ಬೀರೇಶ್ವರ ಚರಿತ್ರೆ

ಜೋಗುಳ :

ಜೋ ಜೋ ಸಿದ್ಧಭಕ್ತ ಕೃಂಪಂಗ ಜೋ ಜೋ
ನಂದನ ಕಂದನ ಜನಿಸಿತೊ ಕೂಸು
ರಿಂದ ವನದೊಳು ಆಡುವ ಕೂಸು
ಚಂದದಿಂದಲಿ ಆಭರಣ ಇಟ್ಟಿತೊ ಕೂಸು
ಬಂದ ದೇವರನೆಲ್ಲ ದೂರ ಮಾಡಿತೊ ಕೂಸು ||
ಜೋ ಜೋ       ||೧||

ಭಕ್ತ ತ್ರಿಪುರಕೆ ಪೋಗಿತೊ ಕೂಸು
ಉತ್ತಮ ಶ್ರೀರಥವ ನಡೆಸಿತೊ ಕೂಸು
ಮುತ್ತು ಕದ್ದುಕೊಂಡು ಬಂದಿತೊ ಕೂಸು
ನಿತ್ಯ ತೃಪ್ತ ಇವರ್ಣ ಆಡಿತೊ ಕೂಸು ||
ಜೋ ಜೋ       ||೨||

ಚಾರಿ ವಾಹನ ಏರಿತೊ ಕೂಸು
ಇರೇಳು ಲೋಕಕ್ಕೆ ಜನಿಸಿತು ಕೂಸು
ಮುರಹರನ ಶಂಖ ನುಡಿಸಿತು ಕೂಸು
ನಮ್ಮ ಗುರುವ ರೇವಣನ ವರವಿನ ಕೂಸು
ಜೋ ಜೋ       ||೩||

 

ಒಂದನೇ ಸಂದು :

ಚಂದಿದಿತೆರೊಳಗೆ ಬೀರೇಶನೆಂದು
ಹೆಸರಿಟ್ಟು ಜೋಗುಳ ಪಾಡಿರೊ
ಹರಿಯ ಅಂತಾನೊ ತಿರುಳನ ಬಿಟ್ಟರೆ
ಯನಗೆ ವೈರಿ ಅಂದಾನೊ           ||೧||

ತ್ವರಿದಿ ಕೊಲ್ಲುವ ಯತ್ನವೇನಂದ
ಮನದಲ್ಲಿ ಯೋಚನೆ ಮಾಡಿದನೊ
ಆಗ ಕೃಷ್ಣನು ಜೋಯಿಸನ ವೇಷದಿ
ತಾನು ಬಗಲೊಳ ಪಂಚಾಂಗವನೊ          ||೨||

ಬೇಗ ತಾನು ಪುರದೊಳು ಚಲಿಸುತ
ಸೂರಾವತಿ ಮನಿಗೆ ಬಂದಾನೊ
ಆಗ ಸುರವತಿ ಜೋಯಿಸ ಕರೆದು
ಮಗನು ಜನಿಸಿದ ಮುಹೂರ್ತವನೊ          ||೩||

ಬೇಗನೇ ಕೇಳಲು ಅವ ಪಂಚಾಂಗ ಹಿಡಿದು
ಅವಳಿಗೆ ಆಗ ಹೇಳಿದನು
ಕಂದನು ಹುಟ್ಟಿದ ಮುಹೂರ್ತ ಒಳ್ಳೆಯದಲ್ಲ
ಮುಂದೆ ನಿಮಗೆ ಕೇಡೆಂದಾನೊ               ||೪||

ಒಂದು ತಿಂಗಳಲ್ಲಿ ನಿಮ್ಮಣ್ಣ ಕೃಷ್ಣಗೆ –
ಮರಣವಿದು ನಿಶ್ಚಯವೆಂದಾನೊ
ಈಗೀ ಕೂಸಿನ ಕರ್ಣವ ನೋಡಬೇಡ
ದುಃಖಕೆ ಗಾರಿಯಾದಿ ನೀನೊ                 ||೫||

