ಮಣ್ಣಿನ ಸಮುದಾಯವನ್ನು ನಿರಂತರವಾಗಿ ಚಲನಶೀಲವಾಗಿಸಲು ಅಲ್ಲದೆ ವಿವಿಧ ಪರಿಣಾಮವನ್ನು ಹೊಂದಲು, ಅದರ ಘಟಕಗಳು ಮತ್ತು ಕೃಷಿಉತ್ಪಾದನೆಗೆ ಬಳಸುವ ಪರಿಕರಗಳು ಕಾರಣವಾಗುತ್ತವೆ. ಇವು ನಿರಂತರವಾಗಿ ಒಂದನ್ನೊಂದು ವರ್ತಿಸುತ್ತಾ ಅದರ ಸಧ್ಯದ ಪರಿಸ್ಥಿತಿಗೆ ಕಾರಣವಾಗಿವೆ. ಈ ಕೆಳಗಿನ ಚಿತ್ರ ಅವನ್ನು ನಿರೂಪಿಸುತ್ತದೆ. ಈ ಘಟಕಗಳು ಒಂದನ್ನೊಂದು ವರ್ತಿಸುತ್ತಾ ತಮ್ಮ ಮೇಲೆ ನಿವಾಸಿಗಳಾದ ಜೀವಿಗಳನ್ನು ಸಾಕುವ ಜವಾಬ್ದಾರಿಯನ್ನು ಹೋದಿವೆ.

 223

ಮಣ್ಣಿನ ಹುಟ್ಟಿನ ಹಿನ್ನೆಲೆ: ಈಗ ಭೂಮಿಯ ಮೇಲೆ ಕಾಣಬರುವ ಸಮೃದ್ಧವಾದ ಮಣ್ಣು ಈ ಬಗೆಯಲ್ಲಿ ವಿಕಾಸವಾಗಲು ಅನೇಕ ವರ್ಷಗಳೇ ಆಗಿವೆ. ಈ ಹಿಂದೆ, ೪೫೦೦ ಮಿಲಿಯನ್‌ ವರ್ಷಗಳ ಹಿಂದೆ ಭೂಮಿ ಈಗಿನದಾಗಿರಲಿಲ್ಲ. ಇಂದು ನಮ್ಮ ಕಣ್ಣನ್ನು ತಂಪಾಗಿಸುತ್ತಿರುವ ಅದ್ಭುತ ಶಕ್ತಿಯ ಹೆಚ್ಚಡವೂ ಅದಕ್ಕಿರಲಿಲ್ಲ. ಬಿಸಿ ಉಂಡೆ ನಿಧಾನವಾಗಿ ತಂಪಾಗಿ ಕೊನೆಗೊಂದು ದಿನ ಮೊದಲ ಜೀವಿಯ ಉಗಮದೊಂದಿಗೆ, ಮಣ್ಣಿನ ಹುಟ್ಟಿಗೂ ನಾಂದಿ ಹಾಡಿತು. ಕಲ್ಲು ಬಂಡೆಗಳ ಮೇಲೆ ಮರದ ಕಾಂಡಗಳ ಮೇಲೆ ಬೆಳೆವ ಹೂ ನೋಡಿಯೇ ಇರುತ್ತೀರಿ, ಕಲ್ಲು ಹೂವು ಎಂದು ಕರೆಯುವ ಈ ಪ್ರಕಾರದ ಜೀವಿಗಳು-ಕಲ್ಲಿನಲ್ಲಿ ಬೇರನ್ನು ಆಳಕ್ಕಿಳಿಸಿ ಕಲ್ಲನ್ನು ಒಡೆದ ಶಕ್ತಿಯುತ ಜೀವಚರದ ಸಂಪರ್ಕ ಮುಂದೊಂದು ದಿನ ಇಂತಹ ಅದ್ಭುತ ಮಣ್ಣಿನಿನ ಜನನಕ್ಕೆ ಕಾರಣವಾಗಿದೆ.

ಮಣ್ಣನ್ನು ಅಗೆಯುತ್ತಾ ಭೂಮಿಯ ಆಳಕ್ಕೆ ಇಳಿದರೆ ಗಟ್ಟಿ ಮಣ್ಣು, ಗೊರಚಲು, ಕಲ್ಲುಬಂಡೆ ಹೀಗೆ ದೊರೆಯುತ್ತಾ ಹೋಗುತ್ತದೆ. ಹೀಗೆ ಇವೆಲ್ಲದರಿಂದಾಗಿಯೇ ಮೇಲ್ಪದರದಲ್ಲಿ ಅದ್ಭುತ ಅಂತಃಸತ್ವವುಳ್ಳ ಮಣ್ಣುಗಳು, ಜೀವಿಗಳು, ಮೇಲ್ಮೈ ಹರಹು, ವಾತಾವರಣದ ಹವಾಮಾನ ಕೆಳಗಣ ತಾಯಿ ಬಂಡೆಯೊಂದಿಗೆ ವರ್ತಿಸಿ ಕಾಲದ ಕ್ರಿಯೆಯಲ್ಲಿ ವಿಕಾಸಗೊಂಡಿದೆ. ಹಾಗಾಗಿ, ಈ ತಾಯಿಬಂಡೆ ಮೇಲ್ಮೈ, ಹವಾಮಾನ, ಜೀವಿಗಳು ಮತ್ತು ಕಾಲ ಇದನ್ನೇ ಮಣ್ಣಿನ ವಿಕಾಸದ ಮೂಲ ಸಾಮಗ್ರಿಗಳು ಎನ್ನುವರು. ಈ ವಿಕಾಸ ಇಂದು ರೀತಿಯಲ್ಲಿ ನಿರಂತರವಾದ ಕ್ರಿಯೆ. ಅಂದರೆ ಈ ಭೂಮಿಯ ಮೇಲಣ ಮಣ್ಣು ತನ್ನ ಅಡಿಯಲ್ಲಿರುವ ತಾಯಿಬಂಡೆಯ ಕೂಸು. ಈ ಕೂಸು ನೆಲದ ವಿವಿಧ ಭೌಗೋಳಿಕ ಸನ್ನಿವೇಶಗಳನ್ನು ಅದರ ಮೇಲಣ ಜೀವಿಗಳನ್ನೂ ಮಣ್ಣಿನ ತಯಾರಿಕೆಯಲ್ಲಿ ಬಳಸಿಕೊಂಡು, ಅದಕ್ಕೆ ಸಾಕಷ್ಟು ಸಮಯವನ್ನೂ ತೆಗೆದುಕೊಂಡು ಉಂಟಾಗಿದೆ.

ಈ ರೀತಿ ವಿವಿಧ ಪೋಷಕ ಪದಾರ್ಥಗಳಿಂದ ಮಾರ್ಪಾಡಾದ ಮಣ್ಣು ಪ್ರೋಫೈಲ್‌ ರೀತಿಯಲ್ಲಿ ಅಂದರೆ ಪದರ, (ಒಂದು ಪಾಶ್ವದಲ್ಲಿ ನೋಡಿದಾಗ ಕಾಣಬಹುದು) ಪದರುಗಳಾಗಿ ರಚಿತವಾಗಿರುತ್ತದೆ. ನಮ್ಮ ಸಾಮಾನ್ಯ ನೋಟ ಮಣ್ಣಿನ ನೆತ್ತಿಯನ್ನು ನೋಡುವಚಿತಹದ್ದಾಗಿದೆ. ಅದರ ಪಕ್ಕಕ್ಕೆ ಬಂದು ನೋಡುವುದೆಂದರೆ ಅದನ್ನು ಅಡ್ಡಕೊಯ್ದು ನೋಡಬೇಕು. ಸಾಮಾನ್ಯವಾಗಿ ಮಣ್ಣಿನ ಆಳವು ಒಂದರಿಂದ ಎರಡು ಮೀಟರ ಮಾತ್ರ. ಬಹು ಪಾಲು ಪ್ರದೇಶದಲ್ಲಿ ಒಂದು ಮೀಟರ್ ಮಾತ್ರವೇ. ಈ ಆಳಕ್ಕೆ ಮಣ್ಣನ್ನು ಅಗೆದು ಅದನ್ನು ಪಕ್ಕದಿಂದ ನೋಡುವಂತಾದರೆ ಆಗ ಅದರ ಪದರಗಳು ಗೋಚರವಾಗುತ್ತವೆ.

ಇಡಿಯಾಗಿ ಮಣ್ಣು ವಿವಿಧ ಗಾತ್ರ ಕಣಗಳ ಸಮೂಹ, ಇವುಗಳ ಜೊತೆಗೆ ಸಾವಯವ(ಇಂಗಾಲಯುಕ್ತ) ವಸ್ತು ಗಾಳಿ ಮತ್ತು ನೀರು ಅದರ ಪ್ರಮುಖವಾದ ಘಟಕಗಳಾಗಿವೆ. ಮೇಲ್ನೋಟಕ್ಕೆ ಮಣ್ಣು ಘನವಸ್ತುವಿನಂತೆ ಕಂಡರೂ ಸುಮಾರು ಶೇಕಡಾ ೫೦ರಷ್ಟು ರಂದ್ರಮಯ. ಅದರಲ್ಲಿ ಗಾಳಿ ಮತ್ತು ನೀರು ತುಂಬಿರಬಹುದು. ಹಾಗಾಗಿಯೇ, ಮೊದಲ ಮಳೆಯಲ್ಲಿ ಮಣ್ಣಿನ ಬಾಯಾರಿಕೆ ಹೆಚ್ಚು ಅಂದರೆ ಗಾಳಿಯೇ ತುಂಬಿದ್ದು, ನೀರನ್ನು ಕುಡಿಯಲು ಹವಣಿಸುತ್ತದೆ.

ಮೊದಲ ಮಳೆಯ ಪ್ರಸ್ತಾಪವೆಂದರೆ ಕೂಡಲೇ ಅದರ ಆಹ್ಲಾದಕರ ಸುವಾಸನೆಯನ್ನು ಹೇಳದೆ ಇರಲು ಸಾಧ್ಯವಿಲ್ಲ. ಇದು ಮಣ್ಣಿನ ಜೀವಂತಿಕೆಯ ಸಾಕ್ಷಿ ಕೂಡಾ. ಮುಂದೆ ವಿವರ ನೀಡುವ ಮಣ್ಣಿನಲ್ಲಿರುವ ಒಂದು ಬಗೆಯ ಜೀವಿಗಳಾದ ಅಕ್ಟೀನೋ ಮೈಸಿಟೇಸ್ ಎಂಬ ಒಂದು ಜಾತಿಯ ಜೀವಿಗಳಿಂದ ಸ್ರವಿಸಿದ ರಾಸಾಯನಿಕದಿಂದ ಅಂತಹ ಸುವಾಸನೆ ಬರುತ್ತದೆ. ಮೊದಲ ಮಳೆಯ ಸುವಾಸನೆಗೆ ಖುಷಿಗೊಳ್ಳದವರು ಯಾರೂ ಇಲ್ಲ.

ಮಣ್ಣು ವಿವಿಧ ಗಾತ್ರದ ಕಣಗಳಿಂದಾಗಿದೆ. ಅವುಗಳ ಸಮೂಹ ಎಂದೆವಲ್ಲವೆ? ಈ ಮಣ್ಣಿನ ಕಣಗಳು ಎಂದರೇನು ಮತ್ತು ಅವುಗಳ ಪಾತ್ರವೇನೂ ಎಂಬುದೂ ಮುಖ್ಯ. ಮಣ್ಣಿನ ಜೀವಂತಿಕೆಯ ಸಮಗ್ರ ಚಿತ್ರಣಕ್ಕೆ ಈ ಸಂಬಂಧದ ಮೂಲಭೂತವಾದ ಹಲವು ವಿಚಾರಗಳನ್ನು ಅತ್ಯವಶ್ಯಕವಾಗಿ ಅರಿಯಬೇಕಾಗುತ್ತದೆ. ಅವೆಂದರೆ, ಮಣ್ಣಿನ ಕಣಗಳು, ಅವುಗಳ ಹಂಚಿಕೆ, ಜೋಡಣೆ, ಕಾರ್ಯ ಏಕೆಂದರೆ, ಮಣ್ಣಿನ ಇಡಿಯಾದ ಗುಣಲಕ್ಷಣಗಳನ್ನು ಇವೆಲ್ಲಾ ಒಟ್ಟಾರೆಯಾಗಿ ನಿರ್ಧರಿಸುತ್ತವೆ. ಇವುಗಳ ಜೊತೆಗೆ ಇಂಗಾಲದ ವಸ್ತು ಸೇರಿ ಮಣ್ಣನ್ನು ಒಂದು ಪರಿಪೂರ್ಣ ಅದ್ಭುತವನ್ನಾಗಿಸಿದೆ. ಇವುಗಳ ಸಹಚರ್ಯ ಮೊದಲಾದ ವಿವರಣೆಯನ್ನು ಮುಂದಿನ ವಿಚಾರಗಳಲ್ಲಿ ಒದಗಿಸಲಾಗಿದೆ.

