ಇದೆಲ್ಲ ಖರೆ !

ಆದಿ ಹಿಡಿದು, ಆಕಾರವಾದೀತೋ ನಿರಾಕಾರ ಬೈಲಿದ್ದುದು ಖರೆ
ನಿರಾಕಾರ ನಿರ್ಮಾಣ ಮಾಡಿದಾಗ ಮಾನವ ಜಲ್ಮ ಹುಟ್ಟಿದ್ದುದು ಖರೆ
ಜಂಬನ ಮಕ್ಕಳ ಕೊಂದು ಭೂಮಿಗೆ ಹೆಪ್ಪಕೊಟ್ಟು ಭೂಮಿ ಹೊತ್ತ ಮಹಾಶೇಷ ಖರೆ
ಶಕ್ತಿವರವಿನಿಂದ ಸಂಕಪ್ಪ ಹುಟ್ಟಿದಾನೋ ಬಸಪ್ಪಯ್ಯ ಹುಟ್ಟಿದ್ದು ಖರೆ
ಬಸಪ್ಪಯ್ಯ ಮಹಾದೇವ ಸರ್ಪಹುಟ್ಟಿ ಸಮುದ್ರ ಮಥನ ಮಾಡಿದ್ದು ಖರೆ
ಸುತ್ತ ಕಡಿದರ ರತ್ನದ ಒಳಗ ಗಾಳಿಬೆಂಕಿ ಭೀರುಟ್ಟಿದ್ದು ಖರೆ
ತಾರ ಚಿಕ್ಕಿ ಮುಗಿಲಾಕಾರವಾದಿತೋ ಸೂರ್ಯಚಂದ್ರ ಹುಟ್ಟಿದ್ದು ಖರೆ
ದೊಡ್ಡ ಚಿಕ್ಕಿ ನಕ್ಷತ್ರ ಹುಟ್ಟಿದಾವೊ ದಕ್ಷಬ್ರಹ್ಮ ಹುಟ್ಟಿದ್ದು ಖರೆ
ದಕ್ಷಬ್ರಹ್ಮನ ಮಗಳು ಸಾಕ್ಷಾತ ಪಾರ್ವತಿ ಶಿವನ ಲಗ್ನವಾದದ್ದು ಖರೆ
ರೋಮದಿಂದ ಶಿವನ ರೋಮ ಜ್ಯಾಡಿ ಹುಟ್ಟಿ ಮೂರು ಕಂಬಳಿ ಹುಟ್ಟಿದ್ದು ಖರೆ
ನೇಮದಿಂದ ಶಿವನ ಹೋಮ ಹುಟ್ಟಿ ವೀರಭದ್ರ ಹುಟ್ಟಿದ್ದು ಖರೆ
ವೀರಭದ್ರ ಹುಟ್ಟಿ ರುದ್ರಾವತಾರ ತಾಳಿ ದಕ್ಷ ಬ್ರಹ್ಮನ್ನ ಹೊಡೆದದ್ದು ಖರೆ
ದಕ್ಷಬ್ರಹ್ಮನ ಹನಿ ರಕ್ತಕ ಮೂರು ಕೋಟಿ ರಾಕ್ಷಸರು ಹುಟ್ಟಿದ್ದು ಖರೆ
ಮೂರು ಲೋಕಕ ಮುನಿಗಳು ಹುಟ್ಟಿದಾರೋ ತೆತ್ತೀಸ ಕೋಟಿ ದೇವತ್ಯಾರು ಖರೆ
ಕಲಿಯು ಹುಟ್ಟಿತೊ ಕಡೆಯ ಆಟಕ ಕಲ್ಲದೇವರಾದದ್ದು ಖರೆ
ಕಲ್ಲದೇವರಿಗೆ ಕೈಮುಗಿದರ ಕರುಣವಿಟ್ಟು ಸಲಹುದು ಖರೆ˜™

 

ಸೃಷ್ಟಿ ಹುಟ್ಟಿದ ರೀತಿ

ತಂದೆಗಳಿರಾ ನಿಮಗ ವಂದಿಸಿ ಪೇಳುವೆ
ಕಂದನೆಂದು ಇಡಬೇಕ ಪ್ರೀತಿ
ಪ್ರೀತಿಯಿಂದ ನೀವು ಕೇಳಿರಿ ಚಂದಾಗಿ
ಸೃಷ್ಟಿ ಮದಲು ಹುಟ್ಟಿದ ರೀತಿ

ಆದಿಯಲ್ಲಿ ಆಕಾರ ಇದ್ದಿದ್ದಿಲ್ಲ
ನಿರಾಕಾರ ಇತ್ತೊ ಬರಿ ಬಯಲಾ
ವಿದ್ಯಾಧರ ಸುರ ಸಿದ್ಧಸಾಧ್ಯರು
ಯಕ್ಷ ಗರುಡ ಕಿಂಪುರುಷರು ಇಲ್ಲ
ಸತ್ತಾವೀಸ ನಕ್ಷತ್ರ ರಾಸಿಗಳು
ಸಪ್ತ ಸಮುದ್ರದ ಗುರುತಿಲ್ಲ

ಮುನ್ನೂರದರವತ್ತೈದಂಗಳು
ಸೋಮ ಸೂರ‍್ಯರ ಬೆಳಕಿಲ್ಲ
ಜೀವರಾಶಿ ಗಿಡಬಳ್ಳಿ ಆರ‍್ಯಾಣ
ಐವತ್ತಾರು ದೇಶ ಇದ್ದಿಲ್ಲ

