ಬಳ್ಗಾರ ಬಳಿ ತಂದ ಒಳ್ಗೆ ಹೋಗ ಅತ್ಗೆಮ್ಮ
ನಿನಗಾಗ ನಿನ್ನ ಕೈಗಾಗ ನಿನ್ನಣ್ಣ
ತೂಖದಲಿ ಬಳಿನ ತರುಸುವ ನಿನ್ನಣ್ಣ
ಎರಕದಲಿ ಬಳಿನ ಎರಸುವ

ಅಣ್ಣ ನಿನ್ಹೆಂಡ್ತಿ ಬಲು ಬಣ್ಣಗಾರುತಿ
ಸುಣ್ಣ ಬೇಡಿದರೆ ಕೊಡಲಿಲ್ಲ ನಿನ್ಹೆಂಡ್ತಿ
ಚಿನ್ನ ಬೇಡಿದರೆ ಕೊಡುವಾಳೆ

ಹರಿದ್ಹೋಪ ನೀರಿಗೆ ಹರಿವಾಣ ಬಿಡುವಾಳು
ನೋಡಣ್ಣ ನಿನ್ನ ಮಡದೀಯ ಮಾಡಿದ ಬದುಕೆ
ತಾಳಿದೆ ನಿನ್ನಗುಣಕಾಗಿ
ಅವಳಿಗೆ ಹೆದುರುದು ಬ್ಯಾಡ ನನಗೆ ತಾಳುದು ಬ್ಯಾಡ
ಸೀರಿಸೆರಗ್ಹಿಡಿದು ನಿಲಿಸೆಂದ
ಸೀರಿ ಸೆರಗ್ಹಿಡಿದರೆ ಭಂಡಿ ಅತ್ತಿಗೆಂಬಳು
ನೀನೆ ಶಿಗುಸಿಯ ಕೊಡಬೇಕು

ಕೆಮ್ಮಣ್ಣ ಗುಡ್ಡಿಯ ಮ್ಯಾಲೆ ಅಣ್ಣದೇವರು ಮಾಡಿ
ನನ್ನತ್ತಿಗೆ ಹೋಗಿ ಕೈಮುಗದು ಬರುವಾಗ
ಮುಂಗುಸಿ ಮೂಜ ಮುರಿದಾವು

ಇಲಿಗ್ಯಾಕೆ ಹಲ್ಲಣ್ಣ ಬೇಕ್ಕಿಗ್ಯಾಕೆ ಚಲ್ಲಣ್ಣ
ಚೊಂದ್ ಕಪ್ಪಿಗ್ಯಾಕೆ ಬಕ್ತಲಿ ಅತ್ತಿಗೆ
ಕೊಂಗಲ್ ಮೂಜಿಗ್ಯಾಕೆ ಹರಳೋಲೆ

ಅತ್ತಿಗೆ ನಿಮ್ ಗುಣ ನಿತ್ತಲ್ಲೆ ನಾ ಬಲ್ಲೆ
ಹೂ ಹಂಚ್ವಲ್ಲೇ ಪರಿಬೇಧ ಅತ್ತಿಗೆ
ಹೆಣ್ಣ ಹೆತ್ತರಿಗೀ ಬೇಧ ತರವಲ್ಲ

ಅತ್ತಿಗಿ ಕೈಲೆ ನಿತ್ತು ಮಾತಡ್ಯೇನೆಂದ್ರು
ಹತ್ತಿ ಹಾಸುಗಿಗೆ ಹನಿ ಬಿದ್ದು ನಿಮ್ಮಣ್ಣನ
ಸಿಟ್ಟಿಗಿನ್ಯಾರೆ ಹೆದರೂರು ನಿಮ್ಮಣ್ಣನ
ಬೆತ್ತಕಿನ್ಯಾರೆ ಬಳಕೂರು

ನಿಮ್ಮಾಣೆ ಅತ್ತಿಗೆ ನಿಮ್ಮಣ್ಣನಿಗೆ ಸನಿವಾರ
ರನ್ನದ ಕಾವಲಿಗೆ ಕೊಡಬೇಕು
ನಿನ್ನಾಣೆ ನಾದಿನಿಯೆ ನಿನ್ಹತ್ರ ಹೇಳು ಮರೆತೆ
ರನ್ನದ ಕಾವಲಿಗೆ ಕೊಡಲಾರೆ
ರನ್ನದ ಕಾವಲಿಗೆ ಮೊನ್ನೊಬ್ಳು ಕೇಳೀಳು
ಎಣ್ಣಿ ಸಾಲದೆ ಹೊಗೆ ಸುತ್ತಿ ನಾದಿನಿಯೇ
ರನ್ನದ ಕಾವಲಿಗೆ ಕೊಡಲಾರೆ
ನಾ ಎಣ್ಣೆ ಉದ್ದುವೆ ನಾ ಬೆಣ್ಣೆ ತಿದ್ದುವೆ
ತಣ್ಣನೆ ನೆಲದಲ್ಲಿ ಇಳಿಸುವೆ ಅತ್ತಿಗೆ
ರನ್ನದ ಕಾವಲಿಗೆ ಕೊಡಬೇಕು
ಎಣ್ಣಿ ಉದ್ದುದುಬ್ಯಾಡ ಬೆಣ್ಣಿ ತಿದ್ದುದು ಬ್ಯಾಡ
ರನ್ನದ ಕಾವಲಿಗೆ ಕೊಡಲಾರೆ
ಅಷ್ಟೊಂದು ಮಾತ ಕೇಂಡಾಳೆ ನಾದಿನಿ
ಬಂದಾಳೆ ತನ್ನ ಅರಮನಿಗೆ
ಮೆತ್ತಿನ ಮೇಲೆ ಪುಸ್ತಕ ಓದ್ವರೇ
ನಿಮ್ಮ ತಂಗಿ ಕಾವಲಿಗೆ ಕೊಡಲಿಲ್ಲ
ಕಾವಲಿಗೆ ಕೊಡಲಿಲ್ಲೆಂದು ಸಿಟ್ಟು ಮಾಡಲುಬ್ಯಾಡ
ಕಡಬ್ಮಾಡಿ ಕಡಲೆ ತೊಗೆ ಮಾಡಿ ಇಳಿಸೀಕೆ
ಊಟಕ್ಕತ್ತಿಗಿನೆ ಬರಹೇಳು.