ರಾಸಾಯನಿಕಗೊಬ್ಬರಗಳು

ಇಲ್ಲಿಯವರೆಗೆ ಚರ್ಚಿಸಿದ ಹಲವು ಬಗೆಯ ಸಾವಯವ ಮತ್ತು ಜೈವಿಕ ಗೊಬ್ಬರಗಳನ್ನು ಸರಿಯಾಗಿ ತಯಾರಿಸಿ, ಸುವ್ಯವಸ್ಥಿತ ರೀತಿಯಿಂದ ಮತ್ತು ನಿಯಮಿತವಾಗಿ ಬಳಸಿದರೆ, ಬೆಳೆಗಳಿಂದ ಉತ್ತಮ/ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಿದೆ. ಈ ಬಗ್ಗೆ ಕೆಳಗಿನ ಸಂಗತಿಗಳನ್ನು ಗಮನಿಸುವುದು ಒಳಿತು.

 • ಸಗಣಿ ಗೊಬ್ಬರ, ಕಾಂಪೋಸ್ಟ ಮುಂತಾದ ಸಾವಯವ ಗೊಬ್ಬರಗಳನ್ನು ತಯಾರಿಸಲು ಬೇಕಾಗುವ ಸಾವಯವ ವಸ್ತುಗಳ ಕೊರತೆಯಿಂದ ಇಲ್ಲವೇ, ಈ ಗೊಬ್ಬರಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅವಶ್ಯವಿರುವ ಪರಿಶ್ರಮದ ಅಭಾವದಿಂದ, ದೊಡ್ಡ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರಗಳನ್ನು ಸಿದ್ಧಪಡಿಸಲು ಸಾಧ್ಯವಗದು.
 • ಹೊರಗಿನಿಂದ ಕೊಂಡು ತಂದರೆ, ಸಾಗಾಣಿಕೆಯ ಖರ್ಚು ಅಧಿಕಗೊಳ್ಳುತ್ತದೆಯಲ್ಲದೇ, ಉತ್ತಮ ಗುಣಮಟ್ಟದ ಗೊಬ್ಬರವು ದೊರೆಯುವ ಸಾಧ್ಯತೆಗಳು ಕಡಮೆ. ಗೊಬ್ಬರವು ಕೀಳು ಮಟ್ಟದ್ದೆಂದು ಗೊತ್ತಾದರೂ ಗೊಬ್ಬರ ಮಾರಾಟ ಮಾಡುವವನ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲು , ರಾಸಾಯನಿಕ ಗೊಬ್ಬರದಲ್ಲಿದ್ದಂತೆ ಗುಣ ನಿಯಂತ್ರಣದ ಕಯಿದೆಯು ಅಸ್ತಿತ್ವದಲ್ಲಿಲ್ಲ.
 • ಈ ಗೊಬ್ಬರಗಳಲ್ಲಿ ಎಲ್ಲ ಪೋಷಕಾಂಶಗಳು ಸಮತೋಲನದಲ್ಲಿ ಇರಲಿಕ್ಕಿಲ್ಲ. ಉದಾಹರಣೆಗೆ, ಸಗಣಿ ಗೊಬ್ಬರದಲ್ಲಿ ಸಾರಜನಕ ಮತ್ತು ಪೋಟ್ಯಾಸಿಯಂಗಳೊಡನೆ ತುಲನೆ ಮಾಡಿದರೆ ರಂಜಕದ ಪ್ರಮಾಣವು ಕಡಿಮೆ.
 • ಸಗಣಿ ಗೊಬ್ಬರ, ಕಾಂಪೋಸ್ಟ್ ಗಳಂತಹ ಸಾವಯವ ಗೊಬ್ಬರಗಳಲ್ಲಿರುವ ಪೋಷಕಗಳ ತೀವ್ರಗತಿಯಿಂದ ಬೆಳೆಗೆ ದೊರೆಯುವುದಿಲ್ಲ. ಮೂಲತಃ ಈ ಗೊಬ್ಬರಗಳಲ್ಲಿರುವ ಪೋಷಕಗಳ ಪ್ರಮಾಣವು ಕಡಮೆ. ಹೀಗಾಗಿ ಬೆಳೆಯ ಅವಶ್ಯಕತೆಯನ್ನು ಸರಿದೂಗಿಸಲು ಈ ಗೊಬ್ಬರಗಳನ್ನು ಬಹು ದೊಡ್ಡ ಪ್ರಮಾಣದಲ್ಲಿ ಪೂರೈಸಬೇಕಾಗುತ್ತದೆ. ಆದರೆ ವಾಸ್ತವವಾಗಿ ಎಲ್ಲ ಬೆಳೆಗಳಿಗೆ ಇಷ್ಟು ಬೃಹತ್ ಪ್ರಮಾಣದಲ್ಲಿ ಗೊಬ್ಬರಗಳನ್ನು ಪೂರೈಸುವ ಕಾರ್ಯವು ಸಾಧ್ಯವಗದ ಸಂಗತಿ.
 • ಹಸುರುಗೊಬ್ಬರ, ಹಸುರುಲೆಗೆ ಗೊಬ್ಬರ ಇವುಗಳ ಉತ್ಪಾದನೆ ಮತ್ತು ಬಳಕೆಗೂ ಕೆಲವು ಮಿತಿಗಳಿವೆ. ಅದರಂತೆಯೇ, ಜೈವಿಕ ಗೊಬ್ಬರಗಳನ್ನು ಪೂರೈಸಿದಾಗ ಇಳುವರಿಯು ಹೆಚ್ಚುತ್ತದೆಯೆಂದು ಕಂಡುಬಂದಿದೆಯಾದರೂ ವಾಸ್ತವವಾಗಿ ಈ ಹೆಚ್ಚಳದ ಪ್ರಮಾಣವು ಎಷ್ಟೆಂಬುವುದನ್ನು ತಿಳಿಯಲು ರೈತರ ಹೊಲಗಳಲ್ಲಿ ದೊಡ್ಡ ಸಂಖ್ಯೆಯ ಪ್ರಯೋಗಗಳು ನಡೆಯಬೇಕು.
 • ಅಧಿಕ ಇಳುವರಿಯನ್ನು ಕೊಡುವ, ಅಲ್ಪಾವಧಿಯಲ್ಲಿ ಮಾಗುವ ಹೊಸ ತಳಿಗಳು ಅಸ್ತಿತ್ವಕ್ಕೆ ಬಂದದ್ದರಿಂದ, ಇವುಗಳಿಗೆ ಬೇಕಾಗುವಷ್ಟು ಪೋಷಕಗಳನ್ನು ಮತ್ತು ಇತರ ಅವಶ್ಯಕತೆಗಳನ್ನು ಒದಗಿಸಿದರೆ ಮಾತ್ರ ಅವುಗಳ ಉತ್ಪದನ ಸಾಮರ್ಥ್ಯದ ಪೂರ್ಣ ಲಾಭವನ್ನು ಪಡೆಯಲು ಸಾಧ್ಯಲ. ಅದರಂತೆಯೇ, ದೇಶದ ಏರುತ್ತಿರುವ ಜನಸಂಖ್ಯೆಯ ಅವಶ್ಯಕತೆಗಳನ್ನು ನೀಗಿಸಲು, ಅಧಿಕ ಉತ್ಪಾದನೆಯನ್ನು ಈಗಿರುವ ಭೂ ಪ್ರದೇಶದಿಂದಲೇ ಮಾಡಬೇಕಾದುದು ಅನಿವಾರ್ಯ. ಪ್ರತಿ ಹೆಕ್ಟೇರಿನಿಂದ ಅಧಿಕ ಇಳುವರಿಯನ್ನು ಪಡೆಯಬೇಕಾದರೆ, ಸಸ್ಯಗಳಿಗೆ ಅವಶ್ಯವಿರುವಷ್ಟು ಪೋಷಕಗಳನ್ನು ಪೂರೈಸಲೇಬೇಕಾಗುತ್ತದೆ.

ಮೇಲಿನಂತಹ ಹಲವು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪೋಷಕಗಳ ಪೂರೈಕೆಯನ್ನು ಸಮರ್ಥ ರೀತಿಯಿಂದ ನಿರ್ವಹಿಸಲು ಪೋಷಕಗಳ ಇತರ ಮೂಲಗಳ ಸಹಾಯವನ್ನು ಪಡೆಯುವುದು ಅಸಮಂಜಸವೆನಿಸಲಾರದು. ಈ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಗಳತ್ತ ದೃಷ್ಟಿ ಹರಿಯುವುದು ಸಹಜ. ಈ ಗೊಬ್ಬರಗಳಿಗೆ ತಮ್ಮದೇ ಆದ ಸ್ಥಾನಮಾನವಿದೆ. ಎಂಬುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಒಂದು ಸಂಗತಿಯನ್ನು ನೆನಪಿಡಬೇಕು. ರಾಸಾಯನಿಕ ಗೊಬ್ಬರಗಳು ಸಸ್ಯಗಳಿಗೆ ಪೋಷಕಗಳನ್ನು ಪೂರೈಸಬಲ್ಲ ಹಲವು ಮೂಲಗಳಲ್ಲಿ ಒಂದು ಮೂಲ ಮಾತ್ರ. ಈ ಗೊಬ್ಬರಗಳನ್ನು ಸಾವಯವ ಮತ್ತು ಜೈವಿಕ ಗೊಬ್ಬರಗಳಿಗೆ ಪೂರಕವೆಂದು ಪರಿಗಣಿಸಬೇಜಕೇ ಹೊರತು ಅವುಗಳ ಪರ್ಯಾಯ ಗೊಬ್ಬರವೆಂದಲ್ಲ.

