ಕೋಷ್ಟಕ ೨೭ : ಪ್ರತಿ ೧೦೦ ಕಿ.ಗ್ರಾಂ. ಕ್ಯಾಲ್ಸಿಯಂ ಕಾರ್ಬೊನೇಟ್ ಬದಲು ಉಪಯೋಗಿಸಬೇಕಾದ ಇತರ ಸುಣ್ಣದ ವಸ್ತುಗಳ ಪ್ರಮಾಣ. 

 ಸುಣ್ಣದ ವಸ್ತುಗಳನ್ನು ಮಣ್ಣಿಗೆ ಸೇರಿಸಿದ ನಂತರ ನಡೆಯುವ ರಾಸಾಯನಿಕ ಕ್ರಿಯೆಗಳು : ಸುಣ್ಣದ ವಸ್ತುಗಳನ್ನು ಮಣ್ಣಿಗೆ ಸೇರಿಸಿದ ನಂತರ ಅಲ್ಲಿರುವ ಆರ್ದ್ರತೆ ಮತ್ತು ಇಂಗಾಲದ ಡೈಆಕ್ಸೈಡ್ ಸಾನಿಧ್ಯದಲ್ಲಿ ಕೆಳಗಿನ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ.

i) ಕ್ಯಾಲ್ಸಿಯಂ ಆಕ್ಸೈಡ್ + ನೀರು + ಇಂಗಾಲದ ಡೈ ಆಕ್ಸೈಡ್ = ಕ್ಯಾಲ್ಸಿಯಂ ಬೈಕಾರ್ಬೊನೇಟ್
CaO + H2O + 2CO2 = Ca(HCO3)2

ii) ಕ್ಯಾಲ್ಸಿಯಂ ಹೈಡ್ರಾಕ್ಸೈಡ್ + ಇಂಗಾಲದ ಡೈ ಆಕ್ಸೈಡ್ = ಕ್ಯಾಲ್ಸಿಯಂ ಬೈ ಕಾರ್ಬೊನೇಟ್
Ca (OH)2 + 2CO2 = Ca(HCO3)2

iii) ಕ್ಯಾಲ್ಸಿಯಂ ಕಾರ್ಬೊನೇಟ್ + ನೀರು + ಇಂಗಾಲದ ಡೈ ಆಕ್ಸೈಡ್ = ಕ್ಯಾಲ್ಸಿಯಂ ಬೈಕಾರ್ಬೊನೇಟ್
CaCO3 + H2O – CO2 = Ca(HCO3)2

ಮೇಲೆ ತಿಳಿಸಿದ ರೀತಿಯ ರಾಸಾಯನಿಕ ಕ್ರಿಯೆಗಳಿಂದ ಹೊರ ಬಂದ ಕ್ಯಾಲ್ಸಿಯಂ ಬೈ ಕಾರ್ಬೊನೇಟ್, ಮಣ್ಣಿನ ಆಮ್ಲದ ಸಂಗಡ ಪ್ರತಿಕ್ರಿಯೆಗೊಳ್ಳುತ್ತದೆ.

ಜಲಜನಕ ಅಯಾನ್‌ಗಳ ಪ್ರಾಬಲ್ಯವಿದ್ದ ಮಣ್ಣಿನೊಡನೆ ನಡೆಯುವ ಕ್ರಿಯೆಯು ಮುಂದಿನಂತಿದೆ. 

ಇದರಂತೆಯೇ, ಆಮ್ಲ ಮತ್ತು ಕ್ಯಾಲ್ಸಿಯಂ ಕಾರ್ಬೊನೇಟ್ ಹಾಗೂ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ಗಳಲ್ಲಿ ನೇರವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳು ಕೆಳಗಿನಂತಿವೆ.

ಮಣ್ಣಿನ ಆಮ್ಲತೆಯ ನಿವಾರಣೆಗೆ ಬಳಸಬೇಕಾದ ಸುಣ್ಣದ ಪ್ರಮಾಣ :ಹುಳಿಮಣ್ಣಿನ ರಸಸಾರ (pH) ವನ್ನು ಒಂದು  ನಿರ್ಧಿಷ್ಟ ಮಟ್ಟಕ್ಕೆ (ಉದಾಹರಣೆಗೆ ೬.೫ಕ್ಕೆ) ಏರಿಸಬೇಕಾದರೆ ಮಣ್ಣಿಗೆ ಪೂರೈಸಬೇಕಾದ ಸುಣ್ಣದ ಪ್ರಮಾಣವನ್ನು ನಿರ್ಧರಿಸಲು ಹಲವು ಪದ್ಧತಿಗಳು ಅಭಿವೃದ್‌ಇದಗೊಂಡಿವೆ.ಅವುಗಳಲ್ಲಿಯ ಕೆಲವುಪದ್ಧತಿಗಳ ಸಂಕ್ಷಿಪ್ತ ಮಾಹಿತಿಯನ್ನು ಕೆಳಗೆ ಕೊಟ್ಟಿದೆ.

i) ನೇರ ಪದ್ಧತಿ: ಗಾಜಿನ ಕೆಲವು ಪಾತ್ರೆಗಳನ್ನು ಒಂದೆಡೆ ಇಟ್ಟು ಪ್ರತಿಪಾತ್ರೆಯಲ್ಲಿ ನಿರ್ಧಿಷ್ಟ ಪ್ರಮಾಣದ (ಉದಾಹರಣೆಗೆ ೧೦೦ ಗ್ರಾಂ) ಮಣ್ಣನ್ನು ಹಾಕಬೇಕು. ಪ್ರತಿ ಪಾತ್ರೆಗೆ ಏರಿಕೆಯ ಪ್ರಮಾಣದಲ್ಲಿ ಸುಣ್ಣವನ್ನು ಸೇರಿಸಿ ಮಿಶ್ರಮಾಡಿ ಹಸಿಯಾಗುವಷ್ಟು ನೀರನ್ನುಹಾಕಬೇಕು. ಆ ಪಾತ್ರೆಗಳನ್ನು ಹಾಗೆಯೇ ಇರಗೊಡಬೇಕು. ಮಣ್ಣು ಯಾವಾಗಲೂ ಹಸಿ ಇರುವಂತೆ ನೋಡಿಕೊಳ್ಳಬೇಕು. ನಿರ್ಧರಿತ ಸಮಯಕ್ಕೆ (ಉದಾಹರಣೆಗೆ ತಿಂಗಳೀಗೊಮ್ಮೆ) ಪ್ರತಿ ಪಾತ್ರೆಯಿಂದ ಮಣ್ಣಿನ ನಮೂನೆಯನ್ನು ಹೊರತೆಗೆದು ಅದರ ರಸಸಾರ (pH) ವನ್ನು ಕಂಡುಹಿಡಿಯಬೇಕು. ಕೆಲವು ಗಳುಗಳ ನಂತರ, ಮಣ್ಣಿಗೆ ಪೂರೈಸಿದ ಸುಣ್ಣದ ಪ್ರಮಾಣ ಮತ್ತು ಮಣ್ಣಿನ ರಸಸಾರ (pH)ಗಳ ಸಂಬಂಧವನ್ನು ತೊರಿಸುವ ರೇಖಾ ಚಿತ್ರವನ್ನು ಸಿದ್ಧಪಡಿಸಬೇಕು. ನಿರ್ಧರಿಸಿದ ಸಮಯದಲ್ಲಿ ಮಣ್ಣಿನ ಆಮ್ಲ – ಕ್ಷಾರ ನಿರ್ದೆಶಕವು ಬೇಕಾಗುವ ಮಟ್ಟಕ್ಕೆ ಏರುವಂತೆ ಮಾಡಲು ಪೂರೈಸಬೇಕಾದ ಸುಣ್ಣದ ಪ್ರಮಾಣವನ್ನು ಸಿದ್ಧಪಡಿಸಿದ ರೇಖಾ ಚಿತ್ರದ ಸಹಾಯದಿಂದ ಅರಿತುಕೊಳ್ಳಬಹುದು.

