ರೇವಣ ಸಿದ್ಧನ ಮಹಿಮೆ

ಹರಹರಾ ಮಹಾದೇವರು ಜತಾದಿ
ಎಂಬ ಪರ್ವತದಲ್ಲಿ                   ||೧||

ಶ್ರೀಮಾನ್ ಮಹಾದೇವರ ಓಲಗದೋಳು
ಎಂತೆಂತ ಶರಣರಿದ್ದಾರು            ||೨||

ಇಪ್ಪತ್ತೇಳು ಕೋಟಿ ಅಮರರಗೆಕಂಗಳು
ಮೂವತ್ತಾರು ಕೋಟಿ ರಾಕ್ಷಸರು              ||೩||

ಮೂವತ್ತ ಮೂರು ಕೋಟಿ ದೇವ ದೇವತೆಯರು
ಕೋಟಿ ಸೂರ್ಯ ಕೋಟಿ ಚಂದ್ರರು            ||೪||

ಕಿನ್ನೂರ ಕಿಂಪುರುಷ ಗಂಗಿ ಓಲಗ
ನಂದಿ ವಾಹನರು ಇರುತಿಹರು                ||೫||

ನೋಡ್ಯಾರ ಶ್ರೀಮಾನ್ ಮಹಾದೇವರಿಗೆ
ಕುಡಿಶಡಗರದಿ ಶೆರಣು ಮಾಡುವರು                   ||೬||

ಹರುಷದಿಂದ ಆಗ ಅಡಿನೆರಗಿಂತಲಿ
ಶಿರವಬಾಗಿಸಿ ಶರಣು ಮಾಡಿದರೋ          ||೭||

ಶರಣು ಮಾಡುದ ಪಾರ್ವತಿ
ಅಂತಾಳು ಶಿವನಿಗೆ ಶರಣು ಮಾಡಿದರು                ||೮||

ಶಿವನಿಗೆ ಶರಣು ಮಾಡಿದರ
ಶಿವನಸತಿ ನಾನಂದಾಳೋ                   ||೯||

ಸತಿಯಾದ ಕಾರಣ ನನಗೊಂದು ಹಸ್ತ
ಈಶ್ವರಗೊಂದು ಹಸ್ತ ಅಂದಾಳೋ            ||೧೦||

ಅದರೊಳಗೊಬ್ಬವ ರೇಣುಕನೆಂಬ
ನಾಧೀಶ್ವರ ಬಂದಾನು               ||೧೧||

ರೇವಣಧೀಶ್ವರ ಬಂದು ಒಂದು
ಕರಿದಿ ಶರಣು ಮಾಡಿದನು           ||೧೨||

ಶರಣು ಮಾಡುದ ಕಂಡು ಪಾರ್ವತಿದೇವಿಯು
ಈಶ್ವರನ ಬೆಸಗೊಂಡಾಳು          ||೧೩||

ಕೇಳು ಪರಮೇಶ್ವರಾ ಈ ಶರಣನು
ಒಂದು ಕರದಿ ಶರಣು ಮಾಡಿದನು            ||೧೪||

ಆಗ ಪರಮೇಶ್ವರ ಪಾರ್ವತಿಗೆ ಹೇಳಿದಾ
ನಿನಗೆ ಶರಣು ಮಾಡಬಾರದೆಂದಾನು                  ||೧೫||

ಕೇಳು ಪರಮೇಶ್ವರಾ ಈತನಿಗಿಂತ ಹೆಚ್ಚು
ನಾರುನುಂದು ಕೇಳಿದಳು            ||೧೬||

ಅದನು ಕೇಳಿ ಈತನು ಮುನಿಗಿಂತ
ಬಲ್ಲಿದಾತನೆಂದು ಹೇಳಿದನೂ                 ||೧೭||

ಅದನು ಕೇಳಿ ಘಡ ಘಡಿಸಿ ಅಂಕುರಶಿ
ಖಡ್ಗ ಅವತಾರ ತಾಳಿದಳು          ||೧೮||

ಮಾಯ ಕೋಲಾಹಲ ಮಾಯ ಮದನನ
ಇಂದ್ರ ತ್ರಿಶೂಲವತಾಳಿದಳು                  ||೧೯||

ಅಂಗಲಗಣ್ಣಿನವರು ಹುಲಿಬಣ್ಯದವರು
ನಸಲಗಣ್ಣು ಜಟಧಾರೆಗಳು          ||೨೦||

