) ಸಲ್ಫೇಟ್ ಆಫ್ ಪೊಟ್ಯಾಶ್ (K2SO4)

ಗೊಬ್ಬರವಾಗಿ ಬಳಸುವ ಪೋಟ್ಯಾಸಿಯಂ ಸಲ್ಫೇಟ್‌ನ್ನು ಮಾರುಕಟ್ಟೆಯಲ್ಲಿ ಸಲ್ಫೇಟ್ ಆಫ್ ಪೊಟ್ಯಾಶ್ ಎಂದೇ ಕರೆಯುತ್ತಾರೆ. ಇದರ ಬಣ್ಣ ಬಿಳಿ. ಈ ಗೊಬ್ಬರದಲ್ಲಿ ಸರಾಸರಿ ಶೇಕಡಾ ೫೦ಪೊಟ್ಯಾಶ್ ಇದೆ., ಇದು ನೀರಿನಲ್ಲಿ ಸುಲಭವಾಗಿ ಕರಗುವುದರಿಂದ ತಂಬಾಕು, ಬಟಾಟೆ, ಗೆಣಸು ಇತ್ಯಾದಿ ಬೆಳೆಗಳನ್ನೊಳಗೊಂಡು ಎಲ್ಲ ಬೆಳೆಗಳಿಗೂ ಬಳಸಬಹುದು.

ಮ್ಯುರಿಯೇಟ್ ಅರ್ಫ ಪೊಟ್ಯಾಶ್ ಲವಣದೊಡನೆ ಇರುವ ಲವಣವನ್ನಾಗಲೀ ಅಥವಾ ಗಂದಕಾಮ್ಲವನ್ನಾಗಲಿ ಸೇರಿಸಿ ಸಂಯೋಜಿಸಿದರೆ ಸಲ್ಫೇಟ್ ಆಫ್ ಪೊಟ್ಯಾಶ್ ಸಿದ್ಧವಾಗುತ್ತದೆ. ಈ ಗೊಬ್ಬರದ ಬೆಲೆಯು ಮ್ಯುರಿಯೇಟ್ ಅರ್ಫ ಪೊಟ್ಯಾಶ್ ಗೊಬ್ಬರಕ್ಕಿಂತ ಹೆಚ್ಚು.

) ಪೋಟ್ಯಾಸಿಯಂ ನೈಟ್ರೇಟ್ (KNO3)

ಸಾಲ್ಟ್ ಪೀಟರ್ ಮತ್ತು ನೈಟರ್ ಎಂಬ ಪರ್ಯಾಯ ಹೆಸರುಗಳು ಪೋಟ್ಯಾಸಿಯಂ ನೈಟ್ರೇಟ್ ಗೊಬ್ಬರಕ್ಕಿವೆ. ಇದರಲ್ಲಿ ಶೇಕಡಾ ೧೩ ರಷ್ಟು ಸಾರಜನಕ ಮತ್ತು ೪೪ ರಷ್ಟು ಪೋಟ್ಯಾಶ್ ಇವೆ. ಈ ಗೊಬ್ಬರವನ್ನು ಎಲ್ಲ ಬೆಳೆಳಿಗೆ ಉಪಯೋಗಿಸಬಹುದು. ಅದರ ತಯಾರಿಕೆಯ ಖರ್ಚು ಇತರೆ ಗೊಬ್ಬರಗಳಿಗಿಂತ ಅಧಿಕವಾಗಿರುವುದರಿಂದ ಕೃಷಿಕರಲ್ಲಿ ಇದು ಪ್ರಚಲಿತಗೊಂಡಿಲ್ಲ.

) ಪೋಟ್ಯಾಸಿಯಂ ಶೋನೈಟ್

ಸಮುದ್ರದ ನೀರಿನಿಂದ ಅಡುಗೆ ಉಪ್ಪನ್ನು ತಯಾರಿಸುವಾಗ, ಉಪ್ಪಿನ ಹರಳುಗಳನ್ನು ಹೊರತೆಗೆದುಕೊಂಡ ನಂತರ, ಉಳಿದಿರುವ ದ್ರಾವಣದಲ್ಲಿ, ಪೋಟ್ಯಾಸಿಯಂ ಮೆಗ್ನೀಷಿಯಂ ಸಲ್ಫೇಟ್ (K2SO4, MgSO4, 6H2O) ಉಳಿದಿರುತ್ತದೆ. ಇದರೊಡನೆ ಅಲ್ಪಪ್ರಮಾಣದಲ್ಲಿ ಅಡುಗೆ ಉಪ್ಪು NaCl ಸಹ ಉಳಿದುಕೊಂಡಿರುತ್ತದೆ. ಉಪ್ಪನ್ನು ತಯಾರಿಸುವೆಲ್ಲೆಡೆ ಈ ಗೊಬ್ಬರವನ್ನು ಲಾಭದಾಯಕವಾಗಿ ತಯಾರಿಸಬಹುದೆಂದು ಅಂದಾಜು ಮಾಡಲಾಗಿದೆ.

ಪೋಟ್ಯಾಸಿಯಂ ಮೆಗ್ನಿಷಿಯಂ ಸಲ್ಫೇಟಿನಲ್ಲಿ ಶೇಕಡಾ ೨೨ ಪೊಟ್ಯಾಶ್, ೧೧ ಮೆಗ್ನಿಸಿಯಂ ಮತ್ತು ೨೨ ಗಂಧಕಗಳಿರುತ್ತವೆ. ಈ ಗೊಬ್ಬರವನ್ನು ಬೆಳೆಗಳಿಗೆ ನೇರವಾಗಿ ಪೂರೈಸಬಹುದು. ಇಲ್ಲವೇ ಗೊಬ್ಬರದ ಮಿಶ್ರಣವನ್ನು ತಯಾರಿಸಲೂ ಬಳಸಬಹುದು. ಅಡುಗೆ ಉಪ್ಪಿನ ತಯಾರಿಕೆಯಲ್ಲಿ ಉಪ್ಪು ಉತ್ಪತ್ತಿಯಾದ ಈ ಲವಣದಲ್ಲಿರುವ ಪೋಷಕಗಳ ಪ್ರಮಾಣವನ್ನು ನೋಡಿದಾಗ ಮತ್ತು ಇದು ಭಾರತದಲ್ಲಿಯೇ ಉತ್ಪತ್ತಿಯಾಗಬಲ್ಲದು ಎಂಬುವುದನ್ನು ಪರಿಗಣಿಸಿದಾಗ, ಪೋಟ್ಯಾಸಿಯಂ ಶೋನೈಟ್ ಗೆ ಉಜ್ವಲ ಭವಿಷ್ಯವಿದೆ ಎನ್ನಬಹುದು.

ಪೋಟ್ಯಾಸಿಯಂ ಗೊಬ್ಬರಗಳ ಬಗ್ಗೆ ಕೆಳಗಿನ ಸಂಗತಿಗಳನ್ನು ಗಮನಿಸಬೇಕು.

 • ಪೋಟ್ಯಾಸಿಯಂ ಪೋಷಕಗಳನ್ನು ಪೂರೈಸುವ ರಾಸಾಯನಿಕ ಗೊಬ್ಬರಗಳಲ್ಲಿ ಇರುವ ಪೋಟ್ಯಾಸಿಯಂ ಅನ್ನು ಪೋಟ್ಯಾಶಿಯಂ ಆಕ್ಸೈಡ್ ರೂಪದಲ್ಲಿ ವ್ಯಕ್ತಪಡಿಸುವ ರೂಢಿ ಮೊದಲಿನಿಂದಲೂ ಬಂದಿದೆ. ಇದರ ಬದಲು, ಈ ಪೋಷಕವನ್ನು ಅದರ ಮೂಲ ಧಾತುವಿನ ರೂಪದಲ್ಲಿ ವ್ಯಕ್ತಪಡಿಸಬೇಕೆಂಬ ನಿರ್ಧಾರವನ್ನು ಹಲವು ವರ್ಷಗಳ ಹಿಂದೆಯೇ ಮಾಡಲಾಗಿದೆಯಾದರೂ, ಅದಿನ್ನೂ ಪ್ರಚಲಿತಗೊಂಡಿಲ್ಲ.

ಮೂಲ ಧಾತುವಿಗೆ ಪೋಟ್ಯಾಸಿಯಂ (K) ಎನ್ನುತ್ತಾರೆ
ಪೋಟ್ಯಾಸಿಯಂ x ೧.೨ = ಪೊಟ್ಯಾಶ್ (K x ೧.೨ = K2O)

ಪೊಟ್ಯಾಶ್ x ೦.೮೩ = ಪೋಟ್ಯಾಸಿಯಂ (K2O x ೦.೮೩ = K)

ಮಧ್ಯಮ ಅಲ್ಪ ಪ್ರಮಾಣದಲ್ಲಿ ಬೇಕಾಗುವ ಪೋಷಕಗಳು : ಹವೆ ಮತ್ತು ನೀರಿನ ಮೂಲಕ ದೊರೆಯುವ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಹಾಗೂ ಮಣ್ಣಿನಿಂದ ಪೂರೈಕೆಯಾಗುವ ಸಾರಜನಕ, ರಂಜಕ ಮತ್ತು ಪೋಟ್ಯಾಸಿಯಂ ಈ ಆರು ಪೋಷಕಗಳು, ಬಹು ದೊಡ್ಡ ಪ್ರಮಾಣದಲ್ಲಿ ಸಸ್ಯಗಳಿಗೆ ಬೇಕಾಗುತ್ತವೆ. ಇವುಗಳಲ್ಲದೆ ಇನ್ನೂ ೧೪ ಪೋಷಕಗಳು ಸಸ್ಯಗಳಿಗೆ ದೊರೆತರೆ ಮಾತ್ರ ಅವು ಸರಿಯಾಗಿ ಬೆಳೆದು ತಮ್ಮ ಜೀವನ ಚಕ್ರವನ್ನು ಪೂರ್ತಿಗೊಳಿಸಬಲ್ಲವು. ಮೇಲೆ ಹೇಳಿದ ೬ ಪೋಷಕಗಳೊಡನೆ ತುಲನೆ ಮಾಡಿದರೆ ಈ ೧೪ ಪೋಷಕಗಳು ಮಧ್ಯಮ ಇಲ್ಲವೆ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾದರೆ ಸಾಕಾಗುತ್ತದೆ. ಆದ್ದರಿಂದಲೇ ಇವುಗಳಿಗೆ ಮಧ್ಯಮ ಪ್ರಮಾಣದ ಮತ್ತು ಕಿರುಪೋಷಕಗಳು ಎನ್ನುವರು.

