) ಆಮ್ಲಗೊಳಿಸುವ ಕ್ರಮ :

ರಂಜಕ ಶಿಲೆ + ನೈಟ್ರೀಕ್ ಆಮ್ಲ → ರಂಜಕಾಮ್ಲ + ಕ್ಯಾಲ್ಸಿಯಂ ನೈಟ್ರೇಟ್ + ಹೈಡ್ರೋಫ್ಲೋರಿಕ್ ಆಮ್ಲ
Ca10F2 (PO4)2 + 2HNO3 → 2H2 PO4 + 10Ca (NO3)2 + 2HF

) ಡೈ ಅಮೋನಿಯಂ ಫಾಸ್ಪೇಟನ್ನು ಸೇರಿಸುವ ಕ್ರಮ :

+ ಡೈ ಆಮೋನಿಯಂ ಫಾಸ್ಪೇಟ್ →  ಅಮೋನಿಯಂ ನೈಟ್ರೇಟ್ + ಕ್ಯಾಲ್ಸಿಯಂ ನೈಟ್ರೇಟ್ + ಮೋನೋ ಕ್ಯಾಲ್ಸಿಯಂ ಫಾಸ್ಫೇಟ್ + ಕ್ಯಾಲ್ಸಿಯಂ ಫ್ಲೋರೈಡ್ + ರಂಜಕಾಮ್ಲ

+ 7(NH4)2 HPO4 → 14NH4 NO3 + 3CA (NO3)2 + 6Ca (H2PO4)2 + CaF2 + H3PO4

) ಅಮೋನಿಯಾವನ್ನು ಸೇರಿಸುವ ಕಾರ್ಯ :

+ ಅಮೋನಿಯಾ → ಅಮೋನಿಯಂ ನೈಟ್ರೇಟ್ + ಮೋನೋ ಆಮೋನಿಯಂ ಫಾಸ್ಫೇಟ್ + ಕ್ಯಾಲ್ಸಿಯಂ ಫಾಸ್ಫೇಟ್ + ಕ್ಯಾಲ್ಸಿಯಂ ಫ್ಲೋರೈಡ್

+ 10NH3 → 20NH4 NO3 + 4NH4 H2PO4 + 9Ca HPO4 + CaF2

ಮೇಲಿನ ಪದ್ಧತಿಗಳಿಂದ ತಯಾರಿಸಿದ ಸಂಕೀರ್ಣ ಗೊಬ್ಬರದಲ್ಲಿ, ಕ್ಯಾಲ್ಸಿಯಂ ನೈಟ್ರೇಟನ್ನು ನಿವಾರಿಸಿದಂತಾಗುತ್ತದೆಯಲ್ಲದೆ ಕೊನೆಗೆ, ಅಮೋನಿಯಂ ನೈಟ್ರೇಟ್ ಮೋನೋ ಅಮೋನಿಯಂ ಫಾಸ್ಫೇಟ್ ಮತ್ತು ಡೈ ಕ್ಯಾಲ್ಸಿಯಂ ಫಾಸ್ಫೇಟ್ ಗಳು ಉಳಿದುಕೊಳ್ಳುತ್ತವೆ. ಇದಕ್ಕೆ ಪೋಟ್ಯಾಸಿಯಂ ಲವಣವನ್ನು ಸೇರಿಸಿದರೆ, ಸಾರಜನಕ, ರಂಜಕ ಮತ್ತು ಪೋಟ್ಯಾಸಿಯಂ ಗಳನ್ನು ಪೂರೈಸಬಲ್ಲ ಸಂಕೀರ್ಣ ಗೊಬ್ಬರವು ಸಿದ್ಧವಾಗುತ್ತದೆ.

ಮೇಲಿನ ರಾಡಿಯನ್ನು ಸಣ್ಣ ಗುಳಿಗೆಳನ್ನಾಗಿ ಪರಿವರ್ತಿಸಿ ಜರಡಿಯೊಳಗಿನಿಂದ ಹಾದು ಬರುವಂತೆ ಮಾಡಲಾಗುತ್ತದೆ. ಗುಳಿಗೆಗಳು ಒಂದಕ್ಕೊಂದು ಕೂಡಿಕೊಂಡು ಗಂಟು ಗಳಾಗುವುದನ್ನು ತಪ್ಪಿಸಲು ಮತ್ತು ಆಕರ್ಷಕವಾಗಿ ಕಾಣಲು, ಸೂಕ್ತ ವಸ್ತುವಿನಿಂದ ಈ ಗುಳಿಗೆಗಳನ್ನು ಲೇಪಿಸಲಾಗುತ್ತದೆ.

ಸಾರಜನಕ, ರಂಜಕ ಮತ್ತು ಪೋಟ್ಯಾಸಿಯಂ ಪೋಷಕಗಳು ವಿವಿಧ ಪ್ರಮಾಣದಲ್ಲಿ ಇರುವಂತೆ, ವಿವಿಧ ಬಗೆಯ ಸಂಕೀರ್ಣ ಗೊಬ್ಬರಗಳನ್ನು ತಯಾರಿಸಬಹುದು.

ಸಂಕೀರ್ಣ ಗೊಬ್ಬರಗಳ ಕೆಲವು ವಿಶಿಷ್ಟ ಗುಣಗಳು : ಮೇಲೆ ವಿವರಿಸಿದಂತೆ ಸಿದ್ಧಪಡಿಸಿದ ಸಂಕೀರ್ಣ ಗೊಬ್ಬರಗಳ ಕೆಲವು ಪ್ರಮುಖ ಗುಣಗಳು ಕೆಳಗಿನಂತಿವೆ.

 • ಗೊಬ್ಬರದ ಒಟ್ಟು ತೂಕದಲ್ಲಿ, ಶೇಕಡಾ ೪೦ ರಿಂದ ೪೫ ರಷ್ಟು ಪೋಷಕಗಳೇ ಇರುತ್ತವೆ.
 • ಸಾರಜನಕದಲ್ಲಿ ಅರ್ಧಭಾಗ ಅಮೋನಿಯಂ ರೂಪದಲ್ಲಿಯೂ ಉಳಿದರ್ದ ಭಾಗ ನೈಟ್ರೇಟ್ ರೂಫದಲ್ಲಿಯೂ ಇದೆ.
 • ನೀರಿನಲ್ಲಿ ಮತ್ತು ಸಿಟ್ರೀಟಿನಲ್ಲಿ ಕರಗುವ ಎರಡು ರೂಪಗಳಲ್ಲಿ ರಂಜಕವು ಈ ಗೊಬ್ಬರದಲ್ಲಿದೆ. ಇವೆರಡೂ ರೂಪದ ರಂಜಕದ ಪ್ರಮಾಣವನ್ನು ಹೆಚ್ಚು ಕಡಮೆ ಮಾಡಲು ಸಾಧ್ಯವಿದೆ.
 • ಸಿಟ್ರೀಟಿನಲ್ಲಿ ಕರಗದ ರೂಪದಲ್ಲಿರುವ ರಂಜಕವು ಈ ಗೊಬ್ಬರಗಳಲ್ಲಿ ಇರುವುದಿಲ್ಲ.
 • ಗೊಬ್ಬರಗಳನ್ನು ಒಂದೇ ಆಕಾರದ, ಆಕರ್ಷಕ ಗುಳಿಗೆಗಳ ರೂಪದಲ್ಲಿ ತಯಾರಿಸಲಾಗುತ್ತದೆಯಲ್ಲದೇ, ಸಂಗ್ರಹದಲ್ಲಿ ಗಂಟುಗಳಾಗದಂತೆ ಉಪಚರಿಸಲಾಗುತ್ತದೆ. ಆದ್ದರಿಂದ ಸಂಗ್ರಹಿಸಲು ಮತ್ತು ಬಳಸಲು ಅನುಕೂಲಕರ.

x) ಶಿಲಾರಂಜಕ : ಕೆಲವು ರಂಜಕ ಶಿಲೆಗಳು, ರಂಜಕದ ಗೊಬ್ಬರವನ್ನು ತಯಾರಿಸಲು ಉತ್ತಮ ಗುಣಮಟ್ಟವನ್ನು ಹೊಂದಿರುವುದಿಲ್ಲ. ಅಂತಹ ಶಿಲೆಗಳನ್ನು ಪುಡಿ ಮಾಡಿ, ರಂಜಕ ಗೊಬ್ಬರವೆಂದು ಮಣ್ಣಿಗೆ ನೇರವಾಗಿ ಪೂರೈಸಬಹುದು. ಇಂತಹ ಗೊಬ್ಬರಕ್ಕೆ ಶಿಲಾರಂಜಕವೆಂದು ಹೆಸರು.

