ಚರ್ಮದನಿರುಪಯೋಗಿಭಾಗಗಳು

ಪ್ರಾಣಿಗಳ ಚರ್ಮವನ್ನು ಹದಗೊಳಿಸುವಾಗ, ನಿರುಪಯೋಗಿ ಭಾಗವು ದೊಡ್ಡ ಪ್ರಮಾಣದಲ್ಲಿ ಉಳಿದುಕೊಳ್ಳುತ್ತದೆ. ಅದನ್ನು ಸಂಗ್ರಹಿಸಿ ನೀರಿರುವ ಪಾತರೆಯಲ್ಲಿ ನೆನೆಸಬೇಕು. ಅನಂತರ ಶೇಕಡಾ ೫ರಷ್ಟು ಹೈಡ್ರೋಕ್ಲೋರಿಕ್ ಆಮ್ಲವನ್ನು ಹಾಕಿ ಕುದಿಸಬೇಕು. ಚರ್ಮದ ವಸ್ತುವೆಲ್ಲ ಮೃದುವಾಗಿ ಮುದ್ದೆಯಂತಾಗುತ್ತದೆ. ಇದನ್ನು ನೀರಿನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಗೊಬ್ಬರವಾಗಿ ಉಪಯೋಗಿಸಬಹುದು. ಈ ಗೊಬ್ಬರದಲ್ಲಿ ಶೇಕಡಾ ೭ ರಿಂದ ೮ ಸಾರಜನಕವಿರುತ್ತದೆ. ಸಾರಜನಕದಲ್ಲಿಯ ಮುಕ್ಕಾಲು ಭಾಗ ಸಾರಜನಕವನ್ನು ಸೂಕ್ಷ್ಮ ಜೀವಿಗಳು ಅಮೋನಿಯ ರೂಪಕ್ಕೆ ಸುಲಭವಾಗಿ ಪರಿವರ್ತಿಸಬಲ್ಲವು.

ಸೂಚನೆ :ಪ್ರಾಣಿಗಳ ಎಲುವುಗಳು, ಮಾಂಸ ಮತ್ತು ಚರ್ಮದ ನಿರುಪಯೋಗಿ ಭಾಗಗಳ ಬಳಕೆ ವಿಧಾನಗಳನ್ನು ದೆಹಲಿಯಲ್ಲಿರುವ ಭಾರತ ಕೃಷಿ ಸಂಶೋಧನಾ ಸಂಸ್ಥೆಯವರು ಕಂಡುಹಿಡಿದಿದ್ದಾರೆ.

ಜೈವಿಕಗೊಬ್ಬರಗಳು

ಗಾಳಿಯಲ್ಲಿ ಶೇಕಡಾ ೭೦ ರಷ್ಟು ಸಾರಜನಕವಿದೆಯಾದರೂ ಸಸ್ಯಗಳು ಅದನ್ನು ನೇರವಾಗಿ ಹೀರಿಕೊಳ್ಳಲಾರವು. ಆದರೆ ಕೆಲವು ಸೂಕ್ಷ್ಮ ಜೀವಿಗಳು ಸಾರಜನಕ ವಾಯುವನ್ನು ಸ್ಥಿರೀಕರಿಸುವ ಸಾಮರ್ಥ್ಯ್‌ವನ್ನು ಹೊಂದಿವೆ. ಕೆಲವು ಗುಂಪಿಗೆ ಸೇರಿದ ಸೂಕ್ಷ್ಮ ಜೀವಿಗಳಿಗೆ ಮೇಲ್ವರ್ಗದ ಸಸ್ಯಗಳೊಡನೆ ಸಹ ಜೀವನವನ್ನು ನಡೆಸಿದಾಗ ಮಾತ್ರ ಸಾರಜನಕವನ್ನು ಸ್ಥಿರೀಕರಿಸಲು ಸಾಧ್ಯವಗುತ್ತದೆ. ಇದರಂತೆಯೇ, ಕೆಲವು ಗುಂಪಿನ ಬ್ಯಾಕ್ಟೀರಿಯಾ ಮಣ್ಣಿನಲ್ಲಿರುವ ರಂಜಕ, ಗಂಧಕ, ಮುಂತಾದ ಪೋಷಕಗಳನ್ನು ಕರಗಿಸಿ, ಈ ಪೋಷಕಗಳು ಬೆಳೆಗಳಿಗೆ ಸುಲಭವಾಗಿ ದೊರೆಯುವಂತೆ ಮಾಡಬಲ್ಲವು. ಕೆಲವು ಪೋಷಕಗಳು ಬೆಳೆಗಳಿಗೆ ಸುಲಭವಾಗಿ ದೊರೆಯುವಂತೆ ಮಾಡಬಲ್ಲವು. ಕೆಲವು ಪೋಷಕಗಳು ಬೆಳೆಗಳಿಗೆ ಸುಲಭವಾಗಿ ಸಿಗುವಂತೆ ಮಾಡಬಲ್ಲ ಹಲವು ಬಗೆಯ ಜೀವಿಗಳಿಗೆ ಜೈವಿಕ ಗೊಬ್ಬರ ಎಂಬ ಹೆಸರು ಬಂದಿದೆ.

ಇತಿಹಾಸ : ಕೆಳಗೆ ತಿಳಿಯಪಡಿಸಿದ ಸಂಶೋಧನೆಗಳು, ಜೈವಿಕ ಗೊಬ್ಬರಗಳಿಗೆ ಅಭಿವೃದ್ಧಿಗೆ ಪ್ರೋಚನೆಯನ್ನು ನೀಡಿದ ಘಟನೆಗಳಾಗಿ ಪರಿಣಮಿಸಿವೆ.

 • ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯಗಳು ಗಾಳಿಯಲ್ಲಿರುವ ಸಾರಜನಕ ವಾಯುವನ್ನು ಸ್ಥಿರೀಕರಿಸುತ್ತವೆಯೆಂದು, ಫ್ರಾನ್ಸ್ ದೇಶದ ಕೃಷಿಕ ಬೌಸಿನಗಾಲ್ಫ್ ಎಂಬುವರು ತಮ್ಮ ಪ್ರಸ್ತಾಪವನ್ನು ಮುಂದಿಟ್ಟರು.
 • ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯದ ಬೇರುಗಳಲ್ಲಿ ಗಂಟುಗಳಿರುತ್ತವೆ ಎಂದೂ ಈ ಈ ಗಂಟುಗಳಲ್ಲಿ ಬ್ಯಾಕ್ಟೀರಿಯಾ ಇರಲೇಬೇಕೆಂದೂ ಹೆಲ್ರಿಗೆಲ್ ಮತ್ತು ವಿಲ್ ಫಾರ್ಥ ಎಂಬ ಜರ್ಮನ್‌ದೇಶದ ಸಂಶೋಧಕರು ೧೮೮೬ರಲ್ಲಿ ಕಂಡು ಹಿಡಿದರು.
 • ಡಚ್ ದೇಶದ ಸಂಶೋಧಕರಾದ ಬಿಜೆರಿಂಕ್ ಎಂಬುವರು ಸಂಶೋಧನೆಗಳನ್ನು ನಡೆಸಿ,ಸಸ್ಯಗಳ ಬೇರುಗಳಲ್ಲಿರುವ ಗಂಟುಗಳಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆಯೆಂಬುವುದನ್ನು ೧೮೮೮ರಲ್ಲಿ ಕಂಡು ಹಿಡಿದರು. ಅವರು ಈ ಸೂಕ್ಷ್ಮ ಜೀವಿಗಳಿಗೆ ಬೆಸಿಲೆಸ್ ರೆಡಿಸಿಕೋಲಾ ಎಂದು ಹೆಸರಿಸಿದರು. ಅವುಗಳನ್ನಜ ಈಗ ರೈಝೋಬಿಯಂ ಎಂದು ಕರೆಯಲಾಗುತ್ತಿದೆ.
 • ಇಪ್ಪತ್ತನೆಯ ಶತಮಾನದ ಆರಂಭದ ಸುಮಾರಿಗೆ ರಷ್ಯಾ ಪೋಲೆಂಡ್ ದೇಶಗಳಲ್ಲಿ ಹವೆಯಲ್ಲಿರುವ ಸಾರಜನಕ ವಾಯುವನ್ನು ಸ್ವತಂತ್ರವಾಗಿ ಸ್ಥಿರೀಕರಿಸಬಲ್ಲ ಆಜೋಟೋಬ್ಯಾಕ್ಟರ್ ಎಂಬ ಸೂಕ್ಷ್ಮ ಜೀವಿಗೆ ಮಹತ್ವವು ದೊರೆಯಿತು.
 • ನೀಲಿಯುತ ಹಸಿರು ಬಣ್ಣದ ಪಾಚಿಯು, ಸಾರಜನಕದ ಪೂರೈಕೆಯ ದೃಷ್ಟಿಯಿಂದ ಬತ್ತದ ಬೆಳೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬಲ್ಲದೆಂಬ ಅರಿವು ಮೂಡಿತು.
 • ಮಣ್ಣಿನಲ್ಲಿರುವ ನೀರಿನಲ್ಲಿ ಕರಗದ ರೂಪದ ರಂಜಕವನ್ನು ಕರಗುವಂತೆ ಮಾಡಿ ಬೆಳೆಗಳಿಗೆ ದೊರೆಯುವ ರೂಪಕ್ಕೆ ಪರಿವರ್ತಿಸಬಲ್ಲ ಸೂಕ್ಷ್ಮ ಜೀವಿಗಳಿರುವುದನ್ನು ಗುರುತಿಸಲಾಯಿತು. ರಷ್ಯಾ ದೇಶದಲ್ಲಿ ಬೆಸಿಲಸ್ ಮೆಗಾಥೀರಿಯಂ, ತಳಿ ಫಾಸ್ಪಟಿಕಂ ಎಂಬ ಸೂಕ್ಷ್ಮ ಜೀವಿಗಳಿರುವ ವಸ್ತುವನ್ನು ಸಿದ್ಧಪಡಿಸಿ ಮಣ್ಣಿಗೆ ಸೇರಿಸಬಹುದೆಂದೂ ಇಲ್ಲವೇ ಇದರಿಂದ ಬೀಜಗಳನ್ನು ಉಪಚರಿಸಬಹುದೆಂದೂ ಘೋಷಿಸಲಾಯಿತು.
 • ಶಿಲಾರಂಜಕದೊಡನೆ ಗಂಧಕವನ್ನು ಮಿಶ್ರಮಾಡಿ, ಗಂಧಕವನ್ನು ಗಂಧಕಾಮ್ಲ ವನ್ನಾಗಿಸಬಲ್ಲ ಥಯೋಬೆಸಿಲಸ್ ಎಂಬ ಸೂಕ್ಷ್ಮ ಜೀವಿಗಳನ್ನು ಆ ಮಿಶ್ರಣದಲ್ಲಿ ಸೇರಿಸಿದರೆ, ರಜಕವು, ನೀರಿನಲ್ಲಿ ಕರಗುವ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆಯೆಂದು ಆಸ್ಟ್ರೇಲಿಯಾ ದೇಶದಲ್ಲಿ ಕಂಡು ಹಿಡಿಯಲಾಯಿತು.
 • ಸಾವಯವ ವಸ್ತುಗಳಲ್ಲಿರುವ ಸೆಲ್ಯೂಲೋಸನ್ನು ತೀವ್ರಗತಿಯಿಂದ ಪರಿವರ್ತಿಸಬಲ್ಲ ಸೂಕ್ಷ್ಮ ಜೀವಿಗಳು ಅಥವಾ ಅವು ನಿರ್ಮಿಸಿದ ಕಿಣ್ವಗಳಿರುವ ವಸ್ತುಗಳು ವಿವಿಧ ಹೆಸರಿನಡಿ ಯೂರೋಪ್ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮಾರುಕಟ್ಟೆಗೆ ಬಂದುವು. ಸಾವಯವ ಪದಾರ್ಥಗಳನ್ನು ಬೇಗನೇ ಕಳಿಯುವಂತೆ ಮಾಡಿ, ಕಡಮೆ ಅವಧಿಯಲ್ಲಿ ಕಾಂಪೋಸ್ಟ ನ್ನು ತಯಾರಿಸಲು ಈ ಸೂಕ್ಷ್ಮ ಜೀವಿಗಳು ಪ್ರಯೋಜನಕಾರಿಯೆಂದು ಪ್ರತಿಪಾದಿಸಲಾಗುತ್ತಿದೆ.
 • ಆಝೋಸ್ಪರಿಲ್ಲಂ ಬ್ರಾಸಿಲೆನ್ಸ್ ಎಂಬ ಸೂಕ್ಷ್ಮ ಜೀವಿಯನ್ನು ರಾಗಿ, ಸಜ್ಜೆ, ಜೋಳ, ಮುಸುಕಿನ ಜೋಳ, ಬಾರ್ಲಿ, ಮತ್ತು ಓಟ್ಸ್ ಬೆಳೆಗಳಿಗೆ ಪೂರೈಸಿದಾಗ, ಈ ಬೆಳೆಗಳ ಇಳುವರಿಯು ಅಧಿಕಗೊಳ್ಳುವುದೆಂದೂ ಇದರ ಬಳಕೆಯಿಂದ ಪ್ರತಿ ಹೆಕ್ಟೇರಿಗೆ ೨೦ ರಿಂದ ೩೦ ಕಿ.ಗ್ರಾಂ ನಷ್ಟು, ಸಾರಜನಕದ ಉಳಿತಾಯ ಮಾಡಬಹುದೆಂದೂ ಕಂಡು ಬಂದಿತು.
 • ಚೀನಾ, ವಿಯೆಟ್ ನಾಮ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಬಳಕೆಯಲ್ಲಿರುವ ಫರ್ನ್ ವರ್ಗಕ್ಕೆ ಸೇರಿದ ಅಝೋಲಾ ಎಂಬ ಪುಟ್ಟ ಸಸ್ಯವು, ಗಾಳಿಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸುವ ಸಾಮರ್ಥ್ಯವುಳ್ಳ ಅನಬಿನಾ ಎಂಬ ಪಾಚಿಗೆ ಆಶ್ರಯವನ್ನು ನೀಡುತ್ತದೆ. ಇವೆರಡರ ಸಹಜೀವನದಿಂದ ದೊಡ್ಡ ಪ್ರಮಾಣದಲ್ಲಿ ಬೆಳೇಯುವ ಹಸುರು ಗೊಬ್ಬರ ಮತ್ತು ಸಾರಜನಕಗಳು ಬತ್ತದ ಗದ್ದೆಗೆ ಉಪಯುಕ್ತವೆಂದು ಕಂಡುಬಂದಿದೆ.

ಸಸ್ಯಪೋಷಕಗಳನಿರ್ವಹಣೆಯಲ್ಲಿಜೈವಿಕಗೊಬ್ಬರಗಳಸ್ಥಾನಮಾನಗಳು

ಪೋಷಕಗಳ ಸಮರ್ಥ ಬಳಕೆಯು, ಅಧಿಕ ಉತ್ಪಾದನೆಯನ್ನು ಮತ್ತು ಆಕರ್ಷಕ ಲಾಭವನ್ನು ಕೊಡುವ ಸುಸ್ಥಿರ ಮತ್ತು ಪೂರ್ಣತಃ ಜೀವನಾಧಾರವಾಗಬಲ್ಲ, ಕೃಷಿಯತ್ತ ಮೂಲಗಳಿಂದ ದೊರೆಯುವ ಪೋಷಕಗಳನ್ನು, ಸುಸಂಬದ್ಧ ರೀತಿಯಲ್ಲಿ ಸಂಯೋಜಿಸಿದರೆ ಈ ದಿಶೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯಲು ಸಾಧ್ಯವಾದೀತು. ಈ ದೃಷ್ಟಿಯಿಂದ ಜೈವಿಕ ಗೊಬ್ಬರಗಳ ಪ್ರಮುಖ ವೈಶಿಷ್ಟ್ಯಗಳು ಕೆಳಗಿನಂತಿವೆ.

 • ಮೇಲ್ವರ್ಗದ ಸಸ್ಯಗಳು ಹವೆಯೊಳಗಿನ ಸಾರಜನಕದ ವಾಯುವನ್ನು ನೇರವಾಗಿ ಬಳಸಿಕೊಳ್ಳಲಾರವು. ಆದರೆ ಸೂಕ್ಷ್ಮ ಜೀವಿಗಳು ಈ ವಾಯುವನ್ನು ನೇರವಾಗಿ ಬಳಸಿಕೊಳ್ಳಲಾರವು. ಆದರೆ ಸೂಕ್ಷ್ಮ ಜೀವಿಗಳು ಈ ವಾಯುವನ್ನು ಸ್ಥಿರೀಕರಿಸುತ್ತವೆಯಾದ್ದರಿಂದ, ಸಾರಜನಕವು ಬೆಳೆಗಳಿಗೆ ದೊರೆಯುವಂತಾಗುತ್ತದೆ.
 • ಮಣ್ಣಿನಲ್ಲಿರುವ ಮೇಲ್ವರ್ಗದ ಸಸ್ಯಗಳಿಗೆ ಲಭ್ಯವಾಗದ ರೂಪದಲ್ಲಿರುವ ರಂಜಕವನ್ನು ಕರಗುವಂತೆ ಮಾಡಿ ಬೆಳೆಗಳಿಗೆ ದೊರೆಯುವಂತೆ ಮಾಡುತ್ತವೆ.
 • ಜೈವಿಕ ಗೊಬ್ಬರಗಳ ಬೆಲೆಯು ತುಲನಾತ್ಮಕವಾಗಿ ಕಡಮೆ.
 • ಸೂಕ್ಷ್ಮ ಜೀವಿಗಳು ಪೋಷಕಗಳನ್ನೊದಗಿಸುವುದಲ್ಲದೇ ಸಸ್ಯಗಳ ಬೆಳವಣಿಗೆಗೆ ಪ್ರಚೋದನೆಯನ್ನು ನೀಡುವ ಜೀವಸತ್ವಗಳನ್ನು ಮತ್ತು ಇತರೆ ರಾಸಾಯನಿಕ ದ್ರವ್ಯಗಳನ್ನು ನಿರ್ಮಿಸುತ್ತವೆ.
 • ಜೈವಿಕ ಜೀವಿಗಳ ಚಟುವಟಿಕೆಯಿಂದ ಹೊರ ಬಂದ ಕೆಲವು ರಾಸಾಯನಿಕ ದ್ರವ್ಯಗಳು, ಮಣ್ಣಿನಲ್ಲಿರುವ ಹಲವು ರೋಗಕಾರಿ ಸೂಕ್ಷ್ಮ ಜೀವಿಗಳಿಗೆ ಮಾರಕವಾಗಿವೆ. ಹೀಗಾಗಿ,ಅಣು ಜೀವಿ ಗೊಬ್ಬರದ ಬಳಕೆಯಿಂದ ಕೆಲವು ರೋಗಗಳ ಪ್ರಾಬಲ್ಯವು ಕಡಮೆಯಾಗುತ್ತದೆಯಲ್ಲದೇ, ಈ ದ್ರವ್ಯಗಳು ಪ್ರಯೋಜನಕಾರಿಯಾದ ಕೆಲವು ಜೀವಾಣುಗಳ ಅಭಿವೃದ್ಧಿಗೆ ಅನುಕೂಲಕರವಾಗಿವೆ.
 • ಜೈವಿಕ ಗೊಬ್ಬರದ ಜೀವಿಗಳಾಗಲೀ ಅವುಗಳ ಚಟುವಟಿಕೆಗಳಿಂದ ಬರುವ ರಾಸಾಯನಿಕ ವಸ್ತುಗಳಾಗಲೀ ಪರಿಸರಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡುವುದಿಲ್ಲ.ಆದ್ದರಿಂದ ಜೈವಿಕ ಗೊಬ್ಬರಗಳು ಪರಿಸರ ಸ್ನೇಹಿಗಳೆಂಬುವುದು ಒಂದು ವಿಶೇಷ.

