ಟ್ರಾಯಾಝಿನ್ಸ್ : ಅಮೋನಿಯಾ ವಾಯುವಿನಲ್ಲಿ ಯೂರಿಯಾವನ್ನು ಬಿಸಿ ಮಾಡಿದರೆ ಮುಂದಿನಂತೆ ವಸ್ತುಗಳು ಸಿದ್ಧವಾಗುತ್ತವೆ.

 • ಸಿಯನ್ಯೂರಿಕ್ ಆಮ್ಲ – ಶೇ.೩೨.೪ ಸಾರಜನಕವಿದೆ.
 • ಅಮೆಲೈನ್‌- ಶೇ.೪೩.೭ ಸಾರಜನಕವಿದೆ.
 • ಆಮೆಲೈಡ್ – ಶೇ ೪೯.೪ ಸಾರಜನಕವಿದೆ.
 • ಮೆಲಾಮೈನ್‌- ಶೆ.೬೬.೫ ಸಾರಜನಕವಿದೆ.

ಮೇಲೆ ಹೇಳಿದ ರಾಸಾಯನಿಕಗಳ ಉತ್ಪಾದನೆಯು ಇನ್ನು ದೊಡ್ಡ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ, ಕೆಳಗಿನ ಉತ್ಪಾದನೆಯು ಇನ್ನೂ ದೊಡ್ಡ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ, ಕೆಳಗಿನ ಸಂಗತಿಗಳನ್ನು ಪರಿಶೀಲಿಸಿದಾಗ, ಈ ವಸ್ತುಗಳು ಪ್ರಯೋಜನಕಾರಿ ಎನಿಸಬಲ್ಲವು.

–  ಸಾರಜನಕವು ಅಧಿಕ ಪ್ರಮಾಣದಲ್ಲಿದೆ.

–  ಅತ್ಯಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಕರಗುತ್ತದೆ.

–  ಇವುಗಳನ್ನು ಸುಲಭವಾಗಿ ತಯಾರಿಸಬಹುದು.

ii) ನೀರಿನಲ್ಲಿ ಅತಿ ಕಡಮೆ ಪ್ರಮಾಣದಲ್ಲಿ ಕರಗುವ ಸಾರಜನಕ ವಸ್ತುಗಳು : ಮೆಗ್ನಿಷಿಯಂ ಅಮೋನಿಯಂ ಫಾಸ್ಫೇಟ್ (MgNH4 PO4 H2O) ಈ ಗುಂಪಿನ ಪ್ರಮುಖ ಸಂಯುಕ್ತ ವಸ್ತು ಎನ್ನಬಹುದು. ಮೆಗ್ನಿಷಿಯಂನ ಸ್ಥಾನದಲ್ಲಿ ತಾಮ್ರ, ಕೋಬಾಲ್ಟ್, ಮ್ಯಾಂಗನೀಸ್, ಕಬ್ಬಿಣ ಅಥವಾ ಸತುವುಗಳಲ್ಲಿ ಒಂದುಇರುವ ಅಮೋನಿಯಂ ಫಾಸ್ಪೇಟುಗಳು ಸಹ ಈ ಗುಂಪಿಗೆ ಸೇರಿದ ಇತರೆ ಸಂಯುಕ್ತ ವಸ್ತುಗಳು. ಇವುಗಳಲ್ಲಿಯ ಸಾರಜನಕವು ಬಿಡುಗಡೆ ಹೊಂದಲು ಯಾವುದೇ ರೀತಿಯ ರಾಸಾಯನಿಕ ಕ್ರಿಯೆಯು ನಡೆಯಬೇಕಾಗಿಲ್ಲ. ಅಥವಾ ಸೂಕ್ಷ್ಮಜೀವಿಗಳ ಚಟುವಟಿಕೆಯ ಅವಶ್ಯಕತೆ ಇಲ್ಲ. ಈ ಸಂಯುಕ್ತಗಳ ಕೆಲವು ವೈಶಿಷ್ಟ್ಯಗಳು ಕೆಳಗಿನಂತಿವೆ.

 • ಇವುಗಳಲ್ಲಿ ಸಾರಜನಕದ ಪ್ರಮಾಣವು ಕಡಮೆ . ವಿವಿಧ ರಾಸಾಯನಿಕ ವಸ್ತುಗಳಲ್ಲಿ ಸಾರಜನಕದ ಪ್ರಮಾಣವು ೫.೭ ರಿಂದ ೯ರವರೆಗೆ ಇದೆ.
 • ಈ ವಸ್ತುಗಳಲ್ಲಿರುವ ಎಲ್ಲ ಧಾತುಗಳೂ ಪೋಷಕಗಳೇ ಎಂಬುವುದು ಮಹತ್ವದ ಸಂಗತಿ.
 • ಇವು ನೀರಿನಲ್ಲಿ ಅಲ್ಪ ಪ್ರಮಾಣದಲ್ಲಿ ಕರಗುತ್ತವೆ.
 • ಮೇಲೆ ಹೇಳಿದಂತೆ, ಈ ವಸ್ತುಗಳಿಂದ ಸಾರಜನಕವು ಬಿಡುಗಡೆಯನ್ನು ಹೊಂದಲು ರಾಸಾಯನಿಕ ಕ್ರಿಯೆಗಳಾಗಲಿ, ಸೂಕ್ಷ್ಮ ಜೀವಿಗಳ ಚಟುವಟಿಕೆಗಳಾಗಲೀ ನಡೆಯಬೇಕಾಗಿಲ್ಲ.
 • ಕಣಗಳು ಸಣ್ಣವಿದ್ದಷ್ಟೂ ನೀರಿನಲ್ಲಿ ಕರಗುವ ಪ್ರಮಾಣವು ಅಧಿಕಗೊಳ್ಳುತ್ತದೆ. ಆದ್ದರಿಂದ ಈ ವಸ್ತುಗಳ ಕಣಗಳ ಆಕಾರವನ್ನು ನಿಯಂತ್ರಿಸಿ, ಸಾರಜನಕದ ವಿಮೋಚನೆಯ ವೇಗವನ್ನು ನಿಯಂತ್ರಿಸಲು ಸಾಧ್ಯ.

iii) ನೀರಿನಲ್ಲಿಕರಗುವ ಆದರೆ ಸೂಕ್ಷ್ಮಜೀವಿಗಳ ಅವಶ್ಯಕತೆ ಇರುವ ವಸ್ತುಗಳು : ಗುವಾನಿಲ್ ಯೂರಿಯಾ ಸಲ್ಫೇಟ್ ಎಂಬ ರಾಸಾಯನಿಕವು ಈ ಗುಂಪಿಗೆ ಸೇರಿದ ದ್ರವ್ಯ. ಇದರಲ್ಲಿ ಶೇಕಡಾ ೩೭ ರಷ್ಟು ಸಾರಜನಕವಿದೆ.ಶೇಕಡಾ ೨೭.೮ ಸಾರಜನಕವಿರುವ ಗುವಾನಿಲ್ ಫಾಸ್ಪೇಟ್ ಈ ಗುಂಪಿನ ಇನ್ನೊಂದು ಸಂಯುಕ್ತ ವಸ್ತು. ಇವೆರಡೂ ಸಂಯುಕ್ತಗಳು ನೀರಿನಲ್ಲಿ ಕರಗುತ್ತವೆಯಾದರೂ, ಅವುಗಳಲ್ಲಿರುವ ಸಾರಜನಕವು ಬಿಡುಗಡೆ ಹೊಂದಿ, ಸಸ್ಯಗಳಿಗೆ ದೊರೆಯುವ ರೂಪಕ್ಕೆ ಪರಿವರ್ತನೆಯಾಗಬೇಕಾದರೆ, ಸೂಕ್ಷ್ಮ ಜೀವಿಗಳ ಸಹಾಯವು ಅವಶ್ಯಕ.

ಮೇಲೆ ಹೇಳಿದ ದ್ರವ್ಯಗಳು ಮಣ್ಣಿನಲ್ಲಿರುವ ಅತಿ ಸೂಕ್ಷ್ಮ ಕಣಗಳ ಸುತ್ತ ಅವರಿಸುತ್ತವೆ. ಆಗ, ಸೂಕ್ಷ್ಮ ಜೀವಿಗಳು, ತಮ್ಮ ಚಟುವಟಿಕೆಯನ್ನು ಆರಂಭಿಸಿ, ಈ ವಸ್ತುಗಳೊಡನೆ ಪ್ರತಿಕ್ರಿಯೆಗೊಂಡು ಸಾರಜನಕವನ್ನು ಹೊರಗೆಡಹುತ್ತವೆ. ಆಮ್ಲಜನಕವು ಸಾಕಷ್ಟಿರುವಾಗ, ಸಾರಜನಕದ ವಿಮೋಚನೆಯು ಮಂದಗತಿಯಿಂದ ಸಾಗುತ್ತದೆಯಾದರೆ, ಆಮ್ಲಜನಕವಿರದ ವಾತಾವರಣದಲ್ಲಿ ಸಾರಜನಕವು ತುಲನಾತ್ಮಕವಾಗಿ ಅಧಿಕ ವೇಗದಿಂದ ಸಾಗುತ್ತದೆ. ಆದ್ದರಿಂದ, ಕೆಸರು ಪದ್ಧತಿಯಿಂದ ಬೆಳೆಸುವ ಬತ್ತದ ಬೆಳೆಗೆ ಈ ಗೊಬ್ಬರಗಳು ಹೆಚ್ಚು ಪ್ರಯೋಜನಕಾರಿಯೆನಿಸಿವೆ.

iv) ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳ ಮೇಲೆ ಲೇಪನ : ಯೂರಿಯಾ ಮತ್ತು ಇತರೆ ಹಲವು ಸಾರಜನಕ ಗೊಬ್ಬರಗಳನ್ನು ಆರ್ದ್ರ ಮಣ್ಣಿಗೆ ಸೇರಿಸಿದೊಡನೆಯೇ, ಅವು ನೀರಿನಲ್ಲಿ ಕರಗಿ, ಪೋಷಕವು ಹೊರಬರುತ್ತದೆ. ಈ ಮೊದಲೇ ವಿವರಿಸಿದಂತೆ, ಹೊರಬಂದ ಸಾರಜನಕದ ಬಹುಭಾಗವು ನಷ್ಟವಾಗುವ ಸಾಧ್ಯತೆಯಿದೆ. ಆದರೆ ಗೊಬ್ಬರದ ಕಣಗಳನ್ನು ಸೂಕ್ಷ್ಮ ವಸ್ತುಗಳಿಂದ ಲೇಪಿಸಿದರೆ, ಹೊರಬರುವ ಸಾರಜನಕದ ವೇಗವನ್ನು ನಿಯಂತ್ರಿಸಬಹುದು. ಈ ದಿಸೆಯಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಕೆಳಗೆ ವಿವರಿಸಿದ ಮೂರು ಬಗೆಯ ಲೇಪನಗಳು ಬಳಕೆಯಲ್ಲಿವೆ.

ನೀರನ್ನು ಮಾತ್ರ ಒಳಬಿಡುವ ಆದರೆ ಗೊಬ್ಬರದ ದ್ರಾವಣವನ್ನು ಹೊರ ಬಿಡದ ವಸ್ತುವಿನ ಲೇಪನ : ಕೆಲವು ವಿಶಿಷ್ಟ ಪ್ರಕಾರದ ವಸ್ತುಗಳಲ್ಲೊಂದರಿಂದ ಸಾರಜನಕ ಗೊಬ್ಬರದ ಕಣಗಳನ್ನು ಹಲವು ಪದರುಗಳಾಗುವಂತೆ ಲೇಪಿಸಲಾಗುತ್ತದೆ. ಈ ಪದರುಗಳೊಳಗಿಂದ ಮಣ್ಣಿನಲ್ಲಿರುವ ನೀರು (ಆರ್ದ್ರತೆಯು) ಮಾತ್ರ ಒಳ ಸೇರಬಹುದೇ ಹೊರತು, ಕರಗಿದ ಗೊಬ್ಬರದ ದ್ರಾವಣವು ಹೊರಬರಲಾರದು. ಹೆಚ್ಚು ನೀರು, ಲೇಪದೊಳಗೆ ಪ್ರವೇಶಿಸಿತೆಂದರೆ, ಒತ್ತಡವು ಅಧಿಕಗೊಂಡು ಒಂದು ನಿರ್ಧಿಷ್ಟ ಒತ್ತಡವನ್ನು ಮುಟ್ಟಿದೊಡನೆ ಲೇಪನವು ಭಗ್ನಗೊಳ್ಳುತ್ತದೆ ಹಾಗೂ ಗೊಬ್ಬರವು ಹೊರಬರುತ್ತದೆ. ಲೇಪನವನ್ನು ಮಾಡಲು ಬಳಸುವ ವಸ್ತು ಮತ್ತು ಲೇಪನದ ದಪ್ಪ ಇವುಗಳ ಮೇಲಿಂದ, ಗೊಬ್ಬರವು ಹೊರಬರಬೇಕಾದರೆ ವೇಗವನ್ನು ನಿಯಂತ್ರಿಸಬಹುದು.

