ಮಣ್ಣು ಪರೀಕ್ಷೆ ಮತ್ತು ಅದರ ವಿಶ್ಲೇಷಣೆ: ಈ ಬಗೆಯ ಫಲವತ್ತತೆಯ ಅರಿವನ್ನು ಎಳೆ ಎಳೆಯಾಗಿ ವಿವಿಧ ಪೋಷಕಾಂಶಗಳ ಒಟ್ಟಾರೆ ಪ್ರಮಾಣಗಳ ಅಳತೆಗಳ ಮೂಲಕ ವಿಶ್ಲೇಷಣೆಗೆ ಒಳ ಪಡಿಸಲಾಗುವುದು. ಮುಖ್ಯವಾಗಿ ಪ್ರಧಾನ ಪೋಷಕಾಂಶಗಳು (ಸಾರಜನಕ, ರಂಜಕ ಪೊಟ್ಯಾಸಿಯಂ, ಗಂದಕ, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಸಿಯಂ) ಹಾಗೂ ಲಘು ಪೋಷಕಾಂಶಗಳು (ಸತು, ಕಬ್ಬಿಣ, ಮ್ಯಾಂಗನೀಸ್‌, ತಾಮ್ರ, ಮಾಲಿಬ್ಡಿನಂ, ಬೋರಾನ್‌ ಕ್ಲೋರಿನ್‌) ಎಂಬುದಾಗಿ ಅರಿಯಲಾಗಿದೆ. ಅವುಗಳಲ್ಲಿ ಪ್ರಧಾನ ಪೋಷಕಾಂಶಗಳಲ್ಲಿ ರಸಗೊಬ್ಬರ ಮೂಲವಸ್ತುಗಳಾದ, ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಂ ಪ್ರಮಾಣಗಳನ್ನು ಪ್ರಮುಖವಾಗಿ ಅಳೆದು ರಸಗೊಬ್ಬರಗಳನ್ನು ಶಿಫಾರಸು ಮಾಡಲಾಗುವುದು. ಇದನ್ನು ಮಣ್ಣು ಪರೀಕ್ಷೆಯ ಮೂಲಕ ಮಾಡಲಾಗುವುದು. ಮಣ್ಣು ಪರೀಕ್ಷೆಯ ವಿವರಗಳು ಮತ್ತು ಅದನ್ನು ನಿರ್ವಹಿಸುವ ರೀತಿಯು ರಸಾಯನಿಕ ಶಾಸ್ತ್ರಿಯ ಮಾದರಿಯಿಂದ ನಡೆಸಲಾಗುವುದು. ವಿಶ್ಲೇಷಣೆಗೆ ಒಳಪಡಿಸುವ ಮಣ್ಣನ್ನು ಅಗತ್ಯದ ಮೂಲವಸ್ತುವಿಗೆ ಅನುಗುಣವಾಗಿ ರಸಾಯನಿಕಗಳಿಂದ ಪ್ರಕ್ರಿಯೆಗಳಿಗೆ ಒಳಪಡಿಸಿ ನಂತರ ಮೂಲವಸ್ತುವಿನ ಪ್ರಮಾಣವನ್ನು ನಿಶ್ಕರ್ಷೆ ಮಾಡಲಾಗುವುದು. ಇದಕ್ಕೆ ಪ್ರತಿಯೊಂದು ಮೂಲವಸ್ತುವಿಗೂ ಒಂದೊಂದು ಬಗೆಯ ರಸಾಯನಿಕ ಮಾರ್ಗವಿದ್ದು ಆ ಮೂಲಕ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಇವೆಲ್ಲವೂ ಮಣ್ಣಿನಲ್ಲಿ ಆಯಾ ಮೂಲವಸ್ತುಗಳ ಅಥವಾ ಪೋಷಕಾಂಶಗಳ ದೊರಕುವಿಕೆಯನ್ನು ನಿರ್ಧರಿಸುತ್ತವೆ. ಈ ಸಂದರ್ಭದಲ್ಲಿ ದೊರಕುವಿಕೆಯ ಪ್ರಮಾಣ ಎಷ್ಟು ಎಂಬುದರ ಆಧಾರದ ಮೇಲೆ ಮತ್ತು ಯಾವ ಬೆಳೆಯನ್ನು ಬೆಳೆಸಬೇಕು ಎಂಬುದನ್ನು ಆಧರಿಸಿ ಶಿಫಾರಸ್ಸು ಮಾಡಲಾಗುವುದು. ಆದರೆ ಇದೇನಿದ್ದರೂ ಮಣ್ಣು ಮತ್ತು ಮಾನವರ ಸಂಬಂದವನ್ನು ರಸಾಯನಿಕವಾಗಿ ಕೃಷಿಯಲ್ಲಿ ಹಲವು ಪರಿಕರಗಳ ಬಳಕೆಗೆ ಸೀಮಿತಗೊಳ್ಳುವಂತೆ ವಿಮರ್ಶಿಸಲು ಸಾಧ್ಯವಾಗಿದೆ. ಸಂಪೂರ್ಣವಾಗಿ ಸಂಬಂಧಗಳನ್ನು ಅನುಭವಕ್ಕೆ ತರಲು ಇಡಿಯಾಗಿ, ಹಾಗೂ ಅವೆಲ್ಲವುಗಳಾಚೆಯೂ ನೋಡಬೇಕಿದೆ.

ಮಣ್ಣಿನ ನಿರ್ವಹಣೆಯ ಮೇಲೆ ಪ್ರಭಾವಿಸುವ ಅಂಶಗಳು

ಚರಿತ್ರೆಯ ಪೂರ್ವದ ನಾಗರೀಕ ಸಮಾಜವು ಈ ನೆಲವನ್ನು ಅಥವಾ ಮಣ್ಣನ್ನು ಒಂದು ಅಧೀನ ಆಸ್ತಿಯೆಂಬುದಾಗೀಯೆ ನೋಡುತ್ತಾ ಬಂದಿರುವುದು ಕಾಣಬರುತ್ತದೆ. ನೆಲದ ಜೊತೆಗೆ ಮಾನವರ ಸಂಬಂಧವನ್ನು ನಿರೂಪಿಸುವ ಜವಾಬ್ದಾರಿಗಳು ಚರಿತ್ರೆಯ ಪೂರ್ವದಲ್ಲಿನ ದಾಖಲೆಗಳು ಅಪರೂಪ ಇದ್ದರೂ ಸಹ ಅವುಗಳೆನಿದ್ದರೂ ಆಳ್ವಿಕೆಯ ಸಂಬಂಧಿಸದವಷ್ಟೇ. ಆದರೆ ಇವೂ ಸಹ ಅಲ್ಲಿಂದಲೇ ಮಣ್ಣಿನ ನಿರ್ವಹಣೆಯ ಮೇಲೆ ಅತ್ಯಂತ ಪ್ರಭಾವಶಾಲಿಯಾದ ಮಹತ್ವಗಳನ್ನು ಬಿಂಬಿಸುತ್ತವೆ. ಆಗಷ್ಟೇ ನಾಗರೀಕ ಸಮಾಜವು ಈ ವಾಸ್ತವಿಕ ಜಗತ್ತಿಗೆ ತೆರೆದುಕೊಳ್ಳುತ್ತಿಷ್ಟೇ ಅದರಿಂದ ಬಹು ಕಾಲದ ಬಾಳಿಕೆಯ ತಂತ್ರಗಳಾಗಲಿ ನಿರ್ವಹಣಾ ಕೌಶಲ್ಯಗಳಾಗಲಿ ಬೆಳಕಿಗೆ ಬಂದಿರದಿರುವುದು ಸಾಧ್ಯತೆಯಿದೆ.

