ಸಸ್ಯಗಳು ಬೆಳೆದು ಅಭಿವೃದ್ಧಿಗೊಂಡು ತಮ್ಮ ಜೀವನ ಚಕ್ರವನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ಬೆಳಕು, ಉಷ್ಣತೆ, ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್ ನೀರು, ಪೋಷಕಗಳು ಇತ್ಯಾದಿ ೫೨ ವಸ್ತುಗಳ ಅವಶ್ಯಕತೆಯಿದ್ದು, ಅವುಗಳಲ್ಲಿ ೪೫ ವಸ್ತುಗಳನ್ನು ಮಾನವನು ಬಹುಮಟ್ಟಿಗೆ ನಿಯಂತ್ರಿಸಬಲ್ಲನೆಂಬುವುದು ಕೆಲವು ತಜ್ಞರ ಅಭಿಪ್ರಾಯವಾಗಿದೆ. ಇವುಗಳಲ್ಲಿ ಪೋಷಕಗಳೂ ಸೇರಿವೆ ಎಂಬುವುದು ಮಹತ್ವದ ಸಂಗತಿ. ಅವುಗಳ ಸಮರ್ಥ ಬಳಕೆಯಿಂದ ಬೆಳೆಗಳ ಇಳುವರಿಯನ್ನು ಅಧಿಕಗೊಳಿಸಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಈ ಅಧ್ಯಾಯದಲ್ಲಿ ತಿಳಿಸಲಾಗಿದೆ.

ಸಸ್ಯಗಳ ಬೆಳವಣಿಗೆಗೆ ಅಗತ್ಯವಿರುವ ಪೋಷಕಗಳು

ಸಸ್ಯಗಳ ರಾಸಾಯನಿಕ ವಿಶ್ಲೇಷಣೆಯನ್ನು ಮಾಡಿದರೆ ಅವುಗಳಲ್ಲಿ ಹಲವಾರು ಮೂಲದ್ರವ್ಯಗಳಿರುವುದು ಕಂಡುಬರುತ್ತದೆ. ಈ ಎಲ್ಲಾ ಮೂಲದ್ರವ್ಯಗಳೂ ಸಸ್ಯಗಳ ಬೆಳವಣಿಗೆಗೆ ಅಗತ್ಯ ಪೋಷಕಗಳಾಗಿ ಪರಿಗಣಿಸಬೇಕೆಂದು ಕ್ಯಾಲಿಫೋರ್ನಿಯಾ ರಾಜ್ಯದ ಅರ್ನಾನ್‌ ಎಂಬ ವಿಜ್ಞಾನಿಯ ಅಭಿಮತವಾಗಿದೆ.

i) ಸಂಬಂಧಿಸಿದ ಮೂಲ ದ್ರವ್ಯದ ಕೊರತೆಯಾದಲ್ಲಿ ಸಸ್ಯಕ್ಕೆ ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗದಿರಬೇಕು.

ii) ಸಂಬಂಧಪಟ್ಟ ಮೂಲದ್ರವ್ಯದ ಕೊರತೆಯಿಂದ ಸಸ್ಯದಲ್ಲಿ ಕಂಡು ಬರುವ ನ್ಯೂನತೆಯ ಚಿಹ್ನೆಗಳನ್ನು ಹೋಗಲಾಡಿಸಲು ಅಥವಾ ಆ ಚಿಹ್ನೆಗಳು ಕಾಣಿಸಿಕೊಳ್ಳದಂತೆ ಮಾಡಲು ಸಸ್ಯಕ್ಕೆ ಆ ನಿರ್ಧಿಷ್ಟ ಮೂಲದ್ರವ್ಯವನ್ನು ಪೂರೈಸಿದಾಗ ಮಾತ್ರ ಸಾಧ್ಯವಾಗಬೇಕು.

iii) ಸಂಬಂಧಿಸಿದ ಮೂಲದ್ರವ್ಯವು ನೇರವಾಗಿ ಸಸ್ಯದ ಪೋಷಕವಾಗಿ ಕಾರ್ಯಮಾಡಬೇಕು. ಮಣ್ಣಿನ ಗುಣಧರ್ಮಗಳ ಮೇಲೆ ಉತ್ತಮ ಪರಿಣಾಮವನ್ನು ಉಂಟು ಮಾಡಿಯೋ ಅಥವಾ ಸೂಕ್ಷ್ಮ ಜೀವಿಗಳ ಬೆಳವಣಿಗೆಯ ಮೇಲೆ ಉಂಟಾದ ಪರಿಣಾಮದಿಂದಲೋ ಪರೋಕ್ಷವಾಗಿ ಸಸ್ಯಗಳ ಬೆಳವಣಿಗೆಗೆ ಸಹಾಯವನ್ನು ಮಾಡುವ ಮೂಲದ್ರವ್ಯವು ಅಗತ್ಯ ಪೋಷಕವೆನಿಸುವುದಿಲ್ಲ.

ಮೇಲೆ ಹೇಳಿದ ಗುಣಗಳಿರುವ ಮೂಲದ್ರವ್ಯವನ್ನು ಮಾತ್ರ ಸಸ್ಯಗಳ ಅಗತ್ಯ ಪೋಷಕವೆಂದು ಪರಿಗಣಿಸಲು ವಿಜ್ಞಾನಿಗಳು ಒಪ್ಪಿಕೊಂಡಿರುವರಾದರೂ ಕೆಲವು ಪ್ರಸಂಗಗಳಲ್ಲಿ ಒಂದು ಮೂಲದ್ರವ್ಯವನ್ನು ಪೋಷಕವೆಂದೇ ಕರೆಯಬೇಕೇ ಬೇಡವೇ ಎಂಬುವುದನ್ನು ನಿರ್ಧರಿಸುವ ಕಾರ್ಯವು ಜಟಿಲವಾಗುತ್ತದೆ. ಉದಾಹರಣೆಗೆ :

 • ಮೊಲಿಬ್ಡಿನಂ, ಮೇಲಿನ ಮೂರು ನಿಯಮಗಳಿಗೆ ಬದ್ಧವಾಗಿರುವುದರಿಂದ ಸಸ್ಯದ ಅಗತ್ಯ ಪೋಷಕವೆಂದು ಒಪ್ಪಿಕೊಳ್ಳಲಾಗಿದೆ. ಆದರೆ ಕೆಲವು ಸಸ್ಯಗಳಲ್ಲಿ ವೆನೇಡಿಯಂ ಮೋಲಿಬ್ಡಿನಂನ ಕಾರ್ಯವನ್ನು ನಿರ್ವಹಿಸಬಲ್ಲದು.
 • ಕ್ಲೋರಿನ್ನಿನ ಕಾರ್ಯವನ್ನು ಬ್ರೋಮಿನ್‌ ಮಾಡಬಲ್ಲದೆಂದು ಕೆಲವೆಡೆ ಕಂಡು ಬಂದಿದೆ
 • ಕೆಲವು ಬೆಳೆಗಳಲ್ಲಿ ಪೋಟ್ಯಾಸಿಯಂನ ಕಾರ್ಯವನ್ನು ಸೋಡಿಯಂ ಮಾಡಬಲ್ಲದೆಂದು ತಿಳಿದುಬಂದಿದೆ. ಸಕ್ಕರೆ ಬೀಟ ನಂತರ ಬೆಳೆಯಲ್ಲಿ ಪೋಟ್ಯಾಸಿಯಂ ಅನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಿದರೂ ಸೋಡಿಯಂ ಇಳುವರಿಯನ್ನು ಹೆಚ್ಚಿಸುವುದೆಂದು ಕಂಡುಬಂದಿದೆ.

