ಆಝೋಟೋಬ್ಯಾಕ್ಟರ್

) ಪ್ರಮುಖ ವಿವರಗಳು: ಅಝೋಟೋಬ್ಯಾಕ್ಟರ್ ಬಗ್ಗೆ ಕೆಳಗಿನ ಪ್ರಮುಖ ವಿವರಗಳು ಅರಿತಿರಬೇಕು.

 • ಆಝೋಟೋಬ್ಯಾಕ್ಟರ್ ಮಣ್ಣಿನಲ್ಲಿ ಜೀವಿಸಿ, ಹವೆಯಲ್ಲಿರುವ ಸಾರಜನಕ ವಾಯುವನ್ನು ಸ್ವ – ಸಾಮರ್ಥ್ಯದಿಂದ ಸ್ಥಿರೀಕರಿಸಬಲ್ಲ ಬ್ಯಾಕ್ಟಿರಿಯಾ.
 • ಬಿಜೆರಿಂಕ್ ಎಂಬ ವಿಜ್ಞಾನಿ ೧೯೦೧ರಲ್ಲಿ ಈ ಸೂಕ್ಷ್ಮ ಜೀವಿಯನ್ನು ಕಂಡು ಹಿಡಿದರು.
 • ಈ ಸೂಕ್ಷ್ಮ ಜೀವಿಯು ೨೦ನೇ ಶತಮಾನದ ಪ್ರಾರಂಭದಲ್ಲಿ ರಷ್ಯಾ ಮತ್ತು ಪೋಲೆಂಡ್ ದೇಶಗಳಲ್ಲಿ ಅತಿ ಮಹತ್ವವನ್ನು ಪಡೆಯಿತು.
 • ಇದು ತನ್ನ ಜೀವಕೋಶದಲ್ಲಿರುವ ನೈಟ್ರೋಜಿನೆಸ್ ಎಂಬ ಕಿಣ್ವದ ಸಹಾಯದಿಂದ ಸಾರಜನಕವನ್ನು ಸ್ಥಿರೀಕರಿಸುತ್ತದೆ.
 • ತನಗೆ ಬೇಕಾದ ಶಕ್ತಿಯನ್ನು ಆಝೊಟೋಬ್ಯಾಕ್ಟರ್ ಸೂಕ್ಷ್ಮ ಜೀವಿಯು, ಮಣ್ಣಿನಲ್ಲಿರುವ ಸಾವಯವ ಪದಾರ್ಥದಿಂದ ಪಡೆಯುತ್ತದೆ.
 • ಅಝೊಟೋಬ್ಯಾಕ್ಟರ್ ಆಮ್ಲಜಕವಿರುವಾಗ ಮಾತ್ರ ತನ್ನ ಚಟುವಟಿಕೆಯನ್ನು ನಡೆಸಬಲ್ಲದು.

) ಪ್ರಯೋಜನಕಾರಿ ಗುಂಪುಗಳು :ಆಝೋಟೋಬ್ಯಾಕ್ಟರ್ ಸೂಕ್ಷ್ಮ ಜೀವಿಗಳು ಆಝೊಟೋಬ್ಯಾಕ್ಟಿರೀಯೇಸಿ ಎಂಬ ಕುಟುಂಬಕ್ಕೆ ಸೇರಿವೆ. ಇವುಗಳಲ್ಲಿ ೬ ಪ್ರವರಗಳಿವೆ. ಅಝೋಟೊಬ್ಯಾಕ್ಟರ್ ಪೋಸ್ಪೋಲಾಯ್, ಅಝೊಟೊಬ್ಯಾಕ್ಟರ್ ಕ್ರೋಕೊಕಂ, ಆಝೊಟೊಬ್ಯಾಕ್ಟರ್, ಬಿಜೆರಿಂಕ್, ಅಝೊಟೊಬ್ಯಾಕ್ಟರ್ ವಿನೆಲ್ಯಾಂಡೀ, ಅಝೊಟೊಬ್ಯಾಕ್ಟರ್ ಇನ್‌ಸಿಗ್ನಿಸ್ ಮತ್ತು ಅಝೊಟೊಬ್ಯಾಕ್ಟರ್ ಮ್ಯಾಕ್ರೋ ಸೈಟೋಜಿನೇಸ್. ಈ ಪ್ರವರಗಳಲ್ಲಿ ಮೊದಲು ಮೂರು ಪ್ರವರಗಳು ಜೈವಿಕ ಗೊಬ್ಬರಗಳ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಕೆಯಲ್ಲಿವೆ.

) ಅಝೊಟೊಬ್ಯಾಕ್ಟರ್ ಜೈವಿಕ ಗೊಬ್ಬರದ ತಯಾರಿಕೆ :

 • ಅಝೋಟೋಬ್ಯಾಕ್ಟರಗಳು ಸಸ್ಯದ ಬೇರಿನ ಸುತ್ತ ವಾಸಿಸುತ್ತವೆ. ಅವನ್ನು ಮಣ್ಣಿನಿಂದ ಸಂಗ್ರಹಿಸಿ, ಪ್ರಯೋಗ ಶಾಲೆಯಲ್ಲಿ ಬೇರ್ಪಡಿಸಿ, ಶುದ್ಧೀಕರಿಸಿ, ಸೂಕ್ತ ಮಾಧ್ಯಮದಲ್ಲಿ ಬೆಳೆಸಬೇಕು.
 • ಬೇಕಾಗುವಷ್ಟು ಸಂಖ್ಯೆಯಲ್ಲಿ, ಈ ಜೀವಾಣುಗಳು ಅಭಿವೃದ್ಧಿಗೊಂಡ ನಂತರ ರೈಝೋಬಿಯಂ ನಲ್ಲಿ ಮಾಡಿದಂತೆ ಸೂಕ್ತ ವಹನ ವಸ್ತುವಿನೊಡನೆ ಮಿಶ್ರಮಾಡಿ ೨೦೦ ಗ್ರಾಂ, ೫೦೦ ಗ್ರಾಂ ಇಲ್ಲವೇ ಒಂದು ಕಿ.ಗ್ರಾಂ ಮಿಶ್ರಣವನ್ನು , ಪಾಲಿಥೀನ್‌ ಚೀಲಗಳಲ್ಲಿ ತುಂಬಿ ಬಾಯಿಯನ್ನು ಭದ್ರಪಡಿಸಬೇಕು.
 • ಪ್ರತಿ ಚೀಲದ ಮೇಲೆ ಗೊಬ್ಬರಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು (ರೈಝೋಬಿಯಂ ಜೈವಿಕ ಗೊಬ್ಬರದಲ್ಲಿ ಹೇಳಿದಂತೆ) ಮುದ್ರಿಸಬೇಕು.

) ಅಝೋಟೋಬ್ಯಾಕ್ಟರ್ ಜೈವಿಕ ಗೊಬ್ಬರದ ಪ್ರಯೋಜನಗಳು : ಅಝೋಟೋ ಬ್ಯಾಕ್ಟರ್ ಜೈವಿಕ ಗೊಬ್ಬರದಿಂದ ಹಲವು ಪ್ರಯೋಜನಗಳಿವೆ. ಪ್ರಮುಖವಾದವು ಕೆಳಗಿನಂತಿವೆ.

 • ಅಝೋಟೋಬ್ಯಾಕ್ಟರ್ ಜೀವಾಣುಗಳು ಹೆಕ್ಟೇರಿಗೆ ೧೦ ರಿಂದ ೨೦ ಕಿ.ಗ್ರಾಂ. ಸಾರಜನಕವನ್ನು ಸ್ಥೀರೀಕರಿಸುತ್ತವೆಯೆಂದು ಅಂದಾಜು ಮಾಡಲಾಗಿದೆ.
 • ಈ ಸೂಕ್ಷ್ಮ ಜೀವಿಗಳು ಇಂಡೋಲ್ ಅಸಿಟಿಕ್ ಆಮ್ಲ, ಜಿಬ್ಯ್ರಾಲಿಕ್ ಆಮ್ಲ ಮತ್ತು ಸೈಟೋಕೈನಿನ್‌ಮುಂತಾದ ಹಲವು ಪ್ರಯೋಜನಕಾರಿ ದ್ರವ್ಯಗಳನ್ನು ಉತ್ಪಾದಿಸುತ್ತವೆ. ಈ ದ್ರವ್ಯಗಳು ಸಸ್ಯಗಳ ಸತ್ವವನ್ನು ಹೆಚ್ಚಿಸಿ ಆರೋಗ್ಯವನ್ನು ವರ್ಧಿಸುತ್ತವೆ ಮತ್ತು ದ್ಯುತಿ ಸಂಶ್ಲೇಷಣೆಯ ಅವಧಿಯನ್ನು ಹೆಚ್ಚಿಸುತ್ತವೆ.
 • ಬೇಳೆ ಕಾಳು ವರ್ಗಕ್ಕೆ ಸೇರಿದ ಹಲವು ಬೆಳೆಗಳಿಗೆ ಇದು ಪ್ರಯೋಜನಕಾರಿ ಎನಿಸಿದೆ. ಬತ್ತ, ಗೋಧಿ, ಹತ್ತಿ, ಬದನೆ, ಈರುಳ್ಳಿ ಇತ್ಯಾದಿ ಬಗೆಯ ತೋಟಗಾರಿಕೆ ಬೆಳೆಗಳಿಗೆ ಮಳೆಯಾಶ್ರಯದ ಮತ್ತು ನೀರಾವರಿ ಸೌಕರ್ಯವಿರುವ ಪರಿಸ್ಥಿತಿಗಳೆರಡರಲ್ಲಿಯೂ ಈ ಗೊಬ್ಬರವನ್ನು ಬಳಸಬಹುದು.
 • ಸಸ್ಯಗಳಲ್ಲಿ ರೋಗವನ್ನುಂಟು ಮಾಢುವ ಅಸ್ಪರ್ಜಿಲ್ಲಸ್ ಮತ್ತು ಪ್ಯುಸೇರಿಯಂಗ ಳಂತಹ ಶಿಲೀಂದ್ರಗಳ ಬೆಳವಣಿಗೆಯನ್ನು ಅಝೋಟೋಬ್ಯಾಕ್ಟರ್ ಕೆಲ ಮಟ್ಟಿಗೆ ತಡೆಯಬಲ್ಲದೆಂದು ಕಂಡು ಬಂದಿದೆ.