ಬೇಗ ಕೂಸಿನ ಘೋರ ಅಡವಿಯೊಳು ಬಿಟ್ಟು
ಬರುವ ಯತ್ನ ಮಾಡಂದಾನೊ
ಕೇಳಿ ಸೂರಾವತಿ ಮನದೊಳು ನೊಂದು
ಮುಂದೇನು ಮಾಡಬೇಕೆಂದಾಳೊ            ||೬||

ಬಂದ ದುಃಖವನು ಮನದೊಳು ತಾಳಿ
ಒಂದು ಯೋಚನೆ ಮಾಡಿದಳೊ
ಮಗನು ಸತ್ತರೆ ಇಂಥ ಮಗನನ್ನು
ಜನ್ಮದಿ ಕಾಣಬಹುದೆಂದಾಳೊ                ||೭||

ಜಗವನು ಪಾಲಿಪ ಅಣ್ಣನು ಸತ್ತರೆ
ಕಾಣುವದು ಕಠಿಣ ಅಂದಾಳೊ
ಹೀಗೆ ಯೋಚಿಸಿ ಕೂಸಿನ ತಗೊಂಡು
ತೊಟ್ಟಿಲದೊಳಗೆ ಹಾಕಿದಳೊ                 ||೮||

ಈಗೀ ತೊಟ್ಟಲ ಹುಲಿ ಕರಡಿ ಸಿಂಹ ಇರುವ
ಘೋರ ಅಡವಿಯೊಳು
ಇಟ್ಟು ಬರ್ರೀ ಎಂದು ಚಾರರಿಗೆ
ಬೇಗನೆ ಅಪ್ಪಣೆ ಕೊಟ್ಟಾಳೊ                  ||೯||

ತಟ್ಟನೆ ಚಾರರು ತೊಟ್ಟಲು ಹೊತಗೊಂಡು
ಅಡವಿಯ ದಾರಿ ಹಿಡಿದಾರೊ
ನಡು ಹಾದಿಯಲಿ ಉಗ್ಗರಗಲ್ಲನೋಡಿ
ಕಲ್ಲಿನ ಮ್ಯಾಲ ತೊಟ್ಟಿಲ ಇಟ್ಟಾರ             ||೧೦||

ಉಗ್ಗರಗಲ್ಲಿನ ಮ್ಯಾಲೆ ಸಿದ್ಧಪ್ಪ
ಸಬ್ಬನೆ ನಿದ್ರಿಯ ಮಾಡಿದನೊ
ಚಾರರು ನೋಡಿ ಗಾಬರಿಯಾಗಿ
ತೊಟ್ಟಿಲ ಕೆಳಗಿಟ್ಟಾರಿನ್ನೊ           ||೧೧||

ಘೋರ ಅರಣ್ಯದಿ ತೊಟ್ಟಿಲ ವಯಿದು
ವೃಕ್ಷದಿ ಕೆಳಗಿಟ್ಟಾರಿನ್ನೊ
ನೀರಡಿಸಿ ತಾವು ಹೇವಲಿಹಳ್ಳಕ
ನೀರ ಕುಡಿಯಲು ಹೋಗ್ಯಾರಿನ್ನೊ            ||೧೨||

ಇತ್ತ ಆ ಕೂಸು ಅಳುತ ಚೀರುತ
ಭೋರಾಡುತ ಕಷ್ಠ ಪಟ್ಟತಿನ್ನೊ
ಇತ್ತ ಶಿವನಿಗೆ ಈ ವರ್ತಮಾನ ತಿಳಿದು
ವಾಯುವಗೆಪ್ಪಣಿ ಕೊಟ್ಟಾನೊ                 ||೧೩||

