ಕರಿಗಳ ಕಾದ ನಮ್ಮ ಶಿವ

ಅರಿಯದ ಅರ್ಥ ಕೇಳಿಲ್ಲ ತಮ್ಮಾ, ಅಗಾಧ ನಮಗೇನು ಆಗಿಲ್ಲ
ಕುರಿಗಳು ಧರಣಿಗೆ ಬಂದ ಮಜಕೂರಾ ವರ್ಣಿಸಿ ಹೇಳುವೆ ತಿಳಿ ಮೊದಲಾ
ಗೌರೀ ಶಾಪದಿಂದ ಸಿದ್ಧ ಗಂಧರ್ವರು ಕುರಿಗಳು “ಆದರೋ ಸಂಪೂರ್ಣ
ನೋಡಿ ಸಾಂಬ ನಗ್ಗೇಡು ಆತುಯೆಂದು ಮಾಡಿದಾನು ಆಗೊಂದು ರಚನಾ
ಹರಿಹರರಿಗೆ ಕುರಿಯಕಾಯುವ ಸರತಿಮಾಡ ಒಂದೊಂದು ದಿನಾ
ಹರನ ಅಪ್ಪಣೆ ಮೀರಲಾರದೆ ಒಪ್ಪಿಕೊಂಡಿತೊ ದೇವಗಣಾ
ದೇವಲೋಕದಲ್ಲಿ ಇರುವವರೆಲ್ಲ ನೆವದಿ ಕಾದಾರೊ ಕುರಿಗಳನಾ
ಕೋಲ ಹಿಡಿದು ಶ್ರೀಲೋಲ ಕೃಷ್ಣನು ಕೊಳಲು ಊದಿ ಒಂದೇ ಸವನಾ
ದಿನ ಒಬ್ಬರು ಬಿಡದೆ ಕಾಯುತ ತೀರಿಸ್ಯಾರೋ ತಮ್ಮ ಸರತಿಯನಾ
ಸರ್ತಿ ಬಂದ ಪರಮಾತ್ಮ ಪಾರ್ವತಿಗೆ ಅರ್ತಿಲಿಂದ ಮಾಡ್ಯಾರ ಗಮನಾ
ಬಡಗಿ ಹಿಡಿದು ಕೈಯೊಳಗೆ ಶಂಕರನು ತಿರುವ್ಯಾಡಿ ಕುರಿಗಳನಾ
ತಲೆಯಮ್ಯಾಲಗೊಂಗಡಿ ಕುಂಚಗಿ ಧರಿಸಿಕೊಂಡಿದ್ದನೊ ಮುಕ್ಕಣ್ಣಾ
ಎಳಿಯ ಹುಲ್ಲನು ಮೇಸುತ ಸಾಂಬನು ಇಳಿದು ಬಂದ ಭೂಮಿಯ ಮ್ಯಾಲಾ
ಸಾಂಬನ ಊಟಕ್ಕೆ ಪಾರ್ವತಿದೇವಿಯು ಬುತ್ತಿ ಕಟ್ಟಿದಾಳ ಪ್ರೇಮದಲಿ
ಅಡವಿ ಭೋಜನ ಅಂಬಲಿರೊಟ್ಟಿ ಶಂಕರಿ ತಂದಾಳೊ ಬೇಗದಲಿ
ಹೆಸರ ಹುಲ್ಲನು ಹಸನಾಗಿ ಮೇಸುತ ಶಶಿಧರ ನಡೆದಾ ಅಡವಿಯೊಳು
ಬ್ಯಾಸರಾಗಿ ಶ್ರೀ ಗೌರಿ ಪಾರ್ವತಿ ಶೋಧಿಸಿ ನಡೆದಾಳ ಹಿಂಬಾಲಾ
ಪಾರ್ವತಿದೇವಿಯ ಮಾರಿ ನೋಡಿ ಮಾರಾರಿ ಶಂಕರನು ನಿಲ್ಲುತಲಿ
ಹೊತ್ತು ತಂದ ಅಂಬಲಿ ಬಕ್ಕರಿ ಇಡಿಸಿದ ಹಳ್ಳದ ದಂಡಿಯಲಿ
ಆರು ತಾಸು ಬಿಸಲೇರಿ ಬಂದಿತು ಕುರಿಗೆ ನೀರ ಕುಡಿಸಿದ ಪೈಲಾ
ಚಂದದಿಂದ ಶಿವನು – ಪಾರ್ವತಿ ಊಟ ಮಾಡಿದರೋ ಆ ಮ್ಯಾಲಾ
ಪಾರ್ವತಿದೇವಿಗೆ ಸಾಂಬ ಹೇಳತಾನ ಮಾತ ಕೇಳ ಮೋಹದ ಬಾಲಿ
ಹೋಗಿ ಬರುವೆ ನಾ ಅರ್ಧತಾಸು ನೀ ಕುರಿಯ ಕಾಯಬೇಕ ಹರುಷದಿ