ಗೊಬ್ಬರಗಳ ಬಳಕೆಯಲ್ಲಿ ಸಮಗ್ರ ದೃಷ್ಟಿ : ಈಗಾಗಲೇ ತಿಳಿಸಿದಂತೆ ಸಸ್ಯಗಳ ಬೆಳವಣಿಗೆಯು ಉತ್ತಮ ರೀತಿಯಿಂದ ಸಾಗಿ ನಿರಂತರವಾಗಿ ಅಪೇಕ್ಷಿತ ಇಳುವರಿಯು ದೊರೆಯಬೇಕಾದರೆ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಉನ್ನತ ಮಟ್ಟದಲ್ಲಿರಬೇಕು. ವಿವಿದ ಗೊಬ್ಬರಗಳ ಬಳಕೆಯನ್ನು ಕೆಳಗೆ ವಿವರಿಸಿದಂತೆ ಸಂಯೋಜಿಸಿದರೆ, ಮೇಲಿನ ಉದ್ದೇಶವು ಬಹುಮಟ್ಟಿಗೆ ಸಫಲವಾದೀತು.

i) ದನಕರುಗಳು ಸಗಣಿ, ಕೊಟ್ಟಿಗೆಯಲ್ಲಿ ಹಾಸಿದ ಸಾವಯವ ಪದಾರ್ಥಗಳು, ಬೂದಿ ಇತ್ಯಾದಿ ವಸ್ತುಗಳನ್ನು ಸರಿಯದ ರೀತಿಯಲ್ಲಿ ಸಂಗ್ರಹಿಸಿ, ಗುಂಡಿ ಇಲ್ಲವೇ, ರಾಶಿ ಪದ್ಧತಿಯಿಂದ ಉತ್ತಮ ಗೊಬ್ಬವನ್ನು ತಯಾರಿಸಿ ಬೆಳೆಗಳಿಗೆ ಪೂರೈಸಬೇಕು.

ii) ಇದೇ ರೀತಿ, ಹೊಲಗದ್ದೆಗಳಲ್ಲಿರುವ ಕಸ – ಕಡ್ಡಿ ಮತ್ತು ಉಪಯೋಗಕ್ಕೆ ಬಾರದ ಒಣಗಿದ ಎಲೆ, ಕೊಳೆ, ಇತ್ಯಾದಿ ಸಾವಯವ ಪದಾರ್ಥಗಳನ್ನು ಸಂಗ್ರಹಿಸಿ ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಬೆಳೆಗಳಿಗೆ ಒದಗಿಸಬೇಕು.

iii) ಪ್ರಾಣಿಗಳ ಎಲುವು ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಪರಿಷ್ಕರಿಸಿ, ಪೋಷಕಗಳನ್ನು ಪೂರೈಸಲು ಉಪಯೋಗಿಸಬೇಕು.

iv) ಹಸುರು ಗೊಬ್ಬರ ಮತ್ತು ಹಸುರೆಲೆ ಗೊಬ್ಬರಗಳನ್ನು, ಸಾಧ್ಯವಾದಷ್ಟು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ, ಮಣ್ಣಿನೊಳಗೆ ಸರಿಯಾಗಿ ಸೇರಿಸಬೇಕು.

v) ಆಹಾರವಾಗಿ ಉಪಯೋಗಿಸಲು ಬಾರದ ಹಿಂಡಿಗಳನ್ನು, ಅವಶ್ಯವಿದ್ದಲ್ಲಿ ಪರಿಷ್ಕರಿಸಿ, ಬೆಳೆಗಳಿಗೆ ಒದಗಿಸಬೇಕು.

vi) ಹವೆಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸಬಲ್ಲ ಹಲವು ಬಗೆಯ ಜೈವಿಕ ಗೊಬ್ಬರಗಳು ಮತ್ತು ಮಣ್ಣಿನಲ್ಲಿರುವ ರಂಜಕವನ್ನು ಕರಗಿಸಿ ಬೆಳೆಗಳಿಗೆ ಸಿಗುವಂತೆ ಮಾಡಬಲ್ಲ ಸೂಕ್ಷ್ಮ ಜೀವಿಗಳನ್ನು ಮತ್ತು ಮಣ್ಣಿನಲ್ಲಿರುವ ರಂಜಕ, ಸತುವು ಮತ್ತು ಇತರೆ ಪೋಷಕಗಳು ಬೆಳೆಗೆ ಸುಲಭವಾಗಿ ದೊರೆಯುವಂತೆ ಮಾಡಬಲ್ಲ ಮೈಕೋರೈಝೋ ಶೀಲೀಂದ್ರಗಳನ್ನು ಸಾಧ್ಯವಾದಷ್ಟು ಬಳಸಬೇಕು.

ಮೇಲಿನವುಗಳ ಉಪಯೋಗದಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳು ಉತ್ತಮಗೊಳ್ಳುತ್ತವೆಯಲ್ಲದೇ ರಾಸಾಯನಿಕ ಗುಣಧರ್ಮಗಳೂ ಭಾಗಶಃ ಉತ್ತಮಗೊಳ್ಳುತ್ತವೆ. ಹೆಚ್ಚಿನ ಇಳುವರಿ ಮತ್ತು ಅಧಿಕ ಲಾಭವನ್ನು ಪಡೆಯಬೇಕಾದರೆ, ಕಡಮೆ ಬೀಳುವ ಪೋಷಕಗಳನ್ನು ಪೂರೈಸಲು ರಾಸಾಯನಿಕ ಗೊಬ್ಬರಗಳನ್ನು ಪೋಷಕಗಳ ಪೂರಕ ಮೂಲವೆಂದು ಬಳಸುವುದು ಜಾಣತನದ ಕ್ರಮವೆನಿಸೀತು. ಕೊರತೆಯಾಗಬಹುದಾದ ಪೋಷಕಗಳ ಪೂರೈಕೆಗೆ ಅವಶ್ಯವಿರುವ ಪ್ರಮುಖ ರಾಸಾಯನಿಕ ಗೊಬ್ಬರಗಳ ವಿವರಗಳನ್ನು ಕೆಳಗೆ ಕೊಡಲಾಗಿದೆ.

ಸಾರಜನಕವನ್ನುಪೂರೈಸುವಗೊಬ್ಬರಗಳು

ಸಸ್ಯಗಳಿಗೆ ಬೇಕಾಗುವ ೨೦ ಪೋಷಕಗಳಲ್ಲಿ ಸಾರಜನಕವು ಒಂದು. ಸಾಮಾನ್ಯವಾಗಿ, ಎಲ್ಲ ಬೆಳೆಗಳಿಗೂ ಈ ಪೋಷಕವು ಬಹು ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳು ತಮಗೆ ಬೇಕಾಗುವ ಸಾರಜನಕದ ಬಹುಭಾಗವನ್ನು ರೈಝೋಬಿಯಂ ಬ್ಯಾಕ್ಟೀರಿಯಾದೊಡನೆ ಸಹಬಾಳ್ವೆಯನ್ನು ನಡೆಸಿ ಪಡೆದುಕೊಳ್ಳುತ್ತವೆ. ಆದರೆ, ಇತರೆ ಬೆಳೆಗಳಿಗೆ ಈ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ, ಈ ಬೆಳೆಗಳಿಗೆ ಬೇಕಾಗುವ ಸಾರಜನಕದ ಪೂರೈಕೆಗೆ ಸೂಕ್ತ ವ್ಯವಸ್ಥೆಯ ಅವಶ್ಯಕತೆ ಇದೆ. ಸಾರಜನಕಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳು ಈ ಕೆಳಗಿನಂತಿವೆ.

ಮಣ್ಣಿನಲ್ಲಿರುವ ಸಾರಜನಕದ ಪ್ರಮಾಣ :

 • ಮಣ್ಣಿನಲ್ಲಿರುವ ಖನಿಜ ಪದಾರ್ಥದಲ್ಲಿ ಸಾರಜನಕವಿರುವುದಿಲ್ಲ.
 • ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳೇ ಸಾರಜನಕದ ಮೂಲವಾಗಿದೆ.
 • ಒಂದು ಪ್ರದೇಶದಲ್ಲಿ ಬೆಳೆಯುತ್ತಿರುವ ಸಸ್ಯ ವರ್ಗ ಮತ್ತು ಆ ಪ್ರದೇಶದ ಹವಾಮಾನ ಇವುಗಳ ಮೇಲಿಂದ, ಆ ಪ್ರದೇಶದ ಮಣ್ಣಿನಲ್ಲಿ ಇರಬಹುದಾದ ಸಾವಯವ ಪದಾರ್ಥದ ಪ್ರಮಾಣ ಮತ್ತು ಅದರ ಮೂಲಕ ಮಣ್ಣಿನಲ್ಲಿರುವ ಸಾರಜನಕದ ಪ್ರಮಾಣವ ಇವು ನಿರ್ಧರಿತವಾಗುತ್ತವೆ.
 • ಭೂಮಿಯ ಇಳಿಜಾರು, ಮಾನವನು ಅನುಸರಿಸುತ್ತಿರುವ ಬೆಸಾಯದ ಕ್ರಮಗಳು ಮತ್ತು ಮಣ್ಣಿನ ವಯಸ್ಸು ಇವು ಮಣ್ಣಿನ ಸಾರಜನಕದ ಪ್ರಮಾಣದ ಮೇಲೆ ಪರಿಣಾಮವನ್ನು ಬೀರುತ್ತವೆ.

