ಪ್ರಪಂಚದ ಭಾಗ್ಯವಿಶೇಷದಿಂದ ಒಂದು ನಾಡಿನಲ್ಲಿ ಒಬ್ಬ ಸೀಮಾಪುರುಷನ ಉದಯವಾಗುತ್ತದೆ. ಅಂಥ ಅಪೂರ್ವ ಪ್ರತಿಭೆಯನ್ನು ಪಡೆದ ಸೀಮಾಪುರುಷರಲ್ಲಿ ಮಹಾಮನ ಮದನಮೋಹನ ಮಾಳವೀಯ ಅವರೂ ಒಬ್ಬರು. ಇಂಥ ಮಹಾಪುರುಷರಿಂದ ಅವರು ಜನಿಸಿದ ವಂಶವಷ್ಟೇ ಅಲ್ಲ, ಸಮಸ್ತ ನಾಡೂ, ಅದೇಕೆ ಇಡೀ ಜಗತ್ತೂ ಕೂಡ, ಧನ್ಯತೆಯನ್ನು ಪಡೆಯುತ್ತವೆ.

ಉತ್ತರ ಭಾರತದಲ್ಲಿ ಝಾನ್ಸಿ ನಗರಕ್ಕೆ ಅನತಿ ದೂರದಲ್ಲಿ “ಮಾಳವಾ” ಎಂಬ ಊರಿದೆ. ಶ್ರೀ ಮಾಳವೀಯ ಅವರ ಪೂರ್ವಜರು ಈ ಊರಿನಲ್ಲಿ ವಾಸವಾಗಿದ್ದರು. ಆ ಕಾಲದಲ್ಲಿ ತಾವು ವಾಸವಾಗಿದ್ದ ಊರಿನ ಹೆಸರನ್ನು ತಮ್ಮ ಹೆಸರಿನ ಮುಂದೆ ಇಟ್ಟುಕೊಳ್ಳುವುದು ರೂಢಿಯಾಗಿತ್ತು. ಇವರ ಪೂರ್ವಜರು ಎಂದು ಪ್ರಯಾಗಕ್ಕೆ ಬಂದರೋ ಅಂದಿನಿಂದ ತಮ್ಮ ಹೆಸರಿನ ಮುಂದೆ “ವ್ಯಾಸ” ಎಂಬ ಹೆಸರನ್ನು ಬಿಟ್ಟು “ಮಾಳವೀಯ” ಎಂಬ ಹೆಸರನ್ನಿಟ್ಟುಕೊಳ್ಳಲಾರಂಭಿಸಿದರು. ಮದನ ಮೋಹನ ಮಾಳವೀಯ ಅವರ ತಾತ ಪಂಡಿತ ಪ್ರೇಮಧರ ಮಾಳವೀಯ; ಅವರು ತುಂಬ ಕೀರ್ತಿಯನ್ನು ಸಂಪಾದಿಸಿದರು, ಎಲ್ಲರಿಂದ ಗೌರವವನ್ನು ಪಡೆದರು.

ಭಾರತದಿಂದ ಬ್ರಿಟಿಷರನ್ನು ಓಡಿಸಲು ೧೮೫೭ರಲ್ಲಿ ನಾನಾಸಾಹೇಬ, ತತ್ಯಾಟೋಪಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೊದಲಾದವರ ವೀರ ಹೋರಾಟ ವಿಫಲವಾಯಿತು. ಭಾರತ ಬ್ರಿಟನಿನ ಸಾಮ್ರಾಜ್ಯಕ್ಕೆ ಸೇರಿಹೋಯಿತು. ಅನಂತರ ಭಾರತದೇಶದಲ್ಲಿನ ಜನತೆಯಲ್ಲಿ ಬಹು ದೊಡ್ಡ ಬದಲಾವಣೆ ತಲೆಯೆತ್ತಿತ್ತು. ಸುಶಿಕ್ಷಿತರೆನಿಸಿದವರೂ, ಮಧ್ಯಮ ವರ್ಗದವರೂ ಪಾಶ್ಚಾತ್ಯರ ಅನುಕರಣೆಯಲ್ಲಿ ವಿಶೇಷ ಆಸ್ಥೆಯನ್ನು ತೋರಿಸುತ್ತಿದ್ದರು. ಅವರ ವೇಷ-ಭೂಷಣ, ನಡೆ-ನುಡಿ ಎಲ್ಲದರಲ್ಲೂ ನಾವೀನ್ಯತೆಯ ಛಾಯೆ ಒಡೆದು ಕಾಣುತ್ತಿತ್ತು. ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತೇವೆ, ಇಂಗ್ಲಿಷರ ಹಾಗೆ ಬಟ್ಟೆ ಹಾಕುತ್ತೇವೆ, ಅವರ ಆಚಾರಗಳನ್ನೆ ನಡೆಸುತ್ತೇವೆ ಎಂಬುದೇ ಈ ಜನಕ್ಕೆ ಹೆಮ್ಮೆ. ಪರಿಸ್ಥಿತಿ ಹೀಗಿರುವಾಗ ಮಾಳವೀಯ ಅವರ ವಂಶಜರು ಹಿಂದಿನಿಂದ ಬಂದ ಧಾರ್ಮಿಕ ಸಿದ್ಧಾಂತಗಳನ್ನೇ ಬಲವಾಗಿ ನಂಬಿ ಮುನ್ನಡೆಯುವುದು ಪ್ರವಾಹದ ಎದುರು ಈಜಿದಂತಿತ್ತು. ಪಂಡಿತ ಮದನಮೋಹನ ಮಾಳವೀಯ ಅವರ ಪೂಜ್ಯ ತಂದೆ ಪಂಡಿತ ವ್ರಜನಾಥರು ಜೀವನ ಸಾಗಿಸುತ್ತಿದ್ದುದು ಶ್ರೀಮದ್ಭಾಗವತದ ಕಥಾವಚನ-ವ್ಯಾಖ್ಯಾನಗಳಿಂದಲೇ. ಇದನ್ನು ಬಿಟ್ಟರೆ ಬೇರೆ ಅವರಿಗೆ ಆದಾಯವಿರಲಿಲ್ಲ. ಇದರಿಂದ ಆ ಶ್ರದ್ಧಾಶೀಲನಾದ ಬ್ರಾಹ್ಮಣನಿಗೆ ಜೀವನ ನಿರ್ವಹಣೆ ಅದೆಷ್ಟು ಕಠಿಣವಾಗಿರಬೇಕೆಂಬುದನ್ನು ಸಹಜವಾಗಿ ಊಹಿಸಬಹುದು. ಆದರೆ “ಕರುಣಾ ಶಾಲಿಯಾದ ದೇವರನ್ನು ನಂಬಿದ ಭಕ್ತನನ್ನು ಆತ ಎಂದಿಗೂ ಕೈ ಬಿಡುವುದಿಲ್ಲ; ಆದುದರಿಂದ ನಾನೇಕೆ ಹೆದರಬೇಕು?” ಎಂದು ಆ ಬ್ರಾಹ್ಮಣ ಸರ್ವಲೋಕ ರಕ್ಷಕನಾದ ಭಗವಂತನನ್ನೇ ಸಂಪೂರ್ಣವಾಗಿ ನಂಬಿದ್ದ.

ಒಂದು ದಿನ ಪಂಡಿತ ಪ್ರೇಮಧರ ಮಾಳವೀಯರು ದೇವರ ಪಾದ ಸೇರಿದರು. ಅವರ ಅಂತ್ಯಸಂಸ್ಕಾರ ಕರ್ಮಗಳನ್ನು ವಿಧ್ಯುಕ್ತವಾಗಿ ಮುಗಿಸಿದ ಮೇಲೆ ಪಂಡಿತ ವ್ರಜನಾಥರು ಪಿತೃಶ್ರಾದ್ಧವನ್ನು ಮಾಡಲೆಂದು ಪುಣ್ಯಕ್ಷೇತ್ರವಾದ ಗಯಾಕ್ಕೆ ಹೋದರು. ಶಾಸ್ತ್ರವಿಧಿಗಳೆಲ್ಲ ಪೂರೈಸಿದ ಮೇಲೆ ತೀರ್ಥ-ಪುರೋಹಿತರು “ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಭಕ್ತಿಯಿಂದ ಬೇಡಿಕೊಳ್ಳಿ: ಶುಭಾಶೀರ್ವಾದ ಮಾಡುತ್ತೇನೆ” ಎಂದು ಹೇಳಿದರು. ಆಗ ಪಂಡಿತ ವ್ರಜನಾಥರು ಪೂರ್ವದಿಕ್ಕಿಗೆ ಮುಖಮಾಡಿ, ಕೈಜೋಡಿಸಿ ನಿಂತು, ಭಕ್ತಿಪರವಶರಾಗಿ, “ಹೇ ಭಗವಾನ್, ನನಗೆ “ನ ಭೂತೋ ನ ಭವಿಷ್ಯತಿ” ಎಂದು ಪ್ರಖ್ಯಾತನಾಗಬಲ್ಲ ಸತ್ಪುತ್ರನನ್ನು ಕರುಣಿಸು” ಎಂದು ಬೇಡಿಕೊಂಡರು.

ಶ್ರದ್ಧೆ, ಚುರುಕು ಬುದ್ಧಿ – ಇವೇ ಸಂಪತ್ತು

ಪಂಡಿತ ವ್ರಜನಾಥರ ಹಂಬಲ ಫಲಿಸುವ ಮಂಗಳ ದಿನ ಬಂದೇ ಬಂದಿತು. ೧೮೬೧ನೇ ಡಿಸೆಂಬರ್ ೨೫ನೇ ತಾರೀಖು (ಅಂದರೆ ಪೌಷ್ಯ, ಕೃಷ್ಣ ಅಷ್ಟಮಿ ಬುಧವಾರ ಸಂಜೆ) ಅಹಿಯಾಪುರ (ಇಂದು ಈ ಮೊಹಲ್ಲಾ ಮಾಳವೀಯ ನಗರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ) ದಲ್ಲಿ ಪಂಡಿತ ಮದನಮೋಹನ ಮಾಳವೀಯ ಅವರು ಜನ್ಮವೆತ್ತಿದರು. ಇಂಥ ಮಗನನ್ನು ಹೆತ್ತು ಮೂನಾದೇವಿ ಧನ್ಯರಾದರು.

ದೀಪ ಹಚ್ಚುವ ಹೊತ್ತಾಯಿತು. ಇದ್ದಕ್ಕಿದ್ದಂತೆಯೇ ಕಂಚಿನ ತಟ್ಟೆಯನ್ನು ಬಾರಿಸಿದ ಮಂಗಳಸೂಚಕ ಧ್ವನಿ ಕೇಳಿಬಂದಿತು. ಪಂಡಿತ ವ್ರಜನಾಥರಿಗೆ ಗಂಡುಮಗು ಆಗಿದೆ ಎಂದು ಜನಕ್ಕೆಲ್ಲ ಗೊತ್ತಾಯಿತು. ವ್ರಜನಾಥರು ಶ್ರೀಮಂತರಲ್ಲ, ಬಡವರೇ, ಆದರೆ ಅವರ ಶುಭ್ರ ಜೀವನ, ಪಾಂಡಿತ್ಯ ಒಳ್ಳೆಯ ಸ್ವಭಾವ – ಇವುಗಳಿಂದ ಜನರಿಗೆ ಅವರಲ್ಲಿ ಗೌರವ. ಅವರನ್ನು ಕಂಡರೆ ಜನರಿಗೆಲ್ಲ ಪ್ರೀತಿ. ಕ್ಷಣಮಾತ್ರದಲ್ಲಿ ಲೋಕಪ್ರಿಯ ಭಾಗವತ ಪುರಾಣ ಕಥಾವಾಚಕ ವ್ರಜನಾಥರ ಮನೆಯ ಮುಂದೆ ನೂರಾರು ಜನ ಸಂತೋಷದಿಂದ ಸೇರಿಬಿಟ್ಟರು.

ಮಣ್ಣಿನ ಗೋಡೆಯ ಒಂದು ಪುಟ್ಟ ಮನೆ. ಬಂದ ಜನರನ್ನು ಒಳಗೆ ಕರೆದೇನೆಂದರೆ ಸಾಧ್ಯವಿಲ್ಲದ ಸ್ಥಿತಿ. ಅಷ್ಟು ಜನಕ್ಕೂ ಸಮೃದ್ಧಿಯಾಗಿ ಸಿಹಿ ಹಂಚುವುದೂ ಕಷ್ಟ. ವ್ರಜನಾಥರು ಹಾರ್ದಿಕ ಅಭಿನಂದನೆಯನ್ನು ಕೈಮುಗಿದು ವಿಶ್ವಾಸದಿಂದ ಸ್ವೀಕರಿಸಿ ಅವರನ್ನು ಬೀಳ್ಕೊಟ್ಟರು.

