ಸಸ್ಯದ ಸಂಪೂರ್ಣ ವಿಶ್ಲೇಷಣೆ : ಇಡೀ ಸಸ್ಯವನ್ನು ಇಲ್ಲವೇ ಅದರ ಒಂದು ಭಾಗವನ್ನು ಪ್ರಯೋಗಾಲಯಕ್ಕೆ ತಂದು, ಒಣಗಿಸಿ, ಪುಡಿ ಮಾಡಿ, ಸುಟ್ಟು ಭಸ್ಮವನ್ನಾಗಿಸಿ ಇಲ್ಲವೇ ಆಮ್ಲಗಳಲ್ಲಿ ಕರಗಿಸಿ, ಸಸ್ಯದಲ್ಲಿರುವ ವಿವಿಧ ಪೋಷಕಗಳ ಪ್ರಮಾಣವನ್ನು ಕಂಡು ಹಿಡಿಯಬಹುದು. ಈ ವಿಧಾನವನ್ನು ಅನುಸರಿಸಿದರೆ, ಹಲವು ಪೋಷಕಗಳನ್ನೂ ಮತ್ತು ಪ್ರತಿಯೊಂದರ ನಿಖರವಾದ ಪ್ರಮಾಣವನ್ನೂ ತಿಳಿಯಬಹುದು. ಸಸ್ಯಗಳನ್ನು ಅಥವಾ ಸಸ್ಯದ ಭಾಗಗಳನ್ನು ವಿಶ್ಲೇಷಣೆಗೆಂದು ಆರಿಸುವಾಗ ಸಸ್ಯಾಂಗಗಳ ಪರೀಕ್ಷೆ ವಿಭಾಗದಲ್ಲಿ ಸೂಚಿಸಿದ ಸಂಗತಿಗಳನ್ನು ಗಮನದಲ್ಲಿಡಬೇಕು. ಈ ವಿಧಾನವು ಸಸ್ಯಾಂಗಗಳ ವಿಶ್ಲೇಷಣೆಗಿಂತ ಕೆಳಗಿನ ವಿಷಯಗಳಲ್ಲಿ ಭಿನ್ನವಾಗಿರುತ್ತದೆ.

i) ಈ ವಿಧಾನದಿಂದ ಸಸ್ಯದಲ್ಲಿರುವ ಪೋಷಕಗಳ ಪ್ರಮಾಣವನ್ನು ತಿಳಿಯಲು ಹೆಚ್ಚು ಸಮಯವು ಬೇಕಾಗುತ್ತದೆ.

ii) ರಾಸಾಯನಿಕಗಳು ಮತ್ತು ಉಪಕರಣಗಳಿಗೆ ಹೆಚ್ಚು ಹಣವು ವ್ಯಯವಾಗುತ್ತದೆ.

iii) ಸಸ್ಯಾಂಗಗಳ ಪರೀಕ್ಷೆಯ ವಿಧಾನದಲ್ಲಿ ಪರೀಕ್ಷಿಸುವ ಸಮಯದಲ್ಲಿ ಸಸ್ಯಗಳಿಗೆ ಪೂರೈಕೆಯಾಗುವ ಪೋಷಕಗಳ ಪ್ರಮಾಣವು ಗೊತ್ತಾಗುತ್ತದೆ. ಆದರೆ ಸಂಪೂರ್ಣ ವಿಶ್ಲೇಣೆಯ ಈ ವಿಧಾನದಲ್ಲಿ ಪರೀಕ್ಷೆಯನ್ನು ಮಾಡುವ ಸಮಯದವರೆಗೆ ಸಸ್ಯದಲ್ಲಿ ಸಂಗ್ರಹವಾದ ಒಟ್ಟು ಪೋಷಕಗಳ ಪ್ರಮಾಣವು ಗೊತ್ತಾಗುತ್ತದೆ.

ಸಸ್ಯ ವಿಶ್ಲೇಷಣೆಯ ಇತರೆ ವಿಧಾನಗಳು :ಮೇಲೆ ವಿವರಿಸಿದ ಪದ್ಧತಿಗಳಲ್ಲದೇ, ವಿವಿಧ ರೀತಿಗಳನ್ನು ಅನುಸರಿಸಿ ತಿಳಿದುಬಂದ ವಿವರಣೆಗಳಿಂದ ಸಸ್ಯಗಳಿಗೆ ಪೂರೈಸಬೇಕಾದ ಪೋಷಕಗಳ ಪ್ರಮಾಣವನ್ನು ನಿರ್ಧರಿಸುವ ಪ್ರಯತ್ನಗಳು ನಡೆದಿವೆ. ಅವುಗಳಲ್ಲಿ ಪ್ರಮುಖ ವಿಧಾನಗಳ ಸಂಕ್ಷಿಪ್ತ ವಿವರಗಳು ಈ ಕೆಳಗಿನಂತಿವೆ. (ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬಹುದು).

i) ಪೋಷಕಗಳ ಸಂದಿಗ್ದ ಮಟ್ಟ : ‘ಪೋಷಕಗಳ ಸಂದಿಗ್ಧ ಮಟ್ಟ’ ಎಂಬ ಪದಕ್ಕೆ ಹಲವು ವಿವರಣೆಗಳಿವೆ.

