ಪೀಠಿಕೆ

ನಮ್ಮ ದೇಶದ ಕೃಷಿ ಜಮೀನುಗಳು ಅಪೇಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯನ್ನು ನೀಡದಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಭೂ ಫಲವತ್ತತೆಯ ಅಸಮರ್ಪಕ ನಿರ್ವಹಣೆ ಅಗ್ರಸ್ಥಾನದಲ್ಲಿದೆ. ದೇಶದ ನೀರಾವರಿ ಹಾಗು ಖುಷ್ಕಿ ಪ್ರದೇಶಗಳಲ್ಲಿ ರೈತರು ಬಳಸುವ ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳ ಪ್ರಮಾಣವು ಯಾವುದೇ ರೀತಿಯ ವೈಜ್ಞಾನಿಕ ತಳಹದಿಯನ್ನು ಹೊಂದದೇ ಇರುವುದು ಸರ್ವ ಸಾಮಾನ್ಯ ಸಂಗತಿ. ಪ್ರತಿ ಹಂಗಾಮಿನಲ್ಲಿ ಬೆಳೆದ ಬೆಳೆ ಭೂಮಿಯಿಂದ ಹೀರಲ್ಪಡುವ ಪೋಷಕಾಂಶಗಳಾನ್ನಾದರೂ ಪುನಃ ಭೂಮಿಗೆ ಹಾಕುವ ರೂಢಿಯಿದ್ದರೆ ಅಲ್ಪ ಮಟ್ಟದಲ್ಲಿ ಭೂ-ಫಲವತ್ತತೆಯನ್ನು ಕಾಪಾಡಬಹುದಾಗಿದೆ. ಭೂಮಿಯಲ್ಲಿರುವ ಪೋಷಕಾಂಶಗಳ ಪ್ರಮಾಣ ಹಾಗೂ ಪ್ರತಿ ಹಂಗಾಮಿನಲ್ಲಿ ಬೆಳೆಯುವ ಬೆಳೆಗೆ ಬೇಕಾದ ಪೋಷಕಾಂಶಗಳ ಪ್ರಮಾಣವನ್ನು ಸರಿಯಾಗಿ ಲೆಕ್ಕ ಹಾಕಿ ಭೂಮಿಗೆ ನೀಡಬೇಕಾಗಿದೆ. ಹೀಗೆ ಮಾಡದೇ ಇರುವುದರಿಂದ ಪ್ರತಿ ಮಣ್ಣಿನಲ್ಲಿ ಸಾರಜನಕ, ರಂಜಕ, ಪೊಟ್ಯಾಶ್, ಗಂಧಕದಂತಹ ಪ್ರಮುಖ ಪೋಷಕಾಂಶಗಳು ಹಾಗೂ ಕಬ್ಬಿಣ, ಬೋರಾನ್, ತಾಮ್ರ ಹಾಗೂ ಸತುವುಗಳಂತಹ ಸೂಕ್ಷ್ಮ ಪೋಷಕಾಂಶಗಳ ಕೊರತೆ ಸರ್ವಸಾಮಾನ್ಯವಾಗಿ ಕಂಡುಬರುತ್ತದೆ. ಬೆಳೆಯ ಬೆಳವಣಿಗೆಯ ಹಂತದಲ್ಲಿ ವೈಜ್ಞಾನಿಕ ವೀಕ್ಷಣೆ ಮಾಡುವ ಮೂಲಕ ಈ ಪೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಕಾಣಬಹುದಾಗಿದೆ. ಹೀಗೆ ಪ್ರತಿವರ್ಷ ಬೆಳೆಯನ್ನು ಬೆಳೆಯುತ್ತಾ ಹೋದಂತೆ ಪೋಷಕಾಂಶಗಳ ಕೊರತೆಯ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಮುಂದೊಂದು ದಿನ ಇಳುವರಿ ಪ್ರಮಾಣ ಕಡಿಮೆಯಾಗಿ ಭೂಮಿ ಬರಡಾಗುವದು ದೂರದ ವಿಚಾರವೇನಲ್ಲ. ಈ ರೀತಿಯಾಗಿ ಭೂಮಿಯ ಫಲವತ್ತತೆ ಕಡಿಮೆಯಾಗುವುದರಿಂದ ಹಲವಾರು ರೀತಿಯ ಪರಿಣಾಮಗಳನ್ನು ನಾವು ನೋಡಬಹುದಾಗಿದೆ. ಇವುಗಳಲ್ಲಿ ಪ್ರಮುಖವಾದ ಪರಿಣಾಮಗಳೆಂದರೆ,

೧. ಪೋಷಕಾಂಶಗಳ ತೀವ್ರ ಕೊರತೆ

೨. ಪೋಷಕಾಂಶಗಳ ಅಸಮರ್ಪಕ ಬಳಕೆ

೩. ಅಶಕ್ತ ಬೆಳೆ

೪. ಬೆಳೆಯ ಇಳುವರಿಯಲ್ಲಿ ಕುಸಿತ

೫. ವೆಚ್ಚ ಮಾಡಿದ ಬಂಡವಾಳಕ್ಕೆ ಸರಿಸಮನಾಗಿ ಹಿಂತಿರುಗದ ಲಾಭ

೬. ಭೂಮಿಯು ಬರಡಾಗುವುದು.

೭. ಬರಡು ಭೂಮಿಯನ್ನು ಪುನಃ ಫಲವತ್ತಾಗಿಸಲು ಅಪಾರ ವೆಚ್ಚ

೮. ಬರಡು ಭೂಮಿಯಲ್ಲಿ ಬೆಳೆಯಬಹುದಾದ ಬೆಳೆಗಳು ಆರ್ಥಿಕ ಸುಸ್ಥಿರತೆ ನೀಡದಿರುವುದು

೯. ಕಡಿಮೆ ಫಲವತ್ತಾದ ಜಮೀನಿನಲ್ಲಿ ಬೆಲೆಬಾಳುವ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ

೧೦. ಕೃಷಿಯ ಅಸ್ಥಿರತೆ

ಮಣ್ಣಿನ ಪರೀಕ್ಷೆಯಿಂದ ಅದರ ಭೌತಿಕ, ರಾಸಾಯನಿಕ ಗುಣಧರ್ಮಗಳು ಹಾಗೂ ಅದರಲ್ಲಿರುವ ಸಸ್ಯಪೋಷಕಗಳ ಸಂಗ್ರಹ ಹಾಗೂ ಲಭ್ಯತೆ ತಿಳಿದುಕೊಳ್ಳಬಹುದು. ಮಣ್ಣು ಪರೀಕ್ಷೆ ಮಾಡುವ ಮುಖ್ಯೋದ್ದೇಶವೆಂದರೆ ರೈತರು ರಾಸಾಯನಿಕ ಗೊಬ್ಬರಗಳನ್ನು ಯೋಗ್ಯರೀತಿಯಲ್ಲಿ ಲಾಭದಾಯಕವಾಗುವಂತೆ ಉಪಯೋಗಿಸಿ ಒಳ್ಳೆಯ ಸಾಗುವಳಿ ಕ್ರಮಗಳನ್ನು ಬಳಕೆಯಲ್ಲಿ ತರಲು ಸಹಾಯ ಮಾಡುವುದಾಗಿದೆ. ಸಾಕಷ್ಟು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಮಣ್ಣಿನ ಕೊರತೆಗಳನ್ನು ನೀಗಿಸದೆ ಬೆಳೆಗಳ ಉನ್ನತ ಇಳುವರಿಗಳು ದೊರೆಯಲಾರವು. ಆದರೆ, ಭಾರತದ ರೈತರ ಆರ್ಥಿಕ ಸ್ಥಿತಿಯು ಕೆಳಮಟ್ಟದಲ್ಲಿರುವುದರಿಂದ ಪ್ರತಿಯೊಂದು ಕಿಲೋಗ್ರಾಮ್ ರಾಸಾಯನಿಕ ಗೊಬ್ಬರವನ್ನೂ ವಿವೇಕಯುತವಾಗಿ ಉಪಯೋಗಿಸುವುದು ಅತ್ಯವಶ್ಯ. ಜೊತೆಗೆ ಬೆಳೆಗಳ ಉತ್ಪಾದನೆ ಹೆಚ್ಚಿಸಬೇಕಾದರೆ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಲೇಬೇಕಾಗುತ್ತದೆ. ಆದ್ದರಿಂದ, ರೈತನು ಗೊಬ್ಬರಗಳಿಗಾಗಿ ವೆಚ್ಚ ಮಾಡುವ ಪ್ರತಿಯೊಂದು ಕಾಸೂ ಹೆಚ್ಚಿಗೆ ಆದಾಯವನ್ನು ತರುವಂತೆ ವಿನಿಯೋಗವಾಗುವುದು ಅತ್ಯವಶ್ಯ. ಈ ಉದ್ದೇಶ ಸಾಧನೆಗಾಗಿಯೇ ಮಣ್ಣು ಪರೀಕ್ಷಾ ಕೇಂದ್ರಗಳು ಸ್ಥಾಪಿತವಾಗಿವೆ.

ಫಲವತ್ತಾದ ಹಾಗೂ ಕಡಿಮೆ ಫಲವತ್ತತೆ ಹೊಂದಿದ ಜಮೀನುಗಳಲ್ಲಿ ಒಂದೇ ರೀತಿಯ ಬೆಳೆ ಹಾಗೂ ಪೋಷಕಾಂಶಗಳ ನಿರ್ವಹಣಾ ಪದ್ಧತಿಗಳನ್ನು ಹೋಲಿಕೆ ಮಾಡಿ ನೋಡಿದರೆ, ಫಲವತ್ತಾದ ಜಮೀನಿನಿಂದ ಪಡೆದ ಇಳುವರಿ ಹಾಗೂ ಇಳುವರಿಯ ಗುಣಮಟ್ಟವು ತುಂಬಾ ಉತ್ತಮವಾಗಿರುವುದಲ್ಲದೇ ಲಾಭದಾಯಕವಾಗಿರುವುದು. ಹೀಗಿರುವುದರಿಂದ ಭೂಮಿಯ ಫಲವತ್ತತೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ನಿರಂತರವಾಗಿ ಕಾಪಾಡಿಕೊಂಡು ಬರುವುದು ಕೃಷಿಯ ಸುಸ್ಥಿರತೆಯಲ್ಲಿ ತುಂಬಾ ಪ್ರಮುಖವಾದ ವಿಚಾರ. ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ಬರಲು ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಭೂಮಿಗೆ ಹಾಕುವುದು ಅವಶ್ಯಕವಾದುದು. ಭೂಮಿಗೆ ಹಾಕಬೇಕಾದ ಪೋಷಕಾಂಶಗಳ ಪ್ರಮಾಣವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಅನುಸರಿಸಬೇಕಾದ ಸೂಕ್ತ ವಿಧಾನವೇ ಮಣ್ಣು ಪರೀಕ್ಷೆ. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶಗಳನ್ನು ಬಳಸಿದ್ದೇ ಆದಲ್ಲಿ ರೈತರು ಇಂದು ತಾವು ಅನುಸರಿಸುತ್ತಿರುವ ಪದ್ಧತಿಯಿಂದ ಪಡೆಯಬಹುದಾದ ಇಳುವರಿಯನ್ನು ದ್ವಿಗುಣಗೊಳಿಸಬಹುದು ಹಾಗೂ ಪೋಷಕಾಂಶಗಳ ಮೇಲೆ ಮಾಡುತ್ತಿರುವ ವೆಚ್ಚವನ್ನು ಕಡಿತಗೊಳಿಸಬಹುದಾಗಿದೆ. ಮಣ್ಣು ಪರೀಕ್ಷೆಯ ಪೋಷಕಾಂಶ ನಿರ್ವಹಣೆ ಹಾಗೂ ಉತ್ಪಾದಕತೆಯ ಹೆಚ್ಚಳಕ್ಕೆ ಅತ್ಯಂತ ಸೂಕ್ತವಾದ ಪದ್ಧತಿಯಾಗಿದ್ದು ಅದನ್ನು ವೈಜ್ಞಾನಿಕವಾಗಿ ಬಳಸುವ ರೈತರ ಸಂಖ್ಯೆ ತುಂಬಾ ವಿರಳವಾಗಿದೆ. ಮಣ್ಣು ಪರೀಕ್ಷೆಯ ವಿಷಯವನ್ನು ಕೇಳದೇ ಇರುವ ಹಲವಾರು ರೈತರು ಇದ್ದಾರೆ. ಹೀಗಿರುವುದರಿಂದ ಮಣ್ಣು ಪರೀಕ್ಷೆಯನ್ನು ಹೆಚ್ಚು ರೈತರು ಅನುಸರಿಸುವಂತೆ ಅದನ್ನು ಪ್ರಚಲಿತಗೊಳಿಸುವುದು ವಿಜ್ಞಾನಿಗಳ, ಸರಕಾರದ ಇಲಾಖೆಗಳ, ವಿಶ್ವವಿದ್ಯಾಲಯಗಳ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಸರಕಾರದ ಮಣ್ಣು ಪರೀಕ್ಷಾ ಕೇಂದ್ರಗಳು, ಕೇವಲ ಸಾರಜನಕ, ರಂಜಕ, ಹಾಗೂ ಪೊಟ್ಯಾಶ್ ಪೋಷಕಾಂಶಗಳಿಗೆ ಸಂಬಂಧಿಸಿದ ಫಲಿತಾಂಶ ನೀಡುವುದರ ಜೊತೆಗೆ ಸೂಕ್ತ ಪೋಷಕಾಂಶ ಪರೀಕ್ಷೆ ಮಾಡಿ ಫಲಿತಾಂಶ ನೀಡಬೇಕಾಗಿದೆ. ಸರಕಾರದ ಇಲಾಖೆಗಳು ಹಾಗೂ ವಿಶ್ವವಿದ್ಯಾಲಯಗಳು ಮಣ್ಣು ಪರೀಕ್ಷೆಯನ್ನು ಪ್ರಚಲಿತಗೊಳಿಸಲು ಚಳುವಳಿಯ ರೂಪ ನೀಡಬೇಕಾಗಿದೆ.