ಮಣ್ಣಿನ ಕಣಗಳನ್ನು ಮುಖ್ಯವಾಗಿ ಮೂರು ಬಗೆಯಲ್ಲಿ ವಿಂಗಡಿಸಲಾಗಿದೆ. ಮಣ್ಣು ಎಂದರೆ ಭೂಮಿಯ ಮೇಲಿರುವ ೨ ಮಿಲಿಮೀಟರಿಗಿಂತ ಕಡಿಮೆ ಇರುವ ಖನಿಜಾಂಶದ ಕಣ ಮತ್ತು ಜೊತೆಗಿರುವ ಸಾವಯವ ವಸ್ತು. ಎರಡು ಮಿ.ಮೀ.ಗಿಂತಲೂ ಕಡಿಮೆ ಗಾತ್ರದಲ್ಲಿ ಮೂರು ಬಗೆಯ ಕಣಗಳಿವೆ. ೨-೦.೨ಮಿ.ಮೀ. ಗಾತ್ರದ ದಪ್ಪ ಮರಳು, ೦.೦೨-೦.೦೨ರಷ್ಟು ಗಾತ್ರದ ಸಣ್ಣ ಮರಳು, ೦.೦೨ರಿಂದ ೦.೦೦೨ಮಿ.ಮೀ.ರಷ್ಟು ಗಾತ್ರದ ಗೋಡು ಮಣ್ಣು ಮತ್ತು -.೦೦೨ಮಿ.ಮೀ.ಗಿಂತ ಕಡಿಮೆ ಗಾತ್ರದ ಕಣಗಳನ್ನು ಜೇಡಿ ಎಂತಲೂ ಕರೆಯಲಾಗಿದೆ. ಇವು ಮೂರು ಅನೇಕ ಬಗೆಯ ಮಿಶ್ರಣದಲ್ಲಿ ಸೇರಿರುತ್ತವೆ. ಮರಳು ಒಂದು ರೀತಿಯಲ್ಲಿ ಅಸ್ಥಿಪಂಜರದಂತೆ, ಅದಕ್ಕೆ ಮಾಂಸಖಂಡ ಸ್ನಾಯುಗಳನ್ನು ಕೊಡುವುದೇ ಗೋಡು, ಜೇಡಿ ಮತ್ತು ಸಾವಯವ ಪದಾರ್ಥಗಳು. ಅದರಲ್ಲಿ ಹರಿವ ನೀರು ರಕ್ತ ಸಂಚಾರದಂತೆ. ಈ ಮೂರು ಕಣಗಳ ಪ್ರಮಾಣ ಮಣ್ಣಿನ ಗುಣ ಮತ್ತು ವಿನ್ಯಾಸದ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುವುದು. ಅಂದರೆ ಮಣ್ಣಿನ ರಚನೆಯಲ್ಲಿ ಅದ್ಭುತವಾದ ಸಾಧ್ಯತೆಯನ್ನು ತೋರಬಲ್ಲವು. ಜೇಡಿ-ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು ಅದರ ಹೊರ ಮೈ ವಿಸ್ತೀರ್ಣ ತುಂಬಾ ಹೆಚ್ಚಾಗಿರುತ್ತದೆ. ಗಾತ್ರ ಚಿಕ್ಕದಾದಷ್ಟೂ ಪ್ರತಿ ಯುನಿಟ್‌ ಪದಾರ್ಥಕ್ಕೆ ವಿಸ್ತೀರ್ಣ ಹೆಚ್ಚಾಗುವುದು. ಆದ್ದರಿಂದ ಜೇಡಿ ಹೆಚ್ಚಾದಷ್ಟು ನೀರು ಮತ್ತು ಸಸ್ಯಗಳಿಗೆ ಮಣ್ಣಿನಿಂದ ದೊರೆಯುವ ಸಂಪರ್ಕ ಸಾಧ್ಯತೆ ಹೆಚ್ಚಾಗುತ್ತದೆ.

ಮಣ್ಣಿನ ಪ್ರಮುಖ ಕಣಗಳ ಜೊತೆಯಲ್ಲಿರುವ ಮತ್ತೊಂದು ಬಹು ಮುಖ್ಯವಾದ ಹಾಗೂ ಮಣ್ಣನ್ನು ಜೀವಂತವಾಗಿರಿಸಿರುವ ಕುರುಹುಗಳೂ ಇರುವ ಘಟಕಗಳೆಂದರೆ ಸಾವಯವ ವಸ್ತುಗಳು. ಇವು ಮಣ್ಣಿನ ಬಹು ಮುಖ್ಯವಾದ ಮತ್ತು ಮಣ್ಣಿನಲ್ಲಿರುವ ಜೀವಿಗಳ ಸಹಚರ್ಯದಿಂದ ಉಂಟಾದ ಘಟಕಗಳು. ಮಣ್ಣಿನ ಋಣ ತೀರಿಸಲು ಮರಳಿ ಮಣ್ಣಿಗೆ ಎನ್ನುವ ಮಾತಿದೆ. ಸತ್ತ ಮೇಲೆ ಎಲ್ಲಾ ಮಣ್ಣಿಗೆ ಹೋಗುವ ಬಗೆಗೆ ಸಾಕಷ್ಟು ವಿವರಗಳು ಎಲ್ಲಾ ದಾರ್ಶನಿಕ ಸಂಪ್ರದಾಯದಲ್ಲೂ ಸಿಗುತ್ತವೆ. ಇದರ ಪ್ರಮುಖ ಉದ್ದೇಶವಾದ ತಾನು ಬೆಳೆಯಲು ಮಣ್ಣಿಂದ ಪಡೆದುದೆಲ್ಲವನ್ನೂ ಮಣ್ಣಿಗೇ ಹಿಂತಿರುಗಿಸುವ ಔದಾರ್ಯವಿದೆ. ಈ ಉಳಿಕೆಗಳು ಕೊಳೆಯುವ ರಸಾಯನಿಕವಾಗಿ ವಿವಿಧ ಸಂಯುಕ್ತಗಳಾಗಿ ಮಣ್ಣಿಗೆ ಸೇರುತ್ತಾ ಸಾಗುತ್ತವೆ. ಈ ಇಡೀ ಮಣ್ಣಿನ ಸಾವಯವ ವಸ್ತುವು ಬೃಹತ್‌ ಗಾತ್ರದಿಂದ ಚೂರಾಗುತ್ತಾ ನೆಲದೊಳಗೆ ಸೇರಿ ಹೆಚ್ಚು ಕಡಿಮೆ ಮಣ್ಣಿನಲ್ಲೇ ಲೀನವಾಗುತ್ತದೆ. ಸಂಪೂರ್ಣವಾಗಿ ರೂಪುಗೊಂಡ ಸಾವಯವ ವಸ್ತುವನ್ನು ಹ್ಯೂಮಸ್‌ ಎಂದು ಕರೆಯುವರು. ಮಣ್ಣಿನಲ್ಲಿ ಇದರ ಪಾತ್ರ ಹಿರಿದು, ಏಕೆಂದರೆ ಮಣ್ಣಿನ ವಿವಿಧ ಕಣಗಳ ಜೋಡಣೆಯಲ್ಲಿ ಇದು ಸಹಾಯವಾಗುತ್ತದೆ. ಕಣಜೋಡಣೆಯು ಅದರ ನೀರು ಹಿಡಿದಿಟ್ಟುಕೊಳ್ಳುವ ಆ ಮೂಲಕ ಮಣ್ಣಿಗೆ ಜೀವಂತಿಕೆ ಒದಗಿಸುವ ಸಾಧ್ಯತೆಯನ್ನು ಕೊಡುವುದು.

ಈ ಹ್ಯೂಮಸ್‌ ತಾನು ಒಂದು ಬೃಹತ್‌ ರಸಾಯನಿಕ ಸಂಯುಕ್ತವಾಗಿ ಮಣ್ಣಿಗೆ ರಸಾಯನಿಕ ಶಕ್ತಿಯನ್ನೂ ಒದಗಿಸುವುದು. ಇದರ ಜೊತೆಯಲ್ಲಿ ಜೇಡಿಕಣಗಳು ಸೇರಿ ಅತ್ಯಂತ ಮಹತ್ವವಾದ ರಸಾಯನಿಕ ಗುಣವನ್ನು ಮಣ್ಣಿಗೆ ಒದಗಿಸುತ್ತವೆ. ಈ ಗುಣವೇ ಮಣ್ಣು ಮತ್ತು ಜೀವಿಗಳ ನಡುವಣ ಸಂಬಂಧವನ್ನು ಗಟ್ಟಿಗೊಳಿಸಿದೆ. ಈ ಗುಣವು ಮಣ್ಣಿನಿಂದ ಬೇರುಗಳಿಗೆ ವಿವಿಧ ಬಗೆಯ ರಸಾಯನಿಕ ಸಾಮಗ್ರಿಯನ್ನು ಒದಗಿಸಲು ಕಾರಣವಾಗಿದೆ. ಈ ರಸಾಯನಿಕಗಳೆ ಮಣ್ಣು ಮತ್ತು ಜೀವಿಗಳ ಆ ಮೂಲಕ ಮಾನವರ ರಸಾಯನಿಕ ಸಂಬಂಧವನ್ನು ಉಂಟುಮಾಡಿದೆ. ಇದರಿಂದಾಗಿಯೇ ಜೀವಿಗಳಿಗೆ ವಿವಿಧ ರಸಾಯನಿಕಗಳು, ಅಯಾನುಗಳ ರೂಪದಲ್ಲಿ ಮಣ್ಣಿಂದ ವರ್ಗಾವಣೆಗೊಳ್ಳುತ್ತವೆ. ಆದ್ದರಿಂಧ ಇದನ್ನು ಅಯಾನು ವರ್ಗಾವಣಾ ಸಾಮರ್ಥ್ಯವನ್ನಾಗಿ ಅಳೆದು ಮಣ್ಣಿನೆ ಈ ವಿಶೇಷವನ್ನು ಗುರುತಿಸುವರು. ಬಹುಪಾಲು ಸಾಮಾನ್ಯ ಓದುಗರಿಗೆ ಸಸ್ಯಗಳು ಹೇಗೆ ಆಹಾರ ತಯಾರಿಸುತ್ತವೆ ಎಂಬುದು ಗೊತ್ತು. ಸೂಯ ರಶ್ಮಿಯಿಂದ ಶಕ್ತಿಯನ್ನು ಪಡೆದು ನೆಲದಿಂದ ನೀರನ್ನು ಹೀರಿ ಜೊತೆಗೆ ವಾತಾವರಣದ ಗಾಳಿಯಿಂದ ಇಂಗಾಲದ ಡೈಆಕ್ಸೈಡ್‌ನ್ನು ಸೇರಿಸಿ ಗ್ಲೂಕೋಸ್‌ ತಯಾರಾಗುವ ಈ ಕ್ರಿಯೆಗೆ ದ್ಯುತಿ ಸಂಶ್ಲೇಷಣೆ ಎನ್ನುತ್ತೇವೆ. ಇದನ್ನು ಈ ಭೂಮಂಡಲದ ಅತ್ಯಂತ ಮಹತ್ವದ ನೈಸರ್ಗಿಕಕ್ರಿಯೆ ಎಂಬುದಾಗಿ ಗುರುತಿಸುವರು. ಅದರ ನಂತರ ಈ ಅಯಾನು ವರ್ಗಾವಣಾ ಸಾಮರ್ಥ್ಯವನ್ನು ಹಾಗೆಯೇ ಮುಖ್ಯವಾದ ಮಹತ್ವದ ನೈಸರ್ಗಿಕಕ್ರಿಯೆ ಎನ್ನಲಾಗುತ್ತದೆ. ಇದರ ಮುಖ್ಯವಾದ ಚಟುವಟಿಕೆಯೇ ಜೀವಿಗಳಿಗೆ ಬೇಕಾದ ಖನಿಜಗಳನ್ನು ಮಣ್ಣಿನಿಂದ ಸಸ್ಯಗಳ ಬೇರುಗಳ ಮೂಲಕ ಒದಗಿಸುವುದಾಗಿದೆ. ನಿಸರ್ಗದಲ್ಲಿ ಈ ಕ್ರಿಯೆಯು ವಿಸಾಸವಾಗಿರುವುದೇ ಜೀವ ಸಂಕುಲದೊಡನೆ ನೆಲದ ಸಂಬಂಧವನ್ನು ವಿಆಸಗೊಳಿಸುವುದಾಗಿದೆ. ಈ ಸಾಮರ್ಥ್ಯವು ವಿವಿಧ ಮಣ್ಣುಗಳಲ್ಲಿ ವಿವಿಧ ರೀತಿಯಲ್ಲಿದ್ದು ಈ ಮೂಲಕ ಮಣ್ಣಿನಲ್ಲೂ ವೈವಿಧ್ಯತೆಯನ್ನು ತರುವುದು.