ಮಣ್ಣಿನಲ್ಲಿರುವಸಾರಜನಕದರೂಪಗಳು

i) ಮೂಲಧಾತು :ಮಣ್ಣಿನ ಕಣಗಳ ಮಧ್ಯದಲ್ಲಿರುವ ರಂಧ್ರಗಳನ್ನು ಹವೆಯು ಆವರಿಸಿರುತ್ತದೆ. ಈ ಹವೆಯಲ್ಲಿ ಸಾರಜನಕವು ವಾಯು ರೂಪದಲ್ಲಿರುತ್ತದೆ. ಸಾರಜನಕವನ್ನು ಸ್ಥಿರೀಕರಿಸುವ ಸಾಮರ್ಥ್ಯವುಳ್ಳ ಸೂಕ್ಷ್ಮ ಜೀವಿಗಳು ಸ್ವತಂತ್ರವಾಗಿ ಇಲ್ಲವೇ ಮೇಲ್ವರ್ಗದ ಸಸ್ಯಗಳೊಡನೆ ಸಹಜೀವನವನ್ನು ನಡೆಸಿ ಸಾರಜನಕ ವಾಯುವು ಕೆಲವು ಬೆಳೆಗಳಿಗೆ ದೊರೆಯುವ ರೂಪಕ್ಕೆ ಪರಿವರ್ತಿಸಬಲ್ಲವು. ಉಳಿದ ಬೆಳೆಗಳಿಗೆ ಈ ವಾಯುವುವಿನಿಂದ ನೇರವಾದ ಪ್ರಯೋಜನವಿಲ್ಲ.

ii) ನಿರವಯವ ಸಂಯುಕ್ತಗಳು :ನೈಟ್ರಸ್ ಆಕ್ಸ್ರೈಯ್ಡ್ (N2O), ನೈಟ್ರೀಕ್ ಆಕ್ಸೈಡ್ (NO) ಮತ್ತು ನೈಟ್ರೋಜನ್‌ಆಕ್ಸೈಡ್ (NO2) ಸಾರಜನಕದ ಈ ಮೂರು ಸಂಯುಕ್ತಗಳು ವಾಯು ರೂಪದಲ್ಲಿವೆ. ಸಸ್ಯಗಳು ಸಾರಜನಕವನ್ನು ಈ ರೂಪದಲ್ಲಿ ಬಳಸಿಕೊಳ್ಳಲಾರವು. ಆದರೆ ಅಯಾನ್‌ ರೂಪದಲ್ಲಿರುವ ಅಮೋನಿಯಂ (NH4) ನೈಟ್ರೈಟ್ (NO2) ಮತ್ತು ನೈಟ್ರೈಟ್ (NO3) ಗಳು ಸಸ್ಯಗಳ ದೃಷ್ಟಿಯಿಂದ ಅತಿ ಮಹತ್ವವಾದುವೆನ್ನಬಹುದು.

ಅಯಾನ್‌ ರೂಪದಲ್ಲಿರುವ ಸಾರಜನಕವು ಮಣ್ಣಿನಲ್ಲಿರುವ ಒಟ್ಟು ಸಾರಜನಕದ ಸುಮಾರು ಶೇಕಡಾ ೨ ರಷ್ಟು ಮಾತ್ರ ಇರುತ್ತದೆ. ಆದ್ದರಿಂದ, ಪ್ರಮಾಣದ ದೃಷ್ಟಿಯಿಂದ ಈ ರೂಪದ ಸಾರಜನಕವು ಅಷ್ಟು ಮಹತ್ವವಾದದ್ದೆಂದು ಕಂಡುಬರುವುದಿಲ್ಲ. ಆದರೆ ಸಸ್ಯಗಳ ಪೋಷಣೆಯ ದೃಷ್ಟಿಯಿಂದ, ಈ ರೂಪದ ಸಾರಜನಕಕ್ಕೆ ಹೆಚ್ಚಿನ ಮಹತ್ವವಿದೆಯೆಂದು ಕೆಳಗಿನ ವಿವರಣೆಗಳಿಂದ ಕಂಡುಬರುತ್ತದೆ.

 • ಬತ್ತದಂತಹ ಸಸ್ಯಗಳು ಸಾರಜನಕನವನ್ನು ಅಮೋನಿಯಂ ರೂಪದಲ್ಲಿ ಹೀರಿಕೊಳ್ಳುತ್ತವೆ. ಆದರೆ ಇತರೆ ಸಸ್ಯಗಳು ಈ ಪೋಷಕವನ್ನು ನೈಟ್ರೇಟ್ ರೂಪದಲ್ಲಿ ಮಾತ್ರ ಹೀರಿಕೊಳ್ಳಬಲ್ಲವು. ಆದ್ದರಿಂದ, ಬೆಳೆಗಳಿಗೆ ಅನುಗುಣವಾಗಿ, ಮಣ್ಣಿನಲ್ಲಿ ಸಾರಜನಕವು ಅಮೋನಿಯಂ ಇಲ್ಲವೇ ನೈಟ್ರೇಟ್ ರೂಪದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ಪೋಷಕವನ್ನು ನಿರ್ವಹಿಸಬೇಕು.
 • ನೈಟ್ರೇಟ್ ರೂಪದ ಸಾರಜನಕವು ಸಸ್ಯಗಳಿಗೆ ಅಪಾಯಕಾರಿ. ಆದ್ದರಿಂದ ಈ ರೂಪದ ಸಾರಜನಕವು ಮಣ್ಣಿನಲ್ಲಿ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.

iii) ಸಾವಯವ ರೂಪದಲ್ಲಿ : ಮಣ್ಣಿನಲ್ಲಿರುವ ಸಾವಯವ ವಸ್ತುಗಳಲ್ಲಿ ಸಾರಜನಕವು ಸಸಾರಜನಕ ರೂಪದಲ್ಲಿರುತ್ತದೆ. ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದ, ಸಸಾರಜನಕದ ಒಂದು ಭಾಗವು ಮೇಲೆ ತಿಳಿಸಿದ ಅಮೋನಿಯಂ, ನೈಟ್ರೇಟ್ , ಮತ್ತು ನೈಟ್ರೆಟ್ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಉಳಿದ ಭಾಗವು ಸೂಕ್ಷ್ಮ ಜೀವಿಗಳ ದೇಹದಲ್ಲಿಯ ಸಸಾರಜನಕದ ರೂಪದಲ್ಲಿ ಮತ್ತು ಹ್ಯೂಮಸ್ಸಿನ ಒಂದು ಭಾಗವಾಗಿ ಮಣ್ಣಿನಲ್ಲಿರುತ್ತದೆ.

ವಿವಿಧ ಸಾರಜನಕ ಗೊಬ್ಬರಗಳು : ಸೋಡಿಯಂ ನೈಟ್ರೇಟ್ ಎಂಬ ರಾಸಾಯನಿಕ ವಸ್ತುವು ಬೆಳೆಗಳಿಗೆ ಪೂರೈಸಿದ ಮೊಟ್ಟ ಮೊದಲ ರಾಸಾಯನಿಕ ಗೊಬ್ಬರವೆನ್ನಬಹುದು. ಇದು ಚೀಲಿ ದೇಶದ ಪೂರ್ವ ಭಾಗದಲ್ಲಿರುವ ಖಣಿಗಳಲ್ಲಿ ದೊರೆತಿದ್ದರಿಂದ ಇದಕ್ಕೆ ಚಿಲಿಯಣ್ ನೈಟ್ರೇಟ್ ಎಂಬ ಹೆಸರೂ ಇದೆ. ಹಲವು ಕಾರಣಗಳಿಂದ ಈ ಗೊಬ್ಬರದ ಬಳಕೆಯು ನಿಂತಿದೆ. ನಂತರದ ವರ್ಷಗಳಲ್ಲಿ, ಸಾರಜನಕವನ್ನು ಒದಗಿಸುವ ಹಲವು ಬಗೆಯ ರಾಸಾಯನಿಕ ಗೊಬ್ಬರಗಳು ಮಾರುಕಟ್ಟೆಗೆ ಬಂದವು. ಸಾರಜನಕ ಗೊಬ್ಬರಗಳ ವರ್ಗೀಕರಣ ಮತ್ತು ಪ್ರತಿ ಗುಂಪಿನಲ್ಲಿರುವ ಗೊಬ್ಬರಗಳ ಪ್ರಮುಖ ವಿವರಗಳು ಕೆಳಗಿನಂತಿವೆ.

