ಹಸುರು ಗೊಬ್ಬರಗಳಲ್ಲಿ ಕೆಳಗೆ ತಿಳಿಸಿದ ಎರಡು ಪ್ರಕಾರಗಳಿವೆ :

) ಸ್ಥಳದಲ್ಲಿಯೇ ಬೆಳೆಸುವ ಹಸುರು ಗೊಬ್ಬರ : ಹಸುರು ಗೊಬ್ಬರವನ್ನು ಹಾಕಬೇಕೆಂದಿರುವ ಭೂಮಿಯಲ್ಲಿಯೇ ಸಸ್ಯಗಳನ್ನು ಬೆಳೆದು, ಕೆಲವಾರಗಳ ನಂತರ ಅವುಗಳನ್ನು ಕಿತ್ತು, ಅದೇ ಭೂಮಿಯಲ್ಲಿ ಹೂಳುವ ಪದ್ಧತಿಗೆ ಸ್ಥಳದಲ್ಲಿಯೇ ಬೆಳೆಯುವ ಹಸುರು ಗೊಬ್ಬರ ಅಥವಾ ಕೇವಲ ಹಸುರು ಗೊಬ್ಬರ ಎನ್ನುತ್ತಾರೆ. ಸೆಣಬು, ಸೆಸ್ಬೇನಿಯಾ, ಧ್ವೈಂಚಾ, ಪಿಲ್ಲಿ, ಪೆಸರು, ಇತ್ಯಾದಿ ಬೆಳೆಗಳು ಹಸುರು ಗೊಬ್ಬರಕ್ಕೆ ಬಳಸುವ ಬೆಳೆಗಳು.

) ಹಸುರೆಲೆ ಗೊಬ್ಬರ : ಬದುವಿನ ಮೇಲೆ, ಬೇಲಿಗುಂಟ, ಬೇಸಾಯಕ್ಕೆ ನಿರುಪಯೋಗವೆನಿಸಿದ ಭೂಮಿಯಲ್ಲಿ ಇಲ್ಲವೇ ಆಡವಿಯಲ್ಲಿ ಬೆಳೆದ ಗಿಡಮರಗಳ ಎಲೆ ಮತ್ತು ಮೃದು ಕಾಂಡಗಳನ್ನು ತಂದು ಮಣ್ಣಿನಲ್ಲಿ ಸೇರಿಸಿದರೆ ಹಸುರೆಲೆ ಗೊಬ್ಬರವನ್ನು ಹಾಕಿದಂತಾಯಿತು. ಉದಾ: ಗ್ಲಿರಿಸೀಡಿಯಾ, ಹೊಂಗೆ, ಇತ್ಯಾದಿಗಳು ಹಸುರೆಲೆ ಗೊಬ್ಬರಕ್ಕೆ ಬಳಸುವ ಗಿಡಮರಗಳು.

ಹಸುರು ಗೊಬ್ಬರದಿಂದ ಮತ್ತು ಹಸುರೆಲೆ ಗೊಬ್ಬರದಿಂದ ಕೆಳಗೆ ತಿಳಿಸಿದ ಪ್ರಯೋಜನಗಳಿವೆ:

 • ಬೇಗನೇ ಕಳಿಯಬಲ್ಲ ಹಸುರು ಸಸ್ಯಗಳು ಅಥವಾ ಸಸ್ಯಭಾಗಗಳು ಮಣ್ಣಿಗೆ ಪೂರೈಕೆಯಾಗುವುದರಿಂದ ಸೂಕ್ಷ್ಮ ಜೀವಿಗಳ ಚಟುವಟಿಕೆಯು ಮಣ್ಣಿನಲ್ಲಿ ಒಮ್ಮೆಲೇ ಅಧಿಕಗೊಳ್ಳುತ್ತದೆ.
 •  ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯಗಳನ್ನು ಬಳಸಿದರೆ, ಅವು ಹವೆಯಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುತ್ತವೆ. ಈ ಸಸ್ಯಗಳನ್ನು ಮಣ್ಣಿಗೆ ಸೇರಿಸಿದಾಗ ಸ್ಥೀರೀಕರಿಸಿದ ಸಾರಜನಕವನ್ನು ಮಣ್ಣಿಗೆ ಪೂರೈಸಿದಂತಾಗುತ್ತದೆ.
 • ಆಳವಾದ ಬೇರುಗಳಿರುವ ಸಸ್ಯಗಳನ್ನು ಹಸುರು ಗೊಬ್ಬರಕ್ಕೆಂದು ಬಳಸಿದಾಗ, ಮಣ್ಣಿನ ಕೆಳಸ್ಥರದಲ್ಲಿರುವ ಪೋಷಕಗಳನ್ನು ಹೀರಿಕೊಳ್ಳುತ್ತವೆ. ಈ ಸಸ್ಯಗಳನ್ನು, ಮೇಲ್ಮಣ್ಣಿನಲ್ಲಿ ಹೂಳಿದಾಗ ಈ ಪೋಷಕಗಳನ್ನು ಮೇಲ್ಭಾಗಕ್ಕೆ ತಂದು ಬೆಳೆಗಳಿಗೆ ಸಿಗುವಂತೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.
 • ಹಸುರೆಲೆ ಗೊಬ್ಬರದಲ್ಲಿ ಸಸ್ಯಗಳ ಎಲೆ – ಕಾಂಡಗಳನ್ನು ಬೇರೆ ಸ್ಥಳದಿಂದ ತರುವುದರಿಂದ, ಆ ಸ್ಥಳದಲ್ಲಿರುವ ಪೋಷಕಗಳನ್ನು ತಂದು ಮಣ್ಣಿಗೆ ಸೇರಿಸಿದಂತಾಗುತ್ತದೆ.
 • ಹಸುರು ಗೊಬ್ಬರದ ಅಥವಾ ಹಸುರೆಲೆ ಗೊಬ್ಬರದ ಸಾವಯವ ವಸ್ತುಗಳು ಮಣ್ಣಿನಲ್ಲಿ ಕಳಿಯುತ್ತಿರುವಾಗ ನಿರ್ಮಾಣಗೊಂಡ ಇಂಗಾಲಾಮ್ಲ ಮತ್ತು ಹಲವು ಸಾವಯವ ಆಮ್ಲಗಳು, ಕರಗದ ರೂಪದಲ್ಲಿರುವ ರಂಜಕ, ಸುಣ್ಣ, ಕಬ್ಬಿಣ, ಮುಂತಾದ ಪೋಷಕಗಳನ್ನು ಕರಗುವ ರೂಪಕ್ಕೆ ಪರಿವರ್ತಿಸಿ, ಸಸ್ಯಗಳಿಗೆ ಸುಲಭವಾಗಿ ದೊರೆಯುವಂತೆ ಮಾಡುತ್ತವೆ.
 • ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಉತ್ತಮಗೊಳ್ಳುತ್ತವೆ.
 • ಹಸುರು ಗೊಬ್ಬರದ ಬೆಳೆಯನ್ನು ದಟ್ಟವಾಗಿ ಬಿತ್ತಬೇಕಾಗುವುದರಿಂದ, ಸಸ್ಯಗಳು, ಭೂಮಿಯನ್ನು ಆವರಿಸಿಕೊಂಡು ಭೂಸವಕಳಿಯನ್ನು ಕಡಮೆ ಮಾಡುತ್ತವಲ್ಲದೇ, ಕಳೆಗಳ ಬೆಳವಣಿಗೆಯನ್ನೂ ಕುಗ್ಗಿಸುತ್ತವೆ.

ಹಸರು ಗೊಬ್ಬರದಿಂದಾಗುವ ಕೆಲವು ಅನಾನುಕೂಲಗಳು ಕೆಳಗಿನಂತಿವೆ :

 • ಕಡಮೆ ಮಳೆ ಬೀಳುವ ಪ್ರದೇಶದಲ್ಲಿ, ಆರ್ದ್ರತೆಯ ಕೊರತೆಯಿಂದ ಭೂಮಿಗೆ ಸೇರಿಸಿದ ಸಸ್ಯಗಳು ಪೂರ್ತಿಯಾಗಿ ಕಳಿಯದೇ ಬಿತ್ತಿದ ಬೀಜಗಳು ಸರಿಯಾಗಿ ಹುಟ್ಟದೇ ಇರಬಹುದು.
 • ಹಸುರು ಗೊಬ್ಬರವನ್ನು ಬೆಳೆಸಿದಾಗ ಒಂದು ಹಂಗಾಮಿನಲ್ಲಿ ಬೆಳೆಯಬಹುದಾದ ಬೆಳೆಯನ್ನು ಕೈಬಿಡಬೇಕಾಗುತ್ತದೆ.

