ಬೇಳೆ ಕಾಳು ವರ್ಗಕ್ಕೆ ಸೇರಿದ ಬೆಳೆಗಳೊಡನೆ ಸಹಜೀವನವನ್ನು ನಡೆಸುವ ಬ್ಯಾಕ್ಟೀರಿಯಾ : ರೈಝೋಬಿಯಂ ಗುಂಪಿಗೆ ಸೇರಿದ ಈ ಬ್ಯಾಕ್ಟೀರಿಯಾ, ಬೇಳೆಕಾಳು ವರ್ಗದ ಬೆಳೆಗಳೊಡನೆ ಸಹಜೀವನವನ್ನು ನಡೆಸಿ, ಸಾರಜನಕದ ಸ್ಥಿರೀಕರಣ ಕಾರ್ಯವನ್ನು ಮಾಡುತ್ತವೆ. ಬೆಳೆಗಳ ಬೇರಿನ ಮೇಲೆ ಗ್ರಂಥಿ (ಗಂಟು) ಗಳನ್ನು ನಿರ್ಮಿಸಿ, ಅವುಗಳಲ್ಲಿ ವಾಸಿಸಿ, ಹವೆಯಲ್ಲಿರುವ ಸಾರಜನಕ ವಾಯುವನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಈ ಬ್ಯಾಕ್ಟೀರಿಯಾ ಹೊಂದಿದೆ. ತಮ್ಮ ಬೆಳವಣಿಗೆಗೆ ಬೇಕಾಗುವ ಪೋಷಕಗಳನ್ನು ಬೆಳೆಗಳಿಂದ ಪಡೆದುಕೊಂಡು ತಾವು ಸ್ಥಿರೀಕರಿಸಿದ ಸಾರಜನಕದ ಒಂದು ಭಾಗವನ್ನು ಬೆಳೆಗೆ ಪೂರೈಸುತ್ತವೆ.

ಸ್ವತಂತ್ರವಾಗಿ ಜೀವಿಸುವ ಬ್ಯಾಕ್ಟೀರಿಯಾ : ಆಝೋಟೋಬ್ಯಾಕ್ಟರ್, ಆಜೋಸ್ಟೀರಿಲ್ಲಂ, ಕ್ಲಸ್ಟ್ರೀಡಿಯಾ ಮುಂತಾದ ಹಲವು ಬಗೆಯ ಬ್ಯಾಕ್ಟೀರಿಯಾ ಮಣ್ಣಿನಲ್ಲಿ ಸ್ವತಂತ್ರವಾಗಿ ವಾಸಿಸಿ, ಹವೆಯೊಳಗಿನ ಸಾರಜನಕ ವಾಯುವನ್ನು ಸ್ಥಿರೀಕರಿಸಿ ಅಭಿವೃದ್ಧಿ ಹೊಂದುತ್ತವೆ. ಇವುಗಳ ಜೀವನ ಚಕ್ರವು ಮುಗಿದ ನಂತರ, ಮೃತ ದೇಹಗಳು ಮಣ್ಣಿನ ಸಾವಯವ ಪದಾರ್ಥದ ಒಂದು ಭಾಗವನಿಸುತ್ತವೆ. ಅವು ಕಳಿತು ಸಾರಜನಕವು ಹೊರಬರುತ್ತದೆ.

ಮೇಲೆ ವರ್ಣಿಸಿದ ಎರಡೂ ಬಗೆಗಳಿಂದ ಸ್ಥಿರೀಕರಣಗೊಂಡ ಸಾರಜನಕವು , ಬೆಳೆಗೆ ದೊರೆಯುವುದರಿಂದ ಸ್ಥಿರೀಕರಣವನ್ನು ಮಾಡುವ ಬ್ಯಾಕ್ಟೀರಿಯಾಗಳ ಚಟುವಟಿಕೆಗಳು ಬಹಳ ಮಹತ್ವದ್ದೇನಿಸಿವೆ.

 . ಕಬ್ಬಿಣದ ಉತ್ಕರ್ಷಣೆ ಮತ್ತು ಅಪಕರ್ಷಣೆಗಳು :ಮಣ್ಣಿನಲ್ಲಿರುವ ಫೆರಸ್ ರೂಪದ ಕಬ್ಬಿಣವು ಉತ್ಕರ್ಷಣೆಗೊಂಡು ಫೆರಿಕ್ ರೂಪಕ್ಕೂ ಅದರಂತೆಯೇ ಫೆರಿಕ್ ರೂಪದ ಕಬ್ಬಿಣವು ಅಪಕರ್ಷಣೆಗೊಂಡು ಫೆರಸ ರೂಪಕ್ಕೂ ಪರಿವರ್ತನೆ ಮಾಡುವ ಕಾರ್ಯಗಳನ್ನು ವಿಶಿಷ್ಟ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾ ನಡೆಸುತ್ತವೆಯೆಂದು ಕಂಡು ಬಂದಿದೆ. ಫೆರಸ್ ರೂಪದ ಕಬ್ಬಿಣವು ಒಂದು ಮಿತಿಗಿಂತ ಅಧಿಕಗೊಂಡಿತೆಂದರೆ, ಕಬ್ಬಿಣವು ಸಸ್ಯಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇಂತಹ ಪರಿಸ್ಥಿತಿ ಉದ್ಭವಿಸಿದಾಗ ಕಬ್ಬಿಣವನ್ನು ಫೆರಸ್ ರೂಪದಿಂದ ಫೆರಿಕ್ ರೂಪಕ್ಕೆ ಉತ್ಕರ್ಷಣೆಯನ್ನು ಮಾಡುವ ಬ್ಯಾಕ್ಟೀರಿಯಾ ಸಸ್ಯಗಳಿಗೆ ಪ್ರಯೋಜನಕಾರಿ ಎನಿಸುತ್ತವೆ.

. ಮ್ಯಾಂಗನೀಸ್ನ ಉತ್ಕರ್ಷಣೆ ಮತ್ತು ಅಪಕರ್ಷಣೆಗಳು : ಕಬ್ಬಿಣದ ಬಗ್ಗೆ ವಿವರಿಸುವಾಗ ಸೂಚಿಸಿದಂತೆ , ಮ್ಯಾಂಗನೀಸ್ ಸಹ ಅಪಕರ್ಷಣೆಗೊಂಡು ಮ್ಯಾಂಗನೀಸ್ ರೂಪಕ್ಕೆ ಪರಿವರ್ತನೆ ಹೊಂದಿ ಸಸ್ಯಗಳಿಗೆ ದೊರೆಯುವಂತಾಗುತ್ತದೆ. ಆದರೆ ಮ್ಯಾಂಗನೀಸನ ಪ್ರಮಾಣವು ಮಿತಿ ಮೀರಿದಾಗ, ಸಸ್ಯಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಇಂತಹ ಪ್ರಂಸಂಗಗಳಲ್ಲಿ ಮ್ಯಾಂಗನೀಸ್ ನ ರೂಪದಲ್ಲಿರುವ ಮ್ಯಾಂಗನೀಜ್, ಮ್ಯಾಂಗನೀಕ್ ರೂಪಕ್ಕೆ ಬದಲಾಯಿತೆಂದರೆ ಸಸ್ಯಗಳಿಗೆ ಆಗಬಹುದಾದ ನಷ್ಟವು ತಪ್ಪುತ್ತದೆ. ಉತ್ಕರ್ಷಣೆ ಮತ್ತು ಅಪಕರ್ಷಣೆ ಕ್ರಿಯೆಗಳೆರಡೂ ಬ್ಯಾಕ್ಟೀರಿಯಾಗಳಿಂದ ನಡೆಯುತ್ತವೆ ಎಂದು ತಿಳಿದು ಬಂದಿದೆಯಾದರೂ ಈ ಬ್ಯಾಕ್ಟೀರಿಯಾಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.

