆಸಿದಾಗ ಬತ್ತದಲ್ಲಿ ಕಾಣಿಸಿಕೊಳ್ಳುವ ಕಳೆಗಳನ್ನು ನಿಯಂತ್ರಿಸಿದಂತಾಗುತ್ತದೆ.
 •  ಅಝೊಲ್ಲದಿಂದ ಕಾಂಪೋಸ್ಟನ್ನು ತಯಾರಿಸಿ ಇತರೆ ಬೆಳೆಗಳಿಗೆ ಲಾಭದಾಯಕವಾಗಿ ಬಳಸಬಹುದು.
 • ಕೋಳಿ, ಬಾತು ಕೋಳಿ, ಮೀನು ಮತ್ತು ಇತರೆ ಪ್ರಾಣಿಗಳ ಆಹಾರದಲ್ಲಿ ಅಝೊಲ್ಲವನ್ನು ಮಿಶ್ರಮಾಡಿ ಕೊಡಬಹುದು.

. ಅಝೊಲ್ಲದ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುವ ಸಂಗತಿಗಳು :

 • ನೀರು : ಅಝೊಲ್ಲ ನೀರಿನ ಮೇಲೆ ತೇಲುವ ಸಸ್ಯ. ಆದ್ದರಿಂದ ೧೦ – ೧೫ ಸೆಂ.ಮೀ. ಆಳದ ನೀರು ಸತತವಾಗಿ ನಿಂತಿರಬೇಕು.
 • ಉಷ್ಣತಾಮಾನ: ಅತಿ ಹೆಚ್ಚು (೩೫ ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ) ಮತ್ತು ಅತಿ ಕಡಮೆ ಉಷ್ಣತೆಯು ಅಝೊಲ್ಲದ ಬೆಳವಣಿಗೆಯೂ ಅಧಿಕಗೊಳ್ಳುತ್ತದೆ.
 • ರಸಸಾರ (pH) :ರಸಸಾರ (pH) ೮ರ ಸನಿಯದಲ್ಲಿದ್ದರೆ ಅಝೊಲ್ಲದ ಬೆಳವಣಿಗೆಯು ಉತ್ತಮವಾಗಿರುತ್ತದೆ.
 • ಲವಣ :ನೀರಿನಲ್ಲಿ ಲವಣಗಳ ಪ್ರಮಾಣವು ಅಧಿಕಗೊಂಡಂತೆ ಆಝೊಲ್ಲದ ಬೆಳವಣಿಗೆಯೂ ಕುಂಠಿತವಾಗುತ್ತದೆ.
 • ಪೋಷಕಗಳು : ಸಾರಜನಕವೊಂದನ್ನು ಬಿಟ್ಟು ಉಳಿದೆಲ್ಲ ಪೋಷಕಗಳು ಅಝೊಲ್ಲದ ಬೆಳವಣಿಗೆಗೆ ಅತ್ಯವಶ್ಯ. ರಂಜಕವು ಸಾಕಷ್ಟು ಪ್ರಮಾಣದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು. ಅಮೋನಿಯಂ ಇಲ್ಲವೇ ನೈಟ್ರೇಟ್ ರೂಪದಲ್ಲಿರುವ ಸಾರಜನಕದ ಪೂರೈಕೆಯನ್ನು ಮಾಡಿದರೆ ಅಝೊಲ್ಲದ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಆದರೆ ಈ ರೂಪಗಳಲ್ಲಿರುವ ಸಾರಜನಕದ ಪೂರೈಕೆಯು ಅತಿ ಕಡಮೆ ಪ್ರಮಾಣದಲ್ಲಾದರೆ ಅಝೊಲ್ಲದ ಬೆಳವಣಿಗೆಯು ಉತ್ತಮಗೊಳ್ಳುತ್ತದೆಂಬುದನ್ನು ಗಮನಿಸಬೇಕು.

. ಇತರ ವಿಷಯಗಳು : ಅಝೊಲ್ಲದಲ್ಲಿರುವ ಸಾರಜನಕದ ಮೂಲದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಇದರಲ್ಲಿರುವ ಒಟ್ಟು ಸಾರಜನಕದ ಶೇಕಡಾ ೭೫ ರಿಂದ ೯೦ ರಷ್ಟು ವಾಯುವಿನಿಂದ ಬಂದಿದೆ ಎಂದೂ ಉಳಿದ ಸಾರಜನಕವೂ ನೀರು ಅಥವಾ ಮಣ್ಣಿನಿಂದ ಬಂದಿದೆ ಎಂದೂ ಕೆಲವು ಪ್ರಯೋಜಗಗಳ ಪರಿಣಾಮದಿಂದ ಕಂಡುಬಂದಿದೆ.

