ಸೈನ್ಯದೇವನ ಪದಾ

ಸೈನ್ಯದೇವನು ದ್ರೌಪದಿಯ ವಹಿಸಿದನು
ನಾ ವಿಸ್ತಾರ ಮಾಡಿ ಹೇಳುವೆನು              ||೧||

ವಿಸ್ತಾರ ಮಾಡಿ ನಾ ಹೇಳುವೆನು
ಸರ್ವರೂ ಕೇಳರಿ ನೀವು ಇದನ್ನು              ||೨||

ಮಧ್ಯ ಮಾರ್ಗದಲ್ಲಿ ಮದ್ಯ ಪಾಂಡವರು
ಯುದ್ಧ ಮಾಡಿ ತಂದರು ದ್ರೌಪದಿಯನ್ನು                ||೩||

ಕೌರವರಾಜ ಕಾಶೀಯಾತ್ರೆಗೋಸ್ಕರವಾಗಿ
ಹೊರಟನು ನಿಶ್ಚಯಿಸಿ
ತಮ್ಮ ಸೈನ್ಯ ಸಿದ್ಧವನು ಏರೈಸಿ               ||೪||

ಶೀಘ್ರದಲಿ ಹೊರಟನು ಮನದೊಳ ಕುಸಿ
ಚದುರಂಗ ಬಲ ಸಾಯಿತದಲಿ ಹೊರಟರು             ||೫||

ವಾದ್ಯಗಳ ಘೊಳಡಿಸಿ ಆನೆ ಕುದುರೆ
ದಂಡು ಸಹಿತವಾಗಿ ಆರ್ಭಟಿಸುವರು                   ||೬||

ಮಾವುತರು ಚಿನಕಾಳಿ ಹೆಗ್ಗಾಳಿ
ಮುಂದ ಹಿಡಿಸಿದರು ಬರರರರರss           ||೭||

ಮುಂದ ಹಿಡಸಿದ ಬರರss
ಹಿಂಗ ಸಾರಿದರು ಆರ್ಭಟರು                  ||೮||

ಅವನ ಆರ್ಭಟಕ ಭೂಮಿ ಬಿಚ್ಚಿ ತೆಗೆಯಿತು
ಆಗ ಬಿಚ್ಚಿ ಬಾಯಿ ತೆಗೆಯಿತು                 ||೯||

ಆಗ ಆದಿ ಶೇಷನ ಶಿರಕುಸಿತಿತ್ತು ಬ್ಯಾಗ
ಸೈನ್ಯ ಅಡಗಳಿಗೆ ಭೂಮಿ ಆಕಾಶದಂಗ ಹೆಳತೆವಿ ಈಗ ||೧೦||

ಬೇಗದಿಂದ ಹೋದಾರು ಕಾಶಿಗೆ
ಡೇರೆ ಹೊಡೆದರು ನದಿ ದಂಡೇಲಿ             ||೧೧||

ನಮಸ್ಕಾರ ಈಶ್ವರನಾಥನಿಗೆ ಮಾಡಿದರು
ಹರಸಾ ಮನದಾಗ ಪೂಜೆ ಮಾಡಿಸಿದರು               ||೧೨||

ಲಗು ಬೇಗ ತಿರುಗಿ ಬಂದರು ಮದ್ಯ ಮಾರ್ಗದಲಿ
ಮದ್ಯ ಪಾಂಡವರು ಯುದ್ಧಮಾಡಿ
ತಂದರು ದ್ರೌಪದಿಯ           ||೧೩||

