ಬೀರೇದೇವರ ಮಾರ್ಗಪದ
ಮತ್ತ ಶಂಖರ ತಾನು ಕೂಸಿನ ಸಲವುತಾನು
ಅಂತ ಆಕಾಶವಾಣಿಯಾ ಕೇಳಿದಾಳೋ
ಕೇಳಿ ಸುರಮಾದೇವಿ ಬಾಳ ಅಳುತ ಕುಂತಾಳು
ಹೇಳುದು ಯಾರಿಗೆ ನನ್ನ ದೈವ ಅಂದಾಳೋ
ಹಾಡಿ ಹರಸಿ ಬೇಡಿಕೊಂಡ ಮಗನಾ ಪಡಕೊಂಡೆ
ನಾನು ಕಾಡ ಅಡವಿಗೆ ಕಳಿಸುದಾತ ಅಂದಿನೋ
ಸುರಮಾದೇವಿ ಆಗ ದುಃಖವ ಮಾಡುತ
ತೊಟ್ಟಿಲದಾಗ ಹಾಕ್ಯಾಳ ಕಂದ ಬೀರಪ್ಪನೋ
ಬೀರದೇವರ ತೊಟ್ಟಿಲದಾಗ ಹಾಕಿ ತನ್ನ
ದ್ವಾರಪಾಲರನ ಕರಿದಿದ್ದಾಳೋ
ಸುರಮಾದೇವಿ ಆಗ ಚಾರರಿಗೆ ಹೇಳತಾಳು
ಘೋರ ಅರಣ್ಯಕ ಕಂದನ ಒಯ್ಯರೆಂದಾಳೋ
ಆಗ ಸೇವಕರು ಬಂದು ಕೂಸಿನ ಒಯ್ದಾರು
ಅವರು ಘೋರ ಅರಣ್ಯಕ ಇಟ್ಟ ಬಂದಿದಾರೋ
ಅಳವುತ ಚೀರುತ ಹೊರಳುತ ಬೀರದೇವರನ
ಎಳಿಸುವಂತಾ ಗುರು ಬಂದಿದ್ದಾನೋ
ಗಿರಿಜಾರಮಣ ಕರಿಗೊರಳ ಶಂಖರಾ ತಾನು
ಹರಸಿ ಕಂದಗ ನೋಡಿದ್ದಾರೋ
ಹನ್ನೆರಡು ದಿವಸಕ ಕಂದಗ ಅವರೆಲ್ಲ
ಚೆನ್ನಾಗಿ ನಾಮಕರಣ ಮಾಡಿದ್ದಾರೋ
೩೫ನೇ ಸಂಧಿ :
ಗುರುವಿನಾ ಉಪದೇಶ ಆಗದ ಮನುಜಾ ತಮ್ಮಾ
ಧರಿವಳಗ ಇದ್ದರ ಫಲವೇನಂದಿನೋ
ಕಟ್ಟಿದ ಬುತ್ತಿ ಕಲಿಸಿದ ಮಾತೋ ತಮ್ಮಾ
ಎಷ್ಟು ದಿನವಸ ಇದ್ದರ ಫಲುವೇನಂದಿನೋ
ನಾಯಿಯ ಮುಂದ ತಾಯಿನ ಬೈದರ ತಂದೆ
ತಾಯಿ ಇದ್ದರ ಫಲವೇನಂದಿನೋ
ತಂದೆ ತಾಯಿ ಮಾತುಕೇಳದ ಮನುಜಾ
ತಮ್ಮ ಮನಿಯಾಗ ಮಗಾ ಇದ್ದೇನ ಫಲ ಅಂದಿನೋ
ಗಾಣದ ಎತ್ತಿನಾಂಗ ಓಣಿ ಓಣಿ ತಿರಗಾವ
ಕೋಣಿನಂಥಾ ಮಗಾ ಫಲವೇನಂದಿನೋ
ಬುದ್ಧಿ ಇಲ್ಲದವಾ ಭೂಮಿ ಮ್ಯಾಲ ತಮ್ಮಾ
ಉದ್ದಾಗಿ ಬೆಳೆದರ ಫಲವೇನಂದಿನೋ