ಹರನ ಅಪ್ಪಣೆಯನ್ನು ವಾಯು ಪಡಕೊಂಡು
ವೃಕ್ಷದ ಬಳಿಯಲಿ ಬಂದಾನೊ
ಬಿರುಗಾಳಿಯಿಂದ ಗಿಡವ ಬಗ್ಗಿಸಿ
ತುದಿಹರಿಗೆ ತೊಟ್ಟಿಲ ವಯಿದಾನೊ           ||೧೪||

ಬಿಡದಿ ಚಾರರು ನೀರು ಕುಡಿದು
ತಿರುಗಿ ತೊಟ್ಟಿಲಕ ಬಂದಾರಿನ್ನೊ
ಗಿಡದಡಿಯಲ್ಲಿ ತೊಟ್ಟಿಲು ಇಲ್ಲದ್ದುಕಂಡು
ಗಾಭರಿಯಾಗೆ ಎದೆಯೊಡೆದಾರಿನ್ನೊ                   ||೧೫||

ಗದಗದ ನಡುಗುತ ಏನು ಸೋಜಿಗವೆಂದು
ಹೆದರಿ ತಾವು ನಿಂತಾರಿನ್ನೊ
ಎದೆಯೊಡೆದು ಅವರು ರಕ್ತಕಾರಿ
ಮರಣ ಹೊಂದಿದರು ಕೇಳಿನ್ನೊ               ||೧೬||

ಮಾರಹರನು ಆ ಶಿಶುವನ್ನು ನೋಡಲು
ಪಾರ್ವತಿ ಸೂರಪತಿ ಬ್ರಹ್ಮರಿನ್ನೊ
ನಾರದ ಋಷಿಗಳು ಕೂಡಿ ಹೇವಲಿಹಳ್ಳಕ
ಬಂದು ಇಳಿದಾರಿನ್ನೊ               ||೧೭||

ಗಿಡದ ತುದಿಯಲಿ ಜೋತಾಡುತಿರುವ
ಕೂಸಿನ ತೊಟ್ಟಿಲ ಕಂಡಾರಿನ್ನೊ
ಬಿಡದೆ ಶಿವನು ಸುರನಾರಿಯರಿಂದ
“ಕರಿಸಿದ್ಧ”ನೆಂದು ಹೆಸರಿಡಿಸಿದನೂ            ||೧೮||

ಗಿರಿಜೆ ಕೂಸಿನ ಕೈಯಲಿ ತೂಕ್ಕೊಂಡು
ಲಟಲಟ ಕೊಟ್ಟಳು ಮುದ್ದನ್ನು
ಧರಣಿಗೆ ಪೋಗಿ ಮಹಿಮೆಯ ತೋರೆಂದು
ವರವ ತಾ ಕೊಟ್ಟಾಳಿನ್ನೊ           ||೧೯||

ಇಂದುಧರನು ಆನಂದದಿಂದಲಿ
ಕಂದನಿಗೆ ಮುದ್ದು ಕೊಟ್ಟಾನೊ
ಕಂದನ ಚರಿತೆಯ ಸುರರಿಗೆ ಪೇಳಿ
ಬೇಗ ಅಪ್ಪಣೆಯನು ಕೊಟ್ಟಾನೊ              ||೨೦||

ಇಂದಿನಿಂದ ಈ ಬಾಲಕನನ್ನು
ನೀವ ಚಂದಾಗಿ ಸಲುಹರಿ ಅಂದಾನೊ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದು ಒಂದು ಸಂದೇಳೊ              ||೨೧||

ಸಂದಿನ ಪದಗಳ ವಂದಿಸಿ ಹೇಳುವೆ
ತಂದಿ ಕರಿಯಸಿದ್ಧಾನೊರ
ದೇವಾರು ಬಂದಾವು ಬನ್ನೀರೆssss       ||೨೨||

 

ಎರಡನೇ ಸಂದು :