. ನಿರವಯವ ವಸ್ತುಗಳ ಮೇಲೆ ಆಗುವ ಪರಿಣಾಮಗಳು : ಸಾಔಯವ ವಸ್ತುಗಳು ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ಕಳಿಯುತ್ತಿರುವಾಗ ನೈಟ್ರಸ್ ಮತ್ತು ನೈಟ್ರೀಕ್ ಆಮ್ಲ, ಸಲ್ಫರಸ್, ಮತ್ತು ಸಲ್ಫರೂಕ ಆಮ್ಲ, ರಂಜಕಾಮ್ಲ, ಇಂಗಾಲಾಮ್ಲ, ಅಸಿಟಿಕ್, ಆಕ್ಸಾಲಿಕ್, ಸಿಟ್ರೀಕ್ ಮುಂತಾದ ಸಾವಯವ ಆಮ್ಲಗಳು ಹೊರಬರುತ್ತವೆ. ಈ ಆಮ್ಲಗಳ ರಾಸಾಯನಿಕ ಕ್ರಿಯೆಗಳಿಂದ ಮಣ್ಣಿನಲ್ಲಿ ಹಲವು ಪ್ರಯೋಜನಕಾರಿ ಬದಲಾವಣೆಗಳು ಕಂಡುಬರುತ್ತವೆ. ಉದಾಹರಣೆಗೆ :

  • ನೀರಿನಲ್ಲಿ ಕರಗದ ರಂಜಕದ ಸಂಯುಕ್ತಗಳು ನೀರಿನಲ್ಲಿ ಸುಲಭವಾಗಿ ಕರಗಬಲ್ಲ ರೂಪಕ್ಕೆ ಬದಲಾಗುತ್ತವೆ.
  • ಅತಿ ಕಡಮೆ ಪ್ರಮಾಣದಲ್ಲಿ ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂಗಳ ಕಾರ್ಬೊನೇಟ್ ಗಳು ನೀರಿನಲ್ಲಿ ಕರಗುವ ಸಂಯುಕ್ತಗಳಾಗಿ ಪರಿವರ್ತನೆಯನ್ನು ಹೊಂದುತ್ತವೆ.
  • ಖನಿಜದ ಅವಿಭಾಜ್ಯ ಅಂಗದಂತೆ ಇದ್ದು ನೀರಿನಲ್ಲಿ ಕರಗದ ರೂಪದಲ್ಲಿರುವ ಪೊಟ್ಯಾಸಿಯಂ ಪೋಷಕವು ಸಸ್ಯಗಳಿಗೆ ದೊರೆಯುವಂತಾಗುತ್ತದೆ.

ಮೇಲಿನ ಕ್ರಿಯೆಗಳೂ ರಾಸಾಯನಿಕ ಕ್ರಿಯೆಗಳಾದರೂ ಸಹ ಈ ಬದಲಾವಣೆಗೆ ಅವಶ್ಯವಿರುವ ಆಮ್ಲಗಳ ನಿರ್ಮಾಣಗೊಳ್ಳಲು ಬ್ಯಾಕ್ಟೀರಿಯಾ (ಮತ್ತು ಇತರೆ ಜೀವಿಗಳು) ಕಾರಣವೆಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

. ಬ್ಯಾಕ್ಟೀರಿಯಾಗಳಿಂದ ಸಸ್ಯಗಳಿಗೆ ಉಂಟಾಗುವ ಅಪಾಯಗಳು :ಮೇಲೆ ವಿವರಿಸಿದ ಹಲವು ಅನುಕೂಲಗಳು ಸಸ್ಯಗಳಿಗೆ ದೊರೆಯುತ್ತವೆಯಾದರೂ ಇವು ಕೆಲವು ಅನಾನುಕೂಲತೆಗಳನ್ನುಂಟು ಮಾಡುತ್ತವೆ. ಸೂಕ್ತ ರೀರಿಯ ಬೇಸಾಯ ಕ್ರಮಗಳಿಂದ ಈ ಅನಪೇಕ್ಷಿತ ಸ್ಥಿತಿಯನ್ನು ನಿವಾರಿಸಬಹುದು. ಇಲ್ಲವೇ ಅವುಗಳ ತೀವ್ರತೆಯನ್ನು ಕಡಮೆ ಮಾಡಬಹುದು.

) ಇಂಗಾಲ : ಸಾರಜನಕ ಅನುಪಾತವು ವಿಶಾಲವಾಗಿರುವ ಸಾವಯವ ಪದಾರ್ಥವನ್ನು ಮಣ್ಣಿಗೆ ಪೂರೈಸಿದರೆ ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮ ಜೀವಿಗಳ ಸಂಖ್ಯೆಯು ಒಮ್ಮೆಲೇ ಅಧಿಕಗೊಳ್ಳುತ್ತದೆ. ಅವುಗಳ ಬೆಳವಣಿಗೆಗೆ ಅವಶ್ಯವಿರುವಷ್ಟು ಸಾರಜನಕವು ಕಳಿಯುತ್ತಿರುವ ಸಾವಯವ ಪದಾರ್ಥಗಳಿಂದ ದೊರೆಯದೇ, ಮಣ್ಣಿನಲ್ಲಿರುವ ಸಾರಜನಕವನ್ನು ಬಳಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಸಸ್ಯಗಳು ಬೆಳೆಯುತ್ತಿದ್ದರೆ, ಅವುಗಳಿಗೆ ಸಾರಜನಕದ ಕೊರತೆಯಾಗುತ್ತದೆ.

