ಮೂರನೇ ಸಂದು :
ಹೀಗೆ ಹಾಲು ಕುಡಿಯುತ ದೇವರು
ದೊಡ್ಡವನಾಗಿ ಬೆಳೆದಾನೊ
ಆಗ ಸುರನಾರಿ ನಿಶ್ಯಾಪದಿಂದ
ಸ್ವರ್ಗಕ್ಕೆ ತಾನು ಹೋಗ್ಯಾಳಿನ್ನು ||೫೮||
ಹೀಗೆ ಬೀರೇಶ ದೊಡ್ಡವನಾಗುತ
ಮನೆಯ ಬಿಟ್ಟು ತಿರುಗ್ಯಾಡುವನೊ
ವಾರಿಗೆಯ ಹುಡುಗರ ಕೂಡ
ಆಟವಾಡಲಿಕ್ಕೆ ಹೋಗುವನೊ ||೫೯||
ಹುಡುಗರಾಡುವ ಚಂಡಿನಾಟವ ಕಂಡು
ತಾನೊಂದು ಚಂಡ ಬೇಡುವೆನೊ
ಗಡನೆ ಮನೆಗೆ ಬಂದು ಚಂಡು ಮಾಡಿಸೆಂದು
ಅಕ್ಕಗ ಹಟವ ಮಾಡಿದನೊ ||೬೦||
ಉಂಡಾಡುತಿರು ನೀ ಸುಮ್ಮನೆ ಮನೆಯೊಳು
ಚಂಡಿನಾಟ ಬೇಡಿನ್ನು
ಮಾತು ಕೇಳದು ಚಂಡು ಮಾಡಿಸೆಂದು
ಪರಿಪರಿ ಕಾಡಹತ್ತಿದನು ||೬೧||
ಅಕ್ಕ ಮಾಯವ್ವನು ನಿರ್ವಾಹವಿಲ್ಲದೆ
ಚಂಡು ಮಾಡಿಸಿ ಕೊಟ್ಟಾಳಿನ್ನು
ರೇವಣಶಿದ್ಧನು ಬಂದು ಬೀರೇಶಗ
ಲಿಂಗದೀಕ್ಷೆಯನು ಮಾಡಿದನೊ ||೬೨||
ಗಡನೆ ಪಂಚಾಕ್ಷರಿ ಮಂತ್ರವ ಬೋಧಿಸಿ
ರೇವಣ ತಾನು ಹೋದಾನೊ
ಒಡನೆ ಬೀರೇಶನು ಚಂಡನು ತೊಕ್ಕೊಂಡು
ಬೀದಿ ಬೀದಿಯಲಿ ಆಡಿದನೊ ||೬೩||
ಬೀರೇಶನ ಚಂಡೊಂದು ಹುಡುಗಗೆ ಬಡದಿತು
ಆಗ ಹುಡುಗ ಮರಣ ಹೊಂದಿದನೊ
ಸತ್ತ ಹುಡುಗನ ನೋಡಿ ಬೀರೇಶನು
ಮನೆಗೆ ಓಡಿ ಹೋಗ್ಯಾನಿನ್ನು ||೬೪||
ಇತ್ತ ಹುಡುಗನ ತಂದೆ ತಾಯಿಗಳು
ಹುಡುಗ ಸತ್ತ ಸುದ್ದಿಯೆನೋ
ನೋಡಿ ದುಃಖದಿಂದ ಕೊಂದವರ್ಯಾರೆಂದು
ಕೇಳಿದರಲ್ಲಿಯ ಹುಡುಗರನೊ ||೬೫||
ಹುಡುಗರಾಗ ಬೀರನೆಂಬ ಹುಡುಗ
ತನ್ನ ಚಂಡಿನಿಂದ ಹೊಡದಾನೋ
ಒಡನೆ ನೆಲಕೆ ಬಿದ್ದು
ಒದ್ದಾಡುತ ಪ್ರಾಣ ಬಿಟ್ಟಾನೊ ||೬೬||
ಆಗ ಕೋಪದಿಂದ ಖಡ್ಗ ಖಟಾರಿ ತಗೊಂಡು
ಅವನ ಮನಿಗೆ ಬಂದಾರಿನ್ನೋ
ಬೀರನ ಹಿಡಿದು ಖಡ್ಗದಿ ಹೊಡೆಯಲು