ಸಾರಜನಕವನ್ನುಸ್ಥಿರೀಕರಿಸುವಜೈವಿಕಗೊಬ್ಬರಗಳು

ಆರಂಭದಲ್ಲಿಯೇ ತಿಳಿಸಿದಂತೆ, ಹವೆಯಲ್ಲಿರುವ ಸಾರಜನಕ ವಾಯುವನ್ನು ಸ್ಥಿರೀಕರಿಸೊಲು ಕೆಲವು ಸೂಕ್ಷ್ಮ ಜೀವಿಗಳಿಗೆ ಮೇಲ್ವರ್ಗದ ಸಸ್ಯಗಳೊಡನೆ ಸಹಜೀವನ ನಡೆಸಿದಾಗ ಮಾತ್ರ ಸಾಧ್ಯವಾಗುತ್ತದೆಯದರೆ, ಇನ್ನು ಕೆಲವು ಸೂಕ್ಷ್ಮ ಜೀವಿಗಳು ಸ್ವತಂತ್ರವಾಗಿ ಈ ಕಾರ್ಯವನ್ನು ಮಾಡಬಲ್ಲವು. ಎರಡು ಗುಂಪುಗಳಿಗೆ ಸೇರಿದ ಸೂಕ್ಷ್ಮ ಜೀವಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗೆ ಕೊಡಲಾಗಿದೆ.

ರೈಝೋಬಿಯಂ : ರೈಝೋಬಿಯೇಸಿ ಕುಟುಂಬಕ್ಕೆ ಸೇರಿದ ರೈಝೋಬಿಯಂ, ಬಾಲದಂತಹ ಅಂಗಗಳಿರುವ ಬ್ಯಾಕ್ಟೀರಿಯಾ. ಇವು ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳ ಬೇರುಗಳನ್ನು ಪ್ರವೇಶಿಸಿ, ಬೇರುಗಳ ಮೇಲೆ ಗಂಟುಗಳನ್ನು ನಿರ್ಮಿಸಿ, ಅವುಗಳಲ್ಲಿ ವಾಸಿಸುತ್ತವೆ. ಈ ಬ್ಯಾಕ್ಟೀರಿಯಾ ಹವೆಯೊಳಗಿನ ಸಾರಜನಕದ ವಾಯುವನ್ನು ಆಮೋನಿಯಾ ರೂಪಕ್ಕೆ ಪರಿವರ್ತಿಸಿ, ಈ ಪೋಷಕವನ್ನು ಬೆಳೆಗೆ ಪೂರೈಸುತ್ತವೆಯಾದರೆ, ತಮ್ಮ ಬೆಳವಣಿಗೆಗೆ ಬೇಕಾಧ ಇತರೆಲ್ಲ ಪೋಷಕಗಳನ್ನು ಬೆಳೆಯ ಸಸ್ಯಗಳಿಂದ ಪಡೆದುಕೊಳ್ಳುತ್ತವೆ. ಹೀಗೆ ಬ್ಯಾಕ್ಟೀರಿಯಾ ಮತ್ತು ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳು ಸಹ ಜೀವನವನ್ನು ನಡೆಸುತ್ತವೆ.

) ರೈಝೋಬಿಯಂ ಸೂಕ್ಷ್ಮಜೀವಿಗಳ ವರ್ಗೀಕರಣ : ರೈಝೋಬಿಯಂ ಜೀವಾಣುವನ್ನು ವಿವಿಧ ರೀತಿಗಳಲ್ಲಿ ವರ್ಗೀಕರಿಸಲಾಗಿದೆಯಾದರೂ ಫ್ರೇಡ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನಗಳಿಂದ ನಿರೂಪಿಸಲಾದ ವರ್ಗೀಕರಣವು ವಾಸ್ತವವಾಗಿ ಗ್ರಾಹ್ಯ ಮತ್ತು ಪ್ರಯೋಜನಕಾರಿ ಎನ್ನಬಹುದು. ಬೇಳೆಕಾಳು ವರ್ಗಕ್ಕೆ ಸೇರಿದ, ಒಂದು ನಿರ್ಧಿಷ್ಟ ಬೆಳೆ ಅಥವಾ ಸಣ್ಣ ಗುಂಪಿನ ಬೆಳೆಗಳ ಬೇರುಗಳ ಮೇಲೆ ಮಾತ್ರ ವಾಸಮಾಡಿ ಸಹಜೀವನವನ್ನು ನಡೆಸುವ ರೈಝೋಬಿಯಂ ಜೀವಾಣುವಿನ ಗುಂಪು ಒಂದು ಪ್ರವರಕ್ಕೆ ಸೇರಿದ್ದೆಂದು ಪರಿಗಣಿಸಲಾಗಿದೆ. ಅದರಂತೆ, ಬೇಳೆಕಾಳು ವರ್ಗದ ಇನ್ನೊಂದು ಬೆಳೆಯ ಅಥವಾ ಬೇರುಗಳಲ್ಲಿ ವಾಸಿಸಿ ಸಾರಜನಕವನ್ನು ಸ್ಥಿರೀಕರಿಸಬಲ್ಲ, ರೈಝೊಬಿಯಂ ಜೀವಾಣುಗಳ ಪ್ರಬೇಧವನ್ನು ಮತ್ತೊಂದು ಪ್ರವರಕ್ಕೆ ಸೇರಿಸಲಾಗಿದೆ. ಈ ಆಧಾರದ ಮೇಲೆ, ರೈಝೋಬಿಯಂನಲ್ಲಿ ಏಳು ಪ್ರವರಗಳನ್ನು ಗುರುತಿಸಲಾಗಿದೆ. ಈ ಆಧಾರದ ಮೇಲೆ, ರೈಝೊಬಿಯಂನಲ್ಲಿ ಏಳು ಪ್ರವರಗಳನ್ನು ಗುರುತಿಸಲಾಗಿದೆ. ಇವುಗಳನ್ನು ಕೋಷ್ಟಕ ೨೨ರಲ್ಲಿ ಕೊಡಲಾಗಿದೆ.

ಹೊಸದಾಗಿ ಸೂಚಿಸಿದ ವರ್ಗೀಕರಣದ ಪ್ರಕಾರ, ರೈಝೋಬಿಯಂ ಜೀವಾಣುಗಳನ್ನು ಎರಡು ಮುಖ್ಯ ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿ ಗುಂಪಿನಲ್ಲಿನ ಪ್ರವರಗಳನ್ನು ಗುರುತಿಸಲಾಗಿದೆ. ಹೆಚ್ಚಿನ ವಿವರಗಳು ಕೆಳಗಿನಂತಿವೆ:

I) ರೈಝೋಬಿಯಂ : ಈ ಗುಂಪಿನಲ್ಲಿ ಕೆಳಗಿನಮೂರು ಪ್ರವರಗಳನ್ನು ಗುರುತಿಸಲಾಗಿದೆ.

i) ರೈ.ಲೆಗ್ಯುಮಿನೋಸಾರಂ : ಇವುಗಳಲ್ಲಿ ಟ್ರೈಫೋಲೈ, ಫ್ಯಾಸಿಯೋಲಿ ಮತ್ತು ವಿಸಿಯಿ ತಳಿಗಳು ಸೇರಿವೆ.

ii) ರೈ. ಮೆಲಿಲೋಟಾಯ್

iii) ರೈ. ಲೋಟಾಯ್: ಇವು ಬಹು ವೇಗದಿಂದ ಬೆಳೆಯುತ್ತವೆ. ಕಡಲೆ, ಸಸ್ಬೇನಿಯಾ, ಮಿಮೋಸಾ ಮತ್ತು ಅವರೆಬೇಳೆ ಬೇರುಗಳ ಮೇಲೆ ವಾಸಿಸುವ ಮತ್ತು ವೇಗದಿಂದ ಬೆಳೆಯುವ ಸೂಕ್ಷ್ಮ ಜೀವಾಣುಗಳು ಈ ಗುಂಪಿಗೆ ಸೇರಿವೆ.

ಕೋಷ್ಟಕ ೨೨ : ರೈಝೋಬಿಯಂ ಜೀವಾಣುಗಳು ಪ್ರವರಗಳ ಮತ್ತು ಅವು ಸಹಜೀವನವನ್ನು ನಡೆಸುವ ಬೆಳೆಗಳ ವಿವರಗಳು

ಅ. ಸಂ.