ಮಣ್ಣಿನ ಸಮುದಾಯವನ್ನು ಅರಿಯುವಲ್ಲಿ ನಮಗೆ ಸಹಜವಾಗಿ ನೆಲದ ಮೇಲೆ ಕಾಣಬರುವ ಸಸ್ಯಗಳ ಬುಡದಲ್ಲಿ ಹರಡಿದ ಬೇರುಗಳ ಗೋಚರವನ್ನು ಊಹಿಸುವುದು ಆಸಕ್ತಿದಾಯಕವಾದುದು. ಬೇರುಗಳ ಸಮೂಹವು ವ್ಯೂಹಾತ್ಮಕವಾಗಿದ್ದು ಅಗೋಚರವಾಗಿದೆ. ಇದನ್ನು ಮುಚ್ಚಿಟ್ಟ ಅರ್ಧ ಸಸ್ಯವೆಂದೇ ಕರೆಯಲಾಗುತ್ತದೆ. ಏಕೆಂದರೆ ಮಣ್ಣಿನ ಒಳಗಣ ಸಸ್ಯದ ಭಾಗವೇ ಇದಾಗಿರುವುದರಿಂದ ಇದು ಮಣ್ಣಿನ ಸಮುದಾಯವನ್ನು ನಿರ್ಮಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಈ ಬೇರುಗಳು ತಮ್ಮ ಅಂತ್ಯದ ಬಳಿಕ ನೆಲಕ್ಕೆ ಸೇರಿ ಮಣ್ಣಿನಲ್ಲಿ ಒಂದಾಗುವುದರಿಂದ ಮಣ್ಣಿನೊಳಗಣ ಸಾವಯವ ವಸ್ತುವನ್ನು ಉಂಟುಮಾಡುವಲ್ಲಿ ಮುಖ್ಯವಾದುದಾಗಿವೆ.

ಮಣ್ಣುಗಳ ಕುರಿತ ಅರಿವಿನ ವಿಕಾಸ

ನೆಲದ ಬಗೆಗಿನ ಅರಿವಿನ ವಿಕಾಸ ಅದರ ಬಳಕೆಯಿಂದಲೇ ಆರಂಭವಾಗಿದೆ. ನಾಗರೀಕತೆಗಳ ಆರಂಭದಿಂದ ವೈವಿಧ್ಯಮಯ ಕೃಷಿಗೆ ತೊಡಗಿದಾಗಿಂದ ಇದರ ಮಹತ್ವವು ಹೆಚ್ಚಿದೆ. ಈ ಭೂಮಿಯ ಮೇಲಿನ ವಿವಿಧ ಬಗೆಯ ಕೃಷಿ ಪದ್ದತಿಗಳ ವಿಕಾಸಕ್ಕೆ ಹಾಗೂ ವೈವಿಧ್ಯಮಯ ನಾಗರೀಕತೆಗಳ ಉಗಮಕ್ಕೆ ಮಣ್ಣಿನ ಕೊಡಿಗೆಯನ್ನು ಅದರ ಮಹತ್ವವನ್ನೂ ಸಾಕಷ್ಟೇ ಗುರುತಿಸಲಾಗಿದೆ. ಆದಾಗ್ಯೂ ಕೇವಲ ಕೆಲವೇ ದಶಕಗಳಿಂದ ಮಾತ್ರವೇ ಅದನ್ನು ವೈಜ್ಞಾನಿಕವಾಗಿ ಮಾನವರ ಏಳಿಗೆಗೆ ಅನೂಕೂಲವಾಗುವಂತಹ ಆಶಯಗಳಿಂದ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಹಸ್ರಾರು ವರ್ಷಗಳಿಂದಲೂ ಮಣ್ಣನ್ನು ಉಪಯೋಗಗಳ ಹಾಗೂ ಅನುಕೂಲವಾಗುವಂತಹ ಆಶಯಗಳಿಂದ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಹಸ್ರಾರು ವರ್ಷಗಳಿಂದಲೂ ಮಣ್ಣನ್ನು ಉಪಯೋಗಗಳ ಹಾಗೂ ಅನುಕೂಲಕಾರಕ ವಸ್ತುವನ್ನಾಗಿ ನೋಡುತ್ತಾ ಬಂದಿದ್ದೇವೆ. ಕೆಲವೆ ವರ್ಷಗಳಿಂದ ಅದನ್ನು ವೈಜ್ಞಾನಿಕವಾಗಿ ಓರೆಹಚ್ಚಿ ಅದರ ಬಹುಮುಖ ಪರಿಚಯದತ್ತ ಜಗತ್ತು ನೋಡಲಾರಂಭಿಸಿದೆ. ಅಂದರೆ ಜಗತ್ತಿನ ವೈಜ್ಞಾನಿಕ ಮನಸ್ಸು ಆಗಸ ನಕ್ಷತ್ರಗಳ, ಸುತ್ತಲ ಜೀವಿಗಳ ಅಥವಾ ಕಲ್ಲು ಬಂಡೆಗಳ ಅಧ್ಯಯನಕ್ಕೆ ಕೊಡುವಷ್ಟೇ ಮಹತ್ವವನ್ನು ಕೊಡಲಾರಂಭಿಸಿದೆ. ಈ ಎಲ್ಲಾ ಸದಾಶಯಗಳೂ ಕೇವಲ ಅದರ ಕೃಷಿ ಉಪಯೋಗವನ್ನು ಹೆಚ್ಚಿಸುವ ಆ ಮೂಲಕ ಹೆಚ್ಚಿನ ಇಳುವರಿ ಕೊಡುವಂತಹ ಉಪಾಯಗಳನ್ನು ಹುಡುಕುವುದಕ್ಕೆ ಹಚ್ಚಿ ಪ್ರಾಶಸ್ತ್ಯವನ್ನು ಕೊಟ್ಟಿವೆ. ಈ ಹುಡುಕಾಟವು ಮಣ್ಣು ವಿಜ್ಞಾನ ಎಂಬ ವೈಜ್ಞಾನಿಕ ವಿಭಾಗದ ಮೂಲಕ ಕೃಷಿ ವಿಜ್ಞಾನದಲ್ಲೊಂದು ಹೊಸ ವಿಚಾರಕ್ಕೆ ಮೊದಲಾಗಿದೆ.

ಮಾನವರ ಕುತೂಹಲಕ್ಕೆ ಮಣ್ಣಿನ ವೈವಿಧ್ಯತೆಯ ಅಗಾಧತೆಯ ಸಾಕಷ್ಟು ಕಾರಣವನ್ನು ಒದಗಿಸಿದೆ. ಇದೇ ಮಣ್ಣುಗಳ ವೈವಿಧ್ಯತೆಯ ಅಧ್ಯಯನಕ್ಕೆ ಆ ಮೂಲಕ ಅವುಗಳನ್ನು ಹೆಚ್ಚಿನ ಅರಿವಿಗೆ ತರುವ ಪ್ರಯತ್ನವನ್ನು ಮಾಡಲಾಗಿದೆ. ಕಳೆದ ಶತಮಾನದ ಆದಿಯಿಂದ ಇಂದಿನವರೆವಿಗೂ ಮಣ್ಣುಗಳ ಮತ್ತು ಆಮೂಲಕ ಮಣ್ಣಿನೆಡೆಗೆ ಮಾನವರ ಆಸಕ್ತಿಗಳ ಚಲನಾಶೀಲತೆಯನ್ನು ಅರಿಯುವ ಅಧ್ಯಯನಗಳು ನಡೆದಿವೆ. ಆರಂಭದಲ್ಲಿ ಕೇವಲ ಹಲವೇ ಗುಣಗಳಿಂದ ವೈವಿಧ್ಯತೆಯನ್ನು ಮತ್ತು ಭೂಮಿಯ ಮೇಲ್ಮೈಯಲ್ಲಿನ ಅವುಗಳ ವಿಸ್ತಾರವನ್ನು ಅರಿಯುವ ಪ್ರಯತ್ನಗಳು ಶುರುವಾದವು. ಬ್ರಿಟಿಷರು ಮತ್ತು ವಸಾಹತುಗಳ ವಿಸ್ತಾರದ ಆಸೆಯಿಂದ ವಿವಿಧ ಬಗೆಯ ಸರ್ವೇಕ್ಷಣೆಗಳನ್ನು ಕೈಗೊಂಡರು. ಅದರ ಫಲವಾಗಿಯೇ ಮಣ್ಣುಗಳ ಸರ್ವೇಕ್ಷಣೆಯೂ ಪ್ರಾರಂಭವಾಯಿತು. ಅದರಂತಯೇ ಮಣ್ಣಿನ ವೈವಿಧ್ಯತೆಯೂ ಅದರ ಕುತೂಹಲವನ್ನು ಹೆಚ್ಚಿಸಿ ವಿಶಿಷ್ಟ ಅರಿವಿನ ವಿಕಾಸಕ್ಕೆ ಕಾರಣವಾಯಿತು. ಮೂಲ ರಷಿಯಾದ ಅಗಾಧ ವಿಸ್ತಾರ ಇಂತಹ ಮಣ್ಣಿನ ವೈವಿಧ್ಯತೆಯ ಅಧ್ಯಯನ ಮತ್ತು ಅವುಗಳ ವೈಜ್ಞಾನಿಕ ವಿಂಗಡಣೆಯ ಕಾರ್ಯಕ್ಕೆ ನಾಂದಿ ಹಾಡಿದೆ. ಇದು ಮಣ್ಣುಗಳ ಫಲವತ್ತತೆಯ ಅರಿವು ಹಾಗೂ ಮಣ್ಣಿನ ಬಳಕೆಯ ವೈಶಿಷ್ಟತೆಯ ತಿಳುವಿನ ಹಾದಿಯನ್ನು ಸುಗಮಗೊಳಿಸುವತ್ತ ಹೆಚ್ಚಿನ ಜ್ಞಾನವನ್ನು ಹುಟ್ಟಿಸಿದೆ. ಇಂದಂತೂ ಕಂಪ್ಯೂಟರೀಕೃತ ಜಗತ್ತಿನಲ್ಲಿ ಇದೂ ಸಾಕಷ್ಟು ಮುಂದುವರಿದ ತಾಂತ್ರಿಕತೆಯನ್ನುಒ ಬಳಸುವತ್ತ ಹೆಜ್ಜೆಹಾಕಿದೆ.