ಮೇಲಿನ ಉದಾಹರಣೆಗಳಲ್ಲಿ ಅರ್ನಾನ್‌ ಎಂಬ ವಿಜ್ಞಾನಿ ಸೂಚಿಸಿದ ಎರಡನೆಯ ನಿಯಮದ ಉಲ್ಲಂಘನೆಯಾಗುವುದರಿಂದ ಮೊಲಿಬ್ಡಿನಂ, ಕ್ಲೋರಿನ್‌ಮತ್ತು ಪೋಟ್ಯಾಸಿಯಂಗಳನ್ನು ಸಸ್ಯದ ಅವಶ್ಯ ಪೋಷಕಗಳೆಂದು ಪರಿಗಣಿಸಲಾದ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಇಂತಹ ಸಮಸ್ಯೆಗೆ ನಿಕೋಲಾಸ್ ಎಂಬ ವಿಜ್ಞಾನಿಯು ಸೂಚನೆಯು ಪರಿಹಾರ ದ್ರವ್ಯ ಒದಗಿಸುತ್ತದೆನ್ನಬಹುದು. ಸಸ್ಯದ ಅಂತರಿಕ ಕ್ರಿಯೆಗಳಲ್ಲಿ ಭಾಗವಹಿಸುವ ಮೂಲ ದ್ರವ್ಯಗಳಿಗೆ ‘ಕ್ರಿಯಾತ್ಮಕ’ ಅಥವಾ ‘ಅಂತರಿಕ ಕ್ರಿಯೆಗಳಲ್ಲಿ ಭಾಗಿಯಾಗುವ ಪೋಷಕಗಳೆಂದು ಅವರು ಕರೆದರು. ಅವರು ಮಂಡಿಸಿದ ಈ ವಿಚಾರವನ್ನು ಒಪ್ಪಿಕೊಂಡರೆ ಮೇಲಿನ ಸಮಸ್ಯೆಗೆ ಪರಿಹಾರವು ದೊರೆತಂತಾಗುತ್ತದೆ.

ಈ ಸಂದರ್ಭದಲ್ಲಿ ಒಂದು ಸಂಗತಿಯನ್ನು ಗಮನದಲ್ಲಿಡಬೇಕು. ಎಲ್ಲ ಪೋಷಕಗಳನ್ನು ಎಲ್ಲ ಬಗೆಯ ಸಸ್ಯಗಳೀಗೆ ಅವಶ್ಯವಿರುವುದಿಲ್ಲ. ಆದರೆ ಎಲ್ಲಾ ಪೋಷಕಗಳು ಕೆಲವು ಬಗೆಯ ಸಸ್ಯಗಳಿಗೆ ಬೇಕೇಬೇಕು.

ನಿಕೋಲಾಸ್ ಅವರ ವಿಚಾರ ಧಾರೆಯ ಪ್ರಕಾರ ಒಟ್ಟು ೨೦ ಪೋಷಕಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿವೆ. ಇವುಗಳಲ್ಲಿ ಇಂಗಾಲದ, ಜಲಜನಕ, ಮತ್ತು ಆಮ್ಲಜನಕಗಳು ಬಹು ದೊಡ್ಡ ಪ್ರಮಾಣದಲ್ಲಿ ಬೆಳೆಗಳಿಗೆ ಬೇಕಾಗುತ್ತದೆ. ಇವುಗಳನ್ನು ಸಸ್ಯಗಳು ಹವೆ ಮತ್ತು ನೀರಿನಿಂದ ಪಡೆದುಕೊಳ್ಳುತ್ತವೆ. ಇವುಗಳ ನಿರ್ವಹಣೆಯಲ್ಲಿ ಮನುಷ್ಯನ ಪಾತ್ರವು ಅತ್ಯಲ್ಪವೆನ್ನಬಹುದು. ಉಳಿದ ೧೭ ಪೋಷಕಗಳು ಸಸ್ಯಗಳಿಗೆ ಪ್ರಮುಖವಾಗಿ ಮಣ್ಣಿನ ಮೂಲ ದೊರೆಯುತ್ತವೆ. ಈ ಪೋಷಕಗಳ ಹೆಸರು ಮತ್ತು ಅವುಗಳನ್ನು ಸಸ್ಯಗಳು ಯಾವ ರೂಪದಲ್ಲಿ ಹೀರಿಕೊಳ್ಳುತ್ತವೆ ಇತ್ಯಾದಿ ವಿವರಗಳು ಕೋಷ್ಟಕ ೧೫ರಲ್ಲಿ ಇವೆ.

ಕೋಷ್ಟಕ ೧೫ : ಮಣ್ಣಿನ ಮೂಲಕ ಸಸ್ಯಗಳಿಗೆ ದೊರೆಯುವ ಪೋಷಕಗಳು

ಅ. ಸಂ.

ಪೋಷಕದ ಹೆಸರು

ಸಾಂಕೇತಿಕ ಅಕ್ಷರ

ಸಸ್ಯಗಳು ಹೀರಿಕೊಳ್ಳುವ ರೂಪ/ರೂಪಗಳು

ಅಯಾನ್ ರೂಪದ ಸಂಕೇತ

ಸಾರಜನಕ N ಅಮೋನಿಯಂ ನೈಟ್ರೇಟ್ NH4+, NO3
ರಂಜಕ P ಮೊನೋಫಾಸ್ಫೇಟ್, ಡೈಫಾಸ್ಫೇಟ್ H2PO-2, HPO4-2
ಪೊಟ್ಯಾಸಿಯಂ K ಪೊಟ್ಯಾಸಿಯಂ K+
ಕ್ಯಾಲ್ಸಿಯಂ Ca ಕ್ಯಾಲ್ಸಿಯಂ Ca+2
ಮೆಗ್ನೀಸಿಯಂ Mg ಮೇಗ್ನೀಸಿಯಂ Mg+2
ಗಂಧಕ S ಸಲ್ಫೇಟ್ SO4-2
ಕಬ್ಬಿಣ Fe ಫೆರಸ್ Fe+2
ಮ್ಯಾಂಗನೀಸ್ Mn ಮ್ಯಾಂಗನಸ್ Mn+2
ಬೋರಾನ್ B ಬೋರೇಟ್ BO3-3
೧೦ ತಾಮ್ರ Mo ಮೊಲಿಬ್ಡೇಟ್ MoO4-2
೧೧ ಸತು Cu ಕ್ಯುಪ್ರಸ್, ಕ್ಯುಪ್ರಿಕ್ Cu+,Cu+2
೧೨ ಸತು Zn ಸತು Zn+2
೧೩ ಕ್ಲೋರಿನ್ Cl ಕ್ಲೋರೈಡ್ Cl
೧೪ ಸೋಡಿಯಂ Na ಸೋಡಿಯಂ Na+
೧೫ ಕೋಬಾಲ್ಟ್ Co
೧೬ ಸೆಲೇನಿಯಂ Se
೧೭ ಸಿಲಿಕಾನ್ Si

 ಪೋಷಕಗಳನಿರ್ವಹಣೆ

 

ಸಸ್ಯಗಳಿಗೆ ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನಿಂದ ಇಂಗಾಲ, ಜಲಜನಕ ಮತ್ತು ಆಮ್ಲಜನಕಗಳು ದೊರೆಯುತ್ತವೆ. ಇವುಗಳ ನಿರ್ವಹಣೆಯಲ್ಲಿ ಮನುಷ್ಯನ ಪಾತ್ರವು ಅತ್ಯಲ್ಪವೆಂಬುವುದನ್ನು ಹಿಂದಿನ ಕಾಲಂನಲ್ಲಿ ಸೂಚಿಸಿದೆ. ಉಳಿದಿರುವ ೧೭ ಪೋಷಕಗಳನ್ನು ಸಸ್ಯಗಳು ಮಣ್ಣಿನಿಂದ ಹೀರಿಕೊಳ್ಳುತ್ತವೆಯಾದ್ದರಿಂದ ಇವುಗಳ ಉತ್ತಮ ನಿರ್ವಹಣೆಯಲ್ಲಿ ಸಾಕಷ್ಟು ಪರಿಶ್ರಮವನ್ನು ವಹಿಸಬೇಕಾಗುತ್ತದೆ. ಸಸ್ಯ ಪೋಷಕಗಳ ನಿರ್ವಹಣೆಯಲ್ಲಿ ಕೆಳಗಿನ ಸಂಗತಿಗಳನ್ನು ಲಕ್ಷದಲ್ಲಿಡಬೇಕಾಗುತ್ತದೆ:

i) ಅವಶ್ಯವಿರುವ ಎಲ್ಲಾ ಪೋಷಕಗಳು ಬೆಳೆಗೆ ಸಿಗುವಂತೆ ನೋಡಿಕೊಳ್ಳಬೇಕು.