ಮಣ್ಣು ಪರೀಕ್ಷೆ

ಸಾಂಪ್ರದಾಯಿಕ ರಾಸಾಯನಿಕ ವಿಶ್ಲೇಷಣಾ ಪದ್ಧತಿಗಳು ಪ್ರಯಾಸದಾಯಕವೂ, ಕಾಲ ವಿಳಂಬಮಾಡುವಂತಹವೂ ಆಗಿವೆ. ವಿದ್ಯುದಳತೆ ಪದ್ಧತಿಗಳಿಂದ ತೀವ್ರವಾಗಿ ಮಣ್ಣಿನ ವಿಶ್ಲೇಷಣೆ ಮಾಡಬಹುದು. ಹಾಗೂ ಜ್ವಾಲೆ ಬೆಳಕುಮಾಪಕಗಳ ಸಹಾಯದಿಂದ ಸೋಡಿಯಂ ಮತ್ತು ಪೋಟ್ಯಾಸಿಯಂಗಳ ಪ್ರಮಾಣಗಳನ್ನು ನಿಗದಿ ಮಾಡಬಹುದು. ಹೀಗಾಗಿ, ಅನೇಕ ಮಾದರಿಗಳನ್ನು ಶೀಘ್ರವಾಗಿ ವಿಶ್ಲೇಷಣೆಮಾಡಿ, ಮಣ್ಣಿನ ಮೌಲ್ಯ ಮಾಪನ ವಿಷಯವನ್ನು ರೈತರಿಗೆ ಸಕಾಲಿಕವಾಗಿ ಮುಟ್ಟಿಸುವುದು ಸಾಧ್ಯ. ಮುಖ್ಯವಾಗಿ ಸಾರಜನಕ, ರಂಜಕ ಹಾಗೂ ಪೋಟ್ಯಾಷ್‌ಗಳ ಪ್ರಮಾಣವನ್ನು ಗೊತ್ತುಪಡಿಸಲು ಮಣ್ಣಿನ ಮಾದರಿಗಳನ್ನು ವಿಶ್ಲೇಸುತ್ತಾರೆ. ಪಿ.ಎಚ್. ಮೌಲ್ಯ ನಿಗದಿ ಮಾಡುವುದರಿಂದ ಸುಣ್ಣದ ಮಟ್ಟದಿಂದಾಗುವ ಪರಿಣಾಮಗಳನ್ನೂ ಹಾಗೂ ಮಣ್ಣಿನಲ್ಲಿ ರಂಜಕ ಸ್ಥೀರೀಕರಿಸಲ್ಪಡುವುದನ್ನೂ ತಿಳಿದುಕೊಳ್ಳಬಹುದಾಗಿದೆ. ಮಣ್ಣಿನಲ್ಲಿರುವ ಲಭ್ಯಪೋಷಕಗಳನ್ನು ತಿಳಿದುಕೊಂಡು, ಯಾವ ಯಾವ ಪೋಷಕಾಂಶಗಳನ್ನು ಒಂದು ಬೆಳೆಗೆ ಕೊಡಬಹುದಾಗಿದೆ ಎಂಬುದನ್ನು ಶಿಫಾರಸ್ಸು ಮಾಡುತ್ತಾರೆ. ಹಲವು ವೇಳೆ ಕರಗುವ ಲವಣಗಳ ದಟ್ಟಣೆ ಹಾಗೂ ಸೂಕ್ಷ್ಮಪೋಷಕಗಳನ್ನೂ ನಿಶ್ಚಯಿಸುತ್ತಾರೆ. ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಮಣ್ಣಿನ ಮಾದರಿಗಳನ್ನು ಕಳಿಸಿ ಹೆಚ್ಚು ಉತ್ಪಾದನೆ ಪಡೆಯಲು ಯಾವುದೇ ಒಂದು ಮಣ್ಣಿನಲ್ಲಿಯ ನಿಯೋಜಿತ ಬೆಳೆಯ ಅವಶ್ಯಕತೆಗನುಗುಣವಾಗಿ ಎಷ್ಟು ಗೊಬ್ಬರ ಹಾಕಬೇಕೆಂಬುದನ್ನು ಖಚಿತಪಡಿಸಿಕೊಳ್ಳಬಹುದು. ಕರ್ನಾಟಕ ರಾಜ್ಯದಲ್ಲಿ ಮಣ್ಣುಪರೀಕ್ಷಾ ಕೇಂದ್ರಗಳು ಬೆಂಗಳೂರು, ಮಂಡ್ಯ, ಧಡೆಸುಗೂರ, ಜಮಖಂಡಿ, ದಾವಣಗೆರೆ, ಮಂಗಳೂರು, ಕಲ್ಬುರ್ಗಿ, ಬಳ್ಳಾರಿ, ಶಿವಮೊಗ್ಗ, ಬಿಜಾಪೂರ ಮುಂತಾದೆಡೆಗಳಲ್ಲಿದ್ದು, ಸಾಮಾನ್ಯವಾಗಿ ಜಿಲ್ಲೆಗೊಂದು ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಶಾಸ್ತ್ರೀಯ ಪದ್ಧತಿಯಿಂದ ಮಣ್ಣನ್ನು ಪರೀಕ್ಷಿಸಿ, ರೈತರಿಗೆ ತಕ್ಕ ಸಲಹೆ ಕೊಡುವ ಕಾರ್ಯ ನಮ್ಮ ದೇಶದಲ್ಲಿ ಇತ್ತೀಚೆಗೆ ಬೆಳೆಯುತ್ತಿದೆ. ಅಮೇಕ, ಜಪಾನ್, ರಷ್ಯಾ ಮುಂತಾದ ದೇಶಗಳಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳ ಸಲಹೆಯನ್ನು ರೈತರು ಅಧಿಕೃತವಾಗಿ ಆಚರಿಸುತ್ತಾರೆ. ಆಧುನಿಕ ಕೃಷಿ ಪದ್ಧತಿಗಳು ಬಳಕೆಯಲ್ಲಿ ಬಂದಂತೆ, ರೈತರು ಮಣ್ಣಿನ ವಿಷಯವಾಗಿ ಹೆಚ್ಚು ಕೂಲಂಕಷವಾಗಿ ವಿಚಾರಿಸಬೇಕಾಗುತ್ತದೆ. ನೀರಾವರಿ ಕ್ಷೇತ್ರ ಹೆಚ್ಚಿದಂತೆ ಮತ್ತು ಅಧಿಕ ಇಳುವರಿ ಕೊಡುವ ತಳಿಗಳ ಬಳಕೆಯಲ್ಲಿ ಬಂದಂತೆ, ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ. ಅಷ್ಟೇ ಏಕೆ, ಮಳೆಯ ಆಶ್ರಯದಲ್ಲಿ ಬೆಳೆಯುವುದಾದರೂ ಮಣ್ಣಿಗೆ ಯಾವ ಗೊಬ್ಬರಗಳನ್ನು ಹಾಕಬೇಕೆಂಬುದಕ್ಕೆ ವಿಶ್ಲೇಷಣಾ ವಿವರಗಳನ್ನೇ ಆಶ್ರಯಿಸಬೇಕಾಗುತ್ತದೆ. ಆಗಲೇ ರೋಗಿಯನ್ನು ಪರೀಕ್ಷಿಸಿ ಔಷಧಿ ಕೊಟ್ಟಂತಾಗುವುದು; ಎಂದರೆ, ಪರಿಣಾಮ ಫಲಪ್ರದವಾಗುವುದು.