ಆದರೆ ಮೇಲಿನ ಅನಾನುಕೂಲತೆಗಳನ್ನು, ಸೂಕ್ತ ಬದಲಾವಣೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯವಿದೆ.

ಹಸುರು ಗೊಬ್ಬರಕ್ಕೆಂದು ಬೆಳೆಸುವ ಸಸ್ಯಗಳಲ್ಲಿರಬೇಕಾದ ಗುಣಧರ್ಮಗಳು :

 • ಅಲ್ಪಕಾಲದಲ್ಲಿ ಅಧಿಕ ಪ್ರಮಾಣದ ಎಲೆ ಮತ್ತು ಮೃದು ಕಾಂಡಗಳು ದೊರೆಯುವಂತೆ ಸಸ್ಯಗಳು ವೇಗದಿಂದ ಬೆಳೆಯಬೇಕು.
 • ಕಳೆಗಳೊಡನೆ ಯಶಸ್ವಿಯಾಗಿ ಸ್ಪರ್ಧಿಸಿ ಅವುಗಳ ಬೆಳವಣಿಗೆಯನ್ನು ನಿರ್ಬಂಧಿಸುವ ಸಾಮರ್ಥ್ಯವಿರಬೇಕು.
 • ಒಟ್ಟು ತೂಕದಲ್ಲಿ ಹಸುರು ಎಲೆಗಳು ಮತ್ತು ಮೃದು ಕಾಂಡಗಳ ಪ್ರಮಾಣವೇ ಅಧಿಕವಾಗಿರಬೇಕು.
 • ಬೇರುಗಳು ಆಳವಾಗಿ ಮತ್ತು ವಿಶಾಲವಾದ ಪ್ರದೇಶದಲ್ಲಿ ಬೆಳೆಯಬೇಕು.
 • ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯವಾದರೆ ಹೆಚ್ಚು ಪ್ರಯೋಜನಕಾರಿ. ಇದು ಗಾಳಿಯಲ್ಲಿನ ಸಾರಜನಕ ವಾಯುವನ್ನು ಸಾವಯವ ರೂಪದಲ್ಲಿ ಸ್ಥಿರೀಕರಿಸುತ್ತದೆ.

ಹಸುರು ಗೊಬ್ಬರಕ್ಕೆ ಬಳಸುವ ಬೆಳೆಗಳು : ಸಾಮಾನ್ಯವಾಗಿ ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳನ್ನು ಹಸುರು ಗೊಬ್ಬರಕ್ಕೆಂದು ಉಪಯೋಗಿಸುವ ರೂಢಿಯಿದೆಯಾದರೂ ಇತರೆ ಬೆಳೆಗಳನ್ನೂ ಈ ಉದ್ದೇಶಕ್ಕೆ ಬಳಸಲಾಗುತ್ತಿದೆ. ಪ್ರಮುಖ ಬೆಳೆಗಳ ಹೆಸರುಗಳು ಕೆಳಗಿನಂತಿವೆ.

i) ಬೇಳೆಕಾಳು ವರ್ಗದ ಬೆಳೆಗಳು : ಸೆಣಬು, ಸೆಸ್ಬೇನಿಯಾ, ಧೈಂಚಾ, ಪಿಲ್ಲಿ ಪೆಸರು, ಹೆಸರು, ಅಲಸಂದಿ, ಚವಳಿ, ಸೆಂಜೆ, ಕೇಸರಿ, ಬರಸೀಮ್, ಸೆಸ್ಬೇನಿಯಾ, ರೋಸ್ಟ್ರೇಟಾ ಇತ್ಯಾದಿ.

ರೈಝೋಬಿಯಂ ಜೀವಾಣುಗಳು ಸೆಸ್ಬೇನಿಯಾ ರೋಸ್ಟ್ರೇಟಾ ಎಂಬ ಸಸ್ಯದ ಬೇರುಗಳ ಮೇಲಲ್ಲದೇ ಕಾಂಡಗಳ ಮೇಲೆಯೂ ಸಹ ವಾಸಿಸಿ, ಗಾಳಿಯೊಳಗಿನ ಸಾರಜನಕವನ್ನು ಸ್ಥಿರೀಕರಿಸುತ್ತವೆ. ಹೀಗಾಗಿ ಹೆಚ್ಚು ಸಾರಜನಕವು ಈ ಸಸ್ಯದ ಮೂಲಕ ಸ್ಥೀಕರೀಕರಣಗೊಳ್ಳುತ್ತದೆ ಎಂಬುವುದನ್ನು ಇಲ್ಲಿ ಗಮನಿಸಬೇಕು.

ii) ಇತರೆ ಬೆಳೆಗಳು : ರೈ, ಸಾಸಿವೆ, ಬಕ್ ವ್ಹೀಟ್, ಕುಸುಬೆ, ಗುರೆಳ್ಳು, ಓಟ್ಸ್, ಭಂಗಿ, ಜೋಳ, ಸೂರ್ಯಕಾಂತಿ ಇತ್ಯಾದಿ.

ಹಸುರೆಲೆ ಗೊಬ್ಬರಕ್ಕೆ ಉಪಯೋಗಿಸುವ ಬೆಳೆಗಳು : ಗ್ಲಿರಿಸೀಡಿಯಾ, ಸೆಸ್ಬೇನಿಯಾ, ಹೊಂಗೆ, ಬೇವು, ಎಕ್ಕೆ ಇತ್ಯಾದಿಗಳ ಎಲೆ ಮತ್ತು ಮೃದು ಕಾಂಡವನ್ನು ಹಸುರೆಲೆ ಗೊಬ್ಬರಕ್ಕಾಗಿ ಬಳಸಲಾಗುತ್ತದೆ. ಗ್ಲಿರಿಸೀಡಿಯಾವನ್ನು ಬೇಲಿಗೆಂದು ಬೆಳೆಸಿ ವರ್ಷದಲ್ಲಿ ಮೃದು ಕಾಂಡಗಳನ್ನು ೨.೩ ಬಾರಿ ಕತ್ತರಿಸಿ ಭೂಮಿಗೆ ಸೇರಿಸಬಹುದು. ನಾಟಿ ಪದ್ಧತಿಯಿಂದ ಬೆಳೆಯುವ ಬತ್ತದ ಗದ್ದೆಗಳಲ್ಲಿ ನಾಟಿಗಿಂತ ಕೆಲವು ದಿನಗಳ ಮೊದಲು ಹೊಂಗೆ ಎಲೆ ಮತ್ತು ಮೃದು ಶಾಖೆಗಳನ್ನು ಕೆಸರು ಗದ್ದೆಗೆ ಸೇರಿಸಲಾಗುತ್ತದೆ.

ಹಸುರು ಗೊಬ್ಬರದಲ್ಲಿರುವ ಪೋಷಕ ಪ್ರಮಾಣ : ಬಳಕೆಯಲ್ಲಿರುವ ಕೆಲವು ಹಸುರು ಗೊಬ್ಬರಗಳಲ್ಲಿರುವ ಸಾರಜನಕ, ರಂಝಕದ ಪೆಂಟಾಕ್ಸೈಡ್, ಮತ್ತು ಪೋಟ್ಯಾಷ್ ನ ಪ್ರಮಾಣವನ್ನು ಕೋಷ್ಟಕ ೨೦ರಲ್ಲಿ ಕೊಡಲಾಗಿದೆ.

ಕೋಷ್ಟಕ ೨೦: ಕೆಲವು ಹಸುರು ಗೊಬ್ಬರದ ಸಸ್ಯಗಳಲ್ಲಿರುವ ಪೋಷಕಗಳ ಪ್ರಮಾಣ :

               

 

. ಸಂ.