ಕೃಷಿಯೊಂದು ಅತ್ಯಂತ ಪ್ರಭಾವಶಾಲಿ ವೃತ್ತಿಯಾಗಿ ವಿಕಾಸಗೊಂಡಾಗಿನಿಂದಲೂ ಬಹು ಮುಖ್ಯವಾಗಿ ಕಂದಾಯ ಪದ್ಧತಿ, ಭೂ ಹಿಡುವಳಿದಾರರ ಮತ್ತು ಗೇಣೀದಾರರ ನಡುವಿನ ಸಂಬಂಧಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾ ಬಂದಿವೆ. ಇವೇ ಮಣ್ಣಿನ ಕಾಳಜಿಯನ್ನು ಅವುಗಳ ನಿರಂತರತೆಯನ್ನು ಕಾಪಾಡುವ ಸಾಧನಗಳಾಗಿ ಬೆಳೆದಿವೆ. ನೆಲದ ನಿರ್ವಹಣೆಗೆ ವೈಜ್ಞಾನಿಕವಲ್ಲದ ಅನೇಕ ಸಮಾಜಿಕ, ಆರ್ಥಿಕ ಹಾಗೂ ರಾಜಕೀಲಯ ಕಾರಣಗಳು ರೈತರ ಅರಿವಿನಲ್ಲಿ ಚರ್ಚೆಗೆ ಬರೆದೇ ಇಡೀ ಉದ್ಯಮವನ್ನು ಆಳುತ್ತ ಬಂದಿವೆ. ಇವು ನಿತ್ಯ ಸಮಾಜದ ಬದುಕಿನ ಭಾಗಗಳಂತೆ ಒಪ್ಪಿಕೊಂಡು ನಿಭಾಯಿಸುತ್ತಾ ಬಂದಿವೆ ನಮ್ಮ ಸಮಾಜಗಳು. ಇದರ ಫಲವಾಗಿಯೇ ಭೂ ಗೇಣೀದಾರರ, ಚಳುವಳಿಗಳು, ಕಂದಾಯ ಪದ್ದತಿಗಳು ನಿರಂತರವಾಗಿ ರೈತೋಧ್ಯಮವನ್ನು ಕಾಡಿವೆ. ಇವು ರೈತರ ಮಟ್ಟವನ್ನು ಮೀರಿ ಸಮಾಜದ ಮಟ್ಟದಲ್ಲಿ ನಿರ್ವಹಿಸುವ ವಿಚಾರಗಳಾಗಿವೆ. ಇವಲ್ಲದೆ ರೈತರು ತಮ್ಮ ಜಮೀನಿನ ಮಟ್ಟದಲ್ಲಿ ನಿರ್ವಹಿಸುವ ಅನೇಕ ವಿಚಾರಗಳೂ ಇವೆ ಅವನ್ನು ಈ ಕೆಳಗೆ ವಿವರಿಸಿದೆ. ಈ ವಿಚಾರಗಳು ಗಮನಾರ್ಹ ಏಕೆಂದರೆ ಈ ಪದ್ದತಿಗಳು ವಿಕಾಸ ಗೊಂಡದ್ದೇ ನಮ್ಮ ಸಂಬಂಧಗಳ ಮೂಲಕ. ಇಡೀ ನೆಲದ ಮೇಲೆ ನಮ್ಮ ಆಶಯಗಳು ಬೆಳೆದಂಥೆ ಪದ್ದತಿಗಳೂ ವಿಕಾಸಗೊಂಡಿವೆ.

ಬೆಳೆ ಪದ್ಧತಿಗಳು: ಮಣ್ಣಿನ ಫಲವತ್ತತೆಯನ್ನು ನಿರ್ವಹಿಸಲು ಬೆಳೆ ಪದ್ದತಿಗಳ ಆಧಾರದಿಂದಲೂ ರೈತರು ಗಮನಿಸಬೇಕಾಗುತ್ತದೆ. ಈ ಬೆಳೆ ಪದ್ಧತಿಯು ರೈತರಿಗೇನು ಹೊಸದಲ್ಲ. ಆದರೆ ದಿನಕಳೆದಂತೆ ಕೃಷಿಯ ನಿರಂತರತೆಯಲ್ಲಿ ಸಹಜತೆ ಕಳೆದು ಕೊಂಡು ಏಕ ಬೆಳೆ ಪದ್ದತಿಯತ್ತ ರೈತರು ಗಮನಿಸತೊಡಗಿದ್ದರಿಂದ ಈಗ ಮತ್ತೆ ಹೊಸದಾಗಿ ಆರಂಭವನ್ನು ಮಾಡಬೇಕಿದೆ. ಇದೊಂದು ಹಳೆಯ ಹಾಡಿನ ಹೊಸ ರಾಗ ಅಷ್ಟೆ.

ಬೆಳೆ ಪದ್ದತಿಯಿಂದ ವಿವಿಧ ಬೆಳೆಗಳನ್ನು ಏಕಕಾಲಕ್ಕೆ ನೆಲದ ಸ್ಥಳ ಮತ್ತು ಕಾಲಕ್ಕೆ ತಕ್ಕಂತೆ ಸೂಕ್ತಗೊಳಿಸುವುದೇ ಆಗಿದೆ. ಇದರಿಂದ ಇಡೀ ನೆಲವನ್ನು ಸೂಕ್ತವಾಗಿ ವ್ಯವಸ್ಥಿತವಾಗಿ ಬಳಸಲು ಅನುವು ಗೊಳಿಸಲಾಗುತ್ತದೆ. ಕೋಲಾರದ ರೈತರಿಗೆ ರಾಗಿ ಹೊಲದಲ್ಲಿ, ಅವರೆ, ಹುಚ್ಚೆಳ್ಳು ಮುಂತಾದ ಬೆಳೆಗಳನ್ನು ಏಕ ಕಾಲದಲ್ಲೆ ಬೆಳೆಯ ಪದ್ಧತಿ ಗೊತ್ತು ಇದೇ ಮಾದರಿಯದೇ ಈ ವಿಚಾರವೂ ಸಹ.

ಏಕೆ ಈ ಬಗೆಯ ಪದ್ದತಿಗಳು ಬೇಕು? ಎಂಬುದು ರೈತರು ಮನಗಾಣಬೇಕಾಗಿದೆ. ಅನೇಕ ಸಂಶೋಧನೆಗಳಲ್ಲೂ ಹಾಗೂ ರೈತರ ಅನುಭವದಲ್ಲೂ ಈ ಬಗೆಯಿಂದ ಹೆಚ್ಚಿನ ಲಾಭವನ್ನು ಕಂಡುಕೊಂಡ ಉದಾಹರಣೆಗಳಿವೆ. ಅಲ್ಲದೆ, ಬಹು ಬೆಳೆಯಿಂದ ಒಂದೇ ಬಗೆಯ ಸಾರವು ನೆಲದಿಂದ ಬಳಕೆಯಾಗುವುದಿಲ್ಲ. ಬದಲಿಗೆ ವಿವಿಧ ರೀತಿಯ ಸೂಕ್ಷ್ಮ ಪರಿಸರ ನಿರ್ಮಾಣಗೊಂಡು ಒಟ್ಟಾರೆ ಸುಸ್ಥಿರತೆಗೆ ಸಹಾಯವಾಗುತ್ತದೆ. ಈ ರೀತಿ ಪದ್ದತಿಗಳು ಎಂದರೆ

ಬೆಳೆ ಪರ್ಯಾಯ ಪದ್ಧತಿ: ಒಂದು ಬೆಳೆಯಾದ ಮೇಲೆ ಅದೇ ಬೆಳೆಯನ್ನು ಮತ್ತೆ ಅದೇ ನೆಲದಲ್ಲಿ ಬೆಳೆಯುವುದು ಯಾವುದೇ ಕಾರಣಕ್ಕೂ ಸೂಕ್ತವಲ್ಲ. ಅದರಿಂದ ಬೆಳೆಯ ಪರಿವರ್ತನೆ ಮಾಡುವುದು ಅಂದರೆ ಬೆಳೆಯನ್ನು ಬದಲಾಯಿಸುವುದು. ರಾಗಿಯ ನಂತರ ನೆಲಗಡಲೆ ಇತ್ಯಾದಿ.

ಅಂತರ ಬೆಳೆ ಪದ್ದತಿ: ಬೆಳೆಗಳ ಸಾಲಿನಲ್ಲಿ ವೈವಿಧ್ಯತೆಯನ್ನು ಕಾಪಾಡುವುದು. ಅಂದರೆ ಎರಡು ಸಾಲಿನ ನಂತರ ಮತ್ತೊಂದು ಬೆಳೆ ಅಥವಾ ಗೊತ್ತಾದ ಸಾಲಿನ ಅಂತರದಲ್ಲಿ ಬೇರೆ ಬೆಳೆಯನ್ನು ಬೆಳೆಯುವುದೇ ಆಗಿದೆ.

ಮಿಶ್ರ ಬೆಳೆ ಪದ್ಧತಿ: ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಏಕ ಕಾಲದಲ್ಲಿ ಬೆಳೆಯುವುದು. ಉದಾಹರಣೆಗೆ ಹಿಪ್ಪ ನೇರಳೆ ಬೆಳೆಯ ಸಾಲಿನ ಮದ್ಯೆ ಯಾವುದಾದರು ಬೆಳೆಯನ್ನು, ಜೊತೆಗೆ ವಿವಿಧ ಬಗೆಯ ಬೆಳೆಯನ್ನು ಬೆಳೆಯುವುದು.