ಎತ್ತ ನೋಡಿದತ್ತ ನಿರಮಯ
ಮತ್ತ ಸುತ್ತ ಇತ್ತರಿ ಕತ್ತಲ
ಚಿದಾನಂದ ಚಿನ್ಮಯ ಮೂರುತಿ
ಚಿದ್ದಬಿಂದು ಪ್ರಕಾಶಕ ಅಳತಿಲ್ಲ

ನಾನು ರಹಿತ ಕ್ರಿಯಾ ರಹಿತ
ಸೋಮಸೂರ್ಯರ ಬೆಳಕಿಲ್ಲ
ಸೋಮಸೂರ್ಯರ ಬೆಳಕಿಲ್ಲ
ಪ್ರಭು ಇದ್ದ ಆದಿಗೆ ಮೊದಲ

ಗದ್ಯ : ಏ! ಕೇಳಿರಿ, ಬಯಲಿನೊಳಗ ಆಕಾಶ ಹುಟ್ಟಿ, ಆಕಾಶದಿಂದ ವಾಯು ಹುಟ್ಟಿತ್ತು. ವಾಯು ಹುಟ್ಟಿತ್ತು. ವಾಯು ಹುಟ್ಟಿ ಸುಳಿದಾಡಿತು. ಇದೆ ವಾಯುತತ್ವದಿಂದ ಅಗ್ನಿ ಜನಿಸಿತು. ಇದೆ ಅಗ್ನಿಯಿಂದ ನೀರು ಹರಿಯಿತು. ಇದೆ ನೀರಿನಿಂದ ಹೆಪ್ಪುಗಟ್ಟಿ ಸೃಷ್ಟಿ ಆಕಾರ ಶೋಭಿಸಿತು.

ಏರು :

ಆಕಾರ ಆದ ಮ್ಯಾಲ
ಬೇಕಾದ್ದ ಆಗತೈತಿ
ಲೋಕೆಲ್ಲ ಆದಾವ ಉತ್ಪತ್ತಿ

ನಿರಕಾರದ ಮಾತ ನಿರಕ ಹೇಳತೀನಿ
ತರಕ ಮಾಡ್ರಿ ನೀವು ಬಲ್ಲವರ
ಓಂಕಾರ ಎಂಬ ನಾದ ಅಡಿಗೆಯಾಗಿ
ಗಟ್ಟಿ ಹೆಪ್ಪು ಕವದೀತ ನೀರಾ
ನೀರ ಜವಳ ಓಂಕಾರ ರೂಢಿಯಾ
ರೇವಣ ಸಿದ್ಧನ ಪರಭಾರ

ಮುನ್ನೂರ ಕೋಟಿ ಪಶು ಮೃಗಗಳು
ಅವನಿಂದ ಆದಾವ ಉದ್ಧಾರ
ಸೃಷ್ಟಿ ಮಾಡಿದಾನ ರೇವಣಸಿದ್ಧ
ಅಷ್ಟ ಮಾಡಿದಾನ ವಿಸ್ತಾರ
ಚತ್ತಿಸಕೋಟಿ ದೇವನುದೇವತ್ಯಾರು
ಗಿಡಬಳ್ಳಿ ಬೇಕಾದವು ಪೂರಾ

ಗದ್ಯ – ಕೇಳರಿ ಎಕಾಕಿಯಾದ ರೇವಣಸಿದ್ಧನೇ ಮೂರ್ತಿ, ಅವನ ಹೊರ್ತ ಯಾರೂ ಇಲ್ಲ ಓದಿ ನೋಡರಿ ಪುಸ್ತಕ, ಹಿಂಗಂತ ಹಗಲಿರಳು ಸಾರತಾವ ಸ್ಮೃತಿ ಮುಂದೆ ಸೂರ್ಯಚಂದ್ರಾದಿಗಳು ಹುಟ್ಟಿದ ಕಾರಣ ಚಿಕಿತಿ ಯೋಗ ಜೋತಿಷ್ಯ ನೋಡಿದವರಿಗೆ ಇದು ತಿಳುವತೈತಿ. ಸಪ್ತ ಸಮುದ್ರದ ಮುನ್ನೂರದರವತ್ತೈದು ದಿನಗಳು ಉತ್ಪನ್ನದಾವ ಇದರಂತ.

ಏರು :

ಸತ್ಯ ಸಾತ್ಯಕನು ನಿತ್ಯ ನಿರ್ಮಲನು
ವ್ರತಕೆಲ್ಲ ಅವನೆ ಚತ್ರಪತಿ
ಪ್ರೀತಿಯಿಂದ ನೀವು ಕೂತ ಕೇಳರಿ
ಸೃಷ್ಟಿ ಮೊದಲು ಹುಟ್ಟಿದ ರೀತಿ

ಮಂಗಲಾಂಗನೆಂಬ ರೇವಣಸಿದ್ಧನ
ಚಿತ್ತದಿ ನೆಲಸ್ಯಾಳ ಆದಿಶಕ್ತಿ
ಶಕ್ತಿ ಪ್ರಭುವಿನ ತೃಪ್ತಿಗಾಗಿ
ಅಕಿ ನಿತ್ಯ ಮಾಡಿದಾಳ ಅವನ ಸ್ತುತಿ