ಶಿಲಾರಂಜಕದೊಳಗಿನ ರಂಜಕದ ಪ್ರಮಾಣವು, ಶಿಲೆ ಗುಣ ಧರ್ಮಗಳ ಮೇಲಿಂದ ವಿಭಿನ್ನವಾಗಿರುತ್ತದೆ. ಈ ಶಿಲೆಗಳಲ್ಲಿ ರಂಜಕದ ಪ್ರಮಾಣವು, ಶಿಲೆ ಗುಣಧರ್ಮಗಳ ಮೇಲಿಂದ ವಿಭಿನ್ನವಾಗಿರುತ್ತದೆ. ಈ ಶಿಲೆಗಳಲ್ಲಿ ರಂಜಕದ ಪೆಂಟಾಕ್ಸೈಡ್‌ನ ಪ್ರಮಾಣವು ಶೇಕಡಾ ೨೦ ರಿಂದ ೪೦ರವರೆಗೆ ಇರಬಹುದು.

ಈ ಕೆಳಗಿನ ಸಂದರ್ಭಗಳಲ್ಲಿ ಶಿಲಾ ರಂಜಕವು ಉತ್ತಮ ಗೊಬ್ಬರವೆನಿಸುತ್ತದೆ :

 • ಆಮ್ಲಯುತ ಮಣ್ಣಿಗೆ
 • ಕಬ್ಬಿನಂತಹ ದೀರ್ಘಾವಧಿ ಬೆಳೆಗೆ
 • ನೀರಾವರಿಯ ವ್ಯವಸ್ಥೆಯು ಇರುವಲ್ಲಿ
 • ಬಹುವಾರ್ಷಿಕ ಬೆಳೆಗಳಿಗೆ
 • ಬತ್ತದ ಬೆಳೆಗೆ

ಶಿಲಾರಂಜಕವನ್ನು ಅತಿ ಜಿನುಗು ಪುಡಿಯನ್ನಾಗಿ ಮಾಡಬೇಕು. ಈ ಗೊಬ್ಬರವನ್ನು ಮಣ್ಣಿನ ಮೇಲ್ಬಾಗದಲ್ಲಿ ಸಮನಾಗಿ ಹರಡಿ, ಮಣ್ಣಿನೊಡನೆ ಬೆರೆಯುವಂತೆ ಮಾಡಬೇಕು. ಇದಕ್ಕಾಗಿ ಯೋಗ್ಯ ಉಪಕರಣಗಳನ್ನು ಬಳಸಬೇಕು. ಮಣ್ಣಿನ ಕಣಗಳೊಡನೆ ಹೆಚ್ಚು ಸಂಪರ್ಕ ಬಂದಷ್ಟೂ ಉತ್ತಮ.

xi) ಡೈ ಕ್ಯಾಲ್ಸಿಯಂ ಫಾಸ್ಫೇಟ್ : ರಂಜಕ ಶಿಲೆಯ ಪುಡಿಗೆ ಹರಿತ ಪೀತಾಮ್ಲ (HCl) ವನ್ನು ಸೇರಿಸಿ ಡೈ ಕ್ಯಾಲ್ಸಿಯಂ ಫಾಸ್ಫೇಟನ್ನು ತಯಾರಿಸಲಾಗುತ್ತದೆ. ಈ ಗೊಬ್ಬರವು ಬಿಳಿಯ ಪುಡಿಯ ರೂಪದಲ್ಲಿರುತ್ತದೆ. ಇದರಲ್ಲಿ ರಂಜಕದ ಪೆಂಟಾಕ್ಸೈಡ್ ಪ್ರಮಾಣವು ೩೫ ರಿಂದ ೩೮ರ ವರೆಗೆ ಇರುತ್ತದೆ.

ಡೈ ಕ್ಯಾಲ್ಸಿಯಂ ಫಾಸ್ಫೇಟಿನಲ್ಲಿರುವ ರಂಜಕವು ನೀರಿನಲ್ಲಿ ಕರಗುವುದಿಲ್ಲ. ಆದರೆ ಸಿಟ್ರೇಟಿನಲ್ಲಿ ಕರಗುತ್ತದೆ. ಈ ರಂಜಕವು ಬೆಳೇಗೆ ನಿಧಾನವಾಗಿ ಲಭ್ಯವಾಗುತ್ತದೆ. ಕಬ್ಬಿನಂತಹ ದೀರ್ಘಾವಧಿ ಬೆಳೆಗೆ ಈ ಗೊಬ್ಬರವು ಪ್ರಯೋಜನಕಾರಿ ಎನಿಸಿದೆ.

ಉಷ್ಣತೆಯ ಸಹಾಯದಿಂದ ನಿರ್ಮಾಣಗೊಂಡ ರಂಜಕಗೊಬ್ಬರಗಳು : ಇಲ್ಲಿಯವರೆಗೆ ವರ್ಣಿಸಿದ ರಂಜಕದ ಗೊಬ್ಬರಗಳ ನಿರ್ಮಾಣದಲ್ಲಿ ಆಮ್ಲವನ್ನು ಬಳಸಲಾಗಿದೆ. ಇದಲ್ಲದೇ, ಉಷ್ಣತೆಯು ಸಹಾಯದಿಂದ ನಿರ್ಮಾಣಗೊಂಡ ಕೆಲವು ಗೊಬ್ಬರಗಳಿಗೆ.

ಕೆಲವು ನ್ಯೂನತೆಗಳು: ಉಷ್ಣತೆಯ ಸಹಾಯದಿಂದ ನಿರ್ಮಿಸಿದ ರಂಜಕ ಗೊಬ್ಬರಗಳಲ್ಲಿ ಕೆಲವು ನ್ಯೂನತೆಗಳಿವೆ. ಉದಾಹರಣೆಗೆ :

 • ಆಮ್ಲವನ್ನು ಬಳಸಿ ತಯಾರಿಸಿದ ರಂಜಕ ಗೊಬ್ಬರಗಳಿಗಿಂತ ಈ ರಂಜಕ ಗೊಬ್ಬರಗಳ ಬೆಲೆಯು ಸಾಮಾನ್ಯವಾಗಿ ದುಬಾರಿಯಾಗಿರುತ್ತದೆ.
 • ರಂಜಕವು ನೀರಿನಲ್ಲಿ ಕರಗುವ ರೂಪದಲ್ಲಿರುವುದಿಲ್ಲ. ಅಲ್ಲದೇ, ಗೊಬ್ಬರದಲ್ಲಿಯ ಪೂರ್ತಿ ರಂಜಕವು ಬೆಳೆಗಳಿಗೆ ಲಭ್ಯವಾಗುವುದಿಲ್ಲ.
 • ಸಾರಜನಕ, ರಂಜಕ ಮತ್ತು ಪೋಟ್ಯಸಿಯಂಗಳಿರುವ ಗೊಬ್ಬರವನ್ನು ತಯಾರಿಸಲು ಈ ಗೊಬ್ಬರಗಳು ಪ್ರಯೋಜನಕಾರಿಗಳಲ್ಲ.

