ಎರಡನೇ ಸಂದು :
ಶಿವನ ವರವಿನ ಶಿದ್ಧಾನೋ ಹಾಲು
ಹಳ್ಳದ ದುಡಿಲ್ಯೋ ||೪೩||
ಹಾಲುಹಳ್ಳದ ದಂಡೀಲೆ ಸ್ವಾಮಿ
ಏನಂತ ಮಾತಾಡ್ಯಾನೋ ||೪೪||
ನಾಗರ ಭಾವಿ ಒಳಗಲ್ಲಾ ಕಾಮಾಲಿ
ದೇವಿ ಆಯಿದಾಳೋ ||೪೫||
ನಾಗರಬಾವಿ ಒಳಗಲ್ಲಾ ನಾ
ಮನಸ ನೋಡಬೇಕೆಂದಾನೋ ||೪೬||
ಮೂರು ಲೋಕದ ಶಿವರಾಯ ಹಾಲು
ಹಳ್ಳದ ದಂಡೀಲೇ ||೪೭||
ಹಾಲುಹಳ್ಳದ ದಂಡೀಲೆ ಅಲ್ಲಿ ಏನು
ಕಾರುಣ ಮಾಡ್ಯಾನೋ ||೪೮||
ಮೂರುಲೋಕದ ಶಿವರಾಯ ಆಗ ಒಂಟಿ
ಪಡಕಿ ತಾ ಉಟ್ಟಾನೋ ||೪೯||
ಒಂಟಿ ಪಡಕಿ ಉಟ್ಟಾನು ಸ್ವಾಮಿ ಯಂಟೇಳಿ
ಜನಿವಾರ ಹಾಕ್ಯಾನೋ ||೫೦||
ಯಂಟೇಳಿ ಜನಿವಾರ ಹಾಕ್ಯಾನು ಹಣೆಯಲಿ
ಹರಿನಾಮ ಹಚ್ಚ್ಯಾನೋ ||೫೧||
ಹಣೆಯಲಿ ಹರಿನಾಮ ಹಚ್ಯಾನೋ ಸ್ವಾಮಿ
ಕೈಯಲ್ಲಿ ಗಿಂಡಿ ಹಿಡಿದಾನೋ ||೫೨||
ಮೋಸಗಾರ ದೇವರಾಗಿ ಹಾಲು
ಹಳ್ಳವ ಬಿಟ್ಟಾನೋ ||೫೩||
ಹಾಲುಹಳ್ಳವ ಬಿಟ್ಟಾನು ದೇವರು
ನಾಗರಭಾವಿಗೆ ಬಂದಾನೋ ||೫೪||
ಹಾರೋ ಬ್ರಾಹ್ಮಣರ ವೇಷವ ತಾಳಿ
ನಾಗರಭಾವಿ ಒಳಗಲ್ಲೋ ||೫೫||
ನಾಗರಭಾವಿ ಒಳಗಲ್ಲಯ್ಯ
ಜಳಕ ಮಾಡುತೈದಾನೋ ||೫೬||
ನಾಗರಭಾವಿ ದಂಡಿಯ ಮ್ಯಾಲ
ಧರ್ಮರ ಮಗಳು ಕಾಮಾಲಿಯೋ ||೫೭||
ಧರ್ಮರ ಮಗಳು ಕಾಮಾಲಿದೇವಿ
ಏನಂತ ಮಾತಾಡ್ಯಾಳೋ ||೫೮||
………………… ಯಾರಿಲ್ಲವ್ವ ಬಲಕ
………………. ಯಾರಿಲ್ಲೋ ||೫೯||
ನಾನು ಒಬ್ಬಾಕಿ ಬಾಲಿ ಅಂದಾಳು
ನಾಗರಭಾವಿ ದಂಡೀಲೇ ||೬೦||
ನಾಗರಭಾವಿ ಒಳಗಲ್ಲಯ್ಯ ಒಂದು
ಸೋಪಾನ ದಂಡೀಲೆ ||೬೧||
ಒಂದು ಸೋಪಾನ ಇಳಿದಾಳು ಕಾಮಾಲಿ