ಕೂಳೆ ಬೆಳೆ ಪದ್ಧತಿ: ಬೆಳೆಯ ಕೊಳೆಯಿಂದ ಮತ್ತೆ ಬೆಳೆಯನ್ನು ಪಡೆಯುವುದು, ಹಿಪ್ಪು ನೇರಳೆಯಂತೂ ಬಹು ವಾರ್ಷಿಕ ಬೆಳೆ, ಅದರಂತೆ ಕಬ್ಬು ಇತ್ಯಾದಿಯಲ್ಲೂ ಸಾಧ್ಯತೆಗಳಿವೆ.

ಸ್ಥಳೀಯವಾಗಿ ರೂಪುಗೊಂಡ ಯಾವುದೇ ಪದ್ಧತಿ: ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಲವಾರು ಪದ್ದತಿಗಳು ವಿಕಾಸಗೊಂಡಿದ್ದರೆ ಅಂತಹ ಪದ್ದತಿಗಳೂ ಸಹ ಈ ಬಗೆಯಲ್ಲಿ ಸಹಾಯಕವಾಗುತ್ತವೆ.

ಪರಿಸರದ ಅಧ್ಯಯನ ಹಾಗೂ ರಕ್ಷಣೆ ಮೂಲಕ ಮಣ್ಣಿನ ಕಾಳಜಿ

ಪರಿಸರದ ಕಾಳಜಿ ಆ ಮೂಲಕ ಈ ನೆಲದ ರಕ್ಷಣೆ ಇವು ಆರಂಭವಾದ ಮೇಲೆ ಭಿನ್ನವಾದ ರೀತಿ ರಿವಾಜುಗಳು ಹುಟ್ಟತೊಡಗಿವೆ. ಇವು ನಮ್ಮನ್ನು ಈ ನೆಲದ ಸಂಬಂಧ ಹಚ್ಚುವಲ್ಲಿ ವಿಶೇಷ ಕಾಳಜಿ ವಹಿಸುತ್ತಲಿವೆ. ಪರಿಸರ ರಕ್ಷಣೆಯು ಅಭಿವೃದ್ಧಿಯ ಅವಶ್ಯಕ ಭಾಗವಾಗಿದೆ. ಪರಿಸರ ರಕ್ಷಣೆಕಾರ್ಯ ನೆರವೇರದಿದ್ದಲ್ಲಿ ಅಭಿವೃದ್ಧಿಯು ಅಗೌರವಕ್ಕೆ ದಾರಿಮಾಡಿಕೊಡುತ್ತದೆ. ನಿರೀಕ್ಷಿಸದಷ್ಟು ಅಭಿವೃದ್ಧಿಯನ್ನು ಸಾಧಿಸದಿದ್ದಾಗ ಸಂಪನ್ಮೂಲಗಳ ಲಭ್ಯತೆಯ ಅಭಾವವಾಗಿ ಅರಣ್ಯ ರಕ್ಷಣೆಯ ಕಾರ್ಯ ವ್ಯರ್ಥವಾಗಬಹುದು. ಪರಿಸರದ ಮೇಲಾದ ಹಾನಿಯಿಂದ ಪ್ರಸಕ್ತ ಮತ್ತು ಮುಂದಿನ ಪೀಳಿಗೆಗಳ ಮೇಲೆ ಮನುಷ್ಯನು ಅಭಿವೃದ್ಧಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಉತ್ಪಾದನೆಯಲ್ಲಿ ಕುಂಠಿತವಾಗಿ ಸೌಲಭ್ಯಗಳ ಕೊರತೆಗೆ ದಾರಿ ಮಾಡಿಕೊಡುತ್ತದೆ.

೧೯೯೨ರಲ್ಲಿ ನಡೆದ “ರಿಯೋ” ಸಮಿತಿಯ ನಂತರ ಪರಿಸರ ಕಾಳಜಿ ಹೆಚ್ಚು ಮಹತ್ವ ಪಡೆಯಲಾರಂಭಿಸಿತು. ತದನಂತರ ತಾಂತ್ರಿಕತೆಗಳ ಅಭಿವೃದ್ಧಿಯಲ್ಲಿ ಪರಿಸರ ಕಾಳಜಿ ಕುರಿತಾದ ವೈವಿಧ್ಯಮಯ ಕ್ರಾಂತಿಕಾರಿ ಬೆಳವಣಿಗೆಗಳು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಗಮನಸೆಳೆದವು. “ಪರಿಸರ ಹಾಗೂ ಅಭಿವೃದ್ದಿ” ಕುರಿತಾಗಿ ವಿಚಾರ ಸಂಕೀರ್ಣವನ್ನು ಬ್ರೆಜಿಲ್‌ ದೇಶದಲ್ಲಿ ಏರ್ಪಡಿಸಲು ೧೯೮೯ರಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಅಸೆಂಬ್ಲಿಯಲ್ಲಿ ಅನುಮೋದನೆ ದೊರೆಯಿ೮ತು. ೧೯೯೨ರ ರಿಯೋ ಸಮಿತಿಯು ಪರಿಸರ ಸವಾಲುಗಳ ಕುರಿತಾಗಿ ಸಂದೇಶ ಸಾರುವ ವಿಶ್ವದ ಮೊಟ್ಟಮೊದಲ ಪ್ರಯತ್ನವಾಗಿದೆ. ವಿನಾಶದ ಹಾದಿಯಲ್ಲಿರುವ ಪರಿಸರವನ್ನು ಮಿತಗೊಳಿಸಲು ಅಥವಾ ತಡೆಯಲು “ರಿಯೋ ಡಿ ಜನರಿಯೊ” ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ತಜ್ಞರು ವಿನಾಶದತ್ತ ಸಾಗಿರುವ ಪರಿಸರವನ್ನು ಸಂರಕ್ಷಿಸುವ ಸಲುವಾಗಿ “ದಿ ಅರ್ಥ್ ಸಮಿತಿ”ಯನ್ನು ರಚಿಸಿದರು.

ಪರಿಸರ ಮತ್ತು ಮಾನವರ ಮಧ್ಯೆ ಆಳವಾದ ಮತ್ತು ಸಮರಸವಾದ ಸಂಬಂಧವಿದೆ. ಭೌತಿಕ ಪರಿಸರದಲ್ಲಿ ಭೂಮಿ, ನೀರು, ಗಾಳಿಯಿಂದ ಕೂಡಿದ ಜೈವಿಕ ಜಗತ್ತು ಮನುಷ್ಯನಿಗೆ ಮೂಲಭೂತ ಅವಶ್ಯಕ ಆಹಾರ ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಒದಗಿಸುತ್ತಾ ಬಂದಿದೆ. ಅಲ್ಲದೆ ಪರಿಸರವು ಎಲ್ಲಾ ಜೀವ ರಾಶಿಗಳು ಹುಟ್ಟಿ ಬೆಳೆಯಲು ಬೇಕಾದ ಪೂರಕ ವ್ಯವಸ್ಥೆಯನ್ನು ಅನಾದಿಕಾಲದಿಂದಲೂ ನೀಡುತಾ ಬಂದಿದೆ. ಆದರೆ ಜಗತ್ತಿನಾದ್ಯಂತ ಎಲ್ಲರೂ ಪರಿಸರ ಸಂರಕ್ಷಣೆಗೆ ಒಲವು ತೋರಬೇಕಾದ ಪ್ರಸಕ್ತ ಸ್ಥಿತಿ ಬಂದೊದಗಿದೆ. ಪರಿಸರ ಕುರಿತಾದ ಸಮಸ್ಯೆಗಳು ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿವೆ. ಭಾರತದಲ್ಲಿ ಇದರ ಪರಿಣಾಮ ಅರಣ್ಯ ನಾಶ, ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವುದು, ನದಿಗಳ ಮೂಲಕ ಹೂಳು ಮಣ್ಣು ಸೋಸಿಹೋಗುವುದು, ಕಲುಷಿತ ನೀರು ಮತ್ತು ಗಾಳಿ ಮುಂತಾದವುಗಳು ಪರಿಸರದ ಪ್ರಮುಖ ವಿಷಮಸ್ಥಿತಿಗಳಾಗಿವೆ. ಆದರೆ ಮನುಷ್ಯ ಮನಸ್ಸು ಮಾಡಿದಲ್ಲಿ ಈ ಸವಾಲುಗಳನ್ನು ಎದುರಿಸಲು ಅಸಹಾಯಕನಲ್ಲ.