ಮೇಲಿನ ಪದ್ಧತಿಯಿಂದ ಕಂಡುಬಂದ ಪರಿಣಾಮವು ಹೆಚ್ಚು ವಾಸ್ತವಿಕವಾಗಿದೆಯಾದರೂ ಪರಿಣಾಮವು ದೊರೆಯಲು ಬಹಳಸಮಯ (ಹಲವು ತಿಂಗಳುಗಳವರೆಗೆ) ಕಾಯಬೇಕಾಗುತ್ತದೆ.

ii) ಯುವಾನ್‌ ಪದ್ಧತಿ : ಯುವಾನ್‌ ಎಂಬುವರು ಅಭಿವೃದ್ಧಿ ಪಡಿಸಿದ ಈ ಪದ್ಧತಿಯಲ್ಲಿ ೮ – ೧೦ ಗಾಜಿ ಪಾತ್ರೆಗಳನ್ನು ತೆಗೆದುಕೊಂಡು, ಪ್ರತಿ ಪಾತ್ರೆಯಲ್ಲಿ ೧೦ ಗ್ರಾಮ ನಂತೆ ಮಣ್ಣನ್ನು ಹಾಕಬೇಕು. ಅಳತೆ ಮಾಡಿದ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ಏರಿಕೆಯ ಪ್ರಮಾಣದಲ್ಲಿ ಈಮಣ್ಣಿಗೆ ಸೇರಿಸಿ, ೧೦೦ ಮಿ.ಲೀ. ನೀರನ್ನು ಸೇರಿಸಬೇಕು. ಪಾತ್ರೆಗಳನ್ನು ಚೆನ್ನಾಗಿ ಅಲುಗಾಡಿಸಿ ೭೨ ಗಂಟೆಗಳ ಕಾಲ ಇರಗೊಡಬೇಕು. ಪಾತ್ರೆಗಳನ್ನು ಆಗಾಗ ಅಲುಗಾಡಿಸಿ ಮಣ್ಣು,ಸುಣ್ಣ ಮತ್ತು ನೀರು ಸರಿಯಾಗಿ ಮಿಶ್ರವಾಗುವಂತೆ ನೋಡಿಕೊಳ್ಳಬೇಕು.

ನಿಶ್ಚಿತ ಅವಧಿ (೭೨ಗಂಟೆಗಳು) ಕಳೆದ ನಂತರ ಪ್ರತಿ ಪಾತ್ರೆಯಲ್ಲಿರುವ ಮಿಶ್ರಣದ ರಸಸಾರವನ್ನು ಕಂಡುಹಿಡಿಯಬೇಕು.ಮಣ್ಣಿಗೆ ಸೇರಿಸಿದ ಸುಣ್ಣ ಮತ್ತು ೭೨ ಗಂಟೆಗಳ ನಂತರ ಕಂಡುಬಂದ ರಸಸಾರಗಳನ್ನೊಳಗೊಂಡ ರೇಖಾ ಚಿತ್ರವನ್ನು ತಯಾರಿಸಬೇಕು. ಇಚ್ಛಿತ ಮಟ್ಟಕ್ಕೆ ಮಣ್ಣಿನ ರಸಸಾರವನ್ನು ಏರಿಸಲು , ಎಷ್ಟು ಸುಣ್ಣವನ್ನು ಹಾಕಬೇಕಾಗುತ್ತದೆ ಎಂಬುವುದನ್ನು ರೇಖಾಚಿತ್ರದ ಸಹಾಯದಿಂದ ಅರಿತುಕೊಳ್ಳಬಹುದು.

ಮೇಲಿನ ಪದ್ಧತಿಗೆ ತುಲನಾತ್ಮಕವಾಗಿ ಕಡಮೆ ಸಮಯವು ಸಾಕಾಗುತ್ತದೆಯಾದರೂ ಪ್ರತಿ ದಿನ ಹಲವಾರು ಮಣ್ಣುಗಳ ಬಗ್ಗೆ ಪರೀಕ್ಷೆಯನ್ನು ನಡೆಸಲು, ಈ ಪದ್ಧತಿಯು ಅಷ್ಟು ಅನುಕೂಲಕರವಾಗಿಲ್ಲವೆನ್ನಬಹುದು.

iii) ಬಫರ್ ದ್ರಾವಣ ಪದ್ಧತಿ :ಕೆಲವು ರಾಸಾಯನಿಕ ದ್ರವ್ಯಗಳನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಮಿಶ್ರಮಾಡಿ, ನೀರಿನಲ್ಲಿಕರಗಿಸಿ ದ್ರಾವಣವನ್ನು ಸಿದ್ಧಪಡಿಸಲಾಗುತ್ತದೆ. ಈ ದ್ರಾವಣವು ಒಂದು ನಿರ್ದಿಷ್ವಾದ ರಸಸಾರ (pH)ವನ್ನು ಹೊಂದಿರುತ್ತದೆ. ಗಾಜಿನ ಪಾತ್ರೆಯಲ್ಲಿ ಹಾಕಿದ ನಿರ್ಧಿಷ್ಟ ಪ್ರಮಾಣದ ಹುಳಿಮಣ್ಣಿಗೆ,ಈ ದ್ರಾವಣವನ್ನು ನಿಗದಿತ ಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಈ ಮಿಶ್ರಣದ ರಸಸಾರವನ್ನು ಕಂಡುಹಿಡಿಯಲಾಗುತ್ತದೆ. ಮಣ್ಣಿನ ಆಮ್ಲತೆಯ ಕಾರಣದಿಂದ ಬಫರ್ ದ್ರಾವಣದ ರಸಸಾರವು ಕಡಮೆಯಾಗುತ್ತದೆ. ಎಷ್ಟು ಕಡಮೆಯಾಗಿದೆ ಎಂಬುವುದರ ಮೇಲೆ ಸಂಬಂಧಿಸಿದ ಮಣ್ಣಿಗೆ ಹಾಕಬೇಕಾದ ಸುಣ್ಣದ ಪ್ರಮಾಣವನ್ನು ಅಂದಾಜು ಮಾಡಬಹುದು.