ii) ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೆಳೆಗೆ ಅವಶ್ಯವಿರುವಷ್ಟು ಪ್ರಮಾಣದಲ್ಲಿ ಪೋಷಕಗಳೂ ಸಿಗುವಂತಿರಬೇಕು.

iii) ಪೋಷಕಗಳು ಬೆಳೆಗೆ ಸುಲಭವಾಗಿ ಸಿಗುವ ರೂಪದಲ್ಲಿರಬೇಕು ಇಲ್ಲವೇ ಬೆಳೆಯ ಅವಶ್ಯಕತೆಗೆ ಅನುಗುಣವಾಗಿ ದೊರೆಯುವ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತಿರಬೇಕು.

iv) ಪೋಷಕಗಳು ಒಂದಕ್ಕೊಂದು ಸಮತೋಲನ ಪ್ರಮಾಣದಲ್ಲಿರಬೇಕು. ಪೋಷಕಗಳ ನಿರ್ವಹಣೆಯಲ್ಲಿ, ಅವುಗಳನ್ನು ಪೂರೈಸುವ ಪ್ರಮಾಣ, ಮಾಧ್ಯಮ ವಿಧಾನ ಮತ್ತು ಸಮಯ ಇವುಗಳಿಗೆ ಬಹಳ ಮಹತ್ವವಿದೆ. ಇವುಗಳಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಪೋಷಕಗಳಪ್ರಮಾಣವನ್ನುನಿರ್ಧರಿಸುವವಿಧಾನಗಳು

ನಿಸರ್ಗದಲ್ಲಿ, ಸಸ್ಯಗಳು ಮಣ್ಣಿನಲ್ಲಿರುವ ಪೋಷಕಗಳಿಂದಲೇ ಬೆಳೆದು ತಮ್ಮ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತವೆ. ಅವುಗಳಿಗೆ ಹೊರಗಿನಿಂದ ಪೋಷಕಗಳನ್ನು ಪೂರೈಸುವ ಪ್ರಮೇಯವಿರುವುದಿಲ್ಲ. ಆದರೆ ಒಂದು ಪ್ರದೇಶದ ಹವಾಮಾನ, ಮಣ್ಣಿನ ಗುಣಧರ್ಮಗಳೂ, ಲಭ್ಯವಿರುವ ಪೋಷಕಗಳು ಇತ್ಯಾದಿಗಳ ಮೇಲಿಂದ ಯಾವ ಪ್ರಕಾರದ ಸಸ್ಯಗಳೂ ಎಷ್ಟು ಪ್ರಮಾಣದಲ್ಲಿ ಬೆಳೆಯಬಲ್ಲವೆಂಬುವುದು ನಿರ್ಧಾರಗೊಳ್ಳುತ್ತದೆ. ಅಲ್ಲದೇ, ಆ ಸಸ್ಯಗಳಿಂದ ದೊರೆಯುವ ಸಾವಯವ ವಸ್ತುಗಳು ಅಲ್ಲಿಯೇ ಕಳಿತು ಅದರಲ್ಲಿ ಇರುವ ಪೋಷಕಗಳು ವಿಮೋಚನೆಗೊಂಡು ಅಲ್ಲಿ ಬೆಳೆಯುತ್ತಿರುವ ಸಸ್ಯಗಳೀಗೆ ದೊರೆಯುತ್ತವೆ.

ಮಾನವನು ಪ್ರಕೃತಿಯಲ್ಲಿ ಬೆಳೆಯುತ್ತಿರುವ ಸಸ್ಯಗಳನ್ನು ಕೈಬಿಟ್ಟು ತನಗೆ ಬೇಕೆನಿಸಿದ ಬೆಳೆಯನ್ನು ಅತಿ ಹೆಚ್ಚಿನ ಇಳುವರಿ ಪಡೆಯುವ ದೃಷ್ಟಿಯಿಂದ ಬೆಳೆಯಲು ಆರಂಭಿಸಿದೊಡನೆ ಪರಿಸ್ಥಿತಿಯು ಒಮ್ಮೆಲೆ ಬದಲಾಗುತ್ತದೆ. ತಾನು ಬೆಳೆದ ಬೆಳೆಯ ಬಹುಭಾಗವನ್ನು ತನ್ನ ಮತ್ತು ತನ್ನ ಸಾಕು ಪ್ರಾಣಿಗಳ ಆಹಾರಕ್ಕೆಂದು ಒಯ್ಯುತ್ತಾನೆ. ಇದರೊಡನೆ ಮಣ್ಣಿನಲ್ಲಿರುವ ಪೋಷಕಗಳೂ ಸಂಗ್ರಹವು ಕಡಮೆಯಾಗಿ, ಅಲ್ಲಿ ಬೆಳೆಯುವ ಸಸ್ಯಗಳಲ್ಲಿ ಪೋಷಕಗಳ ಕೊರತೆಯು ಕಂಡುಬರುವುದರೊಂದಿಗೆ ಇಳುವರಿಯು ಕಡಮೆಯಾಗುತ್ತದೆ. ಅಧಿಕ ಇಳುವರಿಯನ್ನು ಪಡೆಯಬೇಕಾದರೆ ಕೊರತೆಯಾದ ಪೋಷಕಗಳನ್ನು ಪೂರೈಸುವುದು ಅನಿವಾರ್ಯವಾಗುತ್ತದೆ.

ಒಂದು ಮಣ್ಣಿನಲ್ಲಿ ಬೆಳೆಯಬೇಕೆಂದಿರುವ ಬೆಳೆಗೆ ಯಾವ ಯಾವ ಪೋಷಕಗಳನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಪೂರೈಸಬೇಕೆಂಬುವುದನ್ನು ನಿಖರವಾಗಿ ಹೇಳಬಲ್ಲ ಪದ್ಧತಿಯೊಂದು ಇರಬೇಕಾದುದು ರೈತನ ದೃಷ್ಟಿಯಿಂದ ತುಂಬಾ ಅಪೇಕ್ಷಣೀಯ. ಆದರೆ ಅಂತಹ ಒಂದು ಪದ್ಧತಿ ಲಭ್ಯವಿಲ್ಲದವೆಂದರೆ ತಪ್ಪಾಗಲಾರದು. ಆದರೂ ಮಣ್ಣಿನ ಫಲವತ್ತತೆಯನ್ನು ಅಳೆಯುವ, ಪೋಷಕಗಳ ಕೊರತೆಯನ್ನು ಕಂಡುಹಿಡಿಯುವ ಮತ್ತು ಬೆಳೆಗೆ ಪೂರೈಸಬೇಕಾದ ಪೋಷಕಗಳ ಕೊರತೆಯು ಕಂಡು ಬರುವುದರೊಂದಿಗೆ ಇಳುವರಿಯು ಕಡಮೆಯಾಗುತ್ತದೆ. ಅಧಿಕ ಇಳುವರಿಯನ್ನು ಪಡೆಯಬೇಕಾದರೆ ಕೊರತೆಯಾದ ಪೋಷಕಗಳನ್ನು ಪೂರೈಸುವುದು ಅನಿವಾರ್ಯವಾಗುತ್ತದೆ.

