೪೦ನೇ ಸಂಧಿ :

ರೇವಣಸಿದ್ಧನ ವರದಿಂದಾ ನಮಗೆಲ್ಲಾ ಜೀವಕ
ಏನು ಕುಂದ ಬ್ಯಾಡಂದಾನೋ

ಅಷ್ಟ ಆಗುದರೊಳಗ ಅಲ್ಲಿ ಪದಮಣ್ಣ ಬಂದಾನು
ದಿಟ್ಟಿಸಿ ಮಗನಾ ಅವರು ನೋಡಿದ್ದಾರೋ

ಕಷ್ಟಕ ಕರಿದಾರೋ ನಿನ್ನ ಅಣ್ಣಗಳು ತಮ್ಮಾ
ಹೊಟ್ಟಿ ತುಂಬ ಉಂಡ ಹೊಲಕ ಹೋಗಂದಾರೋ

ತಾಯಿಯ ವಚನಾ ಕೇಳಿ ಉಂಡಾಡು ಪದಮಗೊಂಡಾ
ದಯಾವಿರಲಿ ತಾಯಿ ನಾ ಹೋಗುವೆನೋ

ಕೊಡಲಿ ಕುಡಗೋಲ ಹಿಡದು ನಡದಾನೋ
ಪದಮಣ್ಣಾ ನಿಡ ಭಕ್ತಿಯಾದಿಂದ ಹೊಂಟಿದಾನೋ

ದೃಢ ಭಕ್ತಿಯಾದಿಂದ ಗುರುವಿನಾ ನೆನಿಯುತ
ಘಡನೆ ಅಣ್ಣಗಳನ ಕೂಡಿದ್ದಾನೋ

ಉಂಡಾಡು ಪದಮಗೊಂಡಾ ಬಂದದ್ದು ಅವರು ನೋಡಿ
ಮಡಕಿಯ ಹೂಡಿ ಅಂತ ಹೇಳಿದ್ದಾರೋ

ಹೊಡಿಯುತ ಮಡಕೀಯ ಕಡಿಯುತ
ಗಿಡಗಳನು ಒಡಹುಟ್ಟಿದವರು ಹೇಳಿದ್ದಾರೋ

ನುಡಿದ ನುಡಿಯಾ ಕೇಳಿ ಒಡಹುಟ್ಟಿದ
ಪದಮಗೊಂಡಾ ಗಿಡಗಳನ ಕಡಿಯುತಾ ಒಗದಿದ್ದಾನೋ

ಮೃಡ ನೀನೇ ಗತಿ ಎಂದು ಎಡಬಲಗೈಯೊಳು
ಒಡದಾವೋ ಹಸ್ತದೊಳು ಗುಳ್ಳಿಯನೋ

ಮತ್ತ ಆದಮ್ಮ ಬುತ್ತಿಯ ಉಣ್ಣುದಕ
ಬುತ್ತಿಯಾ ಕಟ್ಟಿ ತಾನು ಕಳವಿದ್ದಾಳೋ

ಬುತ್ತಿಯಾ ಕಟ್ಟಿ ತಾ ಕಳಹುತ ಆದಮ್ಮಾ
ನಿತ್ಯ ನೇಮ ಸೊಸಿಯರಿಗೆ ಹೇಳಿದ್ದಾಳೋ

ಮತ್ತ ಸೊಸಿಯರನ ಕರಿದು ಹೇಳತಾಳು
ಬುತ್ತಿಯ ಹೆಡಗಿ ಒಯ್ಯಿರಿ ಅಂದಾಳೋ

ಬುತ್ತಿಯ ಹೆಡಗಿ ಹೊಲದೊಳಗ ಹೋಗಿ
ಬಿತ್ತುವ ಸಾಲಿನಲ್ಲಿ ನೀವು ಇಡರಿ ಅಂದಾಳೋ

ತಿರುಗಿ ನೋಡದೆ ನೀವು ಹೊರಟು ಊರ
ಕಡೆಗೆ ಬರ್ರೆಂದು ಸೊಸಿಯರಿಗೆ ಹೇಳಿದ್ದಾಳೋ

ಅತ್ತಿಯ ವಚನಾ ಕೇಳಿ ಸೊಸಿಯಿರೆಲ್ಲ
ಕೂಡಿ ಎತ್ತಿಕೊಂಡ್ರೋ ಬುತ್ತಿಯಾ ಹೆಡಿಗೆಯನೋ

 

