ರಾಸಾಯನಿಕಗೊಬ್ಬರಗಳನ್ನುಪೂರೈಸುವಕಾಲಮತ್ತುಪದ್ಧತಿಗಳು

i)  ಬೆಳೆಯ ಅವಧಿ ಮತ್ತು ಸಸ್ಯಗಳ ಬೆಳವಣಿಗೆಯ ವೈಶಿಷ್ಟ್ಯ : ಸಸ್ಯಗಳ ಬೆಳವಣಿಗೆಯ ಹಂತಗಳು ಮತ್ತು ಪ್ರತಿ ಹಂತದಲ್ಲಿ ಪೋಷಕಗಳ ಅವಶ್ಯಕತೆ ಇವುಗಳನ್ನು ಪರಿಗಣಿಸಿ ಗೊಬ್ಬರವನ್ನು ಪೂರೈಸುವ ಸಮಯವನ್ನು ನಿರ್ಧರಿಸಬೇಕು.

ಅಲ್ಪಾವಧಿ ಬೆಳೆಯಾದರೆ ಒಂದು ಅಥವಾ ಎರಡು ಕಂತುಗಳಲ್ಲಿ ಗೊಬ್ಬರವನ್ನು ಕೊಟ್ಟರೆ ಸಾಕು. ಕಬ್ಬಿನಂತಹ ದೀರ್ಘಾವಧಿ ಬೆಳೆಯಾದರೆರ ೪ – ೫ ಕಂತುಗಳಲ್ಲಿ ರಾಸಾಯನಿಕ ಗೊಬ್ಬರವನ್ನು ಪೂರೈಸಬೇಕಾಗುತ್ತದೆ.

ii) ಮಣ್ಣಿನ ಗುಣ ಧರ್ಮಗಳು : ಮರಳು ಮಣ್ಣಿನಲ್ಲಿ ಸಾರಜನಕ ಗೊಬ್ಬರವನ್ನು ಹೆಚ್ಷು ಕಂತುಗಳಲ್ಲಿ ಪೂರೈಸುವುದು ಒಳಿತು. ಒಂದೇ ಕಂತಿನಲ್ಲಿ ಒದಗಿಸಿದರೆ, ಪೋಷಕವು ಬಸಿದು ನೆಲದಲ್ಲಿ ಆಳಕ್ಕೆ ಹೋಗಿ ಬೆಳೆಗೆ ಸಿಗದಂತಾಗುತ್ತದೆ. ಎರೆ ಮಣ್ಣಿನಲ್ಲಿ ಸಾರಜನಕ ಗೊಬ್ಬರಗಳನ್ನು ಒಂದು ಅಥವಾ ಎರಡು ಕಂತುಗಳಲ್ಲಿ ಕೊಟ್ಟರೆ ಸಾಕಾಗುತ್ತದೆ.

iii) ಗೊಬ್ಬರದ ಗುಣಧರ್ಮಗಳು : ಮಣ್ಣಿನಲ್ಲಿ ಸುಲಭವಾಗಿ ಚಲಿಸುವ ಸಾರಜನಕ ಗೊಬ್ಬರವನ್ನು ಪ್ರಾರಂಭಿಕ ಮತ್ತು ಮೇಲು ಗೊಬ್ಬರವಾಗಿ ಬಳಸಬಹುದು. ಆದರೆ ಮಣ್ಣಿನ್ಲಿ ಹೆಚ್ಚು ದೂರದವರೆಗೆ ಚಲಿಸದ ರಂಜಕ ಮತ್ತು ಪೋಟ್ಯಾಸಿಯಂ ಗೊಬ್ಬರಗಳನ್ನು ಪ್ರಾರಂಭಿಕ ಗೊಬ್ಬರಗಳೆಂದು ಪೂರೈಸುವುದು ಉತ್ತಮ.

iv) ಹವಾಮಾನ ಮತ್ತು ನೀರಿನ ಸೌಕರ್ಯಗಳು : ಒಣ ಹವೆ ಹಾಗೂ ಕಡಮೆ ಮಳೆಯಾಗುವ ಪ್ರದೇಶಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಿತ್ತನೆ ಸಮಯ ದಲ್ಲಿಯೇ ಪೂರೈಸಬೇಕಾಗುತ್ತದೆ. ಆದರೆ ನೀರಾವರಿಯ ಸೌಕರ್ಯವಿದ್ದಲ್ಲಿ, ಗೊಬ್ಬರಗಳನ್ನು ಹೆಚ್ಚಿನಕಂತುಗಳಲ್ಲಿ ಪೂರೈಸಲು ಸಾಧ್ಯವಿರುವುದರಿಂದ ಗೊಬ್ಬರಗಳು ಸಮರ್ಥ ಬಳಕೆಯಾಗುತ್ತದೆ.

ಸಾಮಾನ್ಯವಾಗಿ ಗೊಬ್ಬರಗಳನ್ನು ಎರಡು ಹಂತಗಳಲ್ಲಿ ಪೂರೈಸುವ ರೂಢಿಯಿದೆ.

ಪ್ರಾರಂಭಿಕ ಗೊಬ್ಬರಗಳು : ಬಿತ್ತನೆ ಮಾಡುವಾಗ ಅಥವಾ ಬಿತ್ತನೆಗೆ ಮೊದಲು ಇಲ್ಲವೇ ಸಸಿಗಳನ್ನು ನೆಡುವಾಗ/ ನಾಟಿ ಮಾಡುವಾಗ ಪೂರೈಸುವ ಗೊಬ್ಬರಕ್‌ಎಕ ಪ್ರಾರಂಭಿಕ ಗೊಬ್ಬರ ಅಥವಾ ಮೂಲ ಗೊಬ್ಬರವೆನ್ನುತ್ತಾರೆ. ಬೀಜಗಳು ಮೊಳಕೆಯೊಡೆದು ಸಣ್ಣ ಸಸಿಗಳಿದ್ದಾಗ ಇಲ್ಲವೇ ನಾಟಿ ಮಾಡಿದ ಸಸಿಗಳು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವಾಗ, ಅವುಗಳ ಬೇರುಗಳು ಬಹಳ ದೂರದವರೆಗೆ ಪಸರಿಸುವುದಿಲ್ಲ. ಆಗ ಸಮೀಪದಲ್ಲಿಯೇ ಪೋಷಕಗಳು ದೊರೆತರೆ ಸಸಿಗಳು ಬಲಿಷ್ಠವಾಗಿ ಬೆಳೆದು ಅಧಿಕ ಇಳುವರಿಯನ್ನು ಕೊಡಲು ಸಮರ್ಥವಾಗುತ್ತವೆ. ಆದ್ದರಿಂದ ಪ್ರಾರಂಭಿಕ ಗೊಬ್ಬರಕ್ಕೆ ಬಹಳ ಮಹತ್ವವಿದೆ. ಫಲವತ್ತತೆಯು ಕಡಮೆಯಿರುವ ಮಣ್ಣಿನಲ್ಲಿ ಪ್ರಾರಂಭಿಕ ಗೊಬ್ಬರವು ಅತ್ಯವಶ್ಯಕ. ಮೂಲ ಗೊಬ್ಬರವನ್ನು ಪೂರೈಸುವಾಗ ಮೊಳಕೆ ಬರುತ್ತಿರುವ ಬೀಜಗಳೊಡನೆ ನೇರ ಸಂಪರ್ಕ ಬರದಂತೆ ನೋಡಿಕೊಳ್ಳಬೇಕು.

