ಹೆದ್ರಿಕಿ ಮಾತಿಗೆ ಹೆದರುವ ಮಗಳಲ್ಲ
ಹೆದರೂವೆ ನಿನ್ ಗುಣವಿಗೆ ಅಣ್ಣಯ್ಯ
ಅಡಗೂವೆ ಹಾಲ ನೊರಿ ಹಾಂಗೆ

ಕನ್ನಡಿ ಹೋಲುವ ಕರಿಯ ಬಂಟರಿಲ್ಲ
ಕಿನ್ನೂರಿ ಹೋಲುವ ದೆನಿ ಇಲ್ಲ ಮಾಗಣಿಯಲ್ಲಿ
ನನ್ನಣ್ಣನ ಹೋಲುವ ದೊರಿ ಇಲ್ಲ

ಕೂಡು ಕುಟುಂಬದ ಹೆಂಡಿರು ಮಕ್ಕಳು ಸೇರಿ
ಅಣ್ಣಯ್ಯ ಯಾತುರಿಗೆ ಸೌನಿದ ಮೇಲಗಿರಿ
ದೇವರಪ್ಪಣಿನ ಕೊಡಲಿಲ್ಲ ಎನುತ್ಹೇಳಿ
ಒಡಹುಟ್ಟಿದ ತಂಗಿ ಸೌನೆಂದ

ಇಂದುಳಿ ಅಣ್ಣಯ್ಯ ಇಂದ್ರ ಲೋಕವ ಕೊಡುವೆ
ಚಂದ್ರ ದೇವದಿರ ಕೊಡಿ ಕೊಡ್ವೆ ಅಣ್ಣಯ್ಯ
ಇಂದುಳಿದ ಭಾವನ ಮನೆಯಲ್ಲಿ

ಆಳ್ ಕಾಳು ಹೆಚ್ಚಲಿ ಅರ್ಥ ಕೈಗೂಡಲಿ
ದಾಯಾದ್ರ ಬಲುವು ಚಿಗುರಲಿ ಅಣ್ಣಯ್ನ
ಬೆನ್ನಿಗೆ ನೂರಾಳು ತಿರುಗಲಿ

ಚಣ್ಣಕ್ಕಿ ಮುಡಿ ಮುಂದೆ ಚಣ್ಣ ದಾಸಯ್ಯ ಹಿಂದೆ
ತಾ ಹಿಂದೆ ತನ್ನ ಬಳಗ ಹಿಂದೆ ಕೂಡ್ಕಂಡ
ಅಣ್ಣಯ್ಯ ಯಾತರೀಗೆ ಸೌನಿದ

ನೀರಿಗೆ ಹ್ವಾದಲ್ಲಿ ನೀಲದ ಬಳೆ ಬಂದೋ
ನಾ ಕಂಡಲ್ಲಿಂಥ ಬಳಿಯಿಲ್ಲ ಬಳೆಗಾರ
ಹೊಯ್ ಹೇಳೋ ನನ್ನ ತವರೀಗೆ
ನಿನ್ನ ತವರೂರ ನಾನೆತ್ತ ಬಲ್ಲೆ ನಮ್ಮ
ಹೆಸ್ರೆಳೂ ಅವ್ರ ಕುಲಹೇಳು
ರಸಬಾಳೆ ನೆಟ್ಟಿದ್ದ ಹೆಬ್ಬಾಗಿಲ ಕಟ್ಟಿದ್ದ
ಹೆಬ್ಬಾಗಿಲ ಹೊರಗೆ ಅಸುವಂತ ಮರದಡಿ
ಧರ್ಮದಣ್ಣಯ್ಯ ಒರಗೀದ ಬಳೆಗಾರ
ಹೋಯ್ ಹೇಳೋ ನನ್ನ ತವರೀಗೆ