ಮೇಲೆ ತಿಳಿಸಿದ ಸಾರಜನಕದ ಕೊರತೆಯು ತಾತ್ಕಾಲಿಕ, ಅಲ್ಲದೇ ಇಂತಹ ಸಾವಯವ ಪದಾರ್ಥವನ್ನು ಬಳಸಬೇಕಾಗಿ ಬಂದಾಗ ಸಾರಜನಕದ ಪ್ರಮಾಣವು ಅಧಿಕವಿರುವ ವಸ್ತುಗಳನ್ನಾಗಲೀ, ಸಾರಜನಕವಿರುವ ರಾಸಾಯನಿಕ ಗೊಬ್ಬರವನ್ನಾಗಲೀ, ಸೂಕ್ತ ಪ್ರಮಾಣದಲ್ಲಿ ಮಿಶ್ರಮಾಡಿದರೆ ಮೇಲೆ ಸೂಚಿಸಿದ ಸಮಸ್ಯೆಯನ್ನು ಪರಿಹರಿಸಬಹುದು.

. ನೈಟ್ರೇಟ್ ಅಪಕರ್ಷಣೆ : ನೀರುಸರಿಯಾಗಿ ಬಸಿದು ಹೋಗದ ಅಥವಾ ನೀರು ನಿಂತ ಮಣ್ಣಿನಲ್ಲಿ ಆಮ್ಲಜನಕದ ಅಭಾವವಿರುವುದು ಸಹಜ. ಇಂತಹ ಮಣ್ಣಿನಲ್ಲಿ ಸಾರಜನಕವು ನೈಟ್ರೇಟ್ ರೂಫದಲ್ಲಿದ್ದರೆ ಅಥವಾ ನೈಟ್ರೇಟ್ ಇರುವ ಗೊಬ್ಬರಗಳನ್ನು ಪೂರೈಸಿದರೆ, ಮಣ್ಣಿನಲ್ಲಿರುವ ಸುಡೋಮೋನಾಸ್, ಡಿನೈಟ್ರೀಫಿಕಾನ್ಸನಂತಹ ಬ್ಯಾಕ್ಟೀರಿಯಾ ನೈಟ್ರೇಟನ್ನು ನೈಟ್ರಸ್ ಆಕ್ಸೈಯ್ಡ್ ಮತ್ತು ಸಾರಜನಕ ವಾಯುವಿನ ರೂಪಕ್ಕೆ ಪರಿವರ್ತಿಸುವತ್ತವೆ. ಈ ರೀತಿ ವಿಮೋಚನೆಗೊಂಡ ವಾಯುವು ಮಣ್ಣಿನಿಂದ ಹೊರ ಬಿದ್ದು ವಾಯು ಮಂಡಲವನ್ನು ಸೇರಿಕೊಳ್ಳುತ್ತದೆ.

ಮಣ್ಣಿನಿಂದ ಹೆಚ್ಚಾದ ನೀರನ್ನು ಬಸಿದು ತೆಗೆಯುವುದು, ಬತ್ತದ ಬೆಳೆಗೆ ಅಮೋನಿಯಂ ಇರುವ ರಾಸಾಯನಿಕ ಗೊಬ್ಬರಗಳನ್ನು ಪೂರೈಸುವುದು ಮತ್ತು ಈ ಗೊಬ್ಬರವನ್ನು ಆಮ್ಲಜನಕವಿರದ. ಎರಡನೆಯ ಪದರದಲ್ಲಿಯೇ ಹಾಕುವುದು ಇತ್ಯಾದಿ ಕ್ರಮಗಳಿಂದ, ನೈಟ್ರೇಟ್ ನ ಅಪಕರ್ಷಣೆಯನ್ನು ತಪ್ಪಿಸಬಹುದು.

. ವಿಷಕಾರಿ ವಸ್ತುಗಳ ನಿರ್ಮಾಣ : ಆಮ್ಲಜನಕದ ಕೊರತೆಯಾದಾಗ, ಕಬ್ಬಿಣ ಮತ್ತು ಮೆಂಗನೀಜ್ ಗಳು ಆಪಕರ್ಷಣೆಗೊಂಡು, ಫೆರಸ ಮತ್ತು ಮೆಂಗನಸ್ ರೂಪಕ್ಕೆ ಪರಿವರ್ತನೆ ಹೊಂದುತ್ತವೆ. ಮತ್ತು ಈ ರಾಸಾಯನಿಕ ವಸ್ತುಗಳು ವಿಷಕಾರಿಯಾಗುವ ಮಟ್ಟವನ್ನು ಮುಟ್ಟಬಹುದೆಂಬ ಸಂಗತಿಯನ್ನು ಈಗಾಗಲೇ ತಿಳಿಸಲಾಗಿದೆ. ಇವುಗಳಲ್ಲದೇ ಮಿಥೇನ ಫಾಸ್ಫಾಯ್ನ, ಹೈಡ್ರೋಜನ್‌ಸಲ್ಫೈಡ್ ಮತ್ತು ಹಲವು ಸಾವಯವ ಸಂಯುಕ್ತಗಳು ಆಮ್ಲಜನಕದ ಕೊರತೆಯಾದಾಗ ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ನಿರ್ಮಾಣಗೊಳ್ಳುತ್ತವೆ. ಇವು ಸಸ್ಯಗಳಿಗೆ ಅಪಾಯಕಾರಿ.

ಹೆಚ್ಚಾದ ನೀರನ್ನು ಮಣ್ಣಿನಿಂದ ಬಸಿದು ತೆಗೆಯುವುದರಿಂದ ಆಮ್ಲಜನಕವು ಒಳಸೇರಿ, ಮೇಲೆ ಹೇಳಿದ ವಿಷಕಾರಿ ವಸ್ತುಗಳು ಇಲ್ಲದಂತಾಗುತ್ತವೆ.

ಶಿಲೀಂದ್ರಗಳು : ಶಿಲೀಂದ್ರಗಳು ಆಕಾರದಲ್ಲಿ ಬ್ಯಾಕ್ಟೀರಿಯಾಗಳಿಗಿಂತ ದೊಡ್ಡವು. ಮಣ್ಣಿನಲ್ಲಿ ಶೀಲೀಂದ್ರದ ೬೦೦ಕ್ಕಿಂತಲೂ ಹೆಚ್ಚು ಪ್ರಬೇಧಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಹರಿತ್ತು ಇರುವುದಲ್ಲವಾದ್ದರಿಂದ, ತಮಗೆ ಬೇಕಾಗುವ ಶಕ್ತಿ ಮತ್ತು ಇಂಗಾಲವನ್ನು ಪಡೆಯಲು ಸಾವಯವ ಪದಾರ್ಥವನ್ನೇ ಅವಲಂಬಿಸುತ್ತವೆ. ಅಧ್ಯಯನಗಳ ಅನುಕೂಲತೆಗಾಗಿ ಶಿಲೀಂದ್ರಗಳನ್ನು ಯೀಸ್ಟ್ , ಶಿಲೀಂದ್ರ ಮತ್ತು ಅಣಬೆ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಮಣ್ಣಿನಲ್ಲಿ ಯೀಸ್ಟ್ ಅಷ್ಟಾಗಿ ಕಂಡು ಬರುವುದಿಲ್ಲ. ಮೇಲ್ವರ್ಗದ ಸಸ್ಯಗಳ ದೃಷ್ಟಿಯಿಂದ ಈ ಗುಂಪಿನ ಜೀವಿಗಳಿಗೆ ಅಷ್ಟು ಮಹತ್ವವಿಲ್ಲ. ಉಳಿದೆರಡು ಗುಂಪಿಗೆ ಸೇರಿದ ಜೀವಿಗಳ ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಮುಂದಿನಂತಿವೆ.

ಶಿಲೀಂದ್ರಗಳು : ಈ ವರ್ಗದ ಜೀವಿಗಳಲ್ಲಿ ಸೂಕ್ಷ್ಮ ದರ್ಶಕ ಯಂತ್ರದ ಸಹಾಯದಿಂದ ಮಾತ್ರ ಕಾಣಬಲ್ಲ ಸೂಕ್ಷ್ಮ ಜೀವಿಗಳು ಮತ್ತು ಬರಿಗಣ್ಣಿಗೆ ಕಾಣುವಷ್ಟು ದೊಡ್ಡದಾದ ಜೀವಿಗಳು ಇವೆ. ನಾರಿನಾಕಾಋದ ಈ ಸಸ್ಯಗಳು ,ಮಣ್ಣಿನಲ್ಲಿ ಬ್ಯಾಕ್ಟೀರಿಯಾದಷ್ಟು, ಕೆಲವು ಬಾರಿ ಅವುಗಳಿಗಿಂತಲೂ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ.

ಆಮ್ಲ ಮಣ್ಣಿನಲ್ಲಿ ಬ್ಯಾಕ್ಟೀರಿಯಾ ಮತ್ತು ಆಕ್ಟೀನೋಮೈಸಿಟೀಸ್ಗಳು ತಮ್ಮ ಚಟುವಟಿಕೆಯನ್ನು ನಡೆಸಲಾರವು. ಆದರೆ ಹುಳಿ ಮಣ್ಣಿನಲ್ಲಿಯೂ ಅದರಂತೆಯೇ ರಸಸಾರ ೭ ಅಥವಾ ಅದಕ್ಕಿಂತಲೂ ಅಧಿಕವಿರುವ ಮಣ್ಣುಗಳಲ್ಲಿಯೂ ಶೀಲೀಂದ್ರಗಳು ಕಾರ್ಯ ಪ್ರವೃತ್ತವಾಗಿರುತ್ತವೆ. ಹುಳಿ ಮಣ್ಣಿನಲ್ಲಿ ಶಿಲೀಂದ್ರಗಳು ಸಮೃದ್ಧವಾಗಿ ಬೆಳೆಯ ಬಲ್ಲದಾಗಿರುವುದರಿಂದ ಇಂತಹ ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ಕಳಿಯುವಂತೆ ಮಾಡುವಲ್ಲಿ ಶಿಲೀಂದ್ರದ್ದೇ ಏಕಸ್ವಾಮ್ಯ ಎನ್ನಬಹುದು.

ಅಣಬೆಗಳು: ಯಥೇಚ್ಛ ಆರ್ದ್ರತೆ ಮತ್ತು ಸಾಕಷ್ಟು ಸಾವಯವ ವಸ್ತುಗಳಿರುವ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ, ಅಣಬೆಗಳು ವಿಪುಲವಾಗಿ ಬೆಳೆಯುತ್ತವೆ. ಕೆಲವು ಬಗೆಯ ಅಣಬೆಗಳನ್ನು ಮಾನವನು ಆಹಾರವಾಗಿ ಬಳಸುತ್ತಾನೆ. ಅವುಗಳನ್ನು ಸಾಗುವಳಿ ಮಾಡುವ ಪದ್ಧತಿಯೂ ಇತ್ತೀಚೆಗೆ ಕಂಡು ಬಂದಿದೆ. ಕೆಲವು ಬಗೆಯ ಅಣಬೆಗಳು ಮಾನವನಿಗೆ ವಿಷಕಾರಿಯೂ ಆಗಿದೆ. ಮಣ್ಣಿನ ಮೇಲ್ಬಾಗದಲ್ಲಿ ಕಾಣುವ ಅಣಬೆಯ ಬೆಳವಣಿಗೆಯ ಹಲವು ಪಟ್ಟು ಬೆಳವಣಿಗೆಯು ಮಣ್ಣಿನೊಳಗೆ ಇರುತ್ತದೆ.

ಮೇಲ್ವರ್ಗದ ಸಸ್ಯಗಳು ಮತ್ತು ಅಣಬೆ ವರ್ಗದ ಜೀವಿಗಳ ಸಹ ಬಾಳೆವೆಯ ಉತ್ತಮ ಉದಾಹರಣೆಯೇ ಮೈಕೋರೈಝಾ, ಈ ಶಬ್ದದ ಅರ್ಥ ‘ಅಣಬೆಯ ಬೇರುಗಳು’ ಎಂದಾಗುತ್ತದೆ. ಇಂಥ ಸಂಬಂಧವು ಮೊಟ್ಟ ಮೊದಲು ಅರಣ್ಯದ ಕೆಲವು ಮರಗಳಲ್ಲಿ ಕಂಡು ಬಂದಿತು. ಮೇಲ್ವರ್ಗದ ಸಸ್ಯಗಳು ಅಣಬೆಗೆ ಶರ್ಕರ ಮತ್ತು ಇತರೆ ಅವಶ್ಯಕತೆಗಳನ್ನು ಒದಗಿಸುತ್ತವೆ. ಪ್ರತಿಯಾಗಿ ಅಣಬೆಯು ಮಣ್ಣಿನಿಂದ ತಾನು ಹೀರಿಕೊಂಡ ರಂಜಕ,ಸತುವು, ತಾಮ್ರ ಕ್ಯಾಲ್ಸಿಯಂ, ಮೆಗ್ನೀಸಿಯಂ ಮ್ಯಾಂಗನೀಸ್, ಕಬ್ಬಿಣ ಇತ್ಯಾದಿಗಳನ್ನು ಪೂರೈಸುತ್ತದೆ. ಸಹ ಬಾಳ್ವೆಯಲ್ಲಿ ಎರಡು ಪ್ರಕಾರಗಳಿವೆ.