ಫ್ರಾಂಕಿಯಾ ಪ್ರಬೇಧಗಳು : ಬೇಳೆಕಾಳು ವರ್ಗಕ್ಕೆ ಸೇರದಿರುವ ಕೆಲವು ಮರಗಳ ಬೇರುಗಳ ಮೇಲೆ ಗಂಟುಗಳಿರುತ್ತವೆಯಲ್ಲದೇ, ಇವುಗಳೊಳಗೆ ವಾಸಿಸುವ ಸೂಕ್ಷ್ಮ ಜೀವಿಗಳು ಹವೆಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸುತ್ತವೆ. ಈ ಸೂಕ್ಷ್ಮ ಜೀವಿಗಳು ರೈಝೋಬಿಯಂ ಬ್ಯಾಕ್ಟೀರಿಯಾಗಳಲ್ಲ. ಈ ಜೀವಿಗಳು ಆಕ್ಟಿನೋಮೈಸಿಟೀಸ್ ಗುಂಪಿಗೆ ಸೇರಿವೆ. ಇವು ಬೇರುಗಳಲ್ಲಿ ನಿರ್ಮಿಸಿಕೊಂಡ ಗಂಟುಗಳಲ್ಲಿ ವಾಸಿಸಿ,ಸಾರಜನಕವನ್ನು ಸ್ಥಿರೀಕರಿಸಿ, ಸಂಬಂಧಿತ ಮರದೊಡನೆ ಸಹಜೀವನವನ್ನು ನಡೆಸುತ್ತದೆ. ಈ ಬಗೆಯ ಸಹಜೀವನಕ್ಕೆ ಆಕ್ಟಿನೋರೈಜಾ ಎಂದು ಕರೆಯುತ್ತಾರೆ. ಇಂತಹ ಸಹಜೀವನಕ್ಕೆ ಸಂಬಂಧಿಸಿದ ಆಕ್ಟಿನೋಮೈಸಿಟೀಸ್‌ಗಳನ್ನು ಫ್ರಾಂಕಿಯಾ ಎಂಬ ಜಾತಿಗೆ (ಜೀನಸ್) ಸೇರಿಸಲಾಗಿದೆ.

ಹಲವು ಕುಟುಂಬಗಳ ೨೪ ಜಾತಿಗಳಿಗೆ ಸೇರಿದ ಮರಗಳ ಬೇರುಗಳಲ್ಲಿ ಗಂಟುಗಳನ್ನು ನಿರ್ಮಿಸಿ, ಅಕ್ಟಿನೋಮೈಸಿಟೀಸ್, ಸಹಜೀವವನ್ನು ನಡೆಸಿ ಬೃಹತಪ್ರಮಾಣದಲ್ಲಿ ಸಾರಜನಕವನ್ನು ಸ್ಥಿರೀಕರಿಸುತ್ತವೆಯೆಂದು ಕಂಡುಬಂದಿದೆ. ಉದಾಹರಣೆಗೆ, ಸಮಶೀತೋಷ್ಣ ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ಆಲ್ಡರ್ ಎಂಬ ವೃಕ್ಷದ ತೊಗಟೆಯನ್ನು ಕಾಗದದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಲ್ಲದೇ ಈ ಮರದಿಂದ ಗಟ್ಟಿಯಾದ ದಿಮ್ಮಿಯು ದೊರೆಯುತ್ತದೆ. ಇಂತಹ ಒಂದು ಮರದಿಂದ ಒಂದು ವರ್ಷದಲ್ಲಿ ಉದುರಿದ ಎಲೆಗಳಲ್ಲಿ ಸುಮಾರು ೧೦೦ ಕಿ.ಗ್ರಾಂ. ಸಾರಜನಕವಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಸಾರಜನಕದ ಬಹುಭಾಗವು ಅಕ್ಟಿನೋಮೈಸಿಟೀಸ್ ಜೀವಿಗಳಿಂದ ಸ್ಥೀರೀಕರಣಗೊಂಡದ್ದೆಂದೇ ಪರಿಗಣಿಸಲಾಗಿದೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ಗಾಳಿ ಮರವು ಕ್ಯಾಸುರಿನೇಸಿ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ ಒಟ್ಟು ೪೫ ಪ್ರವರಗಳು ಇದ್ದು, ಅವುಗಳಲ್ಲಿ ೨೪ ಪ್ರವರಗಳಿಗೆ ಸೇರಿದ ಮರಗಳ ಬೇರಿನ ಮೇಲೆ ಗಂಟುಗಳಿರುತ್ತವೆ. ಇವು ಹವೆಯಲ್ಲಿರುವ ಸಾರಜನಕವು ಸ್ಥಿರೀಕರಣಗೊಳ್ಳುತ್ತದೆ. ಈ ಮರವು ಇಂಧನದ ಪೂರೈಕೆಗೆ ಹೆಸರುವಾಸಿಯಾಗಿದೆ.