ಅಲ್ಲಿ ಇಂದ್ರವನವ ಕಂಡು
ಒಬ್ಬ ಹೊರಟ ಕೌರವ ತಾನು                 ||೧೪||

ವನ ಕಂಡು ಮನಸ್ಸಿಗೆ ಅಂದಾನು
ಪುಷ್ಪವನು ಕಂಡು ತಾ ಹಿಗ್ಯಾನು              ||೧೫||

ವನದೊಳಗೆ ಇರುವ ಫಲಗಳನ್ನೆಲ್ಲ
ಆಜ್ಞೆ ಇಲ್ಲದೆ ಹರಕೊಂಡಾನು                  ||೧೬||

ಚಿತ್ರಸೇನ ಬಂದು ಅವನು ನಾಗ ಪಾಶದಿ
ಬಂಧನ ಮಾಡಿದನ                  ||೧೭||

ಸೆರೆಯಲ್ಲಿ ಸಿಕ್ಕು ಒದ್ದಾಡಿದನು
ಸೂಜಣದಿಂದ ಗೌಳಿ ತಿಳಿಸಿದಳು              ||೧೮||

ವನದೊಳಗೆ ಇರುವ ಧರ್ಮಯ್ಯನನ್ನು
ಬಡಿಸಿತಾರು ಇಂದಿನ ದಿನ ನಿನ್ನ ಹಿಡಿದು               ||೧೯||

ಬಾಣದಿಂದ ತಡೆದು ಕೇಳತಾನ
ಬಿಡರೀ ಅಣ್ಣ ಕೌರಯ್ಯನನ್ನು                   ||೨೦||

ಬಿಡದಿದ್ದರೆ ಕೊಡರೀ ನಮಗೆ ಯುದ್ಧವನು
ತಡೆಯಲಾರದೆ ಓಡಿ ಹೋದನಾಗ ಬಿಚ್ಚಲಿಕ್ಕೆ           ||೨೧||

ಹೋದ ಫಾಲ್ಗುಣನಾಗ ಬಿಚ್ಚಲಿಲ್ಲ ಪಾಶಿ ಪಾರ್ಥನಿಗೆ
ತೊಕ್ಕಂಡು ಬಂದನು ಅಲ್ಲಿಂದ                ||೨೨||

ಒಪ್ಪಿಸಿದ ಅಲ್ಲಿ ಅಣ್ಣ ಧರ್ಮಯ್ಯನಿಗೆ
ಧರ್ಮರಾಯ ಬಿಚ್ಚಂತೆ ಹೇಳಿದನು            ||೨೩||

ಫಾಲ್ಗುಣನು ಬಿಚ್ಚುವಲ್ಲದು ಎಂದಾನು
ಇದ ನೋಡಿ ಧರ್ಮಜ ಅಂದಾನು             ||೨೪||

ದ್ರೌಪದಿಯ ಕರಸಿದರು ಆ ಕ್ಷಣಕ
ದ್ರೌಪದಿಯ ಕರೆಯಲು
ನಗುತಲಿ ಬಂದು ಎಡಗಾಲಿನ ಚರಣ
ಅಂಗುಷ್ಠದಲ್ಲಿ                 ||೨೫||