೪೧ನೇ ಸಂಧಿ :

ವರ ಗುರು ರೇವಣಸಿದ್ಧನ ಮಹಿಮಾ
ಕರವ ಮುಗಿದು ಕೊಂಡಾಡುವೆನು

ಕರವ ಮುಗಿದು ಕೊಂಡಾಡುತ ದೇವನು
ಚರಣ ಕಮಲಾ ಹಿಡಿದು ನಮಿಸುವೆನೋ

ಅತ್ತಿಯ ವಚನಾ ಕೇಳಿ ಸೊಸಿಯರೆಲ್ಲ ಕೂಡಿ
ಎತ್ತಿಕೊಂಡಾರು ಬುತ್ತಿಯಾ ಹೆಡಗಿನೋ

ಎತ್ತಿಕೊಂಡು ಹೋಗಿ ಬುತ್ತಿಯಾ ಹೆಡಗಿಯಾ
ಬಿತ್ತುವ ಸಾಲಿನಲ್ಲಿ ಇಟ್ಟಿದ್ದಾರೋ

ವಲ್ಲಭೆಯರು ತಂದ ಬುತ್ತಿಯಾ ಕಂಡಾರು
ಮೆಲ್ಲ ಮೆಲ್ಲನೆ ಊಟಕ ಅವರು ಬಂದಿದಾರೋ

ಎಲ್ಲಾರು ಬಂದಾರು ಬುತ್ತಿಯಾ ಬಳಿಯಲ್ಲಿ
ವಲ್ಲೆಂದು ಹೋದಾನ ಆಗ ಪದಮಣ್ಣನೋ

ಪದಮಗೊಂಡನ ಬಿಟ್ಟು ಉಳಿದವರೆಲ್ಲ
ಮುದ್ದೆಯ ಉಂಡು ಅವರು ಎದ್ದಿದ್ದಾರೋ

ಮುದ್ದೆಯ ಉಂಡು ಅವರು ಇದಂಥ ಬುತ್ತಿಯಾ
ಪದಮಣ್ಣನ ಎಡಿ ಅಂತ ತಿಳಿದಿದ್ದಾರೋ

ಪದಮಗೊಂಡಾನ ಎಡಿಯಾ ತಗೊಂಡಾರವರು
ಇದ್ದಲ್ಲಿಗೆ ಹೋಗಿ ಅವನ ಕರದಿದ್ದಾರೋ

ಕರದಾರೋ ಎಲ್ಲಾರು ಪದಮಗೊಂಡ ಅಲ್ಲಿ
ಭರದಿಂದಾ ಬಂದ ಊಟಾ ಮಾಡಂದಾರೋ

ಕರೆದು ನೀರವ ಕೊಟ್ಟು ಕೈ ಗುರಳಿಯ ನೋಡಿ
ಮರುಗಿದಾರೋ ತಾವು ಮನದೊಳಗೋ

ಮರುಗಿ ಅಂತಾರ ಅವರು ಪದಮಣ್ಣಾ
ಅರಿದಾವಾ ಕರೆತಂದೆವೋ ಕೆಲಸಕ್ಕ ಪದಮಣ್ಣನೋ

ಕರೆತಂದೆವೋ ನಿನ್ನ ಸುಮ್ಮನೆ ಕೆಲಸಕ
ಇರಸಿದ ಬುತ್ತಿಯ ಊಟಾ ಮಾಡಂದಾರೋ

ಇರಸಿದ ಬುತ್ತಿಯ ನೋಡಿ ಪದಮಗೊಂಡ
ಹರುಷಾಗಿ ಬುತ್ತಿಯಾ ಬಿಚ್ಚಿದಾನೋ

ಪರುಷ ಪಾಯಸ ಬುತ್ತಿ ಇದ್ದುದ ಕಂಡು
ಹರನು ಒಲಿದನೆಂದು ಅಂದಿದಾನೋ

ಇತ್ತ ಪದಮಗೊಂಡ ಹರ ಎನಗ ಒಲಿದನೆಂದು
ಬುತ್ತಿಯಾ ಹರುಷಾಗಿ ಉಂಡಿದ್ದಾನೋ

ಹೊತ್ತ ಮುಳುಗುವ ವ್ಯಾಳ್ಯಾಕ ಹೊಲಾ ಬಿಟ್ಟು
ಅವರೆಲ್ಲ ಮತ್ತ ಮತ್ತ ಮನಿಗಿ ಬಂದಿದಾರೋ

ಮನಿಗಿ ಬಂದು ಅವರು ಮಜ್ಜನ ಭೋಜನ ಮಾಡಿ
ವಿನಯಾದಿಂದ ಶಯನಾ ಮಾಡಿದ್ದಾರೋ

 

೪೨ನೇ ಸಂಧಿ :