ರೈಝೋಬಿಯಂ ಪ್ರವರದ ಹೆಸರು

ಸಹಜೀವನವನ್ನು ನಡೆಸುವ ಬೆಳೆಗಳ ಗುಂಪಿನ ಹೆಸರು

ಬೆಳೆಗಳ ಪ್ರವರದ ಹೆಸರು

ಬೆಳೆಗಳ ಪ್ರವರದಲ್ಲಿ ಬರುವ ಬೆಳೆಗಳು

ರೈಜೋಬಿಯಂ ಲೆಗ್ಯುಮಿನೋಸ್ಯಾರಂ ಬಟಾಣಿ ಪಾಯ್‌ಸಂ ವಿಸಿಯಾ ಲ್ಯಾಥಿರಸ್
ಲೆನ್ಸ್
ಬಟಾಣಿ
ವೆಚ್
ಕೇಸರಿ
ಚನ್ನಂಗಿ
ರೈಜೋಬಿಯಂ ಫ್ಯಾಜಿಯೋಲಿ ಟ್ರಾಯ್ಫೋಲಿಯಂ ಟ್ರಾಯ್ಫೋಲಿಯಂ ಕ್ಲೋವರ್‌ಗಳು
ರೈಜೋಬಿಯಂ ಮೆಲಿಲೊಟಿ ಕುದುರೆ ಮೆಂತೆ ಮೆಡಿಕಾಗೋ
ಮೆಲಿಲೋಟಸ್
ಟ್ರಾಯ್ಗೋನೆಲ್ಲಾ
ಕುದುರೆಮೆಂತೆ ಸ್ವೀಟ್ ಕ್ಲೋವರ್ ಮೆಂತೆ
ರೈಜೋಬಿಯಂ ಲುಪಿನಿ ಲೂಪಿನ್ ಲುಪಿನಸ್ ಓರಿಂಥೋಪಸ್ ಲೂಪಿನ್ಸ್ ಸೆರಾಡೆಲ್ಲಾ
ರೈಜೋಬಿಯಂ ಜಾಪೋನಿಕಂ ಸೋಯ ಅವರೆ ಗ್ಲಾಯ್ಸಿನ್ ಸೋಯ ಅವರೆ
ರೈಜೋಬಿಯಂ ಪ್ರವರಗಳು ಅಲಸಂದೆ ವಿಗ್ನಾ
ಕ್ಯಾಜನಸ್
ಸಾಯ್ಸರ್
ಲೆಸ್ಪೆಡೆಝಾ
ಕ್ರೊಟೊಲೇರಿಯಾ
ಅರ್ಯಾಚಿಸ್
ಫ್ಯಾಜಿಯೋಲಸ್
ಪ್ಯುರೇರಿಯಾ
ಅಲಸಂದಿ, ತೊಗರಿ, ಕಡಲೆ, ಲೆಸ್ಪೆಡೆಝಾ, ಸಣಬು, ಸೇಂಗಾ, ಲೈಮಾ ಅವರೆ, ಕುಡಝ

ii) )  ಬ್ರಾಡಿ ರೈಝೋಬಿಯಂ : ಸೋಯಾಬೀನ್‌ ಬೇರುಗಳ ಮೇಲೆ ಗಂಟುಗಳನ್ನು ನಿರ್ಮಿಸುವ, ನಿಧಾನವಾಗಿ ಬೆಳೆಯುವ ಸೂಕ್ಷ್ಮ ಜೀವಿಗಳು ಈ ಗುಂಪಿನಲ್ಲಿ ಸೇರ್ಪಡೆಯಾಗಿವೆ. ಇವಲ್ಲದೇ, ಕಡಲೆ, ಸಸ್ಬೇನಿಯಾ, ಮಿಮೋಸಾ, ಅವರೆ, ಅಕೇಸಿಯಾ ಈ ಬೆಳೆಗಳ ಬೇರುಗಳ ಮೇಲೆ ಗಂಟುಗಳನ್ನು ನಿರ್ಮಿಸುವ, ಆದರೆ ನಿಧಾನವಾಗಿ ಬೆಳೆಯುವ ಸೂಕ್ಷ್ಮಜೀವಿಗಳೂ ಈ ಗುಂಪಿಗೆ ಸೇರಿವೆ.

ಮೇಲೆ ಸೂಚಿಸಿದ ಸೂಕ್ಷ್ಮ ಜೀವಿಗಳನ್ನಲ್ಲದೆ, ಇನ್ನೂ ಕೆಲವು ಪ್ರವರಗಳನ್ನು ಈ ಗುಂಪಿನಲ್ಲಿ ಸೇರಿಸುವ ಸಾಧ್ಯತೆಇದೆ. ಆದರೆ, ಅಂತಿಮವಾಗಿ ಇದು ನಿರ್ಧಾರವಾಗುವವರೆಗೆ ಬ್ರಾಡಿ ರೈಝೋಬಿಯಂ ಜಪೋನಿಕಾವನ್ನು ಮಾತ್ರ ಈ ಗುಂಪಿನ ಪ್ರವಾರವಾಗಿ ಪರಿಗಣಿಸಬೇಕೆಂದು ಉಳಿದವುಗಳನ್ನು ಬ್ರಾ. ಪ್ರವರ (ವಿಗ್ನಾ), ಬ್ರಾ. ಪ್ರವರ (ಸಾಯ್ಸರ್) ಇತ್ಯಾದಿ ಹೆಸರುಗಳಿಂದ ಇವನ್ನು ಗುರುತಿಸಬೇಕೆಂದೂ ಸೂಚಿಸಲಾಗಿದೆ.

) ಸಾರಜನಕದ ಸ್ಥಿರೀಕರಣ : ಸಸ್ಯಗಳ ಬೇರು ಅಥವಾ ಕಾಂಡಗಳ ಮೇಲೆ ಇರುವ ಗಂಟುಗಳು ಒಂದು ಕವಚವಿದ್ದಂತೆ. ಅದರೊಳಗೆ ವಾಸಿಸುವ ಸೂಕ್ಷ್ಮ ಜೀವಿಗಳು ಸಾರಜನಕದ ಸ್ಥಿರೀಕರಣದ ಕಾರ್ಯವನ್ನು ನಡೆಸುತ್ತವೆ. ನೈಟ್ರೋಜನೆಸ್ ಎಂಬ ಕಿಣ್ವವು, ಸಾರಜನಕದ ವಾಯುವನ್ನು ಅಮೋನಿಯಾ ರೂಪಕ್ಕೆ ಪರಿವರ್ತನೆಯಾಗುವ ಕ್ರಿಯೆಯನ್ನು ಪ್ರಚೋದಿಸುತ್ತದೆ. ಈ ಕಿಣ್ವದಲ್ಲಿ ಎರಡು ಭಾಗಗಳಿವೆ. ಒಂದು ಭಾಗದಲ್ಲಿ ಕಬ್ಬಿಣ ಮತ್ತು ಮೊಲಿಬ್ಡೆನಂ ಹಾಗೂ ಇನ್ನೊಂದು ಭಾಗದಲ್ಲಿ ಕೇವಲ ಕಬ್ಬಿಣವಿರುತ್ತದೆ.

ಸಾರಜನಕದ ಸ್ಥಿರೀಕರಣವು ಪ್ರಾಣರಹಿತವಾದ ಕ್ರಿಯೆ. ಆದ್ದರಿಂದ, ನೈಟ್ರೋಜನಸ ಕಿಣ್ವಕ್ಕೆ, ಆಮ್ಲಜನಕದ ಪೂರೈಕೆಯಾಗದಂತೆ ವ್ಯವಸ್ಥೆಯಿರಬೇಕಾಗುತ್ತದೆ. ಈ ಕಾರ್ಯವನ್ನು ಸಸ್ಯದಲ್ಲಿರುವ ಲೆಗ್ ಹೆಮೋಗ್ಲೋಬಿನ್‌ ಎಂಬ ವಸ್ತುವು ನಿರ್ವಹಿಸುತ್ತದೆ. ಹೀಗಾಗಿ ಸಾರಜನಕದ ಸ್ಥಿರೀಕರಣವು ಸರಾಗವಾಗಿ ಸಾಗುತ್ತದೆ.

) ರೈಝೋಬಿಯಂ ಜೈವಿಕ ಗೊಬ್ಬರದ ಬಳಕೆ : ಸಂಬಂಧಿಸಿದ ಬೆಳೆಗೆ ನಿಗದಿಗೊಳಿಸಿದ ರೈಝೋಬಿಯಂ ಪ್ರವರ ಜೀವಾಣುಗಳನ್ನೇ ಆರಿಸಿಕೊಳ್ಳಬೇಕು. ಈ ಜೈವಿಕ ಗೊಬ್ಬರವನ್ನು ಮಣ್ಣಿಗಾದರೂ ಸೇರಿಸಬಹುದು. ಇಲ್ಲವೇ ಬೀಜಗಳಿಗಾದರೂ ಲೇಪಿಸಬಹುದು. ಸೂಕ್ಷ್ಮ ಜೀವಾಣುಗಳು, ಬೆಳೆಯ ಬೇರಿನ ಸುತ್ತಮುತ್ತಲ ಪ್ರದೇಶದಲ್ಲಿದ್ದು, ತಮ್ಮ ಚಟುವಟಿಕೆಗಳನ್ನು ಸರಿಯಾಗಿ ನಡೆಸುವುದು ಮುಖ್ಯ.