ಈ ಸಂದರ್ಭದಲ್ಲಿ ಒಂದು ಮಹತ್ವದ ಸಂಗತಿಯನ್ನು ಸದಾ ನೆನಪಿನಲ್ಲಿಡಬೇಕು. ಸಸ್ಯಗಳಿಗೆ ಬೇಕಾಗುವ ಪೋಷಕಗಳ ಪ್ರಮಾಣದ ದೃಷ್ಟಿಯಿಂದ ಇವು ಮಧ್ಯಮ ಪ್ರಮಾಣದ ಮತ್ತು ಕಿರು ಪೋಷಕಗಳೇ ಹೊರತು ಮಹತ್ವದ ದೃಷ್ಟಿಯಿಂದ ಎಲ್ಲ ೨೦ಪೋಷಕಗಳು ಸರಿಸಮಾನ. ಯಾವುದೇ ಒಂದು ಪೋಷಕ (ಅದು ದೊಡ್ಡ ಪ್ರಮಾಣ, ಮಧ್ಯಮ ಪ್ರಮಾಣ ಅಥವಾ ಅಲ್ಪ ಪ್ರಮಾಣದಲ್ಲಿ ಬೇಕಾಗುವ ಪೋಷಕವಿರಲಿ) ಕೊರತೆಯುಂಟಾದರೂ ಸಸ್ಯವು ಸರಿಯಾಗಿ ಬೆಳೆಯಲಾರದು ಮತ್ತು ನಿರೀಕ್ಷಿತ ಇಳುವರಿಯೂ ದೊರೆಯಲಾರದು.

ಸುದೈವದ ಸಂಗತಿಯೆಂದರೆ ಮಧ್ಯಮ ಪ್ರಮಾಣದಲ್ಲಿ ಬೇಕಾಗುವ ಪೋಷಕಗಳು ಮತ್ತು ಕಿರು ಪೋಷಕಗಳು ಸಸ್ಯದ ಸಾಮಾನ್ಯ ಬೆಳವಣಿಗೆಗೆ ಸಾಕಾಗುಷ್ಟು ಪ್ರಮಾಣದಲ್ಲಿ ಹಲವು ಬಗೆಹ ಮಣ್ಣುಗಳಲ್ಲಿವೆ. ಹೀಗಾಗಿ ಹೊರಗಿನಿಂದ ಈ ಪೋಷಕಗಳನ್ನು ಪೂರೈಸದಿದ್ದರೂ ಎಷ್ಟೋ ವರ್ಷಗಳವರೆಗೆ ಬೆಳೆಯ ಸಾಧಾರಣ ಮಟ್ಟದ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಮೇಲೆ ತಿಳಿಸಿದ ೧೪ ಪೋಷಕಗಳಲ್ಲಿ ಒಂದಿಲ್ಲೊಂದು ಪೋಷಕದ ಕೊರತೆಯು ಹಲವು ಬೆಳೆಗಳಲ್ಲಿ ಕಂಡುಬರುತ್ತಿದೆ. ಮೆಗ್ನೀಷಿಯಂ, ಸತು, ಕಬ್ಬಿಣ ಮತ್ತು ಬೋರೋನ್‌ಗಳ ಕೊರತೆಯು ಚಿಹ್ನೆಗಳು ಎಷ್ಟೋ ಬೆಳೆಗಳಲ್ಲಿ ಕಂಡು ಬಂದಿವೆ. ಪೋಷಕಗಳ ಕೊರತೆಯ ಚಿಹ್ನೆಗಳು ಕಂಡು ಬರದಿದ್ದರೂ ಈ ಪೋಷಕಗಳನ್ನು ಬೆಳೆಸಲು ಪೂರೈಸಿದಾಗ ಇಳೂವರಿಯು ಅಧಿಕಗೊಂಡ ವರದಿಗಳಿವೆ. ಅಂದರೆ ಈ ಪೋಷಕಗಳ ಕೊರತೆಯು ಅದೃಶ್ಯ ರೂಪದಲ್ಲಿ ಇತ್ತು ಎಂದರ್ಥವಾಯಿತು. ಪೋಷಕಗಳ ಕೊರತೆಯು ಬೆಳೆಗಳಲ್ಲಿ ಇತ್ತೀಚೆಗೆ ಕಂಡು ಬರಲು ಹಲವು ಕಾರಣಗಳಿರಲು ಸಾಧ್ಯ. ಕೆಲವು ಪ್ರಮುಖ ಕಾರಣಗಳು ಕೆಳಗಿನಂತಿವೆ.

i) ಮಣ್ಣು ಮತ್ತು ಸಸ್ಯಗಳಲ್ಲಿರುವ ಪೋಷಕಗಳನ್ನು ಖಚಿತವಾಗಿ ಕಂಡು ಹಿಡಿದು ಕೊರತೆಯನ್ನು ನಿರ್ಧರಿಸುವ ವಿಧಾನಗಳು ಬಳಕೆಯಲ್ಲಿ ಬಂದಿವೆ. ಹೀಗಾಗಿ ಪೋಷಕಗಳ ಕೊರತೆಯನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗಿದೆ.

ii) ಅಧಿಕ ಇಳುವರಿಯನ್ನು ಕೊಡುವ ಹಲವು ಬೆಳೆಗಳಲ್ಲಿ ಹೊಸ ತಳಿಗಳ ಅವಿಷ್ಕಾರ, ನೀರಾವರಿಯ ಅನುಕೂಲತೆಯಲ್ಲಿ ಹೆಚ್ಚಳ, ಸಾರಜನಕ, ರಂಜಕ ಮತ್ತು ಪೋಟ್ಯಾಸಿಯಂ ಗೊಬ್ಬರಗಳ ಬಳಕೆಯಲ್ಲಿ ಏರಿಕೆ, ಸುಧಾರಿಸಿದ ಕೃಷಿ ವಿಧಾನಗಳ ಅನುಸರಣೆ, ಬಹುಬೆಳೆ ಪದ್ಧತಿಯ ಅನುಷ್ಠಾನ ಮುಂತಾದ ಕ್ರಮಗಳಿಂದ ಪ್ರತಿ ಹೆಕ್ಟೇರ ಪ್ರದೇಶದ ಇಳುವರಿಯು ಹೆಚ್ಚಿದೆ. ಇದರ ಪರಿಣಾಮವಾಗಿ ಮಣ್ಣಿನಲ್ಲಿರುವ ಕಿರು ಪೋಷಕಗಳು ಮತ್ತು ಮಧ್ಯಮ ಪರಮಣದಲ್ಲಿ ಬೇಕಾಗುವ ಪೋಷಕಗಳು ಮೊದಲಗಿಂತ ಅಧಿಕ ಪ್ರಮಾಣದಲ್ಲಿ ಬೆಳೆಗಳ ಮೂಲಕ ಹೊರ ಬೀಳುತ್ತಿವೆ.

iii) ಕೃಷಿಕರು ಹಲವು ದಶಕಗಳ ಮೊದಲು ಸಗಣಿ ಗೊಬ್ಬರ, ಕಾಂಪೋಸ್ಟ್ ಇತ್ಯಾದಿಸಾವಯವ ಗೊಬ್ಬರಗಳನ್ನು ಬೆಳೆಗಳಿಗೆ ಮುಕ್ತ ಹಸ್ತದಿಂದ ಪೂರೈಸುತ್ತಿದ್ದರು. ಸಗಣಿಗಾಗಿಯೇ ದನಗಳನ್ನು ಸಾಕುಷ್ಟರ ಮಟ್ಟಿಗೆ ಸಾವಯವ ಗೊಬ್ಬರಕ್ಕೆ ಮಹತ್ವ ನೀಡುತ್ತಿದ್ದರು. ಹಲವು ಪ್ರದೇಶಗಳಲ್ಲಿ ಗಿಡ – ಮರಗಳ ಹಸುರೆಲೆ ಮತ್ತು ಮೃದು ಕಾಂಡಗಳನ್ನು ತಂದು ಕೊಟ್ಟಿಗೆಯಲ್ಲಿ ಪಸರಿಸಿ ಸಗಣಿಯೊಡನೆ ಗೊಬ್ಬರದ ಗುಂಡಿಯಲ್ಲಿ ತುಂಬಿ, ಗೊಬ್ಬರದ ಪ್ರಮಾಣವನ್ನು ಅಧಿಕಗೊಳಿಸುತ್ತಿದ್ದರು. ಹೀಗಾಗಿ ತಿಳಿಯದೆಯೇ ಮಣ್ಣಿಗೆ ಕಿರುಪೋಷಕಗಳ ಪೂರೈಕೆಯು ನಿಯಮಿತವಾಗಿ ಆಗುತ್ತಿತ್ತು. ಕಳೆದಶತಮಾನದ ಮಧ್ಯ ಭಾಗದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯು ಪ್ರಾರಂಭವಾದಾಗಿನಿಂದ ಸಾವಯವ ಗೊಬ್ಬರಗಳ ಪೂರೈಕೆಯು ಕುಗ್ಗುತ್ತ ಸಾಗಿ ಅವು ನಿರ್ಲಕ್ಷ್ಯಕ್ಕೆ ಒಳಗಾದವು. ಇದರಿಂದ ಪ್ರಾಸಂಗಿಕವಾಗಿ ಪೂರೈಕೆಯಾಗುತ್ತಿದ್ದ ಕಿರು ಪೋಷಕಗಳು ಮಣ್ಣಿಗೆ ದೊರೆಯದೇ ಮಣ್ಣಿನಿಂದ ಬೆಳೆಯಮೂಲಕ ಹೊರ ಹೋಗುವ ಕಿರುಪೋಷಕಗಳ ಪ್ರಮಾಣ ಮಾತ್ರ ಮುಂದುವರೆಯಿತು. ಇತ್ತೀಚಿನ ದಿನಗಳಲ್ಲಿ ಸಾವಯವ ಗೊಬ್ಬರಕ್ಕೆ ಮತ್ತೇ ಹೆಚ್ಚಿನ ಬೇಡಿಕೆ ಬರುತ್ತಿರುವುದು ಸಂತಸದ ಸಂಗತಿ ಎನ್ನಬಹುದು.

iv) ಹಲವು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಅಮೋನಿಯಂ ಸಲ್ಫೇಟ್, ಸಿಂಗಲ್ ಸೂಪರ ಫಾಸ್ಪೇಟ್ ಮುಂತಾದ ರಾಸಾಯನಿಕ ಗೊಬ್ಬರಗಳು ಅಷ್ಟು ಶುದ್ಧವಾಗಿರುತ್ತಿರಲಿಲ್ಲ. ಇವುಗಳಲ್ಲಿ ಕೆಲವು ಕಿರು ಪೋಷಕಗಳು ಅಶುದ್ಧ ಪದಾರ್ಥಗಳ ರೂಪದಲ್ಲಿ ಇರುತ್ತಿದ್ದವು. ಹೀಗಾಗಿ ಪ್ರಾಸಂಗಿಕಗವಾಗಿಯೇ ಕೆಲವು ಕಿರು ಪೋಷಕಗಳ ಪೂರೈಕೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಳಕೆಯಲ್ಲಿರುವ ಪೋಷಕಗಳ ಪ್ರಮಾಣವು ಅಧಿಕವಾಗಿರುವುದರಿಂದ ಹೆಚ್ಚು ಪರಿಶುದ್ಧವಾಗಿಯೂ ಇದೆ. ಆದ್ದರಿಂದ ಈ ರಾಸಾಯನಿಕ ಗೊಬ್ಬರಗಳ ಮೂಲಕ ಕಿರು ಪೋಷಕಗಳ ಪೂರೈಕೆಯು ಆಗುವ ಸಾಧ್ಯತೆ ಇಲ್ಲ.

ಮೇಲೆ ವಿವರಿಸಿದ ಕಾರಣಗಳಿಂದ ಕಿರುಪೋಷಕಗಳ ಕೊರತೆಯು ಇತ್ತಿಚೆಗೆ ಎಲ್ಲೆಡೆ ಕಂಡುಬರುತ್ತಿದೆ.