ಕೇಂದ್ರ ಸರಕಾರದ ಇತ್ತೀಚಿನ ಕೃಷಿ ನೀತಿಯು ರೈತರಿಗೆ ನೀಡುವ ರಾಸಾಯನಿಕ ಗೊಬ್ಬರಗಳ ಮೇಲಿನ ಸಹಾಯಧನ(ಸಬ್ಸಿಡಿ)ವನ್ನು ಕೇವಲ ಮಣ್ಣು ಪರೀಕ್ಷೆ ಮಾಡಿಸಿದ ರೈತರಿಗೆ ಲಭ್ಯವಾಗುವಂತೆ ರೂಪಿಸಿದೆ. ಹೀಗಿರುವುದರಿಂದ ರೈತರಲ್ಲಿ ಮಣ್ಣು ಪರೀಕ್ಷೆಯನ್ನು ಪ್ರಚಲಿತಗೊಳಿಸುವುದನ್ನು ಸರಕಾರ ಯುದ್ಧೋಪಾದಿಯಲ್ಲಿ ಮಾಡಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳು, ಸಂಘಟನೆಗಳು ಹಾಗೂ ಮಾಧ್ಯಮಗಳು ಸೂಕ್ತ ಸಹಕಾರ ನೀಡಬೇಕಾಗಿದೆ. ಭೂ-ಸಂಪನ್ಮೂಲವು ಒಂದು ಬ್ಯಾಂಕ್‌ನ ಉಳಿತಾಯ ಖಾತೆಯಿದ್ದಂತೆ. ಹೇಗೆ ನಾವು ಬ್ಯಾಂಕಿನಲ್ಲಿ ಹಣ ಹಾಕಿದರೆ ಮಾತ್ರ ಅದು ಬೇಕೆಂದಾಗ ಮಾತ್ರ ತೆಗೆಯಲು ಸಾಧ್ಯವೋ ಅದೇ ರೀತಿ ಪೋಷಕಾಂಶಗಳನ್ನು ಭೂಮಿಗೆ ಹಾಕಿದರೆ ಮಾತ್ರ ಬೆಳೆಗಳಿಗೆ ಬೇಕಾದಾಗ ಅವು ಲಭ್ಯವಾಗುತ್ತವೆ. ನಾವು ಇಲ್ಲಿಯವರೆಗೆ ಮಾಡಿದ್ದು ಇದಕ್ಕೆ ತದ್ವಿರುದ್ಧವಾಗಿದೆ. ಮಣ್ಣು ಪರೀಕ್ಷೆ ಮಾಡುವ ಮೂಲಕ ನಾವು ನಮ್ಮ ಭೂಮಿಯ ಆರೋಗ್ಯದ ಪರಿಸ್ಥಿತಿಯನ್ನು ಅರಿಯಲು ಸಹಾಯವಾಗುವುದು ಮತ್ತು ಸೂಕ್ತ ಪ್ರಮಾಣದಲ್ಲಿ ಪೋಷಕಾಂಶ ಹಾಕುವಲ್ಲಿ ಸಹಕಾರಿಯಾಗುವುದು.

ಮಣ್ಣು ಪರೀಕ್ಷೆ ಏಕೆ?

ಪ್ರತಿ ಬೆಳೆ ಬೆಳೆಯಲು ಸುಮಾರು ೧೬ ಪೋಷಕಾಂಶಗಳು ಅತಿ ಅವಶ್ಯಕವಾದವುಗಳು. ಇವುಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಭೂಮಿಯಿಂದ ದೊರೆಯುತ್ತವೆ. ಈ ಪೋಷಕಾಂಶಗಳ ಜೊತೆಗೆ ಭೂಮಿಯಲ್ಲಿರುವ ಪಿ.ಎಚ್. ಮಣ್ಣಿನ ರಾಸಾಯನಿಕ ಪ್ರಕ್ರಿಯೆಯ ಪ್ರಮಾಣವು ಸೂಕ್ತವಾಗಿರುವುದು ಅವಶ್ಯಕ. ಮಣ್ಣಿನ ರಾಸಾಯನಿಕ ಗುಣಧರ್ಮಗಳನ್ನು ಈ ಪಿ.ಎಚ್. ಪ್ರಮಾಣವು ಹಲವಾರು ರೀತಿಯಲ್ಲಿ ಪ್ರಭಾವಿಸುತ್ತದೆ. ಮಣ್ಣು ಪರೀಕ್ಷೆಯ ಮುಖಾಂತರ ಪಿ.ಎಚ್. ಪ್ರಮಾಣವನ್ನು ತಿಳಿದು ಅದರ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಅನುಸರಿಸಬಹುದಾಗಿದೆ. ಇದೇ ರೀತಿಯಾಗಿ ಮಣ್ಣು ಪರೀಕ್ಷೆ ಆ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳ ವಿವರ ನೀಡುವಲ್ಲಿ ಮತ್ತು ಅವುಗಳನ್ನು ಸುಧಾರಿಸುವ ದಿಸೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಕೈಕೊಳ್ಳಲು ಸಹಾಯ ಮಾಡುವುದು.

ಮಣ್ಣು ಪರೀಕ್ಷೆಯಿಂದಾಗುವ ಲಾಭಗಳು

ಮಣ್ಣು ಪರೀಕ್ಷೆ ರೈತ ಸಮುದಾಯಕ್ಕೆ ಹಲವಾರು ರೀತಿಯಲ್ಲಿ ಲಾಭದಾಯಕವಾಗಿದೆ.

೧. ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ಅರಿವು ನೀಡುವುದರ ಮೂಲಕ ಬೆಳೆ ಉತ್ಪಾದನೆಯಲ್ಲಿ ಅವುಗಳನ್ನು ಬಳಸುವುದಕ್ಕೆ ಯೋಚಿಸುವಲ್ಲಿ ಸಹಕಾರ.

೨. ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶಗಳ ಬಗ್ಗೆ ತಿಳುವಳಿಕೆ ಹಾಗೂ ಅವುಗಳ ಕೊರತೆ ನಿರ್ವಹಣೆ ಅನುಕೂಲ.

೩. ಪರೀಕ್ಷೆ ಆಧಾರದ ಮೇಲೆ ಪೋಷಕಾಂಶ ಹಾಕುವುದರಿಂದ ಕಡಿಮೆ ಪ್ರಮಾಣದ ರಾಸಾಯನಿಕ ಗೊಬ್ಬರಗಳ ಬಳಕೆ.