ಒಂದು ಹೆಕ್ಟೇರು ಪ್ರದೇಶದ ಬಿತ್ತನೆಗೆ ಬೇಕಾಗುವ ಬೀಜಗಳನ್ನು ಜೈವಿಕ ಗೊಬ್ಬರದಿಂದ ಲೇಪಿಸುವ ಒಂದು ವಿಧಾನದ ವಿವರಗಳು ಈ ಕೆಳಗಿನಂತಿವೆ :

 • ನೂರಿಪ್ಪತ್ತೈದು ಗ್ರಾಂ ಬೆಲ್ಲ ಇಲ್ಲವೇ ಸಕ್ಕರೆಯನ್ನು ೧.೨೫ ಲೀ. ನೀರಿನಲ್ಲಿಕರಗಿಸಿ ದ್ರಾವಣವನ್ನು ಸಿದ್ಧಪಡಿಸಬೇಕು.
 • ದ್ರಾವಣವನ್ನು ೧೫ ನಿಮಿಷಗಳವರೆಗೆ ಕುದಿಸಿ, ತಣಿಸಬೇಕು.
 • ಮೇಲಿನ ದ್ರಾವಣಕ್ಕೆ ೩೭೫ ಗ್ರಾಂ ಜೈವಿಕ ಗೊಬ್ಬರದ ಪುಡಿಯನ್ನು ಹಾಕಿ, ಸರಿಯಾಗಿ ಮಿಶ್ರಮಾಡಬೇಕು.
 • ಒಂದು ಹೆಕ್ಟೇರಿಗೆ ಬೇಕಾಗುವಷ್ಟು ಬೀಜವನ್ನು, ಈ ಮಿಶ್ರಣಕ್ಕೆ ಸೇರಿಸಿ, ಕೈಗಳಿಂದ ಸರಿಯಾಗಿ ಕಲಸಿ, ಮಿಶ್ರಣವು ಪ್ರತಿ ಬೀಜದ ಸುತ್ತಲೂ ಅಂಟಿಕೊಳ್ಳುವಂತೆ ಮಾಡಬೇಕು.
 • ಮೇಲಿನಂತೆ ಲೇಪನಗೊಂಡ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ, ಕೂಡಲೇ ಬಿತ್ತಲು ಉಪಯೋಗಿಸಬೇಕು.

ಎಚ್ಚರಿಕೆಗಳು

 • ಸಂಬಂಧಿಸಿದ ಬೆಳೆಗೆ ನಿಗದಿಪಡಿಸಿದ ಜೈವಿಕಗೊಬ್ಬರವನ್ನೇ ಲೇಪಿಸಬೇಕು. ಇಲ್ಲವಾದರೆ, ಜೈವಿಕ ಗೊಬ್ಬರದಿಂದ ಏನು ಪ್ರಯೋಜನವಾಗಲಾರದು.
 • ಬೀಜಗಳಿಗೆ ಜೈವಿಕಗೊಬ್ಬರವನ್ನು ಲೇಪಿಸುವ ಕಾರ್ಯವನ್ನು ನೆರಳಿನಲ್ಲಿ ಮಾಡಬೇಕು ಮತ್ತು ಲೇಪನಗೊಂಡ ಬೀಜಗಳನ್ನು ನೆರಳಿನಲ್ಲಿಯೇ ಒಣಗಿಸಬೇಕು. ಸೂರ್ಯನ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು.
 • ಲೇಪನಗೊಂಡ ಬೀಜವನ್ನು ಯಾವುದೇ ರಾಸಾಯನಿಕದಿಂದ ಉಪಚರಿಸಬಾರದು. ಒಂದೊಮ್ಮೆ ಬೇರೆ ರಾಸಾಯನಿಕವನ್ನು ಬಳಸಲೇಬೇಕಾದಾಗ, ಮೊದಲು ಆ ರಾಸಾಯನಿಕ ದ್ರವ್ಯದಿಂದ ಬೀಜವನ್ನು ಉಪಚರಿಸಿ, ಅನಂತರ ಅದರ ಮೇಲೆ ಜೈವಿಕ ಗೊಬ್ಬರವನ್ನು ಲೇಪಿಸಬೇಕು.
 • ಬೀಜಗಳನ್ನು ಬಿತ್ತುವುದಕ್ಕಿಂತ ೨ – ೩ ತಾಸುಗಳ ಮೊದಲು ಲೇಪನ ಮಾಡಬೇಕು. ಲೇಪನ ಮಾಡಿದ ಬೀಜಗಳನ್ನು ದೀರ್ಘಕಾಲದವರೆಗೆ ಬಿತ್ತದೇ ಹೊರಗೆ ಇಡಬಾರದು.

) ರೈಝೋಬಿಯಂನ ಕಾರ್ಯ ಸಮರ್ಥತೆ ಮೇಲೆ ಪರಿಣಾಮವನ್ನು ಬೀರುವ ಅಂಶಗಳು :

i) ಸಾವಯವ ಪದಾರ್ಥಗಳು : ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಸಾವಯವ ಪದಾರ್ಥಗಳಿದ್ದರೆ, ರೈಝೋಬಿಯಂ ಜೀವಾಣುಗಳ ಬೆಳವಣಿಗೆಯು ಉತ್ತಮಗೊಳ್ಳುತ್ತದೆ.

ii) ಶಿಲೀಂದ್ರ ನಾಶಕಗಳು : ಪಾದರಸ, ಸತು, ತಾಮ್ರ, ಇಲ್ಲವೇ ಸೀಸಗಳನ್ನು ಒಳಗೊಂಡ ಶಿಲೀಂದ್ರ, ನಾಶಕಗಳು, ರೈಝೋಬಿಯಂ ಗೆ ವಿಷಕಾರಿ ಎನಿಸಿವೆ. ಕ್ಯಾಪ್ಟನ್, ಕಾರ್ಬೊಕ್ಸೀನ್, ಕ್ಲೋರಾನಿನಲ್, ಥಯೋಬೆಂಡಝೋಲ್ ಥೈರಾಮ್ ಮುಂತಾದ ಸಾವಯವ ಶೀಲಿಂದ್ರ ನಾಶಕಗಳು, ಕಡಮೆ ವಿಷಕಾರಿ ಎನಿಸಿದರೂ ಇವು ರೈಝೋಬಿಯಂಗೆ ಅಪಾಯಕಾರಿಯೇ. ಇಂಥ ರಾಸಾಯನಿಕಗಳಿಂದ ಬೀಜಗಳನ್ನು ಉಪಚರಿಸಲೇಬೇಕಾದ ಅನಿವಾರ್ಯತೆ ಇದ್ದಾಗ, ರೈಝೊಬಿಯಂ ಜೈವಿಕ ಗೊಬ್ಬರವನ್ನು ನೇರವಾಗಿ ಮಣ್ಣಿಗೆ ಸೇರಿಸುವುದು ಉತ್ತಮ.

iii) ಕೀಟನಾಶಕಗಳು : ಕಾರ್ಬೊಫ್ಯುರಾನ್, ಫೋರೇಟ್ ಮೊದಲಾದ ಹರಳಿನ ರೂಪದಲ್ಲಿರುವ ಕೀಟನಾಶಕಗಳನ್ನು ಸಾಲಿನಲ್ಲಿ ಮಣ್ಣಿಗೆ ಸೇರಿಸುವ ಪದ್ಧತಿಯಿದೆ. ಆದ್ದರಿಂದ ಈ ಕೀಟನಾಶಕಗಳ ನೇರ ಸಂಪರ್ಕವು ಬೀಜಗಳೊಡನೆ ಬರುವುದಿಲ್ಲ. ಹೀಗಾಗಿ ಬೀಜದ ಸುತ್ತ ಲೇಪನಗೊಂಡ ಜೈವಿಕ ಗೊಬ್ಬರಕ್ಕೆ ಅಂತಹ ಅಪಾಯವಿಲ್ಲ.

iv) ಪೋಷಕಗಳು :

ಸಾರಜನಕ : ಮಣ್ಣಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರಜನಕವು ಲಭ್ಯವಿದ್ದರೆ, ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯಗಳು ಸಾರಜನಕವನ್ನು ಮಣ್ಣಿನಿಂದಲೇ ಹೀರಿಕೊಳ್ಳುತ್ತವೆ. ಹೀಗಾಗಿ ರೈಝೋಬಿಯಂ ಇರುವ ಗಂಟುಗಳು ನಿಷ್ಕ್ರಿಯವಾಗಿ ಸಾರಜನಕದ ಸ್ಥಿರೀಕರಣವು ಕುಗ್ಗುತ್ತದೆ. ಆದ್ದರಿಂದ ಬೇಳೆಕಾಳು ವರ್ಗದ ಬೆಳೆಗಳಿಗೆ ಸಾರಜನಕವನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸುವುದು ಸರಿಯಲ್ಲ.

