ಬುದ್ಧನ ಧರ್ಮಸೂತ್ರದಲ್ಲಿ ಒಂದು ಮಾತಿದೆ. ಧೂಳಿನಿಂದ ತುಂಬಿರುವ ನಗರದಲ್ಲಿ ವಾಸಿಸುವವರಿಗೆ ಮುಕ್ತಿ ಸಿಗಲು ಸಾಧ್ಯವಿಲ್ಲ. ಹೀಗೆನ್ನುತ್ತಾ ಹಳ್ಳಿಯ ಜೀವನವು ಮೋಕ್ಷದೆಡೆಗೆ ಕೊಂಡ್ಯೊಯ್ಯುವ ಸಾಧನೆಯನ್ನು ಆ ಮೂಲಕ ಕೃಷಿಪರವಾದ ಮಾತನ್ನು, ಆ ಹಿನ್ನೆಲೆಯಲ್ಲಿನ ನೆಮ್ಮದಿಯನ್ನೂ ಬುದ್ಧ ನೆನೆಪಿಸುತ್ತಾನೆ. ಹಳ್ಳಿಯ ಕೃಷಿಪರ ಜೀವನವು ಮೋಕ್ಷಕ್ಕೆ ಸಮಾನವಾದ ಹಿತವನ್ನು ತರುವಂತಹ ಆಶಯ ಈ ಮಾತಿನಿಂದ ತಿಳಿಯುತ್ತದೆ.

“ಮಾನವ ಜೀವನವು ಮಣ್ಣಿನ ನೂಲಿಂದ ನೇಯ್ದಿದೆ ಹಾಗಾಗಿ ಅದರ ಸುವಾಸನೆಯು ಎಲ್ಲೆಡೆಯೂ ಹಬ್ಬಿದೆ” ಎಂದು ವಿಜ್ಞಾನಿಯೋರ್ವರು ಮಣ್ಣಿನ ಪ್ರಶಂಸೆಯನ್ನು ಮಾಡುತ್ತಾರೆ. ಮಣ್ಣಿಂದ ಕಾಯ, ಮಣ್ಣಿಂದ … … .. .. .. ಮಣ್ಣು ಬಿಟ್ಟವರಿಗೆ ಆಧಾರವಿಲ್ಲಾ, ಎಂದು ದಾಸಶ್ರೇಷ್ಠರಲ್ಲೊಬ್ಬರಾದ ಪುರಂದರದಾಸರು ಹಾಡಿದ್ದಾರೆ. ಮಣ್ಣಿ ಸಕಲ ಸದ್ಗುಣಗಳನ್ನು ಹೆಚ್ಚುಗಾರಿಕೆಯನ್ನು ತಿಳಿಸಲು ಕೈಲಾಸ, ವೈಕುಂಠ ಎಲ್ಲವೂ ಮಣ್ಣಿನಿಂದಲೆ ಮಾಡಿದೆಂದು ತಮ್ಮ ಕೀರ್ತನೆಯಲ್ಲಿ ತಿಳಿಸುತ್ತಾರೆ. “ದೇವರು ಮಾನವರನ್ನು ಭೂಮಿಯ ಮಣ್ಣಿನಿಂದಲೇ ಮಾಡಿದ್ದಾನೆ” ಎನ್ನುತ್ತದೆ ಮೊದಲ ಬೈಬಲ್ಲಾದ ಜೆನಿಸಿಸ್‌ನ ಒಂದು ಸಾಲು.

ಮಾನವರ ಇತಿಹಾಸವು, ಅವರು ತಾವು ವಾಸಿಸುವ ಈ ನೆಲದೊಡನೆ ಅವರಿಗಿರುವ ಸಂಬಂಧದ ಇತಿಹಾಸವೇ ಆಗಿದೆ. ಇದರ ಜತೆಯಲ್ಲಿ ನೆಲದ ಮೇಲಿ ಇತರೆ ಜೀವಿಗಳ ಬಗೆಗಿನ ಆತನ ಗ್ರಹಿಕೆಯೂ ಸೇರುತ್ತದೆ. ಈ ಗ್ರಹಿಕೆ ಮತ್ತು ಸಂಬಂಧಗಳು ಆತನ ಚರಿತ್ರೆಯನ್ನು ಕಾಲಾಂತರದಲ್ಲಿ ಬದಲಿಸುತ್ತಾ ಬೆಳೆಸುತ್ತಾ ಬಂದಿವೆ. ಈ ಚಲನಾಶೀಲತೆಯು ಮಾನವರನ್ನು ತಮ್ಮ ಕಾಲಿನ ಅಡಿಯ ನೆಲದ ಮೇಲಣ ಸಂಬಂಧವನ್ನು ಕಟ್ಟುತ್ತಾ, ಒಡೆಯುತ್ತಾ ಮತ್ತೆ ವಿಸ್ತರಿಸುತ್ತಾ . . . ಹೀಗೆ ಬಗೆ ಬಗೆಯಾಗಿರುವಂತೆ ಮಾಡಿದೆ. ಮಣ್ಣಿನ ಸಂಬಂಧವೇ ವಿಚಿತ್ರವಾದದ್ದು. ಇಡೀ ಮಾನವರ ಜನಾಂಗೀಯ ಇತಿಹಾಸವನ್ನು ಜಗತ್ತಿನ ವಿವಿಧ ಚರಿತ್ರಕಾರರು, ಅಧ್ಯಯನಕಾರರು, ವಿಜ್ಞಾನದ ಅನ್ವೇಷಕರು ಭೌಗೋಳಿಕ ನೆಲೆಯಿಂದಲೇ ಪರಾಮರ್ಶಿಸಿದ್ದಾರೆ. ತನ್ನ ಸುತ್ತಲಿನ ಜಗತ್ತಿನ ಅರಿವು ಹೆಚ್ಚಿದಂತೆಲ್ಲಾ ಮಾನವರ ವಾಸಸ್ಥಳದ ಗ್ರಹಿಕೆಯು ಬದಲಾಗುತ್ತಾ ಸಾಗಿದೆ. ನಾವು ಈ ಮಣ್ಣಿಗೇ ಸೇರಿದವರು ಎಂಬ ಅಭಿಪ್ರಾಯ ಬದಲಾಗುತ್ತಾ, ಆದುನಿಕತೆಯು ಹೆಚ್ಚಿದಂತೆಲ್ಲಾ ಮಣ್ಣಿನ ಮೇಲಣ ಒಡೆತನವನ್ನೇ ಪ್ರಮುಖವಾಗಿಸುತ್ತಾ ಬಂದಿದೆ. ಈ ಹಿನ್ನೆಲೆಯಿಂದಲೇ ನಾಗರಿಕತೆಗಳೂ ಬೆಳೆಯುತ್ತಾ ಸಾಗಿವೆ.

ಮಣ್ಣು ಮತ್ತು ನೆಲ ಮತ್ತು ಜನರ ಸಂಬಂಧಗಳಲ್ಲಿ ಬಾಂಧವ್ಯವು ಭಾರತೀಯ ಸಂದರ್ಭದಲ್ಲಿರುವಂತೆ ಮತ್ತಾವ ದೇಶಗಳಲ್ಲಿಯೂ ಇದ್ದಿರಲಾರದು. ಇಲ್ಲಿನ ನೆಲವು ಅಧಿಕ ಜನಸಂಖ್ಯೆಯ ಜನಗಳನ್ನು ಸಲಹುತ್ತಿರುವಂತೆ ಮತ್ತಾವ ದೇಶದಲ್ಲಿಯೂ ಸಲಹುತ್ತಿರಲಾರದು. ಇರುವಷ್ಟೇ ನೆಲವು ಅತ್ಯಧಿಕ ಸಂಖ್ಯೆಯ ಜನರನ್ನು ಸಲಹುತ್ತಿರುವ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಅಗಾಧ ಜನಸಂಖ್ಯೆಯನ್ನು ಹೊಂದಿರುವ ಹಾಗೂ ಕೃಷಿಯಿಂದ ತನ್ನ ಆಹಾರದ ಅವಶ್ಯಕತೆಯನ್ನು ನೀಗಿಸಿಕೊಳ್ಳುವ ಇಲ್ಲಿನ ಪ್ರದೇಶದ ಜನಸಾಂದ್ರತೆ ಅಗಾಧ ಜನಸಂಖ್ಯೆಯನ್ನು ಹೊಂದಿರುವ ಬೇರಾವುದೇ ದೇಶಕ್ಕಿಂತಲೂ ಅಧಿಕ. ಜಗತ್ತಿನಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನ, ಅದರೂ ಅಪಾರ ಜನರನ್ನು ಹೊಂದಿರುವಂತಹ ರಾಷ್ಟ್ರಗಳಲ್ಲಿಯ ಜನ ಸಾಂದ್ರತೆಯಲ್ಲಿ ಮೊದಲಸ್ಥಾನ. ಈ ದೃಷ್ಟಿಯಲ್ಲಿ, ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದ ಎರಡು ಪಟ್ಟು ಅಂದರೆ ಅಚ್ಚರಿಯಾದೀತು. ಚೀನಾವು ಭಾರತದ ಮೂರರಷ್ಟು ನೆಲವನ್ನು ಹೊಂದಿದ್ದರೂ ನೆಲವನ್ನೇ ನೆಚ್ಚಿರುವವರು ಒಟ್ಟಾರೆ ಸಂಖ್ಯೆಗೆ ಕಡಿಮೆಯೆ. ಭಾರತದಲ್ಲಿ ಪ್ರತೀ ಚದರ ಕಿಲೋಮೀಟರಿಗೆ ಸುಮಾರು ೩೬೦ ಮಂದಿ ನೆಲೆಸಿದ್ದರೆ, ಚೀನಾದಲ್ಲಿ ಅದರ ಅರ್ಧಕ್ಕಿಂತಲೂ ಕಡಿಮೆಯೆ(೧೪೦). ಇರುವ ನೆಲೆದ ವಿಸ್ತಾರಕ್ಕೆ ಹೋಲಿಸಿದಲ್ಲಿ ಅದರ ನೆಲೆಯಿಂದಲೇ ನಂಬಿ ಜೀವಿಸುತ್ತಿರುವವರ ಸಂಖ್ಯೆಯು ಅಧಿಕ. ಈ ವಿಸ್ಮಯವೇ ಭಾರತೀಯ ನೆಲದ ವಿಶೇಷತೆಯನ್ನು ಹೆಚ್ಚಿಸಿದೆ. ಬಹುಮುಖ್ಯವಾಗಿ ಇಲ್ಲಿನ ನೆಲೆದ ಕೃಷಿಯೋಗ್ಯ ಭೂಮಿಯು ಹೆಚ್ಚಾಗಿದ್ದು, ಆಹಾರದ ಉತ್ಪಾದನೆಗೆ ತೊಡಗಿಕೊಂಡಿದೆ. ಸರಿ ಸುಮಾರು ಸೇ ೫೭ಕ್ಕೂ ಹೆಚ್ಚು ನೆಲವು ಕೃಷಿಯೋಗ್ಯವಾಗಿದ್ದು ಅದೇ ಬಹು ಮುಖ್ಯವಾದ ವಿಶೇಷವಾಗಿದೆ. ಬಂಗ್ಲಾದಂತಹ ಕೆಲವು ಚಿಕ್ಕ ಚಿಕ್ಕ ದೇಶಗಳಲ್ಲಿ ನೆಲವು ಭಾರತಕ್ಕಿಂತಲೂ ಹೆಚ್ಚು ಪಟ್ಟು ಅಂದರೆ ಸೇ ೭೦ರಷ್ಟು ಕೃಷಿಯೋಗ್ಯವಾಗಿದ್ದರೂ ಭಾರತದಲ್ಲಿ ಮಾತ್ರ ಪರಿಸ್ಥಿತಿ ಕೃಷಿಗೆ ಅತೀ ವೈವಿಧ್ಯಮಯವಾದ ಹಾಗೂ ಉತ್ಕೃಷ್ಟವಾದ ಪರಿಸರವನ್ನು ಒದಗಿಸಿದೆ. ಈ ವಾತಾವರಣವೇ ಇಲ್ಲಿ ನೆಲ ನಂಬಿದವರನ್ನು ಹಾಗೂ ನಡುವಣ ಸಂಬಂಧವನ್ನು ಗಟ್ಟಿಗೊಳಿಸಿದೆ. ನೆಲದ ಸಂಬಂಧವೇ ನಾಗರಿಕತೆಯ ನೆಲೆಗಳ ಮುಖ್ಯಪ್ರಾಣ. ಹಾಗಾಗುವಂತಾಗಲು ಇಲ್ಲಿನ ನೆಲದ ವಿಕಾಸವೇ ಕಾರಣ. ಫಲವತ್ತಾದ ಮಣ್ಣನ್ನು ಇಲ್ಲಿನ ನೆಲದಲ್ಲಿ ಹರಹನ್ನಾಗಿಸಲು ಇಲ್ಲಿನ ಹವಾಮಾನ ಹಾಗೂ ಭೂಗರ್ಭದ ಖನಿಜಾಂಶಗಳು ಕಾರಣವಾಗಿವೆ. ಇವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಕೃಷಿ ಯೋಗ್ಯವನ್ನಾಗಿಸಿ, ಮಾನವರಿಗೆ ನೆಲದ ಸಂಬಂಧವನ್ನು ವಿಶೇಷಗೊಳಿಸಿವೆ. ಇಲ್ಲಿ ಸುಮಾರು ೬೦೦೦ ವರ್ಷದಿಂದಲೂ ಕೃಷಿಯನ್ನು ಪಾಲಿಸಿಕೊಂಡು ಬರುತ್ತಿದ್ದು, ನಿರಂತರವಾಗಿ ಸಾಗಿದೆ. ಇಲ್ಲಿನ ಮಣ್ಣು ವಿಕಾಸದ ಹಿನ್ನೆಲೆಯಲ್ಲಿ ಇತ್ತೀಚೆಗಿನದು. ಅಮೇರಿಕಾ ಆಫ್ರಿಕಾ, ಆಸ್ಟ್ರೇಲಿಯಾಗಳಂತೆ ಮಣ್ಣಿನ ವಿಕಾಸವು ಹಿಂದಿನದಲ್ಲ.