ಮೇಲು ಗೊಬ್ಬರಗಳು : ಸಸ್ಯಗಳು ತಮ್ಮ ಮೊದಲ ಹಂತದ ಬೆಳವಣಿಗೆಯನ್ನು ಮುಗಿಸಿದವೆಂದರೆ, ಅವುಗಳ ಮುಂದಿನ ಬೆಳವಣಿಗೆಗೆ ಪೋಷಕಗಳು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ. ಈ ಹಿಂದೆ ತಿಳಿಸಿರುವಂತೆ , ಮಣ್ಣು ಮತ್ತು ಸಸ್ಯ, ಗೊಬ್ಬರ ಇತ್ಯಾದಿಗಳ ಗುಣಧರ್ಮಕ್ಕೆ ಅನುಗುಣವಾಗಿ, ಹವಾಮಾನ ಮತ್ತು ನೀರಾವರಿಯ ಸೌಲಭ್ಯಗಳನ್ನು ಅನುಸರಿಸಿ ಮೇಲುಗೊಬ್ಬರವನ್ನು ಪೂರೈಸುವ ಸಮಯವನ್ನು ನಿರ್ಧರಿಸಬೇಕು.

ರಾಸಾಯನಿಕ ಗೊಬ್ಬರಗಳನ್ನು ಪೂರೈಸುವ ಪದ್ಧತಿಗಳು : ಬೆಳೆಗೆಂದೇ ಪೂರೈಸಿದ ಗೊಬ್ಬರಗಳು ನಷ್ಟವಾಗದೇ ಅವುಗಳ ಹೆಚ್ಚಿನ ಪ್ರಮಾಣವು ಬೆಲೆಗೆ ದೊರೆಯುವಂತಾಗಬೇಕು. ಈ ಉದ್ದೇಶವು ಫಲಪ್ರದವಾಗಲು ಮಣ್ಣಿನ ಗುಣಧರ್ಮಗಳೂ, ಬೆಳೆಯ ಸ್ವಭಾವ, ಗೊಬ್ಬರಗಳ ವೈಶಿಷ್ಟ್ಯ, ನೀರಿನ ಲಭ್ಯತೆ ಮುಂತಾದ ಹಲವು ಸಂಗತಿಗಳನ್ನು ಪರಿಶೀಲಿಸಿ ಗೊಬ್ಬರಗಳನ್ನು ಪೂರೈಸುವ ಪದ್ಧತಿಯನ್ನು ನಿರ್ಧರಿಸಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳು ಕೆಳಗಿನಂತಿವೆ

ಗೊಬ್ಬರಗಳನ್ನು ಭೂಮಿಯ ಮೇಲ್ಭಾಗದಲ್ಲಿ ಚೆಲ್ಲುವ ವಿಧಾನಗಳು :ಕೈಯಿಂದ ಇಲ್ಲವೇ ಈ ಕೆಲಸಕ್ಕಾಗಿಯೇ ನಿರ್ಮಿಸಿದ ವಿಶಿಷ್ಟ ರೀತಿಯ ಉಪಕರಣಗ ಸಹಾಯದಿಂದ ಎಲ್ಲೆಡೆ ಗೊಬ್ಬರಗಳು ಸಮನಾಗಿ ಬೀಳುವಂತೆ ಚೆಲ್ಲಬಹುದು. ಈ ರೀತಿ ಚೆಲ್ಲಿದ ಗೊಬ್ಬರಗಳು ಭೂಮಿಯೊಳಗೆ ಸೇರಿಕೊಳ್ಳುವಂತೆ ಮಾಡಲು ಸೂಕ್ತವಾದ ಉಪಕರಣಗಳನ್ನು ಉಪಯೋಗಿಸಬೇಕು. ಕೆಳಗಿನ ಪ್ರಸಂಗಗಳಲ್ಲಿ ಗೊಬ್ಬರವನ್ನು ಚೆಲ್ಲುವ ಪದ್ಧತಿಯಿಂದ ಪೂರೈಸಬೇಕಾಗುತ್ತದೆ.

i) ಹುಲ್ಲುಗಾವಲು ಅಥವಾ ಅತಿ ಕಡಮೆ ಅಂತರದ ಸಾಲಿನಲ್ಲಿ ಬಿತ್ತುವ ಬೆಳೆಗಳಲ್ಲಿ ಇಲ್ಲವೆ ಬೀಜವನ್ನು ಚೆಲ್ಲಿ ಬಿತ್ತುವ ಸಂದರ್ಭಗಳಲ್ಲಿ.

ii) ಗೊಬ್ಬರವು ಮಣ್ಣಿನ ಕಣಗಳೊಡನೆ ಆದಷ್ಟು ಹೆಚ್ಚು ಸಂಪರ್ಕವನ್ನು ಹೊಂದಬೇಕಾದ ಅವಶ್ಯಕತೆ ಇರುವಾಗ ಉದಾಹರಣೆಗೆ , ಶಿಲಾರಂಜಕವನ್ನು ಮಣ್ಣಿಗೆ ಹಾಕುವಾಗ.

ಕೂರಿಗೆಯ ಮೂಲಕ ಪೂರೈಕೆ: ಬೀಜಗಳೊಡನೆ ರಾಸಾಯನಿಕಗೊಬ್ಬರಗಳನ್ನು ಸೇರಿಸಿ ಬಿತ್ತುವ ಪ್ರಸಂಗವಿದ್ದಲ್ಲಿ, ಕೂರಿಗೆಯ ಸಹಾಯದಿಂದ ಬಿತ್ತಬಹುದು. ಆದರೆ, ಬೀಜದ ಸಾಲಿನಿಂದ ಸ್ವಲ್ಪ ಅಂತರದಲ್ಲಿ ಮತ್ತು ಬೀಜಕ್ಕಿಂತ ಆಳದಲ್ಲಿ ಗೊಬ್ಬರವು ಬೀಳುವಂತೆ ಮಾಡಲು ಬೀಜ – ಗೊಬ್ಬರದ ಕೂರಿಗೆಯನ್ನುಬಳಸಬೇಕು.

ಚಿತ್ರ - ೧೨, ಬೀಜ ಮತ್ತು ಗೊಬ್ಬರದ ಕೂರಿಗೆಯಿಂದ ಬಿತ್ತನೆಯನ್ನು ಮಾಡಿದಾಗ ಬೀಜ ಮತ್ತು ಗೊಬ್ಬರಗಳು ಬೀಳುವ ಸ್ಥಾನ

ಕಡಮೆ ಅಂತರದ ಸಾಲುಗಳಲ್ಲಿ ಬಿತ್ತುವ ಗೋಧಿ, ರಾಗಿ, ಮುಂತಾದ ಬೆಳೆಗಳೀಗೆ ಮೂಲ ಗೊಬ್ಬರವನ್ನು ಈ ಪದ್ಧತಿಯಿಂದ ಕೊಡಬಹುದು.

ಬೀಜದೊಡನೆ ಗೊಬ್ಬರವನ್ನು ಮಿಶ್ರಮಾಡಿ ಬಿತ್ತುವಾಗ ಕಡಿಮೆ ಪ್ರಮಾಣದಲ್ಲಿ ಮಾತ್ರ ಹಾಕಬೇಕಾಗುತ್ತದೆ. ಇಲ್ಲವಾಧರೆ, ಮೊಳಕೆಯೊಡೆಯುತ್ತಿರುವ ಬೀಜಗಳಿಗೆ ಅಪಾಯವುಂಟಾಗಿ ಎಲ್ಲ ಬೀಜಗಳು ಸರಿಯಾಗಿ ಮೊಳಕೆಯೊಡೆಯುವುದಿಲ್ಲ.