ಮಧ್ಯಮ ಪ್ರಮಾಣದಲ್ಲಿ ಬೇಕಾಗುವ ಪೋಷಕಗಳನ್ನು ಮತ್ತು ಕಿರು ಪೋಷಕಗಳನ್ನು ಪೂರೈಸುವ ವಸ್ತುಗಳು : ಕ್ಯಾಲ್ಸಿಯಂ, ಮೆಗ್ನಿಷಿಯಂ, ಗಂಧಕ ಮತ್ತು ಕಿರು ಪೋಷಕಗಳನ್ನು ಪೂರೈಸುವ ಗೊಬ್ಬರಗಳ (ರಾಸಾಯನಿಕಗಳ ) ಬಗ್ಗೆ ಕೆಲವು ಪ್ರಮುಖ ವಿವರಗಳು ಕೆಳಗಿನಂತಿವೆ.

i) ಕ್ಯಾಲ್ಸಿಯಂ :

 • ಸಸ್ಯಗಳು ಕ್ಯಾಲ್ಸಿಯಂ ಪೋಷಕವನ್ನು ಅದರ ಅಯನ್‌ ರೂಪದಲ್ಲಿ (Ca+2) ಹೀರಿಕೊಳ್ಳುತ್ತವೆ.
 • ಈ ಪೋಷಕವು ಹಲವು ಶಿಲೆತಗಳಲ್ಲಲ್ಲದೇ ಕ್ಯಾಲ್ಸೈಟ್, ಡೋಲೋಮೈಟ್ ಮತ್ತು ಜಿಪ್ಸಂ ಗಳಲ್ಲಿಯೂ ಇರುತ್ತದೆ.
 • ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳ ಮೇಲಿರುವ ಋಣ ಚಾರ್ಜ್‌ಗಳು ಕ್ಯಾಲ್ಸಿಯಂ ಅಯಾನ್‌ಗಳು ಸಸ್ಯಗಳಿಗೆ ಲಭ್ಯವಾಗುತ್ತವೆ.
 •  ಮಣ್ಣಿನ ದ್ರಾವಣದಲ್ಲಿಯೂ ಇದು ಅಯಾನ್‌ ರೂಪದಲ್ಲಿರುತ್ತದೆ. ಈ ಕ್ಯಾಲ್ಸಿಯಂ ಅಯಾನ್‌ಗಳನ್ನೂ ಸಸ್ಯಗಳು ಹೀರಿಕೊಳ್ಳುತ್ತವೆ.
 • ಮಣ್ಣಿನ ದ್ರಾವಣದಲ್ಲಿದ್ದ ಕ್ಯಾಲ್ಸಿಯಂ
  • ನೀರಿನೊಡನೆ ಬಸಿದು ಭೂಮಿಯಾಳಕ್ಕೆ ಚಲಿಸಿ ಹೋಗಬಹುದು.
  • ಸೂಕ್ಷ್ಮ ಜೀವಿಗಳು ಕ್ಯಾಲ್ಸಿಯಂ ಅನ್ನು ಬಳಸಿಕೊಳ್ಳಬಹುದು.
  • ಮೇಲೆ ತಿಳಿಸಿದಂತೆ ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳ ಮೇಲೆ ವಿನಿಮಯ ಕ್ಯಾಲ್ಸಿಯಂ ನಂತೆ ವಾಸಿಸಬಹುದು.
  • ಕ್ಯಾಲ್ಸಿಯಂ ಸಲ್ಫೇಟ್ (ಜಿಪ್ಸಂ) ಇಲ್ಲವೇ ಕ್ಯಾಲ್ಸಿಯಂ ಕಾರ್ಬೊನೇಟ್ ರೂಪಕ್ಕೆ ಪರಿವರ್ತನೆಯನ್ನು ಹೊಂದಬಹುದು.
  • ಕ್ಯಾಲ್ಸಿಯಂ ಬಸಿದು ಹೋಗಿ ಮಣ್ಣು ಹುಳಿಯಾಯಿತೆಂದರೆ, ಸಸ್ಯಗಳ ಮೇಲೆ ಹಲವು ದುಷ್ಪರಿಣಾಮಗಳುಂಟಾಗುತ್ತವೆ. ಆದರೆ ಅಧಿಕ ಮಳೆಯಾಗುವ ಪ್ರದೇಶದಲ್ಲಿಯೂ ಬೆಳೆಗಳಿಗೆ ಬೇಕಾಗುವಷ್ಟು ಕ್ಯಾಲ್ಸಿಯಂ ಮಣ್ಣಿನಲ್ಲಿ ಉಳಿದುಕೊಂಡಿರುವುದರಿಂದ ಕ್ಯಾಲ್ಸಿಯಂ ಕೊರತೆಯಿಂದಾಗುವ ನೇರ ದುಷ್ಪರಿಣಾಮಗಳು ಅಪರೂಪ. ಇಲ್ಲಿ ದುಷ್ಪರಿಣಾಮವಾಗುವುದು ಆಮ್ಲತೆಯಿಂದ.
  • ಸಾವಯವ ಪದಾರ್ಥಗಳಲ್ಲಿ ಮತ್ತು ಕೆಲವು ರಾಸಾಯನಿಕ ಗೊಬ್ಬರಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಅದರಂತೆಯೇ ಕಡಮೆ ಮಳೆ ಬೀಳುವ ಪ್ರದೇಶಗಳಲ್ಲಿರುವ ಮಣ್ಣಿನಲ್ಲಿ ಸುಣ್ಣದ ಕೊರತೆಯಾಗುವುದಿಲ್ಲ. ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಮಣ್ಣಿನ ಆಮ್ಲತೆಯನ್ನು ನೀಗಿಸಲು ಸುಣ್ಣದ ವಸ್ತುಗಳನ್ನು ಮಣ್ಣಿಗೆ ಸೇರಿಸಲಾಗುವುದರಿಂದ ಕ್ಯಾಲ್ಸಿಯಂ ಪೋಷಕಗಳ ಕೊರತೆಯನ್ನು ನೀಗಿಸಲು ಪ್ರತ್ಯೇಕ ಪ್ರಯತ್ನದ ಅವಶ್ಯಕತೆ ಇಲ್ಲ.

ii) ಮೆಗ್ನೀಸಿಯಂ :

 • ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂಗಳಲ್ಲಿ ಬಹಳಷ್ಟು ಸಾಮ್ಯವಿದೆ.
 • ಸಸ್ಯಗಳು ಮೆಗ್ನೀಷಿಯಂ ಅನ್ನು ಅಯಾನ್‌ ರೂಪದಲ್ಲಿ ((Mg+2) ಹೀರಿಕೊಳ್ಳುತ್ತವೆ.
 •  ಈ ಪೋಷಕವು ಹಲವು ಶಿಲೆಗಳಲ್ಲಿ ಇರುವ ಬಯೋಟೈಟ್, ಡೋಲೋಮೈಟ್, ಹಾರ್ನ್ ಬ್ಲೇಂಡ್, ಓಲಿವಿನ್, ಸರ್ಪೇಂಟೈನ, ಮುಂತಾದ ಮೂಲ ಖನಿಜಗಳಲ್ಲಿ ಇರುವುದಲ್ಲದೇ, ಮಣ್ಣಿನಲ್ಲಿರುವ ಜಿನುಗು ಕಣಗಳಲ್ಲಿಯೂ ಎಪ್ಸೋ ಮೈಟ್ ನಂತಹ ಖನಿಜಗಳಲ್ಲಿಯೂ ಇರುತ್ತದೆ.
 • ಮೆಗ್ನೀಸಿಯಂನ ಕೊರತೆಯು ಸಾಮಾನ್ಯವಾಗಿ ಕಂಡುಬರುವುದಿಲ್ಲವಾದರೂ, ಕೆಳಗೆ ತಿಳಿಸಿದ ಸಂದರ್ಭಗಳಲ್ಲಿ ಮೆಗ್ನೀಸಿಯಂನ ಅಭಾವದಿಂದ ಬೆಳೆಯ ಇಳುವರಿಯು ಕಡಮೆಯಾಗುವ ಸಾಧ್ಯತೆ ಇರುತ್ತದೆ.
  • ಅತಿ ಕಡಿಮೆ ವಿನಿಮಯ ಸಾಮರ್ಥ್ಯವಿರುವ ಆಮ್ಲಯುತ ಮರಳು ಮಣ್ಣಿನಲ್ಲಿ
  • ಮೂಲತಃ ಮೆಗ್ನೀಸಿಯಂ ಇಲ್ಲದ ಮೂಳ ದ್ರವ್ಯದಿಂದ ನಿರ್ಮಾಣಗೊಂಡ ಮಣ್ಣಿನಲ್ಲಿ
  • ಮಣ್ಣಿನ ಆಮ್ಲತೆಯನ್ನು ನಿವಾರಿಸಲು ಮೆಗ್ನೀಸಿಯಂ ರಹಿತ ಸುಣ್ಣದ ವಸ್ತುವನ್ನು ಮಣ್ಣಿಗೆ ದೊಡ್ಡ ಪ್ರಮಾಣದಲ್ಲಿ ಸೇರಿಸಿದಾಗ
  • ಸಾಕಷ್ಟು ಮೆಗ್ನೀಷಿಯಂ ಇರದ ಮಣ್ಣಿನಲ್ಲಿ ಮೆಗ್ನೀಷಿಯಂ ಪೋಷಕಾಂಶದ ಅಧಿಕ ಬೇಡಿಕೆ ಇರುವ ಬೆಳೆಗಳನ್ನು ಬೆಳೆಸಿದಾಗ.
  • ಮಣ್ಣಿನ ಅಥವಾ ಸಸ್ಯದ ವಿಶ್ಲೇಷಣೆಯಿಂದ ಮಣ್ಣಿನಲ್ಲಿ ಮೆಗ್ನೀಸಿಯಂನ ಕೊರತೆಯಿದೆ ಎಂದು ತಿಳೀದುಬಂದಲ್ಲಿ, ಮೆಗ್ನೀಷಿಯಂ ಇರುವ ಲವಣಗಳನ್ನು ಪೂರೈಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕೆಳಗಿನ ಸಂಗತಿಗಳನ್ನು ಗಮನಿಸಬೇಕು.
   • ಮಣ್ಣಿನ ಆಮ್ಲತೆಯ ನಿವಾರಣೆಗೆ, ಕ್ಯಾಲ್ಸಿಯಂ, ಕಾರ್ಬೊನೇಟ್‌ನ ಬದಲು ಡೋಲೋಮೈಟನ್ನು ಬಳಸಿದರೆ, ಆಮ್ಲತೆಯನ್ನು ಹೋಗಲಾಡಿಸಿದಂತಾಗುತ್ತದೆಯಲ್ಲದೆ ಮೆಗ್ನಿಷಿಯಂ ಪೋಷಕವನ್ನು ಪೂರೈಸಿದಂತಾಗುತ್ತದೆ.
   • ಮೆಗ್ನೀಸಿಯಂ ಕೊರತೆ ನೀಗಿಸಲು ಮೆಗ್ನೀಸಿಯಂ ಸಲ್ಫೇಟ್, ಮೆಗ್ನೀಸಿಯಂ ಆಕ್ಸೈಡ್ ಇತ್ಯಾದಿ ದ್ರವ್ಯಗಳನ್ನು ಮಣ್ಣಿಗೆ ಸೇರಿಸಬಹುದು.
   • ಮೆಗ್ನೀಸಿಯಂನ ಕೊರತೆಯು ತೀವ್ರವಾಗಿದ್ದು, ಕೊರತೆಯ ಚಿಹ್ನೆಗಳು ಸಸ್ಯಗಳಲ್ಲಿ ಕಾಣಿಸಿಕೊಂಡರೆ, ಮೆಗ್ನಸಿಯಂ ಸಲ್ಫೇಟಿನ ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸಬಹುದು.