ಹಲವಾರು ಸಂಶೋಧಕರು ಪರಿಸರ ಸಂರಕ್ಷಣೆ ಎಂಬ ಒಂದೇ ವಿಷಯದ ಮೇಲೆ ಅನೇಕ ಕಡಿಮೆ ಅವಧಿಯ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಸರ್ಕಾರವು ಆಸಕ್ತಿವಹಿಸಿ ಪರಿಸರದ ಮಾದರಿ, ಪ್ರಕ್ರಿಯೆ, ಕುರಿತಾದ ವಿವರವಾದ ಅಧ್ಯಯನವನ್ನು ವಿಶ್ವದ್ಯಾಂತ ಕೈಗೊಳ್ಳಲು ಹಣಕಾಸು ವ್ಯವಸ್ಥೆಯನ್ನು ಒದಗಿಸಲು ಮುಂದೆಬಂದಿದೆ. ಪರಿಸರದ ಕುರಿತಾದ ಸಂಶೋಧನೆಗೆ ಹೆಚ್ಚುತ್ತಿರುವ ಅದ್ಯತೆಯ ಮೇರೆಗೆ ಸಂಶೋಧಕರು ಪರಿಸರದ ಸಂಕೀರ್ಣವಾದ ಮತ್ತು ವೈವಿದ್ಯಮಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಡಾಟಾ ಬೇಸ್‌ ಸಲಹೆ ನೀಡುವತ್ತ ಗಮನಹರಿಸಬೇಕಗಿದೆ.

ಪೂರಕ ಪರಿಸರ ಮತ್ತು ಮಾನವನ ಸುಸ್ಥಿತಿ ನಡುವೆ ಇರುವ ಸಂಬಂಧವನ್ನು ಅರ್ಥೈಸುವ ಪರಿಸರ ಅಧ್ಯಯನವು ಪರಿಸರ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಇಂದಿನ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಹಿಂದೆಂದಿಗಿಂತಲೂ ಪ್ರತಿಕೂಲ ಪರಿಣಾಮವಾಗುತ್ತಿದೆ. ಕೃಷಿ ಚಟುವಟಿಕೆಗಾಗಿ ಈ ಮೊದಲು ಕೃಷಿಕರು ಪರಿಸರದಲ್ಲಿರುವ ಅನೇಕ ಸಸ್ಯ ಸಂಪತ್ತಗಳನ್ನು ಸುಟ್ಟುಹಾಕಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡರು ನಂತರ ಭೂಮಿಯನ್ನು ಊಳುವುದರ ಮೂಲಕ ಮಣ್ಣಿನ ರಚನೆಯಲ್ಲಿ ಬದಲಾವಣೆ ತರತೊಡಗಿದರು, ನೀರಾವರಿ ಮೂಲಕ ಡ್ರೈನೇಜ್‌ ಪದ್ಧತಿಯಲ್ಲಿ ಬದಲಾವಣೆಗೆ ದಾರಿ ಮಾಡಿಕೊಟ್ಟರು ಹಾಗೂ ಅನೇಕ ಪ್ರಾಂತಗಳಲ್ಲಿ ಹೊಸ ಹೊಸ ಕೃಷಿ ಪದ್ಧತಿಯ ಪರಿಚಯವಾಗುತ್ತಿದಂತೆ ನಿಸರ್ಗದ ಸ್ವಾಭಾವಿಕ ವಿನ್ಯಾಸದಲ್ಲಿ ಬದಲಾವಣೆಗೆ ದಾರಿಮಾಡಿಕೊಟ್ಟರು. ಅತಿಯಾದ ಸಂಪನ್ಮೂಲಗಳ ಬಳಕೆ ಮತ್ತು ಸಂಪನ್ಮೂಲಗಳ ಬಳಕೆಯ ತೀವ್ರತೆಯ ಪ್ರಮಾಣ ಎಷ್ಟರ ಮಟ್ಟಿಗೆ ಆಗಿದೆ ಎಂದರೆ, ಸಂಪನ್ಮೂಲಗಳ ಪುನರ್ ನಿರ್ಮಾಣಕ್ಕೆ ಅವಕಾಶ ಕೊಡದಷ್ಟು ಉಪಯೋಗಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ಬರಿದಾಗಿಸುತ್ತಿದ್ದೇವೆ. ಒಂದು ಹೆಕ್ಟೇರ್ ಅರಣ್ಯ ಪ್ರದೇಶ ನೈಸರ್ಗಿಕವಾಗಿ ನಿರ್ಮಾಣವಾಗಲು ಅನೇಕ ದಶಕಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇಂತಹ ಅರಣ್ಯವನ್ನು ಮನುಷ್ಯ ಕೇವಲ ಒಂದು ಗಂಟೆಯಲ್ಲಿ ಹಾಳುಗೆಡುವುತ್ತಾನೆ.

ಈ ಭೂಮಿಯು ಲಕ್ಷಾಂತರ ಜೀವ ಪ್ರಭೇದಗಳಿಗೆ ವಾಸಸ್ಥಳವಾಗಿರುವುದು. ಇಡೀ ಮನುಕುಲವು ಜೀವಿಗಳ ಕುರಿತು ಈ ಶತಮಾನದಲ್ಲಿ ಆಲೋಚಿಸಿದ ಹಾಗೆ ಹಿಂದೆಂದೂ ಯೋಚಿಸಿರಲಿಲ್ಲ. ಚಿಂತನೆಗೆ ಹಚ್ಚಿರಲಿಲ್ಲ. ಜೈವಿಕ ಪ್ರಪಂಚದ ಮೂಲ ತಿಳುವಳಿಕೆಯು ಪಾರಂಪರಿಕವಾದದ್ದು. ಮಾನವ ಮೂಲತಃ ನಿಸರ್ಗದ ಭಾಗವಾಗಿಯೇ ಬದುಕುತ್ತಿದ್ದ, ಹಾಗಾಗಿ ತನ್ನ ಸಮುದಾಯದ ಜೈವಿಕ ಪ್ರಪಂಚದ ಅರಿವಿನಿಂದ ಜೀವನವನ್ನು ಕಂಡುಕೊಂಡಿದ್ದ. ಇದು ಅವನಿಗೆ ಬದುಕಿನ ನೆಲೆಯನ್ನು ಒದಗಿಸುವುದರೊಂದಿಗೆ ಜೀವ ಸಹಜವಾದ ನೆಮ್ಮದಿಯನ್ನು ತಂದಿತ್ತು. ಮಾನವನ ನಾಗರೀಕತೆಯು ಜೈವಿಕ ಹಿನ್ನೆಲೆಯುಳ್ಳದ್ದಾಗಿದೆ. ನಾವು ಒಂದು ಸಾಮಾನ್ಯ ಪ್ರಶ್ನೆಯನ್ನು ಹಾಕಿಕೊಳ್ಳೊಣ. ನಮ್ಮ ಜೀವನ ಅವಶ್ಯಕತೆಗಳೇನು? ನಾವು ಅವನ್ನು ಹೇಗೆ ಪಡೆಯುತ್ತಿದ್ದೇವೆ? ನಮ್ಮ ಮೂಲಭೂತ ಅವಶ್ಯಕತೆಗಳಾದ-ಗಾಳಿ, ನೀರು, ಆಹಾರ, ಬಟ್ಟೆ, ಮನೆ.. .. ಇತ್ಯಾದಿ. ಗಾಳಿ ನೀರನ್ನು ನಿಸರ್ಗವು ಒದಗಿಸಿದೆ. ಆಹಾರಕ್ಕೆ ಅವಲಂಬಿಸಿರುವುದು ಜೈವಿಕ ವರ್ಗವನ್ನು, ಬಟ್ಟೆಗೂ ಸಹ. ನಮ್ಮ ವಸತಿಗೆ ಶಕ್ತಿ ಮೂಲ ಪೆಟ್ರೋಲಿಯಂ ಎಲ್ಲಕ್ಕೂ ಜೈವಿಕ ರಾಶಿಯನ್ನೇ ಅವಲಂಬಿಸಿದ್ದೇವೆ. ಅಂದ ಮೇಲೆ ಮನುಷ್ಯರ ಜೀವನವು ಜೈವಿಕ ಸಂಪತ್ತನ್ನು, ಜೀವರಾಶಿಯನ್ನು ಅವಲಂಬಿಸಿದೆ. ಆದಾಗ್ಯೂ ಎಂದೂ ಮಾನವರು ಜೀವಿಗಳ ಕುರಿತು ಇಂದು ಮತ್ತು ಕಳೆದ ಶತಮಾನದಿಂದ ಆಲೋಚಿಸಿರುವಷ್ಟು, ಆಲೋಚಿಸಿರಲಿಲ್ಲ. ಹಾಗಾಗಿಯೆ ಇಂದು ನಮ್ಮ ಮುಂದೆ ಜೀವ ರಾಶಿಯು ಅಗಾಧತೆಗಳ ಮಹಾಪೂರವನ್ನೇ ತೆರದಿಟ್ಟಿದೆ. ಇದರಿಂದಾಗಿಯೇ ಇದೊಂದು ವಿಶೇಷವಾದ ಇರುವನ್ನು ಹುಟ್ಟಿಹಾಕಿದೆ. ಅದು ಜೀವನವಷ್ಟನ್ನೇ ಅಲ್ಲ, ಎಲ್ಲಾ ವ್ಯವಹಾರಕ್ಕೂ ವ್ಯಾಪಿಸುತ್ತಿದೆ.

