ಹಸುಮಗಿನ ಹಲ್ಬಾಯಿ ಹೆಸರು ಕೋಡ್ ಒಡೆದ್ಹಂಗೆ
ಹೊಸ ಮಾತನಾಡಿ ನಗೆಯಾಡಿ ಕಂದಯ್ಯನ
ತುಟಿಯ ವಜ್ರವೇ ಅಸುರೀತೂ

ಬಡವಿಯ ಮಕ್ಕಳು ನಡೆದು ಬಪ್ಪುದು ಚಂದ
ನಡಕೊಂಡು ಧೂಳ ಹೊಯ್ಕೊಂಡು ಬರುವಾಗ
ಬಡವಿಯ ದುಃಖ ಅಡಗೀತು

ದಾರಿಯ ಕಂಡ್ಕಣ್ಣ ದಾಸಾನ ಹೂಗಾದೋ
ಏ ಶಿವ್ನೆ ಮಗುವೆ ಬರಲಿಲ್ಲ ಕಣ್ಣೀರು
ಹಾಸುಗಿ ಅದ್ದಿ ಹಸಿ ಅದ್ದಿ

ಕಂದನ ಕಾಣ್ಕಿದ್ರೆ ಮಿಂದು ಬಾ ಸಿರಿದೇವಿ
ಕೊಂಡು ಬಾ ಕೈಯಲ್ಲಿ ನೊರೆ ಹಾಲು ಸಿರಿದೇವಿ
ಕಂದನ ತೊರಿಸುವೆ ತೆರಿ ಅಡ್ಡ

ನಾ ತೂಗು ತೊಟ್ಟಿಲಿಗೆ ನಾಗ ಬೆತ್ತದ ನೇಣು
ನಾ ತೂಗಿ ಗಂಗಿ ತೆರಿ ತೂಗಿ ಹುಂತಿನ
ನಾಗ ದೇವತೆ ತೂಗಿ ಸುಖ ನಿದ್ರೆ

ಮಕ್ಕಳೆಲ್ಲಾಡಿದೋ ಮಣಿ ಎಲ್ಲಾ ಚೆಲ್ಲಿದೋ
ಸಣ್ಣ ಸಣ್ಣ ಎಲಿಯ ಹುಣಸಿಯ ಮರನಡಿ
ಚೆಲ್ಲಿತು ಕಂದಮ್ಮನ ಉರಿಗೆಜ್ಜೆ

ಗಿಜ್ಜಿ ಕಾಲು ಕಂದಮ್ಮ ಬೇಲಿ ಬದಿ ಹೊಯ್ಬೇಡ
ಗೆಜ್ಜಿಗೆ ಮುಳ್ಳು ಅವುರುಗು ನಿನ್ನಜ್ಜ
ಬೇಲಿಗೆ ಹೀಲಿ ನಡಸೂರು

ಮಕ್ಕಳಿಲ್ಲ ಮನೆಗೆ ಹೊಕ್ಕರೆ ಬಿಮ್ಮಗೆ
ತಾಯೆ ನೀನಿದ್ದು ಬೇಲಿಯೇನು ಅಶುವಂತನ
ಕಟ್ಟೆ ಕಟ್ಟಿಸು ಬುಡದಲ್ಲು

ಮಕ್ಕಳಾಟಿಕೆ ಚಂದ ಮತ್ತು ಜವ್ವನ ಚಂದ
ಮಕ್ಕಿಲೆ ಚಂದರ ಕಿರು ಕೆಯ್ಯ ನಮ್ಮಜ್ಜಯನ
ಮುಪ್ಪಿನಲಿ ಚಂದ ಸಿರಿಡೋಳ್ಳು