ಗೊಬ್ಬರವನ್ನು ತಯಾರಿಸುವಾಗ ಉಷ್ಣತೆಯ ಸಹಾಯದಿಂದ ರಂಜಕ ಶಿಲೆಯಲ್ಲಿರುವ ಪ್ಲೋರಿನ್ನನ್ನು ಹೊರದೂಡಲಾಗುತ್ತದೆ. ಆದ್ದರಿಂದಲೇ ಈ ಗುಂಪಿನ ಗೊಬ್ಬರಗಳಿಗೆ ಫ್ಲೋರಿನ್‌ರಹಿತ ಗೊಬ್ಬರಗಳೆಂಬ ಹೆಸರಿದೆ.

ರಂಜಕ ಶಿಲೆಯಲ್ಲಿರುವ ಫ್ಲೋರಿನ್‌ನ್ನು ಹೊರ ಹಾಕಲು ಎರಡು ಪದ್ಧತಿಗಳಿವೆ :

 • ಕ್ಯಾಲ್ಸಿನೇಶನ್‌ ಪದ್ಧತಿ : ಸಿಲಿಕಾ ಮತ್ತು ನೀರಿನ ಆವಿಯ ಸಾನ್ನಿಧ್ಯದಲ್ಲಿ, ರಂಜಕ ಶಿಲೆಯನ್ನು ಕಾಯಿಸುತ್ತಾರೆ (ಬಿಸಿ ಮಾಡುತ್ತಾರೆ). ಉಷ್ಣತಾಮಾನವನ್ನು ಶಿಲೆಯು ಕರಗುವ ಬಿಂದುವಿಗಿಂತ ಸ್ವಲ್ಪ ಕಡಮೆ ಮಟ್ಟಕ್ಕೆ ಇಡುತ್ತಾರೆ. ಶಿಲೆಯು ಏಕ ರೂಪವಾಗಿ ಸಚ್ಛಿದ್ರವಾಗುತ್ತದೆ.
 • ಕರಗಿಸುವ ಪದ್ಧತಿ :ಮೇಲೆ ಹೇಳಿದ ಮಿಶ್ರಣದಲ್ಲಿ ಉಷ್ಣತಾಮಾನವನ್ನು, ಶಿಲೆಯು ಕರಗುವ ಬಿಂದುವಿಗಿಂತ ಮೇಲ್ಮಟ್ಟಕ್ಕೆ ಏರಿಸಲಾಗುತ್ತದೆ. ಮಿಶ್ರಣವು ಕರಗಿ ಗಾಜಿನ ವಸ್ತುವಿನಂತಾಗುತ್ತದೆ. ಆದನ್ನು ಪುಡಿ ಮಾಡಿ ಬಳಸಬೇಕು.

ಉಷ್ಣತೆಯ ಸಹಾಯದಿಂದ ತಯಾರಿಸಿದ ಹಲವು ವಸ್ತುಗಳನ್ನು ಗೊಬ್ಬರವಾಗಿ ಬಳಸಬಹುದು:

i) ಫ್ಲೋರಿನ್‌ ರಹಿತ ರಂಜಕ ಶಿಲೆ : ರಂಜಕ ಶಿಲೆಯನ್ನು ಜಿನುಗು ಪುಡಿಯನ್ನಾಗಿಸಿ ಸಿಲಿಕಾ ಮತ್ತು ನೀರಿನೊಡನೆ ಮಿಶ್ರಮಾಡಿ ರಾಡಿಯನ್ನಾಗಿ ಮಾಡಬೇಕು. ಈ ರಾಡಿಯ ಉಷ್ಣತಾಮಾನವನ್ನು ೧೪೮೦ ಡಿಗ್ರಿಯಿಂದ ೧೫೯೦ ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಸಬೇಕು. ಸುಮಾರು ೩೦ ನಿಮಿಷಗಳ ನಂತರ, ದ್ರವ್ಯವನ್ನು ನೀರಿನಲ್ಲಿ ಹಾಕಬೇಕು. ಅನಂತರ ಹೊರ ತೆಗೆದು ಪುಡಿ ಮಾಡಿ ಬಳಸಬೇಕು. ಈ ಗೊಬ್ಬರದಲ್ಲಿ ಶೇಕಡಾ ೨೧ ರಷ್ಟು ರಂಜಕದ ಪೆಂಟಾಕ್ಸೈಡ್ ಇದೆ. ಶೇಕಡಾ ೧೮ ರಷ್ಟು ರಂಜಕದ ಪೆಂಟಾಕ್ಸೈಡ್ ಮಾತ್ರ ಸಿಟ್ರೇಟಿನಲ್ಲಿ ಕರಗುತ್ತದೆ.

ii) ರಂಜಕ ಶಿಲೆಮೆಗ್ನಿಷಿಯಂ ಸಿಲಿಕೇಟ್ ಗ್ಲಾಸ್ : ರಂಜಕದ ಶಿಲೆಯನ್ನು ಓಲಿವಿನ್‌ ಅಥವಾ ಸರ್ಪೆಂಟೈನ್‌ ಸಂಗಡ ಮಿಶ್ರಮಾಡಿ ೧೫೫೦ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಕರಗಿಸಿ, ಆರಿದ ನಂತರ ಪುಡಿಮಾಡಿ ಗೊಬ್ಬರವಾಗಿ ಉಪಯೋಗಿಸಬಹುದು. ಗೊಬ್ಬರವನ್ನು ತಯಾರಿಸುವಲ್ಲಿ ಗಂಧಕವು ಲಭ್ಯವಿಲ್ಲದಿರುವಾಗ ಈ ಪದ್ಧತಿಯಿಂದ ಗೊಬ್ಬರವನ್ನು ತಯಾರಿಸಬಹುದು.

ಆಮ್ಲ ಮಣ್ಣಿಗೆ ಈ ಗೊಬ್ಬರವು ಉಪಯುಕ್ತವಾಗಿದೆ. ಈ ಗೊಬ್ಬರದಲ್ಲಿ, ಒಟ್ಟು ರಂಜಕದ ಪೆಂಟಾಕ್ಸೈಡ್ ಪ್ರಮಾಣವು ಶೇಕಡ ೧೯ ಇದೆ.

iii) ರ್ಹಿನಾನಿಯಾ ಫಾಸ್ಫೇಟ್ : ರಂಜಕದ ಶಿಲೆಉಪುಡಿಯೊಂದಿಗೆ ‘ಸೋಡಾ ಯ್ಯಾಷ್’ ಮತ್ತು ಸಿಲಿಕಾಗಳನ್ನು ಮಿಶ್ರಮಾಡಿದ ಈ ಮಿಶ್ರಣದ ಉಷ್ಣತಾಮಾನವನ್ನು ೧೧೦೦ ಡಿಗ್ರಿ – ೧೨೦೦ ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಸಲಾಗುತ್ತದೆ. ಮಿಶ್ರಣವನ್ನು ನೀರಿನಲ್ಲಿ ಆರಿಸಿ ಪುಡಿ ಮಾಡಿ ಗೊಬ್ಬರವೆಂದು ಉಪಯೋಗಿಸಬಹುದು.