ಗಣಿ ಉದ್ಯಮ ಕಾರ್ಯಚಟುವಟಿಕೆಗಳು ಸಹ ಪರಿಸರದ ಅವನತಿಗೆ ಪ್ರಮುಖ ಕೊಡಿಗೆ ನೀಡಿದೆ. ಮನುಷ್ಯ ನಿರ್ಮಿತ ಗಣಿಗಾರಿಕೆಯು ಪರಿಸರದ ವ್ಯವಸ್ಥೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನು ನಿರ್ಮಾಣ ಮಾಡಿದೆ. ಇದರಿಂದ ಭೂಮಿ ತೊಂದರೆಗೀಡಾಗಿ ಹಾಳುಗುತ್ತಿದೆ. ಗಣಿಗಾರಿಕೆಯಿಂದ ಹಾಳಾದ ಭೂಮಿಯನ್ನು ಸರಿಯಾದ ರೀತಿಯಲ್ಲಿ ಉಪಚಾರ ಮಾಡದಿದ್ದಾರೆ. ಇಂತಹ ಭೂಮಿ ಬೇರೆ ಯಾವ ಕೆಲಸಗಳಿಗೂ ಪ್ರಯೋಜನವಿಲ್ಲದಂತಾಗುತ್ತದೆ.

ಭೂಮಿಯು ಗಣಿಗಾರಿಕೆಯಿಂದ ಹಾನಿಗೊಳಗಾಗುವಿಕೆ ಮತ್ತು ಅಂತಹ ಭೂಮಿ ಸಾಗುವಳಿಗೆ ಒಳಪಡಿಸಲು ಯೋಗ್ಯವಾಗಿದೆಂದು ವಿಶ್ಲೇಷಿಸಲು ಗಣಿಗಾರಿಕೆಯಿಂದ ಭೂಮಿಯ ಮೇಲಾಗುವ ಪರಿಣಾಮದ ಪರಿಸ್ಥಿತಿಯ ಕುರಿತು ಆಳವಾದ ಜ್ಞಾನ ಹೊಂದಿರಬೇಕು. ಮನುಷ್ಯನ ಬದಲಾದ ಕಾರ್ಯವೈಖರಿಯಿಂದ ಭೂಮಿಯ ಮೇಲ್ಮೈ ಮಣ್ಣಿನ ಮೇಲೆ ಪ್ರಮುಖ ಬದಲಾವಣೆಗಳಾಗಿವೆ. ಇತ್ತೀಚಿನ ಹಲವು ದಶಕಗಳಿಂದ ಅನೇಕ ಮಿಲಿಯನ್‌ ಹೆಕ್ಟೇರ್ ಪ್ರದೇಶವು ಜೀವರಾಶಿಯನ್ನು ಹುಟ್ಟಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದು ಇದರ ಪರಿಣಾಮ ಪರಿಸರದ ಅಸಮತೋಲನಕ್ಕೆ ದಾರಿಯಾಗಿದೆ. ಇದರಲ್ಲಿ ಗಣಿಗಾರಿಕೆಯು ಒಂದು ಮುಖ್ಯ ಕಾರಣವಾಗಿದೆ. ಈ ಗಣಿ ಉಧ್ಯಮವೂ ಈ ನೆಲದ ಮೇಲಿನ ಕಾಳಜಿಗೆ ಅಥವಾ ಸಂಬಂಧಕ್ಕೆ ಬಹಳ ದೊಡ್ಡ ಕೊಡಿಗೆಯನ್ನೇ ನೀಡಿದೆ.

ಕೃಷಿಯಲ್ಲಿ ಸಣ್ಣ ಹಿಡುವಳಿ ಪದ್ಧತಿ ಅಳವಡಿಕೆಯು ಪರಿಸರದ ವ್ಯವಸ್ಥೆಯನ್ನು ಕಾಯ್ದಿಡಲು ಸಹಾಯಕವಾಗುತ್ತದೆಂದು ಅಭಿಪ್ರಾಯ ಪಡಲಾಗಿದೆ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆಯಿಂದ ಮಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ. ಇಂತಹ ಪರಿಸರ ಪೂರಕ ಕೃಷಿ ಪದ್ಧತಿಯು ಕೃಷಿ ಸಾಗುವಳಿಗೆ ಬೇಕಾದ ಇತರೆ ಖರ್ಚುಗಳನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಸಾಂಪ್ರದಾಯಿಕ ಮತ್ತು ಪರಿಸರ ತಂತ್ರಜ್ಞಾನಗಳನ್ನು ಉಳಿಸಿಕೊಂಡು ಹೋಗಲು ಪಡಬೇಕಾದ ಶ್ರಮ ಕೂಡ ಈ ಪದ್ಧತಿಯಿಂದ ಕಡಿಮೆ. ಆದರೆ ಇಂದಿನ ಆಧುನಿಕ ದಿನಗಳಲ್ಲಿ ಆರ್ಥಿಕತೆಗೆ ಹೆಚ್ಚು ಮಹತ್ವ ಕೊಟ್ಟು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಪರಿಸರ ಪೂರಕ ಕೃಷಿಯನ್ನು ಕಡೆಗ ಣಿಸಲಾಗಿದೆ.

ಭಾರತದಲ್ಲಿ ಅನೇಕ ಸರಕಾರೇತರ ಸಂಘ ಸಂಸ್ಥೆಗಳು ಪರಿಸರ ನಾಶವನ್ನು ತಡೆಗಟ್ಟಲು ಕೈಗೊಂಡ ಕ್ರಮಗಳು ಉತ್ತಮ ಫಲಿತಾಂಶವನ್ನು ನೀಡಿವೆ. ಅವುಗಳಲ್ಲಿ ಪ್ರಮುಖವಾದದ್ದು “ಚಿಪ್ಕೊ ಚಳುವಳಿ” ಇದು ಅರಣ್ಯನಾಶದಿಂದ ಗುಡಿಸಿಹೋದ ಉತ್ತರಾಂಚಲದಲ್ಲಿ ಅರಣ್ಯವು ಮತ್ತೆ ಚಿಗರೊಡೆಯಲು ಪ್ರಮುಖ ಹೆಜ್ಜೆಯನ್ನು ಇರಿಸಿದೆ. ಎರಡನೆಯದಾಗಿ “ಸೈಲೆಂಟ್‌ ವ್ಯಾಲಿ ಪ್ರೊಜೆಕ್ಟ್‌” ಮತ್ತು ನರ್ಮದಾ ಅಣೆಕಟ್ಟು ವಿರುದ್ಧ ಹೋರಾಡಿದ “ನರ್ಮದಾ ಬಚಾವೋ ಅಂದೋಲನ”. ಈ ಎಲ್ಲ ಸಂಘ ಸಂಸ್ಥೆಗಳು ಆಯಾ ಪ್ರದೇಶಗಳಲ್ಲಿ ಬಲಿಷ್ಠವಾಗಿ ಬೆಳೆದು ಬಂದಿರುವ ವಿನಾಶಕಾರಿ ಪರಿಸರ ಬೆಳವಣಿಗೆಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯನ್ನು ಸಾಧಿಸಿವೆ.