ಸ್ತುತಿಯ ಮಾಡಿ ಸದ್ಗತಿಯ ಹೊಂದಿದಾಳು
ಸತಿಯು ಆಗ್ಯಾಳೊ ಶಂಭಗ ಶಕ್ತಿ
ಶಕ್ತಿಪುರಾಣ ಹಿಂಗ ಸಾರಿ ಹೇಳತಾವ
ಪೂರಾ ನೋಡಿ ತಿಳಿಯಿರಿ ಪೂರ್ತಿ

ಪೂರ್ತಿ ಮಾತಿನ ಅರ್ಥ ತಿಳಿಯದೆ
ವ್ಯರ್ಥ ಮಾಡತೀರಿ ಹೊಸ ಕವಿತಾ
ನಾ ಹೆಚ್ಚ ನೀ ಹೆಚ್ಚ ವಾದ ಹಾಕತೀರಿ
ಬೋಧ ಮಾಡಿದವನ್ಯಾವ ಮತಿ

ನಾಲ್ಕು ಮಂದಿ ಸದ್ಬುದ್ಧಿವಂತರು
ವಿಚಾರ ಮಾಡಲಿ ಕೊಡ ಜಡತಿ
ಇಲದಿದ್ದರ ನಿನ ಡೊಳ್ಳ ಕಸಗೊಂಡು
ಮಂದ್ಯಾಗ ಮಾಡತೇನಿ ಪಜೀತಿ

ಗದ್ಯ – ಕೇಳರಿ, ಏಕಾಂಗಿಯಾದ ರೇವಣಸಿದ್ಧನಿಂದ ಇಂದ್ರಜಾಲ, ಮಹೇಂದ್ರ ಜಾಲ ಎಂಬ ಎರಡು ವಿದ್ಯಾಶಕ್ತಿ. ಆ ವಿದ್ಯಾಶಕ್ತಿ ಮಾರ್ಗವೆ ನಿರವಾಣೋಪಾಸನ. ಆ ವಿದ್ಯಾಶಕ್ತಿ ಮಾರ್ಗವೆ ಸಗುಣೋಪಾಸನ ಮಾರ್ಗ. ಮಾಯಾ ನಿರ್ಮಾಯನಾದವನಿಗೆ ಆಗತೈತಿ ಗೊತ್ತ, ಅರಿಯದವನಿಗೆ ತಿಳಿಯದು ಈ ಅನುಭವದ ಮಾತ, ಅನುಭವದಿಂದ ಅದ್ಭುತ ತಿಳಿದು ನೋಡೊ ವೇದಾಂತ.

ಏ ಧಾರವಾಡದ ಊರಾಗ ಕುರಬರ
ಓಣ್ಯಾಗ ಕವಿ ಹುಟ್ಟತಾವ ಹೊಸ ಜಡತಿ
ಪ್ರೀತಿಯಿಂದ ನೀವು ಕುಂತ ಕೇಳರಿ
ಸೃಷ್ಟಿ ಮೊದಲು ಹುಟ್ಟಿದ ರೀತಿ

 

ಭೂಮಿ ಹುಟ್ಟಿದ ಬಗೆ

ನಿರಹಂಕಾರ ನಿರ್ಬಯಲಿನೊಳಗ
ಪ್ರಭುದೇವನೆಂಬವನೊಬ್ಬನಿದ್ದ
ತೆತ್ತೀಸಕೋಟೆ ದೇವತೆಗಳನ್ನು ಅವ
ಹಿಂದುಗಡೆಯಲ್ಲಿ ಹುಟ್ಟಿಸಿದ

ಮಂತ್ರಜಪದಿಂದ ಶಿವ ಹುಟ್ಟಿದನು
ಪಟ್ಟಿಗಟ್ಟಿ ಅಂವ ಲಯಕಾರನಾದ
ಈರೇಳು ಹಿದಿನಾಲ್ಕು ಲೋಕವನ್ನೆಲ್ಲ
ಆಳುವಂಥ ಹರ ತಾನಾದ

ಬಸವ ಹುಟ್ಟಿದನು ಉಸಿರಿನಿಂದ
ಇಬ್ಬರು ಏಕಾಗಿ ಚಂದದಿಂದ
ನೀರು ಎಂಬುದು ಹರಿದಾಡುತಿತ್ತು
ಆಕಾರವಿದ್ದಿಲ್ಲ ಭೂಮಿಯೆಂಬ

ಓಂಕಾರವೆನಿಸಿತ್ತು ಆಗ ಹಂಗ
ಭೂದೇವಿ ಇದ್ದಳು ಅದರಾಗ
ಶಿವ ಬಸವಣ್ಣ ಬಂದರು ಆಗ
ಭೂದೇವಿಗೆ ಆಯಿತು ಮಾನ

ಚಂಡು ಮುರಿದು ಮೇಲೆ ಹಾಕಿ ಕುಳಿತಳು
ಶಿವನೆಂಬುವವನು ಮೇಲೆ ಕುಳಿತ
ಅಂತರ್ಮಾರ್ಗದಿ ಬರುವ ಸಮಯದಾಗ
ವಿಶ್ವಕರ್ಮ ಮಲಗಿದ್ದನಪ್ಪ

ಮೂರುಮಂದಿ ಕೂಡಿ ಅವನ ಒದರಿದರು
ನಿದ್ದೆಯಿಂದ ಏಳಲಿಲ್ಲ ಗಡ
ಮಾತಾಡಿಸಿದರೆ ಮಾತಾಡಲಿಲ್ಲ
ಶಿವ ಸಿಟ್ಟಿಗೆದ್ದು ಒದ್ದ ನಡ