ಕುಂದು ಕೊರತೆಯೊಂದು ಬಾರದೆ
ಶಿಶುವನು ಪಾಲಿಸರೆಂದಾನೊ
ಮತ್ತೆ ಶಿವನು ಕಾಮಧೇನುವ ಕರೆದು
ಪ್ರೇಮದಿಂದಲಿ ಹೇಳಿದೆನೊ                   ||೨೩||

ನಿತ್ಯದಿ ಕೂಸಿಗೆ ಹಾಲನು ಕೊಟ್ಟು
ರಕ್ಷಿಸೆಂದು ಅದಕ ಹೇಳಿದನೋ
ಕಂದನು ಇದ್ದ ವೃಕ್ಷಕ್ಕೆ ಶಿವನು
ಆಗ ವರವ ಕೊಟ್ಟಾನೋ            ||೨೪||

ನಿನ್ನ ನೆರಳಿಗೆ ಕುಳಿತ ಸ್ತ್ರೀಯರು
ಗರ್ಭವ ಧರಿಸಲಿ ಅಂದಾನೋ
ಬೇಗ ಗಿಡಕೆ ವರವನಿಟ್ಟು ಶಿವ
ಕೈಲಾಸ ದಾರಿ ಹಿಡಿದಾನೋ                 ||೨೫||

ದೇವಗನ್ನೇರು ಐದು ಮಂದಿ
ಸಂಚಾರ ಮಾಡುತ ಬಂದಾರಿನ್ನೋ
ಸಂಚಾರ ಮಾಡುತ ವನವೆಲ್ಲ ತಿರುಗಿ
ವೃಕ್ಷದ ನೆರಳಿಗೆ ಕುಳಿತಾರಿನ್ನೋ              ||೨೬||

ವನತಿಯರೈದು ಮಂದಿ ಗರ್ಭವ ಧರಿಸಿ
ನವಮಾಸದಿನ ತುಂಬಿದವಿನ್ನು
ಕೇಡು ಬಂತು ನಮಗ ಮನೆಗೆ ಪೋದರೆ
ನಮ್ಮನ್ನು ಬಿಡುವದಿಲ್ಲಿನ್ನು

ಯೇನು ಯತ್ನವೆಂದು ಚಳ್ಳ ಉಗುರಿನಿಂದ
ತಮ್ಮ ಗರ್ಭವ ಸೀಳಿದರಿನ್ನು
ಕಾಣುತ ಪಿಂಡವ ಐದನು ಕೂಡಿಸಿ
ನದಿಯಲಿ ತೇಲಿಬಿಟ್ಟಾರಿನ್ನು                   ||೨೮||

ನದಿಯ ದಡದಲಿ ಭೀಮರಾಯನೆಂಬ
ಕುರುಬನು ಕುರಿಯ ಕಾಯುತ್ತಿದ್ದನು
ನದಿಯಲಿ ತೇಲಿಬರುವ ಶಿಶುಗಳ ಕಂಡು
ತೆಗೆದುಕೊಂಡು ಅವುಗಳನು                  ||೨೯||

ಬಂದು ಮನೆಯೊಳು ಹೆಂಡತಿ ಶಾಂಭವಿ
ಕೈಯೊಳು ಶಿಶುಗಳ ಕೊಟ್ಟಾನೊ
ಅಂದು ಶಾಂಭವಿ ಶಿಶುಗಳ ನೋಡಿ
ಆನಂದ ಮನದೊಳು ಹರುಷವನು            ||೩೦||

ತನಗೆ ಮಕ್ಕಳಲ್ಲೆಂದು ಹಿಗ್ಗುತ
ಚನ್ನಾಗಿ ಜೋಪಾನ ಮಾಡ್ಯಾಳಿನ್ನು
ವನತಿಯರ ಕರಿಸಿ ಜೋಗುಳ ಪಾಡಿಶಿ
ಬಂಗಾರ ತೊಟ್ಟಲ ಕಟ್ಟಿಸ್ಯಾಳಿನ್ನು             ||೩೧||