ರೇಣುಕಾ ಗುರುಹರಾ ಧೀನ ದಯಾಕರಾ
ಗಾಯನದಿಂದಾ ನಿನ್ನ ಹೊಗಳುವೆನೋ

ಗುರುದೇವನು ನೀನು ಪರಮ ಅವತಾರ ನೀನು
ಪರಲಿಂದಾ ಕಾಯೋ ನೀನು ಭಕ್ತರನೋ

ಸತ್ಯವಂತರ ಮಾರ್ಗ ಹೇಳತೇವರಿ ನಾವಿನ್ನು
ಚಿತ್ತದಿಂದ ಕೇಳಾರಿ ಮಹಿಮವನೋ

ಚಿತ್ತವಿಟ್ಟ ಕೇಳಾರಿ ಸತ್ಯ ಪದಮಗೊಂಡಾ
ಮುತ್ತ ಉದಿಯಾಕ ತಾನು ಎದ್ದಿದಾನೋ

ದಿನಕರ ಉದಿಯಾಕ ವಿನಯದಿ ಪದಮಗೊಂಡಾ
ಘನ ಗುರು ರೇವಣಸಿದ್ಧಗ ನೆನದಿದಾನೋ

ವಿನಯದಿ ಪದಮಣ್ಣಾ ನೆನೆಯುದು ತಾನು ತಿಳಿದು
ಮನಿಗಿ ನಡಿದ ಬಸವಾ ಬಂದಿದಾನೋ

ಮನಿಗಿ ಬಂದ ಬಸವನಾ ಪದಮಣ್ಣ ತಾನು ಕಂಡು
ಆನಂದವಾಗಿ ಬಸವಾ ಅಂದಿದಾನೋ

ಕಂದನ ಬಿನನಹ ಕರುಣಿಸೋ ದಯಾದೇವಾ
ಇಂದು ಅವರೊಳಗ ಒಂದು ಹೊಲವನ್ನೋ

ಪಶುಪತಿ ಕೇಳಯ್ಯಾ ಹಸುಳನಾ ಬಿನ್ನಾ
ಹಸನು ಮಾಡುವೆ ನಿನ್ನ ಭೂಮಿಯನೋ

ವಶ ಮಾಡೋ ಎನಗ ಬಂದು ಹೊಲವನು
ಅನ್ನುತಾ ಬಸವನ ಪಾದಕ ತಾನು ಬಿದ್ದಿದಾನೋ

ಎರಗಿದ ಪದಮಗೊಂಡನ ಶಿವಾ ಹಿಡಿದು ಎತ್ತಿ
ಬರಿಸಿದ ಕಾಲ ಕಾಗದ ಬಸವಣ್ಣನೋ

ಹರಗಿ ಹಸನಮಾಡಿ ಬೆಳೆದು ಉಣ್ಣೋ ನೀನು
ಕರುಣಸಿ ಬಸವನು ನುಡದಿದ್ದಾನೋ

ಇತ್ತ ಆದಿಗೊಂಡಾನ ಮಕ್ಕಳೆಲ್ಲರೂ ಕೂಡಿ
ಮತ್ತ ಮಾಡ್ಯಾರೋ ತಮ್ಮೊಳಗ ಭೇದವನೋ

ಮೇನಿಯ ಭೂಮಿ ಹಸನ ಮಾಡುವನೆಂದು
ದಿಟ್ಟನಾಗಿ ನಡದಾನ ಪದಮಣ್ಣನೋ

ಕೊಡಲಿಯ ತಗೊಂಡು ಗಿಡಗಳನ್ನ ಕಡಿಯುತಾ
ತಡಿಯದೆ ಹುತ್ತಿನ ಬಳಿಗೆ ಬಂದಿದಾನೋ

ತಡಿಯದೆ ಹುತ್ತನ ಬಳಿಗೆ ಹೋಗಿ ಪದಮಗೊಂಡಾ
ಕಡದಾನೋ ಆಗ ಮುತ್ತಾಲ ಮರಗಳನೋ

ಮರವ ಕಡಿದನಾಗ ಪರಶಿವಾ ಮಾಡಿದಂಥಾ
ಪರಿಯೇನು ಅರಿಯನಂದೋ ಪದಮಣ್ಣನೋ

ಉರಗನ ಹುತ್ತಕ್ಕ ಸರಸಿ ಹಾಯಲು ಮಡಿಕಿ
ಧರಣಿ ಬಾಯಿ ಬಿಟ್ಟತಾಕ್ಷಣಕೋ

ನಾಲ್ಕು ಮಡಿಕೆಗಳನ ಸಾಲಾಗಿ ಹೊಡೆಯುವಾಗ
ಆಕಾಶಕ ಭೂಮಿ ತೆರದೀತ ಬಾಯಿಯನೋ

 

೪೩ನೇ ಸಂಧಿ :

