ಮಲೆನಾಡ ಸೆರಗು ಮುಗಿದು ಬಯಲು ಸೀಮೆಯ ಆರಂಭವಾಗು ಪ್ರದೇಶದಲ್ಲಿ, ಕನ್ನಡನಾಡಿನ ಮಧ್ಯಭಾಗದಲ್ಲಿ ಜಾನಕಲ್ ಗ್ರಾಮವಿದೆ. ಅದರ ಗುಡ್ಡದ ನೆತ್ತಿಯ ಬಂಡೆಯ ಮೇಲೆ ಸುಂದರನಾದ ಬಾಲಕನೊಬ್ಬನು ನಿಂತಿದ್ದಾನೆ. ಅವನ ಮುಖಮಂಡಲದಲ್ಲಿ ಕ್ಷಾತ್ರ ತೇಜಸ್ಸು ಹೊರಹೊಮ್ಮುತ್ತಿದೆ. ತಲೆಯ ಮೇಲೆ ಆಕಾಶದಲ್ಲಿ ಆಷಾಢದ ಮೊಡಗಳು ಸುಳಿದು ಪೂರ್ವ ದಿಗಂತದಲ್ಲಿ ಮುರೆಯಾಗುತ್ತಿವೆ. ಕೆಳಗೆ ಬೆಟ್ಟದ ಸುತ್ತಕೋಟೆ; ಕೋಟೆಯ ಪರಿಸರದಲ್ಲಿ ಊರು ಹಬ್ಬಿದೆ. ಊರಾಚೆ ತಲೆದೂಗುತ್ತಿರುವ ತೆಂಗು, ಅಡಿಕೆ ವೃಕ್ಷಗಳ ತೋಟಗಳು. ಅಲ್ಲಲ್ಲಿ ಹಲಸು, ಮಾವು ಮರಗಳ ಗುಂಪು. ನಾಲ್ಕು ದಿಕ್ಕುಗಳಲ್ಲೂ ಗುಡ್ಡಗಳು ತಲೆ ಎತ್ತಿ ನಿಂತಿವೆ.

ಪ್ರಕೃತಿಯ ವೈಭವ-ಚೆಲುವುಗಳಲ್ಲಿ ಮೈಮರೆತು ನಿಂತಿದ್ದ ಹುಡುಗ.

ನೀನೆ ದೊರೆ!

ಇದ್ದಕ್ಕಿದ್ದ ಹಾಗೆ ಕಹಳೆಯ ಧ್ವನಿಯು ಊರ ಕಡೆಯಿಂದ ಕೇಳಿಬಂದಿತು. ವಾದ್ಯಗಳು ಮೊಳಗಿದವು. ಜಯಜಯಕಾರ ಶಬ್ದಗಳು ಭೂಮಿ ಆಕಾಶಗಳನ್ನು ತುಂಬಿದುವು.

ಹುಡುಗ ತಿರುಗಿ ನೋಡಿದ. ಊರಿನಲ್ಲಿ ಜನ ಸಡಗರದಿಂದ ಓಡಾಡುತ್ತಿದ್ದಾರೆ. ತನ್ನ ಮನೆಯ ಮುಂದೆ ಜನರ ಗುಂಪು. ಆನೆ ಅಂಬಾರಿಗಳು ಸಜ್ಜಾಗಿ ನಿಂತಿವೆ ಆಶ್ಚರ್ಯದಿಂದ ಹುಡುಗ ನೋಡುತ್ತಲೇ ಇದ್ದ. ನಾಲ್ಕು ಜನ ಯೋಧರು ಗುಡ್ಡ ಹತ್ತಿ ಬಾಲಕನ ಮುಂದೆ ಬಂದು ವಂದಿಸಿದರು. “ಚಿತ್ರದುರ್ಗದ ಭಾವೀ ನಾಯಕರಿಗೆ ಜಯವಾಗಲಿ” ಎಂದು ಘೋಷಿಸುತ್ತಾ ಮತ್ತೆ ನಾಲ್ವರು ಬಂದರು. ಅವರ ನಾಯಕ ಹುಡುಗನ ಮುಂದೆ ನಿಂತು ನಮಸ್ಕರಿಸಿದ. “ಚಿತ್ರದುರ್ಗ ಸಂಸ್ಥಾನದ ರಾಜಮಾತೆ ಓಬವ್ವ ನಾಗತಿಯ ಅನುಜ್ಞೆಯನ್ನು ಹೊತ್ತು ತಂದಿದ್ದೇನೆ. ತಮ್ಮನ್ನು ಚಿತ್ರದುರ್ಗದ ಭಾವೀ ರಾಜರಾಗಿ ನಾಗತಿಯವರು ಆರಿಸಿದ್ದಾರೆ. ನಾಳೆಯೇ ಪಟ್ಟಾಭಿಷೇಕ. ನಾನು ಚಿತ್ರದುರ್ಗದ ಮುಖ್ಯಮಂತ್ರಿ. ತಾವು ಈಗಲೇ ದಯಮಾಡಿಸಬೇಕು” ಎಂದು ಹೇಳಿ ತಲೆಬಾಗಿದ.

ಹುಡುಗನಿಗೆ ಆಶ್ಚರ್ಯ. ಆದರೂ ಮುಖ ಗಂಭೀರವಾಗಿತ್ತು. ಒಂದು ಕ್ಷಣ ಕಳೆದ ನಂತರ, “ನನ್ನ ಜೊತೆಗೆ ಬನ್ನಿ” ಎಂದು ಅವರನ್ನು ಕರೆದುಕೊಂಡು ಮನೆಯತ್ತ ಹೆಜ್ಜೆ ಹಾಕಿದ.

ಅವನ ತಂದೆ ತಾಯಿಗಳಿಗೆ ಸಂತೋಷ ಉಕ್ಕಿ ಬರುತ್ತಿತ್ತು. ಹುಡುಗ ಅವರಿಗೆ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದನು. “ನಮ್ಮ ಸಂಸ್ಥಾನದ ರಾಜ್ಯ ಲಕ್ಷ್ಮೀಯು ನಿನ್ನನ್ನು ವರಿಸಿ ಬಂದಿದ್ದಾಳೆ. ಅವಳನ್ನು ರಕ್ಷಿಸುವ ಭಾರವು ನಿನ್ನ ಮೇಲೆ ಬಿದ್ದಿದೆ. ಈ ಮಹಾ ಕಾರ್ಯದಲ್ಲಿ ಜಯ ಶೀಲನಾಗು, ಚಿರಾಯುವಾಗು” ಎಂದು ಅವರು ಹರಸಿದರು.

ಬಾಲಕ ಮದಕರಿನಾಯಕ ಆನೆಯನ್ನೇರಿ ಅಂಬಾರಿಯಲ್ಲಿ ಕುಳಿತ. ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದ.

ಆಗ ಅವನಿಗೆ ಹನ್ನೆರಡು ವರ್ಷ. ಅವನು ಭರಮಣ್ಣ ನಾಯಕ ಎಂಬುವರ ಮಗ.

ಶಾಲಿವಾಹನ ಶಕ ೧೬೭೬ನೆಯ ಭಾವ ಸಂವತ್ಸರ ಆಷಾಢ ಶುದ್ಧ ದ್ವಾದಶಿ (೧೭೫೪ ನೆಯ ಇಸವಿ) ಚಿತ್ರದುರ್ಗವು ಅಪೂರ್ವ ಸಂಭ್ರಮದಿಂದ ಕೂಡಿದೆ. ಗಿರಿ ಶಿಖರಗಳ ಮೇಲೆ ಹನುಮದ್ಗರುಡ ಧ್ವಜಗಳು ಹಾರಾಡುತ್ತಿವೆ. ರಾಜವೀಧಿಗಳೆಲ್ಲಾ ಶೃಂಗರಿಸಲ್ಪಟ್ಟಿವೆ. ಶ್ರೀ ಸಂಪಿಗೆ ಸಿದ್ಧೇಶ್ವರ ದೇವ ಮಂದಿರದ ಬಳಿ ಲಕ್ಷಾಂತರ ಜನ ಸೇರಿದ್ದಾರೆ. ಒಳ ಅಂಕಣದಲ್ಲಿ ಛತ್ರಿಯಂತೆ ಹರಡಿರುವ ಬೃಹತ್ ಬಂಡೆಯ ಕೆಳಗೆ ಸಿಂಹಾಸನವಿಟ್ಟಿದ್ದಾರೆ. ನೆರೆ ರಾಜ್ಯಗಳ ಪಾಳೆಯಗಾರರೂ, ರಾಜಪ್ರತಿನಿಧಿಗಳೂ ಆಸನಗಳನ್ನು ಅಲಂಕರಿಸಿದ್ದಾರೆ. ಚಿತ್ರದುರ್ಗ ಸಂಸ್ಥಾನದ ಉನ್ನತ ಅಧಿಕಾರಿಗಳೂ, ಸೇನಾನಾಯಕರೂ, ಪ್ರಮುಖರೂ ಸಭೆಯಲ್ಲಿದ್ದಾರೆ. ಮಂಗಳವಾದ್ಯಗಳು ಮೊಳಗುತ್ತಿವೆ. ಸಭೆಯ ಜಯಘೋಷಗಳ ಮಧ್ಯೆ ಚಿತ್ರದುರ್ಗ ರಾಜ್ಯದ ದೊರೆಯಾಗಿ ಕುಮಾರ ಮದಕರಿ ರಾಜೇಂದ್ರನು ಸಿಂಹಾಸನವನ್ನೇರಿದನು.

ಅನಂತರ ರಾಜಮಾತೆಯವರು ಸಭೆಯನ್ನುದ್ದೇಶಿಸಿ ಮಾತನಾಡುವರೆಂದು ಘೋಷಿಸಲಾಯಿತು. ತೆರೆಯ ಮರೆಯಲ್ಲಿ ನಿಂತು “ಗಂಡುಗಲಿ” ಓಬವ್ವ ನಾಗತಿ ಕಂಚಿನ ಕಂಠದಿಂದ ಹೀಗೆಂದಳು: “ನಮ್ಮ ಪವಿತ್ರ ಕಾಮಗೇತಿ ವಂಶದ ಸಿಂಹಾಸನವನ್ನು ಚಿಕ್ಕ ಮದಕರಿ ರಾಜೇಂದ್ರರು ಈ ದಿನ ಪಟ್ಟವೇರಿರುತ್ತಾರೆ. ಅವರ ಪ್ರಾಪ್ತ ವಯಸ್ಕರಾಗುವವರೆಗೂ ಈ ಸಂಸ್ಥಾನದ ಎಲ್ಲ ಅಧಿಕಾರಗಳೂ ನಮ್ಮ ವಶದಲ್ಲಿರುತ್ತಾವೆ.”

ಮುಂದುವರಿಯತ್ತ ರಾಜಮಾತೆಯು “ನಮ್ಮ ರಾಜ್ಯದ ಪ್ರತಿ ದೇವಮಂದಿರದಲ್ಲೂ ನಿತ್ಯವೂ ಪೂಜಾದಿಗಳು ನಡೆಯಬೇಕು. ಅಧಿಕಾರಿಗಳು ಪ್ರಜೆಗಳ ಅಹವಾಲುಗಳನ್ನು ಕೇಳಿ ತಕ್ಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯವು ಹೆಂಗಸಿನ ಕೈಯಲ್ಲಿದೆ ಎಂದು ನೆರೆಹೊರೆಯ ಕೆಲವು ಸಂಸ್ಥಾನದವರು ರಾಜ್ಯದ ಮೇಲೆ ಬೀಳಲು ಹವಣಿಸುತ್ತಿರುವುದಾಗಿ ತಿಳಿದುಬಂದಿದೆ. ಆದುದರಿಂದ ಸೈನ್ಯದ ಅಧಿಕಾರಿಗಳು ಎಚ್ಚರದಿಂದಿರಬೇಕು. ಕೋಟೆಯನ್ನು ಸರ್ಪದಂತೆ ಕಾಯಬೇಕು. ಕಣಜಗಳಲ್ಲಿ ದವಸ ಧಾನ್ಯಗಳನ್ನು ಯಾವಾಗಲೂ ತುಂಬಿರಬೇಕು. ಹನ್ನೆರಡು ವರುಷ ಯುದ್ಧವಾದರೂ ಯಾವ ಸಾಮಗ್ರಿಗಳಿಗೂ ಕೊರತೆಯಾಗಕೂಡದು. ಯಾರಾದರೂ ಕೋಟೆಯನ್ನು ಮುತ್ತಿದರೆ ನಾವು ಧೀರರೆಂಬುದನ್ನೂ, ವೀರ ಪುತ್ರಿಯರೆಂಬುದನ್ನೂ ಶತ್ರುಗಳಿಗೆ ಗೊತ್ತಾಗುವಂತೆ ಮಾಡೋಣ” ಎಂದು ವೀರವಾಣಿಯಿಂದ ಘೋಷಿಸಿದಳು.