ನಿರ್ಧಿಷ್ಟ ಸ್ಥಳದಲ್ಲಿ ಗೊಬ್ಬರವನ್ನು ಪೂರೈಸುವ ಪದ್ಧತಿ : ಬೆಳೆಯ ಸಾಲುಗಳ ಮಧ್ಯದಲ್ಲಿರುವ ಅಂತರವು ಹೆಚ್ಚಾಗಿರುವಾಗ ಅಥವಾ ಹೆಚ್ಚು ಅಂತರದಲ್ಲಿ ಕೈಗಾಳನ್ನು ಹಾಕಿದಲ್ಲಿ ಇಲ್ಲವೇ ನಾಟಿಯನ್ನು ಮಾಡಿದ ಬೆಳೆಗಳಲ್ಲಿ ಈ ಪದ್ಧತಿಯಿಂದ ಗೊಬ್ಬರವನ್ನು ಹಾಕಿದಲ್ಲಿ ಇಲ್ಲವೇ ನಾಟಿಯನ್ನು ಮಾಡಿದ ಬೆಳೆಗಳಲ್ಲಿ ಈ ಪದ್ಧತಿಯಿಂದ ಗೊಬ್ಬರವನ್ನು ಪೂರೈಸಲು ಸಾರ್ಧಯವಿದೆ. ಕೈಗಾಳು ಹಾಕಿದ ಅಥವಾ ಸಸಿಯನ್ನು ನೆಟ್ಟ ಸ್ಥಳದಲ್ಲಿ ಗೋಲಾಕಾರದಲ್ಲಿ ಗೊಬ್ಬರವನ್ನು ಹಾಕಬಹುದು. ಕೆಸರು ಪದ್ಧತಿಯಲ್ಲಿ ಬೆಳೆದ ಬತ್ತಕ್ಕೆ ಮೇಲು ಗೊಬ್ಬರವನ್ನು ಪೂರೈಸುವಾಗ ಮಣ್ಣಿನ ಉಂಡೆಗಳನ್ನು (ಒಳಗಡೆ ಯೂರಿಯಾದ ಕಣಗಳಿರುವ ಉಂಡೆಗಳನ್ನು) ಇಲ್ಲವೇ ಯೂರಿಯಾದ ಗೋಲಿಗಳನ್ನು ನಿರ್ಧಿಷ್ಟ ಸ್ಥಾನದಲ್ಲಿ ಹಾಕಬಹುದು.

ನೇಗಿಲು ಸಾಲಿನಲ್ಲಿ ಪೂರೈಸುವ ವಿಧಾನಗಳು : ಆಳವಾದ ಬೇರುಗಳಿರುವ ಕೆಲವು ಬೆಳೆಗಳಿಗೆ ರಂಜಕದ ಗೊಬ್ಬರವನ್ನು ಆಳಕ್ಕೆ ಹಾಕುವುದರಿಂದ ಹೆಚ್ಚು ಪ್ರಯೋಜನವು ದೊರೆಯುತ್ತದೆಯೆಂದು ತಿಳಿದುಬಂದಿದೆ. ನೇಗಿಲಿನಿಂದ ಸಾಲನ್ನು ತೆಗೆಯುತ್ತ ಗೊಬ್ಬರವನ್ನು ಕೈಯಿಂದ ಹಾಕಬೇಕು. ಮುಂದಿನ ಸಾಲನ್ನು ತೆಗೆಯುವಾಗ, ಮಣ್ಣು ಹಿಂದಿನ ಸಾಲಿನ ಮೇಲೆ ಬೀಳುವುದರಿಂದ, ಗೊಬ್ಬರವನ್ನು ಮುಚ್ಚಿದಂತಾಗುತ್ತದೆ. ಸಾಲುಗಳ ಅಂತರವು ಅಧಿಕವಾಗಿದ್ದರೆ, ಬೇರೆ ಉಪಕರಣಗಳ ಸಹಾಯದಿಂದ ಗೊಬ್ಬರವನ್ನು ಮುಚ್ಚಬಹುದು. ಗೊಬ್ಬರವನ್ನು ಆಳಕ್ಕೆ ಹಾಕುವುದರಿಂದ ಗೊಬ್ಬರವು ಆರ್ದ್ರತೆಯಿರುವಲ್ಲಿ ಬಿದ್ದಂತಾಗುತ್ತದೆ.

ನೇಗಿಲು ಸಾಲಿನಲ್ಲಿ ಗೊಬ್ಬರವನ್ನು ಪೂರೈಸಲು ಚಿತ್ರ ೧೩ ರಲ್ಲಿ ತೋರಿಸಿದ ಉಪಕರಣವು ಹೆಚ್ಚು ಪ್ರಯೋಜನಕಾರಿ ಎನ್ನಬಹುದು. ನೇಗಿಲಿನಿಂದ ಉಳೂಮೆ ಮಾಡಿದಾಗ, ಮಣ್ಣಿನಲ್ಲಿ ಸಾಲು ಸಿದ್ಧವಾಗುತ್ತದೆ. ಈಸಿನ (ಬೀಮು) ಆಧಾರದ ಮೇಲೆ ನಿಂತ ‘ಮೋರ”ದ ಆಕಾರದ ಪಾತ್ರೆಯಲ್ಲಿ ಹಾಕಿದ ಗೊಬ್ಬರವು ಬಟ್ಟಲೊಳಗೆ ಬಿದ್ದು ಕೊಳವೆಯ ಮೂಲಕ ಭೂಮಿಯಲ್ಲಿ ನಿರ್ಧಿಷ್ಟ ಆಳಕ್ಕೆ ಬೀಳುತ್ತದೆ.

ಚಿತ್ರ ೧೩. ನೇಗಿಲು ಸಾಲಿನಲ್ಲಿ ಗೊಬ್ಬರವನ್ನು ಪೂರೈಸಲು ಅನುಕೂಲವಾಗುವ ಉಪಕರಣ

ಗೊಬ್ಬರಗಳು ಸಾಲಿನಲ್ಲಿ ಬೆಳೆಯ ಪಕ್ಕಕ್ಕೆ ಬೀಳುವಂತೆ ಪೂರೈಕೆ : ಜೋಳ, ಮುಸುಕಿನ ಜೋಳ,ಹತ್ತಿ, ಮುಂತಾದ ಬೆಳೆಗಳನ್ನು ತುಲನಾತ್ಮಕವಾಗಿ ಹೆಚ್ಚು ಅಂತರವಿರುವ ಸಾಲುಗಳಲ್ಲಿ ಬಿತ್ತಲಾಗುತ್ತದೆ. ಅಂತಹ ಪ್ರಸಂಗಗಳಲ್ಲಿ ಗೊಬ್ಬರಗಳನ್ನು ಸಾಲಿನಿಂದ ಕಡಮೆ ಅಂತರದಲ್ಲಿ, ನಿರ್ಧಿಷ್ಟ ಆಳಕ್ಕೆ ಬೀಳುವಂತೆ ಪೂರೈಸುವುದು ಉತ್ತಮ. ಬೆಳೇಯ ಬೇರಿನ ಬೆಳವಣಿಗೆಯಾದಂತೆ ಸಾಲಿನಿಂದ ಎಷ್ಟು ದೂರದಲ್ಲಿ ಮತ್ತು ಎಷ್ಟು ಆಳಕ್ಕೆ ಗೊಬ್ಬರವನ್ನು ಪೂರೈಸಬೇಕೆಂಬುವುದನ್ನು ನಿರ್ಧರಿಸಲಾಗುತ್ತದೆ. (ಚಿತ್ರ ೧೪)

