ಕಂಚಿ ಕಾಯಿ ಕೈ ಅಂಬ ಲಿಂಬಿಕಾಯಿ ಹುಳಿ ಎಂಬ
ಮಾವಿನ ಕಾಯಿ ಸೊನಿ ಅಂಬ ಬಾಲಯ್ಯ
ಮಾವನ ಮಗಲೆ ತನಗೆಂಬ

ಅಕ್ಕಿಯ ಕಡಿ ಕಡಿ ಚಕ್ಕರ ಮಾವಿನ ಮಿಡಿ
ಹೆಕ್ಕೊಕೆ ಹೋಯಿದಳೆ ರತಿಕೊಡಿ ಮಾವನಮಗಳು
ಕೇಂಬುಕೆ ಬಂದನೆ ದೊರಿಮಗ

ಗಂಧದ ಮರನಡಿ ತಿರುಗಾಡಿ ಬಾಲಮ್ಮ
ಅಪ್ಪಯ್ಯನಳಿಕಂಡು ಮನಸಿಟ್ಟು ಮುಂದಿಕ
ರೂವಾರದ ಗೊಂಬಿ ತನಗೆಂದ

ಯಾವಾಗ್ಲೂ ನಿನ ಮುಡಿ ಹೋಗಿ ಪರಿಮಳ
ಯಾವೋರೆ ನಿನ್ನ ತವರೂರು, ಅಬ್ಬಿಯ ಮನಿ
ಜಾಜಿ ಮಲ್ಲಿಗೆಯ ವನವೇನು

ಉದುರುದುರೆ ಮಲ್ಲಿಗೆ ಉದುರ ಅಂಗಣಲಲ್ಲಿ
ಚದುರಂಗ ಆಡಿ ಬರುವವರ ನಾರಾಯಣಸ್ವಾಮಿ
ಉದುರಲಿ ರುಮಾಲಿಯ ಸೆರಗಿಗೆ

ಮಡದೀಯ ಹೊಡಿಕೆಂದ್ರೆ ಇಲ್ಲಿಲ್ಲು ಕೋಲಿಲ್ಲ
ನೇತ್ರಾವತಿ ಗುಡ್ಡಿ ಹೊಲನ್ಹತ್ತಿ ಪುರುಷರು
ಸಿಟ್ಟಿಳಿದು ಮನಿಗೆ ಬರುವಾರು

ಬಾವಯ್ಯ ಹೇಳಿದ ಮಾತ ಅಣ್ಣಯ್ಯ ಕೇಳುತ ಬಂದ
ಬೀಳಿಗೆ ಕಾಯಿ ಹೊರೆಯಲ್ಲ ಬಾವಯ್ಯ
ತಂಗಿ ನನ ಸಂಗ ಕಳುಹೀನಿ
ಏಳೆಮ್ಮೆ ಹಾಲುಂಟು ಹತ್ತಿ ಹಾಸಿಗೆಯುಂಟು
ಬಾರೆ ತಂಗ್ಯಮ್ಮ ಮನೆಹೋಪೋ
ಏಳೆಮ್ಮೆ ಹಾಲಿದ್ರ ಹಳ್ಳಕ್ಕೆ ಹೊಯ್ಯಣ್ಣ
ಹತ್ತಿಯ ಹಾಸಿಗೆ ಮಡದೀಗೆ ಭಾವನ ಮನೆಯ
ಕಷ್ಟ ಅನುಭವಿಸಿ ಇರುತ್ತೇನೆ.

ಮನೆಯೊಡೆಯರಿಲ್ಲದೇ ಮನೆ ಬಿಮ್ಮಗಾದೋ
ಮನೆ ಗೌಳಿ ಶಕುನ ನುಡಿದೀತೆ ಏನೆಂದೆ
ಮನಿಯೋಡಿಯರ‍್ ಮಜ್ಜನಕ್ಕೆ ಬರುವಾಗ

ಜಾತ್ರಿಗ್ಹೋದ ಪುರುಷರು ರಾತುರಿಗೆ ಬಂದ್ ಕಂಡ
ಏ ಮುದ್ದೆ ಕದನ ತೆಗಿಯಂಬ್ರು
ಗೋರೆಂಬ ಕತ್ತಲಿ ಬೋರೆಂಬ ಜಡಿಮಳೆ
ಯಾರೆಂದರೆ ಕದವ ತೆಗೆಯಲಿ
ಜನಕ ರಾಯನ ಮಗಳೆಜಾನಕಿ ಸೀತಮ್ಮ
ದಶರಥ ರಾಯನ ಮಗನೇಂದ್ರಾದ ಮೇಲೆ
ಸೀತಮ್ಮ ಕದವ ತೆಗಿ ಬಾರೆ

ಕರುಹಂಡಿತಕ್ಕಂಡ ಕೈಲಿ ಕರೆಯುಕೆ ಹೋದೆ
ಎನೆಣ್ಣೆ ಕೈಲಿ ಒರಗಿದೆ ನಿನ್ನೊಡಿಯರು
ಹಾಲಿಲ್ಲದೂಟ ಉಣಲಾರರು

ಮಾತಡದಿದ್ದ ಪುರುಷರ ಹೆಂಗೆ ಮಾತಾಡಸಲಿ
ಹಿತ್ತಾಳೆ ಚಂಬು ಶ್ರೀಗಂಧ ತಕ್ಕಂಡ್ರೆ
ಮಾತು ಮಾತಿನಲ ನಗೆ ಬಂದೋ

ಮುದ್ರ ದುಂಗುರ ತಾಗಿ ಸೀರಿ ಸೆರಗ ಹರದ್ಹೋದು
ಸ್ವಾಮಿ ನಿಮ ಕೈಯ ರತನದ ಉಂಗುರುತಾಯಿ
ಮಾ ಮಲ್ಲಿಗೆ ಸರವೇಶ ಹರಿದೋದೊ.