ಚಳ್ಳುಗುರು ತೆಗೆದು ಹಣಿಗೆ ತಿವಿದರೆ
ರಕ್ತಬಿದ್ದಿತು ಬ್ರಹ್ಮಾಂಡ
ರಕ್ತ ಬಿದ್ದಿದ್ದು ಏನಾಯಿತು ಅಂದರ
ಗುಡ್ಡ ಗಂವಾರ ಭೂಮಿಯಾಯಿತು

ಎಪ್ಪತ್ತೇಳು ಕೋಟಿ ಗಿರಿಯಾಯಿತು
ರಕ್ತ ಮತ್ತಷ್ಟು ಚಿಮ್ಮಹತ್ತಿತು
ವಿಶ್ವಕರ್ಮನ ಕೊಂದು ಬಟ್ಟು ಇಟ್ಟರು
ರಕುತ ಚಿಮ್ಮದಂತೆ ನಿಂತಿತು

ಭೂಮಿ ಎಂಬುದು ಹೆಪ್ಪುಗಟ್ಟಿತು
ವಿಶ್ವಕರ್ಮನ ರುಂಡವು ರಕ್ತದಿಂದ
ವಿಶ್ವಕರ್ಮ ತಾ ನೆಟ್ಟಗೆ ಬಂದು
ಗಡವುಗಳಳಿದರೆ ಸರ್ಪ ಆಯಿತು

ಏಳು ಹೆಡೆಯ ಸರ್ಪ ಆಯಿತು
ಪಾರ್ವತಿದೇವಿಯ ಕಡಿಲಿಕ್ಕೆ ಹೋತು
ಪಾರ್ವತಿದೇವಿಗೆ ಚಿಂತೆ ಹತ್ತಲು
ಸಾಂಬನದಕೆ ಮಾಡಿದನು ಯುಕ್ತಿ

ಎರಡು ಕೈಲಿ ಸರ್ಪ ತೆಗೆದುಕೊಂಡು
ಕರ್ಣಕುಂಡಲವ ಮಾಡಿದನು
ಶಿವಪಾರ್ವತಿಯರ ಲಗ್ನವಾಯಿತೆಂದು
ಹಣಿಗೆ ಹಚ್ಚಿದರು ಅಕ್ಷತಿ

ಪಾರ್ವತಿ ಎಂಬುವಾಕಿ ಅರ್ಧಾಂಗಿಯದಳು
ಎಡಗಡೆ ದೇಹ ಹೆಂಗಸಿನದು
ಬಲಗಡೆ ದೇಹ ಗಂಡಿನದಾಯ್ತು ಹೆಚ್ಚ
ಇಲ್ಲ ಕೇಳುವದು ಏನು

