ಖನಿಜ ಪದಾರ್ಥ, ಸಾವಯವ ವಸ್ತುಗಳು, ನೀರು ಮತ್ತು ಗಾಳಿ ಇವು ಮಣ್ಣಿನ ಪ್ರಮುಖ ಘಟಕಗಳೆಂದು ಹಿಂದಿನ ಅಧ್ಯಾಯದಲ್ಲಿ ಸೂಚಿಸಲಾಗಿದೆ. ಆದರೆ ಮಣ್ಣು ಒಂದು ನಿರ್ಜೀವ ವಸ್ತುವಲ್ಲ, ಮಣ್ಣಿನಲ್ಲಿ ಅನೇಕ ಪ್ರಕಾರದ ಜೀವಿಗಳು ವಾಸಿಸುತ್ತವೆಯಲ್ಲದೇ, ನಿರಂತರವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಲೇ ಇರುತ್ತವೆ. ಈ ಜೀವಿಗಳು ಮಣ್ಣಿನ ಗುಣ ಸ್ವಭಾವಗಳ ಮೇಲೆ ಮತ್ತು ಮಣ್ಣಿನಲ್ಲಿ ಬೆಳೆಯುವ ವಿವಿಧ ಸಸ್ಯಗಳ ಮೇಲೆ ಮಹತ್ತರ ಪರಿಣಾಮವನ್ನುಂಟು ಮಾಡುತ್ತವೆ. ಈ ಜೀವಿಗಳು ಇಲ್ಲವಾಗಿದ್ದರೆ, ಪೃಥ್ವಿಯ ಮೇಲೆ ಮಾನವನ ಮತ್ತು ಇತರ ಪ್ರಾಣಿಗಳ ಅಸ್ತಿತ್ವವೇ ದುಸ್ತರವಾಗುತ್ತಿತ್ತು ಎನ್ನುವಷ್ಟರ ಮಟ್ಟಿಗೆ ಈ ಜೀವಿಗಳು ಮಹತ್ವವನ್ನು ಪಡೆದಿವೆ. ಈ ಜೀವಿಗಳಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಈ ಅಧ್ಯಾಯದಲ್ಲಿವೆ.

ಜೀವಿಗಳಪ್ರಕಾರಗಳು

ಮಣ್ಣಿನಲ್ಲಿ ವಾಸಿಸುವ ಜೀವಿಗಳು ಪ್ರಾಣಿ ವರ್ಗ ಮತ್ತು ಸಸ್ಯ ವರ್ಗ ಎಂಬ ಎರಡು ಪ್ರಮುಖ ವಿಭಾಗಗಳಿಗೆ ಸೇರಿವೆ. ಪ್ರತಿ ವಿಭಾಗದಲ್ಲಿಯೂ ಹಲವು ಪ್ರಕಾರದ ಜೀವಿಗಳಿವೆ. ಈ ಕುರಿತು ಕೆಳಗಿನ ವಿವರಗಳು ಪ್ರಯೋಜನಕಾರಿ ಎನಿಸುತ್ತವೆ.

. ಪ್ರಾಣಿಗಳು

೧) ಏಕ ಕೋಶ ಪ್ರಾಣಿ

೨) ಜಂತು ಹುಳು

೩) ಎರೆ ಹುಳು

೪) ಇತರೆ ಪ್ರಾಣಿಗಳು : ಕೀಟಗಳು, ಜೇಡಗಳು, ಬಸವನ ಹುಳುಗಳು, ಶತಪದಿಗಳು, ಸಹಸ್ರಪದಿಗಳು, ಗೆದ್ದಲು, ಇಲಿ – ಹೆಗ್ಗಣಗಳು ಇತ್ಯಾದಿ.

. ಸಸ್ಯಗಳು :

ಅ) ಬ್ಯಾಕ್ಟೀರಿಯಾ

i) ಸಾವಯವ ಪದಾರ್ಥಗಳಿಂದ ಶಕ್ತಿಯನ್ನು ಪಡೆಯುವ ಬ್ಯಾಕ್ಟೀರಿಯಾ

 • ಸಾರಜನಕ ವಾಯುವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಾ
 • ಸಹ ಜೀವನವನ್ನು ನಡೆಸಿ
 • ಸ್ವತಂತ್ರವಾಗಿ ಜೀವಿಸಿ

ii) ನಿರಯವ ಸಂಯುಕ್ತಗಳನ್ನು ಉಪಯೋಗಿಸಿಕೊಂಡು ಶಕ್ತಿಯನ್ನು ಪಡೆಯುವ ಬ್ಯಾಕ್ಟೀರಿಯಾ

 • ಅಮೋನಿಯಾವನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುವ ಬ್ಯಾಕ್ಟೀರಿಯಾ
 • ನೈಟ್ರೇಟ್ನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುವ ಬ್ಯಾಕ್ಟೀರಿಯಾ
 • ಕಬ್ಬಿಣವನ್ನು ಫೆರಿಕ್ ರೂಪಕ್ಕೆ ಪರಿವರ್ತಿಸುವ ಬ್ಯಾಕ್ಟೀರಿಯಾ

ಆ. ಶೀಲೀಂದ್ರಗಳು

ಇ. ಆಕ್ಟೀನೋಮೈಸಿಟೀಸ್

ಈ. ಪಾಚಿಗಳು.

ಜೀವಿಗಳಸಂಖ್ಯೆಮತ್ತುತೂಕ

ಮಣ್ಣಿನಲ್ಲಿರುವ ಜೀವಿಗಳ ಸಂಖ್ಯೆ ಮತ್ತು ಅವುಗಳ ತೂಕಗಳ ಮೇಲಿರುವ ಜೀವಿಗಳ ಕಾರ್ಯ ವೈಶಾಲ್ಯತೆಯ ಅಂದಾಜು ಮಾಡಬಹುದು. ಮಣ್ಣಿನಲ್ಲಿ ವಾಸಿಸುತ್ತಿರುವ ಜೀವಿಗಳ ಪ್ರಕಾರ, ಸಂಖ್ಯೆ ಮತ್ತು ಅವುಗಳ ತೂಕಗಳು ಹಲವು ಸಂಗತಿಗಳನ್ನು ಅವಲಂಬಿಸಿವೆ. ಹವಾಮಾನ, ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಮೊದಲಾದವು ಮಣ್ಣಿನ ಜೀವಿಗಳ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಎಲ್ಲ ಪರಿಸ್ಥಿತಿಗಳಿಗೆ ಅನ್ವಯವಾಗುವಂತೆ ಅಂಕಿ ಸಂಖ್ಯೆಗಳನ್ನು ಹೇಳುವುದು ಅಸಾಧ್ಯ. ಹೀಗಿದ್ದರೂ, ಸಾಮಾನ್ಯವಾಗಿ ಕೆಲವು ಅಂದಾಜುಗಳನ್ನು ಮಾಡಬಹುದು.

) ಸಸ್ಯಗಳ ಸಂಖ್ಯೆ :

 • ಬ್ಯಾಕ್ಟೀರಿಯಾ, ಇತರೆ ಜೀವಿಗಳಿಗಿಂತ ಅತ್ಯಧಿಕ ಸಂಖ್ಯೆಯಲ್ಲಿವೆ. ಪ್ರತಿ ಚ.ಮೀ. ಕ್ಷೇತ್ರದಲ್ಲಿ ಇವು ೧೦ ೧೩ ಇಂದ ೧೪ ರಷ್ಟಿವೆ ಎಂದು ಅಂದಾಜು ಮಾಡಲಾಗಿದೆ. ಸಸ್ಯದ ಗುಂಪಿಗೆ ಸೇರಿದ ಸೂಕ್ಷ್ಮ ಜೀವಿಗಳಲ್ಲಿ ಪಾಚಿ, ಉಳಿದೆಲ್ಲವುಗಳಿಗಿಂತ ಸಂಖ್ಯೆಯಲ್ಲಿ ಕಡಮೆ. ಪ್ರತಿ ಚ.ಮೀ. ಪ್ರದೇಶದ ಮಣ್ಣಿನಲ್ಲಿ ಇವುಗಳ ಸಂಖ್ಯೆಯು ೧೦ ೯ – ೧೦ ೧೦ ರಷ್ಠಾಗಬಹುದು.
 • ಶಿಲೀಂದ್ರ ಮತ್ತು ಆಕ್ಟೋನೋಮೈಸಿಟೀಸ್ ಗಳು ಸಂಖ್ಯೆಯಲ್ಲಿ ಮೇಲಿನ ಎರಡರ ಮಧ್ಯದ ಸ್ಥಾನದಲ್ಲಿವೆ.