ನೆಲದೊಡನೆಯ ಒಡನಾಟ ನಾಗರಿಕತೆಯಷ್ಟೇ ಹಳೆಯದು. ಮಣ್ಣು ಮಾನವರ ನಡುವೆ ಅವಿನಾವ ಸಂಬಂಧವಿದೆ. ಅದೊಂದು ನಿರಂತರವಾದ ಬಾಂಧವ್ಯವನ್ನು ಸಮೀಕರಿಸಿದೆ. ಪ್ರಸ್ತುತ ವಿವರಗಳಲ್ಲಿ ಮಣ್ಣನ್ನು ನೆಲಕ್ಕೆ ಸಂವಾದಿಯಾಗಿ ಬಳಸಿದೆ. ಮಣ್ಣಿನ ಒಡನಾಟ ಹಾಗೂ ಸಂಪರ್ಕವನ್ನು ಒಂದರ್ಥದಲ್ಲಿ ನೆಲದ ಸಂಪರ್ಕಕ್ಕೂ ಅನೇಕ ಸಲ ಬಳಸುವುದು ಸಾಮಾನ್ಯವಾಗಿದೆ. ಹಾಗಾಗಿ ಪ್ರಸ್ತುತ ಲೇಖನದಲ್ಲಿ ನೆಲವನ್ನೂ ಮಣ್ಣನ್ನೂ ಒಂದೇ ರೀತಿಯ ಗ್ರಹಿಕೆಯಂತೆ ಬಳಸಿದೆ.

ನಿಸರ್ಗವು ಮಾನವರಿಗೆ ಒದಗಿಸಿರುವ ಸ್ವಾಭಾವಿಕ ಸಂಪನ್ಮೂಲಗಳಲ್ಲಿ ಮಣ್ಣು ಅತ್ಯಂತ ಮಹತ್ವದ್ದು. ನಮ್ಮ ಸಂಸ್ಕೃತಿಯೂ ಸಹ ಮಣ್ಣಿನ ಮಹತ್ವವನ್ನು ಅತ್ಯಂತ ಸಮರ್ಥವಾಗಿ ಗುರುತಿಸಿದೆ. ಹಾಗೆಂದೇ ಅನೇಕ ಕವಿಗಳು, ಸಂತರು ಈ ಮಣ್ಣಿನ, ಭೂಮಿಯ ಕುರಿತು ಗೌರವಪೂರ್ವಕವಾದ ಮಾತುಗಳನ್ನು ಆಡಿದ್ದಾರೆ. “ಮಣ್ಣಿಂದಲೇ ಸಕಲ ಸರ್ವ ಸಂಪತ್ತೂ” ಎಂದ ದಾಸರ ಮಾತು ಜನಪ್ರಿಯವೇ. ಮಣ್ಣಿಲ್ಲದಿದ್ದರೆ ಎಲ್ಲಾ ಜೀವ ರಾಶಿಗಳಿಗೂ ಯಾವುದೇ ಬೆಂಬಲ ಇರುತ್ತಿರಲಿಲ್ಲ ಎಂಬುದರ ಅರಿವು ನಮಗೀಗ ಉಂಟಾಗಿದ್ದರೆ ಆಶ್ಚರ್ಯವೇನಿಲ್ಲ. ರೈತರನ್ನು ಮಣ್ಣಿನ ಮಗ ಎಂದು ಕರೆಯುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದ ವಿಷಯವೇ. ನಿಜವಾದ ಅರ್ಥದಲ್ಲಿ ಕೇವಲ ರೈತರಷ್ಟೇ ಮಣ್ಣಿನ ಮಕ್ಕಳಲ್ಲ, ಮಾನವರೆಲ್ಲರೂ ಮಣ್ಣಿನ ಮಕ್ಕಳೇ. ಈ ನೆಲದ ಸಮುದಾಯದ ಮಕ್ಕಳಾಗಿ ಸಮುದಾಯದ ಬಗೆಗಿನ ನಿರ್ಲಕ್ಷ್ಯ ಅಪಾರ. ಆದಾಗ್ಯೂ ನಮಗೆ ಮಣ್ಣಿನ ಬಗೆಗಿನ ಅರಿವು ಕಾಳಜಿ ರಕ್ಷಣೆಯ ಬಗ್ಗೆ ತಳೆದಿರುವ ನಿಲುವು ಸಾಲದು ಎಂಬ ವಿಚಾರ ಗಮನಾರ್ಹ. ಈ ನೆಪದಲ್ಲಿ ಮಣ್ಣಿನ ಅರಿವನ್ನು ಮಹತ್ವವನ್ನು ಮಕ್ಕಳ ಆಸಕ್ತಿಯಲ್ಲಿ ಬೆರೆಸುವಂತೆ ಮಾಡಿ ಆ ಮೂಲಕ ನಿಸರ್ಗದ ಒಟ್ಟಾರೆ ಸಂರಕ್ಷಣೆಯನ್ನು ಹೆಚ್ಚಿಸುವುದು ಇಲ್ಲಿನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಅನೇಕ ಸಂದರ್ಭದಲ್ಲಿ ನಮಗೆ ಮಣ್ಣಿನ ಒಡೆತನ ಬರುವುದೇ ಪಿತ್ರಾರ್ಜಿತವಾಗಿ. ಹಾಗಾಗಿ ಅದರ ಒಡೆತನಕ್ಕೆ ಪಟ್ಟ ಕಷ್ಟದ ಅರಿವು ಇರುವುದಿಲ್ಲ. ನಿರಾಯಾಸವಾಗಿ ಬಂದ ಒಡೆತನಕ್ಕೆ ಬೆಲೆಯಾದರೂ ಹೇಗೆ ಅರಿವಾದಿತಲ್ಲವೇ? ಅದೇನೇ ಇರಲಿ ಮಣ್ಣಿನ ಮಹತ್ವದ ಬಗೆಗೆ ಎಲ್ಲ ರೈತರಿಗೂ ತಿಳಿದಿರುವುದಂತೂ ನಿಜ. ಎಲ್ಲಾ ಮಾಹಿತಿಯೂ ಗೊತ್ತಿರದಿದ್ದರೂ, ಅದೊಂದು ಮಹತ್ವದ ವಸ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಮಣ್ಣನ್ನು ಎಲ್ಲ ಜೀವಿಗಳ ಹೊಟ್ಟೆ ಎನ್ನುವರು. ಒಂದಲ್ಲಾ ಒಂದು ಕಾರಣಕ್ಕೆ ಎಲ್ಲಾ ಜೀವಿಗಳ ಆಹಾರವೂ ಮಣ್ಣಿನ ಸಹಾಯದಿಂದಲೇ ಉತ್ಪತ್ತಿಯಾಗುವುದರಿಂದ ಈ ಬಗೆಯ ವಿಶ್ಲೇಷಣೆ.