ರ್ಹಿನಾನಿಯಾ ಫಾಸ್ಫೇಟನ್ನು ಜರ್ಮನಿಯಲ್ಲಿ ಮೊಟ್ಟ ಮೊದಲು ೧೯೧೭ರ ಸುಮಾರಿಗೆ ತಯಾರಿಸಲಾಯಿತು. ಇದರಲ್ಲಿ ಶೇಕಡಾ ೨೮ ರಂಜಕ ಪೆಂಟಾಕ್ಸೈಡ್ ಇದೆ. ಇದರಲ್ಲಿ ಬಹುದೊಡ್ಡ ಭಾಗವು (೨೭.೫ ಶೇಕಡ ರಂಜಕದ ಪೆಂಟಾಕ್ಸೈಡ್) ಸಿಟ್ರೀಟಿನಲ್ಲಿ ಕರಗುವ ರಂಜಕವಾಗಿದೆ. ( ಈ ಗೊಬ್ಬರವು ಆಮ್ಲ ಮಣ್ಣಿಗೆ ಹೆಚ್ಚು ಪ್ರಯೋಜನಕಾರಿ ಎನಿಸಿದೆ. ಯೂರೋಪ ಖಂಡದ ಕೆಲವು ದೇಶಗಳಲ್ಲಿ ಈ ಗೊಬ್ಬರವು ಪ್ರಚಲಿತವಿದೆ.

iv) ಕ್ಯಾಲ್ಸಿಯಂ ಮೆಟಾ ಫಾಸ್ಫೇಟ್ : ಜರ್ಮನಿಯಲ್ಲಿ ೧೯೨೯ರ ಸುಮಾರಿಗೆ ಕ್ಯಾಲ್ಸಿಯಂ ಮೆಟಾ ಫಾಸ್ಫೇಟನ್ನು ಸಹ ತಯಾರಿಸಲಾಯಿತು. ಈ ಗೊಬ್ಬರದಲ್ಲಿ ಶೇಕಡಾ ೬೪ ರಷ್ಟು ಒಟ್ಟು ಮತ್ತು ಶೇಕಡಾ ೬೩ ರಷ್ಟು ಸಿಟ್ರೇಟಿನಲ್ಲಿ ಕರಗುವ ರಂಜಕದ ಪೆಂಟಾಕ್ಸೈಡ್ ಇದೆ. ಅತಿಕಡಮೆ ಬೆಲೆಯಲ್ಲಿ ವಿದ್ಯುತ ಶಕ್ತಿಯು ದೊರೆಯುವ ಪ್ರದೇಶದಲ್ಲಿ ಮಾತ್ರ ಈ ಗೊಬ್ಬರವನ್ನು ತಯಾರಿಸಲು ಅರ್ಥಿಕ ದೃಷ್ಟಿಯಿಂದ ವಾಸ್ತವ್ಯವೆನಿಸೀತು. ಆಮ್ಲ ಮಣ್ಣಿಗೆ ಈ ಗೊಬ್ಬರವು ಪ್ರಯೋಜನಕಾರಿ ಎನಿಸಿದೆ.

v) ಬೇಸಿಗ್ ಸ್ಯ್ಲಾಗ್ : ಬೇಸಿಕ್ ಸ್ಯ್ಲಾಗ್ ಇದು ಉಕ್ಕಿನ ಉದ್ದಿಮೆಯಲ್ಲಿಯ ಒಂದು ಉಪವಸ್ತು. ಉಕ್ಕನ್ನು ತಯಾರಿಸುವಾಗ ಬಳಸಲಾದ ಸುಣ್ಣವು ಕಬ್ಬಿಣದ ಅದಿರಿನಲ್ಲಿರುವ ರಂಜಕದೊಡನೆ ಸಂಯೋಜನೆಯನ್ನು ಹೊಂದಿ, ಜೊಂಡಿನ ರೂಪದಲ್ಲಿ ಮೇಲೆ ತೇಲುತ್ತದೆ. ಇದನ್ನು ಪುಡಿ ಪುಡಿ ಮಾಡಿ ಗೊಬ್ಬರವಾಗಿ ಉಪಯೋಗಿಸಬಹುದು.

ಬೇಸಿಕ್ ಸ್ಲ್ಯಾಗ್ ನಲ್ಲಿರುವ ರಂಜಕದ ಪ್ರಮಾಣವು ಕಬ್ಬಿಣದ ಅದಿರಿನಲ್ಲಿರುವ ರಂಜಕದ ಪ್ರಮಾಣವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಈ ಗೊಬ್ಬರದಲ್ಲಿರುವ ಒಟ್ಟು ರಂಜಕದ ಪೆಂಟಾಕ್ಸೈಡ್ ಪ್ರಮಾಣವು ಶೇಕಡಾ ೨ ರಿಂದ ಶೇಕಡಾ ೧೮ ರಷ್ಟಿರಬಹುದು. ಸ್ಲ್ಯಾಗ್ ನಲ್ಲಿರುವ ಒಟ್ಟು ರಂಜಕದ ಶೇಕಡಾ ೬೦ ರಿಂದ ೮೦ ರಷ್ಟು ಸಿಟ್ರೇಟಿನಲ್ಲಿ ಕರಗುವ ರೂಪದಲ್ಲಿರುತ್ತದೆ.

ಬೇಸಿಕ್ ಸ್ಲ್ಯಾಗ್ ಗೊಬ್ಬರವು ಆಮ್ಲ ಮಣ್ಣಿಗೆ ಹೆಚ್ಚು ಉಪಯುಕ್ತವೆನಿಸಿದೆ. ಇದು ಬೆಳೆಗಳಿಗೆ, ರಂಜಕವನ್ನು ಒದಗಿಸುವುದಲ್ಲದೇ, ಮಣ್ಣಿನ ಆಮ್ಲತೆಯನ್ನೂ ಕಡಮೆ ಮಾಡುತ್ತದೆ. ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳಿಗೆ ಈ ಗೊಬ್ಬರವು ಹೆಚ್ಚು ಪರಿಣಾಮಕಾರಿ ಎನಿಸಿದೆ.

ಮೇಲೆ ವಿವರಿಸಿದ ರಂಜಕದ ಗೊಬ್ಬರಗಳಿಗೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಕೋಷ್ಟಕ ೨೫ರಲ್ಲಿ ಕೊಡಲಾಗಿದೆ.

ಕೋಷ್ಟಕ೨೫ : ರಂಜಕದ ಗೊಬ್ಬರಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳು: (ಪುಟ ಸಂಖ್ಯೆ : ೨೪೭)

 ವಿವಿಧ ಪ್ರಕಾರಗಳ ರಂಜಕಗೊಬ್ಬರಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು : ಇಲ್ಲಿಯವರೆಗೆ ವಿವರಿಸಿದ ಹಲವು ರಂಜಕ ಗೊಬ್ಬರಗಳ ಬಗ್ಗೆ ಮುಂದಿನ ಸಂಗತಿಗಳನ್ನು ತಿಳಿದುಕೊಂಡರೆ, ಆ ಗೊಬ್ಬರಗಳನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಬಹುದು.

.ರಂಜಕ ಗೊಬ್ಬರಗಳಲ್ಲಿರುವ ರಂಜಕದ ಪ್ರಕಾರದ ಮೇಲಿಂದ ನಿರ್ವಹಣೆ:

i) ರಂಜಕವು ನೀರಿನಲ್ಲಿ ಕರಗುವ ರೂಪದಲ್ಲಿದ್ದರೆ ಕೆಳಗಿನ ಸಂದರ್ಭಗಳಲ್ಲಿ ಬಳಸಬಹುದು:

 • ಆಮ್ಲ – ಕ್ಷಾರ ನಿರ್ದೆಶಕವು ೬.೫ ಕ್ಕಿಂತ ಅಧಿಕವಿರುವ ಮಣ್ಣಿಗೆ
 • ಅಲ್ಪಾವಧಿಯ (೫ – ೬ ತಿಂಗಳುಗಳಿಗಿಂತ ಕಡಮೆ ಅವಧಿಯ) ಬೆಳೆಗಳಿಗೆ.
 • ಸಸ್ಯದ ಆರಂಭಿಕ ಬೆಳವಣಿಗೆಯನ್ನು ಚುರುಕುಗೊಳಿಸುವ ಅವಶ್ಯಕತೆ ಇರುವಾಗ.

ii) ರಂಜಕವು ಸಿಟ್ರೇಟ್ ನಲ್ಲಿ ಕರಗುವ ರೂಪದಲ್ಲಿದ್ದರೆ ಕೆಳಗಿನ ಪ್ರಸಂಗಗಳಲ್ಲಿ ಬಳಸುವುದು ಉತ್ತಮ.