ಸ್ಥೀರೀಕರಣಗೊಂಡ ಸಾರಜನಕದ ಪ್ರಮಾಣವೊಂದನ್ನೇ ಪರಿಗಣಿಸಿದಾಗ ಆಝೋಟೊಬ್ಯಾಕ್ಟರ್ ಅಷ್ಟೇನೂ ಪ್ರಯೋಜನಕಾರಿಯೆಂದು ಕಂಡುಬರದಿದ್ದರೂ ಈ ಅಣುಗೊಬ್ಬರದಿಂದ ದೊರೆಯುವ ಇತರೆ ಲಾಭಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಗೊಬ್ಬರವು ಮಹತ್ವದ್ದೆನ್ನಿಸಬಹುದು. ಈ ಸೂಕ್ಷ್ಮ ಜೀವಿಗಳು ಸಮರ್ಥ ರೀತಿಯಿಂದ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾದರೆ ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೭ ಅಥವಾ ಅದಕ್ಕಿಂತ ಸ್ವಲ್ಪ ಅಧಿಕವಾಗಿರಬೇಕು. ಇದಲ್ಲದೇ ಮಣ್ಣಿನಲ್ಲಿ ಸಾಕಷ್ಟು ಸಾವಯವ ಪದಾರ್ಥವಿರಬೇಕಲ್ಲದೇ ಆಮ್ಲಜಕನವೂ ದೊರೆಯಬೇಕು.

) ಆಝೋಟೊಬ್ಯಾಕ್ಟರ್ ಜೈವಿಕ ಗೊಬ್ಬರವನ್ನು ಬಳಸುವ ವಿಧಾನಗಳು : ಆಝೋಟೊಬ್ಯಾಕ್ಟರ್ ಜೈವಿಕ ಗೊಬ್ಬರವನ್ನು ಹಲವು ವಿಧಾನಗಳಿಂದ ಬಳಸಲು ಸಾಧ್ಯವಿದೆ. ಅವುಗಳಲ್ಲಿ ಪ್ರಮುಖ ವಿಧಾನಗಳು ಕೆಳಗಿನಂತಿವೆ.

i) ರೈಝೋಬಿಯಂ ನಲ್ಲಿ ವಿವರಿಸಿದಂತೆ, ಬೀಜಗಳನ್ನು ಈ ಜೈವಿಕ ಗೊಬ್ಬರದಿಂದ ಲೇಪಿಸಬಹುದು.

ii) ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಇತರೆ ಸೂಕ್ತ ವಸ್ತುಗಳನ್ನು ಬಳಸಿ ಬೀಜಗಳನ್ನು ಗುಳಿಗೆಗಳಾಗಿ ಪರಿವರ್ತಿಸಬಹುದು.

iii) ಗೊಬ್ಬರದ ‘ದ್ರಾವಣ’ದಲ್ಲಿ ಸಸಿಯ ಬೇರು ಅಥವಾ ಸಸ್ಯದ ಕಾಂಡಗಳನ್ನು ೫ ರಿಂದ ೧೦ ನಿಮಿಷಗಳವರೆಗೆ ಅದ್ದಿ ತೆಗೆದು, ಕೂಡಲೇ ನೆಡಬಹುದು. ಒಂದು ಕಿ.ಗ್ರಾಂ ಜೈವಿಕಗೊಬ್ಬರವನ್ನು ೧೦ ರಿಂದ ೧೫ ಲೀಟರ್ ನೀರಿನಲ್ಲಿ ಕದಡಿ ಸಸಿಯ ಬೇರುಗಳನ್ನು ೫ – ೧೦ ನಿಮಿಷಗಳವರೆಗೆ ಅದ್ದಿ ತೆಗೆದು, ಕೂಡಲೇ ನೆಡಬೇಕು. ಕಬ್ಬಿನ ಗಣಿಕೆ, ಆಲೂಗಡ್ಡೆಯ ತುಂಡುಗಳು, ಹಣ್ಣು ಅಥವಾ ಹೂವಿನ ಗಿಡಗಳ ಕಾಂಡಗಳನ್ನು ಉಪಚರಿಸಲು ೫೦ ರಿಂದ ೬೦ ಲೀಟರು ನೀರಿಗೆ ಒಂದು ಕಿ.ಗ್ರಾಂ. ಅಣುಜೀವಿ ಗೊಬ್ಬರ ಹಾಕಿ ತಯಾರಿಸಿದ ದ್ರಾವಣವನ್ನು ಬಳಸಬೇಕು. ಇಲ್ಲವೇ ಈ ದ್ರಾವಣವನ್ನು ಸೋಸಿ ಬಂದ ಕಲ್ಮಶ ರಹಿತ ದ್ರಾವಣವನ್ನು ಕಬ್ಬಿನ ಗಣಿಕೆ ಮುಂತಾದ ಸಸ್ಯದ ಅಂಗಗಳ ಮೇಲೆ ಸಿಂಪಡಿಸಬಹುದು. ಹಾಗೆ ಮಾಡುವಾಗ ಪ್ರತಿ ತುಂಡಿಗೂ ಗೊಬ್ಬರವು ಸರಿಯಾಗಿ ತಗಲುವಂತೆ ಮಾಡಲು ತುಂಡುಗಳನ್ನು ಮೇಲೆ ಕೆಳಗೆ ಮಾಡುತ್ತಿರಬೇಕು.

iv) ಪೂರೈಸಬೇಕೆಂದಿರುವ ಪ್ರಮಾಣದ ಜೈವಿಕ ಗೊಬ್ಬರವನ್ನು ಸ್ವಲ್ಪ ಪ್ರಮಾಣದ ಮಣ್ಣಿನೊಡನೆ ಅಥವಾ ಪುಡಿ ಗೊಬ್ಬರದೊಡನೆ ಮಿಶ್ರಮಾಡಿ ಕೊನೆಯ ಸಲ ಉಳುಮೆ ಮಾಢುವ ಮೊದಲು ಮಣ್ಣಿನ ಮೇಲೆ ಬೀರಿ ನಂತರ ಉಳುಮೆ ಮಾಡಿ ಮಣ್ಣಿನಲ್ಲಿ ಸೇರಿಸಬೇಕು.

) ಆಝೋಟೊಬ್ಯಾಕ್ಟರ್‌ನ ಸಮರ್ಥ ಕಾರ್ಯ ಚಟುವಟಿಕೆಗಳಿಗೆ ಇರಬೇಕಾದ ಪರಿಸರ : ಕೆಳಗೆ ತಿಳಿಸಿದ ಪರಿಸರವಿದ್ದಾಗ, ಆಝೊಟೋಬ್ಯಾಕ್ಟರಗಳ ಚಟುವಟಿಕೆಯು ಉನ್ನತ ಮಟ್ಟದಲ್ಲಿರುತ್ತದೆ.

 • ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ದೊರೆಯಬೇಕು.
 • ಅಧಿಕ ಉಷ್ಣತಾಮಾನವು ಅಪಾಯಕಾರಿ. ಈ ಜೀವಾಣುಗಳು ೩೦ – ೩೫ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನವನ್ನು ತಡೆದುಕೊಳ್ಳಬಲ್ಲದು.
 • ಆಮ್ಲ – ಕ್ಷಾರ ನಿರ್ದೆಶಕವು ೭ ರಿಂದ ೭.೫ ಇದ್ದರೆ ಇವುಗಳಿಗೆ ಅನುಕೂಲ.
 • ಸುಣ್ಣ, ಸಾವಯವ ರೂಪದ ಸಾರಜನಕದ ಮತ್ತು ಇತರೆ ಪೋಷಕಗಳು ಇರುವುದು ಈ ಸೂಕ್ಷ್ಮ ಜೀವಿಗಳಿಗೆ ಅವಶ್ಯ.
 • ಲವಣಯುತ ಪರಿಸರವು ಆಝೋಟೊಬ್ಯಾಕ್ಟರ್ ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಆಝೋಸ್ಟೈರಿಲ್ಲಂ : ಬೀಜೆರಿಂಕ್ ಎಂಬುವರು ಸ್ಟೈರಿಲಂ ಎಂಬ ಬ್ಯಾಕ್ಟೀರಿಯಾ, ಸಾರಜನಕವನ್ನು ಸ್ಥಿರೀಕರಿಸಬಲ್ಲದೆಂದು ೧೯೨೫ರಲ್ಲಿ ತಿಳಿಸಿದ್ದರೂ ಅದನ್ನು ಸಿದ್ಧಪಡಿಸಲಾಗಲಿಲ್ಲ. ಆದರೆ ಈ ದಿಸೆಯಲ್ಲಿ ಅಧ್ಯಯನವನ್ನು ಮುಂದುವರಿಸಿದ ಇತರೆ ವಿಜ್ಞಾನಿಗಳು ಈ ಸೂಕ್ಷ್ಮ ಜೀವಿಗೆ ಸಾರಜನಕವನ್ನು ಸ್ಥಿರೀಕರಿಸುವ ಸಾಮರ್ಥ್ಯವಿರುವುದನ್ನು ತೋರಿಸಿ ಕೊಟ್ಟರಲ್ಲದೇ ಹಲವು ಹುಲ್ಲುಗಳು, ಜೋಳ, ಮುಸುಕಿನ ಜೋಳ, ಗೋದಿ ಮುಂತಾದ ಬೆಳೆಗಳ ಬೇರಿನ ಸಮೀಪ ಸ್ಥೀರೀಕರಣಗೊಳ್ಳುವ ಸಾರಜನಕಕ್ಕೆ ಸ್ಟೇರಿಲ್ಲಂ ಎಂಬ ಸೂಕ್ಷ್ಮ ಜೀವಿಯೇ ಕಾರಣವೆಂಬುವುದನ್ನು ತೊರಿಸಿಕೊಟ್ಟರು. ಸ್ಟೈರಿಲ್ಲಂ ಜೀವಿಗೆ ನಂತರ ಅಝೋಸ್ಟೇರಿಲಂ ಎಂಬ ಹೊಸ ಹೆಸರನ್ನಿಡಲಾಯಿತು. ಈ ಸೂಕ್ಷ್ಮ ಜೀವಿಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಕೆಳಗೆ ಕೊಡಲಾಗಿದೆ.

) ವೈಶಿಷ್ಟ್ಯ : ಮೇಲೆ ಸೂಚಿಸಿದಂತೆ ಪೋಯೇಸಿ ಕುಟುಂಬಕ್ಕೆ ಸೇರಿದ ಹಲವು ಬೆಳೆಗಳ ಬೇರಿನೊಡನೆ ಸಹಜೀವನವನ್ನು ಸಾಗಿಸಿ ಆಜೋಸ್ಟೇರಿಲ್ಲಂ ಗಾಳಿಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸುತ್ತದೆ. ಬೇರಿನ ಮೇಲ್ಮೈ ಈ ಬ್ಯಾಕ್ಟೀರಿಯಾ ಪಸರಿಸುತ್ತದೆಯಲ್ಲದೇ, ಬೇರಿನ ಒಳಗೂ ಸೇರಿಕೊಳ್ಳುತ್ತದೆ. ಆದರೆ ರೈಝೋಬಿಯಂ ನಂತೆ ಬೇರುಗಳ ಗಂಟುಗಳನ್ನು ನಿರ್ಮಿಸುವುದಿಲ್ಲ.

 • ಆಝೋಸ್ಟೈರಿಲ್ಲಂ ಉಷ್ಣ, ಸಮಶೀತೋಷ್ಣ ಮತ್ತು ಶೀತ ಪ್ರದೇಶದ ಬೆಳೆಗಳೊಡನೆ ಸಹಜೀವನವನ್ನು ನಡೆಸಬಲ್ಲದಾದರೂ ೩೦ ರಿಂದ ೩೫ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನವು ಈ ಜೀವಿಯ ಬೆಳವಣಿಗೆಗೆ ಉತ್ತಮವೆನಿಸಿದೆ.
 • ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೬.೫ – ೭.೦ ಇದ್ದರೆ ಈ ಸೂಕ್ಷ್ಮ ಜೀವಿಗೆ ಅನುಕೂಲ. ಆದರೆ ಆಮ್ಲ ಮಣ್ಣಿನಲ್ಲಿಯೂ ಇದು ಬದುಕಬಲ್ಲದು.

) ಪ್ರಬೇಧಗಳು :ಮೊದಲು ಈ ಕೆಳಗಿನ ಪ್ರಬೇಧಗಳನ್ನು ಗುರುತಿಸಲಾಗಿತ್ತು :

 • ಆಝೋಸ್ಟೈರಿಲ್ಲಂ ಲಿಪೋಫೆರಂ
 • ಅಝೋಸ್ಟೈರಿಲ್ಲಂ ಬ್ರಾಸಿಲೆನ್ಸ್

ಅನಂತರ, ಕಬ್ಬು, ಬತ್ತ, ಜೋಳ ಮತ್ತು ಮುಸುಕಿನ ಜೋಳದ ಬೇರುಗಳಿಂದ ಇನ್ನೆರಡು ಹೊಸ ಪ್ರಭೇದಗಳನ್ನು ಬೇರ್ಪಡಿಸಲಾಗಿದೆ:

i) ಅಮಾಝೋನೆನ್ಸ್ : ಈ ಪ್ರಬೇಧದ ಜೀವಿಗಳು ಮಣ್ಣಿನ ಆಮ್ಲತೆಯನ್ನು ತಡೆದುಕೊಳ್ಳಬಲ್ಲವಲ್ಲದೇ ಸಕ್ಕರೆಯನ್ನು ಬಳಸಿಕೊಳ್ಳಬಲ್ಲವು. ಕಬ್ಬು ಮತ್ತು ಸಿಹಿ ಜೋಳದ ಬೆಳೆಗಳಲ್ಲಿ ಈ ಸೂಕ್ಷ್ಮ ಜೀವಿಗಳು ಹೆಚ್ಚಾಗಿ ಕಂಡುಬರುತ್ತವೆ.

ii) ಹ್ಯಾಲೋಪ್ರಫರ್ನ್ಸ್ : ಪಾಕಿಸ್ತಾನದಲ್ಲಿ ಬೆಳೆಯುವ ಹುಲ್ಲೊಂದರ ಬೇರುಗಳಿಂದ ಈ ಸೂಕ್ಷ್ಮ ಜೀವಿಯನ್ನು ಬೇರ್ಪಡಿಸಲಾಗಿದೆ. ಅಧಿಕ ಉಷ್ಣತಾಮಾನದಲ್ಲಿ (೪೧ ಡಿ.ಸೆ.) ಮತ್ತು ಲವಣವಿರುವ ಮಣ್ಣಿನಲ್ಲಿ ಇದು ಬೆಳೆಯಬಲ್ಲದು.

) ಪ್ರಯೋಜನಗಳು : ಆಝೋಸ್ಟೈರಿಲ್ಲಂ ಜೀವಿಗಳಿಂದ ಕೆಳಗಿನ ಪ್ರಯೋಜನಗಳಿವೆ.

