ಮಾದರಿ ಪಡೆಯಲು ಸೂಕ್ತವಾದ ಸಲಕರಣೆಗಳ ಬಳಕೆ

ಮಣ್ಣು ಪರೀಕ್ಷೆಗೆಂದು ಮಾದರಿಗಳನ್ನು ಪಡೆಯುವಾಗ ಸೂಕ್ತವಾದ ಸಲಕರಣೆಗಳನ್ನು ಉಪಯೋಗಿಸುವದು ತುಂಬಾ ಮಹತ್ವದ ವಿಚಾರ. ಈ ಸಲಕರಣೆಗಳು ಜಮೀನಿನಿಂದ ಸಮ ಪ್ರಮಾಣದಲ್ಲಿ ಹಾಗೂ ಸಮ ಆಳದಲ್ಲಿ ಮಾದರಿಗಳನ್ನು ಪಡೆಯಲು ಸಹಕಾರಿಯಾಗುವಂತಿರಬೇಕು ಪ್ರತೀ ಮಾದರಿಯಲ್ಲಿ ಪಡೆಯುವ ಮಣ್ಣಿನ ಪಾತ್ರ ಒಂದೇ ಪ್ರಮಾಣದ್ದಾಗಿರಬೇಕು. ಚಿತ್ರದಲ್ಲಿ ತೋರಿಸಿದಂತೆ ವಿವಿಧ ಸಲಕರಣೆಗಳೆಂದರೆ (ಚಿತ್ರ ೫). ಕೊಳವೆಗಳು, ಸಲಕೆ, ಕುರುಪೆ, ಆಗರ್(ಬೈರಿಗೆ ಅಥವಾ ಹಿಡಿಸರಳು) ಪ್ರಮುಖವಾದವು. ಸಾಮಾನ್ಯವಾಗಿ ಮಾದರಿ ಪಡೆಯಲು ಬಳಸುವ ಉಕ್ಕಿನ ಕೊಳವೆಗಳು ಕೆಳಭಾಗದಲ್ಲಿ ಹರಿತವಾಗಿರಬೇಕು. ಅದನ್ನು ಮಣ್ಣಿನಲ್ಲಿ ತೂರಿಸುವದರಿಂದ ನಮಗೆ ಬೇಕಾದ ಆಳದ ವರೆಗೆ ಹಾಕಿ ಮಾದರಿಯನ್ನು ಪಡೆಯಬಹುದು. ಈ ರೀತಿಯ ಕೊಳವೆಗಳು ತುಂಬಾ ಗಟ್ಟಿಯಾದ ಹಾಗೂ ಕಲ್ಲುಗಳಿಂದ ಕೂಡಿದ ಜಮೀನುಗಳಿಗೆ ಸೂಕ್ತವಲ್ಲ. ತುಂಬಾ ಗಟ್ಟಿಯಾಗಿ ಹಾಗೂ ಕಲ್ಲುಗಳಿಂದ ಕೂಡಿದ ಜಮೀನುಗಳಿಗೆ ಆಗರ್ ಸೂಕ್ತವಾದ ಸಲಕರಣೆ. ಮರಳು ಪ್ರದೇಶಗಳಲ್ಲಿ ಹಾಗೂ ತುಂಬಾ ಒಣಗಿದ ಪ್ರದೇಶಗಳಲ್ಲಿ ಆಗರ್ ಸೂಕ್ತವಾದ ಸಲಕರಣೆಯಲ್ಲ. ಮೇಲ್ಮಣ್ಣಿನಲ್ಲಿ ಮಾದರಿ ಪಡೆಯುವದಾಗಿದ್ದರೆ ಸಲಿಕೆ ತುಂಬಾ ಸೂಕ್ತವಾದ ಸಲಕರಣೆ ಆದರೆ ಸಲಕೆಯನ್ನು ಬಳಸಿ ಮಾದರಿ ಪಡೆಯುವಾಗ ಪ್ರತೀ ಹಂತದಲ್ಲಿ ಸಮಪ್ರಮಾಣದ ಮಾದರಿ ಪಡೆಯುವುದು ಕಷ್ಟಸಾದ್ಯ. ಸಲಿಕೆ ಬಳಸುವಲ್ಲಿ ಪಡೆದ ಪ್ರತೀ ಮಾದರಿಯ ಪ್ರಮಾಣ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಸೂಕ್ಷ್ಮ ಪೋಷಕಾಂಶಗಳ ಪರೀಕ್ಷೆಗೆಂದು ಮಾದರಿ ಪಡೆಯುತ್ತಿದ್ದರೆ ಲೋಹದ ಸಲಕರಣೆಗಳನ್ನು ಬಳಸುವದು ಅಷ್ಟೊಂದು ಸೂಕ್ತವಲ್ಲ.

ಮಾದರಿ ಪಡೆಯಲು ಬಳಸುವ ಸಲಕರಣೆಗಳು

ಮಾದರಿ ಪಡೆಯಲು ಬಳಸುವ ಸಲಕರಣೆಗಳು

ಮೇಲಿನ ಸಲಕರಣೆಗಳಲ್ಲದೇ ಮಾದರಿ ಸಂಗ್ರಹಕ್ಕೆ ಬೇಕಾಗುವ ಇತರ ಅವಶ್ಯಕ ವಸ್ತುಗಳೆಂದರೆ,

೧. ಪ್ಲಾಸ್ಟಿಕ್ ಬಕೆಟ್ ಅಥವಾ ಪ್ಲಾಸ್ಟಿಕ್ ಬುಟ್ಟಿ.

೨. ಪಾಲಿಥೀನ್ ಹಾಳೆ.

೩. ಮಾಹಿತಿ ಸಂಗ್ರಹಕ್ಕೆ ಅರಿವೆ ಇಲ್ಲವೇ ಪಾಲಿಥೀನ್ ಚೀಲ.

೪. ಮಾದರಿಯೊಂದಿಗೆ ಕಳಿಸುವ ಮಾಹಿತಿ ಪತ್ರ.

೫. ಮಾದರಿಯನ್ನು ಗುರುತಿಸುವ ಚೀಟಿ.

೬. ಪೆನ್ಸಿಲ್ ಹಾಗೂ ಮಾರ್ಕರ್ ಪೆನ್ನುಗಳು.