˜™

ಕುರುಬ ಮೊದಲಿಗ

ಪಂಡಿತ ಜನರೆಲ್ಲ ಬಂದು ಕೂಡಿರಿ ಇಂದ್ರ ಸಭಾಕಿಂತ ಬಲೆ ಖಡಕ
ದೈವವಿದ್ದಲ್ಲಿ ದೇವರಿರುವನೆಂದು ತಿಳಿದು ಬಂದೆ ನಾನು ಇಲ್ಲಿ ತನಕ
ದೈವದ ಸೇವಾ ಮಾಡಿದವನಿಗೆ ದೇವರು ಒಲಿತಾನ ತಾ ಮುಂದ
ಸೇವಾದಲ್ಲಿ ಸ್ವಲ್ಪು ಕುಂದು ಬಂದರೆ ಹಂಸಕ್ಷೀರ ನ್ಯಾಯ ಅನಬೇಕ
ಹಾಲು ನೀರನ್ನು ಕೂಡಿಸಿ ನೀವು ಹಂಸಪಕ್ಷಿ ಮುಂದ ಇಡಬೇಕ
ಹಂಸಪಕ್ಷಿಯು ಹಾಲನು ಕುಡಿದು ನೀರನು ಬಿಡುವುದು ಕಡಿಯಾಕ
ಇದರಂತೆ ನನ್ನದು ತಪ್ಪು ಆದರೆ ಅಪ್ಪಿಕೊಳ್ಳಿರಿ ಕಡೆತನಕ
ಇಷ್ಟರಿಂದ ನಾ ಸಂತೋಷನಾಗುವೆ ಇನ್ನ ಮುಂದ ಕೇಳರಿ ಬೆಳತನಕ
ಚಲೊ ಚಲೊ ಗವಾಯಿಗಳು ಜಗದೊಳು ಇರುವಾಗ ಕುರಬರ ಪದ ಯರ ಕೇಳಬೇಕ
ಕುರುಬರಕಿಂತ ಮೊದಲ ಯಾವದಿಲ್ಲರಿ ತಿಳಿದು ನೋಡರಿ ನಿಮ್ಮ ಮನಕ
ಹೊಸವರ್ಷ ಉಗಾದಿ ಪಾಡ್ಯೇಕ ಹೊಲದಾಗ ಕುಂಟಿಯ ಹೂಡುದಕ
ಮೊದಲು ಕುರುಬನ ಕುಂಟಿ ಹೋಗಲೆಂದು ರೈತರು ಮಾಡ್ಯಾರೊ ನೇಮಣೂಕ
ಅಂಗಡಿ-ಮುಂಗಡಿ ವ್ಯವಹಾರ ಮೊದಲಿಗೆ ಕುರುಬನ ಬೋಣಗಿ ಆಗಬೇಕ
ಕುರುಬಗೌಡ ಬಂದು ಬೋಣಗಿ ಮಾಡಿದಾಗ ವ್ಯಾಪಾರದವರಾದರೊ ಮುಂದ
ಮೋಜು ಮಜಲಿಗೆ ಕುರುಬನು ಮೊದಲು ಗಣಪತಿಪೂಜೆಯ ಮಾಡಬೇಕ
ಕುರುಬಗೌಡ ಬಂದು ಪೂಜೆ ಮಾಡಿದಾಗ ಸಾಗಿ ಬಂತೊ ಮಜಲು ಮುಂದಕ
ಪಂಡಿತ ಜನರೆಲ್ಲ ಸೋಸಿ ತೆಗಿದಾರೊ ಒಂದು ತೂಕವನಾ
ಭವಿಷ್ಯ ಶಾಸ್ತ್ರದಾಗ ಹನ್ನೆರಡು ರಾಸಿಯೊಳಗ ಕುರುಬನಿರುವನು ಮೊದಲಿಗ
ಕುರುಬನ ಗುರ್ತು ಕುರಿಮರಿ ಇರುವದು ತಿಳಿದುನೋಡರಿ ನಿಮ್ಮ ಮನಕ
ಮೊದಲಿಗೆ ಕುರುಬ ಬಂದ ಸೃತಿಯು ಸಾರತಾವ ಓದಿನೋಡರಿ ಪೂರಾ
ಹನ್ನೆರಡು ವರ್ಷ ಮಳಿ ಇಲ್ಲದೆ ಬರಾ ಬಿದ್ದಿತೊ ದೇಶಕ್ಕ
ಇರವಿ ಎಂಬತ್ಕೋಟಿ ಜೀವರಾಸಿಗಳು ಬಾಯಿ ಬಿಡತಾವೊ ನೀರಿಲ್ಲದಕ
ರೈತರಾಣ್ಯಾರು ಬಂದು ಕೂಡತಾರೊ ಕೇಳತಾರ ಕುರುಬ ಗೌಡನಿಗೆ
ಕುರುಬಗೌಡನು ಗಾಬರಿಯಾಗಿ ಕೇಳತಾನ ಯ್ಯಾಕ ಬಂದಿರಿ ನನ್ನ ಹಂತೀಲೆ
ಮಳಿಬೆಳಿ ಇಲ್ಲದ್ದು ನಿನಗ ಗೊತ್ತೈತಿ ಹೇಳಬೇಕು ಮಳಿಯಾಗುವದ
ಕುರುಬಗೌಡಗ ದಿಗಲ ಬಿದ್ದಿತೊ ಮುಖಾ ಮಾಡಿದಾನೋ ಮ್ಯಾಕ
ಬೀರಲಿಂಗನ ಸ್ತೋತ್ರ ಮಾಡುತ ವಿಚಾರ ಮಾಡ್ಯಾನೋ ತನ್ನ ಮನಕ
ಚಿಂತಿಯ ಮಾಡಬ್ಯಾಡರಿ ನಾಳೆ ಮಳೆಯು ಬರುವದು ಮಧ್ಯಾಹ್ನಕ
ಕುರುಬಗೌಡನು ಮರುದಿನ ತಾನು ಗುಡ್ಡ ಹತ್ತಿನಿಂತ ಮ್ಯಾಲಕ
ಮೂಡಭಕ್ತಿಲಿಂದ ಕಂಬಳಿ ಬೀಸಿ ಮಳೆರಾಯಾ ನೀನು ಬರಬೇಕ
ಗುಡುಗು ಮಿಂಚು ಇಲ್ಲ ಮಾಡ ತೆರೆಗಳಿಲ್ಲ ಎದ್ದ ಬಂದಾವೊ ಮ್ಯಾಲಕ