ತುಂಡು ತುಂಡಾಗಿ ಉದಿರ್ಯಾವಿನ್ನು ||೬೭||
ಕೂಡಿದ ಜನರೆಲ್ಲ ಶಿದ್ಧನ ನೋಡಿ
ಗಾಬರ್ಯಾಗಿ ನಿಂತಾರಿನ್ನೊ
ಆಗ ಬೀರೇಶನು ಅಲ್ಲಿಗೆ ಬಂದು
ಸತ್ತ ಹುಡುಗನನ್ನು ನೋಡಿದನೋ ||೬೮||
ಒಂದೇ ಮನದಿ ಗುರುವಿನ ಸ್ಮರಿಸಿ
ಭಸ್ಮ ಹಚ್ಚಿ ಪ್ರಾಣ ಪಡೆದಾನೊ
ನೋಡಿ ಜನರು ಬೆರಗಾರಿ ನಿಂತು
ಇವ ಮನುಷ್ಯ ಅಲ್ಲ ಅಂದಾರಿನ್ನೊ ||೬೯||
ಹಾಡಿ ಹರಸುತ ಪುರದೊಳು ಕೂಡುತ
ಇವ ದೇವರಂದಾರಿನ್ನೊ
ಆಗ ಮಾಯವ್ವನು ಇವನ ಪುಂಡಾಟ ನೋಡಿ
ಊರ ಬಿಡಬೇಕಂದಾಳಿನ್ನೊ ||೭೦||
ಗಕ್ಕನೆ ಹುಡುಗನ ಕರಕೊಂಡು
ಬೆಳ್ಳಿಗುತ್ತಿಗೆ ಬಂದಾಳಿನ್ನೊ
ಹೋಗುವ ಮಾರ್ಗದಿ ಹುತ್ತವ ಕಂಡು
ಸರ್ಪಾಗಿ ಅದರೊಳು ಹೊಕ್ಕಾನು ||೭೧||
ಬೇಗ ಮೇಲೆ ಬಂದು ಶಿದ್ಧಬೀರನು
“ನಾಗಪುರ” ಆಗಲೆಂದಾನೊ
ಅಲ್ಲಿಂದ ಮುಂದಕೆ ದಾರಿಯ ಹಿಡಿದು
ಬೆಳ್ಳಿಗುತ್ತಿಗೆ ಬಂದಾರಿನ್ನು ||೭೨||
ಅಲ್ಲಿನ ಜನ ನೋಡಿ ಮಹಿಮರೆಂದು
ಇಬ್ಬರ ಪಾದಕ ಎರಗ್ಯಾರಿನ್ನು
ಕೂಡಿದ ಜನರೊಳು ಹೇಮಣ್ಣನೆಂಬ
ಕುರುಬನು ಅವರಿಗೆ ನಮಿಸಿದನೊ ||೭೩||
ಒಡನೆ ನಿಮ್ಮ ಪುರದೆಸರೆನೆಂದು
ಈ ತರುಳ ಯಾರೆಂದು ಕೇಳಿದನೊ
ಇವನು ನನ್ನ ತಮ್ಮ ಶಿದ್ಧಬೀರೇಶನು
ನಾನು ಅಕ್ಕ ಮಾಯವ್ವನು ||೭೪||
ಅವನಿಯೊಳು ನಮ್ಮ ಜನ್ಮಸ್ಥಾನವು
ಮೂಡಲಗಿರಿಯೆಂಬ ಪುರವಿನ್ನು
ಅಷ್ಟರೊಳು ಸತ್ತ ಕುರಿಗಳ ಹೊತಗೊಂಡು
ಕುರುಬರು ಅಲ್ಲಿಗೆ ಬಂದಾರಿನ್ನು ||೭೫||
ವಿನಯದಿಮದ ಇವು ಯಾಕ ಸತ್ತವೆಂದು
ಅಕ್ಕ ಮಾಯವ್ವನು ಕೇಳಿದಳು
ಹಿರೇಬೇನೆಯಿಂದ ಸತ್ತವೆನಲು
ಆಗ ಶಿದ್ದಬೀರೇಶಂತಾನೊ ||೭೬||
ಗುರುನಾಮವನು ಸ್ಮರಿಸಿ
ಭಸ್ಮ ಹಚ್ಚಲು ಕುರಿಗಳು ಎದ್ದಾವಿನ್ನು