ಬಹಳ ಮುಖ್ಯವಾದ ವಿಚಾರಗಳಲ್ಲಿ ಮಣ್ಣಿನ ಕುರಿತು ಅರ್ಥಾತ್‌ ಈ ನೆಲದ ಕುರಿತು ಮಾನವರ ಆಸಕ್ತಿ ಮುಖ್ಯವಾದುದು. ಅದರಲ್ಲೂ ಪ್ರಮುಖವಾಗಿ ನಮ್ಮ ನೆಲೆದ ಬಗೆಗೆ ಬದಲಾಗುತ್ತಿರುವ ಗ್ರಹಿಕೆ ಮತ್ತು ಅದನ್ನು ಉಳಿಸಿಕೊಳ್ಳಲು ತೋರುತ್ತಿರುವ ಕಾಳಜಿ ಅಲ್ಲದೆ ಬದಲಾಗುತ್ತಿರುವ ವಾತಾವರಣದಲ್ಲಿ ಅದರ ಅಸ್ತಿತ್ವ ಇವು ಮಣ್ಣು ಮತ್ತು ಮಾನವರ ಸಂಬಂಧವನ್ನು ಅರಿಯುವಲ್ಲಿ ವಿಶೇಷವಾಗಿವೆ. ಒಂದು ಕಾಲಕ್ಕೆ ಮಣ್ಣಿನ ಸಂಬಂಧವೇನಿದ್ದರೂ ಅದರ ಮೇಲೆ ಬೆಳೆವ ಬೆಳೆಯನ್ನೇ ಪ್ರಮುಖವಾಗಿಟ್ಟುಕೊಂಡು ಜೊತೆಗೆ ತಮ್ಮ ವಾಸಸ್ಥಳದ ಪರಿಧಿಯಲ್ಲಿ ಮಾತ್ರ ಹೆಚ್ಚಿನ ಆಸಕ್ತಿ ಇದ್ದಿತು. ಅದರಿಂದು ಅದು ಕೇವಲ ಇಷ್ಟೇ ಆಗಿರದೆ, ಅದರ ವಿಸ್ತಾರವು ಹಿರಿದಾಗಿದೆ. ನಗರಿ ಕರಣದ ವ್ಯಾಮೋಹದಿಂದ ಅದರ ಮಹತ್ವ ಹೆಚ್ಚಿನ ತಿರುವು ಪಡೆದಿದೆ. ಬದಲಾಗುತ್ತಾ ನಡೆದ ಈ ಗ್ರಹಿಕೆಯ ವಿಸ್ತಾರವು ತೀರ ಭಿನ್ನವಾದ ಹಾಗೂ ಅತ್ಯಂತ ದುಬಾರಿಯಾದ ಮಾನವರ ಆಶಯಗಳಲ್ಲಿ ಒಂದಾಗಿದೆ. ಯಾರೋ ಓರ್ವ ರಾಮಾಯಣ ಮತ್ತು ಮಹಾಭಾರತವನ್ನು ಒಂದೆ ಮಾತಲ್ಲಿ ಹೇಳು ಎಂದು ತನ್ನ ಸ್ನೇಹಿತನ್ನು ಕೇಳಿದನಂಥೆ. ಅದಕ್ಕೆ ಆತನ ಗೆಳೆಯ ಹೆಣ್ಣಿಗಾಗಿ ಸತ್ತವನ ಮತ್ತು ಮಣ್ಣಿಗಾಗಿ ಸತ್ತವನ ಕತೆ ಎಂದನಂತೆಹೀಗೆ ಮಣ್ಣಿಗಾಗಿಯೇ ಸತ್ತ ಉದಾಹರಣೆಗಳು ನಮ್ಮ ಸಾಹಿತ್ಯಿಕ ದಾಖಲೆಗಳಲ್ಲಿ ಸಾಕಷ್ಟು ಸಿಗುತ್ತವೆ. ಚರಿತ್ರೆಯೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಹುಶಃ ಎಲ್ಲ ಚಾರಿತ್ರಿಕ ಹಿಂಸೆಗಳಲ್ಲಿ ಅಂದರೆ ಬಹುಪಾಲು ಯುದ್ಧಗಳು ಎಲ್ಲ ಅರ್ಥದಲ್ಲಿಯೂ ಮಣ್ಣಿಗಾಗಿ ನಡೆದ ಹೋರಾಟ ಹಾಗೂ ಸಾವಿನ ಸಂಗತಿಗಳೇ ಆಗಿವೆ. ನೆಲದ ಗಡಿಯ ಗುರುತುಗಳು ನಮ್ಮ ಆಸ್ತಿಯ ಪರಿಧಿಗಲಾಗಿ ಅವುಗಳ ನಡುವೆ ನಿರಂತರ ಸಂಘರ್ಷವನ್ನು ಸಾಕಿವೆ. ಈ ನಿರಂತರತೆಯು ನಮ್ಮ ನೆಲದ ವ್ಯಾಮೋಹ ಮತ್ತು ಸಂಬಂಧಗಳನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಾ, ಬದಲಾಯಿಸುತ್ತಾ, ವಿಕಾಸಗೊಳಿಸಿವೆ. ಸಂಬಂಧಗಳು ತಮ್ಮ ಬಂಧಗಳನ್ನು ನಿರಂತರವಾಗಿ ಚಲನಶೀಲವಾಗಿಟ್ಟು ತನ್ನ ಪ್ರಭಾವವನ್ನು ಬೀರುತ್ತಾ ಬಂದಿವೆ. ಕಳೆದ ಕೇವಲ ಒಂದೆರಡು ದಶಕಗಳಲ್ಲಿ ಆದಂತಹ ಬದಲಾವಣೆಗಳು ಬಹಳ ಮಹತ್ವವನ್ನು ಪಡೆದಿವೆ. ನವನಾಗರಿಕತೆಯೂ ಈ ನೆಲದ ವ್ಯಾಮೋಹದಲ್ಲಿ ತನ್ನ ನಿಲುವುಗಳನ್ನು ಆಧುನೀಕರಣಗೊಳಿಸಿ ವ್ಯವಸ್ಥಿತವಾಗಿ ಮುನ್ನೆಡೆಯಿಸಿದೆ.

ಮಣ್ಣಿನ ವೈಜ್ಞಾನಿಕ ಅಧ್ಯಯನಗಳು ಸಹ ಇದೇ ಹಿನ್ನೆಲೆಯ ದಾಖಲೆಗಳನ್ನು ಅಂದರೆ ಅದರ ಅತ್ಯಂತ ಚಲನಶೀಲ ಗುಣವನ್ನು ನಿರೂಪಿಸಿವೆ. ಕೇವಲ ಎರಡು ದಶಕಗಳ ಅವಧಿಯ ಮಧ್ಯದಲ್ಲಿ ಜಾಗತಿಕವಾಗಿ ಮಣ್ಣಿನ ಅಧ್ಯಯನವನ್ನು ವಿಶ್ಲೇಷಿಸಿದ ಪ್ರಮುಖ ದಾಖಲೆಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಎರಡೂ ಅಧ್ಯಯನಗಳು ಮಣ್ಣಿನ ಅಧ್ಯಯನವನ್ನು ಜಾಗತಿಕ ವಿಜ್ಞಾನದ ಮಹತ್ವದ ದಾಖಲಾತಿಯ ಪತ್ರಿಕೆಗಳಾಗಿದ್ದು ಈ ಉದಾಹರಣೆಗಳು ಪ್ರಮುಖವಾಗಿ ಕಾಣುತ್ತವೆ. ಈ ಎರಡು ದಾಖಲೆಗಳ ತಲೆ ಬರಹಗಳು ಕೊಡುವ ವೈವಿಧ್ಯತೆಯೇ ಎರಡೂ ದಶಕಗಳ ಅಂತರದ ಗ್ರಹಿಕೆಗಳ ೧೯೮೫ರಲ್ಲಿ ಮಣ್ಣು ವಿಜ್ಞಾನ ಪತ್ರಿಕೆ (Journal of Soil Science) ಯಲ್ಲಿ ಟಿಂಕರ್, ಪಿ.ಬಿ. ಅವರು ಬದಲಾಗುತ್ತಿರುವ ಜಗತ್ತಿನಲ್ಲಿ ಮಣ್ಣು ವಿಜ್ಞಾನ (Soil Science in a Changing world) ಎಂದು ವಿಶ್ಲೇಷಿಸಿದರೆ ೨೦೦೫ರಲ್ಲಿ ಜೊಹನ್‌ ಬೊಮ ಅವರು ಬೇಸಾಯಶಾಸ್ತ್ರದ ಅಭಿವೃದ್ಧಿಗಳು (Advances in Agronomy) ಎನ್ನುವ ಪತ್ರಿಕೆಯಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಮಣ್ಣು ವಿಜ್ಞಾನಿಗಳು (Soil Scientists in a Changing World) ಎಂದು ಜಾಗತಿಕ ವಿಶ್ಲೇಷಣೆಯನ್ನು ಮಾಡುತ್ತಾರೆ. ಈ ಎರಡೂ ಪತ್ರಿಕೆಗಳು ವೈಜ್ಞಾನಿಕ ಜಗತ್ತಿನಲ್ಲಿ ಅದರಲ್ಲೂ ಮಣ್ಣು ಕುರಿತ ಅಧ್ಯಯನದಲ್ಲಿ ಅತ್ಯಂತ ಮಹತ್ವದ ಪತ್ರಿಕೆಗಳು ಇಲ್ಲಿ ಇವುಗಳನ್ನು ಪ್ರಸ್ತಾಪಿಸುವುದಕ್ಕೆ ಕಾರಣವಿದೆ. ಅಂದರೆ ವೈಜ್ಞಾನಿಕ ಜಗತ್ತಿನ ಮಣ್ಣಿನ ಅಧ್ಯಯನಗಳಲ್ಲೂ ಮಾನವರ ಪಾತ್ರದ ಪ್ರಭಾವಕ್ಕೆ ಒಳಗಾಗುವ ಮಹತ್ತರವಾದ ನಿಲುವನ್ನು ಕೊಡುತ್ತವೆ. ಈ ಗ್ರಹಿಕೆಯೇ ವ್ಯಕ್ತಿ ಕೇಂದ್ರಿತವಾಗಿದ್ದು, ಸಮುದಾಯ ಕೇಂದ್ರಿತ ಮಣ್ಣುಗಳ ಉದ್ದೇಶವನ್ನೇ ಬದಲಾಯಿಸುವ ಅಪಾಯವನ್ನು ಸೂಚಿಸುತ್ತವೆ. ಹಾಗೇನೆ ಭಾರತೀಯ ಸಂದರ್ಭದಲ್ಲಿಯೂ ಒಂದು ದಾಖಲೆಯು ಮಣ್ಣು ವಿಜ್ಞಾನ ಸಂಜೆ (The evening as soil science) ಎಂಬ ತಲೆಬರಹದಲ್ಲಿ ಪ್ರಕಟವಾಗಿದೆ. ಹೆಚ್ಚೂ ಕಡಿಮೆ ಮಣ್ಣುಗಳ ಕುರಿತು ಇರುವ ಆಸಕ್ತಿಯು ವೈಜ್ಞಾನಿಕವಾಗಿಯೂ ಕುಂಠಿತವಾಗಿ ಅವುಗಳ ಮಹತ್ವದಲ್ಲಿ ಮಾನವರ ನಿರಾಸಕ್ತಿಯನ್ನು ಪ್ರದರ್ಶಿಸುತ್ತಿದ್ದೇವೋ ಎಂಬ ಅನುಮಾನ ಕಾಡಲು ಆರಂಭಿಸುತ್ತಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಮಣ್ಣು ಮತ್ತು ಮಾನವರ ಸಂಬಂಧಗಳನ್ನು ಪುನರ್ ಅಧ್ಯಯನಕ್ಕೆ ಒಳಪಡಿಸುವ ಮಹತ್ವವಾದ ಆಶಯವನ್ನು ಪ್ರತಿಪಾದಿಸುತ್ತದೆ. ಏಕೆಂದರೆ ಈಗಾಗಲೆ ನಿರೂಪಿತ ಸಂಬಂಧಗಳು ಸಾಕಷ್ಟು ಮಹತ್ವವನ್ನು ಶೃತಪಡಿಸಿದ್ದರೂ ನಮ್ಮ ನಿರಾಸಕ್ತಿಯ ದಾಖಲೆಗಳು ಎಚ್ಚರದ ಘಂಟೆಗಳಾಗಿ ಬಾರಿಸುತ್ತಿವೆ. ಈ ನಿರಾಸಕ್ತಿಯ ಫಲಗಳನ್ನು ಅನೇಕ ವಿಧದಲ್ಲಿ ಕಾಣಲಾಗುತ್ತಿದ್ದು ಅವೆಲ್ಲಾ ನಮ್ಮ ವಾತಾವರಣದ ಮೇಲೂ, ದೈನಂದಿನ ಬದುಕಿನ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತಿರುವುದು ಕಾಣುತ್ತಿದ್ದೇವೆ. ಆಧುನಿಕತೆಯಂತೂ ಈ ನಿರಾಸಕ್ತಿಯನ್ನು ಅತ್ಯಂತ ವೇಗದಲ್ಲಿ ಬಿತ್ತುತ್ತಿರುವ ಸಂದರ್ಭವನ್ನು ನೋಡುತ್ತಿದ್ದೇವೆ. ಇರುವ ಆಸಕ್ತಿಯು ಕೇವಲ ವ್ಯವಹಾರಿಕವಾಗಿದ್ದು, ಒಂದು ಆಸ್ತಿಯಾಗಿ, ಲಾಭದಾಯಕವಾಗಿರುವ ಮಟ್ಟಿಗೆ ಮಾತ್ರ ಅದನ್ನು ಬಯಸಲಾಗುತ್ತದೆ. ಮಣ್ಣನ್ನು ಈ ನೆಲವನ್ನು ನಮಗೆ ಸೇರಿದ ಲಾಭಕ್ಕಾಗಿಯೇ ಸೃಷ್ಟಿಸಿರುವಂತೆ ಘೋಷಿಸುತ್ತಿರುವ ಬಗೆಗೆ ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಯವರ ಮಾತು ನೆನಪು ಮಾಡಿಕೊಳ್ಳುವುದು ಈ ಸಂದರ್ಭದಲ್ಲಿ ಉಚಿತವೆನಿಸುತ್ತಿದೆ. ಭೂಮಿಯು ನಮ್ಮೆಲ್ಲಾ ಅವಶ್ಯಕತೆಗಳನ್ನು ಪೂರೈಸಬಲ್ಲದು, ಆದರೆ ನಮ್ಮ ಆಸೆಗಳನ್ನೆಲ್ಲ”. ಈ ಮಾತು ಈ ನೆಲ ನಮ್ಮದಲ್ಲ, ನಾವು ಈ ನೆಲಕ್ಕೇ ಸೇರಿದವರು ಎಂದು ಪರಿಭಾವಿಸುವುದನ್ನೂ ಹಾಗೇನೇ ನಮ್ಮ ಮುಂದಿನ ಪೀಳಿಗೆಯಿಂದ ಪಡೆದ ಬಳುವಳಿ ಎಂದುಕೊಳ್ಳುವ ನಡೆಯನ್ನು ಬಲವಾಗಿ ಸಮರ್ಥಿಸುತ್ತದೆ.