ನಾಮಕರಣ ಮಾಡುವ ಸಮಯದಲ್ಲಿ “ಮ” ಎಂಬ ಅಕ್ಷರದಿಂದ ಆರಂಭವಾಗುವ ಹೆಸರನ್ನಿಟ್ಟರೆ ಸರ್ವೋತ್ತಮ ಎಂಬ ಸುಚನೆಯನ್ನು ಪರಿಗ್ರಹಿಸಿ ಬಾಲಕನಿಗೆ “ಮದನ ಮೋಹನ” ಎಂಬ ಪವಿತ್ರ ನಾಮವನ್ನು ಇಡಲು ವ್ರಜನಾಥರು ನಿಶ್ಚಯಿಸಿದರು.

ಹುಡುಗ ಮದನಮೋಹನನು ಸದಾ ಹಸನ್ಮುಖಿ, ಚೈತನ್ಯದ ಮೂರ್ತಿ.

ಬಾಲಕನಿಗೆ ಐದು ವರ್ಷವಾಗುತ್ತಲೇ ಆತನ ಶಿಕ್ಷಣವು ಪ್ರಾರಂಭವಾಯಿತು. ಆಗ ಪ್ರಯಾಗದ ಅಹಿಯಾಪುರ ಮೊಹಲ್ಲಾದಲ್ಲಿ ಯಾವ ಪಾಠಶಾಲೆಯೂ ಇರಲಿಲ್ಲ.

ಪಂಡಿತ ಹರದೇವ ಎಂಬ ವಿದ್ವಾಂಸರೊಬ್ಬರು “ಧರ್ಮಜ್ಞಾನೋಪದೇಶ ಪಾಠಶಾಲಾ” ಎಂಬ ವಿದ್ಯಾ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಒಂದು ದಿನ ಬಾಲಕ ಮದನಮೋಹನನನ್ನು ಆತನ ತಂದೆ ಶ್ರೀಹರದೇವರ ಬಳಿಗೆ ಕರೆತಂದು ಆತನನ್ನು ಅವರ ಪಾಠಶಾಲೆಗೆ ಸೇರಿಸುವ ಅಪೇಕ್ಷೆ ವ್ಯಕ್ತಪಡಿಸಿದರು. ಶ್ರೀ ಹರದೇವರು ಬಾಲಕನನ್ನು ನೋಡಿ “ಸಂತೋಷ ಈ ಹುಡುಗನಿಗೆ ಏನಾದರೂ ಶ್ಲೋಕ ಬರುತ್ತದೆಯೇ?” ಎಂದು ಪ್ರಶ್ನಿಸಿದರು.

“ಬರುತ್ತವೆ” ಎಂದುತ್ತರವಿತ್ತ ಬಾಲಕ.

“ಹಾಗಾದರೆ ಒಂದು ಶ್ಲೋಕ ಹೇಳು, ನೋಡೋಣ” ಎಂದರು ಗುರುಗಳು.

ಆಗ ಬಾಲಕ ಗುರುಗಳ ಬಳಿಗೆ ಬಂದು, ಅವರ ಪಾದಪದ್ಮಗಳಿಗೆ ನಮಸ್ಕರಿಸಿ, ತನ್ನ ತಂದೆಗೆ ವಂದಿಸಿ, ಒಂದು ಸ್ಥಳದಲ್ಲಿ ಹೋಗಿ ಕೈಗಳನ್ನು ಕಟ್ಟಿಕೊಂಡು ನಿಂತು, ನಿತ್ಯ ಮನೆಯಲ್ಲಿ ತನ್ನ ತಂದೆಯವರು ಹೇಳಿಕೊಡುತ್ತಿದ್ದ ಸೊಗಸಾದ ಶ್ಲೋಕವೊಂದನ್ನು ಧೈರ್ಯದಿಂದ ಹೇಳಿದ. ಗುರುಗಳು ಸಂತುಷ್ಟರಾಗಿ “ಮಗು, ಶ್ಲೋಕವನ್ನು ರಾಗವಾಗಿ ಹೇಳು ನೋಡೋಣ” ಎಂದರು. ಆಗ ಹುಡುಗ ಸುಸ್ವರದಲ್ಲಿ ಆ ಶ್ಲೋಕವನ್ನು ಹೇಳಿ ಮುಗಿಸಿದ.

ಗುರುಗಳಿಗೆ ಆದ ಆನಂದ ಅಷ್ಟಿಷ್ಟಲ್ಲ. ತಕ್ಷಣ ಅವರು ಬಾಲಕನ ತಲೆಯ ಮೇಲೆ ಕೈಯಿಟ್ಟು “ಧನ್ಯ, ಧನ್ಯ, ನೀನು ಹುಟ್ಟಿದ ಮನೆಗೆ ಅಖಂಡ ಕೀರ್ತಿಯನ್ನು ತರುತ್ತೀ; ನಿನ್ನ ವಂಶವನ್ನು ಉದ್ಧರಿಸುತ್ತೀ” ಎಂದು ಆಶೀರ್ವದಿಸಿದರು.

ಪಂಡಿತ ಹರದೇವರಲ್ಲಿ ಮದನಮೋಹನನ ಶಿಕ್ಷಣ ಆರಂಭಗೊಂಡಿತು. ಸಂಸ್ಕೃತದಲ್ಲಿ “ಲಘುಕೌಮುದಿ” ಎಂಬ ಗ್ರಂಥವನ್ನು ಆತ ಅಭ್ಯಸಿಸಿದ. ಗೀತೆಯ, ಮನುಸ್ಮೃತಿಯ ಮತ್ತು ಅನೇಕಾನೇಕ ನೀತಿ ಶ್ಲೋಕಗಳನ್ನು ಕಂಠಸ್ಥ ಮಾಡಿಕೊಂಡ.

ಮದನಮೋಹನನಿಗೆ ಎಂಟು ವರ್ಷವಾಗುತ್ತಲೇ “ಯಜ್ಞೋಪವೀತ” ಸಂಸ್ಕಾರವಾಯಿತು. ಸ್ವತಃ ಪೂಜ್ಯ ತಂದೆ ಶ್ರೀ ವ್ರಜನಾಥರೇ ಸುಪುತ್ರನಿಗೆ “ಗಾಯತ್ರೀ ಮಂತ್ರ” ದೀಕ್ಷೆಯನ್ನಿತ್ತರು.

ಬಾಲ ಬ್ರಹ್ಮಚಾರಿ ವೇಷದಲ್ಲಿಯೇ ಪುಟ್ಟ ಮದನ ಮೋಹನ ಪ್ರಾತಃಕಾಲ, ಸಂಧ್ಯಾಕಾಲ ತಪ್ಪದೆ ಸಂಧ್ಯಾವಂದನೆ ಮಾಡುತ್ತಿದ್ದನು. ಈ ಬ್ರಹ್ಮಚಾರಿ ವೇಷವನ್ನು ನೋಡಿ ಆತನ ತಾಯಿಗೆ “ನನ್ನ ಮಗ ಸಾಧು ಆಗುವುದಿಲ್ಲವಷ್ಟೇ” ಎಂಬ ವಿಚಾರ ಒಮ್ಮೊಮ್ಮೆ ಮೂಡಿ ಮರೆಯಾಗುತ್ತಿತ್ತು. ಎಲ್ಲಿ ತನ್ನ ಮಗನಿಗೆ ತನ್ನದೇ ದೃಷ್ಟಿ ತಾಗುತ್ತದೋ ಎಂದು ಆಕೆಗೆ ಅಂತರಂಗದಲ್ಲೇ ಭಯ. ಎಷ್ಟೋ ಬಾರಿ ಮಗನಿಗೆ ದೃಷ್ಟಿ ತೆಗೆದು ನಿವಾಳಿಸುತ್ತಿದ್ದಳು.

ಬಾಲ್ಯದಲ್ಲಿ ಮದನಮೋಹನ ಬಲು ತುಂಟನಾಗಿದ್ದ. ಆಟವೆಂದರೆ ಆತನಿಗೆ ಪಂಚಪ್ರಾಣ. ಚಿನ್ನಿ-ದಾಂಡು, ಗೋಲಿಗುಂಡು ಆಡಲು ಪ್ರಾರಂಭಿಸಿದರೆ ಆತನಿಗೆ ಊಟ-ನಿದ್ರೆ ಬೇಡವಾಗುತ್ತಿತ್ತು. ಜೊತೆಗೆ ವ್ಯಾಯಾಮವನ್ನೂ ಮಾಡುತ್ತಿದ್ದ.

ಧರ್ಮಜ್ಞಾನೋಪದೇಶ ಪಾಠಶಾಲೆ ಪ್ರಾತಃಕಾಲ ೬ ಗಂಟೆಗೆ ಪ್ರಾರಂಭವಾಗುತ್ತಿತ್ತು. ೬.೩೦ಕ್ಕೆ ಗಂಟೆ ಬಾರಿಸುತ್ತಿತ್ತು. ವಿದ್ಯಾರ್ಥಿಗಳೆಲ್ಲರೂ ಒಂದು ಕಡೆ ಸೇರಿದಾಗ ಮೇಲಿನ ಶ್ರೇಣಿಯ ವಿದ್ಯಾರ್ಥಿಯೊಬ್ಬ ಪಂಡಿತಜೀಯವರ ಆದೇಶದ ಮೇರೆಗೆ ಒಂದು ಶ್ಲೋಕವನ್ನು ಓದುತ್ತಿದ್ದ. ಅದನ್ನು ಎಲ್ಲ ವಿದ್ಯಾರ್ಥಿಗಳು ಪುನರುಚ್ಚರಿಸುತ್ತಿದ್ದರು. ಈ ರೀತಿಯಲ್ಲಿ ಸರ್ವ ವಿದ್ಯಾರ್ಥಿಗಣಕ್ಕೂ, ಮನಸ್ಮೃತಿ, ಗೀತಾ ಅಥವಾ ಇತರ ನೀತಿ ಶ್ಲೋಕಗಳನ್ನು ಕಲಿಸಿಕೊಡಲಾಗುತ್ತಿತ್ತು. ಸಾಮೂಹಿಕವಾಗಿ ಆ ಶ್ಲೋಕಗಳನ್ನು ನಾಲ್ಕಾರು ಸಲ ಎಲ್ಲರಿಂದ ಹೇಳಿಸುತ್ತಿದ್ದುದರಿಂದ ಆ ಶ್ಲೋಕಗಳು ಹುಡುಗರಿಗೆ ಬಾಯಿಪಾಠ ಆಗುತ್ತಿದ್ದವು.

ಮದನಮೋಹನನ ಮಾತಿನಲ್ಲಿಯೇ ಆತನ ಆಹಾರದ ಬಗ್ಗೆ ವಿವರಗಳನ್ನು ಕೇಳಿ:

“ನಾನು ಯಾವ ಆಹಾರ ಸ್ವೀಕರಿಸಿದೆನೋ ಅದು ರಾಜ ಮಹಾರಾಜರಿಗೆ ಸಹ ಸಿಕ್ಕಲು ದುರ್ಲಭವಾದದ್ದು ಎನಿಸಿರುತ್ತಿತ್ತು. ರಾಜ ಮಹಾರಾಜರು ತಮ್ಮ ಸೇವಕರು ಮಾಡಿದ ತಿಂಡಿತೀರ್ಥ, ಭೋಜನ ಸ್ವೀಕರಿಸುತ್ತಾರೆ. ಸೇವಕರು ನಿಜವಾದ ಪ್ರೇಮದಿಂದ ಅದನ್ನು ತಯಾರಿಸುತ್ತಾರೆಯೇ? ಖಂಡಿತವಾಗಿಯೂ ಇಲ್ಲ. ಸಂಬಳದ ಆಸೆಗಾಗಿ ಅವರು ಅದನ್ನು ಸಿದ್ಧಗೊಳಿಸುತ್ತಾರೆ, ಅಷ್ಟೆ ! ಆದರೆ, ನಾನು ಆ ರೀತಿ ಯಾಂತ್ರಿಕವಾಗಿ ಸಿದ್ಧಗೊಳಿಸಿದ ಭೋಜನ ಸ್ವೀಕರಿಸಿದವನಲ್ಲ. ಬಾಲ್ಯದಿಂದ ಯುವಕನಾಗುವವರೆಗೆ ನನ್ನ ಪೂಜ್ಯ ತಾಯಿ ಪ್ರೇಮಾಂತಃ ಕರಣದಿಂದ ಸಿದ್ಧಪಡಿಸಿ, ಸ್ವತಃ ಅವರೇ ಬಡಿಸಿದ ಊಟವನ್ನು ಉಂಡು ಬೆಳೆದವನು ಪ್ರತಿದಿನವೂ ನನಗೆ ಏನು ಇಷ್ಟವೋ ಅದನ್ನೇ ನನ್ನ ತಾಯಿ ಸಿದ್ಧಪಡಿಸಿ, ಬಡಿಸಿ ನನ್ನನ್ನು ಬೆಳೆಸಿದರು. ಆದ ದೃಷ್ಟಿಯಿಂದ ನಾನು ನಿಜಕ್ಕೂ ಭಾಗ್ಯಶಾಲಿ ಮತ್ತು ಪುಣ್ಯವಂತ.”