ಚೌಕಟ್ಟು ರೀತಿಯಲ್ಲಿ ಮಾದರಿ ಸಂಗ್ರಹಣೆ (ಗ್ರಿಡ್ ಸ್ಯಾಂಪ್ಲಿಂಗ್)

ಈ ಪದ್ಧತಿಯನ್ನು ಕೆಲವೊಂದು ವಿಶಿಷ್ಟ ಸಂದರ್ಭದಲ್ಲಿ ಬಳಸಬಹುದು. ರೈತರು ತಮ್ಮ ಜಮೀನಿನಲ್ಲಿ ಇರಬಹುದಾದ ವೈವಿಧ್ಯತೆಯ ತಿಳುವಳಿಕೆ ಇದ್ದಾಗ ಇದು ಸೂಕ್ತವಾದ ವಿಧಾನ. ಈ ಪದ್ಧತಿಯ ಮಾದರಿ ಸಂಗ್ರಹದಲ್ಲಿ ಆಗಬಹುದಾದ ಏರು ಪೇರುಗಳನ್ನು ಕಡಿಮೆ ಮಾರುವಲ್ಲಿ ಸಹಕಾರಿಯಾದ ಪದ್ಧತಿ. ಸಂಯುಕ್ತ ಮಾದರಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಪಡೆಯುವಲ್ಲಿ ಆಗಬಹುದಾದ ತೊಂದರೆಗಳನ್ನು ನಿವಾರಿಸುವುದು.

ಜಮೀನೊಂದರಲ್ಲಿ ಗ್ರಿಡ್‌ಗಳನ್ನು ಗುರುತಿಸಿದ ನಂತರ ಗ್ರಿಡ್‌ನ ಗಾತ್ರಕ್ಕೆ ಅನುಗುಣವಾಗಿ, ಪ್ರತಿ ಗ್ರಿಡ್ ಪ್ರದೇಶದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಮಾದರಿಗಳನ್ನು ಪಡೆಯುವದು ಒಂದು ವಿಧಾನವಾದರೆ ಎರಡು ಗ್ರಿಡ್ ರೇಖೆಗಳು ಒಂದಕ್ಕೊಂದು ಕೂಡುವ ಸ್ಥಾನದಲ್ಲಿ ಮಾದರಿ ಸಂಗ್ರಹಿಸುವುದು. ಇನ್ನೊಂದು ಪದ್ಧತಿ.

ವಲಯ ಮಾದರಿ ಸಂಗ್ರಹಣಾ ಪದ್ಧತಿ

ಈ ಪದ್ಧತಿ ಯಾವ ಜಮೀನು ವಿವಿಧ ಪ್ರಕಾರದ ಮಣ್ಣು ಹಾಗೂ ವಿಶಿಷ್ಟವಾದ ಗುಣಧರ್ಮಗಳನ್ನು ಹೊಂದಿದ್ದರೆ ಅಥವಾ ವಿಶಿಷ್ಟವಾದ ಬೆಳೆ ಬೆಳೆಯುವ ಗುಣಧರ್ಮಗಳನ್ನು ಹೊಂದಿದ್ದರೆ ಅಂತಹ ಮಣ್ಣುಗಳನ್ನು ವಿಶೇಷ ವಲಯಗಳನ್ನಾಗಿ ವಿಭಜಿಸುವುದರ ಮೂಲಕ ನಿರ್ವಹಿಸುವುದು ಸರ್ವೇಸಾಮಾನ್ಯ. ವಲಯ ಮಾದರಿ ಸಂಗ್ರಹ ಪದ್ಧತಿಯಲ್ಲಿ ಮೇಲೆ ವಿವರಿಸಿದ ವಲಯಗಳಿಂದ ಮಾದರಿಗಳನ್ನು ಸಂಗ್ರಹಿಸುವದು ಪದ್ಧತಿ. ವಲಯಗಳನ್ನು ಇನ್ನೂ ಸ್ಪಷ್ಟವಾಗಿ ವಿವರಿಸುವುದಾದರೆ ಕೆಲವೊಂದು ಜಮೀನುಗಳಲ್ಲಿ ವಿಶೇಷವಾಗಿ ಕೆಲವು ಬೆಳೆಗಳನ್ನು ಬೆಳೆಯುತ್ತಿದ್ದರೆ (ಉದಾ ಹತ್ತಿ ಬೆಳೆಯುವ ಜಮೀನು ಒಂದು ವಿಶಿಷ್ಟ ವಲಯ). ಹೆಚ್ಚು ಇಳುವರಿ ನೀಡುವ ಜಮೀನು, ಹೆಚ್ಚು ಇಳಿಜಾರು ಹೊಂದಿದ ಜಮೀನು, ವಿಶೇಷ ಮಣ್ಣಿನ ಗುಣ/ಪ್ರಕಾರ ಹೊಂದಿದ ಜಮೀನು, ಕೆಂಪುಬಣ್ಣ ಹೊಂದಿದ ಜಮೀನು ಇತ್ಯಾದಿಗಳನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಿ ಮಾದರಿ ಸಂಗ್ರಹಿಸುವುದು ಸೂಕ್ತವಾದದ್ದು. ಈ ಪದ್ಧತಿಯನ್ನು ಅನುಸರಿಸುವದರ ಮೂಲಕ ಸಂಗ್ರಹಿಸಬಹುದಾದ ಮಾದರಿಗಳ ಸಂಖ್ಯೆಯನ್ನು ಕಡಿಮೆಮಾಡಬಹುದಾಗಿದೆ. ಪ್ರತೀ ವಲಯಕ್ಕೆ ಬೇರೆ ಬೇರೆ ಪ್ರಮಾಣದ ರಸಾಯನಿಕ ಗೊಬ್ಬರದ ಪ್ರಮಾಣವನ್ನು ಶಿಫಾರಸುಮಾಡಲು ಹಾಗೂ ಹಾಕಲು ಸಹಕಾರಿಯಾಗುವುದು. ಈ ಪದ್ಧತಿಯಿಂದ ಜಮೀನಿನಲ್ಲಿ ಒಟ್ಟಾರೆ ಬೆಳೆಗೆ ಮಾಡಬಹುದಾದ ಪೋಷಕಾಂಶಗಳ ಪ್ರಮಾಣ ಮಿತವಾಗಿರುವದರಿಂದ ರಾಸಾಯನಿಕ ಪೋಷಕಾಂಶಗಳ ಮೇಲೆ ಮಾಡುವ ಖರ್ಚಿನ ಪ್ರಮಾಣವು ಕಡಿತವಾಗುವುದು.