ಸುಂದರನೂ, ಕಾಂತಿಯುಕ್ತನೂ ಆದ ಚಿಕ್ಕ ಮದಕರಿ ರಾಜೇಂದ್ರನು ತಮ್ಮ ರಾಜನಾದುದು ಸುದೈವವೆಂದು ಪ್ರಜೆಗಳೆಲ್ಲರೂ ಭಾವಿಸಿದರು. ಹನ್ನೊಂದು ದಿನಗಳಿಂದ ತವಕಗೊಂಡು “ಮುಂದಿನ ರಾಜ ಯಾರು!” ಎಂದು ಕೇಳುತ್ತಿದ್ದ ಅವರ ಮನಸ್ಸು ಶಾಂತಿಯಿಂದ ನಲಿದಾಡಿತು.

ಇದು ನಡೆದದ್ದು ಶ್ರೀ ಸಾನಂದ ಗಣೇಶ, ಶ್ರೀ ಸಂಪಿಗೆ ಸಿದ್ದೇಶ, ಶ್ರೀ ಏಕನಾಥೇಶ್ವರಿ, ಶ್ರೀ ಗೋಪಾಲ ಕೃಷ್ಣ ಮುಂತಾದ ಪ್ರಖ್ಯಾತ ದೇವಮಂದಿರಗಳಿಂದ ಪಾವನವಾಗಿದ್ದ ಚಿನ್ಮೂಲಾದ್ರಿ ಪ್ರದೇಶದಲ್ಲಿ. ಇದು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ. ದ್ವಾಪರಯುಗದಲ್ಲಿ ಹಿಡಿಂಬನ ಆವಾಸಸ್ಥಾನವಾಗಿ “ಭೂತನಾಥನ ದುರ್ಗ” ಎಂದು ಹೆಸರಾಗಿತ್ತು. ಪಾಂಡವರು ಆಗಮಿಸಿ ಇಲ್ಲಿ ಪಂಚಲಿಂಗಗಳನ್ನು ಸ್ಥಾಪಿಸಿದರು ಎಂದು ಹೇಳುತ್ತಾರೆ. ಹೊಯ್ಸಳ ರಾಜರು, ವಿಜಯನಗರದ ಅರಸರು ಇಲ್ಲಿ ಮಾಂಡಲಿಕರನ್ನು ನೇಮಿಸಿದ್ದರು.

ಕಾಮಗೇತಿ ವಂಶದ ಮೂಲಪುರಷ ಚಿತ್ರನಾಯಕ ಎಂಬವನು. ಇವನು ದೆಹಲಿಯಲ್ಲಿದ್ದಾಗ ಓಡಿಬರುತ್ತಿದ ಒಂದು ಮದಿಸಿದ ಆನೆಯನ್ನು ಎದುರಿಸಿ ಹಿಡಿತಕ್ಕೆ ತಂದ ಧೀರ; ಅದರಿಂದಲೇ “ಮದಕರಿ” ಎಂದು ಕರೆಯುತ್ತಿದ್ದರು. ಚಿತ್ರನಾಯಕನ ಊರು ಚಿತ್ರದುರ್ಗವೆಂದು ಹೆಸರಾಯಿತು. ಈ ವಂಶದಲ್ಲಿ ಹಲವರು ಧೀರ ರಾಜರು ಆಳಿದರು. ಚಿತ್ರದುರ್ಗ ಸಂಸ್ಥಾನವನ್ನು ಬಲಪಡಿಸಿದವರಲ್ಲಿ ಹಿರಿಯ ಮಕಕರಿನಾಯಕ ಅಗ್ರಗಣ್ಯ. ಹಲವರು ಶತ್ರುಗಳಿಂದ ರಾಜ್ಯವನ್ನು ರಕ್ಷಿಸಿದ. ಆದರೆ ಯುದ್ಧದಲ್ಲಿ ತೀರಿಕೊಂಡ. ಅವನ ಹಿರಿಯ ಮಗನೂ ಮಕ್ಕಳಿಲ್ಲದೆ ಸತ್ತ.

ಮುಂದೆ ರಾಜ್ಯದ ಗತಿಯೇನು?

ಕಾಮಗೇತಿ ವಂಶದವನೇ ಆದ ಭರಮಣ್ಣ ನಾಯಕ ಎಂಬುವನು ಜಾನಕಲ್ಲಿನಲ್ಲಿ ವಾಸವಾಗಿದ್ದ. ಅವನ ಮಗ ಚಿಕ್ಕ ಮದನಕರಿನಾಯಕ ಹನ್ನೆರಡು ವರ್ಷದ ಹುಡುಗ. ದೃಢಕಾಯ, ಗಂಭೀರ, ತೇಜಸ್ವಿ.

ರಾಜಮಾತೆ ಅವನನ್ನೇ ಸಿಂಹಾಸಕ್ಕೆ ಆರಿಸಿದಳು.

ಅಜೇಯ ಬಾಲಕ

ಚಿತ್ರದುರ್ಗ ಸಂಸ್ಥಾನದ ಬಲ ಎಲ್ಲರಿಗೆ ತಿಳಿದಿತ್ತು. ಅಪಾರ ಐಶ್ವರ್ಯದಿಂದ ತುಂಬಿ ತುಳುಕುತ್ತಿತ್ತು. ನೆರೆಹೊರೆಯ ರಾಜರಿಗೆ ಅಸೂಯೆ. ರಾಯದುರ್ಗದ ಕೃಷ್ಣಪ್ಪ ನಾಯಕನಿಗೆ ಚಿತ್ರದುರ್ಗದ ಬಗ್ಗೆ ಮೊದಲಿನಿಂದಲೂ ಹೊಟ್ಟೆಯುರಿ. ಹಗೆಯನ್ನು ಸಾಧಿಸಲು ಸಮಯ ಕಾಯುತ್ತಿದ್ದ.

ಹನ್ನೆರಡು ವರ್ಷದ ಹುಡುಗ ರಾಜನಾದ. ಆಡಳಿತವನ್ನು ಮುದುಕಿ ರಾಜಮಾತೆ ನಡೆಸುತ್ತಿದ್ದಾಳೆ ಎಂದು ಅವನಿಗೆ ತಿಳಿಯಿತು. ಚಿತ್ರದುರ್ಗದ ಸೊಕ್ಕು ಮುರಿಯಲು ಇದೇ ಸಮಯ ಎಂದುಕೊಂಡ. ಉತ್ತರ ಗಡಿಪ್ರದೇಶದಲ್ಲಿ ಸೈನ್ಯ ಸಮೇತ ನುಗ್ಗಿದ. ಮದಕರಿಯ ಗೋಮಂದೆಯನ್ನು ಹಿಡಿದ. ರಾಜಮಾತೆ ಓಬವ್ವ ನಾಗತಿಗೆ ಸುದ್ದಿ ಮುಟ್ಟಿತು. ಕೂಡಲೇ ಶತ್ರುಗಳನ್ನು ಧ್ವಂಸಮಾಡಿ ಗೋವುಗಳನ್ನು ಬಿಡಿಸಲು ಆಜ್ಞೆಯಿತ್ತಳು. ಮದಕರಿ ರಾಜೇಂದ್ರನು ಎಳೆಮೀಸೆ ತಿರುವುತ್ತ, ಚಿತ್ರದುರ್ಗದ ಸೇನೆಯನ್ನು ನಡೆಸಿದನು. ಯೋಧರು ಶತ್ರು ಸಮೂಹದ ಮೇಲೆ ಎರಗಿದರು. ರಾಯದುರ್ಗದ ದಂಡು ತತ್ತರಿಸತ್ತ ಓಡಿತು. ಗೋವುಗಳು ವಶವಾದವು. ರಾಯದುರ್ಗದವರೆಗೂ ಮದಕರಿಯು ಅಟ್ಟಿಸಿಕೊಂಡು ಹೋದನು. ಅರಿಸೇನೆಯು ರಾಯದುರ್ಗವನ್ನು ಸೇರಿತು. ಕೃಷ್ಣಪ್ಪನಾಯಕನು ಕೋಟೆಯಲ್ಲಿ ಅವಿತುಕೊಂಡನು.

ವರ್ಷಗಳು ಉರುಳಿದವು. ಮದಕರಿ ರಾಜ ಭೀಮನಾಯಕನಾದ. ತರುಣನಾದ. ಅವನ ಮುಖದಲ್ಲಿ ಗಾಂಭೀರ್ಯ ಎದ್ದು ಕಾಣುತ್ತಿತ್ತ. ವಿವಾಹ ವಯಸ್ಕನಾದನು. ನಾನು – ತಾನೆಂದು ಅನೇಕ ಸಂಸ್ಥಾನಾಧೀಶರು ತಮ್ಮ ಕುವರಿಯನ್ನು ಕೊಡಲು ಮುಂದೆ ಬಂದರು. ಕಡೆಗೆ ತರೀಕೆರೆಯ ರಾಜ ಹನುಮಪ್ಪನಾಯಕನ ಮಗಳು ಲಕ್ಕಾಂಬೆ ಚಿಕ್ಕ ಮದಕರಿನಾಯಕನ ಕೈಹಿಡಿದಳು.

ಮತ್ತೆ ಕೆಲವು ವರ್ಷಗಳು ಉರುಳಿದವು. ವೃದ್ಧಾಪ್ಯದಿಂದ ಓಬವ್ವ ನಾಗತಿಯು ಪರಮಪದ ವನ್ನೈದಿದಳು. ಅವಳ ವೀರವಾಣಿಯನ್ನು ಮನದಲ್ಲಿಟ್ಟುಕೊಂಡು ದರ್ಪದಿಂದ ರಾಜ್ಯವನ್ನು ಮದಕರಿ ರಾಜೇಂದ್ರನು ಆಳಲು ಪ್ರಾರಂಭಿಸಿದನು. ಅವನ ಕೀರ್ತಿ, ಪ್ರಜೆಗಳ ಸುಖ ಎರಡೂ ಬೆಳೆದವು.

ರಾಜ್ಯರಾಜ

ಮದಕರಿ ರಾಜೇಂದ್ರನು ಆಳುತ್ತಿರುವ ಚಿನ್ಮೂಲಾದ್ರಿ ಗಿರಿ ಸಮೂಹಕ್ಕೆ ಏಳು ಶಿಖರಗಳು. ಲಾಲ್ ಬತೇರಿ, ರಣಬತೇರಿ, ತುಪ್ಪದ ಕೊಳದ ಬತೇರಿ, ಕಹಳೆ ಬತೇರಿ, ಹಿಡಿಂಬನ ಬತೇರಿ, ಝಾಂಡಾ ಬತೇರಿ ಮತ್ತು ಬಸವನ ಬತೇರಿಗಳಿಂದ ಶಿಖರಗಳು ಶೋಭಾಯಮಾನವಾಗಿವೆ. ಸೂರ್ಯವೀಧಿ, ಚಂದ್ರವೀಧಿ ಮುಂತಾದ ರಾಜ ಮಾರ್ಗಗಳು ಐಶ್ವರ್ಯವಂತರ ಭವನಗಳಿಂದ ಕೂಡಿವೆ. ಏಳು ಸುತ್ತಿನ ಕೋಟೆಯು ಈ ಗಿರಿಸಮೂಹವನ್ನು ಸುತ್ತುವರಿದಿದೆ. ಆಳವಾದ ಅಗಳುಗಳು ಹೊರ ಕೋಟೆಗಳನ್ನು ಆವರಿಸಿವೆ. ಅಗಸೆ ಬಾಗಿಲುಗಳು ಗುಪ್ತಮಾರ್ಗಗಳು, ದಿಡ್ಡಿಬಾಗಿಲುಗಳು, ಲೆಕ್ಕವಿಲ್ಲದಷ್ಟಿವೆ. ತುಪ್ಪ, ಎಣ್ಣೆ, ದವಸಧಾನ್ಯಗಳನ್ನು ಸಂಗ್ರಹಿಸುವ ಕಣಜಗಳು ಹೇರಳವಾಗಿವೆ. ಮದ್ದುಗುಂಡು ತಯಾರಿಸುವ ಕಾರ್ಖಾನೆಗಳೂ ಶಸ್ತ್ರ ಸಂಗ್ರಹಣೆಗಾಗಿ ಆಲಯಗಳೂ ಸಾಲು ಸಾಲಾಗಿವೆ. ಕನ್ನಡನಾಡಿನ ಮಧ್ಯಭಾಗದಲ್ಲಿ ಚಿತ್ರದುರ್ಗದ ಕೋಟೆಯು ಒಂದು ವಜ್ರಕವಚ.