ಫ್ರಾಂಕಿಯಾ ಜಾತಿಗೆ ಸೂಕ್ಷ್ಮ ಜೀವಿಗಳ ಬಗ್ಗೆ ಮತ್ತು ಕೆಲವು ಕುಟುಂಬಗಳಿಗೆ ಸೇರಿದ ಮರಗಳ ಬೇರುಗಳಲ್ಲಿ ಸಹಜೀವನವನ್ನು ನಡೆಸುವ ಸೂಕ್ಷ್ಮ ಜೀವಿಗಳ ಬಗ್ಗೆ ಹಲವು ವಿಷಯಗಳು ತಿಳಿದಿವೆಯಾದರೂ ತಿಳಿಯಬೇಕಾದ ಸಂಗತಿಗಳು ಬಹಳಷ್ಟಿವೆ. ಇಂದು ಈ ಮರಗಳ ಪಾರಂಪರಿಕ ಕೃಷಿಯಲ್ಲಿ ನೇರವಾಗಿ ಆಸಕ್ತಿ ವಹಿಸುತ್ತಿಲ್ಲವಾದರೂ ಕೃಷಿ – ಅರಣ್ಯದ ದೃಷ್ಟಿಯಿಂದ ಇವುಗಳಿಗೆ ಬಹಳ ಮಹತ್ವವಿದೆ. ಈ ದಿಸೆಯಲ್ಲಿ ಹೆಚ್ಚಿನ ಮತ್ತು ಆಳವಾದ ಅಧ್ಯಯನಗಳ ಅವಶ್ಯಕತೆಯಿದೆ.

ರಂಜಕವನ್ನು ಕರಗಿಸುವ ಸೂಕ್ಷ್ಮ ಜೀವಿಗಳು : ಮಣ್ಣಿನಲ್ಲಿರುವ ರಂಜಕದಲ್ಲಿ ಅತಿ ಕಡಮೆ ಭಾಗ ಮಾತ್ರ, ನೀರಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಹೀಗಾಗಿ ರಂಜಕದ ಬಹುಭಾಗವು ಸಸ್ಯಗಳಿಗೆ ಸುಲಭವಾಗಿ ದೊರೆಯುವ ರೂಪದಲ್ಲಿರುವುದಿಲ್ಲ. ನೀರಿನಲ್ಲಿ ಕರಗುವ ರೂಪದಲ್ಲಿ ರಂಜಕವಿರುವ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಿದರೂ ಕೆಲವು ದಿನಗಳಲ್ಲಿ ಅದು ಕರಗದ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಆದರೆ ಕೆಲವು ಬ್ಯಾಕ್ಟೀರಿಯಾ ಮತ್ತು ಶೀಲೀಂದ್ರಗಳು, ಮಣ್ಣಿನಲ್ಲಿ ಕರಗದೇ ಇರುವ ರೂಪದ ರಂಜಕವನ್ನು, ನೀರಿನಲ್ಲಿ ಕರಗುವ ರೂಪಕ್ಕೆ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಕೆಳಗಿನಂತಿವೆ.

ರಂಜಕನವನ್ನು ಕರಗಿಸಬಲ್ಲ ಬ್ಯಾಕ್ಟೀರಿಯಾ ಮತ್ತು ಶೀಲೀಂದ್ರಗಳು :