ಏನ ಕಾಲೋಳು ಕಣ್ಣು ಸರಮಾಲಿಯೆ
ಇರುತ್ತೇವೆಂದು ಹೇಳಿದಳು          ||೨೧||

ಇತ್ತ ನನ್ನ ಮರ್ತ್ಯುಲೋಕದಲ್ಲಿ
ಕೈ ಸೇರಿತರುವೆನೆಂದು ಹೇಳಿದಳು           ||೨೨||

ಪಾರ್ವತಿಗೆ ಈಶ್ವರ ಹೇಳಿದ
ಮುಂಚೆ ಆಗಬೇಕೆಂದಾನು           ||೨೩||

ಪಾರ್ವತಿದೇವಿಗೆ ಅಪ್ಪಣೆ ಕೊಟ್ಟು
ಇತ್ತ ಏನು ಕನಸು ಕಂಡಾನು                 ||೨೪||

ಧರಣಿಯೊಳಗ ನನ ಶಿದ್ಧರಗೆಲ್ಲ
ಗುರುವಾಗಿರು ಹೋಗು ಅಂದಾನು            ||೨೫||

ಆಗ ರೇಣುಕನು ನೋಡಲ್ಲಯ್ಯ
ಕೊಲ್ಲಿಪಾಕಿಯಲ್ಲಿ ಹುಟ್ಟಿದಮ                  ||೨೬||

ಇತ್ತ ಪಾರ್ವತಿ ತನ್ನ ತಾಮಸರೆಂಬ
ಶಕ್ತಿಯ ಕರೆದು ಹೇಳಿದಳು           ||೨೭||

ಮಲ್ಲಾಪುರಕ್ಕಿಂತ ಕೊಲ್ಲಾಪುರಧಿಕವೆಂದು
ತಿಳಿದು ಅಲ್ಲಿಗೆ ಬಂದಾರು            ||೨೮||

ಬಲ್ಲಿದ ಮಹಾಂಕಾಳಿಯಾಗಿ
ಪಾರ್ವತಿದೇವಿಯ ರೂಪವತಾಳಿದಳು                  ||೨೯||

ಇಲ್ಲಿಗಿ ಶಿದ್ಧರು ಬರುವರೆಂದು
ಮನದೊಳು ಧ್ಯಾನಿಸಿಕೊಂಡಾಳು            ||೩೦||

ಅದ್ಧರಿಗೆ ತಕ್ಕಂತೆ ವಿದ್ಯೆಯ ಬೇಕು
ಮೂಡನ ದೇಶಕ ಬಂದಾಳೊ                 ||೩೧||

ತನ್ನ ವಿಪರೀತ ಬುಕಡಿ ಮಾಡಿಕೊಂಡು
ಪರ್ವತಕ್ಕೆ ಹೋಗಿನಿಂತಾಳು                  ||೩೨||

ಆಗ ರಾಕ್ಷಸ ಪಾದಕೆ ಬಿದ್ದು
ಎದುರಿಗೆ ನಿಂತುಕೊಂಡಾನು                  ||೩೩||

ಆಗ ಮಾಯಿಗೆ ನಮಸ್ಕರಿಸಿ
ಅಷ್ಟ ಶಿದ್ಧಿ ಕೊಡತೇನಿ ಅಂದಾನು             ||೩೪||

ಆಗ ರಾಕ್ಷಸನು ಮೂರು ಖಂಡಗ
ವಿಷವನ್ನು ತಂದುಕೊಟ್ಟಾನು                  ||೩೫||

ಸಾಸ್ವಿಕಾಳಷ್ಟು ವಿಷವ ತೆಗೆದುಕೊಂಡು
ಭೂಮಿಗೆ ನೀಡೆಂದನೋ             ||೩೭||

ಭೂಮಿಗೆ ವಿಷವ ನೀಡಿದರೆ
ಪಾತಾಳಲೋಕ ಕಂಡಾವು          ||೩೮||

ಅಂದ ಕಂಡು ಮಾಯಿ ಬೆರಗಾಗಿ ನಿಂತು
ಇದು ಏನಂತ ಕೇಳಿದಳು            ||೩೯||

ಆಗ ರಾಕ್ಷಸ ಮಾಯಿಗೆ ಹೇಳಿದ
ಇದು ಮಾಟವೆಂದಾನೋ           ||೪೦||

ಅದ ಕಂಡು ಮಾಯಿ ಹರನವ ತಾಳಿ
ಇನ್ನಷ್ಟು ವಿಷ ಕೊಡಂದಾಳು                  ||೪೧||

ನಿನ್ನ ನಡುವಿನ ಮಾಲಿಯಲ್ಲಿ