ಅತ್ತಿ ಮಾವನ ಕೂಡ ವಾದ ಹಾಕುವ ಸೊಸಿ
ಮನಿಯಾಗ ಇದ್ದರ ಫಲವೇನಂದಿನೋ
ಬೇಡಿದಂಥಾ ವರಗಳು ಕೊಡದ ದೇವರು ತಮ್ಮಾ
ಗುಡಿಯಾಗ ಇದ್ದರ ಫಲವೇನಂದಿನೋ
ಬೀರಶ್ವರರ ಮಾರ್ಗಪದ
ಸರವ ದೇವತ್ಯಾರು ಕಂದಗ ಮುದ್ದಿಸಿ ಬೀರೇಶ
ಅಂತಾ ಅವರು ಕರಿದಿದ್ದಾರೋ
ಬೀರೇಶ ಅಂದು ಅವರು ಜೋಗಳವನೆ ಹಾಡಿ
ಬೆರಳಾಗ ಅಮೃತ ಇಟ್ಟು ಹೋಗಿದ್ದಾರೋ
ಅಕ್ಕ ಮಾಯವ್ವಗ ಒಲಿದು ದೊಡ್ಡವನಾಗೋ
ಲೋಕದೊಳಗ ಮೆರಿ ಅಂತ ಹರಸಿದ್ದಾನೋ
ಧರಿಯೊಳಗ ನೀನು ಸರವ ಪವಾಡ ಗೆಲಿ ಅಂಥ
ಗಿರಿಜಾದೇವಿ ತಾನು ಹರಿಸಿದದಾಳೋ
ಕಾಮಧೇನನ ಕರೆದು ಮಹಾದೇವ ಹೇಳತಾನು
ನೇಮದಿಂದಾ ಹಾಲು ಕುಡಿಸಿ ಬಾ ಅಂದಿದಾನೋ
ಗಾಳಿದೇವಗ ಆಗ ತೊಟ್ಟಿಲ ತೂಗುಂಥ ಹೇಳಿ
ಹೋದೋ ಕೊಲ್ಲಿಪಾತಕ ಶಂಖರನೋ
ಮತ್ತೊಂದು ಕಥಿಯಾ ನೆನಪ ಆದೀತೋ ತಮ್ಮಾ
ಚಿತ್ತವಿಟ್ಟ ನೀವು ಕೇಳಿರಿ ಅಂದಿನೋ
ಧರಿವಳಗ ಹಿಂದಕ ಮಹಾದೇವ ತಾನು
ಮರವ ನೋಡಿ ವರವಾ ಕೊಟ್ಟಿದ್ದಾನೋ
ಮರದ ಸುತ್ತ ಮುತ್ತ ಆನಂದ ಜಾಗಾವ ನೋಡಿ
ಹರನು ಮರಕವರು ಕೊಟ್ಟಿದ್ದಾನೋ
ಮರದ ನೆರಳಾಗ ಬೇಕಾದ ಹೆಂಗಸರು ಕುಂತಾರು
ಗರ್ಭವು ಧರಿಸಲಿ ಅಂತಾ ನುಡಿದಿದ್ದಾನೋ
೩೬ನೇ ಸಂಧಿ :
ಯಾವಲ್ಲಿ ಹುಟ್ಟಿಸಿ ಯಾವಲ್ಲಿ ಬೆಳೆದಿದಿ
ಯಾವಲ್ಲಿ ಉದಿಯನಾದಿ ಬೀರಯ್ಯನೋ
ಅಂದನಗರಿಯಾಗ ಹುಟ್ಟಿದ ಬೀರಯ್ಯ
ಮಂದನಗರಿಮ್ಯಾಗ ಬೆಳದಾನ ಬೀರಯ್ಯನೋ
ಅಂದನಗಿರಿ ಅಂದರ ಯಾವುದು ತಮ್ಮಾ ನೋಡೋ
ಮಂದನಗಿರಿ ಅಂದರ ಯಾವದ ಅಂದಿನೋ
ಅಂದನಗಿರಿ ಅಂದರ ತಾಯಿಯ ಹೊಟ್ಟಿ ತಮ್ಮಾ