ಬೆಳೆಗಳು

ಶೇಕಡಾವಾರು (ಗಾಳಿಯಲ್ಲಿ ಒಣಗಿಸಿದ ಸಸ್ಯದ ತೂಕದ ಆಧಾರದ ಮೇಲೆ)

ಸಾರಜನಕ

ರಂಜಕದ ಪೆಂಟಾಕ್ಸೈಡ್

ಪೋಟ್ಯಾಷ್

೧) ಸೆಣಬು

೨.೩

೦.೫

೧.೮

೨) ಧೈಂಚಾ

೩.೫

೦.೬

೧.೨

೩) ಅಲಸಂದಿ

೩.೩

೦.೫

೨.೧

೪) ಚವಳಿ

೩.೦

೦.೪

೧.೬

೫) ಗ್ಲರಿಸೀಡಿಯಾ (ಹಸುರೆಲೆ ಗೊಬ್ಬರ)

೨.೯

೦.೫

೨.೮

ವಿವಿಧಹಸುರುಗೊಬ್ಬರಪೂರೈಕೆಪದ್ಧತಿಗಳು

i) ಮುಖ್ಯ ಬೆಳೆಗಿಂತ ಮೊದಲು ಬೆಳೆಸುವ ವಿಧಾನ : ಹಸುರು ಗೊಬ್ಬರದ ಬೆಳೆಯನ್ನು ಮುಖ್ಯ ಬೆಳೆಗಿಂತ ೩ – ೪ ತಿಂಗಳುಗಳ ಮೊದಲು ಬಿತ್ತಬೇಕು. ಪ್ರತಿ ಎಕರೆಗೆ ಹೆಚ್ಚು ಬೀಜಗಳನ್ನು ಬಿತ್ತಿ ಸಸ್ಯಗಳಲ್ಲಿ ಹೂವು ಬಂದ ನಂತರ, ಕಿತ್ತು ಮಣ್ಣಿನಲ್ಲಿ ಸೇರಿಸಬೇಕು. ನಾಲ್ಕಾರು ವಾರಗಳಲ್ಲಿ ಸಾವಯವ ಪದಾರ್ಥಗಳು ಸಾಕಷ್ಟು ಕಳಿತಿರುತ್ತವೆ. ಮಣ್ಣಿನಲ್ಲಿ ಹಸಿಯು ಕಡಮೆಯಿದ್ದಲ್ಲಿ ನೀರನ್ನು ಒದಗಿಸಬೇಕು. ಅನಂತರ ನೆಲವನ್ನು ಹದಮಾಡಿ ಮುಖ್ಯ ಬೆಳೆಯನ್ನು ಬಿತ್ತಬೇಕು.

ಮೇಲಿನ ಪದ್ಧತಿಯಿಂದ ಹಸುರು ಗೊಬ್ಬರವನ್ನು ಪೂರೈಸುವುದರಲ್ಲಿ ಕೆಲವಾರು ಅನಾನುಕೂಲಗಳಿವೆ :

 • ಹಸುರು ಬೆಳೆಯು ಬೆಳೆಯುತ್ತಿರುವ ಹಂಗಾಮಿನಲ್ಲಿ ಮುಖ್ಯ ಬೆಳೆಯನ್ನು ತೆಗೆದುಕೊಳ್ಳಲಾಗದಿರುವುದರಿಂದ ಒಂದು ಹಂಗಾಮಿನ ಬೆಳೆಯನ್ನು ಕಳೆದುಕೊಂಡಂತಾಗುತ್ತದೆ.
 • ಹಸುರು ಗೊಬ್ಬರವನ್ನು ಮಣ್ಣಿಗೆ ಸೇರಿಸಿದಾಗ, ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆಯಿರಬೇಕು. ಸುಮಾರು ೮ – ೧೦ ಸೆಂ.ಮೀ.ನಷ್ಟು ಮಳೆಯಾದರೂ ಬೀಳಬೇಕು ಇಲ್ಲವೇ ನೀರನ್ನಾದರೂ ಪೂರೈಸಬೇಕು.

ii) ಬೇರೆ ಸ್ಥಳದಲ್ಲಿ ಬೆಳೆದು ಹಸುರು ಗೊಬ್ಬರಮಾಢುವ ವಿಧಾನಗಳು : ಹಸುರು ಗೊಬ್ಬರದ ಬೆಳೆಗಳನ್ನು, ಹತ್ತಿರದ ಹೊಲ – ಗದ್ದೆಗಳ ಸುತ್ತ ಬೆಳೆದು ಅವಶ್ಯವಿರುವ ಸ್ಥಳಕ್ಕೆ ತಂದು ಮಣ್ಣಿನಲ್ಲಿ ಸೇರಿಸಬಹುದು. ಅದರಂತೆಯೇ ಬದುವಿನ ಮೇಲೆ ಅಥವಾ ಇತರೆ ಪ್ರದೇಶಗಳಲ್ಲಿ ಬೆಳೆದ (ಉದಾಹರಣೆಗೆ, ಬೇಸಾಯಕ್ಕೆ ಸೂಕ್ತವೆನಿಸದ ಭೂಮಿಯಲ್ಲಿ ಬೆಳೆದ, ಅಡವಿ, ಬೆಟ್ಟಗಳಲ್ಲಿ ಬೆಳೆದ) ಗಿಡಮರಗಳ ಎಲೆ ಮತ್ತು ಮೃದು ಕಾಂಡಗಳನ್ನು ತಂದು ಮಣ್ಣಿಗೆ ಸೇರಿಸಬಹುದು. ಹಾಗೆಯೇ ಈಗಾಗಲೇ ತಿಳಿಸಿದಂತೆ ಗ್ಲಿರಿಸೀಡಿಯಾ, ಹೊಂಗೆ, ಬೇವು, ಎಕ್ಕೆ ಮುಂತಾಗಿ ಗಿಡ ಮರಗಳಿಂದ ಹಸುರನ್ನು ತಂದು ಬಳಸಬಹುದಾಗಿದೆ.

iii) ಮುಖ್ಯ ಬೆಳೆಯೊಡನೆ ಹಸುರು ಗೊಬ್ಬರದ ಬೆಳೆಯನ್ನು ಬೆಳೆಸುವ ವಿಧಾನ : ಕಬ್ಬು, ಬತ್ತ, ಮುಂತಾದ ಬೆಳೆಗಳಲ್ಲಿ, ಸೆಣಬು, ಸೆಸ್ಬೇನಿಯಾದಂತಹ ಹಸುರು ಗೊಬ್ಬರದ ಬೆಳೆಗಳನ್ನು ಬೆಳೇದು ೫ – ೬ ವಾರಗಳ ನಂತರ ಅವನ್ನು ಮಣ್ಣಿನಲ್ಲಿ ಸೇರಿಸಬಹುದು. ಉದಾಹರಣೆಗೆ, ಕಬ್ಬನ್ನು ನೆಟ್ಟೊಡನೆಯೇ ಸೆಣಬನ್ನು ಬಿತ್ತಿ, ಸುಮಾರು, ೬ – ೭ ವಾರಗಳ ನಂತರ ಸೆಣಬನ್ನು ಕಿತ್ತು, ಕಬ್ಬಿನ ಬೆಳೆಯಿಂದ ಸ್ವಲ್ಪ ಅಂತರದಲ್ಲಿ ಹೂತು, ತೆಳುವಾಗಿ ಮಣ್ಣೇರಿಸಬೇಕು. ಬತ್ತದೊಡನೆ ಸೆಣಬಿನ ಬೀಜಗಳನ್ನು ಬಿತ್ತಿ ೫ – ೬ ವಾರಗಳಾದ ಮೇಲೆ ಹಲಗೆಯನ್ನು ಎಳೆಯುವುದರಿಂದ, ಸೆಣಬಿನ ಸಸ್ಯಗಳು ಮುರಿದು ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ.

ಮುಖ್ಯ ಬೆಳೆಯೊಡನೆ ಹಸುರು ಗೊಬ್ಬರದ ಬೆಳೆಯನ್ನು ಬೆಳೆಯುವಾಗ ಕೆಲವು ಸಂಗತಿಗಳನ್ನು ಗಮನದಲ್ಲಿಡಬೇಕು.

 • ಹಸುರು ಗೊಬ್ಬರದ ಬೆಳೆಯ ನೆರಳು ಮುಖ್ಯ ಬೆಳೆಯ ಮೇಲೆ ಬಿದ್ದು, ಅದರ ಬೆಳವಣಿಗೆಯು ಕುಂಠಿತಗೊಳ್ಳಬಾರದು.,
 • ಹಸುರು ಗೊಬ್ಬರದ ಬೆಳೆಯನ್ನು ಮಣ್ಣಿಗೆ ಸೇರಿಸಿದ ನಂತರ ಅದು ಕಳಿಯಲು ಬೇಕಾಗುವಷ್ಟು ಆರ್ದ್ರತೆಯು ಮಣ್ಣಿನಲ್ಲಿರುವಂತೆ ನೋಡಿಕೊಳ್ಳಬೇಕು.
 • ಹಸುರು ಗೊಬ್ಬರದ ಬೆಳೆಗಳನ್ನು ಮಣ್ಣಿನಲ್ಲಿ ಸೇರಿಸುವಾಗ, ಸ್ವಲ್ಪ ಪ್ರಮಾಣದಲ್ಲಿ ಸಾರಜನಕ ಗೊಬ್ಬರವನ್ನು ಪೂರೈಸುವುದು ಉತ್ತಮ.