ಮಾಯಿ ಮೂರು ಖಂಡಗ ವಿಷ ಕೊಟ್ಟೆನು              ||೪೨||

ಆಗ ಮಾಯಿ ವಿಷವನ್ನು ತೊಕ್ಕೊಂಡು
ತನ್ನ ದೈತ್ಯರ ಕೈಯ್ಯಲ್ಲಿ ಕೊಟ್ಟಾಳು           ||೪೩||

ಶಾಕಿನಿ ಡಾಕಿನಿ ಎಂಬ ದೇವತೆಯರು
ವಿಷವ ಬಂಡಿ ಮೇಲೆ ಹೇರಿದರು               ||೪೪||

ಕಟ್ಟು ಕಾವಲು ಮಂಡಿಕೊಂಡು ಮಾಯಿ
ಹಸ್ತಿನಾಪುರಕ್ಕೆ ಬಂದಾರು           ||೪೫||

ಹಸ್ತಿನಾಪುರದೊಳು ಒಬ್ಬಾಕಿ
ಸತ್ಯ ಶಿವಶರಣಿಯಿದ್ದಾಳೋ                  ||೪೬||

ಮಾಯಿ ಗದ್ದಲವ ಕಂಡು ಆಗ ಶಿವಶರಣಿ
ರಥವ ನೋಡಬೇಕೆಂದಾಳು                   ||೪೭||

ರಥವ ಹಿಡಿದು ಬಂದ ಶಿದ್ದಾರಿತೈನದ
ಶಿವದು ನೀಡಿದಳು                   ||೪೮||

ಹಸ್ತಿನಾಪುರದಿಂದ ಮೂರು ದಿ
ಕೊಲ್ಲಾಪುರಕ್ಕೆ ಬಂದಾಳು           ||೪೯||

ಮೂರು ದಿವಸಕ್ಕ ಬಂದು ಮಾಯಿ
ಆರು ಮನಿಯ ಕಟ್ಟಿಸ್ಯಾಳು          ||೫೦||

ಆರು ಮನಿಯ ಬಾಗಿಲಿಗೆ
ಒಂದು ಕಾವಲಿ ಇಟ್ಟಾಳೋ                   ||೫೧||

ಮೊದಲಿನ ಬಾಗಿಲದಲ್ಲಿ ಕಾವಲಿ
ಕರಡಿ ಸಿಂಹಗ ಇಟ್ಟಾಳೋ          ||೫೨||

ಎರಡನೆಯ ಬಾಗಿಲಕ ನೋಡಲ್ಲಯ್ಯ
ಹುಲಿರಾಜನ ಕಾವಲಿಯೋ           ||೫೩||

ಮೂರನೆಯ ಬಾಗಿಲಿಗೆ ಸಿಂಹನೂ
ನಾಲ್ಕನೆಯ ಬಾಗಿಲಿಗೆ ಚಾಮುಂಡೇಶ್ವರಿಯೊ          ||೫೪||

ಐದನೆಯ ಬಾಗಿಲಿಗೆ ರುಂಡಾನೊ
ಆರನೆಯ ಬಾಗಿಲಿಗೆ ರುಂಡಾನೋ            ||೫೫||

ಏಳನೆಯ ಬಾಗಿಲಿಗೆ ಸರ್ಪನ ಕಾವಲಿ
ಎಂಟನೆಯ ಬಾಗಿಲಿಗೆ ಚಂಡವೀರನೋ                ||೫೬||

ಒಂಭತ್ತನೆಯ ಬಾಗಿಲಿಗೆ
ಗಂಡಬೇರುಂಡನ ಕಾವಲಿಯೋ               ||೫೭||

ಇಂತಿಷ್ಟ ಕಾವಲು
ಅರಮನಿ ಕಾವಲಿಗೆ ಬಂದುಬಸ್ತ ಮಾಡಿಟ್ಯಾಳು                   ||೫೮||

ಭೂಮಿಯೊಳಗಿನ ಗವಿಶಿದ್ಧರನೆಲ್ಲ
ತರಬೇಕೆಂದಾಳೋ                  ||೫೯||

ಭಿಕ್ಷೆಯಂಬುವ ಶಬ್ದ ಶಿವಶರಣಿ ಕೇಳಿತೈನದಿ
ಶಿವಡು ನೀಡಿದಳೋ                 ||೬೦||

ಶರಣಿ ನೀಡಿದ ಶಿವಡು ತಕ್ಕೊಂಡು
ಶಿದ್ಧರು ಕೊಲ್ಲಾಪುರಕ್ಕೆ ಬಂದಾರೋ           ||೬೧||

˜™

ಶಿದ್ಧಬೀರ ಚರಿತ್ರೆ

ಒಂದನೇ ಸಂದು :