ಮಣ್ಣಿನ ಅರ್ಥೈಸುವಿಕೆಯು ವಿಜ್ಞಾನದ ಅನೇಕ ವಿಭಾಗಗಳ ನೆರವಿನಿಂದ ಗಟ್ಟಿಗೊಳಿಸುತ್ತಾ ಹೆಜ್ಜೆಹಾಕಿದೆ. ಆರಂಭದಲ್ಲಿ ಭೂಗರ್ಭಶಾಸ್ತ್ರ, ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ ಹಾಗೂ ಜೀವಶಾಸ್ತ್ರಗಳು ಹೆಚ್ಚಿನ ನೆರವನ್ನು ಒದಗಿಸಿದವು. ಅದರಲ್ಲೂ ರಸಾಯನಿಕಶಾಸ್ತ್ರವಂತೂ ಮಣ್ಣಿನ ಅರಿವಿನ ವಿಕಾಸದಲ್ಲಿ ಹಾಗೂ ಅದರ ಸಮಕಾಲೀನ ವಿಶ್ಲೇಷಣೆಯಲ್ಲಿ ಬಹುಮುಖ್ಯಪಾತ್ರವನ್ನು ಒದಗಿಸಿದೆ. ಇದರ ಫಲವಾಗಿಯೇ ಮಣ್ಣಿನ ಪರೀಕ್ಷೆಯ ಉತ್ತರಗಳು ಹೆಚ್ಚಿನ ಪಾಲು ರಸಾಯನಶಾಸ್ತ್ರೀಯ ವಿಶ್ಲೇಷಣೆಗಳಾಗಿವೆ. ಅದರ ಆಚೆಗೂ ಮಣ್ಣಿನ ವಿಸ್ತಾರವಾದ ಅರಿವು ಅಥವಾ ಜ್ಞಾನವಿದೆ. ಅದು ಕಾಸ್ಮಾಲಜಿಯಿಂದ ಮೊದಲ್ಗೊಂಡು ಅರ್ಥಶಾಸ್ತ್ರದವರೆಗೂ ವಿವಿಧ ಶಾಖೆಗಳ ಅನ್ವಯತೆಯು ಸಾಧ್ಯವಾಗಿದೆ.

ಆಧುನಿಕ ಚಿಂತನೆಗಳು ಮಣ್ಣಿನ ಅರಿವನ್ನು ಅನ್ವಯ ಜ್ಞಾನದ ಪರಿಧಿಯಿಂದ ನೋಡತೊಡಗಿದವು. ಇತರೆ ಶಾಸ್ತ್ರೀಯ ಬೆಳವಣಿಗೆಗಳು ಒಂದಕ್ಕೊಂದು ಅನ್ವಯಿಸಿಕೊಂಡು ಬೆಳೆದಂತೆ ಮಣ್ಣಿನ ಅರಿವಿನ ಮೇಲೂ ಸಾಕಷ್ಟು ಪ್ರಭಾವವನ್ನಲು ಬೀರುತ್ತಿವೆ. ಆದರೆ ಅವು ಅಷ್ಟಾಗಿ ನೇರವಾಗಿ ಕಾಣಬರುತ್ತಿಲ್ಲವಾದರೂ ಅದರ ಮಾಹಿತಿಯ ದಟ್ಟ ಪ್ರಭಾವವು ಕಾಣುತ್ತದೆ. ಇದೇ ಅದರ ಅರಿವನ್ನು ಬಗೆ ಬಗೆಯಾಗಿ ಬಳಸುವಂತೆ ಮಾಡಿ ಇಂದಿನ ಪರಿಸ್ಥಿತಿಯಲ್ಲಿನ ನೆಲದ ಮೇಲಿನ ಪ್ರಭುತ್ವಕ್ಕೆ ಅತೀವ ಆಸೆಯನ್ನು ಮಾನವರಲ್ಲಿ ತಂದಿದೆ.

ಕೃಷಿಯ ಹಿನ್ನೆಲೆಯಲ್ಲಿ ವಿಕಾಸವಾದ ಮಣ್ಣಿನ ಅರಿವೇ ಅತ್ಯಂತ ಮುಖ್ಯವಾದ ಹಾಗೂ ಪ್ರಭಾವಶಾಲಿಯಾದ ಅರಿವಾಗಿದೆ. ಮುಂದೆ ಇದನ್ನು ಕೃಷಿಯ ಮೂಲಕ ಮಕಣ್ಣಿನ ಸಹಚರ್ಯದಲ್ಲಿ ವಿವರವಾಗಿ ಚರ್ಚಿಸಿದೆ.

ಕೃಷಿಯ ಹಿನ್ನೆಲೆಯಲ್ಲಿನ ಅರಿವು ಮುಖ್ಯವಾದರೂ ಅದರ ಜೊತೆಗೆ ಇತರೇ ಶಾಖೆಗಳಾದ ರಸ್ತೆ ನಿರ್ಮಿತಿ ಕೆರೆ ಕಾಲುವೆಗಳ ನಿರ್ಮಾಣಗೊಳ್ಳುತ್ತಾ ಮಾನವರ ಜೊತೆಗೆ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಸಾಗಿದೆ. ವೈಜ್ಞಾನಿಕ ಶಾಖೆಗಳೇ ಅಲ್ಲದೆ ಕಾವ್ಯ, ಕಥನ ನಾಟಕ ಮುಂತಾದ ಕಲಾ ಮಧ್ಯಮಕ್ಕೂ ಈ ನೆಲವು ತನ್ನ ಛಾಪು ಮೂಡಿಸಿದೆ. ಅವೂ ಕೂಡ ತಮ್ಮ ಕಾಣಿಕೆಯನ್ನು ಗಮನಾರ್ಹವಾಗಿಯೇ ನೀಡಿವೆ. ಅನೇಕ ಕಲಾ ಪ್ರಕಾರಗಳು ಚರಿತ್ರೆಯ ದಾಖಲೆಗಳೂ ನೆಲದ ಅರಿವಿಗೆ ಕಾರಣವಾಗಿವೆ. ರಾಜಕೀಯ ಆಸಕ್ತಿಯಂತೂ ನೆಲಕ್ಕೆ ಅಂಟಿದ ಬಲವಾದ ನಂಟು. ಅದರ ಮೂಲಕವೂ ನೆಲದ ಮಾಹಿತಿಯು ಜನತೆಯನ್ನು ಕುತೂಹಲದ ಸೆಲೆಯಲ್ಲಿ ಕಾಪಾಡಿಕೊಂಡು ಬಂದಿದೆ. ಪ್ರಸ್ತುತ ನೆಲದ ಅರಿವು ಅದನ್ನು ವ್ಯವಸ್ಥಿತ ಬಳಕೆಯನ್ನು ಮಾತ್ರವೇ ಕೇಂದ್ರೀಕರಿಸುತ್ತಾ ಬೆಳೆದುದರಿಂದ ಅದರ ಇತರೇ ಕೊಡುಗೆ ಮತ್ತು ಮಹತ್ವಗಳತ್ತ ಗಮನ ಸೆಳೆಯುವುದು ಮುಖ್ಯವಾಗಿ ಕಾಣುತ್ತಿಲ್ಲ. ಮೂಲ ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಆಸಕ್ತಿಯಿಂದ ಹೊರಬಂದು ಅದರ ಪರಿಪೂರ್ಣ ನಿಲುವು ಮತ್ತು ಉದ್ದೇಶಗಳ ತಾತ್ವಿಕ ಅಧ್ಯಯನಗಳು ಅದರ ಅರಿವನ್ನು ಹೆಚ್ಚಿಸಬೇಕಿದೆ. ಏಕೆಂದರೆ ಪ್ರಮುಖವಾಗಿ ಅದೊಂದು ನಿಸರ್ಗದ ಅತ್ಯದ್ಭುತವಾದ ಕೊಡುಗೆಯಾಗಿ ಅದನ್ನು ಕಾಣುತ್ತಿರುವ ಸಂದರ್ಭದಲ್ಲಿ ಅದಕ್ಕೆ ಸಿಗಬೇಕಾದ ಮಹತ್ವವನ್ನು ಪರಿಪೂರ್ಣವಾಗಿ ಅರಿಬೇಕಿದೆ. ಆದರೆ ಅದು ಕೇವಲ ಅದರ ಬಳಿಕೆ ಮತ್ತು ಲಾಭದ ವಸತಿ ಅಡಿಪಾಯವನ್ನಾಗಿ ಜೊತೆಗೆ ಒಂದಷ್ಟು ವ್ಯಾವಹಾರಿಕ ಜ್ಞಾನವು ಸೇರಿದೆ.

ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ತಂತ್ರಜ್ಞಾನ-ಇದೊಂದು ಬಗೆಯಲ್ಲಿ ನೆಲವನ್ನು ಈ ಭೂ ಮೇಲ್ಮೈಯ ಭಾಗವಾಗಿ ತಿಳುವಳಿಕೆಯನ್ನು ಕೊಡುವ ಸಮಸ್ಯೆ. ಭೂಗೋಳವನ್ನು ಅರಿಯುವಂತೆ ಯಾವುದೇ ಸ್ಥಳದ ಅಕ್ಷಾಂಶ ಹಾಗೂ ರೇಖಾಂಶದ ಆಧಾರದಲ್ಲಿ ಆ ಸ್ಥಳವನ್ನು ನಿಖರವಾಗಿ ಗುರುತಿಸುವ ಸಾಧನ. ಜೊತೆಗೆ ಅದರ ಮೇಲೆ ನಾವು ಭೂಪಟದಲ್ಲಿ ಗುರುತಿಸುವಂತೆ ಯಾವುದೇ ಮಾಹಿತಿಯನ್ನು ನಕ್ಷೆಯಲ್ಲಿ ಪಡೆಯುವ ಬಗೆ. ಇದಲ್ಲದೆ ಇನ್ನೂ ಹಲವಾರು ರೀತಿಯ ಭೂ ನಕ್ಷೆಯನ್ನು ತಯಾರಿಸುವ ವಿಧಾನವೂ ಇದಾಗಿದೆ. ಮಣ್ಣುಗಳ ಆಧುನಿಕ ಅರಿವಿನಲ್ಲಿ ಇದರ ಪಾತ್ರವೂ ಸೇರಿ ಮಹತ್ವ ಪಡೆದಿದೆ. ಮಣ್ಣಿ ನಕ್ಷೆಗಳನ್ನು ಫಲವತ್ತತೆಯ ಆಧಾರದ ಮೇಲೆ ಅಲ್ಲದೇ ಬೆಳೆವ ಪೈರಿನ ಕುರಿತೂ ಇದರ ಮಹತ್ವವೂ ಹೆಚ್ಚಿನದಾಗಿದೆ.

ಗೂಗಲ್ ಅರ್ಥ್”- ಜಗತ್ತಿನ ನೆಲದಗಲವನ್ನು ಮಾನವರ ಕಣ್ಣಿನ ನೇರಕ್ಕೆ ತಂದ ತಂತ್ರಜ್ಞಾನ ಇದೊಂದು ಆಧುನಿಕ ಕಂಪೂಟರ್ ಆಧಾರಿತ ಅಂತರ್ಜಾಲದ ಅರಿವಿನ ಹರಹು ಎನ್ನಬಹುದು. ಇದು ನೆಲವನ್ನೂ ಭೌಗೋಳಿಕ ಮಾಹಿತಿ ವ್ಯವಸ್ಥೆಯಿಂದ ಭೂಮಿಯನ್ನು ಅರಿಯುವ ಸಾಧನ. ಉಪಗ್ರಹದ ಆಧಾರಿತ ಚಿತ್ರಗಳನ್ನು ಬಳಸಿ ಯಾವುದೇ ಸ್ಥಳದ ನಿಖರವಾದ ನಕ್ಷೆಯನ್ನು ಅಂತರ್ಜಾಲದಲ್ಲಿ ಪಡೆಯಬಹುದು. ಇದೂ ಸಹ ನೆಲದ ತಿಳಿವಿನಲ್ಲಿ ಮಹತ್ತರವಾದ ಪಾತ್ರ ವಹಿಸುವ ಹಾಗೂ ಹೊಸ ಪೀಳಿಗೆಯ ಯುವಕರಲ್ಲಿ ಅತ್ಯಂತ ಜನಪ್ರಿಯವಾದ ಅರಿವು.