ಹಸುರು ಗೊಬ್ಬರದ ಬೆಳೆಗೆ ರಂಜಕದ ಪೂರೈಕೆ : ಬೇಳೆಕಾಳು ವರ್ಗಕ್ಕೆ ಸೇರಿದ ಹಸುರು ಗೊಬ್ಬರದ ಬೆಳೆಗೆ ರಂಜಕವನ್ನು ಪೂರೈಸಿದರೆ, ಸಾರಜನಕದ ಸ್ಥಿರೀಕರಣ ಕ್ರಿಯೆಯು ಉತ್ತಮಗೊಳ್ಳುತ್ತದಲ್ಲದೇ, ಬೇರುಗಳು ಸಮೃದ್ಧವಾಗಿ ಬೆಳೆಯುವುದರೊಂದಿಗೆ ಇಳುವರಿಯು ಅಧಿಕವಾಗುತ್ತದೆ.

ಮೇಲೆ ತಿಳಿಸಿದಂತೆ, ಮಣ್ಣಿಗೆ ಪೂರೈಸಿದ ರಂಜಕವು ಹಸುರು ಗೊಬ್ಬರದ ಬೆಳೆಗಳು ಹೀರಿಕೊಂಡವೆಂದರೆ, ಈ ಪೋಷಕವು ಸಾವಯವ ರೂಪಕ್ಕೆ ಪರಿವರ್ತನೆಗೊಂಡಂತಾಯಿತು. ಹಸುರು ಗೊಬ್ಬರದ ಬೆಳೆಯನ್ನು ಮಣ್ಣಿಗೆ ಸೇರಿಸಿದ ನಂತರ ಅದು ಕಳಿತು, ಅದರಲ್ಲಿದ್ದ ರಂಜಕವು ಮುಖ್ಯ ಬೆಳೆಗೆ ಲಭ್ಯವಾಗುತ್ತದೆ. ರಂಜಕವನ್ನು ಒದಗಿಸುವ ರಾಸಾಯನಿಕ ಗೊಬ್ಬರವನ್ನು ಮುಖ್ಯ ಬೆಳೆಗೆ ನೇರವಾಗಿ ಪೂರೈಸುವುದಕ್ಕಿಂತ ಹಸುರು ಗೊಬ್ಬರದ ಮುಖಾಂತರ ಒದಗಿಸುವುದೇ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ.

ಕಡಮೆ ಫಲವತ್ತತೆಯ ಮಣ್ಣಿನಲ್ಲಿ ಹಸುರು ಗೊಬ್ಬರ :ಅತಿ ಕಡಮೆ ಫಲವತ್ತತೆಯುಳ್ಳ ಮಣ್ಣಿನಲ್ಲಿ ಹಸುರು ಗೊಬ್ಬರದ ಬೆಳೆಯನ್ನು ಬೆಳೆಸುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕು.

 • ರಂಜಕವಲ್ಲದೆ ಸಣ್ಣ ಪ್ರಮಾಣದಲ್ಲಿ ಸಾರಜನಕ ಮತ್ತು ಪೋಟ್ಯಾಸಿಯಂಗಳನ್ನು ಒದಗಿಸುವ ರಾಸಾಯನಿಕ ಗೊಬ್ಬರಗಳನ್ನೂ ಪೂರೈಸಬೇಕು. ಇದರಿಂದ ಆರಂಭದ ಬೆಳವಣಿಗೆಗೆ ಪ್ರಚೋದನೆಯು ದೊರೆತು ಇಳುವರಿಯು ಹೆಚ್ಚುತ್ತದೆಯಲ್ಲದೇ ಸಾರಜನಕದ ಸ್ಥಿರೀಕರಣವೂ ಅಧಿಕವಾಗುತ್ತದೆ.
 • ಆ ಭೂಮಿಯಲ್ಲಿ ಬೇಳೆಕಾಳು ವರ್ಗಕ್ಕೆ ಸೇರಿದ ಹಸುರು ಗೊಬ್ಬರದ ಬೆಳೆಯನ್ನು ಮೊಟ್ಟ ಮೊದಲು ಬೆಳೆಯುವುದಾದರೆ ಬೀಜಗಳನ್ನು ಸೂಕ್ತ ರೈಝೋಬಿಯಂ ಜೀವಾಣುಗಳಿಂದ ಉಪಚರಿಸಬೇಕು.
 • ಮಣ್ಣಿನಲ್ಲಿ ಮೊಲಿಬ್ಡಿನಂ ಮತ್ತು ಬೋರಾನ್‌ಗಳ ಕೊರತೆ ಕಂಡುಬಂದರೆ, ಈ ಪೋಷಕಗಳನ್ನು ಸೂಕ್ತ ಪ್ರಮಾಣದಲ್ಲಿ ಪೂರೈಸಬೇಕು.

ಹಸುರು ಗೊಬ್ಬರದಿಂದ ಮಣ್ಣಿನ ಮೇಲಾಗುವ ಪರಿಣಾಮ : ಹಸುರು ಗೊಬ್ಬರವೆಂದು ಉಪಯೋಗಿಸಿದ ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯದ ಎಲೆಗಳು ಮತ್ತು ಕಾಂಡದ ಭಾಗಗಳು ಮೃದುವಾಗಿರುತ್ತವೆ. ಅದರಲ್ಲಿ, ಲಿಗ್ನಿನ್ನ ಪ್ರಮಾಣ ಕಡಮೆ. ಸಾರಜನಕ ಮತ್ತು ಇಂಗಾಲಗಳ ೧:೩೦ರ ಅನುಪಾತದಲ್ಲಿರುತ್ತವೆ. ಈ ಸಸ್ಯಗಳು ಕಳಿತವೆಂದರೆ ಅವುಗಳಲ್ಲಿರುವ ಸಸಾರಜನಕವು ಅಮೋನಿಯಂ ರೂಪದಲ್ಲಿ ಹೊರಬಂದು ನೈಟ್ರೇಟ್ ರೂಪಕ್ಕೆ ಪರಿವರ್ತನೆ ಹೊಂದುತ್ತದೆ. ಆದ್ದರಿಂದ ಹಸುರು ಗೊಬ್ಬರವನ್ನು ಪಡೆದ ಮಣ್ಣಿನಲ್ಲಿಯ ಸಾರಜನಕದ ಪ್ರಮಾಣವು ಅಧಿಕಗೊಳ್ಳುತ್ತದೆ.

ಮೇಲೆ ತಿಳಿಸಿದಂತೆ ಹಸುರು ಗೊಬ್ಬರವೆಂದು ಮಣ್ಣಿನಲ್ಲಿ ಸೇರಿಸಿದ ಸಸ್ಯಗಳಲ್ಲಿ ಲಿಗ್ನಿನ್‌ ಪ್ರಮಾಣವು ಅತಿ ಕಡಮೆ. ಹೀಗಾಗಿ ಹ್ಯೂಮಸ್ ರೂಪದಲ್ಲಿ ಸಾವಯವ ಪದಾರ್ಥವು ಮಣ್ಣಿನೊಳಗೆ ಗಣನೀಯ ಪ್ರಮಾಣದಲ್ಲಿ ಸಂಗ್ರಹವಾಗುವುದಿಲ್ಲ. ಹ್ಯೂಮಸ್ ಸಂಗ್ರಹದ ಬಗ್ಗೆ ಹೆಚ್ಚಿನ ವಿವರಗಳನ್ನು ಅಧ್ಯಾಯ ೭ರಲ್ಲಿ ತಿಳಿಸಲಾಗಿದೆ.

ಪೋಷಕಗಳುಹೆಚ್ಚಿನಪ್ರಮಾಣದಲ್ಲಿರುವಸಾವಯವಗೊಬ್ಬರಗಳು

ಇಲ್ಲಿಯವರೆಗೆ ವರ್ಣಿಸಿದ ಸಾವಯವ ಗೊಬ್ಬರಗಳ ಗಾತ್ರವು ಅಧಿಕವಾದರೂ ಶೇಕಡಾವಾರು ಪೋಷಕಗಳ ಪ್ರಮಾಣವು ಕಡಮೆ. ಆದರೆ ಕೆಲವು ಸಾವಯವ ಪದಾರ್ಥಗಳಲ್ಲಿ ಪೋಷಕಗಳ ಶೇಕಡಾವಾರು ಪ್ರಮಾಣವು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ. ಇಂತಹ ಸಾವಯವ ಗೊಬ್ಬರಗಳು ಸಸ್ಯಜನ್ಯವಿರಬಹುದು. ಇಲ್ಲವೇ ಪ್ರಾಣಿಜನ್ಯವಿರಬಹುದು. ಈ ಬಗೆಯ ಕೆಲವು ಗೊಬ್ಬರಗಳ ವಿವರಗಳು ಕೆಳಗಿನಂತಿವೆ.