ಬೀಜಗಳು ಮೊಳಕೆಯೊಡೆದು ಸಸಿಗಳು ಸಣ್ಣವಾಗಿರುವಾಗ, ಬೇರುಗಳು ಸಾಕಷ್ಟು ಅಭಿವೃದ್ಧಿ ಹೊಂದಿರುವುದಿಲ್ಲ. ಆ ಸಮಯದಲ್ಲಿ ಸಾರಜನಕದ ಸ್ಥಿರೀಕರಣವು ಗಣನೀಯ ಪ್ರಮಾಣದಲ್ಲಿ ಆಗುತ್ತಿರುವುದಿಲ್ಲ. ಆದ್ದರಿಂದ ಬೀಜ ಬಿತ್ತುವಾಗ ಸ್ವಲ್ಪ ಪ್ರಮಾಣದಲ್ಲಿ ಸಾರಜನಕವನ್ನು ಪೂರೈಸುವುದರಿಂದ ಸಸಿಗಳ ಬೆಳವಣಿಗೆಗೆ ಪ್ರಚೋದನೆ ದೊರೆತು ಮುಂದಿನ ದಿನಗಳಲ್ಲಿ ಸಾರಜನಕದ ಸ್ಥಿರೀಕರಣವು ಉತ್ತಮ ರೀತಿಯಿಂದ ಸಾಗಲು ಸಾಧ್ಯವಾಗುತ್ತದೆ.

ಕಿರು ಪೋಷಕಗಳು :

 • ಕಬ್ಬಿಣ ಮತ್ತರು ಮೊಲಬ್ಡೆನಂಗಳು ‘ನೈಟ್ರೋಜಿನೆಸ್’ ಕಿಣ್ವದ ನಿರ್ಮಾಣಕ್ಕೆ ಅತ್ಯವಶ್ಯ. ಆದ್ದರಿಂದ, ಈ ಲಘು ಪೋಷಕಗಳು ಸಾರಜನಕದ ಸ್ಥಿರೀಕರಣದ ಮೇಲೆ ಉತ್ತಮಪರಿಣಾಮವನ್ನು ಬೀರುತ್ತವೆ.
 • ಕೋಬಾಲ್ಟ್ ಸಹ ಸಾರಜನಕದ ಸ್ಥಿರೀಕರಣಕ್ಕೆ ಅತ್ಯವಶ್ಯ.
 • ತಾಮ್ರದ ಕೊರತೆಯಿಂದ ನಿಷ್ಕ್ರಿಯ ಗಂಟುಗಳ ಸಂಖ್ಯೆಯು ಅಧಿಕಗೊಳ್ಳಬಹುದು.

ಮೇಲೆ ಸೂಚಿಸಿದ ಕಿರು ಪೋಷಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೆಲವು ಪ್ರಸಂಗಗಳಲ್ಲಿ ಮೊಲಿಬ್ಡಿನಂ ಮತ್ತು ಕೋಬಾಲ್ಟ್ ಕಿರುಪೋಷಕಗಳನ್ನು ರೈಝೋಬಿಯಂನ ಸಂಗಡ ಮಿಶ್ರ ಮಾಡಿ ಬೀಜಗಳಿಗೆ ಲೆಪಿಸುವ ರೂಢಿ ಇದೆ. ನೆಲಗಡಲೆ, ಬಟಾಣಿ, ಸೋಯಬೀನ್‌ಗಳಂತಹ ದೊಡ್ಡ ಬೀಜಗಳಿಗೆ ರೈಝೊಬಿಯಂ ಅನ್ನು ಲೇಪಿಸುವಾಗ ಈ ವಿಧಾನವನ್ನು ಅನುಸರಿಸಿದರೆ ಬೀಜಗಳಿಗೆ ಅಪಾಯವಿಲ್ಲ. ಆದರೆ, ಕುದುರೆ ಮೆಂತೆಯಂತಹ ಸಣ್ಣ ಬೀಜಗಳಿಗೆ ರೈಝೋಬಿಯಂ ಅನ್ನು ಲೇಪಿಸುವಾಗ ಮಿಶ್ರಣಕ್ಕೆ ಈ ಪೋಷಕಗಳನ್ನು ಸೇರಿಸಬಾರದು.

v) ಮಣ್ಣಿನಲ್ಲಿರುವ ಲವಣಗಳು : ಮಣ್ಣಿನಲ್ಲಿ ಲವಣಗಳ ಪ್ರಮಾಣವು ಒಂದು ಮಿತಿಯನ್ನು ಮೀರಿದಾಗ ರೈಝೊಬಿಯಂ ಸರಿಯಾಗಿ ಅಭಿವೃದ್ಧಿಯನ್ನು ಹೊಂದಲಾರದು.

vi) ಮಣ್ಣಿನ ಆಮ್ಲಕ್ಷಾರ ನಿರ್ದೆಶಕ ಮತ್ತು ಸುಣ್ಣ : ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು, ೭ರ ಸಮೀಪದಲ್ಲಿದ್ದರೆ, ರೈಝೊಬಿಯಂ ಉತ್ತಮವಾಗಿ ಬೆಳೆಯುತ್ತದೆ. ಅದರಂತೆಯೇ, ಈ ಜೀವಾಣುಗಳು ಬೆಳವಣಿಗೆಯು ಉತ್ತಮವಾಗಿರಬೇಕಾದರೆ, ಮಣ್ಣಿನಲ್ಲಿ ಸಾಕಷ್ಟು ಸುಣ್ಣ (ಕ್ಯಾಲ್ಸಿಯಂ) ಇರಬೇಕು.

. ಉಪಚರಿಸಿದ ಬೀಜಗಳ ಗುಳಿಗೆಗಳು : ಬೀಜಗಳ ಸುತ್ತ ಲೇಪಿಸಿದ ರೈಝೋಬಿಯಂ ಜೀವಾಣುಗಳನ್ನು ಆಮ್ಲ, ರಾಸಾಯನಿಕ ಗೊಬ್ಬರ, ಸಸ್ಯ ಸಂರಕ್ಷಣಾ ರಾಸಾಯನಿಕಗಳು ಇತ್ಯಾದಿಗಳಿಂದ ರಕ್ಷಿಸಲು ಕೆಲವು ಕ್ರಮಗಳಿಂದ ಸಾಧ್ಯವಿದೆ. ಇಂತಹ ಒಂದು ಕ್ರಮದ ವಿವರಗಳು ಕೆಳಗಿನಂತಿವೆ.

 • ರೈಝೋಬಿಯಂ ಜೀವಾಣುಗಳಿರುವ ಮಿಶ್ರಣವನ್ನು ಬೀಜಗಳಿಗೆ ಲೇಪಿಸುವ ಮೊದಲು, ಆ ಮಿಶ್ರಣಕ್ಕೆ ಶೇಕಡಾ ೪೦ ರಷ್ಟು ಅಂಟು (ಗೋಂದು) ಇಲ್ಲವೇ,ಶೇಕಡಾ ೫ರಷ್ಟು ಕಾಬಾಕ್ಸಿ ಮೀಥೈಲ್ ಸೆಲ್ಯೂಲೋಸ್ ಅನ್ನು ಸೇರಿಸಬೇಕು. ಈ ಮಿಶ್ರಣದಿಂದ ಈಗಾಗಲೆ ವಿವರಿಸಿದಂತೆ ಬೀಜಗಳಿಗೆ ಸರಿಯಾಗಿ ಲೇಪಿಸಬೇಕು.
 • ಮೇಲಿನಂತೆ ಲೇಪನಗೊಂಡ ಬೀಜಗಳನ್ನು ಪಾತ್ರೆಯಲ್ಲಿ ಹಾಕಿ ಕೂಡಲೇ ಅತಿ ಜಿನುಗಾಗಿರುವ (ಪ್ರತಿ ಅಂಗುಲಕ್ಕೆ ೩೦೦ ರಂಧ್ರಗಳಿರುವ ಜರಡಿಯೊಳಗಿಂದ ಕೆಳಗೆ ಬಿದ್ದ) ಕ್ಯಾಲ್ಸಿಯಂ ಕಾರ್ಬೊನೇಟ್ ಪುಡಿಯನ್ನು ಹಾಕಿ, ಕೆಲವು ನಿಮಿಷಗಳವರೆಗೆ ಚೆನ್ನಾಗಿ ಮಿಶ್ರಮಾಡಬೇಕು. ಎಲ್ಲ ಬೀಜಗಳ ಸುತ್ತ, ಪುಡಿಯು ಏಕ ರೂಪವಾಗಿ ಅಂಟಿಕೊಳ್ಳುವಂತೆ ನೋಡಿಕೊಳ್ಳಬೇಕು. ಸರಿಯಾಗಿ ಲೇಪನಗೊಂಡ ಬೀಜಗಳು, ಬಿಳಿ ಗುಳಿಗೆ ಗಳಂತೆ ಕಾಣಬೇಕು. ಎಲ್ಲಿಯೂ ಕಪ್ಪು ಬಣ್ಣವು ಕಾಣುವಂತಿರಬಾರದು.
 • ಲೇಪಿತ ಬೀಜಗಳನ್ನು ಹರಡಿ ಸುಮಾರು ಒಂದು ತಾಸಿನವರೆಗೂ ಒಣಗಲು ಬಿಡಬೇಕು. ಅನಂತರ ಬೀಜಗಳನ್ನು ಕೂಡಲೇ ಬಿತ್ತಬೇಕು.

ಮೇಲೆ ಹೇಳಿದ ಕ್ಯಾಲ್ಸಿಯಂ ಕಾರ್ಬೊನೇಟ್ನ ಬದಲು ಕೆಳಗೆ ಹೇಳಿದ ವಸ್ತುಗಳಲ್ಲಿಯ ಯಾವುದಾದರೂ ಒಂದರ ಪುಡಿಯನ್ನೂ ಬಳಸಬಹುದು.

