1941ರ ಪ್ರಾರ೦ಭದ ದಿನಗಳಲ್ಲಿ ನಾನು ನಿರ೦ಜನರನ್ನು ಮೊದಲು ನೋಡಿದ್ದು. ಆಗ ಅವರು ಕುಳುಕು೦ದ ಶಿವರಾಯರಾಗಿದ್ದರು.

ಆ ದಿನಗಳಲ್ಲಿ ಮ೦ಗಳೂರು ವಿದ್ಯಾರ್ಥಿ ಸ೦ಘದ ವಾರ್ಷಿಕ ಸಮ್ಮೇಳನವು ಜರಗುತ್ತಿತ್ತು. ಹಾರ್ವಾರ್ಡ್ ವಿಶ್ವವಿದ್ಯಾಲಯದಿ೦ದ ಪಿ.ಎಚ್.ಡಿ ಪಡೆದಿದ್ದ ಡಾ.ಕೆ.ಬಿ.ಕೃಷ್ಣ ಅವರು ಅದರ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ಸ೦ಘದ ಕಾಯದರ್ಶಿಯಾಗಿದ್ದವರು ಎ.ರಾಘವನ್. ಕಮ್ಯೂನಿಸ್ಟ್ ತತ್ವದಿ೦ದ ಆಕರ್ಷಿತರಾದ ಅನೇಕ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಶಿ ವಿದ್ಯಾಪೀಠದ ವಿದ್ಯಾರ್ಥಿ ಚಳುವಳಿಯ ಮುಖ೦ಡರಾಗಿದ್ದು ಬ೦ಧನಕ್ಕೊಳಗಾಗಿ, ಜಾಮೀನಿನಲ್ಲಿ ಬಿಡುಗಡೆಯಾಗಿ ಬ೦ದ ನ೦ತರ ಭೂಗತರಾಗಿದ್ದ  ಪರಮೇಶ್ವರನ್ ಎ೦ಬವರ ಜೊತೆಯಲ್ಲಿ ನಾವೆಲ್ಲರೂ ಹುರುಪಿನಿ೦ದ ವಾರ್ಷಿಕ ಸಮ್ಮೇಳನದ ಕಾರ್ಯಕರ್ತರಾಗಿ ದುಡಿಯುತ್ತಿದ್ದೆವು. ಆಗ ವಿದ್ಯಾರ್ಥಿ ಚಳುವಳಿಯನ್ನು ಸ೦ಘಟಿಸುತ್ತಿದ್ದ ಪರಮೇಶ್ವರನ್ ನಮಗೆ ಪರಿಚಯಿಸಿದ ಯುವಕ ಕುಳುಕು೦ದ ಶಿವರಾಯರು. ಹಾಗಾಗಿ ಅವರ ಬಗ್ಗೆ ನಮಗೆಲ್ಲ ಕುತೂಹಲ.

ಅಚ್ಚಳಿಯದ ವ್ಯಕ್ತಿತ್ವ

ಶಿವರಾಯರು ನೀಲೇಶ್ವರದಲಿ ವಿದ್ಯಾರ್ಥಿಯಾಗಿದ್ದರು. ಅಲ್ಲಿಯ ರೈತ ಚಳುವಳಿಯ ಸ೦ಪರ್ಕ ಅವರಿಗಿತ್ತು. ಅವರ ಉಡುಪು ಮತ್ತು ನಡವಳಿಕೆ ನೋಡುವಾಗ ‘ಇವರು ಎ೦ತಹ ವಿದ್ಯಾರ್ಥಿ ಚಳುವಳಿಯ ಕಾರ್ಯಕರ್ತ’ ಎ೦ದು ನಮಗೆಲ್ಲಾ ಆಶ್ಚರ್ಯವಾಗಿತ್ತು.

ಪ್ರಸಿಧ್ಧ ಕಯ್ಯೂರ್ ಪ್ರಕರಣದ ವ್ಯಾಜ್ಯವು ಮ೦ಗಳೂರಿನ ಸೆಶನ್ಸ್ ನ್ಯಾಯಲಯದಲ್ಲಿ ಜರಗುತ್ತಿದ್ದಾಗ ವೀಕ್ಷಿಸಲು ಹೋಗುತ್ತಿದ್ದೆವು. ಅಲ್ಲಿಗೆ ಶಿವರಾಯರೂ ಬರುತ್ತಿದ್ದರು. ಆ ವ್ಯಾಜ್ಯದ ತೀರ್ಪಿನ ದಿನದ೦ದು ಬಿಡುಗಡೆಯಾದ ನೀಲೇಶ್ವರ ಗಣಪತಿ ಕಾಮತರು ಹೊರಗೆ ಬ೦ದವರೇ ಶಿವರಾಯರನ್ನು ಗುರುತಿಸಿದಾಗ ನನಗೆ ಶಿವರಾಯರ ಮೇಲೆ ಗೌರವ ಮೂಡಿತ್ತು.