೪. ಬೆಳೆಗಳಿಗೆ ಬೇಕಾದ ಪೋಷಕಾಂಶಗಳ ಸೂಕ್ತ ಪ್ರಮಾಣದ ಪೂರೈಕೆ.

೫. ರಾಸಾಯನಿಕ ಪೋಷಕಾಂಶಗಳ ಮೇಲೆ ಮಾಡುವ ಖರ್ಚಿನಲ್ಲಿ ಇಳಿಮುಖ.

೬. ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುವ ಪರಿಸರ ಜಲಮಾಲಿನ್ಯದಲ್ಲಿ ಇಳಿಕೆ.

ಮಣ್ಣು ಪರೀಕ್ಷೆಯ ಉದ್ದೇಶಗಳು

ಮಣ್ಣು ಪರೀಕ್ಷೆ ಹಲವಾರು ಮೂಲ ಉದ್ದೇಶಗಳನ್ನು ಹೊಂದಿದೆ.

೧. ಬೆಳೆ ಉತ್ಪಾದನೆಗೆ ಅವಶ್ಯಕವಿರುವ ವಿವಿಧ ಪೋಷಕಾಂಶಗಳ ಪೂರೈಕೆಯ ಮಟ್ಟವನ್ನು ಸೂಚಿಸುವದು.

೨. ಮಣ್ಣಿನಲ್ಲಿರುವ ವಿವಿಧ ರೂಪದ ಪೋಷಕಾಂಶಗಳ ಪ್ರಮಾಣವನ್ನು ಸೂಚಿಸುವುದರ ಜೊತೆಗೆ ಲಭ್ಯವಿರುವ ಪೋಷಕಾಂಶಗಳ ಮಾಹಿತಿ ನೀಡುವುದು.

೩. ಬಾಹ್ಯ ಮೂಲಗಳಿಂದ ನೀಡಲಾಗುವ ಪೋಷಕಾಂಶಗಳಿಂದ ಬೆಳೆಗಳು ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದನ್ನು ಲೆಕ್ಕಚಾರ ಹಾಕುವಲ್ಲಿ ಸಹಕಾರ.

೪. ಅವಶ್ಯಕತೆಗಳಿಗೆ ಅನುಸಾರವಾಗಿ ಭೂಮಿಗೆ ನೀಡಬಹುದಾದ ಪೋಷಕಾಂಶಗಳ ಪ್ರಮಾಣ ಹಾಗೂ ರೂಪವನ್ನು ನಿರ್ಧರಿಸುವಲ್ಲಿ ಸಹಾಯಕಾರಿ.

೫. ಭೂಮಿಯ ವಿವಿಧ ಗುಣಧರ್ಮಗಳನ್ನು ಪರೀಕ್ಷಿಸಿ ಅವುಗಳ ಸುಧಾರಣೆಗೆ ಕ್ರಮಗಳನ್ನು ರೂಪಿಸುವಲ್ಲಿ ಸಹಕಾರಿ.

ಮಣ್ಣು ಮಾದರಿ

ಮಣ್ಣು ಪರೀಕ್ಷೆ ಮಾಡಲು ಸೂಕ್ತವಾದ ರೀತಿಯಲ್ಲಿ ಜಮೀನಿನಿಂದ ಸಂಗ್ರಹಿಸಬೇಕಾದ ಮಣ್ಣಿನ ಪ್ರಮಾಣವೇ ಮಣ್ಣಿನ ಮಾದರಿ. ಮಣ್ಣಿನ ಮಾದರಿಯನ್ನು ಪಡೆಯುವಲ್ಲಿ ಯಾವುದೇ ರೀತಿಯ ದೋಷಗಳಾದರೆ ಮುಂದೆ ಪರೀಕ್ಷೆಯಿಂದ ಬರುವ ಫಲಿತಾಂಶಗಳಲ್ಲಿ ಏರುಪೇರುಗಳಾಗುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಮಣ್ಣು ಪರೀಕ್ಷಾ ಪ್ರಕ್ರಿಯೆಯಲ್ಲಿ ಸೂಕ್ತವಾದ ರೀತಿಯಲ್ಲಿ ಮಣ್ಣಿನ ಮಾದರಿಯನ್ನು ಪಡೆಯುವುದು ತುಂಬಾ ಪ್ರಮುಖವಾದ ವಿಚಾರ.

ಮಣ್ಣು ಮಾದರಿ ಪಡೆಯುವ ವಿಧಾನ

ಮಣ್ಣು ಮಾದರಿ ಪಡೆಯುವ ವಿಧಾನವು ಮಣ್ಣು ಪರೀಕ್ಷೆಯ ಪ್ರಕ್ರಿಯೆಯಲ್ಲಿ ತುಂಬಾ ಪ್ರಮುಖವಾದ ಹಂತ. ಮಣ್ಣಿನ ಮಾದರಿ ಪಡೆಯುವ ಪದ್ಧತಿಯನ್ನು ನಿರೂಪಿಸಿ ನಿರ್ಧರಿಸುವಲ್ಲಿ ಆ ಮಣ್ಣಿನಲ್ಲಿರಬಹುದಾದ ವಿವಿಧತೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗೆ ಮಣ್ಣಿನ ವೈವಿಧ್ಯತೆಯನ್ನು ಆಧರಿಸಿ ಮಾದರಿ ಪಡೆಯುವ ವಿಧಾನವನ್ನು ನಿರ್ಧರಿಸಬೇಕಾಗುತ್ತದೆ. ಸೂಕ್ತವಾದ ಮಾದರಿ ಪಡೆಯಲು ಆಯ್ಕೆ ಮಾಡಿದ ಜಮೀನಿನಿಂದ ಹಲವಾರು ಮಾದರಿಗಳನ್ನು ಪಡೆದು ಮುಂದೆ ಅವುಗಳನ್ನು ಸಂಯುಕ್ತಗೊಳಿಸಿ ಅದರಿಂದ ಪ್ರತಿನಿಧಿ ಮಾದರಿಯನ್ನು ತಗೆಯಬೇಕಾಗುವುದು. ಮಾದರಿ ಪಡೆಯಲು ಒಂದೇ ರೀತಿಯ ಜಮೀನಿನ ಭಾಗವನ್ನು ಆಯ್ಕೆ ಮಾಡಬೇಕು. ಒಂದು ಸಂಯುಕ್ತ ಮಾದರಿ ಪಡೆಯಲು ಅತಿ ಗರಿಷ್ಠವೆಂದರೆ ೧೦ ಎಕರೆ ಜಮೀನು ಸೂಕ್ತ. ಒಂದು ವೇಳೆ ರೈತರೊಬ್ಬರ ಜಮೀನು ೧೦೦ ಎಕರೆ ಇದೆ ಎಂದು ಇಟ್ಟುಕೊಳ್ಳೋಣ, ಈ ಜಮೀನು ಎಲ್ಲಾ ರೀತಿಯಿಂದಲೂ ಒಂದೇ ತರನಾಗಿದ್ದರೂ ಸಹಿತ ಇದನ್ನು ೧೦ ಭಾಗಗಳನ್ನಾಗಿ ವಿಭಜಿಸಿ ಪ್ರತಿ ಭಾಗವನ್ನು ಸೂಕ್ತವಾಗಿ ಗುರುತಿಸಿ, ನಂತರ ಪ್ರತಿ ೧೦ ಎಕರೆ ಭಾಗದಲ್ಲಿ ಸುಮಾರು ೨೦ ರಿಂದ ೨೫ ಮಾದರಿಗಳನ್ನು ತೆಗೆದು ಅದರಿಂದ ಒಂದು ಸಂಯುಕ್ತ ಮಾದರಿಯನ್ನು ಪಡೆಯಬೇಕು. ಹೀಗೆ ಮಾಡುವುದರಿಂದ ೧೦೦ ಎಕರೆಯಿಂದ ೧೦ ಸಂಯುಕ್ತ ಮಾದರಿಗಳನ್ನು ಪಡೆಯಬೇಕಾಗುವುದು. ಒಂದುವೇಳೆ ರೈತರೊಬ್ಬರ ಜಮೀನು ೧೦ ಎಕರೆ ಇದೆ ಎಂದು ಇಟ್ಟುಕೊಳ್ಳೋಣ. ಈ ೧೦ ಎಕರೆ ಪ್ರದೇಶವನ್ನು ಸಮಪಾತಳಿ ಪ್ರಕ್ರಿಯೆಗೆ ಒಳಪಡಿಸಿದ್ದರೆ ಅದರಲ್ಲಿ ೪ ಎಕರೆ ಪ್ರದೇಶಕ್ಕೆ ಬೇರೆ ಒಂದು ಸಂಯುಕ್ತ ಮಾದರಿ ಪಡೆಯಬೇಕಾಗುತ್ತದೆ. ಹೀಗೆ ಆ ಭಾಗದಲ್ಲಿ ಸಮಪಾತಳಿ ಮಾಡುವುದರಿಂದ ಆದ ವಿವಿಧತೆಗಳ ಅಳತೆಗೋಲು ಮಾಡಬಹುದಾಗಿದೆ. ಜಮೀನಿನಲ್ಲಿಯ ವೈವಿಧ್ಯತೆ ಈ ಕೆಳಗೆ ನಮೂದಿಸಿದ ಕೆಲವು ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುವುದು.