ಬೆರಗಾಗಿ ಹೇಮಣ್ಣ ತನ್ನ ಮನಿಗೆ
ಬೇಗನೆ ಕರಕೊಂಡು ಹೋದಾನು ||೭೭||
ಇರುವದಕ್ಕೆ ಅವರಿಗೆ ಒಂದು ಮನೆ
ಗೊತ್ತು ಮಾಡಿ ಆಗ ಕೊಟ್ಟಾನು
ಮನೆ ಮನೆಗೊಂದರಂತೆ ಕುರಿಯ
ಕೊಡಿಸುವೆನೆಂದವರಿಗೆ ಹೇಳಿದನು ||೭೮||
ತನಯ ಬೀರೇಶನು ನಾವೇನ ಮಾಡೋನು
ಕಾಯುವರಾರಿಂದು ಕೇಳಿದನು
ಆಗ ಹೇಮಣ್ಣನು ತನ್ನ ಮಗ
ಹೋಮಣ್ಣನನ್ನು ಕಳಿಸುವನೋ ||೭೯||
ಬೇಗ ಏಳನೂರ ಕುರಿಯ ಕೊಡಿಸಿ
ಮಗನ ಕಾಯಲಿಕ್ಕೆ ಕಳಿಸಿದನೋ
ಅಕ್ಕ ಮಾಯವ್ವನು ಅವಗ ಕೋಲ ಕೊಟ್ಟು
ನಿತ್ಯದಿ ಕಾಯಲಿಕ್ಕೆ ಕಳಿಸಿದಳೋ ||೮೦||
ಆಗ ಬೀರೇಶನು ಬಿಲ್ಲು ಮಾಡಿಸಿ ಕೊಡು
ಎಂದು ಅಕ್ಕಗ ಹಟ ಮಾಡಿದನು
ಬಿಲ್ಲು ತೊಗೊಂಡು ನೀಯೇನು ಮಾಡುವಿ
ಸುಮ್ಮನೆ ಕಾಡಬೇಡ ಯನ್ನನು ||೮೧||
ಹಿಂದೆ ನಿನಗೆ ಚಂಡು ಮಾಡಿಸಿ ಕೊಟ್ಟ ಫಲದಿಂದ
ಊರು ಬಿಟ್ಟು ಬಂದಿಹೆನು
ಮುಂದೆ ಬಿಲ್ಲಿನಿಂದ ಏನು ನ್ಯಾಯ
ತರುವಿ ನಿನಗೆ ಬಿಲ್ಲು ಬ್ಯಾಡಿನ್ನು ||೮೨||
ಆಗ ಬೀರೇಶನು ಮಾತು ಕೇಳದೇ
ಮಾಡಿಸೆಂದು ಹಟ ಹಿಡಿದಾನೊ
ಬೇಗ ಸಾಲಿ ಈರಪ್ಪನ ಬಳಿಗ್ಹೋಗಿ
ಬಿಲ್ಲು ಮಾಡಿಸಿ ಕೊಟ್ಟಾಳು ತಾನು ||೮೩||
ಆಗ ಬೀರೇಶನು ಕಾಶೀಯ ಬಿಗಿದು
ಬಿಲ್ಲ ಪೂಜಿಯಗೊಂಡಾನೊ
ಗುರುವಿನ ಸ್ಮರಿಸುತ ಬಿಲ್ಲು ತೊಗೊಂಡು
ಝೇಂಕರಿಸಿ ಮುಂದೆ ನಡೆದಾನೊ ||೮೪||
ಹೋಗುವ ದಾರಿಯೊಳು ನೀರು
ತರುವ ಬಾಲೇರ ಕೊಡಕಿನ್ನು
ಬಿಲ್ಲೇಲೆ ಹೊಡೆಯಲು ಕೊಡವು ತೂತು
ಬಿದ್ದು ನೀರು ಸೋರಹತ್ಯಾವಿನ್ನು ||೮೫||
ಆಗ ಸಿಟ್ಟಿನಿಂದ ತಂದಿ ತಾಯಿ ಕಾಣದ
ಪರಮ ನೀಚನೊ
ಪರದೇಶಿ ಇದು ಎಲ್ಲಿಂದ ಬಂದಿತೆಂದು