ಜಮೀನುಗಳಲ್ಲಿ ಸವಳು ಗುಣಧರ್ಮ ಕಂಡುಹಿಡಿಯಲು ಮಾದರಿ ಸಂಗ್ರಹಿಸುವ ಪದ್ಧತಿ

ಯಾವುದೇ ಜಮೀನಿನಲ್ಲಿ ಲವಣಾಂಶಗಳ ಸಂಗ್ರಹವಾಗಿದೆ ಎಂದು ಸಂಶಯ ಬಂದರೆ ಅಂತಹ ಪ್ರದೇಶದಲ್ಲಿ ಪ್ರಪ್ರಥಮವಾಗಿ ಬೆಳೆ ತುಂಬಾ ಅಶಕ್ತವಾಗಿರುವದು ಹಾಗೂ ಉತ್ತಮ ಬೆಳೆ ಬರಲು ಮತ್ತು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವದಿಲ್ಲ. ಇಂತಹ ಜಮೀನಿನಿಂದ ಮಾದರಿ ಪಡೆಯುವಾಗ, ಅಲ್ಲಿ ಈಗಾಗಲೇ ಬೆಳೆಯೆನ್ನೇನಾದರೂ ಬಿತ್ತನೆ ಮಾಡಿದ್ದರೆ ಸುಮಾರು ೩ ಇಂಚುಗಳಷ್ಟು ಆಳದಿಂದ ಮಾದರಿಗಳನ್ನು ಸಂಗ್ರಹಿಸಬೇಕು. ಜಮೀನಿನಲ್ಲಿ ಬಿತ್ತನೆ ಮಾಡಿದ ನಂತರ ಭೂಮಿಯ ಕೆಳಭಾಗದಲ್ಲಿ ಸಂಗ್ರಹಗೊಂಡ ಲವಣಗಳು ಜಮೀನಿನ ಮೇಲ್ಭಾಗಕ್ಕೆ ಬಂದು ಮೇಲಿನ ೩ ಇಂಚು ಪ್ರದೇಶದಲ್ಲಿ ಸಂಗ್ರಹವಾಗಿರುತ್ತದೆ. ಜಮೀನುಗಳಲ್ಲಿ ಲವಣಗಳ ಸಂಗ್ರಹ ಜಮೀನಿನ ಮೇಲ್ಪದರಿನಲ್ಲಿ ಸಂಗ್ರಹವಾಗುವುದರ ಮೂಲಕ ಬೀಜದ ಮೊಳೆಯುವಿಕೆ ಹಾಗೂ ಮೊಳಕೆಬಂದ ಸಸ್ಯಗಳ ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಜಮೀನಿನಲ್ಲಿರುವ ಸವಳು ಗುಣಧರ್ಮದ ಅಳತೆಗೋಲು ಮಾಡಲು ಈ ಮೇಲ್ಪದರಿನ ೩ ಇಂಚು ಆಳದಿಂದ ಮಾದರಿ ಸಂಗ್ರಹ ಮಾಡಬೇಕು. ಇನ್ನು ಇದೇ ಉದ್ದೇಶಕ್ಕೆ ಮಾದರಿ ಸಂಗ್ರಹಿಸುವಾಗ ಜಮೀನಿನಲ್ಲಿ ಬೆಳೆ ಇರದೇ ಇದ್ದರೆ ಸಾಮಾನ್ಯವಾಗಿ ಸಂಪೂರ್ಣ ಮೇಲ್ಪದರಿನಿಂದ ಮಾದರಿ ಸಂಗ್ರಹ ಮಾಡಬೇಕು.

ಮಾದರಿ ಸಂಗ್ರಹಿಸುವಾಗ ವಹಿಸಬೇಕಾದ ಎಚ್ಚರಿಕೆಗಳು

೧. ಸಂಗ್ರಹಿಸಿದ ಮಾದರಿ ಹಸಿಯಾಗಿದ್ದರೆ ಅದನ್ನು ಸೂಕ್ತವಾದ ರೀತಿಯಲ್ಲಿ ನೆರಳಿನಡಿಯಲ್ಲಿ ಒಣಗಿಸಿ ಮಾದರಿ ಸಂಗ್ರಹಿಸುವ ಚೀಲಗಳಲ್ಲಿ ತುಂಬಬೇಕು.

೨. ಮಾದರಿ ಸಂಗ್ರಹಣೆಗೆ ಮಲೀನಗೊಂಡ ಚೀಲಗಳನ್ನು ಉಪಯೋಗಿಸಬಾರದು. ಅದರಲ್ಲಿಯೂ ಮುಖ್ಯವಾಗಿ ಬೀಜ ಹಾಗೂ ಪೋಷಕಾಂಶ ಸಂಗ್ರಹಕ್ಕೆ ಬಳಸಿದ ಚೀಲಗಳನ್ನು ಉಪಯೋಗಿಸಬಾರದು.

೩. ಸೂಕ್ತ ಪೋಷಕಾಂಶಗಳ ಪ್ರಮಾಣವನ್ನು ಪರೀಕ್ಷಿಸುವ ಉದ್ದೇಶದಿಂದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಲೋಹದ ಸಲಕರಣೆಗಳನ್ನು ಉಪಯೋಗಿಸಬಾರದು.

೪. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಸಲಕರಣೆಗಳು ಸೂಕ್ತ.

೫. ಮಾದರಿ ಸಂಗ್ರಹಿಸುವ ಪ್ರದೇಶದಲ್ಲಿ ಧೂಳು ಬರದ ಹಾಗೆ ಎಚ್ಚರಿಕೆ ವಹಿಸಬೇಕು.

೬. ಮಾದರಿಗಳನ್ನು ಸಮರ್ಪಕವಾಗಿ ಗುರುತಿಸುವ ಸಲುವಾಗಿ ಸೂಕ್ತ ಸಂಖ್ಯೆಗಳನ್ನು ನೀಡಬೇಕು.