ವಿಜ್ಞಾನಿಗಳು ಹಲವು ಬಗೆಯ ಬಫರ್ ದ್ರಾವಣಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳಲ್ಲಿ ಶುಮೇಕರ್,ಮೆಕ್ ಲೀನ್‌ಮತ್ತು ಪ್ರಾಟ್ ಎಂಬುವರು ತಯಾರಿಸಿದ SMP ಎಂದು ಸಂಕ್ಷೀಪ್ತವಾಗಿ ಕರೆಯುವ ಸಿಂಗಲ್ ಬಫರ್ ಪದ್ಧತಿಯು,ಹಲವು ಬಗೆಯ ಮಣ್ಣುಗಳಿಗೆ ಅನ್ವಯವಾಗುತ್ತದೆ ಎಂದು ಕಂಡುಬಂದಿದೆ. ಆದ್ದರಿಂದ, ಇತರ ಬಫರ್ ಪದ್ಧತಿಗಳಗಿಂತ ಈ ಪದ್ಧತಿಯೇ ಹಲವೆಡೆ ಬಳಕೆಯಲ್ಲಿದೆ.

ಟ್ರೈ ಇಥೆನೋಲಮೈನ್, ಪ್ಯಾರಾನೈಟ್ರೋಫಿನಾಲ್, ಪೋಟ್ಯಾಸಿಯಂ ಕ್ರೋಮೇಟ್, ಮತ್ತು ಕ್ಯಾಲ್ಸಿಯಂ ಅಸಿಟೇಟ್ಗಳನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಸೇರಿಸಿ ಈ ಬಫರ್ ದ್ರಾವಣವನ್ನು ಸಿದ್ಧಪಡಿಸಲಾಗುತ್ತದೆ. ಈ ದ್ರಾವಣದ ರಸಸಾರ (pH) ೮.೨ ನಿರ್ಧಿಷ್ಟ ತೂಕದ ಮಣ್ಣನ್ನುಸಣ್ಣ ಪಾತ್ರೆಯಲ್ಲಿ ಹಾಕಿ, ನಿರ್ಧಿಷ್ಟ ಅಳತೆಯ ಬಫರ್ ದ್ರಾವಣವನ್ನು ಅದರೊಡನೆ ಸೇರಿಸಿ ಸ್ವಲ್ಪ ಸಮಯದವರೆಗೆ ಮಿಶ್ರ ಮಾಡಿ ಕೂಡಲೇ ಅದರ ರಸಸಾರವನ್ನು ಕಂಡುಹಿಡಿಯಬೇಕು. ಬಫರ್ ದ್ರಾವಣದ ಮೂಲ ರಸಸಾರ (pH)ವು ಎಷ್ಟು ಕಡಮೆಯಾಗಿದೆ ಎಂಬುವುದರ ಮೇಲಿಂದ ಮಣ್ಣಿಗೆ ಪೂರೈಸಬೇಕಾಧ ಸುಣ್ಣದ ಪ್ರಮಾಣವನ್ನು ಅಂದಾಜು ಮಾಡಬಹುದು.

ಕೆಳಗಿನ ಗುಣಧರ್ಮಗಳಿರುವ ಮಣ್ಣುಗಳಿಗೆ SMP (SB=ಸಿಂಗಲ್ ಬಫರ್) ಪದ್ಧತಿಯು ಹೆಚ್ಚು ಅನ್ವಯಿಸುತ್ತದೆಯೆಂದು ಕಂಡುಬಂದಿದೆ.

i) ಪ್ರತಿ ಹೆಕ್ಟೇರಿಗೆ ೪.೫ಟನ್ನಿಗಿಂತ ಅಧಿಕ ಸುಣ್ಣ ಬೇಕಾಗುವ ಮಣ್ಣಿಗೆ.

ii) ರಸಸಾರ ೫.೮ ಕ್ಕಿಂತ ಕಡಮೆ ಇರುವ ಮಣ್ಣಿಗೆ

iii) ಸಾವಯವ ಪದಾರ್ಥವು ಶೇಕಡಾ ೧೦ಕ್ಕಿಂತ ಕಡಮೆ ಇರುವ ಮಣ್ಣಿಗೆ

iv) ಗಣನೀಯ ಪ್ರಮಾಣದಲ್ಲಿ ಕರಗುವ ಅಲ್ಯೂಮಿನಿಯಂ ಇರುವಂತಹ ಮಣ್ಣಿಗೆ

ಸುಣ್ಣದ ಕಣಗಳ ಅಕಾರ :ಸುಣ್ಣದ ಕಣಗಳು ಸೂಕ್ಷ್ಮವಿದ್ದಷ್ಟೂ ಮಣ್ಣಿನ ಕಣಗಳೊಡನೆ ಅನ್ಯೋನ್ಯವಾಗಿ ಬೆರೆತು ಮಣ್ಣಿನ ಆಮ್ಲತೆಯನ್ನು ಬೇಗನೆ ನಿವಾರಿಸುತ್ತವೆ. ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಗಳು ಸೂಕ್ಷ್ಮ ಕಣಗಳ ರೂಪದಲ್ಲಿರುವುದರಿಂದ ಮಣ್ಣಿನೊಡನೆ ಸುಲಭವಾಗಿ ಬರೆತೆದುಕೊಳ್ಳುತ್ತವೆ. ಆದರೆ ಕ್ಯಾಲ್ಸಿಯಂ ಕಾರ್ಬೊನೇಟ್ (ಸುಣ್ಣದ ಕಲ್ಲು) ಮತ್ತು ಡೊಲೋಮೈಟ್ ಗಳನ್ನುಬಳಸುವ ಪ್ರಸಂಗವಿದ್ದಾಗ, ಈ ವಸ್ತುಗಳ ಕಣಗಳ ಆಕಾರದ ಬಗ್ಗೆ ಹೆಚ್ಚು ಲಕ್ಷ್ಯ ಕೊಡಬೇಕಾಗುತ್ತದೆ.

ಪುಡಿಯು ಸೂಕ್ಷ್ಮ ಆಕಾರವಿದ್ದಷ್ಟೂ ಮಣ್ಣಿನೊಡನೆ ಅನ್ಯೋನ್ಯವಾಗಿ ಬೆರೆತುಕೊಂಡು ಆಮ್ಲತೆಯನ್ನು ಶೀಘ್ರವೆ ನಿವಾರಿಸುತ್ತದೆ ಎಂಬ ಸಂಗತಿ ನಿಜವಾಗಿದೆಯಾದರೂ ಒಂದು ಮಿತಿಗಿಂತ ಅಧಿಕ ಜಿನುಗು ಪುಡಿಯನ್ನು ಬಳಸುವುದರಿಂದ ಬೆಳೆಗೆ ಹೆಚ್ಚಿನ ಪ್ರಯೋಜನವೇನೂ ಆಗಲಾರದು. ಪುಡಿಯು ಹೆಚ್ಚು ಹೆಚ್ಚು ಜಿನುಗು ಆಗುವಂತೆ ಮಾಡುತ್ತಾ ಹೋದರೆ, ಪುಡಿಯನ್ನು ಮಾಡುವ ಖರ್ಚು ಹೆಚ್ಚುತ್ತಾ ಹೋಗುತ್ತದೆ.