ತನ್ನ ಓರಿಗೆಯ ಬಾಲಕರು ಹಲವರು ಇಂಗ್ಲಿಷ್‌ಶಾಲೆಗೆ ಹೋಗುವುದನ್ನು ನೋಡಿದ ಮದನಮೋಹನನಿಗೆ ತಾನೂ ಏಕೆ ಇಂಗ್ಲಿಷ್‌ಕಲಿಯಬಾರದು ಎನಿಸಿತು. ಇಂಗ್ಲಿಷ್ ಶಾಲೆಯ ಶುಲ್ಕ ಹೆಚ್ಚು, ಈ ಬಡಕುಟುಂಬಕ್ಕೆ ಮಗನನ್ನು ಅಲ್ಲಿಗೆ ಕಳಿಸುವುದು ಸಾಧ್ಯವೇ? ಆದರೇನು? ಮನವಿದ್ದಲ್ಲಿ ಮಹಾದೇವ ಎಂಬಂತೆ ವ್ರಜನಾಥರಿಗೆ ಮಗನ ಆಸೆ ಅರ್ಥವಾಯಿತು. ಶಾಲೆಗೆ ಕಳಿಸುವ ಶುಲ್ಕದ ಮಾತು ಬಂದಾಗ ತಾಯಿ ಮೂನಾದೇವಿ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಶ್ರೀ ಲಾಲಾಗಯಾಪ್ರಸಾದರ ಹತ್ತಿರ ಗಿರವಿ ಇಟ್ಟು ಹಣ ತಂದು ಕೊಟ್ಟರು. ಹುಡುಗನನ್ನು ತಂದೆ ಶಾಲೆಗೆ ಸೇರಿಸಿದರು.

ಹದಿನೈದು ವರ್ಷದ ಮಾಳವೀಯರ ಭಾಷಣವನ್ನು ಕೇಳಿ ವಿದ್ವಾಂಸರು ಬೆರಗಾದರು.

ಇಂಗ್ಲಿಷ್ ಶಾಲೆಯಲ್ಲಿ “ಗಾರ್ಡನ್ ಸಾಹೇಬ್” ಎಂಬ ಆಂಗ್ಲ ಅಧ್ಯಾಪಕರೊಬ್ಬರಿದ್ದರು. ಅವರೋ ಶಿಸ್ತಿನ ಸಿಪಾಯಿಗಳು. ಶಾಲೆಗೆ ಕರಾರುವಾಕ್ಕಾಗಿ ವಿದ್ಯಾರ್ಥಿಗಳು ಬರಬೇಕು. ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಶಿಕ್ಷೆ ವಿಧಿಸುತ್ತಿದ್ದರು.

ಮದನಮೋಹನನ ಮನೆಯಲ್ಲಿ ಹೊತ್ತಿಗೆ ಸರಿಯಾಗಿ ಅಡಿಗೆ ಆಗದೇ ಇದ್ದುದರಿಂದ ನಿತ್ಯ ಈತ ಹಳಸಿದ ತಂಗುಳ ರೊಟ್ಟಿಯನ್ನು ಮಜ್ಜಿಗೆಯಲ್ಲಿ ನೆನೆಸಿ ತಿಂದು ಶಾಲೆಗೆ ಬರುತ್ತಿದ್ದ. ಅಷ್ಟು ದಯನೀಯವಾಗಿತ್ತು. ಇವರ ಅಂದಿನ ಸ್ಥಿತಿ.

ಪರಿಸ್ಥಿತಿ ಈ ರೀತಿ ಇದ್ದರೂ ಸಹ ಬಾಲಕ ಮದನಮೋಹನ ಸ್ವಲ್ಪವೂ ವಿಚಲಿತನಾಗಲಿಲ್ಲ. ಕೇವಲ ಕೆಲವೇ ಕೆಲವು ದಿನಗಳಲ್ಲಿಯೇ ಆತ ಶಾಲೆಯಲ್ಲಿ ಆಂಗ್ಲ ಶಬ್ದೋಚ್ಚಾರ ವಿನ್ಯಾಸ ಮತ್ತು ಸುಂದರ ಲೇಖನ ಕಲೆಯಲ್ಲಿ ಪ್ರತಿಭಾ ಸಂಪನ್ನನೆನಿಸಿ ಗುರುಗಳ ಅಚ್ಚುಮೆಚ್ಚಿನ ಶಿಷ್ಯನೆನಿಸಿದನು.

ಮನೆಯಲ್ಲಿ ಕುಳಿತು ಓದಲು ಸಹ ಸಾಕಷ್ಟು ಉತ್ತಮವಾದ ಸ್ಥಳವಿರಲಿಲ್ಲ. ಮನೆಯಿಂದ ಕೊಂಚ ದೂರದಲ್ಲಿನ ಸೋಹನಲಾಲ್‌ತೋಟದ ಹತ್ತಿರ ಮದನಮೋಹನನ ಸಹಪಾಟಿ ಗಂಗಾಪ್ರಸಾದ್ ಎಂಬಾತ ಇದ್ದ. ಮದನಮೋಹನ ಸೂರ್ಯಾಸ್ತವಾದೊಡನೆಯೇ ಕಂದೀಲೊಂದನ್ನು ಹಿಡಿದುಕೊಂಡು ಗೆಳೆಯನ ಕೊಠಡಿಗೆ ಹೋಗಿ ಓದಿಕೊಳ್ಳುತ್ತಿದ್ದ. ಪ್ರಾತಃಕಾಲವಾಗುತ್ತಲೇ ಎದ್ದು ಮನೆಗೆ ಹಿಂದುರಿಗಿ ಬರುತ್ತಿದ್ದ. ಇದು ಆ ಕಾಲದಲ್ಲಿ ಆತನ ನಿತ್ಯ ಜೀವನ ವಿಧಾನವಾಗಿತ್ತು.

ಶಾಲೆಯಿಂದ ಬಂದಮೇಲೆ ತಪ್ಪದೆ ವ್ಯಾಯಾಮವನ್ನು ಆತ ಮಾಡುತ್ತಿದ್ದ. ಸೇವಾ – ವಂದನಾ ಮೊದಲಾದ ಕಾರ್ಯಗಳಲ್ಲಿಯೂ ಸದಾ ಮುಂದಿರುತ್ತಿದ್ದ. ಸಂಗೀತ ಅಧ್ಯಯನದಲ್ಲಿಯೂ ಆತನಿಗೆ ಉತ್ಕಟವಾದ ಆಪೇಕ್ಷೆ ಇತ್ತು. ಕೊಳಲು ಮತ್ತು ಸಿತಾರ್ ವಾದ್ಯಗಳನ್ನು ಬಾರಿಸಲೂ ಸಹ ಆತ ಕಲಿತುಕೊಂಡ. ಪ್ರಾತಃಕಾಲ ಅಥವಾ ಸಂಧ್ಯಾಕಾಲದಲ್ಲಿ ಆತ ತನ್ನ ತಂದೆಯವರೊಂದಿಗೆ ಮೀರಾ ಅಥವಾ ಸೂರದಾಸರ ಪದಗಳನ್ನು ಸುಸ್ವರದಲ್ಲಿ ಹಾಡುವುದಕ್ಕೆ ಕಲಿತುಕೊಳ್ಳುತ್ತಿದ್ದ. ಈ ರೀತಿ ಸಂತೋಷವಾಗಿಯೇ ಆತ ದಿನಗಳನ್ನು ಕಳೆಯುತ್ತಿದ್ದ.

ಬಾಲಪಂಡಿತ

೧೮೮೧ರಲ್ಲಿ ಮದನಮೋಹನ ಮ್ಯೋರ್ ಸೆಂಟ್ರಲ್ ಕಾಲೇಜಿನಿಂದ ಎಫ್.ಎ. ಪರೀಕ್ಷೆಗೆ ಕುಳಿತು ಉತ್ತೀರ್ಣನಾದ. ಜ್ಞಾನಪಿಪಾಸುವಾಗಿದ್ದ ಆ ತರುಣ ಬಿ.ಎ. ಪದವಿ ಪರೀಕ್ಷೆಯ ಅಧ್ಯಯನಕ್ಕಾಗಿ ಆಗ್ರಾಕ್ಕೆ ತೆರಳಿದ. ಆದರೆ ವಿವಿಧ ಕಡೆ ತನ್ನ ದೃಷ್ಟಿಯನ್ನೂ ಶಕ್ತಿಯನ್ನೂ ಹರಿಸಿದ್ದರಿಂದ ಆತ ಅಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ೧೮೮೪ರಲ್ಲಿ ಕಲ್ಕತ್ತೆಯಲ್ಲಿ ಬಿ.ಎ. ಪರೀಕ್ಷೆಯನ್ನು ಮುಗಿಸಿಕೊಂಡ. ಎಂ.ಎ. ಮುಗಿಸುವ ಅಪೇಕ್ಷೆ ಉತ್ಕಟವಾಗಿದ್ದರೂ ತನ್ನ ತಂದೆ ತಾಯಿಗಳು ಸಂಸಾರ ನಿರ್ವಹಣೆಯಲ್ಲಿ ಪಡುತ್ತಿದ್ದ ಹೇಳತೀರದ ಕಷ್ಟವನ್ನು ಮನಗಂಡು ಏನಾದರೂ ನೌಕರಿ ಹಿಡಿದು ಅವರಿಗೆ ನೆರವಾಗುವುದೇ ಸರಿ ಎಂದು ಈ ತರುಣ ನಿಶ್ಚಯಿಸಿಕೊಂಡ.

ಮದನಮೋಹನ ಹದಿನೈದರ ಎಳವೆಯಲ್ಲಿ ಒಮ್ಮೆ ತನ್ನ ತಂದೆಯ ಸೋದರನನೊಂದಿಗೆ ಮಿರ್ಜಾಪುರಕ್ಕೆ ಹೋಗುವ ಪ್ರಸಂಗ ಬಂದಿತ್ತು. ಅಲ್ಲಿನ ವಿದ್ವಾಂಸರ ಮಂಡಲಿಯಲ್ಲಿ ಶಾಸ್ತ್ರಾರ್ಥಕ್ಕೆ ಏರ್ಪಾಟಾಗಿತ್ತು. ಆ ಗೊಷ್ಠಿಯಲ್ಲಿನ ಚರ್ಚೆಯನ್ನು ಕೇಳಿದ ಈ ತರುಣನಿಗೆ ತಾನೂ ಮಾತನಾಡಬೇಕೆಂಬ ಬಯಕೆ. ಒಂದೆರಡು ಸಲ ಏಳಲು ಯತ್ನಿಸಿದ. ಕೊನೆಗೆ ಅವಕಾಶ ದೊರೆಯಿತು. ಎದ್ದು ನಿಂತ. ಇಡೀ ಸಭೆಯನ್ನೊಮ್ಮೆ ಕಣ್ತೆರೆದು ನೋಡಿ ಗಂಭೀರವಾಣಿಯಲ್ಲಿ ಮಾತಿಗೆ ಪ್ರಾರಂಭಿಸಿದ. ಸಂಸ್ಕೃತ ಭಾಷೆಯಲ್ಲಿನ ಸುಮಧರ ಉಪನ್ಯಾಸ ವೈಖರಿಯನ್ನೂ, ಅಸಾಧಾರಣ ತರ್ಕ ಸರಣಿಯನ್ನೂ, ಅತ್ಯಪೂರ್ವವಾದ ವಿದ್ವತ್ತನ್ನೂ, ಕಂಡು ಎಲ್ಲ ಪಂಡಿತೋತ್ತಮರೂ ಬೆರಗಾದರು. ಪ್ರಶಂಸೆಯ ಮಳೆಯೇ ಸುರಿದುಹೋಯಿತು.

ವಿದ್ವದ್ಗೋಷ್ಠಿಯ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದ ಪಂಡಿತ ನಂದರಾಯ್‌ಅವರು ಮದನಮೋಹನ ರೂಪ, ವಿದ್ಯೆ, ವಿನಯ, ಗಾಂಭೀರ್ಯ ಮತ್ತು ವಾಗ್ಮಿತೆಗೆ ಮುಗ್ಧರಾಗಿದ್ದುದಷ್ಟೇ ಅಲ್ಲ, ಅವರಿಗೆ ಮಾತೇ ಬರಲಿಲ್ಲ. ತಮ್ಮ ತೃತೀಯ ಪುತ್ರಿ ಕುಮಾರಿ ಕುಂದನದೇವಿಯನ್ನು ಈ ಹುಡುಗನಿಗೆ ಕೊಟ್ಟು ಮದುವೆಮಾಡಬೇಕೆಂದು ನಿಶ್ಚಯಿಸಿದರು. ಸರಿ, ಹದಿನೈದರ ಎಳೆಯ ಮದನಮೋಹನನಿಗೆ ಸೌಭಾಗ್ಯವತಿ ಕುಂದನದೇವಿಯನ್ನು ಕೊಟ್ಟು ವಿವಾಹ ಮಹೋತ್ಸವ ಪರಮ ವೈಭವದಿಂದ ನೆರವೇರಿಹೋಯಿತು.