i) ಅಮೋನಿಯಂ ಇರುವ ಗೊಬ್ಬರಗಳು : ದ್ರವರೂಪದ ಅಮೋನಿಯಾ, ಅಮೋನಿಯಂ, ಸಲ್ಫೇಟ್, ಅಮೋನಿಯಂ, ಕ್ಲೋರೈಡ್, ಡೈ ಅಮೋನಿಯಂ, ಫಾಸ್ಫೇಟ್, (ಇದರಲ್ಲಿ ಸಾರಜನಕಕ್ಕಿಂತ ರಂಜಕದ ಪ್ರಮಾಣವೇ ಅಧಿಕವಿರುವುದರಿಂದ, ಇದನ್ನು ರಂಜಕ ಗೊಬ್ಬರವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ, ಇದರ ವಿವರಣೆಯನ್ನು ರಂಜಕ ಗೊಬ್ಬರಗಳಡಿ ಕೊಡಲಾಗಿದೆ)

ii) ನೈಟ್ರೇಟ್ ಗೊಬ್ಬರಗಳು : ಸೋಡಿಯಂ ನೈಟ್ರೇಟ್, ಕ್ಯಾಲ್ಸಿಯಂ ನೈಟ್ರೇಟ್, ಪೋಟ್ಯಾಷಿಯಂ ನೈಟ್ರೇಟ (ಇದರಲ್ಲಿ ಸಾರಜನಕಕ್ಕಿಂತ ಪೋಟಾಸಿಯಂದ ಪ್ರಮಾಣವೇ ಅಧಿಕವಾಗಿರುವುದರಿಂದ ಇದನ್ನು ಪೋಟ್ಯಾಸಿಯಂ ಗೊಬ್ಬರವೆಂದೇ ಪರಿಗಣಿಸಲಾಗುತ್ತದೆ. ಇದರ ವಿವರಣೆ ಯನ್ನು ಪೋಟ್ಯಾಸಿಯಂ ಗೊಬ್ಬರದಡಿ ಕೊಡಲಾಗಿದೆ.)

iii) ಅಮೋನಿಯಿಂ ಮತ್ತು ನೈಟ್ರೇಟ್ ಇರುವ ಗೊಬ್ಬರಗಳು : ಅಮೋನಿಯಂ ಸಲ್ಫೇಟ್ ನೈಟ್ರೇಟ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ , ಅಮೋನಿಯಂ ನೈಟ್ರೇಟ್.

iv) ಅಮೈಡ್ ಗೊಬ್ಬರಗಳು : ಯೂರಿಯಾ, ಕ್ಯಾಲ್ಸಿಯಂ ಸೈನಾಮೈಡ್,

i) ದ್ರವ್ಯ ರೂಪದ ಅಮೋನಿಯಾ : ಸಾಮಾನ್ಯ ಉಷ್ಣತಾಮಾನ ಮತ್ತು ಒತ್ತಡಗಳಿದ್ದಾಗ ಅಮೋನಿಯಾ ವಾಯು ರೂಪದಲ್ಲಿರುತ್ತದೆ. ಈ ವಾಯುವಿಗೆ ಬಣ್ಣವಿಲ್ಲ. ಆದರೆ ಅತಿ ತೀಕ್ಷ್ಣ ವಾದ ಘಾಟು ವಾಸನೆಯಿದೆ. ಅಮೋನಿಯಾ ಹವೆಗಿಂತ ಹಗುರವಾಗಿದೆ. ಇದನ್ನು ಸಾರಜನಕ ಗೊಬ್ಬರವಾಗಿ ಬಳಸಬಹುದು. ಉಳಿದೆಲ್ಲ ಸಾರಜನಕ ಗೊಬ್ಬರಗಳಿಗಿಂತ ಅಮೋನಿಯಾದಲ್ಲಿ ಸಾರಜನಕದ ಪ್ರಮಾಣವು ಅತಿ ಹೆಚ್ಚು ಅಂದರೆ ಶೇಕಡಾ ಸುಮಾರು ೮೨ ರಷ್ಟಿದೆ. ಮಾನವನು ತಯಾರಿಸುವ ಎಲ್ಲ ಸಾರಜನಕ ಗೊಬ್ಬರಗಳಲ್ಲಿ ಅಮೋನಿಯಾ ಒಂದು ಪ್ರಮುಖ ಘಟಕವೆನ್ನಬಹುದು.

ಸಾರಜನಕ ವಾಯುವನ್ನು ಜಲಜನಕದೊಡನೆ ೧೫೦ ರಿಂದ ೧೦೦೦ ವಾಯು ಭಾರದಲ್ಲಿ ಸುಮಾರು ೫೦೦ ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಸೇರಿಸಿದಾಗ ಅಮೋನಿಯಾ ಸಿದ್ಧವಾಗುತ್ತದೆ.

ವಾಯು ರೂಪದಲ್ಲಿರುವ ಅಮೋನಿಯಾವನ್ನು, ಉಳಿದ ಗೊಬ್ಬರಗಳಂತೆ ಮಣ್ಣಿಗೆ ಹಾಕಲು ಬರುವುದಿಲ್ಲ. ವಿಶಿಷ್ಟ ರೀತಿಯ ಸಿಲಿಂಡರುಗಳಲ್ಲಿ ಅಮೋನಿಯಾವನ್ನು ಅತಿ ಒತ್ತಡದಲ್ಲಿ ತುಂಬಿದಾಗ, ಅದು ದ್ರವ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಸಿಲಿಂಡರಿಗೆ ಸೂಕ್ತ ಬಗೆಯ ಸಾಧನವನ್ನು ಅಳವಡಿಸಿಕೊಂಡರೆ, ಅವಶ್ಯವಿರುವ ಪ್ರಮಾಣದಲ್ಲಿಯೇ ಅಮೋನಿಯಾವನ್ನು ಹೊರ ಬಿಡುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಸಿಲಿಂಡರನ್ನು ಟ್ರಾಕ್ಟರನಲ್ಲಿ ಕೊಂಡೊಯ್ದು, ಮಣ್ಣಿನಲ್ಲಿ ೧೦ ರಿಂದ ೨೦ ಸೆಂ.ಮೀ. ಆಳಕ್ಕೆ ಅಮೊನಿಯಾ ಒಳಸೇರುವಂತೆ ಮಾಡಬಹುದು.

ದ್ರವ ರೂಪದಲ್ಲಿರುವ ಅಮೋನಿಯಾ, ಸಿಲಿಂಡರಿನಿಂದ ಹೊರಬರುತ್ತಲೇ, ಪುನಃ ವಾಯು ರೂಪಕ್ಕೆ ಪರಿವರ್ತನೆಯನ್ನು ಹೊಂದಿ, ಮಣ್ಣಿನಲ್ಲಿರುವ ಎಲ್ಲ ರಂಧ್ರಗಳನ್ನು ಅವರಿಸುತ್ತದೆ. ಮಣ್ಣಿನಲ್ಲಿರುವ ಆರ್ದ್ರತೆಯಲ್ಲಿ, ಅಮೋನಿಯಾ ವಾಯು ಸುಲಭವಾಗಿ ಕರಗಿ, ಲಮೋನಿಯಂ ಅಯಾನ್‌ (NH4+) ಆಗಿ ಮಣ್ಣಿನಲ್ಲಿರುವ ಜಿನುಗು ಕಣಗಳ ಸುತ್ತ ಇರುವ ಋಣ ಚಾರ್ಜುಗಳಿಂದ ಆಕರ್ಷಿತವಾಗುತ್ತದೆ. ಆದ್ದರಿಂದಲೇ ದ್ರವ ರೂಪದ ಅಮೋನಿಯಾವನ್ನು ಪೂರೈಸುವಾಗ ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ ಇರಬೇಕು. ಅಲ್ಲದೇ ಮಣ್ಣು ಪುಡಿಯಾಗಿರಬೇಕು. ಹೆಂಟೆಯ ರೂಪದಲ್ಲಿರಬಾರದು.

ಗುಣಗಳು :

 • ದ್ರವರೂಪದ ಅಮೋನಿಯಾದಲ್ಲಿರುವ ಪ್ರತಿ ಕಿ.ಗ್ರಾಂ. ಸಾರಜಕದ ಬೆಲೆಯು ಉಳಿದೆಲ್ಲ ಸಾರಜನಕ ಗೊಬ್ಬರಗಳಲ್ಲಿರುವುದಕ್ಕಿಂತ ತೀರ ಕಡಮೆ.
 • ಸಾರಜನಕವು ಘನ ರೂಪದಲ್ಲಿರುವಾಗ ಅದನ್ನು ಮಣ್ಣಿನಲ್ಲಿ ಎಲ್ಲೆಡೆ ಏಕರೂಪವಾಗಿ ಪಸರಿಸುವಂತೆ ಪೂರೈಸುವುದು ಕಷ್ಟ. ಆದರೆ ದ್ರವ್ಯ ರೂಪದ ಅಮೋನಿಯಾವನ್ನು ಮಣ್ಣಿಗೆ ಸೇರಿಸಿದೊಡನೆ, ಅದು ವಾಯು ರೂಪವನ್ನು ತಾಳಿ ಮಣ್ಣಿನ ಎಲ್ಲ ರಂಧ್ರಗಳಲ್ಲಿ ತಾನಾಗಿಯೇ ಸೇರಿಕೊಳ್ಳುತ್ತದೆ ಮತ್ತು ಮಣ್ಣಿನ ಆರ್ದ್ರತೆಯಲ್ಲಿ ಕರಗಿ, ಅಮೋನಿಯಂ ರೂಪವನ್ನು ತಾಳಿ ಕಣಗಳ ಸುತ್ತ ಆವರಿಸಿಕೊಳ್ಳುತ್ತದೆ.