ಒಂದು ಮಣ್ಣಿನಲ್ಲಿ ಬೆಳೆಯಬೇಕೆಂದಿರುವ ಬೆಳೆಗೆ ಯಾವ ಯಾವ ಪೋಷಕಗಳನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಪೂರೈಸಬೇಕೆಂಬುವುದನ್ನು ನಿಖರವಾಗಿ ಹೇಳಬಲ್ಲ ಪದ್ಧತಿಯೊಂದು ಇರಬೇಕಾದುದು ರೈತನ ದೃಷ್ಟಿಯಿಂದ ತುಂಬಾ ಅಪೇಕ್ಷಣೀಯ. ಆದರೆ ಅಂತಹ ಒಂದು ಪದ್ಧತಿ ಲಭ್ಯವಿಲ್ಲವೆಂದರೆ ತಪ್ಪಾಗಲಾರದು. ಆದರೂ ಮಣ್ಣಿನ ಫಲವತ್ತತೆಯನ್ನು ಅಳೆಯುವ, ಪೋಷಕಗಳ ಕೊರತೆಯನ್ನು ಕಂಡುಹಿಡಿಯುವ ಮತ್ತು ಬೆಳೆಗ ಪೂರೈಸಬೇಕಾದ ಪೋಷಕಗಳ ಪ್ರಮಾಣವನ್ನು ಸೂಚಿಸುವ ಹಲವು ವಿಧಾನಗಳಿವೆ ಎಂಬುವುದನ್ನು ಮರೆಯುವಂತಿಲ್ಲ. ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಬಳಸಿಕೊಂಡು ಹೆಚ್ಚು ಹೆಚ್ಚು ನಿಖರತೆಯಿಂದ ಪೂರೈಸಬೇಕಾದ ಪೋಷಕಗಳ ಪ್ರಮಾಣವನ್ನು ಅಂದಾಜು ಮಾಡುವ ಅನೇಕ ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಲೂ ಇವೆ. ಇವುಗಳಿಗೆ ಸಂಬಂಧಿಸಿದ ಹಲವು ಪ್ರಮುಖ ವಿವರಗಳು ಕೆಳಗಿನಂತಿವೆ.

ಕೊರತೆಯ ಚಿಹ್ನೆಗಳ ಸಹಾಯದಿಂದ : ಪೋಷಕಗಳ ಪೂರೈಕೆಯು ಸಾಕಾಗದಿರುವಾಗ ವಿಶಿಷ್ಟ ಬಗೆಯ ಕೊರತೆಯ ಚಿಹ್ನೆಗಳು ಸಸ್ಯಗಳಲ್ಲಿ ಕಂಡುಬರುತ್ತವೆ.

ಕೊರತೆಯ ಚಿಹ್ನೆಯ ಪ್ರಕಾರಗಳು : ಪೋಷಕಗಳ ಅಭಾವದಿಂದ ಸಸ್ಯದಲ್ಲಿ ಕೊರತೆಯ ಚಿಹ್ನೆಗಳು ಹಲವು ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಅವುಗಳಲ್ಲಿ ಪ್ರಮುಖವಾದುವುಗಳು ಈ ಕೆಳಗಿನಂತಿವೆ.

i) ಸಸ್ಯಗಳು ಎಳೆಯ ವಯಸ್ಸಿನಲ್ಲಿಯೇ ಒಣಗಿಹೋಗಬಹುದು.

ii) ಸಸ್ಯದ ಬೆಳವಣಿಗೆಯು ಕುಂಠಿತವಾಗಬಹುದು.

iii) ಸಸ್ಯದ ಶರೀರದೊಳಗೆ ನೀರು ಇಲ್ಲವೇ ಆಹಾರವು ಚಲಿಸುವ ಮಾರ್ಗದಲ್ಲಿ ತಡೆಯುಂಟಾಗಿ ಸಸ್ಯದಲ್ಲಿ ಯಾವುದಾದರೂ ವೈಪರೀತ್ಯ ಕಾಣಿಸಿಕೊಳ್ಳಬಹುದು.

iv) ಹಂಗಾಮಿನ ಬೇರೆ ಬೇರೆ ಸಮಯಗಳಲ್ಲಿ ಎಲೆಗಳು ಕೊರತೆಯ ಚಿಹ್ನೆಗಳನ್ನು ತೋರಿಸಬಹುದು.

v) ಬೆಳೆಯು ಬಹಳ ತಡವಾಗಿ ಮಾಗಬಹುದು. ಅಥವಾ ಅತಿ ಶೀಘ್ರ ಕೊಯ್ಲಿಗೆ ಬರಬಹುದು.

vi) ಇಳುವರಿಯು ಎದ್ದು ಕಾಣವಷ್ಟು ಕಡಮೆಯಾಗಬಹುದು. ಕೆಲವು ಪ್ರಸಂಗಗಳಲ್ಲಿ ಇಳುವರಿಯು ಕಡಮೆಯಾಗಿರುವ ಸಂಗತಿಯು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮಾತ್ರ ಗೊತ್ತಾಗಬಹುದು.

vii) ಇಳುವರಿಯ ಗುಣಮಟ್ಟವು ಕುಗ್ಗಬಹುದು. ಕುಗ್ಗಿದ ಗುಣಮಟ್ಟವು ಕಣ್ಣಿಗೆ ಗೋಚರಿಸದಿರಬಹುದು. ಉದಾಹರಣೆಗೆ, ಕಾಳಿನಲ್ಲಿಯ ಸಸಾರಜನಕ ಅಥವಾ ಎಣ್ಣೆಯ ಶೇಕಡಾವಾರು ಪ್ರಮಾಣವು ಕಡಮೆಯಾಗಬಹುದು. ಕೆಲವು ಉತ್ಪನ್ನಗಳನ್ನು ಹೆಚ್ಚು ದಿನ ಸಂಗ್ರಹಿಸಿಡಲು ಆಗದಿರಬಹುದು. ಗೆಡ್ಡೆ ಗೆಣಸುಗಳು ಸರಿಯಾಗಿ ಬೇಯದೇ ಇರಬಹುದು.

ಮೇಲೆ ಸೂಚಿಸಿದಂತೆ, ಪ್ರತಿ ಪೋಷಕದ ಕೊರತೆಯಾದಾಗ ಸಸ್ಯಗಳಲ್ಲಿ ವಿಶಿಷ್ಟ ರೀತಿಯ ಚಿಹ್ನೆಗಳು ಕಂಡು ಬರುತ್ತವೆ. ಈ ಚಿಹ್ನೆಗಳನ್ನು ಸರಿಯಾಗಿ ಗುರುತಿಸಲು ಕಲಿತರೆ ಸಸ್ಯಕ್ಕೆ ಯಾವ ಪೋಷಕದ ಅಥವಾ ಪೋಷಕಗಳ ಕೊರತೆಯಾಗಿದೆ ಎಂಬುವುದನ್ನು ತಿಳಿಯಬಹುದು. ಮತ್ತು ಕೊರತೆಯನ್ನು ನೀಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಕೆಲವು ಪೋಷಕಗಳ ಕೊರತೆಯಿಂದ ಸಸ್ಯಗಳಲ್ಲಿ ಕಂಡುಬರುವ ವಿಶಿಷ್ಟ ಚಿಹ್ನೆಗಳನ್ನು ಕೋಷ್ಟಕ ೧೬ರಲ್ಲಿ ಕೊಟ್ಟಿದೆ. ಆದರೆ ಒಂದೇ ಪೋಷಕದ ಕೊರತೆಯಿಂದ ವಿವಿಧ ಜಾತಿಯ ಸಸ್ಯಗಳಲ್ಲಿ ವಿಭಿನ್ನ ರೀತಿಯ ಚಿಹ್ನೆಗಳು ಕಂಡುಬರುತ್ತವೆ ಎಂಬುವುದನ್ನು ಲಕ್ಷ್ಯದಲ್ಲಿಡಬೇಕು.

ಸಸ್ಯಗಳಲ್ಲಿ ಕಂಡುಬರುವ ಕೊರತೆಯ ಚಿಹ್ನೆಗಳು ಸಸ್ಯಗಳಿಗೆ ಪೂರೈಸಬೇಕಾದ ಪೋಷಕಗಳ ಬಗ್ಗೆ ಸುಳಿವು ನೀಡುತ್ತವೆ. ಆದರೆ ಈ ಪದ್ಧತಿಯಲ್ಲಿ ಕೆಲವು ಪ್ರಮುಖವಾದ ನ್ಯೂನತೆಗಳು ಇರುತ್ತವೆ:

ಕೋಷ್ಟಕ ೧೬ : ಪೋಷಕಗಳ ಕೊರತೆಯಿಂದ ಸಸ್ಯಗಳಲ್ಲಿ ಕಂಡುಬರುವ ಚಿಹ್ನೆಗಳು

.ಸಂ.