ಸಣ್ಣತಮ್ಮನನ ಶಿದ್ಧಬೀರ ಮಂಡಿಗಿ
ಮಾರಾ ವಂದಾನೋ                ||೧||

ಮಂಡಿಗಿ ಮಾರಾ ವಂದಾನೋ ಆಗ
ಅಕ್ಕನ ಮುಂದ ಹೇಳ್ಯಾನೋ                 ||೨||

ಅಕ್ಕನೋ ಮಾಯವ್ವನೋ ಆಗ
ತಮ್ಮನ ಮಾತೊಂದ ಕೇಳ್ಯಾಳೋ           ||೩||

ತಮ್ಮನ ಮಾತೊಂದ ಕೇಳ್ಯಾಲು ಮಾಯವ್ವ
ಒಳ್ಳೆದೊಳ್ಳೇದಂದಾಳೋ            ||೪||

ಒಳ್ಳೆದೊಳ್ಳೇದಂದಾಳು ಮಾಯವ್ವ
ಧರ್ಮರ ಮಗಳು ಕಾಮಾಲಿಯೋ            ||೫||

ಧರ್ಮರ ಮಗಳು ಕಾಮಾಲಿ ಕರದು
ಏನಂತಾಗ ಹೇಳಿದಳೋ            ||೬||

ಬಾರು ಬಾರ ಕಾಮಾಲಿದೇವಿ ನಿನ್ನ
ಪುರುಷನ ನೋಡವ್ವ                 ||೭||

ನಿನ್ನ ಪುರುಷನ ನೋಡವ್ವ ಕಾಮಾಲಿ
ಮಂಡಿಗಿ ಮಾರಾವಂತಾನೋ                ||೮||

ಮಂಡಿಗಿ ಮಾರಾವಂತಾನವ್ವ ನನ್ನ
ತಮ್ಮನ ಯೇರಿಬೇಕಂತಾಳೋ               ||೯||

ತಮ್ಮನ ಯೇರಿಬೇಕಂತಾಳು ಮಾಯವ್ವ
ನೀರಿಗೆ ಹೋಗಬೇಕಂತಾಳೋ               ||೧೦||

ಧರ್ಮರ ಮಗಳು ಕಾಮಾಲಿದೇವಿ
ಒಳ್ಳೆದೊಳ್ಳೇದಂದಾಳೋ            ||೧೧||

ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ              ||೧೨||

ಬಡಬಡ ಹೋದಾಳು ಕಾಮಾಲಿ
ಕುರುಬಗೇವಿ ಹೊಕ್ಕಾಳೋ          ||೧೩||

ಕುರುಬಗೇರಿನ್ನ ಅಕ್ಕಗಳಿರಾ
ನೀರಿಗೆ ಹೋಗೋಣ ಬನ್ನೀರೇ                ||೧೪||

ಅಗಲಿ ಕೊಡಗಳ ತಂದೆ ಕಾಮಾಲಿ ಈಗೆಲೆ
ಕೊಡಗಳೆ ಇಳಿವೇವೆ                 ||೧೫||

ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ              ||೧೬||

ಬಡಬಡ ಹೋದಾಳು ಕಾಮಾಲಿ
ಒಕ್ಕಲಿಗರೋಣಿ ಹೊಕ್ಕಾಳೋ                 ||೧೭||

ಒಕ್ಕಲಗೆರೆನ್ನ ಅಕ್ಕಗಳಿರಾ ನೀರಿಗೆ
ಹೋಗೋಣ ಬನ್ನೀರೇ               ||೧೮||

ಆಗಲಿ ಕೊಡಗಳ ತಂದೆವಿ ಈಗಲೆ
ಕೊಡಗಳ ಇಳಿವೇವಿ                 ||೧೯||

ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ              ||೨೦||

ಬಡಬಡ ಬಂದಾಳು ಕಾಮಾಲಿ
ಹಾರಾರಗೇರಿ ಹೊಕ್ಕಾಳೋ                   ||೨೧||