ಅವಗುಣಗಳು :

 • ಸಂಗ್ರಹ ಮತ್ತು ಸಾಗಾಟಕ್ಕೆ ಅನುಕೂಲವಾಗಲು, ದ್ರವ್ಯ ರೂಪದ ಅಮೋನಿಯವನ್ನು ವಿಶಿಷ್ಟ ರೀತಿಯ ಸಿಲಿಂಡರುಗಳಲ್ಲಿ ತುಂಬಬೇಕಾಗುತ್ತದೆ. ಅಲ್ಲದೇ, ಈ ಗೊಬ್ಬರವನ್ನು ಭೂಮಿಯ ಆಳಕ್ಕೆ ಸೇರಿಸಲು ಸೂಕ್ತ ಸಲಕರಣೆಯನ್ನು ಸಿಲಿಂಡರಿಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಖರ್ಚಿನ ಕೆಲಸ. ಈ ದ್ರವ್ಯರೂಪದ ಅಮೋನಿಯಾ ಗೊಬ್ಬರವು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಬಳಕೆಯಲ್ಲಿದೆ. ಗೊಬ್ಬರವನ್ನು ಮಾರಾಟ ಮಾಡುವ ಕೆಲವು ಸಂಸ್ಥೆಗಳು ಕೋರಿಕೆಯ ಮೇರೆಗೆ ಅಮೋನಿಯಾ ತುಂಬಿದ ಸಿಲಿಂಡರುಗಳನ್ನು ತಂದು, ಇಚ್ಛಿತ ಪ್ರಮಾಣದಲ್ಲಿ ಮಣ್ಣಿಗೆ ಅಮೋನಿಯಾವನ್ನು ಸೇರಿಸಿ, ನಿಗದಿತ ಹಣವನ್ನು ಕೃಷಿಕರಿಂದಮ ಪಡೆಯುತ್ತವೆ.
 • ಅಮೋನಿಯಾವನ್ನು ಮಣ್ಣಿಗೆ ಸೇರಿಸಿದೊಡನೆ ಆಮ್ಲ – ಕ್ಷಾರ ನಿರ್ದೆಶಕವು ೧೦ರವರೆಗೂ ಏರಬಹುದು. ಇದರಿಂದ ಮೊಳಕೆಯೊಡೆಯುತ್ತಿರುವ ಬೀಜಗಳಿಗೆ ಮತ್ತು ಎಳೆ ಸಸಿಗಳಿಗೆ ಅಪಾಯವುಂಟಾಗಬಹುದು. ಆದ್ದರಿಂದ ಈ ಗೊಬ್ಬರವನ್ನು ಬಿತ್ತುವುದಕ್ಕಿಂತ ಮೊದಲು ಉಪಯೋಗಿಸಬೇಕು.
 • ಮಣ್ಣಿನಲ್ಲಿ ಹೆಚ್ಚು ಮರಳು ಇರುವಲ್ಲಿ ಸಾಕಷ್ಟು ಆರ್ದ್ರತೆ ಇಲ್ಲದಿದ್ದಲ್ಲಿ ಅಮೋನಿಯಾ, ಮಣ್ಣಿನಿಂದ ಹೊರಬಂದು ನಷ್ಟವಾಗಬಹುದು.
 • ಅಮೋನಿಯಾವನ್ನು ಬಳಸಿದರೆ ಮಣ್ಣು ಆಮ್ಲಗೊಳ್ಳುತ್ತದೆ. ಪ್ರತಿ ೧೦೦ ಕಿ.ಗ್ರಾಂ. ಅಮೋನಿಯಾದಿಂದ ಆಗುವ ಆಮ್ಲತೆಯನ್ನು ನಿವಾರಿಸಲು ೧೪೮ ಕಿ.ಗ್ರಾಂ. ಶುದ್ಧ ಕ್ಯಾಲ್ಸಿಯಂ ಕಾರ್ಬೊನೇಟನ್ನು ಮಣ್ಣಿಗೆ ಸೇರಿಸಬೇಕಾಗುತ್ತದೆ.

ii) ಅಮೋನಿಯಂ ಸಲ್ಫೇಟ್ [(NH4) 2SO4]: ಯೂರಿಯಾ ಗೊಬ್ಬರವು ಪ್ರಚಲಿತವಾಗುವವರೆಗೆ ಅಮೋನಿಯಂ ಸಲ್ಫೇಟ್ ಕೃಷಿಕನಿಗೆ ಅತಿ ಪರಿಚಿತ ಸಾರಜನಕ ಗೊಬ್ಬರವಾಗಿತ್ತು. ಇದರಲ್ಲಿ ಶೇಕಡಾ ೨೦ ರಿಂದ ೨೧ ರಷ್ಟು ಸಾರಜನಕವಿರುವುದರೊಂದಿಗೆ ಶೇಕಡಾ ೨೪ ರಷ್ಟು ಗಂಧಕವಿರುತ್ತದೆ. ಇದು ಹವೆಯೊಳಗಿನ ಅಧ್ರತೆಯನ್ನು ಹೀರಿಕೊಳ್ಳುವುದಿಲ್ಲವಾದ್ದರಿಂದ ಸಂಗ್ರಹ ಮತ್ತು ಬಳಕೆಯಲ್ಲಿ ತೊಂದರೆಯು ಎದುರಾಗುವುದಿಲ್ಲ. ಆಮೋನಿಯಂ ಸಲ್ಫೇಟನ್ನು ಎರಡು ರೀತಿಗಳಿಂದ ತಯಾರಿಸಬಹುದು.

 • ಕಲ್ಲಿದ್ದಲಿನಿಂದ ಕೋಕ್ ತಯಾರಿಸುವಾಗ – ಉಪ ಉತ್ಪತ್ತಿಯೆಂದು ಹೊರಬರುವ ಅಮೋನಿಯಾ ವಾಯುವನ್ನು ಅಥವಾ ಕೃತ್ರೀಮ ನೂಲನ್ನು ಸಿದ್ಧಪಡಿಸಲು ಬೇಕಾಗುವ ಮೂಲ ವಸ್ತುವನ್ನು ತಯಾರಿಸುವಾಗ ಹೊರಬರುವ ಅಮೋನಿಯಾ ವಾಯುವನ್ನು ಗಂಧಕಾಮ್ಲದಲ್ಲಿ ಹಾಯುವಂತೆ ಮಾಡಿದರೆ ಅಮೋನಿಯಂ ಸಲ್ಫೇಟ್ ಉತ್ಪತ್ತಿಯಾಗುತ್ತದೆ.
 • ಜಿಪ್ಸಂ ಪದ್ಧತಿಯಿಂದ ಅಮೋನಿಯಂ ಸಲ್ಫೇಟನ್ನು ತಯಾರಿಸಬಹುದು.
  ಅಮೋನಿಯಾ + ಜಿಪ್ಸಂ + ಇಂಗಾಲದ ಡೈ ಆಕ್ಸೈಡ್ + ನೀರು —-> ಅಮೋನಿಯಂ ಸಲ್ಫೇಟ್ + ಕ್ಯಾಲ್ಸಿಯಂ ಕಾರ್ಬೊನೇಟ್
  2NH3 + CaSO4 + CO2 + H2O —-> (NH4) 2 (SO4 + CaCO3

ಒಂದು ಟನ್‌ ಅಮೋನಿಯ ಸಲ್ಫೇಟ್‌ನ್ನು ತಯಾರಿಸಲು ೧.೭ ಟನ್‌ಜಿಪ್ಸಂ ಮತ್ತು ೦.೬ ಟರ್ನ ಕೋಕ್ (ಇಂಗಾಲಾಮ್ಲವನ್ನು ಪಡೆಯಲು ) ಬೇಕಾಗುತ್ತದೆ. ಬಿಹಾರದ ಸಿಂಧ್ರಿ ಮತ್ತು ಕೇರಳದ ಅಳ್ವೆ ಎಂಬಲ್ಲಿ ಸ್ಥಾಪಿತಗೊಂಡ ಕಾರ್ಖಾನೆಗಳಲ್ಲಿ ಈ ಪದ್ಧತಿಯನ್ನು ಅನುಸರಿಸಿ ಅಮೋನಿಯಂ ಸಲ್ಫೇಟನ್ನು ತಯಾರಿಸಲಾಗುತ್ತದೆ.