ಕುರುಬಗೌಡನು ಕಂಬಳಿ ಬೀಸಿದ್ಹಂಗ ಜಡಿಮಳೆ ಸುರದಿತೊ ಬೆಳತನಕ
ಸತ್ಯವಂತ ಧರ್ಮಶೀಲ ಕುರುಬ ಇವ ರೇವಣಸಿದ್ಧನ ಸೇವಕ
ಕುರುಬನ ಹಂತೆಲೆ ಧರ್ಮ ಇರುವದು ತಿಳಿದು ನೋಡರಿ ಮನದಾಗ
ಒಂದ ದಿವಸ ಒಬ್ಬ ರಾಜನು ಅಡವಿಗೆ ಬಂದಾನೋ ಬ್ಯಾಟಿಯನಾಡುದಕ
ವಿಲಾಸದಿಂದ ಬ್ಯಾಟಿಯನಾಡಿ ದಣಿದು ನೀರಡಿಸಿ ಕುಂತಾನೋ ಗಿಡಕ
ಸುತ್ತುಮುತ್ತಲು ಹುಡುಕಿದರೂ ನೀರು ಇಲ್ಲರಿ ಒಂದು ಗುಟುಕು
ಒಬ್ಬ ಕುರುಬನು ಕುರಿಯ ಮೇಸುತ ಬಂದಾನ ನೋಡೋ ಆ ಗಿಡಕ
ಕುರುಬನ ನೋಡಿ ಅರಸ ಕೇಳತಾನ ನೀರು ಎಲ್ಲಿ ಅದಾವ ಹೇಳಬೇಕ
ಕುರುಬನು ಹೇಳತಾನ ಸುತ್ತೆರಡು ಹರದಾರಿ ನೀರ ಇಲ್ಲರಿ ಒಂದ್ಗುಟಕ
ಅರಸ ಹೇಳತಾನ ಕುರುಬಗೌಡಗ ಹ್ಯಾಂಗಾರ ಮಾಡಿ ನೀರ ಕೊಡಬೇಕ
ಕುರುಬಗೌಡ ತನ್ನ ತತ್ರಾಣಿಯೊಳಗಿನ ನೀರ ಕೊಟ್ಟಾನೋ ಕುಡಿಯಾಕ
ನೀರು ಕುಡಿದು ಸಂತೋಷವಾಗಿ ಕುರುಬಗೌಡ ಏನು ಕೊಡಬೇಕ
ಅರಸನ ಹಂತೆಲೆ ಏನೆನು ಇದ್ದಿಲ್ಲ ಎದೆಯ ಮ್ಯಾಲೆ ಹೂ ಬಲೆ ಖಡಕ
ಎದೆಯ ಮ್ಯಾಲಿನ ಹೂ ಬಿಚಿಗೊಂಡು ತೆಗೆದುಕೊಂಡ ತನ್ನ ಕೈವೊಳಗ
ಕುರುಬಗೌಡ ಬಹುಮಾನ ತಗೊ ಹೂ ಐತಿ ಬಲು ನಾಜೂಕ
ದೊಡ್ಡ ಕುಂಚಿಗಿಯ ಒಳಗ ಕುರಿಮರಿ ಹಾಕಿ ಸಿಗಾಕಿದ್ದ ತೆಲಿಯ ಮ್ಯಾಲ
ಅರಸನ ಕೈಯೊಳಗಿನ ಹೂ ತೆಗೆದುಕೊಂಡು ಕುಂಚಿಗಿಯೊಳಗ ಹಾಕ್ಯಾನ ಮೆಲ್ಲಕ
ಇದನೆಲ್ಲ ನೋಡಿ ಅರಸನು ತಾನು ಗಾಬರಿಯಾಗಿ ನಿಂತಾನ ಸುಮ್ಮಕ
ಕುರುಬಗೌಡಗ ಹೂ ಕೊಟ್ಟರ ಕುಂಡಿಯ ಒಳಗೆ ಇಟಗೊಂಡಾ
ಕುರುಬನು ಅರಸನ ಮುಂದೆ ಹೇಳತಾನ ನಿನಗ್ಯಾಂಗ ತಿಳಿದೀತ ಇದರ ಮಹಿಮೆ
ಕುರುಬನ ಬಾಳೆವ ಕುರುಬನ ಪ್ರಪಂಚ ಕುಂಚಿಗಿಯ ಒಳಗೈತಿ ನೋಡ
ಕುಂಚಿಗ್ಯಾಗ ಇರುವ ಕುರಿಮರಿ ನೋಡಿ ಅರಸಗ ತಿಳಿಯಲಿಲ್ಲ ನೋಡ ದಿಕ್ಕ
ನಿ ಕೊಟ್ಟ ಹೂ ಕುರಿಮರಿಗೆ ಕೊಟ್ಟೇನಿ ತಿಳಿದು ನೋಡ ನಿನ್ನ ಮನದಾಗ
ನಾ ಕೊಟ್ಟ ಹೂ ಹಿಂಗ ಇಟ್ಟ ಮೇಲೆ ಕುಂಡ್ಯಾಗ ಇಟ್ಟನಂತ ನನ್ನ ಮನಕ
ಕುಂಡ್ಯಾಗ ಇಲ್ಲ ಹೂ ಕುರಿಮರಿ ಮಾಲ್ಯ ಐತಿ ಸತ್ಯವಂತ ಅನಬೇಕ
ನಾಡಿನೊಳಗ ನಿಷ್ಠುರ ಕುರುಬ ಎಂದು ಕೀರ್ತಿ ಬೆಳೆಯಲಿ ಲೋಕಕ್ಕ
ವಚನವಂತನು ನಿಷ್ಠುರ ಗರ್ವ ಇಲ್ಲ ಇವನ ಹಂತೇಕ
ಹಿಂಗ ಅಂತ ತಾ ಕುರುಬಗೌಡಗ ಹೇಳಿ ಅರಸ ಹೊಂಟಾನ ತನ್ನ ಪಟ್ಟಣಕ
ಅರ್ಥ ತಿಳಿಯದೆ ಅನರ್ಥ ಮಾಡಿ ಕುರುಬಗಂತಾರ ಎಲೆ ಪುಕ್ಕ
ಕುರುಬನಿಂದ ಬೈಗು ಕುರುಬನಿಂದ ಬೆಳಗು ಅನ್ನುವದ ನೀವು ಕೇಳಬೇಕ
ಕುರುಬನ ಮಹಿಮೆ ಕುರುಬನೇ ಮಹಾಬಲ್ಲವ ತಿಳಿದು ಕೋಡು ನಿನ್ನ ಮನಕ
ರೇವಣಸಿದ್ಧನ ಕರುಣ ಮತ್ತೆ ನಮ್ಮ ಮ್ಯಾಲೆ ಬಂದು ಇರಬೇಕ˜™