ಹಿಂಡಿಗಳು :ಸೇಂಗಾ, ಕುಸುಬೆ, ಹತ್ತಿ ಕಾಳು, ಔಡಲ, ಮುಂತಾದ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ತೆಗೆದ ನಂತರ, ಉಳಿಯುವ ಘನ ವಸ್ತುವೇ ಹಿಂಡಿ. ಕೆಲವು ಹಿಂಡಿಗಳನ್ನು ಮನುಷ್ಯರು ತಮ್ಮ ಆಹಾರವಾಗಿ ಇಲ್ಲವೇ ಜಾನುವಾರುಗಳ ಆಹಾರವಾಗಿ ಬಳಸುತ್ತಾರೆ. ಕೆಲವು ಹಿಂಡಿಗಳಲ್ಲಿ ವಿಷಕಾರಿ ರಾಸಾಯನಿಕ ದ್ರವ್ಯಗಳಿರುವ ಕಾರಣ ಅವುಗಳನ್ನು ಮನುಷ್ಯರು ಅಥವಾ ಜಾನುವಾರುಗಳ ಆಹಾರವಾಗಿ ಬಳಸಲಾಗುವುದಿಲ್ಲ. ಇಂತಹ ಹಿಂಡಿಗಳನ್ನು ಗೊಬ್ಬರವಾಗಿ ಉಪಯೋಗಿಸಬಹುದು.

ಇತಿಹಾಸ : ಕಳೆದ ಶತಮಾನದ ೬೦ ದಶಕದ ಮಧ್ಯ ಭಾಗದವರೆಗೆ, ಹಿಂಡಿಯು ಅದರಲ್ಲಿಯೂ ಸೇಂಗಾ ಹಿಂಡಿಯು, ಹಲವು ಬೆಳೆಗಳಿಗೆ ಪೋಷಕಗಳನ್ನು ಒದಗಿಸುವ ಒಂದು ಪ್ರಮುಖ ಸಾವಯವ ವಸ್ತುವಾಗಿತ್ತು. ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಸಿದ್ಧಪಡಿಸುವ ಗೊಬ್ಬರಗಳು ಎಲ್ಲ ಮಿಶ್ರಣಗಳಲ್ಲಿ (ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ಮಿಶ್ರಣಗಳಲ್ಲಿ) ಸೇಂಗಾ ಹಿಂಡಿಯು ಒಂದು ಪ್ರಮುಖ ಘಟಕವಾಗಿರುತ್ತಿತ್ತು. ಅನಂತರದ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರಗಳ ಪ್ರಭಾವವು ಅಧಿಕಗೊಂಡಂತೆ ಗೊಬ್ಬರಕ್ಕೆಂದು ಬಳಸಲಾಗುತ್ತಿದ್ದ ಹಿಂಡಿಯ ಬಳಕೆಯು ಸ್ಥಗಿತಗೊಂಡಿತು. ಈಗ ಸೇಂಗಾ ಹಿಂಡಿಯನ್ನು ಜಾನುವಾರುಗಳಿಗೆ ಆಹಾರವಾಗಿ ಉಪಯೋಗಿಸಲಾಗುತ್ತಿದೆ.

 ಹಿಂಡಿಗಳಲ್ಲಿರುವ ಪೋಷಕಗಳು : ವಿವಿಧ ಪ್ರಕಾರದ ಹಿಂಡಿಗಳಲ್ಲಿ ಸಾರಜನಕದ ಪ್ರಮಾಣವು ಶೇಕಡಾ ೩ ರಿಂದ ೮ರವರೆಗೆ ಇದೆ. ಹೀಗಾಗಿ, ಹಿಂಡಿಗಳನ್ನು ಸಾರಜನಕವನ್ನು ಮಾತ್ರ ಒದಗಿಸುವ ವಸ್ತುಗಳೆಂದೇ ಪರಿಗಣಿಸುವ ರೂಢಿ ಇದೆ. ಆದರೆ, ಆವು ಸಾವಯವ ಪದಾರ್ಥಗಳಾಗಿರುವುದರಿಂದ, ಸಸ್ಯಗಳಿಗೆ ಬೇಕಾಗುವ ಎಲ್ಲಾ ಪೋಷಕಗಳೂ ಅವುಗಳಲ್ಲಿರುತ್ತವೆ ಎಂಬುವುದನ್ನು ಗಮನಿಸಬೇಕು. ಹಿಂಡಿಗಳಲ್ಲಿ ರಂಜಕ ಮತ್ತು ಪೋಟ್ಯಾಸಿಯಂಗಳು ಮಧ್ಯಮ ಪ್ರಮಾಣದಲ್ಲಿ ಮತ್ತು ಇತರೆ ಪೋಷಕಗಳು ಕಡಮೆ ಪ್ರಮಾಣದಲ್ಲಿ ಇರುತ್ತವೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಹಿಂಡಿಗಳು ಸರಾಸರಿ ಪೋಷಕಗಳ ಪ್ರಮಾಣದ ವಿವರಗಳನ್ನು ಕೋಷ್ಟಕ ೨೧ರಲ್ಲಿ ವಿವರಿಸಿದೆ.

ಹಿಂಡಿಗಳನ್ನು ಬಳಸುವ ವಿಧಾನಗಳು : ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ತೆಗೆಯಲು ಗ್ರಾಮೀಣ ಪ್ರದೇಶಗಳಲ್ಲಿ ಗಾಣಗಳನ್ನು ಉಪಯೋಗಿಸುತ್ತಾರೆ. ಈ ಪದ್ಧತಿಯನ್ನು ಅನುಸರಿಸಿದಾಗ, ಹಿಂಡಿಯಲ್ಲಿ, ಗಣನೀಯ ಪ್ರಮಾಣದ ಎಣ್ಣೆಯು ಉಳಿದುಕೊಳ್ಳುತ್ತದೆ. ಯಂತ್ರಗಳ ಸಹಾಯದಿಂದ ಎಣ್ಣೆಯನ್ನು ತೆಗೆದರೆ ಹಿಂಡಿಯಲ್ಲಿ ಉಳೀಯುವ ಎಣ್ಣೆಯ ಪ್ರಮಾಣವು ತೀರ ಕಡಮೆ. ಕಡಮೆ ಪ್ರಮಾಣದಲ್ಲಿ ಎಣ್ಣೆಯಿದ್ದರೆ ಗೊಬ್ಬರಕ್ಕೆ ಹೆಚ್ಚು ಅನುಕೂಲ.

ಹಿಂಡಿಗಳಲ್ಲಿ ಪೋಷಕಗಳು ಸಾವಯವ ರೂಪದಲ್ಲಿರುತ್ತವೆ. ಅವು ನೀರಿನಲ್ಲಿ ಕರಗುವುದಿಲ್ಲ. ಮಣ್ಣಿಗೆ ಸೇರಿಸಿದ ನಂತರ ಸೂಕ್ಷ್ಮ ಜೀವಿಗಳು ಹಿಂಡಿಯನ್ನು ಕಳಿಯುವಂತೆ ಮಾಡುವುದರಿಂದ, ಹಲವು ಪೋಷಕಗಳು ಬಿಡುಗಡೆಯಾಗುತ್ತವೆ.