ಹೈದರಾಲಿಯು ‘ನಾಯಕರೇ, ನಿಮ್ಮ ಸಾಹಸಕ್ಕೆ ಸಮನಿಲ್ಲ’ ಎಂದು ಮದಕರಿನಾಯನನ್ನು ಹೊಗಳಿದ

ನಿತ್ಯವು ಮದಕರಿ ರಾಜೇಂದ್ರನು ಉದಯ ಕಾಲದಲ್ಲಿ ಏಳುವನು. ಚಂದ್ರಮೌಳೇಶ್ವರನನ್ನು ಧ್ಯಾನಿಸುವನು. ಗರಡಿಮನೆಯನ್ನು ಹೊಕ್ಕು ದಂಡೆಯನ್ನು ತೆಗೆದು, ಮಲ್ಲರೊಡನೆ ಕುಸ್ತಿಯಾಡುವನು. ಅನಂತರ ಮಂಗಳ ಸ್ನಾನ, ಸ್ನೇಹಿತರೊಡನೆ ಭೋಜನ. ವಸ್ತ್ರಗಳಿಂದ ಅಲಂಕೃತನಾದ ಧನುರ್ಬಾಣ, ಗಂಡುಗೊಡಲಿ ಮುಂತಾದ ಆಯುಧಗಳನ್ನು ಧರಿಸಿ ಅರಮನೆಯ ದೊಡ್ಡ ಸಭಾಂಗಣಕ್ಕೆ ಆಗಮಿಸುವನು. ವಂದಿಗಳು ಪರಾಕು ಹೇಳುತ್ತಿರಲು ಸಿಂಹಾಸನವನ್ನು ಏರುವನು. ಆಶ್ರಿತರು ಕಪ್ಪಗಳನ್ನು ಅರ್ಪಿಸುವರು. ಬಂದವರ ಬಿನ್ನಹಗಳನ್ನು ಕೇಳುವನು, ರಾಜಕಾರ್ಯವನ್ನು ಮುಗಿಸುವನು. ಎಲ್ಲರನ್ನೂ ಮರ್ಯಾದಿಸಿ, ವಿದ್ವಾಂಸರನ್ನು ಪ್ರೀತಿಯಿಂದ ಸತ್ಕರಿಸುವನು. ಬ್ರಾಹ್ಮಣರ, ಜಂಗಮರ ಆಶೀರ್ವಾದವನ್ನು ಹೊಂದುವನು. ಸಭೆಯಿಂದ ಹೊರಟು ಅಲಂಕೃತವಾದ ರಾಜಗೋಪಾಲವೆಂಬ ಬಿಳಿಯ ಕುದುರೆಯನ್ನೇರಿ ರಾಜಮಾರ್ಗದಲ್ಲಿ ಸಂಚರಿಸುವನು. ಕಾಡು ಮೃಗಗಳ ಹಾವಳಿ ಎಂದು ಪ್ರಜೆಗಳು ಹೇಳಿಕೊಂಡರೆ ತಾನೇ ಬೇಟೆಗೆ ಹೊರಡುವನು. ಹುಲಿ, ಕಾಡುಕೋಣ, ಕರಡಿ ಯಾವುದೂ ಅವನಿಗೆ ಎದುರಿಲ್ಲ. ಸಂಚಾರ ಹೊರಟಾಗ ದೇವಾಲಯಗಳಿಗೆ ಹೋಗಿ ಪೂಜೆ ಅರ್ಪಿಸುವನು.

ಒಂದು ದಿನ ಮದಕರಿ ಭೂಪಾಲನು ಭವ್ಯ ಬಸವನ ಬುರುಜನ್ನು ಏರಿದನು. ಸುತ್ತಲಿನ ದೃಶ್ಯಗಳನ್ನು ನೋಡುತ್ತ ಪ್ರಕೃತಿಯ ರಮ್ಯತೆಯಲ್ಲಿ ತಲ್ಲೀನನಾದನು. ಬತೇರಿಯ ದ್ವಾರದಲ್ಲಿದ್ದ ಬಂದಿಖಾನೆಯಿಂದ ಮಧುರಗಾನವೊಂದು ಕೇಳಿ ಬರುತ್ತಿತ್ತು. ಮದಕರಿಯ ಅಸಮಾನ ವ್ಯಕ್ತಿತ್ವ, ಅವನ ರಾಜ್ಯ ಇವನ್ನು ಹಾಡು ವರ್ಣಿಸುತ್ತಿತ್ತು. ರಾಜನ ಹೃದಯದಲ್ಲಿ ಸಂತೋಷ ಉಕ್ಕಿತು. ಸೆರೆಯಲ್ಲಿದ್ದ ಗಾಯಕನನ್ನು ರಾಜ ಕರೆಸಿದ, ಯಾರೆಂದು ವಿಚಾರಿಸಿದ. ಆತ ಕೊಡಗನೂರು ಅಧಿಕಾರಿ ಚಂದ್ರಭೀಮಯ್ಯ ಎಂಬವನು. ಕ್ಷಾಮ ಬಂದಾಗ ಬಡವರಿಗೆ ಅನ್ನದಾನ ಮಾಡಿದನೆಂದೂ ತನಗಾಗದವರ ಸುಳ್ಳು ಚಾಡಿಗಳಿಂದ ಬೊಕ್ಕಸದ ಹಣ ವ್ಯಯಮಾಡಿದನೆಂದು ಶಿಕ್ಷಿಸಲ್ಪಟ್ಟಿರುವುದಾಗಿಯೂ ಭೀಮಯ್ಯನು ಅರಿಕೆ ಮಾಡಿಕೊಂಡನು. ರಾಜ ವಿಚಾರಣೆ ನಡಿಸಿದ. ಭೀಮಯ್ಯ ತಪ್ಪಿತಸ್ಥನಲ್ಲ ಎಂದು ಗೊತ್ತಾಯಿತು. ಮದಕರಿನಾಯಕ ಭೀಮಯ್ಯನನ್ನು ಬಂಧಮುಕ್ತನನ್ನಾಗಿ ಮಾಡಿ ಆಸ್ಥಾನ ಕವಿಯನ್ನಾಗಿ ನೇಮಿಸಿದನು.

ಪೆಟ್ಟು ತಿಂದು ರಾಯದುರ್ಗದ ಕೃಷ್ಣನಾಯಕನು ಕೆಲವು ಕಾಲ ಸುಮ್ಮನಿದ್ದನು. ಒಳಗಿನ ಕಿಚ್ಚು ಕುದಿಯುತ್ತಲೇ ಇತ್ತು. ಸವಣೂರು ನವಾಬ್ ಹಕೀಂಖಾನನನ್ನೂ, ಹರಪನಹಳ್ಳಿ ಅರಸನನ್ನೂ ಬಿದನೂರಿನ ರಾಜನನ್ನೂ ಹುರಿದುಂಬಿಸಿದನು ಮೂರು ಸೈನ್ಯಗಳೂ ಚಿತ್ರದುರ್ಗ ರಾಜ್ಯದ ಕುಯಲಹಳ್ಳಿ ಕೋಟೆಯನ್ನು ಮುತ್ತಿದವು. ಬಿದನೂರು ರಾಜನ ಸಹಾಯವನ್ನೂ ತೆಗೆದುಕೊಂಡರು. ತನ್ನ ಗಡಿ ಕೋಟೆಯನ್ನು ಶತ್ರುಗಳು ಮುತ್ತಿದ ಸುದ್ದಿ ತಿಳಿಯುತ್ತಲೇ ಮದಕರಿಯು ರಣೋತ್ಸಾಹದಿಂದ ಸೈನ್ಯ ಸಮೇತ ಸಮರಕ್ಕೆ ನಡೆದನು. ಶತ್ರಗಳ ಮೇಲೆ ಬಿದ್ದನು. ಗುಂಡುಗಳ ಮಳೆಸುರಿದವು. ಬಾಣಗಳು ಸಿಡಿದವು. ನಾಲ್ಕು ಗಂಟೆಗಳ ಕಾಲ ಕಾಗ್ಗಾಳಗವಾಯಿತು. ಎರಡು ಕಡೆಯವರೂ ಮಣಿಯಲಿಲ್ಲ. ಮದಕರಿಯು ಯುದ್ಧವಿಧಾನ ಬದಲಿಸಿದನು. ಮುಂಭಾಗ ಹಿಂಭಾಗಗಳಿಂದ ಶತ್ರು ದಂಡಿನ ಮೇಲೆ ಬಿದ್ದನು. ಅರಿಗಳ ಎದೆ ನಡುಗಿತು. ದಿಕ್ಕು ಕಾಣದೆ ಶತ್ರು ನಾಯಕರು ಅಂಬಾರಿ ತಿರುಗಿಸಿಕೊಂಡು ಓಡಿ ಹೋದರು. ಜಯಭೇರಿ ಹೊಡೆಯುತ್ತ ಮದಕರಿಯು ದುರ್ಗಕ್ಕೆ ಹಿಂತಿರುಗಿದನು. ಇದನ್ನು ತಿಳಿದ ಹಕೀಂಖಾನನು ತನ್ನ ದಂಡನ್ನು ಹಿಂತಿರುಗಿಸಿ ಪುನಃ ಕುಯಲಹಳ್ಳಿಯ ಮೇಲೆ ಎರಗಿದನು. ಮತ್ತೆ ಮದಕರಿನಾಯಕನ ಸೈನ್ಯ ಅವನನ್ನು ತಡೆಯಿತು, ಸೋಲಿಸಿ ಓಡಿಸಿತು.

ಸದಾ ಗುಂಡುಗಳ ಸದ್ದಿನಲ್ಲಿ

ಮದಕರಿ ರಾಜೇಂದ್ರನ ರಾಜ್ಯಭಾರ ಕಾಲದಲ್ಲಿ ದಕ್ಷಿಣ ಭಾರತವು ಯುದ್ಧ, ಕಲಹಗಳ ಬೀಡಾಗಿದ್ದಿತು. ದಕ್ಷಿಣ ಭಾಗದಲ್ಲಿ ಹೈದರಾಲಿಯು ಮೈಸೂರು ಅರಸರನ್ನು ಮೂಲೆಗೆ ಒತ್ತರಿಸಿದ್ದ, ತಾನೇ ಸರ್ವಾಧಿಕಾರಿಯಾಗಿದ್ದ. ರಾಜ್ಯವನ್ನು ವಿಸ್ತರಿಸುವ ಆಸೆ ಅವನಿಗೆ ಬಹಳ. ಚಿಕ್ಕಬಳಾಪುರ, ಸಿರಾ ಮುಂತಾದ ಸಂಸ್ಥಾನಗಳನ್ನು ವಶಪಡಿಸಿಕೊಂಡು ಉತ್ತರಕ್ಕೆ ಏರಿಬರುತ್ತಿದ್ದನು. ಅನೇಕ ಪಾಳೆಯಗಾರರು ಅವನ ಬಲಕ್ಕೆ ಹೆದರಿದ್ದರು. ಮರಾಠರು ಮಾತ್ರ ಹೈದರಾಲಿಗೆ ಶತ್ರುಗಳಾಗಿದ್ದರು. ಈ ಎಲ್ಲ ಸಂಕಷ್ಟಗಳ ನಡುವೆ ಮದಕರಿಯು ತಲೆ ಎತ್ತಿ ಯಾರಿಗೂ ಸಗ್ಗದೆ ಪರಾಕ್ರಮ ಶಾಲಿಯಾಗಿದ್ದನು.

ಹೈದರಾಲಿ ಮದಕರಿಯ ಏಳ್ಗೆಯನ್ನು ಕಂಡು ಕರುಬಿದನು. ಅವನನ್ನೂ ತನ್ನ ಅಧೀನಕ್ಕೆ ತೆಗೆದುಕೊಳ್ಳಬೇಕೆಂದು ಮನದಲ್ಲಿಯೇ ಯೋಚಿಸುತ್ತಿದ್ದನು. ಒಂದುಸಲ ಮದಕರಿಯನ್ನು ಹೆದರಿಸಲು ಹವಣಿಸಿ, ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿದ ಗಡಿ ಪ್ರದೇಶಗಳನ್ನು ಅತಿಕ್ರಮಿಸಿದನು. ಊರುಗಳನ್ನು ಲೂಟಿಮಾಡಿದನು. ಹೈದರನದು ದೊಡ್ಡ ಸೈನ್ಯ ಮದಕರಿನಾಯಕನ ಸೈನ್ಯ ಅಷ್ಟು ದೊಡ್ಡದಲ್ಲ. ಕೋಟೆಯಿಂದ ಹೊರಕ್ಕೆ ಬಂದು ಹೈದರನ ಸೈನ್ಯವನ್ನು ಎದುರಿಸಿದರೆ ಗೆಲ್ಲುವುದು ಕಷ್ಟ ಎಂದು ನಾಯಕನ ಆಪ್ತರು ಹೇಳಿದರು. ಬಹಳ ಆಲೋಚಿಸಿ ನಾಯಕನು ಹೈದರನೊಡನೆ ಸಂಧಿ ಮಾಡಿಕೊಂಡನು. ಎರಡು ಲಕ್ಷ ವರಹ ಪೊಗದಿಯನ್ನು ಕೊಡಲು ಒಪ್ಪಿಕೊಳ್ಳಬೇಕಾಯಿತು. ತನ್ನ ಹಿಡಿತಕ್ಕೆ ಮದಕರಿಯು ಸಿಕ್ಕನೆಂದೂ ಮುಂದೆ ತನ್ನ ಕಾರ್ಯಸಾಧನೆಗೆ ಅನುಕೂಲವಾಯಿತೆಂದೂ ಮನದಲ್ಲಿಯೇ ಹೈದರನು ಸಂತೋಷಪಟ್ಟನು.