ಮಂದನಗಿರಿ ಅಂದರ ಮೊಲಿ ಹಾಲ ಅಂದಿನೋ
ಮಂದನಗಿರಿಯ ಮೊಲಹಾಲವ ಕುಡಿದು
ಕಂದ ಮಲಿಗ್ಯಾನ ಸಿದ್ಧ ಬೀರಯ್ಯನೋ
ಪಂಚ ಪರುವತದೊಳಗ ನೋಡೋ ತಮ್ಮಾ
ಅಲ್ಲಿ ಮೂರುವೇಣಿ ಮರಗಳ ಬೆಳೆದಿದ್ದಾವೋ
ಮೂರುವೇಣಿನ ಮರಕ್ಕ ನೋಡಪ್ಪ ನೀನು
ಸಿದ್ಧನ ತೊಟ್ಟಿಲಾ ಕಟ್ಟಿದ್ದಾನೋ
ಜೇನುತುಪ್ಪದ ಹಾಲು ಕುಡಿದ ಸಿದ್ಧವೀರ
ಆನಂದವಾಗಿ ಕಂದ ಮಲಗಿದ್ದಾನೋ
ಸಿದ್ಧವೀರನ ಸೇವಾ ಯಾರ್ಯಾರು ಮಾಡ್ಯಾರು ತಮ್ಮಾ
ಎಂಥಿತಾವರು ಮಾಡ್ಯಾರು ಕೇಳಿರಿ ಅಂದಿನೋ
ಮೇಘರಾಜಾ ಬಂದು ಛಳಿಯನು ಹೊಡಿತಾನು
ವಾಯುದೇವರಾ ತೊಟ್ಟಿಲಾ ತೂಗಿದ್ದಾನೋ
ಮಿಕ ಮಿರಗ ಜಾತಿಗಿ ರಾಜ್ಯಾದಂತ ಹುಲಿಯರಾಜಾ
ಪಾದವ ಒತ್ತುತಾ ಕುಳಿತಿದ್ದಾನೋ
ಕೋಗಿಲ ಪಕ್ಷಿಯು ಕೊಳಲನು ಉದ್ಯಾನು
ನರಿರಾಜ ಬಂದು ಸೋಬಾನ ಹಾಡಿದ್ದಾನೋ
ಮಾರ್ಗಪದ
ಮತ್ತೊಂದು ಕಥಿಯಾ ನೆನಪ ಆದೀತೋ ತಮ್ಮಾ
ಚಿತ್ತಿಟ್ಟ ಕೇಳಾರಿ ಮಾರ್ಗ ಅಂದಿನೋ
ದೊಡ್ಡ ಮರದ ನೆರಳಿಗೆ ಹೆಣ್ಣು ಮಕ್ಕಳು ಕುಂತಾರ
ಗರ್ಭ ಧರಿಸಬೇಕೆಂತ ಮಹಾದೇವ ನುಡಿದಿದ್ದಾನೋ
ಆಗ ಐದು ಮಂದಿ ಗಾಂಧರ್ವ ಸ್ತ್ರೀಯರು
ಗಿಡದ ಬುಡಕ ಹೋಗಿ ಕುಂತಿದ್ದಾರೋ
ಪರಮೇಶ್ವರನ ವರದಿಂದಾ ಅವರೆಲ್ಲಾ
ಗರ್ಭವ ಧರಿಸಿ ತಾವು ನಿಂತಿದ್ದಾರೋ
ಐದು ಮಂದಿ ಗಾಂಧರ್ವ ಸ್ತ್ರೀಯರೆಲ್ಲ ಕೂಡಿ
ಬೆದರಿ ಹ್ಯಾಂಗ ಮಾಡಾನು ಅಂದಿದಾರೋ
ಆಗ ಬೆದರಿ ಅವರು ಹೆದರಿ ಅಂತಾರವರು
ಆಗಬಾರದಂತ ಕಾರ್ಯ ಆಗದ ಅಂದಾರೋ
ಗರ್ಭವ ಧರಿಸಿ ನಮ್ಮ ಲೋಕಕ್ಕ ಹೋದರ ಸರರು
ದೇವತ್ಯಾರು ನಮ್ಮನ್ನ ಹೊಡಿಯುವರೋ
ಗರ್ಭವು ಧರಿಸಿ ನಿಂತು ಏನು ತಿಳಿಯದಾಂಗ
ಸುವರೆಲ್ಲ ಚಿಂತಿಯ ಮಾಡಿದ್ದಾರೋ
ತಮ್ಮ ತಮ್ಮ ಹೊಟ್ಟಿ ತಮ ಉಗುರಿಲಿಂದಾ
ಒಮ್ಮಿಲೆ ಹೊಟ್ಟಿ ಅವರು ಸೀಳಿದ್ದಾರೋ
ಹೊಟ್ಟೆ ಸೀಲಿ ಅವರು ಹುಟ್ಟಿದ ಐದು ಕೂಸನ್ನ
ಕೆಟ್ಟ ಹೆಣ್ಣು ಶಿಸುವಿನ ನದಿಯಾಗ ಒಗದಿದ್ದಾರೋ
ತೇಲಿಬಿಟ್ಟ ಐದು ಹೆಣ್ಣು ಕೂಸುಗಳು ಅಲ್ಲಿ
ನಿಲ್ಲದೆ ಹೊಳಿಯಾ ಹಿಡಿದ ನಡದಿದ್ದಾವೋ
ಹೊಳಯ ದಂಡೀಲೇ ಚಾಮರಾಯನೆಂಬಾವ
ಬಳಿಗೆ ಕುರಿಗಳನ ಕಾಯುತ ನಿಂತಿದ್ದಾನೊ
೩೭ನೇ ಸಂಧಿ :
ನಾಲ್ಕು ಮಂದಿ ನೀವು ಚೆಂದಾಗಿ ಬಂದು
ನೀವು ಹೊಂದಿಕಿಯಾಗಿ ಕುಂತಿದ್ದು ಖರೆ
ದೈವ ಇದ್ದಲ್ಲಿ ದೇವರು ಇರುವನೆಂಬುವ
ಗಾದಿಯ ಮಾತು ಇರುವುದು ಖರೆ
ತಾಯಿಯ ಗರ್ಭದಿಂದ ಜನಿಸಿ ಬಂದಮ್ಯಾಗ
ಅಣ್ಣತಮ್ಮರ ಬ್ಯಾರಿ ಆಗುದ ಖರೆ
ನಾಲ್ಕು ಬಾಯಿ ನಾಲ್ಕು ಕೈಯಾನ ಕೂಡಿದರ
ಕಾರ್ಯ ಶುದ್ಧ ಆಗುವ ಖರೆ
ಹೆಂಡರು ಬಂದಮೇಲೆ ಪಂಡಿತರಾದೆವೆಂದು
ಸ್ವತಂತ್ರ ಹಿರಿತನಾ ಮಾಡುದು ಖರೆ
ಮನುಜಾಗ ರೋಗ ಬಂದು ಸಾಗಿಯ ಹೋದರ
ಮಡದಿಗೆ ವನವಾಸ ಬರುವುದು ಖರೆ
ಪಂಚಪಾಂಡವರು ವಂಚನೆ ಇಲ್ಲದೆ ಕಡಿತಾನ
ವನವಾಸ ಮಾಡಿದ್ರೊ ಖರೆ
ಭೀಮಸೇನ ಪುಂಡ ಮೂರುಲೋಕದ ಗಂಡ
ಅರ್ಜುನ ಬಿರದಾ ಸಾರಿದ್ದು ಖರೆ
ಧರ್ಮರಾಜನ ವಚನ ತಪ್ಪದೆ
ಎಲ್ಲಾ ಅಣ್ಣಾ ತಮ್ಮರು ನಡಸಿದ್ರೋ ಖರೆ
ಮಾರ್ಗಪದ
ಹೊಳಿಯ ದಂಡಿಗುಂಟ ಚ್ಯಾಮರಾಯನೆಂಬಾವ
ಬಳಿಯಲ್ಲಿ ಕುರಿಗಳ ಕಾಯುತ ನಿಂತಿದ್ದಾನೋ
ತೇಲಿ ಬರುವಂಥಾ ಕೂಸುಗಳನ್ನು ನೋಡಿದಾನು