ಚಿತ್ರ ೧೪: ಬೀಜ ಅಥವಾ ಸಸಿಗಳ ಪಕ್ಕದಲ್ಲಿ ಮತ್ತು ನಿರ್ಧಿಷ್ಟ ಆಳದಲ್ಲಿ ಗೊಬ್ಬರ

ವೃತ್ತಾಕಾರವಾಗಿ ಗೊಬ್ಬರಗಳ ಪೂರೈಕೆ : ಹೆಚ್ಚು ಅಂತರದಲ್ಲಿ ನೆಡುವ ಟೊಮೊಟೆ, ಮೆಣಸು, ಹತ್ತಿ ಮುಂತಾದ ವಾರ್ಷಿಕ ಬೆಳೆಗಳಿಗೂ ಬಹುವಾರ್ಷಿಕ ಬೆಳೆಗಳಿಗೂ ಗೊಬ್ಬರವನ್ನು ವೃತ್ತಾಕಾರದಲ್ಲಿ ಕೊಡುವುದು ಪ್ರಶಸ್ತ. ಸಸ್ಯದಿಂದ ನಿರ್ಧಿಷ್ಟ ಅಂತರದಲ್ಲಿ ಬೆಳೆಯ ಸುತ್ತಲೂ ವೃತ್ತಾಕಾರದ ಸಣ್ಣ ಕಾಲುವೆಯನ್ನು ಮಾಡಿ, ಅದರಲ್ಲಿ ಗೊಬ್ಬರವನ್ನು ಹಾಕಿ, ಕಾಲುವೆಯನ್ನು ಮಣ್ಣಿನಿಂದ ಮುಚ್ಚಬೇಕು. ಗೊಬ್ಬರವನ್ನು ಹಾಕುವ ಅಂತರವನ್ನು ಬೆಳೆಯ ಸ್ವಭಾವ ಮತ್ತು ಅದರ ಬೆಳವಣಿಗೆಯ ಹಂತ ಇವುಗಳ ಮೇಲಿಂದ ನಿರ್ಧರಿಸಬೇಕು. (ಚಿತ್ರ ೧೫)

ಚಿತ್ರ ೧೫ : ಗೊಬ್ಬರವನ್ನು ವರ್ತುಲಾಕಾರದಲ್ಲಿ ಪೂರೈಸುವ ವಿಧಾನ

ಪತ್ರ ಸೇಚನ ; ಕೆಲವು ರಾಸಾಯನಿಕ ಗೊಬ್ಬರಗಳನ್ನು ನೀರಿನಲ್ಲಿ ಕರಗಿಸಿ ದ್ರಾವಣವನ್ನು ಸಸ್ಯದ ಎಲೆಗಳ ಮೇಲೆ ಸಿಂಪಡಿಸಿ ಪೋಷಕಗಳನ್ನು ಪೂರೈಸಬಹುದು. ಕೆಲವು ಗೊಬ್ಬರಗಳು ಈ ಕಾರ್ಯಕ್ಕೆ ಪ್ರಶಸ್ತವೆನಿಸಿವೆ. ಯೂರಿಯಾ ಗೊಬ್ಬರವನ್ನು ಬಹುತೇಕೆಲ್ಲ ಬೆಳೆಗಳಿಗೂ ಸುರಕ್ಷಿತವಾಗಿ ಸಿಂಪಡಿಸಬಹುದು. ಪ್ರತಿ ಲೀಟರ ನೀರಿಗೆ ೨೦ ಗ್ರಾಂ ಯೂರಿಯಾವನ್ನು ಹಾಕಿ ತಯಾರಿಸಿದ ದ್ರಾವಣವು (೨% ದ್ರಾವಣವು) ಎಲ್ಲ ಬೆಳೆಗಳಿಗೆ ಸೂಕ್ತವೆನಿಸಿದೆ. ಕೆಲವು ಬೆಳೆಗಳು ಇದಕ್ಕಿಂತ ಹೆಚ್ಚು ಯೂರಿಯಾವನ್ನು ಹಾಕಿ ತಯಾರಿಸಿದ ಮಿಶ್ರಣವನ್ನು ತಡೆದುಕೊಳ್ಳುತ್ತವೆಯಾದರೂ ಯೂರಿಯಾದ ಪ್ರಮಾಣವು ಹೆಚ್ಚಾಯಿತೆಂದರೆ ಎಲೆಗಳು ಬಾಡಿ, ಸಸ್ಯಗಳು ಸಾಯುತ್ತವೆ. ಹೆಚ್ಚು ಯೂರಿಯಾನ್ನು ಬೆಳೆಗೆ ಪೂರೈಸಬೇಕೆಂದಾದರೆ ಶೇ.೨ ದ್ರಾವಣವನ್ನು ಒಂದೆರಡು ವಾರಗಳ ಅಂತರವನ್ನಿಟ್ಟು ಹೆಚ್ಚು ಬಾರಿ ಸಿಂಪಡಿಸಬೇಕು.

ಬೆಳೆಗಳಿಗೆ ಬೇಕಾಗುವ ಪೂರ್ತಿ ಗೊಬ್ಬರವನ್ನು ಸಿಂಚನ ಪದ್ಧತಿಯಿಂದ ಕೊಡುವ ಪ್ರಯತ್ನವು ಲಾಭದಾಯಕವಾಗಲಾರದು. ಮಣ್ಣಿನ ಮೂಲಕ ಪೂರೈಸುವ ಗೊಬ್ಬರಗಳಿಗೆ ಈ ಪದ್ಧತಿಯಿಂದ ಕೊಡುವ ಗೊಬ್ಬರಗಳು ಪೂರಕವೆನಿಸೀತೇ ಹೊರತು ಪರ್ಯಾಯವೆನಿಸಲಾರವು.

ಮಣ್ಣಿನ ಆಳಕ್ಕೆ ಸೇರಿಸುವ ವಿಧಾನ ಗಳು :ದ್ರವ ರೂಪದಲ್ಲಿರುವ ಅಮೋನಿಯಾವನ್ನು ಗಟ್ಟಿಮುಟ್ಟಾದ ಸಿಲಿಂಡರುಗಳಲ್ಲಿ ಸಂಗ್ರಹಿಸಿ ವಿಶಿಷ್ಟ ರೀತಿಯ ಸಲಕರಣೆಯ ಸಹಾಯದಿಂದ ಮಣ್ಣಿನಲ್ಲಿ ೧೫ – ೨೦ ಸೆಂ.ಮೀ. ಆಳಕ್ಕೆ ಸೇರಿಸಲಾಗುತ್ತದೆ.