ಮಾದರಿ ಸಂಗ್ರಹಿಸಲು ಸೂಕ್ತವಾದ ಸಮಯ

ವಿವಿಧ ಪ್ರಕಾರದ ಬೆಳೆಗಳ ಉತ್ಪಾದನೆಗೆ ಅಳವಡಿಸಲಾದ ಜಮೀನುಗಳಿಂದ ಬೆಳೆ ಕಟಾವು ಆದ ನಂತರ ಅಥವಾ ಮುಂದಿನ ಬೆಳೆಯ ಬಿತ್ತನೆ ಮಾಡುವದಕ್ಕಿಂತ ಸ್ವಲ್ಪ ಸಮಯ ಮೊದಲು ಮಾದರಿ ಸಂಗ್ರಹಕ್ಕೆ ಸೂಕ್ತವಾದ ಸಮಯ. ಮಾದರಿ ಸಂಗ್ರಹ ಹಾಗೂ ಅವುಗಳ ಪರೀಕ್ಷೆಗೆ ಸುಮಾರು ೧೫ ದಿನಗಳ ಅವಶ್ಯಕತೆಯಿರುವದು. ಹೀಗಿರುವುದರಿಂದ ಬೆಳೆಯ ಕಟಾವಿನ ನಂತರ ಮಾದರಿ ಸಂಗ್ರಹಿಸುವದು ತುಂಬಾ ಸೂಕ್ತವಾದ ಸಮಯ. ಹೀಗೆ ಸಂಗ್ರಹಿಸಿದ ಮಾದರಿಗಳನ್ನು ತಯಾರುಪಡಿಸಿ ಪರೀಕ್ಷೆಗೆ ಕಳುಹಿಸಿ ಫಲಿತಾಂಶ ಪಡೆದ ನಂತರ, ಫಲಿತಾಂಶಗಳ ಆಧಾರದ ಮೇಲೆ ಬಿತ್ತನೆಗೆ ವಿವಿಧ ತಯಾರಿಗಳನ್ನು ಮಾಡಬೇಕಾಗುತ್ತದೆ. ಇದರಲ್ಲಿ ಮುಖ್ಯವಾದ ವಿಚಾರವೆಂದರೆ ಜಮೀನಿಗೆ ಹಾಕಬಹುದಾದ ಕೊಟ್ಟಿಗೆ ಗೊಬ್ಬರಗಳ ಹಾಗೂ ರಾಸಾಯನಿಕ ಗೊಬ್ಬರಗಳ ಪ್ರಮಾಣ ಹಾಗೂ ಅವುಗಳ ಸಂಗ್ರಹಣೆಗೆ ಸಾಕಷ್ಟು ಸಮಯ ಸಿಗುವುದು.

ಮಾದರಿಗಳನ್ನು ತಡವಾಗಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದರೆ ಮುಂದೆ ಮಾಡಬೇಕಾದ ಎಲ್ಲಾ ತಯಾರಿಗಳು ತಡವಾಗುತ್ತವೆ. ಇನ್ನು ಸಾಗುವಳಿ ಮಾಡದೇ ಇರುವ ಜಮೀನುಗಳಿಂದ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾದರಿಗಳನ್ನು ಸಂಗ್ರಹಿಸುವದು ಸೂಕ್ತವಾದದ್ದು. ಮೇಲೆ ಚರ್ಚಿಸಿದ ಯಾವುದೇ ಜಮೀನುಗಳಲ್ಲಿ ಮಾದರಿ ಸಂಗ್ರಹಿಸುವಾಗ ಗಮನಿಸಬೇಕಾದ ವಿಚಾರವೆಂದರೆ ಈ ಜಮೀನುಗಳಿಗೆ ಗೊಬ್ಬರ ಜಿಪ್ಸಂ, ಸುಣ್ಣ, ರಾಸಾಯನಿಕಗಳನ್ನು ಹಾಕಿರಬಾರದು. ಮಣ್ಣಿನ ಮಾದರಿಗಳನ್ನು ಪ್ರತಿ ಸಲ ಪಡೆದು, ಪರೀಕ್ಷಿಸಿ, ಫಲಿತಾಂಶಗಳ ಆಧಾರದ ಮೇಲೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವದು ಸೂಕ್ತವಾದದ್ದು. ಇದು ಸಾಧ್ಯವಾಗದೇ ಹೋದರೆ ಒಣ ಬೇಸಾಯದಲ್ಲಿ ೩-೪ ವರ್ಷಕ್ಕೊಮ್ಮೆ ಹಾಗೂ ನೀರಾವರಿಯಲ್ಲಿ ಪ್ರತಿ ವರ್ಷ ಮಣ್ಣಿನ ಮಾದರಿ ತೆಗೆಯಬೇಕು.

ಮಾದರಿಗಳ ಗುರುತಿಸುವಿಕೆ

ಮಣ್ಣಿನ ಮಾದರಿಯನ್ನು ಬಟ್ಟೆ/ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಒಂದು ಸಣ್ಣ ಚೀಟಿಯಲ್ಲಿ ರೈತರ ಹೆಸರು, ವಿಳಾಸ, ಸರ್ವೆ ನಂಬರ್, ಬೆಳೆದ ಬೆಳೆ, ಬೆಳೆಯಬೇಕಾದ ಬೆಳೆ, ದಿನಾಂಕ ಮುಂತಾದ ಮಾಹಿತಿಯನ್ನು ಪೆನ್ಸಿಲ್‌ನಿಂದ ಬರೆದು ಚೀಲದಲ್ಲಿಡಬೇಕು. ಬಾಲ್‌ಪೆನ್ ಅಥವಾ ಇಂಕ್‌ಪೆನ್‌ನಿಂದ ಬರೆದರೆ ಮಸಿಯು ಮಣ್ಣಿನಲ್ಲಿ ಬೆರೆತು ಇಂಗಾಲದ ಪ್ರಮಾಣ ಹೆಚ್ಚಬಹುದು. ಚೀಲದ ಬಾಯಿಯನ್ನು ಭದ್ರವಾಗಿ ಕಟ್ಟಬೇಕು. (ಗೊಬ್ಬರ / ಕಿರಾಣಿಗೆ ಬಳಸಿದ ಚೀಲದ ಮರುಬಳಕೆ ಬೇಡ).