ಬಾಚಿ ಕಟ್ಟಿದ ಮಂಡಿ ಬಾಗಳ ಹೂಗಿನ ಚಂಡು
ನನ ತಾಯಿ ತೆಗೆದ ಬಗತಲಿ ಬಾಮಕೆ
ನನ್ನಣ್ಣ ತಪ್ಪ ಕೊನಿ ಹೂಗು

ಸೌನಿದ್ದ ಬಾಲಮ್ಮ ಮೆಟ್ಲ ಕೆಳಗಿಳಿವಾಗ
ಅಣ್ಣಯ್ನ ಕರೆದು ನುಡಿದಾಳುಏನೆಂದೆ
ಕೊಟ್ಟ ಬಲವಳಿ ಕಿರಿದೆಂದು
ಅಷ್ಟೆಂಬ ಮಾತ ಕೇಂಡಾನೆ ಅಣ್ಣಯ್ಯ
ಕೂಡಲೇ ಕೊಟ್ಟಿಗೆಗೆ ನಡೆದಾನೆ
ಪಟ್ಟಿದಂತಹ ದನವು ಮುತ್ತಿನಂಥ ಕೆಚ್ಚಲು
ಬೆನ್ನ ಮೇಲದಕೆ ಬಿಳಿ ಬೊಟ್ಟು ಅ ದನವೇ
ಹುಟ್ಟಿದ ತಂಗಿಗೆ ಬಳುವಳಿ

ಸೌನಿದ್ದ ಬಾಲಮ್ಮ ಅಂಗಣ ಮೆಟ್ಲಿಳಿವಾಗ
ಅಣ್ಣಯ್ಯನ ಕರೆದು ನುಡಿದಾಳು ಏನೆಂದೆ
ನನ ಸಂಗಡ ಯಾರು ಸೌನೀರು ಆ ಊರಲ್ಲಿ
ಮಾತು ಬಿದ್ದರೆ ಯಾರು ಗೆಲುವಾರ
ಆಡೂ ಗಿಳಿ ಸೌನಿರೇ ಓಡೂ ಗಿಳಿ ಸೌವ್ನೀರು
ಮಾತಿನ ಅರಗಿಣಿ ಸೌವ್ನೀರು ಆ ಊರಲ್ಲಿ
ಮಾತು ಬಿದ್ದರೆ ಅದೇ ಗೆಲುವುದೇ

ಕರಿಯ ಕಣ್ಣಿನ ಕಾಗೆ ಯಾರ ಕಂಡೆ ಕರಬೂದೇ
ಕಾಂಜಿನುಪ್ಪರಿಗೆ ಮನಿ ಕಂಡ ಅಣ್ಣಯ್ಯ
ನಿನಕಂಡು ಜನರುಕರಬೂರು ಆ ಕಣ್ಣಿಗೆ
ಎಕ್ಕೆಯಹಾಲು ಎರೆಯಣ್ಣ

ಹಾಲಂಥ ಬುದ್ಧಿ ಹಾಳು ಮಾಡಿದರ‍್ಯಾರು
ನ್ಯಾಗಳದಂಥ ನೈಗಿಯ ಅಣ್ಣನ ಬುದ್ಧಿ
ಹಾಳು ಮಾಡಿದಳು ಮಡದಿಯು

ಸರುಪನ ಕೊಂದು ಸರಪಳಿ ಎಳಿ ಮಾಡಿ
ಸರದಾರನ ಮಡದಿ ನನ ತಂಗಿ ಕೊರಳಲ್ಲಿ
ಸರ್ಪನ ಎಳಿಯೆ ಹದನಾರು

ಶ್ಯಾಮಂತಿ ಹೂಗಿಗೆ ನೂರೆಂಟು ಕುಸುಬುಂಟು
ಸ್ವಾಮಿ ಕುಲದವರೇ ಕಳುಹೀರ ಏನೆಂದೆ ಕಳುಗಿರು
ದೇವಿ ಕುಲದವಳೇ ಮುಡಿ ಎಂದು