ಈ ಆಸೆಗಳ ಬೆನ್ನು ಹತ್ತಿದ ಸಮಾಜವು ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವಲ್ಲಿ ತೋರುವ ದೀರ್ಘ ನಿರಾಸಕ್ತಿಯು ಆತಂಕಕ್ಕೆ ಎಡೆಮಾಡಿದೆ. ಅಂತಹ ಆತಂಕಗಳ ಕಾರಣದಿಂದಾಗಿಯೇ ಜಾಗತಿಕ ಮಟ್ಟದಲ್ಲೂ ಅನೇಕ ಬಗೆಯ ವಿಶೇಷ ಒತ್ತುಗಳನ್ನು ಈ ನೆಲದ, ಜಲದ ಹಾಗೂ ವಾತಾವರಣದ ಆರೋಗ್ಯವನ್ನು ಕಾಪಾಡುವಲ್ಲಿ ಕಾಣಬಹುದು. ಈ ದೆಸೆಯಲ್ಲಿ, ಅಂತಹ ಮಹತ್ವದ ವಿಷಯಗಳನ್ನೂ ಜತೆಯಲ್ಲಿ ಅವುಗಳ ಆಚೆ ಇರುವಂತಹ ಸಂಗತಿಗಳನ್ನು ವೈಜ್ಞಾನಿಕ ಆಶಯದಿಂದ, ಸಾಮಾಜಿಕ ಕಾಳಜಿಯಿಂದ, ಪರಿಸರದ ಹಿತದೃಷ್ಟಿಯಿಂದ ಈ ಪುಟ್ಟ ಟಿಪ್ಪಣಿಯಲ್ಲಿ ವಿಮರ್ಶಿಸಿದೆ. ಅವನ್ನು ಹಲವು ಆಯಾಮಗಳ ಅನುಭವಗಳಿಂದ ಅಧ್ಯಯನಗಳಿಂದ, ಸಮತೂಗಿಸಿ ಪ್ರಮುಖವಾದವನ್ನು ಹೆಕ್ಕಿ, ಕನ್ನಡದ ಓದುಗರಿಗೆ ಹಂಚುವ ಒತ್ತಾಸೆಯನ್ನು ಹೊಂದಿದೆ. ಬಹು ಮುಖ್ಯವಾಗಿ ಕೆಲವೇ ದಶಕಗಳಿಂದ ವ್ಯವಸ್ಥಿತವಾಗಿ ವಿಕಸನಗೊಂಡ ಕೃಷಿನಿರಾಸಕ್ತಿಯಿಂದ ಹಿನ್ನೆಡೆ ಪಡೆದ ಮಣ್ಣಿನ ಸಂಬಂಧಗಳು, ಇಂದು ತುಂಡು ನೆಲವನ್ನು ಪಡೆಯುವುದೇ -ಅದರಲ್ಲೂ ಬದಲಾದ ಆಧುನಿಕ ಜಗತ್ತಿನ “ಎಸ್ಟೇಟ್‌ ವ್ಯವಹಾರ” ದಲ್ಲಿ ಕಷ್ಟ ಎನ್ನುವಂತಾಗಿದೆ. ಒಂದೆಡೆ ನೆಲದ ನಿರಾಸಕ್ತಿ ನಿಸರ್ಗ ದತ್ತವಾಗಿ ವಿಕಸನಗೊಂಡ ಆಹಾರದ ಉತ್ಪನ್ನಗಳ ವೃತ್ತಿಯ ಮೇಲೂ ಪರಿಣಾಮ ಬೀರುತ್ತಿದೆ. ಮತ್ತೊಂದಡೆ, ರಾಜಕೀಯವಾಗಿ ನೆಲದ ವ್ಯವಹಾರಗಳೆ ಬಲ ಪ್ರದರ್ಶನದ ಆಯಾಮಾಗೊಂದ ವಾತವರಣ ಕಾಣುತ್ತಿದೆ. ಈ ದ್ವಂದ್ವ ನೆಲದ ಮೇಲಣ ಸಮುದಾಯಗಳನ್ನು ಮತ್ತು ಅವುಗಳು ತಮ್ಮ ವಾಸ್ತವ್ಯದ ಮೇಲೆಯಿರಿಸಿರುವ ಸಂಬಂಧಗಳನ್ನು ವ್ಯತ್ಯಯಗೊಳಿಸುವುದರಲ್ಲಿ ನಿಸ್ಸಂಶಯ. ಆದ್ದರಿಂದ ಈ ನಿರಾಸಕ್ತಿ ಮತ್ತು ವ್ಯಾಮೋಹದ ನಡುವಿನ ಸಮೀಕರಣವನ್ನು ವಿವಿಧ ರೀತಿಯಲ್ಲಿ ಅರ್ಥ ಮಾಡಿಕೊಂಡು ನಿಸರ್ಗಕ್ಕೂ ಮಾನವರ ಬದುಕಿಗೂ ಹತ್ತಿರವಾದ, ಸಾಮಾಜಿಕವಾಗಿ, ಜೈವಿಕವಾಗಿ ಅರ್ಥಪೂರ್ಣವಾದ ನಡೆಯನ್ನು ಹೊಂದುವುದು ಅವಶ್ಯಕವಾಗಿದೆ. ಇದನ್ನು ಈ ದೃಷ್ಟಿಕೋನದಿಂದ ಜನಪರವಾದ ನಿಲುವುಗಳು ಮತ್ತು ವೈಜ್ಞಾನಿಕವಾದ ಸತ್ಯಗಳನ್ನು ಅಳವಡಿಸಿ ಪರಿಹಾರದ ಆಶಯದಲ್ಲಿ ನಡೆಸುವ ಹುಡುಕಾಟ ಇದಾಗಿದೆ. ಅಂತಹ ಮಹತ್ವಗಳನ್ನು ಸಾಧ್ಯತೆಗಳನ್ನು ಅರಸುವುದೇ ಇಲ್ಲಿನ ಉದ್ದೇಶವಾಗಿದೆ.

ಮಣ್ಣಿನೊಡನೆ ಮಾನವರ ಸಂಬಂಧಗಳು

ನಾಗರೀಕತೆಗಳ ಹುಟ್ಟು ಅಥವಾ ಆರಂಭ ಈ ಮಣ್ಣಿನ ಗುಣವನ್ನು ಆಧರಿಸಿಯೇ ನಡೆದಿದೆ. ಜಗತ್ತಿನ ಎಲ್ಲಾ ನಾಗರೀಕತೆಗಳೂ ಫಲವತ್ತಾದ ಮಣ್ಣಿರುವ ಜಾಗಗಳಲ್ಲಿ ಆದವುಗಳೇ ಆಗಿವೆ. ನದಿ ಬಯಲುಗಳು ನೀರಿನ ತಾಣಗಳು ಎನ್ನುವ ಸಾಮಾನ್ಯ ಅಂಶ ಹೊರತು ಪಡಿಸಿದರೆ ಅವು ಪ್ರಮುಖವಾಗಿ ಫಲವತ್ತಾದ ನೆಲಗಳೂ ಹೌದು ಎಂಬುದು ಮುಖ್ಯವಾಗಿದೆ. ಎಲ್ಲಾ ನಾಗರೀಕತೆಗಳ ನೆಲವೂ ಮಾನವರ ಸಂಬಂಧವನ್ನು ಆಯಾ ನೆಲದೊಂದಿಗೆ ಗಟ್ಟಿಗೊಳಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ನಾಗರೀಕತೆ ಎನ್ನುವುದು ಕೇವಲ ವಿಕಾಸದ ಹಿನ್ನೆಲೆಯಲ್ಲಿ ಮಾತ್ರವಷ್ಟೇ ಅಲ್ಲ ಆಧುನಿಕ ಪ್ರಪಂಚದ ನಾಗರೀಕ ಸಮಾಜದ ಕಟ್ಟುವಿಕೆಯೂ ನೆಲದ ಗ್ರಹಿಕೆಯನ್ನು ಆದರಿಸಿಯೇ ನಡೆದಿದೆ. ಈ ಕಟ್ಟುವಿಕೆಯು ಮಾನವರು ಮಣ್ಣಿನೊಡನೆ ಗ್ರಹಿಸಿದ ಆ ಮೂಲಕ ವಿಕಸಿಸಿಗೊಂಡ ಸಂಬಂಧಗಳೊಡನೆ ನೇರವಾದ ಪ್ರಭಾವಕ್ಕೆ ಒಳಪಟ್ಟಿವೆ. ಈ ಬಗೆಯ ಸಂಬಂಧಗಳು ಎಂದರೆ ಭೌತಿಕ ಸಂಬಂಧಗಳು, ರಸಾಯನಿಕ ಸಂಬಂಧಗಳು, ಜೈವಿಕ ಸಂಬಂಧಗಳು, ಮತ್ತು ಭಾವನಾತ್ಮಕ ಸಂಬಂಧಗಳು.

ಭೌತಿಕ ಸಂಬಂಧಗಳು: ಮನುಷ್ಯನೋರ್ವನ ಪರಿಚಯ ಆರಂಭವಾಗುವುದೇ ಆತ ಯಾವ ಊರಿನವನು ಎಂಬ ಪ್ರಶ್ನೆಯಿಂದ. ಅಂದರೆ ಯಾವ ನೆಲಕ್ಕೆ ಸೇರಿದವರು ಎಂಬರ್ಥದಲ್ಲಿ. ಎಲ್ಲಿಗೆ ಸೇರಿದವರು ಎಂಬ ವಿಶ್ಲೇಷಣೆಯು ಅವರು ಹುಟ್ಟಿ ಬೆಳೆದ ಅಥವಾ ಬದುಕನ್ನು ಸಾಗಿಸಿದ ನೆಲವನ್ನು ಪ್ರತಿನಿಧಿಸುತ್ತದೆ. ಆ ನೆಲದ ಭಾಗವಾಗಿ ಆತನ ಪರಿಚಯವಾಗುತ್ತದೆ. ಭೌತಿಕ ಸಂಬಂಧಗಳು ನೇರವಾಗಿ ಮಾನವರು ನೆಲದೊಡನೆ ಹೊಂದಿದ ಹೆಚ್ಚೂಕಡಿಮೆ ತಾವು ಹುಟ್ಟಿನಿಂದ, ವಾಸದ ಹಿನ್ನೆಲೆಯಿಂದ ಅಥವಾ ತಮ್ಮ ಜೀವನವನ್ನು ಕಟ್ಟಿಕೊಂಡ ಬಗೆಯಿಂದ ರೂಪುಗೊಂಡದ್ದು. ಮುಖ್ಯವಾಗಿ ತಾವು ನೆಲೆಕಂಡ ನೆಲವೆಂದರೂ ಆದೀತು. ಈ ಭೌತಿಕ ಸಂಬಂಧಗಳು ಅವರು ನೇರವಾಗಿ ತಮ್ಮ ನೆಲೆ ಅಥವಾ ಬಹುವಾಗಿ ಇರುವ ಸ್ಥಳವನ್ನು ಒಳಗೊಂಡದ್ದಾಗಿದೆ.