ನಮ್ಮ ದೇಶದಲ್ಲಿ ಪರಿಸರದ ವರದಿಯನ್ನು ನೋಡಿದಾಗ ಅದರಲ್ಲಿ ಅರಣ್ಯಗಳನ್ನು ಪರಿಸರದಿಂದ ಬೇರೆಯಾಗಿ ಪರಿಗಣಿಸಿರುವುದನ್ನು ಕಾಣಬಹುದು. ಏಕೆಂದರೆ ಪರಿಸರದಲ್ಲಿ ಅರಣ್ಯವು ಅತೀ ಹೆಚ್ಚು ಹಾನಿಗೊಳಗಾದ ಅವನತಿಯತ್ತ ಸಾಗಿದ ಭಾಗವಾಗಿದೆ. ಅರಣ್ಯ ನಾಶದಿಂದ ಮಣ್ಣಿನ ಸವೆತ, ಪ್ರವಾಹ, ನೀರಿನ ಮೂಲಕ ಹೂಳು ಮಣ್ಣು ಸೋರಿ ಹೋಗುವುದು, ವೈವಿಧ್ಯಮಯ ಜೈವಿಕ ತಳಿಗಳ ನಾಶ ಮುಂತಾದವುಗಳು ಜನಸಾಮಾನ್ಯರಿಗೆ ತಿಳಿದ ವಿಷಯವಾಗಿದೆ. ಅರಣ್ಯ ಹಾಳಾಗುತ್ತಿರುವುದರಿಂದ ಉದ್ಭವಿಸುವ ದುಷ್ಟಪರಿಣಾಮಗಳು ಮುಂಬರುವ ಪೀಳಿಗೆಗೆ ಮಾತ್ರ ಸೀಮಿತವಾಗಿರದೆ ಪ್ರಸಕ್ತ ದಿನಗಳಲ್ಲಿಯೇ ಪ್ರಬಾವ ಬೀರಿವೆ. ಅಲ್ಲದೆ ಅರಣ್ಯದ ಮೇಲೆ ಅವಲಂಬಿತವಾಗಿ ಜೀವನ ನಡೆಸುತ್ತಿರುವ ಸಮುದಾಯಗಳಿಗೆ ಬದಲಾದ ಪರಿಸರದ ಬಿಸಿ ಹೆಚ್ಚು ತಟ್ಟಿದೆ.

೧೯೭೦ರ ದಶಕದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮಗಳನ್ನು ಪರಿಚಯಿಸುವುದರ ಮೂಲಕ ಜನರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆರಂಭವಾಯಿತು. ಇದಕ್ಕಿಂತ ಮುಂಚಿತವಾಗಿ “ವನ ಮಹೋತ್ಸವ”ದ ಹೆಸರಿನಲ್ಲಿ ತೋಪು ಮರಗಳ ನಿರ್ಮಿಸುವ ಕಾರ್ಯಕ್ರಮ ಮನ್ನಣೆ ಪಡೆದಿತ್ತು. ಈ ವನ ಮಹೋತ್ಸವದ ಮುಖ್ಯ ಉದ್ದೇಶ ಮರಗಳ ತೋಪು ನಿರ್ಮಿಸುವುದನ್ನು ಜನಪ್ರಿಯಗೊಳಿಸುವುದರ ಮೂಲಕ ಜನಸಾಮಾನ್ಯರಿಗೆ ಮರಗಳ ಮಹತ್ವ ತಿಳಿಸಿಕೊಡುವುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗೃಹ ಉಪಯೋಗಿ ಅವಶ್ಯಕತೆಗಳಾದ ಮೇವು, ಇಂಧನ, ಕಟ್ಟಿಗೆಯ ಪೀಠೋಪಕರಣಗಳನ್ನು ಪೂರೈಸಲು ಅರಣ್ಯ ಸಂಪನ್ಮೂಲಗಳನ್ನು ಬಳಸುವುದು ರೂಢಿಯಲ್ಲಿದೆ. ನಮ್ಮನ್ನಾಳಿದ ಬ್ರಿಟೀಷರು ಅರಣ್ಯ ಸಂಪನ್ಮೂಲಗಳನ್ನು ಬಳಸುವ ಹಕ್ಕನ್ನು ನಿಷ್ಕೃಷ್ಟವಾಗಿ ತಡೆದರು. ಆದರೆ ಅರಣ್ಯದ ಉನ್ನತಿಗಾಗಿ ರಚಿಸಿದ ಕಾರ್ಯಯೋಜನೆಗಳಲ್ಲಿ ಈ ನಿಯಮವನ್ನು ಒಳಗೊಂಡಿರಲಿಲ್ಲ.. ಅರಣ್ಯ ನೀತಿಯಲ್ಲಿ ಮೂಲಭೂತ ಅವಶ್ಯಕತೆಗಳಿಗೆ ಪ್ರಥಮ ಆಧ್ಯತೆ ನೀಡಿ ಒಪ್ಪಿಕೊಂಡಿದ್ದರೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ ಸಂಪನ್ಮೂಲಗಳ ಬಳಕೆಯಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತು ಯಾವುದೇ ವ್ಯವಸ್ಥಿತ ಅನ್ವೇಷಣೆ ಇದುವರೆಗೂ ಕೈಗೊಂಡಿಲ್ಲ.

ಉತ್ತರ ಪ್ರದೇಶದಲ್ಲಿ ೧೯೭೩ರಲ್ಲಿ ಮರಗಳನ್ನು ಅಪ್ಪಿಕೊಳ್ಳಿ/ಮುದ್ದಿಸಿ ಎಂಬರ್ಥದಲ್ಲಿ ಜರುಗಿದ ಚಿಪ್ಕೊ ಚಳುವಳಿಯು ವಿಶ್ವದಾದ್ಯಂತ ಹೆಸರು ಮಾಡಿದೆ. ಇದು ಕೆಳವರ್ಗದ ಹಂತದಿಂದಲೇ ಆರಂಭಗೊಂಡ ಪರಿಸರ ಅಭಿವೃದ್ಧಿಯ ಚಳುವಳಿಯಾಗಿದೆ. ಚಿಪ್ಕೊ ಚಳುವಳಿಯ ಬಿಸಿ ಗಾಳಿ ಕರ್ನಾಟಕದ ದಕ್ಷಿ ಣ ಕನ್ನಡ ಜಿಲ್ಲೆಯ ಬಾಳೆಗಡ್ಡೆ ಗ್ರಾಮದಲ್ಲಿ ಸಹ ರೆಕ್ಕೆ ಬಿಚ್ಚಿ ಕುಣಿದಿದ್ದು ಅಲ್ಲಿನ ಜನರು ಮರಗಳನ್ನು ರಕ್ಷಿಸುವ ಪ್ರಮಾಣ ಮಾಡಿದರು.. ಇದು ಅಲ್ಲಿ “ಅಪ್ಪಿಕೊ” ಎಂದು ಹೆಸರು ಪಡೆಯಿತು. ಮರಕಡಿಯಲು ಬಂದಾಗ ಅಲ್ಲಿನ ಚಳುವಳಿಗಾರರು ಮರವನ್ನು ಅಪ್ಪಿಕೊಂಡು ರಕ್ಷಿಸಿದ್ದರಿಂದ ಈ ಚಳುವಳಿಯನ್ನು ಪರಿಸರ ರಕ್ಷಣೆಯ ಅಹಿಂಸಾ ಮಾರ್ಗವಾಗಿ ಪ್ರತಿಷ್ಠಾಪನೆಯಾಯಿತು. ಈ ಒಂದು ಚಳುವಳಿ ಜಗತ್ತಿನ ಗಮನ ತನ್ನ ಕಡೆ ಸೆಳೆಯುವಂತೆ ಮಾಡಿದ ಪರಿಣಾಮವಾಗಿ ಹಿಮಾಲಯದ ಅರಣ್ಯಗಳಲ್ಲಿ ಜಲಸಂಪನ್ಮೂಲದ ಪುನಃಶ್ಚೇತನ ಮತ್ತು ಪರಿಣಾಮವಾಗಿ ಹಿಮಾಲಯದ ಅರಣ್ಯಗಳಲ್ಲಿ ಜಲಸಂಪನ್ಮೂಲದ ಪುನಃಶ್ಚೇತನಲ ಮತ್ತು ಮಣ್ಣಿನ ಸುಸ್ಥಿರತೆಗೆ ಪ್ರಮುಖವಾಗಿ ಒತ್ತು ನೀಡಿತು.