ನಿಲ್ಲದೆ ಹೊಳಿಯ್ಯಾಗ ತಾನು ಜಿಗಿದಿದ್ದಾನೋ
ಬರುವಂಥಾ ಕೂಸುಗಳನ ಹಿಡದಾನ ಚಾಮರಾಯಾ
ಹರುಷಾಗಿ ತನ್ನ ಮನಿಗೆ ಹೋಗಿದ್ದಾನೋ
ತನ್ನ ಮಡದಿಯಾದ ಶಾಂಭವಿನ ಕರದಾನು
ಚೆನ್ನಾಗಿ ಕೂಸಗಳನ್ನ ನೋಡ ಅಂದಾನೋ
ಚೆನ್ನಾಗಿ ಜೋಪಾನ ಮಡತೀನಂತಾಳು
ಮನದಾಗ ಹರುಷಾಗಿ ಕುಂತಿದ್ದಾಳೋ
ಹೇ ದೇವಾದಿದೇವಾ ಶಂಕರಾ ಎನಗ
ಈಗ ಐದು ಹೆಣ್ಣು ಕೂಸುಗಳನ್ನು ಕೊಟ್ಟಿದ್ದಾನೋ
ಮಕ್ಕಳಿಲ್ಲದೆ ನಾನು ಸದಾ ಮರಗುತ್ತಿದ್ದೆ
ಅಕ್ಕರತೆಯಿಂದ ನಾನು ಸಲವುವೆನೋ
ಹೊತ್ತು ಹೊತ್ತು ಕೂಸುಗಳಿಗೆ ಉಣಿಸುತಾ
ಮತ್ತು ಹಿರಿಹಿರಿ ಹಿಗ್ಗತ್ತಲೋ
ಐದು ಮಂದಿ ಮುತ್ತೈದಿಯರಿಗೆ ಹೇಳಿದಾಳು
ಐದೂ ಕೂಸಿನ ತೊಟ್ಟಲದಾಗ ಹಾಕಿಸಿದ್ದಾಳೋ
ಮಾಯಿ ಮಾಂಕಾಳಿ ಮಂಡಮ್ಮಲಕ್ಷ್ಮಿ
ಅಕ್ಕಮಾಯವ್ವನಂಥಾ ಕರಿದಿದ್ದಾರೋ
ಶಾಂಭವಿ ತಾಯಿಯ ಕೈ ಒಳಗ ಅವರು
ನಂಬಿಗಿ ಇಟ್ಟ ಆಗ ಬೆಳದಿದ್ದಾರೋ
೩೮ನೇ ಸಂಧಿ :
ಅದು ನೋಡೋ ಅದು ನೋಡೋ ಅದು ನೋಡೋ ತಮ್ಮಾ
ನೀನು ಸದ್ಗುರು ರೇವಣಸಿದ್ಧನ ನೋಡಂದಿನೋ
ಸುತ್ತೆಲ್ಲ ತುಂಬಿ ತುಳುಕುವಂಥವನೋ ನೋಡ ತಮ್ಮಾ
ಹಂತೀಲೆ ಸದಾ ಇದ್ದವನ ನೋಡಂದಿನೋ
ಅರವಿನ ಬಲಿಯಾಗ ಸಿಕ್ಕತಿ ನೋಡ ತಮ್ಮಾ
ಗುರುವಿನ ಕೀಲ ಹಾಕಿದ್ದ ನೋಡಂದಿನೋ
ನೋಡುತೀನ ಅಂದರ ನಿನಗ ಕಾಣುವದಲ್ಲೋ ತಮ್ಮಾ
ನೋಡಿದ ಕ್ಷಣದಾಗ ಬಿಡುವುದಿಲ್ಲ ಅಂದಿನೋ
ಹರಿನಾರಾಯಣ ದೇವರಲ್ಲೋ ಹರಮಹಾದೇವ
ದೇವರಲ್ಲೋ ಗುರುರೇವಣಸಿದ್ಧ ದೇವಾ ಬಲ್ಲಾಂದಿನೋ
ಗುರುವಿನ ಚಿಂತಿ ಒಳಗ ಇರಬೇಕ ನೋಡೋ ತಮ್ಮ