ಕಾಲುಂಗರ ಇಟಗಂಡ ಎಣಿಗುಂಟ ಸೆಳಕಂಡ
ಬೀದೀಲೆ ದೆನಿನ ಕರುವಳು ತಂಗ್ಯಮ್ಮ
ಕಾಲುಂಗರ ದನಿಗೆ ಮದು ಎದ್ದು

ಹತ್ತು ಮೇಟ್ಟಿಲೇಣಿ ಮೆಟ್ಲಿಗೆ ಚಾಚಿಕೊಂಡು
ಹತ್ತಿ ನೋಡಿದಳೆ ತೌರೂರ ಬಯಲಲ್ಲಿ
ಅಣ್ನ ಬಲರಾಮ ಬರುವಾನೆ ಅವನ ಕೈ
ಉಂಗುಲು ನಮ್ಮನಿಗೆ ಹೊಳೆದಾವು

ಬಂತು ಬಂತು ದಿವಾಳಿ ಬಂತು ದೀಪಾವಳಿ
ಚಿನ್ನದ ಕತ್ತಿಯಲಿ ಕೈಕ್ಕೋದು ಅಣ್ಣಯ್ಯ
ಬೆಳ್ಳಿ ನೇಣಲ್ಲೆ ಹೊರಿಕಟ್ಟಿ ಅಣ್ಣಯ್ಯ
ಚಿನ್ನದ ಮಂಚಕೆ ಕೈ ಜಪ್ಪಿ ಅಣ್ಣಯ್ಯ
ಬೆಳ್ಳಿ ಬುಟ್ಯಲ್ಲೆ ಹೊಲಿ ಮಗದು ಅಣ್ಣಯ್ಯ
ಗಂಗಿ ಗೌರೆಂಬ ತಿರಿಕಟ್ಟಿ

ಹುಲ್ಲು ಕುತ್ತರಿ ಕಂಡು ಅಕ್ಕಿ ಕುತ್ತಟವೆಂಬ್ರು
ಹಟ್ಟೀನೆ ಕಂಡು ಮಠವೆಂಬ್ರು ಅಣ್ಣಯ್ಯನ
ಕಿವಿ ಒಂಟಿ ಕಂಡ್ರು ಅರಸೆಂಬ್ರ

ಹಟ್ಟಿಯ ಹಣೆಯಲ್ಲಿ ನಿಂತುಕೋ ಅಣ್ಣಯ್ಯ
ಒದಕೂಳಿ ದನಿನ ಕರಕಂತೆ ನಿನ ಕೆಮಿಯ
ನೀಲದ ಒಂಟಿ ಬೆಳಕಲ್ಲಿ

ಬತ್ತ ತೋಳೂವ ಕೈಗೆ ಕನಕ ಮುತ್ತಿನ ಜಲ್ಲಿ
ಒಡಗೂ ಬೀಸ್ ಹಿಡಿಗೂ ಸರುಪಳಿ ಮುತ್ತಿನ ಗೊಲ್ಲೆ
ಇರುವುದಣ್ಣಯ್ಯನ ನಡಿನಾಗ

ಕನ್ನಡಿ ಕಟ್ಟಿದ ಮನಿಯೇ ಯಾಕೆ ಬಿಮ್ಮ ಗಾದವೂ
ಕನ್ನಡಿ ಕಾಂಮ್ ಮಗಳೆ ಮನೆಲಿಲ್ಲ ಬಾಲಮ್ಮ
ಗಂಡನರ ಮನೆಗೆ ಸವನೀಳು

ಉಂಡೀಳು ಉಟ್ಟೀಳು ಚಂದ್ರ ಬಟ್ ಇಟ್ಟೀಳ
ಗಂಡನಿಗಿಂತ್ ಮುಂದೆ ನಡೆದಾಳು ತಂಗ್ಯಮ್ಮ
ಚಂದ್ರಸಾಲೆಯಲ್ಲಿ ಅವಳಣ್ಣ ಕೂತ್ಕಂಡ
ಮಂಗ್ಳವಾರ‍್ ತಂಗಿ ಮನೆಗ್ಹೋಗ
ಇಂದೇ ಮಂಗಳ್ವಾರಂಬೆ ನಾಳೆಗೆ ಬುಧವಾರ ಅಂಬೆ
ನಾಡ್ದಿಗೆ ಹನ್ನೊಂದು ದಿನ ವೆಂಬೆ ಅಣ್ಣಯ್ಯ
ಇಂದ್ಹೋಗಿ ನಾಳೆ ಬರತೇವೆ

