೪೭ನೇ ಸಂಧಿ :

ಅಕ್ಕರದಿಂದಾ ನೀನು ಬೆಂಕಿಯಾ ಕೊಟ್ಟರ
ಹರಣಾ ನಂದು ಉಳಿಯುವದು ಅಂದಿದಾನೋ

ಇಂಥ ಶಬ್ದವ ಕೇಳುತ ಆಗ ಚನ್ನಮ್ಮಾ
ಸಂತೋಷಾಗಿ ಮುಂದಕ ಕರದಿದ್ದಾಳೋ

ನಿನಗೆ ಅಗ್ನಿಯನ್ನು ವಿನಯದಿ ಕೊಡುವೆನೋ
ನನಗಿಷ್ಟು ಹಾಲು ತಂದುಕೊಂಡು ಅಂದಾಳೋ

ಸನುಮಂತ ಮಾಡಿ ಬೆಂಕಿಕೊಟ್ಟು ನುಡಿದಾಳು
ಜನನಿ ರಾಕ್ಷಸಿ ಬರುವ ಹೊತ್ತವನೋ

ರಕ್ಕಸಿ ಬಂದರೆ ಗಕ್ಕಾನೋ ಕೊಂದಾಳೋ
ಸಿಕ್ಕದೆ ನೀನು ಬೇಗ ಹೋಗುಂದಾಳೋ

ಮಕ್ಕಳ ಆಟವಲ್ಲಾ ಮನದ ಚೆಲ್ಲಾಟವಲ್ಲಾ
ಚಕ್ಕನೆ ಕಳುಹಿಸಿ ತಾನು ಕುಂತಿದ್ದಾಳೋ

ಬಂದಾನೋ ಪದುಮಣ್ಣಾ ನೊಂದು ಕುರಿಗಳ
ಬದಿಯಲಿ ಒಂದೊಂದ ಕುರಿಗಳನ ಹಿಂಡಿದಾನೋ

ಒಂದೊಂದ ಕುರಿಯಾ ಹಿಂಡುತ ಪದಮಣ್ಣಾ
ಚಂದದಿ ಗಿಣ್ಣವ ಕಾಸಿ ಉಂಡಿದಾನೋ

ಚಂದದಿ ಗಿಣ್ಣವು ಕಾಸಿ ಉಣವುತ ಪದಮಣ್ಣಾ
ಕಂದು ಗೊರಳಾನ ತಾನು ನೆನದಿದ್ದಾನೋ

ಉಂಡು ತಆನು ಪದಮಣ್ಣಾ ತಕ್ಕೊಂಡ ಬಂದ ಹಾಲು
ಉದ್ದಂಡ ರಾಕ್ಷಸಿಯ ಮನಿಗಿ ಅವನೋ

ಕಂಡಾಳು ಚನ್ನಮ್ಮಾ ತಕ್ಕೊಂಡು ಹಾಲು ಕಾಸಿ
ಉಂಡಾಳು ಮನದಣಿ ಚನ್ನಮ್ಮನೋ

ಮನದಣಿಯಹಾಂಗ ಉಂಡು ಮುದದಿಂದಾ
ಚನ್ನಮ್ಮಾ ನೆನಿದಾಳೋ ತಾನು ಒಂದು ಯುಕ್ತಿಯನೋ

ಉಂಡಾಡು ಪದಮಣ್ಣ ಹಿಂಡವ ಬಿಟ್ಟು
ಭಂಡ ರಾಕ್ಷಸಿಯ ಮನಿಗಿ ಹೋಗಿದ್ದಾನೋ

ಭಂಡ ರಾಕ್ಷಸಿ ಬಂದು ಉಂಡಾಡು ಪದಮಣ್ಣಗ
ಖಂಡಿತ ಕೊಂದಾಳ ಅಂದಾಳು ಚನ್ನಮ್ಮನೋ

ವಣಿಗುಡಿ ರಕ್ಕಸಿ ಒಂದು ತಿಂದಾಳೆಂದು
ಅನುಮಾನ ಯಾಕ ಇದಕ ಅಂದಿದಾಳೋ

ಎಲ್ಲೆಲ್ಲಿ ಕಾಣದಾಂಗ ಒಳ್ಳೆಯ ಜಾಗವ ನೋಡಿ
ಹಲ್ಲಿಯಾ ರೂಪಮಾಡಿ ನಿಲ್ಲಿಸಿದ್ದಾಳೋ

 

೪೮ನೇ ಸಂಧಿ :

ಸತ್ಯವಂತರ ಮಹಿಮಾ ಚಿತ್ತಿಟ್ಟ ಕೇಳಿರಿ ನೀವು
ಇತ್ತ ಕಥಿಯಾ ಬಿಚ್ಚಿ ಹೇಳುವೆನೋ

ಎಲ್ಲೆಲ್ಲಿ ಕಾಣದಹಾಂಗ ಒಳ್ಳೆಯ ಜಾಗವ ನೋಡಿ
ಹಳ್ಳಿಯ ರೂಪ ಮಾಡಿ ನಿಲಿಸಿದ್ದಾಳೋ

ಬಲ್ಲಿದ ರಕ್ಕಸಿ ಬಂದರ ಕಾಣದಾಂಗ ಹಲ್ಲಿಯ
ಮಾಡಿ ಪದಮಣ್ಣನ ಮುಚ್ಚಿದ್ದಾಳೋ

ಏಳು ಕೊಪ್ಪರಿಗಿ ಅನ್ನಾ ಏಳು ಭಾವಿ ನೀರಾ
ವ್ಯಾಳ್ಯಾ ಆಯಿತಂತ ಎಡಿಯ ಮಾಡಿದ್ದಾಳೋ

ವ್ಯಾಳ್ಯಾವು ಆಯಿತಂತ ಎಡಿಯಮಾಡಿ ಚನ್ನಮ್ಮ
ಕೂಳ ರಕ್ಕಸಿಯ ಹಾದಿ ಕಂಡಿದ್ದಾಳೋ

ಕಾಳ ರಾಕ್ಷಸಿ ಆಗ ಹೆಣಗಳನ ಹೊತ್ತುಕೊಂಡ
ಧೂಳ ಹಾರಿಸುತ ಅಲ್ಲಿಗೆ ಬಂದಿದಾಳೋ

ಎರಡು ಹೆಣಗಳನು ಎರಡು ಕೈಯಾಗ
ಹಿಡಿದು ಭರದಿಂದಾ ಬಾಯಿ ತೆರಿದು ಬಂದಿದಾಳೋ

ಐದು ಹೆಣಗಳನು ತಂದು ಕೊಯಿದು ಮನ್ಯಾಗ ಇಟ್ಟು
ಬೈಯುತ ಮಗಳನ ಒದರಿದ್ದಾಳೋ

ಬೈಯುತ ಮಗಳನ್ನ ಐದು ಕೊಪ್ಪರಗಿ ಅನ್ನಾ
ಐದು ಭಾವಿಯ ನೀರಾ ಕುಡದಿದ್ದಾಳೋ

ಹೆಣಗಳನ್ನು ಹೊತ್ತು ಹೊತ್ತು ದಣಿದ ರಕ್ಕಸಿ
ಆದ ಬಣ್ಣದ ಮಾತವ ಆಡಿದ್ದಾಳೋ

ಬಣ್ಣದ ಮಾತನ ಆಡುತ ರಕ್ಕಸಿ ಆಗ ಎನ್ನ
ಮನಿಗಿ ಬಂದವನ ತೋರಿಸ ಅಂದಾಳೋ

ಎನ್ನ ಮನಿಗಿ ಬಂದವನ ತೋರಿಸ ಚನ್ನಮ್ಮ
ಕಣ್ಣು ತುಂಬಾ ನಾನು ಅವನ ನೋಡುವೆನೋ

ಎಂದಿಗಾದರೂ ಅವನ ಕೊಲ್ಲುದಿಲ್ಲ ನನ್ನಾಣೆ
ತಂದು ತೋರಿಸ ಚನ್ನಮ್ಮಾ ಅಂದಿದಾಳೋ

ಬಂದವನು ಯಾರೆಂದು ಸಂಶವಿಲ್ಲದೆ ಬಂಧಿಸಿ
ಮಗಳನ್ನ ರಕ್ಕಸಿ ಕೇಳಿದ್ದಾಳೋ

ದುರಳ ರಕ್ಕಸಿ ತಾಯಿ ಆದಿಯ ನೀನು ನಾನಮ್ಮ
ಪರರೆನ್ನ ಮನಿಗಿ ಬರುದಿಲ್ಲ ಅಂದಿದಾಳೋ

ನೆರೆಯಿಂದಾ ನಿನ್ನ ಭೀತಿಗಿ ಹರದಾರಿಯಂದಲಿ
ನರರೆಲ್ಲ ಅಂಜಿ ಬರುದಿಲ್ಲ ಅಂದಿದಾಳೋ

 

೪೯ನೇ ಸಂಧಿ :

ಪೂರ್ವದ ಗೆರಿ ತಮ್ಮಾ ಪುರುಹಿತರಿಗೆ ಗೊತ್ತಿಲ್ಲಾ
ನರಮನುಜರ ಗತಿ ಪಾಡವೇನೋ

ನರಮನುಜರ ಗತಿ ಪಾಡವೇನೋ ತಮ್ಮಾ
ಪರಮಾತ್ಮಗ ವಿಧಿಯು ಕಾಡಿಲ್ಲೇನೊ

ತಾಯಿಗೆ ಉತ್ತರಾ ಕೊಡುವುತ ಚನ್ನಮ್ಮಾ
ಮಾಯಾಗಿ ಅಡಗಿದವನ ನೋಡುತಲೋ

ಮಾಯನಾಗಿ ಅಡಗಿದ ಪದಮಗೊಂಡನ ನೋಡಿ
ಕಾಯುತ ಚನ್ನಮ್ಮಾ ಎಬ್ಬಿಸಿದ್ದಾಳೋ

ಕಾಯುತ ಚನ್ನಮ್ಮಾ ಎಬ್ಬಿಸಿ ಪದಮಣ್ಣನ
ಉಪಾಯ ಒಂದು ಮಾಡೂನು ಅಂದಿದಾಳೋ

ದುರುಳ ರಕ್ಕಸಿ ಆಗ ಮಲಗುದನು ನೋಡಿ
ಭರದಿಂದಾ ಕುಣಿ ಎಂದು ತಗದಿದ್ದಾರೋ

ಚನ್ನಮ್ಮಾ ಪದಮಗೊಂಡಾ ಇಬ್ಬರು ಕೂಡಿ
ಆಗ ಸೊನ್ನಿ ಮಾಡುತ ಕುಣಿಯಾ ತಗದಿದ್ದಾರೋ

ಭರದಿಂದ ಕುಣಿಯಾವು ತಗಿದು ಮ್ಯಾಲ ಬಂದು
ದುರಳ ರಕ್ಕಸಿನ ಕೆಡವಿದ್ದಾರೋ

ದುರಳ ರಕ್ಕಸಿನ ಅವರು ಕೆಡವಿ ಬೇಗದಿಂದಾ
ಎರಗೊಡದಾಂಗ ಕಲ್ಲು ಮಣ್ಣು ಹಾಕಿದ್ದಾರೋ

ರಕ್ಕಸಿ ಪ್ರಾಣವು ಬಿಡುವ ಸಮಯದೊಳಗ
ಬಿಕ್ಕಿ ಬಿಕ್ಕಿ ಮಾತವ ಆಡಿದ್ದಾಳೋ

ಬಿಕ್ಕಿ ಬಿಕ್ಕಿ ಮಾತಾಡುವ ರಕ್ಕಸಿ ಅವರಿಗೆ
ಧಿಕ್ಕರಿಸಿ ಕುರಿಗಳನ ನಾನು ನೋಡುವೆನೋ

ಧಿಕ್ಕಾರ ಮಾಡಿ ರಕ್ಕಸಿ ಕುರಿಯಾ ಹಿಂಡಕ
ನಾನು ಶಿಕ್ಷ ಮಾಡದೆ ಇರಲಾರೆ ಅಂದಿದಾಳೋ

ಏಳು ಕೊಪ್ಪರಿಗೆ ಅನ್ನಾ ತಿನುವಂಥಾ ರಕ್ಕಸಿ
ತೋಳ ಆಗಿ ಧರಣಿಮ್ಯಾಲ ಜನಿಸಿದ್ದಾಳೋ

ಏಳುತ ಬೀಳುತ ಕುರಿಗಳ ತಿನ್ನುತ
ಕೂಳ ರಕ್ಕಸಿ ಧರಣಿ ಒಳಗ ಮೆರಿದಿದ್ದಾಳೋ

ದುರಳ ರಕ್ಕಸಿನಾ ಹೊಡಿದು ಉಂಡಾಡು ಪದಮಗೊಂಡಾ
ಕುರಿಗಳ ನೆನಪ ಆಗ ಮಾಡಿದ್ದಾನೋ

ಅಲ್ಲಿಂದಾ ಕುರಿಗಳ ಬಳಿಗೆ ಇಬ್ಬರೂ ಬಂದು
ಮೆಲ್ಲ ಮೆಲ್ಲನೆ ಹಾಲು ಕಾಸಿ ಉಂಡಿದ್ದಾರೋ

 

೫೦ನೇ ಸಂಧಿ :

ಸರವರ ಮುಂದ ಗುರುವಿಗೆ ನಾವು ಶರಣಾ
ಮಾಡತೀವರಿ ಸರುವ ಸಂಪತ್ತ ಕೊಡುವಂಥಾ ಗುರು ಹೊಂದರಿ

ತಿಳಿದ ನೋಡಿ ನಡಿಶೆಪ್ಪ ಯಾರ ಅನುಮಾನರಿ
ವ್ಯಾಳ್ಯಾ ವ್ಯಾಳ್ಯಾಕ ಗುರುವಿನಾ ನೆನೆದರ ಮುಕ್ತಿಯಾ ದೊರೆಯುದಲ್ಲಿ

ಗುರು ರೇವಣಸಿದ್ಧ ಅಂತಾ ಮಾಡ್ಯಾನ ಸ್ಥಾಪನಾರಿ
ಧರಿಯೊಳಗ ಜಗದ್ಗುರು ಅನಿಸಲಿಲ್ಲವೇನರಿ

ಧೃಡ ಭಕ್ತರನ ನೋಡಲಾಕ ಕಡಿ ಸೋಮವಾರ
ಗುಡಿಯಿಂದ ಬರತಾವರಿ ಅಡ್ಡ ಹೋಗಿ ದಡ್ಡರಾಗಿ ಅಹಂಕಾರ ಬ್ಯಾಡರಿ

ಅವರ ಮುಂದ ಅಹಂಕಾರ ಮಾಡಿದೆರಿಗೆ ಆಗುವ ದುರಮರಣಾರಿ
ಯಾರದೇನಂತ ತಿರುಗ ಬ್ಯಾಡರಿ ಧ್ಯಾನವ ಮಾಡರಿ

ವರ್ಷದಾಗ ಮೂರು ಸಾರೆ ಭಕ್ತರ ಭಾವಕ ಬರತಾನರಿ
ಹರ್ಷಾಗಿ ಗರವ ಬಿಟ್ಟರ ಸಂಪತ್ತ ಕೊಡಾವರಿ

ದೀವಳಗಿ ಹಬ್ಬದಾಗ ದೇವಾಧಿ ದೇವರಗಿ
ಗುರುವಾ ಆದಾವರಿ ಸ್ವಾರಿ ಏಳೂದು ನಿಮಗ

ಎಲ್ಲಾರ ಗೊತ್ತ ಇಲ್ಲೇನರಿ
ಚತುರ್ಥಿ ದಿವಸ ಭೆಟ್ಟಿ ಆದರ ಉದ್ದರಣಾ ಆಗತೀರಿ

ಕಡಿದಾಡಿ ಬಡಿದಾಡಿ ಅವನ ಮುಂದೆ ನಡದರ ಕೆಟ್ಟ ಹೋಗತೀರಿ
ಬೇಡಿದ್ದಾ ಕೊಡಾವ ನಮ ಗುರುವಾ ನೋಡಿ ಮಾಡರಿ

ದಿಡ ಭಕ್ತಿಯಿಂದಾ ನಿಮಗ ಭಯಾ ಇಲ್ಲರಿ
ಕರ್ತು ಗುರುರೇವಣಸಿದ್ಧ ನಮ್ಮ ಮ್ಯಾಲ ದಯಾರಿ

ಗುರು ಅಂಬು ಅರವಿನಾ ಕಾಯಾ ಮರಿಲಾರದ ಇರಬೇಕೊ
ಸಪ್ತ ಸಮುದರ ನೀರ ಒಂದು ಗುಟುಕು ಮಾಡುವಂಥಾ

ಅಗಸ್ತ್ಯ ಋಷಿ ಪಾದಕ ಬಿದ್ದು ಮೋಕ್ಷ ಹೋದ್ಯಾನರಿ
ಶಂಕರಾಚಾರ್ಯ ಚಂದ್ರಮೌಳಿಯ ಲಿಂಗವ ಪಡಿದಾನರಿ

ಹರಾ ಮನಿದರ ಗುರು ಕಾಯಾಂವಾ ವೇದವಾಕ್ಯವರಿ
ದೊಡ್ಡವರಂಥಾ ಹೆಡ್ಡರಾಗಿ ಊರಾಗ ತಿರಗಾಡಬ್ಯಾಡರಿ

ದೊಡ್ಡ ಗಂಡಾಂತರ ನಿಮಗ ಬರುವದು ನೋಡರಿ
ದುಡ್ಡ ಇದ್ದವರ ಸೊಕ್ಕಾ ಗುರು ಮುರದದ್ದು ಸುಳ್ಳೇನರಿ

ಬಡ್ಡಿ ಬೇರ ಕಿತ್ತಾಂಗ ಅವರಿಗಿ ಆಗಿಲ್ಲೇನರಿ
ಗುರುವಿನಾ ಮಹಿಮಾ ಹಿಂಗ ಅತಂಥಾ ಸಾರಿ

ಹೇಳುರೀವರಿ ಅರುಹಿಕೊಂಡ ಗುರುವಿನಾ
ನೆನದರ ಆಗಾವ ಪ್ರಸನ್ನರಿ

 

೫೧ನೇ ಸಂಧಿ :

ಕೆಂಡದಂಥ ಗುರುವಿನ ಮ್ಯಾಗ ನಂಬಿಗಿಟ್ಟ ನಡಿದರ
ಕಂಟಕ ಬಯಲ ಮಾಡಾಂವಾ ರೇವಣಸಿದ್ಧಾನೋ

ಎಷ್ಟೋ ಮಂದಿ ಬಾಳ ಕೆಟ್ಟ ನಡತಿದಿಂದ ನಡುತಾರು
ಹೊಟ್ಟೆಕಿಚ್ಚು ಮಾಡಿದರ ಫಲಾ ಏನ ಅಂದಿನೋ

ಸೃಷ್ಟಿ ಒಳಗ ಹಿಂಥಾಮಂದಿ ಆಗಿ ಬಂದರ ಪಾವನ
ನಿಷ್ಟಾವಂತರಿಗೆ ಮಾನ ಮರ್ಯಾದೆ ಇಲ್ಲ ಅಂದಿನೋ

ಎಷ್ಟ ಹೇಳಿದರ ತೀರೂದಿಲ್ಲಾ ನಮ್ಮ ಮಂದಿಗಿ
ಮಾಡೂದೇನು ದುಷ್ಟರನ ನಾಶ ಮಾಡಾವ ಗುರುರೇವಣಸಿದ್ಧನೋ

ಕಂಡದ್ದ ಆಡಿ ಮಂಡಲಕ ಬೆಂಕಿ ಹಚ್ಚಕೊಂಡ
ಇವರು ಪುಂಡರಾಗಿ ದಂಡ ಶಿಕ್ಷಾ ಕೊಟ್ಟಬಂದರ ಕೇಳಿರಿ ಅಂದಿನೋ

ಖಂಡಿತ ಮಾತ ನಿಮಗ ನಾವು ಶರಣಾ ಮಾಡಿ
ಹೇಳತೀವರಿ ದಂಡಿಶಿರಾಂಗ ಯಾಕ ಮಾಡುದ ಏನ ಅಂದಿನೋ

ಸರವರಿಗೆ ಗುರು ದೊಡ್ಡಾವ ನೋಡರೆಪ್ಪಾ ಆದಿ ತಾನು
ಮರಿಯಲಾರೆ ಹೊಂದರಿ ಅವನ ಪಾದಕ ಅಂದಿನೋ

ನಿಮ್ಮ ಸಂಕಟಾ ದೂರ ಮಾಡಾವ ಗುರು ತಾನು
ಬೇಸರ ಹಮ್ಮ ಅಹಂಕಾರ ಬಿಟ್ಟ ನಡಿರಿ
ಅವನ ಧ್ಯಾಸಕಂದಿನೋ

ಹರ ಮುನಿದರ ಗುರುಕಾಯವಪ್ಪ
ದೇಶಕ್ಕ ಗುರುತಿಲ್ಲದಾಂಗ ಬೀಳಬ್ಯಾಡರಿ
ಕರ್ಮದ ಮಡಕ ಅಂದಿನೋ

ಗುರುವಿಗಿ ನಿಂದಾ ಮಾಡಿ ನೀವು ನಾಯಿ ನರಿ ಜಲ್ಮಾ
ತಾಳಬ್ಯಾಡರಿ ಅರವ ಬಿಟ್ಟ ಮರುವಿಗಿ ಬೀಳೂದ ಯಾಕಂದಿನೋ

ಸರಿಬರೂದಿಲ್ಲ ಜ್ಞಾನವಂತಿರಿಗಿ ನಾಮ
ಹಸರಾದೋ ತಮ್ಮಾ ಗುರುರೇವಣಸಿದ್ಧಾ ಬಲ್ಲಾ ಕೇಳರಿ ಅಂದಿನೋ

ಯುಗಾದಿ ಪಾಡ್ಯಾ ಗುರುಹೊಂಡತಾನು ಸಾಗಿ
ಭಕ್ತರ ಮನ ನೋಡಲಾಕ ಆಗ ನೋಡಿರಿ ಅವನ ರೂಪ
ಬಂಗಾರ ವರ್ಣ ಅಂದಿನೋ

ಆ ಬಂಗಾರ ರೂಪ ನೋಡಿದವರ ಜಲ್ಮಾ ಪಾವನ
ನಿಮ್ಮ ಪಾಪ ಬಿಟ್ಟು ಹೋಗುದು ತಿಳಿರಿ ಅಂದಿನೋ

ಹಿಂಥಾ ಗುರು ಇದ್ದಮ್ಯಾಲ ಚಿಂತಿ ಇಲ್ಲದೆ ದುಡಿರೆಪ್ಪ
ಅಂತ್ಯಕಾಲಕ ಅವನಿಂದಾ ಸುಖಾದೊದು ಅಂದಿನೋ

ಪಾಡ್ಯ ದಿವಸಾ ಗುರುವಿನಾ ಮರೆತರ ಕಾಡಬಾರದ
ಕಾಡತಾನರೆಪ್ಪ ಮಾಡಬಾರದ ಮಾಡಿ ಬಿಡತಾನ ತಿಳಿರಿ ಅಂದಿನೋ

ನಡೆ ನುಡಿ ಎರಡು ತಪ್ಪಿದರ ಕೇಡ ನಿಮಗ
ಬರುದು ಕಾಯಮಾ ಸಾಡೇ ಸಾತಕ ಕರ್ಮಕ ಬೀಳುವದ್ಯಾಕ ಅಂದಿನೊ

 

೫೨ನೇ ಸಂಧಿ :

ಮೂಲ ಮಾತಾ ನಿಮಗ ನಾವು ಕಾಲಬಿದ್ದ ಹೇಳತೀವರೆಪ್ಪ
ಛಲಾ ಬಿಡರಿ ಕುಡಕತಾನಾ ಕೇಳರಿ ಅಂದಿನೋ

ಕುಲಾ ಕೆಡಸಿಕೊಂಡ ಆಡುದ ರೀತಿ ನಮಮದು
ಅಲ್ಲರೆಪ್ಪ ಫಲಾ ಸಿಗುದಿಲ್ಲಾ ನಿಮಗ ದೂರುದು ಕರ್ಮ ಅಂದಿನೋ

ಬಲ್ಲವರಂತ ತಿಳಿದ ನಡದೀರಿ ಆಗಿ ಕಲ್ಪನಾ ತಮ್ಮಾ
ಎಲ್ಲಾರಿಗಿ ಗುರು ದೊಡ್ಡಾವ ತಿಳಿರಿ ಅಂದಿನೋ

ಹೇಳೂದು ಕೇಳೂದು ನಿಂತ ಹೋತರಿ ಗುಳೇ ಕಟ್ಟುಕಾಲ
ಬಂತರಿ ವ್ಯಾಳ್ಯಾ ಹಿಂತ ಜನರಿಗಿ ಬಂದರ ಏನಂದಿನೋ

ಗುರು ಅಂದರ ಕೊರಗುದು ಜನನ ಮರಣಾ ಬೇರಾ
ಗುರು ಅಂದರ ಸರುವದು ಭವರೋಗ ಅಂದಿನೋ

ಗುರು ಅಂದರ ಹೋಗುದರಿ ಕಂಟಕಾ ತಾನ ಎಲ್ಲಾ
ಗುರು ಅಂದರ ಮೋಕ್ಷ ಮಾರ್ಗ ದೊರದು ಅಂದಿನೋ

ಗುರು ಅಂದರ ಸಿಗುದು ಬುದ್ಧಿ ಜ್ಞಾನವು ತಮ್ಮಾ
ಗುರು ಅಂದರ ಏರೂದು ಮನಿಯತಾನ ಅಂದಿನೋ

ಪ್ರತಿ ವರ್ಷಾ ನೀವು ಎಲ್ಲಾ ಜಾತ್ರಿ ಮಾಡತೀರಿ
ಭಕ್ತಿಯದಿಂದಾ ಖಾತ್ರಿ ಆಗೇತಿ ಗುರುವಿನಾ ಮಹಿಮಾ ದೊಡ್ಡದು ಅಂದಿನೋ

ಜಾತ್ರಿ ಬಿಟ್ಟರ ನಿಮಗ ಬರುವರು ಬರಗಾಲ ಸೂಚರೆಪ್ಪ
ಕಾರ್ಯ ಮಾಡಿದರ ಗುರು ಆಗುವಾ ಪ್ರಸನ್ನ ಅಂದಿನೋ

ಜಗಳದೊಳಗ ಮಹಿಮಾಕಾರ ಅನಿಸಿಲ್ಲೆನೋ
ಗುರುರಾಯಾ ಮಗನಾದ ವೀರಶೈವ ಧರ್ಮಾ ಸ್ಥಾಪನಾ ಅಂದಿನೋ

ಜಗದ್ಗುರು ಅಂತಾ ಬಿರುದಾ ಪಡಿದಾನರಿ ನಮ್ಮ ಗುರು
ಜಗದೊಳಗೆ ಝೆಂಡಾ ಮರೆಯುದು ಕೇಳರಿ ಅಂದಿನೋ

ನಿನ್ನ ವರ್ಣಾ ಎಷ್ಟ ಮಾಡಿದರ ತೀರುದಿಲ್ಲೋ
ಗುರುರಾಯಾ ಧೀನ ಭಕ್ತರ ಮಾನ ಕಾಯಪ್ಪ ರೇವಣಸಿದ್ಧನೋ

ಅಜ ಹರಿ ಹರರಿಗೆ ಗುರುವನಾಗಿ ಮೆರೆದಾವಾ
ಮೂಜಗದೊಡಿಯಾ ನಮ್ಮ ರೇವಣಸಿದ್ಧನೋ

ಗುರು ಅದಾನಂತ ದುರ್ಗಿ ಸನಿಕ ಬರೂದಿಲ್ಲರಿ
ಯಾರ‍್ಯಾರದ ಆಟಾ ನಡುದಿಲ್ಲ ತಿಳಿರಿ ಅಂದಿನೋ

ಸಿದ್ಧಾಟಕಿ ಮಾಡತೀವಂದರ ಯಾರದೂ
ಎದ್ದ ಬಿಟ್ಟ ಓಡಿ ಹೋಗ್ಯಾರು ಕೇಳಿರಿ ಅಂದಿನೋ

ಕೊಲ್ಲಾಪೂರಕ ಹೋಗಿ ನಿಂತು ಖೊಂಗಿ ಸಿದ್ಧರನ್ನೆಲ್ಲಾ
ಹೊಡಿದು ಮಾ ಗಂಡಾ ವಿಷಾ ಕುಡಿದಾವಾ ರೇವಣಸಿದ್ಧನೋ

 

೫೩ನೇ ಸಂಧಿ :

ಗುರುರೇವಣಸಿದ್ಧಂಥ ಅನವಲ್ಲಿ ಗುರುವಿನ ಪಾದಾವ
ಹಿಡಿಯವಲ್ಲಿ ಮರವಿಗ ಬಿದ್ದು ಹೀನಗುಣಾ ಬಿಡವಲ್ಲಂದಿನೋ

ಭೇದವು ತಿಳಿಯದೆ ವಾದವು ಮಾಡಿದರೇನೋ
ಹಾದಿಗೆ ಸ್ರಾಪ ಕೊಟ್ಟರ ಫಲವೇನಂದಿನೋ

ಸುಳ್ಳ ಅಲ್ಲೋ ಲೋಕದ ಆಟವ ಇನ್ನ ನೋಡಾರಿ
ಮಳ್ಳ ಜನರಿಗೆ ಇದರ ಭೇದ ತಿಳಿಯುವುದಿಲ್ಲ ನೋಡರಿ

ಜೊಳ್ಳ ಹಾರೂದು ಒಳ್ಳೆ ಬೀಜೊಂದು ಉಳಿಯುದು ಕೇಳಾರಿ
ಮಳ್ಳ ಹಾದ ಕುರಿಹಾಂಗ ಜಗಾ ಹುರಿಯುದ ನೋಡರಿ

ಮುಂದ ಆಗುವ ಸಂಧ ನೀವು ಇಂದ ಕೇಳಾರಿ
ಮಂದಮತಿಗಳಾಗಿ ಎಂದೋ ಅನುವಾದಲ್ಲೊ ನೋಡರಿ

ಅಂಜುವ ಜನರಿಗಿ ಈಗಿನ ಕಾಲಕ್ಕೆ ಸುಖವ ಇಲ್ಲಾರಿ
ಸೆರಿಗಂಜಿ ಕಾಣದೆ ಮನಿ ಮನಿ ತಿರುಗಾತರ ನೋಡರಿ

ಮಂಜು ಮಳಿಗಳ ಮುಗಿಲಾ ಸೇರ‍್ಯಾವು ಬಂಜಿ ಭೂದೇವಿರಿ
ಎಂಜಲಾ ಪತ್ರವಳಿ ಹಾಂಗ ಜಗಾ ಹಾರೂದರಿ

ಜೋಡು ಸೂರ್ಯರು ಮಾಡುವ ಕಾಲಕ್ಕ ಕೇಡ ಬರುವದರಿ
ರೂಢಿ ತುಂಬಾ ಕಾಡು ಮಳಿಗಿ ಉರಿಯಹತ್ತುದರಿ

ಹಲ್ಲು ಕಲ್ಲಿಗೆ ಜಗಳ ಬರುವದು ಇನ್ನ ಕೇಳಾರಿ
ಹುಲ್ಲೆದ್ದು ಕಲ್ಲಿಗೆ ಹೊಡೆದರ ಪುಡಿಪುಡಿ ಆಗುದರಿ

ಅಲ್ಲ ಹೌದು ಎಂಬುವ ಮಾತು ಬಲ್ಲಾವರಿಗಿ ತಿಳಿಯುದರಿ
ಅಲ್ಲಮಪ್ರಭು ಬರುವ ಕಾಲಕ್ಕ ಜಗಾ ಬುಡ ಮೇಲರಿ

ಕಾಡುಕುಂಟಿ ಮೇಯುವ ತಾಳು ರೂಢಿಯ ಬಳಗಾರಿ
ವಾರಿ ಒಡಿಯುವ ನುಂಗತಾಳು ಸಿದ್ಧಶಂಖರಿ

ಮಡದಿ ಮಕ್ಕಳನ ಅಗಲಿ ಹೋಗುದು ಮಾರಿ ಸಿಗದಾಂಗರಿ
ರೂಢಿ ತುಂಬಾ ಕಾಡು ಮಳಿಯಾಗ ಗೋರಿ ಆದಾವರಿ

ಸಿದ್ಧ ಸಿದ್ಧರನ ಗುದ್ದತಾಳರಿ ಸಿದ್ಧಶಂಖರಿ
ಹದ್ದು ಕಾಗಿಗೆ ಹಂಚುವ ತಾಳು ತಿಳಿದ ನಡೆಯಿರಿ

ಅಷ್ಟಮಯ ಜ್ಯೋತಿ ನಷ್ಟವಾದವು ರೊಟ್ಟಿಯ ಕಾಣದರಿ
ಹೊಟ್ಟೆ ತುಂಬದೆ ಕೆಟ್ಟ ಮಾತುಗಳು ಕೆಟ್ಟು ಹೋದಾವರಿ

ಸತ್ಯ ಶರಣಾರು ಸಾರುವ ತಾರು ಇನ್ನ ಕೇಳರಿ
ಎತ್ತು ಕಾಣಚೆ ಕೈಲೆ ಕೆತ್ತಿ ಒತ್ತುವತಾರರಿ

ಹತ್ತಿ ಎಣ್ಣೆ ಬೆಣ್ಣೆ ಸಿಗದಾಂಗ ಆಗುವದರಿ
ಹತ್ತುಗಾವುದಕ ಸಂತಿ ಆಗೂದು ತಿಳಿದ ನೋಡರಿ