ಮುಂಡಾಸುರ ದೈತ್ಯನ ವಧೆ

ಗುಲ್ಲ ಮಾಡದೆನ್ನ ಸೊಲ್ಲ ಕೇಳರಿ ನಿಂತು ಕೇಳುವೆನು ಕೈಮುಗಿದಾ
ಮುಂಡಾಸೂರ ಎಂಬ ಪುಂಡ ದೈತ್ಯನ ರುಂಡ ಕಡಿದ ರೇವಣಸಿದ್ಧ
ಮುಂಡಾಸೂರನು ಮೀರಿ ಮಲತು ನಿಂತಿದ್ದನು ಮಂಡಲದೊಳು ಮೆರೆಯುತಲಿದ್ದ
ನಾರಿದ್ರೋಹಿ ಗುರುದ್ರೋಹಿ ರಾಕ್ಷಸ ಮಾಡತಿದ್ದ ಶಿವನಿಗೆ ನಿಂದಾ
ಪುಣ್ಯವೆಂಬುದು ಜನ್ಮದೊಳಗ ಇಲ್ಲ ಗನ್ನಗಾತಕನು ಮತಿ ಮುಂದಾ
ಅನ್ನೇದ ಕೆಲ್ಸ ಅಂಜದೆ ಮಾಡುವಾ ಆತ್ಮದ್ರೋಹಿ ಎಂದೆನಿಸಿದ್ದಾ
ಕರುಣವಿಲ್ಲದ ಕಟುಕ ರಾಕ್ಷಸ ನರರ ಮಾಂಸ ಭಕ್ಷಿಸುತಿದ್ದಾ
ಘಾತಕನೋ ಕುಲಪಾತಕನೋ ಭೂತಳದೊಳು ಧರಿಸಿದ ಬಿರದಾ
ಮದಾಂಧನಾಗಿ ಮಹೀತಳದೊಳು ಮೀರಿ ಹಾವಳಿ ನಡಿಸಿದ್ದ
ಚಾರುಗಾತ್ರ ಪತಿವೃತಾ ಸ್ತ್ರೀಯರ ಸೀರಿಕಳೆದು ಮರ್ಯಾದೆಗೆಡಸಿದಾ
ಖೂಳ ದೈತ್ಯನ ಕಾಟಕಾಗಿ ಗೋಳಾಡತಾರ ಜನಾ ಎಡಬಿಡದೇ
ಸರ್ವಜನಾ ಎಲ್ಲಾ ಭೋರಿ ಬಳಲತಾರ ರೇವಣ ಸಿದ್ಧನ ಪಾದ ಹಿಡಿದ
ಪಾದ ಹಿಡಿದು ತಮಗದ ಕಷ್ಟವನು ಹೇಳಿ ಬೇಡಿಕೊಂಡಾರೋ ಬಿದ್ದಾ
ಕುಜನ ಶಿಕ್ಷಕಾ ಸುಜನ ರಕ್ಷಕಾ ಪಾಲಿಸೋ ಗುರು ದಯದಿಂದ
ಗೋಳ ಕೇಳಿ ತನ್ನ ಭಕ್ತಮಂಡಳಿಗೆ ವಚನ ಕೊಟ್ಟಾನೋ ಗುರುರಾಯಾ
ಮುಂಡಾಸೂರನ ರುಂಡವ ತೆಗೆದು ಮೆರೆಸುವೆ ಹೇಯವನಾ
ಮಾರಿ ಸಣ್ಣ ಮಾಡಿ ಬಳಲ ಬೇಡಿರೊ ದೂರ ಮಾಡುವೆನು ನಿಮ್ಮ ಭಯಾ
ಭರದಿ ಹೋಗಿ ಶಿರಹರಿದು ಖಡ್ಗದಿಂದ ಕೊರೆದು ಬಿಡುವೆ ದೈತ್ಯನ ಕೈಯಾ
ಇಷ್ಟು ಅಭಯವ ಕೊಟ್ಟು ಕಳಿಸಿದಾನು ಹೊಂಟಹೋತು ಜನಸಮೂಹ
ಶತ್ರುರಾಕ್ಷಸನ ಕೊಲ್ಲಲೋಸ್ಕರ ಶಸ್ತ್ರಧರಿಸಿ ಎತ್ತಿದ ಕೈಯಾ
ಕೋಟಿಸೂರ್ಯರು ಮಾಡಿದಂತೆ ಥಳಾಥಳಾ ಹೊಳೆವ ಖಡ್ಗದ ಛಾಯಾ
ಶ್ರೀ ಗುರುರೇವಣಸಿದ್ಧ ಪ್ರಭುವಿಗೆ ಯಾರೂ ಇಲ್ಲರಿ ಸಹಾಯಾ