ಗುರುವಿನಾ ಧ್ಯಾನದ ಚಿಂತಿ ಬೇಕಂದಿನೋ
ಅತಿ ಹಿತದವರಲ್ಲ ಕೋಪಾಗಿರಲೆಪ್ಪ ಮತಿ ಹೀನನಾಗಿ
ನಿಂದಾ ಬ್ಯಾಡಂದಿನೋ
ಸತಿಯೊಳು ಮಳಿಯ್ಯಾಗ ಕಿರಿಕಿರಿ ಮಾಡಲೆಪ್ಪ
ಸುತರೆಲ್ಲ ಸತ್ತರ ಗುರುಧ್ಯಾನ ಇರಲಂದಿನೋ
ಮಾರ್ಗಪದ
ಶಾಂಭವಿ ತಾಯಿಯ ಕೈಯ್ಯ ಒಳಗ ಅವರು
ನಂಬಿಗಿ ಇಟ್ಟ ಅವರು ಬೆಳೆದಿದ್ದಾರೋ
ತಂದಿಯ ಸಂಗಡಾ ಕುರಿಗಳನ ಕಾಯುದಕ
ಅಂದದಿಂದಾ ಅವರು ಆಗ ನಡೆದಿದ್ದಾರೋ
ಕಾಯುತ್ತ ಕುರಿಗಳನ ಐದು ಮಂದಿ ಆಗ
ಹೇವಲಿ ಹಳ್ಳಕ ಕೂಡಿ ಬಂದಿದ್ದಾರೋ
ಅಲ್ಲಿ ಹಳ್ಳದ ದಂಡೀಲೆ ಐದು ಮಂದಿ ಹೆಣ್ಣು ಮಕ್ಕಳು
ಎಲ್ಲಾರು ಒಂದು ತೊಟ್ಟಿಲಾ ನೋಡಿದ್ದಾರೋ
ಗಿಡದ ಒಳಗ ಜೋತ್ಯಾಡು ತೊಟ್ಟಿಲದಾಗ ಅಲ್ಲಿ
ಅಳುವಂಥಾ ಕೂಸಿನ ಧ್ವನಿಯಾ ಕೇಳಿದ್ದಾರೋ
ಏನು ಸೋಜಿಗ ಅಂತಾ ನಾರಿಮಣಿಯರು ಎಲ್ಲಾ
ನಾ ಮುಂದ ನೀ ಮುಂದ ಅಂತ ಹೋಗಿದ್ದಾರೋ
ಮರವನ್ನು ಏರಿದಾರು ತೊಟ್ಟಿಲಾ ಬಿಚ್ಚಿದಾರು
ಹರುಷಾಗಿ ಕಂದನ ಅವರು ನೋಡಿದ್ದಾರೋ
ನನ್ನ ಕೂಸು ಇದನು ನನ್ನ ಕೂಸಾ ಅನ್ನುತಾ ಅವರು
ತಮ್ಮ ತಮ್ಮೊಳಗೆ ಬಡಿದಾಡುತ ನಿಂತಿದ್ದಾರೋ
ಅಕ್ಕ ಮಾಯವ್ವನು ಯಾಕರೆವ್ವಾ ಬಡಿದಾಟ
ಶಂಖರನ ಸೇವಾ ನೀವು ಮಾಡಿರಿ ಅಂದಳೋ
ನಮ್ಮ ಭಕ್ತಿಗೆ ಮಹಾದೇವ ತಾನೋ ಸ್ವಃತಾ ಬಂದು
ನಮ್ಮೊಳಗ ಬೇಕಾದವರಿಗೆ ಕೊಡುವವನೋ
ಯಾರ ಉಡಿ ಒಳಗ ಕಂದನ ಹಾಕತಾನೋ
ಅವರ ಪುತ್ರ ಅಂತ ತಿಳಿರಿ ಅಂದಾಳೋ
ಆಗ ಎಲ್ಲಾರು ಕೂಡಿ ಶಂಖರನ ಧ್ಯಾನವ ಮಾಡ್ಯಾರು
ಬೇಗ ಬಂದು ಶಂಖರ ಕೂಸಿನ ಹಿಡಿದಿದ್ದಾನೋ
ಕಂದಗ ತಾಯಾಗಿ ಜೋಪಾನ ಮಾಡಂತ ಅಂದ