 • ಅಝೋಸ್ಟೇರಿಲ್ಲಂ ಆಝೊಟೋಬ್ಯಾಕ್ಟಿರಿಯಾಗಿಂತ ಅಧಿಕ ಪ್ರಮಾಣದಲ್ಲಿ ಸಾರಜನಕ ವನ್ನು ಸ್ಥಿರೀಕರಿಸುತ್ತದೆ. ಪ್ರತಿ ಹೆಕ್ಟೇರಿಗೆ ೨೦ ರಿಂದ ೪೦ ಕಿ.ಗ್ರಾಂ. ಸಾರಜನಕವನ್ನು ಸ್ಥೀರೀಕರಿಸಬಲ್ಲದೆಂದು ಅಂದಾಜು ಮಾಡಲಾಗಿದೆ.
 • ಇಂಡೋಲ್ ಅಸಿಟಿಕ್ ಆಮ್ಲ, ಜೆಬ್ರಲಿನ್ಸ, ಸೈಟೋಕೈನಿನ್ಸ್ ಮತ್ತು ಬೆಳವಣಿಗೆಯನ್ನು ಪ್ರಚೋದಿಸುವ ಇತರ ರಾಸಾಯನಿಕಗಳನ್ನು ಆಝೋಸ್ಟೈರಿಲ್ಲಂ ನಿರ್ಮಿಸುತ್ತದೆ. ಇವೆಲ್ಲವುಗಳ ಪ್ರಭಾವದಿಂದ ಬೆಳೆಗಳ ಬೇರುಗಳು ಚೆನ್ನಾಗಿ ಅಭಿವೃದ್ಧಿ ಗೊಳ್ಳುತ್ತವೆ.
 • ಬತ್ತ, ರಾಗಿ, ಸಜ್ಜೆ, ಜವೆಗೋಧಿ, ಜೋಳ, ಕಬ್ಬು, ಚಹ, ಕಾಫೀ, ತರಕಾರಿ ಬೆಳೆಗಳು, ಮೇವಿನ ಬೆಳೆಗಳು, ಹೂವಿನ ಬೆಳೆಗಳು, ಹಣ್ಣಿನ ಬೆಳೆಗಳು, ಮೊದಲಾದ ಹಲವು ಬಗೆಯ ಬೆಳೆಗಳು ಇಳುವರಿಯನ್ನು ಈ ಜೀವಾಣು ಅಧಿಕಗೊಳಿಸುತ್ತದೆ.
 • ಈ ಜೈವಿಕ ಗೊಬ್ಬರವನ್ನು ಬಳಸಿದಾಗ ಬೆಳೆಗೆ ಕೊಡಬೇಕೆಂದಿರುವ ಸಾರಜನಕ ಗೊಬ್ಬರದ ಪ್ರಮಾಣದಲ್ಲಿ ಶೇಕಡಾ ಸುಮಾರು ೨೫ ರಷ್ಟು ಉಳಿತಾಯವನ್ನು ಮಾಡಲು ಸಾಧ್ಯವೆಂದು ಕಂಡುಬಂದಿದೆ.

) ಆಝೋಸ್ಟೈರಿಲಂ ಕಾರ್ಯಚಟುವಟಿಕೆಯ ಮೇಲೆ ಪರಿಣಾಮವನ್ನು ಬೀರುವ ಸಂಗತಿಗಳು :

 • ಅಝೋಸ್ಟೈರಿಲಂ ಸರಿಯಾಗಿ ಕೆಲಸವನ್ನು ಮಾಡಬೇಕಾದರೆ ಸೂಕ್ತ ಪ್ರಮಾಣದಲ್ಲಿ ಆಮ್ಲಜಕದ ಪೂರೈಕೆಯಾಗಬೇಕು.
 • ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೬.೫ ರಿಂದ ೭ರ ಸನಿಹದಲ್ಲಿದ್ದು, ಉಷ್ಣತಾಮಾನವು ೩೨ ರಿಂದ ೩೫ ಡಿ.ಸೆ. ಮಿತಿಯಲ್ಲಿ ಇದ್ದರೆ ಅನುಕೂಲ.
 • ಮಣ್ಣಿನ ಸಾವಯವ ಪದಾರ್ಥವು ಅಧಿಕ ಪ್ರಮಾಣದಲ್ಲಿದ್ದರೆ ಅಝೋಸ್ಟೇರಿಲ್ಲಂ ಚಟುವಟಿಕೆಯು ಉನ್ನತ ಮಟ್ಟದಲ್ಲಿರುತ್ತದೆ.

) ಅಝೋಸ್ಟೈರಿಲ್ಲಂ ಜೈವಿಕ ಗೊಬ್ಬರದ ಬಳಕೆಯ ವಿಧಾನ : ಬಳಕೆಯ ಎಲ್ಲ ವಿವರಗಳು ಆಝೋಟೊಬ್ಯಾಕ್ಟರ್ ನಲ್ಲಿ ಇದ್ದಂತೆಯೇ ಇವೆ.

ನೀಲಿಹಸುರು ಪಾಚಿ : ನೀಲಿ – ಹಸುರು ಪಾಚಿಗೆ ಸಯನೋಬ್ಯಾಕ್ಟೀರಿಯಾ ಎಂಬ ಹೆಸರು ಇದೆ. ಪಾಚಿಯಲ್ಲಿ ಪತ್ರಹರಿತ ಇರುವುದರಿಂದ ಸೂರ್ಯನ ಪ್ರಕಾಶದಲ್ಲಿ ಮೇರ್ಲ್ಗದ ಸಸ್ಯಗಳಂತೆ ಇಂಗಾಲಾಮ್ಲ ಮತ್ತು ನೀರನ್ನು ಸಂಯೋಝಿಸಿ (ದ್ಯುತಿ ಸಂಶ್ಲೇಷಣೆಯಿಂದ) ತನಗೆ ಬೇಕಾದ ಆಹಾರವನ್ನು ಸ್ವತಃ ತಯಾರಿಸಿ ಕೊಳ್ಳಬಲ್ಲದಲ್ಲದೇ ಈ ಏಕಾಣು ಜೀವಿಯು ಹವೆಯೊಳಗಿರುವ ಸಾರಜನಕ ವಾಯುವನ್ನು ಸ್ಥಿರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ನೀಲಿ – ಹಸುರು ಪಾಚಿಗಳ ಬಗ್ಗೆ ಪ್ರಯೋಜನಕಾರಿ ಎನಿಸಿದ ಪ್ರಮುಖ ವಿಷಯಗಳನ್ನು ಇಲ್ಲಿ ಕೊಡಲಾಗಿದೆ.

. ಪ್ರಬೇಧಗಳು : ನಿಂತ ನೀರಿನಲ್ಲಿ ಬೆಳೆಯುವ ಸ್ವಭಾವವಿರುವ ನೀಲಿ ಹಸುರು ಪಾಚಿಯ ಬತ್ತದ ಗದ್ದೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಹಲವು ಪ್ರಬೇಧಗಳಿಗೆ ಸೇರಿದ ನೀಲಿ – ಹಸಿರು ಪಾಚಿಗಳು ಬತ್ತದ ಗದ್ದೆಯಲ್ಲಿವೆಯೆಂದು ಸಮೀಕ್ಷೆಯಿಂದ ಕಂಡು ಬಂದಿದೆ. ಸಾರಜನಕದ ಸ್ಥಿರೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪ್ರಬೇಧಗಳು ಕೆಳಗಿನಂತಿವೆ :

* ಅನಾಬಿನಾ * ಕೆಲೋಥ್ರಿಕ್ಸ್ * ಮಾಸ್ಟಿಗೋಕ್ಲಾಡಸ್ * ಅನಾಬಿನೋಪ್ಸಿಸ್ * ಸೈಟೋನಿಮಾ * ಸ್ಟಿಗೋನೆಮಾ * ಅಲೋಸಿರಾ * ಟೋಲಿಪೋಥ್ರಿಕ್ಸ್ * ವೆಸ್ಟಿಯೆಲ್ಲಾ * ಸಿಲಿಂಡ್ರೋಸ್ಟರ್ನಂ * ಪಿಶೆರೆಲ್ಲಾ * ವೆಸ್ಟಿಯೆಲ್ಲೋಪ್ಸಿಸ್ * ನೊಸ್ಟೋಕ್ * ಹೆಪಲೋಸಿಫೋನ್

ನೀಲಿ – ಹಸುರು ಪಾಚಿಯನ್ನು ಹೋಲುವ ಹಸುರು ಬಣ್ಣದ ಕೆಲವು ಪಾಚಿಗಳಿವೆ. ಆದರೆ ಅವು ಸಾರಜನಕವನ್ನು ಸ್ಥಿರೀಕರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಬರಿಗಣ್ಣಿನಿಂದ ಇವೆರಡು ಗುಂಪಿಗೆ ಸೇರಿದ ಪಾಚಿಗಳನ್ನು ಸರಿಯಾಗಿ ಗುರುತಿಸುವುದು ಸಾಧ್ಯವಾಗಲಾರದು. ಅಂತಹ ಪ್ರಸಂಗದಲ್ಲಿ ‘ಅಯೋಡಿನ್‌ಪರೀಕ್ಷೆ’ ಯಿಂದ ಅವುಗಳನ್ನು ನಿಖರವಾಗಿ ಗುರುತಿಸಬಹುದು. ಹಸುರು ಪಚಿಯ ಮೇಲೆ ಅಯೋಡಿನ್‌ ದ್ರಾವಣದ ಕೆಲವು ಹನಿಗಳನ್ನು ಹಾಕಿದರೆ ಪಾಚಿಯು ಕಡು ನೀಲಿಬಣ್ಣಕ್ಕೆ ತಿರುಗುತ್ತದೆ. ಆದರೆ ಅಯೋಡಿನ್‌ ದ್ರಾವಣವು ನೀಲಿ – ಹಸಿರು ಪಾಚಿಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

