ಹೆತ್ತಲು ಹಿರಿಯರ ಪಾದ ಮತ್ತು ಗುರುಗಳ ಪಾದ
ಹೆತ್ತಮ್ಮನ ಪಾದ ಸಿರಿ ಪಾದ ನೆನಕಂಡ
ಭತ್ತಕೂ ಬಲಿಗೀಯ ಹಿಡಿದೀರೆ
ನುರಿ ನುರಿ ಭತ್ತವ ನಮ್ಮ ದಣಿಸಬೇಡ
ನಿನ್ನ ಪೂಜಿಸುವೆ ಒರಳಲ್ಲಿ ಶಂಕರ ತಂದೆ
ಕಟ್ಟಿ ಕೂರಿಸುವೆ ಮುಡಿ ನೂರು
ಮೂಡಾಯಿ ಮೂಡುವ ಸೂರ್ಯ ಹೊನ್ನ ಬಣ್ಣದ ಸೂರ್ಯ
ನಿಮ್ಮನ್ನು ಕಾಂಬಷ್ಟು ತೆರಪಿಲ್ಲ ನೀವ್ ಕೊಟ್ಟ
ಹೊನ್ನಿನಂಥ ಮನಿ ಕೆಲಸ
ನಮ್ಮನಿ ಮಗುವನ್ನು ಹದ್ದು ಕಚ್ಕೊಂಡ್ಹೋಯಿ
ಉದ್ದಿನ ಗೆದ್ದೇಲಿ ಕೆಡಗಿತ್ತು ಆ ಮಗುವ
ನೋಡಿ ಬಮದೆನೆಂದ್ರೂ ತೆರಪಿಲ್ಲ
ಬಂದ ಬಂದವರೆಲ್ಲ ಬಣ್ಣದ ಚಾವಡೀಗ್ ಬನ್ನಿ
ನನಗೂ ನಮ್ಮನಿಯ ಕೆಲಸವು ನಿಮ್ಮನಿಯ
ಗೊಂಬಿ ಮಾತಾಡಿ ಕಳುಸೂಗು
ಬಾರೆ ಬಾರಕ್ಕಮ್ಮ ಒನಕೆ ಜೂಜಾಡುವ
ಪಾಗಾರದಡ್ಡೆ ನೆಳಲಡ್ಡೆ ನೀ ಪಡೆದದ
ಕಾಲಗಗ್ಗರದ ಮಗನಡ್ಡೆ
ಬೇಸಾಯಗಾರನ ಬೇಲಿ ಚಂದವ ನೋಡಿ
ನೇಗಿಲುನೋಡಿ ಅವನ ನೊಗ ನೋಡಿ ಅವನ ಮನೆಯಲ್ಲಿ
ಬೇಸಾಯ ನೋಡಿ ಅವ್ನ ಕಣದಲ್ಲಿ
ಬಾದಿಯ ಒನಕಿ ಬಾಮದೋಲು ತೋಳದೀರೆ
ಹೂಗಿನ ಕೊನೆಯಷ್ಟು ಲಗು ಬಂತು ಆ ಒನಕಿ
ಹಾರಿದೋ ಹತ್ತು ಬೆರಳಲ್ಲಿ
ಒರಳೇ ನೀ ಬಳಲೀದೆ ಒನಕೇ ನೀ ಬಳಲಿದೆ
ಗೇರು ಕನ್ನಡವೇ ಬಳಲೀದೋ ನಮ್ಮಿಬ್ರ
ದೂಡು ಶ್ರೀಪಾದ ಸಮಿದವು
ಜಾಣ ಸಾಕಿದ ಕೋಳಿ ಜಾಮ ರಾತುರಿ ಕೂಗಿ
ಜಾಣರ ನಿದ್ರಿಯ ಕೆಡಿಸೀತ ಆ ಜಾಣ
ಕೋಳಿ ಸಾಂಬುರನೆ ಆಅರಿ ಅಂಬ್ರ
ನಾಣನಿಗೆ ನಾ ಕೂಗ್ಲಿಲ್ಲ ಜಾಣಿಗ್ ನಾ ಕೂಗ್ಲಿಲ್ಲ
ಇರುಳೆದ್ದು ಗೇಯ್ವೆನೆ ಹೊಳಿಗೆ ಹೊಯ್ಯಿ
ಕುತ್ತಾಟದಕ್ಕಿಯೇ ಅಟ್ಟುಂಬುಕೆಡಿಯೆಂದು
ಕೆಟ್ಟು ಚಮಗಾರನ ಕುಲು ಸೇರಿ ಆ ಜಾಣ
ಅಟ್ಟುಂಡು ಮೆಟ್ಟು ಹೋಲಿ ಎಂಬ
ಅಟ್ಟು ಉಂಬುಕೆಡಿಯ ಮೆಟ್ಟು ಹೊಲಿಯು ಕೆಡಿಯ
ಕೆಟ್ಟೆ ಕಾಣ ನಿನ್ನ ಕುಲ ಸೇರಿ
ನುರಿಯೆಂದರೆ ನುರಿಯದು ಸುರಗಿ ಬಣ್ಣದ ಭತ್ತ
ಯಾವ ರಾಯ ಬಿಕ್ಕಿಬೆಳೆದಾನೋ ಕೊಲ್ಲೂರ
ಆನಿ ಮೆಟ್ಟಿದರೂ ಅಳವಲ್ಲ ನಮ್ಮಂಥ