ಸಿಕ್ಕ ಸಿಕ್ಕಂತೆ ಬೈದಾರಿನ್ನು ||೮೬||
ತ್ವರದಿ ಬೀರೇಶನು ಮೇಣದ ಗುಂಡಿನಿಂದ
ಕೊಡಕೆ ಹೊಡೆದು ತಾ ನಡೆದಾನು
ಸೋರುವ ಕೊಡಗಳು ನೋಡಲ್ಲಯ್ಯ
ಮೊದಲಿನಂತಾಗ್ಯಾವಿನ್ನು ||೮೭||
ತಂದೆ ತಾಯಿಗಳಿಲ್ಲದವನೆಂದು
ನಿಂದೆನಾಡಿನ ಮಾತನ್ನು
ಶಿದ್ಧಬೀರೇಶನು ಬೈಗಳೆ ಕೇಳಿ
ಮನಸ್ಸಿಗೆ ಕೆಟ್ಟಾಗಿ ಬಂದಾನಿನ್ನು ||೮೮||
ಮನೆಗೆ ಬಂದು ಅಕ್ಕಗ ಕೇಳಿದ
ನನಗೆ ತಂದೆ ತಾಯಿ ಇಲ್ಲೇನು
ನನಗೆ ತಂದೆ ತಾಯಿ ಇಲ್ಲದವನೆಂದು
ನಿಂದೆಯನಾಡಿದರು ಕೇಳಿನ್ನು ||೮೯||
ಬೇಗ ಹೇಳು ನನ್ನ ತಂದೆ ತಾಯಿಗಳು
ಅವರೆಲ್ಲಿರುವರು ಈಗಿನ್ನು
ಈಗ ನೀನು ಎನಗ ಹೇಳಬೇಕೆಂದು
ಹಟವ ಮಾಡುತ ಕುಳಿತಾನೊ ||೯೦||
ಆಗ ಮಾಯವ್ವನು ತಮ್ಮಗ ಹೇಳ್ಯಾಳು
ನಿಮ್ಮ ತಂದಿ ಬರಮದೇವಾನು
ಈಗ ನಿಮ್ಮ ತಾಯಿ ಸೂರಾವತಿದೇವಿ
ಇರುವಳಿನ್ನೂ ||೯೧||
ನನ್ನ ತಮ್ಮನೆ ಕೇಳೊ ನೀನು
ಚಂದ್ರಗಿರಿಯಲ್ಲಿರುವರಿನ್ನು
ಸುಮ್ಮನೆ ನಿನ್ನ ಮರೆತುಬಿಟ್ಟಿರು
ಮರಣ ಹೊಂದಿದನೆಂದು ತಿಳಿದಿನ್ನು ||೯೨||
ನೀನು ಹುಟ್ಟಿದ ಏಳು ದಿವಸದಲ್ಲೆ
ಅರಣ್ಯಕ್ಕೆ ಅಟ್ಯಾರಿನ್ನು
ನಾವು ಕುರಿ ಕಾಯಲಿಕ್ಕೆ ಬಂದಿದ್ದೆವು
ನೋಡಿ ಮನೆ ತಂದೆ ನಿನ್ನನ್ನು ||೯೩||
ಕೇಳಿ ಬೀರೇಶನು ಎನ್ನ ಅರಣ್ಯದಿ
ಇಡಲಿಕ್ಕೆ ಕಾರಣವೇನೆಂದಾನು
ಹೇಳವ್ವ ಎನಲು ಆಗ ಮಾಯವ್ವನು
ಹೇಳಿದಳೆಲ್ಲ ಸಂಗತಿಯನ್ನೂ ||೯೪||
ತರುಳ ಕೇಳೋ ನಿಮ್ಮಾವ ಕೃಷ್ಣನು
ನೀನಿದ್ದರೆ ತನ್ನ ಮಗಳನ್ನು
ತ್ವರದಿ ಒಯ್ಯುವನೆಂದು ನಿನ್ನನ್ನು ಕೊಲ್ಲಲು
ಮಾಡಿದ ಕಪಟ ಯತ್ನವನು ||೯೫||
ಏನು ಹೇಳಲಿ ತಮ್ಮ ನಿಮ್ಮಾವ
ಮಾಡಿದ ಕೆಟ್ಟ ಕೃತ್ಯವನು