ತಾಯಿ ತನ್ನಮಗನ ಏನೆಂದೆ ಕರೆದಾಳು
ಕಾವೇರಿ ಗಿರಿಯೆ ಪರ್ವತ ಮೇಲೊರಗೋ
ದೇವರೆ ಬಾರೆಂದು ಕರೆವಳು

ಹುಂತಿನ ಮಾ ಶೇಷ ಹಿತ್ತಲಲ್ಯಾಕಿರುವೆ
ಹಿತ್ತಲಲ್ಲಿ ನನ್ನ ಶಿಶುಗಳು
ನಾನಿದ್ದೆ ಎಂದು ನಿನಗೆ ಭಯವು ಬೇಡ
ಕೆಟ್ಟ ನಾಲಿಗೆಯ ಕುದುರಾಳ ಕಚ್ಚೀರೆ
ಮುಟ್ಟಿ ನಾನಿಷವ ತೆಗದ್ಹೋಪೆ

ಹಾದೀಲೂ ಬೀದೀಲು ಹರದಾಡು ಹಸುಮಗು
ಯಾರು ಕಂಡೀರಿ  ಬಡವಿ ಮಗುವನ್ನು ನಾಗದೇವ್ರು
ಹೂಗುಕೊಟ್ಟು ಮನಿಗೆ ಕಳಗೂರೆ

ಹೊತ್ತು ಬೈ ಬೈ ಆದೋ ಕಿಚ್ಚು ಪಿಣಿ ಪಿಣಿ ಆದೋ
ಮಕ್ಕಳ ತಾಯೇ ಎದೆಗೂದಿ ಸೂಲ್ಯಮ
ಇಂದೈದೆಗಳಗಿ ನಿಲಬೇಕು

ಯಾರಿದ್ದರೇನು ತಾಯಿ ಇದ್ದಾಗಲ್ಲ
ಸಾವಿರ ಕೊಳ್ಳಿ ಒಲಿಯೊಳಗೆ ಉರಿದರೂ
ದೀವಿಗೆಯಂಥ ಬೆಳಕುಂಟೆ

ತೊಟ್ಟಿಲು ಕಂದಯ್ಯಗೆ ದೃಷ್ಟಿ ಕಂತುವುದೆಂದು
ಉಟ್ಟಪಟ್ಟಿಗಳ ಮರಿ ಮಾಡಿ ತಾಯಮ್ಮ
ತೊಟ್ಟಿಲ ತಮ್ಮಯ್ನ ನೆಗಿದಾಳು

ಹಸಿರು ಮಾವಿನೆಲಿ ಎಸರುಗಿಂಡಗಿನೀರು
ಹಸುಮಗು ಕಂದಯ್ಯ ಅನುಮಾನ ನಿನ ಅಜ್ಜ
ಅಶುವಂತಕ್ಹೋಗಿ ಬರುವರು

ಕುಂತಿದೇವಿ ಮಕ್ಕಳು ಏನ್ ತಿಂದೆ ಬೆಳೆದರು
ಕಾನೊಳಗಿನ ಕಣಲಿಯ ತಿಂದಕಂಡ
ಭೀಮನು ಕೈಬಿಲ್ಲು ಗೆಲುವಾರು

ಅಳಿಯ ಹುಟ್ಟಿದನೆಂದು ಎಲೆಕೇಂಡ್ಯ ಮಾವಯ್ಯ
ಬಸರೂರಂಗಡಿಯ ಹೊಸಪೇಟೆ ತ್ಯೆಣಿ ಮ್ಯಾಲೆ
ಅಳಿಯಗೆ ಚಳಿಯಂಗೆ ಹೊಲಿಸುವ

ನಮ್ಮನಿ ಮಗುವಿಗೆ ಇಬ್ರು ಮಾವಂದೀರು
ಒಬ್ಬರಿಂದೊಬ್ರು ಅತಿರಥರು ನಮ್ಮಗುವಿಗೆ
ಮುದ್ರಿಯುಂಗುರ ತರುವಾರು

ಅಜ್ಜಿಯು ಅಜ್ಜಗೂ ಮುದ್ದಿನ ಮೊಮ್ಮಗೂ
ಮುದ್ದೇ ಬಾರೆಂದು ಕರೆಯುವರು ಅವರಿಬ್ರು
ಮುದ್ದು ಬಮದನಕ ಉಣಲೋಲ್ರು