iii) ಗಂಧಕ

 • ಸಸ್ಯಗಳು ಗಂಧಕವನ್ನು ಸಲ್ಫೇಟ್ ಅಯಾನ್‌(SO4 – 2) ರೂಪದಲ್ಲಿ ಹೀರಿಕೊಳ್ಳುತ್ತವೆ.
 • ಮೂಲ ಧಾತುವಿನ ರೂಪದಲ್ಲಿ, ಸಲ್ಫೇಟ್ ರೂಪಗಳಲ್ಲಿ ಹಾಗೂ ಸಾವಯವ ಪದಾರ್ಥದಲ್ಲಿ ಗಂಧಕವು ಪ್ರಕೃತಿಯಲ್ಲಿ ಕಂಡುಬರುತ್ತದೆ. ಗಂಧಕವು ಜಿಪ್ಸಂ, ಎಪ್ಸೋಮೈಟ್, ಕೋಬಾಲ್ಟೈಟ್, ಪಾಯ್ರೋಟೈಟ್ ಮುಂತಾದ ಖನಿಜಗಳಲ್ಲಿಯೂ ಇರುತ್ತದೆ.
 • ಅಮೋನಿಯಂ ಸಲ್ಫೇಟ್ ಆಫ್ ಪೊಟ್ಯಾಶ್ ಮುಂತಾದ ರಾಸಾಯನಿಕ ಗೊಬ್ಬರಗಳ ಬಳಕೆಯಲ್ಲಿರುವ ಸಮಯದಲ್ಲಿ ಗಂದಕವು ಪ್ರಾಸಂಗಿಕವಾಗಿಯೇ ದೊಡ್ಡ ಪ್ರಮಾಣದಲ್ಲಿ ಮಣ್ಣಿಗೆ ಬಂದು ಸೇರುತ್ತಿತ್ತು. ಆದರೆ ಈಗ ಇಂತಹ ಗೊಬ್ಬರಗಳ ಬಳಕೆಯು ಅತಿ ಕಡಮೆಯಾಗಿದೆ.
 • ಜಿಪ್ಸಂನ (ಕ್ಯಾಲ್ಸಿಯಂ ಸಲ್ಫೇಟ್) ಬಳಕೆಯಿಂದಲೂ ಮಣ್ಣಿಗೆ ಗಂಧಕವನ್ನು ಸೇರಿಸಬಹುದಾಗಿದೆ.
 • ಸಾವಯವ ಪದಾರ್ಥವು ಕಳಿತಾಗ ಅದರಲ್ಲಿರುವ ಗಂಧಕವು ಮಣ್ಣಿಗೆ ಗಂಧಕವನ್ನು ಸೇರಿಸಬಹುದಾಗಿದೆ.
 • ಸಾವಯವ ಪದಾರ್ಥವು ಕಳಿತಾಗ ಅದರಲ್ಲಿರುವ ಗಂಧಕವು ಮಣ್ಣಿಗೆ ಸೇರುತ್ತದೆ. ಮೇಲೆ ತಿಳಿಸಿದಂತೆ ವಿವಿಧ ಮೂಲಗಳಿಂದ ಗಂಧಕವು ಮಣ್ಣಿಗೆ ಸೇರುವುದರಿಂದ ಕೆಲವು ವಿಶಿಷ್ಟ ಪರಿಸ್ಥಿತಿಗಳನ್ನು ಬಿಟ್ಟರೆ ಬೆಳೆಗಳಿಗೆ ಗಂಧಕದ ಕೊರತೆಯಾಗುವುದಿಲ್ಲ.

iv) ಕಬ್ಬಿಣ :

 • ಕಬ್ಬಿಣವು ಭೂಕವಚದಲ್ಲಿ ಶೇಕಡಾ ೫ ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ಓಲಿವಿನ್, ಪೈರೈಟ್, ಹೆಮೆಟೈಯ್ಟ್, ಮ್ಯಾಗ್ನಟೈಯ್ಟ್, ಲಿಮೋನೈಯ್ಟ್ ಮತ್ತು ಗೋಯೇಥೈಯ್ಟ್ ಇವು ಕಬ್ಬಿಣದ ಖನಿಜಗಳು.
 • ಸಸ್ಯಗಳು ಕಬ್ಬಿಣವನ್ನು ಫೆರಸ್ ಅಯಾನ್‌(Fe+2) ರೂಪದಲ್ಲಿ ತೆಗೆದುಕೊಳ್ಳುತ್ತವೆ.
 • ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೩ರ ಸನಿಹದಲ್ಲಿದ್ದಾಗ, ಮಣ್ಣಿನ ದ್ರಾವಣದಲ್ಲಿ, ಅತಿ ಹೆಚ್ಚು ಪ್ರಮಾಣದಲ್ಲಿ ಕಬ್ಬಿಣವಿರುತ್ತದೆ. ಆದರೆ ಆಮ್ಲತೆಯು ಕಡಮೆಯಾದಂತೆ ದ್ರಾವಣದಲ್ಲಿರುವ ಕಬ್ಬಿಣದ ಪ್ರಮಾಣವು ಒಮ್ಮೆಲೆ ಕುಗ್ಗುತ್ತದೆ.
 • ಸುದೈವದಿಂದ ಮಣ್ಣಿನಲ್ಲಿರುವ ಸಾವಯವ ವಸ್ತುಗಳೊಡನೆ ಕಬ್ಬಿಣವು ಸಂಯೋಜನೆಯನ್ನು ಹೊಂದಿ ಬೆಳೆಗಳಿಗೆ ದೊರೆಯುವಂತಾಗುತ್ತದೆ.
 • ಕಬ್ಬಿಣದ ಕೊರತೆಯಾದರೆ ಕೆಲವು ಬೆಳೆಗಳು ಇಳುವರಿಯು ಗಣನೀಯವಾಗಿ ಕಡಮೆಯಾಗುತ್ತದೆ. ಆದರೆ, ಅದೇ ಪರಿಸ್ಥಿತಿಯಲ್ಲಿ ಕೆಲವು ಬೆಳೆಗಳು ಕಬ್ಬಿಣದ ಕೊರತೆಯನ್ನು ಎದುರಿಸಿ, ಉತ್ತಮ ಇಳುವರಿಯನ್ನು ಕೊಡುತ್ತವೆ. ಕಬ್ಬಿಣದ ಕೊರತೆಯನ್ನು ಎದುರಿಸುವ ಸಾಮರ್ಥ್ಯದ ಮೇಲಿಂದ ಬೆಳೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ.

i) ಕೊರತೆಯನ್ನು ಎದುರಿಸಲಾರದ ಬೆಳೆಗಳು : ಉದಾಹರಣೆಗೆ ಅವರೇ, ಮೇವಿನ ಜೋಳ, ಕಾಳಿಗಾಗಿ ಬೆಳೆಸಿದ ಜೋಳ, ಸೇಂಗಾ ಅವರೇ ದ್ರಾಕ್ಷಿ, ಇತ್ಯಾದಿ,

ii) ಕೊರತೆಯನ್ನು ತಕ್ಕ ಮಟ್ಟಿಗೆ ಎದುರಿಸಬಲ್ಲ ಬೆಳೆಗಳು : ಉದಾಹರಣೆಗೆ – ಕುದುರೆ, ಮೆಂತೆ, ಬಾರ‍್ಲಿ, ಮುಸುಕಿನ ಜೋಳ, ಹತ್ತಿ ಬಟಾಣಿ, ಬತ್ತ, ಸೋಯಾ ಅವರೇ, ಸಕ್ಕರೆಯು ಬೀಟು, ಗೋಧಿ ಇತ್ಯಾದಿ.

iii)  ಕೊರತೆಯನ್ನು ಸಮರ್ಥವಾಗಿ ಎದುರಿಸಬಲ್ಲ ಬೆಳೆಗಳು : ಉದಾಹರಣೆಗೆ – ಕುದುರೆ ಮೆಂತೆ, ಬಾರ‍್ಲಿ, ಮುಸುಕಿನ ಜೋಳ, ಹತ್ತಿ ಬಟಾಣಿ, ಬತ್ತ, ಸೋಯಾ ಅವರೇ, ಸಕ್ಕರೆಯ, ಬೀಟು, ಗೋಧಿ ಇತ್ಯಾದಿ.

ಸೂಚನೆ : ಒಂದೇ ಬೆಳೆಯ ಎರಡು ಅಥವಾ ಮೂರು ಗುಂಪುಗಳಲ್ಲಿ ಸ್ಥಾನವನ್ನು ಪಡೆದಿದೆ. ಮಣ್ಣಿನಲ್ಲಿರುವ ವೈವಿಧ್ಯ, ಅನುಸರಸಿದ ಬೇಸಾಯ ಪದ್ಧತಿ ಮತ್ತು ತಳಿಗಳ ಗುಣಧರ್ಮಗಳು ಇದಕ್ಕೆ ಕಾರಣವೆನ್ನಬಹುದು.