ಪೋಷಕದ ಹೆಸರು

ಕೊರತೆಯ ಚಿಹ್ನೆಗಳು

೧. ಸಾರಜನಕ ಸಸ್ಯಗಳು ಹಳದಿ ಮಿಶ್ರಿತ ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತವೆ. ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಮುಸುಕಿನ ಜೋಳದಲ್ಲಿ ಕೆಳಭಾಗದ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ. ಆದರೆ ಎಳೆಯ ಎಲೆಗಳು ಹಸುರಾಗಿಯೇ ಇರುತ್ತವೆ. ಎಲೆಗಳ ವಿವರ್ಣತೆಯು ತುದಿಯಿಂದ ಆರಂಭವಾಗಿ ಬುಡದ ಕಡೆಗೆ ಸಾಗುತ್ತದೆ. ಕೊರತೆಯು ತೀವ್ರವಾದಾಗ ಕೆಳಭಾಗದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ.
೨. ರಂಜಕ ಸಸ್ಯದ ಬೇರುಗಳು ಮತ್ತು ಮೇಲ್ಭಾಗದ ಬೆಳವಣಿಗೆಯು ಕುಂಠಿತವಾಗುತ್ತದೆ. ಕೆಲವು ಬೆಳೆಗಳ ಎಲೆಗಳು ಕೆಂಪು ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತವೆ.
೩. ಪೋಟ್ಯಾಸಿಯಂ ಎಲೆಯ ಅಂಚು ಒಣಗುತ್ತದೆ. ಪೋಟ್ಯಾಸಿಯಂನ ಕೊರತೆ ತೀವ್ರವಾದಾಗ ಇಡೀ ಎಲೆಯು ಒಣಗಿ ಹೋಗುತ್ತದೆ. ಕೊರತೆಯ ಚಿಹ್ನೆಯು ಕೆಳಗೆ ಇರುವ ಎಲೆಗಳ ಮೇಲೆ ಮೊದಲು ಕಾಣಿಸಿಕೊಳ್ಳುತ್ತದೆ.
೪. ಕ್ಯಾಲ್ಸಿಯಂ ಸುಳಿಯ ಬೆಳವಣಿಗೆಯು ಕುಂಠಿತವಾಗುತ್ತದೆ.
೫. ಕಬ್ಬಿಣ ಎಳೆಯ ಎಲೆಗಳ ಮೇಲೆ ಕೊರತೆಯ ಚಿಹ್ನೆಗಳು ಮೊದಲು ಕಾಣಿಸಿಕೊಳ್ಳುತ್ತವೆ. ಎಲೆಯ ನರ (ಸೆಲೆ)ಗಳ ಮಧ್ಯದ ಭಾಗವು ಹಳದಿಯಾಗಿ ಅನಂತರ ಇಡೀ ಎಲೆಯೇ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೊರತೆಯು ತೀವ್ರವಾದಾಗ ಎಲೆಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ.
೬. ತಾಮ್ರ ಮುಸುಕಿನ ಜೋಳದಲ್ಲಿ ಎಲ್ಲಕ್ಕಿಂತ ಎಳೆಯ ಗರಿಯು ಹಳದಿ ಬಣ್ಣಕ್ಕೆ ತಿರುಗಿ, ಗರಿಯ ಬೆಳವಣಿಗೆಯು ಕುಂಠಿತವಾಗುತ್ತದೆ. ಕೆಲವು ತರಕಾರಿ ಬೆಳೆಗಳಲ್ಲಿ ಎಲೆಗಳು ನೀಲಿ ಮಿಶ್ರಿತ ಬಣ್ಣವನ್ನು ಹೊಂದಿ ಅನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ಮುದುಡಿಕೊಳ್ಳುತ್ತವೆ.
೭. ಸತು ಜೋಳ ಮತ್ತು ಮುಸುಕಿನ ಜೋಳಗಳಲ್ಲಿ ಎಳೆಯ ಗರಿಗಳು ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗಿ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಹತ್ತಿ ಬೆಳೆಯಲ್ಲಿ ತುದಿಯ ಎಲೆಗಳು ಆಕಾರದಲ್ಲಿ ಅತಿ ಚಿಕ್ಕವಾಗುತ್ತವೆ. ಕೆಲವು ಬೆಳೆಗಳಲ್ಲಿ ಬೆಳವಣಿಗೆಯು ಕುಂಠಿತವಾಗುತ್ತದೆ. ಕೆಲವು ಬೆಳೆಗಳಲ್ಲಿ ಬೆಳವಣಿಗೆಯು ಕುಂಠಿತಗೊಳ್ಳುವುದರಿಂದ ಗೆಣ್ಣುಗಳು ಹತ್ತಿರ ಬಂದು ಕಾಂಡದ ಮೇಲ್ಬಾಗವು ಹಲವು ಎಲೆಗಳ ಗುಚ್ಚದಂತೆ ಕಾಣುತ್ತದೆ.

ಸೂಚನೆ : ಇತರೆ ಪೋಷಕಗಳ ಕೊರತೆಯಾದಾಗಲೂ, ಸಸ್ಯದಲ್ಲಿ ವಿಶಿಷ್ಟ ರೀತಿಯ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

 • ಪೋಷಕದ ಕೊರತೆಯನ್ನು ಸರಿಪಡಿಸಿಕೊಳ್ಳಲಾಗದ ಸ್ಥಿತಿಯನ್ನು ಸಸ್ಯಗಳು ತಲುಪಿದ ನಂತರವೇ ಅವುಗಳಲ್ಲಿ ಕೊರತೆಯ ಚಿಹ್ನೆಯು ಕಾಣಿಸಿಕೊಳ್ಳುತ್ತದೆ. ಅಷ್ಟರೊಳಗಾಗಿಯೇ, ಸಸ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ದುಷ್ಪರಿಣಾಮವುಂಟಾಗಿರುತ್ತದೆ. ಹೀಗಾಗಿ ಆ ಹಂಗಾಮಿನ ಬೆಳೆಯಲ್ಲಿ ಆಗುವ ಇಳುವರಿಯ ನಷ್ಟವನ್ನು ತಡೆಯುವುದು ಕಷ್ಟ ಅಥವಾ ಅಸಾಧ್ಯವೆನ್ನಬಹುದು. ಆದರೆ ಅದೇ ಭೂಮಿಯಲ್ಲಿ ಮರು ವರ್ಷ, ಅದೇ ಬೆಳೆಯನ್ನು ಬೇಳೆಯಬೇಕೆಂದಾಗ ಆ ಬೆಳೆಗೆ ಪೋಷಕಗಳ ಕೊರತೆಯು ಆಗದಂತೆ ನೋಡಿಕೊಳ್ಳಲು ಈ ಪದ್ಧತಿಯು ಪ್ರಯೋಜನಕಾರಿಯಾಗುತ್ತದೆ.
 • ಕೆಲವು ಸಂದರ್ಭಗಳಲ್ಲಿ ಬಾಹ್ಯ ಚಿಹ್ನೆಗಳ ಮೇಲಿಂದ ಯಾವ ಪೋಷಕದ ಕೊರತೆಯಾಗಿದೆ ಎಂಬುವುದನ್ನು ಖಚಿತವಾಗಿ ಹೇಳುವುದು ಕಷ್ಟವೆನಿಸಬಹುದು. ಉದಾಹರಣೆಗೆ, ಸಾರಜನಕ ಮತ್ತು ಗಂಧಕಗಳ ಕೊರತೆಯಿಂದ ಉಂಟಾಗುವ ಬಾಹ್ಯ ಚಿಹ್ನೆಗಳಲ್ಲಿ ಬಹಳಷ್ಟು ಸಾಮ್ಯವಿದೆ. ಅನುಭವಿ ವ್ಯಕ್ತಿಯು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮಾತ್ರ ಕೊರತೆಯಾಗಿರುವ ಪೋಷಕವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
 • ಕೆಲವು ಪ್ರಸಂಗಗಳಲ್ಲಿ ಕೀಟ ಅಥವಾ ರೋಗದ ಚಿಹ್ನೆಗೂ ಪೋಷಕದ ಕೊರತೆಯುಂಟಾದ ಚಿಹ್ನೆಗೂ ಸಾಮ್ಯವಿರುವುದರಿಂದಾಗಿ, ಸೂಕ್ಷ್ಮ ನಿರೀಕ್ಷಣೆಯಿಂದ ಮಾತ್ರ ಕಾರಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಬೋರಾನ್‌ ಕೊರತೆಯಿಂದ ಮತ್ತು ‘ಜಿಗಿ ಹುಳುಗಳ’ ಹಾವಳಿಯಿಂದ ಕುದುರೆ ಮೆಂತೆಯು ಸಸ್ಯಗಳಲ್ಲಿ ಕಂಡು ಬರುವ ಚಿಹ್ನೆಗಳು ಏಕರೂಪವಾಗಿ ಕಾಣುತ್ತವೆ.
 • ಮಣ್ಣಿನಲ್ಲಿ ಪೋಷಕಗಳು ಸಾಕಷ್ಟು ಪ್ರಮಾಣದಲ್ಲಿದ್ದರೂ ಬೆಳೆಯು ಕೊರತೆಯನ್ನು ಅನುಭವಿಸಬೇಕಾಗುವ ಪ್ರಸಂಗಗಳು ಎದುರಾಗಬಹುದು. ಉದಾಹರಣೆಗೆ, ಮಣ್ಣಿನಲ್ಲಿ ಸಾಕಷ್ಟು ಆದ್ರತೆಯು ಇಲ್ಲದಿದ್ದರೆ ಸಸ್ಯಗಳು ಪೋಷಕಗಳನ್ನು ಬೇಕಾದ ಪ್ರಮಾಣದಲ್ಲಿ ಹೀರಿಕೊಳ್ಳಲಾಗದೇ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಅದರಂತೆಯೇ ಹವೆಯ ಉಷ್ಣತೆಯು ಕಡಮೆಯಾದಾಗ ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಂಜಕವು ಇದ್ದರೂ ಸಸ್ಯಗಳು ತಮಗೆ ಬೇಕಾಗುವಷ್ಟು ರಂಜಕವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊರತೆಯ ಚಿಹ್ನೆಯು ಕಂಡುಬರುತ್ತದೆ. ಆದರೆ, ಉಷ್ಣತಾಮಾನವು ಅಧಿಕಗೊಂಡೊಡನೆ ಸಸ್ಯಗಳು ಈ ಪೋಷಕಾಂಶವನ್ನು ಬೇಕಾಗುವಷ್ಟು ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆಯಾದ್ದರಿಂದ ಕೊರತೆಯ ಚಿಹ್ನೆಗಳು ಮಾಯವಾಗುತ್ತವೆ.