ಅಂತರ್ಜಾಲವನ್ನು ಜಾಲಾಡುತ್ತಾ, ಕುಳಿತಲ್ಲೇ ಜಗದ ಪ್ರವಾಸ ಮಾಡುವಂತಹ ಆಧುನಿಕ ಅರಿವಿನ ಮಾಧ್ಯಮವು ಇಂದು ಲಭ್ಯ. ಇದರ ಸ್ಥಳೀಯ ಉಪಯೋಗಗಳು ಹಲವಾರು. ಇದರಿಂದ ನಮಗೆ ಬೇಕಾದ ಸ್ಥಳದ ಚಿತ್ರವನ್ನು ಪಡೆಯಬಹುದಾಗಿದ್ದು, ಹಿಂದೊಮ್ಮೆ ಸಾವಿರಾರು ರೂಪಾಯಿಗಳ ಕೊಟ್ಟರೂ ದೊರಕಲು ಕಷ್ಟ ಪಡಬೇಕಿದ್ದ ಮಾಹಿತಿಯು ಬೆರಳ ತುದಿಗೇ ಎಟಕುವಂತಹ ಸಾಧ್ಯತೆ. ಈ ಚಿತ್ರಗಳ ಬಳಸಿ ಅದನ್ನು ಸ್ಥಳೀಯ ಮಾಹಿತಿಯನ್ನು ಅದರಲ್ಲಿ ತುಂಬಿ ಅಂತರ್ಜಾಲದಲ್ಲೇ ದೊರಕುವ ಸಾಪ್ಟವೇರ್ ಉಪಯೋಗಿಸಿ ಮಾಹಿತಿಯನ್ನು ನಿಖರವಾಗಿ ವಿಶ್ಲೇಷಿಸಬೇಕಾಗಿದೆ. ಅದನ್ನು ನೆಲದ ಚಲನಾ ವ್ಯವಸ್ಥೆಯನ್ನು ಅರಿಯಲು ಬಳಸುವ ಉಪಾಯವು ಇದರಿಂದ ಸುಲಭವಾಗಿ ಸಾಧ್ಯವಾಗಿದೆ.

ಕೃಷಿಯ ಮೂಲಕ ಮಣ್ಣಿನ ಸಹಚರ್ಯ

ಮಾನವ ಸಮುದಾಯವು ಈ ಭೂಮಿಯ ಅತ್ಯಂತ ಪ್ರಮುಖವಾದ ಜೈವಿಕ ಸಮುದಾಯ. ಪ್ರಾಯಃ ಎಲ್ಲಾ ಜೈವಿಕ ಸಮುದಾಯಗಳಲ್ಲೇ ವಿಭಿನ್ನವಾಗಿ ಗುರುತಿಸಿಕೊಂಡಂತಹ ಸಮುದಾಯ. ಈ ಮಾನವರ ಜೀವನ ಕ್ರಮವು ಎಲ್ಲಾ ಜೀವರಾಶಿಗಳಲ್ಲೇ ಅತ್ಯಂತ ಭಿನ್ನವಾದ ಹಾಗೂ ಅಸಹಜವಾದ ಪದ್ದತಿಗಳನ್ನು ಒಳಗೊಂಡಿದೆ. ಪ್ರಾಣಿ ವರ್ಗದಲ್ಲೇ ಮಾನವರು ತಮ್ಮನ್ನು ಮೇಲುಸ್ತರದಲ್ಲಿ ಕಂಡುಕೊಳ್ಳುವ ಮೂಲಕ ಇಡೀ ಜೀವರಾಶಿಯ ಮೇಲೆ ಹಿಡಿತ ಸಾದಿಸುವ ಮಟ್ಟಿಗೆ ವಿಕಾಸ ಹೊಂದಿದ್ದಾರೆ. ಆದಿ ಕಾಲದಲ್ಲಿ ಎಲ್ಲಾ ಜೀವಿಗಳು ಅಲೆಮಾರಿಯಾಗಿದ್ದವು. ಅದರಂತೆ ಮಾನವರೂ ಅಲೆಮಾರಿಯಾಗಿದ್ದರು. ಕ್ರಮೇಣ ಪ್ರಕೃತಿಯ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಲು ಒಂದೆಡೆ ನೆಲೆಯಾದರು. ಹೀಗೆ ಮೊದಲು ಗುಹೆಗಳಲ್ಲಿ ಅವರು ನೆಲೆಗಳನ್ನು ಕಂಡು ಕೊಂಡ ಬಗ್ಗೆ ಅನೇಕ ಪುರಾವೆಗಳು ಈಗ ಸಾಮಾನ್ಯವಾದ ವಿಚಾರ. ಈ ಗುಹೆಗಳಿಂದ ಅವರು ತಮ್ಮ ವಸಾಹತುಗಳನ್ನು ನಿರ್ಮಿಸಿಕೊಳ್ಳುವುದನ್ನು ಕಲಿತರು. ವಾಸಕ್ಕೆ ಯೋಗ್ಯ ವಸತಿಗಳನ್ನು ಕಂಡುಕೊಂಡರು. ತಾವೆ ನಿರ್ಮಿತಿಗೂ ತೊಡಗಿದರು. ಅಲೆಮಾರಿಯಾಗಿದ್ದ ಮಾನವ ಒಂದಡೆ ಕಲೆತು, ನೆಲೆ ನಿಂತು, ತನ್ನ ವಾಸ ಸ್ಥಳದಲ್ಲಿ ತಾನೆ ತಿಂದೆಸೆದ ಹಣ್ಣಿನ ಬೀಜ ಮೊಳೆತು, ಗಿಡವಾಗಿ-ಬಲಿತು ಹೂ ಬಿಟ್ಟು ತಿಂದೆಸೆದ ಹಣ್ಣಿನಂತಹದ್ದೇ ಹಣ್ಣು ಬಿಟ್ಟ ವಿಸ್ಮಯವನ್ನು ಜೀವನಕ್ಕೂ ತಂದು ಕೊಂಡದ್ದೇ ಕೃಷಿಗೂ ನಾಂದಿಯಾಯಿತು. ಈ ಮೊದಲ ಹಂತದ ನೆಲೆಗಳಲ್ಲಿ ತಮ್ಮ ವಸಹತುಗಳಿಂದ ತಾವೆ ತಿಂದು ಎಸೆದ ಯಾವುದೋ ಫಲದ ಬೀಜ ಮೊಳೆತು ಗಿಡವಾಗಿ ತಿಂಡ ಫಲವನ್ನೇ ಬಿಟ್ಟ ವಿಸ್ಮಯವನ್ನು ಕಂಡು ಬೆರಗಾಗಿರಬೇಕು. ಬೆರಗುಗೊಂಡ ಕುತೂಹಲದ ಮನಸ್ಸು ಮತ್ತೆ ಮತ್ತೆ ಅದೇ ಬೆರಗಿಗೆ ಹಾತೊರೆದು ಅದನ್ನೇ ಜೀವನಕ್ಕೂ ತಂದುಕೊಂಡದೇ ಕೃಷಿಗೆ ಮುನ್ನೆಡೆಯಿಟ್ಟಿತು. ಕೃಷಿ ಒಂದು ಜೀವನ ಕ್ರಮ. ಭಾರತೀಯ ದೇಶದಲ್ಲಿ ಬಹು ಜನರ ಉದ್ಯೋಗ. ಸ್ವತಂತ್ರ ಬದುಕಿಗೆ ನಿಸರ್ಗದೊಡನೆಯೇ ಕಲಿತ ಬಹು ಮುಖ್ಯವಾದ ಬದುಕಿನ ಕಲೆ. ಬಹುಕಾಲದವರೆಗೂ ಇದಕ್ಕೆ ಯಾವುದೇ ಹೊರ ಪ್ರಪಂಚದ ಜ್ಞಾನ ಶಿಸ್ತುಗಳ ಹೇರಿಕೆಯಾಗಲಿ, ಪ್ರಭಾವಗಳಾಗಲಿ ಇರಲಿಲ್ಲ. ಕೃಷಿಯು ೧೦,೦೦೦ಕ್ಕಿಂತಲೂ ಪುರಾತನವಾದದ್ದು. ಈ ಮೂಲಕ ನೆಲೆಯನ್ನು ಕಂಡ ಸಮುದಾಯವಾಗಿ ಮಾನವರು ಮಣ್ಣಿನ ಸಹಚರ್ಯವನ್ನು ಹೊಸ ರೀತಿಯಲ್ಲಿ ಪರಿಬಾವಿಸುವ ಕ್ರಮಕ್ಕೆ ನಾಂದಿ ಹಾಡಿದರು.

ತಮ್ಮ ನೆಲೆಯಲ್ಲಿಯೇ ತಮ್ಮೆಲ್ಲಾ ಅಗತ್ಯಗಳನ್ನು ಪೂರೈಸುವ ಆಲೋಚನೆಗಳು ವಿಕಾಸಗೊಂಡದ್ದೇ ಆರಂಭಿಕ ನೈಸರ್ಗದ ದಾಳಿಯ ಉಗಮಕ್ಕೆ ಕಾರಣವಾಯಿತು. ತಮ್ಮ ಅಗತ್ಯಗಳನ್ನೇ ಮೂಲವಾಗಿಟ್ಟುಕೊಂಡು ನಾಗರೀಕತೆಯ ಆರಂಭಕ್ಕೆ ಮೊದಲಾಯಿತು. ಅದರಿಂದ ನಿಸರ್ಗವನ್ನು ತಮ್ಮ ಅಗತ್ಯಕ್ಕೆ ಅಷ್ಟೇ ಅಲ್ಲದೆ ನಿರಂತರವಾದ ಆಸೆಗಳ ಪೂರೈಕೆಗೆ ಬಳಸುವ ಸಾಧನವಾಗಿಸಿ, ನಿಸರ್ಗವನ್ನು ಶೋಷಿಸುವ ತಂತ್ರಗಳನ್ನು ಹುಟ್ಟಿಹಾಕಲಾಯಿತು. ಜಾಗತಿಕವಾಗಿ ಬಹುತೇಕ ಜನಾಂಗಗಳು ಒಟ್ಟಾರೆ ಜೀವನ ಕ್ರಮವನ್ನು ಅವರ ಕೃಷಿಯಿಂದ ವಿಕಾಸಗೊಳಿಸಿಕೊಂಡದ್ದೇ ಹೆಚ್ಚು. ಇದೊಂದು ಬಗೆಯಲ್ಲಿ ಯಾವುದೇ ಜೀವಿ ನಿಸರ್ಗದ ಭಾಗವಾಗಿ ತನ್ನ ಬದುಕಿಗೆ ಕಂಡುಕೊಂಡ ಕ್ರಮವೆಂದರೂ ಆದೀತು. ಅಷ್ಟು ಸಹಜವಾಗಿ ಇದರ ಚಟುವಟಿಕೆಗಳು ಪಾರಂಪರಿಕವಾಗಿ ಸಂತತಿಗಳಲ್ಲಿ ಹರಿದು ಬಂದಿವೆ. ಸುಮಾರು ೩೦೦ ವರ್ಷಗಳ ಹಿಂದೆಯೇ ವಿಜ್ಞಾನದ ಅವಿಷ್ಕಾರಗಳು ಈ ಜಗತ್ತಿನ ಕುತೂಹಲದಿಂದ ಆರಂಭಗೊಂಡು ಇಂದು ಅದ್ಭುತ ಮಾಯಾಲೋಕವನ್ನೇ ಸೃಷ್ಟಿಸಿದ್ದರೂ, ಕೇವಲ ೧೦೦-೧೨೫ ವರ್ಷಗಳ ಹಿಂದೆಯಷ್ಟೇ ಇವು ಕೃಷಿಯನ್ನು ಆವರಿಸಿದೆ. ಮೊದಲ ರಸಾಯನಿಕ ಗೊಬ್ಬರ, ‘ರಂಜಕ’ ಪೂರೈಸುವ ಸೂಪರ್ ಫಾಸ್ಫೇಟ್‌. ನಂತರ ‘ಹೇಬರ್’- ಸಾರಜನಕವನ್ನು ಕೃತಕವಾಗಿ ತಯಾರಿಸುವ ಬಗೆಯನ್ನು ಅನ್ವೇಷಿಸಿದ ಮೇಲೆ ಅಷ್ಟೆ ಇದರ ವ್ಯಾಪ್ತಿ ಹಿರಿದಾಗಿದೆ. ಹಾಗಾಗಿ ಇವು ಅತ್ಯಂತ ಪ್ರಭಾವಶಾಲಿ ಗೊಬ್ಬರಗಳಾಗಿ ಪ್ರಚಲಿತವಾದವು. ಅನಂತರ ಇವುಗಳ ಹೆಚ್ಚು ಹೆಚ್ಚು ಬಳಕೆಯನ್ನು ಪ್ರಚೋದಿಸುವಂತಹ ಕ್ರಮಗಳು ಬೆಳೆದವು. ಮುಖ್ಯವಾಗಿ ಇವು ಕೃಷಿಗೆ ಏನೆಲ್ಲಾ ಬೇಕು ಎಂಬ ಪರಿಕಲ್ಪನೆಯನ್ನು ಹುಟ್ಟಿಸಿದವು. ಕೃಷಿಗೆ ಏನು ಬೇಕು? ಎಷ್ಟು ಬೇಕು? ಎಂಬ ಪ್ರಶ್ನೆಗಳೇ ಮುಂದೆ ಇದರ ಬಯಕೆಯನ್ನೂ, ಅದರ ವಿಸ್ತಾರವನ್ನು ಹಿಗ್ಗಿಸಿದವು.