ನೀರನ್ನು ಒಳಗೆ ಬಿಡುವ ಮತ್ತು ಗೊಬ್ಬರದ ದ್ರಾವಣವನ್ನು ಹೊರ ಬಿಡುವ ವಸ್ತುಗಳಿಂದ ಲೇಪನ : ಸಾರಜನಕ ಗೊಬ್ಬರದ ಪ್ರತಿ ಕಣವನ್ನು ಅಥವಾ ಕಣಗಳ ಗುಂಪನ್ನು ಪಾಲಿಥೀನ್‌ನಿಂದ ಲೇಪಿಸಲಾಗುತ್ತದೆ. ಆದರೆ, ಅಲ್ಲಲ್ಲಿ ಸಣ್ಣ ರಂಧ್ರಗಳಿರುವಂತೆ ನೋಡಿಕೊಳ್ಳಲಾಗುತ್ತದೆ. ಈ ರಂಧ್ರಗಳ ಮೂಲಕ ನೀರು ಒಳಗೆ ಪ್ರವೇಶಿಸುತ್ತದೆ. ಒಳಗೆ ಸೇರಿದ ನೀರಿನ ಪ್ರಮಾಣವು ಅಧಿಕಗೊಂಡಿತೆಂದರೆ ನೀರಿನಲ್ಲಿ ಕರಗಿದ ಗೊಬ್ಬರದ ದ್ರಾವಣವು ರಂಧ್ರದ ಮೂಲಕವೇ ಹೊರಬರುತ್ತದೆ. ರಂಧ್ರಗಳ ಸಂಖ್ಯೆ ಮತ್ತು ಅವುಗಳ ಆಕಾರದ ಮೇಲಿಂದ, ಹೊರಬರುವ ಗೊಬ್ಬರದ ವೇಗವನ್ನು ನಿಯಂತ್ರಿಸಬಹುದು.

ನೀರನ್ನು ಒಳಗೆ ಬಿಡದ, ಛಿದ್ರ ರಹಿತ ಲೇಪನ : ಲೇಪನವು , ನೀರನ್ನು ಒಳಗೆ ಪ್ರವೇಶಿಸಲು ತಡೆಯನ್ನೊಡುತ್ತದೆ. ಯೂರಿಯಾ ಹರಳಿನ ಸುತ್ತ ನಿರ್ಮಿಸಿದ ಗಂಧಕದ ಲೇಪನವು ಇದಕ್ಕೊಂದು ಉತ್ತಮ ಉದಾಹರಣೆಯೆನ್ನಬಹುದು. ಯೂರಿಯಾ ಗೊಬ್ಬರದ ತಯಾರಿಕೆಯಲ್ಲಿ, ಯೂರಿಯಾ ಕಣಗಳು ಗೋಪುರದಿಂದ ಕೆಳಗೆ ಬೀಳುತ್ತಿರುವಾಗ, ಕರಗಿಸಿದ ಗಂಧಕವನ್ನು ಕಣಗಳ ಮೇಲೆ ಸಿಂಪಡಿಸಲಾಗುತ್ತದೆ. ಈ ಲೇಪನದಲ್ಲಿ ಇರಬಹುದಾದ ಸಣ್ಣರಂಧ್ರ ಮತ್ತು ಬಿರುಕುಗಳನ್ನು ಮುಚ್ಚಬಲ್ಲ ಸೂಕ್ತ ದ್ರಾವಣವನ್ನು ಈ ಕಣಗಳ ಮೇಲೆ ನಂತರ ಸಿಂಪಡಿಸಲಾಗುತ್ತದೆ. ಇದರಿಂದ, ನೀರನ್ನು ಒಳಗೆ ಸೇರಲು ಬಿಡದ ಗಂಧಕದ ಲೇಪನವು ಯೂರಿಯಾ ಗೊಬ್ಬರದ ಪ್ರತಿ ಕಣದ ಸುತ್ತ ಸಿದ್ಧವಾಗುತ್ತದೆ.

ಗಂಧಕದ ಲೇಪನವುಳ್ಳ ಯೂರಿಯಾ ಗೊಬ್ಬರವನ್ನು ಮಣ್ಣಿಗೆ ಪೂರೈಸಿದ ನಂತರ ರಾಸಾಯನಿಕ ಕ್ರಿಯೆಯಿಂದ ಇಲ್ಲವೇ ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದ ಗಂದಕವು ಉತ್ಕರ್ಷಣೆಗೊಂಡು ಗಂಧಕದ ಆಕ್ಸೈಡ್ ನಿರ್ಮಾಣವಾಗುತ್ತದೆ. ಇದರಿಂದ ಗಂಧಕದ ಲೇಪನದಲ್ಲಿ ಅಲ್ಲಲ್ಲಿ ರಂದ್ರಗಳು ಕಾಣಿಸಿಕೊಳ್ಳುತ್ತವೆ. ಈ ರಂಧ್ರಗಳ ಮೂಲಕ ನೀರು ನಿಧಾನವಾಗಿ ಒಳ ಸೇರುವುದರಿಂದ ಎಲ್ಲ ಗೊಬ್ಬರವು ಒಂದೇ ಬಾರಿ ಹೊರಬರುವುದಿಲ್ಲ.

ಸಾಗಾಟದಲ್ಲಿ ಮತ್ತು ಮಣ್ಣಿಗೆ ಗೊಬ್ಬರವನ್ನು ಪೂರೈಸುವಾಗ ಘರ್ಷಣೆಯಿಂದ, ಗಂಧಕದ ಲೇಪನದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿಯೂ ನೀರು ಒಳಗೆ ಪ್ರವೇಶಿಸಿ ಒಳಗಿರುವ ಯೂರಿಯಾ ಗೊಬ್ಬರವು ಹೊರಗೆ ಬರುವಂತಾಗುತ್ತದೆ.

ಗಂಧಕವು ಒಂದು ಪೋಷಕವಾಗಿರುವುದರಿಂದ, ಇಂತಹ ಗೊಬ್ಬರದ ಬಳಕೆಯಿಂದ, ಬೆಳೆಗಳಿಗೆ ಅದರಲ್ಲಿಯೂ ಗಂಧಕದ ಬೇಡಿಕೆಯ ಅಧಿಕವಿರುವ ಬೆಳೆಗಳಿಗೆ ಹೆಚ್ಚು ಪ್ರಯೋಜನಕಾರಿ.

ಗಂಧಕದ ಬದಲು ಕರಗಿಸಿದ ಅರಗನ್ನು ಯೂರಿಯಾದ ಕಣಗಳ ಸುತ್ತ ಲೇಪಿಸಿಯೂ ಪ್ರಯೋಗಗಳನ್ನು ನಡೆಸಲಾಗಿದೆ.

v). ಇತರ ಹಲವು ಪ್ರಯತ್ನಗಳು: ಮೇಲೆ ವಿವರಿಸಿದ ವಿಧಾನಗಳಲ್ಲದೇ, ಯೂರಿಯಾ ಗೊಬ್ಬರದಲ್ಲಿಯ ಸಾರಜನಕವು, ನಿಧಾನವಾಗಿ ಬಿಡುಗಡೆಯಾಗುವಂತೆ ಮಾಡಲು ಇನ್ನೂ ಕೆಲವು ಪ್ರಯತ್ನಗಳು ನಡೆದವು.

 • ಮಣ್ಣಿನ ಉಂಡೆಗಳ ಮೂಲಕ : ಸುಮಾರು ೩ಸೆಂ.ಮೀ. ವ್ಯಾಸದ, ಮಣ್ಣಿನ ಉಂಡೆಗಳನ್ನು ತಯಾರಿಸಬೇಕು. ಹಸಿಯಿರುವಾಗಲೇ , ಪ್ರತಿ ಉಂಡೆಯನ್ನು ಹೆಬ್ಬೆರಳಿನಿಂದ ಒತ್ತಿ, ತಗ್ಗಿನಲ್ಲಿ ಕೆಲವು ಯೂರಿಯಾ ಕಣಗಳನ್ನು ಹಾಕಿ, ತಗ್ಗು ಮುಚ್ಚುವಂತೆ ಉಂಡೆಗಳನ್ನು ಕೈಯಿಂದ ಒತ್ತಬೇಕು. ಈ ವಿವರಗಳನ್ನು ಚಿತ್ರ ೧೦ರಲ್ಲಿ ಕಾಣಬಹುದು.

ಚಿತ್ರ ೧೦: ಮಣ್ಣಿನ ಉಂಡೆಯ ಮೂಲಕ ಯೂರಿಯಾದ ಪೂರೈಕೆ

ಈ ಉಂಡೆಗಳನ್ನು ನೆರಳಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು. ಬತ್ತಕ್ಕೆ ಮೇಲು ಗೊಬ್ಬರವನ್ನು ಪೂರೈಸುವಾಗ, ಉಂಡೆಯನ್ನು ಬತ್ತದ ಸಸಿಯ ಬುಡದಲ್ಲಿಟ್ಟು ಆದುಮಿದರೆ (ಒತ್ತಿದರೆ) ಅದು ಕೆಸರಿನಲ್ಲಿ ೫ – ೬ ಸೆಂ.ಮೀ. ಆಳಕ್ಕೆ ಹೋಗುತ್ತದೆ. ಈ ವಿಧಾನದಿಂದ ಯೂರಿಯಾ ಗೊಬ್ಬರವನ್ನು ಪೂರೈಸಿದರೆ ಬತ್ತದ ಇಳುವರಿಯು ಶೇಕಡಾ ೨೦ ರಿಂದ ೨೫ ರವರೆಗೆ ಅಧಿಕಗೊಂಡಿರುವುದು ಕಂಡುಬಂದಿದೆ. ಈ ಪದ್ದತಿಯು ಜಪಾನ್‌ ದೇಶದಲ್ಲಿ ಆರಂಭವಾಯಿತು.

ಮಣ್ಣಿನ ಉಂಡೆಯ ಬದಲು ಯೂರಿಯಾ ಕಣಗಳನ್ನು ಕಾಗದದ ಸಣ್ಣ ಚೂರಿನಲ್ಲಿ ಹಾಕಿ ಸರಿಯಾಗಿ ಮಡಚಿ, ಈ ಪುಡಿಕೆಗಳನ್ನು ಬತ್ತದ ಸಸಿಗಳ ಬುಡದಲ್ಲಿ ಮೇಲಿನಂತೆ ಪೂರೈಸಬಹುದು.

 • ಯೂರಿಯಾ ಗೋಲಿಗಳು : ಯೂರಿಯಾ ಗೊಬ್ಬರವನ್ನು ತಯಾರಿಸುವಾಗಲೇ ಸೂಕ್ತ ಬದಲಾವಣೆಯನ್ನು ಮಾಡಿ ವಿವಿಧ ತೂಕದ (ಸಾಮಾನ್ಯವಾಗಿ ೧ ರಿಂದ ೪ ಗ್ರಾಂ) ಗೋಲಿಗಳನ್ನು ಸಿದ್ಧಪಡಿಸಬಹುದು. ಮೇಲು ಗೊಬ್ಬರವನ್ನು ಕೊಡುವಾಗ ಗೋಲಿಯನ್ನು ಸಸಿಯ ಬುಡದಲ್ಲಿಟ್ಟು ಕಾಲಿನ ಹೆಬ್ಬೆರಳಿನಿಂದ ಒತ್ತಿ, ಇಚ್ಛಿತ ಆಳದಲ್ಲಿ ಯೂರಿಯಾ ಸೇರಿಸಿಕೊಳ್ಳುವಂತೆ ಮಾಡಬಹುದು. ಹೀಗೆ ಮಾಡುವುದರಿಂದ ಬೆಳಗೆ ಸಾರಜನಕದ ನಷ್ಟ ಕಡಿಮೆಯಾಗುವುದೆಂದೂ ಕಂಡುಬಂದಿದೆ.