ದಂಡು ದಳಾ ಇಲ್ಲ ಮದ್ದುಗುಂಡು ಇಲ್ಲ ತಯ್ಯಾರಾದ ಸದ್ಗುರುರಾಯಾ
ಸಾರಿ ಚೀರಿ ಜಯಭೇರಿ ಹೊಡೆದು ವೈರಿಕೂಡ ತೆಗೆದಾನ ನ್ಯಾಯಾ
ದೈತ್ಯ ಆಗ ದಂಡೆತ್ತಿ ಬಂದನೋ ಹತ್ತುಕೋಟಿ ಕಾಲ್ಬಲ ಹಯಾ
ವೀರ ಧೀರ ಗಂಭೀರ ಸೈನಿಕರು ರಣದೊಳು ಕುಣಿಯುತ್ತಿದ್ದರು ತೈತಯ್ಯಾ
ಮಸ್ತಿಲಿಂದ ಮದಯುಕ್ತ ದೈತ್ಯನು ಸಿಸ್ತಿನಿಂದ ಯುದ್ಧಕೆ ಬಂದಾ
ಧಾವಿಸಿ ಶ್ರೀ ಗುರು ರೇವಣಸಿದ್ಧನು ಯುದ್ಧರಂಗದಲಿ ಅಡಿ ಇಟ್ಟಾ
ರಾಕ್ಷಸಗ ಮತ್ತು ರೇವಣಸಿದ್ಧಗ ನಡದೀತ ಭಯಂಕರ ಬಡಿದಾಟ
ಸುತ್ತಲು ರಾಕ್ಷಸದಂಡು ಮುತ್ತಿಗೆ ಹಾಕಿತು ಮಧ್ಯದಲಿ ನಿಂತು ಎದಿಗೊಟ್ಟ
ತಾಸಿನೊಳು ದಶಕೋಟಿ ಸೈನ್ಯವನು ನಾಶಮಾಡಿ ಓಡಿಸಿಬಿಟ್ಟಾ
ಒಬ್ಬನೇ ರೇವಣ ಅಬ್ಬರಿಸುತ ಕಣ ಬೊಬ್ಬೆ ಹೊಡೆದು ಬಿಚ್ಚಿದ ಜಟಾ
ಭಕ್ತಿಯಿಂದ ಶಿವನಾಮ ಭಜಿಸುತ ದೈತ್ಯನ ಕೊರಳಿಗೆ ಕೈಯಿಟ್ಟಾ
ಸಾಧು ಸಂತ ಶಿವಶರಣ ಜನರನ್ನು ಪರಿಪರಿಯಲಿ ಕಾಡಿದ ದುಷ್ಟಾ
ಶಿವದ್ರೋಹಿ ಇನ್ನ್ಯಾಂಗ ಬದಕುವಿ ತಾಳೋ ನನ್ನ ಖಡ್ಗದ ಪೆಟ್ಟಾ
ರೇವಣಸಿದ್ಧನ ನುಡಿಯನು ಕೇಳಿ ರಾಕ್ಷಸಗ ಬಹಳ ಬಂದಿತೋ ಸಿಟ್ಟಾ
ಡುರೆ ಅಂತ ಹಾರಿ ಜಿಗಿದು ಬಂದು ಕೈಹಿಡಿದಾನೋ ಮುಕ್ಕಾಟ್ಟಾ
ಮಂತ್ರವ ಜಪಿಸಿ ರೇವಣರು ಊದಿದಾರ ದೈತ್ಯ ಓಡಿದಾನು ದಿಕ್ಕೆಟ್ಟಾ
ಬೆನ್ನ ಹತ್ತಿ ತಿರುವ್ಯಾಡಿ ಜಡಿದರ ರಾಕ್ಷಸ ಬಿದ್ದಾನೊ ತಕ್ಕೆಟ್ಟಾ
ಖಡ್ಗದ ತುದಿಯಿಂದ ತಿವಿದ ಕರುಳಗಳ ಹರಿದು ತೂರ‍್ಯಾಡಿದ ತಲೆಕಿರೀಟಾ
ಮುಂಡಾಸೂರನು ಮರಾಮರಾ ಮರಗುತ ಯುದ್ಧರಂಗದೊಳು ಮೃತಪಟ್ಟಾ
ನದಿ ಆಕಾರ ನೆತ್ತರ ಹರದಿತೋ ಅಸ್ತಿ ಚರ‍್ಮವನು ಹಿರಿದೊಗೆದಾ
ಧರಿಯೊಳು ದೊಡ್ಡ ಕ್ಷೇತ್ರ ಕುಳಗೇರಿ ತಂದಿ ಸಿದ್ಧನು ನೆನದಿದ್ದಾ