ತಾನು ಜೋತಿಸ್ಯನಾಗಿ ನಿಮ್ಮ ತಾಯಿಗೆ
ಬೋಧಿಸಿ ಅರಣ್ಯದಿ ಒಗೆಸಿದನೊ ||೯೬||
ಕೇಳಿ ಬೀರೇಶನು ಕೋಪವ ತಾಳಿ
ನೀಚ ಕೃಷ್ಣನನ್ನು ನೋಡುವೆನು
ಆ ಖೂಳನ ಸೊಕ್ಕು ಮುರಿಯದಿದ್ದರೆ ನಾ
ಶಿದ್ದ ಬೀರೈಯ್ಯ ನಾನಲ್ಲೆಂದಾನೊ ||೯೭||
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದು ವಂದು ಸಂದೇಳೊ
ದೇವಾರು ಬಂದಾವು ಬನ್ನೀರೇssss ||೯೮||
ನಾಲ್ಕನೇ ಸಂದು :
ಅಕ್ಕ ಹೇಳವ್ವ ದುಷ್ಟನ ಪುರವನೊ
ವತ್ತರದಿಂದ ಹೇಳೆಂದಾನೋ
ದುಷ್ಟನ ಮಗಳ ಹೆಸರೇನಿರುವದು
ಬೇಗ ಎನಗೆ ತಿಳಿಸೆಂದಾನೋ ||೯೯||
ಆಗ ಮಾಯವ್ವನು ತಮ್ಮಗ ಹೇಳ್ಯಾಳು
ವೈಕುಂಠ ಪುರದಲ್ಲಿರುವನು
ಅವನ ಮಗಳು ಕುಮಾಲಿದೇವಿ
ಹರುಷದಿಂದಿರುವಳಿನ್ನು ||೧೦೦||
ನೀನು ಒಯಿದಾನೆಂಬ ಅಂಜಿಕೆಯಿಂದ
ಮಗಳಿಗೆ ಕಾವಲಿಟ್ಟಾನೊ
ಹೀಗೆ ಮಾಡಿದನೆಂದು ಕೋಪದಿಂದ
ಆಗ ಬೀರೇಶ ಕಾಶಿಯ ಕಟ್ಟಿದನೊ ||೧೦೧||
ಈಗ ನಾನು ಕಾವಲಿಗಾರರ ಕೊಂದು
ಗೆದ್ದು ಕನ್ಯೆಯನು ತರುವೆನೊ
ಹೋಗಬೇಡ ತಮ್ಮ ಈ ಸಮಯದಿ
ಕರಮುಗಿದು ಕೇಳಿಕೊಳ್ಳುವೆನು ||೧೦೨||
ಹೋಗುವೆನೆಂದು ಅಕ್ಕನ ಮಾತು ಮೀರಿ
ಬಿಲ್ಲು ತೊಗೊಂಡು ತಾ ಹೊರಟಾನೊ
ಭರದಿ ಬೀರೇಶನು ವೈಕುಂಟಕ ಹೋಗಿ
ಪಟ್ಟಣದೈಶ್ವರ್ಯ ನೋಡಿದನೊ ||೧೦೩||
ರಾಜ ಬೀದಿಯಲ್ಲಿ ಬೀರೇಶ ನಿಂತು
ಕನ್ಯೆ ಹೆಂಗ ಒಯ್ಯುವದಲ್ಲೆಂದಾನೊ
ಬೇಗ ಶಸ್ತ್ರಾಸ್ತ್ರವ ತೆಗೆದಿಟ್ಟು ಶಿದ್ಧನು
ತಾನೊಂದು ಯುಕ್ತಿಯ ಮಾಡಿದನೊ ||೧೦೪||
ತ್ವರದಿ ಮುದುಕ ಬಳಿಗಾರ ವೇಷದಿ
ಬೀದಿಯೊಳು ಕುಳಿತಾನೊ
ಚಂದ ಚಂದದ ಬಳಿಗಳಿಟಗೊಂಡು
ಬೀದಿಯಲ್ಲಿ ತಾ ಕುಳಿತಾನೊ ||೧೦೫||