 • ಕಬ್ಬಿಣದ ಕೊರತೆಯನ್ನು ನಿವಾರಿಸಲು ಸಾಮಾನ್ಯವಾಗಿ ಫೆರಸ್ ಸಲ್ಫೇಟ್ ಲವಣವನ್ನು ಮಣ್ಣಿಗೆ ಸೇರಿಸಲಾಗುತ್ತದೆ. ಆದರೆ ಈ ಲವಣವನ್ನು ಮಣ್ಣಿಗೆ ಸೇರಿಸಿದಾಗ ಫೆರಸ್ ರೂಪದಲ್ಲಿರುವ ಕಬ್ಬಿಣವು ಉತ್ಕರ್ಷಣೆಗೊಂಡು ಫೆರಿಕ್ ರೂಪಕ್ಕೆ ಬೇಗನೇ ಪರಿವರ್ತನೆಗೊಳ್ಳುತ್ತದೆಯಾದ್ದರಿಂದ ಸಸ್ಯಗಳಿಗೆ ಕಬ್ಬಿಣವು ದೊರೆಯುವುದಿಲ್ಲ.
 • ಕಬ್ಬಿಣದ ಕೊರತೆಯು ತೀವ್ರವಾಗಿದ್ದರೆ ಮೇಲೆ ಸೂಚಿಸಿದ ಫೆರಸ್ ಸಲ್ಫೇಟ್ ದ್ರಾವಣವನ್ನು ೧೦ ರಿಂದ ೧೫ ದಿನಗಳಿಗೊಮ್ಮೆ ಹಲವು ಬಾರಿ ಸಿಂಪಡಿಸಬಹುದು.
 • ಫೆರಸ್, ಸಲ್ಫೇಟ್‌ನ ಬದಲು ಚೀಲೇಟ್ ರೂಪದ ಕಬ್ಬಿಣವನ್ನು ಮಣ್ಣಿಗೆ ಪೂರೈಸಿದರೆ, ಈ ಪೋಷಕವು ಸಸ್ಯಗಳಿಗೆ ಲಭ್ಯವಾಗುವ ರೂಪದಲ್ಲಿಯೇ ಬಹಳ ಸಮಯದವರೆಗೆ ಉಳಿದು ಕಬ್ಬಿಣದ ಕೊರತೆಯನ್ನೂ ನಿವಾರಿಸುತ್ತದೆ. ಸೋಡಿಯಂ ಕಬ್ಬಿಣವನ್ನು ಮಣ್ಣಿಗೆ ಪೂರೈಸಿದರೆ, ಈ ಪೋಷಕವು ಸಸ್ಯಗಳಿಗೆ ಲಭ್ಯವಾಗುವ ರೂಪದಲ್ಲಿಯೇ ಬಹಳ ಸಮಯದವರೆಗೆ ಉಳಿದು ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ. ಸೋಡಿಯಂ ಕಬ್ಬಿಣ – ಇಡಿಟಿಎ (NaFeEDTA) ಕಬ್ಬಿಣದ ಚೀಲೆಟಿನ ಒಂದು ಉದಾಹರಣೆಯಾಗಿದೆ.
 • ಕಬ್ಬಿಣದ ಚೀಲೇಟ್‌ನ್ನು ಎಲೆಗಳ ಮೇಲೆಯೂ ಲಾಭದಾಯಕವಾಗಿ ಸಿಂಪಡಿಸಬಹುದೆಂದು ಕಂಡುಬಂದಿದೆ.

v) ಸತು :

 • ಕಳೆದ ಹಲವಾರು ವರ್ಷಗಳಿಂದ ಬೆಳೆಗಳಲ್ಲಿ ಸತುವಿನ ಕೊರತೆಯು ಕಂಡುಬರುತ್ತಿದೆ.
 • ಅಗ್ನಿ ಶಿಲೆಗಳಾದ ಬೆಸಾಲ್ಟ್ ಮತ್ತು ಗ್ರಾನೈಟ್ ಗಳಲ್ಲಿ ಸತುವು ಸಣ್ಣ ಪ್ರಮಾಣದಲ್ಲಿ ಇದೆ. ಅದರಂತೆಯೇ ಶೇಲ್, ಸುಣ್ಣದ ಕಲ್ಲು ಮತ್ತು ಮರಳು ಕಲ್ಲುಗಳಲ್ಲಿಯೂ ಸತುವನ್ನು ಕಾಣಬಹುದು.
 • ಸತುವು ಹೆಚ್ಚಾಗಿ ಸಲೈಡ್ ಸಂಗಡ ಸಂಯೋಜನೆಗೊಳ್ಳುತ್ತದೆ. ಆದ್ದರಿಂದ ಸ್ಪಾಲೆರೈಟ್ (ಸತುವಿನ ಸಲ್ಫೇಡ್) ಖನಿಜದಲ್ಲಿ ಸತುವು ಕಂಡುಬರುತ್ತದೆ)
 • ಮಣ್ಣಿನಲ್ಲಿರುವ ಸತುವು ನೀರಿನಲ್ಲಿ ಕರಗುವ ಮತ್ತು ವಿನಿಮಯ ರೂಪಗಳೆರಡಲ್ಲಿ ಇರುತ್ತದೆಯಲ್ಲದೆ, ಮಣ್ಣಿನ ಜಿನುಗು ಕಣಗಳು, ಸಾವಯವ ವಸ್ತುಗಳ ಮತ್ತು ಕಾರ್ಬೊನೇಟ್ ಗಳ ಹೊರ ಮೈ ಸುತ್ತ ಅಂಟಿಕೊಂಡಿರುತ್ತದೆ. ಮಣ್ಣಿನ ಸಾವಯವ ಪದಾರ್ಥದೊಡನೆ ಸತುವು ಸಂಯೋಜನೆಗೊಂಡಿರುವುದನ್ನು ಕಾಣಬಹುದು.
 • ಸಸ್ಯಗಳು ಸತುವನ್ನು ಅಯಾನ್‌ (Zn+2) ರೂಪದಲ್ಲಿ ಹೀರಿಕೊಳ್ಳುತ್ತವೆ.
 • ಆಮ್ಲ ಮಣ್ಣಿನಲ್ಲಿ ಸತುವು ದೊಡ್ಡ ಪ್ರಮಾಣದಲ್ಲಿ ನೀರಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೬ನ್ನು ಮೀರಿತೆಂದರೆ ಬೆಳೆಗಳಿಗೆ ಸತುವಿನ ಕೊರತೆಯಾಗುವ ಸಾಧ್ಯತೆಯು ಹೆಚ್ಚುತ್ತದೆ.
 • ಸಾವಯವ ಪದಾರ್ಥವು ಕಡಮೆ ಇರುವ ಮಣ್ಣಿನಲ್ಲಿ ಸತುವಿನ ಕೊರತೆಯು ಸಾಮಾನ್ಯವಾಗಿ ಕಂಡುಬರುತ್ತದೆ.
 • ಸಾವಯವ ಪದಾರ್ಥದೊಡನೆ ಸಂಯೋಜನೆಯನ್ನು ಹೊಂದಿದ ಸತುವು ಸಸ್ಯಗಳಿಗೆ ಸುಲಭವಾಗಿ ದೊರೆಯುತ್ತದೆ. ಸಾವಯವ ವಸ್ತುಗಳು ಮೇಲ್ಮಣ್ಣಿನಲ್ಲಿಯೇ ಇರುವುದು ಸಾಮಾನ್ಯವಾಗಿರುವುದರಿಂದ ಭೂಮಿಯನ್ನು ಮಟ್ಟ ಮಾಡಲು ಮೇಲಿನ ಮಣ್ಣನ್ನು ತೆಗೆದ ಸ್ಥಳದಲ್ಲಿ ಸತುವಿನ ಕೊರತೆಯು ಕಂಡುಬರಬಹುದು.
 • ಸತುವಿನ ಕೊರತೆಯನ್ನು ನಿವಾರಿಸಲು ಸತುವಿನ ಸಲ್ಫೇಟ ನ್ನು ಬಳಸುವುದು ಸಾಮಾನ್ಯ. ಈ ಲವಣವನ್ನು ಮಣ್ಣಿಗೆ ಸೇರಿಸಬಹುದು. ಇಲ್ಲವೇಇದರ ದ್ರಾವಣವನ್ನು ತಯಾರಿಸಿ ಸಸ್ಯಗಳ ಮೇಲೆ ಸಿಂಪಡಿಸಬಹುದು.
 • ಸತುವಿನ ಸಲ್ಫೇಟ್ ಬದಲು ಸತುವಿನ ಆಕ್ಸೈಡ್, ಸತುವಿನ ಫಾಸ್ಪೇಟ್ ಇಲ್ಲವೇ ಸತುವಿನ ಚೀಲೇಟನ್ನು ಉಪಯೋಗಿಸಬಹುದು. ಸತುವಿನ ಸಲ್ಫೇಟಿನಲ್ಲಿ, ಸತುವಿನ ಪ್ರಮಾಣವು ಶೇಕಡಾ ೩೫ ಮತ್ತು ಸತುವಿನ ಆಕ್ಸೈಡ್‌ನಲ್ಲಿ ಶೇಕಡಾ ೭೮ ಮತ್ತು ಸತುವಿನ ಫಾಸ್ಪೇಟಿನಲ್ಲಿ ಶೇಕಡಾ ೫೧ ಸತುವಿರುತ್ತದೆ. ಸತುವಿನ ಚೀಲೇಟಿಗಳಲ್ಲಿ ಅವುಗಳ ಪ್ರಕಾರಗಳ ಮೇಲಿಂದ ಸತುವಿನ ಪ್ರಮಾಣವು ಶೆಕಡ ೯ ರಿಂದ ೧೪ ಇರುತ್ತದೆ.
 • ಸತುವಿನ ಲವಣವನ್ನು ಬೀಜಗಳಿಗೆ ಲೇಪಿಸಬಹುದು. ಸಸಿಗಳನ್ನು ನಾಟಿ ಮಾಡುವ ಮೊದಲು ಬೇರುಗಳನ್ನು ಲವಣದ ದ್ರಾವಣದಲ್ಲಿ ಅದ್ದಬಹುದು ಇಲ್ಲವೇ ಮರದ ಕಾಂಡದೊಳಗೆ ಸೇರುವಂತೆ ಮಾಡಬಹುದು.
 • ಸತುವಿನ ಕೊರತೆಯು ಚಿಹ್ನೆಯು ಸಸ್ಯಗಳಲ್ಲಿ ಕಂಡು ಬರದಿದ್ದರೂ, ಈ ಪೋಷಕವನ್ನು ಮಣ್ಣಿಗೆ ಸೇರಿಸಿದರೆ ಹಲವು ಪ್ರಸಂಗಗಳಲ್ಲಿ ಅಲ್ಲಿ ಬೆಳೆದ ಬೆಳೆಯು ಅಧಿಕ ಇಳುವರಿಯನ್ನು ಕೊಡುವುದೆಂದು ಕಂಡುಬಂದಿದೆ.
 • ಕಬ್ಬಿಣದ ಬಗ್ಗೆ ವಿವರಿಸುವಾಗ ಈಗಾಗಲೇ ತಿಳಿಯಪಡಿಸಿದಂತೆ ಕೆಲವು ಬೆಳೆಗಳು ಮತ್ತು ಅವುಗಳ ತಳಿಗಳು ಸತುವಿನ ಕೊರತೆಗೆ ಶೀಘ್ರವಾಗಿ ಬಲಿಯಾಗುತ್ತವೆ. ಆದರೆ ಇನ್ನು ಕೆಲವು ಬೆಳೆಗಳು ಅವುಗಳ ತಳಿಗಳು ಸತುವಿನ ಅಭಾವವನ್ನು ಸಮರ್ಥ ರೀತಿಯಿಂದ ಎದುರಿಸಿ ಉತ್ತಮ ಇಳುವರಿಯನ್ನು ಕೊಡುತ್ತವೆ.

vi) ಮ್ಯಾಂಗನೀಸ್ :