) ಸೂಕ್ಷ್ಮ ಸಸ್ಯಗಳ ತೂಕ :

 • ತೂಕದ ದೃಷ್ಟಿಯಿಂದ , ಶಿಲೀಂದ್ರಗಳು ಮೊದಲನೆಯ ಸ್ಥಾನದಲ್ಲಿವೆಯಾದರೆ ಬ್ಯಾಕ್ಟೀರಿಯಾ ಮತ್ತು ಆಕ್ಟನೋಮೈಸಿಟೀಸ್ಗಳು ಎರಡನೆಯ ಸ್ಥಾನದಲ್ಲಿವೆ.
 • ಪಾಚಿಗಳ ತೂಕವು ಉಳಿದೆಲ್ಲ ಜೀವಿಗಳಿಗಿಂತ ಕಡಮೆ.

) ಪ್ರಾಣಿಗಳ ಸಂಖ್ಯೆ ಮತ್ತು ತೂಕ :

 • ಏಕಾಣು ಜೀವಿಗಳು ಮಣ್ಣಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇವೆ.
 •  ಜಂತು ಹುಳಗಳು ಎರಡನೆಯ ಸ್ಥಾನದಲ್ಲಿವೆ.
 • ಎರೆ ಹುಳುಗಳು ಅತಿ ಕಡಮೆ ಸಂಖ್ಯೆಯಲ್ಲಿವೆ.
 • ಆದರೆ ತೂಕದ ದೃಷ್ಟಿಯಿಂದ ನೋಡಿದಾಗ, ಪ್ರತಿ ಹೆಕ್ಟೇರಿನ ಪ್ರದೇಶದಲ್ಲಿರುವ ಎರೆ ಹುಳುಗಳ ತೂಕವು ಮೇಲಿನ ಎರಡು ಪ್ರಕಾರಗಳ ಪ್ರಾಣಿಗಳಿಗಿಂತ ೮ ರಿಂದ ೧೦ ಪಟ್ಟು ಅಧಿಕವಾಗಿರುತ್ತವೆ.

ಮಣ್ಣಿನಲ್ಲಿರುವಪ್ರಾಣಿಗಳು

ಮಣ್ಣಿನ ಗುಣಧರ್ಮಗಳು ಮತ್ತು ಸಸ್ಯದ ಬೆಳವಣಿಗೆಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮವನ್ನುಂಟು ಮಾಡುವ ಪ್ರಾಣಿಗಳ ಬಗೆಗಿನ ವಿವರಗಳು ಕೆಳಗಿನಂತಿವೆ.

ಏಕ ಕೋಶ ಪ್ರಾಣಿಗಳು :ಒಂದೇ ಕೋಶದ ಈ ಜೀವಿಗಳು, ಪ್ರಾಣಿ ವರ್ಗದಲ್ಲಿಯೇ ಅತಿ ಸರಳ ಜೀವಿಗಳೆನ್ನಬಹುದು. ಆಕಾರದಲ್ಲಿ ಈ ಗುಂಪಿಗೆ ಸೇರಿದ ಜೀವಿಗಳು ಬ್ಯಾಕ್ಟೀರಿಯಾಗಳಿಗಿಂತ ದೊಡ್ಡವು. ಇವುಗಳಲ್ಲಿ ಮೂರು ಪ್ರಕಾರಗಳಿವೆ.

೧. ತಮ್ಮ ದೇಹದ ಆಕಾರವನ್ನು ಸದಾ ಬದಲಿಸುತ್ತ ಚಲಿಸುವ ಮತ್ತು ಆ ಮೂಲಕ ಆಹಾರವನ್ನು ಸೇವಿಸು‌ತ್ತಿರುವ ಅಮೀಬಾದಂತ ಪ್ರಾಣಿಗಳು.

೨. ಕೂದಲಿನಂತಹ ಅಂಗಗಳಿರುವ ಮತ್ತು ಇಂತಹ ಅಂಗಗಳ ಸಹಾಯದಿಂದ ಚಲಿಸುವ ಪ್ರಾಣಿಗಳು.

೩. ಬಾಲದಂತಹ ಅಂಗಗಳಿರುವ ಮತ್ತು ಈ ಅಂಗಗಳ ಸಹಾಯದಿಂದ ಚಲಿಸುವ ಪ್ರಾಣಿಗಳು.

ಏಕ ಕೋಶ ಪ್ರಾಣಿಗಳು ಸಾಮಾನ್ಯವಾಗಿ ಮೇಲ್ಮಣ್ಣಿನಲ್ಲಿ ಕಂಡು ಬರುತ್ತವೆ. ಮಣ್ಣಿನಲ್ಲಿರುವ ಕೆಲವು ಬಗೆಯ ಬ್ಯಾಕ್ಟೀರಿಯಾಗಳು ಈ ಜೀವಿಗಳ ಆಹಾರವೆಂದು ಕಂಡುಬಂದಿವೆ. ಗಾಳಿಯೊಳಗಿನ ಸಾರಜನಕವನ್ನು ಸ್ವತಂತ್ರ ರೀತಿಯಿಂದ ಸ್ವೀಕರಿಸಬಲ್ಲ ಎರೋ ಬ್ಯಾಕ್ಟೀರಿಯಾ ಈ ಎಕ ಜೀವಿಗಳಿಎ ಹೆಚ್ಚು ಇಷ್ಟ. ಆಹಾರದ ಕೊರತೆಯಾದಾಗ, ಮಣ್ಣಿನಲ್ಲಿಯ ಆರ್ದ್ರತೆಯು ಕಡಮೆಯಾದಾಗ ಅಥವಾ ಉಷ್ಣತಾಮಾನವು ಅನುಕೂಲಕರವಿಲ್ಲದಿರುವಾಗ ಈ ಜೀವಿಗಳು ಅಭೇದ ಕೋಶವನ್ನು ರಚಿಸಿಕೊಂಡು ಹಲವು ದಿನಗಳವರೆಗೆ ಕ್ರಿಯಾಹೀನ ಸ್ಥಿತಿಯಲ್ಲಿ ಸುರಕ್ಷಿತವಾಗಿರಬಲ್ಲವು. ಪರಿಸ್ಥಿತಿಯು ಸುಧಾರಿಸಿದೊಡನೆ ತಮ್ಮ ಚಟುವಟಿಕೆಗಳನ್ನು ಪುನಃ ಆರಂಭಿಸುತ್ತವೆ.

ಏಕಕೋಶ ಪ್ರಾಣಿಗಳು ಮನುಷ್ಯರಲ್ಲಿ ಮತ್ತು ಸಾಕು ಪ್ರಾಣಿಗಳಲ್ಲಿ ಹಲವು ಬಗೆಯ ರೋಗಗಳನ್ನುಂಟು ಮಾಡುತ್ತವೆಯಾದರೂ ಸಸ್ಯಗಳ ಮೇಲೆ ಯಾವುದೇ ರೀತಿಯ ನೇರವಾದ ಪರಿಣಾಮವನ್ನುಂಟು ಮಾಡುವುದಿಲ್ಲ.

ಜಂತು ಹುಳುಗಳು (ನಿಮಟೋಡ್) : ಜಂತು ಹುಳುಗಳು ಮೊದಲು ತಿಳಿಸಿರುವ ಏಕ ಕೋಶದ ಪ್ರಾಣಿಗಳಿಗಿಂತ ಆಕಾರದಲ್ಲಿ ಬಹು ಸಣ್ಣವು. ಸೂಕ್ಷ್ಮ ದರ್ಶಕ ಯಂತ್ರದ ಸಹಾಯದಿಂದ ಮಾತ್ರ ಇವುಗಳನ್ನು ನೋಡಲು ಸಾಧ್ಯ. ಇವುಗಳಲ್ಲಿ ಸಾವಿರಕ್ಕಿಂತಲೂ ಅಧಿಕ ಪ್ರಬೇಧಗಳಿವೆ. ಕೆಲವು ಬಗೆಯ ಜಂತು ಹುಳುಗಳು ಬ್ಯಾಕ್ಟಿರಿಯಾ ಮತ್ತು ಶೀಲೀಂದ್ರ ಗಳನ್ನು ಸೇವಿಸಿ ಬದುಕುತ್ತವೆಯಾದರೆ, ಇನ್ನು ಕೆಲವು ಜಂತು ಹುಳುಗಳು ಹಲವು ಬಗೆಯ ಸಸ್ಯಗಳ ಬೇರುಗಳನ್ನು ಆಕ್ರಮಿಸಿ, ಸಸ್ಯಗಳ ಬೆಳಣಿಗೆಯನ್ನು ಕುಂಠಿತಗೊಳಿಸುತ್ತವೆ. ಬೇರೆ ಗುಂಪಿಗೆ ಸೇರಿದ ಜಂತು ಹುಳುಗಳನ್ನು ಭಕ್ಷಿಸುವ ಜಂತು ಹುಳುಗಳೂ ಇವೆ.