˜™

ರೇವಣಸಿದ್ಧ

ಸರಸವಾದ ಸಾರಾಂಶ ಹೇಳತೀವಿ ಹರುಷದಿಂದ ಕೇಳರಿ ಕುಂತಾ
ರೇವಣಸಿದ್ಧನು ಹುಟ್ಟಿಬಂದ ಮ್ಯಾಲಾ ಸೃಷ್ಟಿಯೆಲ್ಲಾ ಆತೋ ಉದ್ದರಣಾ
ಕೊಲ್ಲಿಪಾಕಿ ಸೋಮೇಶ ಲಿಂಗದ ಪೀಠದಲ್ಲಿ ಹುಟ್ಟಿದವರಿವರಾ
ಆದ ಇತಿಹಾಸ ಓದಿ ಹೇಳರಿ ಕೇಳರಿ ಶಾಂತಿ ಆತ ನಮ್ಮ ಮನಾ
ಅಳಿದ ದುಷ್ಟರನು ಕಳೆದ ಕರ್ಮವನು ಬೆಳೆದ ಭೂಮಿಯೊಳು ಸಂಪೂರ್ಣ
ಉಲ್ಲಾಸದಿಂದಲಿ ಕೊಲ್ಲಿಪಾಕಿ ಬಿಟ್ಟು ಹೊರಟ ಒಂದು ದಿನಾ ಸಂಚಾರಕ
ಭವಿಗಳೆಲ್ಲರಿಗೆ ಬೋಧ ಮಾಡುತ ಅಷ್ಟಾವರಣದ ಮಹಿಮೆಯನಾ
ಗುರುಲಿಂಗಜಂಗಮ ಪಾದೋದಕ ಪ್ರಸಾದ ಭಸ್ಮದ ಮಹಾತ್ಮೆಯನಾ
ಭಕ್ತಿಯಿಂದ ಶಿವಮಂತ್ರ ಜಪಿಸಲು ಏಳು ಜಲ್ಮದ ವಾಪವನಾ
ಏಳು ಜಲ್ಮದ ಪಾಪ ಹೋಗವದು ಪವಿತ್ರ ಆತನು ಶಿವಶರಣ
ರೇವಣಸಿದ್ಧರ ಬೋದೆಯಿಂದಲಿ ಸರ್ವಜನರಿಗೆಲ್ಲ ಸನ್ಮಾನಾ
ಮೋಕ್ಷ ಕಾರಣಕ ಯೋಗ್ಯವಾದ ಗುರುದೀಕ್ಷ ಹೊಂದಿದಾರ ಸಂಪೂರ್ಣ
ಸಂಚಾರ ಮಾಡುತ ಸಾಗಿ ಮುಂದೆ ಬಂದು ಸರೂರಕ್ಕೆ ಹಾಕ್ಯಾರ ಠಾಣಾ
ಸರೂರ ಗ್ರಾಮದ ಶಾಂತ ಮುತ್ತಯ್ಯಗ ಕೊಟ್ಟಾರ ಶಿವಲಿಂಗ ದೀಕ್ಷೆಯನಾ
ಭಕ್ತಿಯನ್ನು ಪ್ರಸಾರಗೊಳಿಸುತ ನಿತ್ಯದಲಿ ಸಾಂಬನ ಭಜನಾ
ಧರ್ಮಪತಾಕಿ ಹಿಡಿದು ಹಸ್ತದಲಿ ಕರ್ಮಿಗಳಿಗೆ ಗಂಟಲ ಗಾಣಾ
ಶಾಂತಾ ಮುತ್ತಯ್ಯನು ಶುದ್ಧ ಕರುಣದಿ ಹಿಡಿದಾನ ಮುಕ್ತಿಯ ಮಾರ್ಗವನಾ
ಸರಸವಾದ ಸಾರಾಂಶ ಹೇಳತೀನಿ ಹರುಷದಿಂದ ಕೇಳರಿ ಕುಂತಾ
ಸರೂರದಿಂದ ಪ್ರಯಾಣ ಬೆಳಿಸಿ ಲಂಕಪುರದ ಬಂದಾನ ಮತ್ತ
ಲಂಕಪುರದೊಳು ರೂಪಬದಲಿಸಿ ಮಾಯಾದೇವಿಯ ಮನೆಯಲಿ ನಿಂತಾ
ನೌಕರನಾಗಿ ನೀರ ತರುವನು ನಿತ್ಯದಲಿ ಕಾವಡಿಹೊತ್ತಾ
ಮಾಯಾದೇವಿಗೆ ತಿಳಿಯದ್ಹೋಯಿತು ರೇವಣಸಿದ್ಧೇಶ್ವರ ಗುರುತಾ
ಒಂದಾನೊಂದು ದಿನ ವಿಭೀಷಣಗೆ ಭೆಟ್ಟಿಯಾದನೋ ಸಾಕ್ಷಾತಾ
ಜ್ಞಾನದೃಷ್ಟಿಯಿಂದ ನೋಡಿ ವಿಭೀಷಣ ಮಾನಕೊಟ್ಟು ಮಾಡಿದ ಮಮತಾ
ವೇಷ ಬದಲುಮಾಡಿ ಮೋಸ ಮಾಡಿದ್ಯಾಕೆ ಸೋಸಿ ಹೇಳೋ ಸದ್ಗುರುನಾಥಾ
ರೇವಣಸಿದ್ಧರು ಉತ್ತರಕೊಟ್ಟರು ಸದಾ ನಾನು ಭಕ್ತರ ತೊತ್ತಾ
ವರಚರಣಗಳಿಗೆ ಶರಣ ಮಾಡುವೆನು ಕರುಣದಿಂದ ಕಾಪಾಡಂತಾ
ದಯಾದೃಷ್ಟಿಯಿಂದ ವರವ ನೀಡುತ ತಲಿಯ ಮ್ಯಾಲೆ ಇಟ್ಟಾನೊ ಹಸ್ತಾ
ಶ್ರೇಷ್ಠ ಮಂತ್ರವನು ಊದಿ ಕಿವಿಯೊಳು ಪಾದೋದಕವನು ಸಹಿತಾ
ಪಾವನ ರೂಪಿಯಾದ ವಿಭೀಷಣ ಪಾದೋಕದವನು ಸೇವಿಸುತ
ಗುರು ಸ್ವರೂಪ ರೇವಣಸಿದ್ಧರ ಹಸ್ತದಿಂದ ಆದ ಶಿವಭಕ್ತ
ದೈತ್ಯ ಹೋಗಿ ಶಿವಭಕ್ತನಾದನೋ ಹತ್ತಿದ ಮುಕ್ತಿಯ ಸೋಪಾನ
ಶ್ರೀ ಗುರು ರೇವಣಸಿದ್ಧೇಶ್ವರನಿಗೆ ಮರೆಗೊಂಡು ದೊರಿ ವಿಭೀಷಣ
ಧನ್ಯ ಲಂಕಪೂರ ಪುಣ್ಯಭೂಮಿ ಮಾಡೆಂದು ಬೇಡಿದನು ಲಂಕೆಯನಾ
ಮೂರು ಕೋಟಿ ಶಿವಲಿಂಗ ಸ್ಥಾಪಿಸಿ ಅನುದಿನ ನಡಿಸ್ಯಾರೋ ಲಿಂಗಾರ್ಚನ
ಭಕ್ತಿ ಬೀಜವನು ಬಿತ್ತಿ ಸಿದ್ಧೇಶ್ವರತ್ತಮಾರ್ಗವ ತಿಳಿಸಿದ ಪೂರ್ಣ
ಸರ್ವಜನ ಹಣಿಯ ಮ್ಯಾಲೆ ವಿಭೂತಿವೀರಶೈವ ಧರ್ಮ ಚಿನ್ನ
ಧರ್ಮಪತಾಕಿ ಹಿಡಿದ ಹಸ್ತದಲಿ ಕರ್ಮಿಗಳಿಗೆ ಗಂಟಲ ಗಾಣಾ
ಸತ್ಯಸಾಕ್ಷ ಸರ್ವೇಶ ಚಿದ್ರೂಪ ಹೇಳಲಾರೆ ಸಿದ್ಧನ ವರಣಾ
ಶಿವನ ಶಾಪದಿಂದ ಅವನಿಯೊಳು ಅವತರಿಸಿ ತೋರಿದಾನು ರೂಪವನಾ
ದಾಸರಾಗಿ ಸಿದ್ಧೇಶ್ವರನ ಸ್ಮರಿಸಲು ದೋಷವೆಲ್ಲ ಆಗತದ ಹರಣ
ಸಂದು ಉಳಿತು ಮತ್ತೊಂದು ಹಾಡಿನೊಳು ಮುಂದೆ ಹೇಳುವೆನು ಸಂಪೂರ್ಣ
ಪೂರ್ಣ ಆತನ ವರ್ಣ ಮಾಡಲು ಆದಿಶೇಷಗ ಆಗದ ಕಥನಾ
ಸ್ಮರಣ ಮಾಡುವೆವು ಕುಳಗೇರಿ ಗುರುಸಿದ್ಧೇಶ್ವರನ ಚರಣವನಾ™