ಎರಡು ಸೋಪಾನ ಇಳಿದಾಳೋ ||೬೨||
ಆರು ಮೂರು ಒಂಭತ್ತು ಸೋಪಾನ
ಕಾಮಾಲಿದೇವಿ ಇಳಿದಾಳೋ ||೬೩||
ನಾಗರಭಾವಿ ಒಳಗ ಕಾಮಾಲಿ ಸಾಗಿಸಿ
ತೆರೆಗಳ ಹೊಡೆದಾಳೋ ||೬೪||
ಸಾರಿಸಿ ತೆರೆಗಳ ಹೊಡಿದಾಳೊ ಕಾಮಾಲಿ
ಬಾಗಿಸಿ ಕೊಡಗಳ ತುಂಬ್ಯಾಳೋ ||೬೫||
ಕಣಕಲ ಮ್ಯಾಗಿನ ಕೊಡ ನಮ್ಮಯ್ಯ
ಮಣಕಾಲ ಮ್ಯಾಲ ಭಾರವೋ ||೬೬||
ಮಣಕಾಲ ಮ್ಯಾಲ ಭಾರವೆಂದು ಧರ್ಮರ
ಮಗಳು ಕಾಮಾಲಿಯೋ ||೬೭||
ಮೋಸಗಾರ ದೇವರಿಗೆ ಏನಂತ
ಹೇಳತೈದಾಳೋ ||೬೮||
ಹಾರುರಣ್ಣ ಬ್ರಾಹ್ಮಣರಣ್ಣ ನಮ್ಮ
ಕೊಡವ ನೆಗವಣ್ಣಾ ||೬೯||
ನಿಮ್ಮ ಕೊಡವ ನೆಗವಿದರ ನನಗ
ಏನು ಕೊಡತಿದಿ ಬಾಲಿ ||೭೦||
ನಮ್ಮ ಕೊಡವ ನೆಗವಿದರ ನಮ್ಮ
ಅರಸ ಹತ್ತುವ ತೇಜಿ ||೭೧||
ನಿಮ್ಮ ಅರಸ ಹತ್ತುವ ತೇಜಿಯನ
ನಾನು ಒಲ್ಲೆನಂತಾನೋ ||೭೨||
ಹಾರರಣ್ಣ ಬ್ರಾಹ್ಮಣರಣ್ಣ
ನಮ್ಮ ಕೊಡವ ಹೊರಸಣ್ಣ ||೭೩||
ನಿಮ್ಮ ಕೊಡವ ಹೊರಸಿದರ ನನಗೇನು
ಕೊಡತಿದಿ ಬಾಲಿ ||೭೪||
ನಮ್ಮ ಕೊಡವ ಹೊರಸಿದನ ನಮ್ಮ ಅರಸ
ಹತ್ತುವ ಪಲ್ಲಕ್ಕಿ ||೭೫||
ಅರಸ ಹತ್ತುವ ಪಲ್ಲಕ್ಕಿ ನಾನು
ಕೊಡತೇನಂದಾಳೋ ||೭೬||
ನಿಮ್ಮ ಅರಸ ಹತ್ತುವ ಪಲ್ಲಕ್ಕಿ
ನಾನು ವಲ್ಲೆನಂತಾನೋ ||೭೭||
ಹಾರುರಣ್ಣ ಬ್ರಾಹ್ಮಣರಣ್ಣ ನಮ್ಮ
ಕೊಡವ ನೆಗವಣ್ಣಾ ||೭೮||
ನಿಮ್ಮ ಕೊಡವ ನೆಗವಿದರ ನನಗೇನು
ಕೊಡತಿದಿ ಬಾಲಿ ||೭೯||
ನಮ್ಮ ಕೊಡವ ನೆಗವಿದರ ನಮ್ಮ
ಅರ್ಧ ರಾಜ್ಯವ ಕೊಟ್ಟೇನೊ ||೮೦||
ಇಲ್ಲಿಗೆ ಹರಹರ ಇಲ್ಲಿಗೆ ಶಿವ ಶಿವ ಇಲ್ಲಿಗೆ