ನಾರಿಯರು ತೊಳಿದೋ ಹೊಡಿಯಾದೋ
ಮೂರು ಜನ ನಿಸ್ತ್ರೀಯರು ಹಾಡ್ಹೇಕೇಳಿತೊಳೆವಾಗೆ
ಜೋಡೊನಿಕೆ ಮ್ಯಾನೆ ಗಿಣಿರಾಮ ಕೂಕಂಡ
ಯಾವಕ್ಕನ ಪದವೇ ಕಲಿಯಾಲಿ
ಗೇರು ಗೇರೆಂದರೆ ಸೀರೆ ದೂಳೆಂದಳು
ಸೀರೆ ಸಿಂಗುರದ ನಿರಿಯವಳು ಬಾಲಮ್ಮ
ಗೇರ್ಹೋರೆ ನಮಗೆ ನೆರವಾದೋ
ಹೆಂಡತಿ ಜಮಗಳ್ಳಿ ಗಂಡ ಉಂಡಾಡಿ ಬಟ್ಟ
ಖಂಡುಗದ ಭತ್ತು ಕಣನಲ್ಲು ಹ್ಯಾಕಂಡು
ಕಂಡರಿಗೆ ದೈನು ಹೊಡಿವಾರು
ಒಬ್ಬಣ್ಣ ಸಂಪೂಗಿ ಒಬ್ಬಣ್ಣ ಮಲ್ಲೂಗಿ
ಒಬ್ಬಣ್ಣ ಸಾಜಾ ಬಣಜಿಗ ತಪ್ಪರಗುಂಟೆ
ಹುಬ್ಬಳ್ಳಿ ಸಂತಿ ಗಳದ್ಹೋದು
ಅಕ್ಕನ ಮಕ್ಕಳ ಕೂಡಿ ಹಿತ್ತಲ ಬಾಮಿಯ ತೋಡಿ
ರಸದಾಳಿ ಕಬ್ಬು ಕಣಿ ಹೂಡಿ ನೀರ್ಮೊಗದು
ಮೆಂತಿ ಜೀರುಗಿನೆ ಬೆಳೆದಾರು
ಹೆಣ್ಣ ಕೇಳುಕು ಬರುವರೆ ಹಿತ್ತಲಲ್ಲಿ ನಿಲುಬೇಡಿ
ಒಳಗ್ಹೋಗಿ ನಿಮಗೆ ಕುರ್ಚುಂಟು ಹೆಣ್ಣಿನಕ್ಕ
ಬೆಳ್ಳಿ ತಬಕಿನಲಿ ಬೆಳಿಯಲಿ ಹ್ಯಾಕಂಡ
ಎಲಿ ಸ್ಯೊಸುವಲ್ಲಿ ಬೆಳಗಾದೋ
ಒಂದಕ್ಕಿ ಬೆಂದಿತ ಒಂದಕ್ಕಿ ಬೇಯಿಲಿಲ್ಲ
ಸಂಭ್ರಮದ ಸೌದಿ ಹಿಡಿಲಿಲ್ಲ ಅಣ್ಣಯ್ಯ
ಗಂಧದ ಚಕ್ಕಿ ಒಡಕೂ
ಬತ್ತ ತೋಳು ಗೈಡಿಗೆ ಬಾರದಿರು ಅಣ್ಣಯ್ಯ
ಹಾಡು ಕಟ್ಟಿದರೆ ನಿನ ಮ್ಯಾಲೆ ಅಡಕಿಯ
ಹೋಳು ಕಟ್ಟಿದರೆ ಸೆರಗಿಗೆ
ಹಂಗಿನ ಕೂಳಿಗಿಂತ ಜಂಗಿನ ಕೂಳೆ ಲೇಸು
ಬಂಗ ಬಿಟ್ಟುಂಬ ಬಳಗದ ಕೂಳಿಗಿಂತ
ಗಂಡಕೂಳೆ ಅತಿಲೇಸು
ರಾಗಿ ಬೀಸುವ ಕಲ್ಲು ಗೋದಿ ಬೀಸುವ ಕಲ್ಲು
ಪಾತಾಳಂಕಣಕೆ ಪತಿ ಕ್ಲು ಪಚ್ಚೆಯ ಕಲ್ಲು
ನನಗೂ ದಾಯಾದಿಗೂ ಎದಿಗಲ್ಲು
ನೆಲ್ಲಕ್ಕ ತೊಳುವಾಗೆ ಕಲ್ವರಳ ಬಿಟ್ಟ ಕೊಡಿ
ದಿಲ್ಲಿ ಪಂಡಿತರ ಮಗಳಿಂಗೆ ಬಾಲಮ್ಮಗೆ
ಕಂಚಿನ ಬಾಗ್ಲ ಬಿಟ್ಟುಕೊಡಿ
ಇಂದು ತೊಳ್ದೆ ಅಕ್ಕಿ ಇನ್ನೆಂದು ತೊಳಿಯಲಿ
ಮುಂದು ಭಾರತದ ಮೊದಲಿಗೆ ಈ ಮನಿ
ರನ್ನದ ತಿರಿಯೂ ತೆಗಿಯಲಿ
ಆಯಿತು ನಮ್ಮ ಬತ್ತ ತಿರಿತು ನಮ್ಮ ಹಾಡು
ಹೋಯಿ ಬತ್ತೆ ಗಂಗಿ ಕೈಬಿಡ ನಾನೀಗ
ಮುಂದು ಬಾರತಕೆ ಬರುತೇನೆ
Leave A Comment