ಮೇಲೆ ಸೂಚಿಸಿದಂತೆ ಹಲವು ನ್ಯೂನತೆಗಳು ಇವೆಯಾದರೂ ಈ ಪದ್ಧತಿಯಿಂದ ದೊರೆತ ವಿವರಗಳನ್ನು ಮಣ್ಣಿನ ಮತ್ತು ಸಸ್ಯಗಳ ವಿಶ್ಲೇಷಣೆಯಿಂದ ದೊರೆತ ಪರಿಣಾಮಗಳೊಂದಿಗೆ ಸಂಯೋಜಿಸಿ ಅವುಗಳನ್ನು ಪರಸ್ಪರ ಪೂರಕವೆಂದು ಪರಿಗಣಿಸಿದರೆ ಪೋಷಕಗಳ ನಿರ್ವಹಣೆಯು ಹೆಚ್ಚು ಅರ್ಥಪೂರ್ಣವಾಗುತ್ತದೆ.

ಅದೃಶ್ಯ ಕೊರತೆ : ಸಸ್ಯಗಳಲ್ಲಿ ಕೊರತೆಯ ಚಿಹ್ನೆಗಳು ಕಾಣಿಸದಿದ್ದರೂ ಪೋಷಕಗಳನ್ನು ಪೂರೈಸಿದರೆ ಇಳುವರಿಯು ಅಧಿಕಗೊಳ್ಳುವುದೆಂದು ಕೆಲವು ಬೆಳೆಗಳ ಮೇಲೆಯೂ ನಡೆಸಿದ ಪ್ರಯೋಗಗಳಿಂದ ಕಂಡುಬಂದಿದೆ. ಸಸ್ಯಗಳಿಗೆ ಪೋಷಕದ ಕೊರತೆಯು ಇದ್ದರೂ ಕೊರತೆಯು ಇನ್ನೂ ಪರಾಕಾಷ್ಠೆಯನ್ನು ಮುಟ್ಟಿರುವುದಿಲ್ಲ. ಚಿತ್ರ ೮ ರಲ್ಲಿ ಇಂತಹ ಒಂದು ಕಾಲ್ಪನಿಕ ಸಂದರ್ಭವನ್ನು ಕಾಣಬಹುದು. 

ಚಿತ್ರ ೮ : ಪೋಷಕಗಳ ಅದೃಶ್ಯ ಕೊರತೆಯನ್ನು ತೋರಿಸುವ ಕಾಲ್ಪನಿಕ ಚಿತ್ರ

 ಚಿತ್ರದಲ್ಲಿ (೧) ಪೋಷಕಗಳ ಕೊರತೆಯು ಅಧಿಕ ಪ್ರಮಾಣದಲ್ಲಿರುವುದರಿಂದ ಇಳುವರಿಯು ಕುಗ್ಗುತ್ತದೆ. ಸಸ್ಯಗಳಲ್ಲಿ ಕೊರತೆಯ ಚಿಹ್ನೆಗಳು ಎದ್ದು ಕಾಣುತ್ತವೆ. ಮಧ್ಯದ ಭಾಗದಲ್ಲಿ (೨) ಪೋಷಕಗಳ ಕೊರತೆಯಿದೆಯಾದರೂ ಕೊರತೆಯ ಚಿಹ್ನೆಗಳನ್ನು ಗುರುತಿಸುವಷ್ಟು ಪೋಷಕಗಳು ಕೆಳಮಟ್ಟವನ್ನು ಮುಟ್ಟಿರುವುದಿಲ್ಲ. ಇಲ್ಲಿ ಮಧ್ಯಮ ಪ್ರಮಾಣದ ಇಳುವರಿಯನ್ನು ನಿರೀಕ್ಷಿಸಬಹುದು. ಪೋಷಕಗಳನ್ನು ಪೂರೈಸಿದರೆ ಅಧಿಕ ಇಳುವರಿಯನ್ನು ನಿರೀಕ್ಷಿಸಬಹುದು. ರೇಖೆಯು ಕೊನೆಯ ಭಾಗವು (೩) ಅವಶ್ಯವಿರುವ ಪ್ರಮಾಣದಲ್ಲಿ ಪೋಷಕಗಳ ಪೂರೈಕೆಯನ್ನು ತೋರಿಸುತತದೆ. ಪೋಷಕಗಳ ಕೊರತೆಯು ಇಲ್ಲವಾದ್ದರಿಂದ ಅಧಿಕ ಇಳುವರಿಯು ದೊರೆಯುತ್ತದೆ.

ಈ ಬಗೆಯ ಅದೃಶ್ಯ ಕೊರತೆಯನ್ನು ಕೇವಲ ಸಸ್ಯಗಳ ಹೊರನೋಟದಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮಣ್ಣು ಇಲ್ಲವೇ ಸಸ್ಯಗಳ ವಿಶ್ಲೇಷಣೆಯಿಂದಲೋ ಅಥವಾ ಇನ್ನಿತರೆ ಪದ್ಧತಿಗಳ ಸಹಾಯದಿಂದಲೋ ಪೋಷಕಗಳ ಅಥವಾ ಇನ್ನಿತರೆ ಪದ್ಧತಿಗಳ ಸಹಾಯದಿಂದಲೋ ಪೋಷಕಗಳ ಅವಶ್ಯಕತೆಯನ್ನು ತಿಳೀಯಬೇಕಾಗುತ್ತದೆ.