. ಪಾಚಿಯ ಜೈವಿಕ ಗೊಬ್ಬರವನ್ನು ಪೂರೈಸುವ ಪ್ರಮಾಣ ಮತ್ತು ಅದರಿಂದಾಗುವ ಪ್ರಯೋಜನಗಳು :

 • ಬತ್ತದ ಸಸಿಗಳನ್ನು ನಾಟಿ ಮಾಡಿದ ಒಂದುವಾರದ ನಂತರ ಪ್ರತಿ ಹೆಕ್ಟೇರಿಗೆ ೧೦ ಕಿ.ಗ್ರಾಂ. ನೀಲಿ ಹಸುರು ಪಾಚಿಯ ಜೈವಿಕ ಗೊಬ್ಬರವನ್ನು ಪೂರೈಸಬೇಕು.
 • ಪಾಚಿಯು ಒಂದು ಹಂಗಾಮಿನಲ್ಲಿ ಪ್ರತಿ ಹೆಕ್ಟೇರಿಗೆ ೨೫ ರಿಂದ ೩೦ ಕಿ.ಗ್ರಾಂ ಸಾರಜನಕವನ್ನು ಸ್ಥಿರೀಕರಿಸುತ್ತದೆ.
 • ಮೇಲೆ ತಿಳಿಸಿದ ಪ್ರಮಾಣದಲ್ಲಿ ಜೈವಿಕ ಗೊಬ್ಬರವನ್ನು ಗದ್ದೆಗೆ ಪೂರೈಸಿದರೆ ಶೇಕಡಾ ೧೦ ರಿಂದ ೧೫ ರಷ್ಟು ಅಧಿಕ ಇಳುವರಿಯು ದೊರೆಯುವುದೆಂದು ತಿಳಿದುಬಂದಿದೆ.
 • ಹಲವು ಪ್ರದೇಶಗಳಲ್ಲಿ ಭತ್ತದ ಬೆಳೆಯ ಮೇಲೆ ನಡೆಸಿದ ಸಂಶೋಧನೆಗಳಿಂದ ಕೆಳಗಿನ ಸಂಗತಿಗಳು ತಿಳಿದುಬಂದಿವೆ.
  • ಪಾಚಿಯ ಜೈವಿಕ ಗೊಬ್ಬರವನ್ನು ಪೂರೈಸುವುದರಿಂದ ಕೊಡಬೇಕೆಂದಿರುವ ಸಾರಜನಕ ಗೊಬ್ಬರದಲ್ಲಿ ಉಳಿತಾಯವನ್ನು ಮಾಡಬಹುದು.
  • ನಿರಂತರವಾಗಿ ಬತ್ತದ ೩ – ೪ ಬೆಳೆಗಳಿಗೆ ಈ ಜೈವಿಕ ಗೊಬ್ಬರವನ್ನು ಪೂರೈಸಿದರೆ, ಮಣ್ಣಿನಲ್ಲಿ ಪಾಚಿಯ ಸಂಖ್ಯೆಯು ಗಣನೀಯವಾಗಿ ಹೆಚ್ಚುವುದರಿಂದ ನಂತರದ ಬತ್ತದ ಬೆಳೆಗೆ ಪಾಚಿಯನ್ನು ಹೊರಗಿನಿಂದ ಪೂರೈಸುವ ಅವಶ್ಯಕತೆಯಿಲ್ಲ.
  • ನೀಲಿ – ಹಸುರು ಬಣ್ಣದ ಪಾಚಿಯು ಹವೆಯೊಳಗಿನ ಸಾರಜನಕ ವಾಯುವನ್ನು ಸ್ಥೀರೀಕರಿಸುವುದಲ್ಲದೇ ಬೆಳವಣಿಗೆಯನ್ನು ವೃದ್ಧಿಗೊಳಿಸುವ ಇಂಡೋಲ್ ಆಸಿಟಿಕ್ ಅಮ್ಲ, ಜೆಬ್ರಲಿಕ್ ಆಮ್ಲ ಇತ್ಯಾದಿ ಪ್ರಯೋಜನಕಾರಿ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತದೆ.

 . ನೀಲಿ ಹಸುರುಪಾಚಿಯ ಜೈವಿಕ ಗೊಬ್ಬರವನ್ನು ಪಡೆಯುವ ವಿಧಾನ : ಜೈವಿಕ ಗೊಬ್ಬರವನ್ನು ಕೃಷಿ ವಿಶ್ವವಿದ್ಯಾಲಯಗಳಿಂದ ಇಲ್ಲವೇ ಕೃಷಿ ಇಲಾಖೆಯ ‘ಜೈವಿಕ ಗೊಬ್ಬರ ಉತ್ಪಾದನಾ ಕೇಂದ್ರಗಳಿಂದ ಪಡೆಯಬಹುದು. ಇದರ ಬದಲು ರೈತರು ಈ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳಬಹುದು. ನೀಲಿ – ಹಸುರು ಪಾಚಿಯ ಜೈವಿಕ ಗೊಬ್ಬರವನ್ನು ತಯಾರಿಸುವ ವಿಧಾನಗಳ ವಿವರಗಳು ಕೆಳಗಿನಂತಿವೆ.

i) ಟ್ರೇ ಅಥವಾ ತೊಟ್ಟಿಗಳಲ್ಲಿ :

 • ತುಕ್ಕು ಹಿಡಿಯುವ ಕಬ್ಬಿಣದ ತಗಡಿನಿಂದ ೨ ಮೀ. ಉದ್ಧ ೧ ಮೀ. ಅಗಲ ಮತ್ತು ೨೨ರಿಂದ ೨೩ ಸೆಂ.ಮೀ. ಆಳ ಇರುವ ಟ್ರೇಗಳನ್ನು ಗೊಬ್ಬರ ತಯಾರಿಸಲು ಬಳಸಬೇಕು. ಇವುಗಳ ಬದಲು ಇಟ್ಟಿಗೆ ಮತ್ತು ಸಿಮೆಂಟಿನಿಂದ ನಿರ್ಮಿಸಿದ ತೊಟ್ಟಿಗಳನ್ನಾಗಲೀ ಸಿಮೆಂಟ್ ಕಾಂಕ್ರೀಟ್ ನಿಂದ ತಯಾರಿಸಿದ ತೊಟ್ಟಿಗಳನ್ನಾಗಲೀ ಪಾಲಿಥೀನ್‌ಹೊದಿಸಿದ ತಗ್ಗುಗಳನ್ನಾಗಲೀ ಉಪಯೋಗಿಸಬಹುದು.
 • ಪ್ರತಿ ಟ್ರೇ ಅಥವಾ ತೊಟ್ಟಿ ಇಲ್ಲವೇ ತಗ್ಗಿನಲ್ಲಿ ೧೦ ರಿಂದ ೧೫ ಕೀ.ಗ್ರಾಂ. ಮಣ್ಣು ಮತ್ತು ೨೦೦ ಗ್ರಾಂ ಸೂಪರ್ ಫಾಸ್ಪೇಟ್ ನ್ನು ಹಾಕಿ ೫, ರಿಂದ ೧೫ ಸೆಂ.ಮೀ. ಆಳವಾಗಿರುವ ನೀರನ್ನು ಪೂರೈಸಬೇಕು.
 •  ಉಪಯೋಗಿಸಿದ ಮಣ್ಣು ಹುಳಿಯಾಗಿದ್ದರೆ ಸುಣ್ಣವನ್ನು ಬೆರೆಸಿ ಆಮ್ಲ – ಕ್ಷಾರ ನಿರ್ದೆಶಕವು ೭ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಆಗುವಂತೆ ನೋಡಿಕೊಳ್ಳಬೇಕು.
 • ಮಣ್ಣು, ತಳದಲ್ಲಿ ಕುಳಿತೊಡನೆ, ನೀರಿನ ಮೇಲೆ ಮರದ ಹೊಟ್ಟನ್ನು ಉದುರಿಸಿ ಅದರ ಮೇಲೆ ಟೋಲಿಫೋಥ್ರಿಕ್ಸ್ ನೊಸ್ಟೋಕ್ ಅಥವಾ ಅನಬಿನಾ ಇವುಗಳಿರುವ ೧೫೦ ರಿಂದ ೨೦೦ ಗ್ರಾಂ ಪಾಚಿಯನ್ನು ಪುಡಿ ಮಾಡಿ ಪಸರಿಸಬೇಕು.
 • ಎಂಟು – ಹತ್ತು ದಿನಗಳಲ್ಲಿ ನೀರಿನ ಮೇಲೆ ಪಾಚಿಯು ದಪ್ಪ ಕೆನೆಯಂತೆ ತೇಲುತ್ತದೆ. ನೀರು ಅಲ್ಲಿಯೇ ಆರಿ ಹೋಗಲು ಬಿಡಬೇಕು.
 • ಒಣಗಿದ ಪಾಚಿಯನ್ನು ಹೊರತೆಗೆದು ಪಾಲಿಥೀನ್‌ಚೀಲಗಳಲ್ಲಿ ಸಂಗ್ರಹಿಸಬೇಕು.