ಆಗ ಕಾಮಾಲಿನಿ ದಾಸಿಯರೆಲ್ಲರೂ ಬಂದು
ಬಳಿಯ ನೋಡಿದರಿನ್ನು
ಅಂದ ಚಂದದ ಬಳಿಗಳ ನೋಡಿ ಬಂದು
ದೇವಿಗೆ ತಿಳಿಸ್ಯಾರಿನ್ನು ||೧೦೬||
ಏನು ಹೇಳಬೇಕು ಕಾಮಾಲಿನಿದೇವಿ
ಬಳಿಗಳ ಅಂದ ಚದವನು
ಕಾಣೆವು ನಾವಿಂಥ ಬಳಿಗಳ ಎಷ್ಟು
ಹೇಳಿದರೂ ತೀರದಿನ್ನು ||೧೦೭||
ರಾಜಕನ್ಯೆಯರಿಡುವಂಥ ಬಳಿಗಳು
ಯಾರಿಗೂ ಸಲ್ಲವು ಕೇಳಿನ್ನು
ಸೋಜಿಗಗೊಂಡೆವು ಬಳೆಗಳ ನೋಡಿ
ಕರೆಸಬೇಕವ್ವಾ ಅವನನ್ನು ||೧೦೮||
ಬೇಗ ನನ್ನ ತಂದಿ ಕೃಷ್ಣಗ ತಿಳಿಸಿ
ಕರಿಸಿರಿ ಆ ಬಳೆಗಾರನ್ನೊ
ವತ್ತರದಿಂದ ಕೃಷ್ಣಗ ಬಂದು ತಿಳಿಸಲು
ಕರಸಿದ ಆಗ ಬಳೆಗಾರನ್ನು ||೧೦೯||
ನೋಡಿ ಮುದುಕನೆಂದು ಒಗೆ ಹೋಗಲಿಕ್ಕೆ
ಕೃಷ್ಣ ಅಪ್ಪಣೆ ಕೊಟ್ಟಾನೊ
ಕರದಲಿ ಕೋಲು ಪಿಡಿದು ನಡಗುತ
ಹೆಗಲ ಮೇಲೆ ಬಳೆ ತಾ ಹೊತ್ತಾನೊ ||೧೧೦||
ಶಿರವ ನಡಗಿಸುತ ಕೋಲು ಊರುತ
ಕಾಮಾಲಿ ಸದರಿಗೆ ಬಂದಾನೊ
ಮಣಿಯ ಮಂಚದ ಮೇಲೆ ಕುಳಿತ
ಕಾಮಾಲಿದೇವಿಯ ಮಾರಿಯ ತಾ ನೋಡಿದನೊ ||೧೧೧||
ಪುಲ್ಲಲೋಚನೆಯ ರೂಪ ಲಾವಣ್ಯ ನೋಡಿ
ಬೆದರಿ ಬೆರಗಾಗಿ ನಿಂತಾನೊ
ಏನು ರೂಪವಿದು ಈ ಅವಳ ರೂಪಕ್ಕೆ
ರತಿದೇವಿ ಸಹ ಅಲ್ಲಿನ್ನು ||೧೧೨||
ಕ್ಷೊಣೆಯೊಳಗೆ ಇಂಥ ರೂಪವತಿಯ
ಕಾಣೆನು ಯಾವ ಸ್ತ್ರೀಯರನ್ನು
ಹೊಂಚು ಹಾಕಿ ಎತ್ತಿ ಒಯ್ಯುದಿದ್ದರೆ
ಧರೆಯೊಳಿದ್ದು ಫಲವೇನು ||೧೧೩||
ಹೀಗೆ ಯೋಚಿಸಿ ಮನದೊಳು ತಾನು
ಕೂಡಲೆ ನಿಜರೂಪ ತೋರಿದನೊ
ಬೇಗ ಕಾಮಾಲಿ ಇವನ ರೂಪ ನೋಡಿ
ಬೆದರಿ ಅಂಜುತ ತಾ ನಿಂತಾಳಿನ್ನು ||೧೧೪||
ಚಲುವ ಚನ್ನಿಗನ ರೂಪ ಲಾವಣ್ಯ ನೋಡಿ
ತನ್ನ ಮನಸು ಸೋತಾಳಿನ್ನು
ಎನಗೆ ಇವನು ಪತಿಯಾದರೆ