ಈ ಮಣ್ಣಿನ ಮಾದರಿ ಚೀಲ(ಚಿತ್ರ ೬)ಗಳ ಜೊತೆಗೆ, ಈ ಮಾಹಿತಿ ಪತ್ರಿಕೆಯನ್ನು ಸಂಬಂಧಪಟ್ಟವರಿಗೆ ಅಥವಾ ಹತ್ತಿರದ ಮಣ್ಣು ಆರೋಗ್ಯ ಕೇಂದ್ರ(ಪರೀಕ್ಷಾಲಯ)ಕ್ಕೆ ಕಳುಹಿಸಿಕೊಡಬೇಕು.

೧. ಜಮೀನಿನ ಮಾಲಿಕರ ಹೆಸರು.

೨. ಜಮೀನು ಇರುವ ಊರಿನ ಹೆಸರು.

೩. ಜಮೀನಿನ ಸರ್ವೆ ನಂಬರ.

೪. ಜಮೀನಿನ ಹೆಸರು.

೫. ಮಣ್ಣಿನ ಬಣ್ಣ.

೬. ಮಣ್ಣಿನ ಆಳ.

೭. ನೀರಾವರಿ ಇದ್ದರೆ ಅದರ ವಿವರ.

೮. ಒಣಬೇಸಾಯ ಜಮೀನು ಇದ್ದರೆ ಅದರ ವಿವರ.

೯. ಕಳೆದ ೩ ವರ್ಷಗಳಲ್ಲಿ ಪಡೆದ ಬೆಳೆಗಳ ವಿವರ.

೧೦. ಮುಂದಿನ ಹಂಗಾಮಿಗೆ ಹಾಕಲು ಬಯಸಿದ ಬೆಳೆಯ ವಿವರ.

೧೧. ಮಾದರಿ ಪಡೆದ ದಿನಾಂಕ.

ಮಾದರಿಗಳನ್ನು ಪರೀಕ್ಷೆಗೆ ಕಳಿಸುವುದು

ಜಮೀನಿನಿಂದ ಪಡೆದ ಸಂಯುಕ್ತ ಮಾದರಿಗಳನ್ನು ಪಡೆದ ನಂತರ ಮುಂದೆ ಅವುಗಳನ್ನು ಪರೀಕ್ಷೆಗೆ ಕಳಿಸುವುದು ತುಂಬಾ ಪ್ರಮುಖವಾದ ವಿಚಾರ. ಈ ಮಾದರಿಗಳನ್ನು ಈ ಕೆಳಗೆ ನಮೂದಿಸಿದ ಮಣ್ಣು ಪರೀಕ್ಷಾ ಕೇಂದ್ರಗಳಿಂದ ಪರೀಕ್ಷಿಸಬಹುದಾಗಿದೆ.

ಮಣ್ಣಿನ ಮಾದರಿ ಚೀಲಚಿತ್ರ

ಮಣ್ಣಿನ ಮಾದರಿ ಚೀಲಚಿತ್ರ

೧. ಪ್ರತಿ ಜಿಲ್ಲೆಗೆ ಒಂದರಂತೆ ಕೃಷಿ ಇಲಾಖೆಯ ಅಡಿಯಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳು ಕೆಲಸಮಾಡುತ್ತವೆ. ಈ ಕೇಂದ್ರಗಳಲ್ಲಿ ಮಣ್ಣು ಪರೀಕ್ಷೆಯ ಸೇವೆಯನ್ನು ಉಚಿತವಾಗಿ ಮಾಡಲಾಗುತ್ತದೆ.

೨. ತಮ್ಮ ಊರುಗಳಿಗೆ ಸಮೀಪವಾಗಿ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರಗಳಿದ್ದರೆ ಅಂತಹ ಕೇಂದ್ರಗಳಿಂದ ಮಣ್ಣು ಪರೀಕ್ಷೆ ಸೌಲಭ್ಯ ಪಡೆಯಬಹುದು.

೩. ಸರಕಾರೇತರ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಖಾಸಗಿ ಸಂಸ್ಥೆಗಳು ಸಹಿತ ಮಣ್ಣು ಪರೀಕ್ಷೆ ಸೇವೆಯನ್ನು ರೈತರಿಗೆ ನೀಡುತ್ತವೆ.

೪. ಇದರೊಂದಿಗೆ ವಿವಿಧ ರಸಗೊಬ್ಬರ ತಯಾರಿಸುವ ಕಂಪನಿಗಳೂ ಸಹ ಮಣ್ಣು ಪರೀಕ್ಷೆ ಸೇವೆಯನ್ನು ರೈತರಿಗೆ ನೀಡುತ್ತಾರೆ.

ಮಣ್ಣು ಪರೀಕ್ಷಾ ವರದಿಯನ್ನು ಅರ್ಥೈಸುವದು

ಮಣ್ಣು ಪರೀಕ್ಷಾ ವರದಿಯಲ್ಲಿ ಹಲವಾರು ಅಂಶಗಳು ಅಡಕವಾಗಿರುತ್ತವೆ. ಇದರಲ್ಲಿ ಎರಡು ಪ್ರಮುಖ ವಿಷಯಗಳೆಂದರೆ,

೧. ಪರೀಕ್ಷಿಸಿದ ಮಣ್ಣಿನ ಫಲವತ್ತತೆಯ ವಿವರ.

೨. ಮುಂದೆ ಫಲವತ್ತತೆ ಕಾಪಾಡಲು ಮಾಡಿರುವ ಶಿಫಾರಸುಗಳು.

ಮಣ್ಣಿನ ಪರೀಕ್ಷೆಯ ಆಧಾರವಾಗಿ ಈ ಕೆಳಗಿನ ಗುಣಧರ್ಮಗಳನ್ನು ಅವಲೋಕನ ಮಾಡಲಾಗುವುದು.

೧. ಮಣ್ಣಿನ ಪಿ.ಹೆಚ್.

೨. ಮಣ್ಣಿನ ಪ್ರಕಾರ.

೩. ವಿನಿಮಯ ಹೊಂದಬಹುದಾದ ಸೋಡಿಯಂ ಪ್ರಮಾಣ.

೪. ಸಾವಯವ ಇಂಗಾಲದ ಪ್ರಮಾಣ.