. ಬಾಹ್ಯ ಮೈಕೋರೈಝಾ : ಈ ಬಗೆಯ ಸಂಬಂಧವು ಮರಗಳ ಬೇರುಗಳಲ್ಲಿ ಕಂಡು ಬರುತ್ತವೆ. ಮರದ ಅತಿ ಸೂಕ್ಷ್ಮ ಬೇರುಗಳ ಸುತ್ತಲೂ ಈ ಅಣಬೆಯು ತೆಳುವಾದ ಅವರಣವೊಂದನ್ನು ನಿರ್ಮಿಸುತ್ತದೆ. ಅಣಬೆಯ ಶಾಖೆಗಳು ಮರದ ಬೇರಿನ ಕೋಶಗಳ ಮಧ್ಯದಲ್ಲಿ ಸೇರಿಕೊಂಡು ಮರದೊಡನೆ ಸಂಪರ್ಕವನ್ನು ಹೊಂದುತ್ತವೆಯಲ್ಲದೇ ಮಣ್ಣಿನಲ್ಲಿಯೂ ಪಸರಿಸುತ್ತದೆ. ಮಣ್ಣಿನಲ್ಲಿರುವ ಶಾಖೆಗಳು ಮಣ್ಣಿನ ದ್ರಾವಣದಲ್ಲಿರುವ ವಿವಿಧ ಪೋಷಕಗಳನ್ನು ಹೀರಿಕೊಂಡು ಅವುಗಳನ್ನು ಮರದ ಬೇರಿಗೆ ಸ್ಥಳಾಂತರಿಸುತ್ತವೆ. ಮರದ ಬೇರುಗಳ ಮೂಲಕ ತನಗೆ ಬೇಕಾದ ಶರ್ಕರ ಮತ್ತು ಇತರೆ ದ್ರವ್ಯಗಳನ್ನು ಅಣಬೆಯು ಪಡೆದುಕೊಳ್ಳುತ್ತದೆ.

ಚಿತ್ರ ೧೭ : ಸಸ್ಯದ ಅತಿ ಸೂಕ್ಷ್ಮ ಬೇರಿನೊಡನೆ ಬಾಹ್ಯ ಮೈಕೋರೈಝಾದ ಸಂಬಂಧ

. ಆಂತರಿಕ ಮೈಕೋರೈಝಾ : ಈ ಬಗೆಯ ಅಣಬೆಯು ಮೇಲ್ವರ್ಗದ ಸಸ್ಯಗಳ ಬೆಳವಣಿಗೆಯಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಲವು ಬಗೆಯ ಬೆಳೆಗಳ ಬೇರಿನ ಮೇಲೆ ಆಂತರಿಕ ಮೈಕೋರೈಝಾವನ್ನು ಕಾಣಬಹುದು. ಇದಕ್ಕೆ ವ್ಹಿ. ಎ.ಎಮ್ (VAM) ಅಂದರೆ ವೆಸಿಕ್ಯುಲರ್ ಅರ್ಬಸ್ಕುಲರ್ ಮೈಕೋರೈಝಾ ಎಂಬ ಹೆಸರಿದೆ.

 ಸಸ್ಯದ ಸೂಕ್ಷ್ಮ ಬೇರಿನ ಕೋಶಗಳ ಮಧ್ಯದಲ್ಲಷ್ಟೇ ಅಲ್ಲದೇ ಕೋಶಗಳ ಒಳಗೂ ಈ ಅಣಬೆಯ ಶಾಖೆಗಳು ಸೇರಿಕೊಂಡಿರುತ್ತವೆ. ಅಣಬೆಯ ಶಾಖೆಗಳು ಬೇರಿನ ಹೊರಗೆ ಪಸರಿಸಿ ಮಣ್ಣಿನಲ್ಲಿರುವ ಸಾರಜನಕ,ರಂಜಕ, ಪೋಟ್ಯಾಸಿಯಂ, ಸತುವು, ತಾಮ್ರ ಮುಂತಾದ ಹಲವು ಪೋಷಕಗಳನ್ನು ಹೀರಿಕೊಳ್ಳುತ್ತವೆ. ಸಸ್ಯದ ಬೇರಿನ ಕೋಶಗಳಲ್ಲಿ ಹಲವು ಶಾಖೆಗಳಲ್ಲಿರುವ ಅರ್ಬಸ್ಕುಲರ‍್ಸ ಎಂಬ ರಚನೆಯನ್ನು ನಿರ್ಮಿಸಿಕೊಂಡು, ಮಣ್ಣಿನಲ್ಲಿರುವ ಶಾಖೆಗಳು ಹೀರಿಕೊಂಡ ಪೋಷಕಾಂಶಗಳನ್ನು ಬೇರುಗಳಿಗೆ ಹಸ್ತಾಂತರಿಸುತ್ತದೆ. ಸಸ್ಯದ ಬೇರುಗಳಲ್ಲಿ ನಿರ್ಮಾಣಗೊಂಡ ವೆಸಿಕಲ್ ಎಂಬ ಇನ್ನೊಂದು ಬಗೆಯ ರಚನೆಯಲ್ಲಿ ಈಪೋಷಕಗಳು ಸಂಗ್ರಹಗೊಳ್ಳುತ್ತವೆ.

ಅಣಬೆಯ ಶಾಖೆಗಳ ಮೇಲ್ಮ ಕ್ಷೇತ್ರವು ಬೆಳೆಯ ಸೂಕ್ಷ್ಮ ಬೇರುಗಳ ಮೇಲ್ಮೈ ಕ್ಷೇತ್ರಕ್ಕಿಂತ ಹಲವು ಪಟ್ಟು ಅಧಿಕವಾಗಿರುವುದರಿಂದ, ಪೋಷಕಗಳನ್ನು ದೊಡ್ಡ ಪ್ರಮಾಣದಲ್ಲಿ ಹೀರಿಕೊಳ್ಳಲು ಅಣಬೆಗೆ ಸಾಧ್ಯವಾಗುತ್ತದೆ. ಅಣಬೆಯ ಶಾಖೆಗಳು ೬ – ೮ ಸೆಂ.ಮೀ. ದೂರದವರೆಗೆ ವಿಸ್ತರಿಸಿರುವುದರಿಂದ ಹೆಚ್ಚು ಗಾತ್ರದ ಮಣ್ಣಿನೊಡನೆ ಸಂಪರ್ಕವೇರ್ಪಟ್ಟು ಅಧಿಕ ಪೋಷಕಗಳನ್ನು ತೆಗೆದುಕೊಳ್ಳಲು ಅನುಕೂಲವುಂಟಾಗುತ್ತದೆಯಲ್ಲದೇ ಸುಲಭವಾಗಿ ಬೇರಿನೆಡೆಗೆ ಸಾಗಿ ಬಂದ ರಂಜಕ, ಸತುವು, ತಾಮ್ರ ಮುಂತಾದ ಅಯಾನ್‌ಗಳನ್ನು ಎಳೆದುಕೊಳ್ಳಲು ಆಸ್ಪದವುಂಟಾಗುತ್ತದೆ.

ಆಂತರಿಕ ಮೈಕೋರೈಝಾ, ಮುಸುಕಿನ ಜೋಳ, ಗೋಧಿ, ಹತ್ತಿ, ಆಲೂಗಡ್ಡೆ, ಕಬ್ಬು, ಮೆಂತೆ , ದ್ರಾಕ್ಷಿ, ಲಿಂಬೆ ವರ್ಗದ ಗಿಡಗಳು, ಸೇಬು ಇತ್ಯಾದಿ ಸಸ್ಯಗಳು ಬೇರುಗಳಲ್ಲಿ ಕಂಡುಬರುತ್ತದೆ.