ಹೆಣ್ಣಿನೊಳಗೆ ಧನ್ಯಳಾಗುವೆನೊ ||೧೧೫||
ಹೀಗೆ ಯೋಚಿಸಿ ಬಳೆಗಾರನ
ಬಳಿಯಲ್ಲಿ ಬಂದು ಕುಳಿತಾಳಿನ್ನು
ಆಗ ನಾಚುತ ಮುಸುಗ ಸರಿಸುತ
ಅವನ ಕರದಿ ಕೈ ಕೊಟ್ಟಾಳಿನ್ನು ||೧೧೬||
ಆಗ ಬೀರೇಶನು ಇವಳ ಒಯ್ಯದಾದರ
ಈಗ ವ್ಯಾಳೆ ಅಲ್ಲವೆಂದಾನೊ
ಈಗ ಇವಳ ಮನದಾಶೆ ಏನಿರುವದು
ತಾನು ತಿಳಿಯಬೇಕೆಂದಾನೊ ||೧೧೭||
ತ್ವರದಿ ಮತ್ತೊಂದು ವೇಷದಿ ಬಂದು
ಇವಳ ಒಯ್ಯಬೇಕಂದಾನೊ
ಚೆನ್ನಿಗಳ ಮನದಾಸೆ ತಿಳಿಯಲು ಅವಳ
ಯೋಗಕ್ಷೇಮ ಕೇಳಿದನೊ
ಚೆನ್ನಿಗಳೆ ಇಂದು ಗಂಡನ ಮನಿಯೋ
ತವರುಮನಿಯೋ ಎಂದಾನು
ಸನ್ನುತಾಂಗಿ ನಿನಗೆ ಕಾವಲಿಟ್ಟದ್ದು
ಅದು ಏನು ಕಾರಣ ಹೇಳಂದಾನೊ ||೧೧೯||
ಎಲ್ಲಿ ಗಂಡ ನನ್ನಂಥಾ ದುರ್ದೈವಿಗೆ
ಲಗ್ನವಾಗಿಲ್ಲ ಎನಗಿನ್ನು
ಮತ್ತೆ ಕೇಳಿರಿ ಸೂರಾವತಿ ಪುತ್ರನು
ಚನ್ನಾಗಿ ಇರುವ ಬೀರೇಶನು ||೧೨೦||
ಎತ್ತಿಕೊಂಡು ಒಯ್ಯುವ ಭಯದಿಂದೆ
ನನ್ನ ಆತಂಕದೊಳಿಟ್ಟಾನೊ
ಸುಂದರಾಂಗ ನನ್ನ ಶಿದ್ಧಬೀರೈಯ್ಯನು
ಎಂದು ಬಂದು ಕರೆದೊಯ್ಯುವೆನೊ ||೧೨೧||
ಅದೇ ಚಿಂತಿಯಿಂದ ಮನದೋಳು
ನಾನೂ ಪರಿಕಷ್ಟದೊಳಿರುವೆನು
ಮನಸಿನೊಳಗಿನ ಕಷ್ಟವ ಹೇಳಿ
ಬಳ ಬಳ ಕಣ್ಣೀರು ಸುರಿಸ್ಯಾಳಿನ್ನು ||೧೨೨||
ಕಾಂತಿಮಣಿ ನೀ ಚಿಂತಿಸಬೇಡ
ಅಂದ ಚಂದ ಬೀರೇಶನನ್ನು
ಸ್ವತಾಃ ನಾನೇ ಪೋಗಿ ಕರೆತರುವೆನು
ಸಂತೋಷದಿಂದಲಿ ಇರು ನೀನು ||೧೨೩||
ವೃತ್ತ ಕುಚಳೆ ಇದು ಸತ್ಯ ಮಾತು ತಿಳಿ
ಅಗತ್ಯವಾಗಿ ಕರೆತರುವೆನು
ಹೀಗೆ ಹೇಳಿ ಮುದಿ ವೇಷ ತಾಳಿ
ಹೊರಬಿದ್ದು ತಾ ಹೋದಾನೊ ||೧೨೪||
ಇನ್ನು ಮುಂದೆ ಏನು ಮಾಡಬೇಕೆಂದು
ಮತ್ತೊಂದು ಹಂಚಿಕೆ ಮಾಡಿದನೊ
ತ್ವರದಿ ಸಿಂಪಿಗನ ವೇಷ ತಾಳಿ