 • ಸಸ್ಯಗಳು ಮ್ಯಾಂಗನೀಸ್ ಪೋಷಕವನ್ನು ಮ್ಯಾಂಗನೀಸ್ ಅಯಾನ್‌ ರೂಪದಲ್ಲಿ ತೆಗೆದುಕೊಳ್ಳುತ್ತವೆ.
 • ಮಣ್ಣಿನಲ್ಲಿ ಮ್ಯಾಂಗನೀಸ್ ಕೆಳಗೆ ತಿಳಿಸಿದ ರೂಪದಲ್ಲಿರುತ್ತದೆ :
  • ಮಣ್ಣಿನ ದ್ರಾವಣದಲ್ಲಿ ಕರಗಿದ ರೂಪದಲ್ಲಿ
  • ವಿನಿಮಯ ಹೊಂದುವ ರೂಪದಲ್ಲಿ
  • ಸಾವಯವ ಪದಾರ್ಥಗಳೊಡನೆ ಸಂಯೋಜನೆಗೊಂಡು
  • ವಿವಿಧ ಬಗೆಯ ಆಕ್ಸೈಡ್ ಗಳ ರೂಪದಲ್ಲಿ
  • ಆಮ್ಲ ಮಣ್ಣಿನಲ್ಲಿ ಇದು ನೀರಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಆಮ್ಲಕ್ಷಾರ ನಿರ್ದೆಶಕವು ಅಧಿಕಗೊಂಡಂತೆ ನೀರಿನಲ್ಲಿ ಕರಗಬಲ್ಲ ಮ್ಯಾಂಗನೀಸ್ ‌ಪ್ರಮಾಣವು ಶೀಘ್ರಗತಿಯಿಂದ ಕಡಮೆಯಾಗುತ್ತದೆ.
  • ನೀರು ನಿಂತ ಭೂಮಿಯಲ್ಲಿ ಮತ್ತು ಆಮ್ಲಜನಕದ ಕೊರತೆಯಿರುವಲ್ಲಿ ನೀರಿನಲ್ಲಿ ಕರಗಬಲ್ಲ ಮ್ಯಾಂಗನೀಸ್ನ ಪ್ರಮಾಣವು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ಈ ಪ್ರಮಾಣವು ಸಸ್ಯಗಳಿಗೆ ಅಪಾಯವುಂಟು ಮಾಡುವ ಮಟ್ಟಕ್ಕೆ ಏರಬಹುದು.
  • ಮ್ಯಾಂಗನೀಸ್‌ನ ಕೊರತೆಯು ಕಂಡುಬಂದಾಗ, ಮ್ಯಾಂಗನೀಸ್ ಸಲ್ಫೆಟ್ ನ್ನು (ಶೇ. ೨೬ ರಿಂದ ೨೮ ಮ್ಯಾಂಗನೀಸ್ ಇರುತ್ತದೆ) ಮಣ್ಣಿಗೆ ಸೇರಿಸಬಹುದು. ಮ್ಯಾಂಗನೀಸ್ ಚೀಲೇಟ್ ಗಳೂ ಲಭ್ಯವಿವೆ.

vii) ತಾಮ್ರ :

ಮೇಲ್ವರ್ಗದ ಸಸ್ಯಗಳಿಗೆ ತಾಮ್ರವು ಒಂದು ಅವಶ್ಯಕ ಪೋಷಕವೆಂಬುವುದನ್ನು ೧೯೩೧ರಲ್ಲಿ ಕಂಡುಹಿಡಿಯಲಾಯಿತು. ತಾಮ್ರದ ಕೊರತೆಯು ಸಾಮಾನ್ಯವಾಗಿ ಕಂಡುಬರುವುದಿಲ್ಲವಾದರೂ ಸಾವಯವ ಮಣ್ಣನ್ನು ಸಾಗುವಳಿಗೆ ಹೊಸದಾಗಿ ತಂದರೆ ತಾಮ್ರವು ಕೊರತೆಯಾಗುವ ಸಾಧ್ಯತೆಗಳು ಬಹಳ.

 • ತಾಮ್ರವು ಪ್ರಕೃತಿಯಲ್ಲಿ ಸಲ್ಫೇಡ್ ರೂಪದಲ್ಲಿರುವುದೇ ಸಾಮಾನ್ಯ.
 • ಸಸ್ಯಗಳು ತಾಮ್ರವನ್ನು ಕ್ಯುಪ್ರಸ್ (Cu+) ಮತ್ತು ಕ್ಯುಪ್ರಿಕ್  ಅಯಾನ್‌ (Cu+2) ರೂಪಗಳಲ್ಲಿ ಹೀರಿಕೊಳ್ಳುತ್ತವೆ.
 • ಆಮ್ಲ ಮಣ್ಣಿನಲ್ಲಿ ತಾಮ್ರವು ನೀರಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಆಮ್ಲ – ಕ್ಷಾರ ನಿರ್ದೆಶಕವು ಅಧಿಕಗೊಂಡಂತೆ ತಾಮ್ರವು ನೀರಿನಲ್ಲಿ ಕರಗದ ರೂಪಕ್ಕೆ ಬದಲಾಗುತ್ತದೆ.
 • ಸಾಸಿವೆಯಂತಹ ಕೆಲವು ಬೆಳೆಗಳನ್ನು ಮಣ್ಣಿಗೆ ಸೇರಿಸಿದರೆ ಅದರ ನಂತರ ತೆಗೆದುಕೊಂಡ ಬೆಳೆಯು ತಾಮ್ರದ ಕೊರತೆಯನ್ನು ಅನುಭವಿಸುತ್ತದೆಯೆಂದು ಕಂಡುಬಂದಿದೆ. ಸಾಸಿವೆ ಬೆಳೆಯಲ್ಲಿ ಗಂಧಕದ ಪ್ರಮಾಣವು ಅಧಿಕವಿರುವುದರಿಂದ ಮಣ್ಣಿನಲ್ಲಿರುವ ತಾಮ್ರದ ಗಂಧಕದೊಡನೆ ಸಂಯೋಜನೆಗೊಂಡು, ನೀರಿನಲ್ಲಿ ಕರಗದ ರೂಪಕ್ಕೆ ಪರಿವರ್ತನೆ ಹೊಂದುವುದರಿಂದ ತಾಮ್ರದ ಕೊರತೆಯು ಕಂಡುಬರಲು ಕಾರಣವೆನ್ನಲಾಗಿದೆ.
 • ಗೋಧಿ, ಬತ್ತ, ಕುದುರೆ ಮೆಂತೆ, ತರಕಾರಿಗಾಗಿ ಬಳಸುವ ಬೀಟು ಗಡ್ಡೆ, ಲಿಂಬೆ ವರ್ಗದ ಬೆಳೆಗಳು ಮತ್ತು ಇರುಳ್ಳಿಗಳಲ್ಲಿ ತಾಮ್ರದ ಕೊರತೆಯಾಗುವ ಸಾಧ್ಯತೆಯು ಅಧಿಕ. ತಾಮ್ರದ ಲವಣಗಳನ್ನು ಪೂರೈಸಿದಾಗ ಇವುಗಳ ಇಳುವರಿಯು ಅಧಿಕಗೊಳ್ಳುವ ಸಾಧ್ಯತೆಯಿದೆ.
 • ತದ್ವಿರುದ್ಧವಾಗಿ ಅವರೇ, ಬಟಾಣಿ, ಆಲೂಗಡ್ಡೆ, ಸೋಯಾ ಅವರೆ ಮುಂತಾದ ಬೆಳೆಗಳಲ್ಲಿ ತಾಮ್ರದ ಕೊರತೆಯಾಗುವ ಸಂದರ್ಭಗಳು ಅತಿ ವಿರಳ. ಈ ಬೆಳೆಗಳು ತಾಮ್ರದ ಅಭಾವವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಲು ಕೆಳಗಿನ ಕಾರಣಗಳಿವೆ ಎನ್ನಲಾಗಿದೆ.
  • ಈ ಬೆಳೆಗಳಿಗೆ ತಾಮ್ರದ ಅವಶ್ಯಕತೆ ಕಡಮೆ ಇರಬಹುದು.
  • ಇವು ತಾಮ್ರವನ್ನು ಹೆಚ್ಚು ಸಮರ್ಥವಾಗಿ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬಹುದು.
  • ಪ್ರತಿ ಕ್ಯೂಬಿಕ್ ಮೀಟರು ಮಣ್ಣಿನಲ್ಲಿ ಅಥವಾ ಪ್ರತಿ ಸಸ್ಯಕ್ಕೆ ತುಲನಾತ್ಮಕವಾಗಿ ಅಧಿಕ ಸಂಖ್ಯೆಯಲ್ಲಿ ಬೇರುಗಳಿದ್ದು, ಮಣ್ಣಿನ ಹೆಚ್ಚು ಕಣಗಳೊಡನೆ ಸಂಪರ್ಕವನ್ನು ಹೊಂದಿರಬಹುದು. ಹೀಗಾಗಿ ಹೆಚ್ಚು ತಾಮ್ರವನ್ನು ಹೀರಿಕೊಳ್ಳಲು ಸಾಧ್ಯವಾಗಬಹುದು.
  • ಬೇರುಗಳಿಂದ ಹೊರ ಬಂದ ಆಮ್ಲ ಅಥವಾ ಇತರೆ ರಾಸಾಯನಿಕಗಳು ಮಣ್ಣಿನಲ್ಲಿರುವ ತಾಮ್ರವನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರಬಹುದು. ಹೀಗಾಗಿ ಈ ಸಸ್ಯಗಳಿಗೆ ಹೆಚ್ಚು ತಾಮ್ರವು ದೊರೆಯುತ್ತಿರಬಹುದು.
  • ಬೇರಿನ ಮೂಲಕ ಒಳಗೆ ತೆಗೆದುಕೊಂಡ ತಾಮ್ರವನ್ನು ಸಸ್ಯದ ಮೇಲ್ಬಾಗಕ್ಕೆ ಸಾಗಿಸುವ ಸಮರ್ಥ ವ್ಯವಸ್ಥೆ ಸಸ್ಯದಲ್ಲಿರಬಹುದು.
  • ಒಂದು ಮಿತಿಯನ್ನು ಮೀರಿ ತಾಮ್ರವು ಲಭ್ಯವಾದರೆ ಅದು ಸಸ್ಯಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ, ಸಸ್ಯಗಳಿಗೆ ತಾಮ್ರದ ಅಧಿಕ್ಯದಿಂದ ಅಪಾಯವುಂಟಾಗುವ ಸಾಧ್ಯತೆಗಳು ಕಡಮೆ. ಕೆಳಗೆ ತಿಳಿಯಪಡಿಸಿದ ಸಂದರ್ಭಗಳಲ್ಲಿ ತಾಮ್ರವು ಸಸ್ಯಗಳಿಗೆ ಹಾನಿಯನ್ನುಂಟು ಮಾಡಬಹುದು.
   • ಪಟ್ಟಣಗಳ ಕೊಳಚೆ ನೀರಿನಲ್ಲಿರುವ ಘನ ಪದಾರ್ಥ, ಪಟ್ಟಣದ ಹೊಲಸಿನಿಂದ ತಯಾರಿಸಿದ ಕಾಂಪೋಸ್ಟ್, ಹಂದಿ ಮತ್ತು ಕೋಳಿಯ ಮಲ ಮೂತ್ರಗಳ ನಿರುಪಯೋಗಿ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸಿದಾಗ ತಾಮ್ರವು ವಿಷಕಾರಿ ಮಟ್ಟವನ್ನು ತಲುಪಬಹುದು.
   • ನಿರಂತರವಾಗಿ ಬೋರ್ಡೋ ಮಿಶ್ರಣ, ಕಾಪ್ಪರ ಆಕ್ಸಿಕ್ಲೋರೈಡ್ ಮೊದಲಾದ ತಾಮ್ರಯುಕ್ತ ಶೀಲೀಂದ್ರ ನಾಶಕಗಳನ್ನು ಬಳಸುವುದರಿಂದಲೂ ಮೇಲಿಂದ ಮೇಲೆ ಮೇಲುತುತ್ತೆಯನ್ನು ಉಪಯೋಗಿಸುವುದರಿಂದಲೂ ತಾಮ್ರವು ವಿಷಕಾರಿ ಮಟ್ಟವನ್ನು ಮುಟ್ಟಿ ಸಸ್ಯಗಳಿಗೆ ಹಾನಿಯನ್ನುಂಟು ಮಾಡಬಹುದು.
   • ತಾಮ್ರದ ಕೊರತೆಯನ್ನು ನಿವಾರಿಸಲು ತಾಮ್ರದ ಹಲವು ಬಗೆಯ ಸಂಯುಕ್ತಗಳನ್ನು ಮಣ್ಣಿನ ಮೂಲಕ ಇಲ್ಲವೆ ಎಲೆಗಳ ಮುಖಾಂತರ ಪೂರೈಸಬಹುದು. ಮಣ್ಣಿಗೆ ಒಮ್ಮೆ ಪೂರೈಸಿದ ತಾಮ್ರದ ಸಂಯುಕ್ತವು ಹಲವು ವರ್ಷಗಳವರೆಗೆ ಪರಿಣಾಮಕಾರಿಯಾಗಿ ಉಳಿಯುವುದರಿಂದ ಈ ಪದ್ಧತಿಯಲ್ಲಿ ಒದಗಿಸುವುದೆ ಸಾಮಾನ್ಯ ರೂಢಿ. ಆದರೆ ಕೊರತೆಯ ಲಕ್ಷಣಗಳು ತೀವ್ರವಾದಲ್ಲಿ ತಾಮ್ರದ ಲವಣವನ್ನು ನೀರಿನಲ್ಲಿ ಕರಗಿಸಿ ದ್ರಾವಣವನ್ನು ಸಸ್ಯದ ಮೇಲೆ ಸಿಂಪಡಿಸಬಹುದು.
   • ತಾಮ್ರದ ಸಲ್ಫೇಟನ್ನು ಬಳಸುವುದು ರೂಢಿ. ನೀರಿನಲ್ಲಿ ಕರಗುವ ಈ ಲವಣದಲ್ಲಿ ಶೇಕಡಾ ೩೫ ರಷ್ಟು ತಾಮ್ರವಿದೆ.