ಶಿಲೀಂದ್ರ ಗುಂಪಿನ ಜೀವಿಗಳ ಕಾರ್ಯ ಚಟುವಟಿಕೆಗಳು : ಶೀಲೀಂದ್ರ ಗುಂಪಿಗೆ ಸೇರಿದ ಜೀವಿಗಳ ಕಾರ್ಯ ವೈಖರಿಯಲ್ಲಿ ಕೆಲವು ವೈಶಿಷ್ಟ್ಯ ಗಳಿರುವುದರಿಂದ ಮಣ್ಣಿನಲ್ಲಿರುವ ಇತರೆ ಜೀವಿಗಳಿಗಿಂತ ವಿಭಿನ್ನವಾದ ಸ್ಥಾನವನ್ನು ಇವು ಪಡೆದುಕೊಂಡಿವೆ. ಈ ಗುಂಪಿಗೆ ಸೇರಿದ ಜೀವಿಗಳಿಗಿಂತ ವಿಭಿನ್ನವಾದ ಸ್ಥಾನವನ್ನು ಇವು ಪಡೆದುಕೊಂಡಿವೆ. ಈ ಗುಂಪಿಗೆ ಸೇರಿದ ಜೀವಿಗಳು ಬಹು ಸಾಮರ್ಥ್ಯವುಳ್ಳವೆನ್ನಬಹುದು. ಇವು ಕೆಲಸವನ್ನು ಮಧ್ಯದಲ್ಲಿಯೇ ನಿಲ್ಲಿಸದೇ ಕೊನೆಯವರೆಗೂ ಮುಂದುವರೆಇಕೊಂಡು ಹೋಗುತ್ತೆವೆಂಬುವುದು ಶಿಲೀಂದ್ರಗಳ ವೈಶಿಷ್ಟ್ಯವೆನ್ನಬಹುದು. ಉದಾಹರಣೆಗೆ: –

೧) ಸಾವಯವ ವಸ್ತುಗಳು ಎಲ್ಲ ಘಟಕಗಳೊಡನೆ ಪ್ರತಿಕ್ರಿಯೆಯನ್ನು ನಡೆಸಿ, ಘಟಕಗಳನ್ನು ಸೂಕ್ತ ರೀತಿಯಿಂದ ಮಾರ್ಪಡಿಸುತ್ತವೆ.ಶರ್ಕರಗಳು, ಪಿಷ್ಟ ಪದಾರ್ಥಗಳು, ಅಂಟು, ಲಿಗ್ನಿನ್, ಸಸಾರಜನಕಗಳು ಇತ್ಯಾದಿ ಎಲ್ಲ ವಸ್ತುಗಳೂ ಶಿಲೀಂದ್ರಗಳ ಕ್ರಿಯೆಗೆ ಒಳಪಡುತ್ತವೆ.

೨) ಹ್ಯೂಮಸ್ ನಿರ್ಮಾಣ ಮತ್ತು ಮಣ್ಣಿನ ಕಣಗಳ ರಚನೆಯನ್ನು ಸ್ಥಿರಗೊಳಿಸುವಲ್ಲಿ ಬ್ಯಾಕ್ಟೀರಿಯಾಗಳಿಗಿಂತಲೂ ಶಿಲೀಂದ್ರಗಳ ಪಾತ್ರವು ಮಹತ್ವದ್ದಾಗಿದೆ.

೩) ಕಳಿತ ಸಾವಯವ ಪದಾರ್ಥದ ಸುಮಾರು ಅರ್ಧದಷ್ಟು ದ್ರವ್ಯವು ಶೀಲೀಂದ್ರಗಳ ದೇಹದಿಂದ ಬಂದಿರುತ್ತದೆಯೆಂಬುವುದು ಗಮನಾರ್ಹ. ಬ್ಯಾಕ್ಟೀರಿಯಾಗಳ ಪಾಲು ಕೇವಲ ಶೇಕಡಾ ೨೦ ಮಾತ್ರ.

೪) ಹ್ಯೂಮಸ್ ನಂತಹ ಅತಿ ಕ್ಲೀಷ್ಟ ಪದಾರ್ಥವನ್ನು ಕಳಿಸುವ ಕಾರ್ಯವನ್ನು ಬ್ಯಾಕ್ಟೀರಿಯಾ ಮತ್ತು ಆಕ್ಟೀನೋಮೈಸಿಟೀಸ್ ಜೀವಿಗಳು ನಿಲ್ಲಿಸಿದ ಮೇಲೆಯೂ, ಶೀಲೀಂದ್ರ ಗುಂಪಿಗೆ ಸೇರಿದ ಜೀವಿಗಳು ಈ ಕಾರ್ಯವನ್ನು ಮುಂದುವರಿಸುತ್ತವೆ.

ಆಕ್ಸೀನೋಮೈಸಿಟೀಸ್ : ಬಾಹ್ಯ ರಚನೆಯಲ್ಲಿ ,ಆಕ್ಟೀನೋಮೈಸೀಟೀಸ್ ಜೀವಿಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳ ಮಧ್ಯಂತರದಲ್ಲಿವೆ ಎನ್ನಬಹುದು. ಇವುಗಳ ದೇಹವು ಬ್ಯಾಕ್ಟೀರಿಯಾದಂತೆ ಒಂದೇ ಕೋಶದಿಂದ ನಿರ್ಮಿತವಾಗಿದೆ ಮತ್ತು ಕೋಶದ ವ್ಯಾಸವು ಬ್ಯಾಕ್ಟೀರಿಯಾಗಳ ದೇಹದ ವ್ಯಾಸದಷ್ಟೇ ಇದೆ.  ಆದರೆ ಇವು ಉದ್ಧವಾದ ನಾರಿನಂತೆ ಇವೆ.ಹೀಗಾಗಿ ಶಿಲೀಂದ್ರಗಳ ಹೋಲಿಕೆಯೂ ಇವುಗಳಿಗಿದೆ.