ಬ್ಯಾಕ್ಟೀರಿಯಾ :

i) ಬೇಸಿಲಸ್ ಮೆಗಾಥೀರಿಯಂ  Bacillus megatherium

ii) ಬೆಸಿಲಸ್ ಸಬ್ಟಿಲಿಸ್  Bacillus subtilis

iii) ಬೆಸಿಲಸ್ ಪೋಲಿಮಿಕ್ಸಾ  Bacillus polymyxo

iv) ಸುಡುಮೋನಾಸ್ ಸ್ಟ್ರಯೇಟಾ Pseudomonas striata

v) ಸುಡೋಮೊನಾಸ್ ಪುಟಿಡಾ Pseudomonas Putida

vi) ಸುಡೋಮೊನಾಸ್ ಲಿಕ್ವಿಫೆಸಿಯೆನ್ಸ್ Psedumonas liquificiens

ಶೀಲೀಂದ್ರಗಳು :

i) ಅಸ್ಪರ್ಜಿಲಸ್ ಅವಾಮೋರಿ  Aspergillus awamori

ii) ಆಸ್ಪರ್ಜಿಲಸ್ ನೈಜರ್  Aspergilus niger

iii) ಪೆನಿಸಿಲಿಯಂ ಡಿಜಿಟೇಟಂ  Penicillium lilacinum

iv) ಪೆನಿಸಿಲಿಯಂ ಲಿಲಾಸಿನಂ Penicillium lilacinum

ಮೇಲೆ ತಿಳಿಸಿದವುಗಳಲ್ಲದೇ ಇನ್ನೂ ಅನೇಕ ಪ್ರವರಕ್ಕೆ ಸೇರಿದ ಬ್ಯಾಕ್ಟೀರಿಯಾ ಮತ್ತು ಶೀಲೀಂದ್ರಗಳು ಮಣ್ಣಿನಲ್ಲಿಯ ರಂಜಕವನ್ನು ಕರಗಿಸಬಲ್ಲವು.

ಮೇಲೆ ಹೆಸರಿಸಿದ ಸೂಕ್ಷ್ಮ ಜೀವಿಗಳ ದೈನಂದಿನ ಕಾರ್ಯ ಚಟುವಟಿಕೆಯ ಪರಿಣಾಮವಾಗಿ ಸಿಟ್ರಿಕ್, ಗ್ಲುಟಾಮಿಕ್ , ಸಕ್ಸೀನಿಕ್, ಲ್ಯಾಕ್ಟಿಕ್, ಆಕ್ಸಾಲಿಕ್, ಗ್ಲೇ, ಆಕ್ಸಾಲಿಕ್, ಪ್ಲುಮಾರಿಕ್, ಟಾರ್ಟಾರಿಕ್, ಅಕೇಟೋ ಬ್ಯುಟಾರಿಕ್ ಆಮ್ಲಗಳು ನಿರ್ಮಾಣಗೊಳ್ಳುತ್ತವೆ. ಈ ಆಮ್ಲಗಳು ನೀರಿನಲ್ಲಿ ಕರಗದ ಟ್ರೈಕ್ಸಾಲ್ಸಿಯಂ ಫಾಸ್ಪೇಟನ್ನು ನೀರಿನಲ್ಲಿ ಕರಗಬಲ್ಲ ಮೊನೋಕ್ಯಾಲ್ಸಿಯಂ ಫಾಸ್ಫೇಟ್ ರೂಪಕ್ಕೆ ಪರಿವರ್ತಿಸಿ, ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತವೆ. ಈ ಸೂಕ್ಷ್ಮ ಜೀವಿಗಳ ಅವಶ್ಯಕತೆಯನ್ನು ಪೂರೈಸಿದ ನಂತರ, ಉಳಿಯುವ ರಂಜಕವನ್ನು ಉಪಯೋಗಿಸಿಕೊಳ್ಳಲು ಸಸ್ಯಗಳಿಗೆ ಅಸ್ಪದವುಂಟಾಗುತ್ತದೆ.

ಇದಲ್ಲದೇ ರಂಜಕವನ್ನು ಕರಗಿಸುವ ಸೂಕ್ಷ್ಮ ಜೀವಿಗಳಲ್ಲಿ ಕೆಲವು ಮೇಲ್ವರ್ಗದ ಸಸ್ಯಗಳ ಬೆಳವಣಿಗೆಯನ್ನು ಅಧಿಕಗೊಳಿಸುವ ರಾಸಾಯನಿಕಗಳಾದ ಅಮಿನೋ ಆಮ್ಲ, ಅನ್ನಾಂಗಗಳು ಮತ್ತು ಇತರೆ ದ್ರವ್ಯಗಳನ್ನು ನಿರ್ಮಿಸುತ್ತವೆ. ಆದ್ದರಿಂದ ಇವುಗಳ ಪ್ರಯೋಜನವನ್ನು ಸಸ್ಯಗಳು ಪಡೆದುಕೊಳ್ಳಲು ಸಾಧ್ಯವಿದೆ.