ನೀರಾವರಿ ಜಲದ ಮೂಲಕ ಗೊಬ್ಬರದ ಪೂರೈಕೆ : ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳನ್ನು ನೀರಾವರಿ ಜಲದೊಡನೆ ಮಿಶ್ರಮಾಡಿ ಬೆಳೆಗಳಿಗೆ ಪೂರೈಸಬಹುದು. ತೆರೆದ ಕಾಲುವೆಗಳ ಮೂಲಕ ನೀರನ್ನು ಒದಗಿಸುವ ಹರಿ ನೀರಾವರಿ ಅಥವಾ ಸೇಚನ ನೀರಾವರಿ ಇಲ್ಲವೆ ಹನಿ ನೀರಾವರಿ ಮೂಲಕ ಗೊಬ್ಬರವನ್ನು ಬೆಳೆಗಳಿಗೆ ಪೂರೈಸಬಹುದು. ಇವೆಲ್ಲ ಪದ್ಧತಿಗಳಲ್ಲಿಯೂ ನೀರಿನೊಡನೆ ರಾಸಾಯನಿಕ ಗೊಬ್ಬರಗಳನ್ನು ಮಿಶ್ರಮಾಡಬಹುದು. ರಾಸಾಯನಿಕ ಗೊಬ್ಬರಗಳನ್ನು (ಇವನ್ನು ರಸಗೊಬ್ಬರವೆಂದೂ ಕೆಲವರು ಕರೆಯುತ್ತಾರೆ). ನೀರಾವರಿಯ ಮೂಲಕ ಪೂರೈಸಲಾಗುತ್ತಿರುವದರಿಂದ ಈ ಪದ್ಧತಿಗೆ ರಸ ನೀರಾವರಿ ಎಂಬ ಹೆರು ಬಳಕೆಗೆ ಬಂದಿದೆ. ಈ ಪದ್ಧತಿಯ ಪ್ರಮುಖ ವಿವರಗಳು ಮುಂದಿನಂತಿವೆ.

. ಗಮನಿಸಬೇಕಾದಸಂಗತಿಗಳು

 • ಉಪಯೋಗಿಸಬೇಕೆಂದಿರುವ ಗೊಬ್ಬರಗಳು ಪೂರ್ತಿಯಾಗಿ ನೀರಿನಲ್ಲಿ ಕರಗುವಂತಹವು ಗಳಾಗಿರಬೇಕು.
 • ಒಂದಕ್ಕಿಂತ ಹೆಚ್ಚು ಗೊಬ್ಬರಗಳನ್ನು ನೀರಿನೊಡನೆ ಮಿಶ್ರಮಾಡುವುದಾದಲ್ಲಿ, ಆ ಗೊಬ್ಬರಗಳು ಪರಸ್ಪರ ಅನುರೂಪವಾಗಿರಬೇಕು.
 • ಈ ಗೊಬ್ಬರಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವಂತಿರಬೇಕು.
 • ಉಪಯೋಗಿಸಬೇಕೆಂದಿರುವ ರಾಸಾಯನಿಕ ಗೊಬ್ಬರಗಳು ಮಣ್ಣಿನ ಮೇಲೆ ದುಷ್ಪರಿಣಾಮಗಳನ್ನು ಬೀರಬಾರದು.
 • ನೀರಾವರಿಯ ಜಲದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಬೈಕಾರ್ಬೊನೇಟನ ಪ್ರಮಾಣವು ಹೆಚ್ಚಾಗಿದ್ದರೆ ಕೆಲವು ರಾಸಾಯನಿಕ ಗೊಬ್ಬರಗಳನ್ನು ನೀರಿನಲ್ಲಿ ಮಿಶ್ರಮಾಡಿದೊಡನೆ ಕರಗದ ಕ್ಯಾಲ್ಸೈಟ್ ಮತ್ತು ಮೆಗ್ನೆಸೈಟ್ ಸಂಯುಕ್ತಗಳು ಉತ್ಪತ್ತಿಯಾಗಿ ರಸ ನೀರಾವರಿಯನ್ನು ಮಾಡಲು ಬಳಸುವ ಉಪಕರಣಗಳು ಪ್ರಯೋಜನಕ್ಕೆ ಬಾರದಿರಹುದು.

. ರಸನೀರಾವರಿಯಿಂದದೊರೆಯುವಪ್ರಯೋಜನಗಳು

 • ಸಸ್ಯಗಳ ಬೆಳವಣಿಗೆಯು ಮುಂದುವರೆದಂತೆಲ್ಲ ಅವಶ್ಯಕತೆಗೆ ತಕ್ಕಂತೆ ಸೂಕ್ತ ಸಮಯದಲ್ಲಿಪೋಷಕಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಸಾಧ್ಯವಾಗುತ್ತದೆ.
 • ಕಬ್ಬಿನಂತಹ ದಟ್ಟವಾಗಿ ಬೆಳೆಯುವ ದೀರ್ಘಾವಧಿ ಬೆಳೆಯಲ್ಲಿ, ಮೇಲು ಗೊಬ್ಬರವನ್ನು ಕೊಡಲು ಒಳಗೆ ಪ್ರವೇಶಿಸುವುದು ಬಹಳ ಶ್ರಮದ ಕಾರ್ಯ. ಇಂಹ ಸಂದರ್ಭಗಳಲ್ಲಿ ರಸ ನೀರಾವರಿಯು ಪ್ರಯೋಜನಕಾರಿ ಪದ್ಧತಿಯೆನ್ನಬಹುದು.
 • ಸಸ್ಯದ ಬೆಳಣಿಗೆಯ ಮಧ್ಯಂತರ ಸಮಯದಲ್ಲಿ ಪೋಷಕಗಳ ಕೊರತೆಯು ಕಂಡುಬಂದಲ್ಲಿ, ಇದರ ಪರಿಹಾರಕ್ಕೆ ರಸ ನೀರಾವರಿಯು ಹೆಚ್ಚು ಅನುಕೂಲಕರ.
 • ನೀರಾವರಿ ಮತ್ತು ರಾಸಾಯನಿಕ ಗೊಬ್ಬರಗಳ ಪೂರೈಕೆಯ ಎರಡು ಕಾರ್ಯಗಳು ಒಮ್ಮೆಲೆ ಮುಗಿಯುವುದರಿಂದ ಆಳುಗಳ ಖರ್ಚಿನ ಮತ್ತು ಸಮಯದ ಉಳಿತಾಯವಾಗುತ್ತದೆ.

. ಹರಿಯುವನೀರಾವರಿಮೂಲಕರಾಸಾಯನಿಕಗೊಬ್ಬರಗಳಪೂರೈಕೆ

ಬೆಳೆಗೆ ಕೊಡಬೇಕೆಂದಿರುವ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಿ, ಈ ಗೊಬ್ಬರಗಳನ್ನು ನೀರಿನ ಮುಖ್ಯ ಕಾಲುವೆಯಲ್ಲಿ ಕರಗಿಸಿದರೆ, ನೀರಿನೊಡನೆ ಚಲಿಸಿ ಗೊಬ್ಬರಗಳು ಬೆಳೆಗೆ ದೊರೆಯುತ್ತವೆ. ಈ ಕೆಲಸಕ್ಕಾಗಿ ೧೬ ರಲ್ಲಿ ತೋರಿಸಿದ ಸಣ್ಣ ಪೀಪಾಯಿಗಳನ್ನು ಉಪಯೋಗಿಸಬಹುದು. ಪೀಪಾಯಿಗಳನ್ನು ಭೂ ಪ್ರದೇಶದ ಸೂಕ್ತನಿಸಿದ ಸ್ಥಳಗಳಲ್ಲಿಡಬೇಕು.

ಗೊಬ್ಬರಗಳ ದ್ರಾವಣವನ್ನು ಪ್ರತಿ ಪೀಪಾಯಿಗೆ ತುಂಬಬೇಕು. ನಲ್ಲಿಯ ಸಹಾಯದಿಂದ ಹೊರಬರು ದ್ರಾವಣದ ಪ್ರಮಾಣವನ್ನು ನಿಯಂತ್ರಿಸಬಹುದಾದ್ದರಿಂದ ನಿರ್ಧಿಷ್ಟ ಪ್ರಮಾಣದಲ್ಲಿಯೇ ದ್ರಾವಣವು ನೀರಿಗೆ ಸೇರುವಂತೆ ಮಾಡಬಹುದು.