ಮುಂಜಾಗ್ರತೆಗಳು

 • ಕೀಟ ಮತ್ತು ಬಸವನ ಹುಳುಗಳ ತೊಂದರೆಯನ್ನು ತಪ್ಪಿಸಲು ಪ್ರತಿ ಟ್ರೇ /ತೊಟ್ಟೆ/ ತೆಗ್ಗಿಗೆ ಶೇಕಡಾ ೩ರ ೨೫ ಗ್ರಾಂ. ಕಾರ್ಬೊಪ್ಲೈರಾನ್‌ಹರಳುಗಳನ್ನು ಹಾಕಬೇಕು.
 • ಪಾಚಿಯು ಬೆಳೆಯುತ್ತಿರುವಾಗ ಅದಕ್ಕೆ ಯಾವಾಗಲೂ ಹಗಲಿನ ಸಮಯದಲ್ಲಿ ಸೂರ್ಯನ ಬಿಸಿಲು ನೇರವಾಗಿ ದೊರೆಯುವಂತಿರಬೇಕು.

ii) ಗದ್ದೆಯಲ್ಲಿ : ಕೆಳಗಿನಂತೆ ಕ್ರಮಗಳನ್ನು ಕೈಗೊಳ್ಳಬೇಕು.

 • ಗದ್ದೆಯಲ್ಲಿ ೪೦ ಚ.ಮೀ. ಅಳತೆಯ ಮಡಿಯನ್ನು ಸಿದ್ಧಪಡಿಸಿ ಮಡಿಯೊಳಗೆ ೫ ರಿಂದ ೧೫ ಸೆಂ.ಮೀ. ನೀರು ಸದಾ ನಿಂತಿರುವಂತೆ ವ್ಯವಸ್ಥೆಯನ್ನು ಮಾಡಬೇಕು.
 • ಪ್ರತಿ ಮಡಿಗೆ ೨ ಕಿ.ಗ್ರಾಂ ಸೂಪರ ಫಾಸ್ಪೇಟ್ ಗೊಬ್ಬರವನ್ನು ಎಲ್ಲೆಡೆ ಸರಿಯಾಗಿ ಬೀಳುವಂತೆ ಪಸರಿಸಬೇಕು. ಪ್ರತಿ ಮಡಿಗೆ ಪಾಚಿಯನ್ನು ಪುಡಿ ಮಾಡಿ ಉದುರಿಸಬೇಕು.
 • ಕೀಟಗಳ ಬಾಧೆಯಾಗದಂತೆ ಮಾಡಲು ೨೫೦ ಗ್ರಾಂ ಕಾರ್ಬೊಫ್ಯುರಾನ್‌(೩%) ಹರಳು ಅಥವಾ ೮೦ ಮಿ.ಲೀ. ಮ್ಯಾಲಾಥಿಯಾನ್‌ಪುಡಿಯನ್ನು ಎಲ್ಲೆಡೆ ಹರಡಬೇಕು.
 • ಮೋಡಗಳು ಇರದೆ ಸರಿಯಾದ ಬಿಸಿಲು ಇದ್ದರೆ ಕಪ್ಪು ಮಣ್ಣಿನಲ್ಲಿ ಸುಮಾರು ೨ ವಾರಗಳಲ್ಲಿ ಮತ್ತು ಕೆಂಪು ಮಣ್ಣಿನಲ್ಲಿ ೩ – ೪ ವಾರಗಳಲ್ಲಿ ಪಾಚಿಯು ಸಾಕಷ್ಟು ಬೆಳೆದು ಸಂಗ್ರಹಿಸಲು ಸಿದ್ಧವಾಗುತ್ತದೆ. ಆಗ ನೀರಿನ ಮೇಲೆ ತೇಲುವ ಪಾಚಿಯನ್ನು ಹೊರತೆಗೆದು ಬಿಸಿಲಿನಲ್ಲಿ ಒಣಗಿಸಿ ಚೀಲಗಳಲ್ಲಿ ಸಂಗ್ರಹಿಸಿಡಬೇಕು.
 • ಇದೇ ಮಡಿಯನ್ನು ಬಳಸಿ ಪ್ರತಿ ೨ ರಿಂದ ೪ ವಾರಗಳಲ್ಲಿ ನೀಲಿ – ಹಸಿರು ಪಾಚಿಯನ್ನು ಬೆಳೆಸಬಹುದು. ಆದರೆ ಪ್ರತಿ ಬಾರಿಯು ಮೇಲೆ ಹೇಳಿದ ಪ್ರಮಾಣದಲ್ಲಿ ಸೂಪರ್ ಫಾಸ್ಪೇಟ್ ಮತ್ತು ಕೀಟನಾಶಕವನ್ನು ಬಳಸಬೇಕಲ್ಲದೇ ನೀಲಿ – ಹಸುರು ಪಾಚಿಯ ಪುಡಿಯನ್ನು ಉದುರಿಸಬೇಕು.

)  ನೀಲಿಹಸಿರು ಪಾಚಿಯ ಉತ್ತಮ ಬೆಳವಣಿಗೆಗೆ ಬೇಕಾದ ಪರಿಸರ : ಕೆಳಗಿ ಸಂಗತಿಗಳು ನೀಲಿ – ಹಸುರು ಪಾಚಿಯ ಮೇಲೆ ಪರಿಣಾಮವನ್ನು ಬೀರುವುದರಿಂದ ಅವುಗಳನ್ನು ಸರಿಯಾಗಿ ನಿಯಂತ್ರಿಸುವುದು ಅವಶ್ಯ.

 • ಬೆಳಕು : ಪಾಚಿಯು ದ್ಯುತಿ ಸಂಶ್ಲೇಷಣೆಯನ್ನು ಮಾಡುವ ಸೂಕ್ಷ್ಮ ಸಸ್ಯವಾದ್ದರಿಂದ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಮತ್ತು ಗದ್ದೆಯಲ್ಲಿರುವ ನೀರು ರಾಡಿಯಾದಾಗ ಸಾಕಷ್ಟು ಬೆಳಕು ದೊರೆಯದೇ ಪಾಚಿಯ ಬೆಳವಣಿಗೆಯು ಕುಂಠಿತವಾಗುವ ಸಂಭವವೇ ಅಧಿಕವಾಗಿರುತ್ತದೆ.
 • ಉಷ್ಣತೆ : ಉಷ್ಣತಾಮಾನವು ೩೫ – ೪೦ ಡಿ.ಸೆಲ್ಸಿಯಸ್ ಇದ್ದರೆ ಪಾಚಿಯ ಬೆಳವಣಿಗೆಗೆ ಅನುಕೂಲ. ತಂಪು ಹವಾಮಾನವಿದ್ದರೆ ಬೆಳವಣಿಗೆಯು ಕುಗ್ಗುತ್ತದೆ.
 • ಗಾಳಿ : ಗಾಳಿಯ ಹೊಡೆತಕ್ಕೆ ಸಿಕ್ಕ ಪಾಚಿಯು ಗದ್ದೆಯಲ್ಲಿ ಒಂದೇ ಸ್ಥಳಕ್ಕೆ ಹೋಗಿ ಸಂಗ್ರಹವಾಗಬಹುದು. ಇದರಿಂದ ಸಾಕಷ್ಟು ಸೂರ್ಯನ ಪ್ರಕಾಶವು ದೊರೆಯದೇ ಪಾಚಿಯ ಸರಿಯಾದ ಬೆಳವಣಿಗೆಗೆ ಆತಂಕವುಂಟಾಗಬಹುದು. ತದ್ವಿರುದ್ಧವಾಗಿ ಗಾಳಿಯ ಚಲನೆಯಿಂದ ಒಂದೆಡೆ ಸೇರಿದ ಪಾಚಿಯು ಬೇರ್ಪಟ್ಟು, ಅದರ ಬೆಳವಣಿಗೆಗೆ ಅನುಕುಲ ವುಂಟಾಗಲೂಬಹುದು.
 • ನೀರು : ಪಾಚಿಯ ಬೆಳವಣಿಗೆಯು ಸರಿಯಾಗಿ ಸಾಗಬೇಕಾದರೆ ಗದ್ದೆಯಲ್ಲಿ ೫ ರಿಂದ ೧೫ ಸೆಂ.ಮೀ. ಆಳದವರೆಗೆ ನೀರು ಸದಾ ನಿಂತಿರಬೇಕು.
 • ಆಮ್ಲಕ್ಷಾರ ನಿರ್ದೆಶಕ : ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೭ ರಿಂದ ೮.೫ರವರೆಗೆ ಇದ್ದರೆ ಪಾಚಿಯು ಚೆನ್ನಾಗಿ ಬೆಳೆಯುತ್ತದೆ.
 • ಪೋಷಕಗಳು : ಸಾರಜನಕವೊಂದನ್ನು ಬಿಟ್ಟು, ಮೇಲ್ವರ್ಗದ ಸಸ್ಯಗಳಿಗೆ ಬೇಕಾಗುವ ಎಲ್ಲ ಪೋಷಕಗಳು ಪಾಚಿಯ ಬೆಳವಣಿಗೆಗೆ ಅವಶ್ಯವಾಗಿ ಬೇಕು. ಅವುಗಳಲ್ಲಿ ಕೆಳಗಿನ ಪೋಷಕಗಳ ಪೂರೈಕೆಯ ಬಗ್ಗೆ ಹೆಚ್ಚು ಲಕ್ಷವನ್ನು ವಹಿಸಬೇಕು.
 • ರಂಜಕವು ಪಾಚಿಯ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.
 • ಮಣ್ಣಿನಲ್ಲಿ ಕನಿಷ್ಠ ದಶಲಕ್ಷ ಬಾಗಕ್ಕೆ ೦.೨ ಭಾಗದಷ್ಟಾದರೂ ಮೊಲಿಬ್ಡಿನಂ ಇರುವಂತೆ ನೋಡಿಕೊಳ್ಳಬೇಕು. ಈ ಪೋಷಕದ ಕೊರತೆಯಿಂದ ಪಾಚಿಯ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ.
 • ಬತ್ತದ ಗದ್ದೆಯಲ್ಲಿ ಬೆಳೆಯುವ ಪಾಚಿಯು ಮೆಗ್ನಿಸಿಯಂನ ಕೊರತೆಯನ್ನು ಎದುರಿಸಬೇಕಾಗಬಹುದು.
 • ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ ಕಬ್ಬಿಣದ ಕೊರತೆಯು ತಲೆದೋರಬಹುದು. ಕಬ್ಬಿಣದ ಪ್ರಮಾಣವು ವಿಷಕಾರಿ ಮಟ್ಟಕ್ಕೆ ಏರುವ ಪ್ರಸಂಗಗಳು ಅತಿ ವಿರಳವಾದರೂ ಈ ಬಗ್ಗೆ ಲಕ್ಷ್ಯವನ್ನೀಯುವುದು ಉತ್ತಮ.