ತೊಟ್ಟಿಲ ಒಳಗೊಂದು ಬಟ್ಟ ಮುತ್ತನು ಕಂಡೆ
ಹೊಟ್ಟಿ ಮ್ಯಾಲಾಗಿ ಮಲಗಿರುವ ಮಗುವಿನ
ಪಾದದಲಿ ಕಂಡೆ ಪದುರೇಖೆ

ಮಾಣಿಕದುಂಗುರ ಮಾಣಿ ಮಾರುತ ಬಂದ
ನಾ ಕೊಂಬೆ ಮಾಣಿ ಕಿರಾ ಹೇಳು ನಮ್ಮಲ್ಲಿ
ಆಡುಂಬ ಮಗನ ಬೆರಳಿಗೆ

ತೊಟ್ಟಿಲ ಹೊತ್ಕೊಂಡು ಪಟ್ಟಣಕ್ಹೋಗ್ವಾಗ
ತೊಟ್ಲಾಗಿರು ಮಗಿನ ಹೆಸರೇನ
ಮಗಿನ ಹೆಸ್ರು ಮಾಣಿಕ ತಾಯ್ ಹೆಸರು ತಾವರಿ
ಸತಿ ಪುರುಷರ ಹೆಸರೆ ನವರತ್ನ ರಂಜಕದ್ಹರಳು
ಅತ್ತಿಗಿ ಹೊಸರೆ ರತಿಗೊಂಬೆ

ತಾಯಿ ಇಲ್ಲಿದ್ದ ಮಕ್ಳು ಆಯೇನು ಸಿರಿಯೇನು
ನೀರಿಲ್ದಿದ್ ಕೆರಿಗೆ ಕರು ಹೋಯಿಗೆಲುವಾಗೆ
ತಾಯಿ ಇಲ್ದಿದ್ ಮಗಿಗೆ ಸುಖ ದುಃಖ

ಎಲ್ಲರ ಮನಿ ಮಕ್ಳಿಗೆ ಬೆಲ್ಲು ಬಾಳಿಯ ಹಣ್ಣು
ನಮ್ಮನಿ ಮಗಿಗೆ ತುಪ್ಪ ಸಕ್ರಿ ಕೊಟ್ಟೀರು
ಮತ್ತೂ ಸಾಲದಂದು ಮರಕೂಗ

ಕಣ್ಣೆಂಜಲು ಕಾಡಿಗಿ ಬಾಯೆಂಜಲು ಬಳ್ಳೆಲಿ
ಯಾರೆಂಜಲುಂಡೆ ಹಸು ಮಗು ಬಾಲಮ್ಮ
ತಾಯೆಂಜಲುಂಡೆ ಹಸು ಮಗು ಬಾಲಮ್ಮ

ನಮ್ಮಗು ನಮಗ ಮುದ್ದು ಕೆರಿಗೆ ತಾವರಿ ಮುದ್ದು
ಹಣ್ಣುಳ್ಳ ಮರಕಿ ಗಿಣಿ ಮುದ್ದು ಕಂದಯ್ಯ
ನೀ ಮುದ್ದು ನಮ್ಮ ಬಳಗಕೆ

ಕರಕೇರಿ ಕಂದಯ್ಯನ ಕರ‍್ಕಣಿ ತಾಯಮ್ಮ
ಸರ‍್ಕಾರಂತವನೇ ನಿನ ಮಗ ಕಂದಯ್ಯ
ಸರ‍್ಕಾರದ ಸರುಗಿ ಹರಿದಿಟ್ಟ

ಹಸುವೆ ಆಯ್ತೆಂದು ಯಾರ ಕೈಲ್ಹೇಳಲಿ
ಹಸುವ ಬಲ್ಲಮ್ಮ ಒಳಗಿಲ್ಲ ತೊಟ್ಟಿಲ
ಶಿಶುವ ಕಂಡು ಹಸುವೆ ಅಡಗಿತು