ಕುಂದನದೇವಿ ಪತಿಗೆ ತಕ್ಕ ಸತಿ.

ಉಳ್ಳವರ ಮನೆಯಲ್ಲಿ ಹುಟ್ಟಿ ದಾರಿದ್ರ್ಯದಿಂದ ಜೀವನ ಸಾಗಿಸುತ್ತಿದ್ದ ಪತಿಯ ಮನೆಗೆ ಬಂದಾಗ ಕುಂದನದೇವಿಗೆ ಅಪೇಕ್ಷಿಸಿದ್ದನ್ನು ತಿನ್ನುವುದಕ್ಕಿರಲಿಲ್ಲ; ಒಳ್ಳೆಯ ವಸ್ತ್ರವನ್ನು ಉಟ್ಟೇನೆಂದರೆ ಸಾಧ್ಯವಿರಲಿಲ್ಲ. ಆದರೂ ಒಂದು ದಿನವಾದರೂ ಆ ಸಾಧ್ವಿ ತನ್ನ ಪತಿಗಾಗಲೀ, ತವರು ಮನೆಯವರಿಗಾಗಲೀ ಆ ಬಗ್ಗೆ ದೂರಿದವಳಲ್ಲ.

ಒಮ್ಮೆ ಮದನಮೋಹನ ತನ್ನ ಪತ್ನಿಯ ಅಸಾಧಾರಣ ಸಹನಶೀಲತೆಯನ್ನೂ ಔದಾರ್ಯಾದಿ ಸದ್ಗುಣಗಳನ್ನೂ ಮೆಚ್ಚಿ ಹೀಗೆಂದ:

“ನೀನು ಒಂದು ದಿನವಾದರೂ ನಮ್ಮ ಮನೆಯ ಕಷ್ಟ ಜೀವನದ ಬಗ್ಗೆ ತುಟಿ ಎರಡು ಮಾಡಿಲ್ಲವಲ್ಲ. ನಿಮ್ಮ ತಾಯಿ-ತಂದೆಗೆ ಈ ಬಗ್ಗೆ ದೂರಿಲ್ಲವಲ್ಲ.”

“ದೂರಿ ಪ್ರಯೋಜನವೇನು? ನನ್ನ ಸ್ಥಿತಿಗಾಗಿ ಅವರು ಮರುಗುತ್ತಾರೆ. ಕಣ್ಣೀರಿಡುತ್ತಾರೆ. ಅದರಿಂದ ನನಗೆ ಆಗುವ ಸುಖವಾದರೂ ಏನು ? ನನಗೆ ಈ ಮನೆಯೇ ಶಾಶ್ವತ. ನೀವು ನನ್ನ ಭಾಗದ ದೇವರು. ನೀವು ನನ್ನನ್ನು ಅಂತಃಕರಣದಿಂದ ನೋಡಿಕೊಳ್ಳುತ್ತಿರುವುದರಿಂದ ನನಗೆ ಈ ಮನೆ ನಿಜಕ್ಕೂ ಸ್ವರ್ಗಕ್ಕಿಂತ ಮಿಗಿಲಾಗಿದೆ. ಈ ಪ್ರಪಂಚದಲ್ಲಿ ನನಗೆ ಇನ್ನೇನೂ ಬೇಕಿಲ್ಲ” ಎಂದರು ಕುಂದನದೇವಿ.

ತಾನೂ ತನ್ನ ತಾತ ಮತ್ತು ತಂದೆಯವರಂತೆಯೇ ಭಾಗವತ ಪ್ರವಚನ ಮಾಡಿ ಕೀರ್ತಿವಂತನಾಗಬೇಕೆಂದು ಮದನಮೋಹನ ಅಪೇಕ್ಷೆಪಟ್ಟಿದ್ದ. ಅದು ತಾಯಿ ಮೂನಾದೇವಿಗೆ ತಿಳಿದಾಗ “ನಿನಗೆ ನಮ್ಮ ಸ್ಥಿತಿ ಏನೆಂಬುದು ಗೋತ್ತೇ ಇದೆ. ನಿನಗೆ ಯಾವುದು ಸೂಕ್ತವೋ ಅದನ್ನೇ ಮಾಡು” ಎಂದರು. ತಾಯಿಯ ಅಂತರ್ಗತ ಇಚ್ಛೆಯನ್ನು ತಿಳಿದವನಾಗಿ ನಲವತ್ತು ರೂಪಾಯಿಗಳ ಮಾಸಿಕ ವೇತನದ ಅಧ್ಯಾಪಕ ವೃತ್ತಿಯನ್ನು ಸ್ವೀಕರಿಸಿದ ಮದನಮೋಹನ.

ಬಹುಮುಖಗಳ ವಜ್ರ

ಮದನಮೋಹನ ಹುಟ್ಟುಕವಿ. ೧೫-೧೬ನೇ ವಯಸ್ಸಿನಲ್ಲೇ ಕವಿತೆಗಳನ್ನು ಬರೆಯಲಾರಂಭಿಸಿದ. ಸ್ವಲ್ಪ ಸಮಯದಲ್ಲಿಯೇ ಈತ ಶ್ರೇಷ್ಠಮಟ್ಟದ ಕವಿ ಎಂದು ಪರಿಗಣಿತನಾದುದಷ್ಟೇ ಅಲ್ಲ, ಸುಪ್ರಖ್ಯಾತನೂ ಆದ. “ಮಕರಂದ” ಎಂಬುದು ಆತನ ಕಾವ್ಯನಾಮವಾಗಿತ್ತು. “ರಾಧಿಕಾರ ರಾಣಿ” ಎಂಬುದೇ ಆತನ ಮೊದಲ ಕಾವ್ಯರಚನೆ.

ಕಲ್ಕತ್ತ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್ಸಿನ ದ್ವಿತೀಯಾಧಿವೇಶನ. ಸ್ಮರಣೀಯ ಶ್ರೀ ದಾದಾಭಾಯಿ ನವರೋಜಿ ಅವರೇ ಅಧಿವೇಶನದ ಮಹಾಧ್ಯಾಕ್ಷರು. ಅಸಾಧ್ಯ ಜನಸಂದಣಿ. ವರ್ಣರಂಜಿತವಾದ ಆ ಭವ್ಯ ಸಭಾಸ್ಥಾನದಲ್ಲಿ ಒಬ್ಬ ಯುವಕ ತನ್ನ ಗುರುವಿನ ಪ್ರೇರಣಾನುಸಾರ ವೇದಿಕೆಯನ್ನೇರಿ ನಿಂತ. ಸರಿ, ಮಾತಿಗೆ ಮೊದಲಾಯಿತು. ಆ ಯುವಕನ ಅಪ್ರತಿಮ ದೇಶಭಕ್ತಿ ತುಂಬಿದ ಭಾಷಣ ಗಂಗಾಪ್ರವಾಹಂದತೆ ಆತನ ಶ್ರೀಕಂಠದಿಂದ ಹರಿದು ಬಂದಿತ್ತು. ಕೇಳಿದವರು ತಾವೇ ಧನ್ಯರು ಎಂದುಕೊಂಡರು. ಭಾಷಣ ಮುಗಿದಾಗ ಇಡೀ ಜನಸ್ತೋಮ ಕರತಾಡನ ಮಾಡಿತು. ಕಾಂಗ್ರೆಸ್ಸಿನ ಸಂಸ್ಥಾಪಕ ಶ್ರೀ ಹ್ಯೂಮ್‌ಆ ಆಧಿವೇಶನದ ವರದಿಯಲ್ಲಿ ಮದನಮೋಹನ ಮಾಳವೀಯರ ಭಾಷಣ ಎಂದಿಗೂ ಮರೆಯಲಾರದ್ದು ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.

ಕಾಶಿ ಹಿಂದು ವಿಶ್ವವಿದ್ಯಾಲಯಕ್ಕಾಗಿ ಮಾಳವೀಯರು ತಮ್ಮನ್ನೇ ತೇಯ್ದುಕೊಂಡರು.

ಈ ಅಧಿವೇಶನದಲ್ಲೇ ಮಾಳವೀಯರ ಪರಿಚಯ ಮಹಾರಾಜಾ ಶ್ರೀ ರಾಮಪಾಲ ಸಿಂಹರಿಗಾಯಿತು. ಅವರು ತಮ್ಮ ಯಜಮಾನ್ಯದಲ್ಲಿ ಪ್ರಕಟವಾಗುತ್ತಿದ್ದ. “ಹಿಂದುಸ್ಥಾನ್‌” ದಿನಪತ್ರಿಕೆಯ ಸಂಪಾದಕರಾಗುವಂತೆ ಪ್ರಾರ್ಥಿಸಿ ಅದರ ಹೊಣೆಯನ್ನು ಅವರಿಗೆ ಒಪ್ಪಿಸಿಬಿಟ್ಟರು.

ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯಶೀಲರಾಗಿದ್ದಂತೆಯೇ ಮಾಳವೀಯ ಅವರು ೧೮೯೨ರಲ್ಲಿ ಅಲಹಾಬಾದ್ ಹೈಕೋರ್ಟಿನಲ್ಲಿ ವಕೀಲರಾದರು. ಸ್ವಲ್ಪ ಕಾಲದಲ್ಲಿಯೇ ಅವರು ಬಹು ಪ್ರಸಿದ್ಧ ವಕೀಲರೆನಿಸಿದರು. ಅವರ ಚಿತ್ತಾಕರ್ಷಕವಾದ ಮಧುರವಾದ ಮಾತಿನ ರೀತಿ, ಅತಿ ವಿರಳವಾದ ವಿವೇಚನಾಶಕ್ತಿ, ಅವರ್ಣನೀಯ ವಿದ್ವತ್ತು ನ್ಯಾಯಾಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಸಭೆ, ಸಮ್ಮೇಳನಗಳಲ್ಲೂ ಕೇಳಿಬರಲಾರಂಭಿಸಿದವು. ಜನಮಾನಸದಲ್ಲಿ ದಿನಗಳೆದಂತೆ ಶ್ರೀಮಾಳವೀಯ ಅವರು ಚಿರಂತನವಾದ ಸ್ಥಾನವನ್ನು ಪಡೆಯುತ್ತ ನಡೆದರು.

ಅಸಾಧಾರಣ ಬುದ್ಧಿಶಕ್ತಿ, ಒಳ್ಳೆಯ ಮಾತಿನ ಶಕ್ತಿ, ತಾಳ್ಮೆ, ಕಷ್ಟಪಟ್ಟು ಕೆಲಸ ಮಾಡುವ ಸ್ವಭಾವ – ಎಲ್ಲ ಪಡೆದಿದ್ದ ಮಾಳವೀಯರು ವಕೀಲರಾಗಿ ಬೇಕಾದಷ್ಟು ಹಣವನ್ನು ಸುಲಭವಾಗಿ ಸಂಪಾದಿಸಬಹುದಾಗಿತ್ತು. ಆದರೆ ಅವರು ಇಡೀ ಜೀವನಪರ್ಯಂತ ಅಸತ್ಯ ಮತ್ತು ನಿರರ್ಥಕ “ಕೇಸು” ಹಿಡಿಯಲೇ ಇಲ್ಲ. ನಿರಪರಾಧಿಗಳು, ಬಡವರು, ದೀನರ ಪರವೇ ಅವರು ವಕಾಲತ್ತು ವಹಿಸಿ, ವಾದಿಸಿ, ಜಯಶೀಲರಾಗುತ್ತಿದ್ದರು.

ರಾಷ್ಟ್ರೀಯ ಭಿಕಾರಿ

ಭಾರತದಲ್ಲಿ ಸ್ವಾತಂತ್ರ್ಯ ಸಾಧನೆಯ ಭವನದ ಹೊರನೋಟದಲ್ಲಿ ಮಹಾತ್ಮಾಗಾಂಧಿ, ಸುಭಾಷ್ ಚಂದ್ರಬೋಸರು ಹೇಗೆ ಕಾಣಿಸುತ್ತಾರೋ, ಹಾಗೆ ಶ್ರೀ ಮಾಳವೀಯ ಕಾಣಿಸುವುದಿಲ್ಲ. ಆದರೆ ಅವರು ಆ ಭವನದ ಆಸ್ತಿವಾರವಿದ್ದಂತೆ! ಗಾಂಧೀಜಿ “ರಾಷ್ಟ್ರಪಿತ” ಎನಿಸಿದ್ದಾರೆ. ಶ್ರೀ ಮಾಳವೀಯ ಅವರು “ರಾಷ್ಟ್ರಗುರು” ಎನಿಸಿದ್ದಾರೆ.