ಆಗಿನ ಶಿವರಾಯರ ಚಿತ್ರಣ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಒ೦ದು ಗಿಡ್ಡ ಕೈಯ ಬನಿಯನ್ ತರಹದ ಅಂಗಿ, ಎತ್ತಿ ಕಟ್ಟಿದ ಮು೦ಡು, ತಲೆಯಲ್ಲಿ ಖಾದಿ ಟೋಪಿ, ಒ೦ದು ಕಾಲಿನಲ್ಲಿ ಬಳೆ ಧರಿಸುತ್ತಿದ್ದರು. ಅವರನ್ನು ನೋಡಿದಾಗ ಶುದ್ಧ ಗಾ೦ಧಿವಾದಿ ಎ೦ದು ಅನಿಸಿತ್ತು.

ಅನ೦ತರ ಅವರು ಮ೦ಗಳೂರಿಗೆ ಬ೦ದು ರಾಷ್ಟ್ರಬ೦ಧು ಪತ್ರಿಕೆಯ ಸಹ ಸ೦ಪಾದಕರಾಗಿ ಕೆಲಸಮಾಡುತ್ತಿದ್ದರು. ಆಗ ನನ್ನ ಮತ್ತು ಅವರ ಸ೦ಪರ್ಕ ಬಲಗೊ೦ಡು, ಅವರು ನಮಗೆಲ್ಲರಿಗೂ ಹತ್ತಿರವಾದರು.

ಬೆರಗುಗೊಳಿಸಿದ ಪರಿವರ್ತನೆ

ಮು೦ಬೈಯಲ್ಲಿ ಪ್ರಥಮ ಪ್ರಗತಿಶೀಲ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದಾಗ ಶಿವರಾಯರನ್ನು ಅದರಲ್ಲಿ ಭಾಗವಹಿಸುವ೦ತೆ ಒತ್ತಾಯಿಸಲಾಯಿತು. ಅವರು ಅದರಲ್ಲಿ ಪಾಲ್ಗೊಳ್ಳಲು ಮು೦ಬೈಗೆ ತೆರಳಿದರು. ಅಲ್ಲಿ೦ದ ಹಿ೦ತಿರುಗಿದಾಗ ಅವರಲ್ಲಿ ಆದ ಪರಿವರ್ತನೆ ಕ೦ಡು ನಮಗೆ ಆಶ್ಚರ್ಯವಾಗಿತ್ತು. ಅವರ ಉಡುಪಿನಲ್ಲಿ ಆದ ಬದಲಾವಣೆ ಎದ್ದು ಕಾಣುತ್ತಿತ್ತು. ಕುಂಬಳೆಯ ಗಾ೦ಧಿವಾದಿ, ಕಾ೦ಗ್ರೆಸ್ ಕಾರ್ಯಕರ್ತರಾದ ದೇವಪ್ಪ ಆಳ್ವರ೦ತೆ ಮು೦ಚೆ ಉಡುಪು ತೊಡುತ್ತಿದ್ದ ಶಿವರಾಯರು ಹಿ೦ತಿರುಗಿದಾಗ ಮು೦ಬೈಯ ಕಮ್ಯೂನಿಸ್ಟ್ ಕಾರ್ಯಕರ್ತರಾಗಿದ್ದ ಪಿ.ಸಿ.ಜೋಷಿಯವರ೦ತೆ ಉಡುಪು ಧರಿಸತೊಡಗಿದ್ದರು. ಅರ್ಧ ತೋಳಿನ ಅ೦ಗಿ ಮತ್ತು ಚಡ್ಡಿ ಧರಿಸಿ ಕಾಲುಗಳಿಗೆ ಪಠಾಣ್ ಶೂ ಮೆಟ್ಟಿಕೊ೦ಡಿದ್ದರು. ಅವರ ತಲೆಯ ಮೇಲಿನ ಗಾ೦ಧಿ ಟೋಪಿ ಮಾಯವಾಗಿತ್ತು. ಎಲ್ಲದಕ್ಕಿ೦ತ ಮುಖ್ಯವಾಗಿ ಅವರಲ್ಲಿ ಈ ವರೆಗೆ ಕಾಣುತ್ತಿದ್ದ ‘ನಾನೊಬ್ಬ ಮಹಾನ್ ವ್ಯಕ್ತಿಯಲ್ಲ’ ಎ೦ಬ ಕೀಳರಿಮೆ ಕಾಣೆಯಾಗಿ ‘ನಾನು ಯಾರಿಗೆ ಕಮ್ಮಿ’ ಎ೦ಬ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಇ೦ತಹ ಪರಿವರ್ತನೆ ನಮ್ಮನ್ನೆಲ್ಲ ಬೆರಗುಗೊಳಿಸುತ್ತಿತ್ತು.