ಕೆಲವು ಜಂತು ಹುಳುಗಳು ಸಾವಯವ ವಸ್ತುಗಳು ಕಳಿಯುವಂತೆ ಮಾಡಿ, ಸಾವಯವ ಪದಾರ್ಥಗಳು ಮಣ್ಣಿನಲ್ಲಿ ಮಿಶ್ರಮಾಡಲು ಸಹಾಯವನ್ನು ಮಾಡಿ, ಮಣ್ಣಿನಲ್ಲಿ ಹವೆಯು ಚಲಿಸುವ ಕಾರ್ಯದಲ್ಲಿ ಭಾಗವಹಿಸಿ ಪ್ರಯೋಜನಕಾರಿ ಎನಿಸಿವೆ.

ಎರೆ ಹುಳುಗಳು : ಮಣ್ಣಿನಲ್ಲಿ ವಾಸಿಸುವ ದೊಡ್ಡ ಆಕಾರದ ಹುಳುಗಳಲ್ಲಿ, ಎರೆ ಹುಳುವೇ ಹೆಚ್ಚು ಪ್ರಯೋಜನಕಾರಿ ಪ್ರಾಣಿಯೆನ್ನಬಹುದು. ಜಗತ್ತಿನ ವಿವಿಧ ಭಾಗಳಲ್ಲಿ ಇರುವ ಮಣ್ಣುಗಳನ್ನು ಪರಿಶೀಲಿಸಿದಾಗ, ೧೫೦೦ಕ್ಕಿಂತಲೂ ಅಧಿಕ ಪ್ರವರಗಳಿಗೆ ಸೇರಿದ ಎರೆಹುಳುಗಳು ಇವೆಯೆಂದು ಕಂಡುಬಂದಿದೆ. ಎರೆ ಹುಳುಗಳ ಆಕಾರ ಮತ್ತು ಅವುಗಳಸ್ವಭಾವಗಳಲ್ಲಿ ಬಹಳಷ್ಟು ವಿಭಿನ್ನತೆಯಿದೆ.

 • ಯೂರೋಪ ಮತ್ತು ಅಮೇರಿಕೆಯ ಕೆಲವೆಡೆ ಕಂಡು ಬರುವ ಹುಳಗಳ ಉದ್ಧಳತೆಯು ಸುಮಾರು ೨೫ ಸೆಂ.ಮೀ. ಇದ್ದರೆ ಉಷ್ಣ ಕಟಿ ಬಂಧದಲ್ಲಿಯ ಕೆಲವು ಮಣ್ಣುಗಳಲ್ಲಿ ವಾಸಿಸುವ ಎರೆ ಹುಳುಗಳು ೩ ಮೀ. ಉದ್ಧವಿರುತ್ತವೆ.
 • ಕೆಲವು ಬಗೆಯ ಹುಳುಗಳಲ್ಲಿ ಗಂಡು – ಹೆಣ್ಣುಗಳ ಸಂಗಮದಿಂದ ವಂಶಾಭಿವೃದ್ಧಿಯು ನಡೆಯುತ್ತದೆಯಾದರೂ ಮತ್ತೇ ಕೆಲವು ಬಗೆಯ ಹುಳುಗಳಲ್ಲಿ ವಂಶಾಭಿವೃದ್ಧಿಯು ಅಲೈಂಗಿಕ ರೀತಿಯಿಂದ ಸಾಗುತ್ತದೆ. ಇವೆರಡೂ ಬಗೆಗಳಿಂದ ವಂಶಾಭಿವೃದ್ಧಿಯನ್ನು ನಡೆಸುವ ಎರೆ ಹುಳುಗಳೂ ಇವೆ.
 • ಎರೆ ಹುಳಗಳು ಮಣ್ಣಿನಲ್ಲಿ ನಿರ್ಮಿಸಿಕೊಂಡ ಗೂಡಿನಲ್ಲಿ ತಮ್ಮ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಂದ ಹೊರ ಬಂದ ಮರಿಗಳು ಪ್ರಾಯಕ್ಕೆ ಬರಲು ವಿವಿಧ ಪ್ರಭೇಧಗಳಲ್ಲಿ ೬ ರಿಂದ ೧೮ ತಿಂಗಳುಗಳ ಕಾಲ ಬೇಕಾಗುತ್ತದೆ.
 • ಕೆಲವು ಪ್ರಕಾರದ ಎರೆ ಹುಳುಗಳು ತಮ್ಮ ವಾಸಕ್ಕೆಂದು ಸದಾ ಹೊಸದಾಗಿ ಬಿಲಗಳನ್ನು ನಿರ್ಮಿಸುತ್ತಾ ಮೇಲ್ಮಣ್ಣಿನಲ್ಲಿ ವಾಸಿಸುತ್ತವೆಯಾದರೆ, ಇನ್ನು ಕೆಲವು ಎರೆಹುಳುಗಳು ಶಾಶ್ವತವಾಗಿ ಬಿಲಗಳನ್ನು ನಿರ್ಮಿಸಿಕೊಂಡು ಅಲ್ಲಿಯೇ ವಾಸಿಸುತ್ತವೆ. ಈ ಶಾಶ್ವತ ಬಿಲಗಳು ೩೦ ಸೆಂ.ಮೀ.ನಿಂದ ೧೮೦ ಸೆಂ.ಮೀ. ಆಳದವರೆಗೂ ಇರಬಹುದು.
 • ಆಹಾರಗಳ ಪ್ರಕಾರಗಳು ಮತ್ತು ಅವುಗಳ ಸೇವನೆಯ ವಿಧಾನಗಳಲ್ಲೂ ಅಂತರವನ್ನು ಕಾಣಬಹುದು. ಕೆಲವು ಎರೆ ಹುಳುಗಳು ಹುಲ್ಲು ಮತ್ತು ಸಸ್ಯಗಳ ಸತ್ತ ಬೇರುಗಳನ್ನು ಸೇವಿಸುತ್ತವೆಯಾದರೆ ಇನ್ನು ಕೆಲವು ಮಣ್ಣಿನ ಮೇಲ್ಬಾಗದಲ್ಲಿರುವ ಸಾವಯವ ಪದಾರ್ಥಗಳನ್ನು ಸೇವಿಸುತ್ತವೆ. ಕೆಲವು ಎರೆ ಹುಳುಗಳು ಮಣ್ಣಿನ ಮೇಲ್ಬಾಗಕ್ಕೆ ಬಂದು ಸಾವಯವ ಸಸ್ಯಗಳನ್ನು ಸಂಗ್ರಹಿಸಿ, ತಮ್ಮ ಬಿಲಕ್ಕೆ ಕೊಂಡೊಯ್ದು ಭಕ್ಷಿಸಿದರೆ ಇನ್ನು ಕೆಲವು ಹುಳುಗಳು ತಮ್ಮ ಬಿಲದ ಮೇಲ್ಗಡೆ ಇರುವ ಸಾವಯವ ಪದಾರ್ಥಗಳನ್ನಷ್ಟೇ ಆಹಾರಕ್ಕಾಗಿ ತಮ್ಮ ಬಿಲಕ್ಕೆ ಕೊಂಡೊಯ್ಯುತ್ತವೆ.
 • ಕೆಲವು ಎರೆ ಹುಳುಗಳು ಸಾವಯವ ಪದಾರ್ಥವನ್ನು ಮಾತ್ರ ಭಕ್ಷಿಸುತ್ತವೆಯಾದರೆ ಇನ್ನು ಕೆಲವು ಹುಳುಗಳು ಸಾವಯವ ಪದಾರ್ಥದೊಡನೆ ಮಣ್ಣನ್ನು ಸಹ ಸೇವಿಸುತ್ತವೆ. ಆದ್ದರಿಂದ ಇಂತಹ ಹುಳುಗಳ ಮಲದಲ್ಲಿ (ಹಿಕ್ಕೆಯಲ್ಲಿ) ಮಣ್ಣು ದೊಡ್ಡ ಪ್ರಮಾಣದಲ್ಲಿ ಇರುತ್ತದೆ.