ಚಿತ್ರ ೧೬ : ನೀರಾವರಿ ಜಲದೊಡನೆ, ಗೊಬ್ಬರಗಳನ್ನು ಮಿಶ್ರ ಮಾಡಲು ಬಳಸಬಹುದಾದ ಪೀಪಾಯಿ

ಬೆಳೆಗೆ ನೀರಾವರಿಯನ್ನು ಕೊಡಲು ಆರಂಭಿಸಿದೊಡನೆಯೇ ಜಲದಲ್ಲಿ ಗೊಬ್ಬರ ಅಥವಾ ಗೊಬ್ಬರದ ದ್ರಾವಣವನ್ನು ಮಿಶ್ರಮಾಡತೊಡಗಿದರೆ, ಗೊಬ್ಬೆರಗಳು ನೀರಿನೊಡನೆ ಚಲಿಸಿ ಭೂಮಿಯ ಆಳಖ್ಕೆ ಹೋಗುವ ಸಾಧ್ಯತೆಯಿದೆ. ಇದನ್ನುತಪ್ಪಿಸಲು ನೀರಾವರಿಯನ್ನು ಆರಂಭಿಸಿದ ಸ್ವಲ್ಪ ಸಮಯದ ನಂತರ, ರಾಸಾಯನಿಕ ಗೊಬ್ಬರಗಳನ್ನು ನೀರಿನಲ್ಲಿ ಮಿಶ್ರಮಾಡುತ್ತ ಸಾಗಿ ನೀರಾವರಿಯನ್ನು ನಿಲ್ಲಿಸುವುದಕ್ಕಿಂತ ಸ್ವಲ್ಪ ಮುಂಚೆ ಗೊಬ್ಬರಗಳನ್ನು ಮಿಶ್ರಮಾಡುವ ಕಾರ್ಯವನ್ನು ನಿಲ್ಲಿಸುವುದು ಸೂಕ್ತವೆಂದು ಕಂಡುಬಂದಿದೆ.

ಹರಿ ನೀರಾವರಿಯ ಜಲದೊಡನೆ ರಾಸಾಯನಿಕ ಗೊಬ್ಬರಗಳನ್ನು ಪೂರೈಸುವುದರಿಂದ ಗೊಬ್ಬರಗಳು ಭೂ ಪ್ರದೇಶದಲ್ಲೆಡೆ ಸಮನಾಗಿ ಹಂಚಿ ಹೋಗುವುದಿಲ್ಲ. ಅಲ್ಲದೇ, ಗೊಬ್ಬರಗಳು ನಷ್ಟವಾಗುವ ಸಾಧ್ಯತೆಯು ಇದೆ.

. ಸೇಚನನೀರಾವರಿಯಮೂಲಕರಾಸಾಯನಿಕಗೊಬ್ಬರಗಳಪೂರೈಕೆ

ಸೇಚನ (ಸ್ಪ್ರಿಂಕ್ಲರ್) ನೀರಾವರಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರಗಳು ನೀರಿನೊಡನೆ ಸೇರುವಂತೆ ವ್ಯವಸ್ಥೆ ಮಾಡಿಕೊಂಡರೆ ಬೆಳೆಗೆ ಪೋಷಕಗಳನ್ನು ಪೂರೈಸಬಹುದು. ಸೇಚನದಿಂದ ನೀರು ಎಲ್ಲೆಡೆ ಪಸರಿಸುವುದರಿಂದ ರಾಸಾಯನಿಕ ಗೊಬ್ಬರ ಗಳು ಭೂ ಪ್ರದೇಶದಲ್ಲಿ ಸಮನಾಗಿ ಹಂಚಿಹೋಗುತ್ತವೆಯಲ್ಲದೇ ನಿರ್ಧಿಷ್ಟ ಆಳದವರೆಗೆ ಮಾತ್ರ ಚಲಿಸುತ್ತವೆ. ರಾಸಾಯನಿಕ ಗೊಬ್ಬರಗಳನ್ನು ಪೂರೈಸಲು ಬೇಕಾಗುವ ಆಳಿನ ಖರ್ಚು ಮತ್ತು ಸಮಯದ ಉಳಿತಾಯವಾಗುತ್ತದೆ.

ರಾಸಾಯನಿಕ ಗೊಬ್ಬರಗಳನ್ನು ಸೇಚನ ನೀರಾವರಿಯೊಡನೆ ಪೂರೈಸಲು ಬೇಕಾಗುವ ಸಾಧನವು ಸರಳವಾಗಿದೆಯಲ್ಲದೇ, ಬೆಲೆಯೂ ಕಡಮೆ ಎನ್ನಬಹುದು. ಸ್ಥಾನಿಕವಾಗಿಯೂ ಈ ಸಾಧನವನ್ನು ಸಿದ್ಧಪಡಿಸಿಕೊಳ್ಳಬಹುದು. ಈ ಸಾಧನದ ಪ್ರಮುಖ ಭಾಗಗಳೆಂದರೆ – ಈ ಸಾಧನವನ್ನು ಸಿದ್ಧಪಡಿಸಿಕೊಳ್ಳಬಹುದು. ಈ ಸಾಧನದ ಪ್ರಮುಖ ಭಾಗಗಳೆಂದರೆ –

 • ಸೀಲ್ ಮಾಡಿದ ಟ್ಯಾಂಕ್
 • ಕೋಳವೆಗಳನ್ನು ಜೋಡಿಸಲು ಅನುಕೂಲತೆಗಳು.
 • ಜೋಡಿಸುವ ಕೊಳವೆಗಳೂ.

ಸಾಮಾನ್ಯವಾಗಿ ಸೋಸು ಪೆಟ್ಟಿಗೆಗಿಂತ ಸ್ವಲ್ಪ ಮೊದಲೇ ರಾಸಾಯನಿಕ ಗೊಬ್ಬರಗಳ ದ್ರಾವಣವನ್ನು ತುಂಬಿದ ಟ್ಯಾಂಕರನ್ನು ಇಡಲಾಗುತ್ತದೆ. ಇವೆರಡರ ಮಧ್ಯದಲ್ಲಿ ವೆಂಚುರಿ ಎಂಬ ಸಾಧನವನ್ನು ಜೋಡಿಸಲಾಗುತ್ತದೆ. ನೀರು ಹರಿಯುವ ಮುಖ್ಯ ಕೊಳವೆಯೊಳಗೆ ಗೊಬ್ಬರದ ದ್ರಾವಣವು ಸರಿಯಾಗಿ ಹರಿದು ಹೋಗುವಂತೆ ಈ ಸಾಧನವು ನೋಡಿಕೊಳ್ಳುತ್ತದೆ.

ಮೇಲೆ ಸೂಚಿಸಿದ ವ್ಯವಸ್ಥೆಯ ಬದಲು, ಬಾವಿಯಿಂದ ನೀರನ್ನು ಮೇಲೆತ್ತುವ ಕೊಳವೆಗೆ, ರಾಸಾಯನಿಕ ಗೊಬ್ಬರದ ದ್ರಾವಣವನ್ನು ತುಂಬಿದ ಟ್ಯಾಂಕರ್‌ನಿಂದ ಹೊರಟ ಕೊಳೆಯನ್ನು ಜೋಡಿಸಬಹುದು. ಆದರೆ ಈ ವ್ಯವಸ್ಥೆಯಿಂದ ಪಂಪಿನ ಭಾಗಗಳೀಗೆ ರಾಸಾಯನಿಕ ಗೊಬ್ಬರಗಳು ಹಾನಿಯನ್ನುಂಟು ಮಾಡುವ ಸಾಧ್ಯತೆಗಳಿವೆ.