ಒಂದು ನೆಲಕ್ಕೆ ಸೇರಿದವರು ಅದನ್ನು ಬಿಡಬೇಕಾದ ಅನಿವಾರ್ಯ ಬಂದಾಗ ಈ ಭೌತಿಕ ಸಂಬಂಧ ತೀವ್ರವಾಗಿ ಗ್ರಹಿಕೆಗೆ ಬರುತ್ತದೆ. ನೆಲದ ಭೌತಿಕ ಸಂಬಂಧವು ಅನೇಕ ರೀತಿಯಲ್ಲಿ ವ್ಯಕ್ತವಾಗುವುದಿದೆ. ಅಂದರೆ ಭಿನ್ನ, ಭಿನ್ನವಾಗಿ ಅದು ಗೋಚರವಾಗುವುದನ್ನು ಕಾಣಬಹುದು. ವಿವಿಧ ವೃತ್ತಿಗಳನ್ನು ಆಶ್ರಯಿಸಿದವರಿಗೆ ವಿವಿಧ ರೀತಿಯಲ್ಲಿ ಭೌತಿಕ ಸಂಬಂಧವು ಕಾಡುತ್ತದೆ. ಬಹು ಮುಖ್ಯವಾದ ವಿಚಾರಯೊಂದಿದೆ. ಕವಿಗೆ ತನ್ನ ಜನ್ಮಸ್ಥಳ ಮುಖ್ಯವಾದರೆ, ರಾಜನಿಗೆ ರಾಜಧಾನಿ ಅಥವಾ ರಾ ಜ್ಯಬಾರ ಮಾಡಿದ ಸ್ಥಳ ಮುಖ್ಯವಾಗುವುದು. ಆದರೆ ಸಂತನಿಗೆ ಸಮಾಧಿಸ್ಥಳ ಮುಖ್ಯವಾಗಿರುವುದು. ಹೀಗೆ ಈ ಮೂರೂ ನಿದರ್ಶನಗಳೂ ಅವರವರ ಭೌತಿಕ ಸಂಬಂಧಗಳನ್ನು ನಿರೂಪಿಸುತ್ತವೆ.

ಇದಲ್ಲದೆ ಜನಸಾಮಾನ್ಯರಿಗೂ ತಮ್ಮ ನೆಲದ ಭೌತಿಕ ಸಂಬಂಧಗಳನ್ನು ಗುರುತಿಸುತ್ತೇವೆ. ಹಲವು ಸಾಧಕರು ತಮ್ಮ ತಮ್ಮ ಸಾಧನಾ ಸ್ಥಳಗಳ ಬಗೆಗೆ ಭೌತಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ತೀವ್ರವಾಗಿ ಹೊಂದಿರುತ್ತಾರೆ. ಆಯಾ ಸ್ಥಳಗಳ ಬಗೆಗೆ ಭಾವನಾತ್ಮಕವಾದ ಬಾಂಧವ್ಯವನ್ನು ಅನುಭವಿಸುತ್ತಾರೆ. ಹಾಗೆಯೇ ಭಾರತೀಯ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ತಾಯಿಯ ಮನೆ ಅಥವಾ ತವರು ಮನೆ ಅಲ್ಲದೆ ಗಂಡನ ಮನೆಯ ಎರಡೂ ಸ್ಥಳಗಳ ಭೌತಿಕ ಸಂಬಂಧವನ್ನು ಅನುಭವಿಸುತ್ತಾರೆ. ಅನೇಕ ಸಾಂಪ್ರದಾಯಿಕ ಸಂದರ್ಭಗಳನ್ನು ನೆಪಮಾಡಿ ಆಯಾ ಸ್ಥಳಗಳನ್ನು ಸಂದರ್ಶಿಸುವ ಭೌತಿಕ ನಿಲುವನ್ನೂ ಕಾಣುತ್ತೇವೆ. ತವರು ಮನೆಯ ಭೌತಿಕ ಸಂಬಂಧಕ್ಕೆಂದೇ ಅನೇಕ ಹಬ್ಬಗಳು ವಿಕಾಸಗೊಂಡಿರುವ ಹಿನ್ನೆಲೆಯುಳ್ಳ ಸಮಾಜ ನಮ್ಮದು. ಶ್ರಾವಣ ಮಾಸವೇ ಪೂರ್ತಿಯಾಗಿ ಹೆಣ್ಣುಮಕ್ಕಳು ತಮ್ಮ ತವರನ್ನು ನೆಪಮಾಡಿ ಸಂದರ್ಶಿಸಲು ಕಾರಣವನ್ನು ಕೊಟ್ಟಿದೆ. ಈ ಸಂಪ್ರದಾಯಗಳೆಲ್ಲಾ ಕಾಲಾಂತರದಲ್ಲಿ ಬದಲಾಗುತ್ತಾ ನಡೆದಿರುವುದನ್ನೂ ಕಾಣುತ್ತೇವೆ. ಏನೆಂದರೂ ಭೌತಿಕ ಸಂಬಂಧಗಳಂತೂ ನೆಲದ ಜತೆ ಒಂದು ಊರಿನ ರೂಪದಲ್ಲಿ ಉಳಿದಿರುವುದಂತೂ ಸತ್ಯ. ಈ ಭೌತಿಕ ಸಂಬಂಧವು ತಾವು ನೆಲಕ್ಕೆ ಸೇರಿದವರೆಂಬ ಭಾವವನ್ನು ಹೇಳುವ ಸಾಧನವಾಗಿದ್ದು ಅದನ್ನು ಪ್ರಸ್ತುತ ಅಲೆಮಾರಿತನವನ್ನು ಸೃಜಿಸುವ ಸಂದರ್ಭದಲ್ಲಿ ಗಟ್ಟಿಗೊಳಿಸುವ ಬಲವಾದ ಅವಶ್ಯಕತೆಯಂತೂ ಈ ಆಧುನಿಕ ಸಮಾಜಕ್ಕೆ ಇದೆ.

ರಸಾಯನಿಕ ಸಂಬಂಧಗಳು: ಮಾನವರನ್ನು ತುಂಬಾ ಸರಳವಾಗಿ ಮಣ್ಣಿನ ಭಾಗವಾಗಿ ನೋಡಲು ಸಾಧ್ಯವಿದೆ. ಕಾರಣ ರಸಾಯನಿಕವಾಗಿ ಮಣ್ಣು ಮತ್ತು ಮಾನವರ ಸಂಬಂಧ ಬಹಳ ಗಾಢವಾಗಿದೆ. ಅನೇಕಾನೇಕ ರಸಾಯನಿಕ ವಸ್ತುಗಳ ಸಂಕೀರ್ಣ ವ್ಯವಸ್ಥೆಯಾದ ಮಾನವರ ಶರೀರಕ್ಕೇ ಅಗತ್ಯವಾದ ಎಲ್ಲಾ ಮೂಲವಸ್ತುಗಳನ್ನು ಹೆಚ್ಚೂಕಡಿಮೆ ಮಣ್ಣಿನಿಂದಲೇ ಪಡೆದು ಮಾನವರ ದೇಹ ಉಂಟಾಗಿದೆ. ನಾವು ಮಾನವ ಶರೀರವನ್ನು ರಸಾಯನಿಕವಾಗಿ ವಿಶ್ಲೇಷಿಸಿದರೆ ಅದರಲ್ಲಿ ಕಾಣಬರುವ ವಿವಿಧ ಮೂಲವಸ್ತುಗಳಲ್ಲಿ ಬಹುಪಾಲು, ಮಣ್ಣಿನಿಂದ ಪಡೆದವುಗಳಾಗಿವೆ. ಕೆಲವನ್ನು ನೀರಿನಿಂದ ಪಡೆದಿರುತ್ತೇವೆ. ತಾಯಿಯ ಗರ್ಭದಲ್ಲೂ ತಾಯಿಯು ಉಣ್ಣುವ ಆಹಾರದ ಆಧಾರದಲ್ಲೇ ಹೊಟ್ಟೆಯಲ್ಲಿನ ಶಿಶುವು ಬೆಳೆಯುತ್ತಾ ಮಗುವಾಗಿ ಹೊರಬಂದು, ದೊಡ್ಡದಾಗುತ್ತದೆ. ಇಡೀ ಜೀವನದ ಆಹಾರವು ಒಂದಲ್ಲಾ ಒಂದು ಅರ್ಥದಲ್ಲಿ ಮಣ್ಣಿನ ಆಶ್ರಯದಿಂದ ಬೆಳೆದು ಬಂದ ಕ್ರಮವಾಗಿದೆ.

ಕೃಷಿಯು ಜೀವ ಜಾತಿಯ ಹೊಟ್ಟೆ ಹೊರೆಯುವ ಜವಾಬ್ದಾರಿಯನ್ನು ಹೊತ್ತಿರುವ ಹಿನ್ನೆಲೆಯಲ್ಲಿ-ಮಣ್ಣನ್ನು ಎಲ್ಲಾ ಜೀವಿಗಳ ಹೊಟ್ಟೆ-ಎಂದೇ ವ್ಯಾಖ್ಯಾನಿಸುತ್ತಾರೆ. ರಸಾಯನಿಕ ಚಕ್ರಗಳ ಮೂಲಕ ಮತ್ತು ಜೈವಿಕ ಚಕ್ರಗಳ ಮೂಲಕ ಮಣ್ಣಿಗೆ ತನ್ನ ಫಲವತ್ತತೆಯನ್ನು ಕಾಪಾಡಿಕೊಳ್ಳುವ ಮತ್ತು ಆ ಮೂಲಕ ನಿರಂತರವಾಗಿ ತನ್ನ ಮೇಲೆ ಬೆಳೆದ ಗಿಡಗಳಿಗೆ ಪೋಷಕಾಂಶಗಳನ್ನು ಒದಗಿಸುವ ಗುಣವಿದೆ. ಅದಕ್ಕೆಂದೇ ತನ್ನಲ್ಲಿ ನೀರನ್ನೂ ಹಿಡಿದಿಟ್ಟುಕೊಂಡು ತೇವಾಂಶವನ್ನು ಸಸಿಗಳಿಗೆ ಒದಗಿಸುವ ಕ್ರಿಯೆಯನ್ನು ಅನುಸರಿಸುತ್ತದೆ. ಇದಕ್ಕಾಗಿ ಮಣ್ಣಿನಲ್ಲಿ ಸಾಕಷ್ಟು ಸಾವಯವ ವಸ್ತು ಅಥವಾ ಇಂಗಾಲದ ವಸ್ತು ಇರಬೇಕಾಗುತ್ತದೆ. ನಿಸರ್ಗದಲ್ಲಿ ಇದು ಯಾವುದೇ ಜೀವಿ ಸತ್ತ ಮೇಲೆ ಮರಳಿ ಮಣ್ಣಿಗೇ ಸೇರುವ ಸರಳ ತತ್ವದ ಆಧಾರದಲ್ಲಿ ನಡೆಯುತ್ತಿರುತ್ತದೆ. ಅದೇ ರೀತಿಯಲ್ಲಿ ಸಾಧ್ಯವಾದಷ್ಟು ಉಳಿಕೆಗಳನ್ನು ಮರಳಿ ಮಣ್ಣಿಗೇ ಸೇರಿಸುವುದರ ಮೂಲಕ ಕಾಪಾಡಿಕೊಳ್ಳಬೇಕು. ಯಾವುದೇ ಸಸಿಯು ತನಗೇನು ಬೇಕೋ ಅದನ್ನು ತಾನು ಹುಟ್ಟಿ ಬೆಳೆದ ನೆಲದಿಂದ ಪಡೆದಿರುತ್ತದೆ. ಆದ್ದರಿಂದ ಭೂಮಿಗೆ ಸಾಕಷ್ಟು ಹುಳು ತಿಂದು ಬಿಟ್ಟ ಉಳಿಕೆಗಳನ್ನು ಅಂದರೆ ತಿಂದು ಬಿಟ್ಟ ನಂತರ ಉಳಿದ ತ್ಯಾಜ್ಯವನ್ನು ಅದೇ ನೆಲಕ್ಕೆ ಕೊಡಬೇಕಾದ್ದು ಪ್ರಕೃತಿ ಧರ್ಮ, ಆ ಮೂಲಕ ಆ ಮಣ್ಣಿನ ಹಾಗೂ ನೆಲದ ಫಲವತ್ತತೆಯನ್ನೂ ಉಳಿಸಿಕೊಟ್ಟ ಹಾಗಾಗುತ್ತದೆ. ಜೊತೆಯಲ್ಲಿ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೆಚ್ಚಿಸಿದಂತೆ ಆಗುತ್ತದೆ. ಈಗ ನಮ್ಮ ಮಣ್ಣಿನಿಂದ ಹಲವಾರು ಬೆಳೆ ತೆಗೆಯಲು ಆಳದ ನೀರನ್ನು ಮೇಲೆ ತಂದು ಬೆಳೆಯನ್ನು ದೂರದ ಊರಿಗೆ ಸಾಗಿಸಿ ಮಾರಿದ್ದರಿಂದ ನಮ್ಮೂರಿನ ಫಲವತ್ತತೆಯ ಜೊತೆಗೆ ಅಂತರ್ಜಲವನ್ನೂ ಬೇರೊಂದು ಊರಿನ ಸಂತೆಯಲ್ಲಿ ಮಾರಾಟಮಾಡುವಂತಾಗಿದೆ. ಅದನ್ನೆಲ್ಲಾ ಒಂದೆರಡು ವರ್ಷಗಳಲ್ಲೇ ಹಿಂತಿರುಗಿಸಿ ಪಡೆಯಲೂ ಸಾಧ್ಯವಿಲ್ಲ. ಅದಕ್ಕೆಲ್ಲಾ, ನಿಧಾನವಾಗಿ ನಮ್ಮ ನೆಲವನ್ನು ತಯಾರು ಮಾಡಬೇಕು. ಅದರಿಂದಾಗಿ ನೆಲಕ್ಕೆ ಎಷ್ಟು ಬೇಕೋ ಅಷ್ಟನ್ನೆ ಬಳಸಿ ಮಿತವ್ಯಯವಾಗಿ ಬಳಸುವುದು ಅತ್ಯಂತ ಸಮಂಜಸವಾಗಿದೆ.