ಅಕ್ಕ ಮಾಯವ್ವನ ಉಡಿಯಾಗ ಹಾಕಿದ್ದಾನೋ
೩೯ನೇ ಸಂಧಿ :
ಸತ್ಯವಂತರ ಲೀಲಾ ಮತ್ತೊಂದು ಹೇಳತೀವಿ
ಚಿತ್ತಿಟ್ಟ ಕೇಳಿರಿ ನೀವು ಮಾರ್ಗವನೋ
ಚಿತ್ತಿಟ್ಟ ಕೇಳಾರಿ ಸತ್ಯ ಆದಿಗೊಂಡ
ಇತ್ತ ಭೂಮಿ ಶಿವಗ ದಾನವನೋ
ಗುರುರೇವಣಸಿದ್ಧ ಆದಿಗೊಂಡಗ ಒಲಿತು
ವರವಾ ಬೇಡೋ ಕೊಡತೇನ ಅಂದಿದಾನೋ
ಇಂಥ ಶಬ್ದಾ ಕೇಳಿ ಗುರುವಿನ ಮುಂದ ನಿಂತು
ಸಂತಾನ ಕೊಡೋ ಗುರು ಅಂದಿದಾನೋ
ಗುರುವಾ ರೇವಣಸಿದ್ಧ ಆದಿಗೊಂಡಗ ಒಲಿತು
ವರವಾ ಕೊಟ್ಟ ಮಾಯನಾಗಿದ್ದಾನೋ
ಗುರುವಿನ ವರದಿಂದಾ ಆದಿಗೊಂಡಾಗ
ಆರು ಪುತ್ರ ಗಂಡಸ ಮಕ್ಕಳನೋ
ಆದಿಗೊಂಡನ ಮಕ್ಕಳು ಅಮರಗೊಂಡ
ಶಿವಗೊಂಡ ಸಾಧಿಸಿದಾನ ಬೀರಗೊಂಡಾನೋ
ಮಹಾದೇವನ ಒಲಿಸಿದಂತಾ ಮುರಿಗೊಂಡ
ಮತ್ತ ಮರಡಿಯ ಮುದ್ದುಗೊಂಡಾನೋ
ಕಡೆಯ ಹುಟ್ಟಿದ ಉಂಡಾಡು ಪರಮಗೊಂಡ
ನಡೆನುಡಿಯಾದಿಂದ ಬಲ್ಲವನೋ
ಹರಿಭಕ್ತ ಬಸವನ ಮುಂದೆ ಪದಮಗೊಂಡ
ಧರಿ ಒಳಗ ತಾನು ಮೆರೆದಿದ್ದಾನೋ
ಆದಿಗೊಂಡ ಮಕ್ಕಳಾರು ಮಂದಿ ಕೂಡಿ
ಮೇದಿನಿಯಾ ಹೊಲವಾ ಮಾಡಿದ್ದಾರೋ
ಹೊಲಗಳನ ಮಾಡುತ ಫಲಗಳನ ಬೇಡೂತ
ಮೂಲ ಹರ ಶಿವನ ಪೂಜಿಯಾ ಮಾಡಿದ್ದಾರೋ
ಚೆಲುವ ಪದಮಣ್ಣನ ಕೆಲಸಕ ಕರಿಲಾಕ
ಗಲಿಬಿಲಿಯಾದಿಂದ ಮಾತವ ಆಡಿದ್ದಾನೋ
ಮಾತೆ ಆದಮ್ಮನ ಕರೆದು ಮಾತ ಹೇಳ್ಯಾರವರು
ಆತ ಪದಮಣ್ಣನ ಕಳುಹ ಅಂದಾರೋ
ಹಿರಿಯ ಮಕ್ಕಳಾಡಿದ ಮಾತಿಗಿ ತಾಯಿ
ಸುರಶಾಳ ಆಗ ಕಣ್ಣಾನ ನೀರವನೋ
ಸತಿಯು ಮಾಡಿದಂಥಾ ದುಃಖವ ನೋಡಿದಾನು
ಪತಿಯ ಆದಿಗೊಂಡ ಕೇಳಿದ್ದಾನೋ
Leave A Comment