ಮಾಯವ್ವ, ಮಹಾಂಕಾಳಿ, ಯಕ್ಕವ್ವ
ಲಕ್ಕವ್ವ, ಲಕ್ಷ್ಮಿಯೆಂದು ಹೆಸರಿಟ್ಟಾಳಿನ್ನೂ
ವೆಗ್ಗಳಾಗಿ ಬೆಳೆದಾರಿನ್ನು             ||೩೨||

ಮತಿಮತರಾಗಿ ಪ್ರಾಯಕೆ ಬರಲು
ಕುರಿಯ ಕಾಯತೇವಂದಾರಿನ್ನೊ
ತಂದೆ ತಾಯಿಗಳು ಐದು ಮಂದಿಯ
ಕುರಿಯ ಕಾಯಲು ಕಳಿಸ್ಯಾರಿನ್ನು             ||೩೩|

ನಂದದಿ ಐವರು ಕುರಿಯ ಕಾಯುತ
ಹೇವಲಿಹಳ್ಳಕ ಬಂದಾರಿನ್ನೊ
ಅಲ್ಲಿ ಹಳ್ಳದ ಬದಿಯಲ್ಲಿ ವೃಕ್ಷದ
ಬುಡದಲಿ ಬಂದಾರಿನ್ನೊ             ||೩೪||

ವೃಕ್ಷದ ಹರಿಯೊಳು ಜೋತಡುತಿರುವ
ಕಂದನ ತೊಟ್ಟಿಲ ಕಂಡಾರಿನ್ನೂ
ಅಳುವ ಚೀರುವ ಧ್ವನಿಕೇಳಿ
ಇದು ಏನು ಸೂಜಿಗಂದಾರಿನ್ನೂ               ||೩೫||

ಘಳಿಲನೆ ಆ ಕೂಸು ನೀನು ತೊಗೊಬೇಕು
ನಾನು ತೊಗೋಬೇಕಂದಾರಿನ್ನು
ಅಕ್ಕ ಮಾಯವ್ವನು ಯುಕ್ತಿ ಹೇಳ್ಯಾಳು
ಅದಕೆಲ್ಲಾರು ಒಪ್ಯಾರಿನ್ನು            ||೩೬||

ಶಿವನನು ಸ್ಮರಿಸಿರಿ ಶಿವನು ಕರುಣದಿಂದ
ಯಾರ ಉಡಲೊಳು ಹಾಕುವನೊ
ಅವರಿಗೆ ಆ ಕೂಸು ನಮ್ಮೊಳಗೆ ತಂಟೆ
ಬ್ಯಾಡೆಂದು ಕರಾರು ಮಾಡ್ಯಾರಿನ್ನು           ||೩೭||

ಶಿವನನು ಸ್ತುತಿಸುತ ಐದು ಮಂದಿಯು
ಉಡಿಯೊಡ್ಡಿ ನಿಂತಾರಿನ್ನು
ಬೇಗ ಶಿವನು ಬಂದು ಆ ಕೂಸು ತೊಗೊಂಡು
ಮಾಯವ್ವನ ಉಡಲೊಳು ಹಾಕಿದನು                  ||೩೮||

ಆಗ ಮಾಯವ್ವನು ಶಿವನು ಮಗನ ಕೊಟ್ಟನು
ಎಂದು ಹರುಷ ಆದಾಳಿನ್ನು
ಬೇಗ ಮನಗ ಲಕ್ಷಣ ನೋಡಿ
ಲಟಲಟ ಮುದ್ದು ಕೊಟ್ಟಾಳಿನ್ನು                ||೩೯||