ಮದಕರಿನಾಯಕನು ಹೈದರಾಲಿಯ ವಿಷಯದಲ್ಲಿ ಸ್ನೇಹದಿಂದಲೇ ನಡೆದುಕೊಂಡ. ಹೈದರನು ಬಿದನೂರು ಸಂಸ್ಥಾನದ ಮೇಲೆ ದಾಳಿ ಮಾಡಿದ. ಮದಕರಿನಾಯಕ ಬಿದನೂರು ಕೋಟೆಯನ್ನು ಗೆದ್ದು ಪ್ರವೇಶಿಸಿದ. ಅವನ ಸಹಾಯವನ್ನು ಹೊಗಳಿ ಹೈದರನು ಕೆಲವು ಪ್ರದೇಶಗಳನ್ನೂ ಆನೆ, ಕುದುರೆ, ಪಚ್ಚೆಯ ಹಾರಗಳನ್ನೂ ಕೊಟ್ಟ.

ಒಮ್ಮೆ ಹೈದರನನ್ನು ಉಳಿಸಿದವನೂ ಮದಕರಿನಾಯಕನೇ. ಮರಾಠರ ಸೈನ್ಯ – ಮೂರು ಲಕ್ಷ ಸೈನಿಕರ ಬಲ – ಮೈಸೂರು ದಂಡಿನ ಮೇಲೆ ನುಗ್ಗಿತು. ಭೀಕರ ಹೋರಾಟವಾಯಿತು. ಹೈದರನ ಸೈನ್ಯದಲ್ಲಿ ಸಾವಿರಾರು ಮಂದಿ ಸತ್ತರು. ವೇಷ ಮರೆಸಿಕೊಂಡು ಓಡಿದ ಹೈದರ. ಮರಾಠರು ಬೆನ್ನಟ್ಟಿದರು. ಕಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದ, ಮದಕರಿನಾಯಕ ತನ್ನ ಸೈನ್ಯದೊಂದಿಗೆ ಮರಾಠರ ಮೇಲೆ ಬಿದ್ದು ಅವರನ್ನು ತಡೆದ. ಹೈದರಾಲಿಯು ಪಾರಾದನು.

ಹೈದರಾಲಿ ಗುತ್ತಿ ಎಂಬ ಕೋಟೆಗೆ ಮುತ್ತಿಗೆ ಹಾಕಿದ. ಅಲ್ಲಿನ ರಾಜ ಮುರಾರಿರಾಯ ಎಂಬವನು. ರಾಯದುರ್ಗ, ಹರಪನಹಳ್ಳಿ ಮೊದಲಾದ ಸಂಸ್ಥಾನಗಳ ಪಾಳೆಯಗಾರರು ಹೈದರನಿಗೆ ನೆರವಾದರು. ಮೂರು ತಿಂಗಳು ಕಳೆಯಿತು. ಗುತ್ತಿ ದುರ್ಗ ಜಗ್ಗಲಿಲ್ಲ. ಕಡೆಗೆ ಹೈದರನು ಮದಕರಿನಾಯಕನ ಸಹಾಯವನ್ನು ಬೇಡಿದ. ಮದಕರಿನಾಯಕ ಮುರಾರಿಯನ್ನು ಹಿಡಿದು ತರುವೆನೆಂದು ಪ್ರತಿಜ್ಞೆ ಮಾಡಿದ. ಮಧ್ಯರಾತ್ರಿಯಲ್ಲಿ ತಾನೇ ತನ್ನ ನಿಷ್ಠೆ ಯೋಧರೊಂದಿಗೆ ಕೋಟೆಯನ್ನು ಏರಿದ, ಮುರಾರಿರಾಯನ ಜೊತೆಗೆ ಯುದ್ಧಮಾಡಿ ಸೆರೆ ಹಿಡಿದ. ಹೈದರಾಲಿಗೆ ಆಶ್ಚರ್ಯವಾಯಿತು. “ನಾಯಕರೇ, ನಿಮ್ಮ ಸಾಹಸಕ್ಕೆ ಸಮನಿಲ್ಲ. ನಿಮ್ಮ ಉಪಕಾರಕ್ಕೆ ನಾನೇನು ಕೊಡಲಿ? ಏನನ್ನಾದರೂ ಕೇಳಿ, ಕೊಡುತೇನೆ” ಎಂದ.

“ನವಾಬರೇ, ನಿಮ್ಮಸ್ನೇಹ ನನಗೆ ಮುಖ್ಯ. ಅದೇ ದೊಡ್ಡ ಉಡುಗೊರೆ,” ಎಂದುಬಿಟ್ಟ ಮದಕರಿನಾಯಕ.

ನಿಡುಗಲ್ಲು ಕೋಟೆಯ ಮೇಲೆ ಹೈದರನ ಹದ್ದುಗಣ್ಣು ಬಿತ್ತು. ಕೋಟೆಯನ್ನು ಸುತ್ತವರಿದು ವಶಪಡಿಸಿಕೊಳ್ಳಲು ಸಾಹಸಪಟ್ಟನು. ಎಣ್ಣೆಯನ್ನೂ ಅಂಬಲಿಯನ್ನೂ ಕೋಟೆಯ ಮೇಲಿಂದ ಸುರಿಯುತ್ತಿದ್ದರ. ಜಾರಿಕೆಯಿಂದ ಕೋಟೆ ಲಗ್ಗೆ ಹೊಡೆಯಲು ಅಸ್ಪದವಿಲ್ಲವಾಗಿತ್ತು. ಮದಕರಿನಾಯಕನ ಸಹಾಯ ಕೋರಲು ಒಂದು ದಿನದಲ್ಲಿ ಕೋಟೆಯನ್ನು ವಶಮಾಡಿಕೊಂಡು ದೊರೆ ಕಾಮರಾಜನನ್ನು ಹಿಡಿದು ತಂದನು.

ಸ್ನೇಹಕ್ಕೆ ಪ್ರತಿಫಲ ಅಹಂಕಾರ

ಇಷ್ಟು ನಿಷ್ಠೆಯಿಂದ ನಡೆದುಕೊಂಡ  ಮದಕರಿನಾಯಕ. “ನಿಮ್ಮ ಸ್ನೇಹವೇ ನನಗೆ ಉಡುಗೊರೆ” ಎಂದಿದ್ದ. ಹೈದರಾಲಿಗೆ ಉಪಕಾರ ಮಾಡಿದ್ದ, ಪ್ರಾಣ ಉಳಿಸಿದ್ದ.

ಆದರೆ ಹೈದರಾಲಿಗೆ ರಾಜ್ಯದಾಹವೇ ಮುಖ್ಯವಾಯಿತು.

“ಮದಕರಿನಾಯಕ ಬಹು ಶೂರ, ಅವನೇ ನನ್ನ ದಾರಿಯಲ್ಲಿ ಮುಳ್ಳು. ಅವನನ್ನು ಕಿತ್ತು ಹಾಕಿದರೆ ಕೃಷ್ಣಾ ನದಿಯವರೆಗೆ ನನ್ನ ಅಧಿಕಾರವೇ ಅಧಿಕಾರ” ಎನ್ನಿಸಿತು.

 

ಕೊನೆಯ ಕಾಳಗಕ್ಕೆ ಸಿದ್ಧನಾಗಿ ಮದಕರಿನಾಯಕನೇ ಆನೆ ಅಂಬಾರಿಯನ್ನೇರಿ ರಣರಂಗಕ್ಕೆ ಇಳಿದನು.

ಮದಕರಿನಾಯಕನಲ್ಲಿ ವಿಶ್ವಾಸವಾಗಿ ನಡೆದುಕೊಳ್ಳುವುದನ್ನು ಬದಲಾಯಿಸಿದ, ಬಿಗಿಯಾದ. ನಾಯಕನೂ ಇದನ್ನೂ ಕಂಡುಕೊಂಡ.

“ಎಂದಿದ್ದರೂ ಹೈದರನಿಂದ ಅಪಾಯವೇ. ನನ್ನ ಎಚ್ಚರಿಕೆಯಲ್ಲಿ ನಾನಿರಬೇಕು” ಎಂದುಕೊಂಡ.

ಮದಕರಿನಾಯಕನು ಮರಾಠರೊಡನೆ ಒಳಗೊಳಗೇ ಸಂಧಾನ ನಡೆಸುತ್ತಿದ್ದಾನೆ ಎಂದು ಹೈದರಾಲಿಗೆ ಗುಪ್ತಚಾರರು ಹೇಳಿದರು. ಹೈದರಾಲಿ ಕಿಚ್ಚು ಕೆರಳಿತು. ಕೂಡಲೇ ಬಾಕಿ ನಿಂತಿರುವ ಎರಡು ವರ್ಷದ ಕಪ್ಪವನ್ನು ಕಳುಹಿಸಿಕೊಡಬೇಕೆಂದು ಒತ್ತಾಯಮಾಡಿ ಪತ್ರವನ್ನು ಮದಕರಿಗೆ ಬರೆದನು. ಮದಕರಿ ರಾಜೇಂದ್ರನು ಗಮನ ಕೊಡದೆ ಕಾಲ ತಳ್ಳಿದನು.

ಚಿತ್ರದುರ್ಗ ರಾಜನ ತಾತ್ಸಾರ ಹೈದರನಿಗೆ ರೋಷ ಉಕ್ಕೇರಿಸಿತು. “ಚಿತ್ರದುರ್ಗ ಕೋಟೆಯನ್ನು ಹಿಡಿಯಿರಿ” ಎಂದು ಸೇನಾಧಿಕಾರಿಗಳಿಗೆ ಆಜ್ಞೆ ಇತ್ತನು. ಕೂಡಲೆ ಮಂತ್ರಿಗಳು ಹೈದರನನ್ನು ಸಮಾಧಾನ ಪಡಿಸಿ, “ಮದಕರಿನಾಯಕನು ಬಹಳ ಪರಾಕ್ರಮಶಾಲಿ. ಕೋಟೆಯಲ್ಲಿ ಹಿಡಿಯುವುದು ಅಸಾಧ್ಯ. ಹೊರಕ್ಕೆ ಉಪಾಯದಿಂದ ಕರೆಸಿ ಬಂಧಿಸಬೇಕು” ಎಂದು ಸಲಹೆ ಇತ್ತರು. ಹೈದರನು ಮದಕರಿಗೆ ಸ್ನೇಹವಾಗಿ ಕಾಗದವನ್ನು ಬರೆದು, “ನೀವು ನಮಗೆ ತುಂಬಾ ಉಪಕಾರ ಮಾಡಿದ್ದೀರಿ. ನಿಮ್ಮನ್ನು ಭೇಟಿತೆಗೆದುಕೊಂಡು ಮಾತನಾಡೋಣ ಎಂದು ಆಶೆಯಾಗಿದೆ. ಕೂಡಲೇ ಸಿರಾಕ್ಕೆ ಬನ್ನಿ” ಎಂದು ಉಡುಗೊರೆಗಳೊಡನೆ ಕಳುಹಿಸಿದನು.

ಮದಕರಿನಾಯಕನು ಪತ್ರವನ್ನು ಓದಿದ. “ಹೈದರನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಅವನ ಮಂತ್ರಿಗಳು “ಹೈದರನಿಗೆ ನಮ್ಮ ಮೇಲೆ ತುಂಬ ಅನುಮಾನ. ಈಗ ಏಕಾಏಕಿ ಹೋಗಿ ಅವನನ್ನು ನೋಡುವುದು ಅಪಾಯಕಾರಿ. ಎಚ್ಚರದಿಂದಿರುವುದು ಮೇಲು” ಎಂದು ಸಲಹೆಯಿತ್ತರು. “ದೇಹದಲ್ಲಿ ಆರೋಗ್ಯವಿಲ್ಲ. ಮುಂದೆ ಅನುಕೂಲವಾದಾಗ ಭೇಟಿಯಾಗೋಣ” ಎಂದು ಮದಕರಿನಾಯಕನು ಉತ್ತರಿಸಿದನು. ಹೈದರಾಲಿಗೆ ನಿರಾಶೆಯಾಯಿತು. ಕಪ್ಪದ ಹಣ ತಕ್ಷಣ ಕಳುಹಿಸಿಕೊಡಬೇಕೆಂದು ನಿರೂಪಿಸುವ ಮತ್ತೋಂದು ಪತ್ರವನ್ನು ಬರೆದ. ಮದಕರಿಗೆ ಪತ್ರವು ತಲುಪಿತು.

ಅದೇ ಸಮಯದಲ್ಲಿ ಅರಸು ಹುಣ್ಣಿನಿಂದ ಹೈದರಾಲಿಯು ಸತ್ತ ಎಂಬ ಸುದ್ದಿ ಬಂದಿತು. ವಿಪತ್ತು ಕಳೆಯಿತೆಂದು ಮದಕರಿನಾಯಕ ಹಣ ಕಳುಹಿಸದೆ ಸುಮ್ಮನಾದನು.