ಸಸ್ಯಗಳ ವಿಶ್ಲೇಷಣೆ : ಎರಡು ಬಗೆಯ ಸಸ್ಯ ವಿಶ್ಲೇಷಣೆಗಳು ರೂಢಿಯಲ್ಲಿವೆ :

) ಸಸ್ಯಾಂಗಗಳ ಪರೀಕ್ಷೆ : ಸಸ್ಯಗಳು ಬೆಳೆಯುತ್ತಿರುವಾಗಲೇ ಅವುಗಳ ನಿರ್ಧಿಷ್ಟ ಭಾಗಗಳಲ್ಲಿರುವ ಜೀವಕೋಶದ ದ್ರವವನ್ನು ಹೊರತೆಗೆದು ಅದರಲ್ಲಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಂ ಪೋಷಕಗಳನ್ನು ಕಂಡುಹಿಡಿಯಲಾಗುತ್ತದೆ. ಸಸ್ಯಗಳಲ್ಲಿರುವ ಗಂಧಕ, ಮೆಗ್ನೀಷಿಯಂ, ಮ್ಯಾಂಗನೀಸ್, ಮತ್ತು ಸತುವಿನ ಪ್ರಮಾಣವನ್ನು ತಿಳಿಯಲು ಸಹ ಈ ವಿಧಾನವನ್ನು ಬಳಸಬಹುದು.

ಬೇರಿನ ಮೂಲಕ ಸಸ್ಯಗಳು ಪೋಷಕಗಳನ್ನು ಹೀರಿಕೊಂಡು, ಬೆಳೆಯುತ್ತಿರುವ ಭಾಗಗಳಿಗೆ ಒದಗಿಸುತ್ತವೆ. ನಿರ್ದಿಷ್ಟ ಅಂಗದ ಜೀವಕೋಶಗಳಲ್ಲಿರುವ ದ್ರವವನ್ನು ವಿಶ್ಲೇಷಿಸಿ ಪೋಷಕಗಳ ಪ್ರಮಾಣವನ್ನು ಗೊತ್ತುಪಡಿಸಿದರೆ ವಿಶ್ಲೇಷಣೆಯ ಸಮಯದಲ್ಲಿ ಸಸ್ಯಗಳಿಗೆ ಪೂರೈಕೆಯಾಗುವ ಪೋಷಕಗಳ ಸ್ಥಿತಿಗತಿಯ ಅರಿವು ಉಂಟಾಗುತ್ತದೆ.

ಸಸ್ಯಾಂಗ ಪರೀಕ್ಷಾ ಪದ್ಧತಿಯನ್ನು ಅನುಸರಿಸುವಾಗ ಕೆಳಗಿನ ಸಂಗತಿಗಳನ್ನು ಗಮನದಲ್ಲಿಡಬೇಕು.

i) ಸಸ್ಯದ ಸರಿಯಾದ ಭಾಗದ ಆಯ್ಕೆ : ಪೋಷಕಗಳ ಪೂರೈಕೆಯ ಬಗ್ಗೆ ನಿಖರವಾದ ಸೂಚನೆಯನ್ನು ಕೊಡಬಲ್ಲ ಭಾಗವನ್ನೇ ಪರೀಕ್ಷೆಗೆಂದು ಆರಿಸಿಕೊಳ್ಳಬೇಕು. ಸಾಮಾನ್ಯವಾಗಿ, ಕಾಂಡದ ತುದಿಯಲ್ಲಿರುವ ಪೂರ್ಣ ತೆರೆದ ಎಲೆಯನ್ನು ಆರಿಸಿಕೊಳ್ಳುವುದು ರೂಢಿಯಲ್ಲಿದೆ. ಆದರೆ ವಿವಿಧ ಪ್ರಕಾರದ ಬೆಳೆಗಳಲ್ಲಿ ಕೆಲವು ನಿರ್ಧಿಷ್ಟ ಭಾಗಗಳು ಪೋಷಕಗಳ ಪೂರೈಕೆಯನ್ನು ಹೆಚ್ಚು ಖಚಿತವಾಗಿ ಸೂಚಿಸುವುದು ಕಂಡುಬಂದಿದೆ. ಉದಾಹರಣೆಗೆ ಮುಸುಕಿನ ಜೋಳದಲ್ಲಿ ಗರಿಯ ಮಧ್ಯದ ಸೆಲೆ, ಹತ್ತಿಯಲ್ಲಿ ಎಲೆಗಳ ತೊಟ್ಟು, ಕುದುರೆ ಮೆಂತೆಯಲ್ಲಿ ಕಾಂಡದ ಮಧ್ಯದ ೧/೩ ಭಾಗ, ಗೋಧಿಯಂತಹ ಧಾನ್ಯದ ಬೆಳೆಯಲ್ಲಿ ಕಾಂಡದ ಕೆಳಭಾಗ – ಇವುಗಳನ್ನು ಆರಿಸಿಕೊಳ್ಳಬೇಕು.

ii) ಪರೀಕ್ಷಿಸುವ ಸಮಯ :

 • ವಾರ್ಷಿಕ ಬೆಳೆಗಳಲ್ಲಿ ಸಸ್ಯಗಳು, ಸಣ್ಣವಿರುವಾಗಲೇ, ಪರೀಕ್ಷೆಯನ್ನು ಪ್ರಾರಂಭಿಸುವುದು ಪ್ರಯೋಜನಕಾರಿ. ಇದರಿಂದ ಯಾವುದೇ ಪೋಷಕದ ಅಥವಾ ಪೋಷಕದ ಪೂರೈಕೆಯು ಕಡಮೆಯಾಗಿದೆಯೆಂದು ಪರೀಕ್ಷೆಯಿಂದ ತಿಳಿದುಬಂದರೆ, ಕೊರತೆಯನ್ನು ನೀಗಿಸಲು ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ.
 • ಹೂವು ಬಿಡಲು ಆರಂಭವಾದಾಗಿನಿಂದ ಕಾಳು ಕಟ್ಟುವವರೆಗೆ ಅಥವಾ ಕಾಯಿ ಕಚ್ಚುವವರೆಗೆ ಸಸ್ಯಗಳಿಗೆ ಬಹು ದೊಡ್ಡ ಪ್ರಮಾಣದಲ್ಲಿ ಪೋಷಕಗಳು ಬೇಕಾಗುತ್ತವೆ. ಈ ಸೂಕ್ಷ್ಮ ಸಮಯದಲ್ಲಿ ಸೂಕ್ತ ಅಂಗಗಳನ್ನು ಪರೀಕ್ಷಿಸುವುದರಿಂದ ಪೋಷಕಗಳ ಕೊರತೆಯು ಕಂಡುಬಂದರೆ ಕೂಡಲೇ ಸಸ್ಯಗಳಿಗೆ ಪೋಷಕಗಳನ್ನು ಪೂರೈಸಲು ಅನುಕೂಲವಾಗುತ್ತದೆ.
 • ಬೆಳಿಗ್ಗೆ ಮತ್ತು ಸೂರ್ಯಸ್ತದ ಸಮಯಗಳಲ್ಲಿ ಸಾರಜನಕದ ಪರೀಕ್ಷೆಯನ್ನು ಮಾಡಬಾರದು. ರಾತ್ರಿಯ ಸಮಯದಲ್ಲಿ ಸಾರಜನಕವು ಸಸ್ಯದಲ್ಲಿ ಸಂಗ್ರಹವಾಗಿರುತ್ತದೆ. ಹೀಗಾಗಿ ಈ ಪೋಷಕದ ಕೊರತೆಯು ಇದ್ದರೂ ಬೆಳಗಿನ ಸಮಯದಲ್ಲಿ ಕೊರತೆಯು ಕಂಡುಬರುವುದಿಲ್ಲ. ಅದರಂತೆಯೇ ಸಂಜೆಯಾಗುವುದರೊಳಗೆ ಸಸ್ಯಗಳು ಸಾರಜನಕವನ್ನು ಬಳಸಿಕೊಂಡಿರುವುದರಿಂದ ಈ ಪೋಷಕದ ಕೊರತೆಯು ಇಲ್ಲದಿದ್ದರೂ ಕೊರತೆಯಿರುವಂತೆ ಭಾಸವಾಗುತ್ತದೆ.
 • ವಾರ್ಷಿಕ ಬೆಳೆಗಳಲ್ಲಿ ಸಸ್ಯಾಂಗ (ಸಸ್ಯ ಭಾಗ) ಪರೀಕ್ಷೆಯನ್ನು ಆ ಬೆಳೆಯ ಅವಧಿಯಲ್ಲಿ ೫ – ೬ ಬಾರಿ ಮಾಡುವುದು ಉತ್ತಮ. ಹೂವು ಬಿಡಲು ಆರಂಭವಾದಾಗಿನಿಂದ ಕಾಯಿ/ ಕಾಳೂ ಕಟ್ಟುವವರೆಗೆಗಿನ ಸಮಯದಲ್ಲಿ ಸಸ್ಯಾಂಗ ಪರೀಕ್ಷೆಯನ್ನು ಮರೆಯದೇ ಮಾಡಬೇಕು.
 • ಭೂ ಪ್ರದೇಶದಲ್ಲಿ ಎಲ್ಲ ಕಡೆಯು ಬೆಳೆಯ ಬೆಳವಣಿಗೆಯು ಏಕರೂಪವಾಗಿರುವುದಿಲ್ಲ. ಆದ್ದರಿಂದ ಪ್ರತಿ ಬಾರಿ ಪರೀಕ್ಷೆಯನ್ನು ಮಾಡುವಾಗಲೂ ೧೦ ರಿಂದ ೧೫ ಸಸ್ಯಗಳನ್ನು ಪರೀಕ್ಷಿಸಿ ಅವುಗಳ ಸರಾಸರಿ ಮೌಲ್ಯವನ್ನು ಪರಿಗಣಿಸಬೇಕು.