 

ಭಕ್ತ ಮಡಿವಾಳ

ಒಪ್ಪಿಟ್ಟು ಹಾಡೇನು-ನೆಪ್ಪಿಟ್ಟು ಕರದೇನು
ಗುರುವು ರೇವಣಸಿದ್ಧಾನೇ
ಗುರುವು ರೇವಣಸಿದ್ಧನೆಂದರ
ದೊಡ್ಡವನಿದ್ದ ಬನ್ನೀರೆ

ಕೈಲಾಸಕ ಮರ್ತೃ ಲೋಕಕ
ಮಲ್ಲಿಗ್ಹೂವಿನ ಸೋಪಾನೇ
ಕೈಲಾಸವ ಬಿಟ್ಟಾನ ರೇವಣ
ಮರ್ತ್ಯಲೋಕಕ ಬಂದಾನೇ

ಮರ್ತ್ಯಲೋಕದೊಳಗ ಬಂದಾನ ರೇವಣ
ಏನೇನ ಕೌತುಕ ಮಾಡ್ಯಾನೇ
ಬಿಕ್ಷಾವ ಮಾಡ್ಯಾನ ಲಕ್ಷವ ಸಲುವ್ಯಾನ
ಗುರುವು ರೇವಣಸಿದ್ಧಾನೇ

ನಂದ್ವಾಡಗಿ ನಂದವ್ವನ ಮನಿಗೇ
ಕೋರಾಣ ಭಿಕ್ಷಾ ಅಂದಾನೇ
ನಂದ್ವಾಡಗಿ ನಂದವ್ವ ಅಪ್ಪ
ಏನೊಂದ ಹೇಳತಿದ್ದಾಳೆ

ಕರಗೋಳ ಬಿಟ್ಟೇನ ಮರಗೂಳ ಹಾಕೀನಿ
ಮುಂದಿನ ಮನಿಗನುವಾಗಲಿ
ಗುರುವು ರೇವಣಸಿದ್ಧಾನಪ್ಪ
ಮುಂದಕ ಸಾಗಿ ನಡದಾನೇ

ಒಕ್ಕಲಿಗೇರ ಮುದ್ದವ್ವನ ಮನಿಗೆ
ಕೋರಾಣ ಭಿಕ್ಷಾ ಅಂದಾನೇ
ಒಕ್ಕಲಿಗರ ಮುದ್ದವ್ವ ಅಪ್ಪ
ಏನೊಂದ ಹೇಳುತಿದ್ದಾಳೋ

ಗಂಡುಗುಣಲಾಕ ಕೊಟ್ಟೀನೈನೋರೆ
ಮುಂದಿನ ಮನಿಗನುವಾಗಲೇ
ಗುರುವು ರೇವಣಸಿದ್ಧಾ ಅಪ್ಪ
ಮುಂದಕ ಸಾಗಿ ನಡೆದಾನೋ