 • ಮಧ್ಯಮ ಆಮ್ಲದ ಮಣ್ಣಿಗೆ
 • ಸಸ್ಯದ ಪ್ರಾರಂಭಿಕ ಬೆಳವಣಿಗೆಯನ್ನು ಚುರುಕುಗೊಳಿಸುವ ಅವಶ್ಯಕತೆ ಇಲ್ಲದಿರುವಾಗ ಮತ್ತು ಬೀಜಗಳನ್ನು ಬಿತ್ತುವುದಕ್ಕಿಂತ ಅಥವಾ ಸಸಿಗಳನ್ನು ನೆಡುವುದಕ್ಕಿಂತ ಮೊದಲು ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕಾದ ಪ್ರಸಂಗವಿದ್ದಾಗ.
 • ಚಹಾ , ಕಾಫಿ, ಚಹಾ, ರಬ್ಬರು, ಕೋಕೋ ಮೊದಲಾದ ದೀರ್ಘಾವಧಿಯ ಅಥವಾ ಬಹುವಾರ್ಷಿಕ ಬೆಳೆಗಳಿಗೆ.
 • ಬೆಳೆಗಳ ಪರಿವರ್ತನೆಯಲ್ಲಿ ಬೇಳೆ ಕಾಳು ವರ್ಗಕ್ಕೆ ಸೇರಿದ ಬೆಳೆಗಳಿದ್ದರೆ

iii) ನೀರು ಮತ್ತು ಸಿಟ್ರೇಟ್ನಲ್ಲಿ ಕರಗದ ರೂಪದಲ್ಲಿ ರಂಜಕವಿರುವ ರಾಸಾಯನಿಕ ಗೊಬ್ಬರಗಳನ್ನು ಕೆಳಗಿನ ಪರಿಸ್ಥಿತಿಯಿದ್ದಾಗ ಉಪಯೋಗಿಸಬೇಕು:

 • ಆಮ್ಲಯುತ ಮಣ್ಣಿಗೆ
 • ಬಹುವಾರ್ಷಿಕ ಬೆಳೆಗಳಿಗೆ
 • ಗೊಬ್ಬರವನ್ನು ಪೂರೈಸಿದೊಡನೆ ಬೆಳೆಗಳ ಮೇಲೆ ರಂಜಕದ ಪರಿಣಾಮವು ಆಗಬೇಕೆಂಬ ಅವಶ್ಯಕತೆ ಇಲ್ಲದಿರುವಾಗ
 • ಮಣ್ಣಿನಲ್ಲಿ ರಂಜಕದ ತೀವ್ರತೆ ಕೊರತೆಯಿದ್ದು, ಕೊರತೆಯನ್ನು ನೀಗಿಸಲು ರಂಜಕ ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸಬೇಕೆಂದಿರುವಾಗ

. ಮಣ್ಣಿಗೆ ಪೂರೈಸಿದ ರಾಸಾಯನಿಕ ಗೊಬ್ಬರದಲ್ಲಿಯ ರಂಜಕದ ಪರಿವರ್ತನೆ :

ನೀರಿನಲ್ಲಿ ಕರಗುವ ರಂಜಕವಿರುವ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿಗೆ ಪೂರೈಸಿದರೆ ರಂಜಕದಲ್ಲಿ ಮುಂದಿನ ಪರಿವರ್ತನೆಗಳು ಉಂಟಾಗುತ್ತವೆ.

i) ಕ್ಯಾಲ್ಸಿಯಂ ಅಥವಾ ಮೆಗ್ನಿಷಿಯಂ ಪ್ರತಿಕ್ರಿಯೆಗೊಂಡಾಗ.

ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ೭ಕ್ಕಿಂತ ಅಧಿಕವಾಗಿದ್ದಾಗ ನೀರಿನಲ್ಲಿ ಕರಗುವ ರೂಪದಲ್ಲಿರುವ ರಂಜಕವು ಕೆಳಗಿನಂತೆ ಬದಲಾವಣೆಯನ್ನು ಹೊಂದಿ ನೀರಿನಲ್ಲಿ ಕರಗದಂತಾಗುತ್ತದೆ.

ಮೋನೋ ಕ್ಯಾಲ್ಸಿಯಂ ಫಾಸ್ಪೇಟ್  + ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್  —->  ಟೆಟ್ರಾ ಕ್ಯಾಲ್ಸಿಯಂ ಫಾಸ್ಫೇಟ್ —-> ಇಂಗಾಲದ ಡೈ ಆಕ್ಸೈಡ + ನೀರು

Ca (H2PO4) + CaCO3 —-> Ca3 ( PO4)2 + CO2 + H2O

ii) ಕಬ್ಬಿಣ ಇಲ್ಲವೇ ಅಲ್ಯೂಮಿನಿಯಿಂಗಳೊಡನೆ ಪ್ರತಿಕ್ರಿಯೆಗೊಂಡಾಗ

ಆಮ್ಲ ಮಣ್ಣಿನಲ್ಲಿ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಪ್ರಾಬಲ್ಯವಿರುತ್ತದೆ. ಅಂತಹ ಮಣ್ಣಿಗೆ ಕರಗುವ ರೂಪದಲ್ಲಿರುವ ರಂಜಕವನ್ನು ಪೂರೈಸಿದರೆ ಕೆಳಗೆ ತೋರಿಸಿದ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ.

ಸಕ್ರಿಯ ಅಲ್ಯೂಮಿನಿಯಂ + ನೀರಿನಲ್ಲಿ ಕರಗುವ ರಂಜಕ + ನೀರು —-> ಕರಗದ ಅಲ್ಯೂಮಿನಿಯಂ ಫಾಸ್ಪೇಟ್ + ಜಲಜನಕ ಅಯಾನ್

A13+ + H2PO4 + 2H2O —-> Al (OH)2, H2PO4 + 2H+

iii) ಮಣ್ಣಿನ ಸೂಕ್ಷ್ಮ ಕಣಗಳೊಡನೆ ಪ್ರತಿಕ್ರಿಯೆಗೊಂಡಾಗ

ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳ ರಚನೆಯ ಭಾಗವಾಗಿರುವ ಹೈಡ್ರಾಕ್ಸಿಲ್‌ನ (OH) ಸ್ಥಾನವನ್ನು ರಂಜಕ ಗೊಬ್ಬರದಲ್ಲಿರುವ HPO4 ಅಯಾನ್‌ ಆಕ್ರಮಿಸುತ್ತದೆ. ಈ ಕ್ರಿಯೆಯಿಂದ, ರಂಜಕವು ಸೂಕ್ಷ್ಮ ಕಣಗಳಲ್ಲಿ ಸ್ಥಿರಗೊಳ್ಳುತ್ತದೆ ಮತ್ತು ಬೆಳೆಗಳಿಗೆ ಸುಲಭವಾಗಿ ಸಿಗದಂತಾಗುತ್ತದೆ.

iv) ಸೂಕ್ಷ್ಮ ಜೀವಿಗಳು ರಂಜಕವನ್ನು ಬಳಸಿಕೊಳ್ಳುವುದರಿಂದ :

ಮಣ್ಣಿನಲ್ಲಿ ವಾಸಿಸುವ ಅಸಂಖ್ಯಾತ ಸೂಕ್ಷ್ಮ ಜೀವಿಗಳು ಬೆಳೆದು ಅಭಿವೃದ್ಧಿಹೊಂದಲು ರಂಜಕವು ಅವಶ್ಯ. ಈ ಜೀವಿಗಳು ರಂಜಕವನ್ನು ತೆಗೆದುಕೊಂಡವೆಂದರೆ, ಬೆಳೆಗಳಿಗೆ ರಂಜಕದ ಕೊರತೆಯಾಗಬಹುದು. ಆದರೆ ಈ ಸೂಕ್ಷ್ಮ ಜೀವಿಗಳ ಮರಣಾ ನಂತರ ಅವು ಕಳಿತು, ಅವುಗಳ ದೇಹದಲ್ಲಿರುವ ರಂಜಕವು ವಿಮೋಚನೆಗೊಂಡು, ಬೆಳೆಗೆ ಸಿಗುವಂತಾಗುತ್ತದೆ. ಆದ್ದರಿಂದ ಈ ರೀತಿಯ ಸ್ಥಿರೀಕರಣವು ತಾತ್ಪೂರ್ತಿಕ.