ಇದು ಒಂದು ಸಂದೇಳೋ ||೮೧||
ಸಂದಿನ ಪದಗಳ ವಂದಿಸಿ ಹೇಳುವೆ
ತಂದಿ ಕರಿಯ ಶಿದ್ಧಾನೋ ||೮೨||
ದೇವಾರು ಬಂದಾವು ಬನ್ನೀರೇssss
ಮೂರನೇ ಸಂದು :
ನಿಮ್ಮ ಅರ್ಧರಾಜ್ಯವನು ನಾನು
ವಲ್ಲೆನಂತಾನೊ ||೮೩||
ಹಾರುರಣ್ಣ ಬ್ರಾಹ್ಮಣರಣ್ಣ ನಮ್ಮ
ಕೊಡ ಹೊರಸಯ್ಯಾ ||೮೪||
ನಿಮ್ಮ ಕೊಡ ಹೊರಸಿದರ ನನಗೇನು
ಕೊಡತಿಯಲಿ ಬಾಲಿ ||೮೫||
ಬಾರು ಬಾರೊ ಬ್ರಾಹ್ಮಣರಣ್ಣ ಏನು
ಬೇಡತಿದಿ ಬೇಡಯ್ಯಾ ||೮೬||
ಏನು ಬೇಡತೀ ಬೇಡಣ್ಣ ನೀ
ಬೇಡಿದ ಭಾಗ್ಯ ಕೊಟ್ಟೇನೋ ||೮೭||
ಮೋಸಗಾರ ದೇವರೂ ಆಗ ತಾ
ಏನು ಬೇಡತೈದಾನೊ ||೮೮||
ನಿಮ್ಮ ಕೊಡವ ನೆಗವಿದರ ನಿಮ
ದೇಹ ನಂದಂದಾನೋ ||೮೯||
ದೇಹ ನಂದಂದಾನೋ ನಿಮ್ಮ ಆತ್ಮ
ನಂದು ಅಂದಾನೊ ||೯೦||
ಶಿವನ ವರವಿನ ಶಿದ್ದಾನೋ ಆಗ
ಇಂತು ಮಾತದ ಕೇಳ್ಯಾನೊ ||೯೧||
ಧರ್ಮರ ಮಗಳು ಕಾಮಾಲಿದೇವಿ ಇಂತು
ಮಾತವ ಕೇಳ್ಯಾಳೋ ||೬೨||
ಇಂತು ಮಾತನ ಕೇಳ್ಯಾಳು ಕಾಮಾಲಿ
ನಾಗರಭಾವಿ ವಳಗಲ್ಲೊ ||೬೩||
ನಾಗರಭಾವಿ ವಳಗಲ್ಲಯ್ಯ ಇರುವ
ಕೆಂಡ ಉಗುಳ್ಯಾಳೊ ||೬೪||
ಉರಿವ ಕೆಂಡ ಉಗುಳ್ಯಾಳು ಕಾಮಾಲಿ
ಭಗಭಗನೆ ಉರಿದೆದ್ತಾಳೊ ||೯೫||
ಅರಗೊಡ ನೀರು ಸುರಿದಾಳು ಕಾಮಾಲಿ
ಅರಗೊಡ ನೀರು ಹೊತ್ತಾಳೋ ||೯೬||
ಅರಗೊಡ ನೀರ ಹೊತ್ತಾಳು ಕಾಮಾಲಿ ಭಾವಿ
ಹತ್ತಿ ಮ್ಯಾಲ ಬಂದಾಳೊ ||೯೭||
ನಾಗರಭಾವಿ ವಳಗಲ್ಲಯ್ಯಾ ಶಿವನ
ವರವಿನ ಶಿದ್ಧಾನೋ ||೯೮||
ಶಿವನ ವರವಿನ ಶಿದ್ಧಾನೊ ಅವ ಒಳ್ಳೆ
ದೊಳ್ಳೆದ ಅಂದಾನೊ ||೯೯||