 • ಸಸ್ಯದ ಅತಿ ಹೆಚ್ಚಿನ ಬೆಳವಣಿಗೆಗೆ ಬೇಕಾಗುವ ಪೋಷಕಗಳ ಪ್ರಮಾಣಕ್ಕಿಂತ ಸ್ವಲ್ಪ ಕಡಮೆ ಮಟ್ಟ.
 • ಸಸ್ಯದ ಅತಿ ಹೆಚ್ಚಿನ ಬೆಳವಣಿಗೆಗೆ ಬೇಕಾಗುವಷ್ಟು ಪೋಷಕಗಳ ಪ್ರಮಾಣ.
 • ಸಸ್ಯದ ಬೆಳವಣಿಗೆಯು ಅತ್ಯುನ್ನತ ಮಟ್ಟವನ್ನು ಮುಟ್ಟಿ ಬೆಳವಣಿಗೆಯು ಕಡಮೆಯಾಗಲು ಆರಂಭವಾಗುವಾಗ ಇರುವ ಪೋಷಕಗಳ ಪ್ರಮಾಣ.
 • ಅತಿ ಹೆಚ್ಚಿನ ಇಳುವರಿಯನ್ನು ಪಡೆಯಲು ಬೇಕಾಗುವ ಕನಿಷ್ಠ ಪ್ರಮಾಣದ ಪೋಷಕಗಳೂ, ಬೆಳೆಗಾರನ ದೃಷ್ಟಿಯಿಂದ ಈ ಮುಂದಿನ ವಿವರಣೆಯು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

ಪೋಷಕವು ಯಾವ ಮಟ್ಟಕ್ಕಿಂತ ಕಡಿಮೆಯಾದೊಡನೆಯ ಬೆಳೆಯ ಇಳುವರಿ ಮತ್ತು ಉತ್ಪತ್ತಿಯ ಗುಣಮಟ್ಟಗಳು ಕಡಮೆಯಾಗತೊಡಗುತ್ತದೆಯೋ, ಆ ಮಟ್ಟಕ್ಕೆ ಪೋಷಕಗಳ ಸೂಕ್ಷ್ಮ ಮಟ್ಟ ಎಂದು ಹೇಳಬಹುದು.

ಪೋಷಕಗಳ ಸೂಕ್ಷ್ಮ ಮಟ್ಟವು, ವಿವರಣೆಗಳಲ್ಲಿ ಹೇಳಿದಂತೆ ಒಂದು ನಿಖರವಾದ ಬಿಂದುವಲ್ಲ. ಆದ್ದರಿಂದ ಸೂಕ್ಷ್ಮ ಮಟ್ಟವನ್ನು ನಿರ್ಧರಿಸುವ ಕಾರ್ಯವು ಕಷ್ಟಕರವಾದುದು. ಅದರ ಬದಲು, ಪೋಷಕಗಳ ಸೂಕ್ಷ್ಮ ಮಟ್ಟದ ವ್ಯಾಪ್ತಿಯನ್ನು ನಿರ್ಧರಿಸುವುದು ಸಾಧ್ಯ. ಆದ್ದರಿಂದಲೇ ವಿಶ್ಲೇಷಿಸಿ ಪೋಷಕಗಳ ಪ್ರಮಾಣವು ಸೂಕ್ಷ್ಮ ಮಟ್ಟ ಅಥವಾ ಸೂಕ್ಷ್ಮ ವ್ಯಾಪ್ತಿಗಿಂತ ಕಡಮೆ ಆಯಿತೆಂದರೆ, ಸಂಬಂಧಿಸಿದ ಪೋಷಕಗಳನ್ನು ಪೂರೈಸುವ ಸಮಯವು ಪ್ರಾಪ್ತವಾದಂತೆ.

ii) ಪರೀಕ್ಷಣೆ ಮತ್ತು ಸಲಹೆಗಳ ಸಮಗ್ರ ಪದ್ಧತಿ : ದಕ್ಷಿಣ ಆಫ್ರಿಕದ ನಾತಾಳ ವಿಶ್ವವಿದ್ಯಾಲಯದಲ್ಲಿರುವ ಬ್ಯೂಫೀಲ್ಸ್ ಎಂಬ ವಿಜ್ಞಾನಿ ಬೆಳೆಗಳೀಗೆ ಬೇಕಾಗುವ ಪೋಷಕಗಳ ಪ್ರಮಾಣವನ್ನು ನಿರ್ಧರಿಸಲು ೧೯೭೩ರಲ್ಲಿ ಒಂದು ಸಮಗ್ರ ಪದ್ಧತಿಯನ್ನು ಪ್ರಕಟಿಸಿದರು. ಬೆಳೆಯ ಇಳುವರಿಯನ್ನು ತಗ್ಗಿಸುವ ಸಕಲ ಸಂಗತಿಗಳನ್ನು ಗುರುತಿಸಿ, ಅವಶ್ಯವಿರುವ ಪೋಷಕಗಳನ್ನು ಪೂರೈಸಲು ಈ ಪದ್ಧತಿಯಲ್ಲಿ ಆಸ್ಪದವಿದೆ. ಈ ಪದ್ಧತಿಯ ಪೂರ್ಣ ಪ್ರಯೋಜನವು ದೊರೆಯಬೇಕಾದರೆ ಕೆಳಕಾಣಿಸಿದ ವಿವರಗಳು ಅವಶ್ಯಕ.