ಗ್ರೆಗರ್ ಜಾನ್‌ ಮೆಂಡಲ್‌ ಎಂಬ ಕ್ರಿಸ್ತ ಪಾದ್ರಿಯ ಬಟಾಣಿಕಾಳುಗಳ ಪ್ರಯೋಗ, ಹೊಸ ತಳಿಗಳಿಗೆ ನಾಂದಿಯಾಯಿತು. ಬಗೆಬಗೆಯ ತಳಿಗಳು ಬಂದವು. ಇವೇ ಮುಂದೆ ಹೆಚ್ಚು ಗೊಬ್ಬರ ಬೇಡುವ-ದೊಡ್ಡ ಹೊಟ್ಟೆಯ-ಜೀವಿಗಳಾದವು. ಜೊತೆಗೆ ಅಧಿಕ ಇಳುವರಿಯನ್ನು ತಂದು ರೈತರ ಪ್ರೀತಿಯನ್ನು ಸಂಪಾದಿಸಿದವು. .ತಳಿಗಳಲ್ಲಿ ನಮಗೆ ಪ್ರಿಯವಾದ ಗುಣಗಳನ್ನು ವರ್ಗಾಯಿಸುವ ವೈಜ್ಞಾನಿಕ ಪ್ರಯತ್ನಗಳು ವಿಜ್ಞಾನದಲ್ಲಿ ಸಾಧಿಸಿದ ಮೇಲೆ ಅವುಗಳನ್ನು ವ್ಯವಹಾರಕ್ಕೆ ಹಚ್ಚುವುದು ತಡವಾಗಲಿಲ್ಲ. ನೂರಾರು ಕಂಪನಿಗಳು ಹೊಸ ಹೊಸ ತಳಿಗಳ ಮೂಲಕ ಹೊಸ ಕನಸುಗಳನ್ನು ಹೊತ್ತು ತಂದು ಕೃಷಿಯ ಪರಿಕರಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು. ಇದೇ ಒಂದು ಉದ್ಯಮವಾಗಿ ಇದರ ಅಪಾರ ವಹಿವಾಟಿನ ತೊಡಗುವಿಕೆಯ ಬಂಡವಾಳ ಮತ್ತು ಲಾಭದ ಹಿನ್ನೆಲಯಲ್ಲಿ ಇದು ಒಂದು ಪ್ರಬಲವಾದ ಉದ್ಯಮವಾಗಿ ಬೆಳೆಯಿತು. ರೈತರನ್ನು ವಹಿವಾಟಿನ ಮತ್ತು ಮಾರುಕಟ್ಟೆಯ ಹಿಡಿತಕ್ಕೆ ತರುವ ಪ್ರಯತ್ನವು ಯಶಸ್ವಿಯಾಯಿತು. ಇಂದು ರೈತೋದ್ಯಮದಲ್ಲಿ ಈ ಪರಿಕರಗಳೇ ಮುಖ್ಯವಾಗಿ ಅವುಗಳ ಮೂಲಕ ಮಣ್ಣಿನ ನಿರ್ವಹಣೆ ಎನ್ನುವ ಅನುಮಾನಗಳನ್ನು ಬಿತ್ತಿರುವ ಸಾಧ್ಯತೆಯೇ ಹೆಚ್ಚಾಗಿದೆ. ಹಾಗಾಗಿ ಇಂದು ಇಡೀ ಕೃಷಿಯನ್ನು ಆಳುತ್ತಿರುವ ಇವು ಮಣ್ಣು ಅಥವಾ ಈ ನೆಲವನ್ನು ಮಾನವ ಸಂಬಂಧ ಕಲ್ಪಿಸುವಲ್ಲಿ ಪ್ರಮುಖ ಕೊಂಡಿಗಳಂತೆ ಯೋಜಿಸಲಾಗಿದೆ. ಇದರಿಂದ ಅನೇಕ ವೈಪರೀತ್ಯಗಳನ್ನೂ ಅನುಭವಿಸುವ ಆ ಮೂಲಕ ಅವೂ ರೈತನನ್ನು ಆಲೋಚನೆಗೆ ಹಚ್ಚಿವೆ.

ಮನುಷ್ಯ ಮೂಲತಃ ಕುತೂಹಲಿ, ಪ್ರಯೋಗಶೀಲ, ಸೃಜನಶೀಲ ಹಾಗೇನೆ ತುಂಬಾ ಶ್ರಮವಹಿಸಿ ಏನಾದರು ನಿಭಾಯಿಸಿಯೇನು ಎನ್ನು ಛಲವುಳ್ಳವನು. ಹಾಗಾಗಿ ನಾವಿನ್ಯ ಮಾದರಿಗಳನ್ನು ಒಗ್ಗಿಕೊಳ್ಳುತ್ತಾ ಬೆಳೆದ. ಇವೆಲ್ಲಾ ಬಹುದಿನ ತಡೆಯಲಿಲ್ಲ. ಏಕೆಂದರೆ ಕೃಷಿಯು ಒಂದು ನಿಸರ್ಗದ ನಿಯಮಗಳಲ್ಲೇ ಅದರ ಮಿತಿಯೊಳಗೇ-ದೊಡ್ಡದಾಗಿ-ಅದರಿಂದ ವಿಸ್ತಾರಗೊಂಡ ಕ್ರಮವಾಗಿ ಮುಂದುವರಿಯಬೇಕಿತ್ತು. ಹಾಗಾಗಲಿಲ್ಲ. ಬಹು ದೊಡ್ಡ ಜೈವಿಕ ಸಾಮ್ರಾಜ್ಯವಾದ ಕೀಟಗಳು ಕೃಷಿಯನ್ನು ಆಳುವಂತೆ ಪರಿಭಾವಿಸ ತೊಡಗಿ, ಅವನ್ನು ನಿಯಂತ್ರಿಸುವ ಅನೇಕ ಬಗೆಯ ವಿಷ ವಸ್ತುಗಳು ಅವಿಷ್ಕಾರವಾಗತೊಡಗಿತು. ಆಗ ರಸಾಯನ ಶಾಸ್ತ್ರವು ಏಳಿಗೆಯ ಹಂತದಲ್ಲಿತ್ತು. ಈ ಏರು ಗತಿಯು ಲಕ್ಷಾಂತರ ರಸಾಯನಿಕಗಳನ್ನು ಸೃಷ್ಟಿಸಿತು.

ಹೀಗೆ ಒಂದು ಅಭಿವೃದ್ಧಿಯ ಮಾನದಂಡವೆಂದರೆ ಹೊಸ ಹೊಸ ಉತ್ಪತ್ತಿ ಎಂಬಂತಹ ಸಂದರ್ಭದಲ್ಲಿ ಕೃಷಿಯು ಅದರ ಪ್ರಭಾವಕ್ಕೆ ಒಳಗಾಯಿತು. ಆಧುನಿಕ ಕೃಷಿಯು ಇಡೀ ಈ ಹೊಸ ಹೊಸ ಪರಿಕರಗಳ ಬರಾಟೆಯಿಂದ ಬೆಳೆಯತೊಡಗಿತು. ರಂಜಕ, ಸಾರಜನಕ, ಪೊಟ್ಯಾಷ್‌ ಇತ್ಯಾದಿ ಗೊಬ್ಬರಗಳ ಜೊತೆಗೆ ಸಹಸ್ರಾರು ಕೀಟನಾಶಕ, ಕಳೆನಾಶಕ, ಶಿಲೀಂದ್ರನಾಶಕ ಇತ್ಯಾದಿ, ಇತ್ಯಾದಿಗಳು ಸೇರಿದವು. ಉತ್ಪನ್ನ ಪ್ರೇರಿತ-ಮಾರುಕಟ್ಟೆಯನ್ನೇ ಗುರಿಯಾಗಿಸಿ ಕೊಂಡ-ಕೃಷಿಯೇ ಆಧುನಿಕತೆ ಎನ್ನುವಂತಾಯಿತು. ಇದು ಸಹಜವಾಗಿ ವ್ಯವಹಾರ, ಲಾಭ, ವಸಾಹತುಶಾಹಿತನ, ಇತ್ಯಾದಿ ಆರ್ಥಿಕ ನಿಲುವುಗಳಲ್ಲಿ ಪ್ರಕಾಶಿಸತೊಡಗಿತು. ಆದರೂ ಯಾವುದೇ ಒಂದೇ ಬಗೆಯ ತೀರ್ಮಾನಗಳು ಸಂಪೂರ್ಣವಾಗಿ ಕೃಷಿಯನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಕಾರಣ ಇದೊಂದು ಜೈವಿಕ ಪರಂಪರೆಯಿಂದ ವಿಕಾಸಗೊಂಡ ವಹಿವಾಟು. ಕೀಟಗಳು ಒಮ್ಮೆಲೆ ನಿರೋಧಕತೆಯನ್ನು ಬೆಳೆಸಿಕೊಂಡವು ಹೊಸ ರಸಾಯನಿಕ ಬೇಕಾಯಿತು. ರೋಗ ನಿಯಂತ್ರಣವೂ ಹಾಗೆಯೆ ತಪ್ಪತೊಡಗಿತು. ಜೀವ ಪರಂಪರೆಯ ಸಂಕೀರ್ಣತೆಯ ಅರಿವಾಗಿ ಕೃಷಿಯು ಪರ್ಯಾಯಗಳತ್ತ ವಾಲತೊಡಗಿತು. ಆಗ ಪರ್ಯಾಯಗಳ ಹುಡುಕಾಟ ಆರಂಭವಾಯಿತು. ಜಗತ್ತಿನಾದ್ಯಂತ ೧೯೭೫ರ ನಂತರ ಪರ್ಯಾಯದ ಗಾಳಿ ಬಲವಾಗಿ ಬೀಸತೊಡಗಿತು. ೧೯೯೦ರ ದಶಕದಲ್ಲಿ ಭಾರತದಲ್ಲಿ ಈ ಬೆಳವಣಿಗೆಗೆ ಸಾಕಷ್ಟು ಪ್ರಭಾವ ಬೀರಿತು. ರೈತರೂ ಸಮ್ಮೇಳನಗಳು, ಕಮ್ಮಟಗಳು, ಕಾರ್ಯಾಗಾರಗಳು ಎಂದೆಲ್ಲಾ ಸುತ್ತುತ್ತಾ ಹುಡುಕಾಟದಲ್ಲಿ ತೊಡಗಿದರು. ಹೀಗಾಗಲು ಕೃಷಿಯ ಚಲನಾಶೀಲತೆಯನ್ನು ಮಣ್ಣಿನ ಹಿನ್ನೆಲೆಯಿಂದ ಪರಾಮರ್ಶಿಸುವ ಅಗತ್ಯವಿದೆ. ಮೇಲಿನ ಎಲ್ಲಾ ಬದಲಾವಣೆಗಳೂ ಮಣ್ಣಿನ ಸಹಚರ್ಯವನ್ನು ಭಿನ್ನ ರೀತಿಯಲ್ಲೇ ಬೆಳೆಸುತ್ತಾ ಸಾಗಿದವು. ವೈಜ್ಞಾನಿಕ ಆಧುನಿಕತೆಯು ಇದಕ್ಕೆ ಒತ್ತು ಕೊಡುತ್ತಾ ಬೆಳೆಯಿತು. ಇಷ್ಟೆಲ್ಲಾ ದೊಡ್ಡ ದೊಡ್ಡ ಮಾದರಿಗಳ ಜೊತೆಗೆ ಮಣ್ಣಿನ್ನು ಅರಿಯುವ ಆ ಮೂಲಕ ಕೃಷಿಗೆ ಅರಿವನ್ನು ಕೊಡುವ ರಸಾಯನಿಕ ಮಾದರಿಗಳು ಹೆಚ್ಚಿನದಾಗಿ ಕಂಡು ವಿಕಾಸಗೊಂಡವು. ಇವೆಲ್ಲವನ್ನೂ ಮಣ್ಣಿನ, ರೈತರ ಪರಿಭಾಷೆಯಲ್ಲಿಟ್ಟು ಜೈವಿಕ ಹಾಗೂ ನಿಸರ್ಗಕ್ಕೆ ಹತ್ತಿರವಾದ ಫಲದೊಡನೆ ನೋಡುವ ಸಾಧ್ಯತೆಯನ್ನು ಕಟ್ಟಬೇಕಿದೆ.