ರಸಾಯನಶಾಸ್ತ್ರದ ಬೆಳವಣಿಗೆಗಳು ತಿಳುವಳಿಕೆಗಳೂ ಹೆಚ್ಚಿದಂತೆಲ್ಲಾ, ಅದರ ಅನ್ವಯಗಳೂ ಹೆಚ್ಚಿದವು. ೨೦ನೇ ಶತಮಾನದ ಕೃಷಿಯು ಅದರಲ್ಲೂ ಒಂದು ಉತ್ಪಾದಕ ಜಗತ್ತಾಗಿ ಬಂಡವಾಳಶಾಹಿ ಗುಣಗಳನ್ನು ಅಪ್ಪಿ ಹಿಡಿದು ಬೃಹತ್ತಾಗಿ ಬೆಳೆದಿದೆ. ಇಂದು ಒಂದು ಉತ್ಪಾದಕ ಜಗತ್ತಾಗಿ ಅಗಾಧ ಪ್ರಮಾಣದ ಪರಿಕರಗಳನ್ನು ಬಳಸುವ ಅಥವಾ ಹೊಂದಿರುವ ವಹಿವಾಟಾಗಿದೆ. ಇವು ಕೇವಲ ರಸಾಯನಿಕಗಳು ಮಾತ್ರವಲ್ಲದೆ ಅವುಗಳನ್ನೂ ನಿರ್ದೇಶಿಸುವ ತಳಿಗಳನ್ನು ಒಳಗೊಂಡಿವೆ. ಇಂದು ಅನೇಕ ಒಳಸುರಿಗಳು ಪ್ರಮುಖವಾಗಿ ಗೊಬ್ಬರಗಳು, ಕೀಟನಾಶಕ, ಇತ್ಯಾದಿ ರಸಾಯನಿಕಗಳು ಅಲ್ಲದೆ ರಸದೂತಗಳು ಮೊದಲಾದವು ಜನಪ್ರಿಯವಾಗಿ ಮಾರುಕಟ್ಟೆಯಲ್ಲಿ ಲಭ್ಯ. ಈಗ ಈ ವಹಿವಾಟಿನಿಂದಾಗಿ ರಸಾಯನಿಕ ಸಂಬಂಧಗಳು ವೇಗವಾಗಿ ಬದಲಾಗುತ್ತಾ ಒಂದು ಪ್ರಭೇಧದಿಂದ ಮತ್ತೊಂದಕ್ಕೆ ಸೇರುತ್ತಾ ಸಾಗುತ್ತವೆ. ಅದರಿಂದ ಅವುಗಳ ನಡುವಿನ ಹಾಗೂ ಭೂಮಿಯ ಜೊತೆಗಿನ ಸಂಬಂಧವು ಗಟ್ಟಿಯಾಗುತ್ತಾ ಸಾಗುತ್ತದೆ. ಇದೊಂದು ನಿರಂತರ ಪ್ರಕ್ರಿಯೆ. ಈ ನೆಲದ ಮೇಲೆ ನಿವಾಸಿಗಳಾದ ಎಲ್ಲಾ ಜೀವಿಗಳ ಆಹಾರದ ಜವಾಬ್ದಾರಿಯನ್ನು ಹೊತ್ತ ಈ ಮಣ್ಣಿನ ಕಾರಣದಿಂದಲೇ ರಸಾಯನಿಕವಾಗಿ ಮೂಲವಸ್ತುಗಳ ಹಾಗೂ ಅವುಗಳ ಸಂಯುಕ್ತಗಳಾಗಿ ನಡೆದೇ ಇರುತ್ತದೆ.

ಜೈವಿಕ ಸಂಬಂಧಗಳು: ಆಹಾರದ ಆಯ್ಕೆ ನಿಸರ್ಗ ಕಲಿಸಿದ ಪಾಠ. ತಿನ್ನುವುದೇನಿದ್ದರೂ ತನ್ನಚ್ಚೆ. ಅದಕ್ಕೆಂದೇ ನೈಸರ್ಗಿಕ ಹುಡುಕಾಟದಲ್ಲಿ ಪರಿಸರವನ್ನು ಅವಲಂಬಿಸಿದೆ. ಆದ್ದರಿಂದ ನಿಸರ್ಗವೂ ಹೊಟ್ಟೆಗೆ ಅನುವಾಗುವಂತೆಯೇ ವಿಕಾಸಗೊಳಿಸಿ ಕೊಟ್ಟಿದೆ. ಸುಮಾರು ೨೦೦೦ ಬಗೆಯ ಸಸ್ಯಗಳನ್ನು ನಾವು ತಿನ್ನಬಹುದೆಂಬ ಅಂದಾಜಿದೆ, ಆದಾಗ್ಯೂ, ಹೆಚ್ಚು ಕಡಿಮೆ ೨೦೦ ಬಗೆಯ ಗಿಡಮರಗಳನ್ನು ನಾವು ಬೆಳಸುತ್ತೇವೆ. ಆದರೂ ಪ್ರತೀ ದಿನದ ತಿನಿಸಿನಲ್ಲಿ ಕೇವಲ ಎರಡು ಸಸ್ಯಗಳು ಬಹುಪಾಲು ಆಹಾರವನ್ನು ನಿರ್ದೇಶಿಸುತ್ತವೆ. ನಿಸರ್ಗ ಕೊಟ್ಟ ಅಗಾಧ ಆಹಾರದ ತಿನಿಸುಗಳಲ್ಲಿ ಕೇವಲ ಕೆಲವನ್ನೇ ನಮ್ಮ ಬಹು ಮುಖ್ಯ ಆಹಾರವನ್ನಾಗಿ ಮಾಡಿಕೊಂಡು ಜೀವನವನ್ನು ನಡೆಸುತ್ತದ್ದೇವೆ. ಆ ಮೂಲಕ ನಾವು ಈ ಜೈವಿಕ ಪರಂಪರೆಯಲ್ಲಿ ವಿಭಿನ್ನವಾಗಿ ಬೆಳೆಯುತ್ತಾ ಸಾಗುತ್ತಿದ್ದೇವೆ. ಇಲ್ಲವಾದಲ್ಲಿ ನಾವೂ ಸಹ ಈ ಜೈವಿಕ ಪ್ರಪಂಚದ ಭಾಗವಾಗಿ ಎಲ್ಲ ಜೀವಿಗಳಂತೆ ಜೀವಿಸುವ ಸಾಧ್ಯವಿತ್ತು. ಇಷ್ಟಾದರೂ ನಾವೇನು ಈ ಜೈವಿಕತೆಯಿಂದ ಸಂಪೂರ್ಣವಾಗಿ ದೂರವಾಗಿಲ್ಲ ಹಾಗೂ ದೂರವಾಗಲು ಸಾಧ್ಯವಿಲ್ಲ.

ಮಣ್ಣಿನ ಆರೋಗ್ಯದ ಮೂಲಕ ಜನರ ಆರೋಗ್ಯದ ನೆಲೆ: ನಮ್ಮ ಆರೋಗ್ಯವು ದಿನನಿತ್ಯ ನಾವು ತಿನ್ನುವ ತುತ್ತಿನ ಮೇಲೆ ನಿಂತಿದೆ ಅಂದರೆ ಆಶ್ಚರ್ಯವಾಗದಿರುತ್ತದೆಯೇ? ಅದಕ್ಕೆಂದೆ ತುತ್ತಿನ ಆರೋಗ್ಯ ಪೂರ್ಣ ಹಿನ್ನೆಲೆಯನ್ನು ಒದಗಿಸುವ ಮಣ್ಣಿನ ಪಾಲನ್ನು ವೈಜ್ಞಾನಿಕ ಹಿನ್ನಲೆಯಿಂಧ ಅದರ ಬೆಳವಣಿಗೆಗಳಿಂದ ಗಮನಿಸಿದರೆ ಇದು ಸಂಪೂರ್ಣ ಸತ್ಯ ಎನಿಸದೇ ಇರದು, ಕಾರಣ ನಮ್ಮ ಎಲ್ಲಾ ಆಹಾರಾಂಶಗಳ ಮೂಲ ಮಣ್ಣು. ಆಹಾರದ ಸಂಪೂರ್ಣ ಮೂಲವೇ ಮಣ್ಣು ಹಾಗಾಗಿ ನಮ್ಮ ಆರೋಗ್ಯವೇ ಮಣ್ಣಿನ ಹಿನ್ನೆಲೆಯಿಂದ ವಿಕಾಸಗೊಂಡಿದೆ. ಇದನ್ನು ವಿವರವಾಗಿ ನೋಡುವ ಕ್ರಮವು ಇತ್ತೀಚೆಗೆ ಆರಂಭವಾಗಿದೆ. ಅನೇಕ ಅವಶ್ಯಕ ಮೂಲವಸ್ತುಗಳನ್ನೊಳಗೊಂಡಂತೆ, ವಿವಿಧ ಖನಿಜಾಂಶಗಳು, ವಿಟಮಿನ್ನುಗಳು ಮುಂತಾದ ಸತ್ವಭರಿತ ತಯಾರಿಯಲ್ಲಿ ಮಣ್ಣಿನ ಪಾತ್ರವು ಹಿರಿದು. ನಾವು ತಿನ್ನುವ ಬಹುಪಾಲು ತಿನಿಸುಗಳು ಮಣ್ಣಿನಿಂದ ಅಥವಾ ಮಣ್ಣಿನ ನೆರವಿನಿಂದ ಬಂದವು. ನಮ್ಮ ಆರೋಗ್ಯ ಈ ಎಲ್ಲಾ ಜೈವಿಕ ಉತ್ಪನ್ನಗಳ ಮೇಲೆ ನಿಂತಿರುವ ಹಿನ್ನೆಲೆಯಲ್ಲಿ ಮಣ್ಣನ್ನೂ ಆರೋಗ್ಯದ ಪರಂಪರೆಯಲ್ಲಿ ನೋಡಬೇಕಾಗುತ್ತ ದೆ. ಇತ್ತೀಚೆಗೆ ತುಂಬಾ ಹೆಚ್ಚಾಗಿ ಕಾಣಬರುತ್ತಿರುವ ಸತುವಿನ ಕೊರತೆಯು ನಮ್ಮ ಆಹಾರದಲ್ಲಿ ಉಂಟಾಗುತ್ತಿರುವುದಕ್ಕೆ ಅದು ನೆಲದಲ್ಲೂ ಇರದಿರುವ ಕಾರಣವನ್ನು ವಿವರಿಸುದುಂಟು. ಹಾಗೇಯೇ ನಮಗೆಲ್ಲಾ ಅಯೋಡಿನ್‌ ಕೊರತೆಯನ್ನೂ ನೀಗಲು ಉಪ್ಪಿಗೆ ಸೇರಿಸುವ ಕಾರಣವೂ ಅಂತಹದ್ದೇ.