ಎರೆಹುಳುಗಳಿಂದಮಣ್ಣಿನಮೇಲಾಗುವಪರಿಣಾಮಗಳು

 • ಕೆಲವು ಎರೆ ಹುಳುಗಳು ಸಾವಯವ ಪದಾರ್ಥಗಳೊಡನೆ ಮಣ್ಣನ್ನು ಸೇವಿಸುತ್ತವೆಯೆಂಬುವುದನ್ನುಮೇಲೆ ತಿಳಿಸಲಾಗಿದೆ. ಇವೆರಡೂ, ವಸ್ತುಗಳು, ಎರೆ ಹುಳದ ದೇಹದೊಳಗಿರುವ ಸುಣ್ಣದ ಕಾರ್ಬೊನೇಟ್ (CaCO3) ಮತ್ತು ಕಿಣ್ವಗಳೊಡನೆ ಸೇರಿ ಮಥನಗೊಂಡು, ಮಲದ ರೂಪದಲ್ಲಿ ಹೊರ ಬರುತ್ತವೆ. ಉತ್ತಮ ಪರಿಸರವಿದ್ದಾಗ, ಪ್ರತಿ ಎರೆ ಹುಳುವು ಪ್ರತಿ ದಿನ ತನ್ನ ದೇಹದ ತೂಕದಷ್ಟು ಮಲವನ್ನು ಹೊರ ಹಾಕುತ್ತದೆ. ಒಂದು ಅಂದಾಜಿನ ಪ್ರಕಾರ ಉಷ್ಣ ಕಟಿ ಬಂಧದ ಮೇಲ್ಮಣ್ಣಿನಲ್ಲಿ ಪ್ರತಿ ಹೆಕ್ಟೇರಿಗೆ ಪ್ರತಿ ವರ್ಷ ೨೦೦ ಟನ್ನುಗಳಷ್ಟು ಮಲವು ಹೊರ ಬರುತ್ತದೆ.
 • ಎರೆ ಹುಳುಗಳು ಸೇವಿಸಿದ ಮಣ್ಣಿಗಿಂತ ಅವುಗಳ ಮಲದಲ್ಲಿರುವ ಮಣ್ಣಿನಲ್ಲಿ ಜಿನುಗು ಕಣಗಳು, ಕ್ಯಾಲ್ಸಿಯಂ, ಪೋಟ್ಯಾಸಿಯಂ, ಒಟ್ಟು ಸಾರಜನಕ ಮತ್ತು ನೀರಿನಲ್ಲಿ ಕರಗುವ ರಂಜಕ, ಇವುಗಳ ಶೇಕಡಾವಾರು ಪ್ರಮಾಣವು ಗಣನೀಯವಾಗಿ ಅಧಿಕಗೊಂಡಿರುತ್ತದೆ. ಮಣ್ಣಿನ ಕಣಗಳ ರಚನೆ ಹೆಚ್ಚು ಸ್ಥಿರವಾಗಿರುತ್ತದೆಯಲ್ಲದೇ ಮಣ್ಣಿನ ಗಾತ್ರದ ಸಾಂಧ್ರತೆಯು ಕಡಮೆಯಾಗಿರುತ್ತದೆ. (ಮಣ್ಣು ಹೆಚ್ಚು ರಂಧ್ರಯುತವಾಗಿರುತ್ತದೆ).
 • ಎರೆ ಹುಳುಗಳು ಮಣ್ಣಿನಲ್ಲಿ ಸುರಂಗಗಳನ್ನು ತೋಡಿ, ಗೂಡುಗಳನ್ನು ನಿರ್ಮಿಸುವುದರಿಂದ ಈ ಮಾರ್ಗಗಳು ಹವೆಯ ಮತ್ತು ನೀರಿನ ಚಲನೆಗೆ ಅನುಕೂಲತೆಯನ್ನುಂಟು ಮಾಡಿಕೊಡುತ್ತವೆ. ಮಣ್ಣಿನಲ್ಲಿರುವ ಹೆಚ್ಚಾದ ನೀರು ಬಸಿದು ಹೋಗಲು ಮತ್ತು ಸಸ್ಯದ ಬೇರುಗಳು ನಿರಾತಂಕವಾಗಿ ಅಭಿವೃದ್ಧಿ ಹೊಂದಲು ಅವಕಾಶ ದೊರೆತಂತಾಗುತ್ತದೆ.
 • ಸಾವಯವ ಪದಾರ್ಥವನ್ನು ಎರೆ ಹುಳುಗಳು ತಮ್ಮ ಗೂಡಿಗೆ ಎತ್ತಿಕೊಂಡು ಹೋಗುವುದರಿಂದ, ಕೆಳಗಿನ ಸ್ತರಗಳಲ್ಲಿರುವ ಮಣ್ಣಿಗೆ ಸಾವಯವ ಪದಾರ್ಥವನ್ನು ಅನಾಯಾಸವಾಗಿ ಮಿಶ್ರಮಾಡಿದಂತಾಗುತ್ತದೆ.
 • ಮಣ್ಣಿನ ಕಣಗಳ ರಚನೆಯ ಆಕಾರದಲ್ಲಿ ದೊಡ್ಡದಾಗಿ ಮೇಲೆ ಹೇಳಿದಂತೆ ಕಣಗಳ ರಚನೆಯ ಸ್ಥಿರತೆಯು ಹೆಚ್ಚುತ್ತದೆ.

ಎರೆ ಹುಳುಗಳ ಉತ್ತಮ ಚಟುವಟಿಕೆಗಳಿಗೆ ಬೇಕಾಧ ಪರಿಸರ : ಕೆಳಗೆ ಸೂಚಿಸಿದ ವಾತಾವರಣವಿದ್ದರೆ, ಎರೆ ಹುಳುಗಳು ಉತ್ತಮ ರೀತಿಯಿಂದ ಅಭಿವೃದ್ಧಿ ಹೊಂದಿ, ತಮ್ಮ ಕಾರ್ಯಚಟುವಟಿಕೆಗಳನ್ನು ಸರಿಯಾಗಿ ನಡೆಸುತ್ತವೆ. ಇದರಿಂದ ಬೆಳೆಗಳಿಗೆ ಹೆಚ್ಚು ಪ್ರಯೋಜನವು ದೊರೆಯುತ್ತದೆ.

 • ಮಣ್ಣಿನಲ್ಲಿ ಸೂಕ್ತ ಪ್ರಮಾಣದ ಆರ್ದ್ರತೆಯು ಸದಾ ಇರಬೇಕಲ್ಲದೇ, ಸಾಕಷ್ಟು ಹವೆಯು ಆಡುತ್ತಿರಬೇಕು. ಆದ್ದರಿಂದಲೇ, ಮೇಲಿನ ಮಣ್ಣು ಒಣಗುತ್ತಾ ಹೋದಂತೆ ಎರೆ ಹುಳುಗಳೂ ಆರ್ದ್ರತೆಯಿರುವ ಕೆಳ್ತರಗಳೆಡೆಗೆ ಸಾಗುತ್ತವೆ. ಜಲಧಾರನಾಶಕ್ತಿಯು ಕಡಮೆಯಿರುವ ಮರಳು ಮಣ್ಣಿನಲ್ಲಿ ಮತ್ತು ಅತಿ ಕಡಮೆ ಆಳವಿರುವ ಮಣ್ಣಿನಲ್ಲಿ ಎರೆ ಹುಳುಗಳು ಅತಿ ಕಡಮೆ.
 • ಹಿತವಾದ ಉಷ್ಣತಾಮಾನವಿರಬೇಕು. ಅತಿ ತಂಪು ಅಥವಾ ಅತಿ ಉಷ್ಣತೆಯಿರುವ ಮಣ್ಣಿನಲ್ಲಿ, ಎರೆ ಹುಳುಗಳು ಬಾಳಲಾರವು.
 • ಸುಣ್ಣವು ಎರೆ ಹುಳುಗಳಿಗೆ ನಿರಂತರವಾಗಿ ದೊರೆಯುವಂತಿರಬೇಕು. ಸುಣ್ಣವನ್ನು ಪಾಚಕಾಂಗಗಳಲ್ಲಿರುವ ಗ್ರಂಥಇಗಳ ಮೂಲಕ ಕ್ಯಾಲ್ಸಿಯಂ ಕಾರ್ಬೊನೇಟನ್ನಾಗಿ ಮಾರ್ಪಡಿಸಿ, ಮಲದೊಡನೆ ಹೊರ ಹಾಕುತ್ತವೆ. ಸುಣ್ಣದ ಕೊರತೆಯಿರುವ ಆಮ್ಲಮಣ್ಣಿನಲ್ಲಿ ಎರೆ ಹುಳುಗಳು ಸರಿಯಾಗಿ ಬದುಕಲಾರವು. ಇಂತಹ ಮಣ್ಣಿಗೆ ಸುಣ್ಣವನ್ನು ಹಾಕಬೇಕು.
 • ಎರೆ ಹುಳುಗಳಿಗೆ ಸಾವಯವ ಪದಾರ್ಥಗಳು ಬೇಕೇ ಬೇಕು. ಸಾವಯವ ಪದಾರ್ಥಗಳೇ ಇವುಗಳ ಮುಖ್ಯ ಆಹಾರ. ಸಗಣಿ ಗೊಬ್ಬರ, ಕಾಂಪೋಸ್ಟ್ ಇತ್ಯಾದಿ ಗೊಬ್ಬರಗಳನ್ನು ಮಣ್ಣಿಗೆ ಪೂರೈಸಿದರೆ ಅಥವಾ ಮಣ್ಣಿನ ಮೇಲೆ ಸಾವಯವ ಪದಾರ್ಥಗಳನ್ನು ಹರಡಿದರೆ, ಎರೆಹುಳುಗಳ ಸಂಖ್ಯೆಯು ಹೆಚ್ಚುವುದಲ್ಲದೇ ಅವುಗಳ ಕಾರ್ಯ ಚಟುವಟಿಕೆಯು ಅಧಿಕಗೊಳ್ಳುತ್ತದೆ.