ಹಾರುರಗೇರನ್ನ ಅಕ್ಕಗಳಿರಾ ನೀರಿಗೆ
ಹೋಗೋಣ ಬನ್ನೀರೇ               ||೨೨||

ಆಗಲಿ ಕೊಡಗಳ ತಂದೆವಿ ಈಗಲೆ
ಕೊಡಗಳ ಇಳಿವೇವಿ                 ||೨೩||

ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ              ||೨೪||

ಧರ್ಮದ ಮಗಳು ಕಾಮಾಲಿ
ಹರಸಪುರ ಪಟ್ಟಣವೋ              ||೨೫||

ಊರ ಅಗಸಿಯ ಮುಂದ
ಎರಕೊಂದು ದಾರಿ ಹೋಗ್ಯಾವೋ            ||೨೬||

ಎಡಕೊಂದು ದಾರಿ ಹೋಗ್ಯಾವಯ್ಯ ಬಲಕೊಂದು
ದಾರಿ ಹೋಗ್ಯಾವೋ                 ||೨೭||

ಬಲಕಿನ ದಾರಿ ಹಿಡಿದಳು ಕಾಮಾಲಿ
ಹಾಲುಹಳ್ಳಕ ಬಂದಾಳೋ          ||೨೮||

ಶಿವನ ವರವಿನ ಶಿದ್ದಾನು ಆಗ
ಅರಮನಿಯ ಒಳಗೆಲ್ಲೊ             ||೨೯||

ಅರಮನಿಯ ಒಳಗಲ್ಲಯ್ಯ
ಏನಂತ ಮಾತಾಡ್ಯಾನೋ          ||೩೦||

ಕಾಮಾಲಿದೇವಿ ನೋಡಲ್ಲಯ್ಯ ಹಾಲು
ಹಳ್ಳದ ಒಳಗಲ್ಲೋ                  ||೩೧||

ಹಾಲುಹಳ್ಳದ ಒಳಗಲ್ಲೊ ನಾ ಮನಸ
ನೋಡಬೇಕೆಂದಾನೋ              ||೩೨||

ಶಿವನ ವರವಿನ ಶಿದ್ದಾನು ಆಗ ದಂಡ
ತಯ್ಯಾರ ಮಾಡ್ಯಾನೋ            ||೩೩||

ದಂಡ ತಯ್ಯಾರ ಮಾಡ್ಯಾನು ಸ್ವಾಮಿ ತಾ
ಏನ ತಯ್ಯಾರಗ್ಯಾನೋ             ||೩೪||

ಹರಹರನೋ ನನ ಕರಿಯದೇವರು
ಹಾಲುಹಳ್ಳದ ದಂಡೀಲೆ              ||೩೫||

ಹಾಲುಹಳ್ಳದ ದಂಡೀಲೆ ತನ್ನ
ದಂಡ ಇಳಿಸುತೈದಾನೋ           ||೩೬||

ಧರ್ಮರ ಮಗಳು ಕಾಮಾಲಿದೇವಿ
ಹಾಲುಹಳ್ಳದ ಒಳಗಲ್ಲೊ             ||೩೭||

ಹಾಲು ಹಳ್ಳದ ಒಳಗಲ್ಲೋ ಆಗ
ಏನಂತ ಮಾತಾಡ್ಯಾಳೋ          ||೩೮||

ಅವು ರಾಯರ ದಂಡವ್ಯಾ ಇದು
ರಾಯರ ದರಬಾರೋ               ||೩೯||

ಅವು ರಾಯರ ದರಬಾರೆಂದು ಹಾಲು
ಹಳ್ಳವ ಬಿಟ್ಟಳೋ          ||೪೦||

ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ
ಇದು ಒಂದು ಸಂದೇಳೋ           ||೪೧||

ಸಂದಿನ ಪದಗಳ ವಂದಿಸಿ ಹೇಳುವೆ
ತಂದಿ ಕರಿಯ ಶಿದ್ದಾನೋ           ||೪೨||

ದೇವಾರು ಬಂದಾವು ಬನ್ನೀರೇssss