ಮ್ರುಢನೂ ಮಾಯವ್ವಗ ನಿಜರೂಪ ತೋರಿ
ಶಿದ್ಧವೀರನ ಚರಿತೆಯನೂ
ಬಿಡದೆ ಎಲ್ಲ ಹೇಳಿ ಸುಖ ಕೊಡುವೆನೊ
ಚನ್ನಾಗಿ ಜೋಪಾನ ಮಾಡೆಂದನು            ||೪೦||

ಇಂದುಧರನೂ ಆಗ ಶಿಶುವಿನ ತಲಿಮೇಲೆ
ಹಸ್ತೆ ಇಟ್ಟು ಹಾಡಿ ಹರಸಿದನು
ಮುಂದೆ ನಿನ್ನ ಯಂತ್ರ ಮಂತ್ರಗಳು
ಸತ್ಯವಾಗಲಿ ಜಗದೊಳಗಿನ್ನು                 ||೪೧||

ಧರೆಯೊಳು ನಿನ್ನ ಮಹಿಮೆಯು ಬೆಳೆಯಲಿ
ಮುಂದೆ ನಿನಗೆ ರೇವಣಶಿದ್ಧನೋ
ವರಗುರುವಾಗಲಿಯೆಂದು ಹೇಳಿ
ಶಿವ ಕೈಲಾಸಕ್ಕೆ ತಾ ತೆರಳಿದನೊ            ||೪೨||

ಅಕ್ಕ ಮಾಯಾವ್ವನು ಕುರಿಗಳ ಕೂಡಿಸಿ
ಬೇಗ ಬಂದು ತೊಟ್ಟಿಲವನ್ನು
ಬೇಗ ಹೊತ್ತು ಐವರು ಒಂದಾಗಿ
ಮನೆಯ ದಾರಿ ಹಿಡಿದಾರಿನ್ನೊ                ||೪೩||

ಮನೆಗೆ ಬರಲು ತಂದೆ ತಾಯಿಗಳು
ಎಲ್ಲಿ ಸಿಕ್ಕ ಈ ಬಾಲಕನೊ
ತ್ವರದಿ ಹೇಳಿದರು ಶಿವನು ಕೊಟ್ಟನೆಂದು
ಹೇಳಿದರೆಲ್ಲ ವಾರ್ತೆಯನು           ||೪೪||

ತಂದೆ ತಾಯಿಗಳು ಕೇಳಿ ಹರುಷದಿ
ಸಲುಹರಿ ಈ ಬಾಲಕನನ್ನು
ಎಂದು ಹೇಳಲು ಅವರು ಸಲುಹುತ
ಎರಡು ವರ ಪದವನಾದಾನೋ               ||೪೫||

ಒಂದು ದಿನ ಶಿದ್ಧವೀರ ಬಾಲನಿಗೆ
ಮರಿ ಉಂಡ ಎಂಜಲ ಹಾಲನ್ನು
ತಂದು ಎನಗಿ ಕುಡಿಸಿದಿರಿ ನೀವು
ಆ ಹಾಲು ಕುಡಿಯುವದಿಲ್ಲಿನ್ನು                 ||೪೬||

ಕುಡಿಯುವದಿಲ್ಲೆಂದು ಹಟ ಹಿಡಿದನು
ಅಕ್ಕ ಮಾಯವ್ವನ ಚಿಂತೆಯನೋ
ಗಡನೆ ಇದಕೆ ನಾನೇನು ಮಾಡಲೆಂದು
ಮನದಿ ಸ್ಮರಿಸಿದಳು ಶಿವನನ್ನು                ||೪೭||

ಇಂದುಧರನು ತಿಳಿದು ಅವರ ಬಳಿ
ಬೇರೆ ಚರನೊಬ್ಬನ ಕಳುಹಿದನೋ
ಬಂದು ಖೇಚರನು ಅಕ್ಕಮ್ಮಗ ಹೇಳಿದ
ಮಾಡಬೇಡವ್ವ ಚಿಂತೆಯನ್ನು                  ||೪೮||