ಇತರ ಪ್ರಾಣಿ ವರ್ಗಗಳು : ಕೀಟಗಳು, ಶತಪದಿಗಳು, ಸಹಸ್ರ ಪದಿಗಳು, ಇಲಿ – ಹೆಗ್ಗಣ, ಇತ್ಯಾದಿಯಾಗಿ ಹಲವು ಬಗೆಯ ಪ್ರಾಣಿ ವರ್ಗಗಳು ಮಣ್ಣಿನಲ್ಲಿ ವಾಸಿಸುತ್ತವೆ. ಈ ಪ್ರಾಣಿಗಳು ಸಾಮಾನ್ಯವಾಗಿ ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ಕಡಿದು, ಸಣ್ಣ ಪುಟ್ಟ ತುಂಡುಗಳನ್ನಾಗಿ ಮಾಡುತ್ತವೆ. ಈ ಕಾರ್ಯದಿಂದ ಸಾವಯವ ವಸ್ತುಗಳನ್ನು ಕಳಿಯುವಂತೆ ಮಾಡುವ ಸೂಕ್ಷ್ಮ ಜೀವಿಗಳು ತಮ್ಮ ಕೆಲಸವನ್ನು ಹೆಚ್ಚು ವೇಗದಿಂದ ನಡೆಸಲು ಅನುಕೂಲವುಂಟಾಗುತ್ತದೆ.

ಈ ಜೀವಿಗಳು ತಮ್ಮ ಜೀವನ ಚಕ್ರವನ್ನು ಮುಗಿಸಿದ ನಂತರ ಆವುಗಳ ಮೃತ ದೇಹಗಳು ಮಣ್ಣಿಗೆ ಸೇರಿ, ಸಾವಯವ ಪದಾರ್ಥಗಳ ಒಂದು ಭಾಗವಾಗುತ್ತವೆ.

ಗೆದ್ದಲು ಹುಳುಗಳು : ಜಗತ್ತಿನ ಬಹುಭಾಗಗಳಲ್ಲಿ ಕಂಡು ಬರುವ ಗೆದ್ದಲು ಹುಳುಗಳಲ್ಲಿ ಸಹಸ್ರಾರು ಪ್ರವರಗಳಿವೆ. ಉಷ್ಣ ವಲಯ ಮತ್ತು ಸಮಶೀತೋಷ್ಣವಲಯಗಳ ಪ್ರದೇಶಗಳಲ್ಲಿ, ಗೆದ್ದಲು ಹೆಚ್ಚಾಗಿ ಕಂಡು ಬರುತ್ತದೆ. ಗೆದ್ದಲು ಹುಳುಗಳ ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಮುಂದಿನಂತಿವೆ.

ಗೆದ್ದಲು ಹುಳುಗಳು ಭೂಮಿಯ ಮೇಲೆ ಎತ್ತರವಾದ ಹುತ್ತಗಳನ್ನು ನಿರ್ಮಿಸಿ ಕೊಂಡಿರುತ್ತವೆ. ಈ ಹುತ್ತವು ನೆಲದ ಪಾತಾಳಿಯಿಂದ ವಿವಿಧ ಎತ್ತರಕ್ಕೆ ಬೆಳೆದುಕೊಂಡಿರಲು ಸಾಧ್ಯ. ಕೆಲವು ದೈತ್ಯಾಕಾರದ ಹುತ್ತಗಳು ೬ ಮೀ. ಅಥವಾ ಅದಕ್ಕಿಂತ ಎತ್ತರದವರೆಗೆ ಇರಬಲ್ಲವು.

ಹುಳುಗಳು ಹುತ್ತಕ್ಕಾಗಿ ಆಳವಾದ ಸ್ಥರಗಳಿಂದ ಮಣ್ಣನ್ನು ಮೇಲಕ್ಕೆ ತರುತ್ತವೆ. ಅಲ್ಲದೇ ನೆಲದಾಳದಲ್ಲಿ ಸುವ್ಯವಸ್ಥಿತವಾದ ಗೂಡನ್ನು ನಿರ್ಮಿಸಿಕೊಂಡಿರುತ್ತವೆ. ಇಂತಹ ಗೂಡಿನೊಳಗೆ ಹುಳುಗಳು ೧೦ ರಿಂದ ೨೦ ವರ್ಷಗಳವರೆಗೆ ವಾಸಿಸುತತ್ತವೆ. ಅನಂತರ ಹುತ್ತವನ್ನು ಬಿಟ್ಟು, ಹೊರ ಹೋಗಿ ಹೊಸ ಗುಂಪನ್ನು ಕಟ್ಟಿಕೊಂಡು ಅಲ್ಲಿ ಹೊಸದಾಗಿ ಹುತ್ತವನ್ನು ನಿರ್ಮಿಸುತ್ತವೆ.

ಈಗಾಗಲೇ ತಿಳಿಯಡಿಸಿದಂತೆ, ಹುತ್ತವನ್ನು ನಿರ್ಮಿಸಲು ಗೆದ್ದಲು ಹುಳುಗಳು ಆಳವಾದ ಸ್ತರಗಳಿಂದ ಮಣ್ಣನ್ನು ಮೇಲೆ ತರುತ್ತವೆ. ಗೆದ್ದಲು ಹುಳಗಳ ಪಾಚಕಾಂಗಗಳು ಕೆಲವು ಸೂಕ್ಷ್ಮ ಜೀವಿಗಳ ಸಹಾಯದಿಂದ ಎರೆಹುಳುಗಳ ಪಾಚಕಾಂಗಗಳಿಗಿಂತಲೂ ಹೆಚ್ಚು ಸಮರ್ಥವಾಗಿ ಕಾರ್ಯವನ್ನು ನಿರ್ವಹಿಸುತ್ತವೆ. ಆದ್ದರಿಂದ ಗೆದ್ದಲು ಹುಳುಗಳು ತಂದ ಮಣ್ಣಿನ್ಲಿ ಸಾವಯವ ಪದಾರ್ಥಗಳ ಪ್ರಮಾಣವು ಅತಿ ಕಡಮೆ. ಇದಲ್ಲದೇ, ಈ ಮಣ್ಣನ್ನು ಉಪಯೋಗಿಸಿ ಹುತ್ತವನ್ನು ನಿರ್ಮಿಸುವಾಗ ಕಣಗಳು ಬಿಗಿಯಾಗಿರುವಂತೆ ಈ ಹುಳುಗಳು ಬಂಧಿಸುತ್ತವೆ. ಆದ್ದರಿಂದ ಹುತ್ತದ ಮಣ್ಣಿನ ಗಾತ್ರ ಸಾಂಧ್ರತೆಯು ಅಧಿಕವಿರುತ್ತದೆ. ಈ ಕಾರಣಗಳಿಂದಾಗಿ ಹುತ್ತದ ಮಣ್ಣು ಸಸ್ಯದ ಬೆಳವಣಿಗೆಗೆ ಅಷ್ಟು ಪ್ರಯೋಜನಕಾರಿಯಲ್ಲ.

ಗೆದ್ದಲು ಹುಳುಗಳು, ಹಲವು ಬೆಳೆಗಳಿಗೆ ಹಾನಿಕಾರಕ ಕೀಟಕಗಳೆನಿಸಿವೆ. ಇವು ಸಸ್ಯದ ಒಣ ಭಾಗವನ್ನು ತಿಂದು ನಾಶಪಡಿಸುತ್ತವೆ. ಬೇರನ್ನೂ ನಾಶಮಾಡುವುದರಿಂದ ಸಸ್ಯಗಳು ಸಾಯುತ್ತವೆ. ಆರ್ದ್ರತೆಯು ಕಡಮೆ ಇರುವ ಮಣ್ಣಿನಲ್ಲಿ ಗೆದ್ದಲಿನ ಉಪದ್ರವವು ಅಧಿಕ.