v) ಸಾವಯವ ಪದಾರ್ಥದೊಡನೆ ಸಂಯೋಜನೆ :

ಮಣ್ಣಿನಲ್ಲಿರುವ ಸಾವಯವ ಪದಾರ್ಥದೊಡನೆಯೂ ನೀರಿನಲ್ಲಿ ಕರಗುವ ರಂಜಕವು ಸಂಯೋಜನೆಗೊಂಡು ಸಸ್ಯಗಳಿಗೆ ದೊರೆಯದಿರಬಹುದು. ಈ ರೀತಿಯ ಸ್ಥಿರೀಕರಣವು ಸಹ ತಾತ್ಪೂರ್ತಿಕವಾಗಿರುವುದರಿಂದ, ಕೆಲವು ದಿನಗಳ ನಂತರ ಈ ಪೋಷಕವು ಬೆಳೆಗಳಿಗೆ ದೊರೆಯುವಂತಾಗುತ್ತದೆ.

) ನೀರಿನಲ್ಲಿ ಕರಗುವ ರೂಪದಲ್ಲಿರುವ ರಂಜಕವು, ಕರಗದ ರೂಪಕ್ಕೆ ಪರಿವರ್ತನೆಯನ್ನು ಹೊಂದುವ ಕ್ರಿಯೆಯನ್ನು ಕಡಮೆ ಮಾಡುವ ವಿಧಾನಗಳು : ಮಣ್ಣಿಗೆ ಪೂರೈಸಿದ ರಂಜಕವು, ಮೇಲೆ ವಿವರಿಸಿದಂತೆ ಕರಗದ ರೂಪಕ್ಕೆ ಬದಲಾಗುವ ಕ್ರಿಯೆಯು ಅನಿವಾರ್ಯವೆನ್ನಬಹುದು. ಆದರೆ ಈ ಪರಿವರ್ತನೆಯ ವೇಗವನ್ನು ಕೆಲವು ಮಟ್ಟಿಗೆ ನಿಧಾನಗೊಳಿಸಿ ರಂಜಕವು ಹೆಚ್ಚು ಸಮಯದವರೆಗೆ ಬೆಳೆಗೆ ಸಿಗುವಂತೆ ಮಾಡಲು ಸಾಧ್ಯವಿದೆ. ಕೆಳಗೆ ಸೂಚಿಸಿದ ಬೇಸಾಯದ ವಿಧಾನಗಳು ಈ ದಿಶೆಯಲ್ಲಿ ಪ್ರಯೋಜನಕಾರಿ ಎನಿಸಿವೆ.

i) ರಂಜಕ ಗೊಬ್ಬರಗಳನ್ನು ಸಾಲಿನಲ್ಲಿ ಪೂರೈಸುವ ಕ್ರಮ

ನೀರಿನಲ್ಲಿಕರಗುವ ರೂಪದಲ್ಲಿ ರಂಜಕ ಗೊಬ್ಬರವನ್ನು, ಸಾಲುಗಳಲ್ಲಿ ಅಥವಾ ನಿರ್ಧಿಷ್ಟ ಸ್ಥಳಗಳಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ಗೊಬ್ಬರದ ಮತ್ತು ಮಣ್ಣಿನ ಕಣಗಳ ಸಂಪರ್ಕವು ತುಲನಾತ್ಮಕವಾಗಿ ಕಡಮೆಯಾಗುವುದರಿಂದ ರಂಜಕದ ಸ್ಥೀರಿಕರಣವು ನಿಧಾನವಾಗಿ ಸಾಗುತ್ತದೆ. ಇದರ ಪರಿಣಾಮವಾಗಿ ರಂಜಕವು ಬೆಳೆಗಳಿಗೆ ಹೆಚ್ಚು ದಿನಗಳವರೆಗೆ ಸಿಗುವಂತಾಗುತ್ತದೆ.

ii) ಹಳಕು ರೂಪದಲ್ಲಿರುವ ಗೊಬ್ಬರದ ಬಳಕೆ

ನೀರಿನಲ್ಲಿ ಕರಗುವ ರಂಜಕವಿರುವ ಗೊಬ್ಬರಗಳನ್ನು ಜಿನುಗು ಪುಡಿಯ ರೂಪದಲ್ಲಿ ಮಣ್ಣಿಗೆ ಪೂರೈಸುವ ಬದಲು ಹರಳಿನ ರೂಪದಲ್ಲಿ ಪೂರೈಸಿದರೆ, ಗೊಬ್ಬರ ಮತ್ತು ಮಣ್ಣಿನ ಕಣಗಳ ಸಂಪರ್ಕವು ಕಡಮೆಯಾಗಿ, ಬೆಳೆಗಳಿಗೆ ರಂಜಕವು ಹೆಚ್ಚು ದಿನಗಳವರೆಗೆ ದೊರೆಯುವಂತಾಗುತ್ತದೆ.

iii) ವಾಹಕಗಳ ಮೂಲಕ ಪೂರೈಕೆ

ರಂಜಕ ಗೊಬ್ಬರವನ್ನು ಮಣ್ಣಿಗೆ ನೇರವಾಗಿ ಪೂರೈಸುವ ಬದಲು, ಅದನ್ನು ಸಗಣಿ ಗೊಬ್ಬರ, ಕಾಂಪೋಸ್ಟ್ ಇಲ್ಲವೇ ಸಗಣಿಯೊಡನೆ ಮಿಶ್ರಮಾಡಿ ಕೆಲವು ವಾರಗಳವರೆಗೆ ಹಾಗೆಯೇ ಬಿಟ್ಟು, ನಂತರ ಮಣ್ಣಿಗೆ ಸೇರಿಸಬೇಕು. ಹೀಗೆ ಮಾಡುವುದರಿಂದ ಬೆಳೆಗೆ ರಂಜಕವು ಹೆಚ್ಚು ದಿನಗಳವರೆಗೆ ಲಭ್ಯವಾಗುವುದೆಂದು ತಿಳಿದುಬಂದಿದೆ.

iv) ಹಸುರು ಗೊಬ್ಬರಗಳ ಮುಖಾಂತರ ರಂಜಕದ ಪೂರೈಕೆ

ಬೇಳೆಕಾಳು ವರ್ಗಕ್ಕೆ ಸೇರಿದ ಹಸುರು ಗೊಬ್ಬರದ ಸಸ್ಯಗಳು, ಇತರೆ ಬೆಳೆಗಳಿಗಿಂತ ಅಧಿಕ ಪ್ರಮಾಣದಲ್ಲಿ ರಂಜಕವನ್ನು ಹೀರಿಕೊಳ್ಳುತ್ತವೆ. ಮಣ್ಣಿನಿಂದ ಬಂದ ಈ ರಂಜಕವು ಸಸ್ಯಗಳಲ್ಲಿ ನ್ಯೂಕ್ಲಿಯೋ ಪ್ರೋಟೀನ್, ಫಾಯ್ಟಿನ್‌ ಇತ್ಯಾದಿ ಸಾವಯವ ರೂಪಗಳಿಗೆ ಪರಿವರ್ತನೆಹೊಂದುತ್ತದೆ. ಹಸುರು ಗೊಬ್ಬರವನ್ನು ಮಣ್ಣಿಗೆ ಸೇರಿಸಿದಾಗ, ಈ ಸಾವಯವ ವಸ್ತುಗಳು ಕಳಿತು, ರಂಜಕವು ಬೆಳೆಗಳಿಗೆ ಸಿಗುವಂತಾಗುತ್ತದೆ.

v) ಮಣ್ಣಿನ ಆಮ್ಲಕ್ಷಾರ ನಿರ್ದೇಶಕ ನಿಯಂತ್ರಣ

ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವನ್ನು ೬.೫ ರಿಂದ ೭ರ ಸನಿಹದಲ್ಲಿ ಇರುವಂತೆ ನೋಡಿಕೊಂಡರೆ, ರಂಜಕವು ಬೆಳೆಗಳಿಗೆ ಸುಲಭವಾಗಿ ದೊರೆಯುತ್ತದೆ. ಆಮ್ಲ ಮಣ್ಣಿಗೆ ಸುಣ್ಣವನ್ನು ಸೇರಿಸಿ ರಂಜಕವು ಲಭ್ಯವಾಗುವಂತೆ ಮಾಡಬಹುದು.