ಸೂಕ್ಷ್ಮ ಜೀವಾಣುಗಳ ಚಟುವಟಿಕೆಯನ್ನು ನಿರ್ಬಂಧಿಸುವ ರಾಸಾಯನಿಕಗಳು : ಸಾರಜನಕವು ಅಮೋನಯಂ ರೂಪದಲ್ಲಿದ್ದರೆ ಮಣ್ಣಿನಲ್ಲಿರುವ ಅತಿ ಸೂಕ್ಷ್ಮ ಕಣಗಳ ಸುತ್ತ ಇರುವ ಋಣ ಚಾರ್ಜ್‌ಗಳು ಧನ ಅಯಾನ್‌ ಆಗಿರುವ ಅಮೋನಿಯಂಗಳನ್ನು ಹಿಡಿದಿಟ್ಟುಕೊಳ್ಳುತ್ತವೆಯೆಂದೂ ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದ ಅಮೋನಿಯಂ ಪರಿವರ್ತನೆಯನ್ನು ಹೊಂದಿ ನೈಟ್ರೇಟ್ ಮತ್ತು ನೈಟ್ರೇಟ್ ರೂಪಗಳನ್ನು ತಾಳಿದ ನಂತರ ಸಾರಜನಕವು ನಷ್ಟಗೊಳ್ಳುವ ಸಾಧ್ಯತೆಯು ಹೆಚ್ಚಾಗುವುದೆಂದು ಈಗಾಗಲೇ ವಿವರಿಸಿದೆ. ಆದ್ದರಿಂದ, ಅಮೋನಿಯಂ ಅಯಾನ್‌ಗಳನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುವ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಕೆಲವು ಸಮಯದವರೆಗೆ ತಡೆ ಹಿಡಿದರೆ ಸಾರಜನಕವನ್ನು ಮಣ್ಣಿನಲ್ಲಿ ಸುರಕ್ಷಿತವಾಗಿಟ್ಟಂತಾಗುತ್ತದೆ. ಈ ಕಾರ್ಯವನ್ನು ಮಾಡಬಲ್ಲ ಕೆಲವು ರಾಸಾಯನಿಕಗಳನ್ನು ಗುರುತಿಸಲಾಗಿದೆ.

ಇದರಂತೆಯೇ ಯೂರಿಯಾ ಗೊಬ್ಬರವನ್ನು ಅಮೋನಿಯಂ ರೂಪಕ್ಕೆ ಪರಿವರ್ತಿಸುವ ಯೂರಿಯೇಜ್ ಕಿಣ್ವದ ಕಾರ್ಯವನ್ನು ತಾತ್ಪೂರ್ತಿಕವಾಗಿ ಸ್ಥಗಿತಗೊಳಿಸಬಲ್ಲ ರಾಸಾಯನಿಕಗಳನ್ನೂ ಕಂಡುಹಿಡಿಯಲಾಗಿದೆ. ಇವುಗಳ ಬಗ್ಗೆ ಕೆಲವು ಪ್ರಮುಖ ವಿವರಗಳು ಕೆಳಗಿನಂತಿವೆ.

. ಅಮೋನಿಯಂ ನಿಂದ ನೈಟ್ರೇಟ್ ಆಗುವ ಕ್ರಿಯೆಗೆ ತಡೆ : ಅಮೋನಿಯಂ ರೂಪದ ಸಾರಜನಕವನ್ನೂ, ನೈಟ್ರೋಸೋಮೋನಾಸ್ ಎಂಬ ಬ್ಯಾಕ್ಟ್ರೀಯಾ ನೈಟ್ರೇಟ್ ರೂಪಕ್ಕೆ ಪರಿವರ್ತಿಸುತ್ತದೆ. ಈ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಪ್ರತಿಬಂಧಿಸಬಲ್ಲ ರಾಸಾಯನಿಕವನ್ನು ಬಳಸಬೇಕೆಂದಿದ್ದರೆ, ಆ ರಾಸಾಯನಿಕದಲ್ಲಿ ಕೆಳಗಿನ ಗುಣಧರ್ಮಗಳಿರಬೇಕು.

i) ಸಸ್ಯಗಳಿಗೆ, ಮಣ್ಣಿನಲ್ಲಿರುವ ಇತರೆ ಜೀವಿಗಳಿಗೆ, ಮನುಷ್ಯರಿಗೆ ಸಾಕು ಪ್ರಾಣಿಗಳಿಗೆ ಈ ರಾಸಾಯನಿಕವು ವಿಷಯಕಾರಿಯಾಗಿರಬಾರದು.

ii) ಈ ರಾಸಾಯನಿಕಗಳ ಅಮೋನಿಯಂ ರೂಪದ ಸಾರಜನಕವನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುವ ನೈಟ್ರೋ ಜೋಮೊನಾಸ್ ಬ್ಯಾಕ್ಟರಿಯಾಗಳ ಬೆಳವಣಿಗೆಗೆ ಮತ್ತು ಕಾರ್ಯ ಚಟುವಟಿಕೆಗಳನ್ನು ಮಾತ್ರ ಪ್ರತಿಬಂಧಿಸುವಂತಿರಬೇಕು.

iii) ನೈಟ್ರೇಟ್ ರೂಪದ ಸಾರಜನಕವನ್ನು ನೈಟ್ರೇಟ್ ರೂಪಕ್ಕೆ ಬದಲಿಸುವ ನೈಟ್ರೋಬ್ಯಾಕ್ಟರ್ ಗಳಿಗೆ ಈ ರಾಸಾಯನಿಕವು ಯಾವುದೇ ರೀತಿಯ ಅಪಾಯವನ್ನು ಉಂಟು ಮಾಡಬಾರದು.

iv) ಸಂಬಂಧಿಸಿದ ಸಾರಜನಕದ ಸಂಗಡವೇ ಈ ರಾಸಾಯನಿಕವು ಚಲಿಸುತ್ತಾ ಅಮೋನಿಯಂ ರೂಪದ ಸಾರಜನಕವು ನೈಟ್ರೇಟ್ ರೂಪಕ್ಕೆ ಪರಿವರ್ತನೆಯನ್ನು ಹೊಂದದಂತೆ ನೋಡಿಕೊಳ್ಳಬೇಕು.

v)  ಈ ರಾಸಾಯನಿಕವು ಕೆಲವು ತಿಂಗಳುಗಳವರೆಗೆ ಅಥವಾ ಕೆಲವು ವಾರಗಳವರೆಗಾದರೂ ಮಣ್ಣಿನಲ್ಲಿ ಸ್ಥಿರವಾಗಿದ್ದು, ತನ್ನ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು.

vi) ಮೇಲಿನ ಗುಣಧರ್ಮಗಳಲ್ಲದೇ ರಾಸಾಯನಿಕದ ಬೆಲೆಯು ಬಳಸುವವನ ಆಳವಿನಲ್ಲಿರಬೇಕು. ಹೀಗಾದರೆ ಮಾತ್ರ, ಈ ದ್ರವ್ಯವನ್ನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ತರಲು ಸಾಧ್ಯವಾದೀತು.

ಅಮೇರಿಕೆಯಸಂಯುಕ್ತ ಸಂಸ್ಥಾನಗಳ ಮತ್ತು ಜಪಾನ್‌ದೇಶದ ಕೆಲವು ಕಂಪನಿಗಳು ಮೇಲೆ ವರ್ಣಿಸಿದಂತಹ ರಾಸಾಯನಿಕಗಳನ್ನು ತಯಾರಿಸಲು ‘ಪೇಟೇಂಟ್’ ಪಡೆದುಕೊಂಡಿವೆ. ಈ ರಾಸಾಯನಿಕಗಳು ಪೈರಿಡೀನ್‌ಮತ್ತು ಪೈರೀಮಿಡೀನ್‌ಗುಂಪುಗಳಿಗೆ ಸೇರಿವೆ. ಕೆಳಗಿನ ರಾಸಾಯನಿಕ ದ್ರವ್ಯಗಳು ಹೆಚ್ಚು ಪ್ರಚಾರದಲ್ಲಿವೆ.

 • ಎನ್‌ಸರ್ವ್ : ಪೈರಿಡೀನ್‌ ಗುಂಪಿಗೆ ಸೇರಿದ ಈ ರಾಸಾಯನಿಕ ವಸ್ತುವಿನ ಹೆಸರು ೨ – ಕ್ಲೋರೋ – ೬ (ಟ್ರೈಕ್ಲೋರೋಮಿಥೈಲ್ ) ಫೆರಿಡೀನ್‌ ಎಂದಿದೆ. ಈ ದ್ರವ್ಯವು ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ತಯಾರಾಗುತ್ತದೆ.
 • .ಎಮ್ : ಈ ರಾಸಾಯನಿಕ ವಸ್ತುವಿ ಪೈರಿಮಿಡೀನ್‌ಗುಂಪಿಗೆ ಸೇರಿದೆ. (೨. ಅಮಿನೋ – ೪, ಕ್ಲೋರೋ – ೬ ಮೀಥೈಲ್ ಪೈರಿಮಿಡೀನ್) ಎಂಬುವುದು ಇದರ ರಾಸಾಯನಿಕ ಹೆಸರು. ಇದನ್ನು ಜಪಾನ್‌ದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮೇಲಿನವುಗಳಲ್ಲದೇ, ಇನ್ನೂ ಹಲವು ರಾಸಾಯನಿಕಗಳನ್ನು ಈ ಉದ್ದೇಶಕ್ಕಾಗಿ ಕಂಡುಹಿಡಿಯಲಾಗಿದೆ.

ಸಾರಜನಕ ಗೊಬ್ಬರದೊಡನೆ, ಮೇಲಿನ ರಾಸಾಯನಿಕಗಳನ್ನು ಕಡಮೆ ಪ್ರಮಾಣದಲ್ಲಿ ಮಿಶ್ರಮಾಡಿ, ಮಣ್ಣಿಗೆ ಸೇರಿಸಿದರೆ ಅಮೋನಿಯಂ ರೂಪದ ಸಾರಜನಕವು ಅದೇ ರೂಪದಲ್ಲಿ ಕೆಲವು ಸಮಯದವರೆಗೆ ಉಳಿದುಕೊಳ್ಳುವುದರಿಂದ ಸಾರಜನಕದ ನಷ್ಟವು ತಪ್ಪುತ್ತದೆ.

. ಯೂರಿಯಾದಿಂದ ಅಮೋನಿಯಂ ನಿರ್ಮಾಣಗೊಳ್ಳುವ ಕ್ರಿಯೆಗೆ ತಡೆ : ಮಣ್ಣಿಗೆ ಸೇರಿಸಿದ ನಂತರ ಯೂರಿಯಾ ಗೊಬ್ಬರವು ಅಮೋನಿಯಂ ರೂಪಕ್ಕೆ ಪರಿವರ್ತನೆಯನ್ನು ಹೊಂದದೆ, ಯೂರಿಯಾ ರೂಪದಲ್ಲಿಯೇ ಹೆಚ್ಚು ಸಮಯದವರೆಗೆ ಮಣ್ಣಿನಲ್ಲಿ ಇರುವಂತೆ ಮಾಡಬಲ್ಲ ಹಲವು ರಾಸಾಯನಿಕ ದ್ರವ್ಯಗಳನ್ನು ಪರೀಕ್ಷಿಸಿ ನೋಡಲಾಗಿದೆ. ಈ ಸಂಯುಕ್ತಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು.

i) ಬೆಳ್ಳಿ (Ag+), ಪಾದರಸ (Hg2+)ಮತ್ತು ತಾಮ್ರ (CU+2) ಈ ಧಾತುಗಳ ಅಯಾನ್‌ಗಳು ಯೂರಿಯೇಸ್‌ನ ಕಾರ್ಯವನ್ನು ಸ್ಥಗಿತಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿದುಬಂದಿದೆ.

ii) ಯೂರಿಯಾದ ರಚನೆಯನ್ನು ಹೋಳುವ ಥೈಯೋಯೂರಿಯಾ, ಮಿಥೈಲ್ ಯೂರಿಯಾ ಇತ್ಯಾದಿಗಳಿಗೂ ಯೂರಿಯೇಸ್ ಕಾರ್ಯವನ್ನು ನಿರ್ಭಂಧಿಸುವ ಶಕ್ತಿಯಿದೆ ಎಂದುಕಂಡುಬಂದಿದೆ.

iii) ಯೂರಿಯೇಸ್ ನಲ್ಲಿರುವ ನಿಕೆಲ್ ಅಣುವಿನೊಂದಿಗೆ ಪ್ರತಿಕ್ರಿಯೆಗೊಳ್ಳಬಲ್ಲ ಕೆಲವು ಸಂಯುಕ್ತಗಳು ಬೆಳಕಿಗೆ ಬಂದಿವೆ. ಉದಾಹರಣೆಗೆ, ಹೈಡ್ರೋಕ್ಸಾಮಿಕ್ ಆಮ್ಲಗಳು ಯೂರಿಯೇಜ್‌ನ ಕಾರ್ಯವನ್ನು ತಡೆಬಲ್ಲವು.