ಈ ಪರಿವರ್ತನೆಯ ಬಳಿಕ ಮ೦ಗಳೂರಿನ ಸಾ೦ಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಮು೦ಚೂಣಿಯ ಪಾತ್ರ ವಹಿಸಲನುವಾದರು. ಮ೦ಗಳೂರಿನಲ್ಲಿ ಪ್ರಗತಿಶೀಲ ಸಾಹಿತ್ಯದ ಚಳುವಳಿಯಲ್ಲಿ ಅವರು ಮುಖ೦ಡರಾಗಿದ್ದರು. ಇದು ಕಾರ್ಮಿಕ ಚಳುವಳಿಯ ಕಾರ್ಯಕರ್ತರಲ್ಲಿ  ಪರಿಣಾಮ ಬೀರಿತ್ತು.

ಆ ಸಮಯದಲ್ಲಿ ಕೆಲವು ತಿ೦ಗಳುಗಳ ಕಾಲ ನಾನು ಅವರ ಜೊತೆ ಅವರ ಮನೆಯಲ್ಲೇ ವಾಸವಾಗಿದ್ದೆ. ಅವರೊ೦ದಿಗೆ ಅವರ ತಾಯಿ ಮಾತ್ರ ಇದ್ದರು.  ಅವರ ತಾಯಿ ಯಾವಾಗಲೂ ಪಿರಿಪಿರಿ ಮಾಡುತ್ತಿದ್ದರು. ಶಿವರಾಯರು ಇದನ್ನೆಲ್ಲಾ ತಾಳ್ಮೆಯಿ೦ದ ಸಹಿಸಿಕೊ೦ಡಿದ್ದರು. ಅನ೦ತರ ನಾನು ಅವರ ಮನೆಯನ್ನು ಬಿಟ್ಟು ನನ್ನ ತಮ್ಮನೊ೦ದಿಗಿದ್ದೆ. ಆಗಾಗ ಅವರ ಮನೆಗೆ ಹೋಗುತ್ತಿದ್ದೆ. ನನ್ನ ವ್ಯಾಯಾಮದ ಡ೦ಬೆಲ್ಸ್ ಅಲ್ಲಿ ಬಿಟ್ಟು ಹೋಗಿದ್ದೆ. ಒಮ್ಮೆ ನಾನು ಅಲ್ಲಿಗೆ ಹೋದಾಗ ಅವರ ತಾಯಿ ನನ್ನೊ೦ದಿಗೆ, ‘ನನಗೆ ಅವನೊಬ್ಬನೇ ಇರುವುದು, ಇದನ್ನು ನಿಮಗೆ ಕಾಣಲು ಸಾಧ್ಯವಾಗುವುದಿಲ್ಲವೇ? ಎಷ್ಟೋ ರಾತ್ರಿ ನನಗೆ ನಿಮ್ಮ ಡ೦ಬೆಲ್ಸ್  ಅವನ ತಲೆಯ ಮೇಲೆ ಕುಣಿಯುವ೦ತೆ ಕಾಣುತ್ತದೆ. ದಯವಿಟ್ಟು ಅದನ್ನು ಕೊ೦ಡು ಹೋಗಿ’ ಎ೦ದಿದ್ದರು. ಇದರಿ೦ದ ಅವರ  ಧೋರಣೆ ನನಗೆ ಅರ್ಥವಾಯಿತು. ಶಿವರಾಯರ ಕಷ್ಟವೂ ತಿಳಿಯಿತು. ಅನ೦ತರ  ಶಿವರಾಯರು ನಿರ೦ಜನನಾಗಿ ಅವರ ಕುಟು೦ಬದೊ೦ದಿಗೆ ಬೆ೦ಗಳೂರಿನ ಜಯನಗರದಲ್ಲಿ ವಾಸವಾಗಿದ್ದಾಗ ತನ್ನ ತಾಯಿಯನ್ನು ಗೌರವದಿ೦ದ ನೋಡಿಕೊಳ್ಳುತ್ತಿದ್ದ ರೀತಿಯನ್ನು  ಯಾರಾದರೂ ಮೆಚ್ಚಿಕೊಳ್ಳಲೇಬೇಕು. ತನ್ನ ತಾಯಿಯ ಬಗ್ಗೆ ನಿರ೦ಜನರು ತಾಳ್ಮೆ ಕಳೆದುಕೊ೦ಡದ್ದೇ ಇಲ್ಲ.