ಯಾವ ಕಡಿಯಾದಿಂದ ಬಂದಿರಿ ಗುರುರಾಯಾ
ಏನು ಕಾರಣ ನೀನು ಬಂದಿದಿಯೋ

ಏನು ಕಾರಣಾ ನೀನು ಬಂದಿದಿ ಗುರುರಾಯ
ದೀನ ದಯಾ ಗುರುರೇವಣಸಿದ್ಧೇಶನೋ

ದೀನ ದಯಾ ಗುರು ರೇವಣಸಿದ್ಧೇಶಾ ಎನಗ
ತೋರೋ ನಿನ್ನ ಮಾರ್ಗವನೋ

ನಿನ್ನ ಮಾರ್ಗವ ಕೇಳಿ ಎಲ್ಲಾ ಭಕ್ತರು
ಆಗ ಧನ್ಯ ಧನ್ಯ ಅಂದಾರು ಸಭೆಯೊಳಗೋ

ನಾಲ್ಕು ಮಡಕಿ ಸಾಲಾಗಿ ಪದಮಣ್ಣ ಹೊಡಿಯಾಗ
ಆಕಾಶಕ್ಕೆ ಭೂಮಿ ಬಾಯ ತೆರದಿದ್ದಾವೋ

ರೇವಣಸಿದ್ಧನು ಹಾಕಿದ ಕುರಿಹಿಂಡ
ಭಯದಿಂದ ಮೇಲ ನುಗ್ಗಿ ಬಂದಿದಾವೋ

ಕುರಿಹಿಂಡ ಹೊಂಟದ್ದು ಬೆರಗಾದೋ ಪದಮಣ್ಣ
ಹರಾ ಹರಾ ಇದು ಏನಂಥ ಅಂದಿದಾನೋ

ಹಿರಿಯರು ಮಾಡಿದಂಥಾ ಹಿತದ ಭಂಡಾರವೇನೋ
ತೆರದಿನೋ ಅನ್ನುತಾ ಮರಗಿದ್ದಾನೋ

ಚಿಂತಿನಾಗಿ ಮರಗುತ ಪದಮಗೊಂಡಾ
ಹೊತ್ತ ತಂದೋ ಮುಳ್ಳ ಹೊರಿಗಳನೋ

ಕಟ್ಟಿದಾ ಹೆಂಟವನೊಟ್ಟಿ ಧರಣಿ ಬಾಯಿಗೆ
ಸುಟ್ಟಾನೋ ಅಗ್ನಿ ತಂದು ಕುರಿಗಳನೋ

ಸುಟ್ಟಂತಾ ಕುರಿಗಳು ಕರಿಕುರಿ ಆದಾವು
ಬಿಟ್ಟಂಥಾ ಕುರಿಗಳು ಎಲ್ಲಾ ಕುಂಗುರಿಯೋ

ಹುತ್ತವು ಬಿಟ್ಟಾವು ಕುರಿಯ ಹಿಂಡೆಲ್ಲ
ಮತ್ತ ಹರುಷನಾಗಿ ಹೊಂಟಿದ್ದಾವೋ

ಬಣ್ಣ ಸಾವಿರ ರೂಪ ಕುರಿಗಳನ್ನೆಲ್ಲ
ಕಣ್ಣಾಗಿ ಕಂಡಾನೋ ಪದಮಣ್ಣನೋ

ಕಣ್ಣಾರೆ ಕಂಡಾನೋ ಉಂಡಾಡು ಪದಮಣ್ಣಾ
ಚನ್ನಬಸವಗ ತಿಳಿಸಲು ಹೊಂಟಿದ್ದಾನೋ

ಚನ್ನಬಸವಗ ಕಾಯುತ ಪದಮಗೊಂಡ
ತನ್ನ ಮನದಾಗ ಮಾತು ತಿಳಿಸಿದ್ದಾನೋ

ಸ್ವಾಮಿ ಬಸವಾ ಕೇಳೋ ಭೂಮಿ ಹರದ ಬಿತ್ತು
ನೇಮದಿಂದಾ ನೋಡನು ಅಂದಿದಾನೋ

ಪ್ರೇಮದಿಂದಾ ನೋಡತಾರು ಉಪ್ಪರಗಿ ಏರಿ
ಅವರು ಹರಿದು ಭೂಮಿ ಬಿದ್ದಾಂಗ ಕಂಡಿದ್ದಾರೊ

ಚನ್ನಬಸವನು ಕುರಿಯ ಹಿಂಡ ಕಂಡು
ಮನ್ನಿಸಿ ಪದಮಗೊಂಡಾಗ ಹೇಳಿದ್ದಾರೋ

ಕುರಿಯ ಹಿಂಡ ಎಲ್ಲಾ ಚರಿಸುತ ನೀನು
ಇರೋ ಹೋಗೋ ಬೆನ್ನೀಲೆ ಅಂದಿದಾನೋ

 

೪೪ನೇ ಸಂಧಿ :

ಪರಶಿವಾ ಮಾಡಿದ ಪರನಿಧಿಯೋ ತಿಳಿ ಅಂದು
ವರಮಂತ್ರಿ ಬಸವಾ ಹೇಳಿ ಕಳುಹಿದ್ದಾನೋ

ಚನ್ನಬಸವನ ಮಾತವು ಕೇಳುತ
ಬೆನ್ನುಹತ್ತಿದ ಉಂಡಾಡಿ ಪದಮಣ್ಣನೋ

ಚಿನ್ನವು ಬಿಡದಾಂಗ ಆಯಿತು ನನಗೆಂದು
ಅನ್ನದ ಚಿಂತಿಯು ತಾನು ಮಾಡಿದ್ದಾನೋ

ಅನ್ನದ ಚಿಂತೆಯಿಂದಾ ಪದಮಗೊಂಡ ತಾನು
ಇನ್ನೇನು ಮಾಡಲಿ ಅಂತಾ ನುಡದಿದ್ದಾನೋ

ಕುರಿಗಳ ಹಿಂಡಿನಿಂದಾ ಮರಿಗಳನು ಎಲ್ಲಾ
ಕೊರಳಾಗ ಕಟ್ಟಿಕೊಂಡು ನಡದಿದ್ದಾನೋ

ಕುರಿಗಳ ಹಿಂಡಿನಿಂದಾ ಮರಿಗಳನು ಎಲ್ಲಾ
ಕೊರಳಾಗ ಕಟ್ಟಿಕೊಂಡು ನಡದಿದ್ದಾನೋ

ಮರಿಗಳನು ಸಲಹುದಕ ಪರಮಾತ್ಮ ತಾನು
ಕೊರಳಾಗ ಮಲಿಗಳ ಮಾಡಿದಾನೋ

ಏಳು ದಿವಸ ಆತ ಉಂಡಾಡು ಪದಮಣ್ಣಗ
ಕೂಳ ಇಲ್ಲದೆ ತಾನು ಮರಗಿದ್ದಾನೋ

ಕೂಳ ಇಲ್ಲದೆ ಮರಗುತ ಪದಮಗೊಂಡ
ಬಾಳಾಕ್ಷ ಪರಶಿವನಾ ನೆನದಿದಾನೋ

ಬಾಳಾಕ್ಷ ಪರಶಿವಾ ಪದಮಣ್ಣನ ಕಾಣುದಕ
ತಾಳಿದಾನೋ ಒಂದು ರೂಪವನೋ

ಮಟ್ಟಿದೋ ಆವಿಗಿ ಮೆತ್ತಿದೋ ಭಸ್ಮಾಂಗ
ಇಟ್ಟಾನೋ ರುದ್ರಾಕ್ಷಿ ಆಭರಣಾನೋ

ಸೃಷ್ಟಿಗಿ ಈಶ್ವರ ಗುರುವಾ ರೇವಣಸಿದ್ಧ
ಬಟ್ಟಲ ಹಿಡಿದು ಭಿಕ್ಷೇಕ ಬಂದಿದಾನೋ

ಬಂದಾನೋ ಗುರು ಅಲ್ಲಿ ಪದಮಗೊಂಡಾನ ಕಂಡು
ಅಂದಾನೋ ಧರ್ಮದ ಭಿಕ್ಷೆಯನೋ

ತಂದೋನೀದೋ ಅನ್ನಾ ಹಸವಿ ಆಗಿ ಬಂದಿನೋ
ಇಂದು ನೀನೇ ಗತಿ ಅಂತಾ ನುಡದಿದ್ದಾನೋ

ಇಂಥ ಶಬ್ದವು ಕೇಳುತ ಪದಮಗೊಂಡ
ಎಂಥ ಕಾಲವು ಒದಗಿತು ಅಂದಿದಾನೋ

ಊರಿಲ್ಲಾ ನೀರಿಲ್ಲಾ ಮನಿ ಇಲ್ಲಾ ಆಡಿನ್ಯಾಗ
ಸಾರಿ ಭಿಕ್ಷಾವ ಕೇಳುದು ಉಚಿತವೇನೋ

ಏಳು ದಿವಸ ಆಯಿತು ಕೂಳ ಇಲ್ಲದ
ನನಗಪ್ಪ ಬವಳ್ಯಾ ಶಂಖರನ ನೆನಿಯುತ ನಡಿದಾನೋ

 

೪೫ನೇ ಸಂಧಿ :

ಸತ್ಯುಳ್ಳ ಧರ್ಮಾರ ಮಹಿಮಾವು ತಮ್ಮಾ
ಚಿತ್ತಗೊಟ್ಟ ಕೇಳರಿ ಮಾರ್ಗವನೋ

ಚಿತ್ತವಿಟ್ಟ ಕೇಳಾರಿ ಮಹಿಮಾವು ತಮ್ಮಾ
ನಿತ್ಯಕಾಲ ಸಲುವಾದ ಗುರುರಾಯನೋ

ಬವಳ್ಯಾ ಶಂಖರಾ ಪದಮಣ್ಣನ ತಾಪ ನೋಡಿ
ವ್ಯಾಳ್ಯಾ ವ್ಯಾಳ್ಯಾಕ ಉಣ್ಣುವಾವ ಅಂದಿದಾನೋ

ಮೃತ್ಯುವು ನಿನಗಿಲ್ಲಾ ಎತ್ತ ಹೋದರೂ ಕೇಡಿಲ್ಲಾ
ಹಂತೀಲೆ ಬಾ ಅಂತ ಕರದಿದ್ದಾನೋ

ಹಂತೀಲೆ ಬಾ ಎಂದು ಗುರುರೇವಣಸಿದ್ಧ
ಚಿಂತಿಯ ಮಾಡಬ್ಯಾಡೊ ಅಂದಿದಾನೋ

ಚಿಂತಿ ನಿನಗ ಬ್ಯಾಡಾ ಅನವುತ ಗುರುರಾಯಾ
ಹಂತೇಲಿದ್ದ ಗುಂಡುಗೊಪ್ಪರಿಯಾ ಕೊಟ್ಟಿದ್ದಾನೋ

ಹಂತೀಲೆ ಇದ್ದ ಗುಂಡಗೊಪ್ಪರಿ ತೊಡಿಯಾಗಿಟ್ಟು
ಹೆತ್ತ ಕುರಿಯಾ ಹಾಲು ಹಿಂಡಿದಾನೋ

ಹಿಡತಂದು ಕುರಿಗಳನ ಹಿಂಡಿ ಕೊಪ್ಪರಿಗ್ಯಾಗ
ಅಡಿಗಿ ಮಾಡಿ ಗಿಣ್ಣಾವು ಉಣ್ಣಂದಾನೋ

ಮೃಡಮೂರ್ತಿ ರೇವಣಸಿದ್ಧ ನೆಲಕ ನೀರವಹಾಕಿ
ಪಾವಡದಲ್ಲಿ ಗಟ್ಟಿ ಮಾಡಂದಾನೋ

ಗುರುವಿನಾ ವಚನಾ ಕೇಳಿ ಹರುಷಾದೋ ಪದಮಣ್ಣಾ
ಯಾರು ಯಾತಕ ಬೇಕು ಅಂದಿದಾನೋ

ಗುಟ್ಟ್ಯಾದ ಗಿಣ್ಣವು ನೆಲದಮ್ಯಾಗ ಇಟ್ಟಾನೋ
ಕೊಟ್ಟಾನೋ ಗುರುವಿಗೆ ಎಡಿಯಾ ಪದಮಣ್ಣನೋ

ಸೃಷ್ಟಿಗಿ ರೇವಣಸಿದ್ಧ ಶಿವಾರ್ಪಿತವ ಮಾಡಿ
ಹೊಟ್ಟೆ ತುಂಬ ತಾನು ಉಂಡಿದಾನೋ

ಉಣ್ಣದ ಉಪವಾಸ ದಣಿಯಲಾರದಂಗ
ರೇವಣಸಿದ್ಧ ಬೋದವು ಮಾಡಿದ್ದಾನೋ

ಅಗ್ನಿ ಇದ್ದಲ್ಲಿ ನೀನು ಅಡಗಿಯ ಮಾಡಿ
ಉಣ್ಣೆಂದು ಪದಮಣ್ಣಗ ತಿಳಿಸಿದ್ದಾನೋ

ಭಾರ್ಗವ ದೇವನು ಬೋಧಿಸಿ ಹೊಂಟಾನು
ಹಿಗ್ಗಿದಾನು ಉಂಡಾಡು ಪದಮಣ್ಣನೋ

ಗುರುವಿನಾ ವಚನಾ ಕೇಳಿ ಉಂಡಾಡು ಪದಮಣ್ಣಾ
ಕುರಿಗಳನ ಕಾಯುತ ತಾನು ಇರತಿದ್ದನೋ

 

೪೬ನೇ ಸಂಧಿ :

ಗುರುವಿನಾ ವಚನಾ ಕೇಳಿ ಉಂಡಾಡು ಪದಮಗೊಂಡಾ
ಕುರಿಗಳನು ಕಾಯುತ ತಾನು ಇರುತಿದ್ದನೋ

ಕುರಿಗಳನ ಹೊಡಿಯುತ ಮರಿಗಳನ ಎತ್ತುತಾ
ಬಿರಗಾಳಿ ಸಹಿಸುತಾ ಇರುತಿದ್ದನೋ

ಕೆರಿ ಭಾವಿ ಹಳ್ಳ ಕೊಳ್ಳ ಶರಧಿಯ ದಂಡೀಲೆ
ಕುರಿಗಳನು ನಿಲ್ಲಿಸುತಾ ಇರುತಿದ್ದನೋ

ಬಂದಾನ ಒಂದು ದಿವಸ ಉಂಡಾಡು ಪದಮಗೊಂಡಾ
ಹಸಿವೆಯಿಂದಾ ತಾನು ಬಳಲಿದಾನೋ

ಹಸಿವೆಯಿಂದಾ ಬಳಲುತಾ ಗುರುವಿನಾ ನೆನಿಯುತಾ
ದಶದಿಕ್ಕೆಲ್ಲಾ ಅಗ್ನಿಯಾ ನೋಡಿದಾನೋ

ಬೆಟ್ಟಾವ ಏರಿದಾನೋ ದಿಟ್ಟಿಸಿ ನೋಡಿದಾನು
ಪಟ್ಟಣಾ ಇಲ್ಲ ಊರಿಲ್ಲಾ ಅಂದಿದಾನೋ

ಪಟ್ಟಣ ಇಲ್ಲ ಊರಿಲ್ಲ ಅನುವುತ ಪದಮಣ್ಣಾ
ಕೆಟ್ಟ ರಾಕ್ಷಸಿಯಾ ಮನಿಯಾ ಕಂಡಿದಾನೋ

ಕೆಟ್ಟ ರಾಕ್ಷಸಿಯಾ ಕಾಣುತ ಪದಮಣ್ಣಾ
ಅಟ್ಟು ಉಣ್ಣುವ ಹೋಗಿಯಾ ಕಂಡಿದಾನೋ

ಹೊಗಿಯಾಗು ಕಾಣುತ ಉಂಡಾಡು ಪದಮಣ್ಣಾ
ಹೋಗಬೇಕಂತ ನಡದಿದ್ದಾನೋ

ದೆಗುಡುತ ಏಳುತ ಬೆದರುತ ಹೋಗಿದಾನು
ಅಗಣಿತ ರಾಕ್ಷಸಿಯ ಮನಿಯ ಕಂಡಿದ್ದಾನೋ

ಅಗಣಿತವಾಗ ರಾಕ್ಷಸಿ ಮನಿಯಾ ಕಂಡು
ಮಗಳಾಗಿ ಇದ್ದ ಚನ್ನಮ್ಮನ ಕಂಡಿದ್ದಾನೋ

ಹೆಣ್ಣಿನಾ ರೂಪವು ಕಣ್ಣಾರೆ ಕಂಡಾನು
ಬಣ್ಣಿಸಿ ಕರೆದು ಬೆಂಕಿಯಾ ಬೇಡಿದ್ದಾನೋ

ಅನ್ನವಿಲ್ಲದೆ ನಾನು ಬಳಲುವೆ ಸದ್ಯ ಈಗ
ಅಗ್ನಿಯಾ ಬೇಗದಿಂದ ಕೊಡಿರಿ ಅಂದಾನೋ

ಬೆಂಕಿಯ ಒಯಿದು ನಾನು ಗಿಣ್ಣಾವು ಕಾಸಿ
ಸಾಕಾಗುವ ತನಕ ಉಣ್ಣುವೆನೋ

ಬೇಗದಿಂದ ನೀನು ಅಗ್ನಿಯಾ ಕೊಟ್ಟರೆ ಹಿಗ್ಗುತಾ
ನಿನಗ ಗಿಣ್ಣಾ ತರುವುವೆನೋ

ಕುರಿಯಾ ಹಾಲನ್ನು ಕರೆದು ಇರದು ಗಿಣ್ಣಾವು
ಕಾಸಿ ಹೊರುವೆನೋ ಎನ್ನ ಆತ್ಮವನೋ