viii) ಬೋರಾನ್‌ :

 • ಭೂ ಕವಚಲದಲ್ಲಿ ಬೋರಾನ್‌ ಅತ್ಯಲ್ಪ ಪ್ರಮಾಣದಲ್ಲಿರುತ್ತದೆ.
 • ಮಣ್ಣಿನಲ್ಲಿ ಕಂಡುಬರುವ ಟೂರ್ಮಾಲಿನ್, ಬೋರಾನ್‌ ಇರುವ ಪ್ರಮುಖ ಖನಿಜವಾಗಿದೆ.
 • ಮಣ್ಣಿನಲ್ಲಿ ಬೋರಾನ್‌ ಕೆಳಗಿನ ರೂಪಗಳಲ್ಲಿರುತ್ತದೆ :
  • ಮಣ್ಣಿನ ಸೂಕ್ಷ್ಮ ಕಣಗಳ, ಅದರಂತೆಯೇ ಜಲಯುತ ಕಬ್ಬಿಣ ಮತ್ತು ಅಲ್ಯೂಮಿನಿಯಂ ಆಕ್ಸೈಡ್‌ಗಳ ಹೊರ ಮೈಯನ್ನುಆವರಿಸಿಕೊಂಡಂತೆ.
  • ಸಾವಯವ ಪದಾರ್ಥದೊಡನೆ ಸಂಯೋಜನೆಗೊಂಡ ರೂಪದಲ್ಲಿ ಹಾಗೂ
  • ಮಣ್ಣಿನ ದ್ರಾವಣದಲ್ಲಿ ಬೋರಿಕ್ ಆಮ್ಲ ಮತ್ತು ಬೋರಿಕ್ ಹೈಡ್ರಾಕ್ಸೈಡ ರೂಪದಲ್ಲಿ.
  • ಸಸ್ಯಗಳು ಬೋರಾನನ್ನು ಬೋರೇಟ್ ಅಯಾನ್‌(BO3 – 3)ರೂಪದಲ್ಲಿ ಹೀರಿಕೊಳ್ಳುತ್ತವೆ.
  • ಮರಳು ಭೂಮಿಯಲ್ಲಿ ಬೋರಾನ್‌ಬಸಿದು ಕೆಳಗೆ ಹೋಗುವುದರಿಂದ ಇಂತಹ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಅದರಲ್ಲಿಯೂ ಅಧಿಕ ಬೋರಾನನ ಅವಶ್ಯಕತೆ ಇರುವ ಬೆಳೆಎಗಳು ಈ ಪೋಷಕದ ಕೊರತೆಯನ್ನು ಅನುಭವಿಸಬೇಕಾಗುತ್ತದೆ.
  • ಹುಳಿ ಮಣ್ಣಿನಲ್ಲಿ ನೀರಿನೊಂದಿಗೆ ಕರಗುವ ಬೋರಾನ್‌ ಅಧಿಕ ಪ್ರಮಾಣದಲ್ಲಿರುತ್ತದೆ. ಆಮ್ಲ – ಕ್ಷಾರ ನಿರ್ದೆಶಕವು ಅಧಿಕಗೊಂಡಂತೆ ಬೋರಾನ್, ನೀರಿನಲ್ಲಿ ಕರಗದ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಆದ್ದರಿಂದ, ವಿಷಕಾರಿ ಮಟ್ಟಕ್ಕೆ ಏರಿದ ಬೋರಾನ್‌ನ ಪ್ರಮಾಣವನ್ನು ಕಡಮೆ ಮಾಡಿ ಈ ಪೋಷಕದ ಅಧಿಕ್ಯದಿಂದಾಗುವ ನಷ್ಟವನ್ನು ನಿವಾರಿಸಲು ಮಣ್ಣಿಗೆ ಸುಣ್ಣವನ್ನು ಪೂರೈಸಬೇಕು.
  • ಸಕ್ಕರೆ ಬೀಟನಂತಹ ಕೆಲವು ಬೆಳೆಗಳು ಬೋರಾನ್‌ ಕೊರತೆಯ ಚಿಹ್ನೆಯನ್ನು ಅತಿ ಶೀಘ್ರವಾಗಿ ವ್ಯಕ್ತಪಡಿಸುತ್ತೆ. ಬೇಳೆಕಾಳು ವರ್ಗಕ್ಕೆ ಮತ್ತು ಸಾಸಿವೆ ಕುಟುಂಬಕ್ಕೆ ಸೇರಿದ ಬೆಳೆಗಳಿಗೆ ತೃಣಧಾನ್ಯಳಿಗೆ ಬೇಕಾಗುವುದಕ್ಕಿಂತ ಅಧಿಕ ಬೋರಾನ್‌ಬೇಕಾಗುತ್ತದೆ.
  • ಕ್ಯಾಬೇಜ್, ಕಾಲಿಫ್ಲವರ, ಸಾಸಿವೆ, ಸೂರ್ಯಕಾಂತಿ, ಮೂಲಂಗಿ, ಇತ್ಯಾದಿ ಬೆಳೆಗಳಿಗೆ ಅಧಿಕ ಬೋರಾನ್‌ಅವಶ್ಯಕತೆ ಇದೆ.
  • ಇಲ್ಲಿಯವರೆಗೆ ವಿವರಿಸಿದ ಇತರ ೭ ಪೋಷಕಗಳೊಡನೆ ತುಲನೆ ಮಾಡಿದಾಗ ಬೋರಾನ್‌ ಪೋಷಕವನ್ನು ಪ್ರತಿ ಹೆಕ್ಟೇರಿಗೆ ಅತಿ ಕಡಮೆ ಪ್ರಮಾಣದಲ್ಲಿ ಪೂರೈಸಿದರೆ ಸಾಕು. ಅವಶ್ಯಕತೆಗಿಂತ ಬೋರಾನ್‌ ಪ್ರಮಾಣವು ಸ್ವಲ್ಪ ಮೀರಿದರೂ ಬೆಳೆಗೆ ನಷ್ಟವುಂಟಾಗುತ್ತದೆ. ಆದ್ದರಿಂದ ಬೋರಾನ್‌ ಪೋಷಕವನ್ನು ಪೂರೈಸುವಾಗ ಎಚ್ಚರವಾಗಿರಬೇಕು.
  • ಬೋರಾನ್‌ನ ಪೋಷಕದ ಕೊರತೆಯನ್ನು ನಿವಾರಿಸಲು ಕೆಳಗಿನ ಲವಣಗಳಲ್ಲಿ ಒಂದನ್ನು ಬಳಸಬಹುದು.
   • ಬೋರಿಕ್ ಆಮ್ಲ (ಆರ್ಥೋಬೋರಿಕ್ ಆಮ್ಲ) – (H3BO3) ಶುದ್ಧ ಲವಣದಲ್ಲಿ ಶೇಕಡಾ ೧೭.೭೫ ಬೋರಾನ್‌ ಇದೆ. ಇದು ನೀರಿನಲ್ಲಿ ಸ್ವಲ್ಪ ಮಟ್ಟಿಗೆ ಕರಗುತ್ತದೆ.
   • ಬೋರಾಕ್ಸ್ : (ಸೋಡಿಯಂ ಬೈ ಬೋರೇಟ್ ಅಥವಾ ಸೋಡಿಯಂ ಪೈರೋ ಬೋರೆಟ್ ( (Na2B4O4 O7 10H2O). ಶುದ್ಧ ಲವಣದಲ್ಲಿ ಶೇಕಡಾ ೧೧.೫೨ ಬೋರಾನ್‌ಇದೆ. ಇದು ನೀರಿನಲ್ಲಿ ಕರಗುತ್ತದೆ. ಬೆಳೆಗೆ ಪೂರೈಸಲು ಇದು ಅನುಕೂಲಕರವಾದ ವಸ್ತುವೆನ್ನಬಹುದು.
   • ಬೋರಿಕ್ ಆಕ್ಸೈಡ್ : (ಬೋರಾನ್‌ಟ್ರೈ ಆಕ್ಸೈಡ್ ಅಥವಾ ಬೋರಿಕ್ ಅರ್ನ ಹೈಡ್ರೇಡ್), (B2O3) ಇದರಲ್ಲಿ ಶೆಕಡಾ ೩೧.೪ ರಷ್ಟು ಬೋರಾನ್‌ ಇದೆ. ಇದು ನೀರಿನಲ್ಲಿ ಕರಗಿ ಬೋರಿಕ ಆಮ್ಲವಾಗುತ್ತದೆ.

ix) ಮಾಲಿಬ್ಡಿನಂ.