ರಾಸಾಯನಿಕ ಗೊಬ್ಬರಗಳನ್ನು ಬೆಳೆಗೆ ಪೂರೈಸುವಾಗ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:

 • ಸೇಚಕಗಳ ಮೂಲಕ ಪ್ರಾರಂಭದಲ್ಲಿ ಕೆಲವು ಸಮಯದವರೆಗೆ ಕೇವಲ ನೀರನ್ನು ಮಾತ್ರ ಪೂರೈಸಬೇಕು. ಇದರಿಂದ ಮಣ್ಣಿನ ಮೇಲ್ಬಾಗ ಮತ್ತು ಸಸ್ಯಗಳ ಎಲೆಕಾಂಡಗಳು ಒದ್ದೆಯಾಗುತ್ತವೆ.
 • ಪ್ರತಿ ಕಿ. ಗ್ರಾಂ ರಾಸಾಯನಿಕ ಗೊಬ್ಬರವನ್ನು ಸುಮಾರು ೩೦ ಲೀಟರು ನೀರಿನಲ್ಲಿ ಕರಗಿಸಿ ಸೋಸಿ ಈ ದ್ರಾವಣವನ್ನು ಸೇಚಕಗಳ ಮೂಲಕ ಸಿಂಪಡಿಸಬೇಕು. ಸುಮಾರು ೩೦ ನಿಮಿಷಗಳಲ್ಲಿ ಗೊಬ್ಬರಗಳ ದ್ರಾವಣದ ಸಿಂಪರಣೆಯನ್ನು ಮುಗಿಸಬೇಕು.
 • ಇದರ ನಂತರ ಸುಮಾರು ೨೦ ರಿಂದ ೩೦ ನಿಮಿಷಗಳವರೆಗೆ ಕೇವಲ ನೀರನ್ನು ಸೇಚಕಗಳ ಮೂಲಕ ಸಿಂಪಡಿಸುವುದರಿಂದ ಸಸ್ಯಗಳ ಎಲೆ – ಕಾಂಡಗಳ ಮೇಲೆ ಮತ್ತು ಸೇಚಕದ ಕೊಳವೆಗಳ ಮೇಲೆ ಬಿದ್ದ ರಾಸಾಯನಿಕಗಳು ತೊಳೆದು ಹೋಗಿ ಅವುಗಳಿಗೆ ಆಗಬಹುದಾದ ಅಪಾಯವು ತಪ್ಪುತ್ತದೆ.

ಉಪಯೋಗಿಸಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ : ಸೇಚಕಗಳನ್ನು ಒಂದು ಸ್ಥಳದಲ್ಲಿಟ್ಟಾಗ, ಬೇಕಾಗುವ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಲೆಕ್ಕ ಮಾಡುವಾಗ ಕೆಳಗಿನ ಸಂಗತಿಗಳನ್ನು ಪರಿಗಣಿಸಬೇಕು :

 • ಕೊಡಬೇಕೆಂದಿರುವ ರಾಸಾಯನಿಕ ಗೊಬ್ಬರಗಳ ಪ್ರಮಾಣ.
 • ಒಂದು ಸ್ಥಳದಲ್ಲಿ ಸೇಚಕಗಳನ್ನಿಟ್ಟಾಗ ಆವು ನೀರನ್ನು ಪೂರೈಸಬಲ್ಲ ಕ್ಷೇತರ.
 • ಸೇಚಕಗಳ ಸಂಖ್ಯೆ ಮತ್ತು ಎರಡು ಸೇಚಕಗಳ ನಡುವಿನ ಅಂತರ

ಕೆಳಗಿನ ಸೂತ್ರದಿಂದ ಸೇಚಕಗಳನ್ನು ಒಂದೆಡೆ ಇಟ್ಟಾಗ, ಬೇಕಾಗುವ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಲೆಕ್ಕ ಮಾಡಬಹುದು.:

ಬೇಕಾಗುವ ರಾಸಾಯನಿಕ ಗೊಬ್ಬರಗ ಪ್ರಮಾಣ (ಕಿ.ಗ್ರಾಂ) = ಎರಡು ಸೇಚಕಗಳು ಮಧ್ಯದ ಅಂತರ x ಉಪ ಕೊಳೆಗಳು ಮಧ್ಯದ ಅಂತರ x ಸೇಚಕಗಳ ಸಂಖ್ಯೆ x ಪ್ರತಿ ಹೆಕ್ಟೇರಿಗೆ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಕಿ.ಗ್ರಾಂ. / ೧೦,೦೦೦

. ಹನಿ ನೀರಾವರಿಯ ಮೂಲಕ ರಾಸಾಯನಿಕ ಗೊಬ್ಬರಗಳ ಪೂರೈಕೆ : ಹನಿ ನೀರಾವರಿಯ ಮೂಲಕವು ಸಸ್ಯಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಪೂರೈಸಬಹುದು. ಹನಿ ನೀರಾವರಿಯನ್ನು ಅಳವಡಿಸಿರುವ ಎಲ್ಲ ಬೆಳೆಗಳಿಗೂ ಈ ನೀರಾವರಿ ಪದ್ಧತಿಯ ಮೂಲಕ ರಾಸಾಯನಿಕ ಗೊಬ್ಬರಗಳ ಪೂರೈಕೆಯು ಲಾಭದಾಯಕ. ಈ ಪದ್ಧತಿಯಲ್ಲಿ ಕೆಳಗಿನ ಸಂಗತಿಗಳು ಪ್ರಮುಖವಾಗಿವೆ.

 • ನೀರು ಭೂ ಪ್ರದೇಶದ ಎಲ್ಲ ಭಾಗಗಳಲ್ಲಿಯೂ ಸಮನಾಗಿ ಹಂಚಿ ಬೀಳುವ ವ್ಯವಸ್ಥೆ ಇರಬೇಕು.
 • ಸೂಕ್ತ ರಾಸಾಯನಿಕ ಗೊಬ್ಬರಗಳನ್ನು ಆರಿಸಿಕೊಳ್ಳಬೇಕು.
 • ರಾಸಾಯನಿಕ ಗೊ‌ಬ್ಬರಗಳ ದ್ರಾವಣವು ಸೂಕ್ತ ಪ್ರಮಾಣದಲ್ಲಿ ನೀರಿನ ಕೊಳವೆಯನ್ನು ಪ್ರವೇಶಿಸಬೇಕು.

೧೯೯೪ರ ಬೇಸಿಗೆಯಲ್ಲಿ ರಸ ನೀರಾವರಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನ ಭೈರುಂಬೆ ಗ್ರಾಮದ ಅಡಿಕೆಯ ತೋಟದಲ್ಲಿ ಪ್ರಾರಂಬ ಮಾಡಲಾಯಿತು. ಕಳೆದ ಹಲವು ವರ್ಷಗಳ ಅನುಭವದಿಂದ ಈ ಪದ್ಧತಿಯು ಪ್ರಯೋಜನಕಾರಿ ಮತ್ತು ಲಾಭದಾಯಕ ಎಂದು ಕಂಡುಬಂದಿದೆ. ಅಲ್ಲಿ ಅನುಸರಿಸಿದ ಪದ್ಧತಿಯ ಸೂಕ್ಷ್ಮ ಪರಿಚಯವು ಕೆಳಗಿನಂತಿದೆ (ದೀಕ್ಷಿತ ಮತ್ತು ಹೆಗಡೆ, ೨೦೦೧)

i) ಯೂರಿಯಾ, ಡಿ.ಎ.ಪಿ. ಮತ್ತು ಮ್ಯುರಿಯೆಟ್ ಆಫ್ ಪೊಟ್ಯಾಶ್ ಗೊಬ್ಬರಗಳನ್ನು ರಸ ನೀರಾವರಿಗೆ ಆರಿಸಿಕೊಳ್ಳಲಾಯಿತು.