ಸುಣ್ಣದ ಕಲ್ಲಿನ ಪುಡಿಯಲ್ಲಿ ಅರ್ಧದಷ್ಟಾದರೂ ೬೦ ರಂಧ್ರಗಳ ಜರಡಿಯಿಂದ ಕೆಳಗೆ ಇಳಿಯುವಷ್ಟು ಸೂಕ್ಷ್ಮ ವಿದ್ದರೆ ಸಾಕೆಂದೂ ಇದಕ್ಕಿಂತಲೂ ಜಿನುಗಾಗಿರುವ ಪುಡಿಯನ್ನುಬಳಸಿದರೂ ಇಳುವರಿಯಲ್ಲಿ ಎದ್ದು ಕಾಣುವಷ್ಟು ಹೆಚ್ಚಳವಾಗುವುದಿಲ್ಲವೆಂದೂ ಕಂಡುಬಂದಿದೆ. ಪ್ರತಿ ೨.೫ ಸೆಂ.ಮೀ. ಗೆ ೬೦ ತಂತಿಗಳಿರುವ ಜರಡಿಗೆ ೬೦ ರಂಧ್ರಗಳ ಜರಡಿ ಎನ್ನುವರು. ಇದರಲ್ಲಿ ರಂಧ್ರದ ಆಕಾರವು ೦.೫ ಮಿ.ಮಿ.ನಷ್ಟಾಗುತ್ತದೆ. ಆದ್ದರಿಂದ, ಸುಣ್ಣದ ಕಲ್ಲಿನ ಪುಡಿಯಲ್ಲಿರುವ ಕನಿಷ್ಠ ಅರ್ಧದಷ್ಟು ಕಣಗಳಾದರೂ ೦.೨೫ ಮಿ.ಮಿ ಅಥವಾ ಅದಕ್ಕಿಂತ ಸಣ್ಣವಿರಬೇಕು ಎಂದಂತಾಯಿತು.

ಡೋಲೋಮೈಟ್ ಕಲ್ಲಿನ ಪುಡಿಯು ಸುಣ್ಣದ ಕಲ್ಲಿನಪುಡಿಗಿಂತ ನಿಧಾನವಾಗಿ ಪ್ರತಿಕ್ರಿಯೆಗೊಳ್ಳುವುದರಿಂದ ಕಣಗಳು ಹೆಚ್ಚು ಜಿನುಗಾಗಿರುವುದು ಪ್ರಯೋಜನಕಾರಿ ಎನ್ನಬಹುದು.

ಸುಣ್ಣವನ್ನು ಮಣ್ಣಿಗೆ ಪೂರೈಸುವ ವಿಧಾನ ಮತ್ತು ಸಮಯ : ಮಣ್ಣಿನ ಕಣಗಳೊಡನೆ ಸುಣ್ಣದ ಸಂಪರ್ಕವು ಅಧಿಕಗೊಂಡಂತೆ ಮಣ್ಣಿನ ಆಮ್ಲತೆಯ ನಿವಾರಣೆಯು ಹೆಚ್ಚು ಸಮರ್ಥವಾಗಿ ನಡೆಯುತ್ತದೆ. ಸುಣ್ಣದ ಪುಡಿಯನ್ನು ಮಣ್ಣಿನ ಮೇಲೆ ಹರಡಿ ಹಾಗೆಯೇ ಬಿಟ್ಟರೆ ಕೆಲವು ಸೆಂ.ಮೀ. ಆಳದ ಮೇಲ್ಬಾಗದ ಮಣ್ಣು ಮಾತ್ರ ಸುಣ್ಣದ ಪ್ರಭಾವಕ್ಕೊಳಗಾಗುತ್ತದೆ. ಸುಣ್ಣದ ಪುಡಿಯು ಸುಲಭವಾಗಿ ಮಣ್ಣಿನಾಳಕ್ಕೆ ಚಲಿಸುವುದಿಲ್ಲ. ಆದ್ದರಿಂದ ಕೃಷಿ ಉಪಕರಣಗಳ ಸಹಾಯದಿಂದ, ಸುಣ್ಣವು ಸ್ವಲ್ಪ ಅಳದವರೆಗೆ ಹೋಗುವಂತೆ ಮಾಡಬೇಕು. ಡಿಸ್ಕ್ ಕುಂಟೆಯು ಸುಣ್ಣದ ಪುಡಿಯನ್ನು ಮಣ್ಣಿನೊಡನೆ ಸಮಾಧನಕರವಾಗಿ ಮಿಶ್ರ ಮಾಡುತ್ತದೆ.

ಮಣ್ಣಿನ ಆಮ್ಲತೆ ಮತ್ತು ಇತರೆ ಗುಣಧರ್ಮಗಳು (ವಿವಿಧ ಆಕಾರದ ಕಣಗಳ ಪ್ರಮಾಣ, ಧನ ಅಯಾನ್‌ಗಳ ವಿನಿಮಯ ಸಾಮರ್ಥ್ಯ ಇತ್ಯಾದಿ). ಬೆಳೆಯ ಸ್ವಭಾವ, ಅನುಸರಿಸಬೇಕೆಂದಿರುವ ಬೆಳೆಯ ಯೋಜನೆ ಮುಂತಾದುವುಗಳ ಮೇಲಿಂದ ಸುಣ್ಣವನ್ನು ಪೂರೈಸುವ ಸಮಯವನ್ನು ನಿರ್ಧರಿಸಬೇಕು. ವರ್ಷದಲ್ಲಿ ಒಂದೇ ಬೆಳೆಯನ್ನು ಬೆಳೆಯುವ ಸಂದರ್ಭವಿದ್ದಾಗ ೨ – ೩ ವರ್ಷಗಳಿಗೊಮ್ಮೆ ಒಮ್ಮೆ ಸುಣ್ಣವನ್ನು ಪೂರೈಸಿದರೆ ಸಾಕು. ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಪರಿವರ್ತನೆ ಸರದಿ ಪದ್ಧತಿಯಲ್ಲಿ ಬೆಳೆಯುವುದದರೆ ಯಾವ ಬೆಳೆಗೆ ಸುಣ್ಣದ ಅವಶ್ಯಕತೆ ಅಧಿಕವಾಗಿದೆಯೋ ಆ ಬೆಳೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು, ಅದನ್ನು ಬಿತ್ತುವುದಕ್ಕಿಂತ ಒಂದು ವರ್ಷ ಮೊದಲು ಸುಣ್ಣವನ್ನು ಮಣ್ಣಿಗೆ ಒದಗಿಸುವುದು ಒಳ್ಳೆಯದು.

ಆಮ್ಲತೆಯದುಷ್ಪರಿಣಾಮಗಳುಹಾಗೂಅದರನಿವಾರಣೆಯಿಂದಾಗುವಪ್ರಯೋಜನಗಳು

ಮಣ್ಣಿನ ಆಮ್ಲತೆಯು ಅಧಿಕಗೊಂಡಂತೆ ರಸಸಾಋವು ಕಡಮೆಯಾಗುತ್ತಾ ಸಾಗುತ್ತದಯೆಂಬುವುದು ತಿಳಿದ ವಿಷಯವೇ. ಆದರೆ ರಸಸಾರವು ಸಸ್ಯಗಳ ಬೆಳವಣಿಗೆಯ ಮೇಲೆ ನೇರವಾಗಿ ಯಾವುದೇ ದುಷ್ಪರಿಣಾಮವನ್ನುಂಟು ಮಾಡುವುದಿಲ್ಲ. ಸಸ್ಯಗಳಿಗೆ ಅವಶ್ಯವಾದ ಪೋಷಕಗಳಿರುವ ದ್ರಾವಣದಲ್ಲಿ ಸಸ್ಯಗಳನ್ನು ಬೆಳೆಸಿ, ಅ ದ್ರಾವಣದ ರಸಸಾರವನ್ನು ೪ ರವರೆಗೆ ಇಳಿಸಿದರೂ ಸಸ್ಯಗಳ ಬೆಳವಣಿಗೆಯು ಕುಂಠಿತವಾಗುವುದಿಲ್ಲ. ಎಂಬ ಸಂಗತಿಯು ಸಂಶೋಧನೆಗಳಿಂದ ಕಂಡುಬಂದಿದೆ. ಇದೊಂದು ಗಮನಿಸಬೇಕಾದ ಮಹತ್ವದ ವಿಷಯವೆನ್ನಬಹುದು.