ಕಡಮೆ ಪ್ರಮಾಣದಲ್ಲಿ ಬಳಸಿದಾಗಲೂ, ಪರಿಣಾಮಕಾರಿಯಾಗಬಲ್ಲ, ಸಸ್ಯ ಮತ್ತು ಪ್ರಾಣಿಗಳಿಗೆ ಅಪಾಯವನ್ನುಂಟು ಮಾಡದ, ಕಡಮೆ ಖರ್ಚಿನ, ಯೂರಿಯಾ ಗೊಬ್ಬರದೊಡನೆ ಹೊಂದಿಕೊಳ್ಳಬಲ್ಲ ಮತ್ತು ಯೂರಿಯಾದೊಡನೆ ಎಲ್ಲೆಡೆ ಚಲಿಸುವ ಸ್ವಭಾವವಿರುವ ಅಪೇಕ್ಷಣೀಯ ಗುಣಧರ್ಮಗಳು ಮೇಲೆ ತಿಳಿಸಿದ ರಾಸಾಯನಿಕ ದ್ರವ್ಯಗಳಲ್ಲಿ ಕಂಡುಬರುತ್ತಿಲ್ಲ. ಆದ್ದರಿಂದ, ಯೂರಿಯೇಸ್ ನ ಕಾರ್ಯವನ್ನು ಸ್ಥಗಿತಗೊಳಿಸುವಲ್ಲಿ ಇವುಗಳಿಂದ ಹೆಚ್ಚಿನ ಪ್ರಯೋಜನವನ್ನು ಈಗಿನ ಸ್ಥಿತಿಯಲ್ಲಂತೂ ನಿರೀಕ್ಷಿಸುವಂತಿಲ್ಲ. ಇವುಗಳ ಬದಲು, ಯೂರಿಯಾ ಗೋಲಿಗಳನ್ನು ಬಳಸಿ ಅಥವಾ ಯೂರಿಯಾ ಗೊಬ್ಬರವನ್ನು ಮಣ್ಣಿಗೆ ಪೂರೈಸುವ ವಿಧಾನಗಳಲ್ಲಿ ಸೂಕ್ತ ಬದಲಾವಣೆ ಗಳನ್ನು ಮಾಡಿಕೊಂಡು ಈ ಗೊಬ್ಬರದ ಬಳಕೆಯು ಹೆಚ್ಚು ಸಮರ್ಥವಾಗುವಂತೆ ನೋಡಿಕೊಳ್ಳುವುದು ಉತ್ತಮವೆನ್ನಬಹುದು.

. ಯೂರಿಯಾ ಗೊಬ್ಬರಕ್ಕೆ ಬೇವಿನ ಹಿಂಡಿಯ ಪುಡಿಯ ಲೇಪನ : ಬೇವಿನ ಹಿಂಡಿ, ಹಿಪ್ಪೆ (ಇಪ್ಪೆ) ಹಿಂಡಿ, ಮುಂತಾದ ಹಿಂಡಿಗಳನ್ನು ಸಾಕು ಪ್ರಾಣಿಗಳಿಗೆ ಆಹಾರವಾಗಿ ಬಳಸಲು ಬರುವುದಿಲ್ಲ. ಅವುಗಳಲ್ಲಿರುವ ಕೆಲವು ರಾಸಾಯನಿಕಗಳು ಮಣ್ಣಿನಲ್ಲಿರುವ ಕೆಲವು ಸೂಕ್ಷ್ಮ ಜೀವಿಗಳ ಕಾರ್ಯವನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗೊತ್ತಾಗಿದೆ. ಹಿಂಡಿಯನ್ನು ಜಿನುಗು ಪುಡಿ ಮಾಡಿ ಯೂರಿಯಾ ಕಣಗಳ ಸುತ್ತ ಲೇಪಿಸಿದರೆ, ಸಾರಜನಕದ ನಷ್ಟವು ಕಡಮೆಯಾಗಿ ಬೆಳೆಯ ಇಳುವರಿಯೂ ಸಹ ಅಧಿಕಗೊಳ್ಳುತ್ತದೆಯೆಂದು ಕಂಡುಬಂದಿದೆ.

ಬತ್ತಕ್ಕೆ ಮೇಲು ಗೊಬ್ಬರವನ್ನು ಕೊಡುವಾಗ ಯೂರಿಯಾ ಹಳಕುಗಳನ್ನು ಬೇವಿನ ಹಿಂಡಿಯ ಪುಡಿಯೊಂದಿಗೆ ಬೆರೆಸಿ ಲೇಪಿಸಬಹುದು: ಪ್ರತಿ ೧೦೦ ಕಿಗ್ರಾಂ. ಯೂರಿಯಾ ಗೊಬ್ಬರಕ್ಕೆ ೩೦ ಕಿ.ಗ್ರಾಂ. ಅತಿ ಜಿನುಗು ಪುಡಿ ಮಾಡಿದ ಬೇವಿನ ಹಿಂಡಿ, ಒಂದು ಕಿ.ಗ್ರಾಂ. ಡಾಂಬರು ಮತ್ತು ೨ ಲೀಟರ್ ಗಳ ಸೀಮೆ ಎಣ್ಣೆಯನ್ನು ಸೇರಿಸಿ ಸರಿಯಾಗಿ ಮಿಶ್ರಮಾಡಬೇಕು. ತಿರುಗುವ ಪೀಪಾಯಿ (ಡ್ರಮ್) ಅಥವಾ ಇತರೆ ಸೂಕ್ತ ಸಾಧನಗಳನ್ನು ಈ ಕೆಲಸಕ್ಕೆ ಬಳಸಬಹುದು. ಡಾಂಬರನ್ನು ಸೀಮೆ ಎಣ್ಣೆಯಲ್ಲಿ ಕರಗಿಸಿ ಸಿದ್ಧವಾದ ದ್ರಾವಣವನ್ನು ಮೊದಲು ಯೂರಿಯಾ ಹಳಕುಗಳ ಮೇಲೆ ಲೇಪಿಸಿ, ನಂತರ ಬೇವಿನ ಹಿಂಡಿಯ ಪುಡಿಯನ್ನು ಲೇಪಿಸಿದರೆ, ಲೇಪನವು ಹೆಚ್ಚು ಪರಿಣಾಮಕಾರಿಯಾಗುತ್ತದೆ.

ರಂಜಕವನ್ನುಪೂರೈಸುವರಾಸಾಯನಿಕಗೊಬ್ಬರಗಳು

ಸಸ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಕಾಗುವ ಪೋಷಕಗಳಲ್ಲಿ ರಂಜಕವು ಒಂದು. ಬೇಳೆ ಕಾಳು ವರ್ಗಕ್ಕೆ ಸೇರಿದ ಬೆಳೆಗಳಿಗೆ ಉಳಿದ ಬೆಳೆಗಳಿಗಿಂತ ತುಲನಾತ್ಮಕವಾಗಿ ಹಚ್ಚು ರಂಜಕವನ್ನು ಒದಗಿಸಬೇಕಾಗುತ್ತದೆ.

ಮಣ್ಣಿನಲ್ಲಿರುವ ರಂಜಕದ ಪ್ರಮಾಣ : ಸಾರಜನಕ ಮತ್ತು ಪೋಟ್ಯಾಶಿಯಂ ಪೋಷಕಾಂಶಗಳಿಗೆ ತುಲನೆ ಮಾಡಿದರೆ ಮಣ್ಣಿನಲ್ಲಿ ರಂಜಕದ ಪ್ರಮಾಣವು ಕಡಮೆ. ಮೇಲ್ಮಣ್ಣಿನಲ್ಲಿರಂಜಕವು ಶೇಕಡಾ ೦.೧ ರಷ್ಟಿದೆಯೆಂದು ಅಂದಾಜು ಮಾಡಲಾಗಿದೆ. ರಂಜಕವು ಮಣ್ಣಿನಲ್ಲಿ ಸಾವಯವ ಮತ್ತು ನಿರವಯವ ಎಂಬ ಎರಡು ರೂಪಗಳಲ್ಲಿ ಕಂಡುಬರುತ್ತದೆ.

i) ಸಾವಯವ ರೂಪದ ರಂಜಕ : ಮಣ್ಣಿನಲ್ಲಿರುವ ಒಟ್ಟು ರಂಜಕದ ಸುಮಾರು ಶೇಕಡಾ ೦.೨ ರಷ್ಟು ರಂಜಕವು ಸಾವಯವ ರೂಪದಲ್ಲಿದೆ ಎಂದು ಅಂದಾಜು ಮಾಡಲಾಗಿದೆ. ಅಲ್ಪಪ್ರಮಾಣದಲ್ಲಿರುವ ಈ ಸಾವಯವ ರಂಜಕದ ಶೇಕಡ ೨ ರಷ್ಟು ನ್ಯೂಕ್ಲಿಯಸ್ ಆಮ್ಲದಲ್ಲಿ, ಶೇಕಡಾ ೧ ರಷ್ಟು ಫಾಸ್ಪೋಲಿಫೈಡ್ ರೂಪದಲ್ಲಿ ಮತ್ತು ಶೇಕಡಾ ೩೫ ರಷ್ಟು ರಂಜಕವು ಇನೋಸಿಟಾಲ್ ಪಾಸ್ಪೆಟ್ ರೂಪದಲ್ಲಿದೆಯಾದರೆ ಉಳಿದ ಶೇಕಡಾ ೬೨ ರಷ್ಟು ಸಾವಯವ ಫಾಸ್ಫೇಟಿನ ಖಚಿತ ರೂಪವು ಸ್ಪಷ್ಟವಾಗಿ ತಿಳಿದಿಲ್ಲ.

ii) ನಿರವಯವ ರೂಪದ ರಂಜಕ : ಅಗ್ನಿ ಶಿಲೆಯಲ್ಲಿರುವ ಅಪೆಟೈಟ್ ಎಂಬ ಖನಿಜವು ನಿರವಯವ ರೂಪದ ರಂಜಕದ ಪ್ರಮುಖ ಮೂಲವೆನ್ನಬಹುದು. ಈ ಖನಿಜದ ಮರಳಿನ ಮತ್ತು ರೇವೆಯ ಆಕಾರದ ಕಣಗಳು ಮಣ್ಣಿನಲ್ಲಿ ಕಂಡುಬರುತ್ತವೆ. ಇದಲ್ಲದೇ ಕಬ್ಬಿಣ, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಫ್ಲೋರಿನ್‌ ಮತ್ತು ಇತರೆ ಕೆಲವು ಧಾತುಗಳೊಡನೆ ಸಂಯೋಜನೆಗೊಂಡ ರಂಜಕವು ಮಣ್ಣಿನಲ್ಲಿ ಕಾಣಸಿಗುತ್ತದೆ. ಇವುಗಳಲ್ಲಿ ಕೆಲವು ಸಂಯುಕ್ತಗಳು, ನೀರಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಕರಗುತ್ತವೆಯಾದರೆ ಉಳಿದವು ನೀರಿನಲ್ಲಿ ಸ್ವಲ್ಪವು ಕರಗುವುದಿಲ್ಲ. ಒಟ್ಟಿನಲ್ಲಿ ನಿರಯವ ರೂಪದ ರಂಜಕವೇ ಮಣ್ಣಿನಲ್ಲಿಬಹು ದೊಡ್ಡ ಪ್ರಮಾಣದಲ್ಲಿದೆ.