 

ಪದ್ಮಗೊಂಡ

ಬಾರೋ ಬಾರೋ ಎನ್ನ ಪ್ರೇಮದ ಮಿತ್ರಾ ಹೇಳುವೆ ಮುಂದಿನ ಚರಿತ್ರ
ಆದಿಗೊಂಡನ ಮಕ್ಕಳಾರು ಮಂದಿ ಹೇಳುವೆನು ಒಂದೊಂದ ಹೆಸರಾ     ||ಪ||
ಚೊಚ್ಚಲಮಗನು ಅಮರಗೊಂಡನು ಎಚ್ಚರಾಗಿ ಕೇಳಿರೆಪ್ಪ ನೀವಾ
ಸ್ವಚ್ಛ ಚಂದ್ರನಂತೆ ಚೆಲುವಿಕೆಯುಳ್ಳವಾ ಬೀರಗೊಂಡ ಎಂಬ ಕುಮಾರನೋ
ಭಕ್ತಿಯಿಂದ ಮಹಾದೇವರ ಒಲಿಸಿದ ಮಾರಗೊಂಡ ಮೂರನೆಯವನು
ಸಿದ್ಧಪುರುಷ ಒಳೆ ಬುದ್ಧಿವಂತ ಮುದ್ದುರಂಗ ಶಿವಗೊಂಡನು
ಐದನೆಯವನು ಸಾಧು ಪುರುಷನು ಮುದ್ದುಗೊಂಡನೆಂಬ ಬಾಲಕನಾ
ಮಾರ ಸಮಾನಾ ಚಾರು ಚಂದಿರಾ ಪದ್ಮಗೊಂಡ ಆರನೆಯವನು
ಬಿದಿಗಿ ಚಂದ್ರನಂತೆ ಬೆಳೆದಾರು ಪುತ್ರರು ಹಿಡಿದಾರು ಭಕ್ತಿಯ ಮಾರ್ಗವನಾ
ನಿತ್ಯದಲಿ ತಾಯಿತಂದಿಗಿ ವಂದಿಸಿ ಮಾಡತಿದ್ರು ಮನಿಕೆಲಸವನಾ
ಆದಿಗೊಂಡನು ಆನಂದದಿಂದ ನೋಡುತ ಮಕ್ಕಳ ಆಟವನಾ
ಚಿಕ್ಕ ಬಾಲಕರು ಅಕ್ಕರದಿಂದ ಒಕ್ಕಲತನ ಮಾಡುವರಣ್ಣಾ
ಕಡಿ ಹುಟ್ಟಮಗಾ ಪದ್ಮಣ್ಣನು ಉಂಡು ಚಂಡು ಗುಂಡಾಡವನು
ಅಣ್ಣಗಳೈವರು ತಾಯಿಗೆ ಹೇಳತಾರ ಬುದ್ಧಿ ಹೇಳವ್ವ ಬಾಳ್ವೆದ ಕಬರಾ
ತಾಯಿ ಆದಮ್ಮನು ಅತಿ ಮಮತೆ ಮಾಡಿ ಪದ್ಮಣ್ಣನಿಗೆ ಹೇಳ್ಯಾಳೋ ಬೋಧಾ
ಉಂಡು ತಿರುಗಿದರ ಉಡಾಳ ಅಂತಾರ ಹೊಲಕ ಹೋಗಿ ಮಾಡಪ್ಪ ದಗದಾ
ತಾಯಿ ಮಾತಕೇಳಿ ಪದ್ಮಗೊಂಡನು ಅದೇ ದಿವ್ಸ ಮುಂಜಾನೆ ಎದ್ದ
ನಮಸ್ಕಾರ ಮಾಡಿ ತಾಯಿಪಾದಕ ಹೋಗಿ ನಿಂತಾನೋ ಜಲದಾ
ದೊಡ್ಡಬಡಗಿ ಒಂದ ಕೊಡ್ಲಿಕುಡಗೋಲಾ ಹೆಗಲ ಮ್ಯಾಲಾ ಹೊತ್ತು ಕೊಂಡಾನಾ
ಪದ್ಮಗೊಂಡನ ಕಂಡಾರು ಅಯ್ವರು ಬಾ ಅಂತ ಕರಿದಾರು ಕೈಹಿಡದಾ
ತಮ್ಮ ಕೇಳೋ ನೀ ರಂಟೆಯನ್ನು ಹಿಡಿ ಕಲಸತೀವಿ ಮುಂದಿನ ದಗದಾ
ಇದೇ ಹೊಲದ ಒಳಗ ಮುಂದೆ ಐದುಮೊಳಾ ಶಿವನಿಗೆ ದಾನಾ ನೀಡಿದ್ದಾ
ದಾನಾ ನೀಡಿದ ಜಾಗಾ ಬಿಟ್ಟು ಹೊಡಿ ದೊಡ್ಡ ಹುತ್ತ ಐತಿ ಅಲ್ಲೊಂದಾ
ರಂಟಿ ಹೊಡಿಯುತಾ ಪದ್ಮಗೊಂಡನು ಹಾಡತಾನ ಭಜನಿ ಪದಾ
ಹುತ್ತನೋಡದೆ ಮರತ ಹೊಡೆದಾನೋ ರಂಟಿ ಬಡದು ಮುರದಿತ ಕದಾ
ಕದಾ ಮುರಿದು ಬಾಗಿಲ ತೆರದೀತು ಕುರಿಯ ಹಿಂಡು ಬಂತು ಹೊರಬಿದ್ದಾ
ಕುರಿಯ ಹಿಂಡು ಹೊರಗೆ ಎಸೆದಾವ ಪದ್ಮಗೊಂಡ ತಿಳಿಯ ಪೂರಾ
ಕುರಿಯ ಹಿಂಡನು ಕೊಳ್ಳ ಹರಿದಾನು ತಿಳಿಯಲಿಲ್ಲ ಒಳಗಿನ ಭೇದಾ
ಹಿರಿಯರು ಮಾಡಿದ ಹಿತದ ಖಜಾನಿ ತೆಗೆದನೆಂದು ಮರಗುತಲಿದ್ದ
ಹೊರಬಿದ್ದ ಕುರಿಗಳ ಒಳಗೆ ತಿರುವಿದಾನು ಮುಂದೆ ಮುಳ್ಳನು ಹಚ್ಚ್ಯಾನ
ಅತ್ತ ಇತ್ತ ಸುತ್ತಲೆ ಬಿದ್ದಿರುವ ಮುಳುಗಳನಾ ಗೂಡಿಸಿದಾ
ಗುಂಪಿಗೂಡಿಸಿ ಬೆಂಕಿ ಹಚ್ಚಿದಾನು ಕುರಿಗಳಿಗೆ ಉರಿಯ ಜಳಾ ಬಡದಾ
ಜಳಾ ಬಡಿದು ಸುಟ್ಟಂತ ಕುರಿಗಳು ಕರಿಯ ಬಣ್ಣ ಆದಾವೋ ಮುಂದಾ
ಪಾರಾದ ಕುರಿಗಳು ಕೆಂಗುರಿ ಆದವೋ ಪುರಾಣದೊಳಗಿನ ಕಥಿ ಸಂದಾ
ಅಲ್ಲ ಅಂದ್ರ ಸರಸಿ ನೋಡ್ರಿ ಸುಳ್ಳ ಮಾಡಬ್ಯಾಡ್ರಿ ವಾಂಡತನಾ
ಪದ್ಮಗೊಂಡನು ಧರ್ಮ ಪುರುಷನು ಧರೆಯ ಒಳಗೆ ಅವತರಿಸಿದ
ಅನೇಕ ಮಹಿಮಾ ಮಾಡಿ ತೋರಿಸಿದಾ ಕೇಳಿದ್ದ ಹೇಳುವೆ ಮುಂದಿಂದಾ