ಮಣ್ಣಿನ ಆಮ್ಲತೆಯಿಂದ ಬೆಳೆಗಳ ಮೇಲೆ ಆಗುವ ದುಷ್ಪರಿಣಾಮಕ್ಕೆ ಬೇರೆ ಕಾರಣಗಳಿರಬೇಕೆಂಬುವುದು ಮೇಲಿನ ವಿವರಣೆಯಿಂದ ಗೊತ್ತಾಗುತ್ತದೆ. ಮಣ್ಣಿನ ಆಮ್ಲತೆಯಿಂದ ಉಂಟಾಗುವ ಹಾನಿಯ ಪ್ರಮುಖ ಕಾರಣಗಳೂ ಸುಣ್ಣವನ್ನು ಪೂರೈಸಿ, ಆಮ್ಲತೆಯನ್ನು ನಿವಾರಿಸುವುದರಿಂದ ಬೆಳೆಗಳಿಂದ ಆಗುವ ಪ್ರಯೋಜನಗಳೂ ಕೆಳಗಿನಂತಿವೆ.

ಅಲ್ಯೂಮಿನಿಯಂ ನಿಂದಾಗುವ ಅಪಾಯ : ಆಮ್ಲ ಮಣ್ಣಿನಲ್ಲಿ ಅದರಲ್ಲಿಯೂ ರಸಸಾರ ೫ಕ್ಕಿಂತ ಕಡಮೆ ಇರುವ ಮಣ್ಣಿನಲ್ಲಿ, ನೀರಿನಲ್ಲಿ ಕರಗುವ ಕ್ರಿಯಾಶೀಲ ಅಲ್ಯೂಮಿನಿಯಂ ದೊಡ್ಡ ಪ್ರಮಾಣದಲ್ಲಿರುತ್ತದೆ. ಈ ಅಲ್ಯೂಮಿನಿಯಂ, ಸಸ್ಯದ ಬೆಳವಣಿಗೆಯ ಮೇಲೆ ಹಲವು ರೀತಿಯ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಉದಾಹರಣೆಗೆ ಕ್ರಿಯಾಶೀಲ ಅಲ್ಯೂಮಿನಿಯಂ, ಸಸ್ಯದ ಬೇರುಗಳ ಕೋಶಗಳು ಅಭಿವೃದ್ಧಿಗೊಳ್ಳದಂತೆ ಮಾಢುವುದಲ್ಲದೇ ಬೇರುಗಳ ಉಸಿರಾಟದ ವೇಗವನ್ನು ತಗ್ಗಿಸುತ್ತದೆ.ಪ್ರಚೋದಕ (ಕಿಣ್ವ) ಗಳ ಕಾರ್ಯನಿರ್ವಹಣೆಯಲ್ಲಿ ಆತಂಕವನ್ನುಂಟು ಮಾಡುತ್ತದೆ. ಮತ್ತು ಜೀವ ಕೋಶಗಳ ಹೊರ ಆವರಣದ ಸಾಮರ್ಥ್ಯ ವನ್ನು ಕುಗ್ಗಿಸುತ್ತದೆ.

ನೀರಿನಲ್ಲಿ ಕರಗುವ ರಂಜಕದೊಡನೆ, ಕ್ರೀಯಾಶೀಲ ಅಲ್ಯೂಮಿನಿಯಂ ಪ್ರತಿಕ್ರಿಯೆ ಗೊಂಡುನೀರಿನಲ್ಲಿ ಕರಗದ ಅಲ್ಯೂಮಿನಿಯಂ ಫಾಸ್ಪೇಟ್ ಆಗಿ ಪರಿವರ್ತನೆ ಹೊಂದುತ್ತದೆ. ಹೀಗಾಗಿ ಸಸ್ಯಗಳಿಗೆ ರಂಜಕದ ಕೊರತೆಯು ಕಾಣಿಸಿಕೊಳ್ಳುತ್ತದೆ. ಇದಲ್ಲದೇ, ಕ್ಯಾಲ್ಸಿಯಂ, ಮೆಗ್ನೀಸಿಯಂ, ರಂಜಕ ಮುಂತಾದ ಪೋಷಕಗಳನ್ನುಹೀರಿಕೊಳ್ಳಲು, ಅವುಗಳನ್ನು ಸಸ್ಯದ ಮೇಲ್ಬಾಗಕ್ಕೆ ಸಾಗಿಸಲು ಮತ್ತು ಬೆಳವಣಿಗೆಗೆ ಉಪಯೋಗಿಸಿಕೊಳ್ಳಲು ಅಲ್ಯೂಮಿನಿಯಂ ಆತಂಕವನ್ನೊಡುತ್ತದೆ.

ಮಣ್ಣಿಗೆ ಸುಣ್ಣವನ್ನು ಪೂರೈಸುವುದರಿಂದ, ಮಣ್ಣಿನ ಆಮ್ಲತೆಯು ಕಡಮೆಯಾಗತೊಡಗುತ್ತದೆ. ಮಣ್ಣಿನ ರಸಸಾರ (pH) ವು ೬.೫ ನ್ನು ಮೀರಿದೊಡನೆ ಕರಗುವ ರೂಪದಲ್ಲಿರುವ ಕ್ರಿಯಾಶೀಲ ಅಲ್ಯೂಮಿನಿಯಂ, ಕರಗದ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಹೀಗಾಗಿ, ಬೇರುಗಳು ಸರಿಯಾಗಿ ಅಭಿವೃದ್ಧಿ ಹೊಂದಿ, ಪೋಷಕಗಳನ್ನು ಹೀರಿಕೊಂಡು ಉತ್ತಮ ರೀತಿಯ ಬೆಳವಣಿಗೆಯನ್ನು ಹೊಂದುತ್ತವೆ.