 • ಬೆಳೆಯ ಇಳುವರಿಯ ಮೇಲೆ ಪರಿಣಾಮಬೀರುವ ಎಲ್ಲ ಸಂಗತಿಗಳನ್ನು ನಿಖರವಾಗಿ ಸ್ಪಷ್ಟಪಡಿಸಬೇಕು.
 • ಈ ಸಂಗತಿಗಳಿಗೂ ಬೆಳೆಯ ಇಳುವರಿಗೂ ಇರುವ ಸಂಬಂಧವನ್ನು ವಿವರವಾಗಿ ತಿಳಿಯಪಡಿಸಬೇಕು.
 • ಪ್ರತಿ ಪೋಷಕಕ್ಕೆ ಸಂಬಂಧಿಸಿದ, ತುಲನೆಗೆ ಅನುಕೂಲವಾಗುವ, ಮಾದರಿಯ ಅಥವಾ ಆದರ್ಶವೆನಿಸುವ ಸೂಚೀ ಸಂಖ್ಯೆಯನ್ನು ನಿರ್ಧರಿಸಬೇಕು.
 • ಈ ಸೂಚೀ ಸಂಖ್ಯೆಯ ಮೇಲಿಂದ ಅಸ್ತಿತ್ವದಲ್ಲಿರುವ ಪರಿಸ್ಥಿತಿಗನುಗುಣವಾಗಿ ಪೋಷಕಗಳನ್ನು ಪೂರೈಸುವ ಬಗ್ಗೆ ಸಲಹೆಯನ್ನು ಕೊಡಬೇಕು.
 • ಸೂಚೀ ಸಂಖ್ಯೆಯನ್ನು ಸತತವಾಗಿ ಸುಧಾರಿಸುತ್ತಿರಬೇಕು.

ಮೇಲಿನ ಪದ್ಧತಿಯನ್ನು ಅನುಸರಿಸುವುದರಿಂದ ಹಲವು ಪ್ರಯೋಜನಗಳಿವೆಯೆಂದು ಹೇಳಲಾಗಿದೆ. ಪ್ರಮುಖವಾದವುಗಳು ಕೆಳಗಿನಂತಿವೆ.

 • ಅಧಿಕ ಇಳುವರಿಯನ್ನು ಪಡೆಯಲು ದೊಡ್ಡ ಪ್ರಮಾಣದಲ್ಲಿ ಪೋಷಕಗಳನ್ನು ಪೂರೈಸಬೇಕಾದಾಗ, ಪೋಷಕಗಳಲ್ಲಿ ಪರಸ್ಪರ ಇರಬೇಕಾದ ಸಮತೋಲನಕ್ಕೆ ಬಹಳ ಮಹತ್ವವಿದೆ. ಸಮತೋಲನದ ತತ್ವವನ್ನು ಈ ಪದ್ಧತಿಯಲ್ಲಿ ಅಳವಡಿಸಿಕೊಂಡು ಪೋಷಕಗಳ ಕೊರತೆಯನ್ನು ನಿರ್ಧರಿಸಲಾಗುತ್ತದೆ.
 • ಯಾವುದೇ ಬೆಳೆಯ ಎಲೆಯಲ್ಲಿರಬೇಕಾದ ಸೂಚೀ ಸಂಖ್ಯೆಯು ಒಮ್ಮೆ ನಿರ್ಧಾರಗೊಂಡಿತೆಂದರೆ, ಆ ಬೆಳೆಯನ್ನು ಯಾವುದೇ ಪ್ರದೇಶದಲ್ಲಿ ಬೆಳೆದಾಗಲೂ ಇದೇ ಸೂಚೀ ಸಂಖ್ಯೆಯನ್ನು ಬಳಸಬಹುದು.
 • ಈ ಪದ್ಧತಿಯಿಂದ ಸಸ್ಯದ ಬೆಳವಣಿಗೆಯ ಯಾವ ಹಂತದಲ್ಲಿ ಬೇಕಾದರೂ ಪೋಷಕಗಳ ಕೊರತೆಯನ್ನು ಗುರುತಿಸಬಹುದು.
 • ಪೋಷಕಗಳ ಅಧಿಕ್ಯದಿಂದ ಇಲ್ಲವೇ ಕೊರತೆಯಿಂದ ಬೆಳೆಯ ಇಳುವರಿಯ ಮೇಲೆ ಆಗುವ ದುಷ್ಪರಿಣಾಮವನ್ನು ಗುರುತಿಸಬಹುದು.
 • ಇಳುವರಿಯನ್ನು ತಗ್ಗಿಸುವಲ್ಲಿ ಪ್ರತಿ ಪೋಷಕದ ಪಾತ್ರದ ಮೇಲಿಂದ ಅವುಗಳನ್ನು ಒಂದು ಅನುಕರಮದಲ್ಲಿ ಹೊಂದಿಸಬಹುದು.