ಕೆಲವು ಪ್ರಸಂಗಗಳಲ್ಲಿ ಆಕ್ಟಿನೋಮೈಸಿಟೀಸ್ ಗಳು ಶುಷ್ಕ ವಾತಾವರಣದಲ್ಲಿ ಬೆಳೆಯುತ್ತವೆಯಾದರೂ ಈ ಜೀವಿಗಳ ಉತ್ತಮ ಬೆಳವಣಿಗೆಗೆ ಸಾಕಷ್ಟು ಆಮ್ಲಜನಕ ವಿರುವ ಆರ್ದ್ರ ಮಣ್ಣು ಬೇಕು. ಇವು ಆಮ್ಲ ಮಣ್ಣಿನಲ್ಲಿ ವಾಸಿಸಲಾರವು. ರಸಸಾರ (pH) ವು ೬ ರಿಂದ ೮ ಇದ್ದಾಗ, ತಮ್ಮ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತವೆ. ಈ ಸ್ವಭಾವದ ಪ್ರಯೋಜನವನ್ನು ಪಡೆದು, ಆಕ್ಟೀನೋಮೈಸಿಟೀಸ್ನಿಂದ ಬರುವ ಆಲೂಗಡ್ಡೆಯ ಸ್ಕ್ಯಾಬ್ ರೋಗವನ್ನು ನಿಯಂತ್ರಿಸಲು ಮಣ್ಣಿಗೆ ಗಂಧಕವನ್ನು ಪೂರೈಸಿ ರಸಸಾರ (pH)ವನ್ನು , ೫ರ ಸಮೀಪದಲ್ಲಿರುವಂತೆ ಮಾಡಲಾಗುತ್ತದೆ.

ಆಕ್ಟೀನೋಮೈಸೀಟಿಸ್ ಗಳು ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳ ಕೇವಲ ೧೦ ರಷ್ಟು ಮಾತ್ರ ಇವೆ. ತೂಕದಲ್ಲಿ ಇವು ಬ್ಯಾಕ್ಟೀರಿಯಾಗಿಂತ ಅಧಿಕ. ಉಳಿದೆಲ್ಲ ಜೀವಿಗಳಿಗಿಂತ ಆಕ್ಟೀನೋ ಮೈಸೀಟಿಸ್ ಗಳ ಸಂಖ್ಯೆಯು ಅಧಿಕವಾಗಿದೆ. ಸಾವಯವ ಪದಾರ್ಥಗಳು ಕಳಿಯುವಂತೆ ಮಾಡುವಲ್ಲಿ,ಆಕ್ಟಿನೋಮೈಸೀಟೀಸ್ ಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅತಿ ಕ್ಲೀಷ್ಟವಾದ ಸಾವಯವ ಪದಾರ್ಥಗಳನ್ನು ಕಳಿಯುವಂತೆ ಮಾಡುವ ಸಾಮರ್ಥ್ಯವು ಇವುಗಳಿಗಿದೆ ಎಂಬುವುದು ಈ ಜೀವಿಗಳ ವೈಶಿಷ್ಟ್ಯ.

ಪಾಚಿ: ಸೂಕ್ಷ್ಮ ದರ್ಶಕ ಯಂತ್ರದ ಸಹಾಯದಿಂದ ಮಾತ್ರ ನೋಡಲು ಸಾಧ್ಯವಿರುವ ಈ ಸೂಕ್ಷ್ಮ ಜೀವಿಗಳ ದೇಹದಲ್ಲಿ ಹರಿತ್ ಇರುವುದರಿಂದ ಮೇಲ್ವರ್ಗದ ಸಸ್ಯಗಳಂತೆ ಇವೂ ಸೌರಶಕ್ತಿಯ ಸಾನ್ನಿಧ್ಯದಲ್ಲಿ, ನೀರು ಮತ್ತು ಇಂಗಾಲಾಮ್ಲ ವಾಯುಗಳಿಂದ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತದೆ. ಈ ಜೀವಿಗಳ ಕಾರ್ಯಚಟುವಟಿಕೆಗಳಿಗೆ ಸೂರ್ಯನ ಪ್ರಕಾಶವು ಅವಶ್ಯಕವಿರುವುದರಿಂದ ಮಣ್ಣಿನ ಮೇಲ್ಬಾಗದಲ್ಲಿ ಮಾತ್ರ ಇವು ವಾಸಿಸುತ್ತವೆ. ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆಯು ಅವಶ್ಯವಾಗಿ ಇರಬೇಕು.

ಪಾಚಿಗಳಲ್ಲಿ ಪ್ರಮುಖವಾಗಿ ನಾಲ್ಕು ಗುಂಪುಗಳಿವೆ :

) ನೀಲಿ ಮಿಶ್ರಿತ ಹಸುರು ಪಾಚಿ : ಇವು ಮಣ್ಣಿನಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತೆ. ಬತ್ತದ ಗದ್ದೆಯಲ್ಲಿ, ಅಝೋಲ್ಲಾ ಎಂಬ ತೇಲುವ ಫರ್ನಸಸ್ಯದಲ್ಲಿ ವಾಸಿಸಿ ಹವೆಯೊಳಗಿನ ಸಾರಜನಕವನ್ನು ಸ್ಥಿರೀಕರಿಸುತ್ತವೆ. (ಹೆಚ್ಚಿನವಿವರಗಳು ಅಧ್ಯಾಯ ೬ರಲ್ಲಿದೆ)

) ಹಸುರು ಪಾಚಿ: ಇವೂಸಹ ಮಣ್ಣಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಜೀವಿಗಳು.

) ಹಳದಿ ಮಿಶ್ರಿತ ಹಸರು ಪಾಚಿ : ಇವೆರಡು ಗುಂಪಿನ ಪಾಚಿಗಳು ಮಣ್ಣಿನಲ್ಲಿ ವಿರಳ.

) ಡಯಾಟಮ್ಸ್ :

ಮೇಲೆ ಹೇಳಿದಂತೆ, ನೀಲಿ ಮಿಶ್ರಿತ ಹಸುರು ಪಾಚಿಯು ಸಾರಜನಕವನ್ನು ಸ್ಥಿರೀಕರಿಸುವುದರಿಂದ ಆಗುವ ಲಾಭವಲ್ಲದೇ, ಪಾಚಿಯಿಂದ ದೊರೆಯುವ ಇತರೆ ಪರಿಣಾಮಗಳು ಕೆಳಗಿನಂತಿವೆ.