ನಾಳಿನ ಸಂಸ್ಕೃತಿ ಉಳಿವಿಗೆ ವಾಸ್ತವತೆಯ ಅರಿವಿನ ತಯಾರಿ

ನಾಗರೀಕತೆಯು ಕೊನೆಗೊಳ್ಳುವುದೆಂದರೆ ಜಗತ್ತು ವಿನಾಶದ ಅಂಚಿಗೆ ಬಂತೆಂದು ಅರ್ಥ. ವಿನಾಶ ಎಂದರೆ ಮಾನವೀಯತೆಯ ಮೌನ. ಅಲ್ಲಿಂದೀಚೆಗೆ ಏನನ್ನೂ ಹೇಳುವುದಿರಲಿ, ಕೇಳಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗದಿರಲು ಈ ಜಗತ್ತಿನಲ್ಲಿ ಮನುಕುಲ ಮತ್ತು ಈ ಭೂಮಿ ಒಟ್ಟಿಗೆ ಉಳಿಯ ಬೇಕಿದೆ. ಇಬ್ಬರೂ ಸೇರಿ ಭೂಮಿಯ ಮೇಲಣ ಸ್ವರ್ಗವನ್ನು ಕಟ್ಟಬೇಕಿದೆ. ಇದು ಸಾಧ್ಯವಾಗಬೇಕಾದರೆ ನೆಲದ ಮೇಲಿನ ಮಣ್ಣನ್ನು ಉಳಿಸಿ ಉತ್ತಮ ಪರಿಸರವನ್ನು ಬೆಳೆಸಬೇಕಾಗುತ್ತದೆ. ಮಾನವ ಸಂಸ್ಕೃತಿಯು ಆತ್ಮಹತ್ಯೆಯ ಸಂಸ್ಕೃತಿಯಿಂದ ಹೊರಬಂದು ಜೀವಂತಿಕೆ ಹಾಗೂ ಕೌಶಲ್ಯದ ಸ್ವರ್ಗ ಸಂಸ್ಕೃತಿಗೆ ಬದಲಾಗಬೇಕು. ನಾಗರೀಕತೆಯ ಹುಟ್ಟಿಗೆ ಕಾರಣವಾದ ಮಣ್ಣಿನ ಜೀವಂತಿಕೆಗೆ ಕಾಳಜಿ ವಹಿಸುವಂತಾಗಬೇಕು. ನಾಗರೀಕತೆಗಳು ಹುಟ್ಟಲು ಬೆಳೆಯಲು ಇದ್ದ ಮಾದರಿಯ ನೆಲದ ಸಮೃದ್ಧತೆಯು ಇಂದು ಮಣ್ಣಿನಲ್ಲಿ ಸಾಧ್ಯವಾಗಲು, ನೆಲವು ವಿಷಹರಿತವಾಗುವಂತೆ ಮಾಡುವುದೊಂದೇ ಮಾರ್ಗ.. ಹಿಂದಿನ ಬಹುಪಾಲು ಚಕ್ರಾಧಿಪತ್ಯಗಳು ನಾಡಿನ ವಿಸ್ತಾರದ ಹೆಸರಲ್ಲಿ ಕಾಡನ್ನು ವಿನಾಶಗೊಳಿಸಿ ಪರಿಸರದ ಅಂತ್ಯಕ್ಕೆ ಕಾರಣರಾಗಿದ್ದಾರೆ. ಈ ದೃಷ್ಟಿಯಲ್ಲಿ ನಮ್ಮ ನಾಗರೀಕತೆಗಳೂ ಚಕ್ರಾಧಿಪತ್ಯಗಳು ನಮ್ಮ ಇಂದಿನ ಪರಿಸರದ ಬಿಕ್ಕಟ್ಟಿಗೆ ಕಾರಣಗಳಾಗಿವೆ. ಇದೆಲ್ಲಾ ಇಂದು ನಿನ್ನೆಯದಲ್ಲ.. ಸಹಸ್ರಾರು ವರುಷಗಳ ಹುನ್ನಾರ ಇದರಲ್ಲಿ ಅಡಗಿದೆ. ವಸಾಹತು ಕಾಲದಲ್ಲಿ ದೇಶ ದೇಶಗಳ ಆಳ್ವಿಕೆಯ ಹಿನ್ನೆಲೆಯಲ್ಲಿ ಪರಿಸರದ ವಿನಾಶ ಆರಂಭವಾಗಿದೆ. ಮೇಲ್ಮೈಯ ಮಣ್ಣಿನ ನಷ್ಟವೇ ನಾಗರೀಕತೆಯ ವಿನಾಶದ ಅಳತೆಗೋಲು. ಆಧುನಿಕತೆಯು ಮಾನವನಿಗೆ ವಸ್ತುಗಳ ವ್ಯಾಮೋಹವನ್ನು ಹಚ್ಚಿ, ಅವುಗಳ ಪಡೆದು ಕೊಳ್ಳಲು ಪ್ರೇರಣೆ ನೀಡುತ್ತದೆ. ವಸ್ತುಗಳೆಂದರೆ ಅವೇನು ಶೂನ್ಯದಿಂದ ಸೃಷ್ಟಿಯಾದವಲ್ಲ, ಅವೂ ಒಂದಲ್ಲ ಒಂದರ್ಥದಲ್ಲಿ ಈ ಮಣ್ಣಿನ ಉತ್ಪನ್ನಗಳಾಗಿವೆ. ವಸ್ತುಗಳ ಆಸೆಯನ್ನು ಕಟ್ಟಿಕೊಳ್ಳುವುದೆಂದರೆ ಮಣ್ಣಿನ ನಾಶಕ್ಕೂ ಆಸೆಪಟ್ಟಂತೆಯೇ. ನಾಗರೀಕತೆಯ ಕೊಳ್ಳುಬಾಕ ಸಂಸ್ಕೃತಿಯು ಪರಿಸರದ ಅವನತಿಗೆ ಅವಕಾಶಗಳನ್ನು ಹುಟ್ಟಿಸುತ್ತದೆ.

ನೆಲದ ಮೇಲಣ ಜೀವಿಗೆ ಬಹುಕಾಲದ ಇತಿಹಾಸವಿದೆ. ಈಗ ತಿಳಿದಿರುವ ಅರಿವಿನಂತೆ ಕಲ್ಲಿನ ಮೇಲೆ ಮೊಟ್ಟಮೊದಲು ದೊರೆತ ಬ್ಯಾಕ್ಟೀರಿಯ ಸುಮಾರು ೩.೮ ಬಿಲಿಯನ್‌ (೩.೮ ನೂರು ಕೋಟಿ ವರ್ಷಗಳು) ವರ್ಷಗಳಷ್ಟು ಹಳೆಯದು. ನಂತರ ಕೇವಲ ೬೫ ದಶಲಕ್ಷ ವರ್ಷಗಳ ಹಿಂದೆಯಷ್ಟೇ ದೈತ್ಯ ಉರಗಳಾದ ಡೈನೋಸಾರ್ ಗಳು ನಾಪತ್ತೆಯಾದವು. ಆಫ್ರಿಕಾದ ಓಲ್ಡಾವಿ ಜಾರ್ಜ್ ಎಂಬಲ್ಲಿ ದೊರೆತ ಮಾನವ ಪಳೆಯುಳಿಕೆಯು ಕೇವಲ ೩ ದಶಲಕ್ಷ ವರ್ಷಗಳ ಹಿಂದಿನದು. ಹೆಚ್ಚೂ ಕಡಿಮೆ ೬೦-೬೨ ದಶಲಕ್ಷ ಕಾಲದಷ್ಟು ಸಮಯದಲ್ಲಿ ನಡೆದ ಜೀವಿವಿಕಾಸದ ಹಾದಿ ಇಂದು ಕಾಣಬರುವ ಮಾನವರ ಅಸ್ತಿತ್ವಕ್ಕೆ ಕಾರಣವಾಗಿದೆ. ಇಂದು ಸುಲಭವಾಗಿ ಹೀಗೆ- ಹಾಗೆ ಎಂದು ಆಸ್ತಿಯ ರೂಪದಲ್ಲಿ ಆಹಾರದ ಉತ್ಪನ್ನದ ನೆಪದಲ್ಲಿ ಸಂಬಂಧ ಸೃಷ್ಟಿಸುವ ಮನುಕುಲದ ಇತಿಹಾಸವು, ನೆಲದೊಡನೆಯ ಒಡನಾಟಕ್ಕೆ ದೀರ್ಘಹಾದಿಯನ್ನೇ ಕ್ರಮಿಸಿದೆ. ಇಂತಹ ಸುದೀರ್ಘ ಪಯಣದಲ್ಲಿ ಕೃಷಿಯ ಆರಂಭವು ಕಣ್ಣು ಮಿಟುಕಿಸುವಷ್ಟೇ ಕಾಲದ ಮಹತ್ವದ್ದು. ಅಲ್ಲಿಂದೀಚೆಗೆ ಮಾತ್ರವೇ ಏನಿದ್ದರೂ ಮಾನವರ ಆಳ್ವಿಕೆಯ ಚರಿತ್ರೆ ಪ್ರಾರಂಭಗೊಂಡಿದೆ. ವಿವಿಧ ಸಾಮಾಜಿಕ ವ್ಯವಸ್ಥೆಗಳು ವಿಕಾಸಗೊಂಡಿವೆ. ಮನುಕುಲದ ಆಳ್ವಿಕೆಯು ಆರಂಭವಾದಂದಿನಿಂದಲೇ ಭೂಮಿಯ ಮೇಲಿನ ಚಕ್ರಾಧೀಪತ್ಯ-ಅದೇ ಕಾರಣದಿಂದಲೇ ವಿನಾಶ ಕೂಡ ಆರಂಭಗೊಂಡಿದೆ. ನಾಗರೀಕತೆಯ ಬಹು ಮುಖ್ಯ ಉತ್ಪನ್ನವೆಂದರೆ ನಗರೀಕರಣ, ಪರಿಸರವಿನಾಶ, ವಸ್ತು ವ್ಯಾಮೋಹ, ವಿವಿಧ ಸ್ತರಗಳ ಮಾನವಜನಾಂಗೀಯ ವ್ಯವಸ್ಥೆ, ಇತ್ಯಾದಿ. ಜಗತ್ತಿನ ವಿನಾಶಗೊಂಡ ಎಲ್ಲಾ ನಾಗರೀಕತೆಗಳೂ ಅನುಭವಿಸಿರುವುದೇ ಈ ಬಗೆಯ ವೈಪರೀತ್ಯಗಳನ್ನು. ಮಾನವ-ಮಾನವರ ನಡುವಣ ವಿವಿಧ ಸ್ಥರಗಳ ನಡವಳಿಕೆಯು ನಾಗರೀಕತೆಗಳನ್ನು ವಿನಾಶದ ಅಂಚಿಗೆ ತಂದಿವೆ. ಈಜಿಪ್ಟ್‌ ರಾಜ್ಯಾಡಳಿತ, ಪೆರುವಿನ ಇಂಕಾ, ಆಫ್ರಿಕಾದ ರಾಜ್ಯಬಾರ, ಅಮೇರಿಕಾದ ಮಾಯನ್‌ ಸಂಸ್ಕೃತಿ ಹೀಗೆ ಹತ್ತು ಹಲವಾರು ನಿದರ್ಶನಗಳು ದೊರೆಯುತ್ತವೆ. ಅದೂ ಅಲ್ಲದೆ ಸಿಂಧೂ ನಾಗರೀಕತೆ, ಚೀನಾದ ಬಯಲು ಇತ್ಯಾದಿಯೂ ಸಹ ಇಂತಹದ್ದೇ ಇಕ್ಕಟ್ಟನ್ನು ಅನುಭವಿಸಿ, ಸಂಸ್ಕೃತಿಯನ್ನು ವ್ಯಯಿಸಿವೆ.