ನಾಗರಭಾವಿ ವಳಗಲ್ಲಾ ಅಡ್ಡ ಬ್ಯಾಡಿ
ಒಂದು ಹಾಕ್ಯಾನೊ ||೧೦೦||
ಆಡಬ್ಯಾಡಿ ಒಂದ ಹಾಕ್ಯಾನು ನಮ್ಮಯ್ಯ
ದೊಡ್ಡ ಬೆತ್ತವಂದು ಹಿಡಿದಾನೊ ||೧೦೧||
ದೊಡ್ಡ ಬೆತ್ತವ ಹಿಡಿದಾನು ದೇವರನಾಗಿ
ಮುಂದಕ ಬಂದಾನೋ ||೧೦೨||
ಮುಂದ ಹೋಗುವ ಕಾಮಾಲಿದೇವಿಗೆ ಇದುರಿಗೆ
ಬಂದು ನಿಂತಾನೋ ||೧೦೩||
ಧರ್ಮರ ಮಗಳು ಕಾಮಾಲಿದೇವಿ
ದೇವರ ನೊಡತೈದಾಳೊ ||೧೦೪||
ಹಂಗದೊರದ ನಿಂತಾಳುದೇವಿ
ಹೌಹಾರಿ ನಿಂತಾಳೋ ||೧೦೫||
ಶಿವನ ವರವಿನ ಶಿದ್ಧಾನೊ ಆಗ
ಕಾಮಾಲಿದೇವಿಗೆ ನೋಡಲ್ಲ ||೧೦೬||
ಕಾಮಾಲಿದೇವಿಗೆ ನೋಡಲ್ಲಯ್ಯ ಏನಂತ
ಹೇಳಗೈದಾನೋ ||೧೦೭||
ಬಾರು ಬಆರ ಕಾಮಾಲಿದೇವಿ ನಿನ್ನ
ಭಕ್ತಿಗೆ ಮೆಚ್ಚಿದೆನೋ ||೧೦೮||
ನಿನ್ನ ಭಕ್ತಿಗೆ ಮೆಚ್ಚಿದೆ ಕಾಮಾಲಿ ಏನು
ಬೇಡತಿದಿ ಬೇಡಲ್ಲ ||೧೦೯||
ಏನು ಬೇಡತಿದಿ ಬೇಡಲ್ಲ ಕಾಮಾಲಿ
ಬೇಡಿದ ಭಾಗ್ಯವ ಕೊಟ್ಟೇನು ||೧೧೦||
ವಳ್ಳೆದೊಳ್ಳೆದಂದಾಳು ಕಾಮಾಲಿ ಏನಂತ
ವರವ ಬೇಡ್ಯಾಳೋ ||೧೧೧||
ಅರಗೊಡ ಇದ್ದ ಕೊಡವೋ ಸ್ವಾಮಿ ತುಂಬಿದ
ಕೊಡವದಾಗಲಿ ||೧೧೨||
ಶಿವನ ವರವಿನ ಶಿದ್ದಾನೋ ಮುರಗಿಯ
ಬೆತ್ತಾ ಕೊಡಕಲ್ಲೊ ||೧೧೩||
ಮುರಗಿಯ ಬೆತ್ತ ಕೊಡಕಲ್ಲಯ್ಯ ಮೂರು
ತಿರ್ರನೇ ತಿರುವ್ಯಾನೋ ||೧೧೪||
ಅರಗೊಂಡ ಇದ್ದಕೊಡ ನಮ್ಮಯ್ಯ ತುಂಬಿದ
ಕೊಡವ ಆದಾವೋ ||೧೧೫||
ಮಾಯಕಾರ ನನ ಕರಿಯದೇವರು ಮಾಯ
ವಾಗಿ ತಾ ಹೋಗ್ಯಾನೋ ||೧೧೬||
ಧರ್ಮರ ಮಗಳು ಕಾಮಾಲಿದೇವಿ ತನ್ನ
ಅರಮನಿಗೆ ಬಂದಾಳೋ ||೧೧೭||
ಅರಮನಿಗೆ ಬಂದಾಳು ದೇವಿ ಮಿಸಲ