ಮದ್ಯಾನದ್ಹೂಟಕೆ ಮುದ್ದೆ ಊಟಕೆ ಬಂದ
ಮಜ್ಜಿಗೆ ಇಲ್ಲ ಮೊಸರಿಲ್ಲ ಅಣ್ಣಯ್ಯ
ಮುದ್ದು ನಿನ್ನೆಮ್ಮೆ ಕರಿಲಿಲ್ಲ

ಗಟ್ಟಕ್ಹೋದಣ್ಣಯ್ಯ ತಂಗಿ ಮನೆಗೆಂದು ಬಂದ
ಊಟದ್ಹೋತ್ತಣ್ಣ ಹೊರಗಿರು ಅಂಬರು ಒಳಗೆ
ಕುಂದೀತಣ್ಣಯ್ಯ ನ ನಗಿ ಮಾರಿ
ಕುಂದೀದ ಮಾರಿಗೆ ಚಂಬಿಲುದಕ ಕೊಡುವೆ
ಉಣ್ಣೇಳಣ್ಣಯ್ಯ ಒಡಲೂಟ
ಅಷ್ಟೊಂದ ಮಾತ ಕೇಂಡೆನೆ ಅಣ್ಣಯ್ಯ
ಹಾಸ ಕಲ್ಲಾಗಿ ಬಲಿದಾನೆ
ಹಾಸ ಕಲ್ಲಾದರೆ ಮಡುವಾಡಳ ಮಡಿ ಒಗಿವನೆ
ದಾಸನ ಗಿಡವಾರೆ ದೇವ್ರಿಗೆ ಕೊಯ್ದೊಪ್ಸೂರೆ
ಕಾಸನ ಮರನಾದ ಅಡವೀಲೆ

ಕಾಲಲ್ಲಿರುವ ಜೋಡಿ ಕಾಲಲ್ಲಿದ್ದರು ಚಂದ
ತಲೆಯ ಮೇಲಕದರ ಹೊರದಿರು ಅಣ್ಣಯ್ಯ
ಮಡದಿಗೆ ಸಲುಗೆ ಕೊಡದೀರು

ಸೀರಿಯು ಹರಿದರೆ ಸೇರಿಸಿಉಡಲಕ್ಕು
ನಾರಿ ತಪ್ಪಿದರೆ ತರಲಕ್ಕೂ ಅಣ್ಣಯ್ಯ
ಒಡಹುಟ್ಟು ತಪ್ಪಿದರೆ ತರವೀಯ

ಮಡದಿ ಸಣ್ಣವಳೆಂದು ಒಳಗೆ ಬಾಮಿಯ ತೋಡಿ
ಅಲ್ಲೇ ಸುರಂಗದ ತಳಹೂಡಿ ಅಣ್ಣಯ್ಯ
ಮಡದಿ ಎಣ್ಣಿದಳು ತೌರಿಗೂ

ಕಾಡೂಗಿ ಕಣ್ಣೋಳೆ ಕಾಣದೆ ಹೋದಾಳೆ
ಕ್ಯಾಣಿ ದೀವೂಗಿಯ ಮನಿಯಾಳ ತಂಗ್ಯಮ್ಮ
ಕಾಣದೆ ಅರೆ ಗಳಿಗೆ ಇರಲಾರೆ