೫. ಮಣ್ಣಿನ ಲವಣತೆ. (ಇ.ಸಿ)

ಮಣ್ಣಿನ ಫಲವತ್ತತೆಯನ್ನು ಅದರಲ್ಲಿ ಲಭ್ಯವಿರುವ ಪೋಷಕಾಂಶಗಳ ಆಧಾರದ ಮೇಲೆ ವಿವರಿಸಲಾಗುವದು. ಇನ್ನು ಎರಡನೇಯದಾಗಿ ಫಲವತ್ತತೆ ಕಾಪಾಡಿಕೊಂಡು ಬರಲು ರೈತರು ಜಮೀನಿಗೆ ಹಾಕಬೇಕಾದ ರಸಗೊಬ್ಬರಗಳ ಪ್ರಮಾಣವನ್ನು ಶಿಫಾರಸು ಮಾಡಲಾಗುವದು. ಶಿಫಾರಸು ಮಾಡಲಾಗುವ ರಸಗೊಬ್ಬರಗಳ ಪ್ರಮಾಣವು ಆ ಜಮೀನಿನಲ್ಲಿ ಬೆಳೆಯಲು ಉದ್ದೇಶಿಸಲಾದ ಬೆಳೆಗಳ ಅವಶ್ಯಕತೆ, ಆ ಕ್ಷೇತ್ರದಲ್ಲಿ ರೈತರು ಕೈಗೊಳ್ಳುವ ವಿವಿಧ ನಿರ್ವಹಣಾ ಕ್ರಮಗಳು, ಪ್ರಸ್ತುತ ಜಮೀನಿನ ಫಲವತ್ತತೆಯ ಮಟ್ಟ ಹಾಗೂ ರೈತರು ಗುರಿ ಇಟ್ಟುಕೊಂಡಿರುವ ಇಳುವರಿಯ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೇ ಪರೀಕ್ಷೆಗೆ ಒಳಗೊಂಡ ಕ್ಷೇತ್ರದಲ್ಲಿ ಲವಣಗಳಿಂದ ತೊಂದರೆ ಇದ್ದರೆ ಅಥವಾ ಸೋಡಿಯಂ ಅಲ್ಲಿ ಶೇಖರಣೆಗೊಂಡು ತೊಂದರೆಗಳು ಉಂಟಾಗಿದ್ದರೆ ಅಂತಹ ಸಮಸ್ಯೆಗಳ ವಿವರವನ್ನು ನೀಡಲಾಗುವದು. ಇಂತಹ ಸಮಸ್ಯೆಗಳನ್ನು ಪರಿಹರಿಸಲು ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಫಲಿತಾಂಶ ಪತ್ರದಲ್ಲಿ ವಿವರಣೆ ನೀಡಲಾಗುವದು.

ಮಣ್ಣು ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಅವಲೋಕನ ಮಾಡುವ ಗುಣಧರ್ಮಗಳು

ಮಣ್ಣಿನ ರಸಸಾರ (ಪಿ.ಎಚ್.)

ಮಣ್ಣಿನಲ್ಲಿರುವ ಅಥವಾ ಅಳತೆ ಮಾಡಲು ಆಮ್ಲತೆ ಕ್ಷಾರತೆ ಉಪಯೋಗಿಸುವ ಮಾನದಂಡವಾಗಿದ್ದು, ಇದರಲ್ಲಿ ಪಿ.ಎಚ್ ಮಾಪಕದಲ್ಲಿ ೭ರವರೆಗೆ ಆಮ್ಲತೆ ಗುಣ ಹೊಂದಿರುವ ಜಮೀನುಗಳೆಂದೂ ೭-೧೪ರವರೆಗೆ ಕ್ಷಾರತೆ ಗುಣ ಹೊಂದಿದ ಜಮೀನುಗಳೆಂದೂ ವರ್ಗೀಕರಣ ಮಾಡಲಾಗುವದು. ಬೆಳೆಯ ಬೆಳವಣಿಗೆಗೆ ೬.೫ ರಿಂದ ೭.೫ ಪಿ.ಎಚ್. ಸೂಕ್ತ. ಆಮ್ಲತೆಯ ಗುಣ ಹೊಂದಿದ ಜಮೀನುಗಳನ್ನು ಸರಿಪಡಿಸಲು ಸುಣ್ಣ ಬಳಸಬೇಕು. ಹಾಗೂ ಕ್ಷಾರ ಜಮೀನುಗಳನ್ನು ಸರಿಪಡಿಸಲು ಜಿಪ್ಸಂ ಬಳಕೆ ಮಾಡಬೇಕು. ಮಣ್ಣಿಗೆ ಹಾಕಬೇಕಾದ ಇವುಗಳ ಪ್ರಮಾಣವನ್ನು ಮಣ್ಣಿನಲ್ಲಿರುವ ಆಮ್ಲತೆ ಅಥವಾ ಕ್ಷಾರತೆಯ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ.

ವಿದ್ಯುತ್ ವಾಹಕತೆ (ಎಲೆಕ್ಟ್ರಿಕಲ್ ಕಂಡಕ್ಟಿವಿಟಿ)