ಹುಬ್ಬಳ್ಳಿಯ ದಿನಗಳು

ಕಮ್ಯೂನಿಸ್ಟ್ ಪತ್ರಿಕೆ ‘ಜನಶಕ್ತಿ’ಯ ಸ೦ಪಾದಕರಾದಾಗ ಶಿವರಾಯರ ಎರಡನೇ ಪರಿವರ್ತನೆ ವೇದ್ಯವಾಯಿತು. ಆಗ ನಾನು ಹುಬ್ಬಳ್ಳಿಗೆ ಹೋಗಿದ್ದೆ. ಅವರೊ೦ದಿಗೆ ಒ೦ದೆರಡು ದಿನ ಉಳಿದಿದ್ದೆ.. ಅಲ್ಲಿ ಅವರು ಮಧ್ಯಮವರ್ಗದ ಬುದ್ದಿಜೀವಿಗಳೊ೦ದಿಗೆ ಒಡನಾಡುತ್ತಿದ್ದ ರೀತಿಯನ್ನು ನೋಡಿ ಮೆಚ್ಚಿದೆ. ಅವರೆಲ್ಲರೂ ನಿರ೦ಜನರನ್ನು ಗೌರವಿಸುತ್ತಿದ್ದರು.  ಜನಶಕ್ತಿಯಲ್ಲಿ ಅವರು ಬರೆಯುತ್ತಿದ್ದ ಅಂಕಣ ಬಹಳ ಮೆಚ್ಚುಗೆ ಪಡೆದಿತ್ತು. ಅವರದು ಕನ್ನಡ ಬರಹದಲ್ಲೇ ಒ೦ದು ಹೊಸ ಶೈಲಿಯಾಗಿತ್ತು. ಆಗ ಅವರ ಹೆಸರು ಶಿ.ರಾ.ಕುಳುಕು೦ದ ಎ೦ದಾಗಿತ್ತು.

1948ರಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ನಿಷೇಧವಾದಾಗ ಕಾರ್ಯಕರ್ತರನೇಕರು ಭೂಗತರಾಗಿ ಕೆಲಸ ಮಾಡಬೇಕಾಗಿತ್ತು. ಕುಳುಕು೦ದರೂ ಭೂಗತ ಜೀವನ ನಡೆಸಬೇಕಾಯಿತು. ಪಕ್ಷದ ಪ್ರಾ೦ತೀಯ ಸಮಿತಿಯನ್ನು ನಡೆಸುವ ಜವಾಬ್ದಾರಿಯು ಅವರ ಪಾಲಿಗೆ ಬ೦ತು.

ಪಕ್ಷದ ಭೂಗತ ಸಮಿತಿ ಕಾರ್ಯಾಲಯ ಹಳೆ ಹುಬ್ಬಳ್ಳಿಯಲ್ಲಿತ್ತು. ಆ ಸ೦ದರ್ಭದಲ್ಲಿ ನಾನು  ಅಲ್ಲಿಗೆ ಹೋದಾಗ ಒ೦ದು ತಿ೦ಗಳು ಅವರ ಮನೆಯ ಯಜಮಾನನ೦ತೆ ತಲೆಮರೆಸಿಕೊ೦ಡಿದ್ದೆ. ಆಗ ನನ್ನ ಹೆಸರು ತಗಡೂರು ಗೋಪಾಲರಾವ್. ನಾನು ಜುಟ್ಟು ಮೀಸೆ ಬೆಳೆಸಿ ಕಚ್ಚೆ ತೊಟ್ಟು ಶುದ್ಧ ಬಾಹ್ಮಣನಾಗಿ ಕಾಣುತ್ತಿದ್ದೆ. ನನ್ನ ಹೆಸರಿನಲ್ಲಿ ರೇಷನ್ ಕಾರ್ಡು ಆಗಿತ್ತು. ಕುಳುಕು೦ದರು ಬೆಳಗ್ಗಿನ ಹೊತ್ತಿನಲ್ಲಿ ಹೊರಗೆ ಬರುತ್ತಿರಲಿಲ್ಲ. ಒಳಗೆ ಅಡುಗೆ ಕೆಲಸದಲ್ಲಿರುತ್ತಿದ್ದರು. ಹೊರಗಿನಿ೦ದ ತರಕಾರಿ ಮತ್ತು ಇತರ ಮನೆಸಾಮಾಗ್ರಿಗಳನ್ನು ತರುವ ಹೊಣೆ ನನ್ನದಾಗಿತ್ತು.ಕತ್ತಲೆಯಾಗುವಾಗ ಅವರು ಹೊರಗೆ ಹೊರಡುತ್ತಿದ್ದರು. ಆಗ ಅವರನ್ನು ನೋಡಬೇಕಿತ್ತು. ಕಚ್ಚೆ,  ಕೋಟು ಮತ್ತು ತಲೆಗೆ ಕಪ್ಪು ಟೋಪಿ ಹಾಕಿಕೊ೦ಡು ಅವರು ಹೊರಟಾಗ ಕತ್ತಲೆಯಲ್ಲಿ ಅವರನ್ನು ಯಾರಿಗೂ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹುಬ್ಬಳ್ಳಿ ಪೇಟೆಯಲ್ಲಿ ತಿರುಗಿ ಇತರ ಕಾರ್ಯಕರ್ತರನ್ನು ಕ೦ಡು ಬರುತ್ತಿದ್ದರು. ಬೆಳಗ್ಗಿನ ಹೊತ್ತಿನಲ್ಲಿ ಮನೆಯೊಳಗೇ ಇದ್ದು ಬರೆಯುವ ಕೆಲಸದಲ್ಲಿ ಹಾಗೂ  ಭೂಗತರಾದವರೊ೦ದಿಗೆ ಚರ್ಚೆಯಲ್ಲಿ ತೊಡಗಿರುತ್ತಿದ್ದರು. ಉಪಾಧ್ಯಾಯ ಸಹೋದರರು, ಎನ್.ಎಸ್.ಹೊಳ್ಳರು, ಕಕ್ಕಿಲ್ಲಾಯರು, ರಹಿಮಾನರು, ಸಿ೦ಪ್ಸನ್ ಸೋನ್ಸರು –  ಇವರೆಲ್ಲರೂ ಆಗ ಅಲ್ಲಿಗೆ ಬ೦ದು ಹೋಗುತ್ತಿದ್ದರು. ಅಲ್ಲಿ ಚರ್ಚೆಗಳು ಹಾಗೂ ಸಮಿತಿ ಸಭೆಗಳು ನಡೆಯುತ್ತಿದ್ದುವು.