ರಂಜಕದ ಲಭ್ಯತೆ : ಮಣ್ಣಿನ ರಸಸಾರಕ್ಕೂ ರಂಜಕವು ಸಸ್ಯಗಳಿಗೆ ಲಭ್ಯವಾಗುವುದಕ್ಕೂ ನಿಕಟವಾದ ಸಂಬಂಧವಿದೆ. ರಸಸಾರವು ೬ ರಿಂದ ೭ ಇದ್ದಾಗ, ಮಣ್ಣಿನಲ್ಲಿಯ ರಂಜಕವು, ಸಸ್ಯಗಳಿಗೆ ಸುಲಭವಾಗಿ ದೊರೆಯುವ ರೂಪದಲ್ಲಿರುತ್ತದೆ. ಮಣ್ಣಿನ ರಸಸಾರ (pH)ವು ೬ಕ್ಕಿಂತ ಕಡಮೆಯಾಯಿತೆಂದರೆ ರಂಜಕವು ಅಲ್ಯೂಮಿನಿಯಂ ಇಲ್ಲವೇ ಕಬ್ಬಿಣದೊಡನೆ ಸಂಯೋಜನೆಗೊಂಡು, ಅಲ್ಯೂಮಿನಿಯಂ ಫಾಸ್ಫೇಟ್ ಅಥವಾ ಫೆರಿಕ್ ಫಾಸ್ಪೇಟ್ ಆಗಿ ಪರಿವರ್ತನೆ ಹೊಂದುತ್ತದೆ. ಇವು ನೀರಿನಲ್ಲಿ ಕರಗುವುದಿಲ್ಲವಾದ್ದರಿಂದ ಸಸ್ಯಗಳಿಗೆ ರಂಜಕದ ಕೊರತೆಯಾಗುತ್ತದೆ.

ಸೂಕ್ತ ಪ್ರಮಾಣದಲ್ಲಿ ಸುಣ್ಣದ ಪೂರೈಕೆ ಮಾಡಿ, ಮಣ್ಣಿನ ರಸಸಾರ (pH) ವು ೬ ರಿಂದ ೭ರ ಸಮೀಪಕ್ಕೆ ಬರುವಂತೆ ಮಾಡಿದರೆ, ರಂಜಕವು ಸಸ್ಯಗಳಿಗೆ ಸುಲಭವಾಗಿ ದೊರೆಯುವಂತಾಗುತ್ತದೆ.

ಲಘು ಪೋಷಕಗಳ ಲಭ್ಯತೆ : ಮೊಲಿಬ್ಡೆನಂ ಪೋಷಕವೊಂದನ್ನು ಬಿಟ್ಟು ಉಳಿದೆಲ್ಲ ಕಿರು ಪೋಷಕಗಳು (ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಮತ್ತು ಸತುವು) ಆಮ್ಲ ಮಣ್ಣಿನಲ್ಲಿ ನೀರಿನೊಂದಿಗೆ ಕರಗುವ ರೂಪದಲ್ಲಿರುತ್ತದೆ. ಆದರೆ ಅತಿ ಆಮ್ಲ ಮಣ್ಣಿನಲ್ಲಿ ಇವು ಸಸ್ಯಗಳಿಗೆ ಅಪಾಯವನ್ನುಂಟು ಮಾಡುವ ಮಟ್ಟಕ್ಕೆರುತ್ತವೆಯಲ್ಲದೇ, ಅಧಿಕ ಪ್ರಮಾಣದಲ್ಲಿರುವ ಈ ಪೋಷಕಗಳುರಂಜಕ, ಕ್ಯಾಲ್ಸಿಯಂ,ಮೆಗ್ನೀಸಿಯಂ ಪೋಟ್ಯಾಸಿಯಂ ಇತ್ಯಾದಿಪೋಷಕಗಳನ್ನು ಸಸ್ಯಗಳು ಹೀರಿಕೊಳ್ಳದಂತೆ ತಡೆ ಯನ್ನೊಡುತ್ತವೆ. ಕಬ್ಬಿಣ ಮತ್ತು ಅಲ್ಯೂಮಿನಿಯಂ ಗಳು ಮೊಲಿಬ್ಡಿನಂಪೋಷಕಗಳೊಡನೆ ಸಂಯೋಜನೆ ಗೊಂಡು ಇದು ಸಸ್ಯಗಳಿಗೆ ದೊರೆಯದಂತ ಬಂಧಿಸಿಡುತ್ತದೆ.

ಸುಣ್ಣವನ್ನು ಪೂರೈಸಿ ಮಣ್ಣಿನ ರಸಸಾರವು ೬ರ ಸಮೀಪಕ್ಕೆ ಬಂದಿತ್ತೆಂದರೆ, ನೀರಿನಲ್ಲಿ ಕರಗುವ ರೂಪದಲ್ಲಿರುವ ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಮತ್ತು ಸತುವುಗಳ ಬಹು ದೊಡ್ಡ ಭಾಗವು ಕರಗದ ರೂಪಕ್ಕೆ ಬದಲಾಗುತ್ತದೆ. ಆದರೂ, ಈ ಪೋಷಕಗಳು ಸಸ್ಯಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಕರಗುವ ಸ್ಥಿತಿಯಲ್ಲಿ ಉಳಿದಿರುತ್ತವೆ. ಹೀಗಾಗಿ ಮಣ್ಣಿನ ರಸಸಾರದ ಬದಲಾವಣೆಯಿಂದ, ಅಪಾಯಕಾರಿ ಮಟ್ಟದಲ್ಲಿದ್ದ ಈ ಕಿರುಪೋಷಕಗಳು ಸಸ್ಯಗಳಿಗೆ ಪ್ರಯೋಜನಕಾರಿಯಾಗಬಲ್ಲ ಮಟ್ಟಕ್ಕೆ ಬರುತ್ತವೆ.

ಆಮ್ಲ ಮಣ್ಣಿನಲ್ಲಿಕರಗದ ರೂಪದಲ್ಲಿರುವ ಮೊಲಿಬ್ಡಿನಂ,. ಪೋಷಕವು, ಮಣ್ಣಿನ ಆಮ್ಲತೆಯು ಕಡಮೆಯಾದೊಡನೆ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಬಂಧನದಿಂದ ವಿಮೋಚನೆಗೊಂಡು ಸಸ್ಯಗಳಿಗೆ ಸುಲಭವಾಗಿ ದೊರೆಯುವಂತಾಗುತ್ತದೆ.

ಸಾವಯವ ಪದಾರ್ಥವು ಕಳಿಯುವ ಕ್ರಿಯೆ : ಆಮ್ಲ ಮಣ್ಣಿನಲ್ಲಿ ಸಾವಯವ ಪದಾರ್ಥವು ನಿಧಾನವಾಗಿ ಕಳಿಯುತ್ತದೆ. ಆದರ ರಸಸಾರವು ೬.೫ರ ಸಮೀಪಕ್ಕೆ ಏರಿತೆಂದರೆ, ಸಾವಯವ ಪದಾರ್ಥವು ವೇಗದಿಂದ ಕಳಿಯತೊಡಗುತ್ತದೆ. ಈ ಕ್ರಿಯೆಯಿಂದ ಹೊರ ಬಂದ ಅಮೋನಿಯಾವನ್ನು ನೈಟ್ರೇಟ್ ಮತ್ತು ಅದನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುವ ಕ್ರಿಯೆಗಳೂ ವೇಗದಿಂದ ಸಾಗುತ್ತವೆ.