೧. ಭೂಮಿಯ ಮೇಲ್ಭಾಗದಲ್ಲಿಯ ಏರಿಳಿತಗಳು ಹಾಗೂ ಇಳಿಜಾರಿನ ಪ್ರಮಾಣ.

೨. ಮಣ್ಣಿನ ಬಣ್ಣ.

೩. ಭೂಮಿಯಲ್ಲಿರುವ ಉಸುಕು/ಮರಳು, ರೇವೆ ಹಾಗೂ ಜೇಡುಮಣ್ಣಿನ ಕಣಗಳ ಪ್ರಮಾಣವನ್ನು ಆಧರಿಸಿದ ಮಣ್ಣಿನ ದಟ್ಟ ರೀತಿ.

೪. ಆ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು.

೫. ಬೆಳೆ ಉತ್ಪಾದನೆಯಲ್ಲಿ ಅನುಸರಿಸಿದ ಬೇಸಾಯ ಪದ್ಧತಿಗಳು.

೬. ನೀರಾವರಿಯಲ್ಲಿ ಉಪಯೋಗಿಸಿದ ನೀರಿನ ಗುಣಮಟ್ಟ.

ಈ ಮೇಲಿನ ಅಂಶಗಳಲ್ಲದೇ ಹಲವಾರು ಇತರೇ ಅಂಶಗಳು ಭೂಮಿಯಲ್ಲಿನ ವೈವಿಧ್ಯತೆಗಳಿಗೆ ಕಾರಣವಾಗಬಹುದು.

ಮಣ್ಣಿನ ಮಾದರಿ ಪಡೆಯುವ ವಿಧಾನ

  • ಯಾವ ಜಮೀನಿನಿಂದ ಮಣ್ಣಿನ ಮಾದರಿಯನ್ನು ಪಡೆಯಬೇಕಾಗಿದೆಯೋ ಆ ಪ್ರದೇಶವನ್ನು ಆ ಜಮೀನು ಉಳುಮೆ ಮಾಡುವ ರೈತನೊಂದಿಗೆ ಒಮ್ಮೆ ವಿಕ್ಷಣೆ ಮಾಡಬೇಕು.
  • ಜಮೀನಿನಲ್ಲಿರುವ ವಿವಿಧತೆಗಳನ್ನು ಗುರುತಿಸಿ ಮಾದರಿ ಪಡೆಯಲು ಅದನ್ನು ವಿಭಜಿಸುವ ಅವಶ್ಯಕತೆ ಇದ್ದರೆ ಅದನ್ನು ಪರಿಗಣಿಸಬೇಕು (ಚಿತ್ರ ೧).

 

01_241_MP-KUH

ಮಾದರಿ ಪಡೆಯಲು ಜಮೀನಿನ ವಿವಿಧತೆಗಳನ್ನು ಗುರುತಿಸುವ ವಿಧಾನ (i. ಸವಳು ತೊಂದರೆ ಹೊಂದಿದ ಭಾಗ, ii. ತಗ್ಗು ಪ್ರದೇಶ, iii. ಬಹುವರ್ಷೀಯ ತಳಿಗಳಿಂದ ಬಾಧಿತ ಪ್ರದೇಶ, ಇಂತಹ ಪ್ರದೇಶಗಳಲ್ಲಿ ಮಾದರಿ ಪಡೆಯಬಾರದು.)

 

  • ರೈತರೇ ಸ್ವತಃ ಮಾದರಿ ಪಡೆಯುತ್ತಿದ್ದರೆ ಈ ಕೆಲಸ ತುಂಬಾ ಸರಳ.
  • ಜಮೀನಿನ ಒಂದು ದಂಡೆಯಿಂದ ಮಾದರಿಗಳನ್ನು ತೆಗೆಯುವುದನ್ನು ಪ್ರಾರಂಭಿಸಬೇಕು.
  • ಚಿತ್ರದಲ್ಲಿ ತೋರಿಸಿದಂತೆ ಜಮೀನಿನ ಒಂದು ದಂಡೆಯಿಂದ ಇನ್ನೊಂದು ದಂಡೆಯವರೆಗೆ ಇಂಗ್ಲಿಷಿನ ಝಡ್ ಆಕಾರದಲ್ಲಿ (ಚಿತ್ರ ೨) ಚಲಿಸುತ್ತಾ ಸುಮಾರು ೨೦ ರಿಂದ ೨೫ ಮಾದರಿಗಳನ್ನು ಸಂಗ್ರಹಿಸಬೇಕು.
ಜಮೀನಿನಲ್ಲಿ ಮಾದರಿ ಸಂಗ್ರಹಿಸುವ ವಿಧಾನ

ಜಮೀನಿನಲ್ಲಿ ಮಾದರಿ ಸಂಗ್ರಹಿಸುವ ವಿಧಾನ

 