ಪೋಟ್ಯಾಸಿಯಂಪೋಷಕವನ್ನುಪೂರೈಸುವರಾಸಾಯನಿಕಗೊಬ್ಬರಗಳು

ಸಾರಜನಕವನ್ನು ಬಿಟ್ಟರೆ ಉಳಿದೆಲ್ಲ ಪೋಷಕಗಳಿಗಿಂತ ಸಸ್ಯಗಳು ಪೋಟ್ಯಾಸಿಯಂ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ. ಪೋಟ್ಯಾಸಿಯಂ ಪೋಷಕವು ಸ್ಯಗಳ ಯಾವುದೇ ಅಂಗದ ಘಟಕವಲ್ಲ. ಅದಾಗ್ಯೂ ಸಸ್ಯಗಳಲ್ಲಿ ನಡೆಯುವ ಹಲವು ಕ್ರಿಯೆಗಳಿಗೆ ಪೊಟ್ಯಾಸಿಯಂ ಅತ್ಯಗತ್ಯವೆಂಬುವುದು ಗಮನಾರ್ಹ.

ಮಣ್ಣಿನಲ್ಲಿರುವ ಪೊಟ್ಯಾಸಿಯಂನ ಪ್ರಮಾಣ : ರಂಜಕದೊಡನೆ ತುಲನೆ ಮಾಡಿದರೆ ಮಣ್ಣಿನಲ್ಲಿ ಪೋಟ್ಯಾಸಿಯಂ ಅತಿ ದೊಡ್ಡ ಪ್ರಮಾಣದಲ್ಲಿದೆ. ಸಾಮಾನ್ಯವಾಗಿ ಪೊಟ್ಯಾಸಿಯಂನ ಪ್ರಮಾಣವು ಶೆಕಡಾ ೦.೫ ರಿಂದ ೨.೫ ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ.

ಮಣ್ಣಿನಲ್ಲಿರುವ ಪೋಟ್ಯಾಸಿಯಂನ ಮೂಲ : ಶಿಲೆಗಳಲ್ಲಿರುವ ಖನಿಜಗಳೇ ಪೋಟ್ಯಾಸಿಯಂನ ಪ್ರಾಥಮಿಕ ಮೂಲವೆನ್ನಬಹುದು. ಆರ್ಥೊಕ್ಲೇಜ್, ಮೈಕ್ರೋಕ್ಲೈನ್‌ಮಸ್ಕೋವೈಯ್ಟ್, ಬಯೋಟೈಯ್ಟ್ ಹಾಗೂ ಫೋಲಜೋಫೈಟ್ ಗಳು ಪೋಟ್ಯಾಸಿಯಂನ ಅನ್ನು ಒಳಗೊಂಡ ಖನಿಜಗಳು. ಇವಲ್ಲದೇ, ಇಲಾಯ್ಟ್ , ಕ್ಲೋರೈಟ್, ಮತ್ತು ವರ್ಮಿಕ್ಯೂಲೈಯ್ಟ್ ಮುಂತಾದ ನವ ನಿರ್ಮಿತ ಖನಿಜಗಳಲ್ಲಿಯೂ ಪೋಟ್ಯಾಸಿಯಂ ಇದೆ.

ಮಣ್ಣಿನಲ್ಲಿರುವ ಪೊಟ್ಯಾಸಿಯಂನ ರೂಪಗಳು : ಮಣ್ಣಿನಲ್ಲಿ ಪೊಟ್ಯಾಸಿಯಂ ನಾಲ್ಕು ರೂಪಗಳಲ್ಲಿದೆ ಎಂದು ಗುರುತಿಸಲಾಗಿದೆ.

i) ಖನಿಜದ ರಚನೆಯಲ್ಲಿ ಭಾಗಗೊಂಡ ಪೋಟ್ಯಾಸಿಯಂ

ಮಣ್ಣಿನಲ್ಲಿರುವ ಒಟ್ಟು ಪೋಟ್ಯಾಸಿಯಂ ಗಿಂತ ಖನಿಜಗಳಲ್ಲಿ ಇರುವ ಪೋಟ್ಯಾಸಿಯಂ ಅತ್ಯಧಿಕ ಪ್ರಮಾಣದಲ್ಲಿದೆ. ಆದರೆ, ಮಣ್ಣಿನ ನಿರ್ಮಾಣ ಕ್ರಿಯೆಗಳಿಂದ ಖನಿಜವು ಶಿಥಿಲಗೊಂಡು ಸವಕಳಿಯನ್ನು ಹೊಂದಿದಾಗ ಮಾತ್ರ ಈ ಪೋಷಕವು ಹೊರ ಬೀಳುತ್ತದೆ. ಸಸ್ಯಗಳ ದೃಷ್ಟಿಯಿಂದ ಈ ರೂಪದ ಪೊಟ್ಯಾಸಿಯಂನಿಂದ ನೇರವಾದ ಪ್ರಯೋಜನವಿಲ್ಲ.

ii) ವಿನಿಮಯ ಹೊಂದದ ಅಥವಾ ಸ್ಥಿರಗೊಂಡ ಅಥವಾ ಸುಲಭವಾಗಿ ಬೆಳೆಗೆ ದೊರೆಯುದ ಪೊಟ್ಯಾಸಿಯಂ

ಈ ರೂಪದ ಪೊಟ್ಯಾಸಿಯಂ ಅನ್ನು ಇಲೈಟ್, ವರ್ಮಿಕ್ಯೂಲೇಟ್, ಕ್ಲೋರೈಟ್ ಮುಂತಾದ ನವನಿರ್ಮಿತ ಖನಿಜಗಳಲ್ಲಿ ಕಾಣಬಹುದು. ವಿನಿಮಯ ಹೊಂದಬಲ್ಲ ಪೊಟ್ಯಾಸಿಯಂ ಅಯಾನ್‌ಗಳು, ಮೈತ್ತಿಕಾ ದ್ರಾವಣವನ್ನು ಪ್ರವೇಶಿಸಿದವೆಂದರೆ ಖಾಲಿಯಾದ ಸ್ಥಳವನ್ನು ತುಂಬಲು ಈ ರೂಪದ ಪೋಟ್ಯಾಸಿಯಂ ಚಲಿಸುತ್ತದೆ.

iii) ವಿನಿಮಯ ಪೋಟ್ಯಾಸಿಯಂ

ನಿರವಯವ ಖನಿಜಗಳ ಮೇಲೆ ಇರುವ ಋಣ ಜಾರ್ಜಗಳು, ಕೆಲವು ಪೋಟ್ಯಾಸಿಯಂ ಅಯಾನ್‌ಗಳನ್ನು ಆಕರ್ಷಿಸುತ್ತವೆ. ಮೃತ್ತಿಕಾ ದ್ರಾವಣದಲ್ಲಿರುವ ಪೋಟ್ಯಾಸಿಯಂ ಅಯಾನ್‌ಗಳನ್ನು ಸಸ್ಯಗಳು ಹೀರಿಕೊಂಡೊಡನೆ ಅಷ್ಟೇ ಪ್ರಮಾಣದಲ್ಲಿ ವಿನಿಮಯ ಪೊಟ್ಯಾಸಿಯಂ ಮೃತ್ತಿಕಾ ದ್ರಾವಣಕ್ಕೆ ಬಂದು ಸೇರುತ್ತದೆ. ಈ ಚಲನೆಯು ಶೀಘ್ರಗತಿಯಲ್ಲಿ ನಡೆಯುತ್ತದೆ.