ವಿವಿಧ ರಂಜಕ ಗೊಬ್ಬರಗಳು : ಕೆಲವು ರಾಸಾಯನಿಕ ಗೊಬ್ಬರಗಳಲ್ಲಿರುವ ರಂಜಕವು ನೀರಿನಲ್ಲಿ ಸುಲಭವಾಗಿ ಕರಗಿದರೆ, ಇನ್ನು ಕೆಲವು ಗೊಬ್ಬರಗಳಲ್ಲಿರುವ ರಂಜಕವು ನೀರಿನಲ್ಲಿ ಕರಗುವುದಿಲ್ಲ. ಇದೊಂದನ್ನೇ ಆಧಾರವಾಗಿಟ್ಟುಕೊಂಡು, ಯಾವುದೊಂದು ರಂಜಕ ಗೊಬ್ಬರದೊಳಗಿನ ರಂಜಕವು ಬೆಳೆಗಳಿಗೆ ದೊರೆಯುತ್ತದೆಯೇ ಅಥವಾ ಇಲ್ಲ ಎಂಬುವುದನ್ನು ನಿರ್ಧರಿಸುವುದು ಸರಿಯೆನಿಸಲಾರದು. ಸಸ್ಯಗಳಿಗೆ, ವಿವಿಧ ಪ್ರಕಾರದ ರಂಜಕ ಗೊಬ್ಬರಗಳನ್ನು ಪೂರೈಸಿ, ಯಾವ ಗೊಬ್ಬರದಿಂದ ಎಷ್ಟು ರಂಜಕವನ್ನು ಪಡೆದುಕೊಂಡಿತ್ತೆಂಬುವುದನ್ನು ವಿಶ್ಲೇಷಿಸಿ ನೋಡುವುದು ಸರಿಯಾದ ವಿಧಾನವಾದೀತು. ಆದರೆ, ಈ ಕ್ರಮವು ಶ್ರಮದಾಯಕವಷ್ಟೇ ಅಲ್ಲ, ಈ ಕಾರ್ಯಕ್ಕೆ ಅಧಿಕ ಸಮಯವೂ ಬೇಕು. ಆದ್ದರಿಂದ, ಶೀಘ್ರವಾಗಿ ಗೊಬ್ಬರದಲ್ಲಿರುವ ರಂಜಕದ ಲಭ್ಯತೆಯನ್ನು ತಿಳಿಯಬಲ್ಲ ರಾಸಾಯನಿಕ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪದ್ಧತಿಯ ವಿವರಗಳು ಕೆಳಗಿನಂತಿವೆ.

i) ಒಟ್ಟು ರಂಜಕ : ಒಟ್ಟು ರಂಜಕವನ್ನು ಗೊತ್ತುಪಡಿಸಬೇಕೆಂದಿರುವ ಗೊಬ್ಬರದ ನಿರ್ಧಿಷ್ಟ ಪ್ರಮಾಣವನ್ನು ಸಬಲ ಆಮ್ಲದಲ್ಲಿ ಕರಗಿಸಿ ಸೂಕ್ತ ಪದ್ಧತಿಯನ್ನು ಅನುಸರಿಸಿ ಅದರಲ್ಲಿರುವ ರಂಜಕವನ್ನು ಕಂಡುಹಿಡಿಯಬೇಕು.

ii) ನೀರಿನಲ್ಲಿ ಕರಗುವ ರಂಜಕ : ಸಂಬಂಧಿಸಿದ ಗೊಬ್ಬರದ ನಿರ್ಧಿಷ್ಟ ಪ್ರಮಾಣವನ್ನು ತೂಕ ಮಾಡಿ, ಆಳತೆ ಮಾಡಿದ ಪರಿಶುದ್ಧವಾದ ನೀರನ್ನು ಗಾಜಿನ ಪಾತ್ರೆಗೆ ಸುರಿದು, ಚೆನ್ನಾಗಿ ಮಿಶ್ರಮಾಡಿ ಸೋಸಬೇಕು. ಸೋಸು ಕಾಗದದ ಮುಖಾಂತರ ಕೆಳಗಿಳಿದು ಬಂದ ದ್ರಾವಣದಲ್ಲಿರುವ ರಂಜಕವನ್ನು ಕಂಡುಹಿಡಿಯಬೇಕು. ಇದೇ ನೀರಿನಲ್ಲಿ ಕರಗುವ ರಂಜಕ.

iii) ಸಿಟ್ರೇಟಿನಲ್ಲಿ ಕರಗುವ ರಂಜಕ : ಮೇಲೆ (ii)ರಲ್ಲಿ ಸೂಚಿಸಿದಂತೆ ಸೋಸು ಕಾಗದದ ಮೇಲೆ ಉಳಿದುಕೊಂಡಿರುವ ಗೊಬ್ಬರದ ಅಂಶವನ್ನು ಅಮೋನಿಯಂ ಸಿಟ್ರೇಟ್ ದ್ರಾವಣದಲ್ಲಿ ಹಾಕಿ, ನಿರ್ಧಿಷ್ಟ ಸಮಯದವರೆಗೆ ಅಲುಗಾಡಿಸಿ ಸೋಸಬೇಕು. ಸೋಸು ಕಾಗದದ ಮೂಲಕ ಕೆಳಗಿಳಿದು ಬಂದ ದ್ರಾವಣದಲ್ಲಿರುವ ರಂಜಕದ ಪ್ರಮಾಣವನ್ನು ಗೊತ್ತುಪಡಿಸಬೇಕು. ಇದೇ ಸಿಟ್ರೇಟ್ನಲ್ಲಿ ಕರಗುವ ರಂಜಕ.

iv) ಸಿಟ್ರೇಟಿನಲ್ಲಿ ಕರಗದ ರಂಜಕ : ಮೇಲೆ (iii)ರಲ್ಲಿ ಸೋಸು ಕಾಗದದ ಮೇಲೆ ಉಳಿದಿರುವ ದ್ರವ್ಯವನ್ನು ಸಬಲ ಆಮ್ಲದಲ್ಲಿ ಕರಗಿಸಿ, ಅದರಲ್ಲಿರುವ ರಂಜಕವನ್ನು ನಿರ್ಧರಿಸಬೇಕು. ರಂಜಕದ ಈ ಭಾಗಕ್ಕೆ ಸಿಟ್ರೇಟ್ನಲ್ಲಿ ಕರಗದ ರಂಜಕವೆಂದು ಹೆಸರು. ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಬೇಕು.

 • ನೀರನಲ್ಲಿ ಕರಗುವ ರಂಜಕ (ii) + ಸಿಟ್ರೇಟಿನಲ್ಲಿ ಕರಗುವ ರಂಜಕ (iii) = ಸಸ್ಯಗಳಿಗೆ ಲಭ್ಯವಾಗುವ ರಂಜಕ
 • ನೀರಿನಲ್ಲಿ ಕರಗುವ ರಂಜಕ (ii) + ಸಿಟ್ರೀಟಿನಲ್ಲಿ ಕರಗುವ ರಂಜಕ (iii) + ಸಿಟ್ರೇಟಿನಲ್ಲಿ ಕರಗದ ರಂಜಕ (iv) = ಒಟ್ಟು ರಂಜಕ (i)

ಸೂಚನೆ : ರಂಜಕದ ಪ್ರಮಾಣವನ್ನು ಶೇಕಡಾವಾರು ರಂಜಕವೆಂದು ಲೆಕ್ಕ ಮಾಡಬೇಕು. ಮೇಲಿನ ವಿವರಗಳ ಆಧಾರದ ಮೇಲಿಂದ, ರಂಜಕದ ಗೊಬ್ಬರಗಳನ್ನು ಮುಂದಿನಂತೆ ವರ್ಗಿಕರಿಸಬಹುದು.

. ನೀರಿನಲ್ಲಿ ಕರಗುವ ರಂಜಕವಿರುವ ಗೊಬ್ಬರಗಳು : ಸಿಂಗಲ್ ಸೂಪರ ಫಾಸ್ಪೇಟ್, ಟ್ರಿಪಲ್ ಸೂಪರ ಫಾಸ್ಫೇಟ್, ಮೋನೋ ಅಮೋನಿಯಂ ಫಾಸ್ಪೇಟ್, ಡೈ ಅಮೋನಿಯಂ ಫಾಸ್ಪೇಟ್.

. ಸಿಟ್ರೇಟಿನಲ್ಲಿ ಕರಗುವ ರಂಜಕವಿರುವ ಗೊಬ್ಬರಗಳು : ಬೇಸಿಕ್ ಸ್ಲ್ಯಾಗ್, ಡೈ ಕ್ಯಾಲ್ಸಿಯಂ ಫಾಸ್ಪೇಟ್, ರಿನ್ಹಾನಿಯಾ ಫಾಸ್ಫೇಟ್.

) ನೀರು ಮತ್ತು ಸಿಟ್ರೇಟಿನಲ್ಲಿ ಕರಗದ ರಂಜಕವಿರುವ ಗೊಬ್ಬರಗಳು :ರಂಜಕವನ್ನು ಪೂರೈಸಬಲ್ಲ ರಾಸಾಯನಿಕ ಗೊಬ್ಬರಗಳನ್ನು ಕೆಳಗೆ ತಿಳಿಸಿದಂತೆ ಇನ್ನೊಂದು ರೀತಿಯಲ್ಲಿಯೂ ವರ್ಗೀಕರಿಸಬಹುದು.

 • ಆಮ್ಲದ ಸಹಾಯದಿಂದ ಸಿದ್ಧವಾದ ರಂಜಕ ಗೊಬ್ಬರಗಳು, ಈ ವಿಧಾನದಿಂದ ಸಿದ್ಧವಾದ ರಂಜಕ ಗೊಬ್ಬರಗಳೇ ಹೆಚ್ಚು ಬಳಕೆಯಲ್ಲಿವೆ.
 • ಉಷ್ಣತಎಯ ಸಹಾಯದಿಂದ ನಿರ್ಮಾಣಗೊಂಡ ರಂಜಕ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳಲ್ಲಿರುವ ರಂಜಕವನ್ನು ಎರಡು ರೀತಿ ವ್ಯಕ್ತಪಡಿಸಬಹುದು.

 • ಮೂಲಧಾತುವಿನ ರೂಪದಲ್ಲಿ ರಂಜಕ (P) ಎಂದು ವ್ಯಕ್ತಪಡಿಸುವ ಬಗೆ. ಈ ರೀತಿಯಲ್ಲಿಯೇ ವ್ಯಕ್ತಪಡಿಸಬೇಕೆಂದು ಹಲವು ದಶಕಗಳ ಹಿಂದೆಯೇ ನಿರ್ಧಾರವಾಗಿದ್ದರೂ ಈ ವಿಧಾನವು ವ್ಯಾಪಕವಾಗಿ ಬಳಕೆಯಲ್ಲಿಲ್ಲ.
 • ರಂಜಕದ ಪೆಂಟಾಕ್ಸೈಡ್ (P2O5)ರೂಪದಲ್ಲಿ ರಂಜಕವನ್ನು ವ್ಯಕ್ತಪಡಿಸುವುದು ರಂಜಕದ ಮೂಲ ದ್ರವ್ಯಕ್ಕೂ ರಂಜಕದ ಪೆಂಟಾಕ್ಸೈಡ್ ಗೂ ನಿರ್ಧಿಷ್ಟವಾದ ರಾಸಾಯನಿಕ ಸಂಬಂಧವಿದೆಯಾದರಿಂದ, ಈ ಪೋಷಕದ ಪ್ರಮಾಣವನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಬಹುದು.

ರಂಜಕದ ಪೆಂಟಾಕ್ಸೈಡ್ x ೦.೪೪ = ರಂಜಕ (P2O2 x ೦.೪೪ = P)ಅದರಂತಯೇ, ರಂಜಕ x ೨.೨೯ = ರಂಜಕದ ಪೆಂಟಾಕ್ಸೈಡ (P x ೨.೨೯ = P2O5)

 • ರಂಜಕದ ಪೆಂಟಾಕ್ಸೈಡ್ (P2O5)ನ್ನು ರಂಜಕಾಮ್ಲ ಎಂದು ಕರೆಯುವ ಪದ್ಧತಿಯು ಎಲ್ಲೆ ರೂಢಿಯಲ್ಲಿದೆ. ರಂಜಕಾಮ್ಲ (H3PO4)ಎಂದರೆ ರಂಜಕದ ಪೆಂಟಾಕ್ಸೈಡ್ ಅಲ್ಲ. ಆದರೆ, ಈ ಪದವೇ ರೂಢಿಯಲ್ಲಿರುವುದರಿಂದ ಈ ಪುಸ್ತಕದಲ್ಲಿ ರಂಜಕದ ಪೆಂಟಾಕ್ಸೈಡ್ (P2O5) ಅನ್ನು ರಂಜಕಾಮ್ಲ ಎಂದು ಕರೆಯಲಾಗಿದೆ. ಓದುಗರು ಇದನ್ನುಗಮನಿಸಬೇಕು.

ರಂಜಕವನ್ನು ಪೂರೈಸುವ ಪ್ರಮುಖ ರಾಸಾಯನಿಕ ಗೊಬ್ಬರಗಳು ಈ ಕೆಳಗಿನಂತಿವೆ:

i) ರಂಜಕಾಮ್ಲ (H2PO4): ರಂಜಕಾಮ್ಲವನ್ನು ಮುಂದೆ ತಿಳಿಸಿದ ಎರಡು ವಿಧಾನಗಳಿಂದ ತಯಾರಿಸಬಹುದು.