ರಂಜಕವನ್ನು ಕರಗಿಸುವ ಜೈವಿಕ ಗೊಬ್ಬರಗಳ ಬಳಕೆಯ ವಿಧಾನ : ಬ್ಯಾಸಿಲಸ್ ಮೆಗಾಥೀರಿಯಂ, ತಳಿ ಫಾಸ್ಫಾಟಿಕಂ ಮತ್ತು ಸುಡೋಮೊನಾಸ ಸ್ಪ್ರಯೇಟಾ ಇವುಗಳನ್ನು ರಂಜಕವನ್ನು ಕರಗಿಸುವ ಕಾರ್ಯಕ್ಕೆ ಸಾಮಾನ್ಯವಾಗಿ ಬಳಸಲಾಗುತ್ತದೆ. ಅಧಿಕ ಪ್ರಮಾಣದಲ್ಲಿ ಸಾವಯವ ಪದಾರ್ಥವಿರುವ ಮಣ್ಣು ಇಲ್ಲವೇ ಲಿಗ್ನೈಟ್ ಪುಡಿ ಅಥವಾ ಇನ್ನಿತರೆ ವಾಹಕಗಳೊಡನೆ ಸೂಕ್ಷ್ಮ ಜೀವಾಣುಗಳನ್ನು ಮಿಶ್ರ ಮಾಡಿ ೨೮ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಒಂದು ವಾರದವರೆಗೆ ಇಟ್ಟು ಹದಗೊಳಿಸಲಾಗುತ್ತದೆ. ಅನಂತರ ಈ ಮಿಶ್ರಣವನ್ನು, ಚೀಲಗಳಲ್ಲಿ ತುಂಬಿ (ಪ್ರತಿ ಚೀಲದಲ್ಲಿ ೩೦೦ ಗ್ರಾಂ ತುಂಬುವುದು ವಾಡಿಕೆ) ಉಪಯೋಗಕ್ಕೆ ಬಿಡುಗಡೆ ಮಾಡಲಾಗುತ್ತದೆ. ಈ ಜೈವಿಕ ಗೊಬ್ಬರವನ್ನು ಆದಷ್ಟು ಬೇಗ (ಒಂದು ತಿಂಗಳ ಒಳಗೆ) ಬಳಸಬೇಕು. ಅಲ್ಲಿಯವರೆಗೆ ೧೫ ರಿಂದ ೨೦ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಸಂಗ್ರಹಿಸಿಡಬೇಕು.

ರಂಜಕವನ್ನು ಕರಗಿಸುವ ಜೈವಿಕ ಗೊಬ್ಬರವನ್ನು ಬಿಜಗಳಿಗೆ ಲೇಪನವಾಗಿ ಹಾಗೂ ಬೀಜಗಳ ಗುಳಿಗೆಗಳನ್ನಾಗಿ ಉಪಯೋಗಿಸಬಹುದು. ದ್ರಾವಣವನ್ನಾಗಿ ಮಾಡಿ ಸಸ್ಯಗಳ ಬೇರುಗಳನ್ನು ಅದ್ದಿ ತೆಗೆಯಬಹುದು. ಇಲ್ಲವೇ ಮಣ್ಣಿಗೆ ನೇರವಾಗಿ ಪೂರೈಸಬಹುದು. ಇತರೆ ವಿವರಗಳು ರೈಝೋಬಿಯಂ ಜೈವಿಕ ಗೊಬ್ಬರದಲ್ಲಿ ಹೇಳಿದಂತಿದೆ.

ರಂಜಕವನ್ನು ಕರಗಿಸುವ ಜೈವಿಕ ಗೊಬ್ಬರಗಳಿಂದ ದೊರೆತ ಪ್ರಯೋಜನಗಳು : ರಷ್ಯಾ ದೇಶದಲ್ಲಿ, ೧೯೫೮ರ ಸುಮಾರಿಗೆ ಬೆಸಿಲಸ್ ಮೆಗಾಥಿರಿಯಂ, ತಳಿ ಫಾಸ್ಪಾಟಿಕಂ ಜೈವಿಕ ಗೊಬ್ಬರವನ್ನು ಸುಮಾರು ೧೦ ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಲವು ಬೆಳೆಗಳಿಗೆ ಪೂರೈಸಿ ನೋಡಲಾಯಿತು. ಕೆಲವು ಸಂದರ್ಭಗಳಲ್ಲಿ ಬೆಳೆಯ ಇಳುವರಿಯು ಗಣನೀಯವಾಗಿ ಅಧಿಕಗೊಂಡಿತಾದರೂ ಇಳುವರಿಯ ಸರಾಸರಿ ಹೆಚ್ಚಳವು ಶೇಕಡಾ ೧೦ ರಷ್ಟೆಂದು ವರದಿಯಾಗಿದೆ.

ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಗೋಧಿ, ಮುಸುಕಿನ ಜೋಳ, ಬತ್ತ, ತೊಗರಿ ಇತ್ಯಾದಿ ಬೆಳೆಗಳಲ್ಲಿ ಮೇಲೆ ಹೇಳಿದ ಜೈವಿಕ ಗೊಬ್ಬರ ಬಳಸಿದಾಗ, ಕೈಗೊಂಡ ಒಟ್ಟು ೩೭ ಪ್ರಯೋಗಗಳಲ್ಲಿ ೧೦ ರಲ್ಲಿ ಮಾತ್ರ ಇಳುವರಿಯು ಅಧಿಕಗೊಂಡಿತು. ಈ ದಿಸೆಯಲ್ಲಿ ಹೆಚ್ಚಿನ ಅಧ್ಯಯಗಳು ಆಗಬೇಕಾಗಿದೆ.

ಮೈಕೋರೈಝಾ : ಮೈಕೋರೈಝಾದ ಬಗ್ಗೆ ಕೆಲವು ವಿವರಗಳನ್ನು ಅಧ್ಯಾಯ ಎಂಟರಲ್ಲಿ ವಿವರಿಸಲಾಗಿದೆ. ಈ ಶೀಲೀಂದ್ರವನ್ನು ಜೈವಿಕ ಗೊಬ್ಬರವೆಂದು ಬಳಸಲು ತಿಳಿಯಬೇಕಾದ ಕೆಲವು ಸಂಗತಿಗಳು ಕೆಳಗಿನಂತಿವೆ.

ಮೈಕೋರೈಝಾಜೈವಿಕಗೊಬ್ಬರವನ್ನುಉತ್ಪಾದಿಸುವವಿಧಾನಗಳು

ಮೈಕೋರೈಝಾ ಜೈವಿಕಗೊಬ್ಬರವನ್ನು ಎರಡು ವಿಧಾನಗಳಿಂದ ಉತ್ಪಾದಿಸಬಹುದು.

i) ಮಣ್ಣಿನ ಕುಂಡಗಳಲ್ಲಿ ಉತ್ಪಾದಿಸುವ ವಿಧಾನ :

 • ಮಣ್ಣಿನ ದೊಡ್ಡ ದೊಡ್ಡ ಕುಂಡಗಳಲ್ಲಿ, ಇತರೆ ಸೂಕ್ಷ್ಮ ಜೀವಿಗಳು ಇರದಂತೆ ಮಾಡಿದ ಸುಮಾರು ೧೦ ಕಿ.ಗ್ರಾಂ. ಮಣ್ಣು ಮತ್ತು ಮರಳಿನ ೧:೧ ಪ್ರಮಾಣದ ಮಿಶ್ರಣವನ್ನು ತುಂಬಬೇಕು.
 • ಮೈಕೋರೈಝಾ ಗೊಬ್ಬರವನ್ನು ತಯಾರಿಸಲು ಬೇಕಾಗುವ ಸುಮಾರು ೧೫೦ ಗ್ರಾಂ ಮೂಲಜೀವಿಗಳನ್ನು, ಪ್ರತಿ ಕುಂಡಕ್ಕೆ ಹಾಕಿ ಸರಿಯಾಗಿ ಬೆರೆಸಬೇಕು.
 • ರ್ಹೋಡ್ಸ್ ಅಥವಾ ಗಿನಿ ಹುಲ್ಲಿನ ಬೀಜಗಳನ್ನು ಬಿತ್ತಿ ಸಾಕಷ್ಟು ನೀರನ್ನು ಪೂರೈಸಬೇಕು. ಪ್ರತಿ ದಿನ ಅವಶ್ಯವಿರುವಷ್ಟು ನೀರನ್ನು ಹಾಕುತ್ತಿರಬೇಕು.
 • ಸುಮಾರು ೭೦ ರಿಂದ ೭೫ ದಿನಗಳಲ್ಲಿ ಮೈಕೋರೈಝಾ ಶಿಲೀಂದ್ರವು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿರುತ್ತದೆ.
 • ಮೇಲ್ಬಾಗದಲ್ಲಿರುವ ಹುಲ್ಲಿನ ಕಾಂಡಗಳನ್ನು ಕತ್ತರಿಸಿ ತೆಗೆದು ಕುಂಡದಲ್ಲಿರುವ ಬೇರು ಮತ್ತು ಮಣ್ಣನ್ನು ಮೈಕೋ ರೈಝಾ ಗೊಬ್ಬರವೆಂದು ಬಳಸಬೇಕು.