೧೮೫೭ರಲ್ಲಿ ಭಾರತದ ಸರ್ಕಾರ ಕಲ್ಕತ್ತ, ಮುಂಬಯಿ ಮತ್ತು ಮದ್ರಾಸ್‌ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತು. ಈ ವಿಶ್ವವಿದ್ಯಾಲಯಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳನ್ನೇ ಅನುಕರಿಸಿದ್ದವು.

ಭಾರತದಲ್ಲಿಯ ಬಹುಮಂದಿಗೆ ಇಂಗ್ಲಿಷರ ಭಾಷೆ, ಅವರ ನಡೆ, ಆಚಾರ, ಸಂಸ್ಕೃತಿ ಇವುಗಳಲ್ಲಿಯೇ ಹೆಮ್ಮೆ ಎಂದು ಹೇಳಿತಲ್ಲವೆ? ಭಾರತೀಯವಾದುದೆಲ್ಲ ಹೀನಾಯ ಎಂಬ ಭಾವನೆ ಬೆಳೆಯುತ್ತಿತ್ತು. ಉದ್ದಾಮ ವಿದ್ವಾಂಸರೂ ರಾಷ್ಟ್ರಪ್ರೇಮಿಗಳೂ ಆಗಿದ್ದ ಮಾಳವೀಯರಿಗೆ ಭಾರತೀಯ ಸಂಸ್ಕೃತಿಗೆ ತಕ್ಕ ಗೌರವ ದೊರೆಯಬೇಕು, ವಿದ್ಯಾವಂತರು ಇದನ್ನು ತಿಳಿದುಕೊಳ್ಳಬೇಕು ಎಂದು ತವಕ. ಇದಕ್ಕಾಗಿ ವಾರಣಾಸಿ (ಕಾಶಿ)ಯಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಅವರ ಹಂಬಲ.

ಒಂದು ವಿಶ್ವವಿದ್ಯಾಲಯದ ಸ್ಥಾಪನೆ ಸುಲಭವಾದ ಕೆಲಸವೆ? ಒಂದು ಶಾಲೆಯನ್ನು ಪ್ರಾರಂಭಿಸಿ ನಡೆಸುವುದೇ ಕಷ್ಟ. ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವುದು ಅದೂ ಒಬ್ಬ ವ್ಯಕ್ತಿಯ ಪ್ರಯತ್ನದಿಂದ? ಆದರೆ ಈ ಜ್ಞಾನಗಂಗೆಯ ಭಕ್ತ, ಹೊಸ ಭಗೀರಥ ನಿರ್ಧಾರ ಮಾಡಿಬಿಟ್ಟಿದ್ದ.

ಭಾರತ ಕಾಂಗ್ರೆಸ್ಸಿನ ಇಪ್ಪತ್ತೊಂದನೆಯ ಅಧಿವೇಶನವು ಕಾಶಿಯಲ್ಲಿ ಸೇರಿತ್ತು. ಶ್ರೀಗೋಪಾಲಕೃಷ್ಣ ಗೋಖಲೆ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಆ ಸಮಯದ ಸದುಪಯೋಗ ಪಡೆದು ಪಂಡಿತ ಮಾಳವೀಯ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ಒಂದು ಕಡೆ ಕರೆದು, ಸಭೆ ಸೇರಿಸಿ ಅಲ್ಲಿ ಭಾಷಣ ಮಾಡುತ್ತ ಕಾಶಿಯಲ್ಲಿ ಒಂದು ಹಿಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಎಲ್ಲರೂ ಹೃತ್ಪೂರ್ವಕವಾಗಿ ಅದನ್ನು ಸ್ವಾಗತಿಸಿದರು. ಸುಖ್ಯಾತ ನಾಯಕಮಣಿ ಶ್ರೀ ಸುರೇಂದ್ರನಾಥ ಬ್ಯಾನರ್ಜಿ ಅವರು ಎದ್ದು ನಿಂತು “ಕಾಶಿ ಹಿಂದು ವಿಶ್ವವಿದ್ಯಾಲಯಕ್ಕೆ ಯೋಗ್ಯ ಇಂಗ್ಲೀಷ್‌ಪ್ರಾಧ್ಯಾಪಕ ದೊರೆಯುವ ತನಕ ನಾನು ಉಚಿತವಾಗಿ ಆ ಕೆಲಸ ನಿರ್ವಹಿಸುತ್ತೇನೆಂದು ವಚನ ಕೊಡುತ್ತೇನೆ” ಎಂದು ಘೋಷಿಸಿದರು.

ಇಂದು ಯಾವ ಪುಣ್ಯಭೂಮಿಯಲ್ಲಿ ಕಾಶಿ ಹಿಂದು ವಿಶ್ವವಿದ್ಯಾಲಯ ಸ್ಥಾಪಿತವಾಗಿದೆಯೋ ಆ ಸ್ಥಳವನ್ನು ಪಡೆಯಲು ಮಾಳವೀಯ ಅವರು ದೃಢನಿಶ್ಚಯ ಮಾಡಿದರು. ಆ ಜಾಗ ಕಾಶಿಯ ರಾಜರಿಗೆ ಸೇರಿದಾಗಿತ್ತು. ಆ ದೊರೆ “ನಿಮಗೆ ಎಷ್ಟು ಬೇಕೋ ಅಷ್ಟು ದ್ರವ್ಯ ಕೊಟ್ಟೇನು, ಆದರೆ ಆ ಸ್ಥಳವನ್ನು ಮಾತ್ರ ನಾನು ಕೊಡಲಾರೆ. ಏಕೆಂದರೆ ಅದರ ಮೇಲೆ ನನಗೆ ಅಷ್ಟು ಮೋಹವಿದೆ” ಎಂದು ಹೇಳಿದರು. ಆದರೇನು? ದೈವೀ ಸಂಕಲ್ಪದಂತೆ ಅ ಸ್ಥಳ ಮಾಳವೀಯ ಅವರಿಗೆ ಅದೇ ದೊರೆಯಿಂದಲೇ ಮಕರ ಸಂಕ್ರಾಂತಿಯ ಶುಭದಿನ ದಾನವಾಗಿ ಲಭ್ಯವಾಯಿತು.

ಅನಂತರ ಬಂದಿತು ಹಣದ ಚಿಂತೆ. ಸರಿ, ಮಾಳವೀಯರು ದೇಶಸಂಚಾರ ಕೈಗೊಂಡರು. ಹಿಂದು ವಿಶ್ವವಿದ್ಯಾಲಯಕ್ಕಾಗಿ ಕೈಯೊಡ್ಡಿ ಬೇಡಲಾರಂಭಿಸಿದರು. ಹೋದಹೋದಲ್ಲೆಲ್ಲ ಅವರ ಜೋಳಿಗೆ ತುಂಬುತ್ತ ನಡೆಯಿತು. ಈ ರೀತಿ ಹಣಸಂಗ್ರಹಕ್ಕಾಗಿ ಕೈಗೊಂಡ ಭಾರತ ಯಾತ್ರೆಯ ಸಮಯದಲ್ಲಿ ಶ್ರೀ ಮಾಳವೀಯ ಅವರು ನಿಜಾಮರ ಹೈದರಾಬಾದಿಗೆ ಆಗಮಿಸಿದರು. ಇವರು ಬಂದ ಉದ್ದೇಶ ನಿಜಾಮರಿಗೆ ವಿದಿತವಾಯಿತು. ಆದರೆ ಮುಸ್ಲಿಮರಾದ ನಿಜಾಮರಿಗೆ ಹಿಂದು ವಿಶ್ವವಿದ್ಯಾಲಯದ ಹೆಸರಿನ ಸಂಸ್ಥೆಯೊಂದಕ್ಕೆ ದಾನ ಕೊಡುವ ಮನಸ್ಸು ಬರಲಿಲ್ಲ. ತಮ್ಮ ನಿರ್ಧಾರವನ್ನು ಸ್ಪಷ್ಟವಾದ ಮಾತಿನಲ್ಲಿ ನಿಜಾಮರು ತಿಳಿಸಿಯೂ ಬಿಟ್ಟರು. ಆದರೆ ಮಾಳವೀಯರಿಗೆ ನಿಜಾಮರಿಂದ ದಾನ ಸ್ವೀಕರಿಸದೆ ಬರಿಗೈಯಿಂದ ಹಿಂದಿರುಗಿ ಹೋಗುವ ಮನಸ್ಸು ಇರಲಿಲ್ಲ.

ಹೈದರಾಬಾದಿನಲ್ಲಿ ಓರ್ವ ಹಿಂದು ಶ್ರೀಮಂತ ಆ ದಿನ ನಿಧನ ಹೊಂದಿದ್ದ. ಆತನ ಶವದ ಮೆರವಣಿಗೆ ಅತ್ಯಂತ ವೈಭವದಿಂದ ಹೊರಟಿತ್ತು. ಶವದ ಮೇಲೆ ಆತನ ಭಕ್ತರು ಹಣವನ್ನು ತೂರುತ್ತಿದ್ದರು. ಇದನ್ನು ಕಂಡ ಶ್ರೀ ಮಾಳವೀಯರು ಶವದ ಮೇಲಿಂದ ಬಿದ್ದ ಹಣವನ್ನೆಲ್ಲ ಆರಿಸಿಕೊಂಡು ತಮ್ಮ ಜೋಳಿಗೆಯಲ್ಲಿ ಹಾಕಿಕೊಳ್ಳಲಾರಂಭಿಸಿದರು. ಇದನ್ನು ಕಂಡು ಜನರಿಗೋ ಪರಮಾಶ್ಚರ್ಯವಾಯಿತು. ಕೆಳಗೆ ಬಿದ್ದ ದ್ರವ್ಯವನ್ನೆಲ್ಲ ಮಹಾಜನರು ಆರಿಸಿ ಮಾಳವೀಯರ ಜೋಳಿಗೆಗೆ ಹಾಕಿದರು. ಅವರ ಜೋಳಿಗೆ ಭರ್ತಿಯಾಯಿತು.

ನಿಜಾಮರ ಕಿವಿಗೂ ಈ ವಾರ್ತೆ ಬಿದ್ದಿತು. ಅವರಿಗೆ ನಾಚಿಕೆ ಎನಿಸಿತು. ಆಗ ನಿಜಾಮರೂ ಸಹ ಮಾಳವೀಯರ ಅಪೇಕ್ಷೆಯಂತೆ ಅವರಿಗೆ ಧಾರಾಳವಾಗಿ ದ್ರವ್ಯ ದಾನವಿತ್ತು ಧನ್ಯರಾದರು.

ಮಾಳವೀಯರು ಹಿಮಾಚಲದಿಂದ ಕನ್ಯಾಕುಮಾರಿಯವರೆಗೆ, ಪೇಶಾವರದಿಂದ ಬ್ರಹ್ಮದೇಶದವರೆಗೆ ಅಖಂಡವಾಗಿ ಸಂಚರಿಸಿದರು. ಹೋದ ಹೋದಲ್ಲೆಲ್ಲ ಮಹಾಕಾರ್ಯಕ್ಕಾಗಿ “ಭಿಕ್ಷೆ” ಬೇಡಿದರು.

ಹೈದರಾಬಾದಿನ ನಿಜಾಮರೂ ಹಿಂದು ವಿಶ್ವವಿದ್ಯಾಲಯಕ್ಕಾಗಿ ಮಾಳವೀಯರಿಗೆ ಹಣ ಕೊಟ್ಟರು.

ಒಮ್ಮೆ ದರ್ಭಾಂಗದಲ್ಲಿ ಮಾಳವೀಯರು ಶ್ರೀ ಮದ್ಭಾಗವತ ಪ್ರವಚನ ನಡೆಸಿದರು. ಮಂಗಳದ ದಿನ ಮಹಾರಾಜರು ಆಗಮಿಸಿದ್ದರು. ಶ್ರೀಮಾಳವೀಯ ಅವರ ಅದ್ಭುತ ವಾಣಿಯನ್ನಾಲಿಸಿ ಮುಗ್ಧರಾದ ಮಹಾರಾಜರು ಕಾಶಿ ಹಿಂದು ವಿಶ್ವವಿದ್ಯಾಲಕ್ಕೆ ಇಪ್ಪತ್ತೈದು ಲಕ್ಷ ರೂ. ದಾನವಿತ್ತರಷ್ಟೇ ಅಲ್ಲ, ತಮ್ಮ ಶೇಷಾಯುಷ್ಯವನ್ನು ಈ ಪವಿತ್ರಕಾರ್ಯಕ್ಕೆ ಮೀಸಲು ಮಾಡುವುದಾಗಿ ಘೋಷಿಸಿದರು. ಮಾಳವೀಯರ ಕಣ್ಣುಗಳು ಆನಂದಭಾಷ್ಪದಿಂದ ತುಂಬಿ ತುಳುಕಿದವು.