ಮಣ್ಣಿನ ಸ್ವಭಾವವನ್ನು ಕುರಿತು ಒಂದು ಮಾತಿದೆ.

ಭೂಮಿಯ ಜೊತೆ ನೀನು ಮಾತನಾಡು ಆಕೆ ನಿನಗೆ ಕಲಿಸುತ್ತಾಳೆ”.

ಹೀಗೆ ಹೇಳುವ ಈ ಮಾತಿನಲ್ಲಿ ಮಣ್ಣಿನಿಂದ ರೂಪಿತವಾಗಿರುವ ಮಾನವನ ಬದುಕು ಅದೆಷ್ಟು ಮಣ್ಣನ್ನೇ ಅವಲಂಭಿಸಿದೆ ಎಂಬುದರ ಸಾಬೀತು ಅಷ್ಟೆ. ಈ ಮಣ್ಣು ಎಲ್ಲಾ ಜೀವಿಗಳಿಗೂ ಮತ್ತು ಎಲ್ಲಾ ಬಗೆಯ ಆಹಾರಕ್ಕೂ ಮೂಲಧಾರವಾಗಿದ್ದರೂ, ಅದು ಕೇವಲ ಕಡಿಮೆ ಅರ್ಥವಾಗಿರುವ ಒಂದು ಮಾಧ್ಯಮವಾಗಿದೆ. ಮಣ್ಣಿನ ಫಲವತ್ತತೆಯೆಂಬುದು ಈಗ ಎಲ್ಲ ರೈತರ ಅನುಭವಕ್ಕೂ ಮತ್ತೂ ತಿಳುವಳಿಕೆಗೂ ಸಿದ್ದವಾಗಿರುವ ವಿಚಾರ. ಕಳೆದ ಐವತ್ತು ವರ್ಷಗಳಿಂದ ರೈತರು ಒಂದಲ್ಲಾ ಒಂದು ಬಗೆಯಲ್ಲಿ ಈ ಆಧುನಿಕ ಅರಿವನ್ನು ತಮ್ಮ ಸಾಂಪ್ರದಾಯಿಕ ಅರಿವಿನ ಜೊತೆಗೆ ಬಳಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಮತ್ತೆ ಮತ್ತೆ ಆಧುನಿಕ ಅರಿವಿನ ಜೊತೆಗೆ ಸಾಂಪ್ರದಾಯಕ ಅರಿವನ್ನು ಪುನರ್ಜೋಡಿಸಿ ನೋಡುವ ಕೃಷಿಯ ಸಾಹಿತ್ಯವನ್ನು ಆಗಾಗ್ಗೆ ಕಾಣುತ್ತಿದ್ದೇವೆ. ಮೊದಲಿನಿಂದಲೂ ಮಣ್ಣು ವಿಜ್ಞಾನವು ಕೃಷಿಯನ್ನು ಮೂಲ ಹಂತದಿಂದ ಆಧುನಿಕತೆಯೆಡೆಗೆ ಕೊಂಡ್ಯೊದ ವಿಜ್ಞಾನವಾಗಿದೆ. ಹೆಚ್ಚೂ ಕಡಿಮೆ ಕೃಷಿಗೆ ವಿಜ್ಞಾನದ ನಂಟು ಹತ್ತಿದ್ದೇ ಮಣ್ಣಿನ ಕುರಿತ ವಿಜ್ಞಾನದ ಅನ್ವಯಗಳಿಂದ. ಮುಖ್ಯವಾಗಿ ಬೆಳೆಗೆ ಏನೇನು ಬೇಕು ಎನ್ನುವ ಪ್ರಶ್ನೆಯಿಂದ ಆರಂಭವಾದ ಈ ಬೆಳವಣಿಗೆಗಳು ಅನೇಕಾನೇಕ ರಸಗೊಬ್ಬರಗಳನ್ನು ಇಂದು ತಂದೊಡ್ಡಿವೆಯಲ್ಲದೆ ಜೊತೆಗೆ ಅನೇಕ ಸಮಸ್ಯೆಗಳನ್ನೂ ತಂದಿವೆ. ಇವುಗಳ ಕೂಲಂಕುಷವಾದ ಸವಿವರವೇ ಇಲ್ಲಿ ಮುಂದೆ ಚರ್ಚಿತ ವಿಚಾರಗಳ ಮೂಲ ಆಶಯ.

ಸಸ್ಯಗಳಿಗೇನು ಬೇಕು ಏನೇನು ಬೇಕು ಎನ್ನುವುದಕ್ಕೆ ಉತ್ತರವಾಗಿ ಕಂಡುಕೊಂಡ ಪೋಷಕಾಂಶಗಳು ಮಣ್ಣಿನ ಫಲವತ್ತತೆಯೆಂಬ ವಿಶ್ಲೇಷಣೆಯಲ್ಲಿ ಅರಿವಿನ ಬೆಳಕನ್ನು ನೀಡತೊಡಗಿವೆ. ಈ ಫಲವತ್ತತೆಯ ಅರಿವು ನಿರ್ವಹಣೆಯಲ್ಲಿ ಫಲಕೊಡುತ್ತಾ ಮತ್ತೆ ಮತ್ತೆ ಕಂಡುಕೊಂಡ ಉತ್ತರಗಳಿಂದಾಗಿ ಹೊಸ ಹೊಸ ತಿಳುವಳಿಕೆಯನ್ನು ಕಟ್ಟಿಕೊಡುತ್ತಾ ಬೆಳೆದಿವೆ. ಇವೇ ಇಂದು ಸಮಗ್ರ ಪೋಷಕಾಂಶಗಳ ನಿರ್ವಹಣೆಯೆಂಬುದಾಗಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಅವಶ್ಯ ತಂತ್ರಗಳನ್ನು ವಿಕಸಿಸಿವೆ.

ಮಣ್ಣು ಎಲ್ಲಾ ಬಗೆಯ ಆಹಾರದ ತಯಾರಿಯಲ್ಲಿ ಮೂಲಧಾರವಾಗಿದೆ. ಆ ಮೂಲಕ ಮಣ್ಣಿನ ಆರೋಗ್ಯ ಕಾಪಾಡುವ ಜವಾಬದ್ದಾರಿ ನಮಗೆಲ್ಲಾ ಇದೆ. ಯಾವುದೇ ಜೀವಿಯ ಅಗತ್ಯಗಳೆಂದರೆ ವಿವಿಧ ಬಗೆಯ ಪೋಷಕಾಂಶಗಳು. ಮುಖ್ಯವಾಗಿ ಸುಮಾರು ೨೦ ಬಗೆಯ ಮೂಲವಸ್ತುಗಳು ಇವನ್ನು ಒಳಗೊಂಡಿವೆ. ಈ ಇಪ್ಪತ್ತೂ ಬಗೆಯ ಪೋಷಕಾಂಶಗಳನ್ನು ಸಮಗ್ರವಾಗಿ ನಿರ್ವಹಿಸುವುದೇ ಮುಖ್ಯವಾದದ್ದು. ಆದರೆ ಏನಾಗಿದೆ ಇದರಲ್ಲಿ ಬಹು ಮುಖ್ಯವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಕೆಲವು ಮೂಲವಸ್ತುಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಆದರೆ ನಮ್ಮ ಸಂಪೂರ್ಣ ಆರೋಗ್ಯಕ್ಕೆ ಎಲ್ಲವೂ ಮುಖ್ಯವಾದವು. ನಾವು ಬಳಸುವ ಯಾವುದೇ ಆಹಾರವು ಈ ಎಲ್ಲಾ ಮೂಲವಸ್ತುಗಳನ್ನು ಒಳಗೊಂಡಿರಬೇಕಾಗಿದೆ. ಅದಕ್ಕಾಗಿ ಮಣ್ಣು ಅವುಗಳನ್ನು ಒದಗಿಸುವಂತೆ ಇರಬೇಕು. ಈ ಮೂಲವಸ್ತುಗಳೆಂದರೆ ಇಂಗಾಲ, ಜಲಜನಕ, ಆಮ್ಲಜನಕ, ಸಾರಜನಕ, ರಂಜಕ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ, ಗಂಧಕ, ಕಬ್ಬಿಣ, ಮ್ಯಾಂಗನೀಸ್‌, ಬೋರಾನ್‌, ಮಾಲಿಬ್ದಿನಂ, ತಾಮ್ರ, ಸತು, ಕ್ಲೋರಿನ್‌, ಸೋಡಿಯಂ, ಕೋಬಾಲ್ಟ್‌, ಸೆಲೆನಿಯಂ, ಮತ್ತು ಸಿಲಿಕಾನ್‌. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಹೊರತು ಪಡಿಸಿದರೆ ಉಳಿದವೆಲ್ಲಾ ನೇರವಾಗಿ ಮಣ್ಣಿನಿಂದಲೇ ದೊರೆಯುತ್ತವೆ. ಹಾಗಾಗಿ ಮಣ್ಣಿಗೆ ಅವುಗಳನ್ನು ಒದಗಿಸುವ ಮಹತ್ತರ ಜವಾಬ್ದಾರಿ ಇದೆ. ಇಂಗಾಲ, ಜಲಜನಕ, ಆಮ್ಲಜನಕಗಳು ಸಸ್ಯಗಳಿಗೆ ಇಂಗಾಲಾಮ್ಲ, ಗಾಳಿ ಮತ್ತು ನೀರಿನಿಂದ ದೊರೆಯುತ್ತವೆ. ಆದ್ದರಿಂದ ಸಸ್ಯ ಪೋಷಕಾಂಶಗಳ ನಿರ್ವಹಣೆಯಲ್ಲಿ ಕೆಲವು ಸಂಗತಿಗಳನ್ನು ಲಕ್ಷ್ಯದಲ್ಲಿಟ್ಟು ನೋಡಬೇಕಾಗುತ್ತದೆ. ಅವೆಂದರೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಬೆಳೆಗೆ ಸಿಗುವ ರೀತಿಯಲ್ಲಿ ನೋಡಿಕೊಳ್ಳಬೇಕು, ಬೆಳೆಗೆ ವಿವಿಧ ಹಂತದಲ್ಲಿ, ಪೋಷಕಾಂಶಗಳು ಅವಶ್ಯವಿರುವಷ್ಟು ಪ್ರಮಾಣದಲ್ಲಿ ಸಿಗುವಂತಿರಬೇಕು. ಪೋಷಕಾಂಶಗಳು ಸುಲಭವಾಗಿ ಸಿಗುವ ರೂಪದಲ್ಲಿರಬೇಕು. ಪೋಷಕಾಂಶಗಳು ಒಂದಕ್ಕೊಂದು ಸಮತೋಲನ ಪ್ರಮಾಣದಲ್ಲಿರಬೇಕು.