ಮಣ್ಣಿನಲ್ಲಿರುವಸಸ್ಯಗಳು

ಕೆಳವರ್ಗಕ್ಕೆ ಸೇರಿದ ಹಲವು ಪ್ರಕಾರದ ಸಸ್ಯಗಳು ಮಣ್ಣಿನಲ್ಲಿ ವಾಸಿಸುತತವೆ. ಅವುಗಳಲ್ಲಿ ಕೆಲವು ಬಗೆಯ ಸಸ್ಯಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ. ಮಣ್ಣಿನಲ್ಲಿರುವ ಸಸ್ಯಗಳು ಮಣ್ಣಿನ ಗುಣಧರ್ಮಗಳು ಮತ್ತು ಸಸ್ಯಗಳ ಬೆಳವಣಿಗೆಯ ಮೇಲೆ ಮಹತ್ತರವಾದ ಪರಿಣಾಮವನ್ನುಂಟು ಮಾಡುತ್ತವೆ. ಈ ಸಸ್ಯಗಳಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಕೆಳಗಿನಂತಿವೆ.

ಬ್ಯಾಕ್ಟೀರಿಯಾಗಳು ಅತಿ ಸರಳ ಮತ್ತು ಅತಿ ಸೂಕ್ಷ್ಮ ಆಕಾರದ ಜೀವಿಗಳು. ಏಕಕೋಶದ ಈ ಪುಟ್ಟ ಸಸ್ಯಗಳಲ್ಲಿಯ ಅತಿ ದೊಡ್ಡ ಬ್ಯಾಕ್ಟೀರಿಯಾದ ವ್ಯಾಸವು ೦.೦೦೫ ಮಿ.ಮೀ. ಮೀರುವುದಿಲ್ಲ. ಆಕಾರದಲ್ಲಿ ಇವು ಗೋಲವಾಗಿರಬಹುದು. ಕಡ್ಡಿಯಂತಿರಬಹುದು. ಇಲ್ಲವೇ ಸ್ಪ್ರಿಂಗಿನಂತಿರಬಹುದು. ಮಣ್ಣಿನಲ್ಲಿ ಕಡ್ಡಿಯಾಕಾರದ ಬ್ಯಾಕ್ಟರಿಯಾದ್ದೇ ಪ್ರಾಬಲ್ಯ.

ಇವು ದ್ವಿವಿಭಜನೆಯಿಂದ ಅಭಿವೃದ್ಧಿಗೊಳ್ಳುತ್ತದೆ. ಬ್ಯಾಕ್ಟಿರಿಯಾ ಬೆಳೆದು ಎರಡು ಸಮ ಆಕಾರದ ಹೋಳುಗಳಾಗಿ ವಿಭಜನೆಯನ್ನು ಹೊಂದುತ್ತವೆ. ಪ್ರತಿ ತುಂಡುಬೆಳೆದು ಪುನಃ ಎರಡೆರಡು ಹೋಳುಗಳಾಗುತ್ತದೆ. ಈ ರೀತಿ ಬೆಳೇದು, ಎರಡು ತುಂಡುಗಳಾಗಲೂ ೨೦ ನಿಮಿಷಗಳಿಗಿಂತ ಕಡಮೆ ಸಮಯ ಸಾಕಾಗುವುದರಿಂದಲೇ ಬ್ಯಾಕ್ಟಿರಿಯಾ ಬಹು ಬೇಗನೇ ಅಪಾರ ಸಂಖ್ಯೆಯಲ್ಲಿ ಬೆಳೆಯುತ್ತವೆ.

ಮಣ್ಣಿನಲ್ಲಿರುವ ಕೆಳ ವರ್ಗದ ಸಸ್ಯಗಳಲ್ಲಿ ಬ್ಯಾಕ್ಟೀರಿಯಾ, ಸಂಖ್ಯೆಯ ದೃಷ್ಟಿಯಿಂದ ಅಗ್ರಸ್ಥಾನದಲ್ಲಿವೆ. ಅದರಂತೆಯೇ, ಒಟ್ಟು ತೂಕದ ಅರ್ಧದಷ್ಟು ತೂಕವು ಬ್ಯಾಕ್ಟೀರಿಯಾಗಳಿಂದಲೇ ಆಗಿದೆ ಎನ್ನಬಹುದು.

ಶಿಲೀಂದ್ರಗಳು ಮತ್ತು ಆಕ್ಟಿನೋಮೈಸಿಟೀಸ್ ಗಳು ಆಮ್ಲಜನಕದ ಸಾನ್ನಿಧ್ಯದಲ್ಲಿ ಮಾತ್ರ ಜೀವಿಸಿ ತಮ್ಮ ಕಾರ್ಯವನ್ನ ನಿರ್ವಹಿಸಬಲ್ಲವು. ಆದರೆ ಆಮ್ಲಜನಕವಿರುವಲ್ಲಿ ಮತ್ತು ಆಮ್ಲಜನಕವಿಲ್ಲದಿರುವಲ್ಲಿ ಹೀಗೆ ಎರಡು ಪರಿಸರಗಳಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿವೆ.

ಹಲವು ಬಗೆಯ ಬ್ಯಾಕ್ಟೀರಿಯಾ, ಬೀಜದಂತಹ ವಸ್ತುಗಳನ್ನು ನಿರ್ಮಿಸಿಕೊಂಡು ಅನಾನೂಕೂಲ ಪರಿಸ್ಥಿತಿಯನ್ನು ಎದುರಿಸುತ್ತವೆ.

ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ ಗುಂಪುಗಳು: ಬೆಳವಣಿಗೆಗೆ ಬೇಕಾಧ ಆಹಾರ ಮತ್ತು ಶಕ್ತಿಯನ್ನು ಪಡೆಯುವ ವಿಧಾನ ಮೇಲಿಂದ ಇವನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.

) ನಿರ್ಜೀವ ಸಾವಯವ ಪದಾರ್ಥಗಳ ಮೇಲೆ ಅವಲಂಬಿಸಿರುವ ಬ್ಯಾಕ್ಟೀರಿಯಾ : ಈ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾ ತಮ್ಮ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಯನ್ನು ಮತ್ತು ದೇಹದ ಬೆಳವಣಿಗೆಗೆ ಅವಶ್ಯವಿರುವ ಇಂಗಾಲ ಮತ್ತು ಇತರೆ ಪೋಷಕಗಳನ್ನು ಸಾವಯವ ಪದಾರ್ಥಗಳಿಂದ ಮಾತ್ರ ಪಡೆಯಬಲ್ಲವು. ನಿರಯವ ಸಂಯುಕ್ತಗಳನ್ನು ಇವು ಬಳಸಿಕೊಳ್ಳಲಾರವು.

) ನಿರವಯವ ಸಂಯುಕ್ತಗಳ ಮೇಲೆ ಅವಲಂಬಿಸಿರುವ ಬ್ಯಾಕ್ಟೀರಿಯಾ : ಈ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾ ತಮಗೆ ಬೇಕಾದ ಶಕ್ತಿಯನ್ನು ಕಬ್ಬಿಣ, ಗಂಧಕ ಜಲಜನಕ, ಅಮೋನಿಯಾ, ನೈಟ್ರೇಟ್ ಮುಂತಾದ ನಿರವಯವ ಮೂಲಧಾತುಗಳ ಅಥವಾ ಸಂಯುಕ್ತಗಳ ಉತ್ಕರ್ಷಣೆಯಿಂದಲೂ ದೇಹದ ಬೆಳವಣಿಗೆಗೆ ಅವಶ್ಯವಿರುವ ಇಂಗಾಲವನ್ನು ಇಂಗಾಲದ ಡೈ ಆಕ್ಸೈಡ್ನಿಂದ ಇಲ್ಲವೇ ಕಾರ್ಬೊನೇಟ್ ಗಳಿಂದಲೂ ತೆಗೆದುಕೊಳ್ಳುತ್ತವೆ. ಈ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾ ಸಂಖ್ಯೆಯಲ್ಲಿ ಕಡಮೆ ಇದ್ದರೂ ಅವುಗಳ ಚಟುವಟಿಕೆಯಿಂದ ದೊರೆಯುವ ಪ್ರಯೋಜನಗಳ ದೃಷ್ಟಿಗಳಿಂದ ಅತಿ ಮಹತ್ವದ ಸ್ಥಾನವನ್ನು ಪಡೆದಿವೆ.