ದರ್ಭಾಂಗ ಮಹಾರಾಜರು ಆಡಿದಂತೆ ಮಾಡಿದರು. ಮಾಳವೀಯರ ಜೊತೆಗೆ ಅನೇಕ ರಾಜ್ಯಗಳಲ್ಲಿ ಸಂಚರಿಸಿ ಅಪಾರ ನಿಧಿ ಸಂಗ್ರಹಿಸಿಕೊಟ್ಟರು.

ಮಹಾಮನ ಮಾಳವೀಯರು ದೇಶದಲ್ಲಿ ಸಂಚರಿಸಿ ಒಟ್ಟು ಒಂದು ಕೋಟಿ ಮೂವತ್ತನಾಲ್ಕು ಲಕ್ಷ ರೂಗಳನ್ನು ಸಂಗ್ರಹಿಸಿ “ಭಿಕ್ಷುಕ ಸಮ್ರಾಟ್‌” ಎಂಬ ಹೆಸರನ್ನು ಸಂಪಾದಿಸಿದರು.

ಒಮ್ಮೆ ಗಾಂಧೀಜಿ “ನಾನು ಭಿಕ್ಷಾವೃತ್ತಿಯ ದಿವ್ಯ ಕಲೆಯನ್ನು ಅಣ್ಣ ಶ್ರೀಮಾಳವೀಯ ಅವರಿಂದ ಕಲಿತಿದ್ದೇನೆ ಎಂದು ಉದ್ಗಾರ ತೆಗೆದರು.

ಕಾಶಿ ಹಿಂದು ವಿಶ್ವವಿದ್ಯಾಲಯ

೧೯೧೬ನೇಯ ಫೆಬ್ರವರಿ ನಾಲ್ಕನೆಯ ತಾರೀಖು. ಅಂದು ವಸಂತ ಪಂಚಮಿಯ ಶುಭದಿನ. ಕಾಶಿಯಲ್ಲಿ ಎಲ್ಲಿ ನೋಡಿದರಲ್ಲಿ ಹಬ್ಬದ ವಾತಾವರಣ. ಪವಿತ್ರ ಗಂಗಾತೀರದಲ್ಲಿ ಹಿಂದು ವಿಶ್ವವಿದ್ಯಾಲಯದ ಶಂಕುಸ್ಥಾಪನೆಯಾಯಿತು. ಅದನ್ನು ನೆರವೇರಿಸಲು ಭಾರತದ ಅಂದಿನ ವೈಸರಾಯ್‌ಮತ್ತು ಗೌರ‍್ನರ್‌ಜನರಲ್‌ಶ್ರೀ ಹಾರ್ಡಿಂಜ್‌ಬಂದಿದ್ದರು. ಸಮಾರಂಭಕ್ಕೆ ಭಾರತದ ನಾನಾ ಕಡೆಯ ಪ್ರತಿಷ್ಠಿತ ವ್ಯಕ್ತಿಗಳು, ರಾಷ್ಟನಾಯಕರು, ಹಿಂದು, ಮುಸ್ಲಿಂ, ಪಾರಸಿ, ಕ್ರೈಸ್ತ ಸಮಾಜದ ಪ್ರತಿಷ್ಠಿತ ಸ್ತ್ರೀ ಪುರುಷರು ಕ್ಕಿಕ್ಕಿರಿದು ತುಂಬಿದ್ದರು. ರಾಜಮಾಹಾರಾಜರು ಆಗಿಮಿಸಿ ಶೋಭೆ ತಂದಿದ್ದರು.

ವೇದಗಳು, ಉಪನಿಷತ್ತು, ಗೀತೆ, ಮಹಾಭಾರತ, ರಾಮಾಯಣ, ಶ್ರುತಿ, ಸ್ಮೃತಿ, ಪುರಾಣ-ಇವುಗಳ ಅಧ್ಯಯನ, ಭಾರತ ಸಂಸ್ಕೃತಿಯ, ಸಂಸ್ಕೃತ ಭಾಷೆಯ ಸಂರಕ್ಷಣ- ಇವು ಪ್ರಧಾನವಾದ ಅಂಶಗಳು ಎಂದು ಮಾಳವೀಯರು ಹೇಳುತ್ತಿದ್ದರು. ಅವರ ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರಲೆಂದೇ ಈ ವಿಶ್ವವಿದ್ಯಾಲಯವನ್ನು ಅವರು ಸಂಸ್ಥಾಪಿಸಿದರು. ಅದು ಅವರ ಜೀವದುಸಿರಾಯಿತು.

ಯಾವ ದೇಶವೇ ಆಗಲಿ, ತನ್ನ ಜನ ಬಡತನದಲ್ಲಿ ತೊಳಲದಂತೆ ನೋಡಿಕೊಳ್ಳಬೇಕು. ಹೊಟ್ಟೆ ತುಂಬುವಷ್ಟು ಊಟ, ಮೈ ಮುಚ್ಚುವಷ್ಟು ಚಳಿಯಾಗದಷ್ಟು ಬಟ್ಟೆ, ಇರಲು ನೆಮ್ಮದಿಯಾದ ಮನೆ ಇಷ್ಟಾದರೂ ಪ್ರತಿಯೊಬ್ಬನಿಗೆ ಇರಬೇಕು ನಿಜ. ಆದರೆ ಕೇವಲ ಕೃಷಿ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಿದ ಮಾತ್ರಕ್ಕೆ ಸರ್ವ ಸಮೃದ್ಧಿಯನ್ನು ಪಡೆದಂತಾಗಲಿಲ್ಲ. ಆಚಾರ ಉತ್ತಮಗೊಳ್ಳುವುದು ಆರ್ಥಿಕ ಉನ್ನತಿಗಿಂತ ಮಿಗಿಲಾದದ್ದು. ಪ್ರತಿಯೊಂದು ರಾಷ್ಟ್ರವೂ ತನ್ನ ಧರ್ಮದ ರಕ್ಷಣೆಗೆ ಸರ್ವಸಿದ್ಧವಾಗಿರಬೇಕು. ಅಪೂರ್ವ ಪರಂಪರೆಯಿಂದ ಕೂಡಿದ ಹಿಂದು ಧರ್ಮದ ರಕ್ಷಣೆಯನ್ನು ನಮ್ಮ ರಾಷ್ಟ್ರದ ನವ ಯುವಕರು ಮಾಡದೇ ಇದ್ದರೆ ರಾಷ್ಟ್ರದ ತುಂಬೆಲ್ಲ ವಿದ್ಯಾಭ್ಯಾಸ ಇಲ್ಲದವರು, ವಿದ್ಯಾಭ್ಯಾಸವಿದ್ರೂ ವಿದ್ಯೆಯನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸುವವರು, ಉಪಯೋಗವಿಲ್ಲದ ನಿಕೃಷ್ಟ ಮನುಷ್ಯರು ಕಂಡುಬರುತ್ತಾರೆ. ಇದರ ಫಲ ಧರ್ಮದ ಸರ್ವನಾಶ. ಧರ್ಮಕ್ಕೆ ಸಂಕುಚಿತ ಅರ್ಥ ಕೊಡಬೇಕಾಗಿಲ್ಲ. ಆದರೆ ಧರ್ಮವನ್ನು ತಿರಸ್ಕರಿಸಬೇಕಾಗಿಯೂ ಇಲ್ಲ. ಹಿಂದು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಬಾಳಿಗೆ ದಿವ್ಯಜ್ಯೋತಿಯಾಗಬಲ್ಲದು. ಭಾರತದ ಸಂಸ್ಕೃತಿಯನ್ನು ಭಾರತದ ಯುವ ಪೀಳಿಗೆ ತಿಳಿದುಕೊಳ್ಳಬೇಕು.

ಅಂತೆಯೇ ಹಿಂದು ಧರ್ಮದ ಸಂರಕ್ಷಣೆಗಾಗಿ ಏನೆಲ್ಲ ಶಿಕ್ಷಣ ಕೊಡಬೇಕೋ ಅದಕ್ಕಾಗಿಯೇ ಕಾಶಿ ಹಿಂದು ವಿಶ್ವವಿದ್ಯಾಲಯ ತಲೆಯೆತ್ತಿದೆ. ಅಲ್ಲಿ ನಮ್ಮ ರಾಷ್ಟ್ರದ ನವಯುವಕರು ಉದಾರ ಶಿಕ್ಷಣವನ್ನು ಪಡೆಯಲಿ. ಜೊತೆಜೊತೆಗೆ ಅನ್ಯ ಧರ್ಮಗಳ ತುಲನಾತ್ಮಕ ಜ್ಞಾನವನ್ನೂ ಅವರು ಪಡೆಯಲು ಪ್ರಯತ್ನಕೈಗೊಳ್ಳಲಿ.

ಇದು ಪಂಡಿತ ಮದನಮೋಹನ ಮಾಳವೀಯ ಅವರ ಅಂತರಂಗದ ಅಪೇಕ್ಷೆ. ಅವರ ಆಶೋತ್ತರದ ಪ್ರತಿರೂಪವೇ ಕಾಶಿ ಹಿಂದು ವಿಶ್ವವಿದ್ಯಾಲಯ ಎಂದು ಹೇಳಿದರೆ ಅತ್ಯುಕ್ತಿ ಏನಲ್ಲ.

ಆದರ್ಶ ಪತ್ರಕರ್ತ

ಮಾಳವೀಯರು ದೇಶಸೇವೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶಿಸಿದರು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಅವರದು ವಿಶಿಷ್ಟ ಸೇವೆ. ಇದರಿಂದ ಅವರು ಚಿರಂಜೀವಿಗಳಾದರು. ಆದರೆ ಪತ್ರಿಕಾ ರಂಗದಲ್ಲಿ ಅವರು ವಹಿಸಿದ ಪಾತ್ರ ಸಣ್ಣದೇನೂ ಅಲ್ಲ.

“ಹಿಂದುಸ್ಥಾನ್‌” ದಿನಪತ್ರಿಕೆಯ ಸಂಪದಾಕರಾಗಿ ಅಧಿಕಾರ ಸೂತ್ರಗಳನ್ನು ವಹಸಿಕೊಳ್ಳುವಾಗ ಪತ್ರಿಕೆಯ ಮಾಲೀಕರಾದ ರಾಜಾ ರಾಮಪಾಲ ಸಿಂಹರಿಗೆ ಮಾಳವೀಯರು, “ಸಂಪಾದಕನ ಕೆಲಸದಲ್ಲಿ ಎಳ್ಳಿನಷ್ಟೂ ಹಸ್ತಕ್ಷೇಪ ಮಾಡಕೂಡದು” ಎಂದು ತಿಳಿಸಿದ್ದರು. ಅವರು ಅದಕ್ಕೊಪ್ಪಿ ಸಂಪೂರ್ಣ ಸ್ವಾತಂತ್ರ್ಯದ ಭರವಸೆ ಇತ್ತದ್ದರಿಂದಲೇ ಸಂಪಾದಕರಾಗಿ ಕಾರ್ಯನಿರ್ವಹಿಸುವ ಗುರುತರ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಜೊತೆಗೆ ಆ ಕಾಲದಲ್ಲಿನ ಪತ್ರಿಕಾ ರಂಗದಲ್ಲಿ ಅತಿರಥ ಮಹಾರಥರೆಂದು ಪರಿಗಣಿತರಾಗಿದ್ದ ಪಂಡಿತ ಪ್ರತಾಪ ನಾರಾಯಣ ಮಿಶ್ರ, ಶ್ರೀ ಬಾಲಮುಕುಂದ ಗುಪ್ತರ ಹತ್ತಿರದ ಸ್ನೇಹವನ್ನು ಸಂಪಾದಿಸಿದರು.

ಮಾಳವೀಯರು ಅನೇಕ ಸಣ್ಣ ಪುಟ್ಟ ಪತ್ರಿಕೆಗಳಿಗೆ ಮಾರ್ಗದರ್ಶಕರಾಗಿದ್ದರು. ದೆಹಲಿಯಿಂದ ಹೊರಡುತ್ತಿದ್ದ “ಗೋಪಾಲ” ಎಂಬ ಸಾಪ್ತಾಹಿಕಕ್ಕೆ ಇವರದೇ ಸಂರಕ್ಷಣೆ. ಹಾಗೆಯೇ ಬಾಬೂ ಪುರುಷೋತ್ತಮದಾಸ್‌ಟಂಡನ್‌ಅವರ ಸಂಪದಾದಕತ್ವದಲ್ಲಿನ “ಅಭ್ಯುದಯ” ಪತ್ರಿಕೆಗೂ ಇವರೇ ಸ್ಫೂರ್ತಿದಾಯಕರೂ, ಜೀವ ಸ್ವರೂಪರು ಆಗಿದ್ದರು.

ಲೋಕವಿಖ್ಯಾತರಾದ ಪತ್ರಕರ್ತರಲ್ಲಿ ಇರಬೇಕಾದ ಸಮಸ್ತ ಗುಣಗಳೂ ಇವರಲ್ಲಿ ಮನೆ ಮಾಡಿದ್ದವು. ಪತ್ರಿಕೆಯನ್ನು ಅವರು ಬಳಸಿದುದು ದೇಶದ ಸೇವೆಗಾಗಿ. ಅಂತೆಯೇ ಇವರಿಂದ ಅಂದಿನ ಪತ್ರಿಕಾ ಕ್ಷೇತ್ರ ಸಮೃದ್ಧವಾಯಿತು.