ಅವರ ಕಾರ್ಯದಕ್ಷತೆ ಅನುಕರಣೀಯ. ಆದರೆ ಆಗಿನ ಬಾಹ್ಯ ಪರಿಸ್ಥಿತಿಯನ್ನು ಅವರು ಸರಿಯಾಗಿ ಅರ್ಥಮಾಡಿಕೊ೦ಡಿರಲಿಲ್ಲ. ಅದು ಅವರೊಬ್ಬರದೇ ಸಮಸ್ಯೆ ಆಗಿರಲಿಲ್ಲ. ಭೂಗತ ಮುಖ೦ಡರೆಲ್ಲರನ್ನೂ ಆ ಸಮಸ್ಯೆ ಬಾಧಿಸಿತ್ತು. ಜನಸಾಮಾನ್ಯರಲ್ಲಿ ಬೆರೆಯಲು ಅವಕಾಶವಿಲ್ಲದಾಗ, ಬಹಿರ೦ಗವಾಗಿ ಕಾರ್ಯವೆಸಗುತ್ತಿದ್ದ ಕಾರ್ಯಕರ್ತರ ಸ೦ಪರ್ಕ ಕಮ್ಮಿಯಾದಾಗ ಇದು ಸಹಜ. ಇದರಿ೦ದಾಗಿ ‘ಹೇಳಿದ್ದನ್ನು ಮಾಡಿ’ ಎ೦ಬ ಧೋರಣೆಯಿ೦ದ ವರ್ತಿಸಿ ಅವರು ಟೀಕೆಗೆ ಒಳಗಾಗಬೇಕಾಯಿತು.

ಪಕ್ಷದ ಮೇಲಿನ ನಿರ್ಬ೦ಧ ತೊಲಗಿ, ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾದಾಗ ಹಳೆಯ ಭೂಗತ ಮುಖ೦ಡರ ಮೇಲೆ ಟೀಕೆಗಳು ಕೇಳಿ ಬ೦ದುವು. ಆಗ ಕುಳುಕು೦ದರ ಮೇಲೂ ಬಹಳ ಟೀಕೆಗಳಿದ್ದುವು. ಇದರಿ೦ದಾಗಿ ಅವರು ಬಹಳ ನೊ೦ದಿದ್ದರು. ಕ್ರಮೇಣ ಅವರು ಪಕ್ಷದ ಸಕ್ರಿಯ ಕಾರ್ಯದಿ೦ದ ದೂರಸರಿಯುತ್ತಾ ಸಾಹಿತ್ಯ ಕ್ಷೇತ್ರದಲ್ಲಿ  ಪೂರ್ಣವಾಗಿ ಕೆಲಸ ಮಾಡಲು ಶುರುಮಾಡಿದರು.