iii) ಬೆಳೆಯ ಸಾಮಯಿಕ ವರದಿ ಪದ್ಧತಿ : ಸಸ್ಯದಲ್ಲಿರುವ ಪೋಷಕಗಳ ಸೂಕ್ಷ್ಮ ಮಟ್ಟದ ಸೂಚೀ ಅಂಶದ ಆಧಾರದ ಮೇಲೆ ಕ್ಲೆಮೆಂಟ್ಸ ಎಂಬ ವಿಜ್ಞಾನಿ, ಹವಾಯಿಯ ಕಬ್ಬಿಣದ ಬೆಳೆಗೆಂದು ಈ ಪದ್ಧತಿಯನ್ನು ಅಭಿವೃದ್ಧಿಪಡಿಸಿದರು. ಕಬ್ಬು ಬೆಳೆಯುತ್ತಿರುವಾಗ ಬೆಳೆಯ ನಿರ್ಧಿಷ್ಟ ಭಾಗಗಳನ್ನು ಪ್ರತಿ ೩೫ ದಿನಗಳಿಗೆ ಒಮ್ಮೆ ಸಂಗ್ರಹಿಸಿ ಅವುಗಳಲ್ಲಿರುವ ಸಾರಜನಕ, ಶರ್ಕರ ಮತ್ತು ಆರ್ದ್ರತೆ ಇತ್ಯಾದಿಗಳನ್ನು ಪ್ರಯೋಗಶಾಲೆಯಲ್ಲಿ ಕಂಡುಕೊಳ್ಳಲಾಗುತ್ತದೆ. ರಂಜಕ ಮತ್ತು ಪೋಟ್ಯಾಸಿಯಂಗಳ ಮಟ್ಟವನ್ನು ಕಂಡುಕೊಳ್ಳಲು ೩೫ ದಿನಗಳಿಗಿಂತ ಹೆಚ್ಚು ಅಂತರದಲ್ಲಿ ಇಂಥ ಭಾಗಗಳನ್ನು ಸಂಗ್ರಹಿಸಲಾಗುತ್ತದೆ. ವಿಶ್ಲೇಷಣೆಯಿಂದ ದೊರೆತ ಅಂಕಿ ಅಂಶಗಳ ಮೇರೆಗೆ ಪೋಷಕಗಳ ಮತ್ತು ನೀರಿನ ಪೂರೈಕೆಯಲ್ಲಿ ಹಾಗೂ ಇತರ ಬೇಸಾಯ ಕ್ರಮಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿ ಕಬ್ಬಿನ ಉತ್ತಮ ಇಳುವರಿಯನ್ನು ಪಡೆಯಲಾಗುತ್ತದೆ.

ಸಾರಜನಕ, ರಂಜಕ ಮತ್ತು ಪೋಟ್ಯಾಸಿಯಂಗಳ ಕೊರತೆ ಅಥವಾ ಹೆಚ್ಚಳವನ್ನು ತಿಳಿದುಕೊಳ್ಳಲು ಇವುಗಳ ಸೂಚೀ ಸಂಖ್ಯೆಗಳನ್ನು ನಿರ್ಧರಿಸಿ, ಸಸ್ಯದ ವಿಶ್ಲೇಷಣೆಯಿಂದ ದೊರೆತ ಪ್ರಮಾಣವನ್ನು ಸೂಚಿ ಸಂಖ್ಯೆಗಳನ್ನು ನಿರ್ಧರಿಸಿ, ಸಸ್ಯದ ವಿಶ್ಲೇಷಣೆಯಿಂದ ದೊರೆತ ಪ್ರಮಾಣವನ್ನು ಸೂಚೀ ಸಂಖ್ಯೆಗಳೊಡನೆ ತುಲನೆ ಮಾಡಲಾಗುತ್ತದೆ. ಇದರ ಮೇಲಿಂದ ಸಸ್ಯಗಳಲ್ಲಿ ಪೋಷಕಾಂಶಗಳ ಕೊರತೆ ಇಲ್ಲವೇ ಹೆಚ್ಚಳವನ್ನು ತಿಳಿಯಬಹುದು.

ಕ್ಯಾಲ್ಸಿಯಂ, ಮೆಗ್ನೀಸಿಯಂ, ಗಂಧಕ ಮತ್ತು ಕಿರು ಪೋಷಕಗಳ ಕೊರತೆಯನ್ನು ತಿಳಿಯಲು ಕಬ್ಬಿನ ತುದಿಯಿಂದ ೩,೪,೫ ಮತ್ತು ೬ನೇ ಎಲೆಗಳ ಒರೆಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುತ್ತದೆ.