ಮೇಲ್ವರ್ಗದ ಸಸ್ಯಗಳ ದೃಷ್ಟಿಯಿಂದ ಬ್ಯಾಕ್ಟೀರಿಯಾ ಬಹು ಮಹತ್ವದ ಜೀವಿಗಳು. ಅವುಗಳ ಚಟುವಟಿಕೆಗಳಿಂದ ಸಸ್ಯಗಳಿಗೆ ಹಲವು ಪ್ರಯೋಜನಗಳೂ ಮತ್ತು ಕೆಲವು ಅನಾನೂಕೂಲತೆಗಳು ಇವೆ. ಇವುಗಳಿಗೆ ಸಂಬಂಧಿಸಿದ ವಿವರಗಳನ್ನು ಅಧ್ಯಾಯ ೪ ಮತ್ತು ಅಧ್ಯಾಯ ೬ರಲ್ಲಿ ವಿವರಿಸಲಾಗಿದೆ. ಅವುಗಳ ಸಾರಾಂಶವು ಮುಂದಿನಂತಿದೆ.

ಸಾವಯವ ಪದಾರ್ಥಗಳ ಕಳಿಯುವ ಕ್ರಿಯೆ : ಬ್ಯಾಕ್ಟೀರಿಯಾ ಶಿಲೀಂದ್ರ, ಆಕ್ಟಿನೋ ಮೈಸಿಟೀಸ್ ಮತ್ತು ಇತರೆ ಜೀವಿಗಳ ಸಹಯೋಗದೊಡನೆ ಸಾವಯವ ಪದಾರ್ಥಗಳು ಕಳಿಯುವ ಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದೊಂದು ಬಹು ಮುಖ್ಯವಾದ ಕ್ರಿಯೆಯಾಗಿದೆ. ಸಾವಯವ ಪದಾರ್ಥಗಳಲ್ಲಿರುವ ಪೋಷಕಗಳನ್ನು ಸಸ್ಯಗಳು ನೇರವಾಗಿ ತೆಗೆದುಕೊಳ್ಳಲಾರವು. ಕಳಿಯುವ ಕ್ರಿಯೆಯಿಂದ ಈ ಪೋಷಕಗಳು ಸಾವಯವ ಪದಾರ್ಥಗಳಿಂದ ವಿಮೋಚನೆಗೊಳ್ಳುತ್ತವೆ. ಆಗ ಮಾತ್ರ ಸಸ್ಯಗಳು ಈ ಪೋಷಕಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕ್ರಿಯೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳು ಕೆಳಗಿನಂತಿವೆ.

. ಅಮೋನಿಯಾದ ಬಿಡುಗಡೆ : ಬ್ಯಾಕ್ಟೀರಿಯಾ, ಶಿಲೀಂದ್ರ ಮತ್ತು ಆಕ್ಟಿನೋಮೈಸಿಟೀಸ್ ಸೂಕ್ಷ್ಮ ಜೀವಿಗಳು, ಸಾವಯವ ಪದಾರ್ಥಗಳು ಕಳಿಯುವ ಕ್ರಿಯೆಯಲ್ಲಿ ಭಾಗವಹಿಸಿ ಅಮೋನಿಯಾ ಹೊರಬರುವಂತಾಗುತ್ತದೆ. ಸಾವಯವ ಪದಾರ್ಥಗಳಿಂದ ಅಮೋನಿಯಾ ಹೊರ ಬರುವ ವೇಗ ಮತ್ತು ಪ್ರಮಾಣಗಳು ಹಲವು ಸಂಗತಿಗಳ ಮೇಲೆ ಅವಲಂಬಿಸಿರುತ್ತವೆ. ಮಣ್ಣಿನ ಸ್ಥಿತಿಗತಿಗೂ, ಸಾವಯವ ಪದಾರ್ಥಗಳಿಂದ ಅಮೋನಿಯಂ ಹೊರ ಬರುವುದಕ್ಕೂ ನಿಕಟವಾದ ಸಂಬಂಧವಿದೆ. ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ , ಸೂಕ್ತ ಪ್ರಮಾಣದಲ್ಲಿ ಹವೆಯ ಚಲನೆ, ಮಣ್ಣಿನ ರಸಸಾರ, ಉಷ್ಣತಾಮಾನ ಇತ್ಯಾದಿಗಳಲ್ಲದೇ ಸಾವಯವ ಪದಾರ್ಥಗಳ ಗುಣಧರ್ಮಗಳೂ ಅಮೋನಿಯಾ ಬಿಡುಗಡೆಯ ಮೇಲೆ ಪರಿಣಮವನ್ನು ಬೀರುತ್ತವೆ. ಇಂಗಾಲ: ಸಾರಜನಕದ ಅನುಪಾತವು ಕಡಮೆ ಇರುವ (೩೦:೧ ಅಥವಾ ಅದಕ್ಕಿಂತ ಕಡಮೆ) ಸಾವಯವ ಪದಾರ್ಥಗಳಿಂದ ಅಮೋನಿಯಾ ವಾಯುವು ಕೆಲವೇ ದಿನಗಳಲ್ಲಿ ಹೊರ ಬರುತ್ತದೆ.

. ನೈಟ್ರೇಟ್ ನಿರ್ಮಾಣ : ಭತ್ತದ ಬೆಳೆಯು ಸಾರಜನಕವನ್ನೂ ಅಮೋನಿಯಂ ರೂಪದಲ್ಲಿ ಹೀರಿಕೊಳ್ಳುತ್ತದೆ. ಅದರಂತೆಯೇ, ಹತ್ತಿಯಂತಹ ಕೆಲವು ಬೆಳೆಗಳು, ತಮ್ಮ ಬೆಳವಣಿಗೆಯ ಆರಂಭದ ಹಂತದಲ್ಲಿ ಸಾರಜನಕವನ್ನು ಅಮೋನಿಯಂ ರೂಪದಲ್ಲಿ ತೆಗೆದುಕೊಳ್ಳಬಲ್ಲವು. ಈ ಬೆಳೆಗಳನ್ನು ಬಿಟ್ಟರೆ, ಉಳಿದೆಲ್ಲ ಬೆಳೆಗಳು ಸಾರಜನಕವನ್ನು ನೈಟ್ರೇಟ್ ರೂಪದಲ್ಲಿ ಮಾತ್ರ ಬಳಸಿಕೊಳ್ಳಬಲ್ಲು. ಆದ್ದರಿಂದಲೇ ಅಮೋನಿಯಾದಿಂದ ನೈಟ್ರೇಟ್ ನಿರ್ಮಾಣವಾಗುವ ಕ್ರಿಯೆಯು ಸಸ್ಯಗಳ ಮತ್ತು ಸಾರಜನಕದ ನಿರ್ವಹಣೆಯ ದೃಷ್ಟಿಯಿಂದ ಬಹಳ ಮಹತ್ವದ ಕ್ರಿಯೆಯೆನಿಸಿದೆ.

ನೈಟ್ರೇಟ್ ನಿರ್ಮಾಣದ ಕ್ರಿಯೆಯು ಎರಡು ಹಂತಗಳಲ್ಲಿ ಸಾಗುತ್ತದೆ. ಮೊದಲ ಹಂತದಲ್ಲಿ ಅಮೋನಿಯಾ ವಾಯು ನೈಟ್ರೇಟ್ ರೂಪಕ್ಕೆ ಬದಲಾವಣೆಯನ್ನು ಹೊಂದುತ್ತದೆ.

 ನೈಟ್ರೊಸೋಮೋನಾಸ್ ಮತ್ತು ನೈಟ್ರೋಕೊಕ್ಕಸ್ ಎಂಬ ಎರಡು ಗುಂಪುಗಳಿಗೆ ಸೇರಿದ ಬ್ಯಾಕ್ಟೀರಿಯಾದಿಂದ ಈ ಕ್ರಿಯೆಯು ಸಾಗುತ್ತದೆ. ನೈಟ್ರೇಟ್ ಸಸ್ಯಗಳಿಗೆ ವಿಷಕಾರಿ. ಅದರೆ ಸುದೈವದಿಂದ, ಈ ರೀತಿ ಹೊರ ಬಂದ ನೈಟ್ರೇಟ್ ಹೆಚ್ಚು ಸಮಯದವರೆಗೆ ಅದೇ ಸ್ಥಿತಿಯಲ್ಲಿರುವುದಿಲ್ಲ. ನೈಟ್ರೋಬ್ಯಾಕ್ಟರ ಎಂಬ ಬ್ಯಾಕ್ಟೀರಿಯಾ, ನೈಟ್ರೇಟ್ ರೂಪದ ಸಾರಜನಕವನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುತ್ತದೆ. ಈ ನೈಟ್ರೇಟ್ ಮಣ್ಣಿನ ದ್ರಾವಣಕ್ಕೆ ಸೇರ್ಪಡೆಯಾಗಿ ಸಸ್ಯಗಳಿಗೆ ಸುಲಭವಾಗಿ ದೊರೆಯುವಂತಾಗುತ್ತದೆ.