ಗುಣಗಳು

 • ಗದ್ದೆಯಲ್ಲಿ ನೀರು ಬಂದಾಗ, ಬತ್ತದ ಪೈರು ಸಾರಜನಕವನ್ನು ಅಮೋನಿಯಂ ರೂಪದಲ್ಲಿ ಹೀರಿಕೊಳ್ಳುವುದರಿಂದ ಅಮೋನಿಯಂ ಸಲ್ಫೇಟ್ ಬತ್ತದ ಬೆಳೆಗೆ ಸೂಕ್ತ ಗೊಬ್ಬರವೆನ್ನಬಹುದು.
 • ಅಮೋನಿಯಂ ಸಲ್ಫೇಟ್, ನೀರಿನಲ್ಲಿ ಸುಲಭವಾಗಿ ಕರಗುವುದಾದರೂ ಹವೆಯೊಳಗಿರುವ ಆರ್ದ್ರತೆಯನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ, ಇದನ್ನು ಸಂಗ್ರಹಿಸಲು ಮತ್ತು ಬಳಸಲು ಸಮಸ್ಯೆ ಎದುರಾಗುವುದಿಲ್ಲ.
 • ಮಣ್ಣಿನ ಎರೆ ಕಣಗಳು ಮತ್ತು ಹ್ಯೂಮಸ್ ಕಣಗಳು ಅಮೋನಿಯಂ ಅಯಾನ್‌ಗಳನ್ನು ತಮ್ಮ ಮೈಸುತ್ತ ಆಕರ್ಷಿಸಿ ಹಿಡಿದಿಟ್ಟುಕೊಂಡಿರುತ್ತವೆ. ಆದ್ದರಿಂದ, ಅಮೋನಿಯಂ ನೀರಿನೊಡನೆ ಬಸಿದು ಹೋಗಿ ನಷ್ಟಗೊಳ್ಳುವುದಿಲ್ಲ.
 • ಹವೆಯಾಡುವ ಮಣ್ಣಿನಲ್ಲಿ, ಅಮೋನಿಯಂ ಅಯಾನ್‌ಗಳು ಬ್ಯಾಕ್ಟಿರಿಯಾಗಳ ಚಟುವಟಿಕೆಯಿಂದ, ನೈಟ್ರೇಟ್ ರೂಪಕ್ಕೆ ಪರಿವರ್ತನೆ ಹೊಂದುತ್ತವೆಯಾದ್ದರಿಂದ ಸಾರಜನಕವು ಮಣ್ಣನ್ನುಸೇರಿದ ಕೆಲವೇ ದಿನಗಳಲ್ಲಿ ಬೆಳೆಗೆ ಸುಲಭವಾಗಿ ದೊರೆಯುತ್ತದೆ.
 • ಅಮೋನಿಯಂ ಸಲ್ಫೇಟ್ ನಲ್ಲಿ ಗಂಧಕವು ಇರುವುದರಿಂದ ಈ ಪೋಷಕವನ್ನೂ ಬೆಳೆಗಳಿಗೆ ಒದಗಸಿದಂತಾಗುತ್ತದೆ. ಆದರೆ, ಅಮೋನಿಯಂ ಸಲ್ಫೇಟನ್ನು ಬಹು ದೊಡ್ಡ ಪ್ರಮಾಣದಲ್ಲಿ ಕೆಸರು ಪದ್ಧತಿಯಿಂದ ಬೆಳೆಯುವ ಬತ್ತಕ್ಕೆ ಹಲವು ವರ್ಷಗಳವರೆಗೆ ನಿರಂತರವಾಗಿ ಬಳಸಿದಾಗ, ಗಂಧಕವು ಅಪಾಯದ ಮಟ್ಟವನ್ನು ತಲುಪಿ, ಬತ್ತದ ಬೆಳೆಗೆ ಹಾನಿಯುಂಟಾಗಬಹುದು. ಆದರೆ, ಇಂತಹ ಪರಿಸ್ಥಿತಿಯು ಉದ್ಬವವಾಗುವ ಸಂದರ್ಭಗಳು ನಮ್ಮಲ್ಲಿ ಅತಿ ವಿರಳ.
 • ಸುಣ್ಣವನ್ನೊಂದುಳಿದು, ಇತರೆ ರಾಸಾಯನಿಕ ಗೊಬ್ಬರಗಳೊಡನೆ ಅಮೋನಿಯಂ ಸಲ್ಫೇಟನ್ನು ಮಿಶ್ರಮಾಡಿ ಇಡಬಹುದು. ಮತ್ತು ಅವಶ್ಯವೆನಿಸಿದಾಗ ಬಳಸಬಹುದು.

ಅವಗುಣಗಳು :

 • ಅಮೋನಿಯಂ ಸಲ್ಫೇಟಿನ ಬಳಕೆಯಿಂದ, ಮಣ್ಣು ಹುಳಿಯಾಗುತ್ತದೆ. ಪ್ರತಿ ೧೦೦ ಕಿ.ಗ್ರಾಂ. ಅಮೋನಿಯಂ ಸಲ್ಫೇಟ್ ಗೊಬ್ಬರವನ್ನು ಮಣ್ಣಿಗೆ ಸೇರಿಸದಾಗ ಆಗುವ ಆಮ್ಲತೆಯನ್ನು ನಿವಾರಿಸಲು ೧೧೦ ಕಿ.ಗ್ರಾಂ. ಶುದ್ಧ ಕ್ಯಾಲ್ಸಿಯಂ ಕಾರ್ಬೊನೇಟನ್ನು ಬಳಸಬೇಕಾಗುತ್ತದೆ.
 • ಅಮೋನಿಯಂ ಅಯಾನ್‌ಗಳು ಮಣ್ಣಿನಲ್ಲಿ ಅಧಿಕಗೊಂಡರೆ ಮಣ್ಣಿನ ಕಣಗಳ ರಚನೆಯು ಹಾಳಾಗುತ್ತದೆ. ಆಧರೆ ಈ ಪರಿಣಾಮವು ತಾತ್ಪೂರ್ತಿಕ.
 • ಅಮೋನಿಯಂ ಸಲ್ಫೇಟನ್ನು ಸುಣ್ಣದೊಂದಿಗೆ ಮಿಶ್ರಮಾಡುವಂತಿಲ್ಲ. ಒಂದೊಮ್ಮೆ ಮಿಶ್ರಮಾಡಿದರೆ, ಗೊಬ್ಬರದಿಂದ ಅಮೋನಿಯಾ ವಾಯುವು ವಿಮೋಚನೆಗೊಂಡು ವಾಯುಮಂಡಲವನ್ನು ಸೇರುತ್ತದೆ.

iii) ಅಮೋನಿಯಂ ಕ್ಲೋರೈಡ್ (NH4CI) : ಅಮೋನಿಯಂ ಕ್ಲೋರೈಡ್ ಸ್ಪಟಿಕ ರೂಪದಲ್ಲಿರುವ ಬಿಳಿಯ ವಸ್ತು. ಗೊಬ್ಬರಕ್ಕೆಂದು ಬಳಸುವ ಈ ವಸ್ತುವಿನಲ್ಲಿ ಶೇಕಡಾ ೨೫ ರಷ್ಟಯ ಸಾರಜನಕವಿರುತ್ತದೆ. ಹರಿತ್ ಪೀತಾಮ್ಲ (HCI)ದಲ್ಲಿ ಅಮೋನಿಯಾವನ್ನು ಹರಿಯಲುಬಿಟ್ಟು, ಅಮೋನಿಯಂ ಕ್ಲೋರೈಡನ್ನು ತಯಾರಿಸಬಹುದು. ಆದರೆ, ಮುಂದಿನ ಪದ್ಧತಿಯನ್ನು ಅನುಸರಿಸಿ ಈ ಗೊಬ್ಬರವನ್ನು ಸಾಮಾನ್ಯವಾಗಿ ತಯಾರಿಸಲಾಗುತ್ತದೆ.

ಉಪ್ಪು + ಇಂಗಾಲದ ಡೈ ಆಕ್ಸೈಡ್ + ಅಮೋನಿಯಾ + ನೀರು → ಅಮೋನಿಯಂ ಕ್ಲೋರೈಡ್ + ಸೋಡಿಯಂ ಬೈಕಾರ್ಬೊನೇಟ್
NaCl + CO2 + NH3 + H2O → NH4Cl + NaHCO3

ಬಹುದೊಡ್ಡ ಪ್ರಮಾಣದಲ್ಲಿ ಹಲವು ವರ್ಷಗಳವರೆಗೆ, ಕೆಸರು ಪದ್ಧತಿಯಿಂದ ಬೆಳೆಸಿದ ಬತ್ತಕ್ಕೆ ಅಮೋನಿಯಂ ಸಲ್ಫೇಟನ್ನು ಪೂರೈಸಿದರೆ ಮಣ್ಣಿನಲ್ಲಿ ಗಂಧಕವು ಮಿತಿ ಮೀರಿ ಸಂಗ್ರಹಗೊಂಡು ಬೆಳೆಗೆ ಅಪಾಯವಾಗುವುದೆಂದು ತಿಳಿದುಬಂದಿದೆ. ಜ್ವಾಲಾಮುಖಿಯಿಂದ ಹೊರ ಬರುವ ಮೂಲದ್ರವ್ಯದಿಂದ ನಿರ್ಮಾಣಗೊಂಡ ಮಣ್ಣಿನಲ್ಲಿ ಈ ಅಪಾಯವು ಕಂಡುಬರುವ ಸಾಧ್ಯತೆಯು ಅಧಿಕ. ಇಂತಹ ಸಂದರ್ಭಗಳಲ್ಲಿ ಅಮೋನಿಯಂ ಸಲ್ಫೇಟಿನ ಬದಲು, ಅಮೋನಿಯಂ ಕ್ಲೋರೈಡನ್ನು ಬಳಸಿದರೆ, ಗಂಧಕದಿಂದ ಆಗಬಹುದಾದ ಅಪಾಯವನ್ನು ತಪ್ಪಿಸಬಹುದು.