iv) ವಿಕಿರಣ ಐಸೋಟೋಪ್‌ಗಳ ಬಳಕೆ: ಒಂದೇ ಮೂಲಧಾತುವಿನ ವಿಭಿನ್ನ ದ್ರವ್ಯರಾಶಿಗಳಿಗೆ ಆಧಾತುವಿನ ಐಸೋಟೋಪ ಎಂದು ಹೆಸರು. ಕೆಲವು ಐಸೋಟೋಪ್ ಗಳು ಸ್ಥಿತವಾಗಿರುತ್ತವೆ. ಆದರೆ ಇನ್ನು ಕೆಲವು , ಕಿರಣಗಳನ್ನು ಹೊರ ಸೋಸುತ್ತವೆ. ಪಿ – ೩೧ ಸ್ಥಿರ ಐಸೋಟೋಪ್‌ನ ಉದಾಹರಣೆಯಾದರೆ, ಪಿ – ೩೨ ವಿಕಿರಣ ಐಸೋಟೋಪ. ಈ ವಿಕಿರಣ ಐಸೋಟೋಪ್‌ನ ಸಹಾಯದಿಂದ ಮಣ್ಣಿನಲ್ಲಿರುವ ಲಭ್ಯ ಪೋಷಕಗಳ ಪ್ರಮಾಣವನ್ನು ಕಂಡುಹಿಡಿಯಬಹುದು. ಅಮೇರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಸಂಶೋಧನೆಗಳನ್ನು ನಡೆಸಿದ ಫ್ರೀಡ್ ಮತ್ತು ಡೀನ್‌ ಎಂಬ ವಿಜ್ಞಾನಿಗಳು ಮಣ್ಣಿನಲ್ಲಿರುವ ಲಭ್ಯ ರಂಜಕವನ್ನು ಸಸ್ಯಗಳ ವಿಶ್ಲೇಷಣೆಯಿಂದ ಕಂಡು ಹಿಡಿಯಲು ಕೆಳಗೆ ತಿಳಿಸಿದ ವಿಧಾನವನ್ನು ಅನುಸರಿಸಿದರು.

ನಿರ್ಧಿಷ್ಟ ಪ್ರಮಾಣದ ರಂಜಕ ಗೊಬ್ಬರದೊಡನೆ, ಸ್ವಲ್ಪ ಪ್ರಮಾಣದಲ್ಲಿ ವಿಕಿರಣ ರಂಜಕ (ಪಿ – ೩೨)ವನ್ನು ಮಿಶ್ರಮಾಡಿ ಸಸ್ಯಗಳಿಗೆ ಮಣ್ಣಿನ ಮುಖಾಂತರ ಪೂರೈಸಲಾಯಿತು. ಕೆಲವು ದಿನಗಳ ನಂತರ ಸಸ್ಯಗಳನ್ನು ಕತ್ತರಿಸಿ ಅವುಗಳನ್ನು ವಿಶ್ಲೇಷಿಸಿ, ಅವುಗಳಲ್ಲಿರುವ ರಂಜಕದ ಪ್ರಮಾಣವನ್ನು ಕಂಡುಹಿಡಿಯಲಾಯಿತು. ಕೆಳಗಿನ ಸಮೀಕರಣದಿಂದ ಮಣ್ಣಿನಲ್ಲಿರುವ ಲಭ್ಯ ರಂಜಕದ ಪ್ರಮಾಣವನ್ನು ಲೆಕ್ಕ ಮಾಡಲಾಯಿತು.

ಲ.ರಂ. = ರಾ.ರಂ.(.ರಂ)
                  ಸ.ರಂ.

ಇದರಲ್ಲಿ,

 • ಲ.ರಂ. = ಸಸ್ಯಗಳಿಗೆ ಲಭ್ಯವಾಗಬಲ್ಲ, ಮಣ್ಣಿನಲ್ಲಿರುವ ರಂಜಕ
 • ರಾ.ರಂ. =ರಾಸಾಯನಿಕ ಗೊಬ್ಬರದ ಮೂಲಕ ಮಣ್ಣಿಗೆ ಪೂರೈಕೆ ಮಾಡಿದ ರಂಜಕ
 • ಸ.ರಂ.=ರಾಸಾಯನಿಕ ಗೊಬ್ಬರದಿಂದ ಸಸ್ಯವು ಹೀರಿಕೊಂಡ ರಂಜಕ.

ಇದೇ ಸಮಯದಲ್ಲಿ, ಲಾರ್ಸೆನ್‌ ಎಂಬ ವಿಜ್ಞಾನಿ, ಯೂರೋಪಿಯನಲ್ಲಿ ಮೇಲಿನದಕ್ಕೆ ಹೋಲುವ ಸಮೀಕರಣವನ್ನು ಅಭಿವೃದ್ಧಿಪಡಿಸಿದರು.

ವಿಕಿರಣ ಪೋಷಕವು ದೊರೆಯದಿದ್ದಲ್ಲಿ ಅಥವಾ ವಿಕಿರಣವನ್ನು ಅಳೆಯುವ ಸಾಧನ ಸೌಲಭ್ಯಗಳು ಇಲ್ಲದಿದ್ದಾಗ ಸಹ ಬೇರೆ ರೀತಿಯಿಂದಲೂ ಮಣ್ಣಿನಲ್ಲಿರುವ ಲಭ್ಯ ಪೋಷಕವನ್ನು ಕಂಡುಕೊಳ್ಳಬಹುದು. ಕೆಳಗಿನ ವಿವರಣೆಯಿಂದ ಈ ವಿಧಾನವು ಸ್ಪಷ್ಟವಾಗುತ್ತದೆ.