ಅಗಸರ ಮಡಿವಾಳನ ಮನಿಗೇ
ಕೋರಾಣ ಭಿಕ್ಷಾ ಅಂದಾನೇ
ಅಗಸರ ಮಡಿವಾಳ ಅಪ್ಪ
ಗುರುವಿನ ಗುರ್ತೊಂದ ಹಿಡದಾನೋ

ಗುರುವಿನ ಗುರ್ತೊಂದ ಹಿಡಿದಾನಪ್ಪ
ಕರೀಕಂಬಳಿ ತಂದಾನೋ
ಕರಿಯ ಕಂಬಳಿ ತಂದಾನಪ್ಪ
ಮುರದು ಗದ್ದಿಗಿ ಹಾಕ್ಯಾನೋ

ಮುರುದ ಗದ್ದಿಗಿ ಮ್ಯಾಗೇಳೊ ನಮ್ಮ
ರೇವಣ ಮೂರುತ ಮಾಡ್ಯನೋ
ಅಗಸರ ಮಡಿವಾಳಪ್ಪ ಅಂವ
ಗೋದಿ ಗುಮ್ಮಿಗೆ ಹ್ವಾದಾನೋ

ಗೋದಿ ಗುಮ್ಮಿಗೆ ಹ್ವಾದಾನಪ್ಪ
ಮರತುಂಬಿ ಗೋದಿ ತುಂಬ್ಯಾನೊ

ಮರತುಂಬಿ ಗೋದಿ ತುಂಬ್ಯಾನ ಮಡಿವಾಳ
ಗುರುವಿಗೆ ನೀಡಲು ಬಂದಾನ
ಗುರುವಾ ರೇವಣಸಿದ್ದಾ ಅಪ್ಪ
ಏನೊಂದ್ಹೇಳತಿದ್ದಾನೋ

ಇವೇ ಗೋದಿ ಅಲ್ಲೋ ಮಡಿವಾಳಾ
ದೇವರು ನನಗ ಕೊಟ್ಟಾನೋ
ಅಗಸರ ಮಡಿವಾಳಪ್ಪ ಇಂವ
ತಿರಿಗಿ ಹಿಂಬರಿಕಿ ಬಂದಾನೋ

ತಿರಿಗಿ ಹಿಂಬರಕಿ ಬಂದಾನ ಮಡಿವಾಳ
ದೇವರ ಮನಿಯ ಹೊಕ್ಕಾನೋ
ದೇವರ ಮನಿಯ ಹೊಕ್ಕಾನೊ ಮಡಿವಾಳ
ಹವಳ, ಮುತ್ತು ತುಂಬ್ಯಾನೋ

ಹವಳ, ಮುತ್ತು, ತುಂಬ್ಯಾನೊ ಮಡಿವಾಳ
ಗುರುವಿಗೆ ನೀಡಲು ಬಂದಾನೋ
ಗುರುವು ರೇವಣಸಿದ್ಧಾ ಅಪ್ಪ
ಏನೊಂದ್ಹೇಳತಿದ್ದಾನೋ

ಇವೇ ಹವಳ ಅಲ್ಲೋ ಮಡಿವಾಳ
ದೇವರು ನನಗೆ ಕೊಟ್ಟಾನೋ
ಅಗಸರ ಮಡಿವಾಳಪ್ಪ ಅಂವ
ಏನೊಂದ್ಹೇಳತಿದ್ದಾನೋ

ಎನ ಬೇಡತಿ ಬೇಡು ನನ ಗುರುವೆ
ಬೇಡಿದ್ದ ಕೊಡತೀನಂದಾನೋ
ಗುರುವು ರೇವಣಸಿದ್ದಾ ಅಪ್ಪ
ಏನೊಂದ್ಹೇಳತಿದ್ದಾನೋ

ಹನ್ನೆರಡೊರಸಿನ ಹಳೆಯ ಕಂತಿ
ಬಾಳ ಮಾಸ್ಯಾವಂದಾನೋ
ಬಾಳ ಮಾಸ್ಯಾವಂದರ ಕಂತಿ
ಗಂಜಿ ಮಾಡಬೇಕಂದಾನೋ

ಗಡಿಗ್ಯಾಗ ಕುಚ್ಚಲಿಬಾರದಪ್ಪ
ನೀರಾಗ ಸೆಳೆಯಲಿಬಾರದೋ
ಬಂಡಿಗೆ ಬಡಿಯಲಿಬಾರದಪ್ಪ
ಕಾಲಲಿ ತುಳಿಯಬಾರದೊ

ಏಪ್ಪತ್ತೊರಸಿನ ಮುಪ್ಪಿನ ಕಂತಿ
ಮುಕ್ಕಾದರ ನಾ ಹಿಡಿಲಾರೆನೋ
ಅರವೊತ್ತುರಸಿನ ವರವಿನ ಕಂತಿ
ಹರದರ ನಾ ಹಿಡಿಲಾರನೋ

ಗುರುವು ರೇವಣಸಿದ್ಧಾನಪ್ಪಾ
ಅಂದು ಹೀಗೊಂದ್ಹೇಳತಿದ್ದಾನೋ
ಮೂರು ಮಾತು ಹೇಳ್ಯಾನೋ ರೇವಣ
ಅಲ್ಲೇ ಮಾಯವಾದನೋ