ಜಗತ್ತಿನ ಗೊಬ್ಬರಕ್ಕೆಂದು ತಯಾರು ಮಾಡುವ ಅಮೋನಿಯಂ ಕ್ಲೋರೈಡ್ನ ಬಹುಭಾಗವು ಜಪಾನ ದೇಶದಲ್ಲಿಯೇ ತಯಾರಾಗುತ್ತದೆ. ನಂತರದ ಸ್ಥಾನವು ಭಾರತದ್ದು. ಉತ್ತರ ಪ್ರದೇಶದ ಶಾಹಪುರಿ ಮತ್ತು ಕೇರಳದ ಅಳ್ವೆಗಳಲ್ಲಿ,ಅ ಮೋನಿಯಂ ಕ್ಲೋರೈಡ್ ತಯಾರಾಗುತ್ತದೆ.

ಗುಣಗಳು :

 • ಸಾರಜನಕವು ಅಮೋನಿಯಂ ರೂಪದಲ್ಲಿದೆಯಲ್ಲದೇ, ಗಂಧಕವು ಸಂಗ್ರಹಗೊಂಡು ಬೆಳೆಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಯೇ ಇಲ್ಲ. ಆದ್ದರಿಂದ ಅಮೋನಿಯಂ ಕ್ಲೋರೈಡ್ ಕೆಸರು ಪದ್ಧತಿಯಿಂದ ಬೆಳೆಯುವ ಬತ್ತಕ್ಕೆ ಅಮೋನಿಯಂ ಸಲ್ಫೇಟಿಗಿಂತ ಉತ್ತಮ.
 • ತೆಂಗು ಮತ್ತು ತಾಳೆ ಬೆಳೆಗಳಿಗೆ ಅಮೋನಿಯಂ ಕ್ಲೋರೈಡ್ ಹೆಚ್ಚು ಪ್ರಯೋಜನಕಾರಿ ಎಂದು ಕಂಡುಬಂದಿದೆ.

ಅವಗುಣಗಳು :

 • ಅಮೋನಿಯಂ ಕ್ಲೋರೈಡ್ ಗೊಬ್ಬರವನ್ನು ಬಳಸಿದಾಗ ಮಣ್ಣು ಹುಳಿಯಾಗುತ್ತದೆ. ಪ್ರತಿ ೧೦೦ ಕಿ.ಗ್ರಾಂ. ಅಮೋನಿಯಂ ಕ್ಲೋರೈಡ್ ಗೊಬ್ಬರವನ್ನು ಹಾಕುವುದರಿಂದ ಉಂಟಾದ ಆಮ್ಲತೆಯನ್ನು ಹೋಗಲಾಢಿಸಲು ೧೨೮ ಕಿ.ಗ್ರಾಂ. ಶುದ್ಧ ಕ್ಯಾಲ್ಸಿಯಂ ಕಾರ್ಬೊನೇಟ್ ಪುಡಿಯನ್ನು ಮಣ್ಣಿಗೆ ಸೇರಿಸಬೇಕಾಗುತ್ತದೆ.
 • ಅಮೋನಿಯಂ ಕ್ಲೋರೈಡ್ ಗೊಬ್ಬರವನ್ನು ಬಳಸಿದಾಗ ಮಣ್ಣು ಹುಳಿಯಾಗುತ್ತದೆ. ಪ್ರತಿ ೧೦೦ ಕಿ.ಗ್ರಾಂ ಅಮೋನಿಯಂ ಕ್ಲೋರೈಡ್ ಗೊಬ್ಬರವನ್ನು ಹಾಕುವುದರಿಂದ ಉಂಟಾದ ಆಮ್ಲತೆಯನ್ನು ಹೋಗಲಾಡಿಸಲು ೧೨೮ ಕಿ.ಗ್ರಾಂ ಶುದ್ಧ ಕ್ಯಾಲ್ಸಿಯಂ ಕಾರ್ಬೊನೇಟ್ ಪುಡಿಯನ್ನು ಮಣ್ಣಿಗೆ ಸೇರಿಸಬೇಕಾಗುತ್ತದೆ.
 • ಅಮೋನಿಯಂ ಸಲ್ಫೇಟನಲ್ಲಿರುವುದಕ್ಕಿಂತ ಅಮೋನಿಯಂ, ಕ್ಲೋರೈಡ್ನಲ್ಲಿ ಸಾರಜನಕದ ಪ್ರಮಾಣವು ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆಯಾದರೂ ಯೂರಿಯಾ ಗೊಬ್ಬರಕ್ಕಿಂತ ಕಡಮೆ ಇದೆ. ಇದರಿಂದ ಸಾಗಾಣಿಕೆಯ ಖರ್ಚು ಹೆಚ್ಚಾಗುತ್ತದೆ.

iv) ಸೋಡಿಯಂ ನೈಟ್ರೇಟ್ (NaNO3): ಸೋಡಿಯಂ ನೈಟ್ರೇಟ್ ಜಗತ್ತಿನಲ್ಲಿ ಬಳಸಿದ ಮೊಟ್ಟ ಮೊದಲ ರಾಸಾಯನಿಕ ಗೊಬ್ಬರವೆಂದೂ, ದಕ್ಷಿಣ ಅಮೆರಿಕಾದಲ್ಲಿರುವ ಚಿಲಿ ದೇಶದ ಪೂರ್ವ ಭಾಗದಲ್ಲಿರುವ ನೈಸರ್ಗಿಕ ಖಣಿಯಿಂದ ಹೊರತೆಗೆಯಲಾಗುತ್ತಿತ್ತೆಂದೂ ಆದ್ದರಿಂದ ಇದಕ್ಕೆ ಚಿಲಿಯನ್‌ ನೈಟ್ರೇಟ್ ಎಂಬ ಹೆಸರು ಬಂತೆಂದು ಹಿಂದೆ ತಿಳಿಸಲಾಗಿದೆ. ಈ ಗೊಬ್ಬರವನ್ನು ಚಿಲಿ ಸಾಲ್ಟ್ ಪೀಟರ್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತಿತ್ತು. ಗಣಿಗಳಿಂದ ಅಗೆದು ತೆಗೆದ ಸೋಡಿಯಂ ನೈಟ್ರೇಟ್ ಗೊಬ್ಬರವನ್ನು ಚೀಲಗಳಲ್ಲಿ ತುಂಬಿ ದೂರದ ದೇಶಗಳಿಗೂ ಕಾರ್ಬೊನೇಟ್ ಇವುಗಳ ಸಂಯೋಜನೆಯಿಂದ ಸಿದ್ಧಪಡಿಸಬಹುದು. ಆದರೆ ಹಲವು ಕಾರಣಗಳಿಂದಾಗಿ ಸೋಡಿಯಂ ನೈಟ್ರೇಟ್ ಕೃಷಿಯಲ್ಲಿ ಈಗ ಬಳಕೆಯಲ್ಲಿಲ್ಲ.

ಸೋಡಿಯಂ ನೈಟ್ರೇಟ್‌ನಲ್ಲಿ ಶೇಕಡಾ ೧೬ರಷ್ಟು ಸಾರಜನಕ ಮತ್ತು ೨೭ ರಷ್ಟು ಸೋಡಿಯಂ ಇರುತ್ತವೆ.

ಗುಣಗಳು:

 • ಸೋಡಿಯಂ ನೈಟ್ರೇಟ್ ನೀರಿನಲ್ಲಿ ಸುಲಭವಾಗಿ ಕರಗುತ್ತದೆ.
 • ಸಾರಜನಕವು ನೈಟ್ರೇಟ್ ರೂಪದಲ್ಲಿರುವುದರಿಂದ ಕೆಸರು ಪದ್ಧತಿಯಿಂದ ಬೆಳೆಸುವ ಬತ್ತವೊಂದನ್ನು ಬಿಟ್ಟು ಇತರೆ ಬೆಳೆಗಳಿಗೆ ಉಪಯೋಗಿಸಬಹುದು.
 • ನಿಸರ್ಗದಲ್ಲಿ ದೊರೆಯುವ ಸೋಡಿಯಂ ನೈಟ್ರೇಟ್ ಗೊಬ್ಬರದಲ್ಲಿ ಪೋಟ್ಯಾಸಿಯಂ, ಬೋರಾನ್, ಮ್ಯಾಂಗನೀಸ್, ಕ್ಯಾಲ್ಸಿಯಂ ಕ್ಲೋರೈಡ್, ಇತ್ಯಾದಿ ಹಲವು ಪೋಷಕಗಳು ಸಣ್ಣ ಪ್ರಮಾಣದಲ್ಲಿರುತ್ತವೆ.