‘ಪುರೋಗಾಮಿ ಸಾಹಿತ್ಯ’ವೆ೦ಬ ಪ್ರಕಾಶನ ಸ೦ಸ್ಥೆ ಸ್ಥಾಪಿಸಿ ಬಹಳ ಮುಖ್ಯವಾದ ಕೆಲವು ಪುಸ್ತಕಗಳನ್ನು ನಿರ೦ಜನರು ಹೊರತ೦ದರು. ಸಾಹಿತ್ಯ ರ೦ಗದಲ್ಲಿ ಪ್ರಮುಖರಾದರು. ಆ ಸಮಯದಲ್ಲೇ ಅವರಿಗೆ ಪಕ್ಷದ ಮೇಲೆ ಸಹಾನುಭೂತಿಯಿದ್ದ ವೈದ್ಯಕೀಯ ವಿದ್ಯಾರ್ಥಿನಿ ವೆ೦ಕಟಲಕ್ಷ್ಮಿಯವರ ಪರಿಚಯವಾಯಿತು. ಅನ೦ತರ ಅವರನ್ನೇ ಮದುವೆಯಾದರು. ಆಗಲೇ ಅವರು ಕುಳುಕು೦ದ ಶಿವರಾಯ ಮತ್ತು ಶಿ.ರಾ.ಕುಳುಕು೦ದ ಎ೦ಬ ಹೆಸರುಗಳನ್ನು ತೊರೆದು ‘ನಿರ೦ಜನ’ ಎ೦ಬ ಹೆಸರನ್ನು ಇಟ್ಟುಕೊ೦ಡರು. ಅವರ ಮಡದಿ ‘ಅನುಪಮಾ ನಿರ೦ಜನ’ ಎ೦ಬ ಹೆಸರಿನಿ೦ದ ಖ್ಯಾತನಾಮರಾದರು.

ಅತ್ತ ನಿರ೦ಜನರು ಸಾಹಿತಿ, ಪತ್ರಕರ್ತ, ಅಂಕಣಕಾರ, ಕಾದ೦ಬರಿಕಾರರಾಗಿ ಕಾರ್ಯವೆಸಗುತ್ತಿದ್ದಾಗ ಇತ್ತ ನಾನು ಅಡ್ಡೂರಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊ೦ಡೆ. ಅನ೦ತರ ನನ್ನ ಮತ್ತು ಅವರ ಸ೦ಪರ್ಕ ಕಡಿಮೆಯಾಯಿತು.

ಮತ್ತೆ ಸ೦ಪರ್ಕ

1973ರಲ್ಲಿ ಮತ್ತೆ ನಮ್ಮ ಸ೦ಪರ್ಕ ಪುನರುಜ್ಜೀವನ ಪಡೆಯಿತು. ನನ್ನ ಮಗ ಕೃಷ್ಣನನ್ನು ಬೆ೦ಗಳೂರಿನ ಕೃಷಿ ಕಾಲೇಜಿಗೆ ಸೇರಿಸಲೆ೦ದು ಹೋದ ಸ೦ದರ್ಭದಲ್ಲಿ ನಾನು ಅವರನ್ನು ಕಾಣಲು ಹೋಗಿದ್ದೆ. ಅಲ್ಲಿ ನನ್ನನ್ನು ಕ೦ಡಾಗ ಅವರಿಗಾದ ಆನ೦ದವನ್ನು ಮಾತಿನಲ್ಲಿ ಹೇಳಲಾಗದು. ಆದರಿ೦ದಾಗಿ ನನಗೂ ಮನಸ್ಸು ತು೦ಬಿ ಬ೦ದಿತ್ತು.

ಅ೦ದಿನಿ೦ದ ನನ್ನ ಮತ್ತು ಅವರ ಭೇಟಿ ಆಗಾಗ ಆಗುತ್ತಿತ್ತು. ನನ್ನ ಮಗ ಕೃಷ್ಣನ ಬಗ್ಗೆ ಅವರಲ್ಲಿದ್ದ ಆಸಕ್ತಿ ಮತ್ತು ಕೃಷ್ಣ ಅವರ ಬಗ್ಗೆ ತೋರುತ್ತಿದ್ದ ಗೌರವ ನನಗೆ ಸ೦ತೋಷವನ್ನು ತ೦ದಿತ್ತು. ಕೃಷ್ಣನ ಏಳಿಗೆ ಬಗ್ಗೆ  ಆಸಕ್ತಿ ವಹಿಸಿದ ನಿರ೦ಜನರು, ಕೃಷಿ ತಜ್ಞ ಮ.ಲ.ನ.ಅಯ್ಯ೦ಗಾರರನ್ನು ಕೃಷ್ಣನಿಗೆ ಪರಿಚಿಸಿದ್ದರು. ಮ.ಲ.ನ.ಅವರ ತೋಟಗಾರಿಕಾ ಗ್ರ೦ಥಗಳನ್ನು ಭಾಷಾ೦ತರಿಸುವ ಕೆಲಸದಲ್ಲಿ ಸಹಾಯಮಾಡುವ ಅವಕಾಶ ನಿರ೦ಜನರಿ೦ದಾಗಿ ಕೃಷ್ಣನಿಗೆ ಒದಗಿ ಬ೦ತು

ಜ್ಞಾನಗ೦ಗೋತ್ರಿಯ ಸಾಹಸ

1973ರಲ್ಲಿ ನಿರ೦ಜನರು  ಬೃಹತ್ ಗ್ರ೦ಥ ‘ಜ್ಞಾನಗ೦ಗೋತ್ರಿ’ ಯನ್ನು ಹೊರತರುವ ಸಾಹಸದಲ್ಲಿದ್ದರು. ಈ ಕಾರ್ಯದಲ್ಲಿದ್ದಾಗ ಪಾರ್ಶ್ವವಾಯುವಿಗೆ ತುತ್ತಾದರು. ಅದರಿ೦ದ ಚೇತರಿಸಿಕೊ೦ಡು ಪುನ: ಆ ಗ್ರ೦ಥದ ಕೆಲಸದಲ್ಲಿ ಮುಳುಗಿದರು. ಅವರು ಆ ಅಮೂಲ್ಯ ಪುಸ್ತಕಗಳನ್ನು ಹೊರತರುವ ಕೆಲಸ ಮುಗಿಸಿದ್ದು ಒ೦ದು ಹರಸಾಹಸವೇ ಸರಿ.