. ಬತ್ತದ ಬೇಸಾಯ ಕ್ರಮಗಳಿಂದ ನೀಲಿಹಸುರು ಪಾಚಿಯ ಬೆಳವಣಿಗೆಯ ಮೇಲಾಗುವ ಪರಿಣಾಮಗಳು :

 • ಬತ್ತದ ಬೆಳೆಯು ಇಲ್ಲದಿರುವ ಗದ್ದೆಗಳಿಗಿಂತ ಬತ್ತವು ಬೆಳೆಯುತ್ತಿರುವ ಗದ್ದೆಗಳಲ್ಲಿ ಪಾಚಿಯು ಚೆನ್ನಾಗಿ ಬೆಳೆಯುವುದೆಂದು ಕಂಡುಬಂದಿದೆ.
 • ಭೂಮಿಯನ್ನು ಉಳುಮೆ ಮಾಡಿದಾಗ ಅಥವಾ ಬೇಸಾಯದ ಇತರೆ ಉಪಕರಣಗಳನ್ನು ಗದ್ದೆಯಲ್ಲಿ ಉಪಯೋಗಿಸಿದಾಗ ಪಾಚಿಯ ಮೇಲೆ ಮಣ್ಣು ಬಿದ್ದು ಅಥವಾ ಗದ್ದೆಯಲ್ಲಿರುವ ನೀರು ರಾಡಿಯಾಗಿ ಪಾಚಿಗೆ ಸೂರ್ಯನ ಬೆಳಕು ಸಿಗದಂತಾಗುತ್ತದೆ. ಇದರಿಂದ ಪಚಿಯ ಬೆಳವಣಿಗೆಯು ಕುಂಠಿತವಾಗುತ್ತದೆ. ಆದರೆ ಈ ದುಷ್ಪರಿಣಾಮವು ತಾತ್ಪೂರ್ತಿಕವೆಂಬುವುದು ಸ್ಪಷ್ಟ.
 • ಮಣ್ಣಿಗೆ ಸಾವಯವ ಪದಾರ್ಥವನ್ನು ಸೇರಿಸಿ ಈ ಪದಾರ್ಥವು ಕಳಿಯುತ್ತಿರುವಾಗ ಪಾಚಿಯ ಬೆಳವಣಿಗೆ ಯು ಕುಗ್ಗುವುದೆಂದೂ ಇನ್ನಿತರೆ ಪ್ರವರಗಳಿಗೆ ಸೇರಿದ ಪಾಚಿಗಳ ಬೆಳವಣಿಗೆಯು ಉತ್ತಮವಾಗುವುದೆಂದೂ ಕಂಡುಬಂದಿದೆ.

ಅಝೊಲ್ಲ: ಅಝೊಲ್ಲ ಎಂಬುವುದು ಫರ್ನ್ ವರ್ಗಕ್ಕೆ ಸೇರಿದ ಸದಾ ನೀರಿನಲ್ಲಿ ತೇಲುತ್ತಿರುವ ಒಂದು ಸರ್ವವ್ಯಾಪಿ ಸಸ್ಯ.

. ಅಝೊಲ್ಲ ಸಸ್ಯದ ವರ್ಣನೆ :

 • ಅಝೊಲ್ಲ ಸಸ್ಯವು ಶಾಖೆಗಳುಳ್ಳ ತೇಲುವ ಕಾಂಡ ಮತ್ತು ಎರಡು ಪಟಲಗಳುಳ್ಳ ಎಲೆಗಳು ಹಾಗೂ ಬೇರುಗಳನ್ನು ಒಳಗೊಂಡಿದೆ.
 • ಎಲೆಯ ಎರಡು ಪಟಗಳಲ್ಲಿ ಒಂದು ಪಟಲವು ಪತ್ರಹರಿತನ್ನು ಹೊಂದಿದೆಯಲ್ಲದೇ ಹವೆ ಮತ್ತು ಬೆಳಕಿನೆಡೆಗೆ ಮುಖವನ್ನು ಒಡ್ಡಿರುತ್ತದೆ. ಈ ಪಟಲದ ಮಧ್ಯದಲ್ಲಿರುವ ತಗ್ಗಿನಲ್ಲಿ ಅನಬಿನಾ ಅಜೋಲಿ ಎಂಬ ನೀಲಿ – ಹಸುರು ಪಾಚಿಯು ಅಶ್ರಯವನ್ನು ಪಡೆದು ಆಜೋಲಾದೊಂದಿಗೆ ಸಹಜೀವನವನ್ನು ನಡೆಸುತ್ತದೆ.
 • ಎಲೆಯ ಇನ್ನೊಂದು ಪಟಲವು ಭಾಗಶಃ ನೀರಿನಲ್ಲಿರುತ್ತದೆ. ಈ ಪಟಲದಲ್ಲಿ ಪತ್ರಹರಿತ ಇರುವುದಿಲ್ಲ.
 •  ಪಾಚಿಯು ಹವೆಯಲ್ಲಿರುವ ಸಾರಜನಕವನ್ನು ಸ್ಥೀರೀಕರಿಸುತ್ತದೆ. ಪಾಚಿಯು ವಾಸಿಸುತ್ತಿರುವ ತಗ್ಗಿನ ಸುತ್ತ ಕೂದಲಿನಂತಹ ಹಲವು ಅಂಗಗಳಿವೆ. ಇವು ಅಝೊಲ್ಲ ಮತ್ತು ಪಾಚಿ ಇವುಗಳಲ್ಲಿ ಪರಸ್ಪರ ಪೋಷಕಗಳ ವಿನಿಮಯ ಮಾಡಲು ಸಹಾಯ ಮಾಡುತ್ತವೆಂದು ನಂಬಲಾಗಿದೆ.

