ಗಂಧವ ತೇದಲಿಕೆ ಗಂಡು ಮಕ್ಕಳು ಬೇಕು
ಗಿಂಡುಗಿ ತಿಕ್ಕಲಿಕೆ ಸೊಸಿ ಬೇಕು ಈ ಮನಿಗೆ
ಹೊಗ್ಗಿ ಹೈಟುಕೆ ಮಗಳಬೇಕು

ದೇಶ ದೇಶವ ತಿರುಗಿ ಕಾಶಿ ಯಾತ್ರೆ ಹೋದೆ
ಕಾಸ ಕೊಟ್ಟಿರುವುದಕ ಕೊಡಲಿಲ್ಲ ಅಪ್ಪಯ್ಯನ
ಹೆಸರ್ಹೇಳಿದರುದಕ ಕೊಡುವಾರ

ಕಾಗದ ಬರದು ಆನಿ ಸೊಂಡಿಲಿಗೆ ಕಟ್ಟಿ
ಮಾರಗೂ ಕೂಡಿ ಹೊಡೆದೆಬ್ಬಿ ದಾವಣಗೆರೆಯ
ಬರುಬಲ್ಲ ಕಾವೇರಮ್ಮ ತೆಗೆದೊದಿ

ಅಪ್ಪಯ್ಯ ಕೊಟ್ಟಿದ ಸೀರಿ ಯಾಲಕ್ಕಿ ಬಣ್ಣದ ಸೀರಿ
ಮ್ಯಾದುಲಿ ಭಾರ ನೆರಿ ಭಾರ ಅಪ್ಪಯ್ಯ
ಮಾರಿಕಣಿ ನಿಮಗೆ ಹಣವಕ್ಕು
ಮಾರಿಕೊಂಬುಕೆ ಹೆಣ್ಣೆ ಸೆಟ್ಟಿ ಶಾನಭಾಗನಲ್ಲ
ಉಟ್ಟುಕೋ ಮಗುವೆ ನಡು ತುಂಬ
ಗುಡುಗು ಮಿಂಚಿನ ಸಿರಿ ಸೆಡಿಲ ಮಿಂಚಿನ ಸೀರಿ
ಗರುಡ ಹನುಮಂತ ಸೆರಗಿದ್ದ ಸೀರಿಯ
ತಂದು ಕೊಡುವನು ನನಗಂಡ

ಸೋದರತ್ತೆಯ ಮಗನು ಮುತ್ತು ಮಾರುತ ಬಂದ
ಮುತ್ತಿಲಿಂದವನ ಮುಖ ಚಂದ ಅಪ್ಪಯ್ಯ
ಮುತ್ತು ಬಿಡಿ ಅವನ ಬೆಲಿಮಾಡಿ

ಬಸಳಿಯ ಸಪ್ಪೆ ಬಿಸಿಲಲಿ ಕೊಯ್ದದ್ಹಾಂಗೆ
ಕುಶಲರು ಬರೆದ ಬರಿನ್ಹಾಂಗೆ ನಮ್ಮಗಳು
ಬಿಸಿಲಲ್ಲಿ ಬಂದ ಬರಹೇಳಿ

ಅಪ್ಪನ ಮನೆಯಲ್ಲಿ ಎಪ್ಪತ್ತು ಚನ್ನಿಯ ಮಣಿ
ಎಪ್ಪತ್ತೆ ಮಂದಿ ಗೆಣಿಯಾರ ಬಿಟ್ಟಿರುವೆ
ಅಪ್ಪಯ್ಯ ನಿಮ್ಮ ಬಿಟ್ಟ ಇರಲಾರೆ

ಅಕ್ಕ ಕುಂಕುಮದಕ್ಕೆ ಅಕ್ಕಿ ತೊಳಿಸುಕೆ ಬಾರೆ
ಅಪ್ಪಯ್ಯ ಗಂಗೋಳಿಗೆ ಸವನೀರು ನಮ್ಮ ಕೊರಳ
ಪಾವನ ಪುತ್ತಳಿನೆ ತರುವರು

ಉಪ್ಪರಿಗೆ ಮೆಟ್ಟಿಲು ತುಪ್ಪದಲಿ ಸಾರಿಸಿ
ಜಾರು ಕಂದಯ್ಯ ಜತನವೇ ಅಪ್ಪನ ಮನೆಯ
ಉಪ್ಪರಿಗೆ ಮೆಟ್ಲೆ ಇಳಿಬಾರೋ ನಿನ್ನಪ್ಪಯ್ಯ
ಬಾ ಮಲ್ಲಿಗಿ ಸರವ ಹಿಡಿದಿಳೀ

ತಂದೆ ನನ್ನಪ್ಪಯ್ಯ ನಿಮ್ಮ ಪಾದಕೆ ಶರಣೆ
ಬತ್ತ್ ಮರಕೂ ಬಳ್ಳಿ ನೆಡದೀರು ಅಪ್ಪಯ್ಯ
ಮುಕುನಿಗೂ ನನ ಕೊಡದೀರು
ಮುದುಕನಾದರೂ ಮಗಳೆ ಬದುಕಿನಲಿ ಸಂಪನ್ನ
ಕನಕದ ಕಜ್ಜಯ ಮೆಲಿಲಕ್ಕು
ಕನಕದ ಕಜ್ಜಯ ತೆಗೆದು ಕಟ್ಟಿನ ಗುಂಡಿಗೆ ಹಾಕಿ
ಎದ್ದು ಬಿದ್ದು ಜಲ್ಲ ಕೊಡಲಾರೆ

ಆವುಳಕೆ ಅಲಸಿಗಿ ದೇವರ ಲೋಕದ ಸಪುಣ
ಯಾವ ತಾಯ್ ನನ್ನ ನೆನದಾಳೆ ಉಪ್ಪುಂದ
ಕೀಳು ಮಾಳುಗಿಯ ಹೆರಿ ತಾಯಿ ಹೆರಿಯಪ್ಪ
ಉಂಡಿತೋ ಮಗುವೆ ಹಸಿದಿತೋ

ಅಪ್ಪಯ್ಯ ಮಾಡಿಸಿಕೊಟ್ಟ ಮುತ್ತಿನ ಮೂಗೂತಿ
ಮುತ್ತು ರತ್ನವೇ ಶಿವ ಕೊಟ್ಟ ನಾರಾಯಣ ಕೊಟ್ಟ
ಹೆತ್ತಮ್ಮನ ಭಾಗ್ಯ ಉಳಿದಾವು.