ಬಿಚ್ಚಿದಳು ಆಶೆತನ ಮಾಡುತಲಿ
ಹಟ ಇಟ್ಟ ಕೌರವ ಮನಸ್ಸಿನಲಿ                ||೨೬||

ವಿಷಾ ಇಟ್ಟ ಕೌರವರಾಜ ತಳಲಿಪೊದ
ತನ್ನ ಪಟ್ಟಣಕೂ ಹರನಗಳೆಯಲಾರೆ
ಎಂದ ಕೌರವ             ||೨೭||

ಹೋದ ನದಿಯ ದಡದಲ್ಲಿ
ನದಿಯ ದಡದಲ್ಲಿ ಪ್ರಾಣಕೊಡುವೆ ತತ್ಕಾಲದಲಿ                  ||೨೮||

ಈ ವಾರ್ತೆ ಸೈಂದವನು ಕೇಳುತಲಿ
ತಡಮಾಡದೆ ಬಂದನು ಓಡುತಲಿ             ||೨೯||

ಯಾಕೆ ಹೇಳಿ ನೀವು ಇಂದಿನಲ್ಲಿ
ಪ್ರಾಣ ಕೊಡತೆನಂತ ಬಂದನೆಲ್ಲಿ              ||೩೦||

ಅಪಮಾನ ಆದದ್ದು ಎಲ್ಲ ಅಮ್ಯಾಗ
ಹೇಳಿದನು ಸರ್ವ ಉಳಿದಂಗ                 ||೩೧||

ಇದರ ಚಿಂತಿ ಬಿಡರೀ ನೀವು
ಈಗ ತರುವೆನು ಒಂದು ಗಳಿಗ್ಯಾಗ            ||೩೨||

ದ್ರೌಪದಿಯ ಚಿಂತಿ ನಮಗ್ಯಾಕೆ
ತಂದು ಕುಂದರಿಸುವೆ ಎಡ ತೊಡಿಮ್ಯಾಕ               ||೩೩||

ಇಷ್ಟ ಧೈರ್ಯ ಸೈನ್ಯದೇವ
ಕೌರವಗ ಹೇಳಿ ಹೊರಟ ವನಕ ತಾನು                 ||೩೪||

ಪಾಂಡವರು ಹೋಗಿದ್ದಾರು ಬೇಟೆಯನಾಡಕ
ಮಡಿಯ ಹಿಡಿಯಿರಿ                  ||೩೫||

ದ್ರೌಪದಿಯ ನೀನಂತ
ಬಡತನ ನೋಡಿ ನಾ ಬಂದೆನು               ||೩೬||

ಗಂಡರಿಲ್ಲದ ಯ್ಯಾಳೆದಲ್ಲಿ
ತಕ್ಕೊಳದಿಲ್ಲ ಈ ಮಡಯಿನ್ನು                 ||೩೭||

ಇನ್ನು ತಾಸಿಗೆ ಐವರು ಬರುವರು
ಭಿನ್ನಹ ಇಲ್ಲವೇ ತಕ್ಕೊಳ್ಳುವೇ ನಾನು                   ||೩೮||

ಇಷ್ಟು ಮಾತು ಕೇಳಿದನು ಎಲ್ಲಾ
ತಡಕೋಪದಿಂದ ಎದ್ದಾನು ಕೈ ಹಿಡಿದು                 ||೩೯||

ಜೋಲಿಯಾ ಹೊಡಿದಾನು ಮುಡಿಯನ್ನು ಹಿಡಿದು
ಎಳೆದಾನು ಬೇಡ ಯಣ್ಣಾ ಯಾಕ ಇಂತಾದು           ||೪೦||

ಭೀಮ ಕೇಳೀ ಬಡಿದು ಚಲ್ಲಾನು
ಮತ್ತೆ ಸೈಂದವ ಎತ್ತಿ ದ್ರೌಪದಿ                 ||೪೧||

ಚಿತ್ರದ ರಥದೊಳಗೆ ಕುಂಡರಿಸಿದನು
ಕುದುರೆ ಜಡಿಸಿ ರಥಕೆ ಮುಂದಕೆ ಹಾರಿಸಿದನು                   ||೪೨|

ಬೇಟೆ ಆಡುವದೊಳಗ ಪಾಂಡವರಿಗೆ
ವನದ ಕಡೆ ಹೋತು ದ್ಯಾಸವನು             ||೪೩||

ವನದ ಕಡೆ ಹೋತು ದ್ಯಾಸವನು
ಈ ಸುದ್ದಿ ಭೀಮಸೇನ ಕೇಳುವನು             ||೪೪||

ರಥ ಹೊಡಿಯತೀದಿ ಯತ ಮೂಳಿ
ಪರಿಹರಿಸೇವೆ ನಿನ್ನ ಐಯ್ಯದೊಳಿ              ||೪೫||

ರಥ ತಂದ ತಿರುಗಿ ಹೊಡ ಮರಳಿ
ಒಪ್ಪಿಸಿದ ಅಣ್ಣಗ ಹೇಳಿ ಕೇಳಿ                  ||೪೬||

ಮದ್ಯ ಮಾರ್ಗದಿ ಯುದ್ಧ ಮಾಡಿ
ತಂದರು ದ್ರೌಪದಿಯನ್ನು            ||೪೭||

ಸೈನ್ಯದೇವನು ದ್ರೌಪದಿಯ ವಹಿಸಿದನು
ನಾ ವಿಸ್ತಾರ ಮಾಡಿ ತಿಳಿಸುವೆನು             ||೪೮||