ತರತರ ಜರದ ಕುಬ್ಬಸನ್ನು ||೧೨೫||
ರಾಜ ಬೀದಿಯಲಿ ಮಾರುತ ಬರಲು
ಕಾಮಾಲಿನಿದಾಸಿ ನೋಡ್ಯಾಳಿನ್ನು
ರಾಜ ಬೀದಿಯಲಿ ಮಾರುತ ಬರಲು
ಕಾಮಾಲಿನಿದಾಸಿ ನೋಡ್ಯಾಳಿನ್ನು
ಚಂದ ಚಂದದ ಜರದ ಅರಬಿ ನೋಡಿ
ನಮ್ಮ ದೇವಿಗೆ ಸಲ್ಲುವವಿನ್ನು ||೧೨೬||
ಓಡಿ ಬಂದು ಜರದ ಕಣದ ಸುದ್ದಿಯನೊ
ಕಾಮಾಲಿನಿಗೆ ಹೇಳಾಳಿನ್ನು
ಸರಿಯಾದ ಅರಬಿ ಅರಸು ಮಕ್ಕಳಿಗೆ
ಬೇಗನೆ ಕರಿತರಸವ ನೀನು ||೧೨೭||
ಕೇಳಿ ಕಾಮಾಲಿನಿ ತಂದೆಗೆ ತಿಳಿಸಿ
ಕರಕೊಂಡು ಬರ್ರಿ ಸಿಂಪಿಗನನ್ನೊ
ಹೇಳಿದಳಾಗ ದಾಸಿಯು ಕೃಷ್ಣಗ
ಜರದ ಕುಬ್ಬಸದ ಸುದ್ದಿಯನ್ನೊ ||೧೨೮||
ಆಗ ಕೃಷ್ಣನು ಸಿಂಪಿಗನ ಕರಿಸಿ
ನೋಡಿದ ಮುದಿ ಆಕಾರವನ್ನೊ
ಬೇಗ ಕಾಮಾಲಿನಿ ಬಳಿಗೆ ಹೋಗು
ನೀ ಕೊಡ ಬೇಡಿದ ಕುಬ್ಬಸವನ್ನೊ ||೧೨೯||
ಒಳಗೆ ಹೋಗಲಿಕ್ಕೆ ಅಪ್ಪಣೆ ಕೊಡಲು
ಹೊತ್ತನು ಕುಬ್ಬಸದ ಗಂಟನ್ನು
ಘಳಿಲನೆ ಒಳಗೆ ಹೋಗಿ ಗಂಟು
ಇಳುವಿ ಕುಳಿತಾನೊ ||೧೩೦||
ಸುಂದರಿ ಕಾಮಾಲಿನಿ ನೋಡಿ
ಇಂದಿಗೆ ಮನದಾಶೆ ತೀರಿತಿನ್ನು
ಬೇಡಿದ ಜರದ ಕುಬ್ಬಸ ಕೊಡಲು
ಕಾಮಾಲಿನಿ ಸಂತೋಷಗೊಂಡಾಳಿನ್ನು ||೧೩೧||
ಇಂದು ಇವಳ ಒಯ್ಯದೆ ಬಿಡುವದಿಲ್ಲ
ಎಂದು ನಿಜರೂಪ ತೋರಿದನೊ
ನೋಡಿ ಅವನ ಸೌಂದರ್ಯ ರೂಪವನು
ಬೆದರಿ ಬೆರಗಾಗಿ ನಿಂತಾಳೊ ||೧೩೨||
ಹಿಂದೆ ಬಳೆಗಾರ ಇವನು
ಮನದಿ ಸಂದೇಃಗೊಂಡಾಳಿನ್ನು
ಸಂದೇಹದಿಂದಲಿ ಸುಂದರನವನ
ಅಂದವನು ಕೇಳಿದಳನ್ನು ||೧೩೩||
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದು ಒಂದು ಸಂದೇಳೊ
ದೇವರಾರು ಬಂದಾವು ಬನ್ನೀರೇssss ||೧೩೪||
Leave A Comment