ಅ) ರಂಜಕದ ಶಿಲೆಗೆ ಗಂಧಕಾಮ್ಲವನ್ನು ಹಾಕಿ ರಂಜಕಾಮ್ಲವನ್ನು ತಯಾರಿಸಬಹುದು. ಈ ವಿಧಾನಕ್ಕೆ ಆರ್ದ್ರ ಪದ್ಧತಿಯೆಂದೂ ಈ ರೀತಿ ಸಿದ್ಧವಾದ ಆಮ್ಲಕ್ಕೆ ಹಸುರು ರಂಜಕಾಮ್ಲವೆಂದೂ ಕರೆಯುವುದು ರೂಢಿ.

ಆ) ಮೂಲ ಧಾತುವಿನ ರೂಪದಲ್ಲಿರುವ ರಂಜಕವನ್ನು ದಹಿಸಿದರೆ, ರಂಜಕದ ಪೆಂಟಾಕ್ಸೈಡ್ ದೊರೆಯುತ್ತದೆ. ಇದನ್ನು ನೀರಿನಲ್ಲಿ ಮಿಶ್ರಮಾಡಿದರೆ ರಂಜಕಾಮ್ಲವು ದೊರೆಯುತ್ತದೆ. ಈ ರಿತಿಯಿಂದ ತಯಾರಿಸಿದ ಆಮ್ಲಕ್ಕೆ ಬಿಳಿ ರಂಜಕಾಮ್ಲ ಎಂಬ ಹೆಸರಿದೆ. ಇದು ಹಸುರು ರಂಜಕಾಮ್ಲಕ್ಕಿಂತ ಹೆಚ್ಚು ಶುದ್ಧವಾಗಿರುತ್ತದೆ.

ರಂಜಕಾಮ್ಲವನ್ನು, ನೇರವಾಗಿ ರಂಜಕವನ್ನು ಪೂರೈಸುವ ಗೊಬ್ಬರವಾಗಿ ಬಳಸಬಹುದು. ಆದರೆ, ಇದನ್ನು ಮಣ್ಣಿನೊಳಗೆ ಸೇರಿಸಲು ವಿಶಿಷ್ಟ ರೀತಿಯ ಸಾಧನವು ಬೇಕಾಗುತ್ತದೆ. ಇತರೆ ಕೆಲವು ರಂಜಕದ ಗೊಬ್ಬರಗಳನ್ನು ತಯಾರಿಸಲು ಸಾಮಾನ್ಯವಾಗಿ ರಂಜಕಾಮ್ಲವನ್ನು ಬಳಸಲಾಗುತ್ತದೆ.

ii) ಸೂಪರ್ ರಂಜಕಾಮ್ಲ : ರಂಜಕಾಮ್ಲದಲ್ಲಿರುವ ನೀರು, ಆವಿಯಾಗಿ ಹೊರ ಹೊಗುವಂತೆ ಮಾಡುವುದರಿಂದ, ಸೂಪರ್ ರಂಜಕಾಮ್ಲವು ನಿರ್ಮಾಣಗೊಳ್ಳುತ್ತದೆ. ಇದರಲ್ಲಿ , ರಂಜಕಾಮ್ಲವಲ್ಲದೇಒಟ್ಟು ಟ್ರೈಪಾಲೀ ಪೋಸ್ಪೇಟ್ ಗಳು ಇರುತ್ತವೆ. ಬಿಳಿಯ ರಂಜಕಾಮ್ಲವನ್ನು ಬಳಸಿ ತಯಾರಿಸಿದ ಸೂಪರ ರಂಜಕಾಮ್ಲದಲ್ಲಿ ೭೬ ರಿಂದ ೮೦ ರಷ್ಟು ರಂಜಕದ ಪೆಂಟಾಕ್ಸೈಡ್ ಇರುತ್ತದೆಯಾದರೂ, ಹಸುರು ರಂಜಕವನ್ನು ಬಳಸಿ ಸಿದ್ಧಪಡಿಸಿದ ಸೂಪರ ರಂಜಕಾಮ್ಲದಲ್ಲಿ, ಅತಿಹೆಚಚೆಂದರೆ ಶೇಕಡಾ ೭೨ ರ‍ಷ್ಟು ರಂಜಕದ ಪೆಂಟಾಕ್ಸೈಡ್ ಇರಬಹುದು.

ಅಮೋನಿಯಂ ಪಾಲಿಫಾಸ್ಪೇಟ್ ಮತ್ತು ಕ್ಯಾಲ್ಸಿಯಂ ಪಾಲಿಫಾಸ್ಪೇಟ್ ಗಳನ್ನು ತಯಾರಿಸಲು ಸೂಪರ ರಂಜಕಾಮ್ಲದ ಬಳಕೆಯಾಗುತ್ತದೆ.

iii) ಸಿಂಗಲ್ ಸೂಪರ ಫಾಸ್ಪೇಟ್ : ರಂಜಕವು ನೀರಿನಲ್ಲಿ ಕರಗುವ ರೂಪದಲ್ಲಿರುವ ರಂಜಕದ ಗೊಬ್ಬರವನ್ನು ೧೮೪ರಲ್ಲಿ ಲಾಯಿಸ ಎಂಬುವವರು ಇಂಗ್ಲೇಂಡಿನಲ್ಲಿ ಸಿದ್ಧಪಡಿಸಿ, ಅದಕ್ಕೆ ಸೂಪರ ಫಾಸ್ಪೇಟ್ ಎಂದು ಹೆಸರಿಟ್ಟರು. ಅನಂತದ ವರ್ಷಗಳಲ್ಲಿ, ಇದೊಂದು ಜನಪ್ರೀಯವಾದ ರಂಜಕ ಗೊಬ್ಬರವಾಗಿ ಪರಿಣಮಿಸಿತು. ಆದರೆ ಇತ್ತೀಚಿನ ದಿನಗಳಲ್ಲಿ, ಸೂಪರ್ ಫಾಸ್ಪೇಟ್ ಅಷ್ಟು ಪ್ರಚಲಿತವಿಲ್ಲ. ಅದರಲ್ಲಿ ಕಡಮೆ ಪ್ರಮಾಣದ (೧೬ ರಿಂದ ೧೮%) ರಂಜಕದ ಪೆಂಟಾಕ್ಸೈಡ್ ಇದೆಯಾದ್ದರಿಂದ ಈ ಗೊಬ್ಬರದ ಬೇಡಿಕೆಯು ಕಡಮೆಯಾಗಿದೆ.

ರಂಜಕದ ಶಿಲೆಯ ಪುಡಿಗೆ, ಗಂಧಕಾಮ್ಲವನ್ನುಸೇರಿಸಿ, ಯಂತ್ರಚಾಲಿತ ಸಾಧನದಲ್ಲಿ ಒಂದು ನಿಮಿಷದವರೆಗೆ ಮಿಶ್ರಮಾಡಿ, ಸುಮಾರು ೧೨ ಗಂಟೆಗಳ ಸಮಯ ಒಂದೆಡೆ ಇಡಲಾಗುತ್ತದೆ. ಆರಿದ ನಂತರ ವಿಶಾಲವಾದ ಸ್ಥಳದಲ್ಲಿ ಕೆಲವು ವಾರಗಳವರೆಗೆ ಮಾಗಲು (ಕಳಿಯಲು) ಇಟ್ಟು ನಂತರ ಪುಡಿ ಮಾಡಿ ಸಿಂಗಲ್ ಸೂಪರ್ ಫಾಸ್ಪೇಟ್ ಎಂದು ಬಳಸಬಹುದು.

ರಂಜಕ ಶಿಲೆ ಮತ್ತು ಗಂಧಕಾಮ್ಲಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯು ಎರಡು ಹಂತಗಳಲ್ಲಿ ಸಾಗುತ್ತದೆ. ಇದನ್ನು ಕ್ರೋಢೀಕರಿಸಿ ಮುಂದಿನಂತೆ ಬರೆಯಬಹುದು.

ರಂಜಕದ ಶಿಲೆ + ಗಂಧಕಾಮ್ಲ → ಮೋನೋ ಕ್ಯಾಲ್ಸಿಯಂ ಫಾಸ್ಪೇಟ್ + ಜಿಪ್ಸಂ

Ca(PO4)2 + 2H2SO4 → Ca (H2PO4 )2 H2O + 2 CaSO4 + 2H2O

ಸಮೀಕರಣದ ಬಲಗಡೆ ತೋರಿಸಿದ ಮೋನೋಕ್ಯಾಲ್ಸಿಯಂ ಫಾಸ್ಪೇಟ್ ಮತ್ತು ಜಿಪ್ಸಂ ಇವುಗಳ ಮಿಶ್ರಣವೇ ಸಿಂಗಲ್ ಸೂಪರ್ ಫಾಸ್ಪೇಟ್ ಎಂದುಬಳಸುವ ರಂಜಕ ಗೊಬ್ಬರ.

ಸಿಂಗಲ್ ಸೂಪರ್ ಫಾಸ್ಪೇಟ್ ಕಂದು ಮಿಶ್ರಿತ ನರೆ ಬಣ್ಣದ ಪುಡಿ. ಇದಕ್ಕೆ ಹುಳಿ ವಾಸನೆಯಿದ್ದು ಈ ಗೊಬ್ಬರದಲ್ಲಿ ಸಣ್ಣ ಪ್ರಮಾಣದ ಆಮ್ಲವು ಉಳಿದುಕೊಂಡಿರುವುದರಿಂದ ನೀಲಿ ಬಣ್ಣದ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸುತ್ತದೆ. ಸಿಂಗಲ್ ಸೂಪರ ಫಾಸ್ಪೇಟ್‌ನ್ನು ಗೋಣಿಯ ಚೀಲದಲ್ಲಿ ಸಂಗ್ರಹಿಸಿಟ್ಟರೆ ಕೆಲವು ದಿನಗಳಲ್ಲಿ ಗೋಣಿಯ ಚೀಲವು ಹರಿದು ಚೂರು ಚೂರು ಆಗುವುದರಿಂದ ಗೋಣಿಯ ಒಳ ಭಾಗದಲ್ಲಿ ಪ್ಲಾಸ್ಟಿಕ ಕಾಗದವನ್ನು ಅಂಟಿಸಿದ ಚೀಲದಲ್ಲಿ ಇಲ್ಲವೇನೈಲಾನ್‌ಚೀಲಗಳಲ್ಲಿ ಸಂಗ್ರಹಿಸುವುದು ಉತ್ತಮ.

ಸಿಂಗಲ್ ಸೂಪರ ಫಾಸ್ಫೇಟಿನಲ್ಲಿ ಶೇಕಡಾ ೧೬ ರಿಂದ ೧೮ ರಂಜಕದ ಪೆಂಟಾಕ್ಸೈಡ್ ಇದೆ. ಇದರಲ್ಲಿರುವ ಒಟ್ಟು ರಂಜಕದ ಸೂಪರ ೯೫ ರಷ್ಟು ನೀರಿನಲ್ಲಿ ಕರಗುವ ರೂಫದಲ್ಲಿ (ಮೋನೋಕ್ಯಾಲ್ಸಿಯಂ ಫಾಸ್ಪೇಟ್ ರೂಪದಲ್ಲಿ) ಇದೆ. ಉಳಿದ ರಂಜಕವು ಸಿಟ್ರೇಟಿನಲ್ಲಿ ಕರಗುತ್ತದೆ. ಆದ್ದರಿಂದ ಈ ಗೊಬ್ಬರದಲ್ಲಿರುವ ಎಲ್ಲ ರಂಜಕವೂ ಬೆಳೆಗೆ ಸುಲಭವಾಗಿ ದೊರೆಯಬಲ್ಲದು. ಸಿಂಗಲ್ ಸೂಪರ್ ಫಾಸ್ಪೇಟಿನಲ್ಲಿ, ಅದರ ತೂಕದ ಅರ್ಧದಷ್ಟು ಜಿಪ್ಸಂ ಇದೆ. ಆದ್ದರಿಂದ, ಈ ಗೊಬ್ಬರವು ಬೆಳೆಗಳಿಗೆ ಗಂಧಕವನ್ನು ಒದಗಸಿಬಲ್ಲದು.

ಸಿಂಗಲ್ ಸೂಪರ ಫಾಸ್ಪೇಟ್ ನ್ನು ಮಣ್ಣಿಗೆ ಪೂರೈಸಿದ ನಂತರ ನಡೆಯುವ ರಾಸಾಯನಿ ಕ್ರಿಯೆಯು, ಮಣ್ಣಿನ ಆಮ್ಲ, ಕ್ಷಾರ ನಿರ್ದೆಶಕವನ್ನು ಅವಲಂಬಿಸಿದೆ. ಇದರ ವಿವರಗಳು ಮುಂದಿನಂತಿವೆ.