ಅವಗುಣಗಳು :

 •  ಈ ಗೊಬ್ಬರವನ್ನು ನಿರಂತರವಾಗಿ ದೊಡ್ಡ ಪ್ರಮಾಣದಲ್ಲಿ ಮಣ್ಣಿಗೆ ಹಾಕಿದರೆ, ಸೋಡಿಯಂ ಸಂಗ್ರಹಗೊಂಡು, ಮಣ್ಣಿನ ಕಣಗಳ ರಚನೆಯು ಹಾಳಾಗುತ್ತದೆ. ಈ ದುಷ್ಪರಿಣಾಮವು ಎರೆ ಮಣ್ಣಿನಲ್ಲಿ ಎದ್ದು ಕಾಣುತ್ತದೆ. ಆದ್ದರಿಂದ ಕಡಮೆ ಮಳೆ ಬೀಳುವ ಒಣ ಹವೆಯು ಪ್ರದೇಶಗಳಲ್ಲಿ ಸೋಡಿಯಂ ನೈಟ್ರೇಟ್ ಸೂಕ್ತ ಗೊಬ್ಬರವೆನಿಸದು.
 • ಶೇಕಡಾವಾರು ಸಾರಜನಕವು ಅತಿ ಕಡಮೆಯಿರುವುದರಿಂದ ಸಾಗಾಣಿಕೆಯ ಖರ್ಚು ಅಧಿಕ.

v) ಕ್ಯಾಲ್ಸಿಯಂ ನೈಟ್ರೇಟ್ [Ca(NO3)2] : ಸಾಮಾನ್ಯವಾಗಿ  ಕ್ಯಾಲ್ಸಿಯಂ ನೈಟ್ರೇಟಿನ ಪೂರೈಕೆಯು ಯೂರೋಪ್ ಖಂಡದಿಂದ ಆಗುತ್ತಿದೆ ಎನ್ನಬಹುದು. ಇದರಲ್ಲಿ ಶೆಕಡಾ ೧೫.೫ ರಷ್ಟು ಸಾರಜನಕವಿದೆ. ಈ ಗೊಬ್ಬರದಲ್ಲಿ ಕ್ಯಾಲ್ಸಿಯಂ ಇರುವುದರಿಂದ, ಆಮ್ಲ ಮಣ್ಣಿಗೆ ಪ್ರಯೋಜನಕಾರಿ.

 • ಕ್ಯಾಲ್ಸಿಯಂ ನೈಟ್ರೇಟ್‌ನ್ನು ಎರಡು ವಿಧಾನಗಳಿಂದ ತಯಾರಿಸಬಹುದು.

ಕ್ಯಾಲ್ಸಿಯಂ ಕಾರ್ಬೊನೇಟ್ + ನೈಟ್ರಿಕ್ ಆಮ್ಲ → ಕ್ಯಾಲ್ಸಿಯಂ ನೈಟ್ರೇಟ + ಇಂಗಾಲದ ಡೈ ಆಕ್ಸೈಡ್ + ನೀರು
CaCO3+ 2HNO3→ Ca (NO3)2 + CO2 + H2O

ಕ್ಯಾಲ್ಸಿಯಂ ನೈಟ್ರೇಟನ್ನು ಬೇರ್ಪಡಿಸಿ, ಒಣಗಿಸಿ, ಗುಳಿಗೆಗಳ ರೂಪದಲ್ಲಿ ತಯಾರಿಸಲಾಗುತ್ತದೆ.

 • ನೈಟ್ರೋ ಫಾಸ್ಫೇಟನ್ನು ತಯಾರಿಸುವಾಗ, ಕ್ಯಾಲ್ಸಿಯಂ ನೈಟ್ರೇಟ್ ನಿರ್ಮಾಣಗೊಳ್ಳುತ್ತದೆ. ಸ್ಫಟಿಕ ರೂಪದಲ್ಲಿರುವ ಈ ವಸ್ತುವನ್ನು ಸೋಸಿ ಬೇರ್ಪಡಿಸಲಾಗುತ್ತದೆ.

ಕ್ಯಾಲ್ಸಿಯಂ ನೈಟ್ರೇಟ್, ಹವೆಯೊಳಗಿನ ಆರ್ದ್ರತೆಯನ್ನು ಹೀರಿಕೊಂಡು ಬಹುಬೇಗನೇದ್ರವ ರೂಪವನ್ನು ಪಡೆಯುತ್ತದೆ. ಗೊಬ್ಬರದ ಈ ಅವಗುಣವು ಅದರ ಬಳಕೆಯಲ್ಲಿರುವ ಅತಿ ದೊಡ್ಡ ಆತಂಕವೆನ್ನಬಹುದು.

ಗುಣಗಳು :

 • ಕ್ಯಾಲ್ಸಿಯಂ ನೈಟ್ರೇಟ್ ನೀರಿನಲ್ಲಿ ಸುಲಭವಾಗಿ ಕರಗುತ್ತದೆ.
 • ಆಮ್ಲ ಮಣ್ಣಿಗೆ ಸೂಕ್ತ ಗೊಬ್ಬರವೆನ್ನಬಹುದು.

ಅವಗುಣಗಳು :

 • ಈಗಾಗಲೇ ಸೂಚಿಸಿದಂತೆ ಕ್ಯಾಲ್ಸಿಯಂ ನೈಟ್ರೇಟ್ ಹವೆಯೊಳಗಿನ ಆರ್ದ್ರತೆಯನ್ನು ಹೀರಿಕೊಳ್ಳುತ್ತದೆಯಾದ್ದರಿಂದ ಬಹುಬೇಗನೇ ದ್ರಾವಣದಂತಾಗುತ್ತದೆ. ಆದ್ದರಿಂದ ಕೃಷಿಯಲ್ಲಿ ಇದನ್ನು ಉಪಯೋಗಿಸುವುದು ಬಹಳ ಕಷ್ಟ.
 • ಶೇಕಡಾವಾರು ಸಾರಜನಕವು ತುಲನಾತ್ಮಕವಾಗಿ ಅತಿ ಕಡಮೆ. ಆದ್ದರಿಂದ ಸಾಗಾಣಿಕೆಯ ಖರ್ಚು ಅಧಿಕಗೊಳ್ಳುತ್ತದೆ.

vi) ಅಮೋನಿಯಂ ನೈಟ್ರೇಟ್ (NH4NO4) : ನೈಟ್ರೀಕ್ ಆಮ್ಲಕ್ಕೆ ಅಮೋನಿಯಾವನ್ನು ಸೇರಿಸಿದರೆ, ಅಮೋನಿಯಂ ನೈಟ್ರೇಟ್ ತಯಾರಾಗುತ್ತದೆ. ರಾಸಾಯನಿಕ ಗೊಬ್ಬರಕ್ಕೆಂದು ತಯಾರಿಸಿದ ಅಮೋನಿಯಂ ನೈಟ್ರೇಟ್ನಲ್ಲಿ ಶೇಕಡಾ ೩೩ರಿಂದ ೩೪ ರಷ್ಟು ಸಾರಜನಕವಿರುತ್ತದೆ. ಯೂರೋಪ ಖಂಡದ ದೇಶಗಳಲ್ಲಿ ಈ ಗೊಬ್ಬರವು ಹೆಚ್ಚು ಬಳಕೆಯಲ್ಲಿದೆ. ಉತ್ತರ ಅಮೇರಿಕೆಯಲ್ಲಿಯೂ, ಈ ಗೊಬ್ಬರದ ಬಗ್ಗೆ ಕೆಲವು ಮಟ್ಟಿಗೆ ಬೇಡಿಕೆಯಿದೆ.

ಗುಣಗಳು :

 • ಅಮೋನಿಯಿಂ ನೈಟ್ರೇಟ್‌ನಲ್ಲಿ ಸಾರಜನಕದ ಪ್ರಮಾಣವು ತುಲನಾತ್ಮಕವಾಗಿ ಅಧಿಕವಾಗಿರುತ್ತದೆ.
 • ಈ ಗೊಬ್ಬರವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ.
 • ಒಟ್ಟು ಸಾರಜನಕದ ಅರ್ಧದಷ್ಟು ಭಾಗವು ಅಮೋನಿಯ ರೂಪದಲ್ಲಿಯೂ, ಉಳಿದ ಅರ್ಧ ಭಾಗವು ಸಾರಜನಕವು ನೈಟ್ರೇಟ್ ರೂಪದಲ್ಲೂ ಇದೆ.

ಅವಗುಣಗಳು :

 • ಹವೆಯೊಳಗಿನ ಅರ್ಧ್ರತೆಯನ್ನು ಅತಿ ಶೀಘ್ರವಾಗಿ ಹೀರಿಕೊಳ್ಳುವುದರಿಂದ ಗೊಬ್ಬರವು ದ್ರವರೂಪವನ್ನು ತಾಳಿ ಬಳಸಲು ಬಹಳ ಅನಾನುಕೂಲವುಂಟಾಗುತ್ತದೆ.
 • ಸುಲಭವಾಗಿ ಉತ್ಕರ್ಷಣೆಯನ್ನು ಹೊಂದುವ ಎಣ್ಣೆ ಇತ್ಯಾದಿಗಳ ಸಂಪರ್ಕವು ಬಂದರೆ, ಅಮೋನಿಯಂ ನೈಟ್ರೇಟ್ ಸ್ಫೋಟಗೊಳ್ಳಬಹುದು. ಆದ್ದರಿಂದ ಈ ಗೊಬ್ಬರವನ್ನು ಸಂಗ್ರಹಿಸುವಾಗ ಮತ್ತು ಬಳಸುವಾಗ ಅತಿ ಎಚ್ಚರದಿಂದ ಇರಬೇಕು.
 • ಉಗ್ರಾಣದಲ್ಲಿ ಸಂಗ್ರಹಿಸಿಡುವಾಗ, ಒಂದರ ಮೇಲೆ ಒಂದರಂತೆ ೮ – ೧೦ ಚೀಲಗಳಿಗಿಂತ ಹೆಚ್ಚಿಗೆ ಇಟ್ಟರೆ ಗೊಬ್ಬರವು ಗಟ್ಟಿಯಾಗಿ ಬಳಸುವಾಗ ಅನಾನುಕೂಲಗಳಾಗಬಹುದು.