. ಅಝೊಲ್ಲ ಪ್ರಬೇಧಗಳು :

ಅಝೊಲ್ಲದಲ್ಲಿ ಕೆಳಗೆ ತಿಳಿಸಿದ ಪ್ರಬೇಧಗಳನ್ನು ಗುರುತಿಸಲಾಗಿದೆ.

i)                    ಅ. ಕೆರೋಲೀನಿಯಾನಾ

ii)                  ಅ. ಮೆಕ್ಸಿಕಾನಾ

iii)                ಅ. ನೀಲೋಟಿಕಾ

iv)                ಅ. ಮೈಕ್ರೋಫಿಲ್ಲಾ

v)                  ಅ. ಫಿಲಿಕ್ಯೂಲಾಯ್ಡಿಸ್

vi)                ಅ. ಪಿನ್ನಾಟಾ

ಇವುಗಳಲ್ಲಿ ಅಝೊಲ್ಲ ಪಿನ್ನಾಟಾ ಪ್ರಬೇಧವು ಭಾರತದ ಎಲ್ಲೆಡೆ ಕಂಡುಬರುತ್ತದೆ. ನೀರು ನಿಂತಿರುವ ಗುಂಡಿ, ಹೊಂಡ, ಇತ್ಯಾದಿಗಳಲ್ಲಿ ಇತರೆ ಕಳೆಗಳೊಡನೆ ಇದು ವಾಸಿಸುತ್ತದೆ. ನಿಂತ ನೀರಿನ ಮೇಲೆ ಈ ಪಾಚಿಯು ಹಸುರು ಚಾಪೆಯಂತೆ ಕಾಣುತ್ತದೆ.

. ಅಝೊಲ್ಲ ಸಸ್ಯವು ಬಳಕೆಯಲ್ಲಿ ಬಂದ ಇತಿಹಾಸ

 • ಕ್ರಿ.ಶ. ೫೪೦ರಲ್ಲಿ ಬರೆದ ಚೀನಾ ದೇಶದ ಪುಸ್ತಕವೊಂದರಲ್ಲಿ ಅಝೊಲ್ಲವನ್ನು ಬೆಳೆಸುವ ಮತ್ತು ಅದನ್ನು ಬತ್ತದ ಗದ್ದೆಯಲ್ಲಿ ಬಳಸುವ ವಿಧಾನಗಳ ವಿವರಗಳಿವೆ.
 • ಖೋಂಗ್ ಮಿನ್ಹ ಖೋಂಗ್ ಎಂಬ ಬೌದ್ಧ ಸನ್ಯಾಸಿಯು ಚೀನಾ ದೇಶದಿಂದ ವಿಯಟ್ನಾಂ ದೇಶಕ್ಕೆ ಈ ಸಸ್ಯವನ್ನು ೧೧ನೆಯ ಶತಮಾನದಲ್ಲಿ ತೆಗೆದುಕೊಂಡು ಹೋದನೆಂಬ ಪ್ರತೀತಿಯಿದೆ.
 • ಬತ್ತದ ಬೇಸಾಯದಲ್ಲಿ ಅಝೊಲ್ಲ ಒಂದು ಮಹತ್ವಪೂರ್ಣ ಸಾವಯವ ಗೊಬ್ಬರ ಎಂಬುವುದನ್ನು ಉತ್ತರ ವಿಯಟ್ನಾಂ ದೇಶದಲ್ಲಿ ಮೊಟ್ಟ ಮೊದಲು ೧೯೫೭ರಲ್ಲಿ ತೋರಿಸಿಕೊಡಲಾಯಿತು. ಅನಂತರದ ವರ್ಷಗಳಲ್ಲಿ ಅಝೊಲ್ಲದ ಮಹತ್ವವನ್ನು ಅಮೇರಿಕ ಸಂಯುಕ್ತ ಸಂಸ್ಥಾನಗಳು, ಇಂಡೋನೇಷಿಯಾ, ಜಪಾನ್, ಫಿಲಿಫೈನ್ಸ್ ಮತ್ತು ಚೀನಾ ದೇಶಗಳಲ್ಲಿ ಗುರುತಿಸಲಾಯಿತು.
 • ಕಳೆದ ಶತಮಾನದ ೭೦ರ ದಶಕದಲ್ಲಿ ನಮ್ಮ ದೇಶದ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಅಝೊಲ್ಲದ ಬಗ್ಗೆ ಅಸ್ಥೆಯನ್ನು ವಹಿಸಲು ಆರಂಭಿಸಿದರು.

. ಅಝೊಲ್ಲದ ಬಗ್ಗೆ ಭಾರತದಲ್ಲಿ ನಡೆದ ಸಂಶೋಧನೆಗಳು : ಕಟಕದಲ್ಲಿರುವ ಕೇಂದ್ರೀಯ ಬತ್ತ ಸಂಶೋಧನಾ ಸಂಸ್ಥಯಲ್ಲಿ ೧೯೭೦ರ ನಂತರ ನಡೆಸಿದ ಸಂಶೋಧನೆಗಳಿಂದ ಹೊರ ಬಂದ ಕೆಲವು ಪ್ರಮುಖ ಸಂಗತಿಗಳು ಕೆಳಗಿನಂತಿವೆ.

 • ಅಝೊಲ್ಲ ವೇಗವಾಗಿ ಬೆಳೆಯಲು ೫ – ೧೦ ಸೆಂ.ಮೀ. ಆಳದ ನೀರು ಅವಶ್ಯ. ಅದರಂತೆಯೇ ಸಾಕಷ್ಟು ಪ್ರಮಾಣದಲ್ಲಿ ಸೂಪರ್ ಫಾಸ್ಪೇಟನ್ನು ಒದಗಿಸಬೇಕು.
 • ಆಜೊಲ್ಲದ ಬಿತ್ತನೆಯನ್ನು ತಯಾರಿಸಲು ೫೦ ರಿಂದ ೧೦೦ ಚ.ಮೀ. ವಿಸ್ತಾರದ ಮಡಿಗಳೇ ಉತ್ತಮ. ದೊಡ್ಡ ಮಡಿಗಳಲ್ಲಿ ಬೆಳೆಸಿದರೆ ಗಾಳಿಯ ಸೆಳೆತಕ್ಕೆ ಅಝೊಲ್ಲ ಒಂದೇ ಬದಿಗೆ ಹೋಗಿ ಸಂಗ್ರಹಗೊಳ್ಳಬಹುದು.
 • ಮಡಿಯಲ್ಲಿ ಪ್ರತಿ ಚ.ಮೀ. ಗೆ ೧೦೦ ರಿಂದ ೪೦೦ ಗ್ರಾಂ ಅಝೊಲ್ಲವನ್ನು ಹಾಕಿದರೆ ಮೂರು ವಾರಗಳಲ್ಲಿ ಪ್ರತಿ ಹೆಕ್ಟೇರಿನಲ್ಲಿ ೮ ರಿಂದ ೧೦ ಟನ್ನುಗಳಷ್ಟು ಹಸುರು ದ್ರವ್ಯವು ದೊರೆಯುತ್ತದೆ.
 • ಅಝೊಲ್ಲ ಭಕ್ಷಿಸುವ ಕೀಟಗಳನ್ನು ನಿವಾರಿಸಲು ಪ್ರತಿ ಹೆಕ್ಟೇರಿಗೆ ೧ ರಿಂದ ೨ ಕಿ.ಗ್ರಾಂ ಕಾರ್ಬೋಫ್ಯುಯರಾನ್‌(೩%) ಹರಳುಗಳನ್ನು ಉಪಯೋಗಿಸಬೇಕು.
 • ಅಝೊಲ್ಲದ ಉತ್ತಮ ಬೆಳವಣಿಗೆಗೆ ನೀರಿನ ಉಷ್ಣತಾಮಾನವು ೧೫ ಡಿಗ್ರಿಯಿಂದ ೩೦ ಡಿಗ್ರಿ ಸೆಲ್ಸಿಯಸ್ ಮಿತಿಯಲ್ಲಿ ಇರಬೇಕು.
 • ಆಮ್ಲ – ಕ್ಷಾರ ನಿರ್ದೆಶಕವು ೮ರ ಸನಿಹದಲ್ಲಿದ್ದರೆ ಉತ್ತಮ. ಒಂದೊಮ್ಮೆ ೫ಕ್ಕಿಂತ ಕಡಮೆಯಿದ್ದರೆ ಮಣ್ಣಿಗೆ ಸುಣ್ಣವನ್ನು ಸೇರಿಸಬೇಕಾಗುತ್ತದೆ.
 • ಅಝೊಲ್ಲದಲ್ಲಿ ಶೇಕಡ ೯೪ ರಷ್ಟು ನೀರು ಮತ್ತು ಶೇಕಡಾ ೫ ರಷ್ಟು ಸಾರಜನಕವಿರುತ್ತದೆ. ಇದಲ್ಲದೇ ಶೇಕಡಾ ಒಂದರಷ್ಟು ರಂಜಕ ಮತ್ತು ಅಷ್ಟೇ ಪ್ರಮಾಣದಲ್ಲಿ ಪೋಟ್ಯಷಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ಇರುತ್ತದೆ.
 • ಆಝೊಲ್ಲವನ್ನು ಮಡಿಯಿಂದ ಹೊರತೆಗೆದು ರಾಶಿ ಮಾಡಿಟ್ಟರೆ ೮ ರಿಂದ ೧೦ ದಿನಗಳಲ್ಲಿ ಕಳಿಯುತ್ತದೆ.