ನಮ್ಮದು ಜೈವಿಕ ಸಂಪತ್ತನ್ನು ಆಧರಿಸಿದ ನಾಗರಿಕತೆ. ಇಲ್ಲಿನ ಬಹುಪಾಲು ಜೀವನವು ಜೈವಿಕತೆಯನ್ನು ಅವಲಂಬಿಸಿಯೇ ನಡೆಯುತ್ತದೆ. ಹಾಗಾಗಿ ಈ ಜೈವಿಕ ಪ್ರಪಂಚದ ನೆಲೆಯನ್ನು ಬಿಟ್ಟು ಜೈವಿಕತೆಯೇ ಇರಲಾರದು. ಇದರಿಂದಾಗಿ ಜೀವ ಪ್ರಪಂಚದ ಸಂಬಂಧಗಳು ಮಣ್ಣಿನ ಜೊತೆಗೆ ಬೆಸೆದಿವೆ. ಇದು ಕೇವಲ ನಾವು ತಿನ್ನುವ ಅನ್ನ ಮಾತ್ರವೇ ಅಲ್ಲ. ಇಲ್ಲಿನ ಬಹು ಪಾಲು ಜೀವಿಗಳ

ಜೊತೆಗೆ ನಮ್ಮ ಸಂಬಂಧವಿದೆ. ಈ ಎಲ್ಲಾ ಜೀವಿಗಳೂ ಮಣ್ಣಿನಿಂದ ನೇರವಾದ ಸಂಬಂಧವನ್ನು ವಿಕಾಸಗೊಳಿಸಿ, ಉಳಿಸಿ ಬೆಳೆಸಿಕೊಂಡು ಸಾಗುತ್ತವೆ. ಇದೊಂದು ನಿರಂತರ ಜೈವಿಕ ಕ್ರಿಯೆಯೇ ಆಗಿದೆ. ಹೀಗೆ ಮಣ್ಣಿಗೂ ಮಾನವರಿಗೂ ಜೈವಿಕವಾದ ಅನುಭಾವ ಸಂಬಂಧ ನಿರಂತರತೆಯನ್ನು ಉಳಿಸಿಕೊಂಡು ಸಾಗುತ್ತಿದೆ. ಅದನ್ನು ಅರಿಯುವ ಮಾನವರ ಪ್ರಯತ್ನ ಮಾತ್ರ ಇನ್ನೂ ಹೆಚ್ಚಬೇಕಾಗಿದೆ. ಕಾರಣ ಪ್ರಕೃತಿಯು ಅರಿತಷ್ಟು ನಿಗೂಢವಾಗಿಯೇ ಮುಂದುವರೆಯುತ್ತಿದ್ದು. ಇನ್ನಕೂ ಅದರ ವಿವರಗಳು ಅರಿಯಬೇಕಿದೆ.

ಭಾವನಾತ್ಮಕ ಸಂಬಂಧಗಳು: ಭೌತಿಕ ಸಂಬಂಧವು ಭಾವನಾತ್ಮಕ ಸಂಬಂಧವನ್ನು ಉಂಟುಮಾಡುವಲ್ಲಿ ಬಹುಪಾಲು ಪಾತ್ರವನ್ನು ವಹಿಸುತ್ತದೆ. ಹಲವಾರು ಕಾರಣಗಳಿಂದ ಮನುಷ್ಯನು ಯಾವುದಾದರೂ ನೆಲಕ್ಕೆ ಈ ಭಾವನಾತ್ಮಕ ಸಂಬಂಧವನ್ನು ವಿಕಸಿಸಿಕೊಳ್ಳಲು ಕಾರಣವಾಗಬಹುದು. ತನ್ನ ಬದುಕಿನ ಯಾವುದೇ ಘಟನೆ ಅಥವಾ ಯಾರೊಡನೆಯ ಸಂಬಂಧ ಕಾರಣವಾದೀತು.

ಹೌದು. ಅನೇಕ ಜನರು ಯಾವುದಾದರು ಒಂದು ನೆಲಕ್ಕೆ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾರೆ. ಇದು ಕೇವಲ ನೆಲೆಯನ್ನು ಕಂಡುಕೊಂಡ ಕಾರಣವಷ್ಟೇ ಎಂದು ಹೇಳಲು ಸಾಲುವುದಿಲ್ಲ. ಅದಕ್ಕಿಂತಲೂ ಹೆಚ್ಚಿನದಾದ ನೆಮ್ಮದಿಯನ್ನು ಕಂಡ ಅನುಭವವೂ ಇದರ ಜೊತೆಗೆ ಸೇರಿರುವ ಸಾಧ್ಯತೆಯೂ ಇದೆ. ಅಲ್ಲದೇ ಅನೇಕ ಕಾರಣಗಳಿಂದ ತಮ್ಮ ಸಾಧನೆಯ ಕ್ಷೇತ್ರವಾದರಂತೂ ತೀರಿತು ಭಾವನೆಗಳ ಅತಿರೇಕವನ್ನು ಕಾಣಬಹುದಾಗಿದೆ. ಇದು ಅವರು ಪ್ರೀತಿ ಪಟ್ಟು ಅನುಭವಿಸಿದ ನೆಲದ ವಿಶೇಷವೆಂದರೆ ತಪ್ಪಾಗದು. ಹಲವಾರು ಜನರು ಇನ್ನೇನು ಸಾವು ಸಂಭವಿಸುವುದು ಗ್ಯಾರಂಟಿ, ಎನ್ನುವಾಗ ಒಂದು ವೇಳೆ ಆಸ್ಪತ್ರಯಲ್ಲಿದ್ದರೆ, ಸಾಧ್ಯವಾದಷ್ಟು ಬೇಗ ಮನೆಗೆ ಹೋಗಲು ಹವಣಿಸುತ್ತಾರೆ. ಮನೆಯಲ್ಲಿ ಅಥವಾ ಅವರ ಊರಿನಲ್ಲಿ ಸಾವನ್ನು ಹೊಂದಲು ಅಪೇಕ್ಷವುಳ್ಳವರಾಗಿರುತ್ತಾರೆ. ಇದು ಕೇವಲ ತಮಾಷೆಯ ಸಂಗತಿಯಲ್ಲ. ಅವರು ಅಷ್ಟೊಂದು ಭಾವನಾತ್ಮಕವಾಗಿ ಆ ನೆಲಕ್ಕೆ ಸಂಬಂಧವನ್ನು ಹೊಂದಿರುತ್ತಾರೆ. ಇದೇ ಕಾರಣಕ್ಕೇ ಸಹ ಎಲ್ಲೋ ಮರಣಹೊಂದಿದ ಮಂದಿಯನ್ನು ಹುಟ್ಟೂರಿಗೆ ಕೊಂಡ್ಯೋಯುವ ಸಂಪ್ರದಾಯವನ್ನು ಕಾಣಬಹುದು.

ಇಲ್ಲೊಂದು ನಿದರ್ಶನವಿದೆ. ನಮ್ಮ ದೇಶದ ಹಾಲಿನ ಹೊಳೆಯನ್ನೇ ಹರಿಸಿದ ಅಸಂಖ್ಯಾತ ಡೈರಿಗಳನ್ನು ಕಟ್ಟಲು ಕಾರಣರಾದ ಡಾ. ವರ್ಗಿಸ್‌ ಕುರಿಯನ್‌ ಕೇರಳನಾಡಿನವರು ಅಚಾನಕ್‌ ಆಗಿ ಗುಜರಾತ್‌ನಲ್ಲಿ ನೆಲೆ ನಿಂತರು. ಆನಂದ್‌ನಲ್ಲಿ ತಮ್ಮ ಕಾರ್ಯ ಆರಂಭಿಸಿದರು. ಮುಂದವರು ಇಡೀ ದೇಶದ ಬಹು ಮುಖ್ಯ ಸಂಸ್ಥೆಯ ಮುಖ್ಯಸ್ಥರಾದರೂ ಅದರ ಮುಖ್ಯನೆಲೆಯನ್ನು ಆನಂದ್‌ನಲ್ಲಿಯೇ ಸ್ಥಾಪಿಸಲು ಭಾರತ ಸರ್ಕಾರಕ್ಕೆ ಕೇಳಿಕೊಂಡರು. ಅಷ್ಟೆ ಅಲ್ಲ ನಮ್ಮ ರಾಷ್ಟ್ರವಲ್ಲದೆ ಅನ್ಯ ದೇಶಗಳು ಅವರ ಸಹಕಾರ ಕೋರಿದಾಗ ಆನಂದ್‌ನಿಂದ ನಿಭಾಯಿಸುವುದಾದ ಯಾವುದೇ ಕೆಲಸಹೇಳಿ ಅಡ್ಡಿಯಿಲ್ಲ ಎನ್ನುವಂತೆ ಮಾತಾಡುತ್ತಿದ್ದರು. ಹಾಗೆಯೇ ನಡೆದುಕೊಂಡರು. ತಮ್ಮ ಅಂತಿಮ ಯಾತ್ರೆಯೂ ಆನಂದ್‌ನಲ್ಲಿಯೇ ಎನ್ನುವುದು ಅವರ ಸಾಧನಾ ಸ್ಥಳಕ್ಕೆ ಲವರಿತ್ತ ಗೌರವಪೂರ್ವಕ ಭಾವನಾತ್ಮಕ ಸಂಬಂದವಲ್ಲದೇ ಮತ್ತೇನೂ ಅಲ್ಲ. ಆನಂದ್‌ ಎಂದರೆ ಕುರಿಯನ್‌ ಎನ್ನುವಂತಾಗಿರುವುದೂ ಕೂಡ ಅದರ ಸ್ವಾಭಾವಿಕ ಕಾರಣವೇ.

ಹಲವಾರು ಸಂತರೂ ತಮ್ಮ ತಮ್ಮ ಅಂತಿಮ ನೆಲೆಯನ್ನು ತಾವೇ ನಿರ್ಧರಿಸಿಕೊಂಡ ಅನೇಕ ಸಂಗತಿಗಳು ಕರ್ನಾಟಕ ರಾಜ್ಯಾದ್ಯಂತ ಕಾಣಬಹುದು. ಈ ನೆಲೆಗಳೆಂದರೆ ಕೇವಲ ಅವರ ಜೀವನಕ್ಕೆ ಅಷ್ಟೇ ಅಲ್ಲದ ಅವರ ಸಮಾಧಿಯನ್ನೂ ಹೊಂದಬಯಸುವ ಸ್ಥಳಗಳಾಗಿವೆ. ನೆಲದ ಜೊತೆಯ ಭಾವನಾತ್ಮಕ ಸಂಬಂಧವು ಮಣ್ಣಿನಷ್ಟೇ ಈ ಜೀವದಷ್ಟೇ ಸಾವಯವಾದುದು. ಅದರ ಜೊತೆಗಿನ ಬಾಂಧವ್ಯ ಯಾವಾಗಲೂ ಕಾಡುವಂತಹದದು. ಸುಮ್ಮನೇ ಪ್ರವಾಸ ಹೋಗಿ ಅಲ್ಲಿನ ಒಂದು ಜಲಧಾರೆಯನ್ನು ಕಂಡು ಮನಸೋತು ಮತ್ತೆ ಮತ್ತೆ ಅಲ್ಲಿಗೇ ಹೋಗುವ ಹಾಗೂ ಅದರ ಹೆಸರನ್ನೇ ಕಟ್ಟಿದ ಮನೆಯನ್ನು ಕರೆಯುವ ಅನೇಕರಿದ್ದಾರೆ.