ಪತ್ರಕರ್ತನಾದವನಿಗೆ ಆದರ್ಶಗಳಿರಬೇಕು. ಅವನು ಮಾನ-ಮರ್ಯಾದೆ, ಘನತೆ, ಗಾಂಭೀರ್ಯಗಳಿಂದ ಕೂಡಿದವನಾಗಿರಬೇಕು; ಸದ್ಗುಣಶೀಲನೂ, ಸಚ್ಚಾರಿತ್ರ್ಯ ವಂತನೂ, ಸತ್ಯ, ಧರ್ಮ ಮೊದಲಾದ ಮಹಾದಾದರ್ಶಗಳನ್ನು ಪಾಲಿಸಿಕೊಂಡು ಬರಬೇಕು ಎಂದು ಮಾಳವೀಯರು ಹೇಳುತ್ತಿದ್ದರು. ಅವರೇ ಸ್ವತಃ ಅಂತಹ ಪತ್ರಕರ್ತರೂ ಆಗಿದ್ದರು.

ಮಾಳವೀಯರು ದೆಹಲಿಯಲ್ಲಿ “ಹಿಂದೂಸ್ಥಾನ್‌ಟೈಮ್ಸ್‌” ಪತ್ರಿಕೆಯನ್ನು ಕೊಂಡುಕೊಂಡು ಅದನ್ನು ಅನೇಕ ವರ್ಷಗಳವರೆಗೆ ಅತ್ಯಂತ ಯಶಸ್ವಿಯಾಗಿ ನಡೆಸಿದರು. ಮುಂದೆ ಕೆಲಸ ಬಹಳ ಹೆಚ್ಚಾದಾಗ ಈ ಪತ್ರಿಕೆಯನ್ನು ಒಂದು ಸಂಸ್ಥೆಗೆ ಒಪ್ಪಿಸಿದರು. ಇಂದು ದೆಹಲಿ ನಗರದಿಂದ ಪ್ರಕಟಗೊಳ್ಳುತ್ತಿರುವ “ಹಿಂದುಸ್ಥಾನ್‌ಟೈಮ್ಸ್‌” ಮತ್ತು “ಹಿಂದುಸ್ಥಾನ್” ಎಂಬ ಎರಡು ಪತ್ರಿಕೆಗಳು ಮಾಳವೀಯರಿತ್ತ ಪ್ರೇರಣೆಯ ಫಲಗಳಾಗಿವೆ.

ಚಕ್ರಗೋಷ್ಠಿಯಲ್ಲಿ

ಭಾರತಕ್ಕೆ ಸ್ವರಾಜ್ಯ ಕೊಡುವ ಸಂಬಂಧದಲ್ಲಿ ಲಂಡನ್‌ನಗರದಲ್ಲಿ ೧೯೩೧ರಲ್ಲಿ ದ್ವೀತಿಯ ಚಕ್ರಗೋಷ್ಠಿ ಏರ್ಪಟ್ಟಿತ್ತು. ಬ್ರಿಟನ್ನಿನ ನಾಯಕರೊಡನೆ ಚರ್ಚೆಗಾಗಿ ಹಲವರು ಭಾರತೀಯ ನಾಯಕರು ಹೋಗಬೇಕಾಯಿತು. ಅಲ್ಲಿಗೆ ತಮ್ಮೊಡನೆ ಮಾಳವೀಯರನ್ನು ಗಾಂಧೀಜಿ ಕರೆದೊಯ್ಯಲು ನಿರ್ಧರಿಸಿದ್ದರು.

ಮಾಳವೀಯರು ಪರಮ ಧರ್ಮಿಷ್ಠರು. ಅವರು ಲಂಡನ್ನಿಗೆ ಹೋದಾಗ ತಮ್ಮೊಡನೆ ಗಂಗಾನದಿಯ ನೀರನ್ನು ಕೊಂಡೊಯ್ಯಲು ನಿರ್ಧರಿಸಿ ಸಮುದ್ರಯಾನಕ್ಕೆ ಸಿದ್ಧರಾದರು.

ಲಂಡನ್‌ಚಕ್ರಗೋಷ್ಠಿಯಲ್ಲಿ ಅವರು ವಹಿಸಿದ ಪಾತ್ರ ಚಿರಸ್ಮರಣೀಯ. ಮಾಂಟೆಗೋ ಅವರು ತಮ್ಮ “ಇಂಡಿಯನ್‌ಡೈರಿ” ಯಲ್ಲಿ ಮಾಳವೀಯರು ವಹಿಸಿದ ಪಾತ್ರ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ತೇಜಬಹದ್ದರೂರ್ ಸಪ್ರು ಅವರು ಕೂಡ ಮಾಳವೀಯರ ಅಪ್ರತಿಮ ರ್ಧೈಯವನ್ನು ಕುರಿತು ಮನಬಿಚ್ಚಿ ಹೊಗಳಿದ್ದಾರೆ. ಆ ಮೇರೆಗೆ ಮಾಳವೀಯರು ದೂರದೇಶದಲ್ಲೂ ತಮ್ಮ ಅಸಾಧಾರಣ ಪ್ರತಿಭೆಯಿಂದ ಮಹಾರಾಜನೀತಿಜ್ಞರ ಹೃದಯವನ್ನು ಗೆದ್ದರು.

ದಿನಚರ್ಯೆ

ಮಾಳವೀಯರು ಪ್ರತಿದಿನ ಬಹು ಕ್ರಮವಾಗಿ, ನಿಯಮವಾಗಿ ಕೆಲಸ ಮಾಡುತ್ತಿದ್ದರು.

ಪ್ರತಿನಿತ್ಯ ಉಷಃಕಾಲದಲ್ಲಿ ಏಳುತ್ತಿದ್ದರು. ನಿತ್ಯವೂ ವ್ಯಾಯಾಮ ಮಾಡುತ್ತಿದ್ದರು. ಸ್ನಾನ ಮಾಡುವಾಗ ಸ್ವದೇಶಿ ಸಾಬೂನನ್ನೇ ಉಪಯೋಗಿಸುತ್ತಿದ್ದರು. ಸ್ನಾನಾ ನಂತರ ರೇಷ್ಮೆ ಪೀತಾಂಬರ ಉಟ್ಟು ಇನ್ನೊಂದು ರೇಷ್ಮೆ ಉತ್ತರೀಯ ಹೊದ್ದು ಸಂಧ್ಯಾವಂದನೆ ಮಾಡುತ್ತಿದ್ದರು. ಹಣೆಯ ಮೆಲೆ ಎದ್ದು ಕಾಣುವಂತೆ ಶ್ರಿಗಂಧದ ತಿಲಕ ಇಟ್ಟುಕೊಳ್ಳುತ್ತಿದ್ದರು. ಸಂಧ್ಯಾವಂದನೆಯ ನಂತರ ಸ್ವಲ್ಪ ಬೆಚ್ಚಗಿನ ಹಾಲು ಕುಡಿಯುತ್ತಿದ್ದರು. ಯಾವಾಗಲೂ ಅವರು ಬಿಳಿಯ ಬಟ್ಟೆಯನ್ನೇ ಧರಿಸುತ್ತಿದ್ದರು. ಸದಾ ತಲೆಯ ಮೆಲೆ ಪೇಟ, ಮಧ್ಯಾಹ್ನ ಒಂದರಿಂದ ಎರಡರವರೆಗೆ ತಮ್ಮ ಸಂದರ್ಶನಕ್ಕೆ ಬಂದವರೊಂದಿಗೆ ಆತ್ಮೀಯವಾಗಿ ಸಂಭಾಷಿಸುತ್ತಿದ್ದರು.

ಅವರು ಊಟ ಅತ್ಯಂತ ಸಾದಾ ರೀತಿಯದಾಗಿರತ್ತಿತ್ತು. ಮಸಾಲೆ ಹಾಕಿದ ಪದಾರ್ಥಗಳನ್ನು ಅವರು ಅಪೇಕ್ಷಿಸುತ್ತಿರಲಿಲ್ಲ. ಭೋಜನಾನಂತರ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದರು. ತಾವು ಮಲಗುವ ಕಡೆಗೆ ತಮ್ಮ ಪೂಜ್ಯ ಮಾತಾಪಿತೃಗಳ ದೊಡ್ಡ ತೈಲಚಿತ್ರಗಳನ್ನು ಹಾಕಿಕೊಂಡಿದ್ದರು. ರಾತ್ರಿ ತಂದೆತಾಯಿಗಳ ಚಿತ್ರಗಳಿಗೆ ನಮಸ್ಕಾರ ಮಾಡಿ, ದೇವರಿಗೆ ವಂದಿಸಿ ನಿದ್ರೆಹೋಗುತ್ತಿದ್ದರು.

ಮಾಳವೀಯರು ಜೀವಿಸಿರುವ ತನಕ ಪ್ರತಿವರ್ಷ ವಸಂತ ಪಂಚಮಿಯ ದಿನ (ಕಾಶಿ ಹಿಂದು ವಿಶ್ವವಿದ್ಯಾಲಯದ ಸ್ಥಾಪನೆ ಮಾಡಿದ ದಿನ) ಸಾರ್ವಜನಿಕರು ಅವರನ್ನು ಕಾಣಲು ಅವಕಾಶ ಇರುತ್ತಿತ್ತು. ಅವರು ಆಗ ಭಾಷಣವನ್ನು ಮಾಡುತ್ತಿದ್ದರು.

ಅವರ ಮಾತುಗಳನ್ನು ಕೇಳಲು ಸಾವಿರಾರು ಜನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಇತರರು ಸೇರುತ್ತಿದ್ದರು. ಮಾಳವೀಯರು ಬಹು ಸ್ಪಷ್ಟವಾಗಿ, ಮನಸ್ಸಿಗೆ ಮುಟ್ಟುವಂತೆ  ಭಾರತದ ಸಂಸ್ಕೃತಿಯನ್ನು ಧರ್ಮವನ್ನೂ ಹಿಂದು ವಿಶ್ವವಿದ್ಯಾಲಯದ ಗುರಿಯನ್ನೂ ವಿವರಿಸುತ್ತಿದ್ದರು.

ಬಹು ಭಾಷಾ ಪಂಡಿತ

ಮಾಳವೀಯರಿಗೆ ಅನೇಕ ಭಾಷೆಗಳು ತಿಳಿದಿದ್ದವು. ಇಂಗ್ಲೀಷ್‌, ಹಿಂದಿ, ಉರ್ದು, ಮತ್ತು ಸಂಸ್ಕೃತಗಳಲ್ಲಿ ಅವರಿಗೆ ಅಸಾಧಾರಣ ಪಾಂಡಿತ್ಯ. ಇಂಗ್ಲೀಷಿನಲ್ಲಿ ಅವರು ಮಾತನಾಡುತ್ತಿದ್ದಾಗ ಇನ್ನಾವುದೇ ಭಾಷೆಯ ಒಂದೇ ಒಂದು ಪದವನ್ನಾದರೂ ಸೇರುಸುತ್ತಿರಲಿಲ್ಲ. ಹಾಗೆಯೇ ಸಂಸ್ಕೃತದಲ್ಲಿ ಮಾತನಾಡುವಾಗಲಂತೂ ಸಾಕ್ಷಾತ್‌ಸರಸ್ವತಿಯೇ ಅವರ ನಾಲಿಗೆಯಲ್ಲಿ ನರ್ತಿಸುತ್ತಾಳೋ ಎಂದು ಭಾಸವಾಗುತ್ತಿತ್ತು.

ಅವರ ವಾಗ್ಮೀಯತೆ ಎಷ್ಟು ಹೃದಯಸ್ಪರ್ಶಿಯೋ ಅವರ ಲೇಖನಕಲೆಯೂ ಅಷ್ಟೇ. ಅವರು ಬರೆದದ್ದೆಲ್ಲ ವಾಚರಕ ಹೃದಯವನ್ನೂ ಮನಸ್ಸನ್ನೂ ಸೂರೆಗೊಳ್ಳುತ್ತಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ- ಅವರು ಆಡಿದ್ದು ಅಣಿ ಮುತ್ತು, ಬರೆದದ್ದು ಬಂಗಾರ.

ಕ್ರಾಂತಿಕಾರಿ

ಮೆಲುನೋಟಕ್ಕೆ ಹಿಂದಿನ ಆಚಾರಗಳನ್ನು ಕಟ್ಟಿಕೊಂಡ ಆದರ್ಶವಾದಿ, ಪ್ರಾಚೀನ ಜೀವನಸಿದ್ಧಾಂತಗಳ ಪೂಜಾರಿ ಎಂದು ಕಂಡರೂ ಮಾಳವೀಯರು ಮಹಾ ಕ್ರಾಂತಿಶೀಲರಾಗಿದ್ದರು.