ಮತ್ತೋಡು ಹಾಲಪ್ಪನಾಯಕನು ಮದಕರಿಯ ಮೇಲೆ ಮೊದಲಿನಿಂದಲೂ ಕತ್ತಿ ಮಸೆಯುತ್ತಿದ್ದನು. ಹೈದರಾಲಿಯನ್ನು ಭೇಟಿಮಾಡಿ ತನಗೆ ಸಹಾಯ ಮಾಡಿದರೆ ಚಿತ್ರದುರ್ಗದ ಸಾವಿರಾರು ಗೋಮಂದೆಯನ್ನು ಹಿಡಿದುಕೊಡುವುದಾಗಿ ತಂತ್ರ ಹೂಡಿದನು. ಕೆರಳಿದ್ದ ಹೈದರನಿಗೆ ಒಪ್ಪಿಗೆಯಾಯಿತು.

ಹೈದರನ ಭಾವಮೈದುನರಾದ ಮಖದುಂ ಸಾಹೇಬ್ ಮತ್ತು ಮೊಹದೀನ್ ಸಾಹೇಬ್ ಇಬ್ಬರೂ ಹತ್ತುಸಾವಿರ ದಂಡಿನೊಡನೆ ಬೂದಿಹಾಳು ಗಸಡಿಯಲ್ಲಿ ಇಳಿದರು. ಹಾಲಪ್ಪನಾಯಕನ ದಂಡೂ ಸೇರಿ ಮದಕರಿಯ ಗೋಮಂದೆಯನ್ನು ಹಿಡಿದರು.

ಇಷ್ಟುಹೊತ್ತಿಗೆ ಹೈದರನ ಮರಣದ ಸುದ್ದಿ ಸುಳ್ಳು ಎಂದು ಮದಕರಿಗೆ ಗೊತ್ತಾಯಿತು. ಕಪ್ಪದ ಹಣವನ್ನು ತಲುಪಿಸಿದನು. ಗೋವುಗಳ ಅಪಹರಣ ವಾರ್ತೆಯು ಸಿಡಿಲೆರಗಿದಂತೆ ಮದಕರಿಗೆ ತಿಳಿಯಿತು. ಕಾಲಭೈರವನಂತೆ ಕೋಪಗೊಂಡು ನಲವತ್ತು ಸಾವಿರ ಸೈನಿಕರೊಡನೆ ಬೂದಿಹಾಳಿನ ಕಡೆಗೆ ಧಾವಿಸಿದರು. ದನಕರುಗಳನ್ನು ಒಯ್ಯುತ್ತಿದ್ದ ಶತ್ರುಸೈನ್ಯ ಕಣಿವೆಯಲ್ಲಿ ಸಿಕ್ಕಿಕೊಂಡಿತು. ಐದುಗಂಟೆಗಳ ಕದನದ ನಂತರ ಹೈದರನ ಭಾವಮೈದುನರಿಬ್ಬರೂ ಸೆರೆ ಸಿಕ್ಕರು. ಗೋವುಗಳನ್ನು ಬಿಡಿಸಿಕೊಂಡು ಮದಕರಿಯು ಚಿತ್ರದುರ್ಗವನ್ನು ಸೇರಿದನು.

ಹೈದರಾಲಿಗೆ ವರ್ತಮಾನ ಹೋಗುತ್ತಲೂ ಬರೆಹಾಕಿದಂತಾಯಿತು. ಚಿತ್ರದುರ್ಗವನ್ನು ಧ್ವಂಸಮಾಡಿ ಮದಕರಿಯನ್ನು ಬಲಿಹಾಕುವೆನೆಂದು ಸಿಡಿದೆದ್ದನು. ಅವನ ಸಲಹೆಗಾರರು ಹೈದರಾಲಿಯನ್ನು ಸಂತೈಸಿದರು. “ಮದಕರಿಗೆ ಅಪಾರ ಸೈನ್ಯವಿದೆ. ಅಲ್ಲದೆ ಪೂನಾ ಪೇಶ್ವೆಯರ ಸಹಾಯವಿದೆ. ಚಿತ್ರದುರ್ಗದ ವೈರಿಗಳಿಂದ ಕೋಟೆಯ ಒಳಗುಟ್ಟನ್ನು ತಿಳಿದು ಮುತ್ತಿದರೆ ಕಾರ್ಯ ಸಾಧನೆಯಾಗುವುದು” ಎಂದು ಅರಿಕೆ ಮಾಡಿಕೊಂಡರು. ಅವರ ಮಾತು ಸರಿ ಎಂದು ಹೈದರಿನಿಗೆ ತೋರಿತು. ಹೈದರನು ಮದಕರಿ ರಾಜನಿಗೆ, “ಮತ್ತೋಡು ಹಾಲಪ್ಪನಾಯಕನ ಸುಳ್ಳುವರದಿಯಿಂದ ನಮ್ಮ ಭಾವ ಮೈದುನರು ನಿಮ್ಮ ದನಗಳನ್ನು ಹಿಡಿದರು. ಅವರೂ ನಾವೂ ನಿಮ್ಮ ಸ್ನೇಹಿತರೇ ಆಗಿದ್ದೇವೆ. ಸ್ನೇಹಭಾವದಿಂದ ನಮ್ಮ ಭಾವ ಮೈದುನರನ್ನು ಕಳುಹಿಸಿಕೊಡುವುದು” ಎಂದು ಕಾಗದ ಬರೆದ. ಮದಕರಿಯು ಉದಾರ ಹೃದಯದಿಂದ ರಾಜಬಂದಿಗಳನ್ನು ಹಿಂತಿರುಗಿಸಿದನು.

ಮದಕರಿನಾಯಕ ಇಂದಲ್ಲ ನಾಳೆಯಾದರೂ ಹೈದರನು ತನ್ನ ಮೇಲೆ ಬೀಳುವುದು ಖಚಿತವೆಂದು ಭಾವಿಸಿದನು. ಮರಾಠರ ಸ್ನೇಹ ಪಡೆಯಲು ಪ್ರಯತ್ನಿಸುತ್ತಿದ್ದನು. ರತ್ನಗಿರಿಗೆ ಬಂದು ಖುದ್ದು ಮಾತನಾಡಬೇಕೆಂದು ಹೈದರಾಲಿಯಿಂದ ಮತ್ತೊಂದು ಪತ್ರ ಬಂದಿತು. ಪುನಃ ದೇಹಾಲಸ್ಯದ ನೆಪದಲ್ಲಿ ಹೈದರಾಲಿಯ ಕರೆಯನ್ನು ಮುಂದುವರಿಸಿದನು. ಮರಾಠರೊಡನೆ ಸಂಧಾನ ತ್ರೀವ್ರಗೊಳಿಸಿದನು.

ಹೈದರಾಲಿಯಿಂದ ಕೊನೆಯ ಎಚ್ಚರಿಕೆಯ ಪತ್ರಮೊಂದು ಬಂದಿತು. “ನೀವಾದರೂ ಬನ್ನಿ. ಇಲ್ಲವಾದರೆ ನಮ್ಮೀರ್ವರ ಗೆಳೆತನ ಕೊನೆಗೊಳ್ಳುವುದು” ಎಂಬುದೇ ಅದರ ಒಕ್ಕಣೆಯಾಗಿತ್ತು.

ಇನ್ನು ಮದಕರಿನಾಯಕ ಉಪಾಯದಿಂದ ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಅವನು ಕಾಗದವನ್ನು ತಂದ ರಾಯಭಾರಿಗಳನ್ನು ಬಂಧಿಸಿ ಸೆರೆಯಲ್ಲಿಟ್ಟನು.

ಯುದ್ಧವೇ ನಿಶ್ಚಯ

ಹೈದರಾಲಿಯ ತಂತ್ರ ನಿಷ್ಫಲವಾಯಿತು. ಅವನ ದೂತರ ಬಂಧನದ ಸುದ್ದಿ ಕೇಳಿ ಕಿಡಿಕಿಡಿಯಾದನು. ಸೈನ್ಯವನ್ನು ಒಗ್ಗೂಡಿಸಿ ಚಿತ್ರದುರ್ಗದತ್ತ ಧಾವಿಸಿದನು.

ಮದಕರಿ ರಾಜೇಂದ್ರನೂ ಯುದ್ಧಸನ್ನದ್ಧನಾದನು. ತನ್ನ ಕಡೆಯ ಪ್ರಮುಖರ ಸಭೆಯನ್ನು ಕರೆದು “ಹೈದರನು ದಂಡು ಸಮೇತ ಬರುತ್ತಿರುವನು. ಎಲ್ಲರೂ ದೇಶದ ರಕ್ಷಣೆಗೆ ಎಂತಹ ತ್ಯಾಗಕ್ಕಾದರೂ ಸಿದ್ಧರಾಗಿರಿ” ಎಂದು ಘೋಷಿಸಿದ.

ಮದಕರಿಯು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಂಡನು. ಪ್ರಮುಖ ಬತೇರಿಗಳ ಮೇಲೆ ಫಿರಂಗಿಗಳನ್ನು ಇಡಿಸಿದನು. ಮುಖ್ಯದ್ವಾರಗಳ ಬಳಿ ಸರ್ಪಕಾವಲನ್ನು ಹಾಕಿದನು. ಬಲಹೀನ ಜಾಗಗಳಲ್ಲಿ ಹೆಚ್ಚು ರಕ್ಷಣಾ ಪಡೆಗಳನ್ನು ನಿಲ್ಲಿಸಿದನು. ಶಸ್ತ್ರಾಸ್ತ್ರಗಳನ್ನು ಹೇರಳವಾಗಿ ಸರಬರಾಜು ಮಾಡುವಂತೆ ಏರ್ಪಡಿಸಿದನು. ರಣರಂಗದಲ್ಲಿ ಶತ್ರುಗಳನ್ನು ಕೋಂದವರಿಗೆ, ಗಾಯಗೊಂಡವರಿಗೆ ಬಹುಮಾನಗಳನ್ನು, ಮಡಿದವರ ಬಂಧುಗಳಿಗೆ ತಕ್ಕ ಸಹಾಯವನ್ನು ಕೊಡುವುದಾಗಿ ಘೋಷಿಸಿದನು. ಚಿತ್ರದುರ್ಗವು ಸನ್ನದ್ಧವಾಯಿತು.

ಯಾವ ಸೈನ್ಯಕ್ಕೂ ಮಣಿಯದ ಕೋಟೆ

ಮೈಸೂರು, ರಾಯದುರ್ಗ ಮತ್ತು ಹರಪನಹಳ್ಳಿ ಸೈನ್ಯಗಳು ಬಂದಿಳಿದವು. ಎಲ್ಲಿ ನೋಡಿದರಲ್ಲಿ ಸೈನ್ಯ ಸಮೂಹವು ಗೋಚರಿಸುತ್ತಿತ್ತು. ಹೈದರಾಲಿ ಮತ್ತು ಅವನ ಸಲಹೆಗಾರರು ಚಿತ್ರದುರ್ಗ ಕೋಟೆಯನ್ನು ದುರ್ಬೀನಿನ ಮೂಲಕ ನೋಡಿದರು. “ಕೋಟೆ ಬಲವಾಗಿದೆ. ಸುತ್ತಲೂ ಭಾರೀ ಕಂದಕಗಳಿವೆ. ಎಲ್ಲೆಲ್ಲೂ ಫರಂಗಿಗಳನ್ನು ಕೋಟೆಯ ಮೇಲೆ ಏರಿಸಿದ್ದಾರೆ. ಬತೇರಿಗಳ ಮೇಲೆ ಧ್ವಜಗಳು ಹಾರಾಡುತ್ತಿವೆ. ಹೆಂಗಸರು ಹೆದರಿಕೆಯಿಲ್ಲದೆ ಓಡಾಡುತ್ತಿದ್ದಾರೆ. ಶ್ರೀರಂಗಪಟ್ಟಣದಷ್ಟೇ ಈ ಕೋಟೆ ಬಲವಾಗಿದೆ. ಅಲ್ಲಿ ಕಾವೇರಿ ನದಿ ಇದೆ, ಇಲ್ಲಿಲ್ಲ ಅಷ್ಟೇ. ಈ ದುರ್ಗ ಜಯಿಸಲು ಬಹಳ ಕಷ್ಟ” ಎಂದರು. ಸಲಹೆಗಾರರು “ಗುಂಡು ಹಾರಿಸಿ, ಶತ್ರಬಲ ತಿಳಿದುಕೊಂಡು ಬನ್ನಿ” ಎಂದು ಅಶ್ವದಳಕ್ಕೆ ಹೈದರನು ಆಜ್ಞಾಪಿಸಿದನು. ಬೆಟ್ಟಕ್ಕೆ ಗುಂಡುಗಳ ಮಳೆ ಸುರಿಯಿತು. ಮೇಲಿಂದ ಮರು ಗುಂಡುಗಳು ಆರ್ಭಟಿಸಿದವು. ಎರಡು ಗಂಟೆಗಳ ಕಾಲ ಕದನ ನಡೆಯಿತು.