ಈಗ ನಿನಗೆ ಶಿವ ಹೇಳಿ ಕಳುಹಿದ
ಅದರಂತೆ ಮಾಡವ್ವ ನೀನು
ಬೇಗ ಮಗನು ಹಾಲು ಕುಡಿವನು
ಹೇಳಿದ ಎಲ್ಲ ಸಂಗತಿಯನ್ನು                  ||೪೯||

ಒಂದು ದಿನ ಸೊರನಾರಿಯೊಬ್ಬಳು
ನಿಂದಿಸಿದಳು ಪಾರ್ವತಿಯನ್ನು
ಆಗ ಪಾರ್ವತಿ ಕೋಪದ ಅವಳಿಗೆ
ಕುರಿಯಾಗಿ ಹುಟ್ಟೆಂದು ಶಾಪವನ್ನು           ||೫೦||

ಆಗ ಸುರನಾರಿ ಬೆದರಿ ಬಾಯಾರಿ
ಪಾರ್ವತಿಗೆ ಹೇಳಿಕೊಂಡಾಳಿನ್ನು
ಬೇಗ ಎನಗೆ ನಿಶ್ಯಾಪ ಕೊಡೆಂದು
ಗಿರಿಜೆಯ ಪಾದಕ ಎರಗ್ಯಾಳಿನ್ನು              ||೫೧||

ಭೂಲೋಕದೋಳು ಶಿದ್ಧ ವೀರನಿಗೆ
ಹಾಲು ಕುಡಿಸಬೇಕು ಹೋಗು ನೀನು
ಆ ಮಗುವಿಗೆ ನಿನ್ನ ಕೊರಳ ಮಲಿಹಾಲು
ಕುಡಿಸಬೇಕವ್ವ ನೀನು               ||೫೨||

ಬೀರೇಶ ನಿನ್ನ ಕೊರಳ ಮೊಲೆಹಾಲು
ಕುಡಿದರಾ ನಿಶ್ಯಾಪಿನ್ನು
ಹೀಗೆ ಖೇಚರನು ಅಕ್ಕಮ್ಮಗ ಹೇಳಿದ
ನಿನ್ನ ಕುರಿಹಿಂಡಿನೊಳಿನ್ನು           ||೫೩||

ಅದರೊಳು ಸುರನಾರಿ ಕುರಿಯಾಗಿ ಹುಟ್ಟಿದಳು
ಅದರ ಗುರ್ತು ಹೇಳುವೆನೊ
ಕೆಂದು ಕೆಂಪು ಬೋಳಿ ಸುಗಡಿಯು
ಕೊರಳೊಳು ಮೊಲೆ ಇರುವವನು ಇನ್ನು                ||೫೪||

ಇಂದು ಅದು ನಿನ್ನ ಕುರಿಯೊಳು ಹುಡುಕಿ
ಅದರ ಕೊರಳ ಮೊಲೆಹಾಲನ್ನು
ಕಾಮಿನಿ ಮಣಿ ನೀ ಬೇಗನೆ ತಂದು
ಶಿದ್ದಬೀರೇಶಗೆ ಹಾಲಿನ್ನು             ||೫೫||

ಪ್ರೇಮದಿಂದ ಕುಡಿಸೆಂದು ಹೇಳಿದನು
ಖೇಚರನು ತಾನು ಬಯಲಾದನೊ
ಅಕ್ಕ ಮಾಯವ್ವನು ಕುರಿಯೋಳು ಹುಡುಕಲು
ಸುಗಡಿ ಕೊರಳ ಮೊಲೆಹಾಲನ್ನು              ||೫೬||

ಬೇಗ ತಂದು ಬೀರೇಶಗ ಕೊಡಲು
ಆನಂದದಿಂದ ಹಾಲು ಕುಡಿಯುವನು
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದು ಒಂದು ಸಂದೇಳೋ
ದೇವಾರು ಬಂದಾವು ಬನ್ನೀರೇssss        ||೫೭||