ಕೋಷ್ಟಕ ೨೧ : ವಿವಿಧ ಹಿಂಡಿಗಳಲ್ಲಿರುವ ಸಾರಜನಕ, ರಂಜಕ, ಮತ್ತು ಪೋಟ್ಯಾಸಿಯಂಗಳ ಶೇಕಡಾವಾರು ಪ್ರಮಾಣ (ಗಾಳಿಯಲ್ಲಿ ಒಣಗಿದ ತೂಕದ ಆಧಾರದ ಮೇಲೆ)

 

ಅ. ಸಂ

ಹಿಂಡಿಯ ಹೆಸರು

ಶೇಕಡಾವಾರು ಪೋಷಕಗಳು

ಸಾರಜನಕ

ರಂಜಕದ ಪೆಂಡಾಕ್ಸೈಡ್

ಪೊಟ್ಯಾಶ್

i. ಆಹಾರಕ್ಕಾಗಿ ಉಪಯೋಗಿಸಲು ಬರದ ಹಿಂಡಿಗಳು
ಬೇವು

೫.೨

೧.೦

೧.೪

ಹೊಂಗೆ (ಹುಲಗಲ)

೩.೯

೦.೯

೧.೨

ಔಡಲ

೪.೩

೧.೮

೧.೩

ಹಿಪ್ಪೆ (ಇಪ್ಪೆ)

೨.೫

೦.೮

೧.೮

ii. ಆಹಾರಕ್ಕೆಂದು ಉಪಯೋಗಸಬಹುದಾದ ಹಿಂಡಿಗಳು
ಸೇಂಗಾ

೭.೩

೧.೫

೧.೩

ಕುಸುಬಡೆ (ಹೊರಕವಚವನ್ನು ತೆಗೆದ ಬೀಜ)

೭.೯

೨.೨

೧.೯

ಕುಸುಬೆ (ಹೊರಕವಚವನ್ನು ತೆಗೆಯದ ಬೀಜ)

೬.೪

೨.೯

೨.೨

ಎಳ್ಳು

೬.೨

೨.೨

೧.೨

ಅಗಸೆ

೫.೫

೧.೪

೧.೩

ಗುರೆಳ್ಳು (ಉಚ್ಚೆಳ್ಳು)

೪.೭

೧.೮

೧.೩

ತೆಂಗು

೩.೦

೧.೯

೧.೮

ಹತ್ತಿಬೀಜ (ಕವಚವನ್ನು ತೆಗೆದ ಬೀಜ)

೬.೪

೨.೯

೨.೨

ಹತ್ತಿ ಬೀಜ (ಕವಚವನ್ನು ತೆಗೆಯದ ಬೀಜ)

೩.೯

೧.೮

೧.೬

೧೦ ಸಾಸಿವೆ

೫.೨

೧.೮

೧.೨

ಸೂಚನೆ : ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

 • ಹಿಂಡಿಗಳನ್ನು ಪುಡಿಮಾಡಿ ಮಣ್ಣಿಗೆ ಸೇರಿಸಬೇಕು. ಇದರಿಂದ ಅವು ಮಣ್ಣಿನಲ್ಲಿ ಸರಿಯಾಗಿ ಮಿಶ್ರವಾಗುತ್ತವಲ್ಲದೇ, ಕಳಿಯುವ ಕ್ರಿಯೆಯು ಭರದಿಂದ ಸಾಗುತ್ತದೆ.
 • ಬಿತ್ತನೆಗೆ ಕೆಲವು ದಿನಗಳ ಮೊದಲು ಹಿಂಡಿಗಳನ್ನು ಮಣ್ಣಿಗೆ ಸೇರಿಸುವುದರಿಂದ , ಅವು ಕಳಿತು ಎಳೆಯ ಸಸಿಗಳಿಗೆ ಪೋಷಕಗಳನ್ನು ಒದಗಿಸುತ್ತವೆ.
 • ಹಿಂಡಿಗಳನ್ನಷ್ಟೇ ಪ್ರತ್ಯೇಕವಾಗಿ ಪೂರೈಸಬಹುದು ಇಲ್ಲವೇ ಅವುಗಳನ್ನು ರಾಸಾಯನಿಕ ಗೊಬ್ಬರಗಳೊಡನೆ ಮಿಶ್ರಮಾಡಿಯೂ ಬಳಸಬಹುದು. ಸೇಂಗಾ ಹಿಂಡಿಯನ್ನು ರಾಸಾಯನಿಕ ಗೊಬ್ಬರಗಳೊಡನೆ ಮಿಶ್ರಮಾಡಿಯೂ ಬಳಸಬಹುದು. ಇಲ್ಲವೇ ಅವುಗಳನ್ನು ರಾಸಾಯನಿಕ ಗೊಬ್ಬರಗಳೊಡನೆ ಮಿಶ್ರಮಾಡಿಯೂ ಬಳಸಬಹುದು. ಸೇಂಗಾ ಹಿಂಡಿಯನ್ನು ಈಗಲೂ ಕೆಲವು ಬೆಳೆಗಳಿಗೆ ಮೇಲು ಗೊಬ್ಬರವಾಗಿ ಕೊಡುವ ರೂಢಿಯಿದೆ.
 • ಕೋಷ್ಟಕ ೨೧ (II) ರಲ್ಲಿ ತೋರಿಸಿದ ಹಿಂಡಿಗಳು ಮನುಷ್ಯ ಮತ್ತು ಅವನ ಸಾಕು ಪ್ರಾಣಿಗಳಿಗೆ ಪೌಷ್ಟಿಕ ಆಹಾರವಾಗಬಲ್ಲವಾದ್ದರಿಂದ ಇವುಗಳನ್ನು ಗೊಬ್ಬರವೆಂದು ಉಪಯೋಗಿಸುವುದು ಸಮಂಜಸವೂ ಅಲ್ಲ. ಆರ್ಥಿಕವಾಗಿ ಲಾಭದಾಯಕವೂ ಅಲ್ಲ.

ಕೋಷ್ಟಕ ೨೧ (i) ರಲ್ಲಿ ತೋರಿಸಿದ ಹಿಂಡಿಗಳು ಆಹಾರಕ್ಕೆ ಆಯೋಗ್ಯವಾಗಿವೆ. ಅವುಗಳಲ್ಲಿರುವ ಕೆಲವು ರಾಸಾಯನಿಕಗಳು ಮನುಷ್ಯನಿಗೆ ಮತ್ತು ಸಾಕು ಪ್ರಾಣಿಗಳಿಗೆ ಅಪಾಯಕಾರಿಯಾಗಿವೆ. ಈ ರಾಸಾಯನಿಕಗಳು ಇರುವುದರಿಂದ ಹಿಂಡಿಗಳು ಬೇಗನೇ ಕಳಿಯುವುದಿಲ್ಲ ಎಂಬುವುದು ಗಮನಾರ್ಹ. ಈ ಹಿಂಡಿಗಳನ್ನು ಗೊಬ್ಬರವಾಗಿ ಬಳಸುವಾಗ ಕೆಳಗಿನ ಸಂಗತಿಗಳನ್ನು ಅರಿತಿರುವುದು ಪ್ರಯೋಜನಕಾರಿ.

 • ಹೊಂಗೆ, ಬೇವು ಮತ್ತು ಔಡಲ ಹಿಂಡಿಗಳು ಗೆದ್ದಲು ಹುಳುಗಳನ್ನು ಬೆಳೆಗಳಿಂದ ದೂರವಿಡುವ ಸಾಮರ್ಥ್ಯವನ್ನು ಹೊಂದಿವೆ.
 • ಈ ಹಿಂಡಿಗಳಲ್ಲಿರುವ ಕೆಲವು ರಾಸಾಯನಿಕಗಳು, ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ತಾತ್ಕಾಲಿಕವಾಗಿ ತಡೆಯುತ್ತವೆ. (ಆದ್ದರಿಂದಲೇ ಹಿಂಡಿಗಳು ಬೇಗನೇ ಕಳಿಯುವುದಿಲ್ಲ). ಹಿಂಡಿಗಳನ್ನು ಜಿನುಗು ಪುಡಿಯಾಗುವಂತೆ ಮಾಡಿ, ಯೂರಿಯಾ ಹರಳುಗಳ ಸುತ್ತ ಲೇಪಿಸುವುದರಿಂದ ಯೂರಿಯಾ ಗೊಬ್ಬರವು ನೈಟ್ರೇಟ್ ರೂಪಕ್ಕೆ ಬದಲಾಗುವ ಕ್ರಿಯೆಯು ವೇಗವನ್ನು ಕಡಿಮೆ ಮಾಡಬಹುದು. ಬತ್ತದ ಬೆಳೆಗೆ ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಪೂರೈಸುವಾಗ, ಬೇವಿನ ಹಿಂಡಿಯು ಜಿನುಗು ಪುಡಿಯನ್ನು ಲೇಪಿಸುವುದರಿಂದ ಸಾರಜನಕದ ಸಮರ್ಥ ಬಳಕೆಯಾಗುತ್ತದೆ ಎಂದು ಕಂಡುಬಂಧಿದೆ.
 • ಈ ಹಿಂಡಿಗಳನ್ನು ದೀರ್ಘಾವಧಿ ಬೆಳೆಗಳಿಗೆ ಮತ್ತು ಬಹುವಾರ್ಷಿಕ ಬೆಳೆಗಳಿಗೆ ಲಾಭದಾಯಕವಾಗಿ ಬಳಸಬಹುದು.
 • ಹಿಂಡಿಗಳನ್ನು ಪುಡಿ ಮಾಡಿ, ಹಸಿಯಾಗುವಷ್ಟು ನೀರನ್ನು ಚಿಮುಕಿಸಿ, ಗೋಣಿ ಇಲ್ಲವೇ ಟರ್ಪಾಲಿನಿಂದ ಕೆಲವು ದಿನಗಳವರೆಗೆ ಮುಚ್ಚಿಟ್ಟರೆ, ಕಳಿಯುವ ಕ್ರಿಯೆಗೆ ಆತಂಕವನ್ನೊಡುವ ರಾಸಾಯನಿಕಗಳ ಪ್ರಮಾಣವು ಕೆಲವು ಮಟ್ಟಿಗೆ ಕಡಮೆಯಾಗುತ್ತದೆಯೆಂದೂ, ಈ ರೀತಿ ಸಂಸ್ಕೃಸಿದಿ ಹಿಂಡಿಗಳು ತುಲನಾತ್ಮಕವಾಗಿ ಬೇಗನೇ ಕಳಿಯುತ್ತವೆಯೆಂದು ಕಂಡುಬಂದಿದೆ.