ಹರನ ಮಾತಕೇಳಿ ಕುರಿಯ ಕಾಯಲಿಕ್ಕೆ ಗಿರಿಜಾದೇವಿ ಧರಿಸ್ಯಾಳೊ ಕೋಲಾ
ಕುರಿಹಿಕ್ಕಿಯನು ಸುಟ್ಟು ಭಸ್ಮವ ಧರಿಸಿಕೊಂಡನು ಶಿವ ಹಣಿಯ ಮ್ಯಾಲ
ಕಾವಿ ಲಾಂಚನ ಕಾಲೊಳು ಜಂಗು ತ್ರಿಸೂಲ ಹಿಡಿದಾನೋ ಕೈಯಲ್ಲಿ
ಜಂಗಮನಾಗಿ ಹೋದ ಸಾಂಬನು ತಿಮ್ಮಾಪೂರ ಎಂಬ ಗ್ರಾಮದಲಿ
ಆದಿಗೊಂಡನೆಂಬ ಗೌಡನ ಮನಿಗೆ ಹೋಗಿ ನಿಂತ ಆನಂದದಲಿ
ಭೂಮಿಯ ದಾನ ನೀಡಂತ ಬೇಡಿದಾನು ಆದಿಗೊಂಡನ ಮನೆಯಲ್ಲಿ
ಐದು ಮೊಳಾ ಭೂಮಿ ಕೊಡೋ ನಿನ್ನ ಕೀರ್ತಿಯನ್ನು ಹೊಗಳುವೆ ಪೃಥ್ವಿಯಲ್ಲಿ
ಭಕ್ತಿಲೆ ಗೌಡ ಭೂಮಿದಾನವನು ನೀಡಿದ ಶಿವನಿಗೆ ಅರ್ತಿಯಲಿ
ಆದಿಗೊಂಡನು ಭಕ್ತಿಗೆ ಮೆಚ್ಚಿ ವರವ ಕೊಟ್ಟ ಹರ ಕರುಣದಲಿ
ಹೊರಳಿ ಬಂದು ಪಾರ್ವತಾದೇವಿ ಆದ ಸಂಗತಿ ತಿಳಿಸುತಲಿ
ದಾನ ನೀಡಿದ ಭೂಮಿಯಲ್ಲಿ ನಿಂತ ತ್ರಿಸೂಲದಿಂದ ತಿವಿಯುತಲಿ
ತಿವಿದ ಭೂಮಿಯೊಳು ಗವಿಯು ಆದೀತೊ ತಿಳಿಯರೆಪ್ಪ ಮುಂದಿನ ಲೀಲಾ
ತ್ರಿಸೂಲದಿಂದ ತಿವಿದ ಗವಿಯೊಳು ತಿರುವಿದಾನ ಕುರಿಗಳ ಹಿಂಡಾ
ಕುರಿಗಳೆಲ್ಲ ಗವಿಯೊಳಗೆ ಅಡಗಿದಾಗ ಮುಂದೆ ತಂದು ಹಚ್ಚಿ ಹಿಂಡಾ
ಪಂಚತತ್ವ ಎಂಬ ಚಿಲಕ ಮಾಡಿದಾನು ಜ್ಞಾನ ಎಂಬುವ ಹೊಸ್ತಲ ಕೊರದಾ
ಪಾರ್ವತಾದೇವಿಯ ಮೂಗುತಿ ತೆಗೆದು ಬೀಗ ಹಾಕಿ ಮುಚ್ಚ್ಯಾಳ ದವಡಾ
ಶಿವನು ಪಾರ್ವತಿ ಸ್ವರ್ಗಕ ಹೋದಾರು ಕೇಳಿರಪ್ಪ ಹಾಡಾ
ದಾನ ನೀಡಿದ ಭೂಮಿಗೆ ಬೀಜಾ ಬಿತ್ತಲಿಲ್ಲ ಗ್ರಾಮದ ಗೌಡಾ
ಗವಿಯ ಬಾಗಿಲಿಗೆ ಹುತ್ತ ಬೆಳದಿತೋ ಸುತ್ತ ಭೂಮಿ ಬಿದ್ದಿತೋ ಪಡಾ
ಶಂಕರಿ ಮೂಗುತಿ ಮೊಳಕಿ ಒಡದಿತೋ ಬೆಳದ ಆತು ಮುತ್ತಲ ಗಿಡಾ
ಮುತ್ತಲ ಗಿಡಾ ಅಲ್ಲಿ ಹುಟ್ಟಿತು ತೊಗೊ ನಿನ್ನ ತೋಡಿಗೆ ತೋಡಾ
ಧರೆಯೊಳು ಮೆರೆಯುವ ಪುರ ಹುಲಕುಂದ ಹಿರಿಮಠೇಶನ ಕವಿಕುಶಲಾ™