  • ಮಣ್ಣಿನ ಮಾದರಿಗಳನ್ನು ತೆಗೆಯುವ ಮೊದಲು ಜಮೀನಿನ ಮೇಲ್ಭಾಗವನ್ನು ಕಲ್ಲು, ಕಸ, ಕಡ್ಡಿಗಳಿಲ್ಲದಂತೆ ಚೊಕ್ಕಟ ಮಾಡಬೇಕು. ಹಾಗೆ ಮಾಡುವಾಗ ಮಣ್ಣಿನ ಮೇಲುಪದರಿಗೆ ಧಕ್ಕೆ ಆಗಬಾರದು. ಲಘು ಪೋಷಕಾಂಶ ವಿಶ್ಲೇಷಣೆ ಉದ್ದೇಶಕ್ಕೆ ಮಣ್ಣಿನ ಮಾದರಿ ಸಂಗ್ರಹಣೆಗೆ ಧಾತುವಿನ ಉಪಕರಣ ಬಳಸುವುದು ಬೇಡ. ಕಟ್ಟಿಗೆ ಉಪಕರಣವಿರಬೇಕು.
  • ಪ್ರತಿ ಮಾದರಿಯನ್ನು ಸುಮಾರು ೧೫ ರಿಂದ ೨೦ ಸೆಂ.ಮೀ. ಆಳದಿಂದ ಪಡೆಯಬಹುದು (ಚಿತ್ರ ೩). ಸಾಮಾನ್ಯವಾಗಿ ಕೃಷಿ ಬೆಳೆಗಳಿಗಾಗಿ ಸಲಿಕೆಯಿಂದ V ಆಕಾರದ ಗುಂಡಿ ತೆಗೆದು ಒಂದು ಪಕ್ಕದ ಮೇಲುಗಡೆಯಿಂದ ಕೆಳಗಿನವರೆಗೆ ಆರು ಅಂಗುಲ ಆಳದವರೆಗೂ ಹಾಗೂ ಒಂದು ಅಂಗುಲ ದಪ್ಪವುಳ್ಳ ಸಮಾನಗಾತ್ರದ ಮಣ್ಣನ್ನು ತೆಗೆಯಬೇಕು. ಆಳವಾದ ಬೇರುಗಳನ್ನು ಹೊಂದಿದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮಾದರಿಯ ಆಳ ಬೇರೆಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಣ್ಣಿನ ಫ್ರೊಫೈಲ್ ಮಾದರಿಗಳನ್ನು ವಿವಿಧ ಆಳಗಳಲ್ಲಿ ಪಡೆದು ಪರೀಕ್ಷೆ ಮಾಡಬೇಕಾಗುವುದು ಅಥವಾ ಅರಣ್ಯ ಮತ್ತು ತೋಟಗಾರಿಕಾ ಬೆಳೆಗಳಿಗಾಗಿ ಆಗರ. (Auger:ಭೈರಿಗೆ) ಇಲ್ಲವೆ ಉದ್ದನೆಯ ಸ್ಕ್ರೂ (Scroo) ಆಗರ ಉಪಕರಣದಿಂದ ಬೇರೆ ಬೇರೆ (ಸಾಮಾನ್ಯವಾಗಿ ಪ್ರತಿ ಅಡಿಗೊಂದರಂತೆ) ಆಳದಲ್ಲಿ ಮಾದರಿ ತೆಗೆಯಬೇಕು.
ಮಣ್ಣಿನ ಮಾದರಿ ಪಡೆಯುವ ವಿಧಾನ

ಮಣ್ಣಿನ ಮಾದರಿ ಪಡೆಯುವ ವಿಧಾನ

 

  • ಸಮಸ್ಯಾತ್ಮಕ ಮಣ್ಣು ಇದ್ದರೆ ಆ ಪ್ರದೇಶದಿಂದ ಬೇರೆ ಮಾದರಿಗಳನ್ನು ಪಡೆದು ವಿವರಪತ್ರದಲ್ಲಿ ಆ ಮಣ್ಣಿನಲ್ಲಿರುವ ಸಮಸ್ಯೆ(ಸವಳು, ಜವಳು, ಇತ್ಯಾದಿ)ಯನ್ನು ನಮೂದಿಸಿ ಕಳಿಸಬೇಕು.
  • ಈಗಾಗಲೇ ಹಣ್ಣಿನ ಗಿಡಗಳು, ಇತರ ಗಿಡಗಳನ್ನು ನಾಟಿ ಮಾಡದ ಪ್ರದೇಶವಾಗಿದ್ದರೆ ಅವುಗಳ ಮಧ್ಯದ ಸಾಲಿನಿಂದ ಮಾದರಿಗಳನ್ನು ಪಡೆಯಬೇಕು.

ಮಾದರಿ ಪಡೆಯುವಾಗ ಲಕ್ಷ್ಯವಹಿಸಬೇಕಾದ ಅಂಶಗಳು

ಮಣ್ಣಿನ ಮಾದರಿಗಳನ್ನು ಪಡೆಯುವಾಗ ಈ ಕೆಳಗೆ ಸೂಚಿಸಿದ ಸ್ಥಳಗಳಿಂದ ಅಥವಾ ಅವುಗಳ ಸಮೀಪದಲ್ಲಿ ಮಾದರಿಗಳನ್ನು ತೆಗೆಯಬಾರದು.

೧. ಜಮೀನಿನಲ್ಲಿ ಕೊಟ್ಟಿಗೆ ಇಲ್ಲವೇ ರಾಸಾಯನಿಕ ಗೊಬ್ಬರದ ಗುಪ್ಪೆ ಹಾಕಿದ ಪ್ರದೇಶಗಳು.

೨. ಬದುಗಳ ಸಮೀಪ.

೩. ಕಾಲುದಾರಿಗಳ ಸುತ್ತಮುತ್ತ.

೪. ಹೊಲದಲ್ಲಿಯ ಕೊಟ್ಟಿಗೆಯ ಸುತ್ತಮುತ್ತ.

೫. ವಿದ್ಯುತ್ ಕಂಬಗಳ ಸಮೀಪ.

೬. ದನಕರುಗಳನ್ನು ಕಟ್ಟುವ ಪ್ರದೇಶ.

೭. ಹೊಲದಲ್ಲಿರುವ ಗಿಡ-ಮರಗಳ ಸಮೀಪ.

೮. ಬಾವಿಗಳ ಸಮೀಪ.

೯. ದನಕರುಗಳ ಗಂಜಲ/ಸಗಣಿ ಸಂಗ್ರಹಿಸುವ ಪ್ರದೇಶಗಳು.