˜™

ಅಮೋಘ ಸಿದ್ಧ

ಕೈಲಾಸದಾಗ ಅಮೋಘ ಇದ್ದ
ಏಕನಿಷ್ಠ ಸಾಧೂ ಸಿದ್ಧ
ಸಾಂಬನ ಪಾದಪೂಜ ಮಾಡತಿದ್ದ
ಕೇಳಿರಿ ನೀವಿನ್ನು

ನಿನ್ನಂಥ ಗುರು ಇಲ್ಲ ನನ್ನಂಥ ಶಿಷ್ಯ ಇಲ್ಲ
ಮೂರು ಲೋಕದಾಗ ಯಾರೂ ಇಲ್ಲ
ಕೇಳಿರಿ ನೀವಿನ್ನು
ನಿನಕಿಂತ ಹೆಚ್ಚಿನ ಸಿದ್ಧ ಬೇಜಗುತ್ತಿ ಬೈಲಾಗಿದ್ದ

ಅವನ ಭಕ್ತಿ ಬಾಳ ಸುದ್ದಾ
ಕೇಳಿರಿ ನೀವಿನ್ನು
ಅಳಕಿಲಿ ಮಳಕೀಲಿ ಬಂಜೆ ತೊಟ್ಟಿಲ
ವಾಮದ ಕಂಬಳಿ ಪರಸಾದ ಗಂಟ

ಅಮೋಘ ಸಿದ್ಧಗ ಮಾದೇವ ಕೊಟ್ಟಾನ
ಕೇಳಿರಿ ನೀವಿನ್ನು
ವಾಮದ ಕಂಬಳಿ ಪರಸಾದ ಗಂಟ
ನಂದೀ ಮ್ಯಾಲ ಹೇರಿಕೊಂಡ

ಕೈಲಾಸದಿಂದ ಅಮೋಘ ಹೊಂಟಾನ
ಕೇಳಿರಿ ನೀವಿನ್ನು
ಬಿಟ್ಟು ನಡದ ನಮ್ಮ ನಾಡ
ನಾನೂ ಬರತೀನಿ ನಿನ್ನ ಜೋಡ

ಹೊಳ್ಳಿ ನೋಡಬ್ಯಾಡ ಗುರುವಿನ ಕಡೆ
ಕೇಳಿರಿ ನೀವಿನ್ನು
ಆರಂಬನೋಡಿ ಅಮೋಘ ಸಿದ್ಧ
ಇಳಿವಿದ್ದಾನೋ ತನ್ನ ಜಾಡಿ

ಹೊಳ್ಳಿ ನೋಡ್ಯಾನೋ ಗುರುವಿನ ಕಡೆ
ಕೇಳಿರಿ ನೀವಿನ್ನು
ಮಾದೇವಾಗ್ಯಾನ ಆಕಳ ಕರ
ಭಕುತಿ ನೋಡ್ಯಾನ ಬಾಳ ಜೋರ

ಮಾಯವಾಗ್ಯಾನ ಮುಕ್ಕಣ ಪೂರ
ಕೇಳಿರಿ ನೀವಿನ್ನು
ದೇವರೊಲಿಮೆ ಇದ್ದವಗ ಯಾತರ
ಚಿಂತಿಯಿಲ್ಲ ಇನ್ನ