ಮಣ್ಣಿನಲ್ಲಿ ವಿದ್ಯುತ್ ವಾಹಕತೆಯ ಸಾಮರ್ಥ್ಯವನ್ನು (ಎಲೆಕ್ಟ್ರಿಕಲ್ ಕಂಡಕ್ಟಿವಿಟಿ) ಅಳತೆ ಮಾಡುವದರಿಂದ ಅಲ್ಲಿ ಸಂಗ್ರಹವಾಗಿರುವ ಲವಣಗಳ ಪ್ರಮಾಣ ತಿಳಿಯುವದು. ಈ ಗುಣಧರ್ಮವು ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಮಾಪನವಲ್ಲ. ಕರಗುವ ಲವಣಗಳಿಂದ ಕೂಡಿದ ಮಣ್ಣಿದ್ದರೆ ಅದರಲ್ಲಿ ವಿದ್ಯುತ್ ವಾಹಕತೆ ಹೆಚ್ಚಿರುವುದು. ಹೀಗಾಗಿ ವಿದ್ಯುತ್ ವಾಹಕತೆ ಮತ್ತು ಲವಣಾಂಶಕ್ಕೆ ನೇರ ಸಂಬಂಧವಿದೆ. ಇದನ್ನು ಒಂದು ಪ್ರಮಾಣ ಮಣ್ಣು ಮತ್ತು ೨.೫ ಪ್ರಮಾಣ ಮಣ್ಣು (ತೂಕದ ಆಧಾರದ ಮೇಲೆ) ಬೆರೆಸಿ ಅದರ ವಿದ್ಯುತ್ ವಾಹಕತೆಯನ್ನು ಅಳೆಯುವುದು ಸಾಮಾನ್ಯ. ಯಾವ ಜಮೀನುಗಳಲ್ಲಿ ವಿದ್ಯುತ್ ವಾಹಕತೆ ಪ್ರಮಾಣವು ೧.೦೦ ಡಿ.ಎಸ್.ಎಮ್. ಗಿಂತ ಕಡಿಮೆಯಾಗಿದೆಯೋ ಅಂತಹ ಜಮೀನುಗಳಲ್ಲಿ ಲವಣಾಂಶ ಕಡಿಮೆ ಇದ್ದು, ಕೃಷಿ ಉತ್ಪಾದನೆಗೆ ಸೂಕ್ತವಾದವು. ಈ ಪ್ರಕಾರದ ಜಮೀನುಗಳಲ್ಲಿ ವಿವಿಧ ಪ್ರಕಾರದ ಬೆಳೆಗಳನ್ನು ಬೆಳೆಯಬಹುದು. ಇನ್ನು ಜಮೀನುಗಳಲ್ಲಿ ಕರಗಬಹುದಾದ ಲವಣಗಳ ಪ್ರಮಾಣವು ೧.೦೦ ದಿಂದ ೨.೦೦ ಡಿ.ಎಸ್.ಎಮ್. ನಷ್ಟಾಗಿದ್ದರೆ ಇಂತಹ ಜಮೀನುಗಳಲ್ಲಿ ಲವಣಗಳಿಗೆ ಸೂಕ್ಷ್ಮತೆ ಇರುವ ಕೆಲವು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವದಿಲ್ಲ. ಮೂರನೇಯದಾಗಿ ಜಮೀನುಗಳ ಕರಗಬಹುದಾದ ಲವಣಗಳ ಪ್ರಮಾಣವು ೨.೦೦ರಿಂದ ೩.೦೦ ಡಿ.ಎಸ್.ಎಮ್. ನಷ್ಟಾಗಿದ್ದರೆ ಕೇವಲ ಲವಣಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದ ಬೆಳೆಗಳನ್ನು ಮಾತ್ರ ಬೆಳೆಯಬಹುದಾಗಿದೆ. ಕೊನೆಯದಾಗಿ ಲವಣಗಳ ಪ್ರಮಾಣವು ೩.೦೦ ಡಿ.ಎಸ್.ಎಮ್. ಗಿಂತ ಹೆಚ್ಚಾಗಿದ್ದರೆ. ಇದು ಹೆಚ್ಚಿನ ಸಂಖ್ಯೆಯ ಬೆಳೆಗಳನ್ನು ಬೆಳೆಯಲು ಸೂಕ್ತವಾಗಿರುವದಿಲ್ಲ.

ಒಣಬೇಸಾಯ ಪ್ರದೇಶದಲ್ಲಿ ಹೆಚ್ಚಿನ ಉಷ್ಣತೆ ಇರುವದರಿಂದ ಲವಣಗಳು ಸಂಗ್ರಹಗೊಂಡರೆ ನೀರವಾರಿಯಲ್ಲಿ ಲವಣಪೂರಿತ ನೀರನ್ನು ನೀರಾವರಿಗೆ ಬಳಸುವ ಮುಖಾಂತರ ಅಂತಹ ಜಮೀನುಗಳಲ್ಲಿ ಲವಣಗಳ ಸಂಗ್ರಹಗೊಂಡು ತೊಂದರೆ ಉಂಟಾಗಬಹುದು. ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಪ್ರದೇಶಗಳಲ್ಲಿ ಈ ಲವಣ ಸಂಗ್ರಹದ ತೊಂದರೆ ಇರುವದಿಲ್ಲ.

ಕ್ಯಾಟ್ ಅಯಾನ್ ಎಕ್ಸಚೇಂಜ್ ಕೆಪ್ಯಾಸಿಟಿ (ಸಿ..ಸಿ)

ಮಣ್ಣಿನ ಧನಾತ್ಮಕ ಅಯಾನುಗಳ ವಿನಿಮಯ ಸಾಮರ್ಥ್ಯವು ಆ ಮಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳನ್ನು ಸೂಚಿಸುತ್ತವೆ. ಸಾಮಾನ್ಯವಾಗಿ ಮರಳು ಮಿಶ್ರಿತ ಭೂಮಿಗಳಲ್ಲಿ ಸಿ.ಇ.ಸಿ ಪ್ರಮಾಣವು ಕಡಿಮೆ ಇರುವುದು. (೫ ಮಿಲಿ ಇಕ್ವಿವ್ಯಾಲೆಂಟ್ಸ್ / ೧೦೦ ಗ್ರಾಂ), ಜೇಡಿ ಮಣ್ಣುಗಳಲ್ಲಿ ಇದು ಸುಮಾರು ೩೦ ಮಿಲಿ ಇಕ್ವಿವ್ಯಾಲೆಂಟ್ಸ್ / ೧೦೦ ಗ್ರಾಂ. ಕ್ಕಿಂತ ಹೆಚ್ಚಾಗಿರುವುದು. ಯಾವ ಜಮೀನಿನಲ್ಲಿ ಸಾವಯವ ಪದಾರ್ಥದ ಪ್ರಮಾಣವು ಹೆಚ್ಚಾಗಿರುವುದೋ ಅಂತಹ ಜಮೀನುಗಳ ಸಿ.ಇ.ಸಿ. ಸಾಮಾನ್ಯವಾಗಿ ಹೆಚ್ಚಾಗಿರುವದು. ಇನ್ನು ಯಾವ ಜಮೀನುಗಳಲ್ಲಿ ಸಿ.ಇ.ಸಿ ಯ ಪ್ರಮಾಣ ಕಡಿಮೆ ಇರುವುದೋ ಅಂತಹ ಜಮೀನುಗಳಲ್ಲಿ ಪೋಷಕಾಂಶಗಳು (ಪ್ರಮುಖವಾಗಿ ಸಾರಜನಕ, ಬೋರಾನ್ ಹಾಗೂ ಪೋಟ್ಯಾಶಿಂ) ಮಳೆಯ ನೀರಿನೊಂದಿಗೆ ಬಸಿದು ಹೋಗುವ ಸಾಧ್ಯತೆಗಳು ಹೆಚ್ಚು. ಇಂತಹ ಜಮೀನುಗಳಲ್ಲಿ ರಸಗೊಬ್ಬರಗಳನ್ನು ಹಾಕುವಾಗ ಅದನ್ನು ವಿಭಜಿಸಿ ವಿವಿಧ ಹಂತಗಳಲ್ಲಿ ಸ್ವಲ್ಪ ಸ್ವಲ್ಪ ನೀಡುವುದು ಸೂಕ್ತ. ರಸಗೊಬ್ಬರಗಳನ್ನು ಒಮ್ಮೆಲೆ ಪೂರ್ತಿಯಾಗಿ ಹಾಕಿದರೆ ಮಳೆಯ ಪ್ರಮಾಣಕ್ಕೆ ಸರಿಯಾಗಿ ಈ ಪೋಷಕಾಂಶಗಳ ಬಸಿದುಹೋಗಿ ಮುಂದೆ ಬೆಳೆಗೆ ಲಭ್ಯವಾಗದಿರಬಹುದು.