ಅಗಸರ ಮಡಿವಾಳನಪ್ಪ ಅಂವ
ಬಾಳ ಗಾಬರ‍್ಯಾದಾನೋ
ಅಗಸರ ಮಡಿವಾಳನ ಹೆಣ್ತಿ
ಬಾವಿ ನೀರಿಗೆ ಹೋಗ್ಯಾಳೋ

ಬಾವಿ ನೀರಿಗೆ ಹೋಗ್ಯಾಳಪ್ಪ
ಭರಮಾಡಿ ಮನಿಗೆ ಬಂದಾಳೋ
ಭರಮಾಡಿ ಮನೆಗೆ ಬಂದಾಳಪ್ಪ
ಕೊಡ ತಮ್ಮನಿಯಾಗಿಳಿವ್ಯಾಳೋ

ಕೊಡ ತಮ್ಮನಿಯಾಗಿಳಿವ್ಯಾಳಪ್ಪ
ಗಂಡನ ಮಾರಿ ನೋಡ್ಯಾಳೋ
ಯಾರೇನ ನಿಂದಿಯಾಡ್ಯಾರ ಗುರುವೇ
ಯಾರೇನು ಕುಂದನಾಡ್ಯಾರೇ

ಯಾರೇನು ಕುಂದನಾಡಿಲ್ಲ ಹೆಣ್ಣೇ
ಯಾರೇನು ಕುಂದನಾಡಿಲ್ಲೇ
ಗುರುವು ರೇವಣಸಿದ್ಧನೋ ಅಂವ
ಭಿಕ್ಷೆ ಬೇಡಲು ಬಂದಿದ್ದನೋ

ಜ್ವಾಳಾ ನೀಡಿದರ ಹಿಡಿಲಿಲ್ಲ ಹೆಣ್ಣೇ
ಗೋದಿ ನೀಡಿದರ ಹಿಡಿಲಿಲ್ಲೇ
ಗೋದಿ ನೀಡಿದರ ಹಿಡಿಲಿಲ್ಲ ಹೆಣ್ಣೇ
ಹವಳ ನೀಡಿದರ ಹಿಡಿಲಿಲ್ಲೇ

ಹನ್ನೆರಡು ವರಸಿನ ಹಳೆಯ ಕಂತಿ
ಬಾಹಳ ಮಾಸ್ಯಾವಂದಾನೇ
ಬಾಹಳ ಮಾಸ್ಯಾವಂದಾನ ಕಂತಿ
ಗಂಜೀ ಮಾಡಬೇಕಂದಾನೇ

ಗಡಿಗ್ಯಾಗ ಕುಚ್ಚಲು ಬಾರದಂತ
ನೀರಲಿ ಸೆಳೆಯಬಾರದೋ
ಬಂಡಿಗೆ ಬಡಿಯಲಿ ಬಾರದಂತ
ಕಾಲಲಿ ತುಳಿಯ ಬಾರದೋ

ಎಪ್ಪತ್ತೊರಸಿನ ಮುಪ್ಪಿನ ಕಂತಿ
ಮುಕ್ಕಾದರ ನಾ ಹಿಡಿಯಲಾರೆನೇ
ಅರವತ್ತೊರಸಿನ ವರವಿನ ಕಂತಿ
ಹರದರ ನಾ ಹಿಡಿಲಾರನೇ

ಅಗಸರ ಮಡಿವಾಳನ ಹೇಣ್ತಿ
ಇದೇನೆ ಆಗಾದಂದಾಳೋ
ಇದೇನಗಾದಂದಾಳ ಕಂತಿ
ಗಂಜೀ ಮಾಡೂನಂದಾಳೋ

ಗಂಡಾ ಹೇಣ್ತಿ ಕೂಡ್ಯಾರವರು
ಊರನ ಅರವಿ ಎತ್ಯಾರೋ
ಊರನ ಅರವಿ ಎತ್ಯಾರಪ್ಪ ಅವರು
ಹೊಳ್ಳಿಸಿ ಗಂಟ ಬಿಗಿದಾರೋ

ಹೊಳ್ಳಿಸಿ ಗಂಟ ಬಿಗಿದಾರಪ್ಪ ಅವರು
ಏರು ಮಾರ್ಗೊಂದು ಹಿಡಿದಾರೋ
ಏರು ಮಾರ್ಗೊಂದು ಹಿಡಿದಾರಪ್ಪ ಅವರು
ಹಾಲ ಹಳ್ಳಕ ಹೋಗ್ಯಾರೋ

ಊರ ಅರವಿ ಒಗೆದಾರಪ್ಪ ಅವರು
ಗುರುವಿನ ಕಂತಿ ಹಿಡಿದಾರೋ
ಬಾರ ಬಾರ ನನ ಮೋಹದ ಮಡದಿ
ಕಂತೀ ಗಂಜೀ ಮಾಡೂನು

ಅಗಸರ ಮಡಿವಾಳನ ಹೇಣ್ತಿ
ಏನೊಂದ್ಹೇಳತಿದ್ದಾಳೊ
ಎತ್ತಿ ನೆಲಕ ಒಗಿಬೇಕು ನನ್ನ
ಕುತ್ತೀಗ್ಯಾದರೂ ಕೊಯ್ಯಬೇಕೊ

ಮಲಿಯ ಮೂಗ ಕೊಯ್ಯಬೇಕು ಅಲ್ಲಿ
ಒಲಿಯ ಗುಂಡ ಹೂಡಬೇಕು
ಕೈಯ ಕಾಲ ಕಡಿಬೇಕೋ ಅಲ್ಲಿ
ಕಟಗೀ ಕುಳ್ಳ ಮಾಡಬೇಕೋ