ಸಾವಯವ ಪದಾರ್ಥವನ್ನು ಕಳಿಯುವಂತೆ ಮಾಡುವ ಬ್ಯಾಕ್ಟೀರಿಯಾ, ಶೀಲೀಂದ್ರ ಮತ್ತು ಅಕ್ಟಿನೋಮೈಸಿಟೀಸ್ ಸೂಕ್ಷ್ಮ ಜೀವಿಗಳು ಹಾಗೂ ಅಮೋನಿಯಾವನ್ನು ನೈಟ್ರೇಟ್ ರೂಪಕ್ಕೆ ಮತ್ತು ನೈಟ್ರೇಟ್ ರೂಪಕ್ಕೆ ಪರಿವರ್ತಿಸುವ ನೈಟ್ರೋಸೋಮೊನಾಸ್ ಮತ್ತು ನೈಟ್ರೋಬ್ಯಾಕ್ಟರಗಳು ಆಮ್ಲಯುತ ಮಣ್ಣಿನಲ್ಲಿ ತಮ್ಮ ಚಟುವಟಿಕೆಯನ್ನು ಸರಿಯಾಗಿ ನಡೆಸಲಾರವು. ಸುಣ್ಣದ ಪೂರೈಕೆಯಿಂದ, ರಸಸಾರವು ೬.೫ ಸಮೀಪಕ್ಕೆ ಬಂದಿತೆಂದರೆ, ಈ ಸೂಕ್ಷ್ಮ ಜೀವಿಗಳು ಕಾರ್ಯಪ್ರವೃತ್ತವಾಗುತ್ತವೆ.

ಹವೆಯೊಳಗಿನ ಸಾರಜನಕದ ಸ್ಥಿರೀಕರಣ : ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳೊಡನೆ ಸಹಜೀವನವನ್ನು ನಡೆಸಿ, ಹವೆಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸುವ ರೈಝೋಬಿಯಂ ಗುಂಪಿನ ಬ್ಯಾಕ್ಟೀರಿಯಾ, ಸ್ವತಂತ್ರವಾಗಿ ಜೀವಿಸಿ ಹವೆಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸುವ ಆಜೋಟೋಬ್ಯಾಕ್ಟರ್ ನಂತಹ ಸೂಕ್ಷ್ಮಜೀವಿಗಳು, ಆಮ್ಲಯುತ ಮಣ್ಣಿನಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸಲಾರವು. ಆದ್ದರಿಂದಲೇ, ಸುಣ್ಣವನ್ನು ಪೂರೈಸಿ ಮಣ್ಣಿನ ಆಮ್ಲತೆಯು ಕಡಮೆಯಾದೊಡನೆ ಈ ಸೂಕ್ಷ್ಮ ಜೀವಿಗಳು ತಮ್ಮ ಕಾರ್ಯವನ್ನು ಚುರುಕಾಗಿ ನಿರ್ವಹಹಿಸಿ, ಹವೆಯೊಳಗಿನ ಸಾರಜನಕವನ್ನು ಸರಿಯಾಗಿ ಸ್ಥಿರೀಕರಿಸುತ್ತವೆ.

ಮಣ್ಣಿನ ಕಣಗಳ ರಚನೆಯ ಮೇಲೆ ಪರಿಣಾಮಗಳು : ಎರೆ ಮಣ್ಣಿನಲ್ಲಿ, ಕ್ಯಾಲ್ಸಿಯಂ ಮಣ್ಣಿನ ಕಣಗಳ ರಚನೆಯನ್ನು ಉತ್ತಮಗೊಳಿಸುತ್ತದೆ. ಎರೆಯ ಸೂಕ್ಷ್ಮ ಕಣಗಳು ಒಂದಕ್ಕೊಂದು ಹತ್ತಿರ ಬಂದು ಗುಂಪುಗಳಾಗಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಇದಲ್ಲದೇ ಸುಣ್ಣವನ್ನು ಆಮ್ಲಯುತ ಮಣ್ಣಿಗೆ ಸೇರಿಸುವುದರಿಂದ, ಸಸ್ಯಗಳು ಹುಲುಸಾಗಿ ಬೆಳೆದು, ಮಣ್ಣಿನಲ್ಲಿಯ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತವೆ. ಈ ಸಾವಯವ ಪದಾರ್ಥಗಳು ಕಳಿಯುವಾಗ ನಿರ್ಮಾಣಗೊಳ್ಳುವ ಕೆಲವು ಅಂಟಿನಂತಹ ವಸ್ತುಗಳು ಕಣಗಳ ರಚನೆಯನ್ನುಸ್ಥಿರಗೊಳಿಸಲು ಸಹಾಯಕವಾಗುತ್ತವೆ. ಹೀಗಾಗಿ ಕ್ಯಾಲ್ಸಿಯಂ, ಅಪ್ರತ್ಯಕ್ಷ ರೀತಿಯಿಂದಲೂ ಪ್ರಯೋಜನಕಾರಿಯಾಗಿದೆ.

ರೋಗಗಳ ಮೇಲಾಗುವ ಪರಿಣಾಮಗಳು :ಆಮ್ಲ ಮಣ್ಣಿಗೆ ಸುಣ್ಣವನ್ನು ಪೂರೈಸಿ ರಸಸಾರವನ್ನು ೭ರ ಸಮೀಪಕ್ಕೇರಿಸುವುದರಿಂದ ಕೆಲವು ರೋಗಗಳನ್ನು ತಡೆಗಟ್ಟಬಹುದು. ಉದಾಹರಣೆಗೆ, ಕ್ಯಾಬೇಜ್ ಗುಂಪಿಗೆ ಸೇರಿದ ಬೆಳೆಗಳಿಗೆ ತೊಂದರೆಯನ್ನು ಕೊಡುವ ‘ಕ್ಲಬ್‌ರಾಟ್’ ಎಂಬ ರೋಗವು, ಸುಣ್ಣವನ್ನು ಸೇರಿಸಿದ ಮಣ್ಣಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಣ್ಣಿನ ರಸಸಾರ ೭ ಅಥವಾ ಅದಕ್ಕಿಂತ ಅಧಿಕವಾಗಿದ್ದರೆ ಈ ರೋಗದ ಬೀಜಗಳು ಹುಟ್ಟಲಾರವು.

ಆದರೆ ಅಲೂಗಡ್ಡೆಗೆ ಬರು ಸ್ಕ್ಯಾಬ್ ರೋಗವು, ಆಮ್ಲ ಮಣ್ಣಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಣ್ಣಿನ ರಸಸಾರ ೬ಕ್ಕೆ ಬಂದೊಡನೆ ಈ ರೋಗವು ಉಲ್ಬಣಗೊಂಡು ಬೆಳೆಗೆ ಹಾನಿಯನ್ನುಂಟು ಮಾಡುತ್ತದೆನ್ನಬಹುದು.

i) ಕ್ಯಾಲ್ಸಿಯಂ ಮತ್ತು ಮೆಗ್ನಷಿಯಂ ಗಳು ಎಲ್ಲ ಬೆಳೆಗಳಿಗೆ ಅವಶ್ಯವಿರುವ ಪೋಷಕಗಳಾಗಿರುವುದರಿಂದ, ಸುಣ್ಣವನ್ನು ಮಣ್ಣಿಗೆ ಪೂರೈಸಿದಾಗ ಬೆಳೆಗಳಿಗೆ ಅವಶ್ಯಕಪೋಷಕಗಳೆರಡನ್ನೂ ಒದಗಿಸಿದಂತಾಗುತ್ತದೆ.

ii) ಆಮ್ಲಮಣ್ಣಿಗೆ ಸುಣ್ಣವನ್ನು ಪೂರೈಸುವುದರಿಂದ ರಸಸಾರವನ್ನು ೬.೫ ರಿಂದ ೭ರ ಸಮೀಪಕ್ಕೆ ತಂದು ಬೆಳೆಗಳಿಗೆ ಪ್ರಯೋಜನವಾಗುವಂತೆ ಮಾಡಬಹುದು.