ಹೀಗೆ ಎಷ್ಟೆಲ್ಲಾ ಬಗೆಯ ನಾಗರೀಕತೆಗಳು ಮಣ್ಣಿನ ಕಾರಣದಿಂದಲೆ ಹುಟ್ಟಿ ವಿನಾಶ ಕಂಡಿವೆ. ಅಚ್ಚರಿಯ ಸಂಗತಿಯೆಂದರೆ ಸಂಸ್ಕೃತಿಯ ವಿನಾಶವೂ ಸಹ ಮಣ್ಣಿನ ಅಥವಾ ನೆಲದ ಕಾರಣದಿಂದಲೇ ಎನ್ನುವುದು ಗಮನಾರ್ಹ. ಏಕೆಂದರೆ ನೆಲದ ಏರು ಪೇರುಗಳು, ಹವಾಮಾನದ ಒತ್ತಡಗಳು., ಮುಂತಾಗಿ ಅನುಭವಿಸಿ ವಿನಾಸವನ್ನೂ ಕಂಡಿವೆ. ಇದನ್ನು ನಾಳಿನ ಸಾಂಸ್ಕೃತಿಕ ಉಳಿವಿನ ಪಾಠವಾಗಿ ಗ್ರಹಿಸಬೇಕಾದ ಅನಿವಾರ್ಯ ಇಂದಿನ ಸಮಾಜದ ಮೇಲಿದೆ. ಅದಕ್ಕೆಂದೇ ಕೆಲವು ತಯಾರಿಬೇಕಿದೆ. ಇಲ್ಲಿನ ಈ ಟಿಪ್ಪಣಿಗಳು ಅಂತಹ ತಯಾರಿಯ ನೆಪವನ್ನು ತಿಳಿಸುವ ಪುಟ್ಟ ಮಾದರಿಗಳಷ್ಟೆ. ಅದನ್ನೇ ನಮ್ಮ ಅರಿವಿನ ಪರಿಧಿಯನ್ನು ನೆಲದ ಉಳಿವಿನ ಹಾದಿಯತ್ತ ಕೊಂಡ್ಯೊಯ್ದು ಎಲ್ಲಾ ಜೀವಿಗಳ ವಸತಿಯನ್ನು ಸುಖಮಯ ಮಾಡಬೇಕಿದೆ. ಮಣ್ಣಿನ ಸಹಚರ್ಯವನ್ನು ಕೇವಲ ಸಮಾಕಾಲೀನ ತಿಳುವಳಿಕೆಯ ಮಾದರಿಗಳಿಂದ ಮಾತ್ರವೇ ಅನುಷ್ಠಾನಗೊಳಿಸಲಾಗದು. ಅದಕ್ಕೆ ನಾಳಿನ ವಾಸ್ತವಿಕತೆಯ ಅರಿವೂ ಮುಖ್ಯವಾಗುತ್ತದೆ. ಇಲ್ಲಿನ ವಿವರಗಳನ್ನು ಸಧ್ಯದ ಚರ್ಚೆಯಿಂದ ಮುಕ್ತಾಯಗೊಳಿಸಲು ಈ ನಾಳಿನ ಸವಾಲನ್ನು ಪ್ರಶ್ನೆಗಳ ಮೂಲಕ ಅಥವಾ ಅಂದಾಜುಗಳ ಮೂಲಕ ಅರಿತ ಅನುಭವಗಳ ಕ್ರೋಢಿಕರಣದ ಮೂಲಕ ಪ್ರಯತ್ನಿಸಲಾಗಿದೆ. ಎಲ್ಲಾ ನಾಳೆಗಳೂ ಇಂದು ನಿನ್ನೆಯಂತಲ್ಲ. ಹಿಂದಿನ ಮಾದರಿಗಳನ್ನು ಪ್ರಶ್ನೆಗಳಾಗಿಸಿ ಉತ್ತಮತೆಯ ವಾಸ್ತವಗಳನ್ನು ಹುಡುಕುವ ಜಾಣತನ ಮಾನವ ಸಂಸ್ಕೃತಿಯ ಜಾಯಮಾನ. ಅದರೆಷ್ಟು ಬಾರಿ ಈ ಜಾಣತನ ನಿರೀಕ್ಷಿತ ಫಲಕೊಡಬಲ್ಲದು ಎನ್ನುವುದಕ್ಕೆ ಉತ್ತರ ಕಷ್ಟವೇ. ಏಕೆಂದರೆ ಇಂದಿನ ಸಂಸ್ಕೃತಿಗಳ ಆಶಯವು ಗ್ಲೋಬಲ್‌ ಮಾದರಿಯ ನಾಗರೀಕತೆಯನ್ನು ಒಳಗೊಂಡ ಏಕತಾನಗಳ ಆಯಾಮಗಳನ್ನೊಳಗೊಂಡಿದೆ. ಇಲ್ಲೂ ಸಹ ನೆಲದ ಮೇಲಣ ನಡಿಗೆ ಹಾಗೂ ಅದರ ಮೂಲಕ ಒಡೆತನ ಸಾಧಿಸುವ ಛಲಗಳೇ ಆಳುತ್ತಿರುವಾಗ ನಮ್ಮ ಸಂಬಂಧಗಳನ್ನೂ ಈ ನೆಲದೊಂದಿಗೆ ಗಟ್ಟಿಗೊಳಿಸುವ ಅರಿವೇ ಮುಖ್ಯವಾಗಿದೆ.

 

ಹೆಚ್ಚಿನ ಓದಿಗೆ

Capra F., 1982. The Turning Poing: Science, Society and the Rising Culture, Bantam Books.

Edward Hyams 1982. Soil and Civilization. Thames and Hudson, London.

John Reader, 1990. Man on Eartn, Penguin Books, Middlesex, Englind.

Tinker P.B. 1985. Soil Science in a Changing World, J.of Soil Science. 36.1-8.

Johan Bouma, 2005., Soil Scientists in a Changing World. Advances in Agronomy. 88 67-185.