ಅಮೃತಸರದ (ಪಂಜಾಬ್‌) ಜಲಿಯನ್‌ವಾಲಾಬಾಗಿನಲ್ಲಿ ೧೯೧೯ನೆಯ ಏಪ್ರಿಲ್‌೧೩ರಂದು ಮಹಾ ದುರಂತ ಘಟನೆಯೊಂದು ನಡೆಯಿತು. ನಿಸ್ಸಹಾಯರಾಗಿದ್ದ ಸಭಿಕರನ್ನು ಗುಂಡಿಟ್ಟು ಕೊಲ್ಲಲಾಯಿತು. ಮುದುಕರು, ಎಳೆಯರು, ಗಂಡಸರು, ಹೆಂಗಸರು, ಎಂಬ ಗಣನೆಯಿಲ್ಲದೆ ಸರ್ಕಾರದ ಸೈನ್ಯ ಕೊಲೆ ನಡೆಸಿತು. ಆ ಹತ್ಯಾಕಾಂಡ ಕರ್ನಲ್‌ಡಯರ್‌ಎಂಬ ಸೇನಾಧಿಕಾರಿಯಿಂದ ನಡೆದಿತ್ತು. ಇಡೀ ದೇಶ ಅದನ್ನು ಕೇಳಿ ಕ್ಷೋಭೆಗೊಂಡಿತ್ತು.

ಈ ಹತ್ಯಕಾಂಡದ ಬಗ್ಗೆ ಮಾಳವೀಯರು ಸಿಮ್ಲಾದಲ್ಲಿ ಸೇರಿದ್ದ ಕೇಂದ್ರ ಶಾಸನಸಭೆಯಲ್ಲಿ ನಿರಂತರವಾಗಿ ಆರು ಗಂಟೆಗಳ ಕಾಲ ಉಜ್ವಲ ಭಾಷಣ ಮಾಡಿದರು. ಸಭೆಯ ಆಂಗ್ಲ ಸದಸ್ಯರೂ ಸಹ ಆ ಅದ್ಭುತ ವಾಗ್ವೈಖರಿಗೆ ಬೆರಗಾಗಿ ಹೋದರು.

೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಅದಕ್ಕೆ ಒಂದು ವರ್ಷ ಮೊದಲು ಬಂಗಾಳ ಪ್ರಾಂತದಲ್ಲಿ ನಡೆಯಬಾರದ ದುರಂತ ನಡೆದುಹೋಯಿತು. ಅನೇಕ ಮಂದಿ ಹಿಂದುಗಳು ತೊಂದರೆ ಪಡಬೇಕಾಯಿತು.

ನವಖಾಲಿ ಎಂಬ ಸ್ಥಳದಲ್ಲಂತೂ ಭೀಕರ ಕಗ್ಗೊಲೆಯಾಯಿತು. ನಿರಪರಾಧಿಗಳಿಗೆ, ಸಹಾಯಹೀನರಿಗೆ ತುಂಬ ಕಷ್ಟವಾಯಿತು.

ಪ್ರಾಂತದ ಸರ್ಕಾರ ಏನನ್ನೂ ಮಾಡಲಾರದೆ ಕೈಕಟ್ಟಿ ಕುಳಿತಿತು.

ಈ ಸುದ್ದಿ ಕೇಳಿದ ವೃದ್ಧ ಮಾಳವೀಯ  ಅವರು ತಳಮಳಗೊಂಡರು. ಆಗ ಬಲವಂತವಾಗಿ ಮುಸ್ಲಿಮರನ್ನಾಗಿ ಮಾಡಿದವರನ್ನು ಪುನಃ ಹಿಂದು ಧರ್ಮಕ್ಕೆ ಸೇರಿಸಿಕೊಳ್ಳಲು ಏನು ಸುಲಭೋಪಾಯ ಎಂದಾಗ ಮಾಳವೀಯರು ತಕ್ಷಣ ಹೇಳಿದರು. “ರಾಮನಾಮ-ಗಂಗಾಜಲ, ಇಷ್ಟೇ ಸಾಕು” ಎಂದು.

ಹಿಂದು ಸಂಘಟನೆಗಾಗಿ ಅವರು ಅಖಂಡವಾಗಿ ಶ್ರಮಿಸಿದರು. ಹಾಗೆಯೇ ಹಿಂದು-ಮುಸ್ಲಿಮರ ಏಕತೆಗಾಗಿಯೂ ದುಡಿದರು. ಹರಿಜನ ಉದ್ಧಾರವಾಗದೇ ಇದ್ದರೆ ಭಾರತ ಪ್ರಗತಿಯ ದಿನಗಳನ್ನು ಕಾಣದೆಂದು ಸಾರಿದರು. ಹಿಂದುವಳಿದವರು, ದರಿದ್ರರು, ಬಾಲ ವಿಧವೆಯರು, ಹಳ್ಳಿಯ ಅವಿದ್ಯಾವಂತರು – ಇಂತಹವರ ಉದ್ಧಾರಕ್ಕಾಗಿ ಸದಾ ಚಿಂತಿಸಿದರು. ಭಾರತ ಎಲ್ಲ ದೃಷ್ಟಿಯಿಂದ ಬಲಿಷ್ಠವಾಗಬೇಕೆಂಬ ಮಹಾ ಕನಸನ್ನು ಕಂಡ ಮಹಾತ್ಮರು ಅವರು.

ದೇವರ ಬಳಿಗೆ

ನೂರು ವರ್ಷದ ಸಂಪೂರ್ಣ ಆಯುಷ್ಯವನ್ನು ಅನುಭವಿಸಬೇಕೆಂದು ಶ್ರೀ ಮಾಳವೀಯ ಆಶಿಸಿದ್ದರು. ಆದರೆ, ದೈವದ ಅಪೇಕ್ಷೆ ಬೇರೆಯಾಗಿತ್ತು. ನವಖಾಲಿಯ ಭೀಕರ ಘಟನೆಗಳು ಅವರ ದೇಹ-ಮನಸ್ಸು-ಹೃದಯಗಳ ಮೇಲೆ ಹೇಳತೀರದ ಆಘಾತ ಮಾಡಿದವು. ಅದನ್ನು ತಡೆದುಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ಆ ಪರಮ ಮಾನಸಿಕ ವೇದನೆಯಲ್ಲೇ ಪಂಡಿತ ಮದನಮೋಹನ ಮಾಳವೀಯರು ೧೯೪೬ನೆಯ ನವೆಂಬರ್‌೧೨ರಂದು ದೇವರ ಪಾದ ಸೇರಿ ಅಮರರಾದರು. ಇಡೀ ರಾಷ್ಟ್ರವೇ ಅವರಿಗಾಗಿ ಕಂಬನಿಗರೆಯಿತು. ಉಜ್ವಲ ಕಾಂತಿಯಿಂದ ದೇದೀಪ್ಯಮಾನವಾಗಿ ಇಡೀ ಭರತ ಖಂಡವನ್ನು ಬೆಳಗಿದ ದಿವ್ಯ ದೀಪವು ನಂದಿ ತಣ್ಣಗಾಯಿತು.

ತೋರಿಸಿದ ದಾರಿ

ಪರಮಾತ್ಮನಲ್ಲಿ ಭಕ್ತಿಯನ್ನಿಡಿ: ಸಮಸ್ತ ಪ್ರಾಣಿ ವರ್ಗದಲ್ಲಿ ದಯೆತೋರಿ. ದೀನರು ದುರ್ಬಲರಲ್ಲಿ ಅನುಕಂಪವಿರಲಿ. ಸ್ತ್ರೀಯರಿಗೆ ಸದಾ ಗೌರವ ತೋರಿಸಿ. ದುಃಖಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಕೈಲಾದ ಸಹಾಯಮಾಡಿ, ಯಾರಿಗೂ ಹಿಂಸೆ ಮಾಡಬೇಡಿ.

ಬ್ರಹ್ಮಚರ್ಯವನ್ನು ಪಾಲಿಸಿ. ಗೋಮಾತೆಯನ್ನು ಸಂರಕ್ಷಿಸಿರಿ. ಇನ್ನೊಬ್ಬರ ಹಣಕ್ಕೆ ಆಶಿಸಬೇಡಿ. ಸತ್ಕರ್ಮದಿಂದ ಸತ್ಫಲವೂ, ದುಷ್ಕರ್ಮದಿಂದ ದುಷ್ಫಲವೂ ಲಭಿಸುತ್ತವೆ.

ಸರ್ವದಾ ಆತ್ಮವಿಶ್ವಾಸವುಳ್ಳವರಾಗಿರಿ. ಪರನಿಂದೆ ಮಾಡಬೇಡಿ. ಮತಭೇದ ಉಂಟಾದಾಗ ಸಹನಶೀಲತೆ ಇರಲಿ.

ನೀವು ಯಾರನ್ನೂ ಹೆದರಿಸಬೇಡಿ; ನೀವೂ ಯಾರಿಗೂ ಹೆದರಬೇಡಿ.

ಭಾರತ ನಮ್ಮ ಮಾತೃಭೂಮಿ. ಇದು ಪುಣ್ಯ ಭೂಮಿಯೂ ಹೌದು. ಪಾವನ ಭೂಮಿಯೂ ಹೌದು. ಧರ್ಮದ ಅನುಸಾರವಾಗಿ ಆಚರಣೆಯನ್ನು ಇಟ್ಟುಕೊಳ್ಳಿ.

ನಮ್ಮ ಭರತ ವರ್ಷ ಹಿಂದುಸ್ತಾನ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಲ್ಲಿ ಜನಿಸುವವರು ನಿಜಕ್ಕೂ ಪುಣ್ಯವಂತರು.

ಹಿಂದು ಧರ್ಮ ತುಂಬ ಶ್ರೇಷ್ಠವಾದದ್ದು. ಈ ಧರ್ಮದಲ್ಲಿ ಪರಮಾತ್ಮನು ಧರ್ಮ, ಅರ್ಥ, ಕಾಮ್, ಮತ್ತು ಮೋಕ್ಷಗಳೆಂಬ ಚತುರ್ವಿದ ಪುರುಷಾರ್ಥಗಳನ್ನೂ ಈ ಪುರಷಾರ್ಥಗಳ ಸಾಧನೆಯಿಂದ ಮನುಷ್ಯಜೀವನ ಪವಿತ್ರವಾಗಲು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ಚತುರಾಶ್ರಮಗಳನ್ನೂ ಸ್ಥಾಪಸಿದನು.

ಇವೆಲ್ಲವುಗಳಿಂದ ಖಂಡಿತ ಉಪಕಾರ ಹೊಂದಿ ತನ್ಮೂಲಕ ಧರ್ಮರಕ್ಷಣೆಯನ್ನು ಸರ್ವರೂ ನಿರಂತರ ಮಾಡಲಿ.

ಮನುಷ್ಯ ತನಗೋಸ್ಕರವೇ ಬದುಕಿದರೆ ಸೊಳ್ಳೆ, ತಿಗಣೆಗಳಿಗೂ ಅವನಿಗೂ ವ್ಯತ್ಯಾಸವಿಲ್ಲ. ದೇಶಕ್ಕೋಸ್ಕರ ಬದುಕಬೇಕು, ಧರ್ಮಕ್ಕೋಸ್ಕರ ಬದುಕಬೇಕು. ಇತರರಿಗೋಸ್ಕರ ಬದುಕಬೇಕು. ಪ್ರಪಂಚದಲ್ಲಿಯೇ ಬಹು ಪ್ರಾಚೀನ ಧರ್ಮಗ್ರಂಥಗಳೆಂದರೆ ವೇದಗಳು. ಪಾಶ್ಚಾತ್ಯ ವಿದ್ವಾಂಸರೇ ಇದನ್ನು ಒಪ್ಪುತ್ತಾರೆ. ಭಗವಂತ ಜಗತ್ತನ್ನು ಸೃಷ್ಟಿ ಮಾಡುವ ಮೊದಲು ಬರೀ ಕತ್ತಲೆ ಇದ್ದಿತು, ಕಾಳ್ಗತ್ತಲೆ ಇದ್ದಿತು, ಆಗ ಭಗವಂತ ದಿವ್ಯಪ್ರಭೆಯಿಂದ ಕಾಣಸಿಕೊಂಡ ಎಂದು ವೇದಗಳು ಹೇಳುತ್ತವೆ. ಭಗವಂತನಿಗೆ ಬೆಳಕು ಪ್ರಿಯ. ಮನುಷ್ಯ ತನ್ನ ಮನಸ್ಸಿನಲ್ಲಿ ಬದುಕಿನಲ್ಲಿ ಬೆಳಕನ್ನು ಬೆಳೆಸಿಕೊಳ್ಳಬೇಕು.

ಇದು ಮಹಾಮನ ಮದನಮೋಹನ ಮಾಳವೀಯ ಅವರ ಅಮರ ಸಂದೇಶವಾಗಿದೆ.