ತಲಿಯ ಡೊಗೀ ಒಡೀಬೇಕು ಅಲ್ಲಿ
ಕುಚ್ಚುವ ಗಡಗೀ ಮಾಡಬೇಕು
ತಲಿಯ ಮಿದುಡ ತರೀಯಬೇಕು ಅಲ್ಲಿ
ಸೇದಿ ಸುಣ್ಣವ ಮಾಡಬೇಕು

ಡೊಕ್ಕೀ ಎಲುವ ಮುರಿಬೇಕು ಅಲ್ಲಿ
ಒಗಿಯುವ ಬಂಡಿ ಮಾಡಬೇಕು
ಹರಿಯುರಗತ ತಗೀಬೇಕು ಅಲ್ಲಿ
ಹಾಲ ಹಳ್ಳವ ಮಾಡಬೇಕು

ಹಾಲ ಹಳ್ಳವ ಮಾಡಬೇಕು ಅಲ್ಲಿ
ಕಂತೀ ಗಂಜಿ ಮಾಡಬೇಕು
ಅಗಸರ ಮಡಿವಾಳನ ಹೇಣ್ತಿ
ಹೀಂಗೆಂದ್ಹೇಳತಿದ್ದಾಳೋ

ಅಗಸರ ಮಡಿವಾಳನಪ್ಪ ಅಂವ
ಬೋರ‍್ಯಾಡಿ ದುಃಖವ ಮಾಡ್ಯಾನೋ
ಬೋರ‍್ಯಾಡಿ ದುಃಖವ ಮಾಡ್ಯಾನಪ್ಪ ಅಂವ
ತನ್ನ ಮನೀಗೆ ಬಂದಾನೋ

ಮಲೀ ಮೂಗ ಕೊಯ್ದಾನಪ್ಪ
ಓಲಿಯ ಗುಂಡ ಹೂಡ್ಯಾನೋ
ಕೈಯ ಕಾಲ ಕಡಿದಾನಪ್ಪ ಅಂವ
ಕಟಗಿ ಕುಳ್ಳು ಮಾಡ್ಯಾನೋ

ತಲೆಯ ಡೋಗಿ ಒಡೆದಾನಪ್ಪ ಅಂವ
ಕುದಸು ಗಡಗೀ ಮಾಡ್ಯಾನೋ
ತಲಿಯ ಮಿದುಡು ತಗದಾನಪ್ಪ ಅಂವ
ಸೇದಿ ಸುಣ್ಣವ ಹಚ್ಚ್ಯಾನ

ಡೊಕ್ಕಿ ಎಲು ಮುರಿದಾನಪ್ಪ ಅಂವ
ಒಗಿಯುವ ಬಂಡೀ ಮಾಡ್ಯಾನೋ
ಹರಿಯುವ ರಗತ ತರಬ್ಯಾನಪ್ಪ ಅಂವ
ಹಾಲ ಹಳ್ಳವ ಮಾಡ್ಯಾನೋ

ಹಾಲ ಹಳ್ಳವ ಮಾಡ್ಯಾನಪ್ಪ ಅಂವ
ಕೈಯಲಿ ಕಂತಿ ಹಿಡಿದಾನೋ
ಊರ ಅರವಿ ಕಟ್ಯಾನಪ್ಪ ಅಂವ
ಹೊಳಸಿ ತಲಮ್ಯಾಲ ಇಟ್ಟಾನೋ

ಹೊಳಸಿ ತಲಿಮ್ಯಾಲೆ ಇಟ್ಟಾನಪ್ಪ ಅಂವ
ಏರು ಮಾರ್ಗವ ಹಿಡಿದಾನೋ
ಏರು ಮಾರ್ಗವ ಹಿಡಿದಾನಪ್ಪ ಅಂವ
ರಾಯ ಮಾರ್ಗದಿಂದ ಬಂದಾನೋ

ಊರ ಅರವಿ ಕೊಟ್ಟಾನಪ್ಪ ಅಂವ
ಕಂತೀ ಕೈಯಲ್ಲಿ ಹಿಡಿದಾನೋ
ಮುರಗಿ ಬೆತ್ತ ಮೂರೂರ ಜಂಗಮ
ಮುಂಜಾಳೆ ಭಿಕ್ಷಕ ಬಂದಾನೋ

ಅಗಸರ ಮಡಿವಾಳನಪ್ಪ ಅಂವ
ಗುರುವಿನ ಗುರ್ತೊಂದ ಹಿಡಿದಾನೋ
ಗುರುವಿನ ಗುರ್ತೊಂದ ಹಿಡಿದಾನಪ್ಪ ಅಂವ
ಕರಿಯ ಕಂಬಳಿ ತಂದಾನೋ

ಕರಿಯ ಕಂಬಳಿ ತಂದಾನೊ ಮಡಿವಾಳ
ಮುರದ ಗದ್ದಿಗೀ ಹಾಕ್ಯಾನೋ
ಅಗಸರ ಮಡಿವಾಳಪ್ಪ ಅಂವ
ಕಂತೀ ನೀಡಲು ಬಂದಾನೋ

ಗುರುವು ರೇವಣಸಿದ್ಧಾನಪ್ಪ ಅಂವ
ಏನೊಂದ್ಹೇಳತಿದ್ದಾನೋ
ಸತಿಯು ಪತಿಯು ಕೂಡಬೇಕು
ಗುರುವಿಗೆ ಕಂತೀ ನೀಡಬೇಕು