ಅನೀಲಯಂತ್ರದಿಂದಹೊರಬರುವರಾಡಿ

 • ಅನೀಲ ಯಂತ್ರಕ್ಕೆ ಪೂರೈಕೆಯಾದ ಸಗಣಿಯು, ಆಮ್ಲಜಕ ರಹಿತ ವಾತಾವರಣದಲ್ಲಿ ಕೆಲವು ವಿಶಿಷ್ಟ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾದ ಕ್ರಿಯೆಗೆ ಒಳಗಾಗುತ್ತದೆ. ಈ ಸೂಕ್ಷ್ಮಾಣುಗಳು ಚಟುವಟಿಕೆಯಿಂದಲೇ ಮೀಥೇನ್‌ (CH4) ಮತ್ತು ಇಂಗಾಲ ಡೈ ಆಕ್ಸೈಡ್ (CO2) ಹೊರ ಬರುತ್ತವೆ.
 • ಮೇಲಿನ ಕ್ರಿಯೆಯಿಂದ ಸಾವಯವ ಪದಾರ್ಥ (ಸಗಣಿ) ದಲ್ಲಿರುವ ಇಂಗಾಲ ಕಡಮೆಯಾಗುತ್ತಾ ಸಾಗುತ್ತದೆ. ಹೀಗಾಗಿ ಸಗಣಿಯ ಗಾತ್ರವು ಕುಗ್ಗುತ್ತದೆ.
 • ಸಗಣಿಯಲ್ಲಿರುವ ಪೋಷಕಗಳು ಹಾಗೆಯೇ ಉಳಿದುಕೊಂಡು, ಸಗಣಿಯ ಗಾತ್ರವು ಮಾತ್ರ ಕುಗ್ಗುತ್ತದೆಯಾದ್ದರಿಂದ, ಸಗಣಿಯ ರಾಡಿಯಲ್ಲಿ ಮೂಲ ಸಗಣಿಯಲ್ಲಿರುವುದಕ್ಕಿಂತ ಸಾರಜನಕ ಮತ್ತು ಇತರೆ ಪೋಷಕಗಳ ಶೇಕಡಾವಾರು ಪ್ರಮಾಣವು ಅಧಿಕಗೊಳ್ಳುತ್ತದೆ.
 • ಒಣ ತೂಕದ ಆಧಾರದ ಮೇಲೆ ಸಗಣಿಯ ರಾಡಿಯಲ್ಲಿ ಶೇಕಡಾ ೨ ರಿಂದ ೨.೫ ಸಾರಜನಕವಿರುತ್ತದೆ.
 • ಅನಿಲ ಯಂತ್ರದಿಂದ ಹೊರಬಂದ ಸಗಣಿಯ ರಾಡಿಯನ್ನು ಕೆಳಗೆ ಹೇಳಿರುವ ಯಾವುದೇ ಒಂದು ವಿಧಾನವನ್ನು ಅನುಸರಿಸಿ ಗೊಬ್ಬರವಾಗಿ ಬಳಸಬಹುದು:
  • ರಾಡಿಯನ್ನು ನೇರವಾಗಿ ಬೆಳೆಗೆ ಪೂರೈಸಬಹುದು. ಆದರೆ ಪ್ರತಿ ದಿನ ಬೆಳೆಗೆ ಪೂರೈಸುವ ಕೆಲಸವು ಕಷ್ಟಕರವೆನ್ನಬಹುದು.
  • ನೀರಿನ ವ್ಯವಸ್ಥೆಯಿರುವಲ್ಲಿ ರಾಡಿಯನ್ನು ದೊಡ್ಡ ಟ್ಯಾಂಕಿನಲ್ಲಿ ಸಾಕಷ್ಟು ನೀರಿನೊಂದಿಗೆ ಮಿಶ್ರಮಾಡಿ, ಕೊಳವೆಗಳ ಮೂಲಕ ಬೆಳೆಗಳಿಗೆ ಪೂರೈಸಬಹುದು.
  • ರಾಡಿಯನ್ನು ತೆಳುವಾಗಿ ಹರಡಿ, ಒಣಗಿಸಿ, ಪುಡಿಯನ್ನು ಬೆಳೆಗೆ ಪೂರೈಸಬಹುದು. ಆದರೆ, ರಾಡಿಯನ್ನು ಒಣಗಿಸುವ ಕಾರ್ಯ ಶ್ರಮದಾಯಕ. ಮಳೆಗಾಲದಲ್ಲಂತೂ ಅಸಾಧ್ಯ.
  • ಇತರೆ ಸಾವಯವ ವಸ್ತುಗಳೊಡನೆ (ಹುಲ್ಲು, ದರಕು, ಕೊಳೆ ಇತ್ಯಾದಿ) ಸೇರಿಸಿ ಕಾಂಪೋಸ್ಟ್ ತಯಾರಿಸಿ, ಬೇಕೆಂದಾಗ ಬೆಳೆಗಳಿಗೆ ಒದಗಿಸಬಹುದು.

ಪ್ರಾಣಿಗಳಎಲುವುಗಳು

ಪ್ರಾಣಿಗಳ ಎಲುವುಗಳನ್ನು ಯಂತ್ರದ ಸಹಾಯದಿಂದ ಪುಡಿ ಪುಡಿ ಮಾಡಿ ಅಥವಾ ಎಲುವುಗಳನ್ನು ನೀರಿನ ಉಗಿಯಲ್ಲಿ ಉಪಚರಿಸಿ ಯಂತ್ರದಿಂದ ಪುಡಿ ಮಾಡಿ ಗೊಬ್ಬರವಾಗಿ ಉಪಯೋಗಿಸಬಹುದು. ಹಲವು ವರ್ಷಗಳ ಮೊದಲು, ಈ ಗೊಬ್ಬರವು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿತ್ತು. ಆದರೆ ಎಲುವುಗಳನ್ನು ಪುಡಿ ಮಾಡುವ ಯಂತ್ರವನ್ನು ಸ್ಥಾಪಿಸಲು ದೊಡ್ಡ ಪ್ರಮಾಣದ ಬಂಡವಾಳ ಬೇಕು.

ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ, ಬಂಡವಾಳ ಇಲ್ಲದೆ, ಸಣ್ಣ ಪ್ರಮಾಣದಲ್ಲಿ ಎಲುವುಗಳನ್ನು ಸಂಸ್ಕರಿಸಿ ಗೊಬ್ಬರವನ್ನು ತಯಾರಿಸುವಂತಹ ವಿಧಾನವನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯವರು ಕಂಡು ಹಿಡಿದಿದ್ದಾರೆ,. ಈ ವಿಧಾನದ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿವೆ.