ಮದಕರಿನಾಯಕ ಶತ್ರುಸೈನ್ಯ ಸುಮಾರು ನಾಲ್ಕು ಲಕ್ಷ ಇರಬಹುದೆಂದು ಅಂದಾಜು ಮಾಡಿದ. “ಇದೇನು ಭಾರಿ ಸೈನ್ಯವಲ್ಲ. ರಣರಂಗದಲ್ಲಿ ಇದಕ್ಕಿಂತೆ ದೊಡ್ಡ ಸೈನ್ಯ ಎದುರಿಸಿದ್ದೇವೆ. ಹೆದರಬೇಕಾಗಿಲ್ಲ. ನಮಗೆ ಜಯ ದೇವರ ದಯದಿಂದ ಸಿದ್ಧ” ಎಂದು ಆತ್ಮವಿಶ್ವಾಸದಿಂದ ನುಡಿದನು. ಕುಲದೇವತೆಯಾದ ಉತ್ತಾವಾಂಬ ದೇವಮಂದಿರಕ್ಕೆ ತೆರಳಿ ಪೂಜಾದಿಗಳನ್ನು ಸಲ್ಲಿಸಿದನು.

ಹೈದರನು “ಈಗಲಾದರೂ ಬಂದು ನನ್ನನ್ನು ಭೇಟಿಮಾಡಿ, ನಮ್ಮ ಖರ್ಚು ಆರು ಲಕ್ಷ ವರಹ ಕೊಟ್ಟುಬಿಡಿ. ನಾವು- ನೀವು ಸ್ನೇಹದಿಂದ ಮುಂದುವರಿಯೋಣ. ಇಲ್ಲವೇ ಎರಡು ದೆವಸಗಳಲ್ಲಿ ಚಿತ್ರದುರ್ಗ ಕೋಟೆಯನ್ನು ವಶವಾಡಿಕೊಳ್ಳುತ್ತೇನೆ” ಎಂದು ರಾಯಭಾರಿಯ ಮೂಲಕ ಮದಕರಿಗೆ ಕರೆಯಿತ್ತನು.

“ಎರಡು ದಿವಸಗಳಲ್ಲಿ ಕೋಟೆ ಬೀಳಲು ಮೇಣದಿಂದೇನು ಮಾಡಿಲ್ಲ. ನಮ್ಮ- ನಿಮ್ಮ ಭೇಟಿ ರಣರಂಗದಲ್ಲೇ” ಎಂದು ಮದಕರಿಯು ಪ್ರತ್ಯುತ್ತರ ನೀಡಿದನು.

ಹೈದರಾಲಿಗೆ ತುಂಬ ಸಿಟ್ಟು ಬಂದಿತು. ಇನ್ನು ಎರಡು ದಿನಗಳಲ್ಲಿ ಕೋಟೆಯನ್ನು ಧ್ವಂಸ ಮಾಡುತ್ತೇನೆ, ಮದಕರಿಯ ಸೊಕ್ಕನ್ನು ಮುರಿಯುತ್ತೇನೆ ಎಂದು ಕೂಗಾಡಿದನು. ಚಿತ್ರದುರ್ಗದ ಕೋಟೆ ಮತ್ತು ಬೆಟ್ಟದ ಕಡೆಗೆ ಲಕ್ಷ ಸಂಖ್ಯೆಯಲ್ಲಿ ಮೈಸೂರಿನವರ ಗುಂಡುಗಳು ಹಾರಿದವು. ಫರಂಗಿ ಎತ್ತರಿಸಿ ಹೊಡೆದರು. ಬೆಟ್ಟದ ಬಂಡೆಗಳಿಗೆ ಏಟು ಬಿದ್ದಿತು. ತಗ್ಗಿಸಿ ಹೊಡೆದರು. ಕಂದಕದಲ್ಲಿ ಗುಂಡು ಮುಳುಗಿದವು. ಗಿರಿಯ ಮೇಲಿಂದ ಗುಂಡುಗಳ ವರ್ಷಧಾರೆಯಾಯಿತು. ಕೋಟೆಯು ಜಗ್ಗದೆ ನಿಂತಿತ್ತೆ ಹೊರತು ಹೈದರನ ಶಸ್ತ್ರಗಳು ವ್ಯರ್ಥವಾದವು.

ಎರಡು ತಿಂಗಳು ಸಣ್ಣಪುಟ್ಟ ಕದನಗಳು ನಡೆದವು. ಹೈದರನಿಗೆ ಕೋಟೆಯ ಬಲವನ್ನು ಕಂಡು ದಿಕ್ಕು ತೋಚದಾಯಿತು.

ಸಿಹಿನೀರು ಹೊಂಡದ ಬಳಿ ಲಗ್ಗೆ ಹತ್ತಿದರೆ ಊರಿಗೆ ನೀರು ಸರಬರಾಜು ನಿಂತು, ಕೋಟೆ ವಶವಾಗುತ್ತದೆಂದು ಸರದಾರರು ಹೈದರನಿಗೆ ತಿಳಿಸಿದರು. ಅವನ ನಲವತ್ತು ಸಾವಿರ ಸೈನಿಕರು ಕೋಟೆ ಸಮೀಪಿಸಿದರು. ಏಣಿ ಹಗ್ಗಗಳಿಂದ ಕೋಟೆ ಹತ್ತಲು ಆರಂಭಿಸಿದರು. ಮದಕರಿರಾಜನು ವ್ಯಾಸರಾಯ ಮಠದ ಬಳಿ ಸ್ವತಃ ನಿಂತನು. ಸಾವಿರ ಸಂಖ್ಯೆಯಲ್ಲಿ ಮದಕರಿಯ ದಂಡು ಕೇಕೆ ಹಾಕುತ್ತ ಬೆಟ್ಟ ಇಳಿಯಿತು. ಭಯಂಕರ ಯುದ್ಧನಡೆಯಿತು. ಹಗೆಯನ್ನು ಧ್ವಂಸ ಮಾಡಲು ಮದಕರಿಯೇ ನುಗ್ಗಿದನು. ಮದಕರಿ ಭೂಪನನ್ನು ಅವನ ಸರದಾರರು “ನಮ್ಮ ಪ್ರಾಣವಿರುವವರೆಗೂ ನೀವು ಯುದ್ಧಕ್ಕೆ ಬರಕೂಡದು” ಎಂದು ತಡೆದು ವೀರಾವೇಶದಿಂದ ಹೋರಾಡಿದರು. ಶತ್ರುಗಳನ್ನು ಸೋಲಿಸಿ ಹೊಡೆದೋಡಿಸಿದರು.

ಮತ್ತೆರಡು ತಿಂಗಳು ಕಳೆಯಿತು.

“ಲಾಲ್ ಕೋಟೆ ಬಳಿ ಕಂದಕ ಕಿರಿದಾಗಿದೆ. ಆ ಕಡೆ ಲಗ್ಗೆ ಹತ್ತಿ ಕೋಟೆ ಹಿಡಿಯಿರಿ” ಎಂದು ಹೈದರನು ರಾಯದುರ್ಗದವರಿಗೆ ಅಪ್ಪಣೆ ಮಾಡಿದನು. ಹತ್ತು ಸಾವಿರ ಸೈನ್ಯದೊಡನೆ ರಾಯದುರ್ಗದ ಕೃಷ್ಣಪ್ಪ ನಾಯಕನು ಲಗ್ಗೆ ಹತ್ತಿದನು. ಶತ್ರುಗಳು ಕೋಟೆಯನ್ನು ಹತ್ತಿ ಒಳಕ್ಕೆ ಬಂದರು. ರಣೋತ್ಸಾಹದಿಂದ ಮದಕರಿಯು ಸೈನ್ಯ ಸಮೇತ ಧಾವಿಸಿದನು. ಬಿರುಸಾದ ಹೋರಾಟ ನಡೆಯಿತು. ಮದಕರಿ ಸೈನ್ಯವು ಕೋಟೆಯ ದ್ವಾರಗಳನ್ನು ಕಟ್ಟಿ ಶತ್ರು ಸೈನ್ಯವನ್ನು ಸಿಕ್ಕಿಸಿಕೊಂಡಿತು. ರಾಯದುರ್ಗದ ದಂಡು ದಾರಿಗಾಣದೆ ನಿಸ್ಸಹಾಯಕವಾಯಿತು. ಅನೇಕರು ಹತರಾದರು. ಉಳಿದವರು ಶರಣಾಗತರಾದರು. ಹೈದರನು ಸೈನ್ಯ ಸಮೇತ ನುಗ್ಗಿದನು. ಉಗ್ರ ಕದನದಲ್ಲಿ ಸಾವಿರಾರು ಹೆಣಗಳು ಉರುಳಿದವು. ತನ್ನ ಡೇರೆಗೆ ಹೈದರನು ಮರಳಿದನು.

ಚಿತ್ರದುರ್ಗದ ದೊರೆಯ ತಮ್ಮ ಮತ್ತು ಮಂತ್ರಿಯಾದ ಪರಶುರಾಮಪ್ಪನಾಯಕನು ಶತ್ರು ಸೈನ್ಯದ ಚಲನವಲನಗಳನ್ನು ಗಮನಿಸುತ್ತಿದ್ದನು. ಬುದ್ಧಿವಂತನ ಮರಡಿಯ ಬಳಿ ಪಲ್ಲಿಕ್ಕಿಯಲ್ಲಿ ಹೈದರನು ಹೋಗುತ್ತಿದ್ದಂತೆ ಕಾಣಬಂತು. ಕೂಡಲೇ ನಿಷ್ಠ ಸರದಾರನಾದ ಗುದಗತ್ತಿಯು ಕತ್ತಿ ಹಿರಿದು ಭವಾನಿ ಕುದುರೆಯನ್ನೇರಿ ನುಗ್ಗಿದನು. ಪಲ್ಲಕ್ಕಿಯಲ್ಲಿದ್ದ ನವಾಬನನ್ನು ಕತ್ತರಿಸಿ ನಾಗಾಲೋಟದಿಂದ ಹಿಂತಿರುಗಿದನು. ಚಿತ್ರದುರ್ಗದ ದುರದೃಷ್ಟ. ಸತ್ತವನು ಹೈದರನಲ್ಲ. ಬೇರೆ ಯಾರೊ.

ಮದಕರಿಯ ಧೈರ್ಯ, ಅವನ ಕೆಚ್ಚಿನ ಹೋರಾಟ, ದುರ್ಗದ ಸೈನಿಕರ ನಿಷ್ಠೆ ಹೈದರನನ್ನು ಕಂಗೆಡಿಸಿದವು.

ಕೈಬಿಟ್ಟ ಆರು ಲಕ್ಷ ವರಹಗಳು

ಆದರೆ ದೈವ ಮದಕರಿನಾಯಕನಿಗೆ ಪ್ರತಿಕೂಲವಾಗಿತ್ತು.

ಮರಾಠರ ಇಬ್ಬರು ಓಲೇಕಾರರು ಹೈದರನ ಪಹರೆಯವರ ಕೈಗೆ ಸಿಕ್ಕು ಬಿದ್ದರು. ಅವರಲ್ಲಿ ಪೂನಾದ ಪೇಶ್ವೆಯು ಮದಕರಿಗೆ ಬರೆದ ಪತ್ರವಿತ್ತು. ಮರಾಠರ ಸೈನ್ಯವು ಪೂನಾದಿಂದ ಬರುತ್ತಿರುವುದಾಗಿಯೂ, ಅಲ್ಲಿಯವರೆಗೆ ಹೈದರನನ್ನು ಎದುರಿಸುತ್ತಿರಬೇಕೆಂದೂ ಸೂಚಿಸಲಾಗಿತ್ತು. ಮರಾಠರ ಸೈನ್ಯವು ತುಂಗಭದ್ರಾ ನದಿಯ ಹತ್ತಿರ ಇದೆ ಎಂದೂ ತಿಳಿಯಿತು. ಹೈದರನು ಉಪಾಯದಿಂದ ಮರಾಠಾ ಸೈನ್ಯವನ್ನು ಹಿಂತಿರುಗಿಸಬೇಕೆಂದೂ, ಅಲ್ಲಿಯವರೆಗೆ ಸಂಧಾನಗಳನ್ನು ಮುಂದುವರಿಸಬೇಕೆಂದೂ ಸಂಚು ಮಾಡಿದನು.

ಹೈದರ್ ನಾಯಕನಿಗೆ ಹೀಗೆಂದು ಕಾಗದ ಬರೆದ: “ನಿಮ್ಮ ಮೇಲೆ ಹಗೆತನವಿಲ್ಲ. ನಿಮ್ಮ ಸಹೋದರ ಪರಶುರಾಮಪ್ಪನವರ ಸಂಗಡ ಒಂಬತ್ತು ಲಕ್ಷ ವರಹ ಕಳುಹಿಸಿರಿ, ಸೈನ್ಯ ಹಿಂತಿರುಗಿಸಿ ಊರಿಗೆ ಹೋಗುತ್ತೇನೆ.”