ಬೆಳೆಯೊಂದಕ್ಕೆ ವಿವಿಧ ಪ್ರಮಾಣದಲ್ಲಿ ಸಂಬಂಧಿಸಿದ ಪೋಷಕಗಳನ್ನು ಮಣ್ಣಿನ ಮೂಲಕ ಪೂರೈಸಬೇಕು. ಬೆಳೆದು ಬಂದ ಸಸ್ಯಗಳನ್ನು ಕತ್ತರಿಸಿ ಅವುಗಳಲ್ಲಿರುವ ಪೋಷಕಗಳ ಪ್ರಮಾಣವನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಬೇಕು. ಚಿತ್ರ ೯ರಲ್ಲಿ ತೋರಿಸಿದಂತೆ, ರೇಖಾ ಚಿತ್ರವನ್ನು ತಯ್ಯಾರಿಸಬೇಕು. ಮಣ್ಣಿಗೆ ಪೂರೈಸಿದ ಪೋಷಕಗಳ ಪ್ರಮಾಣವನ್ನು ಮತ್ತು ಸಸ್ಯಗಳು ಹೀರಿಕೊಂಡ ಆ ಪೋಷಕಗಳ ಪ್ರಮಾಣದ ಸಂಬಂಧವನ್ನು ತೋರಿಸುವ ರೇಖೆಯನ್ನು ಹಿಂದಿನ ದಿಕ್ಕಿನಲ್ಲಿ ಬೆಳೆಸಬೇಕು. ಲಭ್ಯ ಪೋಷಕಗಳ ಪ್ರಮಾಣವನ್ನು (ಚಿತ್ರ – ೯ರಲ್ಲಿ ತೋರಿಸಿದಂತೆ ) ಕಂಡುಹಿಡಿಯಬೇಕು.

ಮೇಲೆ ವಿವರಿಸಿದ ಎರಡೂ ಬಗೆಯ ಪದ್ಧತಿಗಳಲ್ಲಿ ಮೂಲಭೂತವಾದ ಅಂತರವಿದೆ.

ಬೆಳೆಗೆ ಎರಡು ಮೂಲಗಳಿಂದ ಒಂದು ಪೋಷಕವು ಪೂರೈಕೆಯಾದರೆ ಆ ಪೋಷಕವು ಎರಡು ಮೂಲಗಳಲ್ಲಿ (ಇಲ್ಲಿ ಮಣ್ಣಿನಲ್ಲಿರುವ ರಂಜಕವು ಒಂದು ಮೂಲವಾದರೆ ರಾಸಾಯನಿಕ ಗೊಬ್ಬರದ ರೂಪದಲ್ಲಿ ಹೊರಗಿನಿಂದ ಪೂರೈಸಿದ ರಂಜಕವು ಇನ್ನೊಂದು ಮೂಲ) ಯಾವ ಪ್ರಮಾಣದಲ್ಲಿ ಬೆಳೆಯು ಸಂಬಂಧಿಸಿದ ಪೋಷಕವನ್ನು ಹೀರಿಕೊಳ್ಳುತ್ತದೆ ಎಂಬ ತತ್ವದ ಆಧಾರದ ಮೇಲೆ ಐಸೋಟೋಪ್ ಪದ್ಧತಿಯು ಅವಲಂಬಿಸಿದೆ. ಇನ್ನೊಂದು ವಿಧಾನದಲ್ಲಿ ಸಸ್ಯಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಪೂರೈಸಿದ ಪೋಷಕಕ್ಕೂ ಬೆಳೆಯು ಆ ಪೋಷಕವನ್ನು ಹೀರಿಕೊಳ್ಳುವ ಪ್ರಮಾಣಕ್ಕೂ ಇರುವ ಸಂಬಂಧವನ್ನು ನಿರ್ಧರಿಸಿ ಅದೇ ಸಂಬಂಧವನ್ನು ಪೋಷಕವನ್ನು ಪೂರೈಸದೇ ಇದ್ದಾಗ ಬೆಳೆಯು ಹೀರಿಕೊಳ್ಳುವ ಪೋಷಕದ ಪ್ರಮಾಣಕ್ಕೆ ವಿಸ್ತರಿಸಿ ಮಣ್ಣಿನಲ್ಲಿರುವ ಪೋಷಕದ ಪ್ರಮಾಣವನ್ನು ಕಂಡುಹಿಡಿಯಲಾಗುತ್ತದೆ.

ಚಿತ್ರ ೯ - ಪೋಷಕಗಳ ವಿಕಿರಣ ರೂಪದ ಉಪಯೋಗವನ್ನು ಮಾಡಲು ಸಾಧ್ಯವಾಗದಾಗ, ಲಭ್ಯ ಪೋಷಕವನ್ನು ಕಂಡುಹಿಡಿಯುವ ವಿಧಾನ. (ಪುಟ ಸಂಖ್ಯೆ - ೧೩೯)

ಐಸೋಟೋಪ್ ಪದ್ಧತಿಯಿಂದ ಲಭ್ಯ ಪೋಷಕವನ್ನು ಕಂಡುಕೊಳ್ಳುವ ವಿಧಾನದಲ್ಲಿ ಕೆಲವು ಹೆಚ್ಚಿನ ಪ್ರಯೋಜನಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತಿವೆ.