ಇವನ್ನು ಸಮರ್ಥವಾಗಿ ನಿರ್ವಹಿಸುವ ಏಕಮಾತ್ರ ಮಾರ್ಗವೆಂದರೆ ಸಮಗ್ರ ಪೋಷಕಾಂಶ ನಿರ್ವಹಣಾ ಪದ್ದತಿಯ ಅಳವಡಿಕೆ. ಏನಿದು ಸಮಗ್ರ ಪೋಷಕಾಂಶ ನಿರ್ವಹಣಾ ಪದ್ಧತಿ? ಈ ಸಾಲೆ ಉತ್ತರಿಸುವಂತೆ ಈ ಹಿಂದೆ ಹೇಳಿದ ಎಲ್ಲಾ ಮೂಲ ವಸ್ತುಗಳ ದೊರಕುವಂತೆ ನಿರ್ವಹಿಸುವ ಸಮಗ್ರವಾದ ಒಂದು ಪದ್ಧತಿ. ಅದೆಂದರೆ ಎಲ್ಲವನ್ನೂ ಒದಗಿಸುವ ಎಲ್ಲಾ ಮೂಲಗಳ ಪದಾರ್ಥಗಳನ್ನು ಬಳಸಿ ಮಣ್ಣಿನ ಮೂಲವಸ್ತುಗಳ ಕೊರತೆಯನ್ನು ನಿಭಾಯಿಸುವುದು. ರೈತರಿಗೆಲ್ಲಾ ಗೊಬ್ಬರದ ಬಳಕೆಯೆಂದರೆ, ಯೂರಿಯಾ, ಡಿಎಪಿ, ಪೊಟ್ಯಾಷ್‌ ಎಂಬುದು ಸಾಮಾನ್ಯವಾಗಿ ತಿಳಿದಿದೆ. ಅಷ್ಟೇ ಅಲ್ಲದೆ, ಇವೆಲ್ಲಾ ಬರುವುದಕ್ಕೂ ಮೊದಲೂ ಬೇಸಾಯ ಎನ್ನುವುದು ಇತ್ತು. ಅಲ್ಲದೆ ನಿಸರ್ಗವೂ ನಿತ್ಯ ಬೇಸಾಯ ಮಾಡುತ್ತಲೇ ಇದೆ. ಇಲ್ಲದಿದ್ದರೆ ಕಾಡುಗಳು ಎಲ್ಲಿರುತ್ತಿದ್ದವು? ಇವನ್ನು ಅರ್ಥೈಸಿಕೊಂಡು ಪೋಷಕಾಂಶ ನಿರ್ವಹಿಸುವ ಮಾರ್ಗವೇ ಸಮಗ್ರ ಪೋಷಕಾಂಶ ನಿರ್ವಹಣಾ ಪದ್ದತಿ. ಇದಕ್ಕಾಗಿ ಎಲ್ಲವನ್ನು ನೀಡುವಂತಹ ಎಲ್ಲಾ ಮೂಲಗಳನ್ನೂ ಬಳಸುವ ಮಾರ್ಗವೇ ಸಮಗ್ರ ಪೋಷಕಾಂಶ ನಿರ್ವಹಣೆ. ಇದರಲ್ಲಿ, ಸಾವಯವ ಅಥವಾ ಕೊಟ್ಟಿಗೆ ಗೊಬ್ಬರ, ಹಸಿರು ಗೊಬ್ಬರ, ರಸಗೊಬ್ಬರ, ಅಲ್ಲದೆ ಸಾರಜನಕ ಸ್ಥಿರೀಕರಿಸುವ ಜೀವಾಣು, ರಂಜಕ ಕರಗಿಸುವ ಜೀವಾಣು ಹೀಗೆ ಎಲ್ಲವನ್ನು ಬಳಸಿ ಉತ್ತಮ ಪೋಷಕಾಂಶ ನಿರ್ವಹಿಸುವುದೇ ಆಗಿದೆ.

ಹಾಗೆಂದರೆ ಇದೇನಿದು ಹೊಸದೇ? ಪೋಷಕಾಂಶಗಳ ನಿರ್ವಹಣೆಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆಗೂ ಬಹಳ ವ್ಯತ್ಯಾಸಗಳಿವೆಯೇ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿತು. ಪೋಷಕಾಂಶಗಳ ನಿರ್ವಹಣೆ ಎಂದರೆ ಮಣ್ಣಿನಲ್ಲಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳ ಕಾಪಾಡುವಿಕೆ. ಆದರೆ ಇವನ್ನು ಕೇವಲ ಯಾವುದೋ ಒಂದೇ ಮೂಲದಿಂದ ಒದಗಿಸಿದರಷ್ಟೇ ಸಾಲದು ಅದರಿಂದ ನೈಸರ್ಗಿಕವಾಗಿ ನಿರ್ವಹಿಸುವ ಮಣ್ಣಿನ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಂಡು ಕೊಂಡು ವಿಕಸಿಸಿದ ಮತ್ತಷ್ಟು ನವೀನ ಅರಿವೇ ಸಮಗ್ರ ಪೋಷಕಾಂಶಗಳ ನಿರ್ವಹಣೆ.

ಫಲವತ್ತತೆಯ ನಿರ್ವಹಣೆಯಲ್ಲಿ ಹಲವಾರು ರಸಗೊಬ್ಬರಗಳ ಬಳಕೆ ರೈತರಿಗೆ ತುಂಬಾ ಸಹಜವಾಗಿ ತಿಳಿದಿದೆ. ಆದರೆ ಬಹುಪಾಲು ಮಾನವರ ಸಹಜ ಸ್ವಭಾವವೇ ವೇಗದಿಂದ ಗುರಿತಲುಪುವ ಆಸೆಯಾದ್ದರಿಂದ ಈ ಭರದಲ್ಲಿ ಅಧಿಕ ರಸಗೊಬ್ಬರಗಳು ಇಲ್ಲವೇ ಅಸಮತೋಲ ಬಳಕೆ ಇತ್ಯಾದಿಯಿಂದಾಗಿ ಕೃಷಿಯೊಂದು ನಿಸರ್ಗ ಕ್ರಮವೆಂಬುದನ್ನು ಮರೆತಂತೆ ಕಾಣತೊಡಗಿದ್ದಾನೆ. ಇದರಿಂದಾಗಿ ಇದನ್ನು ಮತ್ತೆ ಮರು ಚಿಂತನೆ ಮಾಡುವ ಅವಕಾಶ ಬಂದೊದಗಿದೆ.

ಮುಖ್ಯವಾಗಿ ಬೇಸಾಯದ ಕ್ರಮವೆ ನಿಸರ್ಗದೊಡನೆಯೆ ಅನುಸಂಧಾನವಾಗಿರಬೇಕು. ಆಗ ಬಹುಪಾಲು ಸಮಸ್ಯೆಗಳು ಸುಲಭವಾಗಿ ಪರಿಹಾರದ ಮಾರ್ಗವನ್ನು ಕಂಡುಕೊಳ್ಳುತ್ತವೆ. ಕೃಷಿಯ ನಿಯಮವನ್ನು ಅರ್ಥಮಾಡಿಕೊಳ್ಳಲು ನಿಸರ್ಗದ ಕಾಡಿನ ಬೇಸಾಯದ ಮಾದರಿಯನ್ನು ರೈತರು ಯೋಚಿಸಬಹುದು. ಕಾಡಿಗೆ ಯಾರೂ ಉಳುಮೆ ಮಾಡಿ ಗೊಬ್ಬರಹಾಕಿ, ಬಿತ್ತನೆ ಮಾಡಿ ನೀರು ಹಾಯಿಸುವುದಿಲ್ಲ. ಔಷಧ ಸಿಂಪಡಿಸುವುದಿಲ್ಲ. ಆದಾಗ್ಯೂ ಅಲ್ಲಿ ನಿರಂತರವಾದ ಒಕ್ಕಲು ನಡೆದೇ ಇರುತ್ತದೆ. ಅಂತಹ ಮಾದರಿಯನ್ನು ಮಾನವ ತನ್ನ ಜಮೀನಿನಲ್ಲಿ ಸ್ವಲ್ಪ ಮಟ್ಟಿಗಾದರೂ ಮಾಡಲು ಸಾಧ್ಯವಾದರೆ ಅದರಿಂದ ನಿಸರ್ಗಕ್ಕೆ ಮತ್ತು ತಮ್ಮ ತೋಟದಲ್ಲಿ ಬೇಸಾಯಕ್ಕೆ ಸುಸ್ಥಿರತೆ ಪಡೆಯುತ್ತದೆ.

ಮಣ್ಣಿಗೆ ತನ್ನ ಫಲವತ್ತತೆಯನ್ನು ಕಾಪಾಡಿಕೊಳ್ಳುವ ಮತ್ತು ಆ ಮೂಲಕ ನಿರಂತವಾಗಿ ತನ್ನ ಮೇಲೆ ಬೆಳೆದ ಗಿಡಗಳಿಗೆ ಪೋಷಕಾಂಶಗಳನ್ನು ಒದಗಿಸುವ ಗುಣವಿದೆ. ಇದಕ್ಕಾಗಿ ಮಣ್ಣಿನಲ್ಲಿ ಸಾಕಷ್ಟು ಸಾವಯವ ವಸ್ತು ಅಥವಾ ಇಂಗಾಲದ ವಸ್ತು ಇರಬೇಕಾಗುತ್ತದೆ. ನಿಸರ್ಗದಲ್ಲಿ ಇದು ಯಾವುದೇ ಜೀವಿ ಸತ್ತ ಮೇಲೆ ಮರಳಿ ಮಣ್ಣಿಗೇ ಸೇರುವ ಸರಳ ತತ್ವದ ಆಧಾರದಲ್ಲಿ ನಡೆಯುತ್ತಿರುತ್ತದೆ. ಅದೇ ರೀತಿಯಲ್ಲಿ ಸಾಧ್ಯವಾದಷ್ಟು ಉಳಿಕೆಗಳನ್ನು ಮರಳಿ ಮಣ್ಣಿಗೇ ಸೇರಿಸುವುದರ ಮೂಲಕ ಕಾಪಾಡಿಕೊಳ್ಳಬೇಕು. ಯಾವುದೇ ಸಸಿಯು ತನಗೇನು ಬೇಕೋ ಅದನ್ನು ತಾನು ಹುಟ್ಟಿ ಬೆಳೆದ ನೆಲದಿಂದ ಪಡೆದಿರುತ್ತದೆ. ಆದ್ದರಿಂದ ಭೂಮಿಗೆ ಸಾಕಷ್ಟು ತಿಂದು ಬಿಟ್ಟ ಉಳಿಕೆಗಳನ್ನು ಅಂದರೆ ತಿಂದು ಬಿಟ್ಟ ನಂತರ ಉಳಿದ ತ್ಯಾಜ್ಯವನ್ನು ಅದೇ ನೆಲಕ್ಕೆ ಕೊಡಬೇಕಾದ್ದು ಪ್ರಕೃತಿ ಧರ್ಮ, ಆ ಮೂಲಕ ಆ ಮಣ್ಣಿನ ಹಾಗೂ ನೆಲದ ಫಲವತ್ತತೆಯನ್ನೂ ಉಳಿಸಿಕೊಟ್ಟ ಹಾಗಾಗುತ್ತದೆ. ಜೊತೆಯಲ್ಲಿ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟು ಕೊಳ್ಳುವ ಗುಣವನ್ನು ಹೆಚ್ಚಿಸಿದಂತೆ ಆಗುತ್ತದೆ. ಮಣ್ಣಿನ ಫಲವತ್ತೆಯ ಅರಿವು ಅದರ ಪರೀಕ್ಷೆ ಮತ್ತು ವಿಶ್ಲೇಷಣೆಗಳ ಮೂಲಕ ನಡೆಸಲಾಗುತ್ತದೆ.