ಕಾಗದವನ್ನು ಕಂಡು ಮದಕರಿನಾಯಕನಿಗೆ ಆಶ್ಚರ್ಯವಾಯಿತು. ಒಂದು ದಿನವೆಲ್ಲಾ ಮಂತ್ರಾಲೋಚನೆ ಮಾಡಿದನು. ಏಳು ತಿಂಗಳಾದರೂ ಮರಾಠರಿಂದ ಸೈನ್ಯ ಬರಲಿಲ್ಲ. ಆಗಲೆ ಬಹಳಕಾಲ ಯುದ್ಧ ನಡೆದಿತ್ತು. ಹೈದರಾಲಿಯೇ ಹಿಂದಕ್ಕೆ ಹೋಗುವೆನೆಂದು ಸಲಹೆ ಮಾಡಿದ್ದ; ಆದುದರಿಂದ ಆರು ಲಕ್ಷ ವರಹಕೊಟ್ಟು ಸೈನ್ಯ ವಾಪಸಾದ ಮೇಲೆ, ಪರಶುರಾಮಪ್ಪನವರೊಂದಿಗೆ ಊಳಿದ ಹಣ ಕೊಡಬಹುದೆಂದು ಆಪ್ತರು ಸೂಚಿಸಿದರು. ಮುಂದೆ ರಾಜಕಾರ್ಯ ಒದಗಿದರೆ ಮರಾಠರಿಂದ ಸಹಾಯ ಪಡೆದು ಯುದ್ಧಮಾಡುವುದು ಲೇಸೆಂದು ತಿಳಿಸಿದರು. ಅದರಂತೆ ಮದಕರಿನಾಯಕನು ಆರು ಲಕ್ಷ ಹಣವನ್ನು ಹೈದರನಿಗೆ ಕೊಟ್ಟ. ಲಗ್ಗೆಯನ್ನು ಇಳಿಸಿ ಶತ್ರುಸೈನ್ಯ ಶ್ರೀರಂಗಪಟ್ಟಣಕ್ಕೆ ತೆರಳಿತು.

ಮೂರು ಲಕ್ಷ ವರಹ ತೆಗೆದುಕೊಂಡು ಪರಶುರಾಮಪ್ಪನು ಸಿದ್ಧನಾದನು. ಅಷ್ಟರಲ್ಲೇ ಪೂನಾ ಪೇಶ್ವೆಯಿಂದ ಸೈನ್ಯ ಚಿತ್ರದುರ್ಗದತ್ತ ಸಹಾಯಕ್ಕಾಗಿ ಧಾವಿಸುತ್ತದೆ ಎಂದು ಬರೆದ ಕಾಗದ ಮದಕರಿ ರಾಜನಿಗೆ ತಲುಪಿತು. ತಕ್ಷಣ ತನ್ನ ನಿರ್ಧಾರವನ್ನು ದುರ್ಗದ ದೊರೆಯು ಬದಲಿಸಿದನು. “ಕಾಲ ಮಿಂಚಿತು. ಆರು ಲಕ್ಷ ಹಣ ಹೋದರೆ ಚಿಂತೆಯಿಲ್ಲ. ಸಮಯ ಒದಗಿದರೆ ಒಂದು ಗಂಟೆಯಲ್ಲಿ ತೆಗೆದುಕೊಳ್ಳಬಲ್ಲೆ” ಎಂದು ಸಮಾಧಾನಗೊಂಡು, ತನ್ನ ತಮ್ಮ ಹಣದೊಂದಿಗೆ ಹೋಗದಂತೆ ತಡೆದನು.

ನಗರದಿಂದ ಶ್ರೀರಂಗಪಟ್ಟಣ್ಣಕ್ಕೆ ಅಪಾರ ಐಶ್ವರ್ಯ ಹೋಗುತ್ತಿದೆಯೆಂದು ಚಿತ್ರದುರ್ಗಕ್ಕೆ ವರ್ತಮಾನ ಬಂದಿತು. ಸೈನ್ಯ ಸಮೇತ ಮದಕರಿಯು ಅತ್ತ ಧಾವಿಸಿದನು. ಮಾಯಕೊಂಡ ಸೇರುವಷ್ಟರಲ್ಲಿ ಆ ಹಣ ಹೊರಟುಹೋಗಿತ್ತು. ಹತ್ತಿರದಲ್ಲಿ ಹೈದರನ ಅಧೀನದಲ್ಲಿದ್ದ ತ್ಯಾವಣಿಗಿ ಊರನ್ನು ಕೊಳ್ಳೆಹೊಡೆದನು. ಒಂದು ಲಕ್ಷ ವರಹಕ್ಕೂ ಹೆಚ್ಚು ಹಣ ದೊರೆಯಿತು.

ಮತ್ತೆ ಹೈದರನ ಪೀಡೆ

ಹೈದರನು ಕಿಡಿಗಣ್ಣಿನಿಂದ ಕೆಂಡ ಕಾರಿದನು. ಮದಕರಿಯನ್ನು ಹಿಡಿದು ತರುವೆನೆಂದು ಶಪಥ ಮಾಡಿದನು. ಭಾರಿ ಪಡೆಗಳೊಂದಿಗೆ ವೇಗವಾಗಿ ಚಿತ್ರದುರ್ಗ ಸಮೀಪಿಸಿದನು. ಗಡಿದುರ್ಗಗಳನ್ನು ಅಡ್ಡಗಟ್ಟಿ ಅಲ್ಲಿಯ ಸೇನೆಯು ಚಿತ್ರದುರ್ಗಕ್ಕೆ ಬರದಂತೆ ತಡೆಹಾಕಿದನು. ಚಿತ್ರದುರ್ಗವನ್ನು ಅವನ ಸೇನೆ ಸುತ್ತುಕಟ್ಟಿತು. ಮರಾಠರು ಮದಕರಿನಾಯಕನ ನೆರವಿಗೆ ಬರುತ್ತಿದ್ದರು. ಅವರಿಗೆ ಅಪಾರ ಹಣಕೊಟ್ಟು ಸೈನ್ಯವನ್ನು ಹಿಂತಿರುಗಿಸಿದನು. ಚಿತ್ರದುರ್ಗದ ಸಮರ ಮತ್ತೆ ಶುರುವಾಯಿತು.

ದುರ್ಗದ ಒಳಗಿರುವವರನ್ನು ನಡುಗಿಸಲು ಹೈದರನು ಫಿರಂಗಿಗಳನ್ನು ಒಟ್ಟಿಗೆ ಜೋಡಿಸಿ ಹಾರಿಸಿದನು. ಅದರ ಶಬ್ದಕ್ಕೆ ಭೂಕಂಪನವಾಯಿತು. ಎರಡು ಕಡೆಯಿಂದಲೂ ಗುಂಡುಗಳ ಮಳೆ ಸುರಿಯಿತು. ಒಂದು ಲಕ್ಷ ಸೈನ್ಯ ಲಗ್ಗೆ ಹತ್ತಿತು. ಮದಕರಿಯ ದಂಡು ಕೋಟೆಯ ಮೇಲಿಂದ ಅಂಬಲಿ ಸುರಿಸಿದರು. ಕಲ್ಲುಗುಂಡುಗಳನ್ನು ಉರುಳಿಸಿದರು. ಮದಕರಿಯೇ ಸ್ವತಃ ಬಂದು ಉಸ್ತುವಾರಿ ನೋಡಿಕೊಂಡನು. ಚಿತ್ರದುರ್ಗದ ವೀರರ ಮುಂದೆ ನಿಲ್ಲಲಾರದೆ ಹೈದರನ ಸೈನ್ಯ ಬಿಡಾರಗಳಿಗೆ ತೆರಳಿತು.

ಕಳ್ಳದಾರಿಯನ್ನು ಕಂಡು ಹಿಡಿದು ಸೈನ್ಯವನ್ನು ಒಳನುಗ್ಗಿಸಲು ಹೈದರನು ಸನ್ನಾಹ ಮಾಡಿದನು. ನಸುಗತ್ತಲೆಯಲ್ಲಿ ಇನ್ನೂರು ಯೋಧರನ್ನು ಜೊತೆಗೂಡಿಸಿಕೊಂಡು ಕಳ್ಳದಾರಿಗೆ ಬಂದನು. ಕಾವಲುಗಾರನು ಊಟಕ್ಕೆ ಮನೆಗೆ ಹೋಗಿದ್ದನು. ಅವನ ಮಡದಿ ನೀರು ತರಲು ಕಳ್ಳದಾರಿಯ ಬಳಿ ಹರಿಯುತ್ತಿದ್ದ ಝರಿಗೆ ಬಂದಳು. ಕಳ್ಳಗಂಡಿಯಲ್ಲಿ ಮಾತಿನ ಶಬ್ದ ಕೇಳಿಸಿತು. ಕೂಡಲೇ ವೀರಾವೇಶ ಉಕ್ಕಿತು. ಒನಕೆನ್ನು ತಂದು ಕಳ್ಳಗಂಡಿಯ ಒಳಮುಖದಲ್ಲಿ ನಿಂತಳು. ಆ ವೀರ ವನಿತೆಯ ಒನಕೆಗೆ ನೂರಾರು ಶತ್ರುಗಳು ಆಹುತಿಯಾದರು. ಅಷ್ಟರಲ್ಲಿ ಗಂಡನು ಬಂದು ಕೂಡಲೇ ರಣಕಹಳೆಯೂದಿದನು. ಮದಕರಿಯು ಸೈನ್ಯದೊಡನೆ ಬಂದು ವೈರಿಗಳನ್ನು ಓಡಿಸಿದನು. ಕೋಟೆಯನ್ನು ರಕ್ಷಿಸಿದ ಓಬವ್ವ ಗಾಯಗಳಿಂದ ಅಸುನೀಗಿ ಅಮರಳಾದಳು.

ದ್ರೋಹಕ್ಕೆ ಬಲಿ

“ಚಿತ್ರದುರ್ಗದ ನಾಯಕನು ಯದ್ಧಕ್ಕೆ ಸಗ್ಗುವನಲ್ಲ. ನಮ್ಮ ಸಾಹಸವೆಲ್ಲ ವ್ಯರ್ಥವಾಯಿತು. ಅವರ ಸೈನ್ಯವನ್ನು ಒಡೆದು ನನ್ನ ಮನೋಗತ ಫಲಿಸಿಕೊಳ್ಳಬೇಕು” ಎಂದು ಹೈದರನು ಆಲೋಚಿಸಿದನು. ಚಿತ್ರದುರ್ಗದ ಸೈನಿಕರಲ್ಲಿ ೩ ಸಾವಿರ ಮಂದಿ ಮುಸ್ಲಿಮರಿದ್ದರು. ಅವರಲ್ಲಿ ಕೆಲವರಿಗೆ ಅಧಿಕಾರದ ಆಸೆ, ಹಣದ ಆಸೆ. ತನ್ನ ಖಾಜಿಯ ಮೂಲಕ ಹೈದರ್ ಅವರ ಮನ ಒಲಿಸಿದ. ಅವರಿಗೆ ಜಹಗೀರನ್ನು ಕೊಡುವುದಾಗಿ ಆಸೆ ತೋರಿಸಿದ. ತಮ್ಮ ಮತವೇ ರಾಜ್ಯಕ್ಕಿಂತ ಹೆಚ್ಚು ಎಂದಿದ್ದ ಕೆಲವರಿಗೆ, ಮಸೀದಿಯನ್ನು ಕಟ್ಟಿಸಿಕೊಡುತ್ತೇನೆ ಎಂದು ಆಸೆ ತೋರಿಸಿದ. ಅನೇಕ ಮುಸ್ಲಿಮ್ ಅಧಿಕಾರಿಗಳೂ ಯೋಧರೂ ಹೈದರನ ಕಡೆ ತಿರುಗಿದರು. ಲಂಚ, ದೊಡ್ಡ ಹುದ್ದೆ ಮುಂತಾದ ಆಸೆಗಳಿಗೆ ಬಲಿಯಾಗಿ ಕೆಲವು ಮರಾಠ ಸರದಾರರೂ, ಸೇನಾಧಿಕಾರಿಗಳೂ, ಅಧಿಕಾರಿಗಳೂ ಶತ್ರುಗಳಿಗೆ ಅನುಕೂಲರಾದರು. ೩ ತಿಂಗಳ ಕಾಲಕ್ಕೆ ಹೈದರನ ಕುಟಿಲೋಪಾಯಕ್ಕೆ ಮದಕರಿಯ ಸಾವಿರಾರು ಜನ ಬಲಿ ಬಿದ್ದರು. ಲಗ್ಗೆ ಹತ್ತಲು ಕಾಲ ಬಂತೆಂದು ಹೈದರನು ತೀರ್ಮಾನಿಸಿದನು; ಸ್ವಾಮಿ ದ್ರೋಹ ಹೈದರನಿಗೆ ಕೈಬೀಸಿ ಕರೆಯಿತು.