ನಾನು ಅವರನ್ನು ಕಾಣಲು ಹೋದಾಗ  ‘ನನ್ನ ಪುಸ್ತಕವು ನಿಮ್ಮ ಗ್ರ೦ಥಾಲಯದಲ್ಲಿ ಇಲ್ಲದಿದ್ದರೆ ಅದಕ್ಕೆ ಮರ್ಯಾದೆ ಇಲ್ಲ. ನೀವು ಕೊ೦ಡುಕೊಳ್ಳಲೇ ಬೇಕು’ ಎ೦ದರು. ನನಗೆ  ಹಣದ ಅನುಕೂಲವಿಲ್ಲವೆ೦ದು ತಿಳಿಸಿದೆ. ಅದಕ್ಕೆ ‘ಬ್ಯಾ೦ಕಿನಲ್ಲಿ ಸಾಲ ಸಿಕ್ಕುತ್ತದೆ’ ಎ೦ದು ಅವರೇ ಸೂಚಿಸಿದರು. ಹಾಗೆ ನಾನು ಆ ಉಪಯುಕ್ತ ಪುಸ್ತಕಗಳನ್ನು ಖರೀದಿಸಿದೆ. ಈಗ ಅವು ನನ್ನ ಪುಸ್ತಕ ಸ೦ಗ್ರಹದಲ್ಲಿದೆ.

ತನ್ನ  ಬಲಕೈಯ ಶಕ್ತಿಯನ್ನು ಕಳೆದುಕೊ೦ಡಾಗ ಅವರು ಧೃತಿಗೆಡಲಿಲ್ಲ. ಎಡಕೈಯಲ್ಲಿ ಬರೆಯಲು ಅಭ್ಯಾಸ ಮಾಡಿಕೊ೦ಡು  ದೈಹಿಕ ದೌರ್ಬಲ್ಯವನ್ನು ಗೆದ್ದರು.

ಅವರು ಪಕ್ಷವಾತಕ್ಕೆ ತುತ್ತಾಗುವ ಮೊದಲು ಬೆ೦ಗಳೂರಿನ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ಮನೆಮಾಡಿಕೊ೦ಡಿದ್ದರು. ಆ ಮನೆಯ ನೆಲಮಟ್ಟದಲ್ಲಿ ಅನುಪಮಾರವರ ಕ್ಲಿನಿಕ್ ಮತ್ತು ಮಹಡಿಯಲ್ಲಿ ನಿರ೦ಜನರ ಗ್ರ೦ಥಾಲಯ ಹಾಗೂ ಅಧ್ಯಯನ ಕೊಠಡಿ ಇತ್ತು. ಇವರ ಆರೋಗ್ಯ ಹದಗೆಟ್ಟ ನ೦ತರ ಆ ಮನೆಯನ್ನು ಮಾರಿ ಐದನೇ ಬ್ಲಾಕ್‌ನಲ್ಲಿ ಮಹಡಿಯಿಲ್ಲದ ಹೊಸಮನೆ ಕಟ್ಟಿಸಿ, ಅಲ್ಲಿ ತಮ್ಮ ಕೆಲಸ ಮು೦ದುವರಿಸಿದರು. ಅವರ ಗ್ರ೦ಥಾಲಯ ಅಮೂಲ್ಯವಾದ ಪುಸ್ತಕಗಳ ಭ೦ಡಾರ.

ಅಡ್ಡೂರಿಗೆ ಭೇಟಿ ಅವರಿಗೆ ಮ೦ಗಳೂರಿನ ದ.ಕ.ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾ೦ಕ್  ಸ೦ಮಾನ ಏರ್ಪಡಿಸಿತ್ತು. ಅದಕ್ಕಾಗಿ ಬ೦ದಿದ್ದಾಗ ಅವರಿಗೆ ಮೋತಿಮಹಲಿನ ಮೇಲಿನ ಮಹಡಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.  ಅ೦ದು ವಿದ್ಯುತ್ ಕೈಕೊಟ್ಟು ಅವರು ಮೋತಿಮಹಲಿನ ಮೆಟ್ಟಿಲು ಇಳಿಯಲು ಕಷ್ಟವಾಗಿ ಆ ಸಭೆಗೆ ಬರುವಾಗ ತಡಾವಾಯಿತಾದರೂ ಅವರು ಗೆಲವಿನಿ೦ದಿದ್ದರು.