ಮೇಲೆ ತಿಳಿಸಿದ ಈ ಕ್ರಿಯೆಯು ನಡೆಯುತ್ತಿದ್ದಂತೆಯೇ ಸ್ಥಿರಗೊಂಡ ಪೊಟ್ಯಾಸಿಯಂ, ವಿನಿಮಯ ಪೋಟ್ಯಾಸಿಯಂ, ಅಯಾನ್‌ಗಳು ಖಾಲಿ ಮಾಡಿದ ಸ್ಥಳಗಳನ್ನು ಆಕ್ರಮಿಸುತ್ತವೆ. ಆದರೆ, ಚಲನೆಯ ವೇಗವು ಕಡಮೆ. ಅಲ್ಲದೇ ಸಂದರ್ಭಕ್ಕನುಸಾರವಾಗಿ ಈ ವೇಗವು ಭಿನ್ನವಾಗಿರುತ್ತದೆ.

iv) ಮೃತ್ತಿಕಾ ದ್ರಾವಣದಲ್ಲಿರುವ ಪೋಟ್ಯಾಸಿಯಂ

ಮಣ್ಣಿನ ದ್ರಾವಣದಲ್ಲಿ ಪೋಟ್ಯಾಸಿಯಂ ಪೋಷಕವು ಅಯಾನ್‌ಗಳ ರೂಪದಲ್ಲಿರುತ್ತದೆ. ಸಸ್ಯಗಳು ಈ ಪೋಷಕವನ್ನು ಮಣ್ಣಿನ ದ್ರಾವಣದಿಂದ ಸುಲಭವಾಗಿ ಹೀರಿಕೊಳ್ಳುತ್ತದೆ. ದ್ರಾವಣದಲ್ಲಿಯ ಪೊಟ್ಯಾಸಿಯಂ ಬಳಕೆಯಾಗುತ್ತಿದ್ದಂತೆಯೇ ವಿನಿಮಯ ಪೋಟ್ಯಾಸಿಯಂ ತನ್ನ ಸ್ಥಾನದಿಂದ ಚಲಿಸಿ ಮೃತ್ತಿಕಾ ದ್ರಾವಣವನ್ನು ಬಂದು ಸೇರುತ್ತದೆ. ಮತ್ತು ಸಸ್ಯಗಳಿಗೆ ದೊರೆಯುವಂತಾಗುತ್ತದೆ. ಆದ್ದರಿಂದಲೇ ಮಣ್ಣಿನ ದ್ರಾವಣದಲ್ಲಿರುವ ಮತ್ತು ವಿನಿಮಯಗೊಳ್ಳಬಲ್ಲ ಪೊಟ್ಯಾಸಿಯಂ ಪೋಷಕವನ್ನು ಪೂರೈಸಲು ಬಳಕೆಯಲ್ಲಿರುವ ಪ್ರಮುಖ ರಾಸಾಯನಿಕ ಗೊಬ್ಬರಗಳ ವಿವರಗಳು ಕೆಳಗಿನಂತಿವೆ.

) ಮ್ಯುರಿಯೇಟ್ ಅಫ್ ಪೊಟ್ಯಾಶ್ (KCI)

ಗೊಬ್ಬರವಾಗಿ ಬಳಸುವ ಪೋಟ್ಯಾಸಿಯಂ ಕ್ಲೋರೈಡ್‌ಗೆ, ಮ್ಯುರಿಯೇಟ್ ಅಫ್ ಪೊಟ್ಯಾಶ್ ಎಂಬ ಹೆಸರಿದೆ. ಮ್ಯುರಿಯೇಟ್ ಎಂಬ ಪದವು ಮ್ಯೂರಿಯಾಟಿಕ್ ಆಮ್ಲ ಎಂಬುವುದರಿಂದ ಬಂದಿದೆ. ಹರಿತ ಪೀತಾಮ್ಲಕ್ಕೆ ಮ್ಯೂರಿಯಾಟಿಕ್ ಆಮ್ಲ ಎಂಬ ಇನ್ನೊಂದು ಹೆಸರಿದೆ. ಮ್ಯುರಿಯೇಟ್ ಆಫ್ ಪೊಟ್ಯಾಶನ ಶೇಕಡಾ ೬೦ ಪೊಟ್ಯಾಶ್ (K2O) ಇದೆ,.

ಮ್ಯೂರಿಯೇಟ್ ಆಫ್ ಪೋಟ್ಯಾಶ್‌ನ ಗಣಿಗಳು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳು, ರಷ್ಯಾ ಜರ್ಮನಿ, ಫ್ರಾನ್ಸ್ ಮುಂತಾದ ಹಲವು ದೇಶಗಳಲ್ಲಿ ಇವೆ. ಸಾಮಗ್ರಿಯನ್ನು ಅಗೆದು, ಗಣಿಯಿಂದ ಹೊರತಂದು ಗೊಬ್ಬರವಾಗಿ ಬಳಸಲಾಗುತ್ತದೆ.

ಮ್ಯುರಿಯೇಟ್ ಅರ್ಫ ಪೊಟ್ಯಾಶ್ ಸ್ಪಟಿಕ ರೂಪದಲ್ಲಿರುತ್ತದೆ. ಇದರ ಬಣ್ಣವು ಅದರಲ್ಲಿರುವ ಕಲ್ಮಷಗಳ ಮೇಲಿಂದ ಕೆಂಪು, ಗುಲಾಬಿ ಇಲ್ಲವೇ ಬಿಳಿಯದಾಗಿರಬಹುದು. ಗೊಬ್ಬರವು ಯಾವ ಬಣ್ಣದಾಗಿದ್ದರೂ, ಕೃಷಿಯ ದೃಷ್ಟಿಯಿಂದ, ಒಂದೇ ಪರಿಣಾಮವನ್ನು ನೀಡುತ್ತದೆ. ಈ ಗೊಬ್ಬರವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ.

ತಂಬಾಕು, ಬಟಾಟೆ, ಗೆಣಸು ಇತ್ಯಾದಿ ಕೆಲವು ಬೆಳೆಗಳನ್ನು ಬಿಟ್ಟರೆ, ಮ್ಯುರಿಯೇಟ್ ಆಫ್ ಪೊಟ್ಯಾಶ್ ಅನ್ನು ಇತರೆಲ್ಲ ಬೆಳೆಗಳಿಗೆ ಅನಿರ್ಬಂಧವಾಗಿ ಉಪಯೋಗಿಸಬಹುದು. ಗೊಬ್ಬರಗಳ ಮಿಶ್ರಣ ಮತ್ತು ಸಂಯುಕ್ತ ಗೊಬ್ಬರಗಳನ್ನು ಸಿದ್ಧಪಡಿಸಲು ಮ್ಯುರಿಯೇಟ್ ಅರ್ಫ ಪೋಟ್ಯಾಶ್ ಅನ್ನು ತರೆಲ್ಲ ಬೆಳೆಗಳಿಗೆ ಅನಿರ್ಬಂಧವಾಗಿ ಉಪಯೋಗಿಸಬಹುದು. ಗೊಬ್ಬರಗಳ ಮಿಶ್ರಣ ಮತ್ತು ಸಂಯುಕ್ತ ಗೊಬ್ಬರಗಳನ್ನು ಸಿದ್ಧಪಡಿಸಲು ಮ್ಯುರಿಯೇಟ್ ಪೊಟ್ಯಾಶ್ ಅನ್ನು ಬಳಸಬಹುದು.