ಈ ಸಂದರ್ಭದಲ್ಲಿ ಕೆಳಗಿನ ಸಂಗತಿಗಳು ಗಮನಾರ್ಹ :

 • ಮೇಲೆ ವಿವರಿಸಿದ ಎರಡೂ ಬಗೆಯ ಕ್ರಿಯೆಗಳು ನಿರ್ಧಿಷ್ಟ ಗುಂಪಿನ ಬ್ಯಾಕ್ಟೀರಿಯಾಗಳಿಂದ ಮಾತ್ರ ಸಾರ್ಧಯ,. ಇತರ ಗುಂಪಿನ ಬ್ಯಾಕ್ಟೀರಿಯಾ ಇಲ್ಲವೇ ಶಿಲೀಂದ್ರಗಳು ಅಥವಾ ಆಕ್ಟೀನೋ ಮೈಸಿಟೀಸ್ಗಳಿಂದ ಈ ಕ್ರಿಯೆಯು ನಡೆಯಲಾರದು.
 • ಮೇಲಿನ ಎರಡೂ ಕ್ರಿಯೆಗಳಲ್ಲಿ ನಡೆದಿರುವುದು ಉತ್ಕರ್ಷಣೆ. ಇದರಿಂದಾಗಿ ಸಂಬಂಧಿಸಿದ ಬ್ಯಾಕ್ಟೀರಿಯಾ ತಮಗೆ ಬೇಕಾಗುವ ಇಂಗಾಲವನ್ನು ಇಂಗಾಲದ ಡೈ ಆಕ್ಸೈಡ್ನಿಂದ ತೆಗೆದುಕೊಳ್ಳುತ್ತವೆ.
 • ಸಮೀಕರಣದಲ್ಲಿ ತೋರಿಸಿದ ನೈಟ್ರಸ್ ಆಮ್ಲವಾಗಲೀ, ನೈಟ್ರೀಕ್ ಆಮ್ಲವಾಗಲೀ ಅದೇ ರೂಪಗಳಲ್ಲಿ ಹೆಚ್ಚು ಸಮಯದವರೆಗೆ ಉಳಿಯುವುದಲ್ಲ. ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಮೆಗ್ನಿಷಿಯಂ, ಪೋಟ್ಯಾಸಿಯಂ ಅಥವಾ ಸೋಡಿಯಂ ಗಳೊಡನೆ ಪ್ರತಿಕ್ರಿಯೆಗೊಂಡು ಅವುಗಳ ನೈಟ್ರೈಟ್ ಅಥವಾ ನೈಟ್ರೇಟ್ ಆಗಿ ಪರಿವರ್ತನೆಯನ್ನು ಹೊಂದುತ್ತವೆ.
 • ಮೇಲೆ ಹೇಳಿದ ಬ್ಯಾಕ್ಟೀರಿಯಾ ಸಮರ್ಥವಾಗಿ ಕೆಲಸವನ್ನು ಮಾಡಬೇಕಾದರೆ, ಅಮೋನಿಯಂ ಇರಬೇಕಾದುದು ಅತ್ಯವಶ್ಯಕ. ಆದರೆ ಇನ್ನೂ ಕೆಲವು ಅವಶ್ಯಕತೆಗಳೂ ಇರಲೇಬೇಕಾಗುತ್ತದೆ. ಸಾಕಷ್ಟು ಆಮ್ಲಜನಕ, ಸೂಕ್ತ ಪ್ರಮಾಣದಲ್ಲಿ ಆರ್ದ್ರತೆ ಸಸ್ಯಗಳಿಗೆ ಬೇಕಾಗುವ ಎಲ್ಲ ಪೋಷಕಗಳು, ೭ರ ಸಮೀಪದಲ್ಲಿ ರಸಸಾರ (pH) ಇತ್ಯಾದಿಗಳೆಲ್ಲ ಇರಲೇಬೇಕು.

. ಗಂಧಕ ಉತ್ಕರ್ಷಣೆ : ಸಾವಯವ ಪದಾರ್ಥವು ಕಳಿತು, ಅದರಲ್ಲಿರುವ ಗಂಧಕವು ವಿಮೋಚನೆಗೊಂಡು, ಮೂಲ ಧಾತುವಿನ ರೂಪದಲ್ಲಿ ಇಲ್ಲವೇ ಹೈಡ್ರೋಜನ ಸಲ್ಫೈಡ್ (H2S) ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇವೆರಡೂ ರೂಪಗಳಲ್ಲಿರುವ ಗಂಧಕವನ್ನು ಸಸ್ಯಗಳು ತೆಗೆದುಕೊಳ್ಳಲಾರವು. ಆದರೆ ವಿಶಿಷ್ಟ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾ, ಮೇಲೆ ಹೇಳಿದ ಎರಡೂ ರೂಪಗಳ ಗಂಧಕವನ್ನು ಉತ್ಕರ್ಷಣೆಗೊಳಿಸಿ ಮೊದಲ ಹಂತದಲ್ಲಿ ಸಲ್ಫರಸ್ ಆಮ್ಲ (H2SO3) ವನ್ನಾಗಿಸಿ, ಅನಂತರ ಎರಡನೆಯ ಹಂತದಲ್ಲಿ ಸಲ್ಫೂರಿಕ ಆಮ್ಲವನ್ನಾಗಿ (H2SO4) ಪರಿವರ್ತಿಸುತ್ತದೆ. ಈ ಆಮ್ಲಗಳು ಮಣ್ಣಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಂ , ಪೋಟ್ಯಾಸಿಯಂ, ಇಲ್ಲವೇ ಸೋಡಿಯಂ ಗಳೊಡನೆ ಪ್ರತಿಕ್ರಿಯೆಗೊಂಡು ಸಂಬಂಧಿಸಿದ ಧಾತುಗಳ ಸಲ್ಫೈಟ್ ಮತ್ತು ಸಲ್ಫೇಟ್ಗಳು ನಿರ್ಮಾಣಗೊಳ್ಳುತ್ತವೆ. ಸಸ್ಯಗಳು ಸಲ್ಫೇಟ್ ರೂಪದಲ್ಲಿ ಮಾತ್ರ ಗಂಧಕವನ್ನು ತೆಗೆದುಕೊಳ್ಳಬಲ್ಲವು. ಆದ್ದರಿಂದ ಬ್ಯಾಕ್ಟೀರಿಯಾಗಳ ಚಟುವಟಿಕೆಗಳಿಂದ ಸಸ್ಯಗಳಿಗೆ ಗಂದಕವು ಸುಲಭವಾಗಿ ದೊರೆಯುವಂತಾಗುತ್ತದೆ.

. ಸಾರಜನಕದ ಸ್ಥಿರೀಕರಣ : ವಾತಾವರಣದಲ್ಲಿ ಶೇಕಡಾವಾರು ೭೮ರಷ್ಟು ಸಾರಜನಕ ವಾಯು ಇದ್ದರೂ ಬಹಳಷ್ಟು ಬೆಳೆಗಳು ಈ ಸಾರಜನಕವನ್ನು ನೇರವಾಗಿ ತೆಗೆದುಕೊಳ್ಳಲಾರವು.ಆದರೆ ವಿಶಿಷ್ಟ ಗುಂಪುಗಳಿಗೆ ಸೇರಿದ ಬ್ಯಾಕ್ಟೀರಿಯಾ, ಹವೆಯೊಳಗಿರುವ ಸಾರಜನಕ ವಾಯುವನ್ನು ಉಪಯೋಗಿಸಿಕೊಂಡು ಈ ಪೋಷಕವನ್ನು ತಮ್ಮ ದೇಹದ ಬೆಳವಣಿಗೆಗಾಗಿ ಉಪಯೋಗಿಸಿಕೊಳ್ಳಬಲ್ಲವು. ಈ ಕ್ರಿಯೆಗೆ ಸಾರಜನಕ ಸ್ಥಿರೀಕರಣ ಎಂದೂ ಈ ಕಾರ್ಯವನ್ನು ಎಸಗಬಲ್ಲ ಬ್ಯಾಕ್ಟೀರಿಯಾಗಳಿಗೆ ಸಾರಜನಕವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಾ ಎಂದು ಕರೆಯಬಹುದು. ಸಾರಜನಕದ ಸ್ಥಿರೀಕರಣ ಕಾರ್ಯವನ್ನು ಎರಡು ಪ್ರತ್ಯೇಕ ಗುಂಪುಗಳಿಗೆ ಸೇರಿದ ಬ್ಯಾಕ್ಟೀರಿಯಾ ಮಾಡಬಲ್ಲವು.