 • ಬೆಳೆಗೆ ಯಾವ ಪ್ರಮಾಣದಲ್ಲಿ ಪೋಷಕಗಳನ್ನು ಪೂರೈಸಿದರೂ ದೊರೆಯುವ ಪರಿಣಾಮವು ಒಂದೇ. ಆದ್ದರಿಂದ ಸರಿಯೆನಿಸಿದ ಒಂದು ಪ್ರಮಾಣದಲ್ಲಿ ಪೋಷಕಗಳನ್ನು ಪೂರೈಸಿದರೆ ಸಾಕು. ಆದರೆ ಐಸೋಟೋಪ್ ನ ಬಳಕೆಯನ್ನು ಮಾಡದ ಇನ್ನೊಂದು ವಿಧಾನದಲ್ಲಿ ಹಲವಾರು ಪ್ರಮಾಣಗಳಲ್ಲಿ ಪೋಷಕಗಳನ್ನು ಪೂರೈಸಬೇಕಾದುದು ಅನಿವಾರ್ಯ.
 • ಐಸೋಟೋಪ್ ಪದ್ಧತಿಯಲ್ಲಿ, ಬೆಳೆಗೆ ಅವಶ್ಯವಿರುವ ಪ್ರಮಾಣದಲ್ಲಿ ಪೋಷಕಗಳನ್ನು ಒದಗಿಸಲು ಸಾಧ್ಯವಿರುವುದರಿಂದ, ಸಸ್ಯದ ಬೆಳವಣಿಗೆಯು ಉತ್ತಮವಾಗಿರುತ್ತದೆ. ಆದರೆ, ಎರಡನೆಯ ವಿಧಾನದಲ್ಲಿ ವಿವಿಧ ಪ್ರಮಾಣದಲ್ಲಿ ಪೋಷಕಗಳನ್ನು ಪೂರೈಸಲೇಬೇಕಾಗುವುದರಿಂದ ಕಡಮೆ ಪ್ರಮಾಣದಲ್ಲಿ ಪೋಷಕಗಳನ್ನು ಪಡೆದು ಸಸ್ಯಗಳ ಬೆಳವಣಿಗೆಯು ಕುಂಠಿತವಾಗಿರುತ್ತದೆ.
 • ಐಸೋಟೋಪ್ ಪದ್ಧತಿಯಿಂದ ಅಂಕಿ ಅಂಶಗಳು ನೇರವಾಗಿ ದೊರೆಯುತ್ತವೆ. ಆದರೆ, ಎರಡೆನೆಯ ಪದ್ಧತಿಯಿಂದ ದೊರೆತ ಪರಿಣಾಮವು ಅಪ್ರತ್ಯಕ್ಷವಾಗಿ ವಿಸ್ತರಣೆಯಿಂದ ಪಡೆದುಕೊಂಡದ್ದು.
 • ಸಸ್ಯದ ಬೆಳವಣಿಗೆಯ ಪ್ರಮಾಣಕ್ಕೂ ಐಸೋಟೋಫ ಪದ್ಧತಿಯಿಂದ ದೊರೆತ ಪರಿಣಾಮಕ್ಕೂ ಸಂಬಂಧವಿರುವುದಿಲ್ಲ.

ಮಣ್ಣಿನವಿಶ್ಲೇಷಣೆ

ಸಾಗುವಳಿ ಮಾಡುತ್ತಿರುವ ಭೂ ಪ್ರದೇಶದ ಮಣ್ಣನ್ನು ವಿಶ್ಲೇಷಿಸಿ, ಅದರಲ್ಲಿರುವ ವಿವಿಧ ಪೋಷಕಗಳ ಪ್ರಮಾಣವನ್ನು ಕಂಡುಹಿಡಿದು, ಉತ್ತಮ ಇಳುವರಿಯನ್ನು ಪಡೆಯಲು ಬೆಳೆಗೆ ಪೂರೈಸಬೇಕಾದ ಪೋಷಕಗಳನ್ನು ಮತ್ತು ಅವುಗಳ ಪ್ರಮಾಣವನ್ನು ಅಂದಾಜು ಮಾಡುವ ಪದ್ಧತಿಯು ಹಲವು ವರ್ಷಗಳಿಂದ ರೂಢಿಯಲ್ಲಿದೆ. ಪೂರೈಸಬೇಕಾದ ಪೋಷಕಗಳ ಪ್ರಮಾಣವನ್ನು ನಿರ್ಧರಿಸುವ ಇತರ ವಿಧಾನಗಳಿಗಿಂತ, ಮಣ್ಣಿನ ವಿಶ್ಲೇಷಣಾ ಪದ್ಧತಿಯು ಕೃಷಿಕರಲ್ಲಿ ಹೆಚ್ಚು ಪ್ರಚಲಿತವಾಗಲು ಈ ವಿಧಾನದಲ್ಲಿರುವ ಕೆಲವು ವೈಶಿಷ್ಟ್ಯಗಳು ಮತ್ತು ಸರಕಾರ ಹಾಗೂ ಹಲವು ಖಾಸಗೀ ಕಂಪನಿಗಳು ಮಾಡಿರುವ ಅನುಕೂಲತೆಗಳು ಕಾರಣವಾಗಿರುತ್ತವೆ.

ಸ್ವಲ್ಪ ಪ್ರಮಾಣದ (ಸಾಮಾನ್ಯವಾಗಿ ೨ ರಿಂದ ೫ ಗ್ರಾಂ) ಮಣ್ಣನ್ನು ನಿರ್ಧಿಷ್ಟಪಡಿಸಿದ ರಾಸಾಯನಿಕ ದ್ರಾವಣದಲ್ಲಿ ಚೆನ್ನಾಗಿ ಕಲಕಿ, ಸೋಸಿ ಹೊರ ಬಂದ ದ್ರಾವಣದಲ್ಲಿರುವ ಪೋಷಕಗಳನ್ನು ಸೂಕ್ತ ಪದ್ಧತಿಗಳನ್ನು ಅನುಸರಿಸಿ ನಿರ್ಧರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಳಗಿನ ಸಂಗತಿಗಳನ್ನು ಗಮಿಸಬೇಕು.