+ ಡೋಲೋಮೈಟ್ + ಶಿಲಾರಂಜಕ + ಟಾಲ್ಕ್
+ ಜಿಪ್ಸಂ + ಸೂಪರ ಫಾಸ್ಪೇಟ್ + ಬೇಸಿಕ್ ಸ್ಲ್ಯಾಗ್
+ ಬೆಂಟೋನೈಯ್ಟ್ + ಇದ್ದಿಲು  

) ವಿವಿಧ ಬೆಳೆಗಳಲ್ಲಿ ಸ್ಥೀರೀಕರಣಗೊಂಡ ಸಾರಜನಕದ ಪ್ರಮಾಣ : ಬೇಳೆಕಾಳು ವರ್ಗಕ್ಕೆ ಸೇರಿದ ಎಲ್ಲ ಬೆಳೆಗಳಲ್ಲಿ ರೈಝೋಬಿಯಂ ಸಹಬಾಳ್ವೆ ನಡೆಸಿ, ಗಾಳಿಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸುತ್ತದೆಯಾದರೂ, ಸ್ಥಿರೀಕರಣಗೊಂಡ ಸಾರಜನಕದ ಪ್ರಮಾಣವು ಒಂದೇ ಆಗಿರುವುದಿಲ್ಲ. ಕೋಷ್ಟಕ ೨೩ರಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳಿವೆ.

ಕೋಷ್ಟಕ ೨೩: ವಿವಿಧ ಬೆಳೆಗಳಲ್ಲಿ ಸ್ಥಿರೀಕರಣಗೊಂಡ ಸಾರಜನಕದ ಪ್ರಮಾಣ

.ಸಂ.

ಬೆಳೆಗಳು

ಪ್ರತಿ ಹೆಕ್ಟೇರು ಬೆಳೆಯಲ್ಲಿ ಸ್ಥೀರೀಕರಣಗೊಂಡ ಸಾರಜನಕ (ಕಿ.ಗ್ರಾಂ)

೧. ಸೇಂಗಾ/ ಉದ್ದು/ ಹೆಸರು

೫೦ – ೬೦

೨. ಸೋಯ ಅವರೆ

೬೦ – ೮೦

೩. ಆಲಸಂದೆ / ಕಡಲೆ

೮೦ – ೯೦

೪. ಚನ್ನಂಗಿ

೯೦ – ೧೦೦

೫. ತೊಗರಿ / ಕುದುರೆ ಮೆಂತೆ

೧೦೦ – ೨೦೦

೬. ಸಸ್ಬೇನಿಯಾ ರೋಸ್ಟ್ರೇಟಾ

೩೨೦ – ೩೬೦

) ಕಾಂಡಗಲ ಮೇಲಿರುವ ಗಂಟುಗಳಲ್ಲಿ ಸಾರಜನಕದ ಸ್ಥೀರೀಕರಣ : ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳ ಬೇರುಗಳ ಮೇಲೆ ರೈಝೋಬಿಯಂ ಜೀವಾಣುಗಳು ಗಂಟುಗಳನ್ನು ನಿರ್ಮಿಸಿ ಅದರೊಳಗೆ ವಾಸಿಸಿ ಹವೆಯೊಳಗಿನ ಸಾರಜನಕವನ್ನು ಸ್ಥೀರೀಕರಿಸುವುದು ಸಾಮಾನ್ಯ. ಆದರೆ, ಸಸ್ಬೇನಿಯಾ ರೋಸ್ಟ್ಟಾ, ಆಸ್ಟ್ರನೋಮಿನಿ ಮತ್ತು ನೆಪ್ಟೋನಿಯಾ ಗುಂಪಿಗೆ ಸೇರಿದ ಪ್ರವರಗಳಲ್ಲಿ ಸಸ್ಯಗಳ ಬೇರುಗಳ ಮೇಲಲ್ಲದೇ ಕಾಂಡಗಳ ಮೇಲೂ ಗಂಟುಗಳಾಗಿ, ಅವುಗಳಲ್ಲಿ ಸಾರಜನಕದ ಸ್ಥೀರೀಕರಣವು ಸಾಗುತ್ತದೆ. ಈ ಸಸ್ಯಗಳಲ್ಲಿ ಮುಂದಿನ ವೈಶಿಷ್ಟ್ಯಗಳನ್ನು ಕಾಣಬಹುದು.

 • ಸಸ್ಯಗಳಿಗೆ ಸಾರಜನಕವನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸಿದರೂ ಸಾರಜನಕದ ಸ್ಥೀರೀಕರಣದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮಗಳನ್ನು ಬೀರುವುದಿಲ್ಲ.
 • ಸಸ್ಯಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ರೈಝೋಬಿಯಂ ಜೀವಾಣುಗಳನ್ನು ಪೂರೈಸಿ, ಕಾಂಡಗಳ ಮೇಲೆ ನಿರ್ಮಾಣಗೊಳ್ಳುವ ಗಂಟುಗಳ ಸಂಖ್ಯೆಯನ್ನು ಅಧಿಕಗೊಳಿಸಬಹುದು.
 • ಈ ಸಸ್ಯಗಳು ನಿಂತ ನೀರಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಆದ್ದರಿಂದ ಈ ಸಸ್ಯಗಳು ಬತ್ತದ ಬೆಳೆಗೆ ಸೂಖ್ತ ಹಸುರು ಗೊಬ್ಬರವಾಗಬಲ್ಲವು.

.) ರೈಝೊಬಿಯಂ ಅನ್ನು ಪೂರೈಸಬೇಕಾದ ಅವಶ್ಯಕತೆ : ಮಣ್ಣಿನಲ್ಲಿ ಒಂದಲ್ಲ ಒಂದು ಬಗೆಯ ರೈಝೋಬಿಯಂ ಇರುತ್ತದೆ. ಆದರೆ, ಬೆಳೆಯಬೇಕೆಂದಿರುವ ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗೆ ಸಂಬಂಧಿಸಿದ ನಿರ್ಧಿಷ್ಟ ಪ್ರವರಕ್ಕೆ ಸೇರಿದ ರೈಝೋಬಿಯಂ ಆ ಮಣ್ಣಿನಲ್ಲಿ ಇಲ್ಲದಿರಬಹುದು. ಒಂದೊಮ್ಮೆ ಇದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಇರಲಿಕ್ಕಿಲ್ಲ. ಇಂತಹ ಸಂದರ್ಭಗಳಲ್ಲಿ, ನಿರ್ಧಿಷ್ಟ ಪ್ರವರಕ್ಕೆ ಸೇರಿದ ರೈಝೋಬಿಯಂ ಜೀವಾಣುಗಳನ್ನು ಬೀಜಗಳಿಗೆ ಲೇಪಿಸಿ ಅಥವಾ ನೇರವಾಗಿಮಣ್ಣಿಗೆ ಸೇರಿಸಿ ಪೂರೈಸಬೇಕಾಗುತ್ತದೆ.

ಯಾವುದೇ ಪ್ರದೇಶದಲ್ಲಿ ಮೊದಲ ಬಾರಿಗೆ ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಯನ್ನು ಬೆಳೆಯಬೇಕಾದಾಗಲಂತೂ, ನಿರ್ಧಿಷ್ಟ ಪ್ರವರಕ್ಕೆ ಸೇರಿದ ರೈಝೋಬಿಯಂ ಜೀವಾಣುಗಳನ್ನು ಬಳಸಬೇಕಾದುದು ಅತ್ಯವಶ್ಯ. ಆದ್ದರಿಂದಲೇ, ಹಲವು ದಶಕಗಳ ಮೊದಲು ನಮ್ಮ ದೇಶದಲ್ಲಿ ಸೋಯ ಅವರೆಯ ಬೆಳೆಯನ್ನು ಬೆಳೆಯಲು ಪ್ರಾರಂಭ ಮಾಡಿದಾಗ ಅದಕ್ಕೆ ಸಂಬಂಧಿಸಿದ ರೈ,. ಜಪೋನಿಕಾ ಜೀವಾಣುಗಳನ್ನು ಉಪಯೋಗಿಸಬೇಕಾದುದು ಅನಿವಾರ್ಯವಾಯಿತು.

) ರೈಝೋಬಿಯಂ ಜೈವಿಕ ಗೊಬ್ಬರದ ಗುಣ ನಿಯಂತ್ರಣ : ರೈತರಿಗೆ ಉತ್ತಮ ಗುಣಮಟ್ಟದ ರೈಝೊಬಿಯಂ ದೊರೆಯುವಂತಾಗಬೇಕು. ಭಾರತದ ಇಂಡಿಯನ್‌ ಸ್ಟ್ಯಾಂಡರ್ಡ ಇನ್‌ಸ್ಟಿಟ್ಯೂಟ್ (ISI)ಎಂಬ ಸಂಸ್ಥೆಯು ನಮ್ಮಲ್ಲಿ ಉತ್ಪಾದನೆಯಾಗುವ ಹಲವು ವಸ್ತುಗಳನ್ನು ಪರೀಕ್ಷಿಸಿ ಅವು ಉತ್ತಮ ಗುಣಮಟ್ಟದವೆಂದು ಕಂಡು ಬಂದರೆ ಅವುಗಳಿಗೆ ಆ ರೀತಿಯ ಪ್ರಮಣ ಪತ್ರವನ್ನು ನೀಡುತ್ತದೆ. (ಈ ಸಂಸ್ಥೆಯ ಹೆಸರನ್ನು ಬ್ಯೂರೋ ಆಫ್ ಇಂಡಿಯನ್‌ ಸ್ಟ್ಯಾಂಡರ್ಡ್ಸ ಎಂದು ಬದಲಿಸಲಾಗಿದೆ). ಅದಕ್ಕನುಗುಣವಾಗಿ ಕೆಳಗಿನ ಅಂಶಗಳನ್ನು ಪರಿಗಣಿಸಲಾಗುತ್ತದೆ.