೧೦. ಇತ್ತೀಚೆಗೆ ಗೊಬ್ಬರ ಹಾಕಿದ ಪ್ರದೇಶಗಳು

ಪಡೆದ ಮಣ್ಣು ಮಾದರಿಗಳನ್ನು ಪರಿಷ್ಕರಿಸುವದು

ಜಮೀನಿನಿಂದ ಪಡೆದ ವಿವಿಧ ಮಾದರಿಗಳನ್ನು ಪ್ಲಾಸ್ಟಿಕ್ ಬಕೆಟ್ ಅಥವಾ ಪ್ಲಾಸ್ಟಿಕ್ ಪುಟ್ಟ ಅಥವಾ ಪಾಲಿಥಿನ್ ಪೇಪರ್ ಮೇಲೆ ಹರಡಬೇಕು. ಮಾದರಿಗಳಲ್ಲಿ ಬಂದ ಕಲ್ಲು, ಕಟ್ಟಿಗೆ, ಪ್ಲಾಸ್ಟಿಕ್ ಪದಾರ್ಥಗಳು ಇದ್ದರೆ ಅವುಗಳನ್ನು ಮಾದರಿಯಿಂದ ಬೇರ್ಪಡಿಸಬೇಕು. ಮಣ್ಣು ಹೆಂಟೆಗಳು ಅಥವಾ ಉಂಡಿಗಳಿದ್ದರೆ ಅವುಗಳನ್ನು ಒಡೆದು ಪುಡಿ ಮಾಡಬೇಕು. ಸಂಗ್ರಹಿಸಿದ ಮಾದರಿಗಳಲ್ಲಿ ತೇವಾಂಶ ತುಂಬಾ ಇದ್ದರೆ ಅದನ್ನು ನೆರಳಿನಲ್ಲಿ ಒಣಗಿಸಬೇಕು. ಮಣ್ಣಿನ ಮಾದರಿ ಅತಿಯಾದ ತೇವಾಂಶದಿಂದ ಮುಕ್ತವಾದ ನಂತರ ಸಂಯುಕ್ತ ಮಾದರಿ ಪಡೆಯಲು ಉಪಯೋಗಿಸಬೇಕು.

ಮಣ್ಣಿನ ಸಂಯುಕ್ತ ಮಾದರಿ ಪಡೆಯಲು ವಿಧಾನ

ರೈತರ ಒಂದು ಜಮೀನಿನಿಂದ ಪಡೆದ ೨೦ ರಿಂದ ೨೫ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗುವದಿಲ್ಲ. ಅದರ ಬದಲಾಗಿ ಈ ಎಲ್ಲಾ ಮಾದರಿಗಳನ್ನು ಒಂದು ಗೂಡಿನ ಸಂಯುಕ್ತ ಮಾದರಿಯೊಂದನ್ನು ಪಡೆಯಬೇಕಾಗುತ್ತದೆ. ಈ ಸಂಯುಕ್ತ ಮಾದರಿಯು ಮಣ್ಣು ಪರೀಕ್ಷಾ ಕೇಂದ್ರಕ್ಕೆ ಹೋಗುವುದರಿಂದ ಜಮೀನಿನಲ್ಲಿ ಎಷ್ಟು ಎಚ್ಚರಿಕೆವಹಿಸಿ ಮಾದರಿಗಳನ್ನು ಪಡೆಯಲಾಯಿತೋ ಅಷ್ಟೇ ಎಚ್ಚರಿಕೆಯಿಂದ ಸಂಯುಕ್ತ ಮಾದರಿಯನ್ನು ಪಡೆಯುವುದು ಪ್ರಮುಖವಾದ ವಿಚಾರ.

ಮಣ್ಣಿನ ಸಂಯುಕ್ತ ಮಾದರಿ ಪಡೆಯುವ ವಿಧಾನವನ್ನು ಚಿತ್ರದ ಸಮೇತ ವಿವರಿಸಲಾಗಿದೆ.

೧. ಮೊದಲು ಒಂದೇ ರೀತಿಯ ಜಮೀನಿನಿಂದ ಪಡೆದ ೨೦-೨೫ ಮಾದರಿಗಳನ್ನು ಪಾಲಿಥಿನ್ ಪೇಪರ್ ಮೇಲೆ ಹಾಕಿ ಸರಿಯಾಗಿ ಮಿಶ್ರಣ ಮಾಡಿರಿ.
೨. ಮಿಶ್ರಣ ಮಾಡಿ ಚಿತ್ರ-೪ ರಲ್ಲಿ ತೋರಿಸಿದಂತೆ ಪಾಲಿಥಿನ್ ಪೇಪರ್ ಮೇಲೆ ವೃತ್ತಾಕಾರದ ರೂಪದಲ್ಲಿ ಹರಡಬೇಕು.

04_241_MP-KUH

೩. ಹೀಗೆ ಮಾಡುವಾಗ ಮಾದರಿಯಲ್ಲಿ ಏನಾದರೂ ಕಲ್ಮಶಗಳು (ಕಬ್ಬಿಣದ ಚೂರು, ಕಲ್ಲುಗಳು, ಕಟ್ಟಿಗೆ ಇತ್ಯಾದಿಗಳಿಗೆ) ಪುನಃ ಪರೀಕ್ಷಿಸಬೇಕು.

೪. ಒಟ್ಟುಗೂಡಿಸಿದ ಮಾದರಿಗಳನ್ನು ಪಾಲಿಥಿನ್ ಹಾಳೆಗಳ ಮೇಲೆ ವೃತ್ತಾಕಾರದಲ್ಲಿ ಹರಡಬೇಕು.

೫. ವೃತ್ತಾಕಾರದ ರೂಪದಲ್ಲಿ ಹರಡಿದ ಮಣ್ಣನ್ನು ೪ ಭಾಗಗಳಾಗಿ ವಿಭಜಿಸಬೇಕು.

೬. ಯಾವುದೇ ಎರಡು ವಿರುದ್ಧ ದಿಕ್ಕಿನ ಭಾಗಗಳನ್ನು ಆಯ್ಕೆ ಮಾಡಿ ಇನ್ನುಳಿದ ಎರಡು ಭಾಗಗಳನ್ನು ತಿರಸ್ಕರಿಸಬೇಕು.

೭. ಮತ್ತೆ ಉಳಿದ ಮಣ್ಣನ್ನು ವೃತ್ತಾಕಾರದಲ್ಲಿ ಹರಡಿ, ೪ ಭಾಗಗಳಾಗಿ ವಿಂಗಡಿಸಿ ವಿರುದ್ಧ ದಿಕ್ಕಿನ ಎರಡು ಭಾಗಗಳನ್ನು ಆಯ್ಕೆ ಮಾಡಿ ಉಳಿದ ಭಾಗಗಳನ್ನು ತಿರಸ್ಕರಿಸಬೇಕು.

೮. ಒಟ್ಟು ಸುಮಾರು ೫೦೦ ಗ್ರಾಂ ನಷ್ಟು ಮಣ್ಣಿನ ಮಾದರಿ ಉಳಿಯುವ ವರೆಗೆ ಈ ಕ್ರಿಯೆಯನ್ನು ಪುನರಾವರ್ತಿಸಬೇಕು.

೯. ಹೀಗೆ ಪಡೆಯಲಾದ ಮಾದರಿಯನ್ನು ಸಂಯುಕ್ತ ಮಾದರಿ ಎಂದು ಕರೆಯುವರು ಹಾಗೂ ಈ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ಸೂಕ್ತವಾದುದು.