ಮೇಲೆ ಹೇಳಿದ ಎರಡನೆಯ ಉದ್ದೇಶದ ಬಗ್ಗೆ ಕೆಳಗಿನ ವಿಷಯವನ್ನು ಗಮನಿಸುವುದು ಅವಶ್ಯ.

ಮಣ್ಣಿನಗೆ ಸುಣ್ಣವನ್ನು ಪೂರೈಸಿ ರಸಸಾರವನ್ನು ೬.೫ ರಿಂದ ೭ರ ಸಮೀಪಕ್ಕೆ ತರುವುದರಿಂದ ಎಲ್ಲ ಪ್ರಕಾರದ ಬೆಳೆಗಳ ಇಳುವರಿಯು ಅಧಿಕಗೊಳ್ಳುವುದಿಲ್ಲ. ಸುಣ್ಣದ ಪೂರೈಕೆಯಿಂದ ಬೆಳೆಗಳು ಇಳುವರಿಯ ಮೇಲಾಗುವ ಪರಿಣಾಮದ ಆಧಾರಗಳಿಂದ ಬೆಳೆಗಳನ್ನು ಹಲವು ಗುಂಪುಗಳಾಗಿ ವಿಂಗಡಿಸಬಹುದು.

ಸುಣ್ಣದ ಪೂರೈಕೆಯಿಂದ :

  • ಇಳುವರಿಯಲ್ಲಿ ಅತ್ಯಧಿಕ ಪ್ರಮಾಣದ ಹೆಚ್ಚಳವು ಕಂಡುಬರುವ ಬೆಳೆಗಳು : ಕುದುರೆ ಮೆಂತೆ ಮತ್ತು ಸಕ್ಕರೆ ಬೀಟ್.
  • ಇಳುವರಿಯಲ್ಲಿ ಮಧ್ಯಮ ಪ್ರಮಾಣದ ಹೆಚ್ಚಳವು, ಕಂಡುಬರುವ ಬೆಳೆಗಳು: ಮುಸುಕಿನ ಜೋಳ, ಬಾರಿಲಿ , ಗೋಧಿ.
  • ಇಳುವರಿಯಲ್ಲಿ ಕಡಮೆ ಪ್ರಮಾಣದ ಹೆಚ್ಚಳವು ಕಂಡುಬರುವ ಬೆಳೆಗಳು : ಓಟ್ಸ್ ಹತ್ತಿ, ತಂಬಾಕು ಸೋಯ ಅವರೆ.
  • ಇಳುವರಿಯಲ್ಲಿ ಹೆಚ್ಚಳವು ಕಂಡುಬಾರದ ಬೆಳೆಗಳು: ಕಲ್ಲಂಗಡಿ
  • ಇಳುವರಿಯ ಮೇಲೆ ದುಷ್ಪರಿಣಾಮವು ಉಂಟಾಗಬಹುದಾದ ಬೆಳೆ: ರೋಡೋಡೆಂಡ್ರಾನ್.

ಆದ್ದರಿಂದ ಮಣ್ಣಿಗೆ ಸುಣ್ಣವನ್ನು ಪೂರೈಸುವಾಗ, ಮಣ್ಣಿನ ಗುಣಧರ್ಮ ಮತ್ತು ಬೆಳೆಯ ಸ್ವಭಾವವನ್ನು ಪರಿಗಣಿಸಬೇಕು.

ಅವಶ್ಯಕತೆಗಿಂತ ಹೆಚ್ಚಿನ ಸುಣ್ಣದ ಪೂರೈಕೆ:

ಅವಶ್ಯಕತೆಗಿಂತ ಅಧಿಕ ಸುಣ್ಣವನ್ನು ಮಣ್ಣಿಗೆ ಪೂರೈಸಿದರೆ, ಹಲವು ಅಪಾಯಗಳುಂಟಾಗಬಹುದು. ಪ್ರಮುಖವಾಧವುಗಳು ಕೆಳಗಿನಂತಿವೆ.

i) ಮಣ್ಣಿನ ರಸಸಾರ ೮ನ್ನು ಮೀರಿದರೆ ರಂಜಕವು ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಗಳೊಡನೆ ಸಂಯೋಜನೆಗೊಂಡು ನೀರಿನಲ್ಲಿ ಕರಗದ ಕ್ಯಾಲ್ಸಿಯಂ ಫಾಸ್ಪೇಟ್ ಇಲ್ಲವೇ ಮೆಗ್ನಿಸಿಯಂ ಫಾಸ್ಪೇಟ್ ರೂಪಕ್ಕೆ ಪರಿವರ್ತನೆಯನ್ನು ಹೊಂದಬಹುದು. ಇದರಿಂದ ಬೆಳೆಗೆ ರಂಜಕದ ಕೊರತೆಯಾಗಬಹುದು.

ii) ಮಣ್ಣಿನಲ್ಲಿ ಕ್ಯಾಲ್ಸಿಯಂನ ಪ್ರಾಬಲ್ಯವುಂಟಾದರೆ ಪೋಟ್ಯಾಸಿಯಂ ಪೋಷಕಗಳ ಲಭ್ಯತೆಯು ಕಡಮೆಯಾಗುತ್ತದೆ.

iii) ಕಬ್ಬಿಣ ಮತ್ತು ಗಂಧಕಗಳು ಸಾಕಷ್ಟು ಪ್ರಮಾಣದಲ್ಲಿ ಸಸ್ಯಗಳಿಗೆ ಸಿಗದಂತಾಗಬಹುದು.

iv) ಕಿರು ಪೋಷಕಗಳಾದ ಸತು, ತಾಮ್ರ ಮತ್ತು ಮ್ಯಾಂಗನೀಸಗಳುನೀರಿನಲ್ಲಿ ಕರಗದ ರೂಪಕ್ಕೆ ಪರಿವರ್ತನೆ ಹೊಂದುವುದರಿಂದ ಈ ಪೋಷಕಗಳ ಕೊರತೆಯುಂಟಾಗಬಹುದು.

ಮರಳಿನ ಪ್ರಾಬಲ್ಯವಿರುವ ಅಥವಾ ಕೆಓಲಿನೈಟ್ ಪ್ರಕಾರದ ಕಣಗಳಿರುವ ಇಲ್ಲವೇ ಕಡಮೆ ಪ್ರಮಾಣದಲ್ಲಿ ಸಾವಯವ ಪದಾರ್ಥವಿರುವ ಮಣ್ಣುಗಳಲ್ಲಿ, ಸುಣ್ಣದ ಪ್ರಮಾಣವು ಮಿತಿ ಮೀರುವ ಸಾಧ್ಯತೆಯು ಹೆಚ್ಚು. ಇಂತಹ ಮಣ್ಣುಗಳಿಗೆ ಸುಣ್ಣವನ್ನು ಪೂರೈಸುವಾಗ ಎಚ್ಚರಿಕೆಯಿಂದಿರುವುದು ಅತ್ಯವಶ್ಯ.

* * *