ಅಗಸರ ಮಡಿವಾಳನಪ್ಪ ಅಂವ
ಏನೊಂದ್ಹೇಳತಿದ್ದಾನೋ
ನನ್ನ ಮಡದಿ ಕಾಮಾಳದೇವಿ
ಊರಿಗ್ಹೊಗ್ಯಾಳಂದಾನೋ

ಊರಿಗೆ ಹೋದಾಳಲ್ಲೋ ಮಡಿವಾಳ
ನಾಳಿಗೆ ಬರತೀನಂದಾನೋ
ಊರಿಗೆ ಹೋಗಿಲ್ಲ ಗುರುವೇ
ನೀರಿಗ್ಹೋಗ್ಯಾಳಂದಾನೋ

ನೀರಿಗ್ಹೋದಾಳಲ್ಲೋ ಮಡಿವಾಳ
ಈಗ ಬರ್ತೀನಿ ಅಂದಾನೋ
ಅಗಸರ ಮಡಿವಾಳನಪ್ಪ ಅಂವ
ಎನೋಂದ್ಹೇಳತಿದ್ದಾನೋ

ನಾನೇ ಸತ್ತು ಹೋದರಯ್ಯ
ತಾನೇ ಎದ್ದು ಹೋಗತಾನೋ
ದೇವರ ಮನೆಯ ಹೊಕ್ಕಾನೋ ಮಡಿವಾಳ
ಚಂದರ ಅಲಗ ಹಿಡದನೋ

ಚಂದರ ಅಗಲ ಕೈಯಲಿ ಹಿಡಕೊಂಡು
ನೋಡಿ ಕಂಬಕ ಬಿಗಿದಾನೋ
ಅವನ ಮಡದಿ ಕಾಮಾಳದೇವಿ
ಅವಾಗ ತೈಯಾರ ಆಗ್ಯಾಳೋ

ಜರದ ಸೀರಿ ಉಟ್ಟಾಳ ಮಡದಿ
ಜರದ ಕುಪ್ಪಸ ತೊಟ್ಟಾಳೋ
ಕಂಚಿನ ಕಳಸೊಂದ ಹಿಡದಾಳ ಮಡದಿ
ಗಂಡನ ಸನಿಯಕ ಬಂದಾಳೋ

ಬಾರೋ ಬಾ ನನ ಬಲ್ಲಿದ ಗುರುವೇ
ಗುರುವಿಗೆ ಕಂತಿ ನೀಡೋಣ
ಸತಿಯು ಪತಿಯು ಮಾಡ್ಯಾರ ಗುರುವೇ
ಗುರುವಿಗೆ ಕಂತಿ ನೀಡ್ಯಾರೋ

ಗುರುವು ರೇವಣಸಿದ್ಧಾನಪ್ಪ ಅಂವ
ಏನೊಂದ್ಹೇಳತಿದ್ದಾನೋ
ಮೆಚ್ಚಿನಿ ಮಡಿವಾಳ ಮೆಚ್ಚೀನೋ
ನಿನ್ನ ಭಾವಕಾದರೂ ಮೆಚ್ಚೀನೋ

ನಿನ್ನ ಭಾವಕಾದರೂ ಮೆಚ್ಚೀನೋ
ನಿನ್ನ ಭಾವಕಾದರೂ ಮೆಚ್ಚೀನಿ ಮಡಿವಾಳ
ಏನ ಬೇಡ್ತಿ ಬೇಡೇಳೋ
ಏನ ಬೇಡ್ತಿ ಬೇಡೇಳೋ ಮಡಿವಾಳ

ಬೇಡಿದ್ದ ಕೊಡತೀನಿ ಅಂದಾನೋ
ಅಗಸರ ಮಡಿವಾಳನಪ್ಪ ಅಂವ
ಏನೊಂದು ಬೇಡತಿದ್ದಾನೋ
ಕತ್ತೆಗೆ ಕರಕಿ ಇರಲೇಳು ಗುರುವೆ

ಹಳ್ಳಕ ನೀರೊಂದು ಇರಲೇಳು
ಹಳ್ಳಕ ನೀರೊಂದಿರಲೇಳು ಗುರುವೆ
ಊರು ತಣ್ಣಗ ಇರಲೇಳು
ಮನಿಯ ಹೇಣ್ತಿ ಸಿರವ ಕೋದು

ಶಿವನ ಕಂಡವ ಯಾಂವನು
ಶಿವನ ಕಂಡವ ಯಾಂವನಪ್ಪ
ಅಂವ ಅಗಸರ ಮಡಿವಾಳನು
ಹೀಂಗ ಹಾಡತ ಹ್ವಾದರೊ ಗುರುವೆ

ಬೇಗ ಆದಾವು ಬೆಳಗಾಗ
ಬೇಗಾದವು ಬೆಳಗಾದವು ಗುರುವೆ
ಬೆಳ್ಳಿ ಮೂಡಲು ಹರಿದಾವು
ಬೆಳ್ಳಿ ಮೂಡಲು ಹರಿದಾವು ಗುರುವೆ

ಬೆಳ್ಳಿ ಮೂಡಲು ಹರಿದಾವು ಗುರುವೆ
ಸೂರ್ಯ ಕಿರಣ ಚೆಲ್ಲ್ಯಾವು
ಇಲ್ಲಿಗೊಂದು ಸುದು ನನ ಗುರುವೆ
ಹಾಡಿದವರ ಪದ ಮುಂದ್ಕೇಳು