ii) ಹೊಲಗದ್ದೆಗಳಲ್ಲಿ ಉತ್ಪಾದಿಸುವ ವಿಧಾನ :

 • ಸುಮಾರು ಎರಡು ಮೀ. ಉದ್ದ ಮತ್ತು ಒಂದು ಮೀ. (2×1) ಅಗಲದ ಭೂಮಿಯನ್ನು ಸರಿಯಾಗಿ ಹದಗೊಳಿಸಿ ಹುಲ್ಲನ್ನು ನೆಡಲು ಸಾಲುಗಳನ್ನು ನಿರ್ಮಿಸಬೇಕು.
 • ಆ ಪ್ರದೇಶದಲ್ಲಿ ಒಣಗಿದ ಕಸಕಡ್ಡಿಗಳನ್ನು ಹರಡಿ, ಬೆಂಕಿಯನ್ನು ಹಚ್ಚಿ ಸುಮಾರು ಅರ್ಧತಾಸಿನವರೆಗೆ ಮಣ್ಣನ್ನು ಸುಟ್ಟರೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ನಾಶ ಹೊಂದುವುವು.
 • ಎರಡು ದಿನಗಳ ನಂತರ, ೫ ಕಿ.ಗ್ರಾಂ. ಮೈಕೋರೈಝಾದ ಮೂಲ ದ್ರವ್ಯವನ್ನು ಸಾಲುಗಳಲ್ಲಿ ಸಮನಾಗಿ ಹಂಚಿ, ಮಣ್ಣಿನಲ್ಲಿ ಮಿಶ್ರಮಾಡಬೇಕು.
 • ರ್ಹೋಡ್ಸ್ ಅಥವಾ ಗಿನಿ ಹುಲ್ಲನ್ನು ಸಾಲುಗಳಲ್ಲಿ ಬೆಳೆಸಬೇಕು. ಹುಲ್ಲಿನ ಬೆಳವಣಿಗೆಗೆ ಅವಶ್ಯವಿರುವಷ್ಟು ನೀರನ್ನು ಪೂರೈಸುತ್ತಿರಬೇಕು.
 • ಸುಮಾರು ಎರಡು ತಿಂಗಳುಗಳ ನಂತರ, ಮೇಲ್ಬಾಗದ ಹುಲ್ಲನ್ನು ಕತ್ತರಿಸಿ ತೆಗೆದು, ಮೇಲಿನ ೧೫ ಸೆಂ.ಮೀ. ಆಳದವರೆಗಿರುವ ಬೇರು ಮತ್ತು ಮಣ್ಣನ್ನು ಜೈವಿಕ ಗೊಬ್ಬರವೆಂದು ಬಳಸಬೇಕು.

ಮೈಕೋರೈಝಾದಪ್ರಯೋಜನವನ್ನುಪಡೆಯಬಲ್ಲಬೆಳೆಗಳು

 • ಜೋಳ, ಮುಸುಕಿನ ಜೋಳ, ರಾಗಿ, ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳು,ತರಕಾರಿ, ಬೆಳೆಗಳು, ತೋಟಗಾರಿಕೆ, ಬೆಳೆಗಳು, ಇತರೆ ಬೆಳೇಗಳು ಅಲ್ಲದೇ ಅರಣ್ಯದ ಹಲವು ಮರಗಳೀಗೆ ಮೈಕೋ ರೈಝಾ ಗೊಬ್ಬರವು ಪ್ರಯೋಜನಕಾರಿಯಾಗಿದೆ.
 • ಬೇರೆ ಬೆರೆ ಬೆಳೆಗಳಿಗೆ ಅನುಕೂಲವಾಗಬಲ್ಲ ವಿಶಿಷ್ಟ ಬಗೆಯ ಮೈಕೋ ರೈಝಾನ್ನು ಗುರುತಿಸುವ ಮತ್ತು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ.

ಮೈಕೋರೈಝಾಜೈವಿಕಗೊಬ್ಬರದಪ್ರಯೋಜನಗಳು

ಮೈಕೋರೈಝಾದಿಂದ ಬೆಳಗಳಿಗೆ ಹಲವು ಪ್ರಯೋಜನಗಳಾಗುತ್ತವೆ. ಪ್ರಮುಖವಾದ ಪ್ರಯೋಜನಗಳು ಕೆಳಗಿನಂತಿವೆ.

