ಕಣಿ ಕಣಿ ಹೊಂಡವ ಮಾಡಿ ಪಿಣಿ ಪಿಣಿ ನೀರನು ಬಿಟ್ಟು
ಗೆಲ್ಲಿ ಗೊಂಭತ್ತು ಮಿಡಿಕೂತು ಅರ್ಥದ ಹಾಡ ಜಾಣೆ ಕನ್ನಡವ ತಿಳಿದ್ಹೇಳೆ
ಅಂತಂಥ ಹಾಡ ಹನ್ನೆರಡೇ ನಾ ಬಲ್ಲೆ
ಕನ್ನಡ ಶಿವನ ಪದನವ
ಕನ್ನಡ ಶಿವನ ಪದನ ಅರ್ಥದ ಹಾಡು        
ತೊಂಡೆಕಾಯಲ್ದೆ ಅರ್ಥುಂಟ
ತೋಟದಲ್ಲಿರುವುದು ಸೊಪ್ಪೇರಿ ಬೆಳೆವುದು
ಉಪ್ಪಿನ ಹಂಗೆ ಅದಕ್ಕಿಲ್ಲ ಅರ್ಥದ ಹಾಡೇ ಜಾಣೆ ಕನ್ನಡವ ತಿಳದ್ಹೇಳೆ
ಅಂತಂಥ ಹಾಡ ಹನ್ನೆರಡೇ ನಾ ಬಲ್ಲೆ
ಕನ್ನಡ ಶಿವನ ಪದವ
ಕನ್ನಡ ಶಿವನ ಪದದ ಅರ್ಥದ ಹಾಡು
ವೀಳ್ಯದೆಲೆ ಅಲ್ದೆ ಅರ್ಥಉಂಟ
ತೋರುಗುಡ್ಡೆಯ ಮೇಲೆ ಆನೆಯ ಭುಜತೋರಿ
ಸಣ್ಣ ನಾರಿಯರ ನೆರಿ ತೋರಿ ಅರ್ಥದ ಹಾಡ ಜಾಣೆ ಕನ್ನಡ ತಿಳಿದ್ಹೇಳ
ಅಂತಂಥ ಹಾಡ ಹನ್ನೆರಡೇನಾ ಬಲ್ಲೇ
ಕನ್ನಡ ಶಿವನ ಪದವನ ಅರ್ಥದ ಹಾಡ
ಅಣಬಿಯಲ್ದೆ ಅರ್ಥುಂಟೆ
ಸೀತಮ್ಮ ಸಿರಿಯನ್ನುಟ್ಟೂ ದ್ರೌಪದಿ ಚಿನ್ನವ ತೊಟ್ಟು
ಕಂದಯ್ಯ ಧೂಳಿನಲೆ ಒರಗಿದ ಅರ್ಥದ ಹಾಡ ಜಾಣೆ ಕನ್ನಡವ ತಿಳಿದ್ಹೇಳ
ಅಂತಂಥ ಹಾಡ ಹನ್ನೆರಡೇ ನಾಬಲ್ಲೆ
ಕನ್ನಡ ಶಿವನ ಪದನವ ಅರ್ಥದ ಹಾಡ
ಸೌತೆಕಾಯಲ್ದೆ ಅರ್ಥುಂಟ
ಬೋರು ಬೋರೆಂಬುದು ಮುಲ್ಲಿಯಲ್ಲಿ ಸೇರ‍್ವುದು
ಬದಿಯಲ್ಲಿ ಮ್ಯಾಕಿ ಕಡಿಯೋದು ಅರ್ಥದ ಹಾಡ ಜಾಣೆಕನ್ನಡವ ತಿಳಿದ್ಹೇಳ
ಅಂತಂಥ ಹಾಡ ಹನ್ನೆರಡೇ ನಾ ಬಲ್ಲೆ
ಕನ್ನಡ ಶಿವನ ಪದನವ ಅರ್ಥದ ಹಾಡ
ಬೀಸು ಕಲ್ಲಲ್ದೆ ಅರ್ಥುಂಟ