  • ಪಾಚಿಯ ಬೆಳವಣಿಗೆಯಿಂದ ಮಣ್ಣಿಗೆ ಸಾವಯವ ಪದಾರ್ಥವನ್ನು ಪೂರೈಸಿದಂತಾಗುತ್ತದೆ.
  • ಪಾಚಿಯು ತನ್‌ಬೆಳವಣಿಗೆಗೆ ಬೇಕಾದ ಪೋಷಕಗಳನ್ನು,ಮಣ್ಣಿನಿಂದ ಹೀರಿ ಕೊಳ್ಳುವುದರಿಂದ ಈ ಪೋಷಕಗಳು ತಾತ್ಕಾಲಿಕವಾಗಿ ಬೆಳೆಗೆ ದೊರೆಯದಂತೆ ಆಗುತ್ತದೆಯಾದರೂ ,ಭೂಮಿಯಾಳಕ್ಕೆ ಬಸಿದು ಹೋಗಿ ನಷ್ಟವಾಗುವ ಪೋಷಕಗಳನ್ನು ಸಂರಕ್ಷಿಸಿದಂತಾಗುತ್ತದೆ.
  • ಸಾವಯವ ಪದಾರ್ಥಗಳು ಕಳಿಯುವ ಕ್ರಿಯೆಯಲ್ಲಿ ಪಾಚಿಯು ಭಾಗವಹಿಸುತ್ತದೆ.
  • ಕೆಲವು ಶಿಲೆಗಳು ಮತ್ತು ಖನಿಜಗಳು ಪಾಚಿಯ ಸಂಪರ್ಕದಿಂದ ಕರಗುವುದರಿಂದ ಮಣ್ಣಿನ ನಿರ್ಮಾಣದಲ್ಲಿ ಭಾಘವಹಿಸಿದಂತಾಯಿತು.
  • ಮಣ್ಣಿನ ಆಝೋಟೋ ಬ್ಯಾಕ್ಟರ್ ನೊಂದಿಗೆ ಸಹಬಾಳ್ವೆ ಮಾಡಿ ಸಾರಜನಕ ವಾಯುವಿನ ಸ್ಥಿರೀಕರಣದಲ್ಲಿ ಸಹಾಯವನ್ನೊದಗಿಸುತ್ತವೆ.

ಸೂಕ್ಷ್ಮಜೀವಿಗಳಮತ್ತುಮೇಲ್ವರ್ಗದಸಸ್ಯಗಳಸಂಬಂಧ

ಮೇಲ್ವರ್ಗದ ಸಸ್ಯಗಳು ಮಣ್ಣಿನಲ್ಲಿ ಬೆಳೆಯಲು ಪ್ರಾರಂಭ ಮಾಡಿದವೆಂದರೆ ಸೂಕ್ಷ್ಮ ಜೀವಿಗಳ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ಸಸ್ಯಗಳ ಬೇರುಗಳ ಸುತ್ತಲೂ ಈ ಚಟುವಟಿಕೆಗಳು ಎದ್ದು ಕಾಣುವಂತಿರುತ್ತವೆ. ಸಸ್ಯದ ಬೇರುಗಳು ಸ್ರವಿಸುವ ಕೆಲವು ರಾಸಾಯನಿಕ ದ್ರವ್ಯಗಳು ಸಾವಯವ ಪದಾರ್ಥದ ಮೇಲೆ ಅವಲಂಬಿಸಿರುವ ಸೂಕ್ಷ್ಮ ಜೀವಿಗಳನ್ನು ಬೇರುಗಳು ಸುತ್ತ ಆಕರ್ಷಿಸುತ್ತವೆ. ಈ ಸೂಕ್ಷ್ಮ ಜೀವಿಗಳು ತಮ್ಮ ಚಟುವಟಿಕೆಗಳಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಸಸ್ಯಗಳಿಗೆ ಸುಲಭವಾಗಿ ದೊರೆಯುವ ರೂಪಕ್ಕೆ ಪರಿವರ್ತಿಸುತ್ತವೆ.

ಆಕಸ್ಮಾತ ರೋಗವನ್ನುಂಟು ಮಾಡುವ ಸೂಕ್ಷ್ಮ ಜೀವಿಗಳು ಬೇರಿನೆಡೆಗೆ ಆಕರ್ಷಿತಗೊಂಡರೆ ಇವುಗಳಿಂದ ಸಸ್ಯಗಳಿಗೆ ಅಪಾಯವುಂಟಾಗಲೂ ಬಹುದೆಂಬುವುದನ್ನು ಇಲ್ಲಿ ಗಮನಿಸಬೇಕು.

ವಿಷಕಾರಿರಾಸಾಯನಿಕಗಳನಿರ್ಮಾಣ

ಮನುಷ್ಯ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನುಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮ ಜೀವಿಗಳು ಮಣ್ಣನ್ನು ಪ್ರವೇಶಿಸಿದರೂ ಅವು ಅಲ್ಲಿ ಹೆಚ್ಚು ಸಮಯದವರೆಗೆ ಬದುಕಿ ಉಳಿಯಲಾರವು. ಮಣ್ಣಿನಲ್ಲಿ ವಾಸಿಸುವ ಕೆಲವು ಶಿಲೀಂದ್ರಗಳು ಮತ್ತು ಆಕ್ಟಿನೋಮೈಸಿಟೀಸ್ ಗಳಿಂದ ಉತ್ಪಾದನೆಗೊಂಡ ಹಲವುವಿಷಕಾರಿ ರಾಸಾಯನಿಕಗಳು, ಮೇಲೆ ತಿಳಿಸಿದ ರೋಗವನ್ನುಂಟು ಮಾಡುವ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತವೆ.

ಆಸಸ್ಟರ್ಜಿಲ್ಲಸ್ ಮತ್ತುಪೆನಿಸಿಲಿಯಂ ಗುಂಪಿಗೆ ಸೇರಿದ ಶಿಲೀಂದ್ರಗಳು, ಪೆನಿಸಿಲಿನ್‌ಎಂಬ ರಾಸಾಯನಿಕವನ್ನೂ ಆಕ್ಟಿನೋಮೈಸಿಸ್ ಗುಂಪಿಗೆಸೇರಿದ ಸೂಕ್ಷ್ಮ ಜೀವಿಯು ಸ್ಟ್ರೆಪೋಮೈಸಿನ ಎಂಬ ರಾಸಾಯನಿಕವನ್ನೂ ಆಮ್ಲಜನಕವಿರುವಲ್ಲಿ ಮಾತ್ರ ಜೀವಿಸುವ ಒಂದು ಗುಂಪಿನ ಬ್ಯಾಕ್ಟೀರಿಯಾ ಟೈರೋ ಥ್ರೀಸಿನ್‌ಎಂಬ ರಾಸಾಯನಿಕವನ್ನೂ ಆಮ್ಲಜನಕವಿರುವಲ್ಲಿ ಮಾತ್ರ ಜೀವಿಸುವ ಒಂದು ಗುಂಪಿನ ಬ್ಯಾಕ್ಟ್ರೀಯಾ ಟೈರೋಥ್ರಿಸಿನ್‌ಎಂಬ ರಾಸಾಯನಿಕವನ್ನೂ ಉತ್ಪಾದಿಸುತ್ತವೆ.

ಮೇಲೆ ಹೇಳಿದ ರಾಸಾಯನಿಕಗಳು ಸುದೈವದಿಂದ ಎಲ್ಲ ಬಗೆಯ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುವುದಿಲ್ಲ. ಪ್ರತಿಯೊಂದು ರಾಸಾಯನಿಕವು ನಿರ್ಧಿಷ್ಟ ಬಗೆಯ ಸೂಕ್ಷ್ಮ ಜೀವಿಗಳನ್ನು ಮಾತ್ರ ನಾಶಪಡಿಸಬಲ್ಲದು. ಇದೊಂದು ಮಹತ್ವದ ಸಂಗತಿ ಎನ್ನಬಹುದು.

* * *