ಕೊಡವ ಇಳಿವ್ಯಾಳೊ ||೧೧೮||
ಶಿವನ ವರವಿನ ಶಿದ್ಧಗ ಕಾಮಾಲಿ
ಜಳಕಕ ನೀರು ಕಾಸಿದಳೋ ||೧೧೯||
ಶೀಗಿಕಾಯಿ ಮದು ಹಚ್ಚ್ಯಾಳು ಮಾಯವ್ವ
ಸಣ್ಣತಮ್ಮ ಶಿಡ್ಡಯ್ಯಗ ||೧೨೦||
ಹಾಲೂಹಳ್ಳ ಹೊನಾಲಿ ಮಾಯವ್ವ ನಮ್ಮ
ದೇವರ ಜಡಿಯ ಬಿಚ್ಚ್ಯಾಳೋ ||೧೨೧||
ಹಾಲುಹಳ್ಳದ ಹೊನಾಲಿ ಮಾಯವ್ವ ದೇವರ
ಯರವುತೈದಾಳೋ ||೧೨೨||
ಶಿವನ ವರವಿನ ಶಿದ್ಧಾನೋ ಗುರುವಿನ
ಧ್ಯಾನ ಮಾಡುವನೋ ||೧೨೩||
ಮಾಯಕಾರನನ ಕರಿಯದೇವರಿಗೆ
ಪಂಚಾಮೃತದ ಭೋಜನವೋ ||೧೨೪||
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ
ಇದು ವಂದು ಸಂದೇಳೋ ||೧೨೫||
ಸಂದಿನ ಪದಗಳ ವಂದಿಸಿ ಹೇಳುವೇ
ತಂದಿ ಕರಿಶಿದ್ದಾನೋ
ದೇವಾರು ಬಂದಾವೊ ಬನ್ನೀರೇ
ಬೀರೇಶ್ವರರ ಪದ
೨೮ನೇ ಸಂಧಿ :
ಬಾಳ ಬಾಳ ದುಡಿದು ಬದಕ ಮಾಡಿರಿ ತಮ್ಮಾ
ಹೇಳ ಹೇಳದೆ ನೀ ಹ್ವಾದಿ ಅಂದಿನೋ
ಹರಿಯೋ ಹರಿಯೋ ನೀನು ಮನಸ್ಸಿನ ಸೊಕ್ಕಾ
ಅರಿಯೋ ಅರಿಯೋ ಅದರಿಂದಾ ನರಕಾ ಅಂದಿನೋ
ಅರಿಯೋ ಅರಿಯೋ ಅದರಿಂದಾ ಸ್ವರ್ಗ ನರಕಾ
ಮರಿ ಮರಿಯಬ್ಯಾಡ ತಿಳಿ ಅಂದಿನೋ
ಬರೀದ ಬರಿದ ನೀ ಕಾಲವ ಕಳಿದಿ ತಮ್ಮಾ
ಗುರು ಗುರುವಾ ತೋರಾವ ದಆರಿ ಅಂದಿನೋ
ನೀನು ನಂದ ನಂದ ಅಂದರ ನೆಚ್ಚಿಕಿ ಇಲ್ಲೋ ತಮ್ಮಾ
ಚೆಂದ ಚೆಂದಲ್ಲಾ ನಿನ್ನ ರೀತಿ ಅಂದಿನೋ
ಉಂಡ ಉಂಡ ಮನಿ ಎಣಸುವದ್ಯಾಕೋ ತಮ್ಮಾ
ಕೊಂಡ ಕೊಂಡ ಜಗಳಾ ತಗೆಯಾದು ಯಾಕ ಅಂದಿನೋ
ಉಡಾ ಉಡಾ ಉಬ್ಬಿದಾಂಗ ಉಬ್ಬಬ್ಯಾಡೋ
ಧಡಾ ಧಡಾ ಗ್ವಾಡಿ ಬಿದ್ದಾಂಗ ಅಂದಿನೋ