ಮಣ್ಣಿನ ಸಮುದಾಯ

ಮಣ್ಣು ಒಂದು ಭೌತಿಕ ವಸ್ತು ಮಾತ್ರವೆ ಅಲ್ಲ. ಇದಕ್ಕೆ ಹಲವಾರು ಆಯಾಮಗಳಿದ್ದು ಅವು ವಿವಿಧ ರೀತಿಯಲ್ಲಿ ಗ್ರಾಹ್ಯವಾಗಿವೆ. ಈ ಗ್ರಹಿಕೆಯ ವಿವಿಧ ಮಜಲುಗಳು ತಿಳಿಯಲು ಮಣ್ಣನ್ನು ಅರ್ಥಮಾಡಿಕೊಂಡು ವಿಶ್ಲೇಷಣೆಗೆ ಒಳಪಡಿಸುವುದು ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಣ್ಣನ್ನು ಇಡಿಯಾಗಿ ಅಂದರೆ ಅದರ ಸಮಗ್ರ ಸಮುದಾಐದ ಮೂಲಕ ಗ್ರಹಿಸಬೇಕಿದೆ. ಮಣ್ಣನ್ನು ಅರ್ಥೈಸುವಾಗ ಅದನ್ನು ಕೇವಲ ಭೌತಿಕ ಅರ್ಥದಲ್ಲಿ ಮಾತ್ರ ನೋಡದೆ, ಭೌಗೋಳಿಕ ಸನ್ನಿವೇಷದಲ್ಲಿಯೂ ನೋಡುವ ಅಗತ್ಯವಿದೆ. ಮಣ್ಣು ಭೂಮಿಯ ಮೇಲೆ ಆವರಿಸಿರುವ ಕೇವಲ ಖನಿಜಯುತ ಕಣಗಳಲ್ಲ. ಭೂಮಿಯನ್ನು ಜೀವಂತವಾಗಿರಿಸಿದ ತನ್ನ ಮೇಲೆ ಹಚ್ಚ ಹಸಿರಿನ ಹೊದಿಕೆಯನ್ನಾಗಿಸಿ ಒಂದು ಸ್ವರ್ಗವನ್ನೇ ತಂದು ಕೊಟ್ಟಿರುವ ಮೇಲ್ಪದರ, ಅಂದರೆ ಈ ಭೂಮಿಯನ್ನು ಆವರಿಸಿರುವ ಜಲಾವೃತವಲ್ಲದ, ಹಾಗೂ ಅನೇಕ ಜೀವಿಗಳಿಗೆ-ಪ್ರಮುಖವಾಗಿ ಸಸ್ಯವರ್ಗಕ್ಕೆ ಅವಲಂಬನೆ ಒದಗಿಸಿರುವ, ಭೂಮಿಯ ಮೇಲ್ಪದರ.

ಸಾಮಾನ್ಯವಾಗಿ ಮಣ್ಣನ್ನು ಒಂದು ರೀತಿಯ ಧೂಳು ಎಂದೂ ನೋಡುವ ಜನರಿದ್ದಾರೆ, ಬಹುಶಃ ಕೃಷಿ ಪರಿಸರ ಪರಿಚಯವಿಲ್ಲದ ಸಮುದಾಯ ಈ ಬಗೆಯದು. ಕೆಲವು ವರ್ಷಗಳ ಹಿಂದೆ ಬೆಂಗಳೂರು ನಗರದ ಕೆಲವೆಡೆ, ನಗರ ಪಾಲಿಕೆಯವರು ಈ ರೀತಿ ಬೋರ್ಡು ಹಾಕಿದ್ದರು. “ಇಲ್ಲಿ ಮಣ್ಣು ಮತ್ತು ಇತರೆ ಕೆಲಸಕ್ಕೆ ಬಾರದ ವಸ್ತುಗಳನ್ನು ಎಸೆಯಬಾರದು”. ನಗರ ಪಾಲಿಕೆಯ ಮಂದಿಗೆ ಮಣ್ಣು ಕೆಲಸಕ್ಕೆ ಬಾರದ ವಸ್ತುವಾಗಿತ್ತು. ಅಚ್ಚರಿ ಎಂದರೆ ಈಗಂತಹ ಬೋರ್ಡುಗಳು ಕಾಣುತ್ತಿಲ್ಲ. ಅಂದರೆ ಕಾರ್ಪೋರೇಷನ್ನಿನ ಜನರು ಬುದ್ಧಿವಂತರಾಗಿದ್ದಾರೆಂದು ಭಾವಿಸಬೇಕಿಲ್ಲ. ಏನನ್ನೂ ಎಸೆಯಲು ಜಾಗವಿಲ್ಲದಂತೆ ಕಾಂಕ್ರೀಟು ಕಾಡು ಬೆಳೆದು ನಗರವನ್ನೆಲ್ಲಾ ನುಂಗತೊಡಗಿದೆ. ಇದೂ ಕೂಡ ಮಣ್ಣಿನ ಬಗೆ ಬಗೆಯ ಗ್ರಹಿಕೆಯಲ್ಲಿ ಪಾಲುದಾರರಾಗುತ್ತಾ, ಸಾಗಿದೆ. ಮಣ್ಣನ್ನು ಕೆಲಸಕ್ಕೆ ಬಾರದ ವಸ್ತುವೆಂದು ಕೆಲವರು ಅರ್ಥೈಸಿದರೆ, ಕೃಷಿ ದಾರ್ಶನಿಕ ಫುಕುವೊಕಾ ಮಣ್ಣನ್ನು ಹೀಗೆ ಅರ್ಥೈಸುತ್ತಾರೆ. ‘ಒಂದು ದೇಶದ ಜನ ಮಣ್ಣನ್ನು ರಕ್ಷಿಸದಿದ್ದರೆ, ಬಡತನವನ್ನು, ಬರಗಾಲವನ್ನೂ ನಿರಂತರವಾಗಿ ಎದುರಿಸಬೇಕಾಗುತ್ತದೆ.’ ಮಣ್ಣಿ೮ನ ಮಹತ್ವವನ್ನು ಸ್ಥೂಲವಾಗಿ ಹೇಳಲು ಈ ಮಾತನ್ನು ಹೇಳಬೇಕಾಗಿದೆ.

ಹಾಗೇನೆ ವಿವಿಧ ವರ್ಗದ ವೃತ್ತಿಯವರಿಗೆ ವಿವಿಧ ರೀತಿಯಲ್ಲಿ ಗ್ರಹಿಕೆಯಾಗಬಹುದಾದಗಿದೆ. ಕೇವಲ ಮಣ್ಣು ಮಾತ್ರವೇ ಅಲ್ಲ ಯಾವುದೇ ವಸ್ತುವು ವಿವಿಧ ಗ್ರಹಿಕೆಯಿಂದ ಕೂಡಿರಲು ಸಾಧ್ಯವಿದೆ. ಉದಾಹರಣೆಗೆ ರಕ್ತವೂ ಕೂಡ, ರಸಾಯನ ಶಾಸ್ತ್ರಜ್ಞರಿಗೆ ಒಂದು ಬಗೆಯಾದರೆ, ಚರಿತ್ರಕಾರರಿಗೆ ಮತ್ತೊಂದು ಬಗೆ, ಜೊತೆಯಲ್ಲಿ ಕವಿಗಳಿಗೆ ಬರಹಗಾರರಿಗೆ ಇನ್ನೊಂದು ರೀತಿ. ಮಣ್ಣೂ ಕೂಡ ಇದೇ ರೀತಿಯಲ್ಲಿ ಅನಿಸಿದ್ದರೆ ಅಚ್ಚರಿಯೇನಲ್ಲ. ಆದರೂ ಮಣ್ಣಿನ ಈ ಗ್ರಹಿಕೆಯಲ್ಲಿ ತಮ್ಮ ತಮ್ಮ ವೃತ್ತಿ ಆಧಾರಿತ ಅನುಕೂಲಗಳನ್ನು ಗ್ರಹಿಕೆಯೊಂದಿಗೆ ತಳುಕು ಹಾಕಬಹುದೇನೋ. ಅದಕ್ಕೂ ಮುಖ್ಯವಾಗಿ, ಕಾಲಕೂಡ ಮಣ್ಣಿನ ಗ್ರಹಿಕೆಯಲ್ಲಿ ಬದಲಾವಣೆಯನ್ನು ತಂದಿರುವುದು ವಿಶೇಷ. ಇದನ್ನೂ ಮುಂದೆಯೂ ಚರ್ಚಿಸಲಾಗದು. ಏಕೆಂದರೆ ಕಾಲಾಂತರದಲ್ಲಿ ಮಣ್ಣಿನ ಕುರಿತು ಕಾಳಜಿ, ಅದರ ವ್ಯವಹಾರಿಕ ಬಳಕೆ ಎಲ್ಲವೂ ಸೇರಿ ಇದರ ನಿರ್ಧಾರವನ್ನು ನಿರ್ವಹಿಸುತ್ತಿವೆ. ಇರಲಿ, ಈ ಮಣ್ಣು ಇಂಜಿನಿಯರ್ ಗೆ ತಾನು ರಸ್ತೆ ನಿರ್ಮಿಸುವಲ್ಲಿ ಜಾಳು ಜಾಳಾಗಿ ಹರಹಿದ ಪುಡಿಯಾಗಿ ಆತನಿಗೆ ಗಟ್ಟಿನೆಲವನ್ನು ಕೊಡುವಲ್ಲಿ ಇರುವ ತಡೆಯಂತಿದೆ. ಗಣಿಗಾರರಿಗೆ ತಾವು ಎತ್ತಬಯಸುವ ಖನಿಜಗಳ ಮೇಲೆ ದಪ್ಪನಾಗಿ ಹರಡಿರುವ ತ್ರಾಸುತಂದೊಡ್ಡುವ ಮಿಶ್ರನೆಲ. ಹೀಗೆ ಏನೇನೋ ಬಗೆಯಲ್ಲಿ ಮಣ್ಣನ್ನು ಪರಿಬಾವಿಸುವುದನ್ನು ಕಾಣಬಹುದಾಗಿದೆ. ಈ ಮಣ್ಣು ಈ ರೂಪದಲ್ಲಿ ಕಾಣುತ್ತಿರುವುದನ್ನು ನೋಡಿದರೆ ಇದು ಹೀಗೆ ಇತ್ತೆ? ಎನ್ನಿಸಬಹುದು ಆದರೆ ಹಾಗಲ್ಲ. ಇದರ ರೂಪ ಕಾಲಾಂತರದಲ್ಲಿ ವಿಕಾಸಗೊಂಡದ್ದಾಗಿದೆ. ಹೀಗೆ ಇಂದಿನ ರೂಪ ಪಡೆಯಲು ಸಾಕಷ್ಟು ಸಮಯವನ್ನು ವ್ಯಯಿಸಿದೆ. ಈ ಬಗೆಯ ಕಾಲದ ಹಿನ್ನೆಲೆಯು ವಿವಿಧ ಪ್ರದೇಶದಲ್ಲಿ ವಿವಿಧ ರೂಪದ್ದು, ಕೆಲೆವೆಡೆ ಎಳೆಯ ಮಣ್ಣಿರಬಹುದು, ಕೆಲೆವೆಡೆ ಸಾಕಷ್ಟು ಹಿರಿದಾದ ಮಣ್ಣಿರಬಹುದು. ಈ ವಿವರಗಳು ಅದರ ಹುಟ್ಟಿನ ಕಾರಣಗಳಿಂದ ಆರಂಭಗೊಂಡು, ಬಳಸುವ, ಕಾಳಜಿ ತೋರುವ ಸಂರಕ್ಷಿಸುವ, ಅದನ್ನು ನಿರ್ವಹಿಸುವ ಸಾಮಾಜಿಕ, ರಾಜಕೀಯ ಕಾರಣಗಳನ್ನೂ ಒಳಗೊಂಡಿವೆ.