 • ವಾಹಕ ವಸ್ತುವಿನೊಂದಿಗೆ ತಯಾರಿಸಿದ ಜೈವಿಕ ಗೊಬ್ಬರವಾಗಿರಬೇಕು.
 • ಜೈವಿಕ ಗೊಬ್ಬರವು, ತಯಾರಿಸಿದ ದಿನದಿಂದ ಕನಿಷ್ಠ ಆರು ತಿಂಗಳವರೆಗೆ ಬಳಕೆಗೆ ಸೂಕ್ತವೆನಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
 • ಒಣ ತೂಕದ ಆಧಾರದ ಮೇಲೆ ಪ್ರತಿ ಗ್ರಾಂ ಜೈವಿಕ ಗೊಬ್ಬರದಲ್ಲಿ, ಅದನ್ನು ತಯಾರಿಸಿದ ದಿನದಿಂದ ೧೫ ದಿನಗಳವರೆಗೆ ೧೦ ಕೋಟಿಗಳಿಗಿಂತ (೧೦) ಕಡಮೆಯಲ್ಲದಷ್ಟು ರೈಝೋಬಿಯಂ ಜೀವಾಣುಗಳು ಇರಬೇಕು. ಗೊಬ್ಬರವನ್ನು ಬಳಸಬಹುದಾದ ಅವಧಿಯು ಮುಗಿಯುವುದಕ್ಕಿಂತ ೧೫ ದಿನಗಳ ಮೊದಲು, ಈ ಸಂಖ್ಯೆಯು ಒಂದು ಕೋಟಿಗಿಂತ (೧೦) ಕಡಮೆಯಾಗಿರಬಾರದು.
 • ಗೊಬ್ಬರವನ್ನು ೨೫ ಡಿಗ್ರಿಯಿಂದ ೩೦ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಸಂಗ್ರಹಿಸಿಡಬೇಕು.
 • ಗೊಬ್ಬರದಲ್ಲಿ, ಸಂಬಂಧಿಸಿದ ಜೀವಾಣುಗಳನ್ನು ಬಿಟ್ಟು ಬೇರೆ ಯಾವುದೇ ವರ್ಗದ ಸೂಕ್ಷ್ಮ ಜೀವಾಣುಗಳು ಇರಬಾರದು.
 • ಜೈವಿಕ ಗೊಬ್ಬರದ ಆಮ್ಲ – ಕ್ಷಾರ ನಿರ್ದೆಶಕವು ೬ ರಿಂದ ೭.೫ ಮಿತಿಯಲ್ಲಿ ಇರಬೇಕು.
 • ಅವಧಿ ಮುಗಿಯುವುದರೊಳಗೆ ಉಪಯೋಗಿಸಿದಾಗ, ಸಸ್ಯದ ಬೇರುಗಳ ಮೆಲೆ, ಪರಿಣಾಮಕಾರಿಯಾಗಿರುವ ಗಂಟುಗಳು ನಿರ್ಮಾಣಗೊಳ್ಳಬೇಕಲ್ಲದೇ ಸಸ್ಯದ ತೂಕವು ಗಣನೀಯವಾಗಿ ಅಧಿಕಗೊಳ್ಳಬೇಕು.
 • ಜೀವಾಣುಗಳ ವಾಹಕ ವಸ್ತುವು ಅತಿ ಜಿನುಗು ಪುಡಿಯ ರೂಪದಲ್ಲಿರಬೇಕು.
 • ಗೊಬ್ಬರವನ್ನು ತೆಳುವಾದ ಪಾಲಿಥೀನ್‌ಚೀಲದಲ್ಲಿ ಅಥವಾ ಇನ್ನಿತರೆ ಸೂಕ್ತ ಚೀಲದಲ್ಲಿ ತುಂಬಿ, ಚೀಲದ ಬಾಯಿಯನ್ನು ಮೊಹರು ಮಾಡಬೇಕುಕ.
 • ಜೀವಾಣುವಿನ ಹೆಸರು, ಉಪಯೋಗಿಸಬೇಕಾದ ಬೆಳೆಯ ಅಥವಾ ಬೆಳೆಗಳ ಹೆಸರು. ಬಳಸಿದ ವಾಹಕ ವಸ್ತುವಿನ ಹೆಸರು. ತಯಾರಿಸಿದ ದಿನಾಂಕ, ಬಳಸಬಹುದಾದ ಕೊನೆಯ ದಿನಾಂಕ, ಪ್ರತಿ ಹೆಕ್ಟರಿಗೆ ಬಳಸಬೇಕಾದ ಪ್ರಮಾಣ, ತಯಾರಕರ ಹೆಸರು ಮತ್ತು ವಿಳಾಸ ಇತ್ಯಾದಿ ವಿವರಗಳನ್ನು ಪ್ರತಿ ಚೀಲದ ಮೇಲೆ ಸುಲಭವಾಗಿ ಓದಲು ಬರುವಂತೆ ಮುದ್ರಿಸಬೇಕು.
 • ಸೂರ್ಯನ ಬಿಸಲು ಮತ್ತು ಅತಿ ಶಾಖದಿಂದ ದೂರವಿಟ್ಟು, ತಂಪು ಪ್ರದೇಶದಲ್ಲಿ ಸಂಗ್ರಹಿಸಿಡಿರಿಎಂಬ ಸೂಚನೆಯನ್ನು ಚೀಲದ ಮೇಲೆ ದಪ್ಪ ಅಕ್ಷರಗಳಿಂದ ಮುದ್ರಿಸಿರಬೇಕು.

)  ಕೆಲವು ಸಂಕೀರ್ಣ ಸಂಗತಿಗಳು : ರೈಝೋಬಿಯಂ ಜೈವಿಕ ಗೊಬ್ಬರಗಳ ಬಗ್ಗೆ ಕೆಳಗಿನ ಸಂಗತಿಗಳನ್ನು ಅರಿತಿರಬೇಕು.

 • ರೈಝೋಬಿಯಂ ಜೀವಾಣುಗಳು, ಬೇಳೆಕಾಳು ವರ್ಗಕ್ಕೆ ಸೇರಿದ ಸಸ್ಯದ ಬೇರುಗಳ ಮೇಲೆ ಕ್ರೀಯಾ ಶೀಲ ಮತ್ತು ನಷ್ಕ್ರಿಯೆ ಗಂಟುಗಳು ಎಂಬ ಎರಡು ಬಗೆಯ ಗಂಟುಗಳನ್ನು ನಿರ್ಮಿಸುತ್ತವೆ.
 • ಕ್ರಿಯಾಶೀಲ ಗ್ರಂಥಿಯನ್ನು (ಗಂಟನ್ನು) ಸೀಳಿ ಎರಡು ಭಾಗಗಳಾಗಿ ಮಾಡಿದಾಗ ಗ್ರಂಥೀಯ ಒಳಭಾಗವು ಲೆಗ್ ಹೋಮೋಗ್ಲೋಬಿನ್‌ನಿಂದಾಗಿ ಕೆಂಪು (ಗುಲಾಭಿ) ಬಣ್ಣವನ್ನು ಹೊಂದಿರುತ್ತದೆ. ಇಂತಹ ಗ್ರಂಥಿಗಳಲ್ಲಿ ವಾಸಿಸುವ ರೈಝೋಬಿಯಂ ಜೀವಾಣುಗಳು ಮಾತ್ರ ಹವೆಯೊಳಗಿನ ಸಾರಜನಕವನ್ನು ಸ್ಥಿರೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ನಿಷ್ಕ್ರಿಯೆ ಗ್ರಂಥಿಗಳ ಒಳಭಾಗವು ಕೆಂಪು ಬಣ್ಣವನ್ನು ಹೊಂದಿರುವುದಿಲ್ಲ. ಆದ್ದರಿಂದ, ಅಲ್ಲಿ ವಾಸಿಸುವ ರೈಝೋಬಿಯಂ ಜೀವಾಣುಗಳು, ಸಾರಜನಕವನ್ನು ಸ್ಥೀರೀಕರಿಸಲಾರವು.
ರೈಝೋಬಿಯಂ ಜೈವಿಕ ಗೊಬ್ಬರವನ್ನು ಸಿದ್ಧಪಡಿಸುವಾಗ ಕೆಳಗಿನ ವಸ್ತುಗಳಲ್ಲಿ ಒಂದನ್ನು ವಾಹಕವೆಂದು, ಭಾರತದಲ್ಲಿ ಉಪಯೋಗಿಸಲಾಗುತ್ತದೆ.

 • ಅಧಿಕ ಪ್ರಮಾಣದ ಸಾವಯವ ವಸ್ತುಗಳಿರುವ ಮಣ್ಣು.
 • ಸಗಣಿ ಗೊಬ್ಬರ
 • ಕಾಂಪೋಸ್ಟ್
 • ಇದ್ದಲು ಪುಡಿ ಮತ್ತು ಪ್ರೆಸ್ ಮಡ್ ಇವುಗಳ ಸಮಪ್ರಮಾಣದ ಮಿಶ್ರಣ ವಾಹಕವು ಅತಿ ಜಿನುಗು ಪುಡಿಯಾಗಿರಬೇಕು. (ಪ್ರತಿ ಅಂಗುಲಕ್ಕೆ ೨೦೦ ರಂಧ್ರಗಳಿರುವ ಜರಡಿಯ ಮೂಲಕ ಜಾಲಿಸಿದ ಪುಡಿ)