ಧಡಾ ಧಡಾ ಗೋಡಿ ಬಿದ್ದಾಂಗ ಆದಿತ ತಮ್ಮಾ
ಘಡಾ ಘಡಾ ಹಿಡಿ ಗುರುವಿನಾ ಪಾದ ಅಂದಿನೋ
ಬೀರೇಶ್ವರರ ಮಾರ್ಗಪದ
ಪಲ್ಲ
ಕೇಳಿರಪ್ಪ ನೀವು ಕೇಳಿರಿ ಸಿದ್ಧವೀರನ ಕಥಿ ಕೇಳು
ಬಗೆಬಗೆಯಾದಿಂದ ಲೀಲವ ಮಾಡ್ಯಾನು
ಜಗದಲ್ಲಿ ಭಕ್ತರ ಭಾವ ನೋಡಿದಾನು
ಮಗನಾಗಿ ಬ್ರಹ್ಮಗ ಜನಿಸಿದ್ದಾನೋ
ಅಲ್ಲಲ್ಲಿ ತಮ್ಮ ಮಾಹಿಮಾ ತೋರುತ ಬಂದಾನು
ನಿಲ್ಲದೆ ನಾಗರಾಣ ಗ್ರಾಮಿಕ ಇಳೆದವನೋ
ತಾಯಿ ಸುರಮಾದೇವಿಗಿ ಕಂದಾಗಿ ಜನಸಿದವನು
ಮಾಯಾಗಿ ಕನ್ಯಾ ಕೋಮಾಲಿ ಮಡದೀನ ತಂದವನು-ಬೀರಪ್ಪ
ದಯಾವಂತನಾಗಿ ಭಕ್ತರನ ಸಲುವಿದಾನೋ
ಕರದಾನೋ ಬೀರಪ್ಪ ತರುಳ ಮಾಲಿಂಗನಾ
ಇರಬೇಕೋ ಇಂಥಾ ಶಿಷ್ಯ ಅಂದಿದಾನೋ
ಅಕ್ಕ ಮಾಯವ್ವಗ ತಮ್ಮಾಗಿ ಬಂದವನು
ದಿಕ್ಕು ದಿಕ್ಕೆಲ್ಲ ತನ್ನ ಮಹಿಮಾ ತೋರಿದಾನು
ಇಕ್ಕ ತ್ವಾಣ್ಣೂರಾಗ ಸಿದ್ಧ ಆದವನೋ
೨೯ನೇ ಸಂಧಿ :
ರಾಗ ಇದ್ದರ ಹಾಡು ಜ್ಞಾನ ಇದ್ದರ ಪದಾ
ಸ್ವಾಮಿ ಇದ್ದರ ಭಲಾ ಚಂದ ಅಂದಿನೋ
ಒಡಿಯಾ ಇದ್ದರ ಭಂಡಿ ಜಡಿಯಾ ಇದ್ದರ ಜೋಗಿ
ಹೆಡಿಯಾ ಇದ್ದರ ಸರ್ಪ ಚಂದ ಅಂದಿನೋ
ಒಕ್ಕಲಿದ್ದರ ಊರು ಮಕ್ಕಳಿದ್ದರ ಮನೆ
ಮುಕ್ಕಣ್ಣಾ ಇದ್ದರ ಲೋಕ ಚಂದ ಅಂದಿನೋ
ಹಾಲು ಇದ್ದರ ಹಬ್ಬ ತಾಯಿ ಇದ್ದರ ಮಕ್ಕಳು
ಪೂಜಾರಿ ಇದ್ದರ ಸ್ವಾಮಿಗೆ ಚಂದ ಅಂದಿನೋ
ಗಂಗಿ ಇದ್ದರ ಭಾವಿ ಲಿಂಗ ಇದ್ದರ ಗುಡಿ
ಜಂಗಮ ಇದ್ದರ ಭೂ ಚಂದ ಅಂದಿನೋ
ಜ್ಯೋತಿ ಇದ್ದರ ಮನಿ ರೀತಿ ಇದ್ದರ ನಾರಿ
ಈಶ್ವರ ಇದ್ದರ ಕೈಲಾಸಕ ಚಂದ ಅಂದಿನೋ
Leave A Comment