iii) ಪರೀಕ್ಷಿಸುವ ವಿಧಾನಗಳು : ಎರಡು ವಿಧಾನಗಳಿಂದ ಸಸ್ಯ ಭಾಗಗಳನ್ನು ಪರೀಕ್ಷಿಸಬಹುದು.

 • ಮೊದಲನೆಯ ವಿಧಾನದಲ್ಲಿ, ಆರಿಸಿದ ಸಸ್ಯದ ಭಾಗವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಈ ತುಂಡುಗಳನ್ನು ಗಾಜಿನ ಪರೀಕ್ಷಾ ನಳಿಕೆಯಲ್ಲಿ ಅಥವಾ ಗಾಜಿನ ಸಣ್ಣ ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು. ಸಂಬಂಧಿಸಿದ ರಾಸಾಯನಿಕ ದ್ರಾವಣವನ್ನು ಹಾಕಿ ಚೆನ್ನಾಗಿ ಅಲುಗಾಡಿಸಬೇಕು. ಅಭಿವೃದ್ಧಿಗೊಂಡ ಬಣ್ಣವನ್ನು ನಿಗದಿತ ಬಣ್ಣದೊಡನೆ ತುಲನೆಮಾಡಿ ಪೋಷಕದ ಪ್ರಮಾಣವನ್ನು ಅಂದಾಜು ಮಾಡಬೇಕು. ಈ ಪದ್ಧತಿಯನ್ನು ಅನುಸರಿಸಿದಾಗ ಪ್ರತಿ ನಮೂನೆಯನ್ನು ಪರೀಕ್ಷಿಸಲು ತುಲನಾತ್ಮಕವಾಗಿ ಹೆಚ್ಚು ಸಮಯವು ಬೇಕಾಗುತ್ತದೆ.
 • ಎರಡನೆಯ ಪದ್ಧತಿಯಲ್ಲಿ, ಆರಿಸಿದ ಸಸ್ಯದ ಭಾಗವನ್ನು ಇಕ್ಕಳದ ಸಹಾಯದಿಂದ ಹಿಸುಕಿ, ಹೊರಬಂದ ದ್ರವ ದ ಹನಿಗಳನ್ನು ಸೋಸು ಕಾಗದದ ಮೇಲೆ ಬೀಳುವಂತೆ ಮಾಡಬೇಕು. ಅದರ ಮೇಲೆ ಸಂಬಂಧಿಸಿದ ರಾಸಾಯನಿಕ ದ್ರಾವಣವನ್ನು ಹಾಕಿ ಅಭಿವೃದ್ಧಿ ಗೊಂಡ ಬಣ್ಣವನ್ನು ನಿಗದಿತ ಬಣ್ಣದೊಡನೆ ತುಲನೆ ಮಾಡಬೇಕು. ಈ ಪದ್ಧತಿಯನ್ನು ಅನುಸರಿಸಿದರೆ ಪ್ರತಿ ನಮೂನೆಯನ್ನು ಪರೀಕ್ಷಿಸಲು ಒಂದು ನಿಮಿಷ ಸಮಯ ಸಾಕಾಗುವುದು.

ಮೇಲೆ ವರ್ಣಿಸಿದ ವಿಧಾನಗಳಿಂದ ಕಂಡು ಹಿಡಿದ ಪೋಷಕಗಳ ಪ್ರಮಾಣವು ಪ್ರಯೋಗಶಾಲೆಯಲ್ಲಿ ನಡೆಸಿದ ಪರೀಕ್ಷೆಯಷ್ಟು ನಿಖರವಾಗಿರುವುದಿಲ್ಲವಾದರೂ ಪೋಷಕಗಳ ಪ್ರಮಾಣವನ್ನು ಗುಣಾತ್ಮಕವಾಗಿ ಕಡಮೆ, ಮಧ್ಯಮ ಮತ್ತು ಅಧಿಕ ಎಂದು ಮೂರು ವರ್ಗಗಳಾಗಿ ವಿಂಗಡಿಸಬಹುದು.

iv) ಪರೀಕ್ಷೆಯಿಂದ ದೊರೆತ ಪರಿಣಾಮವನ್ನು ಅನ್ವಯಿಸುವ ಮೊದಲು : ಸಸ್ಯ ಭಾಗಗಳನ್ನು ಪರೀಕ್ಷಿಸಿ ದೊರೆತ ಪರಿಣಾಮವನ್ನು ವಾಸ್ತವ ಪರಿಸ್ಥಿತಿಗೆ ಅನ್ವಯಿಸುವಾಗ ಕೆಳಗಿನ ಸಂಗತಿಗಳನ್ನು ಲಕ್ಷ್ಯದಲ್ಲಿಡಬೇಕು:

 • ಬೆಳೆಯು ಆರೋಗ್ಯವಾಗಿ ಕಾಣುತ್ತದೆಯೇ ಅಥವಾ ಬೆಳವಣಿಗೆಯು ಕುಂಠಿತವಾಗಿದೆಯೇ ಎಂಬುವುದನ್ನು ಗಮನಿಸಬೇಕು.
 • ಯಾವುದೇ ಒಂದು ಪೋಷಕದ ಪ್ರಮಾಣವು ಅಲ್ಪವೇ ಅಥವಾ ಅಧಿಕವೇ ಎಂದು ನಿರ್ಧರಿಸುವ ಮೊದಲು ಸಸ್ಯದ ಭಾಗದಲ್ಲಿ ಇತರೆ ಪೋಷಕಗಳ ಪ್ರಮಾಣವೆಷ್ಟಿದೆ ಎಂಬುವುದನ್ನೂ ಪರಿಗಣಿಸಬೇಕು.
 • ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆಯಿದೆಯೇ, ಹವೆಯ ಚಲನೆಯು ನಿರಾತಂಕವಾಗಿ ನಡೆದಿದೆಯೇ ಎಂಬುವುದನ್ನು ನೋಡಬೇಕು.
 • ಹವಾಮಾನ ಮತ್ತು ಪರೀಕ್ಷಿಸುವ ಸಮಯ ಇತ್ಯಾದಿ ಸಂಗತಿಗಳನ್ನು ಗಮನಿಸಬೇಕು.
 • ಬೆಳೆಯಿಂದ ನಿರೀಕ್ಷಿಸುವ ಇಳುವರಿಯನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು.