ಮಾರ್ಗಪದ

ವಿಭಾಗ ಗೋತ್ರದಾಗ ಮಂದಾರ ಮುನಿಶ್ವರಗ
ಸಂಬನ ವರುವಾಗಿತ್ತು ಕೇಳರಿ ಅಂದಿನೋ

ಕೈಲಾಸ ಶಂಖರನ ವರದಿಂದಾ ಮಂದಾರಗ
ಬಿಲ್ಲಸೂರ ಎಂಬು ಪುತ್ರಾ ಜನಿಸಿದ್ದಾನೋ

ಬಿಲ್ಲಸೂರ ಆಗ ಬಲ್ಲಿದನಾಗಿ ತಾನು ಎಲ್ಲಾ
ಲೋಕವ ತಾನು ಆಳಿನ ಅಂದಾನೋ

ಅನ್ನ ನೀರ ಇಲ್ಲದೆ ಗಿರಿಜ ಪಾರ್ವತಿ ಮಧ್ಯಾನವ
ಮಾಡುತ ತಪಾ ಮಾಡಿದ್ದಾನೋ

ಉಗ್ರ ತಪವ ಮಾಡುತ ಪಾರ್ವತಾ ತಿಳಿದಾಗ
ಶೀಘ್ರದಿಂದ ಅಲ್ಲಿಗೆ ಬಂದಿದಾಳೋ

ಕಂದ ಏಳೋ ನೀನು ಇಂದು ವರವಾ ಬೇಡಪ್ಪ
ಅಂದು ಬಿಲ್ಲಸೂರನ ಎಬ್ಬಿಸಿದ್ದಾಳೋ

ತಾಯಿಯ ಶಬ್ದಾ ಕೇಳಿ ಕಣ್ಣು ತೆರೆದು ನೋಡ್ಯಾನು
ಕಾಯಬೇಕ ತಾಯಿ ಅಂತಾ ನುಡಿದಿದ್ದಾನೋ

ಆಗ ಬಿಲ್ಲಾಸೂರ ದೇವಿಗಿ ಹೇಳತಾನು ಜಗದೊಳಗಿನ
ಜನರಿಂದಾ ಮರಣ ಬ್ಯಾಡಂದಾನೋ

ನರರಿಂದಾ ಮರಣ ಬ್ಯಾಡ ಸುರರಿಂದಾ ಮರಣ ಬ್ಯಾಡ
ರಾಕ್ಷಸರಿಂದಾ ಮರಣ ಆಗದಾಂಗ ಮಾಡಂದಾನೋ

ಪರಮೇಶ್ವರನ ಅಂಶ ಧರಿಗೆ ಬಂದಮ್ಯಾಲ ಮರಣಾ
ಅವನಿಂದ ನನಗ ಬೇಕೆಂದನೋ

ಬಿಲ್ಲಾ ಸೂರ ಬೇಡಿದ ವರಗಳ ಕೊಟ್ಟಾಳೋ ದೇವಿ
ಕೈಲಾಸಕ ತಾನು ಹೋಗಿದ್ದಾಳೋ

ದೇವಿಯ ವರದಿಂದಾ ಬಿಲ್ಲಾ ಸೂರ ತಾನು
ರವಿಚಂದ್ರ ಇದ್ರರನ್ನೆಲ್ಲಾ ಗೆದ್ದಿದಾನೊ

ಸೂರ್ಯ ಚಂದ್ರ ವಾಯುವ ವರುಣಾ
ಕುಬೇರನ ಯಮದೇವರನ ಸಹಿತಾ ಗೆದ್ದಿದಾನೋ

ದೇವ ದೇವತ್ಯಾರನು ಯಕ್ಷ ಗಂಧರ್ವರನ
ನವನಾರಾಯಣರನ ಸುದ್ದಾ ಗೆದ್ದಿದಾನೋ

ಹರಿಹರಾ ದೇವರಲ್ಲಿ ಬಿಲ್ಲಾಸೂರಿ ಆಗ
ಗುರುಹಿರಿಯರೊಳಗ ಭಕ್ತಿಯಾ ಕೆಡಿಸಿದ್ದಾನೋ

 

೩೦ನೇ ಸಂಧಿ :

ಸುಮ್ಮ ಯಾತಕ ಕುಂತಿಯೋ ಒಣಾ ಚಿಂತಿ ಬಿಡೋ
ತಮ್ಮಾ ಏನಂತಿ ಮುತ್ತಿನ ಗುಂತಿ ಅಂದಿನೋ

ಹೆಣ್ಣು ಹೊನ್ನು ಮಣ್ಣು ಇವು ಮೂರು ಹುಣ್ಣಪ್ಪಾ
ಕಣ್ಣು ತೆರೆದು ಮಾಯಾ ನೋಡಬ್ಯಾಡ ಅಂದಿನೋ

ಆರು ಮಂದಿನ ತುಳಿದು ಮೈ ತೊಳಕೋ ನೀ
ತಿಳಿದು ಪಾರಾಗಿ ಹೋಗುದು ಬಿರಿ ಅಂದಿನೋ

ಹಸರು ಹಳದಿ ಬಿಳಿದು ಬಣ್ಣವು ನೋಡು ತಮ್ಮಾ
ಒಂದಕ್ಕೊಂದು ತಳಕ ಬಿದ್ದಾವ ತಿಳಿ ಅಂದಿನೋ

ಝಗಾ ಝಗಾ ಹೊಳೆಯುವಂಥಾ ಜಗದ್ಗುರು
ರೇವಣಸಿದ್ಧನನಿಂದ ಬಿಂದುನ್ಯಾಗ ತುಂಬಿ ನೊಂಡಂದಿನೋ

ಬೆಳ್ಳನ ಬೆಳದಿಂಗಳ ನೋಡಿ ನೋಡಿ ತಿಳಿನೋಡಿ
ಹುಡಕ್ಯಾಡಿ ಮನಶಾಂತ ಮಾಡಂದಿನೋ

ಸೂರ್ಯ ಚಂದ್ರ ಇಬ್ಬರು ಜೋಡಿ ಬರಶಾರಾ
ಬಂದಾರ ಕೂಡಿ ರಾಜಮಾರ್ಗ ಹಾಡುನಡಿಪ್ಪ ಕೂಡಿ ಅಂದಿನೋ

ಝಳಾ ಝಳಾ ಹೊಳಿಯುವ ರತ್ನದ ಹರಳಿನಾಂಗ
ಗುರುವಿನ್ನಾ ನೋಡಿಕೊಂಡ ಧ್ಯಾನ ಮಾಡಂದಿನೋ

 

ಬೀರೇದೇವರ ಮಾರ್ಗಪದ

ವೇದ ಪುರಾಣಗಳ ಜಪಾ ತಪಾ ನೇಮಗಳು
ಹೋಗುವಾಂಗ ಬಿಲ್ಲಾಸೂರ ಮಾಡಿದ್ದಾನೋ

ಧರ್ಮದ ಹೆಸರೆಲ್ಲಾ ಉಳಿಯದಾಂಗ ಬಿಲ್ಲಾಸೂರ
ಕರ್ಮಕ ಕೈಹಾಕಿ ನಿಂತಿದ್ದಾನೋ

ಬಿಲ್ಲಾಸೂರನ ಎದುರ ಯಾರೂ ಇಲ್ಲದಾಂಗ ಬಿಲ್ಲಾಸೂರ
ಎಲ್ಲಾ ಲೋಕವ ನಡಗುತ ನಿಂತಿದ್ದಾವೋ

ಇಂದ್ರ ಅಗ್ನಿ ಯಮ ಹರಿಬ್ರಹ್ಮರೆಲ್ಲಾ ಕೂಡಿ
ಚಂದ್ರಶೇಖರನ ಮುಂದ ಹೋಗಿದ್ದಾರೋ

ಬಿಲ್ಲಾಸೂರನ ಹಾವಳಿ ಶಂಖರಗ ಹೇಳತಾರ
ಎಲ್ಲಾ ದೇವತ್ಯಾರು ಶರಣ ಮಾಡಿದ್ದಾರೋ

ಕೇಳಿ ಶಂಕರಾ ತಾನು ಸಿಟ್ಟಗೇರಿ ಆವಾಗ
ಹೊಳೆಯುವ ಉಗ್ರಗಣ್ಣಾ ತೆರೆದಿದ್ದಾನೋ

ಉಗ್ರಗಣ್ಣಿನ ರೂಪದೊಳಗ ಶಂಖರ ತಾನು
ವೀರಭದ್ರನ ಹುಟ್ಟಶಾನು ಕೇಳಾರಿ ಅಂದಿನೋ

ವೀರಭದ್ರದೇವಾ ಶಂಖರಗ ಶರಣಾ ಮಾಡಿ
ಭರದಿಂದಾ ಅಪ್ಪಣೆ ಅಂದಿದಾನೋ

ಕಂದ ವೀರಭದ್ರಾ ತಾನು ತನ್ನ ಸತಿಯಳಿಗೆ
ಹೇಳತಾನು ಕವಳೇಶ್ವರಿಯಾಗಿ ಜನಿಸ ಅಂದಾನೋ

ಪತಿಯಾ ವಚನ ಕೇಳಿ ಭದ್ರಕಾಳಿದೇವಿ
ಕವಳೇಶ್ವರಿ ದೇವಿಯಾಗಿ ಜನಿಸಿದ್ದಾಳೋ

ಸತಿಪತಿಯಾಗಿ ಬಿಲ್ಲಾ ಸೂರನ ಹೊಡಿಯುದಕ
ಅತಿಕೋಪದ ರೂಪದವರಾಗಿದ್ದರೋ

ಭೂಲೋಕದಾಗ ಬಿಲ್ಲಾ ಸೂರನ ಹುಡಕಿ
ಅವರು ಬಲ್ಲಿದ ದೈತ್ಯರನ ಮುಂದೆ ಕರೆದಿದ್ದಾರೋ

ಸಿಟ್ಟಗೇರಿ ವೀರಭದ್ರ ಅಂತಾನು ಬಿಲ್ಲಾಸೂರಗ
ಬಿಟ್ಟ ಬಿಡೋ ನಿನ್ನ ಎಲ್ಲಾ ಬಿಂಕವನೋ

ಹರನ ಕುಮಾರ ನಾನು ವೀರಭದ್ರಾ ತಿಳಿ ನೀನು
ಧರಿಯೊಳಗ ಯಾಕ ನಿನ್ನ ಗರ್ವ ಅಂದಿನೋ

ಕೇಳಿ ಸಿಟ್ಟಿಗೆ ಬಂದು ಬಿಲ್ಲಾ ಸೂರ ಆಗತಾನು
ಕಾಳಿಕಾದೇವಿ ಧ್ಯಾನಾ ಮಾಡಿದ್ದಾನೋ

 

೩೦ನೇ ಸಂಧಿ :

ಸ್ವತಂತ್ರ ಯಾವುದೂ ಇಲ್ಲ ನೋಡೋ ತಮ್ಮಾ
ಗುರುವಿನ ಹೊರತು ಮತ್ಯಾವದು ಇಲ್ಲ ಅಂದಿನೋ

ಆಕಾರ ಉಕಾರ ಮಕಾರ ಸಾಕಾರ ಅವು ಇವು ಎಲ್ಲಾ
ತಿಳಿದ ನಡಿ ಅಂದಿನೋ

ಜನನ ಮರಣ ಅನುನಯದಿಂದಾ ತಿಳಿ ತಮ್ಮಾ
ಅನುಭವದೊಳಗ ಮನಾನಿಲ್ಲ ಅಂದಿನೋ

ಆರು ಲಿಂಗಕ್ಕೆ ಆರುಭಕ್ತಿ ಆರಕ್ಷರಾ ಮಂತ್ರದಿಂದ
ಆರು ಪ್ರಸಾದ ತಿಳಿರಿ ಅಂದಿನೋ

ಆರಕ್ಕ ಮೂರಕ್ಕ ಮೀರಿದ ಲಿಂಗವು ತಮ್ಮಾ
ತೋರಿಕೆ ಆಗಿ ಕಾಣದು ಅಂದಿನೋ

ಹಮ್ಮಿನಿಂದಾ ಹೋಗುವ ದಾರಿಯಲ್ಲೋ ತಮ್ಮಾ
ಇದು ಬ್ರಹ್ಮ ವಿಷ್ಣು ರುದ್ರರಿಗೆ ಸಾಧ್ಯ ಇಲ್ಲಂದಿನೋ

ಸುಮ್ಮನೆ ಶಾಸ್ತ್ರ ಓದಿದರ ಫಲವಿಲ್ಲ ಬ್ರಹ್ಮರೂಪ
ರೇವಣಸಿದ್ಧ ಬಲಾ ಅಂದಿನೋ

ಧರಿಯೊಳಗ ಕುಮಟಗಿ ಗುರುರೇವಣಸಿದ್ಧನ
ಚರಣಕಮಲ ಎನ್ನ ಶಿರಕ ಅಂದಿನೋ

 

ಮಾರ್ಗಪದ

ಪಾರ್ವತಿಯ ವರದಿಂದಾ ವೀರ ಬಿಲ್ಲಾಸೂರಾ
ಗರವದಿಂದಾ ವೀಭದ್ರಗಾ ಅಂದಿದಾನೋ

ಬೂದಿ ಬಡಕನ ಮಾತಿಗೆ ನನ್ನ ಹೊಡಿಲಾಕ ಬಂದಿದಿಯಾ
ಹೋದಿಯೋ ಯಮಲೋಕಕ ಅಂದಿದಾನೋ

ಸಿಟ್ಟಗೇರಿ ಕದನಾ ಮಾಡ್ಯಾರು ಇಬ್ಬರೂ ಆಗ
ಸೃಷ್ಟಿ ಒಳಗ ಕೌತುಕ ಮಾಡಿದ್ದಾರೋ

ಆಗ ವೀರಭದ್ರ ಬಿಲ್ಲಾ ಸೂರನ ಕೊಂದು ಬೇಗ
ಹೋಗಿ ಶಂಖರಗ ಶರಣ ಮಾಡಿದ್ದಾನೋ

ಆನಂದಾಗಿ ಶಂಖರಾ ತನ್ನ ಕಂದಗ ಅಂತಾನು
ನಿನ್ನ ಕೀರ್ತಿ ಜಗದಾಗ ಉಳದೀತ ಹೋಗ ಅಂದಾನೋ

ಬಿಲ್ಲಾಸೂರ ದೈತ್ಯಗ ಕೊಂದ ಕಾರಣಾ ನೀನು
ಭೂಲೋಕಕ ಹೋಗಿ ಜನಿಸಬೇಕ ಅಂದಾನೋ

ಭೂಲೋಕದೊಳಗ ನೀನು ವೀರದೇವರಾಗಿ
ಹಾಲುಮತದ ದೇವನಾಗಿ ಮೆರಿ ಅಂದಾನೋ

ನಿನ್ನ ಸತಿ ಕವಳೇಶ್ವರಿದೇವಿ ತಾನು ವಿಷ್ಣು
ದೇವರಿಗಿ ಮಗಳಾಗಿ ಜನಿಸ ಅಂದಾನೋ

 

೩೨ನೇ ಸಂಧಿ :

ಅನಾದಿಸಿದ್ಧನ ಧ್ಯಾನವ ಮಾಡೋ ತಮ್ಮಾ
ನಾನಾ ಸಂಕಟ ದೂರ ಹೋದಾವ ಅಂದಿನೋ

ಕಂತುಪಿತನ ಧ್ಯಾನಾ ಸಂತೋಷಾಗಿ ಮಾಡೋ
ಭ್ರಾಂತಿ ದೂರ ಆಗುದು ತಿಳಿರಿ ಅಂದಿನೋ

ಆಶಕ ಬಿದ್ದು ಬಹು ಪಾಶೇಕ ಬೀಳಬ್ಯಾಡಾ
ಘಾಸಿ ಆಗುದು ಮಾಯಾ ಹೇಸಿ ಅಂದಿನೋ

ಅರವು ಹಿಡಿದು ಸತ್ಯ ಗುರುವಿನಾ ಮರಿಯಬ್ಯಾಡೋ
ಮರುವಿಗೆ ಬಿದ್ದು ಕೆಡಬ್ಯಾಡೋ ತಿಳಿ ಅಂದಿನೋ

ತಂದೆ ತಾಯಿ ಬಂಧುಬಳಗಕ್ಕೆಲ್ಲಾ ನೋಡ ತಮ್ಮಾ
ಹಿಂದಂದಾ ಬರುವವರು ಯಾರಿಲ್ಲ ತಿಳಿ ಅಂದಿನೋ

ಮಂದಿ ನೋಡಲೆಂದು ಬಹು ಪರಿಯಾದಿಂದ
ಚೆಂದಾಗಿ ಹೆಣಾ ಮೆರಿಸಾವರ ತಿಳಿ ಅಂದಿನೋ

ಅಣ್ಣ ತಮ್ಮ ಅಕ್ಕ ತಂಗಿಯರನ ನೋಡಪ್ಪಾ ತಮ್ಮಾ
ನೀನು ಕಣ್ಣೀರು ಸುಮ್ಮನೆ ಸುರಶಾರು ತಿಳಿ ಅಂದಾನೋ

ಮಣ್ಣ ಹಾಕಿ ಮನಿಗಿ ಬಂದಮ್ಯಾಲ ಕೇಳೋ ತಮ್ಮಾ
ಉಣ್ಣನು ಬರ್ರೆಂಬುರು ತಿಳಿ ಅಂದಿನೋ

ಹೆಣ್ಣು ಮಕ್ಕಳು ಅಳುದಿಲ್ಲ ಹಣಕ್ಕ ಅಳತಾರೋ
ತಮ್ಮಾ ಹಣಾ ಸಂಗಾಟ ಬರುದಿಲ್ಲ ತಿಳಿ ಅಂದಿನೋ

ನಾರಾಯಣನ ಮಗಳಾಗಿ ಕನ್ಯಾ ಕೋಮಲಿಯಾಗಿ
ಬೀರದೇವರಿಗಿ ಮಡದಿ ಆಗಿ ಮೆರಿ ಅಂದಿನೋ

ತಂದಿಗಿ ಶರಣಮಾಡಿ ವೀರಭದ್ರ ಕೇಳತಾನು
ಅಂದಾನೋ ಹಾಲುಮತದವರ‍್ಯಾರ ಅಂದಿನೋ

ಹರಕು ಮಾರಾ ಬೀರದೇವರಾ ಹರಮಹಾದೇವಗ
ಕೇಳತಾನು ಧರಿಯೊಳಗ ಹಾಲುಮತಾ ಹ್ಯಾಂಗ

ಗಿರಿಜಾರಮಣಾ ಕರಿಗೊರಳ ಶಂಖರ ತಾನು
ಬೀರದೇವರ ಮುಂದೆ ಆಗ ಹೇಳಿದ್ದಾನೋ

ನಿರಾಳವಾಗಿ ಇರುವಂತ ಕಾಲದೊಳಗ ಹರನು
ಗಿರಿಜಾ ಕೂಡಿ ಹೊಂಟಿದಾರೋ

ಮಧು ಹರ ಪಾರ್ವತಾ ಕೂಡಿ ನೋಡುತ
ಬರಲು ಅದರೊಳಗ ಒಂದು ಜಗಲಿ ಕಂಡಿದಾಳೊ

ಅದರೊಳಗೊಂದು ಜಗುಲಿ ಮುದದಿಂದಾ ಕಾಣುತಾ
ಸದವಿನಯಾದಿಂದಾ ಬಂದಿದಾರೋ

ಹರಬಂದು ಜಗಲಿಮ್ಯಾಗ ಮೂರುತನಾದನೋ
ಎರಗಿದನೋ ಬಂದ ಜಾಂಬಋಷಿನೋ

ಗುರುವೆ ಕರುಣಿಸು ಎಂದು ಎರಡು ಪಾದಕ ಬಿದ್ದಾನು
ತೋರಿದಾವೋ ಆಗ ಪಾರ್ವತಾ ಮೊಲಿಗಳನೋ

ಗಿರಿಜೆಯ ಮೊಲಿಹಾಲು ಧರಿಯೊಳಗೆ ಸುರಿಯಲು
ವ್ಯರ್ಥ ಆಗಲಾರದಂಗ ಮಾಡಿದ್ದಾಳೋ

ಎರಡು ಕೈಒಳಗ ಎರಡು ಮೊಲಿಯ ಹಾಲು
ಕರದಲ್ಲಿ ಪಿಡಿದಾಳೋ ಪಾರ್ವತಾನೋ

ಬಲದ ಮೊಲೆಯಾ ಹಾಲು ಕಲಿಸಿ ಮುದ್ದಿಯ ಮಾಡಿ
ಸತಿ ಗಂಡ ರೂಪವ ಮಾಡಿದ್ದಾಳೋ

ಒಲುವಿಂದಾ ಎಡಮೊಲೆಯ ಹಾಲು ಮುದ್ದೆಯ
ಮಾಡಿ ಲಲನೆಯ ರೂಪ ತಾನು ಮಾಡಿದ್ದಾಳೋ

ಅಂದು ಪಾರ್ವತಾ ಇಂದುಧರನ ಮುಂದೆ
ತಂದು ಆ ಕ್ಷಣಕಾ ತೋರಿಸಿದ್ದಾಳೋ

ಚಂದ್ರಶೇಖರನು ದಯದಿಂದಾ ಪ್ರಾಣ ಹಾಕಿ
ಮುಂದ ಇವರು ಆದಿಗೆ ಬೇಕಂದಾನೋ

ಬೇಕಾಗಿ ಮುದ್ದುಗೊಂಡ ನಾಮವು ಇಟ್ಟಾನು
ಆಕೆಗೆ ಮುದ್ದವ್ವಾ ಅಂತ ಕಂದಿದ್ದಾರೊ

ಸತಿಪತಿಗಳ ಮಾಡಿ ಹಿತದಿಂದ ಇರುವಾಗ
ಸುತರನ್ನ ಅವರಿಗೆ ಕೊಟ್ಟಿದ್ದಾನೋ

ಮೊಲಿಯ ಹಾಲಿನಿಂದಾ ಹುಟ್ಟಿ ಬಂದಾರಿವರು
ಹಾಲುಮತದವರಂತ ಕರೆದಿದ್ದಾರೋ

ಕುರಿಹಿಂಡ ಮರಿಹಿಂಡ ಕಾಯುತ ಬಂದಾರಿವರು
ಹಾಲುಮತದವರಂತ ಕರೆದಿದ್ದಾರೋ

ಕುರಿಹಿಂಡ ಮರಿಹಿಂಡ ಕಾಯುತ ಬಂದಾರಿವರು
ಕುರಬರ ಅಂತಾ ಇವರಿಗೆ ಅಂದಿದಾರೋ

ಹಿಂದಕ್ಕ ಬ್ರಹ್ಮನ ಸತಿಯಾದ ಸರಸ್ವತಿದೇವಿ
ಕಂದನ ಸಲುವಾಗಿ ತಪಾ ಮಾಡಿದ್ದಾಳೋ

ಸರಸ್ವತಿ ತಪಕ ಮೆಚ್ಚಿ ಗಿರಿಜಾರಮಣ ಶಂಖರಾ
ವರವಾ ಕೊಟ್ಟು ತಾನು ಹೇಳಿದ್ದಾನೋ

ನಿನ್ನ ಉದರದಲ್ಲಿ ನನ್ನ ಅಂಶರೂಪ ಹುಟ್ಟುದು
ಚೆನ್ನಾಗಿ ಜೋಪಾನ ಮಾಡಂದಾನೋ

 

೩೩ನೇ ಸಂಧಿ :

ಕ್ಷಣದಿ ಸಂಸಾರಕ್ಕಾಗಿ ಜಾನ ನೀನು ಕೆಡಬ್ಯಾಡಾ
ಅಣುಮಾತ್ರ ಸುಖಾ ಇಲ್ಲಿ ತಿಳಿರಿ ಅಂದಿದೋ

ದುಡಿದು ದುಡಿದು ಹಣ ಬಾಳ ಗಳಿಸಿ ತಂದಿದಿ ತಮ್ಮಾ
ಮಡದಿ ಮಕ್ಕಳಿಗೆ ಕೊಟ್ಟಿರ ಏನಂದಿನೋ

ಮಣಿದು ಮಾತಾಡಿ ನಿನ್ನ ವರ್ಣಿಸಿ ಉಂಬಾವರೋ
ತಾರದಿದ್ದರ ಬಾರದ ಹಾದಿಗೆ ಹೋಗ ಅನ್ನಾವರೋ

ನಿಶ್ಚಯ ಆತ್ಮದೊಳಗ ಇಚ್ಚಿಸಿ ತಿಳಿಯೋ ತಮ್ಮಾ
ತುಚ್ಛ ಭಾವದಿಂದಾ ಸುಖಾ ಇಲ್ಲ ಅಂದಿನೋ

ಹುಚ್ಚಾ ನೀನು ಎಚ್ಚರ ಇಲ್ಲದೆ ಗಚ್ಚಿನ ಮನಿಗೆ ಮೆಚ್ಚ ಬ್ಯಾಡೋ
ನುಚ್ಚ ಉಂಡವರ ಇಚ್ಚಾ ನುಡಿ ಬ್ಯಾಡಂದಿನೋ

ಶ್ರೇಷ್ಟವಧ ಮನುಜಾ ನೀನು ಇಷ್ಟ ಯಾಕ ಕೆಡತಿಯಪ್ಪ
ಅಷ್ಟ ಐಶ್ವರ್ಯ ಸುಖಾ ನಿವೇನಂದಿನೋ

ದಿಟ್ಟಾ ನಿನ್ನ ಉಟ್ಟ ಬಟ್ಟೆ ಕಳೆದು ಬಿಟ್ಟ ಬಯಲು ಮಾಡಿ
ಮೆಟ್ಟಿ ಮಣ್ಣ ಕೊಟ್ಟ ಬರತಾರು ಘಟ್ಟಿ ಅಂದಿನೋ

ಧರಿಯೊಳಗ ಮೆರಿಯುವ ಈಶ ರೇವಣಸಿದ್ಧಗ
ಹರುಷಾಗಿ ಆತನ ಪಾದಕ ಹೊಂದ ಅಂದಿನೋ

 

ಬೀರೇಶ್ವರ ಮಾರ್ಗಪದ

ಹರನ ವಚನದಾಂಗ ಬ್ರಹ್ಮನರಾಣಿ
ಗರ್ಭವ ಧರಿಸಿ ತಾನು ಇರುತ್ತಿದ್ದಳೋ

ನವಮಾಸ ಬ್ಯಾನಿಗಳು ತವಕದಿ ಮಾಡ್ಯಾವು
ಶಿವ ಶಿವ ಅಂತಾ ಬೀರದೇವರ ಜನಿಸಿದ್ದಾನೋ

ನಗುಮೊಗಾ ಹಸನಮೊಗಾ ಚಲುವಮಗಾ ಬೀರಪ್ಪ
ಬೇಗ ಆಗ ಸುರಮಾದೇವಿ ಕಂಡಿದ್ದಾಳೋ

ಬಿರೇಶ ಜನಿಸುವ ಕಾಲವು ಹರುಷಪ್ಪಾ
ದೇವ ದೇವತ್ಯಾರು ಹೂ ಮಳಿ ಸುರಿಸಿದ್ದಾರೋ

ಅಂಥ ವ್ಯಾಳ್ಯಾದಾಗ ಸುರಮಾದೇವಿ ತಾನು
ಚಿಂತಿ ಇಲ್ಲದಾ ಕಂದನ ಜೋಪಾನ ಮಾಡಿದ್ದಾಳೋ

ಇಷ್ಟ ಆಗುದರೊಳಗ ಸೃಷ್ಟಿ ಒಳಗ ಶಬ್ದಾ
ಅರಿಷ್ಟ ವಚನಾ ಸುರಮಾದೇವಿ ಕೇಳಿದ್ದಾಳೋ

ನಿನ್ನ ಕಂದ ನಿನ್ನಲ್ಲಿ ಜೋಪಾನ ಆಗೂದಿಲ್ಲ ತಾಯಿ
ನಿನ್ನ ಜೀವಕ ಕಷ್ಟ ಅಂಥ ಶಬ್ದವನೋ

ಕಾರಣ ಈ ಕೂಸಿನ ತೊಟ್ಟಿಲದಾಗ ಹಾಕಿ ಬೇಗ
ಆರ‍್ಯಾಣ ಪಾಲ ಮಾಡದಂಥ ಶಬ್ದವನೋ

 

೩೪ನೇ ಸಂಧಿ :

ಸಿಸ್ತ ದೈವ ಎಲ್ಲಾ ಮಸ್ತ ಕೂಡಿರಿ ಅಪ್ಪಾ
ಇಂದ್ರ ಸಭಾಕಿಂತ ಕಡಕ ಅಂದಿನೋ

ರೇವಣಸಿದ್ಧನ ದಯಾ ಕರುಣಾದಿಂದ ಬಂದೀವರಿ
ಸೇವಾ ಮಾಡುದಕ ತಿಳಿರಿ ಅಂದಿನೋ

ಬೀರದೇವರ ಕರುಣ ಹಸ್ತ ನಮ್ಮ ಮ್ಯಾಲ ಅಪ್ಪಾ
ಇರುವದು ಕಡಿತಾನಕ ತಿಳಿರಿ ಅಂದಿನೋ

ಗುರುವಿನ ದಯಾದಿಂದ ಡೊಳ್ಳಿನ ಪದಗಳಾ
ನಾವು ನೀವು ಬೆಳತನಕಾ ಹಾಡೂನ ಅಂದಿನೋ

ಅಲ್ಲದೊಂದು ಇಲ್ಲದೊಂದು ಪದಗಳ ತಂದು
ನೀವು ಮಾಡತೀರಿ ದಿಮಾಕ ಕೇಳರಿ ಅಂದಿನೋ

ಗುರುವಿನ ಸೇವಾ ನೀವು ಕಡಿಗೆ ಮಾಡಿಲ್ಲೊ ತಮ್ಮಾ
ಪಕ್ಕಾ ಗುರು ನಿಮಗ ಹ್ಯಾಂಗ ಸಿಗುದು ಅಂದಿನೋ

ಗುರುವಿನ ವಿದ್ಯಾ ನಿಮಗ ಸಿಕಿಲ್ಲಂದಮ್ಯಾಗ
ಮಜಲ್ಯಾಂಗ ಗೆದುತಿದಿ ಕಡಕ ಅಂದಿನೋ

ಗುರು ಇಲ್ಲ ಅಂತಾ ಕೂತುಕೊಂಡು ಅಳುವಾಗ
ತಮ್ಮಾ ನಿನಗ ಮುರಗುಂಡಿ ಮುದಕಗ ಹ್ಯಾಂಗ ತಿಳಿಯದೊ ಅಂದಿನೋ

ಹಂತಿ ಪದಾ ಹಾಡುದು ನಿಮ್ಮ ಮುದುಕಗ ತಮ್ಮಾ
ಇಂಥ ಡೊಳ್ಳಿನ ಪದಾ ಹ್ಯಾಂಗ ಅಂದಿನೋ