 • ಉಳಿದೆಲ್ಲ ಸಸ್ಯ ಪೋಷಕಗಳೊಡನೆ ತುಲನೆಮಾಡಿದರೆ, ಭೂ ಕವಚದಲ್ಲಿ ಮತ್ತು ಮಣ್ಣಿನಲ್ಲಿ ಮಾಲಿಬ್ಡಿ ನಂ. ಅತ್ಯಲ್ಪ ಪ್ರಮಾಣದಲ್ಲಿದೆ.
 • ಮಣ್ಣಿನಲ್ಲಿ ಮಾಲಿಬ್ಡಿನಂ ಕೆಳಗಿನ ೫ ರೂಪಗಳಲ್ಲಿ ಕಂಡುಬರುತ್ತದೆ.
  • ಖನಿಜಗಳ ಪದರುಗಳಲ್ಲಿ ವಿನಿಮಯವನ್ನು ಹೊಂದಲಾರದ ರೂಪ.
  • ಮಣ್ಣಿನ ಸೂಕ್ಷ್ಮ ಕಣಗಳ ಮೇಲೆ ವಿನಿಮಯಗೊಳ್ಳುವ ರೂಪ.
  • ನೀರಿನಲ್ಲಿ ಕರಗುವ ರೂಪ.
  • ಕಬ್ಬಿಣದ ಮತ್ತು ಅಲ್ಯೂಮಿನಿಯಂ ಆಕ್ಸೈಡ್ ಗಳೊಡನೆ ಸಂಯೋಜನೆಗೊಂಡ ರೂಪ ಮತ್ತು
  • ಸಾವಯವ ವಸ್ತುಗಳೊಡನೆ ಆಕ್ಸೈಡ್ ಗಳೊಡನೆ ಸಂಯೋಜನೆಗೊಂಡ ರೂಪ ಮತ್ತು
  • ಸಾವಯವ ವಸ್ತುಗಳೊಡನೆ ಸಂಯೋಜನೆಗೊಂಡ ರೂಪ.
  • ಮಾಲಿಬ್ಡಿ ನಂ. ಪೋಷಕವನ್ನುಸಸ್ಯಗಳು ಮಾಲಿಬ್ಡೆಟ್ ಅಯಾನ್‌(MoO4-2) ರೂಪದಲ್ಲಿ ಹೀರಿಕೊಳ್ಳುತ್ತವೆ.
  • ಉಳಿದೆಲ್ಲ ಕಿರುಪೋಷಕಗಳೊಡನೆ ತುಲನೆ ಮಾಡಿದಾಗ ಮಾಲಿಬ್ಡಿನಂ ಒಂದು ವಿಷಯದಲ್ಲಿ ಭಿನ್ನವಾಗಿದೆ. ಆಮ್ಲಯುತ ಮಣ್ಣಿನಲ್ಲಿ ಮಾಲಿಬ್ಡಿನಂನ ಲಭ್ಯತೆಯು ಕಡಮೆ. ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ಅಧಿಕಗೊಂಡಂತೆ ಸಸ್ಯಗಳಿಗೆ ದೊರೆಯುವ ಮಾಲಿಬ್ಡಿನಂನ ಪ್ರಮಾಣವು ಹೆಚ್ಚುತ್ತಾ ಸಾಗುತ್ತದೆ.
  • ಕೆಲವು ಬೆಳೆಗಳು ಮಾಲಿಬ್ಡಿನಂ ಕೊರತೆಗೆ ಬಹುಬೇಗನೇ ತುತ್ತಾಗುತ್ತವೆ. ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳು, ಕಾಲಿಫ್ಲವರ್, ಸಾಸಿವೆ ನಿಂಬೆಯ ವರ್ಗಕ್ಕೆ ಸೇರಿದ ಬೆಳೆಗಳು ಇವೆಲ್ಲ ಈ ಗುಂಪಿಗೆ ಸೇರಿವೆ. ಇವುಗಳಲ್ಲದೆ ಬೀಟು, ಗೆಣಸು, ಟೊಮೆಟೋ ಹತ್ತಿ ಇತ್ಯಾದಿ ಬೆಳೆಗಳೂ ಮಾಲಿಬ್ಡಿನಂನ ಪೋಷಕದ ಕೊರತೆಯಿಂದ ಸಾಕಷ್ಟು ನಷ್ಟಕ್ಕೀಡಾಗುವ ಬೆಳೆಗಳೆನ್ನಬಹುದು. ಆದರೆ ತೃಣಧಾನ್ಯಗಳು ಮಾಲಿಬ್ಡಿನಂನ ಕೊರತೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
  • ಮಾಲಿಬ್ಡಿನಂ ಪೋಷಕವು ಬೆಳೆಯ ಅವಶ್ಯಕತೆಗಿಂತ ಸ್ವಲ್ಪ ಹೆಚ್ಚಾದರೂ ವಿಷಕಾರಿಯೆನಿಸುತ್ತದೆ. ಅಧಿಕ ಪ್ರಮಾಣದ ಮಾಲಿಬ್ಡಿನಂ ಇರುವ ಸಸ್ಯಗಳನ್ನು ಮೇದ ದನಕರುಗಳು ಆಹಾರಕ್ಕೆ ಸಂಬಂಧಿಸಿದ ರೋಗಗಳಿಗೆ ತುತ್ತಾಗುತ್ತವೆ. ಮಾಲಿಬ್ಡಿ ನಂ ಮತ್ತು ತಾಮ್ರಗಳು ಒಂದಕ್ಕೊಂದು ಸಮತೋಲನದಲ್ಲಿ ಇರದಿದ್ದರೂ ದನಕರುಗಳಲ್ಲಿ ಮೇಲೆ ಸೂಚಿಸಿದ ರೋಗಗಳು ಕಾಣಿಸಿಕೊಳ್ಳುತ್ತವೆ.
  • ಕೊರತೆಯನ್ನು ನಿವಾರಿಸಲು ಅತ್ಯಲ್ಪ ಪ್ರಮಾಣದಲ್ಲಿ ಮಾಲಿಬ್ಡಿನಂ ಲವಣವನ್ನು ಮಣ್ಣಿಗೆ ಪೂರೈಸಬೇಕು. ಇದರ ಬದಲು ಬೀಜಗಳನ್ನು ಮಾಲಿಬ್ಡಿನಂ ಲವಣದಿಂದ ಉಪಚರಿಸಬಹುದು. ಇಲ್ಲವೆ ಮಾಲಿಬ್ಡಿನಂ ಲವಣವನ್ನು ನೀರಿನಲ್ಲಿ ಕರಗಿಸಿ ಮಾಢಿದ ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸಬಹುದು.
  • ಅಮೋನಿಯಂ ಮಾಲಿಬ್ಡೇಟ್ (೫೪% ಮಾಲಿಬ್ಡಿನಂ) ಅಥವಾ ಸೋಡಿಯಂ ಮಾಲಿಬ್ಡೇಟ್ (೩೯% ಮಾಲಿಬ್ಡಿನಂ) ಇವುಗಳನ್ನು ಬಳಸಿ ಕೊರತೆಯನ್ನು ನಿವಾರಿಸಬಹುದು.

x) ಕ್ಲೋರಿನ್‌:

 • ಸಸ್ಯಗಳು ಕ್ಲೋರಿನ್‌ ಪೋಷಕಗಳನ್ನು ಕ್ಲೋರಿನ್ನಿನ ಅಯಾನ್‌ (Cl ) ರೂಪದಲ್ಲಿ ತೆಗೆದುಕೊಳ್ಳುತ್ತವೆ.
 • ಹವೆ, ನೀರಾವರಿಯ ಜಲ, ರಾಸಾಯನಿಕ ಗೊಬ್ಬರಗಳು, ಸಸ್ಯ ಸಂರಕ್ಷಣೆಯ ರಾಸಾಯನಿಕ ದ್ರವ್ಯಗಳು ಇತ್ಯಾದಿಗಳ ಮೂಲಕ ಮಣ್ಣಿಗೆ ಕ್ಲೋರಿನ್‌ ಪೂರೈಕೆಯಾಗುತ್ತದೆ.
 • ಸಸ್ಯಗಳಲ್ಲಿ ನೈಟ್ರೇಟ್ ಮತ್ತು ಸಲ್ಫೇಟ್ ಗಳ ಪ್ರಮಾಣವು ಅಧಿಕವಾಗಿದ್ದರೆ, ಸಸ್ಯಗಳು ಕ್ಲೋರಿನನ್ನು ಕಡಮೆ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ.
 •  ಬೀಟು, ಕ್ಯಾಬೇಜ್, ತೆಂಗು ತಾಳೆ ಮೊದಲಾದ ಬೆಳೆಗಳಿಗೆ ಕ್ಲೋರಿನ್‌ ಪ್ರಯೋಜನಕಾರಿ ಎಂದು ಕಂಡುಬಂದಿರುವುದರಿಂದ ಅಡಿಗೆ ಉಪ್ಪು ಇಲ್ಲವೇ ಸಮುದ್ರದ ನೀರನ್ನು ತೆಂಗಿನ ಬೆಳೆಗೆ ಪೂರೈಸುವುದು ಲಾಭದಾಯಕವೆನಿಸಿದೆ.
 • ಕ್ಲೋರಿನ್ನಿನ ಕೊರತೆಯಿಂದ ಸಸ್ಯಗಳ ಮೇಲೆ ಆಗುವ ದುಷ್ಪರಿಣಾಮಕ್ಕಿಂತ ಅದು ಮಿತಿಮೀರಿ ಪೂರೈಕೆಯಾದರೆ ಹಲವು ಅನಾನುಕೂಲಗಳುಂಟಾಗುತ್ತವೆ. ಉದಾ: ಕ್ಲೋರಿನ್ ಪೋಷಕದ ಪೂರೈಕೆಯು ಅಧಿಕಗೊಂಡರೆ:
  • ಮಣ್ಣಿನ ದ್ರಾವಣದಿಂದ ಸಸ್ಯಗಳು ನೀರನ್ನು ಸುಲಭವಾಗಿ ಹೀರಿಕೊಳ್ಳಲಾರವು.
  • ಕೆಲವು ಹಣ್ಣಿನ ಮರ ಬಳ್ಳಿಗಳ ಎಲೆಗಳು ಕ್ಲೋರಿನ್‌ನ ಆಧಿಕ್ಯದಿಂದ ಸುಟ್ಟಂತೆ ಕಾಣುತ್ತವೆ.
  • ತಂಬಾಕು ಮತ್ತು ಟೊಮೊಟೊ ಎಲೆಗಳು ದಪ್ಪವಾಗಿ ಸುರಳಿಯಾಗಿ ಸುತ್ತಿಕೊಳ್ಳುತ್ತವೆ.
  • ಬಟಾಟೆ ಮತ್ತು ತಂಬಾಕಿನ ಗುಣಮಟ್ಟವು ಕುಗ್ಗುತ್ತದೆ.
  • ಕ್ಲೋರಿನ್‌ನ ಪೋಷಕದ ಕೊರತೆಯನ್ನು ನಿವಾರಿಸುವ ಪ್ರಸಂಗವು ಬಂದದ್ದೇ ಆದರೆ, ಅಮೋನಿಯಂ ಕ್ಯಾಲ್ಸಿಯಂ ಮೆಗ್ನೀಷಿಯಂ ಪೋಟ್ಯಾಸಿಯಂ ಇಲ್ಲವೇ ಸೋಡಿಯಂ ಇವುಗಳಲ್ಲಿ ಯಾವುದಾದರೂ ಒಂದರ ಕ್ಲೋರೈಡ್ ಲವಣವನ್ನು ಮಣ್ಣಿಗೆ ಸೇರಿಸಬೇಕು.