ii) ಒಂದು ವರ್ಷಕ್ಕೆ ಪ್ರತಿ ಅಡಿಗೆ ಮರಕ್ಕೆ ಕೊಡಬೇಕೆಂದಿರುವ ಸಾರಜನಕ,ರಂಜಕದ ಪೆಂಟಾಕ್ಸೈಡ್ ಮತ್ತು ಪೋಟ್ಯಾಶ್‌ಗಳ ಪ್ರಮಾಣವನ್ನು ನಿರ್ಧರಿಸಿ, ಅಷ್ಟು ಪ್ರಮಾಣದ ಪೋಷಕಗಳನ್ನು ಒದಗಿಸಲು ಬೇಕಾಗುವ ಗೊಬ್ಬರಗಳ ಪ್ರಮಾಣವನ್ನು ಲೆಕ್ಕ ಮಾಡಲಾಯಿತು.

iii) ಈ ಪದ್ಧತಿಯನ್ನು ಅಳವಡಿಸಬೇಕೆಂದಿರುವ ಪ್ರದೇಶಗಳಲ್ಲಿರುವ ಅಡಿಕೆ ಮರಗಳನ್ನು ಎಣಿಸಿ ಇಡೀ ಪ್ರದೇಶಕ್ಕೆ ಬೇಕಾಗುವ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಗೊತ್ತುಪಡಿಸಲಾಯಿತು.

iv) ಪ್ರತಿ ವಾರಕ್ಕೊಮ್ಮೆ ಹನಿ ನೀರಾವರಿಯೊಂದಿಗೆ ಸಾರಜನಕ ಗೊಬ್ಬರಗಳನ್ನು ಕೊಡಬೇಕಾಗುವುದೆಂದು ನಿರ್ಧರಿಸಿ, ಒಟ್ಟು ೨೮ ಕಂತುಗಳಲ್ಲಿ, ಮೇಲೆ ಲೆಕ್ಕ ಮಾಡಿದ ಗೊಬ್ಬರವನ್ನು ಹಂಚಿ ಪ್ರತಿ ಕಂತಿಗೆ (ವಾರಕ್ಕೆ) ಕೊಡಬೇಕಾದ ಗೊಬ್ಬರಗಳನ್ನು ಲೆಕ್ಕ ಮಾಡಲಾಯಿತು.

v) ರಾಸಾಯನಿಕ ಗೊಬ್ಬರಗಳು ಪ್ರತಿ ಮರಕ್ಕೂ ನಿರ್ಧಿಷ್ಟ ಪ್ರಮಾಣದಲ್ಲಿಯೇ ಪೂರೈಕೆಯಾಗಬೇಕಾದರೆ ಹನಿ ನಿರಾವರಿ ವ್ಯವಸ್ಥೆಯು ಅದಕ್ಕನುಗುಣವಾಗಿ ಇರಬೇಕಾದದ್ದು ಅತ್ಯಶ್ಯಕ. ಇದಕ್ಕಾಗಿ, ಇಡೀ ಪ್ರದೇಶವನ್ನು ಮೂರು ಭಾಗಗಳಾಗಿ ಮಾಡಿ ಪ್ರತಿ ಭಾಗಕ್ಕೂ ಒಂದೊಂದು ಕ್ಲಾಪೇಟ್‌ ವಾಲ್ವನ್ನು ಅಳವಡಿಸಲಾಯಿತು. ಮುಖ್ಯ ಕೊಳವೆಯೊಳಗಿಂದ ಸರಿಯಾದ ಒತ್ತಡದಲ್ಲಿ ನೀರು ಹರಿಯುವಂತೆ ಯೋಜಿಸಲಾಯಿತು.

vi) ಅಡಿಕೆ ಮರದ ಬುಡದಲ್ಲಿ ನೀರು ಬೀಳು ಮೈಕ್ರೋಟ್ಯೂಬನ್ನು ಬಳಸಲಾಯಿತು. ಡ್ರಿಫ್ಟರ್ ಅಥವಾ ಎಮಿಟರ್ ಗಳನ್ನು ಬಳಸಿದಾಗ ಕೆಲವು ಕಾಲದನಂತರ, ಪಾಚಿಯು ಬೆಳೆದು, ನೀರಿನ ಪ್ರವಾಹಕ್ಕೆ ತಡೆಯುಂಟಾಗುತ್ತದೆ. ಆವುಗಳನ್ನು ಸ್ವಚ್ಧ ಮಾಡುವುದು ಶ್ರಮದ ಕೆಲಸ.

vii) ತೋಟದ ಹಲವು ಕಡೆ, ಅಳತೆಯ ಬಕೆಟ್‌ಗಳನ್ನಿಟ್ಟು, ಎಲ್ಲೆಡೆಯು ಒಂದೇ ಪ್ರಮಾಣದಲ್ಲಿ ನೀರು ಹೊರಬರುತ್ತಿದೆ ಎಂಬುವುದನ್ನು ಖಚಿತಪಡಿಸಿಕೊಳ್ಳಲಾಯಿತು.

viii) ಗೊಬ್ಬರದ ಮಿಶ್ರಣವನ್ನು ನೀರಿನ ಕೊಳವೆಯಲ್ಲಿ ಸೇರಿಸಲು ಹಲವು ವಿಧಾನಗಳಿವೆ. ಉದಾಹರಣೆಗೆ ಪ್ರತ್ಯೇಕ ಟ್ಯಾಂಕಿನಲ್ಲಿ ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ತುಂಬಿ ಪಂಪಿನ ಹರಿಯುವ ನೀರನ್ನು ಈ ಟ್ಯಾಂಕಿನ ಮೂಲಕ ಹೋಗುವಂತೆ ಮಾಡಬಹುದು. ಇಲ್ಲವೆ ವೆಂಚುರಿ ವಿಧಾನವನ್ನು ಅನುಸರಿಸಬಹುದು. ಅಥವಾ ಪಂಪಸೆಟ್ ಗಿಂತ ಅಧಿಕ ಒತ್ತಡದಲ್ಲಿ ದ್ರಾವಣವನ್ನು ನೀರಿನ ಕೊಳೆಗೆ ಕಳುಹಿಸಬಲ್ಲ ಕೈ ಪಂಪು ಅಥವಾ ವಿದ್ಯುತ ಚಾಲಿತ ಪಂಪನ್ನು ಬಳಸಬಹುದು. ಪ್ರಸ್ತುತ ಉದಾಹರಣೆಯಲ್ಲಿ ಗಟೋರ್ (Gator) ಪಂಪನ್ನು ಬಳಸಲಾಗುತ್ತಿದೆ. ಪ್ರತಿ ನಿಮಿಷಕ್ಕೆ ಸುಮಾರು ಒಂದು ಲೀಟರಿನಷ್ಟು ದ್ರಾವಣವನ್ನು ಕೊಳವೆ ಮೂಲಕ ನೀರು ಹರಿಯುತ್ತಿರುವಾಗ ಪಂಪ್ ಸೆಟ್ಟಿನ ಒತ್ತಡಕ್ಕಿಂತ ಅಧಿಕ ಒತ್ತಡವಿರುವಂತೆ ಈ ಗಟೋರ್ ಪಂಪಿನ ಸಹಾಯದಿಂದ ಒಳಗೆ ಸೇರಿಸಲಾಗುತ್ತದೆ.

* * *