 • ಮಣ್ಣಿನಲ್ಲಿರುವ ರಂಜಕ ಮತ್ತು ಸತುವುಗಳಲ್ಲದೇ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಇತ್ಯಾದಿ ಪೋಷಕಗಳನ್ನು ಗಣನೀಯ ಪ್ರಮಾಣದಲ್ಲಿ ಹೀರಿಕೊಂಡು, ಆ ಪೋಷಕಗಳನ್ನು ಬೆಳೆಗೆ ಒದಗಿಸುತ್ತದೆ.
 • ಕೆಲವು ಸಸ್ಯ ವರ್ಧಕಗಳನ್ನು ಉತ್ಪಾದಿಸಿ, ಅವು ಬೆಳೆಗೆ ದೊರೆಯುವಂತೆ ಮಾಡುತ್ತದೆ,
 • ಬೇರುಗಳ ಮೂಲಕ ಬೆಳೆಗೆ ಬರುವ ಕೆಲವು ರೋಗಗಳನ್ನು ತಡಗಟ್ಟುತ್ತದೆ.
 • ನೀರಿನ ಕೊರತೆಯನ್ನು ಸಹಿಸುವ ಸಾಮರ್ಥ್ಯವನ್ನು ಬೆಳೆಗೆ ತಂದುಕೊಡುತ್ತದೆ.

ಜೈವಿಕಗೊಬ್ಬರಗಳಸಂಗ್ರಹಮತ್ತುಬಳಕೆ

i) ಜೈವಿಕ ಗೊಬ್ಬರಗಳನ್ನು ೨೫ ರಿಂದ ೨೮ ಡಿಗ್ರಿ ಉಷ್ಣತಾಮಾನವಿರುವ ಸ್ಥಳಗಳಲ್ಲಿ ಸಂಗ್ರಹಿಸಿಡಬೇಕು. ಉಷ್ಣತಾಮಾನದಲ್ಲಿ ಸೂಕ್ಷ್ಮ ಜೀವಿಗಳು ಅಪಾಯವಿಲ್ಲದೇ ಸುರಕ್ಷಿತವಾಗಿರುತ್ತವೆ.

ii) ಸಂಗ್ರಹದಲ್ಲಿ ಮತ್ತು ಬಳಸುವಾಗ ರಾಸಾಯನಿಕ ಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ರಾಸಾಯನಿಕಗಳೊಡನೆ ನೇರ ಸಂಪರ್ಕ ಏರ್ಪಡದಂತೆ ಎಚ್ಚರವಹಿಸಬೇಕು.

iii) ಅದರಂತೆಯೇ, ಸಂಗ್ರಹಿಸಿಟ್ಟಾಗ ಮತ್ತು ಬಳಸುವಾಗ, ಸೂರ್ಯನ ಬಿಸಿಲು ಜೈವಿಕ ಗೊಬ್ಬರಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕು.

iv) ಬೀಜೋಪಚಾರವನ್ನು, ಸಸ್ಯ ಸಂರಕ್ಷಣಾ ರಾಸಾಯನಿಕಗಳಿಂದ ಮಾಡಲೇಬೇಕಾದ ಪ್ರಸಂಗವಿದ್ದಲ್ಲಿ, ಮೊದಲು ಈ ರಾಸಾಯನಿಕಗಳಿಂದ ಉಪಚರಿಸಿ, ಅನಂತರ ಜೈವಿಕ ಗೊಬ್ಬರಗಳನ್ನು ಲೇಪಿಸಬೇಕು. ಇಲ್ಲವೇ ಜೈವಿಕ ಗೊಬ್ಬರವನ್ನು ಮಣ್ಣಿಗೆ ನೇರವಾಗಿ ಪೂರೈಸಬೇಕು.

v) ಜೈವಿಕ ಗೊಬ್ಬರದ ಕಾಲಾವಧಿಯು ಮುಗಿಯುವ ಮೊದಲೇ ಅದನ್ನು ಬಳಸಬೇಕು.

vi) ರೈಝೊಬಿಯಂ ಮತ್ತು ಮೈಕೋರೈಝಾಗಳಲ್ಲಿ, ಬೆಳೆಗೆ, ನಿರ್ಧಿಷ್ಟಪಡಿಸಿದ ಗೊಬ್ಬರವನ್ನೆ ಬಳಸಬೇಕು.