 • ಮೇಲೆ ಸೂಚಿಸಿದ ದ್ರಾವಣದಲ್ಲಿ ಮಣ್ಣಿನಲ್ಲಿರುವ ಒಟ್ಟು ಪೋಷಕದ ಸ್ವಲ್ಪ ಭಾಗ ಮಾತ್ರ ಹೊರ ಬಂದಿರುತ್ತದೆ,. ಈ ಭಾಗವನ್ನೇ ಬೆಳೆಗೆ ಲಭ್ಯವಾಗುವ ಪೋಷಕವೆಂದು ಪರಿಗಣಿಸಲಾಗುತ್ತದೆ.
 • ಕೆಲವು ಪೋಷಕಗಳನ್ನು (ಉದಾಹರಣೆಗೆ ರಂಜಕ) ಒಂದಕ್ಕಿಂತ ಹೆಚ್ಚು ಬಗೆಯ ರಾಸಾಯನಿಕ ದ್ರಾವಣಗಳನ್ನು ಬಳಸಿ ಆ ಪೋಷಕದ ಪ್ರಮಾಣವನ್ನು ಕಂಡುಹಿಡಿಯಬಹುದಾಗಿದೆ. ಇಲ್ಲಿ ಅನುಸರಿಸಬೇಕಾದ ವಿಧಾನವನ್ನು ಮಣ್ಣಿನ ಗುಣಧರ್ಮಗಳ ಮೇಲಿಂದ ನಿರ್ಧರಿಸಬೇಕಾಗುತ್ತದೆ.
 • ಭೂಕ್ಷೇತ್ರದಲ್ಲಿ ಬೆಳೆದ ಇಳುವರಿಗೂ ಆ ಭೂಕ್ಷೇತ್ರದ ಮಣ್ಣಿನಲ್ಲಿರುವ ಪೋಷಕದ ಪ್ರಮಾಣಕ್ಕೂ ಇರುವ ಸಂಬಂಧವನ್ನು ನೇರ ಪ್ರಯೋಗಗಳನ್ನು ನಡೆಸಿ ತಿಳಿದುಕೊಂಡರೆ ಮಾತ್ರ ಅನಂತರ ಮಣ್ಣಿನ ವಿಶ್ಲೇಷಣೆಯಿಂದ ದೊರೆತ ಫಲಿತಾಂಶದಿಂದಲೇ ಆ ಭೂಮಿಗೆ ಪೂರೈಸಬೇಕಾದ ಪೋಷಕವನ್ನು ಮತ್ತು ಅದರ ಪ್ರಮಾಣವನ್ನು ನಿರ್ಧರಿಸಬಹುದು.

ಮಣ್ಣಿನ ವಿಶ್ಲೇಷಣಾ ಪದ್ಧತಿಯ ವೈಶಿಷ್ಟ್ಯಗಳು: ಇತರ ಕೆಲವು ವಿಧಾನಗಳೊಡನೆ ತುಲನೆ ಮಾಡಿದರೆ ಮಣ್ಣಿನ ವಿಶ್ಲೇಷಣಾ ಪದ್ಧತಿಯಲ್ಲಿ ಹಲವು ಪ್ರಮುಖ ವೈಶಿಷ್ಟಗಳಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು:

i) ಪ್ರತಿ ಮಣ್ಣಿನ ನಮೂನೆಯನ್ನು ವಿಶ್ಲೇಷಿಸಲು ಕಡಮೆ ಸಮಯವುಸಾಕು. ದಿನಕ್ಕೆ ನೂರಾರು ಮಣ್ಣುಗಳ ವಿಶ್ಲೇಷಣೆಯನ್ನು ಮಾಡಿ ಮುಗಿಸಬಹುದು. ಆಧುನಿಕ ಉಪಕರಣಗಳು ಲಭ್ಯವಿದ್ದರಂತೂ ವಿಶ್ಲೇಷಣೆಯ ಕಾರ್ಯವನ್ನು ಅತಿ ವೇಗದಿಂದ ಮಾಡಬಹುದು.

ii) ಬೆಳೆಯನ್ನು ಬಿತ್ತುವ ಮೊದಲೇ ಮಣ್ಣನ್ನು ಸಂಗ್ರಹಿಸಿ ಅದರಲ್ಲಿರುವ ವಿವಿಧ ಪೋಷಕಗಳ ಪ್ರಮಾಣವನ್ನು ಅರಿತುಕೊಂಡರೆ ಕೊರತೆಯೆನಿಸುವ ಪೋಷಕಗಳನ್ನು ಪ್ರಾರಂಭದಲ್ಲಿಯೇ ಪೂರೈಸಲು ಸಾಧ್ಯವಾಗುತ್ತದೆ.

iii) ಮಣ್ಣಿನ ವಿಶ್ಲೇಷಣೆಯ ಆಧಾರದ ಮೇಲಿಂದ ಕೊರತೆಯೆನಿಸುವ ಪೋಷಕಗಳನ್ನು ಸೂಕ್ತ ಪ್ರಮಾಣದಲ್