ಹೈದರನ ಕಡೆಯಿಂದ ದಿನದಿನವೂ ಕದನ ಪ್ರಬಲವಾಗುತ್ತಾ ಬಂದಿತು. ಮುಖ್ಯದ್ವಾರಗಳ ಬಳಿ ಲಗ್ಗೆ ಹತ್ತುವುದು ಹೆಚ್ಚಾಯಿತು. ಒಂದು ಸಲ ಮದಕರಿಯ ಕಡೆ ಸಾವಿರಾರು ಯೋಧರು ಮಡಿದರು. ಮತ್ತೊಂದು ಸಲ ಎಂದೂ ಬೆನ್ನು ಕೊಡದ ದುರ್ಗದ ಸೈನಿಕರು ಓಡಿಹೋದರು. ಇದೇ ಸಮಯವೆಂದು ರಂಗಯ್ಯನ ಬಾಗಿಲ ಸುರಂಗ ಮಾರ್ಗದ ಮೂಲಕ ಶತ್ರು ಸೈನಿಕರು ನುಗ್ಗಿದರು. ಪಿತೂರಿಗೆ ಒಳಗಾದ ಮದಕರಿ ಸೈನಿಕರು ಯುದ್ಧಮಾಡದೆ ನಿಂತರು. ಮದ್ದು ಸಂಗ್ರಹಕ್ಕೆ ಎಣ್ಣೆ ಹಾಕಿದ್ದುದು ಕಂಡುಬಂದಿತು. ನಿಷ್ಠರಾದ ಪಡೆಗಳು ಮದ್ದು ಹಾರದೆ ಶತ್ರುವಶರಾದರು. ಸಂತೇಬಾಗಿಲ ಬಳಿ ಸೈನ್ಯವು ನಾಶವಾಗಿ ಎದುರಿಸಲು ಯಾರೂ ಇಲ್ಲವಾಯಿತು. ವೈರಿಗಳು ಅಪಾರ ಸಂಖ್ಯೆಯಲ್ಲಿ ಒಳನುಗ್ಗಿದರು. ಬಸವನ ಬುರುಜಿನ ಮದ್ದು ಸಿಡಿಯದೆ ವೈರಿಗಳಿಗೆ ಸುಲಭವಾಗಿ ವಶವಾಯಿತು. ಜರಮಲೆಯವರು ಕಳ್ಳದಾರಿ ತೋರಿಸಿದರು. ಹೊರಕೋಟೆಯ ಒಳಭಾಗವೆಲ್ಲಾ ಶತ್ರುಮಯವಾಯಿತು. ಹೈದರಾಲಿಯು ಉತ್ಸಾವಾಂಬ ದೇವಸ್ಥಾನದಲ್ಲಿ ಬಿಡಾರ ಮಾಡಿದನು.

ವೀರ ಮದಕರಿ ರಾಜೇಂದ್ರನಿಗೆ ಸೋಲು ಖಂಡಿತ ಎಂದು ಅರ್ಥವಾಯಿತು.

“ನಮ್ಮ ವೀರ ಪರಂಪರೆಯಂತೆ ಯುದ್ಧಮಾಡುತ್ತಾ ವೀರಸ್ವರ್ಗ ಹೋಂದುವೆನೇ ಹೊರತು ಶರಣಾಗತನಾಗುವುದಿಲ್ಲ” ಎಂದು ದೃಢಚಿತ್ತದಿಂದ ವೀರ ಮದಕರಿ ರಾಜೇಂದ್ರನು ನಿರ್ಧರಿಸಿದನು. ಕೊನೆಯ ಕಾಳಗಕ್ಕೆ ಎಲ್ಲ ಏರ್ಪಾಡುಗಳನ್ನು ಮಾಡಿದನು. ಕುಮಾರ ಭರಮಪ್ಪ ನಾಯಕನಿಗೆ ಪಟ್ಟಾಭಿಷೇಕ ಮಾಡಿದನು. ಶ್ರೀ ಏಕನಾಥೇಶ್ವರಿ, ಶ್ರೀಚಂಪಕ ಸಿದ್ಧೇಶ್ವರರನ್ನು ಪೂಜಿಸಿ, ಶ್ರೀ ಉತ್ಸಾವಾಂಬೆಯನ್ನು ಪ್ರಾರ್ಥಿಸಿದನು. ವೀರಜಡೆ ಹೆಣೆದು ವೀರಕಂಕಣ ತೊಟ್ಟನು. ವಜ್ರಾಂಗಿಯನ್ನೂ ಮೂವತ್ತೆರಡು ಆಯುಧಗಳನ್ನೂ ಧರಿಸಿ ಆನೆ ಅಂಬಾರಿಯನ್ನೇರಿ ವೇಲುದುರ್ಗದಿಂದ ಇಳಿದನು. ಶತ್ರಗಳನ್ನು ಸಂಹರಿಸುತ್ತ ಸಿಂಹದಂತೆ ಮುಂದೆ ನುಗ್ಗಿದನು. ಮದಕರಿಯೇ ಯದ್ಧಕ್ಕೆ ಇಳಿದುದರಿಂದ ಸೈನಿಕರಲ್ಲಿ ವೀರೋತ್ಸಾಹ ಮೂಡಿತು. ಕಲಿತನದಿಂದ ಕಾದಿದರು. ಸಾವಿರಾರು ಶತ್ರುಗಳು ಹತರಾದರು.

ವೀರಗ್ರಣಿಯಾದ ಮದಕರಿ ರಾಜೇಂದ್ರನ ಪೌರಷವನ್ನು ಕಣ್ಣಾರೆ ಕಂಡು ಹೈದರನಿಗೆ ಮೆಚ್ಚಿಗೆಯಾಯಿತು. ಇಂತಹ ಕೆಚ್ಚಿನ ಕಲಿಯನ್ನು ತನ್ನ ಮುಂದಿನ ಕಾರ್ಯಸಾಧನೆಗೆ ಉಪಯೋಗಿಸಿಕೊಳ್ಳುವುದು ವಿಹಿತವೆಂದು ಆಲೋಚಿಸಿದನು. “ಪುನಃ ಪುನಃ ಹೇಳುತ್ತೇನೆ. ನಿಮ್ಮ ಮೇಲೆ ಹಗೆತನವಿಲ್ಲ. ನಿಮ್ಮ ರಾಜ್ಯ ಬಿಟ್ಟುಕೊಡುತ್ತೇನೆ. ನನ್ನನ್ನು ಬಂದು ಈಗಲೇ ಗುಡಾರದಲ್ಲಿ ಭೇಟಿ ಮಾಡಿ” ಎಂದು ಪತ್ರದಲ್ಲಿ ಬಲೆ ಬೀಸಿದನು. ಮದಕರಿ ರಾಜೇಂದ್ರನು ನಂಬಿ ಗಾರೆಬಾಗಿಲು ತೆಗೆಸಿ ಹೊರ ಬಂದನು. ಹೈದರನ ಪ್ರತಿನಿಧಿಯು ಎದುರ್ಗೊಂಡು ನವಾಬನ ಡೇರೆಗೆ ಕರೆದೊಯ್ದನು. ನಾಲ್ಕು ಸಾವಿರ ಸೈನಿಕರು ಡೇರೆಯನ್ನು ಸುತ್ತುವರಿದರು. ಮದಕರಿ ಸಿಂಹವನ್ನು ಅನಾಯಾಸವಾಗಿ ಬಂಧಿಸಿದರು.

ಒಂದು ವರ್ಷ ಆರು ತಿಂಗಳು ಇಪ್ಪತ್ತೈದು ದಿವಸಗಳ ಕಾಲ ಚಿತ್ರದುರ್ಗ ಮೈಸೂರಿನ ಪ್ರಬಲ ಸೇನೆಯನ್ನು ತಡೆದು ನಿಲ್ಲಿಸಿತ್ತು. ಶಾಲಿವಾಹನ ಶಕ ೧೭೦೦ ವಿಳಂಬಿ ಸಂವತ್ಸರದಲ್ಲಿ (೧೭೭೯ನೇ ಇಸವಿ) ದ್ರೋಹಿಗಳ ಹೀನ ಕಾರ್ಯದಿಂದ ಪತನವಾಯಿತು. ಚಿನ್ಮೂಲಾದ್ರಿ ಗಿರಿಶಿಖರದ ಮೇಲೆ ಮೈಸೂರಿನ ಗಂಡಭೇರುಂಡ ಧ್ವಜವು ಹಾರಿತು. ಮೇಲುದುರ್ಗದ ಅರಮನೆಯಲ್ಲಿದ್ದ ರಾಣಿವಾಸದವರು ಸುದ್ದಿ ತಿಳಿದು ಗೋಪಾಲಸ್ವಾಮಿ ಹೊಂಡದಲ್ಲಿ ಧುಮುಕಿ ಆತ್ಮಾರ್ಪಣೆ ಮಾಡಿದರು. ಚಿತ್ರದುರ್ಗದ ಅಪಾರ ಐಶ್ವರ್ಯವನ್ನು ಮೂರು ದಿವಸಗಳವರೆಗೆ ಲೂಟಿ ಮಾಡಿ ಹೈದರನು ದೋಚಿಕೊಂಡನು. ಮದಕರಿಯನ್ನೂ ಅವನ ಆಪ್ತರನ್ನೂ ಶ್ರೀರಂಗಪಟ್ಟಣದಲ್ಲಿ ಬಂಧನದಲ್ಲಿ ಇಡಲಾಯಿತು.

ಸಿಂಹ ಸಾಯುವವರೆಗೂ ಸಿಂಹವೇ !

ಸರೆಮನೆಯಲ್ಲಿ ಹೈದರಾಲಿ ನಾಯಕನನ್ನು ಕಂಡ.

“ನಾಯಕರೇ, ನಿಮ್ಮಲ್ಲಿ ನನಗೆ ಶತ್ರುತ್ವವಿಲ್ಲ. ನನ್ನನ್ನು ಪ್ರಭು ಎಂದು ಒಪ್ಪಿಕೊಳ್ಳಿ. ನಿಮ್ಮ ಮರ್ಯಾದೆಗೆ ಭಂಗವಿಲ್ಲದ ಹಾಗೆ ನೋಡಿಕೊಳ್ಳುತ್ತೇನೆ,” ಎಂದು ಮತ್ತೆ ಮತ್ತೆ ಸಿಹಿ ಮಾತುಗಳನ್ನಾಡಿದ.

ವೀರಸಿಂಹ ಮದಕರಿನಾಯಕ ಸೆರೆಯಾಳಾದರೂ ರಾಜಗಾಂಭೀರ್ಯವನ್ನು ಬಿಟ್ಟಿರಲಿಲ್ಲ. ಹೈದರಾಲಿಯ ಮಾತುಗಳನ್ನು ಮೌನವಾಗಿ ತಿರಸ್ಕಾರದಿಂದ ಕೇಳಿದ. ಹೈದರಾಲಿ ಮಾತನ್ನು ನಿಲ್ಲಿಸುತ್ತಲೆ,

“ನವಾಬರೇ, ಈ ಮಾತುಗಳೆಲ್ಲ ಏಕೆ? ನನಗೆ ಯಾರೂ ಪ್ರಭುಗಳಲ್ಲ, ನಾನು ಯಾರ ಅಡಿಯಾಳೂ ಅಲ್ಲ, ಸುಮ್ಮನೆ ಮಾತೇಕೆ?” ಎಂದ.

 

ಮದಕರಿನಾಯಕನು ಹೈದರನಿಗೆ "ನವಾಬರೇ, ಈ ಮಾತುಗಳೆಲ್ಲ ಏಕೆ? ನನಗೆ ಯಾರೂ ಪ್ರಭುಗಳಲ್ಲ" ಎಂದು ದಿಟ್ಟತನದಿಂದ ಹೇಳಿದ.

ಸೆರೆಯಲ್ಲಿ ನಿಸ್ಸಹಾಯಕನಾಗಿದ್ದರೂ ತೀರ ಗಾಯಗೊಂಡಿದ್ದರೂ ನಾಯಕ ದಿಟ್ಟತನದೆಂದ ಮಾತನಾಡಿದ. ಹೈದರ್ ಬೆಕ್ಕಸಬೆರಗಾದ, ಕೋಪವೂ ಬಂದೆತು.

ಮತ್ತೆ ಅವನು ಬಾಯಿ ತೆರೆಯುವಷ್ಟರಲ್ಲಿ ಪುರುಷ ಸಿಂಹ ನಾಯಕ ಮಿತ್ರದ್ರೋಹಿಯ ಕೈಗೆ ಸಿಕ್ಕದಷ್ಟು ದೂರ ಹೋಗಿದ್ದ.

ತೊಡೆಯಲ್ಲಿ ಹುದುಗಿದ್ದ ಕತ್ತಿಯ ಅಲುಗನ್ನು ನಾಯಕ ಕಿತ್ತ; ರಕ್ತ ಝಲ್ಲನೆ ಚಿಮ್ಮಿತು. ಅದೇ ಅಲುಗಿನಿಂದ ಕುತ್ತಿಗೆಯನ್ನು ಕತ್ತರಿಸಿಕೊಂಡ, ಕೆಳಕ್ಕುರುಳಿದ.

ಹೈದರ್ ಆಶ್ವರ್ಯದಿಂದ ಮೆಚ್ಚುಗೆಯಿಂದಲೇ ನೋಡುತ್ತಲೇ ಇದ್ದ.

“ಬದುಕಿರುವ ನಾಯಿಗಿಂತ ಸತ್ತ ಸಿಂಹ ಮೇಲು” ಎಂದೊಂದು ಗಾದೆ ಇದೆ. ನಾಯಿಯಂತೆ ಬದುಕಲಿಚ್ಛಿಸದೆ, ಸಿಂಹದಂತೆ ಬದುಕಿದ ನಾಯಕ ಸಿಂಹದಂತೆಯೇ ಕೊನೆಯುಸಿರು ಎಳೆದ.