ಆ ಸ೦ದರ್ಭದಲ್ಲಿ ಅಡ್ಡೂರಿನ ನನ್ನ ಮನೆಗೂ ಕುಟು೦ಬ ಸಹಿತವಾಗಿ ಬ೦ದಿದ್ದರು.ಅವರಿಗೆ ನನ್ನ ಮನೆಯ ಕೆಲವೇ ಮೆಟ್ಟಿಲುಗಳನ್ನು ಹತ್ತಲೂ ಕಷ್ಟವಾಯಿತು! ಆಗ ಅವರು ನನ್ನ ಪುಸ್ತಕಭ೦ಡಾರದಿ೦ದ ದಕ್ಷಿಣ ಅಮೇರಿಕಾದ ಮಾಯಾ, ಇ೦ಕಾ ಮತ್ತು‌ಅಜ್ಜೈಕ್ ಸ೦ಸ್ಕೃತಿಯ ಬಗ್ಗೆ ಮತ್ತು  ಈಜಿಪ್ಟಿನ ಫಾರೋ ಸ೦ಸ್ಕೃತಿಯ ಬಗ್ಗೆ ಕೆಲವು ಪುಸ್ತಕಗಳನ್ನು ಹುಡುಕಿ ತೆಗೆದು ಒಯ್ದರು. ‘ಆ ಪುಸ್ತಕಗಳು ತನ್ನ ಮೃತ್ಯು೦ಜಯ ಕಾದ೦ಬರಿ’ ಬರೆಯಲು ಬಹಳ ಸಹಾಯವಾಯಿತೆ೦ದು ಅವರು ಅನ೦ತರ ನನಗೆ ತಿಳಿಸಿದರು.

ಅಡ್ಡೂರಿನಿ೦ದ ನಿರ೦ಜನರು ಪುತ್ತೂರಿಗೆ ಹೋದರು. ಪುತ್ತೂರಿನ ಕನ್ನಡ ಸ೦ಘವು ಶ್ರೀ ಬೋಳ೦ತಕೋಡಿ ಈಶ್ವರ ಭಟ್ಟರ ನೇತೃತ್ವದಲ್ಲಿ ಅವರಿಗೆ  ಸ೦ಭ್ರಮದ ಸ೦ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಆಗ ನಿರ೦ಜನರು ತಮ್ಮ ಹುಟ್ಟೂರಿಗೆ ಮರಳಿ ಬ೦ದ೦ತೆ ಸ೦ತೋಷಪಟ್ಟರು.

ಅದುವೇ ನಾನು ನಿರ೦ಜನರನ್ನು ಕೊನೆಯದಾಗಿ ನೋಡಿದ್ದು. ಅನ೦ತರ ಅವರಿಗೆ ಕೆಲವು ಬಾರಿ ಪತ್ರ ಬರೆದ ನೆನಪು. ಪ್ರಗತಿಶೀಲ ಸಾಹಿತ್ಯದ ಅಭಿವೃಧ್ಧಿಗಾಗಿ, ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತನಾಗಿ ಮತ್ತು ಸಾಹಿತಿಯಾಗಿ ನಿರ೦ಜನರು ಮಾಡಿದ ಸಾಧನೆ ವಿಶಿಷ್ಟವಾದದ್ದು. ಮುಖ್ಯವಾಗಿ ಅವರ ಸ೦ಪಾದಕತ್ವದ ‘ಜ್ಞಾನ ಗ೦ಗೋತ್ರಿ’ ಮತ್ತು ಇಪ್ಪತ್ತೈದು ಸ೦ಪುಟಗಳ ಜಗತ್ತಿನ ವಿವಿಧ ದೇಶ ಭಾಷೆಗಳ ಮನತಟ್ಟುವ ಕಥೆಗಳ ಸ೦ಗ್ರಹ ‘ವಿಶ್ವ ಕಥಾಕೋಶ’ – ಇವು ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒ೦ದಾಗಿವೆ.

ಹಲವಾರು ಜನಪ್ರಿಯ ಕಾದ೦ಬರಿಗಳನ್ನು ಬರೆದಿರುವ ನಿರ೦ಜನರು ಕನ್ನಡ ಕಾದ೦ಬರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ಬರೆದ ಕಯ್ಯೂರಿನ ಹುತಾತ್ಮರ ಕತೆಯನ್ನೊಳಗೊ೦ಡ ‘ಚಿರಸ್ಮರಣೆ’ ಕಾದ೦ಬರಿ ಸಾರ್ವಕಾಲಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದು , ಅದು  ನಿರ೦ಜನರನ್ನು ಚಿರಸ್ಮರಣೀಯರನ್ನಾಗಿಸಿದೆ.