 • ಒಣ ಅಥವಾ ತಾಜಾ ಎಲುವುಗಳನ್ನು ಡ್ರಮ್ಮಿಗೆ ಹಾಕಿ ಅವು ಮುಳುಗುವಷ್ಟ ನೀರನ್ನು ತುಂಬಬೇಕು.
 • ಡ್ರಮ್ಮಿಗೆ ಹಾಕಿದ ಪ್ರತಿ ಲೀಟರ್ ನೀರಿಗೆ ೫೦ ಗ್ರಾಂ ಕಾಸ್ಟಿಕ್ ಸೋಡಾ (NaOH) ದಂತೆ ಲೆಕ್ಕ ಮಾಡಿ, ನೀರಿಗೆ ಹಾಕಿ ಕೋಲಿನಿಂದ ಸರಿಯಾಗಿ ತಿರುಗಿಸಿ, ಮಿಶ್ರ ಮಾಡಬೇಕು.
 • ಪ್ರತಿದಿನ ಕೋಲಿನಿಂದ ಒಂದೆರಡು ಬಾರಿ ಡ್ರಮ್ಮಿನಲ್ಲಿರುವ ದ್ರಾವಣವನ್ನು ತಿರುಗಿಸುತ್ತಿರಬೇಕು.
 • ಎರಡು ವಾರಗಳ ನಂತರ ಡ್ರಮ್ಮಿನಲ್ಲಿರುವ ದ್ರಾವಣವನ್ನು ಇನ್ನೊಂದು ಖಾಲಿ ಡ್ರಮ್ಮಿಗೆ ಸುರಿಯಬೇಕು.( ಈ ದ್ರಾವಣವನ್ನು ಬೇರೆ ಎಲುವುಗಳನ್ನು ಸಂಸ್ಕರಿಸಲು ಬಳಸಬಹುದು)
 • ಡ್ರಮ್ಮಿನಲ್ಲಿರುವ ಮೃದುವಾದ ಎಲುವುಗಳನ್ನು ಎರಡು ಬಾರಿ ನೀರಿನಿಂದ ತೊಳೆದು ನೀರನ್ನು ಚೆಲ್ಲಬೇಕು. ಅನಂತರ ಡ್ರಮ್ಮಿಗೆ ಸ್ವಲ್ಪ ನೀರು ಹಾಕಿ ಶೇಕಡಾ ೧೦ರ ಹೈಡ್ರೋಕ್ಲೋರಿಕ್ ಆಮ್ಲದ (HCl) ದ್ರಾವಣವನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತ ಕೋಲಿನಿಂದ ಅಲುಗಾಡಿಸುತ್ತಿರಬೆಕು. ಸೋಡಾದ ಅಂಶವು ಪೂರ್ತಿಯಾಗಿ ಹೋಗುವವರೆಗೆ (ನೀಲಿ ಲಿಟ್ಮಸ್ ಕಾಗದವು ಕೆಂಪು ಬಣ್ಣಕ್ಕೆ ತಿರುಗುವರೆಗೆ) ಆಮ್ಲದ ದ್ರಾವಣವನ್ನು ಹಾಕುತ್ತಿರಬೇಕು.
 • ಅನಂತರ ಡ್ರಮ್ಮಿನಲ್ಲಿರುವ ಸಾಮಗ್ರಿಯನ್ನು, ತೆಳು ಬಟ್ಟೆಯ ಮೇಲೆ ಸುರಿಯಬೇಕು.
 • ಬಟ್ಟೆಯ ಮೇಲೆ ಉಳಿದಿರುವ ಮುದ್ದೆಯಂತಾದ ಎಲುವುಗಳನ್ನು ಬಿಸಿಲಿನಲ್ಲಿ ಒಣಗಿಸಿದ ನಂತರ ಎಲುಬಿನ ಜಿನುಗು ಪುಡಿಯು ದೊರೆಯುತ್ತದೆ. ಇದನ್ನು ಗೊಬ್ಬರವಾಗಿ ಉಪಯೋಗಿಸಬಹುದು.

ಮೇಲೆ ಹೇಳಿದ ಎಲುವಿನ ಪುಡಿಯಲ್ಲಿ ಶೇಕಡಾ ಒಂದರಷ್ಟು ಸಾರಜನಕ ಮತ್ತು ಶೇ.೨೭ ರಷ್ಟು ರಂಜಕದ ಪೆಂಟಾಕ್ಸೈಡ್ ಇರುವುದಲ್ಲದೇ ಇತರೆ ಕಿರು ಪೋಷಕಗಳೂ ಸಣ್ಣ ಪ್ರಮಾಣದಲ್ಲಿರುತ್ತವೆ.

ಪ್ರಾಣಿಗಳಮಾಂಸ

ಸತ್ತ ಪ್ರಾಣಿಗಳ ಮಾಂಸ ಮತ್ತು ಮಾಂಸದ ಅಂಗಡಿಗಳಲ್ಲಿನ (ವಧ ಸ್ಥಾನದಲ್ಲಿದ್ದ) ಪ್ರಾಣಿಗಳ ಕರಳು ಇತ್ಯಾದಿ ನಿರುಪಯೋಗಿ ಅಂಗಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಆ ತುಂಡುಗಳನ್ನು ಶೇಕಡಾ ೫ರ ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಬೇಯಿಸಬೇಕು. ಮಾಂಸವು ಮೃದುವಾದ ನಂತರ, ಮೇಲಿನ ನೀರನ್ನು ಬಸಿದು, ಶುದ್ಧ ನೀರಿನಿಂದ ತೊಳೆಯಬೇಕು.

ಬೆಂದ ಮಾಂಸವನ್ನು ದೊಡ್ಡ ರಂಧ್ರಗಳಿರುವ ಜರಡಿಯಲ್ಲಿ ಉಜ್ಜಬೇಕು. (ತಿಕ್ಕಬೇಕು). ಕೆಳಗೆ ಬಿದ್ದ ಸಣ್ಣ ಚೂರುಗಳನ್ನು ಬಿಸಿಲಿನಲ್ಲಿ ಒಣಗಿಸಿ ಗೊಬ್ಬರವಾಗಿ ಉಪಯೋಗಿಸಬೇಕು. ಈ ಗೊಬ್ಬರದಲ್ಲಿ ಶೇಕಡಾ ೮ ರಿಂದ ೧೦ ರ‍ಷ್ಟು ಸಾರಜನಕ ಮತ್ತು ವಿವಿದ ಪ್ರಮಾಣದಲ್ಲಿ ಇತರೆ ಪೋಷಕಗಳಿರುತ್ತವೆ.

ಕೂದಲುಗಳು

ಪ್ರಾಣಿಗಳ ಮತ್ತು ಮಾನವನ ಕೂದಲು ಹಾಗೂ ಉಣ್ಣೆಯ ಉತ್ಪಾದನೆಯಲ್ಲಿ ನಿರುಪಯೋಗವೆನಿಸಿದ ಕೂದಲು ಇತ್ಯಾದಿಗಳನ್ನು ಸಂಗ್ರಹಿಸಿ, ಶೇಕಡಾ ೮ರ ಕಾಸ್ಟಿಕ್ ಸೋಡಾ ದ್ರಾವಣವಿರುವ ಪಾತ್ರೆಯಲ್ಲಿ ಹಾಕಿ ಕೋಲಿನಿಂದ ಸರಿಯಾಗಿ ಅಲುಗಾಡಿಸಬೇಕು. ಕೂದಲುಗಳೆಲ್ಲ ಒಂದು ಮುದ್ದೆಯಾದಂತಾಗುತ್ತವೆ. ಆನಂತರ, ಬಳಕೆಯಾಗದೇ ಉಳೀದಿರುವ ಕಾಟಿಕ್ ಸೋಡಾದ ದ್ರಾವಣವನ್ನು ನಿರ್ವಿರ್ಯಗೊಳಿಸಲು ಶೇಕಡಾ ೧೦ರ ಹೈಡ್ರೋಕ್ಲೋರಿಕ್ ಆಮ್ಲದ ದ್ರಾವಣವನ್ನು ಹಾಕುತ್ತ ಹೋಗಬೇಕು. ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪು ಬಣ್ಣಕ್ಕೆ ತಿರುಗಿತೆಂದರೆ, ಆಮ್ಲವನ್ನು ಹಾಕುವ ಕಾರ್ಯವನ್ನು ನಿಲ್ಲಿಸಬೇಕು. ಅನಂತರ ಮೇಲೆ ನಿಂತಿರುವ ದ್ರಾವಣವನ್ನು ಬಸಿದು ತಳದಲ್ಲಿ ಕೂತಿರುವ ಸ್ಪಂಜಿನಂತಹ ವಸ್ತುವನ್ನು ಬಿಸಿಲಿನಲ್ಲಿ ಒಣಗಿಸಿ, ಗೊಬ್ಬರವಾಗಿ ಉಪಯೋಗಿಸಬಹುದು. ಇದರಲ್ಲಿ ಶೇಕಡಾ ೧೨ ರಿಂದ ೧೫ ಸಾರಜನಕವಿರುತ್ತದಲ್ಲದೇ ಇತರೆ ಪೋಷಕಗಳೂ ಇರುತ್ತವೆ.