 • ಆಮ್ಲ – ಕ್ಷಾರ ನಿರ್ದೆಶಕವು ೭ರ ಸಮೀಪದಲ್ಲಿದ್ದಾಗ
  ಮೋನೊಕ್ಯಾಲ್ಸಿಯಂ ಫಾಸ್ಫೇಟ್ + ಕ್ಯಾಲ್ಸಿಯಂ ಬೈ ಕಾರ್ಬೊನೇಟ್ → ಡೈಕ್ಯಾಲ್ಸಿಯಂ ಫಾಸ್ಫೇಟ್ + ಇಂಗಾಲಾಮ್ಲ
  Ca(H2PO4)2 + Ca(HCO3)2 → 2CaHPO4 + 2H2CO3
 • ಆಮ್ಲ – ಕ್ಷಾರ ನಿರ್ದೆಶಕವು ೮ ಅಥವಾ ಅದಕ್ಕಿಂತ ಅಧಿಕವಿದ್ದಾಗ
  ಮೋನೊಕ್ಯಾಲ್ಸಿಯಂ ಫಾಸ್ಪೇಟ್ + ಕ್ಯಾಲ್ಸಿಯಂ ಬೈ ಕಾರ್ಬೊನೇಟ್ → ಟ್ರೈಕ್ಸಾಲ್ಸಿಯಂ ಫಾಸ್ಪೇಟ್ + ಇಂಗಾಲಾಮ್ಲ
  Ca(H2OPO4)2 + 2a (HCO3)2 → Ca3 (PO)4 + 4H2CO3
 • ಆಮ್ಲ ಮಣ್ಣಿನಲ್ಲಿ 
  ಮೋನೊಕ್ಯಾಲ್ಸಿಯಂ ಫಾಸ್ಫೇಟ್ + ಕಬ್ಬಿಣದ ಆಕ್ಸೈಡ್ → ಕಬ್ಬಿಣದ ಫಾಸ್ಪೇಟ್ + ಡೈಕ್ಯಾಲ್ಸಿಯಂ + ನೀರು
  2Ca (H2PO4)2 + Fe2O3 → 2FePO4 + 2CaHPO4 + 3H2O

ಅಲ್ಯೂಮಿನಿಯಂ ಆಕ್ಸೈಡ್ ಸಂಗಡವೂ ಇದೇ ರೀತಿಯ ರಾಸಾಯನಿಕ ಕ್ರಿಯೆಯು ನಡೆಯುತ್ತದೆ. ಮೇಲಿನ ರಾಸಾಯನಿಕ ಕ್ರಿಯೆಗಳನ್ನು ಪರಿಶೀಲಿಸಿದಾಗ ಕೆಳಗಿನ ಸಂಗತಿಗಳು ಸ್ಪಷ್ಟವಾಗುತ್ತವೆ.

 • ಆಮ್ಲ ಮತ್ತು ಕ್ಷಾರ ಮಣ್ಣಿಗೆ ಸಿಂಗಲ್ ಸೂಫರ ಫಾಸ್ಪೆಟ್ ನ್ನು ಪೂರೈಸಿದರೆ ಆ ಗೊಬ್ಬರದಲ್ಲಿರುವ ನೀರಿನಲ್ಲಿ ಕರಗುವ ರಂಜಕವು, ನೀರಿನಲ್ಲಿ ಕರಗದ ರೂಪಕ್ಕೆ ಬದಲಾವಣೆ ಹೊಂದುವುದರಿಂದ ಇಂತಹ ಮಣ್ಣುಗಳಿಗೆ ಈ ಗೊಬ್ಬರವು ಅಷ್ಟು ಪ್ರಶಸ್ತವಲ್ಲ.
 • ಆಮ್ಲ – ಕ್ಷಾರ ನಿರ್ದೆಶಕವು ೭ರ ಸನಿಹದಲ್ಲಿರುವ ಮಣ್ಣಿಗೆ ಈ ಗೊಬ್ಬರವನ್ನು ಪೂರೈಸಿದಾಗ ರಂಜಕವು ಬೆಳೆಗಳಿಗೆ ದೊರೆಯುವ ರೂಪದಲ್ಲಿಯೇ ಹೆಚ್ಚು ಸಮಯದವರೆಗೆ ಉಳಿದುಕೊಳ್ಳುತ್ತದೆಯಾದ್ದರಿಂದ ಇಂತಹ ಮಣ್ಣುಗಳಿಗೆ ಈ ಗೊಬ್ಬರವು ಉತ್ತಮವೆನ್ನಬಹುದು.

iv) ಟ್ರೀಪಲ್ ಸೂಪರ ಫಾಸ್ಪೇಟ್ : ಗಂಧಕಾಮ್ಲದ ಬದಲು, ಫಾಸ್ಫಾರಿಕ್ ಆಮ್ಲವನ್ನು (ರಂಜಕಾಮ್ಲವನ್ನು) ರಂಜಕ ಶಿಲೆಯ ಪುಡಿಯೊಂದಿಗೆ ಮಿಶ್ರಮಾಡಿ, ಟ್ರಿಪಲ್ ಸೂಪರ ಫಾಸ್ಪೇಟನ್ನು ತಯಾರಿಸಲಾಗುತ್ತದೆ.

ಫ್ಲೋರ್ ಅಪೇಟೈಟ್ (ಪ್ಲೋರಿನ ಇರುವ ರಂಜಕ ಶಿಲೆ) + ರಂಜಕಾಮ್ಲ → ಮೋನೋ ಕ್ಯಾಲ್ಸಿಯಂ ಫಾಸ್ಫೇಟ್ + ಕ್ಯಾಲ್ಸಿಯಂ ಪ್ಲೋರೇಟ್

Ca10 F2 (PO4)6 + 12 H3 PO4 → 9Ca (H2PO4)2 + CaF2

ಟ್ರೀಪಲ್ ಸೂಪರ ಫಾಸ್ಪೇಟಿನಲ್ಲಿ ಶೆಕಡಾ ೪೫ ರಿಂದ ೪೭ರಂಜಕದ ಪೆಂಟಾಕ್ಸೈಡ್ ಮತ್ತು ಶೇಕಡಾ ೧೭ ರಿಂದ ೨೦ ಕ್ಯಾಲ್ಸಿಯಂ ಕಾರ್ಬೊನೇಟ್ ಇವೆ. ಗೊಬ್ಬರದಲ್ಲಿರುವ ಒಟ್ಟು ರಂಜಕದ ಶೇಕಡಾ ೯೫ ರಿಂದ ೯೮ರಷ್ಟು ನೀರಿನಲ್ಲಿ ಕರಗುವ ರೂಪದಲ್ಲಿದೆಯಲ್ಲದೇ, ಎಲ್ಲ ರಂಜಕವೂ ಬೆಳೆಗೆ ಲಭ್ಯವಾಗುವ ರೂಪದಲ್ಲಿದೆ.

ಸಿಂಗಲ್ ಸೂಪರ್ರ‍ ಫಾಸ್ಪೇಟಿನೊಡನೆ ತುಲನೆ ಮಾಡಿದಾಗ, ಟ್ರಿಪಲ್ ಸೂಪರ ಫಾಸ್ಪೇಟಿನಲ್ಲಿ, ರಂಜಕದ ಪ್ರಮಾಣವು ಸುಮಾರು ಮೂರು ಪಟ್ಟು ಅಧಿಕವಿರುವುದರಿಂದ, ಸಾಗಾಣಿಕೆಯ ಮತ್ತು ಸಂಗ್ರಹ ಖರ್ಚಿನಲ್ಲಿ ಗಣನೀಯ ಪ್ರಮಾಣದ ಉಳಿತಾಯವನ್ನು ಟ್ರೀಪಲ್ ಸೂಪರ ಫಾಸ್ಫೇಟಿನ ಬಳಕೆಯಿಂದ ಮಾಡಬಹುದು.

v) ಕೋಟ್ ಕಾ ಫಾಸ್ಪೇಟ್ : ಸಿಂಗಲ್ ಸೂಪರ್ ಫಾಸ್ಪೆಟ್ ನ್ನು ಸಿದ್ಧಪಡಿಸುವಾಗ ಉಪಯೋಗಿಸುವ ಅರ್ಧದಷ್ಟು ಗಂಧಕಾಮ್ಲವನ್ನು, ರಂಜಕ ಶಿಲೆಯ ಪುಡಿಯೊಂದಿಗೆ ಮಿಶ್ರಮಾಡಿದರೆ, ಕೋಟ್ ಕಾ ಫಾಸ್ಪೇಟ್ ಆಗುತ್ತದೆ. ಇದರೊಳಗಿರುವ ಒಟ್ಟು ರಂಜಕದ ಸುಮಾರು ೧/೩ ಭಾಗ ನೀರಿನಲ್ಲಿ ಕರಗುವ ರೂಪದಲ್ಲಿಯೂ ಉಳಿದ ೨/೩ ಭಾಗ ಸಿಟ್ರೇಟಿನಲ್ಲಿ ಕರಗುವ ರೂಫದಲ್ಲಿಯೂ ಇದೆ. ಕಬ್ಬಿನಂತರ ಕೆಲವು ಬೆಳೆಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ಕಂಡುಬಂದಿದೆ.

vi) ಅಮೋನಿಯಂ ಫಾಸ್ಪೇಟ್ : ಮೋನೋ ಅಮೋನಿಯಂ ಫಾಸ್ಪೇಟ್ ಮತ್ತು ಡೈ ಅಮೋನಿಯಂ ಫಾಸ್ಪೇಟ್ ಎಂಬ ಎರಡು ಬಗೆಯ ರಂಜಕ ಗೊಬ್ಬರಗಳನ್ನು ಸಿದ್ಧಪಡಿಸಲಾಗುತ್ತದೆ.

ಶುದ್ಧವಾಗಿರುವ ಮೋನೋ ಆಮೋನಿಯಂ ಫಾಸ್ಫೇಟಿನಲ್ಲಿ ಶೆಕಡಾ ೧೨ ಸಾರಜನಕ ಮತ್ತು ಶೇಕಡಾ ೬೧ ರಂಜಕದ ಪೆಂಟಾಕ್ಸೈಡ್ ಇರುತ್ತದೆಯಾದರೂ ಗೊಬ್ಬರಕ್ಕೆಂದು ತಯಾರಿಸಿದ ಮೋನೋ ಅಮೋನಿಯಂ ಫಾಸ್ಪೇಟಿನಲ್ಲಿ ಸಾರಜನಕದ ಪ್ರಮಾಣವು ಶೇಕಡಾ ೧೧ ಮತ್ತು ರಂಜಕದ ಪೆಂಟಾಕ್ಸೈಡ್ನ ಪ್ರಮಾಣವು ಶೇಕಡಾ ೪೮ ರಿಂದ ೫೫ ಇರುತ್ತದೆ. ಆದೇ ಪ್ರಕಾರ, ಶುದ್ಧ ಡೈ ಆಮೋನಿಯಂ ಫಾಸ್ಪೇಟಿನಲ್ಲಿ ಶೇಕಡಾ ೨೧ ಸಾರಜನಕ ಮತ್ತು ಶೇಕಡಾ ೫೩ ರಂಜಕದ ಪೆಂಟಾಕ್ಸೈಡ್ ಇದೆ. ಆದರೆ ಗೊಬ್ಬರಕ್ಕೆಂದು ಬಳಸುವ ಡೈ ಅಮೋನಿಯಂ ಫಾಸ್ಪೇಟಿನಲ್ಲಿ ಶೇಕಡಾ ೧೮ರ ಸಾರಜನಕ ಮತ್ತು ಶೇಕಡಾ ೪೬ ರಂಜಕದ ಪೆಂಟಾಕ್ಸೈಡ್ ಇರುತ್ತದೆ.

ಅಮೋನಿಯಂ ಫಾಸ್ಪೇಟಿನಲ್ಲಿರುವ ಎಲ್ಲ ರಂಜಕವೂ ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ. ಈ ಗೊಬ್ಬರಗಳು ಸಾಮಾನ್ಯವಾಗಿ ಕಣಗಳ ರೂಪದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇವು ಮಣ್ಣಿನಲ್ಲಿ ಆಮ್ಲತೆಯನ್ನು ಉಂಟು ಮಾಡುತ್ತವೆಯಲ್ಲದೆ, ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸಿದರೆ, ಮೊಳಕೆಯೊಡೆವ ಬೀಜಕ್ಕೆ ಮತ್ತು ಎಳೆಯ ಸಸಿಗಳಿಗೆ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಈ ಗೊಬ್ಬರವನ್ನು ಬೀಜದ ಸಾಲಿನಿಂದ ಸುಮಾರು ೫ ಸೆಂ.ಮೀ. ದೂರದಲ್ಲಿ ಹಾಕಬೇಕಲ್ಲದೆ ಒಂದೇ ಕಂತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪೂರೈಸಬಾರದು.

ಡೈ ಅಮೋನಿಯಂ ಫಾಸ್ಪೇಟಿನಲ್ಲಿ ಒಟ್ಟು ಪೋಷಕಗಳ ಪ್ರಮಾಣವು ತುಲನಾತ್ಮಕವಾಗಿ ಅಧಿಕವಾಗಿರುವುದರಿಂದ (18 + 46 =64%) ಸಾಗಾಣಿಕೆಯ ಮತ್ತು ಸಂಗ್ರಹದ ಖರ್ಚಿನಲ್ಲಿ ಉಳಿತಾಯವಾಗುತ್ತದೆ.)

vii) ಅಮೋನಿಯಂ ಫಾಸ್ಫೇಟ್ಸಲ್ಫೇಟ್ : ರಂಜಕಾಮ್ಲ ಮತ್ತು ಗಂಧಕಾಮ್ಲಗಳ ಮಿಶ್ರಣದಲ್ಲಿ ಅಮೋನಿಯಂ ವಾಯುವನ್ನು ಹರಿಬಿಟ್ಟಾಗ, ಅಮೋನಿಯಂ ಫಾಸ್ಪೇಟ್ – ಸಲ್ಫೇಟ್ ನಿರ್ಮಾಣಗೊಳ್ಳುತ್ತದೆ. ಇದರಲ್ಲಿ ಶೇಕಡಾ ೧೬ ರಷ್ಟು ಸಾರಜನಕ ಮತ್ತು ೨೦ರಷ್ಟು ರಂಜಕದ ಪೆಂಟಾಕ್ಸೈಡ್ಗಳಿದ್ದು, ಈ ಗೊಬ್ಬರವು ಗಂಧಕವನ್ನೂ ಹೊಂದಿದೆ.

viii) ಅಮೋನಿಯಂ ಪಾಲೀಫಾಸ್ಪೇಟ್ : ಅಮೋನಿಯಂ ಪಾಲೀಫಾಸ್ಫೇಟ್ ಇತ್ತೀಚೆಗಷ್ಟೇ ನಿರ್ಮಾಣ ಗೊಂಡ ರಂಜಕದ ಗೊಬ್ಬರ. ಸೂಪರ್ ಫಾಸ್ಫಾರಿಕ್ ಆಮ್ಲ ಮತ್ತು ಹಸರು ರಂಜಕಾಮ್ಲದ ಮಿಶ್ರಣದಲ್ಲಿ ಅಮೋನಿಯಾವನ್ನು ಸೇರಿಸಿ ಈ ಗೊಬ್ಬರ ವನ್ನು ತಯಾರಿಸಬಹುದು. ಮೇಲೆ ಸೂಚಿಸಿದ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ಕೇವಲ ಹಸುರು ರಂಜಕಾಮ್ಲ ಮತ್ತು ಅಮೋನಿಯಾ ಇವೆರಡರ ಸಂಯೋಜನೆಯಿಂದಲೇ ಅಮೋನಿಯಂ ಪಾಲೀಫಾಸ್ಫೇಟನ್ನು ತಯಾರಿಸಬಹುದು.

ಅಮೋನಿಯಂ ಪಾಲೀ ಫಾಸ್ಪೇಟಿನಲ್ಲಿ ಶೇಕಡಾ ೧೫ ಸಾರಜನಕ ಮತ್ತು ಶೇಕಡಾ ೬೨ ರಂಜಕದ ಪೆಂಟಾಕ್ಸೈಡ್ ಇದೆ.

ix) ನೈಟ್ರಿಕ್ ಫಾಸ್ಫೇಟ್ : ಸೂಪರ್ ಫಾಸ್ಪೇಟ್‌ನಂತಹ ರಂಜಕ ಗೊಬ್ಬರಗಳನ್ನು ತಯಾರಿಸಲು ಗಂಧಕಾಮ್ಲ ಇಲ್ಲವೇ ರಂಜಕಾಮ್ಲಗಳು ಬೇಕು. ಇವೆರಡು ಬಗೆಯ ಆಮ್ಲಗಳನ್ನು ಪಡೆಯಲು ಗಂಧಕದ ಅವಶ್ಯಕತೆಯಿದೆ. ಭಾರತದಲ್ಲಿ, ಗಂಧಕವು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿಲ್ಲವಾದ್ದರಿಂದ, ವಿದೇಶಗಳಿಂದ ಕೊಂಡು ತರಲು ವಿದೇಶಿ ವಿನಿಮಯ ಹಣವು ಖರ್ಚಾಗುವುದಲ್ಲದೇ ಅಧಿಕ ಬೆಲೆಯನ್ನೂ ಕೊಡಬೇಕಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ರಂಜಕ ಶಿಲೆಯ ಮತ್ತು ನೈಟ್ರೀಕ್ ಆಮ್ಲದ ಸಂಯೋಜನೆಯಿಂದ ರಂಜಕಗೊಬ್ಬರವನ್ನು ತಯಾರಿಸುವ ಪ್ರಯತ್ನಗಳು ನಡೆದವು. (ಹವೆಯಲ್ಲಿರುವ ಸಾರಜನಕ ವಾಯುವಿನಿಂದ ನೈಟ್ರೀಕ್, ಆಮ್ಲವನ್ನು ಸ್ಥಾನಿಕವಾಗಿ ಉತ್ಪಾದಿಸಬಹುದು ಎಂಬುವುದನ್ನು ಗಮನಿಸಬೇಕು). ಆದರೆ, ಈ ರೀತಿಯಿಂದ ನೈಟ್ರಿಕ್ ಫಾಸ್ಪೆಟನ್ನು ತಯಾರಿಸುವಲ್ಲಿ ಇನ್ನೊಂದು ತೊಡಕು ಎದುರಾಯಿತು.

ರಂಜಕ ಶಿಲೆ ಮತ್ತು ನೈಟ್ರೀಕ್ ಆಮ್ಲಗಳನ್ನು ಸೇರಿಸಿದಾಗ ಅಪೇಕ್ಷೆಯಂತೆ ನೈಟ್ರೀಕ್ ಫಾಸ್ಪೆಟ್ ನಿರ್ಮಾಣಗೊಂಡರೂ, ಅದರ ಸಂಗಡ ಕ್ಯಾಲ್ಸಿಯಂ ನೈಟ್ರೇಟ್ ಸಹ ನಿರ್ಮಾಣಗೊಳ್ಳುತ್ತದೆ. ಈ ಕ್ಯಾಲ್ಸಿಯಂ ನೈಟ್ರೇಟ್, ಹವೆಯೊಳಗಿನ ಆರ್ದ್ರತೆಯನ್ನು ಶೀಘ್ರಗತಿಯಿಂದ ಹೀರಿಕೊಳ್ಳುತ್ತದೆಯಾದ್ದರಿಂದ ಈ ಸಂಯುಕ್ತವನ್ನು ಬೇರ್ಪಡಿಸುವ ಅಥವಾ ನಿಷ್ಕ್ರಿಯೆಗೊಳಿಸದ ಹೊರತು, ನೈಟ್ರೀಕ್ ಫಾಸ್ಪೆಟನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಮುಂದಿನ ದಿನವುಗಳಲ್ಲಿ ಒಂದು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.

 • ಅವಶ್ಯವಿರುವ ಪ್ರಮಾಣದಲ್ಲಿ ಗಂಧಕಾಮ್ಲ ಅಥವಾ ಸಲ್ಫೇಠ್ ಇರುವ ಲವಣವನ್ನು ಸೇರಿಸಿ, ಕ್ಯಾಲ್ಸಿಯಂ ನೈಟ್ರೇಟನ್ನು, ಕ್ಯಾಲ್ಸಿಯಂ ಸಲ್ಫೇಟ್ ಇಲ್ಲವೇಕ್ಯಾಲ್ಸಿಯಂ ಫಾಸ್ಪೇಟ್ ರೂಪಕ್ಕೆ ಪರಿವರ್ತಿಸಬೇಕು.

ಅಥವಾ

 • ಇಂಗಾಲಾಮ್ಲವನ್ನು ಉಪಯೋಗಿಸಿ,ಕ್ಯಾಲ್ಸಿಯಂ ನೈಟ್ರೀಟಿನಲ್ಲಿರುವ ಕ್ಯಾಲ್ಸಿಯಂ ಅನ್ನು ಕ್ಯಾಲ್ಸಿಯಂ ಕಾರ್ಬೊನೇಟ್ ರೂಪಕ್ಕೆ ಬದಲಾಯಿಸುವಂತೆ ಮಾಡಬೇಕು

ಅಥವಾ

 • ಎಲ್ಲ ದ್ರವ್ಯಗಳನ್ನು ಶೀತಲಗೊಳಿಸಿ, ಸೆಂಟ್ರಿಫ್ಯೂಗಲ್ ಉಪಕರಣದ ಸಹಾಯದಿಂದ ಕ್ಯಾಲ್ಸಿಯಂ ನೈಟ್ರೇಟನ್ನು ನೈಟ್ರಿಕ್ ಫಾಸ್ಪೇಟಿನಿಂದ ಬೇರ್ಪಡಿಸಬೇಕು.

ಕ್ಯಾಲ್ಸಿಯಂ ನೈಟ್ರೇಟನ್ನು ನೈಟ್ರೀಕ್ ಫಾಸ್ಪೇಟಿನಿಂದ ಬೇರ್ಪಡಿಸಬೇಕು.

ಕ್ಯಾಲ್ಸಿಯಂ ನೈಟ್ರೇಟನ್ನು ನಿವಾರಿಸಿದ ನಂತರ ಉಳಿದಿರುವ ದ್ರವ್ಯದಲ್ಲಿ ಅಮೋನಿಯಾವನ್ನು ಸೇರಿಸಲಾಗುತ್ತದೆ. ಈ ರೀತಿ ಸಿದ್ಧವಾದ ಗೊಬ್ಬರದಲ್ಲಿ, ಅಮೋನಿಯಂ ಫಾಸ್ಪೆಟ್, ಡೈ ಕ್ಯಾಲ್ಸಿಯಂ ಫಾಸ್ಪೇಟ್, ಅಮೋನಿಯಂ ನೈಟ್ರೇಟ್, ಕ್ಯಾಲ್ಸಿಯಂ ಸಲ್ಫೇಟ್ ಇತ್ಯಾದಿ ಲವನಗಳಿರುತ್ತವೆ. ಅವಶ್ಯವೆನಿಸಿದರೆ, ಪೋಟ್ಯಾಸಿಯಂ ಇರುವ ಲವಣಗಳನ್ನೂ ಇದರಲ್ಲಿ ಮಿಶ್ರಮಾಡಿದರೆ, ಸಾರಜನಕ, ರಂಜಕ, ಪೋಟ್ಯಾಸಿಯಂ ಇರುವ ಲವಣವನ್ನೂ ಇದರಲ್ಲಿ ಮಿಶ್ರ ಮಾಡಿದರೆ, ಸಾರಜನಕ, ರಂಜಕ ಪೋಟ್ಯಾಸಿಯಂ ಪೋಷಕಗಳಲ್ಲದೇ ಕ್ಯಾಲ್ಸಿಯಂ ಮತ್ತು ಗಂದಕವೂ ಇರುವ ಗೊಬ್ಬರವು ಸಿದ್ಧವಾಗುತ್ತದೆ.

ಫರ್ಟಿಲೈಜರ್ ಕಾರ್ಪೊರೇಶನ್‌ಅಫ್‌ ಇಂಡಿಯಾ ಸಂಸ್ಥೆಯು, ಮುಂಬಯಿಯ ಟ್ರೋಂಬೇಯಲ್ಲಿರುವ ತನ್ನ ಕೇಂದ್ರದಲ್ಲಿ, ಸಂಶೋಧನೆಯನ್ನು ಕೈಗೊಂಡು, ನೈಟ್ರಿಕ್ ಫಾಸ್ಪೇಠನ್ನು, ತಯಾರಿಸುವ ವಿಧಾನವನ್ನು ಅಭಿವೃದ್ಧಿಗೊಳಿಸಿ, ತನ್ನ ಹೆಸರಿಗೆ ‘ಪೇಟೆಂಟನ್ನು’ ಪಡೆದುಕೊಂಡಿದೆ. ಈ ಪದ್ಧತಿಯ ರೂಪ ರೇಷೆಗಳು ಮುಂದಿನಂತಿವೆ.