ಅಂಗಿ ಮ್ಯಾನಂಗಿ ಸುಂದರದ ನಡುಕಟ್ಟು
ತಂಗಿಮನಿಗ್ಹೋಗಿ ಬರುವಾಗ ಅಣ್ಣಯ್ಯಗೆ
ಅಂಗಿ ಮ್ಯಾನೆ ನಿಂಗ ಹೊಳೆದಾವು

ಬಟ್ಟ ಮುಲಾಕು ಹರಿದರೆ ಕೊಟ್ಟು ಬಿಡಿ ನನ್ನ ತವರಿಗೆ
ಪಟಗಾರರ ಕರೆಸಿ ಸುರಿಸುವ ಅಣ್ಣಯ್ಯ
ಸಂಗಡ ಜನಹಾಕಿ ಕಳೀಸುವ

ಅಪತ್ತಿನ ಕಾಲದಲ್ಲಿ ಅಪರೆನೆಂಬರಿಲ್ಲ
ಒಡಹುಟ್ಟಿದ ತಮ್ಮ ತಲೆ ದಿಸ ಕೂಕಂಡು
ಕೈ ಹಿಡಿದ ಪುರುಷ ಹೊರಗ್ಹೋಗಿ ನಿತ್ಕಂಡ
ಯಾವ ದಿಕ್ಕಿನ ಹೆಣ್ಣ ತರಲಕ್ಕು
ಸಾಸು ಹಾರಲಿಲ್ಲ ಸಬವು ತೆಗೆಯಲಿಲ್ಲ
ಎಣ್ಣಿರಿ ಭಾವ ಮನದಲ್ಲೂ ನಿಮಗೀಗ
ಯಾವ ಪಾಪಿ ಹೆಣ್ಣು ಕೊಡುವಳಿ ಭಾವಯ್ಯ
ಹನ್ನೊಂದು ದಿನವ ಕಳದ್ಹೋಗಿ

ಹಾಡಿನ ಹಟವೇನು ಹಗಳದ ರಂಜಕವೇನು
ಬೇಡಿದ ಮಜ್ಜಿಗೆ ರುಚಿಯೇನು ಅಣ್ಣಯ್ಯ
ನೆರಮನೆಯಾಕೆ ಹಿತವೇನು
ನೆರಮನೆಯಾಕೆಯ ಕೈಲಿ ಹಿತವೆಂದಾಡಿದ ಮಾತು
ಗಾಳಿಗೂ ಬಿದ್ದು, ಗಲುಕಾದೊ ಆ ಆಕಿ
ಹಿತ ಸಾಕು ಅವಳ ಗತು ಸಾಕು

ಹರಿಸೇವೆ ಮಾಡಿಕೆ ಹರುಷ ದಿಂದೊರಗಿದ
ಹರಿಹರಿ ಎಂದ ಬಂದ ಹರಿದಾಸ ಅಣ್ಣಯ್ಯ
ಹರಕೊಟ್ಟ ಕೊರಳ ಪದಕವ
ಕೊಲ್ಲೂರಿಗ್ಹೋಯಿ ಹೂಗಿನತೇರ ಎಳದಿಕೆ
ಆನೆ ಬಾಗಿಲಲೆ ಬರುವಾನೆ ತಮ್ಮಯ್ಯ
ಅರಿದಿದ್ದರು ಕಂಡು ಅರಸಂದ್ರು

ಅಂಗಡಿಗಾರಾಗೆ ಅಂಗ್ಯಾಕೆ ಮಾಸೀದೋ
ಲಿಂಗದ ಕೀಲ್ಯಾಕೆ ಸಡಲಿದೋ ಅಣ್ಣಯ್ಯ
ಬಂಗಾರು ತೂಗಿಬರುವಾನೆ

ಗುಡ್ಡಿಯ ಮಣ್ಣೆ ಕಡದು ಪಾಕವ ಮಾಡಿ
ಮನಿಯ ಕಟ್ಟಿದನೇ ಮರಕೀಲೆ ಅಣ್ಣಯ್ಯ
ಹೆಡಿಯ ತಿದ್ದಿದನೇ ಸರುಪನ