ಕ್ಯಾಲ್ಸಿಯಂ ಕಾರ್ಬೊನೆಟ್

ಜಮೀನಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೆಟ್(ಸುಣ್ಣ)ದ ಪ್ರಮಾಣವು ಆ ಜಮೀನಿನಲ್ಲಿ ಪೋಷಕಾಂಶಗಳ ಲಭ್ಯತೆ ಮೇಲೆ ತನ್ನದೇ ಪರಿಣಾಮ ಬೀರುವುದು. ಇದು ಹರಳಿನ ರೂಪದಲ್ಲಿ ಅಥವಾ ಪುಡಿಯ ರೂಪದಲ್ಲಿ ಅಥವಾ ಎರಡು ತರಹದ ಮಣ್ಣಿನಲ್ಲಿ ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಾಣುವುದು. ಯಾವ ಮಣ್ಣಿನಲ್ಲಿ ಕ್ಯಾಲ್ಸಿಯಂ ಕರ್ಬೋನೇಟ್ ಇರುವುದೋ ಅದರ ರಸಸಾರ ೮.೨ ಕ್ಕಿಂತ ಹೆಚ್ಚಿಗಿರುವುದು. ಕ್ಯಾಲ್ಸಿಯಂ ಕಾರ್ಬೊನೆಟ್‌ದ ಪ್ರಮಾಣವು ಭೂಮಿಯಲ್ಲಿ ಹೆಚ್ಚಾದರೆ ಬೇರೆ ಬೇರೆ ಪೋಷಕಾಂಶಗಳ ಲಭ್ಯತೆಯು ಕಡಿಮೆಯಾಗುವುದು. ಕ್ಯಾಲ್ಸಿಯಂ ಕಾರ್ಬೊನೆಟ್ ಪ್ರಮಾಣದ ವಿವರ.

೧. ೫% ಕ್ಯಾಲ್ಸಿಯಂ ಕಾರ್ಬೊನೆಟ್ ಪ್ರಮಾಣ-ಕಡಿಮೆ.

೨. ೫ ರಿಂದ ೧೦% ಕ್ಯಾಲ್ಸಿಯಂ ಕಾರ್ಬೊನೆಟ್ ಪ್ರಮಾಣ-ಮಧ್ಯಮ.

೩. > ೧೦% ಕ್ಯಾಲ್ಸಿಯಂ ಕಾರ್ಬೊನೆಟ್ ಪ್ರಮಾಣ-ಹೆಚ್ಚಿಗೆ.

ಸಾವಯವ ಇಂಗಾಲ

ಸಾವಯವ ಇಂಗಾಲವು ಭೂಫಲವತ್ತತೆಯ ಅಳತೆಗೋಲಿನಲ್ಲಿ ತುಂಬಾ ಪ್ರಮುಖವಾದ ಅಂಶವಾಗಿದ್ದು ಇದರ ಪ್ರಮಾಣದ ಆಧಾರದ ಮೇಲೆ ಭೂಮಿಯತ್ತತೆ ನಿರ್ಧರಿಸಲಾಗುತ್ತದೆ. ಸಾವಯವ ಇಂಗಾಲವು ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ ವಿವಿಧ ಕೀಟನಾಶಕಗಳಿಂದಾಗ ಬಹುದಾದ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಬಹುದಾಗಿದೆ. ಭೂಮಿಯಲ್ಲಿರುವ ಸಾವಯವ ಗೊಬ್ಬರದ ಪ್ರಮಾಣವನ್ನು ಸಾವಯವ ಇಂಗಾಲದ ಪ್ರಮಾಣದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.

ಸಾವಯವ ಇಂಗಾಲದ ವರ್ಗ ಸಾವಯವ ಇಂಗಾಲ ಪ್ರಮಾಣ %
ಕಡಿಮೆ < ೦.೫
ಮಧ್ಯಮ ೦.೫೦-೦.೭೫
ಹೆಚ್ಚು > ೦.೭೫

ಪೋಷಕಾಂಶಗಳ ಮಟ್ಟಗಳು

ಪರೀಕ್ಷೆಗೆ ಒಳಪಟ್ಟ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಬಹುದಾಗಿದೆ.

ಪೋಷಕಾಂಶಗಳ ಹೆಸರು (ಕಿ ಗ್ರಾ / ಹೆಕ್ಟೇರ್)

ಪೋಷಕಾಂಶಗಳ ವರ್ಗ ಲಭ್ಯವಿರುವ
ಸಾರಜನಕ
ಲಭ್ಯವಿರುವ
ರಂಜಕ (P205)
ಲಭ್ಯವಿರುವ
ಪೊಟ್ಯಾಷ್ (K20)
ಕಡಿಮೆ < ೨೮೦ < ೨೨.೫ <೧೨೫
ಮಧ್ಯಮ ೨೮೦-೫೬೦ ೨೨.೫-೫೫ ೧೨೫-೩೦೦
ಹೆಚ್ಚು > ೫೬೦ > ೫೫ > ೩೦೦